December 31, 2013

ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ
ಸವಾಲುಗಳು ಮತ್ತು ಸಾಧ್ಯತೆಗಳು

“ಸರ್ವರಿಗೂ ಶಿಕ್ಷಣ” ಎಂಬುದು ಮಕ್ಕಳ ಸಂವಿಧಾನ ಬದ್ದ ಹಕ್ಕು. ಈ ಶೀರ್ಷಿಕೆಯ ವ್ಯಾಪ್ತಿಯಲ್ಲಿ ವಿವಿಧ ಸಾಮಥ್ರ್ಯವುಳ್ಳ ಅಂದರೆ ವಿಕಲ ಚೇತನರು/ ವಿಶೇಷ ಅಗತ್ಯವುಳ್ಳ ಮಕ್ಕಳೂ ಇದ್ದಾರೆ. ಈ ಮಕ್ಕಳೂ ಸಹ ಇತರೆ ಮಕ್ಕಳ ಜೊತೆಯಲ್ಲಿ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಬೇಕು ಎಂಬುದು ಸಂವಿಧಾನದ ಆಶಯ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಹಾಗೂ ಕಲಿಕೆಯಲ್ಲಿ ಭಿನ್ನತೆ ಇರುವ ಮಕ್ಕಳಿಗೆ ಶಿಕ್ಷಣದ ಅವಕಾಶ ಒದಗಿಸುವುದು ನಾಗರೀಕ ವ್ಯವಸ್ಥೆಯ ಜವಾಬ್ದಾರಿ. ಸಾಮಾನ್ಯ ಶಾಲೆಯಲ್ಲಿ ತರಗತಿಯ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಮನ್ವಯಗೊಳಿಸುವುದು ಮಾನವ ಹಕ್ಕುಗಳ ಆಶಯಕ್ಕೆ ಪೂರಕವಾದುದು.
ಇಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಎಂದರೆ ಯಾರು? ಅವರಿಗೇಕೆ ವಿಶೇಷ ಅಗತ್ಯ ಬೇಕು ? ಎಂಬಿತ್ಯಾದಿ ಪ್ರಶ್ನೆಗಳು ಉದ್ಬವಿಸುವುದು ಸಹಜ. “ಯಾವ ಮಕ್ಕಳು ಇತರೆ ಮಕ್ಕಳಂತೆ ಸಹಜವಾಗಿ ಕಲಿಯಲು ತೊಂದರೆ ಅನುಭವಿಸುತ್ತಾರೋ ಅಂತಹ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳು ಎನ್ನಲಾಗುತ್ತದೆ”.  ಸಹಜವಾಗಿ ಕಲಿಯಲು ನ್ಯೂನತೆಗಳು ಕಾರಣವಾಗಿರಬಹುದು. ಈ ನ್ಯೂನತೆಗಳೆಂದರೆ ದೃಷ್ಟಿದೋಷ, ಶ್ರವಣದೋಷ, ಬುದ್ದಿದೋಷ, ದೈಹಿಕದೋಷ, ಮತ್ತು ಕಲಿಕಾದೋಷ ಇತ್ಯಾದಿಗಳಿರಬಹುದು. ಈ ನ್ಯೂನತೆಳಿಂದ ಬಳಲುತ್ತಿದ್ದು ವಿಶೇಷ ಅಗತ್ಯತೆಯಿಂದ ಕಲಿಯಲು ಸಾಧ್ಯವಿರುವ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳೆಂದು ಕರೆಯುತ್ತಾರೆ. ಇಂತಹ ಮಕ್ಕಳಿಗೆ ಇತರರ ಅಗತ್ಯ ಇರುತ್ತದೆ. ಆ ಅಗತ್ಯ ಸ್ನೇಹಿತರಿಂದ ಇರಬಹುದು, ಶಿಕ್ಷಕರಿಂದ ಇರಬಹುದು, ಪಾಲಕರಿಂದ ಇರಬಹುದು ಅಥವಾ ಕೆಲವು ಸಾಧನ ಸಲಕರಣೆಗಳಿಂದ ಇರಬಹುದು.
ವಿಶೇಷ ಅಗತ್ಯವುಳ್ಳ ಮಕ್ಕಳೂ ಸಹ ಇತರೆ ಮಕ್ಕಳಂತೆ ಬೆಳೆಯಲು, ವಿಕಾಸ ಹೊಂದಲು ಸಹಾಯಕವಾಗಲು ಕನಿಷ್ಠ ಪರಿಸರವನ್ನು ಒದಗಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿಯೇ ಇತರೆ ಮಕ್ಕಳ ಜೊತೆ ಶಿಕ್ಷಣ ನೀಡಲು ಇರುವ ವ್ಯವಸ್ಥೆಯೇ “ಸಮನ್ವಯ ಶಿಕ್ಷಣ”. ಅಂದರೆ ಕಲಿಕೆಯಲ್ಲಿ ಹಿಂದಿರುವ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಇತರೆ ಮಕ್ಕಳ ಜೊತೆಯಲ್ಲಿ ಸೇರಿಸಿ ನಿರೀಕ್ಷಿತ ಮಟ್ಟದ ಕಲಿಕೆ ಮೂಡಲು ರೂಪಿಸುವ ಒಂದು ವ್ಯವಸ್ಥೆಯಾಗಿದೆ.
ಕರ್ನಾಟಕದಲ್ಲಿ 1.47.999 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ 202 ಶೈಕ್ಷಣಿಕ ಬ್ಲಾಕ್‍ಗಳಿದ್ದು, ಪ್ರತಿ ಬ್ಲಾಕ್‍ಗೆ 3 ಜನರಂತೆ 606 ಜನ ಸಂಪನ್ಮೂಲ ವ್ಯಕ್ತಿಗಳು, ಹಾಗೂ ಪ್ರತಿ ಬ್ಲಾಕ್‍ಗೆ ಇಬ್ಬರಂತೆ 404 ಜನ ವಿಶೇಷ ಶಿಕ್ಷಕರು ಸಮನ್ವಯ ಶಿಕ್ಷಣದಲ್ಲಿ ಬಾಗಿಯಾಗಿದ್ದಾರೆ. ಅಲ್ಲದೇ 34 ಶೈಕ್ಷಣಿಕ ಜಿಲ್ಲೆಗೂ ಒಬ್ಬೊಬ್ಬ ಜಿಲ್ಲಾ ಸಂಯೋಜಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಿನ್ನಲೆ
‘ಸಮನ್ವಯ ಶಿಕ್ಷಣ’ದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದ ಅಂಗವಿಕಲತೆ ಮಾನವನನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಹಿಂದಿನ ಕಾಲದಲ್ಲಿ ಇಂತಹವರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು.
ನಾಗರೀಕತೆ ಬೆಳೆದಂತೆಲ್ಲಾ ಮಾನವರ ಮನೋಭಾವನೆಗಳು ಬದಲಾಗುತ್ತಾ ಬಂದವು. ಇಂತಹವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವಕಾಶಗಳನ್ನು ನೀಡಿದಲ್ಲಿ ಸಮಾಜದ ಇತರರಂತೆ ಅವರೂ ಬದುಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಇವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಟ್ಟು ಇವರೂ ಕೂಡಾ ಸುಂದರ ಮತ್ತು ಆರೋಗ್ಯಕರ ವಾತಾವರಣದಲ್ಲಿ ಬೆಳೆದು ಸಮಾಜದ ಮುಖ್ಯ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬದ್ದವಾಗಿದೆ.
1961 ರಲ್ಲಿ ಸರ್ವರಿಗೂ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆಗಳು ಪ್ರಾರಂಭವಾದವು. ಆದರೆ ಈ ವಿಶೇಷ ಶಾಲೆಗಳಲ್ಲಿ ಕೆಲವೇ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಬಹಳ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದರು. ಏಕೆಂದರೆ ಈ ವಿಶೇಷ ಶಾಲಾ ಶಿಕ್ಷಣ ವ್ಯವಸ್ಥೆ ತುಂಬಾ ದುಬಾರಿ ವೆಚ್ಚದ್ದಾಗಿದ್ದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಇದು ನಿಲುಕದ ನಕ್ಷತ್ರವಾಗಿತ್ತು.  ಇದನ್ನು ಗಮನಿಸಿದ ಸರ್ಕಾರ 1970 ರಲ್ಲಿ “ಸಮನ್ವಯ ಶಿಕ್ಷಣ’ವನ್ನು ಜಾರಿಗೆ ತಂದಿತು.
1977 ರ ಸಂಸತ್ ಅಧಿವೇಶನದಲ್ಲಿ ‘ವಿಶ್ವ ಅಂಗವಿಕಲರ ದಿನಾಚರಣೆ’ ಆಚರಿಸಬೇಕೆಂಬ ಶಿಫಾರಸ್ಸು ಮಾಡಲಾಯಿತು. 1978-79ರ ಅಧಿವೇಶನದಲ್ಲಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮ ಸಂಪೂರ್ಣ ಸಹಬಾಗಿತ್ವ ಮತ್ತು ಸಮಾನತೆಯಿಂದ ಕೂಡಿರಬೇಕೆಂದು ತೀರ್ಮಾನಿಸಲಾಯಿತು. 1981 ನೇ ವರ್ಷವನ್ನು “ಅಂತರರಾಷ್ಟ್ರೀಯ ಅಂಗವಿಕಲರ ವರ್ಷ” ಎಂದು ಘೋಷಿಸಿ ಅಂಗವಿಕಲರ ದಿನಾಚರಣೆ ಆಚರಿಸಲಾಯಿತು.
1982ರಲ್ಲಿ ವಿಶ್ವವ್ಯಾಪಿ ಅಂಗವಿಕಲರ ಯೋಜನಾ ಕಾರ್ಯಕ್ರಮದ ಮಾರ್ಗದರ್ಶನ ಕೈಪಿಡಿ ಹೊರತರಲಾಯಿತು.
1983-92 ರ ವರ್ಷಗಳನ್ನು “ಅಂಗವಿಕಲರ ದಶಕ” ಎಂದು ಘೋಷಿಸಲಾಯಿತು. 1993ರಲ್ಲಿ ವಿಶ್ವಸಂಸ್ಥೆಯು ಅಂಗವಿಕಲರ ಸ್ಥಾನಮಾನ, ಹಕ್ಕುಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ನಿಯಮಗಳನ್ನು ರೂಪಿಸುವ ಬಗ್ಗೆ ತೀರ್ಮಾನ ಕೈಗೊಂಡಿತು. 1993-2002 ರ ವರೆಗಿನ ವರ್ಷಗಳನ್ನು ‘ಏಷಿಯಾ ಫೆಸಿಫಿಕ್ ಅಂಗವಿಕಲರ ವರ್ಷಗಳು’ ಎಂದು ಘೋಷಿಸಲಾಯಿತು.
ಭಾರತದ ಸಂವಿಧಾನವೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವುದು ಸ್ವಾಗತಾರ್ಹ. 86ನೇ ಭಾರತ ಸಂವಿಧಾನ ತಿದ್ದುಪಡಿ ಪ್ರಕಾರ ‘14 ವಯೋಮಾನದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ’ ಜಾರಿಗೆ ಬಂದಿತು. ಇದರಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಕೂಡಾ ಸೇರಿದ್ದಾರೆ. 1992 ರ ಭಾರತೀಯ ಪುನರ್ವಸತಿ  ಪರಿಷತ್ತು ಕಾಯಿದೆ ಪ್ರಕಾರ ‘ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿಶೇಷ ತರಬೇತಿ ಹೊಂದಿದ ಶಿಕ್ಷಕರಿಂದ ಬೋಧನೆ ಮಾಡುವ ಪದ್ದತಿ’ ಜಾರಿಗೆ ಬಂದಿತು. 1995ರ ಅಂಗವಿಕಲ ವ್ಯಕ್ತಿಗಳ(ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಹಾಗೂ ಸಂಪೂರ್ಣ ಸಹಬಾಗಿತ್ವ) ಕಾಯ್ದೆಯ ಪ್ರಕಾರ ‘18 ವರ್ಷದವರೆಗೆ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯತೆಗೆ ತಕ್ಕಂತೆ ಸೂಕ್ತ ಶಿಕ್ಷಣ ನೀಡುವುದು’. 1999ರ ರಾಷ್ಟ್ರೀಯ ಹಿತರಕ್ಷಣಾ ಕಾಯಿದೆ ಪ್ರಕಾರ ‘ತೀವ್ರ ತರದ ದೋಷವುಳ್ಳ ಮಕ್ಕಳಿಗೆ ವಿಶೇಷ ಸೇವೆ ಮತ್ತು ಸಹಕಾರ ನೀಡುವುದು’.
ಹೀಗೆ ವಿವಿಧ ಸ್ವರೂಪಗಳಲ್ಲಿ ಸಮನ್ವಯ ಶಿಕ್ಷಣ ಬೆಳೆದು ಬಂದಿತು. ಅಂಗವಿಕಲರೂ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಬೇಕಾದರೆ  ಶಿಕ್ಷಣವೇ ಅದಕ್ಕೆ ಸಂಜೀವಿನಿಯಾಗಬೇಕು. ಈ ಅಂಗವಿಕಲ ಮಕ್ಕಳ ಬಗ್ಗೆ ಜನರಲ್ಲಿ ಹುದುಗಿರುವ ಮೂಢನಂಬಿಕೆ, ಮತೀಯತೆ, ಜಾತೀಯತೆ, ಅಂಧಶ್ರದ್ದೆ ಮುಂತಾದ ಸಂಕುಚಿತ ಭಾವನೆಗಳನ್ನು ಶಿಕ್ಷಣದಿಂದ ಮಾತ್ರ ಹೋಗಲಾಡಿಸಲು ಸಾಧ್ಯ. ಈ ದಿಸೆಯಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ(ಒಊಖಆ) ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳಾದ UಓಇSಅಔ, UಓಆP, Iಐಔ, UಓIಅಇಈ ಗಳ ಸಹಕಾರದೊಂದಿಗೆ ವಿವಿಧ ಹಂತಗಳಲ್ಲಿ ಸಮನ್ವಯ ಶಿಕ್ಷಣ ನೀಡುತ್ತಾ ಬಂದಿದೆ.
ಸಮನ್ವಯ ಶಿಕ್ಷಣದ ಔಚಿತ್ಯ
ಸಮಾನ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಸಾಗುತ್ತಿರುವ ನಾವುಗಳು ಪ್ರತಿಯೊಂದು ಮಗುವಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕಾದುದು ಬಾಗೀದಾರರ ಕರ್ತವ್ಯ. ನಮ್ಮಲ್ಲಿ ಮೇಲ್ಮಟ್ಟದ ಬುದ್ದಿಮತ್ತೆಯವರಿಗೂ ಮತ್ತು ಸಾಮಾನ್ಯ ಬುದ್ದಿಮತ್ತೆಯವರಿಗೂ ಕಲಿಯಲು ಪ್ರತ್ಯೇಕ ಶಿಕ್ಷಣ ವ್ಯವಸ್ಥೆಗಳಿಲ್ಲ. ಪ್ರತಿಯೊಂದು ಮಗುವೂ ದೈಹಿಕವಾಗಿ, ಮಾನಸಿಕವಾಗಿ ಅದ್ವಿತೀಯ ಮತ್ತು ತುಲನಾತೀತ. ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಸವಾಲೆನಿಸುವ ಕಾರ್ಯಕ್ರಮಗಳನ್ನು ಇಂತಹ ನೆಲೆಯಿಂದ ನೋಡಬೇಕಾದ ಮನೋಭೂಮಿಕೆ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕಾಗಿದೆ. ಏಕೆಂದರೆ ಪ್ರತಿಯೊಬ್ಬ ಮಗುವೂ ತನ್ನದೇ ಆದ ಸಾಮಥ್ರ್ಯ ಹೊಂದಿದ್ದು, ಅದರ ಬಲವರ್ಧನೆಗಾಗಿ ಶಿಕ್ಷಣ ಅವಶ್ಯಕ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ, ಸಾಮಾಜೀಕರಣ, ಶಿಕ್ಷಣ, ಉದ್ಯೋಗ ಇವೆಲ್ಲವೂ ವ್ಯಕ್ತಿಯಲ್ಲಿ ರೂಪುಗೊಳ್ಳಲು ಸಾಮಾನ್ಯ ಶಿಕ್ಷಣ ಕ್ರಮ ಸಹಾಯ ಮಾಡುತ್ತದೆ. ಹಾಗಾಗಿ ಸಮನ್ವಯ ಶಿಕ್ಷಣ ಯಾರಿಗೂ ಹೊರೆಯಲ್ಲ. ಬದಲಾಗಿ ಅದು ವ್ಯಕ್ತಿಗಳ ನಡುವೆ ಪ್ರೀತಿ, ಸಾಮರಸ್ಯ, ಸಮಾನತೆ, ಸ್ವಾವಲಂಬನೆ, ಸಹಬಾಳ್ವೆ, ಹೊಂದಾಣಿಕೆಗಳನ್ನು ಬೆಳೆಸುವ ಸಮಾಜಿಕ ಹಂದರವನ್ನು ಬಂಧಗೊಳಿಸುವ ಸಾಧನವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸಮನ್ವಯ ಶಿಕ್ಷಣದ ವ್ಯಾಪ್ತಿ
* ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಅವರಿರುವ ಸ್ಥಳದಿಂದ ಸಾಮಾನ್ಯ ಶಾಲೆಗೆ ಸೇರಿಸುವುದು ಮಾತ್ರವಲ್ಲ, ಎಲ್ಲಾ ಮಕ್ಕಳಿಗೂ ಅವಕಾಶ ಮಾಡಿಕೊಡುವುದು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳೂ ಸೇರಿದಂತೆ ಎಲ್ಲಾ ಮಕ್ಕಳು ಕಲಿಯುವಂತೆ ಶಾಲೆಗಳನ್ನು ರೂಪಿಸುವುದು.
*  ವಿಶೇಷ ಅಗತ್ಯವುಳ್ಳ ಮಕ್ಕಳ ಜೀವನದ ಪ್ರಾಥಮಿಕ ಕೌಶಲ್ಯ ನೀಡಲು ಪೋಷಕರಿಗೂ ಅರಿವನ್ನು ಮೂಡಿಸುವುದು.
*  ಸಮನ್ವಯ ಶಿಕ್ಷಣದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಯ ಅವಿಭಾಜ್ಯ ಅಂಗವಾಗಿರುತ್ತಾರೆ. ಅವರ ಶೈಕ್ಷಣಿಕ ಅಗತ್ಯತೆಗಳನ್ನು ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿಯೇ ಪೂರೈಸಲಾಗುತ್ತದೆ.
*  ಮೆದುಳಿನ ಪಾಶ್ರ್ವವಾಯು, ಆಟಿಸಂ ಮತ್ತು ಬಹು ವಿಕಲತೆ ಹೊಂದಿದ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ನೀಡುವುದು.
*  ಸ್ಥೂಲವಾಗಿ ಎಲ್ಲಾ ಚಟುವಟಿಕೆಗಳನ್ನು ಎಲ್ಲಾ ಮಕ್ಕಳಿಗೂ ಒದಗಿಸಿಮಗುವನ್ನು ನಿರೀಕ್ಷಿತ ಮಟ್ಟಕ್ಕೆ ತಲುಪುವಂತೆ ವ್ಯವಸ್ಥೆ ಮಾಡುವುದು ಸಮನ್ವಯ ಶಿಕ್ಷಣದ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಮಗುವೂ ಭಾಗವಹಿಸುವಂತಹ ಚಟುವಟಿಕೆಗಳನ್ನು ರೂಪಿಸುವುದು ಸವಾಲಾದರೂ ಕಾರ್ಯರೂಪಕ್ಕೆ ರುವುದು ಅನಿವಾರ್ಯವಾಗಿದೆ.
ಸಮನ್ವಯ ಶಿಕ್ಷಣದ ಉದ್ದೇಶಗಳು
* ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಮಕ್ಕಳಂತೆ ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅವರ ಸಾಮಥ್ರ್ಯಕ್ಕೆ ತಕ್ಕಂತೆ ಅವಕಾಶಗಳನ್ನು ಕಲ್ಪಿಸುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಮಕ್ಕಳ ನಡುವೆ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸುವ ಮೂಲಕ ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಇತರರಲ್ಲಿ ಇರಬಹುದಾದ ಋಣಾತ್ಮಕ ಮನೋಭಾವನೆಯನ್ನು ಹೋಗಲಾಡಿಸಿ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳ ಜೀವನ ಮಟ್ಟ ಅವರ ಪೌರ ಹಕ್ಕುಗಳನ್ನು ಭದ್ರಗೊಳಿಸುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳು ಸಮಾಜವನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಸ್ವಾವಲಂಬಿ ಜೀವನವನ್ನು ನೆಡೆಸಲು ಸಾಧ್ಯವಾಗುವಂತೆ ಮಾಡುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕೇವಲ ಅನುಕಂಪ ತೋರಿಸದೇ ಸಮಾನ ಅವಕಾಶಗಳನ್ನು ಕಲ್ಪಿಸುವ ಮನೋಭಾವವನ್ನು ಶಿಕ್ಷಕರಲ್ಲಿ ಹಾಗೂ ಸಮುದಾಯದವರಲ್ಲಿ ಬೆಳೆಸುವುದು.
* ಪ್ರತಿ ಮಗು ತನ್ನಲ್ಲಿ ಹುದುಗಿರುವ ಸಾಮಥ್ರ್ಯಗಳ ಸಂಪೂರ್ಣ ಸಿದ್ದಿಗೆ ಶಿಶುಸ್ನೇಹಿ ಕಲಿಕಾ ಪರಿಸರ ಒದಗಿಸುವುದು.
ಸಮನ್ವಯ ಶಿಕ್ಷಣದ ಮಾದರಿ
ಸಮನ್ವಯ ಶಿಕ್ಷಣವು ಹಲವಾರು ಮಾದರಿಗಳನ್ನು ಒಳಗೊಂಡಿರುತ್ತದೆ.
ವಸತಿ ರಹಿತ ವಿಶೇಷ ಶಾಲೆ: ತೀವ್ರ ಸ್ವರೂಪದ ನ್ಯೂನತೆ ಇರುವ ಮಕ್ಕಳನ್ನು ಅವರ ನ್ಯೂನತೆನುಗುಣವಾಗಿ ವಿಶೇಷ ಶಾಲೆಗೆ ಸೇರಿಸಿ ಶಿಕ್ಷಣ ನೀಡುವ ಪದ್ದತಿ. ಈ ಶಾಲೆಯಲ್ಲಿ ವಿಶೇಷ ಪಠ್ಯಕ್ರಮ,  ಬೋಧನಾ ವಿಧಾನ ಮತ್ತು ಪೂರಕ ಚಟುವಟಿಕೆಗಳ ಮೂಲಕ ಇತರೆ ಮೂಲಭೂತ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಶಾಲಾ ವೇಳೆಯ ನಂತರ ಈ ಮಕ್ಕಳೂ ಕೂಡಾ ಇತರೆ ಮಕ್ಕಳಂತೆ ಮನೆಗೆ ಹೋಗುವುದರಿಂದ ಶಾಲಾ ವಾತಾವರಣ ಮತ್ತು ಮನೆಯ ವಾತಾವರಣ ಎರಡಕ್ಕೂ ಹೊಂದಿಕೊಳ್ಳವಂತೆ ಸಮನ್ವಯಗೊಳಿಸಲಾಗಿದೆ.
ವಿಶೇಷ ತರಗತಿ ಮಾದರಿ : ತರಗತಿ ಶಿಕ್ಷಕರು ಸಂಪನ್ಮೂಲ ಶಿಕ್ಷಕರ ಸಹಾಯದಿಂದ ಸಾಮಾನ್ಯ ಶಾಲೆಯಲ್ಲಿಯೇ ವಿಶೇಷ ತರಗತಿ ನೆಡೆಸುವ ಯೋಜನೆಯಾಗಿದೆ. ಶಾಲೆಯಲ್ಲಿ ವೈಯಕ್ತಿಕ ಬೋಧನಾ ಸೌಲಭ್ಯವನ್ನೊದಗಿಸಿ ಮಗುವಿನ ವಿಶೇಷ ಕೊರತೆ ತುಂಬಲು ಪೂರಕ ಸಾಧನ ಸಲಕರಣೆಗಳಿರುತ್ತವೆ.
ಸಂಪನ್ಮೂಲ ಕೊಠಡಿ ಮಾದರಿ : ಸಾಮಾನ್ಯ ಶಾಲಾ ತರಗತಿಯಲ್ಲಿ ಪೂರ್ಣಾವಧಿ ವಿದ್ಯಾರ್ಥಿಯಾಗಿದ್ದು, ಅಗತ್ಯವೆನಿಸಿದಾಗ ಆ ಶಾಲೆಯಲ್ಲಿರುವ ಸಂಪನ್ಮೂಲ ಕೊಠಡಿಗೆ ಒಂದು ಅಥವಾ ಎರಡು ಗಂಟೆ ಕರೆತಂದು ನ್ಯೂನತೆಯ ಸ್ವರೂಪಕ್ಕನುಗುಣವಾಗಿ ಸಾಧನ ಸಲಕರಣೆ ಮತ್ತು ಬೋಧನೋಪಕರಣಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ವಿಶೇಷ ಸೌಲಭ್ಯವನ್ನೊದಗಿಸುವ ಪದ್ದತಿಯಾಗಿದೆ.
ಸಂಚಾರಿ ಶಿಕ್ಷಕ ಮಾದರಿ: ಸಾಮಾನ್ಯ ಶಿಕ್ಷಕರು ಸಾಮಾನ್ಯ ಶಾಲ ವ್ಯವಸ್ಥೆಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಕಲಿಕಾ ಕೊರತೆ ಮತ್ತು ವಿಶೇಷ ಸೌಲಭ್ಯ ಒದಗಿಸಲು ಸಾಧ್ಯವಾಗದಿರುವಾಗ ತಜ್ಞರೆನಿಸಿದ ವಿಶೇಷ ಶಿಕ್ಷಕರನ್ನು/ಸಂಪನ್ಮೂಲ ಶಿಕ್ಷಕರನ್ನು ಕರೆಸಿ ನ್ಯೂನತೆಯ ಮಕ್ಕಳಿಗೆ ವಿಶೇಷ ಕಲಿಕಾ ಸೌಲಭ್ಯಗಳನ್ನು ಒದಗಿಸುವ ಮಾದರಿಯಾಗಿದೆ.
ಸಂಮಿಶ್ರಣ ಮಾದರಿ : ಸಂಪನ್ಮೂಲ ಕೊಠಡಿ ಯೋಜನೆ ಮತ್ತಿ ಸಂಚಾರಿ ಶಿಕ್ಷಕ ಯೋಜನೆಗಳಿಂದ ಕೂಡಿದ ಮಾದರಿಯೇ ಸಂಮಿಶ್ರಣ ಮಾದರಿ. ಇದರಲ್ಲಿ ಅನೇಕ ಚಟುವಟಿಕೆಗಳು ಮತ್ತು ಯೋಜನೆಗಳು ಮಿಶ್ರಣಗೊಂಡಿರುತ್ತವೆ.
ವಿಶೇಷ ಐಕ್ಯತಾ ಮಾದರಿ : ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಸಾಮಾನ್ಯ ಮಕ್ಕಳೊಡನೆ ಸಾಮಾನ್ಯ ಪಠ್ಯಕ್ರಮವನ್ನು ಅಳವಡಿಸಿಕೊಂಡು ಬೋಧಿಸುವುದರ ಜೊತೆಗೆ ತರಗತಿ ಶಿಕ್ಷಕರೇ ನ್ಯೂನತೆ ಇರುವ ಮಕ್ಕಳ ವಿಶೇಷ ಕಲಿಕಾ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುವ ಯೋಜನೆ.
ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ಕಲಿಯುತ್ತಿರುವಾಗ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಸವಾಲೆನಿಸುವ ಇಂತಹ ಮಕ್ಕಳು ಕೆಲವು ನಿರ್ದಿಷ್ಟ ವೈಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಅವುಗಳನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ.
ವಿಶೇಷ ಅಗತ್ಯವುಳ್ಳ ಮಕ್ಕಳ ಲಕ್ಷಣಗಳು
ಓದು-ಬರಹದಲ್ಲಿ ಸ್ಪಷ್ಟತೆ ಇಲ್ಲದಿರುವುದು.
ಓದುವಾಗ ಬರೆಯುವಾಗ ಪುಸ್ತಕಗಳನ್ನು ತುಂಬಾ ಸಮೀಪದಲ್ಲಿಟ್ಟುಕೊಳ್ಳುವುದು.
ಆಗಾಗ್ಗೆ ಕಣ್ಣು ಉಜ್ಜಿಕೊಳ್ಳುವುದು.
ಪದೆ ಪದೇ ಕಿವಿ ಕೆರೆದುಕೊಳ್ಳುವುದು.
ಮಾತನಾಡುವ ಕಡೆಗೆ ತಲೆಯನ್ನು ತಿರುಗಿಸಿಕೊಳ್ಳುವುದು.
ನಿರ್ದೇಶನಗಳನ್ನು ಪುನಃ ಹೇಳುವಂತೆ ಕೇಳುವುದು.
ಉಕ್ತಲೇಖನ/ನೋಟ್ಸ ಬರೆದುಕೊಳ್ಳುವಲ್ಲಿ ಕಷ್ಟಪಡುವುದು.
ಮಾತನಾಡುವವರ ಸುಳಿವು ಪಡೆಯಲು ಜಾಗರೂಕರಾಗಿ ಅವರನ್ನು ಗಮನಿಸುವುದು.
ತಡೆದು ತಡೆದು ಮಾತನಾಡುವುದು/ತೊದಲುವುದು.
ಚಲನ-ವಲನದಲ್ಲಿ ತೊಂದರೆ ಪಡುವುದು.
ಕುಳಿತುಕೊಳ್ಳಲು, ನಿಂತುಕೊಳ್ಳಲು, ನಡೆಯಲು ಕಷ್ಟಪಡುವುದು.
ಕೈಕಾಲುಗಳಲ್ಲಿ ಅನೈಚ್ಛಿಕ ಚಲನೆ ಕಂಡುಬರುವುದು.
ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ತೊಂದರೆ ಕಂಡುಬರುವುದು.
ನಿರ್ದೇಶನಗಳನ್ನು ಅರ್ಥೈಸಿಕೊಳ್ಳುವಲ್ಲಿ ಕಷ್ಟಪಡುವುದು.
ತನ್ನ ವಯಸ್ಸಿನ ಇತರೆ ಮಕ್ಕಳಂತೆ  ತರಗತಿ ಚಟುವಟಿಕೆಯಲ್ಲಿ ಭಾಗವಹಿಸದಿರುವುದು.
ಅತಿಯಾದ ಚಟುವಟಿಕೆ/ಅತೀ ಕಡಿಮೆ ಚಟುವಟಿಕೆಯಿಂದ ಇರುವುದು
ವಿಶೇಷ ಅಗತ್ಯವುಳ್ಳ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು
ಶಿಕ್ಷಕರು ಹೇಳಿದ ಸೂಚನೆ ಅಥವಾ ಪಾಠವನ್ನು ಗ್ರಹಿಸದಿರುವುದು ಮತ್ತು ಅರ್ಥೈಸಿಕೊಳ್ಳದಿರುವುದು.
ಅರ್ಥೈಸಿಕೊಂಡ ವಿಷಯವನ್ನು ಅಭಿವ್ಯಕ್ತಪಡಿಸಲು ಸಾಧ್ಯವಾಗದಿರುವುದು.’
ಓದು-ಬರಹದಲ್ಲಿ ಸ್ಪಷ್ಟತೆ ಇಲ್ಲದಿರುವುದು.
ಕಪ್ಪು ಹಲಗೆ ಮೇಲಿನ ಬರವಣಿಗೆಯನ್ನು ಗುರುತಿಸದಿರುವುದು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು.
ದೈನಂದಿನ ಕೆಲಸ ನಿರ್ವಹಿಸದಿರುವುದು.
ಕಲಿತದ್ದನ್ನು ಬೇಗ ಮರೆಯುವುದು ಮತ್ತು ಸಾಮಾನ್ಯ ವಸ್ತುಗಳನ್ನು ಗುರುತಿಸಲು ವಿಫಲವಾಗುವುದು.
ಬೆಳವಣಿಗೆಯ ಮೈಲುಗಲ್ಲುಗಳನ್ನು ತಲುಪದಿರುವುದು.
ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣಗಳು
ಮಕ್ಕಳಿಗೆ ಅವಶ್ಯವಿರುವ ಸಾದನ ಸಲಕರಣೆಗಳನ್ನು ಒದಗಿಸುವಲ್ಲಿ ಕೊರತೆ.
ಸಾಧನ ಸಲಕರಣೆಗಳ ಉಪಯುಕ್ತತೆ ಮತ್ತು ನಿರ್ವಹಣೆಯಲ್ಲಿ ಮಾಹಿತಿ ಇಲ್ಲದಿರುವಿಕೆ.
ಪೂರಕ ಬೋಧನಾ ಸಾಮಗ್ರಿಗಳ ಕೊರತೆ.
ಪಠ್ಯಕ್ರಮದಲ್ಲಿ ಅವಶ್ಯ ಮಾರ್ಪಾಡಿನ ಕೊರತೆ.
ಶಿಕ್ಷಕರು ವೈಯಕ್ತಿಕ ಗಮನ ನೀಡದಿರುವುದು.
ಸಂವಹನ ಮತ್ತು ಬಹುಮಾಧ್ಯಮಗಳ ಬಳಕೆಯಲ್ಲಿ ಕೊರತೆ.
ದಪ್ಪ ಅಕ್ಷರ(ಉಬ್ಬು ಅಕ್ಷರ)ದಲ್ಲಿ ಮುದ್ರಣವಾಗಿರುವ ಪುಸ್ತಕಗಳ ಕೊರತೆ.
ಏಕಾಗ್ರತೆ ಕೊರತೆ, ಓದುವಾಗ ಸ್ಪಷ್ಟ ಉಚ್ಚಾರ ಇಲ್ಲದಿರುವುದು.
ವಿವಿಧ ವಿಕಲ ಚೇತನ ಮಕ್ಕಳ ಅವಶ್ಯಕತೆಗಳು
ಶ್ರವಣದೋಷವುಳ್ಳ ಮಕ್ಕಳ ಅಗತ್ಯತೆಗಳು:
ತರಗತಿಯಲ್ಲಿ ಕಪ್ಪು ಹಲಗೆ ಮತ್ತು ಶಿಕ್ಷಕರ ಮುಖಭಾವ ಕಾಣುವಂತ ಸ್ಥಳದಲ್ಲಿ ಇವರನ್ನು ಕೂಡಿಸಬೇಕು.
ಸಂಭಾಷಣೆಗೆ ಹೆಚ್ಚಿನ ಅವಕಾಶ ನೀಡುವುದು.
ಸಂಪನ್ಮೂಲ ಕೊಠಡಿಯ ಸಂಪೂರ್ಣ ಬಳಕೆ.
ಸಂಜ್ಞಾ ತರಬೇತಿ.
ದೃಷ್ಟಿದೋಷವುಳ್ಳ ಮಕ್ಕಳ ಅಗತ್ಯಗಳು:
ತರಗತಿ ಕೊಠಡಿಯಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ.
ಕಪ್ಪು ಹಲಗೆ ಮೇಲೆ ಬಿಳಿ/ಹಳದಿ ಬಣ್ಣದ ಸೀಮೆ ಸುಣ್ಣದ ಬಳಕೆ.
ದೃಕ್ ಶ್ರವಣ ಮಾಧ್ಯಮಗಳ ಬಳಕೆ ಮತ್ತು ಪಾಠಗಳನ್ನು ಮುದ್ರಿಸಿದ ಧ್ವನಿಸುರುಳಿಗಳ ಬಳಕೆ.
ನೇತ್ರ ವೈದ್ಯರಿಂದ ತಪಾಸಣೆ ಮತ್ತು ಸೂಕ್ತ ಕನ್ನಡಕ ಬಳಕೆ.
ಬ್ರೈಲ್ ಲಿಪಿ, ಅಬಾಕಸ್ ಮತ್ತು ಟೇಲರ್‍ಫ್ರೇಮ್ ಬಳಕೆ.
ಬುದ್ದಿ ದೋಷವುಳ್ಳ ಮಕ್ಕಳ ಅಗತ್ಯಗಳು:
ಮಗುವಿನ ಬುದ್ದಿಶಕ್ತಿಗನುಗುಣವಾಗಿ ವೈಯಕ್ತಿಕ ಶೈಕ್ಷಣಿಕ ಕಾರ್ಯಕ್ರಮಗಳು.
ಹೆಚ್ಚು ಮೂರ್ತ ಮತ್ತು ನೈಜ ವಸ್ತುಗಳ ಬಳಕೆ.
ಸಣ್ಣ ಪ್ರಗತಿಯನ್ನೂ ಪ್ರಶಂಸಿಸುವುದು.
ಪುನರಾವರ್ತನೆಯ ಅಭ್ಯಾಸ.
ಮಧ್ಯೆ ಮಧ್ಯೆ ಲಘು ವಿಶ್ರಾಂತಿ.
ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು.
ಮನೋವೈದ್ಯರ ಸಲಹೆ ಮತ್ತು ಅನುಸರಣೆ.
ಮಕ್ಕಳ ಪೋಷಕರಿಗೆ ಆಪ್ತ ಸಲಹೆ ಮತ್ತು ಮಾರ್ಗದರ್ಶನ.
ಚಲನಾಂಗ ದೋಷವುಳ್ಳ ಮಕ್ಕಳ ಅಗತ್ಯಗಳು:
ಸಾಧನೋಪಕರಣ ಧರಿಸಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ.
ಸಾಧನ ಸಲಕರಣೆಗಾಗಿ ಸೂಕ್ತ ಸ್ಥಳಾವಕಾಶ.
ಬೌತಿಕ ಪರಿಸರ ಹೊಂದಾಣಿಕೆ(ರ್ಯಾಂಪ್ಸ್, ಹಿಡಿಕಂಬಿಗಳು)
ಮೂಳೆ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ.
ಅಗತ್ಯವಿದ್ದಲ್ಲಿ ಗಾಲಿ ಕುರ್ಚಿಗಳ ಬಳಕೆ.
ಕಲಿಕಾದೋಷವುಳ್ಳ ಮಕ್ಕಳ ಅಗತ್ಯಗಳು:
ಹಂತಹಂತವಾಗಿ ಕಲಿಯಲು ಅವಕಾಶ ನೀಡುವುದು.
ಬಹು ಇಂದ್ರಿಯ ಕಲಿಕಾ ಅನುಭವ ಒದಗಿಸಿ ಉತ್ತೇಜಿಸುವುದು.
ಪರಿಹಾರಾತ್ಮಕ ಬೋಧನೆ.
ಮನೋವೈದ್ಯರಿಂದ ತಪಾಸಣೆ ಮತ್ತು ಸಲಹೆ.
ವಿ.ಅ.ಮ.ಕಲಿಕೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು
* ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿ ವಿ.ಅ.ಮಕ್ಕಳಿಗೆ ವೈಯಕ್ತಿಕ ಗಮನ ನೀಡುವುದು.
* ವಿ.ಅ.ಮಕ್ಕಳಿಗೂ ಮತ್ತು ಇತರೆ ಮಕ್ಕಳಿಗೂ ಸಹ ಸಂಬಂದಿತ ಕಲಿಕೆ ಮೂಡಿಸುವುದು.
* ವಿ.ಅ.ಮಕ್ಕಳಿಗೂ ಮತ್ತು ಇತರೆ ಮಕ್ಕಳಿಗೂ ಏಕರೂಪದ ಪಠ್ಯಕ್ರಮದಿಂದ ಕಲಿಸುವುದು.
* ವಿ.ಅ.ಮಕ್ಕಳ ಪಾಲಕರ ಮನವೊಲಿಸಿ ಶಾಲೆಗೆ ಕರೆತರುವುದು. ಅಂದರೆ ಪಾಲಕರಲ್ಲಿನ ನಕಾರಾತ್ಮಕ  ದೋರಣೆಯನ್ನು ಸಕಾರಾತ್ಮಕವಾಗಿ
   ಬದಲಾಯಿಸುವುದು.
* ಸರ್ಕಾರಿ ಸೌಲಭ್ಯಗಳ ನಂತರ ಈ ಮಕ್ಕಳು ಶಾಲೆ ತೊರೆಯುವುದು.
* ಎಲ್ಲಾ ಶಾಲೆಗಳಲ್ಲೂ ಸೂಕ್ತ ಸಂಪನ್ಮೂಲ ಕೊಠಡಿ ವ್ಯವಸ್ಥೆ ಇಲ್ಲದಿರುವುದು.
* ಶಿಕ್ಷಕರ ಸಕಾರಾತ್ಮಕ ಮನೋಭಾವನೆ ಮತ್ತು ಅವಧಾರಣೆಯ ಕೊರತೆ.
* ಶಿಕ್ಷಕರಿಗೆ ಅವಶ್ಯಕ ಸಂಪನ್ಮೂಲದ ಕೊರತೆ.
ಸಾಧ್ಯತೆಗಳು
* ಶಿಕ್ಷಕರ ಮತ್ತು ಪಾಲಕರ ಮನೋಧೋರಣೆಯಲ್ಲಿ ಬದಲಾವಣೆ ಆಗಬೇಕು.
* ಪ್ರತೀ ಶಾಲೆಯಲ್ಲಿ ವಿ.ಅ.ಮಕ್ಕಳ ಅಗತ್ಯತೆಗನುಗುಣವಾಗಿ ಸಂಪನ್ಮೂಲ ಕೊಠಡಿ ಸೌಲಭ್ಯ ಒದಗಿಸುವುದು.
* ವಿ.ಅ.ಮಕ್ಕಳ ಅಗತ್ಯತೆಗನುಗುಣವಾಗಿ ಸಾಧನ ಸಲಕರಣೆ ವಿತರಣೆಗೆ ಸೂಕ್ತ ಕ್ರಮ.
* ಬೋಧನೆ ಮತ್ತು ಕಲಿಕೆ ಮಾಹಿತಿ ತಂತ್ರಜ್ಞಾನ ಬಳಕೆ.
* ವರ್ಷಕ್ಕೆರಡು ಬಾರಿ ವಿ.ಅ.ಮಕ್ಕಳ ಆರೋಗ್ಯ ತಪಾಸಣೆ ಮತ್ತು ಅದರ ಅನುಸರಣೆ.
* ತರಗತಿ ಕೊಠಡಿಯೊಳಗೆ ಗಾಲಿ ಕುರ್ಚಿ ಅಥವಾ ಟ್ರೈಸೈಕಲ್ ಬಳಸಲು ಸೂಕ್ತ ಸ್ಥಳಾವಕಾಶ ಒದಗಿಸುವುದು.
* ವಿ.ಅ.ಮಕ್ಕಳಿಗೆ ಸೂಕ್ತವಾದ ಪಠ್ಯಕ್ರಮ ರಚನೆ.
- ಆರ್.ಬಿ.ಗುರುಬಸವರಾಜ.

ಬಹುರೂಪಿ ಶಿಕ್ಷಕ

ಬಹುರೂಪಿ ಶಿಕ್ಷಕ
ಮಕ್ಕಳ ಒಡನಾಟದಲಿ ಜಗದ ಜಂಜಡವ ಮರೆತು, ಭವಿಷ್ಯದ ನಿರ್ಮಾತೃಗಳ ನಿರ್ಮಾಣ ಕಾರ್ಯದಲಿ ತೊಡಗಿಸಿಕೊಂಡು, ಶಿಷ್ಯನೊಳಗಿನ ಕತ್ತಲೆಯನ್ನು ಓಡಿಸಲು ತನ್ನನ್ನೇ ಹಣತೆಯನ್ನಾಗಿಸಿ ಬೆಳಕು ನೀಡುವ ಶಿಕ್ಷಕ ವೃಂದಕ್ಕೆ ನನ್ನ ನಮನಗಳು.
ಕಾಲ ಬದಲಾಗಬಹುದು. ಆದರೆ ಗುರುವಿನ ಸ್ಥಾನವೆಂದೂ ಬದಲಾಗದು. ಶಿಕ್ಷಕರ ಸ್ಥಾನವನ್ನು ಯಾರೂ ಅಲಂಕರಿಸಲಾರರು. ಅಂತಹ ಘನತೆ, ಗಾಂಭೀರವುಳ್ಳಂತಹ ಸ್ಥಾನವಿದು. ಶಿಕ್ಷಣ ಕ್ಷೇತ್ರದಲ್ಲಿಂದು ಸಾಕಷ್ಟು ಬದಲಾವಣೆಗಳು ಘಟಿಸುತ್ತಿವೆ. ಆ ಎಲ್ಲಾ ಬದಲಾವಣೆಗಳಿಗೆ ಹೊಂದಿಕೊಳ್ಳುವ ಚಾಣಾಕ್ಷತನ ಶಿಕ್ಷಕರಲ್ಲಿದೆ.
“ರೂಪ ರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವ ದೀಟಿ ಓ... ನನ್ನ ಚೇತನ” ಎನ್ನುವ ‘ಕುವೆಂಪು’ರವರ ಕವನದ ಸಾಲುಗಳು ಶಿಕ್ಷಕರಿಗೆ ಸದಾ ಅನ್ವಯಿಸುತ್ತವೆ. ಜಾಗತೀಕರಣ, ಖಾಸಗೀಕರಣಕ್ಕೆ ಬಲಿಯಾದ ಶಿಕ್ಷಣದಲ್ಲಿ ಶಿಕ್ಷಕರು ಬಹುರೂಪಿ ಪಾತ್ರಗಳನ್ನು ನಿರ್ವಹಿಸಬೇಕಾಗಿದೆ. ಶಿಕ್ಷಕರು ಇಂದು ಕೇವಲ ಶಿಕ್ಷಕರಾಗಿ ಉಳಿದಿಲ್ಲ. ಬದುಕಿನ ವಿವಿಧ ಪಾತ್ರಗಳನ್ನು ನಿರ್ವಹಿಸುವ ಯಕ್ಷಿಣಿಗಾರರಾಗಿದ್ದಾರೆ.
ಮಕ್ಕಳ ಪಾಲನೆ ಮಾಡುವ ಪಾಲಕ, ಮಕ್ಕಳ ಬಾಳಿಗೆ ದಾರಿ ತೋರುವ ಮಾರ್ಗದರ್ಶಿ, ಶಿಕ್ಷಣದ ಗುರಿ ಸಾಧಿಸುವ ಗುರಿಕಾರ, ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಭಾವಜೀವಿ, ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸುವ ಒಡನಾಡಿ,  ಮಕ್ಕಳ ನ್ಯಾಯ-ಅನ್ಯಾಯ ತೀರ್ಮಾನಿಸುವ ನ್ಯಾಯಾಧೀಶ, ತಪ್ಪು ಮಾಡಿದಾಗ ತಿದ್ದಿ ಹೇಳುವ ಗುರು, ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವ ಆರಕ್ಷಕ, ಭವ್ಯ ಭಾರತ ನಿರ್ಮಾಣದ ನಿರ್ಮಾತೃ, ಸ್ವಯಂ ಪ್ರೇರಣೆಯಿಂದ ಶಾಲೆಯ ವಿವಿಧ ಚಟುವಟಿಕೆ ನೆರವೇರಿಸುವ ಸ್ವಯಂಸೇವಕ, ಶಾಲಾ ಆಡಳಿತ ನೆಡೆಸುವ ಆಡಳಿತಾಧಿಕಾರಿ, ಶಿಕ್ಷಣ ಮತ್ತು ಸಮುದಾಯದ ನಡುವಿನ ಸಂವಹನಕಾರ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಶಿಲ್ಪಿ, ಮಕ್ಕಳಲ್ಲಿ ತತ್ವಾದರ್ಶಗಳನ್ನು ಮೂಡಿಸುವ ತತ್ವಶಾಸ್ತ್ರಜ್ಞ, ಮಕ್ಕಳ ಚಿತ್ತ ಸ್ವಾಸ್ತ್ಯ ಕಾಪಾಡುವ ಮನೋವಿಜ್ಞಾನಿ, ದೈಹಿಕ ಆರೋಗ್ಯ ಉತ್ತಮ ಪಡಿಸುವ ವೈದ್ಯ, ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಸಮಾಜ ಸುಧಾರಕ, ಸಮಾನತೆಯ ಹರಿಕಾರ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ತನ್ನ ವೈಯಕ್ತಿಕ ಜೀವನವನ್ನೂ ಸಾಗಿಸಬೇಕಾಗಿದೆ. ಎಲ್ಲವನ್ನೂ ಸಾಮರಸ್ಯದಿಂದ ಸಾಕಾರಗೊಳಿಸಬೇಕಾದರೆ ಶಿಕ್ಷಕರಲ್ಲಿ ತಾಳ್ಮೆ, ಪ್ರೀತಿ, ಸಹನೆ, ಕ್ಷಮಾಗುಣಗಳು ಗಟ್ಟಿಯಾಗಿರಲೇಬೇಕು. 
ಇಂದು ಶಿಕ್ಷಕರ ಮೇಲೆ ಇಲಾಖೆ ಮತ್ತು ಸಮುದಾಯ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಏಕೆಂದರೆ ಶಿಕ್ಷಕರನ್ನು ಒಬ್ಬ ಆದರ್ಶ ವ್ಯಕ್ತಿಯಾಗಿ ನೋಡುವುದರಿಂದ ಅವರಿಂದ ಒಳ್ಳೆಯದನ್ನೇ ಬಯಸುತ್ತದೆ. ಆ ನಿರೀಕ್ಷೆಗಳನ್ನು ಈಡೇರಿಸಲು ತನುಮನದಿಂದ ಶ್ರಮಿಸಬೇಕಾಗಿದೆ. ಒಂದೆಡೆ ಜ್ಞಾನ ವಿಸ್ತಾರವಾಗುತ್ತಿದ್ದರೆ ಪ್ರಪಂಚ ಕಿರಿದಾಗುತ್ತಿದೆ, ಇನ್ನೊಂದೆಡೆÀ  ಮಾನವೀಯ ಸಂಬಂಧಗಳು ದೂರವಾಗುತ್ತಿದ್ದರೆ ಮೌಲ್ಯಗಳು ಕಳಚಿಕೊಳ್ಳುತ್ತಿವೆ, ಮತ್ತೊಂದೆಡೆ ಮೂಢನಂಬಿಕೆ ಅಜ್ಞಾನ ಅಂಧಕಾರಗಳು ಅಧಃಪತನಕ್ಕೆ ಕಾರಣವಾಗುತ್ತಿವೆ. ಇವೆಲ್ಲದರ ನಡುವೆ ಶಿಕ್ಷಕ ಸಹಮತದ ಸಾಧನೆ ಮಾಡಬೇಕಿದೆ. ಯಾವುದೇ ಒಂದು ಶಾಲೆಯ ಯಶಸ್ಸು ಅಥವಾ ಸೋಲು ಆ ಶಾಲೆಯ ಶಿಕ್ಷಕರನ್ನು ಅವಲಂಬಿಸಿದೆ. ಅಂದರೆ ಶಿಕ್ಷಕರು ಪರಸ್ಪರ ಹೊಂದಾಣಿಕೆ ಸಹಕಾರದಿಂದ ಕಾರ್ಯ ನಿರ್ವಹಿಸಿದಲ್ಲಿ ಯಶಸ್ಸು ಖಂಡಿತ ಲಭಿಸುತ್ತದೆ. 
ಸ್ಪರ್ದಾತ್ಮಕ ಜಗತ್ತಿನಲ್ಲಿ ಮಕ್ಕಳ ಸುಸ್ಥಿರತೆಗೆ ಅನುಕೂಲವಾಗುವಂತೆ ಶೈಕ್ಷಣಿಕವಾಗಿ ಮಾನಸಿಕವಾಗಿ ಸಬಲೀಕರಣಗೊಳಿಸುವುದು ತುಂಬಾ ನಾಜೂಕಿನ ಕೆಲಸ. ಇಂತಹ ನಾಜೂಕಿನ  ನಿರ್ವಹಣೆ ಪ್ರಜ್ಞಾವಂತ ಶಿಕ್ಷಕರಿಂದ ಮಾತ್ರ ಸಾಧ್ಯ. ಇಂದು ಶಿಕ್ಷಕರ ಬೋಧನೆಗೆ ಪರ್ಯಾಯವೆಂದು ಭಾವಿಸಿರುವ ರೇಡಿಯೋ, ದೂರದರ್ಶನ, ಕಂಪ್ಯೂಟರ್ ಇತ್ಯಾದಿಗಳು ಶಿಕ್ಷಕರಿಗೆ ಪೂರಕ ಸಾಧನಗಳೇ ಹೊರತು ಪರ್ಯಾಯ ಸಾಧನಗಳಲ್ಲ. ಏಕೆಂದರೆ ಭಾವನಾತ್ಮಕವಾದ ಶಿಕ್ಷಕರ ಸ್ಥಾನವನ್ನು ಯಾವುದೇ ಸಾಧನ ಸಲಕರಣೆಗಳೂ ತುಂಬಲಾರವು. ಅದಕ್ಕಾಗಿ ಶಿಕ್ಷಕರಿಂದು ವಿವಿಧ ಪಾತ್ರಗಳನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ. ಆ ಎಲ್ಲಾ ಪಾತ್ರಗಳನ್ನು ಶಿಕ್ಷಕರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂಬ ವಿಶ್ವಾಸದಿಂದಲೇ ಸಮಾಜದಲ್ಲಿ ಇಂದಿಗೂ ಉತ್ತಮವಾದ ಸ್ಥಾನಮಾನ ಇದೆ. ಅದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಎಲ್ಲರೂ ಶ್ರಮಿಸೋಣ ಅಲ್ಲವೇ?
ಆರ್.ಬಿ.ಗುರುಬಸವರಾಜ. 

ಪ್ರಳಯ

ಪ್ರಳಯದ ಭೂತ ಓಡಿಸೋಣ
21ನೇ ಡಿಸೆಂಬರ್ 2012 ನೇ ದಿನವನ್ನು ಇಡೀ ವಿಶ್ವ ಕೌತುಕದಿಂದ ಕಾಯತೊಡಗಿದೆ. ಅಂತೆಯೇ ಬಳ್ಳಾರಿ ಜಿಲ್ಲೆಯ ಜನತೆಯೂ ಸಹ. ವಿಶ್ವ ಕಾಯುತ್ತಿರುವುದು ‘ಪ್ರಳಯ’ದ ಕುರಿತಾಗಿ. ಆದರೆ ಬಳ್ಳಾರಿ ಜನತೆ ಅದರಲ್ಲೂ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಕಾಯುತ್ತಿರುವುದು “ಜಿಲ್ಲಾ ಸಾಹಿತ್ಯ ಸಮ್ಮೇಳನ”ಕ್ಕಾಗಿ. ಒಂದು ಕಾಯುವಿಕೆ ಜಗತ್ತಿನ ಅಂತ್ಯವಾಗುವುದೆಂಬ ಮೌಢ್ಯತೆಯಿಂದ, ಇನ್ನೊಂದು ಕಾಯುವಿಕೆ ಹೊಸ ವೈಚಾರಿಕತೆಗಾಗಿ, ಹೊಸ ಸಾಹಿತಿಕ ಮುನ್ನೋಟಕ್ಕಾಗಿ. ಅದೇನೇ ಈಗ ಪ್ರಸ್ತುತ ವಿಷಯವೆಂದರೆ ‘ಪ್ರಳಯ’ ಭೂತ ಓಡಿಸುವುದು.
ಇತ್ತೀಚಿಗೆ ಅಮೇರಿಕಾದಲ್ಲಿ ಅಬ್ಬರಿಸಿದ ‘ಸ್ಯಾಂಡಿ’ ಹಾಗೂ ದಕ್ಷಿಣ ಭಾರತವನ್ನೇ ಅಲ್ಲೋಲ ಕಲ್ಲೋಲ ಮಾಡಿದ ‘ನೀಲಂ’ ಚಂಡಮಾರುತಗಳ ಕುರಿತು ಜನ ವಿಭಿನ್ನವಾಗಿ ಮಾತನಾಡುತ್ತಿದ್ದಾರೆ. ಅವುಗಳನ್ನು “ಪ್ರಳಯ”ದ ಮುನ್ಸೂಚನೆಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ವಿದ್ಯಾವಂತರು ಇಂತಹ ಕಪೋಲ ಕಲ್ಪಿತ ಸುದ್ದಿಗಳನ್ನು ಜನಮನದಲ್ಲಿ ಬಿತ್ತುತ್ತಿದ್ದಾರೆ. ಇವುಗಳಿಗೆ ಇಂಬು ಕೊಡುವಂತೆ ದೃಶ್ಯ ಮಾಧ್ಯಮಗಳಂತೂ ತಮ್ಮ ಟಿ.ಆರ್.ಪಿ.ಗಾಗಿ ‘ಪ್ರಳಯ’ದ ಬಗ್ಗೆ ತೀರಾ ವಿಚಿತ್ರವಾದ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುತ್ತಿರುವುದು ದೇಶದ ದುರಂತವೇ ಸರಿ.
‘ಪ್ರಳಯ’ಕ್ಕೆ ಸಂಬಂಧಿಸಿದ ಘಟನೆಗಳು ಕಪೋಲ ಕಲ್ಪಿತ ಎಂದು ಗೊತ್ತಿದ್ದರೂ ಮಾಧ್ಯಮದವರು ಪ್ರತಿಸೃಷ್ಟಿಸಿದ ದೃಶ್ಯಗಳನ್ನು ಪದೇ ಪದೇ ಪ್ರಸಾರ ಮಾಡುವುದರಿಂದ ಮತ್ತು ಅದಕ್ಕನುಗುಣವಾದ ವಿಜ್ಞಾನದ ಪದಗಳನ್ನು ಬಳಸುವುದರಿಂದ ಜನರಿಗೆ ಯಾವುದು ಸತ್ಯ, ಯಾವುದು ಮಿತ್ಯ ಎಂಬುದು ಗೋಜಲು ಗೋಜಲಾಗಿದೆ. ಇದರಿಂದ ಜನರು ಮಾನಸಿಕವಾಗಿ ಚಿಂತಾಕ್ರಾಂತರಾಗಿದ್ದಾರೆ. ಅನೇಕ ಮಕ್ಕಳು ಪ್ರಳಯದ ಬಗ್ಗೆ ವಿಚಿತ್ರವಾದ ಭಯವನ್ನು ಹೊಂದಿದ್ದು ಕಲಿಕೆಯಲ್ಲಿ ನಿರಾಸಕ್ತರಾಗಿದ್ದಾರೆ. ಅದೆಷ್ಟೋ ಯುವಕರು ಜೀವನದಲ್ಲಿ ಏನನ್ನೋ ಕಳೆದುಕೊಂಡವರಂತೆ ನಿಸ್ತೇಜರಾಗಿದ್ದಾರೆ. ಕೆಲವು ದೇಶಗಳ ಜನರು ಆತ್ಮಹತ್ಯೆಗೆ ಮುಂದಾಗಿರುವುದು ಮನುಕುಲದ ದುರಂತವಾಗಿದೆ.
ಜನರ ಮಾನಸಿಕ ಅಭದ್ರತೆ ಮತ್ತು ಭಯವನ್ನೇ ಅನೇಕರು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಪ್ರಳಯ ಸಿದ್ದಾಂತದ ಪ್ರಚಾರಕ್ಕಾಗಿ ಆಧುನಿಕ ವಿಜ್ಞಾನದ ಪದ ಪುಂಜಗಳನ್ನು ಬಳಸಿ ಜನರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳುತ್ತಿದ್ದಾರೆ. ಜನರ ಭಯ ಮತ್ತು ಮೂಢನಂಬಿಕೆಗಳನ್ನು ಬಂಡವಾಳ ಮಾಡಿಕೊಂಡ ಬಾಲಿವುಡ್, ಹಾಲಿವುಡ್‍ನ ನಿರ್ಮಾಪಕರು, ನಿರ್ದೇಶಕರು, ವಿತರಕರು ಜನರ ಜೇಬಿಗೆ ಕತ್ತರಿ ಹಾಕಿ ತಮ್ಮ ಖಜಾನೆಗಳನ್ನು  ತುಂಬಿಸಿಕೊಂಡಿದ್ದಾರೆ. ಹೀಗೆ ಜನರ ಜ್ಞಾನದ ಕೊರತೆಯನ್ನೇ ಬಂಡವಾಳ ಮಾಡಿಕೊಂಡು ಇನ್ನೂ ಅನೇಕ ಚಲನಚಿತ್ರಗಳು ಬಿಡುಗಡೆಯಾಗಬಹುದು.
ಪ್ರಳಯದ ಪ್ರತಿಪಾದಕರು ಹೇಳುವಂತೆ 21ನೇ ಡಿಸೆಂಬರ್ 2012ಕ್ಕೆ ಜಗತ್ತು ಕೊನೆಗೊಳ್ಳುತ್ತದೆ ಎಂದು ಹೇಳುವ ಅಂಶಗಳಿಗೆ ಯಾವುದೇ ವೈಜ್ಞಾನಿಕ ಹಿನ್ನಲೆಯಾಗಲೀ, ಬಲವಾದ ಆಧಾರಗಳಾಗಲೀ ಇಲ್ಲ. ಕೇವಲ ಊಹೆಗಳನ್ನಾಧರಿಸಿ ತಮ್ಮ ವಾದವನ್ನು ಜನರ ಮುಂದಿಟ್ಟಿದ್ದಾರೆ.
ಯಾವುದೇ ಮುನ್ಸೂಚನೆಗಳು ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ಅವುಗಳನ್ನು ‘ಊಹೆ’(hಥಿಠಿoಣhesis)ಗಳೆಂದು ಪರಿಗಣಿತವಾಗುತ್ತವೆ. ಇತರರು ಇಂತವುಗಳನ್ನು ಪರೀಕ್ಷಿಸಲು ಮುಕ್ತ ಅವಕಾಶವಿರುತ್ತದೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ವ್ಯಾಪಕವಾಗಿ ಚರ್ಚೆಗೆ ಒಳಪಡುತ್ತಿರುವ ‘ಪ್ರಳಯ’ದ ಕುರಿತ ಮುನ್ಸೂಚನೆಗಳು ಕೇವಲ ಮನೋಜನ್ಯವಾಗಿದ್ದು, ಯಾವುದೇ ವೈಜ್ಞಾನಿಕ ತಳಹದಿ ಇಲ್ಲ ಹಾಗೂ ಅವುಗಳನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಲೂ ಆಗುವುದಿಲ್ಲ. ಏಕೆಂದರೆ ಪ್ರಳಯದ ಪ್ರತಿಪಾದಕರು ‘ನಂಬಿಕೆ ಮತ್ತು ಶ್ರದ್ಧೆ’ಗಳೆಂಬ ಚಿಪ್ಪಿನೊಳಗೆ ಅಡಗಿ ಕುಳಿತ್ತಿದ್ದಾರೆ. ಇಂತಹ ಅದೆಷ್ಟೋ ಭವಿಷ್ಯವಾಣಿಗಳು ವಿಫಲವಾದ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳಿವೆ.
ಆದರೆ ನಾವಿಲ್ಲಿ ಗಂಭಿರವಾಗಿ ಚರ್ಚಿಸಬೇಕಾಗಿರುವುದು ಪ್ರಳಯದ ಬಗ್ಗೆ ಅಲ್ಲ. ಮನುಕುಲವನ್ನು  ನಿಜವಾಗಿ ವಿನಾಶದತ್ತ ಕೊಂಡೊಯ್ಯುವ ಅಂಶಗಳು ಯಾವುವು ಎಂಬುದರ ಬಗ್ಗೆ. ಇಂದು ಭಾರತ ಮುಂದುವರೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿರುವುದೇನೋ ನಿಜ. ಆದರೆ ಮುಂದುವರೆದ ರಾಷ್ಟ್ರವಾಗುವುದು ಯಾವಾಗ? ಮುಂದುವರೆದ ರಾಷ್ಟ್ರವಾಗಲು ಇರುವ ಕೊರತೆಗಳೇನು? ದೇಶವನ್ನು ಕಾಡುತ್ತಿರುವ ಸಮಸ್ಯೆಗಳೇನು? ಅವುಗಳಿಗೆ ಪರಿಹಾರವೇನು? ಪರಿಹರಿಸುವವರು ಯಾರು? ಈ ಹಿಂದೆ ಇಂತಹ ಭೂಕಂಪ, ಭೂಕುಸಿತ, ಸುನಾಮಿ, ಚಂಡಮಾರುತಗಳು ನಡೆದಿಲ್ಲವೇ? ನಡೆದಾಗ ಪ್ರಳಯವಾಗಲಿಲ್ಲವೇ? ಆಗ ಕಾಡಲಾರದಂತ ಪ್ರಳಯ ಭೀತಿ ಈಗೇಕೆ? ಎಂಬಿತ್ಯಾದಿ ಪ್ರಶ್ನೆಗಳ ಬಗ್ಗೆ ಉತ್ತರ ಕಂಡುಕೊಳ್ಳಬೇಕಾಗಿದೆ. 
ಭ್ರಷ್ಟಾಚಾರ, ಲಂಚಕೋರತನ, ಅಧಿಕಾರದ ಲಾಲಸೆ, ಉಗ್ರಗಾಮಿತನ, ಭಯೋತ್ಪಾದಕತೆ ಮುಂತಾದ ಸಮಸ್ಯೆಗಳು ದೇಶವನ್ನು ಕಿತ್ತು ತಿನ್ನುತ್ತಿವೆ. ಗೋದಾಮುಗಳಲ್ಲಿ ಅಪಾರ ಆಹಾರ ಸಾಮಗ್ರಿಗಳು ಕೊಳೆಯುತ್ತಿದ್ದರೂ ಜನರಿಗೆ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ದೇಶದ ಕಪ್ಪುಹಣ ಹೊರದೇಶದಲ್ಲಿ ಭದ್ರವಾಗಿದ್ದರೂ ಜನರು ಬಡವರಾಗಿ ಬೀದಿ ಬಿಕಾರಿಯಾಗಿದ್ದಾರೆ. ವೆಚ್ಚ ಭರಿಸಲಾಗದೇ ಅದೆಷ್ಟೋ ಜನ ಕಾಯಿಲೆಗಳಿಗೆ ಬಲಿಯಾಗಿದ್ದಾರೆ. ಇಂತಹ ಪ್ರಳಯಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ನಾವ್ಯಾರೂ ಅವುಗಳ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ಪ್ರವಾಹ, ಭೂಕಂಪ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ಭೂಮಿ ಉಗಮವಾದಾಗಿನಿಂದ ನಡೆಯುತ್ತಿದ್ದರೂ ಇಂದಿಗೂ ಅವುಗಳ ಮುನ್ಸೂಚನೆಗಳ ಮಾಹಿತಿ ಸಂಗ್ರಹಿಸಲಾಗುತ್ತಿಲ್ಲ. ತಮ್ಮ ಸ್ವಾರ್ಥ ದುರಾಸೆಗಳಿಗಾಗಿ ಕೆಸರೆರಚಾಡುತ್ತಿರುವ ರಾಜಕೀಯ ಪಕ್ಷಗಳಿಗೆ ಇವುಗಳ ಪರಿವೆಯೇ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ ಪ್ರಳಯದ ಮುನ್ಸೂಚನೆ ಬಗ್ಗೆ ಜನರ ಮನಸ್ಸಿನಲ್ಲಿ ಇಲ್ಲಸಲ್ಲದ ಭೀತಿಯನ್ನು ಹುಟ್ಟುಹಾಕಿ ಶಾಂತಿ-ನೆಮ್ಮದಿ ಕದಡಿದವರ ವಿರುದ್ದ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ನಮ್ಮ ಕಾನೂನುಗಳ ದುರವ್ಯಸ್ಥೆಯೇ? 
ಅಮಾಯಕರನ್ನು ಅನಗತ್ಯ ಸಂಕಷ್ಟಗಳಿಂದ ಪಾರು ಮಾಡುವುದು, ಜನರ ಶ್ರದ್ಧೆ ಮತ್ತು ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡ ದುಷ್ಟಶಕ್ತಿಗಳ ವಿರುದ್ದ ಹೋರಾಡುವುದು ಪ್ರತಿಯೊಬ್ಬ ಚಿಂತನಾಶೀಲ ವ್ಯಕ್ತಿಯ ಕರ್ತವ್ಯ. ವೈಜ್ಞಾನಿಕ ದೃಷ್ಟಿಕೋನ ಎತ್ತಿಹಿಡಿದು, ಅಂಧವಿಶ್ವಾಸಗಳನ್ನು ಸೋಲಿಸಲು ವಿಜ್ಞಾನದ ನೈಜವಾದ ಆಳವಾದ ಮತ್ತು ಸ್ಪಷ್ಟವಾದ ಅರಿವು ಅತ್ಯಗತ್ಯ. ಈ ನಿಟ್ಟಿನಲ್ಲಿ ನಾಡಿನ ಪ್ರಗತಿಪರ ಹಾಗೂ ವೈಜ್ಞಾನಿಕ ಚಿಂತಕರು, ಸಾಹಿತಿಗಳು, ವಿಜ್ಞಾನಿಗಳು, ಸಮಾಜ ಸೇವಕರು, ವಿದ್ವಾಂಸರು ಎಲ್ಲರೂ ಒಟ್ಟಾಗಿ ಜನರ ಮನವನ್ನು ಕಲಕಿದ ವಿಚಿತ್ರಕಾರಿ ಅಂಶಗಳನ್ನು ಕಿತ್ತೊಗೆದು ಶಾಂತಿ ಸುವ್ಯವಸ್ಥಿತ ನಾಡ ಕಟ್ಟಲು ಕೈಜೋಡಿಸುವುದು ಅನಿವಾರ್ಯವಲ್ಲವೇ?
- ಆರ್.ಬಿ.ಗುರುಬಸವರಾಜ.

ಲಾಲ್ ಬಹದ್ದೂರು ಶಾಸ್ತ್ರಿ.

 ಸರಳತೆಯ ಹರಿಕಾರ 
ಲಾಲ್‍ಜೀಯವರಿಗೆ ನುಡಿನಮನ
ಇಂದು ಎಲ್ಲಾ ರಸ್ತೆ ಸಾರಿಗೆಯ ಬಸ್‍ಗಳಲ್ಲಿ ಮಹಿಳಾ ಕಂಡಕ್ಟರ್‍ಗಳನ್ನು ಕಾಣುತ್ತೇವೆ. ಸ್ವಾತಂತ್ರ ನಂತರ ದೇಶದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕಂಡಕ್ಟರ್ ನೇಮಕಾತಿ ಮಾಡಿವರು ಯಾರು ಗೊತ್ತೇ ? ಅವರೇ ದೇಶದ ಅಪ್ರತಿಮ ನೇತಾರ, ಸರಳತೆಯ ಹರಿಕಾರ, ಪ್ರಾಮಾಣಿಕ ಪ್ರಧಾನಮಂತ್ರಿ ಎಂದೇ ಖ್ಯಾತಿಯಾಗಿದ್ದ ಲಾಲ್ ಬಹದ್ದೂರು ಶಾಸ್ತ್ರಿ. ಶಾಸ್ತ್ರಿಜಿ ಉತ್ತರ ಪ್ರದೇಶದ ಗೋವಿಂದ ವಲ್ಲಭಪಂತರ ಸರ್ಕಾರದಲ್ಲಿ ನಾಗರಿಕಯಾನ ಮತ್ತು ಸಾಗಾಣಿಕಾ ಸಚಿವರಾಗಿದ್ದಾಗ ದೇಶದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕಂಡಕ್ಟರ್ ನೇಮಕಾತಿ ಮಾಡುವ ಮೂಲಕ ಅಂದಿನಿಂದಲೇ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದರು.
ಲಾಲ್ ಬಹದ್ದೂರ್‍ರವರು ಉತ್ತರ ಪ್ರದೇಶದ ಬನಾರಸ್ ಬಳಿಯ ಮೊಗಲ್ ಸರಾಯಿ ಎಂಬ ಪುಟ್ಟ ಹಳ್ಳಿಯಲ್ಲಿ 1904 ರ ಅಕ್ಟೋಬರ್ 2 ರಂದು ಶಾರದಾ ಪ್ರಸಾದ ಮತ್ತು ರಾಮ್‍ದುಲಾರಿ ದೇವಿಯವರ ಮಗನಾಗಿ ಜನಿಸಿದರು. ದುರದೃಷ್ಟವಶಾತ್ ಒಂದು ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಮಾರ್ಗದರ್ಶನದಲ್ಲಿಯೇ ಬೆಳೆದರು.
ಸಂಸ್ಕಾರಕ್ಕೆ ಪ್ರೇರಣೆ :
ಒಮ್ಮೆ ಆರು ವರ್ಷದ ಬಾಲಕನಾಗಿದ್ದಾಗ ಶಾಲೆಯಿಂದ ಮನೆಗೆ ಮರಳುವಾಗ ಗೆಳೆಯರೊಡನೆ ದಾರಿಯಲ್ಲಿನ ಹಣ್ಣಿನ ತೋಟಕ್ಕೆ ಹೋದರು. ಗೆಳಯರು ಮಾವಿನ ಮರ ಹತ್ತಿ ಹಣ್ಣು ಕೀಳತೊಡಗಿದರು. ಇವರು ಕೆಳಗೆ ನಿಂತು ಆರಿಸತೊಡಗಿದರು. ದೂರದಲ್ಲಿ ಬರುವ ಮಾಲಿಯನ್ನು ಕಂಡ ಗೆಳೆಯರು ಓಡಿಹೋದರು. ಮಾಲಿಯು ಕೈಗೆ ಸಿಕ್ಕಿಬಿದ್ದ ಶಾಸ್ತ್ರಿಯವರನ್ನು ಹೊಡೆಯತೊಡಗಿದ. ಆಗ ಶಾಸ್ತ್ರಿ ಹೊಡೆತ ತಪ್ಪಿಸಿಕೊಳ್ಳಲು ತಾನೊಬ್ಬ ತಬ್ಬಲಿ ಎಂದು ಹೇಳುತ್ತಾರೆ. ಇದನ್ನು ಕೇಳಿ ಮನನೊಂದ ಮಾಲಿ ಹೊಡೆಯುವುದನ್ನು ನಿಲ್ಲಿಸುತ್ತಾ ‘ನೀನು ತಬ್ಬಲಿಯಾದ್ದರಿಂದ ಬಿಡುತ್ತೇನೆ. ಇನ್ನೊಮ್ಮೆ ಇಂತಹ ಹೀನ ಕೃತ್ಯಕ್ಕೆ ಇಳಿಯಬೇಡ. ಉತ್ತಮ ಸಂಸ್ಕಾರ ಪಡೆದು ಉತ್ತಮ ಪ್ರಜೆಯಾಗು’ ಎಂದು  ಬುದ್ದಿ ಹೇಳುತ್ತಾನೆ. ಮಾಲಿಯ ಆ ಮಾತುಗಳೇ ಲಾಲ್‍ಜೀಯವರನ್ನು  ಉತ್ತಮ ಸಂಸ್ಕಾರವಂತರನ್ನಾಗಿಸಲು ಪ್ರೇರೇಪಿಸಿದವು.
ಆತ್ಮಗೌರವ ಮತ್ತು ಸ್ವಾಭಿಮಾನದ ಪರಾಕಾಷ್ಟೆ : 
ಅವರ ಬಾಲ್ಯದಲ್ಲಿ ನಡೆದ ಇನ್ನೊಂದು ಘಟನೆ ಶಾಸ್ತ್ರಿಯವರ ಆತ್ಮಗೌರವ ಮತ್ತು ಸ್ವಾಭಿಮಾನವನ್ನು ಬಿಂಬಿಸುತ್ತದೆ. ಒಮ್ಮೆ ಗೆಳೆಯರೊಂದಿಗೆ ಜಾತ್ರೆ ನೋಡಲು ಪಕ್ಕದೂರಿಗೆ ಹೋಗುತ್ತಾರೆ. ದಾರಿಯಲ್ಲಿನ ದೊಡ್ಡ ಹಳ್ಳವನ್ನು ದೋಣಿಯ ಮೂಲಕ ದಾಟಬೇಕಾಗುತ್ತದೆ. ಜೇಬಿನಲ್ಲಿದ್ದ ಒಂದೇ ಒಂದು ಕಾಸನ್ನು ಕೊಟ್ಟು ದೋಣಿ ಮೂಲಕ ದಾಟುತ್ತಾರೆ. ಜಾತ್ರೆಯನ್ನೆಲ್ಲಾ ಸುತ್ತಾಡಿದ ನಂತರ ಗೆಳೆಯರೆಲ್ಲಾ ವಾಪಾಸಾಗಲು ಹೊರಡುತ್ತಾರೆ. ಆದರೆ ಶಾಸ್ತ್ರಿಜಿ  ‘ನಾನು ಜಾತ್ರೆ ನೋಡುವುದು ಇನ್ನೂ ಇದೆ, ತಡವಾಗಿ ಬರುತ್ತೇನೆ, ನೀವು ನಡೆಯಿರಿ’ ಎಂದು ಅವರನ್ನು ಸಾಗಹಾಕುತ್ತಾರೆ. ಆದರೆ ನಿಜವಾಗಿಯೂ ಜಾತ್ರೆ ನೋಡುವುದು ಇರಲಿಲ್ಲ. ಜಾತ್ರೆಯಲ್ಲಿ ವಸ್ತುಗಳನ್ನು ಕೊಳ್ಳುವುದಿರಲಿ ವಾಪಾಸು ಹೋಗುವಾಗ ದೋಣಿಯವನಿಗೆ ಕೊಡಲು ಕಾಸು ಇರುವುದಿಲ್ಲ. ಗೆಳೆಯರಲ್ಲಿ ದುಡ್ಡು ಕೇಳಿದ್ದರೆ ಕೊಡುತ್ತಿದ್ದರು. ಆದರೆ ಇವರಿಗೋ  ಸ್ವಾಭಿಮಾನ. ಸಂಜೆಯಾದ ನಂತರ ಹಳ್ಳವನ್ನು ಈಜಿಕೊಂಡು ದಡ ಸೇರುತ್ತಾರೆ. ಬಾಲ್ಯದಿಂದಲೇ ಆತ್ಮಗೌರವ ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ಧೈರ್ಯ, ಸ್ಥೈರ್ಯ, ಕಷ್ಟ ಸಹಿಷ್ಣುತೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. 
ಸ್ವಾತಂತ್ರ ಚಳುವಳಿಗೆ ಪಾದಾರ್ಪಣೆ : 
1921 ರಲ್ಲಿ ಗಾಂಧಿಜಿಯವರು ಅಸಹಕಾರ ಚಳುವಳಿಗೆ ಕರೆ ನೀಡಿದರು. ಅನೇಕ ದೇಶಾಭಿಮಾನಿಗಳು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಈ ಚಳುವಳಿಯಲ್ಲಿ ಭಾಗವಹಿಸಿದರು. ಆಗ ಶಾಸ್ತ್ರಿಜಿ ವಾರಣಾಸಿಯಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದರು. ಗಾಂಧಿಜಿವರಿಂದ ಪ್ರೇರಿತರಾದ ಶಾಸ್ತ್ರಿಜಿ ತಾಯಿ ಮತ್ತು ಬಂಧುಗಳ ಮಾತನ್ನು ಧಿಕ್ಕರಿಸಿ ಅಸಹಕಾರ ಚಳುವಳುಯಲ್ಲಿ ಭಾಗವಹಿಸಿದರು. ಆಗಲೇ ಅವರಲ್ಲಿ ಸ್ವಾತಂತ್ರದ ಕಿಚ್ಚು ಹೊತ್ತಿಕೊಂಡಿತ್ತು. ಇದರಲ್ಲಿ ಭಾಗವಹಿಸಿದ 17 ವರ್ಷದ ಶಾಸ್ತ್ರಿಜಿಯವರನ್ನು ಬಂಧಿಸಲಾಯಿತು. ನಂತರ ವಯಸ್ಸು ಚಿಕ್ಕದೆಂಬ ಕಾರಣಕ್ಕೆ ಬಿಡುಗಡೆಗೊಳಿಸಲಾಯಿತು.
ಜಾತ್ಯಾತೀತತೆಯ ಮಂತ್ರ :
ಶಾಸ್ತ್ರಿ ಎಂಬುದು ಅವರ ಮನೆತನದ ಹೆಸರು ಅಲ್ಲ. ಅವರ ಮನೆತನದ ಹೆಸರು ‘ಶ್ರೀವಾಸ್ತವ’ ಎಂದು. ಅದೊಂದು ಜಾತಿ ಸೂಚಕ ಪದ ಎಂಬ ಕಾರಣಕ್ಕೆ ಅವರು ಅದನ್ನು ತಮ್ಮ ಹೆಸರಿಗೆ ಅಂಟಿಸಿಕೊಳ್ಳಲಿಲ್ಲ. ಉನ್ನತ ವ್ಯಾಸಂಗದಲ್ಲಿ 1926ರಲ್ಲಿ ‘ಶಾಸ್ತ್ರಿ’ ಪದವಿ ತೇರ್ಗಡೆಯಾದ ನಂತರ ‘ಶಾಸ್ತ್ರಿ’ ಎಂಬ ಪದವನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಭಾರತೀಯರು ಬಡವರು, ಆದರೆ ಭಿಕ್ಷುಕರಲ್ಲ : 
ನೆಹರು ಪ್ರಧಾನಮಂತ್ರಿಯಾಗಿದ್ದಾಗ ಶಾಸ್ತ್ರಿಜಿ ಗೃಹ ಮಂತ್ರಿಯಾಗಿದ್ದರು. ಅದೊಂದು ದಿನ ವಿಶ್ವದ ಗೃಹ ಮಂತ್ರಿಗಳೆಲ್ಲಾ ಒಂದು ವೇದಿಕೆಯಲ್ಲಿ ಸೇರಬೇಕಾಗಿತ್ತು. ಆಗ ಶಾಸ್ತ್ರಿಜಿ ಮಾಸಿದ ಮತ್ತು ಸ್ವಲ್ಪ ಹರಿದ ಕೋಟನ್ನು ಹಾಕಿಕೊಂಡು ಹೊರಡಲು ಸಜ್ಜಾದರು. ಆಗ ನೆಹರು ಶಾಸ್ತ್ರಜಿಯವರನ್ನು ನೋಡಿ “ನೀವು ನಮ್ಮ  ದೇಶವನ್ನು ಪ್ರತಿನಿಧಿಸುವ ವ್ಯಕ್ತಿಯಾದ್ದರಿಂದ ಈ ಹರಿದ ಕೋಟನ್ನು ಹಾಕಿಕೊಂಡು ಹೋಗಬೇಡಿ. ಬದಲಾಗಿ ಬೇರೆ ಹೊಸ ಕೋಟನ್ನು ಹಾಕಿಕೊಂಡು ಹೋಗಿ” ಎಂದು ಸಲಹೆ ನೀಡಿದರು.  ಶಾಸ್ತ್ರಿಜಿ “ನನ್ನ ಬಳಿ ಬೇರೆ ಯಾವ ಕೋಟೂ ಇಲ್ಲ” ಎಂದರು. ದೇಶದ ಒಬ್ಬ ಗೃಹ ಮಂತ್ರಿಯ ಬಳಿ ಹಾಕಿಕೊಳ್ಳಲು ಒಂದು ಒಳ್ಳೆಯ ಕೋಟು ಇಲ್ಲ ಎಂದರೆ ಅವರ ಸರಳತೆ ಹೇಗಿತ್ತು ಎಂಬುದನ್ನು ನಾವು ಅರಿಯಬಹುದು. ನೆಹರೂರವರು ತಮ್ಮ ಕೋಟನ್ನು ಕೊಡುವದಾಗಿ ಹೇಳುತ್ತಾರೆ. ಶಾಸ್ತ್ರಿಜಿ ಅದನ್ನು ನಿರಾಕರಿಸುತ್ತಾ “ನಾನು ಈ ಹರಿದ ಬಟ್ಟೆ ಧರಿಸಿ ಹೋದರೆ ಭಾರತ ಬಡದೇಶ, ಆದ್ದರಿಂದ  ಭಾರತೀಯ ನಾಯಕನೂ ಬಡವನು ಎಂದು ಭಾವಿಸುತ್ತಾರೆ. ನಿಮ್ಮ ಕೋಟು ನನಗೆ ಉದ್ದವಾಗುತ್ತದೆ. ಅದನ್ನು ನಾನು ಹಾಕಿಕೊಂಡು ಹೋದರೆ ಭಾರತೀಯರು ಬೇರೆಯವರು ನೀಡಿದ ಬಟ್ಟೆಗಳನ್ನು ಹಾಕಿಕೊಳ್ಳುವ ಭಿಕ್ಷುಕರು ಎಂದು ತೋರಿಸಿದಂತೆ ಆಗುತ್ತದೆ. ಭಾರತೀಯರು ಬಡವರು ಎನಿಸಿಕೊಂಡರೂ ಪರವಾಗಿಲ್ಲ. ಭಿಕ್ಷುಕರು ಅಂತ ಕರೆಸಿಕೊಳ್ಳಲು ನನಗೆ ಇಷ್ಟವಿಲ್ಲ” ಎಂದರು. ಇದು ಶಾಸ್ತ್ರಿಜಿಯವರ ಜನಪರ ಕಾಳಜಿ ಮತ್ತು ದೇಶಾಭಿಮಾನದ ದ್ಯೋತಕವಲ್ಲವೇ? ವಿದೇಶ ಪ್ರವಾಸದ ನೆಪದಲ್ಲಿ ಸೂಟು, ಕೋಟು, ಬೂಟು, ಹ್ಯಾಟು ಹಾಕಿಕೊಳ್ಳುವ ಇಂದಿನ ರಾಜಕಾರಣಿಗಳೆಲ್ಲಿ?, ಅಂದಿನ ಶಾಸ್ತ್ರಿಜಿಯವರ ಆದರ್ಶಗಳೆಲ್ಲಿ? ಎಷ್ಟೊಂದು ಅಜಗಜಾಂತರ ವ್ಯತ್ಯಾಸವಲ್ಲವೇ ?
ಸ್ವಾವಲಂಬನೆಯ ಹರಿಕಾರ : 
ಇಂದು ದೇಶವು ಆಹಾರ ಕ್ಷೇತ್ರದಲ್ಲಿ  ಏನಾದರೂ  ಸ್ವಾವಲಂಬನೆ ಸಾಧಿಸಿದೆ ಎಂದರೆ ಅದಕ್ಕೆ ಕಾರಣೀಭೂತರೇ ಲಾಲ್ ಬಹದ್ದೂರು ಶಾಸ್ತ್ರೀಜಿಯವರು. ಅಂದು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಒದ್ದಾಡುತ್ತಿದ್ದ ಭಾರತವನ್ನು ಹಾಗೂ ಅದರ ರೈತಾಪಿ ವರ್ಗವನ್ನು ಮೇಲೆತ್ತಲು “ಜೈ ಜವಾನ್ ಜೈ ಕಿಸಾನ್” ಎಂಬ ಘೋಷವಾಕ್ಯ ಮೊಳಗಿಸುವ ಮೂಲಕ ‘ಹಸಿರು ಕ್ರಾಂತಿ’ಯನ್ನು ಬೆಂಬಲಿಸಿದರು. ತನ್ಮೂಲಕ ಭಾರತ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣರಾದರು. ಅಂತೆಯೇ ಹೈನೋಧ್ಯಮವನ್ನು  ಉತ್ತೇಜಿಸುವ  ‘ಕ್ಷೀರಕ್ರಾಂತಿ’ಗೂ ಕಾರಣರಾದರು. 
ವೈಯಕ್ತಿಕತೆಗೆ ತೆತ್ತ ದಂಡ :
ಶಾಸ್ತ್ರಿಜಿ ಪ್ರಧಾನಮಂತ್ರಿಯಾಗಿದ್ದಾಗ ಅವರ ಮಗ ಸುನಿಲ್ ಶಾಸ್ತ್ರಿ ವೈಯಕ್ತಿಕ ಕೆಲಸಕ್ಕಾಗಿ ಪ್ರಧಾನಿಯವರ ವಾಹನ ಬಳಸಿರುವುದು ಗಮನಕ್ಕೆ ಬರುತ್ತದೆ. ಕೂಡಲೇ ಚಾಲಕನಿಂದ ವಾಹನ ಕ್ರಮಿಸಿದ ದೂರದ ವಿವಿರ ಪಡೆದು ಅದರ ವೆಚ್ಚವನ್ನು ಸರ್ಕಾರಕ್ಕೆ ಪಾವತಿಸುವ ಮೂಲಕ ತಮ್ಮ ಪ್ರಾಮಾನಿಕತೆಯನ್ನು ಮೆರೆಯುತ್ತಾರೆ. ಅವರ ಸರಳ ವ್ಯಕ್ತಿತ್ವವೇ ಇಂದಿನ ಭ್ರಷ್ಠ ರಾಜಕಾರಣಿಗಳಿಗೆ ಒಂದು ದೊಡ್ಡ ಪಾಠ.  ನೆಹರೂರವರ ಸಂಪುಟದಲ್ಲಿ ರೈಲ್ವೇ ಖಾತೆ ಸಚಿವರಾಗಿದ್ದಾಗ 1956 ರಲ್ಲಿ ನಡೆದ ರೈಲು ದುರಂತದ ನೈತಿಕ ಹೊಣೆ ಹೊತ್ತು ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಇಂತಹ ಅನೇಕ ನಿದರ್ಶನಗಳು ಅವರ ಜೀವನದುದ್ದಕ್ಕೂ ನೆಡೆದಿವೆ.
ಇಲ್ಲಿ ಇನ್ನೊಂದು ಘಟನೆಯನ್ನು ಪ್ರಸ್ತಾಪಿಸಲೇಬೇಕು. ಅದೇನೆಂದರೆ ಶಾಸ್ತ್ರಿಯವರು ಕುಟುಂಬದ ಒತ್ತಡಕ್ಕೆ ಮಣಿದು ಸಾಲ ಮಾಡಿ ಕಾರು ಕೊಂಡುಕೊಳ್ಳುತ್ತಾರೆ. ಆದರೆ ಅದನ್ನು ತೀರಿಸಲಾಗದೇ ಮರಣ ಹೊಂದುತ್ತಾರೆ. ಶಾಸ್ತ್ರಿಯವರ ಕಾರಿನ ಸಾಲವನ್ನು ಪತ್ನಿ ಲಲಿತಾ ದೇವಿಯವರು ತಮಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿ ತೀರಿಸಿದರು. ಅಲ್ಲದೇ ಶಾಸ್ತ್ರಿಜಿಯವರು ತಮ್ಮ ಜೀವನದ ಕೊನೆಯವರೆಗೂ ಬಾಡಿಗೆ ಮನೆಯಲ್ಲಿಯೇ ಇದ್ದರು. ಇಂದಿನ ರಾಜಕಾರಣಿಗಳೆಲ್ಲ ಸಾಲವನ್ನು ಬಡ್ಡಿಗೆ ಕೊಡುವ ಲೆಕ್ಕಾಚಾರದಲ್ಲಿದ್ದಾರೆ. ತಮಗೂ ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೂ, ಮರಿಮೊಮ್ಮಕ್ಕಳಿಗೂ ಎಂಬಂತೆ ಹತ್ತಾರು ತಲೆಮಾರುಗಳಿಗೆ ಸಾಕಾಗುವಷ್ಟು ಹಣ ಆಸ್ತಿ ಸಂಪಾದಿಸಿಡುವಾಗ ಶಾಸ್ತ್ರಿಯವರು  ಕಾರಿನ ಸಾಲ ತೀರಿಸಲಾಗದೇ ಕೊನೆಯುಸಿರೆಳೆದುದು ವಿಪರ್ಯಸವಲ್ಲವೇ? ಇಂದಿನ ಭ್ರಷ್ಠ ರಾಜಕಾರಣಿಗಳಿಗೆ ಶಾಸ್ತ್ರಿಯವರ ಪ್ರಾಮಾಣಿಕ ಬದುಕು ಒಂದು ಹಾಸ್ಯಮಯ ನಾಟಕವಾಗಿ ತೋರಬಹುದೇ ಅಥವಾ ಉತ್ತರವಾಗಬಲ್ಲದೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
- ಆರ್.ಬಿ.ಗುರುಬಸವರಾಜ. 

ಶೌಚಾಲಯ ಕ್ರಾಂತಿ

ಶೌಚಾಲಯ ಕ್ರಾಂತಿ

ಭಾರತ ದೇಶದಲ್ಲಿ ಶೇಕಡಾ 80 ರಷ್ಟು ಹಳ್ಳಿಗಳಿದ್ದು ದೇಶದ ಅಭಿವೃದ್ದಿಯ ಸೂಚ್ಯಾಂಕದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಕರ್ನಾಟಕವೂ ಸಹ ಇದಕ್ಕೆ ಹೊರತಲ್ಲ. ಬಹುತೇಕ ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ ದೂರವುಳಿದಿವೆ. ಸ್ವಾತಂತ್ರ ಬಂದು 65 ವರ್ಷ ಕಳೆದರೂ ನಮ್ಮ ಮಹಿಳೆಯರು ಶೌಚಕ್ಕಾಗಿ ಅನುಭವಿಸುವ ನರಕ ಯಾತನೆ ಇನ್ನೂ ನಿಂತಿಲ್ಲ. 
ಬೆಳಗಿನ ಜಾವ ಅಥವಾ ಸಂಜೆಯ ಹೊತ್ತಿನಲ್ಲಿ ಗ್ರಾಮಕ್ಕೆ ಹೊಂದಿಕೊಂಡ ರಸ್ತೆಯ ಇಕ್ಕೆಲಗಳಲ್ಲಿ ಅವರು ಅನುಭವಿಸುವ ನರಕ ಯಾತನೆಯನ್ನು ಪರಿಹರಿಸಲು ನಾವಿನ್ನೂ ಮುಂದಾಗದಿರುವುದು ನಮ್ಮ ದೌರ್ಭಾಗ್ಯವೇ ಸರಿ.
2011 ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 1,02,32,133 ಜನವಸತಿ ಕುಟುಂಬಗಳಿದ್ದು ಅದರಲ್ಲಿ 66,75,173 ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ಹಾಗೂ 35,56,960 ಕುಟುಂಬಗಳು ನಗರ ಪ್ರದೇಶದಲ್ಲಿ ವಾಸಿಸುತ್ತಿವೆ. ಇದರಲ್ಲಿ ಗ್ರಾಮೀಣ ಪ್ರದೇಶದ ಶೇಕಡಾ 17.4 ರಷ್ಟು ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದು ಉಳಿದ ಶೇಕಡಾ 82.6 ರಷ್ಟು ಕುಟುಂಬಗಳಲ್ಲಿ ಶೌಚಾಲಯಗಳೇ ಇಲ್ಲ. ಆದರೆ ನಗರ ಪ್ರದೇಶದ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ನಗರ ಪ್ರದೇಶದಲ್ಲಿ ಶೇಕಡಾ 75.2 ರಷ್ಟು ಕುಟುಂಬಗಳಲ್ಲಿ ಶೌಚಾಲಯಗಳಿದ್ದು, ಶೇಕಡಾ 24.8 ರಷ್ಟು ಕುಟುಂಬಗಳಲ್ಲಿ ಶೌಚಾಲಯಗಳು ಇಲ್ಲ. ಒಟ್ಟಾರೆ ರಾಜ್ಯದಲ್ಲಿ ಶೇಕಡಾ 37.5 ರಷ್ಟು ಕುಟುಂಬಗಳಲ್ಲಿ ಮಾತ್ರ ಶೌಚಾಲಯಗಳಿದ್ದು ಉಳಿದ ಶೇಕಡಾ 62.5 ರಷ್ಟು ಕುಟುಂಬಗಳಲ್ಲಿ ಶೌಚಾಲಯಗಳೇ ಇಲ್ಲ. 
ಶೌಚಾಲಯಗಳಿಲ್ಲದ ಈ ಎಲ್ಲಾ ಕುಟುಂಬಗಳು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿವೆ. ಬಯಲು ಶೌಚಾಲಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಹಾಗೂ ಜಲಮಾಲಿನ್ಯಕ್ಕೂ ಕಾರಣವಾಗುತ್ತದೆ. ಕೆಲವು ಸಲ ಮಾನಹಾನಿ ಮತ್ತು ಪ್ರಾಣಾಪಾಯಗಳನ್ನು ತಂದೊಡ್ಡುತ್ತವೆ. 
ಪರಿಸ್ಥಿತಿ ಹೀಗಿರುವಾಗ ಇದನ್ನೆಲ್ಲ ಕಡೆಗಣಿಸಿ ಇನ್ನಿತರೇ ಎಲ್ಲಾ ಸೌಲಭ್ಯಗಳನ್ನು ಹೊಂದಿಸಿಕೊಳ್ಳುವ ನಾವುಗಳು ಶೌಚಾಲಯಗಳ ನಿರ್ಮಾಣಕ್ಕೆ ಮನಸ್ಸು ಮಾಡುತ್ತಿಲ್ಲ. ಅಲ್ಲದೇ ಬೇರೆ ಬೇರೆ ಕಾರ್ಯಕ್ರಮಗಳಿಗೆ ದೇಣಿಗೆ ಸಂಗ್ರಹಿಸಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸುವ ನಾವುಗಳು ಶೌಚಾಲಯ ಕ್ರಾಂತಿಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಬದಲಾಗಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ತೋರುವ ಬದ್ದತೆಯನ್ನು ಶೌಚಾಲಯ ನಿರ್ಮಾಣಕ್ಕೂ ತೋರಿದರೆ ಒಳಿತಲ್ಲವೇ. ಕಾರ್ಯಕ್ರಮಗಳಿಗೆ ಸಂಘಟಿತರಾಗುವಂತೆ  ಶೌಚಾಲಯ ನಿರ್ಮಾಣಕ್ಕೂ ಸಂಘಟಿತರಾಗಿ ಕ್ರಾಂತಿಯನ್ನು ಹಬ್ಬಿಸುವ ಮೂಲಕ ನಮ್ಮ ತಾಯಂದಿರ ಹಾಗೂ ಸಹೋದರಿಯರ ಮಾನ, ಪ್ರಾಣ ಕಾಪಾಡಬಹುದಲ್ಲವೇ ?
- ಆರ್.ಬಿ.ಗುರುಬಸವರಾಜ.

‘ದೇವುಡು ನರಸಿಂಹಶಾಸ್ತ್ರಿ’.

ನನ್ನ ಕಾಲು ದೇವರಿಗೆ ಬೇಕಾಗಿತ್ತು ಅಂತಾ ಕಾಣುತ್ತೆ.......
ಉಡುಪಿಯಲ್ಲೊಂದು ಉಪನ್ಯಾಸ ಕಾರ್ಯಕ್ರಮ ಆಯೋಜಿತವಾಗಿತ್ತು. ಅಲ್ಲಿಗೆ ಒಬ್ಬ ಪ್ರಖ್ಯಾತ ಸಾಹಿತಿಯನ್ನು ದಂಪತಿ ಸಮೇತರಾಗಿ ಆಹ್ವಾನಿಸಲಾಗಿತ್ತು. ಅಲ್ಲಿ ಆ ಸಾಹಿತಿಯ ಉಪನ್ಯಾಸ ಕಾರ್ಯಕ್ರಮ ಇತ್ತು. ಅತಿಥಿಗಳೆಲ್ಲರನ್ನೂ ವೇದಿಕೆಗೆ  ಕರೆತಂದರು. ನಿರೂಪಕರು ಕಾರ್ಯಕ್ರಮದ ಉದ್ದೇಶವನ್ನು ಹೇಳುತ್ತಿರುವಾಗ ಅಂಚೆ ಪೇದೆಯೊಬ್ಬ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿಗಳಿಗೆ ಒಂದು ಟೆಲಿಗ್ರಾಮ್ ತಂದುಕೊಟ್ಟರು. ಅದರಲ್ಲಿ ಅವರ ಮಗನ ಸಾವಿನ ಸುದ್ದಿ ಬಂದಿತ್ತು. ಮನದಲ್ಲಿ ಆತಂಕದ ಅಲೆ ಮೂಡಿತು. ಆದರೂ ಸಾವರಿಸಿಕೊಂಡು ಟೆಲಿಗ್ರಾಮ್‍ನ್ನು ಮಡಿಚಿ ಜೇಬಿಗಿಳಿಸಿದರು. ನಿರೂಪಕರು ಉಪನ್ಯಾಸಕರಿಗೆ ವೇದಿಕೆ ಬಿಟ್ಟುಕೊಟ್ಟರು. ಭಗವದ್ಗೀತೆಯ ಮೇಲೆ ಅತ್ಯದ್ಬುತ ಉಪನ್ಯಾಸ ನೀಡಿದರು. ಸುಖ ದುಃಖಗಳೆರಡನ್ನೂ ಸ್ಥಿತಪ್ರಜ್ಞರಾಗಿ ಹೇಗೆ ಸ್ವೀಕರಿಸಬೇಕೆಂಬ ಗೀತೋಪದೇಶವನ್ನು ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು. ಇಂತಹ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕೃಷ್ಣಶಾಸ್ತ್ರಿಗಳು ಕಂಬನಿಗರೆದರು. ಅಂತಹ ಸ್ಥಿತಪ್ರಜ್ಞೆಯನ್ನು ಮೆರೆದ ಸಾಹಿತಿ ‘ದೇವುಡು ನರಸಿಂಹಶಾಸ್ತ್ರಿ’.
ದೇವುಡು ನರಸಿಂಹಶಾಸ್ತ್ರಿಗಳು ಮೈಸೂರಿನ ವೈದಿಕ ಸಂಪ್ರದಾಯಸ್ತ ಕುಟುಂಬದಲ್ಲಿ 1892 ರಲ್ಲಿ ಜನಿಸಿದರು. ತಂದೆ ದೇವುಡು ಕೃಷ್ಣಶಾಸ್ತ್ರಿ, ತಾಯಿ ಸುಬ್ಬಮ್ಮ. ಮೈಸೂರಿನಲ್ಲೇ ಶಿಕ್ಷಣ ಪ್ರಾರಂಭಿಸಿದ ನರಸಿಂಹಶಾಸ್ತ್ರಿಗಳು ಮಹಾರಾಜಾ ಕಾಲೇಜಿನಲ್ಲಿ ಬಿ.ಎ ಹಾಗೂ ಎಂ.ಎ ಪದವಿಗಳನ್ನು ಪಡೆದರು. 
ಬೆಂಗಳೂರಿನ ಆರ್ಯ ವಿದ್ಯಾ ಶಾಲೆಯಲ್ಲಿ ಉಪಾದ್ಯಾಯರಾಗಿ ವೃತ್ತಿಗೆ ಸೇರಿದರು. ಅಲ್ಲಿ ಕೆಲಕಾಲ ಸೇವೆ ಸಲ್ಲಿಸಿದ ನಂತರ ಗಾಂಧಿನಗರದಲ್ಲಿ ತಾವೇ ಹೈಸ್ಕೂಲನ್ನು ಪ್ರಾರಂಭಿಸಿ ಅದರ ಮುಖ್ಯೋಪಾಧ್ಯಾಯರಾದರು. ಈ ಕೆಲಸವೂ ತೃಪ್ತಿ ನೀಡದಾದಾಗ ಅದನ್ನು ಬಿಟ್ಟು ಸಾಹಿತ್ಯ ಸೇವೆಗೆ ಮುಂದಾದರು.
ದೇವುಡು ನರಸಿಂಹಶಾಸ್ತ್ರಿಗಳು ಅನೇಕ ಪ್ರಕಾರದ ಸಾಹಿತ್ಯ ರಚನೆ ಮಾಡಿದರು. ಜೊತೆಗೆ ಕನ್ನಡ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದರು ಅಲ್ಲದೇ ಉತ್ತಮ ವಾಗ್ಮಿಗಳು ಆಗಿದ್ದರು.
ಇವರ ಉಪನ್ಯಾಸ ಕಲೆಗೆ ಮಾರುಹೋದ ಉಡುಪಿಯ ಆಸಕ್ತರೆಲ್ಲ ಸೇರಿ ಉಪನ್ಯಾಸಕ್ಕೆ ಆಹ್ವಾನಿಸಿದರು. ಜೊತೆಗೆ ಮಡದಿ ಗೌರಮ್ಮನವರಿಗೂ ಆಹ್ವಾನವಿತ್ತು. ಉಎಉಪಿಗೆ ಹೊರಟ ದೇವುಡು ದಂಪತಿಗಳಿಗೆ ಆಕಸ್ಮಿಕವಾಗಿ ಕೃಷ್ಣಶಾಸ್ತ್ರಿಗಳು ಭೇಟಿಯಾದರು. ಅವರನ್ನೂ ಉಡುಪಿಗೆ ಕರೆದುಕೊಂಡು ಹೋದರು.
ಉಪನ್ಯಾಸ ಪ್ರಾರಂಭವಾಗುವ ವೇಳೆಗೆ ಟೆಲಿಗ್ರಾಮ್ ಬಂತು. ಅದರಲ್ಲಿ ಮಗನ ಸಾವಿನ ಸುದ್ದಿ ಪ್ರಕಟವಾಗಿತ್ತು. ಆದರೂ ವಿಚಲಿತರಾಗದೇ ಭಗವದ್ಗೀತೆಯ ಮೇಲೆ ಅಧ್ಬುತ ಉಪನ್ಯಾಸ ನೀಡಿದರು. ಅದು ಅಮೋಘವಾಗಿತ್ತು. ಈ ಹಿಂದೆ ಹಲವು ಬಾರಿ ದೇವುಡು ಭಗವದ್ಗೀತೆಯ ಮೇಲೆ ಮಾಡಿದ ಉಪನ್ಯಾಸಕ್ಕಿಂತ ಅಂದಿನ ಉಪನ್ಯಾಸದ ವೈಖರಿಯೇ ಬೇರೆ ಆಗಿತ್ತು ಎಂದು ಅದಕ್ಕೆ ಸಾಕ್ಷಿಯಾಗಿದ್ದ ಕೃಷ್ಣಶಾಸ್ತ್ರಿಗಳು ಬರೆದಿಟ್ಟಿದ್ದಾರೆ. ಕಾರ್ಯಕ್ರಮ ಮುಗಿದ ಕೂಡಲೇ ಬೆಂಗಳೂರಿಗೆ ಮರಳಿದರು.
ರೈಲ್ವೇ ನಿಲ್ದಾಣದಲ್ಲಿ ಇಳಿದ ದೇವುಡು ಕೃಷ್ಣಶಾಸ್ತ್ರಿಗಳನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಟೆಲಿಗ್ರಾಮ್‍ನ ವಿಷಯ ತೆಗೆದು ತಮ್ಮ ಮಗ ರಾಮು ತೀರಿಕೊಂಡ ಬಗ್ಗೆ ಹೇಳಿದಾಗ ಕೃಷ್ಣಶಾಸ್ತ್ರಿಗಳು ದಂಗಾದರು. ಈ ಸುದ್ದಿಯನ್ನು ಹೆಂಡತಿಗೆ ಹೇಗೆ ತಿಳಿಸಿವುದೆಂದು ಪೇಚಾಡಿಕೊಂಡರು.  ವಿಷಯ ತಿಳಿದಾಗ ಮಡದಿ ಗೌರಮ್ಮ ಮೂರ್ಛೆ ಹೋದರು. ಎಚ್ಚೆತ್ತ ನಂತರ ಗೋಳಾಡಿದರು. ಅವರು ಬೆಂಗಳೂರು ತಲುಪುವ ವೇಳೆಗೆ ಮಗನ ಅಂತ್ಯಸಂಸ್ಕಾರ ಮುಗಿದು ಹೋಗಿತ್ತು. ತಂದೆ ತಾಯಿಗಳಿಗೆ ಕೊನೆಗೂ ಮಗನ  ಮುಖ ನೋಡಲಾಗಲಿಲ್ಲ. ಮಗನ ಸಾವಿನ ಸುದ್ದಿ ತಿಳಿದ ಮೇಲೂ ಅದ್ಭುತ ಉಪನ್ಯಾಸ ನೀಡಿದ ದೇವುಡು ಬಗ್ಗೆ ಕೃಷ್ಣಶಾಸ್ತ್ರಿಗಳಿಗೆ ಅಪಾರ ಗೌರವ ಮೂಡಿತು. 
ಸರ್ವಜ್ಞ ತ್ರಿಪದಿ ಸಂಪಾದಕರಾದ ರೆವೆರೆಂಡ್ ಉತ್ತಂಗಿ ಚೆನ್ನಪ್ಪನವರಿಗೂ ಮತ್ತು ದೇವುಡು ಅವರಿಗೂ ತುಂಬಾ ಆತ್ಮೀಯತೆ ಇತ್ತು. ಒಮ್ಮೆ ದೇವುಡು ಉತ್ತಂಗಿ ಚೆನ್ನಪ್ಪನವರನ್ನು ಮನೆಗೆ ಊಟಕ್ಕೆ ಬರಲು ಆಹ್ವಾನಿಸಿದರು. ಅದಕ್ಕೆ ಉತ್ತಂಗಿಯವರು ಸಮ್ಮತಿಸಿದರು.
ನಂತರ ದೇವುಡು ಅವರಿಗೆ ಸಮಸ್ಯೆಗಿಟ್ಟುಕೊಂಡಿತು. ಏಕೆಂದರೆ ತಮ್ಮದು ಸಂಪ್ರದಾಯಸ್ಥ, ಮಡಿವಂತ ಬ್ರಾಹ್ಮಣ ಕುಟುಂಬ. ಚೆನ್ನಪ್ಪನವರು ಕ್ರೈಸ್ತ ಧರ್ಮದವರು. ಅವರು ಮನೆಗೆ ಬಂದಾಗ ಹೇಗೆ ಸತ್ಕರಿಸಬೇಕೆಂದು ತಿಳಿಯಲಿಲ್ಲ. ತುಂಬಾ ಪೇಚಾಡಿಕೊಂಡರು. ಕೊನೆಗೆ ತಮ್ಮ ಗುರುಗಳಾದ ವೈದ್ಯನಾಥ ಶಾಸ್ತ್ರಿಗಳನ್ನು ವಿಚಾರಿಸಿದರು. ಅವರು ನಿನ್ನ ಮನೆಗೆ ವಾಸುದೇವನೇ ಬಂದರೆ ಹೇಗೆ ಸತ್ಕರಿಸುತ್ತೀಯೋ ಹಾಗೆಯೇ ಸತ್ಕರಿಸು ಎಂದರು. ದೇವುಡು ಅವರಿಗೆ ಸಮಾದಾನ ಸಂತೋಷಗಳೆರಡೂ ಆದವು.
ಮಾರನೇ ದಿನ ಉತ್ತಂಗಿ ಚೆನ್ನಪ್ಪನವರು ದೇವುಡು ಮನೆಗೆ ಬಂದರು. ದೇವುಡು ಸಪತ್ನಿಕರಾಗಿ ಉತ್ತಂಗಿ ಚೆನ್ನಪ್ಪನವರ ಪಾದ ತೊಳೆದು ಪಾದೋದಕವನ್ನು ತಮ್ಮ ತಲೆಯ ಮೇಲೆ ಪ್ರೋಕ್ಷಿಸಿಕೊಂಡರು. ನಂತರ ಅವರನ್ನು ಕುಳ್ಳಿರಿಸಿ ಸಂಭಾಷಿಸುತ್ತಾ ಸಹಪಂಕ್ತಿ ಭೋಜನ ಮಾಡಿದರು. ಉತ್ತಂಗಿಯವರಿಗೆ ಪರಮಾಶ್ಚರ್ಯವಾಯಿತು.
ದೇವುಡು ಅವರಿಗೆ ಸ್ವಲ್ಪ ವಯಸ್ಸಾದ ಮೇಲೆ ಮಧುಮೇಹ ಕಾಯಿಲೆ ಬಂತು. ಅದರಿಂದ ತೀವ್ರ ಸಂಕಷ್ಟಕ್ಕೀಡಾದರು. ಆಗಿನ ಕಾಲದಲ್ಲಿ ಈಗಿನಂತೆ ಸೂಕ್ತ ಔಷಧಿಗಳ ಸೌಲಭ್ಯ ಇರಲಿಲ್ಲ. ಅವರ ಒಂದು ಕಾಳಿಗೆ ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಳ್ಳಬೇಕಾಯಿತು. ಇದನ್ನು ನೋಡಿದ ಸ್ನೇಹಿತರೊಬ್ಬರು ಕಣ್ಣೀರಿಟ್ಟರು. ಅದಕ್ಕೆ ದೇವುಡು ಅವರು ‘ಲೋ ಹೆಣ್ಣಿನ ಃಆಗೆ ಯಾಕೆ ಅಳ್ತೀಯಾ, ನನ್ನ ಕಾಲು ದೇವರಿಗೆ ಬೇಕಾಗಿತ್ತು ಅಂತಾ ಕಾಣುತ್ತೆ. ಅವನೇ ಕೊಟ್ಟ, ಅವನೇ ಕಿತ್ಕೊಂಡ’ ಎಂದು ಸಾಂತ್ವಾನ ಹೇಳಿದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಸ್ಥಿತಪ್ರಜ್ಞತ್ವ ಮೆರೆದರು.
ದೇವುಡು ಅನೇಕ ಕೃತಿಗಳನ್ನು ರಚಿಸಿದರು. ಚಾರಿತ್ರಿಕ ಹಿನ್ನಲೆಯುಳ್ಳ ಅವರ ‘ಮಯೂರ’ ಕಾದಂಬರಿ ಯಶಸ್ವಿ ಚಲನಚಿತ್ರವಾಯಿತು. ಮಕ್ಕಳ ಮನಸ್ಸನ್ನು, ಅಭಿರುಚಿಯನ್ನು ಚೆನ್ನಾಗಿ ತಿಳಿದಿದ್ದ ದೇವುಡು ಅನೇಕ ಪ್ರಕಾರದ ಮಕ್ಕಳ ಸಾಹಿತ್ಯ ರಚನೆ ಮಾಡಿದರು. ಒಬ್ಬ ಉತ್ತಮ ಸಾಹಿತಿಯಾಗಿ, ಆದರ್ಶ ಉಪಾದ್ಯಾಯರಾಗಿ, ದಾರ್ಶನಿಕರಾಗಿ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದ ದೇವುಡು 1962 ರಲ್ಲಿ ವಿಧಿವಶರಾದರು. ಆದರೆ 1963 ರಲ್ಲಿ ಅವರ ‘ಮಹಾಕ್ಷತ್ರಿಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದರೂ ಅದನ್ನು ಸ್ವೀಕರಿಸಲು ಅವರು ಬದುಕಿರಲಿಲ್ಲ. ಇದಕ್ಕಿಂತ ವಿಷಾದದ ಸಂಗತಿ ಇನ್ನೇನಿದೆ? ಆದರೂ ದೇವುಡು ಇಂದಿಗೂ ಸಾಹಿತ್ಯಾಸಕ್ತರ ಮನದಲ್ಲಿ ಸ್ಥಿರವಾಗಿ ನೆಲೆಯೂರಿದ್ದಾರೆ.
- ಆರ್.ಬಿ.ಗುರುಬಸವರಾಜ.


‘ಸ್ಕೂಲ್ ಬ್ರಾಂಡಿಂಗ್’

‘ಸ್ಕೂಲ್ ಬ್ರಾಂಡಿಂಗ್’
ನಿಮ್ಮದು ಬ್ರಾಂಡೆಡ್ ಶಾಲೆಯಾ? ಹಾಗಾದರೆ ಯಾವ ಕ್ಷೇತ್ರದಲ್ಲಿ ಬ್ರಾಂಡೆಡ್ ಆಗಿದೆ? ಈ ಬಗ್ಗೆ ನೀವೇನಾದರೂ ಯೋಚಿಸಿದ್ದೀರಾ? ಹೌದಾದರೆ ಇಲ್ಲಿನ ಪರಿಕಲ್ಪನೆಯೊಂದಿಗೆ ನಿಮ್ಮ ಶಾಲೆಯನ್ನು ಹೋಲಿಸಿ ನೋಡಿ. ಇಲ್ಲವಾದರೆ ನಿಮ್ಮ ಶಾಲೆಯನ್ನು ಬ್ರಾಂಡೆಡ್ ಶಾಲೆಯನ್ನಾಗಿಸಲು ಪ್ರಯತ್ನಿಸಿ.
ಒಬ್ಬ ವ್ಯಕ್ತಿಯಾಗಲೀ, ಸಂಘಸಂಸ್ಥೆಯಾಗಲೀ, ಕಂಪನಿಯಾಗಲೀ, ಶಾಲೆಯಾಗಲೀ ಯಾವುದಾದರೂ ಒಂದು ಕ್ಷೇತ್ರದಲ್ಲಿ ವಿಶಿಷ್ಠ ಹಾಗೂ ವಿಶೇಷ  ಸಾಧನೆಯನ್ನು ಮಾಡಿದ್ದರೆ, ಅದನ್ನು ಆ ಕ್ಷೇತ್ರದ ಸಮುದಾಯ ಗುರುತಿಸಿದ್ದರೆ ಅಂತಹ ವ್ಯಕ್ತಿ/ಸಂಸ್ಥೆ/ಕಂಪನಿ/ಶಾಲೆಯನ್ನು ‘ಬ್ರಾಂಡೆಡ್’ ಎಂದು ಕರೆಯಲಾಗುತ್ತದೆ. 
ಈ ಪರಿಕಲ್ಪನೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ. ನಮ್ಮ ಬಹುತೇಕ ಸರಕಾರಿ ಶಾಲೆಗಳು ಒಂದಿಲ್ಲೊಂದು ಕ್ಷೇತ್ರದಲ್ಲಿ ವಿಶಿಷ್ಠ ಹಾಗೂ ವಿಶೇಷ ಸಾಧನೆಯನ್ನು ಮಾಡಿವೆ. ಆದರೆ ಅವುಗಳನ್ನು ಅರ್ಥೈಸಿಕೊಳ್ಳುವಲ್ಲಿಯಾಗಲೀ, ಗುರುತಿಸುವಿಕೆಯಲ್ಲಿಯಾಗಲೀ, ದಾಖಲೀಕರಣ ಮಾಡುವಿಕೆÉಯಲ್ಲಿಯಾಗಲೀ ಆದ ಲೋಪಗಳಿಂದ ಆ ಶಾಲೆ ‘ಬ್ರಾಂಡೆಡ್’ ಆಗಿ ಹೊರಹೊಮ್ಮಲು ವಿಫ¯ವಾಗಿರುತ್ತವೆ.
ಕೆಲವು ಶಾಲೆಗಳು ತಮ್ಮ ವಿಶಿಷ್ಠ ಹಾಗೂ ವಿಶೇಷ ಸೇವೆಗಳಿಂದ ‘ಬ್ರಾಂಡೆಡ್’ ಆಗಿರುತ್ತವೆ. ಕಲಿಕೆ ಮತ್ತು ಕಲಿಕಾ ಪೂರಕ ವಾತಾವರಣ ನಿರ್ಮಾಣದಲ್ಲಾಗಲೀ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈಯಕ್ತಿಕ ಗಮನ ನೀಡುವಲ್ಲಿಯಾಗಲೀ, ಸಾಂಸ್ಕøತಿಕ ಕಾರ್ಯಕ್ರಮ ಸಂಘಟನೆ ಮತ್ತು ನಿರ್ವಹಣೆಯಲ್ಲಾಗಲೀ, ಸಮಾಜಮುಖಿ ಚಟುವಟಿಕೆಯಲ್ಲಾಗಲೀ, ಶಾಲಾ ಆಡಳಿತ ಮತ್ತು ದಾಖಲೀಕರಣದಲ್ಲಾಗಲೀ ಅಥವಾ ಒಟ್ಟಾರೆ ಸಮಗ್ರ ಶಾಲಾ ಗುಣಮಟ್ಟದಲ್ಲಾಗಲೀ ವಿಶಿಷ್ಠ ಮತ್ತು ವಿಶೇಷ ಸಾಧನೆ ಮಾಡಿದ್ದರೆ ಅಂತಹ ಶಾಲೆಗಳನ್ನು ‘ಬ್ರಾಂಡೆಡ್ ಶಾಲೆ’ಗಳೆನ್ನುವರು. 
ಸ್ಕೂಲ್ ಬ್ರಾಂಡಿಂಗ್ ಸಾಧಿಸಲು ದಶ ಸೂತ್ರಗಳು
1. ಶಾಲೆಗೊಂದು ಧ್ಯೇಯವಾಕ್ಯವಿರಲಿ : ಶಾಲಾ ಆಡಳಿತ ಮಂಡಳಿ, ಮುಖ್ಯಗುರುಗಳು ಹಾಗೂ ಶಿಕ್ಷಕರು ಸೇರಿ ಶಾಲೆ ಸಾಧಿಸಬೇಕಾದ ಕ್ಷೇತ್ರಗಳನ್ನು ಗುರುತಿಸಿಕೊಳ್ಳಬೇಕು. ಅವುಗಳ ಆಧಾರದ ಮೇಲೆ ಧ್ಯೇಯವಾಕ್ಯವೊಂದನ್ನು ರಚಿಸಿಕೊಳ್ಳಬೇಕು. ಈ ಧ್ಯೇಯವಾಕ್ಯ/ಘೋಷವಾಕ್ಯವನ್ನು ಶಾಲೆಯಲ್ಲಿ ಎದ್ದು ಕಾಣುವಂತೆ ಆಕರ್ಷಕವಾಗಿ ಬರೆಸಬೇಕು. ಈ ಧ್ಯೇಯವಾಕ್ಯ ಶಾಲೆ ಸಾಧಿಸಬೇಕಾದ ಗುರಿ ಉದ್ದೇಶಗಳನ್ನು ಈಡೇರಿಸುವಂತಿರಬೇಕು. 
ಮಾದರಿ ಧ್ಯೇಯವಾಕ್ಯಗಳು : 
‘ನಿಮ್ಮ ಮನೆಯ ಶಿಲೆಯನ್ನು ನಮಗೆ ಕೊಡಿ, ಅದನ್ನು ಶಿಲ್ಪವನ್ನಾಗಿ ಮಾಡಿಕೊಡುತ್ತೇವೆ’.
‘ನಾವಿಲ್ಲಿ ಗೆಲುವು ಮಾತ್ರ ಕಲಿಸುವುದಿಲ್ಲ, ಸೋಲನ್ನು ಎದುರಿಸುವುದನ್ನೂ ಕಲಿಸುತ್ತೇವೆ’.
‘ನಾವಿಲ್ಲಿ ಓದಲು ಮಾತ್ರವಲ್ಲ, ಬದುಕಲೂ ಕಲಿಸುತ್ತೇವೆ’.
‘ನಿಮ್ಮ ಮಕ್ಕಳನ್ನು ನಮಗೆ ಕೊಡಿ, ನಾವದನ್ನು ಮಾಣಿಕ್ಯವನ್ನಾಗಿಸುತ್ತೇವೆ’.
2. ಶಾಲೆಗೆ ದೂರದೃಷ್ಟಿ ಯೋಜನೆಯಿರಲಿ : ಶಾಲೆ ಸಾಧಿಸಬೇಕಾದ ಗುರಿಯನ್ನು ತಲುಪಲು ದೂರದೃಷ್ಟಿ ಯೋಜನೆಯೊಂದನ್ನು ಹಾಗೂ ಅದನ್ನು ಸಾಧಿಸುವ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಿ. ಯೋಜನೆಯನ್ವಯ ಕಾರ್ಯ ಚಟುವಟಿಕೆಗಳು ನಡೆಯಲಿ. ಸಮುದಾಯ ಶಾಲೆಯಿಂದ ನಿರೀಕ್ಷಿಸಬಹುದಾದ ಗುಣಾತ್ಮಕತೆಯನ್ನು ಈ ದೂರದೃಷ್ಟಿ ಯೋಜನೆ ಸೂಚಿಸುವಂತಿರಲಿ.
ಉದಾ : * ಈ ಶೈಕ್ಷಣಿಕ ವರ್ಷದಲ್ಲಿ ಶೇ.100 ರಷ್ಟು ದಾಖಲಾತಿ ಮತ್ತು ಹಾಜರಾತಿ ಕಾಪಾಡಿಕೊಳ್ಳುವುದು.
* 2015 ಕ್ಕೆ ಶೇ.100 ರಷ್ಟು ಗುಣಮಟ್ಟದ ಶಿಕ್ಷಣ ಸಾಧಿಸುವುದು.
* 2020 ಕ್ಕೆ ಸಂಪೂರ್ಣ ಸಾಕ್ಷರ ಗ್ರಾಮವನ್ನಾಗಿಸುವುದು.
3. ಉತ್ತಮ ಶಾಲೆಗಳ ಅವಲೋಕನ ಮತ್ತು ಅಧ್ಯಯನ : ನಮ್ಮ ಸುತ್ತಮುತ್ತಲಿನ ಉತ್ತಮ ಸಾಧನೆ ಮಾಡಿದ ಶಾಲೆಗಳನ್ನು ಅವಲೋಕಿಸುವುದು ಮತ್ತು ಅಧ್ಯಯನ ಮಾಡುವುದು ಅತ್ಯಂತ ಪರಿಣಾಮಕಾರಿ ಆಯಾಮ. ನಮ್ಮ ಶಾಲೆಯಲ್ಲಿನ ಕೊರತೆಗಳೇನು? ಅದಕ್ಕೆ ಕಾರಣಗಳೇನು? ಇತರೆ ಶಾಲೆಗಳಲ್ಲಿ ಇದನ್ನು ಹೇಗೆ ನಿಭಾಯಿಸಿಕೊಂಡಿದ್ದಾರೆ? ಅಲ್ಲಿನ ವಿಶೇಷತೆ ಏನು? ನಾವು ನಮ್ಮ ಕೊರತೆಗಳನ್ನು ಸರಿಪಡಿಸಿಕೊಳ್ಳಲು ಇರುವ ಮಾರ್ಗೋಪಾಯಗಳೇನು? ಇತ್ಯಾದಿ ಅಂಶಗಳನ್ನು ಅವಲೋಕಿಸಿ, ಅಧ್ಯಯನ ಮಾಡಿ, ಹೊಸತನವನ್ನು ಕಂಡುಕೊಂಡಾಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂಬುದನ್ನು ಮನಗಾಣಬೇಕು.
4. ದಕ್ಷತೆ ಮತ್ತು ದೂರದರ್ಶಿತ್ವ : ಹಾಕಿಕೊಂಡ ಗುರಿ ಉದ್ದೇಶಗಳನ್ನು ಸಾಧಿಸಲು ದಕ್ಷರಾಗಿ ದುಡಿಯುವುದು ಅವಶ್ಯಕ. ಈಗ ನಾವೆಲ್ಲರೂ ದಕ್ಷತೆಯಿಂದಲೇ ಕಾರ್ಯ ನಿರ್ವಹಿಸುತ್ತೇವೆ. ಆದರೂ ನಮ್ಮ ಗುರಿ ತಲುಪುವಲ್ಲಿ ಹೆಚ್ಚಿನ ಕಾಳಜಿ ಹಾಗೂ ಪ್ರಾಮಾಣಿಕ ಪ್ರಯತ್ನಗಳು ಅಗತ್ಯ. ನಮ್ಮ ಕಾರ್ಯ ವೈಖರಿ ನಮ್ಮ ದೂರದರ್ಶಿತ್ವವನ್ನು ಬಿಂಬಿಸುವಂತಿರಬೇಕು. 
5. ಗುಣಮಟ್ಟದ ಅಂತಃಸತ್ವ : ತಲುಪಿದ ಗುರಿಯನ್ನು ನಿರಂತರವಾಗಿ ಕಾಪಾಡಿಕೊಂಡು ಬರಲು ಗುಣಮಟ್ಟದ ಅಂತಃಸತ್ವ ಅಗತ್ಯ. ಗುಂಪು ಚಟುವಟಿಕೆಗಳು, ಪರಿಣಾಮಕಾರಿ ಕಲಿಕೋಪಕರಣಗಳ ಬಳಕೆ, ಮಕ್ಕಳು ತಾವೇ ಸ್ವತಃ ಜ್ಞಾನ ಕಟ್ಟಿಕೊಳ್ಳಲು ಸದವಕಾಶ ನಿರ್ಮಾಣ, ಮಕ್ಕಳ ಪ್ರತಿಭೆಗಳ ಅನಾವರಣ, ಭಾವಾಭಿವ್ಯಕ್ತಿಗೆ ಅವಕಾಶ ನೀಡುವುದು ಮುಂತಾದ ಸಕ್ರಿಯಾತ್ಮಕ ಅಂಶಗಳಿಂದ ಗುಣಮಟ್ಟದ ಅಂತಃಸತ್ವ ವೃದ್ದಿಯಾಗುತ್ತದೆ.
6. ಭೌತಿಕ ಸೌಲಭ್ಯಗಳ ಸಧ್ಬಳಕೆ : ಶಾಲೆಯಲ್ಲಿನ ಭೌತಿಕ ಸೌಲಭ್ಯಗಳ ಸಧ್ಬಳಕೆ ಶಾಲೆಯ ದೂರದರ್ಶಿತ್ವವನ್ನು ಹೆಚ್ಚಿಸುತ್ತದೆ. ಶಾಲೆಗೆ ಸಾಕಷ್ಟು ಭೌತಿಕ ಸೌಲಭ್ಯಗಳು ಇರಬೇಕಾದುದು ಅಪೇಕ್ಷಣೀಯ. ಆದರೆ ಇರುವ ಭೌತಿಕ ಸೌಲಭ್ಯಗಳನ್ನೇ ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆಯನ್ನು ಪ್ರದರ್ಶಿಸಬಹುದು. ಇದರಿಂದ ಶಾಲೆಯೊಂದು ಬ್ರಾಂಡೆಡ್ ಆಗಲು ಕಾರಣವಾಗುತ್ತದೆ.
7. ಸಮುದಾಯಿಕ ಚಟುವಟುಕೆಗಳು : ಶಾಲೆಗಳು ಸಮಾಜದಿಂದ ಹೊರತಾಗಿಲ್ಲ. ಶಾಲೆಯಲ್ಲಿ ಸಮಾಜಕ್ಕೆ/ಸಮುದಾಯಕ್ಕೆ ಅನುಕೂಲವಾಗುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಸಾಮಾಜಿಕ ಪರಿವರ್ತನೆಯಲ್ಲಿ ಶಾಲೆಗಳ ಪಾತ್ರ ಅತ್ಯಂತ ಮಹತ್ವದ್ದು ಎಂಬುದನ್ನು ಯಾವಾಗಲೂ ಮರೆಯುವಂತಿಲ್ಲ. ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಾದ ವಿಚಾರ ಸಂಕಿರಣ, ಚರ್ಚೆಗಳು, ಗೋಷ್ಟಿಗಳು, ಉಪನ್ಯಾಸಗಳು, ಮತ್ತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಸಮುದಾಯವನ್ನು ಶಾಲೆಗೆ ಹತ್ತಿರ ಮಾಡಿಕೊಳ್ಳಬೇಕು.
8. ಹೊಸ ಪ್ರಯೋಗಗಳು : ಆಡಳಿತ ಮತ್ತು ಬೋಧನೆಯಲ್ಲಿ ಹೊಸತನವನ್ನು ಸೃಷ್ಠ್ಠಿಸುವ ಕೆಲಸ ನಿರಂತರವಾಗಿರಬೇಕು. ಹಳೆ ವಿಧಾನಗಳಲ್ಲಿ ಕಂಡು ಕೊಂಡ ಲೋಪಗಳನ್ನು ಸರಿಪಡಿಸಿಕೊಂಡು ನಾವೀನ್ಯ ತಂತ್ರಜ್ಞಾನದೊಂದಿಗೆ ಹೊಸ ಹೊಸ ಶೈಕ್ಷಣಿಕ ಪ್ರಯೋಗಗಳನ್ನು ಕೈಗೊಳ್ಳಬೇಕು. ಇದು ಶಾಲೆ ಉತ್ತಮ ಹೆಸರು ಪಡೆಯಲು ಸಹಕಾರಿಯಾಗುತ್ತದೆ. 
9. ದಾಖಲೆಗಳ ನಿರ್ವಹಣೆ : ಇಂದು ಸರ್ಕಾರಿ ಶಾಲೆಗಳ ಬಹು ದೊಡ್ಡ ವೈಫಲ್ಯವೆಂದರೆ, ದಾಖಲೀಕರಣದ ಅಭಾವ. ಸರ್ಕಾರಿ ಶಾಲೆಗಳಲ್ಲಿನ ಉತ್ತಮಾಂಶಗಳನ್ನು ದಾಖಲೀಕರಣ ಮಾಡದೇ ಇರುವುದು ಒಂದು ಬಹು ದೊಡ್ಡ ಕೊರತೆ. ಖಾಸಗೀ ಶಾಲೆಗಳು ಮಾಡಿದ ಅಲ್ಪ ಸಾಧನೆಯನ್ನೇ ದಾಖಲೀಕರಣಗೊಳಿಸಿ, ದೊಡ್ಡದಾಗಿ ಮಾಧ್ಯಮಗಳ ಎದುರು ಜಂಭ ಕೊಚ್ಚಿಕೊಳ್ಳುತ್ತವೆ. ಸರ್ಕಾರಿ ಶಾಲೆಗಳಲ್ಲಿ ನಡೆಯುವ ಯಾವ ಚಟುವಟಿಕೆಗಳೂ ಖಾಸಗೀ ಶಾಲೆಗೆ ಸರಿಸಾಟಿಯಲ್ಲ. ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳನ್ನೂ ದಾಖಲೀಕರಣಗೊಳಿಸಿ ಹೊರ ಜಗತ್ತಿಗೆ ಬಿಂಬಿಸುವ ಕಾರ್ಯ ಮಾಡಬೇಕು.
10. ಪ್ರಚಾರ ಮತ್ತು ಪ್ರಸರಣೆ : ಸರ್ಕಾರಿ ಶಾಲೆಗಳಲ್ಲಿ ದಾಖಲೆಗಳ ನಿರ್ವಹಣೆ ಸರಿಯಗಿಲ್ಲದ ಕಾರಣ ಅಂತಹ ಶಾಲೆಗಳು ಪ್ರಚಾರಕ್ಕೆ ಬರದೇ ಎಲೆಮರೆಕಾಯಿಯಂತೆ ಉಳಿದಿವೆ. ನಮ್ಮ ಶಾಲೆಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ದಾಖಲೀಕರಣವಾದರೆ ಅದನ್ನು ಬಿಂಬಿಸಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಪ್ರೆಸ್‍ಮೀಟ್, ಕರಪತ್ರಗಳು, ಬ್ರೋಚರ್ಸ್, ಶಾಲಾ ಕಿರುಹೊತ್ತಗೆ, ವೀಡಿಯೋ ಚಿತ್ರೀಕರಣ ಮುಂತಾದವುಗಳ ಮೂಲಕ ಶಾಲಾ ಚಟುವಟಿಕೆಗಳನ್ನು ಪ್ರಚುರಪಡಿಸಬಹುದು. ಇದು ಶಾಲೆ ಉತ್ತಮ ಹೆಸರು ಗಳಿಸಲು ಸಹಾಯಕವಾಗುತ್ತದೆ.
ಈ ಎಲ್ಲಾ ಚಟುವಟಿಕೆಗಳ ಹೊರತಾಗಿಯೂ ಶಾಲಾ ಬ್ರಾಂಡಿಂಗ್ ಸಾಧಿಸಬಹುದು. ಅದು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಪನ್ಮೂಲದ ಮೇಲೆ ಅವಲಂಬಿತವಾಗಿರುತ್ತದೆ. ಸಾಂಘಿಕ ಕೆಲಸ ಉತ್ತಮ ಯಶಸ್ಸು ತರುತ್ತದೆ. ಇದಕ್ಕೆ ಧನಾತ್ಮಕ ಚಿಂತನೆಗಳ ಅಗತ್ಯವಿದೆ. ದೂರದೃಷ್ಟಿತ್ವವನ್ನು ಸಾಕಾರಗೊಳಿಸುವ ಅದ್ಯಮ್ಯ ಚೇತನ ಸದಾ ಸ್ಫುರಿಸಬೇಕಾಗಿದೆ. ಪ್ರಯತ್ನಿಸಿ ನೋಡಿ, ಗೆಲುವು ನಿಮ್ಮದೇ!
  - ಆರ್.ಬಿ.ಗುರುಬಸವರಾಜ. 




ಶಿಕ್ಷಣದಲ್ಲಿ ಶಿಕ್ಷೆ ಬೇಕೇ? ಬೇಡವೇ?

ದಿನಾಂಕ 18-3-2014 ರಂದು 'ಪ್ರಜಾವಾಣಿ'ಯ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ಲೇಖನ.



 ಪ್ರೇಮಭಿಕ್ಷೆ ನೀಡಿ
          ಶಿಕ್ಷಣದಲ್ಲಿ ಶಿಕ್ಷೆ ಬೇಕೇ? ಬೇಡವೇ? ಎಂಬ ಬಗ್ಗೆ ಹಲವರಲ್ಲಿ ಜಿಜ್ಞಾಸೆಗಳಿವೆ. ಇದಕ್ಕೆ ಕಾರಣಗಳೂ ಸಹ ಹಲವಾರು. ಶಿಕ್ಷಣವೆನ್ನುವುದು ಒಂದು ಸಾಮಾಜೀಕರಣ ಪ್ರಕ್ರಿಯೆ. ಶಿಕ್ಷಣದ ಪ್ರತಿಯೊಬ್ಬ ಭಾಗೀದಾರರೂ ಅದರ ಮೂಲ ವಾರಸುದಾರರಿಗೆ, ಅಂದರೆ ಮಕ್ಕಳಿಗೆ ಪರಸ್ಪರ ಸಹಕಾರ, ಅನುಭವ ಹಂಚಿಕೆ, ಪ್ರೀತಿ, ಕರುಣೆ, ಸಹಬಾಳ್ವೆಯಂತಹ ಮೌಲ್ಯಯುತ ಗುಣಗಳನ್ನು ಬೆಳೆಸಬೇಕಾದುದು ಅನಿವಾರ್ಯ.              
              ತರಗತಿಯಲ್ಲಿನ ಎಲ್ಲಾ ಮಕ್ಕಳ ಕಲಿಕೆ ಒಂದೇ ರೀತಿಯಾಗಿರುವುದಿಲ್ಲ. ಪ್ರತಿಯೊಬ್ಬ ಮಗುವಿನ ಕಲಿಕೆಯ ವಿಧಾನ ಮತ್ತು ವೇಗ ವಿಭಿನ್ನ.  ಏಕೆಂದರೆ ಪ್ರತಿಯೊಂದು ಮಗುವೂ ವಿವಿಧ ಸಾಮಾಜಿಕ, ಆರ್ಥಿಕ, ಸಾಂಸೃತಿಕ ಹಿನ್ನಲೆಯಿಂದ ಬಂದಿರುತ್ತದೆ. ಅಲ್ಲದೇ ಅಲ್ಲಿ ವಿವಿಧ ವಯೋಮಾನ, ಬೌದ್ದಿಕ ಹಾಗೂ ಮಾನಸಿಕ ಸ್ತರಗಳ ಮಕ್ಕಳೂ ಇರುತ್ತಾರೆ. ನಿಧಾನಗತಿಯ, ವೇಗದ ಮತ್ತು ಮಧ್ಯಮ ಕಲಿಕೆಯ ಮಕ್ಕಳೂ ಅಲ್ಲಿರುತ್ತಾರೆ. ಅವರೆಲ್ಲರಿಗೂ ಏಕ ರೀತಿಯ ಬೊಧನೆ ಎಷ್ಟು ಸರಿ? 
                  ನಾವು ಮಾಡುವ ಬೋಧನೆ ಯಾವುದಾದರೂ ಒಂದು ಗುಂಪಿನ ಮಕ್ಕಳಿಗೆ ರುಚಿಸುತ್ತದೆ. ಇನ್ನುಳಿದ ಗುಂಪಿನ ಮಕ್ಕಳಿಗೆ ಅದೊಂದು ನೀರಸ ತರಗತಿ ಎನಿಸುತ್ತದೆ. ಬೋಧನೆ ನೀರಸ ಎಂದು ಮಕ್ಕಳಿಗೆ ಅರಿವಾದೊಡನೆ ಅವರು ತರಗತಿಯಲ್ಲಿ ಅಶಿಸ್ತಿನಿಂದ ವರ್ತಿಸಲು ತೊಡಗುತ್ತಾರೆ(ಇಲ್ಲಿ ಅಶಿಸ್ತು ಎಂದರೆ ತರಗತಿಯ ಬೋಧನೆ ಮತ್ತು ಕಲಿಕೆಗೆ ಭಂಗ ಉಂಟಾಗುವುದು ಎಂದರ್ಥ). ತರಗತಿ ನಿಭಾಯಿಸುವ ಶಿಕ್ಷಕರಿಗೆ ಕೋಪ ನೆತ್ತಿಗೇರುತ್ತದೆ. ಅಶಿಸ್ತಿನಿಂದ ವರ್ತಿಸಿದ ಮಕ್ಕಳು ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ತಪ್ಪು ಯಾರದು? ಮಕ್ಕಳ ಅಶಿಸ್ತಿಗೆ ಕಾರಣಗಳೇನು? ಎಂಬುದನ್ನು ಕಂಡು ಹಿಡಿಯದೇ ಅವರಿಗೆ ಶಿಕ್ಷೆ ವಿಧಿಸುತ್ತೇವೆ. ಇದು ಯಾವ ನ್ಯಾಯ?. ಎಂದಾದರೂ ನಾವು ಇಂತಹ ಘಟನೆಗಳಿಗೆ ಕಾರಣಗಳನ್ನು ಕಂಡುಕೊಂಡು, ಅವುಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವಾ? ಅಥವಾ ಮಕ್ಕಳ ವರ್ತನೆಗಳಿಗೆ ಶಿಕ್ಷೆ ಹೊರತು ಪಡಿಸಿ ಪರ್ಯಾಯ ತಂತ್ರಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆಯಾ? ಇಲ್ಲ! ಏಕೆಂದರೆ ನಾವಿನ್ನೂ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತದ್ದೇವೆ. 
           ಕಲಿಸುವುದು ಎಂದರೆ ಯಾವುದಾದರೂ ಮಾರ್ಗದಿಂದ ಅಲ್ಲ. ಕಲಿಕೆ  ಮಗು ಒಪ್ಪಿತ ರೀತಿಯಲ್ಲಿ ಸಾಗಬೇಕು. ಸಾಮಾನ್ಯವಾಗಿ ಮಕ್ಕಳು ಶಿಕ್ಷೆಯನ್ನು ಬಯಸುವುದಿಲ್ಲ. ಶಿಕ್ಷೆಯನ್ನು ಹೊರತುಪಡಿಸಿ ವಿಭಿನ್ನ ಮಾರ್ಗದಿಂದ ಕಲಿಸುವಾತನೇ ಪರಿಪೂರ್ಣ ಶಿಕ್ಷಕ ಅಥವಾ ಶ್ರೇಷ್ಠ ಶಿಕ್ಷಕ ಎನಿಸುತ್ತಾನೆ. 
       ಮಾನವ ಹಕ್ಕುಗಳ ಯುಗದಲ್ಲಿ ವಾಸಿಸುವ ನಾವು ಮಕ್ಕಳನ್ನು ಮಾನವರೆಂದು ಪರಿಗಣಿಸಿ ಅವರ ಹಕ್ಕುಗಳನ್ನು ಗೌರವಿಸಬೇಕಾಗಿದೆ. ಶಿಕ್ಷೆಯಿಂದ ಮಕ್ಕಳ ಮನಸ್ಸಿನ ಮೇಲಾಗುವ ಕೆಟ್ಟ ಪರಿಣಾಮಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ. ಮಗುವಿನ ಮನಸ್ಸು ಹೂವಿನಂತೆ ಎಂದು ಹೇಳುತ್ತೇವೆ. ಆ ಹೂವು ಬಾಡದ ರೀತಿಯಲ್ಲಿ ಅದರ ಪರಿಮಳವನ್ನು ಎಲ್ಲರೂ ಆಘ್ರಾಣಿಸುವಂತೆ ಮಾಡಬೇಕಾದ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಇದು ಬಹು ಪ್ರಯಾಸದ ಕೆಲಸವಾದರೂ ಸಾಧಿಸಿ ತೋರಿಸಬೇಕಾಗಿದೆ. ಗೌತಮ ಬುದ್ದ ಅಂಗುಲೀಮಾಲನಿಗೆ ಯಾವ ಶಿಕ್ಷೆಯಿಲ್ಲದೇ ‘ಪ್ರೇಮಭಿಕ್ಷೆ’ ನೀಡಿ ಅವನಲ್ಲಿನ ಪೈಶಾಚಿಕ ಗುಣಗಳನ್ನು ಹೋಗಲಾಡಿಸಲಿಲ್ಲವೇ? ಹಾಗೆಯೇ ಶಿಕ್ಷೆಯಿಲ್ಲದೇ ಸುಶಿಕ್ಷಿತರನ್ನಾಗಿ ಮಾಡಿದ ಅನೇಕರ ಜೀವನ ನಮಗೆ ದಾರಿದೀಪವಾಗಲಿ.
   - ಆರ್.ಬಿ.ಗುರುಬಸವರಾಜ.

ಲೂಯಿ ಬ್ರೈಲ್

ವಿಶ್ವ ಅಂಧರ ದಿನಾಚರಣೆ (ಜನವರಿ 4) ನಿಮಿತ್ತ ಲೇಖನ
ಅಂಧರ ಬೆರಳಿಗೆ ಜ್ಞಾನ ತಂದಿಟ್ಟ ಬಾಲಕ
ಅದೊಂದು ಸಾರ್ವಜನಿಕ ಕಾರ್ಯಕ್ರಮ. ಅಲ್ಲಿ ಒಬ್ಬ ಬಾಲಕ ಆವಿಷ್ಕರಿಸಿದ ಹೊಸ ಕಲಿಕಾ ಪದ್ದತಿಯ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊಸ ಪದ್ದತಿಯನ್ನು ಕಂಡುಹಿಡಿದವ ಬಾಲಕನೂ ಅಂಧನಾಗಿದ್ದ. ಅಂಧ ಹೇಗೆ ಆವಿಷ್ಕರಿಸಿದ ಎನ್ನುವ ಆಶಾವಾದಿಗಳು ಒಂದೆಡೆಯಾದರೆ, ಕಣ್ಣಿದ್ದವರಿಗೇ ಸರಿಯಾಗಿ ಕಂಡುಹಿಡಿಂiÀiಲಾಗಿಲ್ಲ, ಕಣ್ಣಿಲ್ಲದ ಈ ಕುರುಡ ಅದೂ ಬಾಲಕ ಕಂಡುಹಿಡಿದುದು ಅಷ್ಟರಲ್ಲೇ ಇದೆ ಎನ್ನುವ ನಿರಾಶಾವಾದಿಗಳು ಇನ್ನೊಂದೆಡೆ. ಹೀಗೆ ಆ ಕಾರ್ಯಕ್ರಮಕ್ಕೆ ಅನೇಕರು ಸಾಕ್ಷಿಯಾಗಿದ್ದರು.
ಸುಮಾರು ಎಂಟು ವರ್ಷಗಳಿಂದ ಮಾಡಿದ ಸತತ ಪರಿಶ್ರಮ, ಅಭ್ಯಾಸ, ಸಾಧನೆಗಳ ಫಲಾಫಲಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯಕ್ರಮವಾಗಿತ್ತು. ಅದಕ್ಕಾಗಿ ವೇದಿಕೆಯ ಮೇಲೆ ಅಂಧ ಬಾಲಕಿಯನ್ನು ಕೂಡಿಸಲಾಗಿತ್ತು. ಅವಳ ಒಂದು ಕೈಯಲ್ಲಿ ದಪ್ಪ ಕಾಗದ ಜೋಡಿಸಿದ ಮರದ ಹಲಗೆ, ಇನ್ನೊಂದು ಕೈಯಲ್ಲಿ ಸ್ಟೈಲಸ್(ಅಂಧರು ಬರೆಯಲು ಬಳಸುವ ದಬ್ಬಳದಂತಹ ಚೂಪಾದ ಸಾಧನ) ಇತ್ತು. ಸಭಿಕರೊಬ್ಬರು ಒಂದು ಪುಸ್ತಕದಿಂದ ಹೇಳಿದ ಕೆಲವು ವಾಕ್ಯಗಳನ್ನು ಅವಳು ಹಲಗೆಯ ಮೇಲೆ ಚುಕ್ಕೆಗಳ ರೂಪದಲ್ಲಿ ಮೂಡಿಸಿದಳು. ನಂತರ ಆ ಚುಕ್ಕೆಗಳ ಮೇಲೆ ಬೆರಳಾಡಿಸುತ್ತಾ ಸರಸರನೇ ಓದಿದಳು. ಹೀಗೆ ಬೇರೆ ಬೇರೆ ಅಂಧರನ್ನು ವಿಧವಿಧವಾಗಿ ಪರೀಕ್ಷಿಸಿದಾಗಲೂ ಅವರೆಲ್ಲ ನಿಖರವಾಗಿ ಓದಲು, ಬರೆಯಲು ಸಾಧ್ಯವಾಗಿತ್ತು. ಇದನ್ನು ಗಮನಿಸಿದ ಸಭಿಕರು ಕರತಾಡನ ಮಾಡಿದರು. ಅಂಧರಿಗೆ ಇದೊಂದು ಅತ್ಯುತ್ತಮ ಮತ್ತು ಸುಲಭವಾದ ಕಲಿಕಾ ಮಾರ್ಗ ಎಂದು ಆವಿಷ್ಕರಿಸಿದವರನ್ನು ಹಾಡಿ ಹೊಗಳಿದರು. ಅಂದಿನಿಂದ ಎಲ್ಲ ಅಂಧರಿಗೂ ಇದೇ ಕಲಿಕೆಯ ಮಾರ್ಗವಾಯಿತು. ಇದನ್ನು ಆವಿಷ್ಕರಿಸಿದ ಅಂಧ ಬೇರಾರೂ ಅಲ್ಲ. ಅವನೇ ‘ಲೂಯಿ ಬ್ರೈಲ್’
ಲೂಯಿ ಬ್ರೈಲ್ ಫ್ರಾನ್ಸ್ ದೇಶದ ಪುಟ್ಟ ಹಳ್ಳಿ ಕೂವ್ರೆ ಎಂಬಲ್ಲಿ 1809 ಜನವರಿ 4 ರಂದು ಜನಿಸಿದನು. ತಂದೆ ಸೈನ್-ರೆ-ಬ್ರೈಲ್ ಕುದುರೆ ಸವಾರರಿಗೆ ಚರ್ಮದ ಜೀನ್ ತಯಾರಿಸುವ ಕುಶಲಕರ್ಮಿ. ತಾಯಿ ಮೊನಿಕ ಕುಟುಂಬದ ಆರೈಕೆಯ ಹೊಣೆ ಹೊತ್ತವಳು. ತುಂಬು ಕುಟುಂಬದಲ್ಲಿ ಜನಿಸಿದ ಲೂಯಿ ಹುಟ್ಟಿನಿಂದ ಕುರುಡನಲ್ಲ. ಮೂರು ವರ್ಷಗಳವರೆಗೆ ಎಲ್ಲಾ ಮಕ್ಕಳಂತೆ ಸಹಜವಾಗಿ ಆಟ-ತುಂಟಾಟದಲ್ಲಿ ನಿರತನಾಗಿದ್ದ.
ತಂದೆ ಸೈಮನ್ ಮನೆಯ ಒಂದು ಕೋಣೆಯನ್ನೇ ತನ್ನ ಕಾರ್ಯಾಗಾರವನ್ನಾಗಿ ಮಾಡಿಕೊಂಡಿದ್ದ. ಒಂದು ದಿನ ಅಲ್ಲಿಗೆ ಆಕಸ್ಮಾತ್ ಆಗಿ ಬಂದ ಲೂಯಿ, ಕೊಠಡಿಯೊಳಗೆ ಇಣಿಕಿದ. ಯಾರೂ ಕಾಣಲಿಲ್ಲ. ಮೆಲ್ಲನೆ ಒಳನುಗ್ಗಿ ಅಲ್ಲಿದ್ದ ಸಾಧನಗಳೊಂದಿಗೆ ಆಟವಾಡತೊಡಗಿದ. ತನ್ನ ಮಾಡುವಂತೆ ಚರ್ಮದ ತುಂಡೊಂದಕ್ಕೆ ದಬ್ಬಳದಂತಹ ಚೂಪಾದ ಸಾಧನದಿಂದ ತೂತು ಹಾಕಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದ. ಅನಿರೀಕ್ಷಿತವಾಗಿ ಜಾರಿದ ದಬ್ಬಳ ನುಣುಚಿಕೊಂಡು ಅವನ ಎಡ ಕಣ್ಣಿಗೆ ಚುಚ್ಚಿಕೊಂಡಿತು. 
ತಕ್ಷಣ ಓಡಿ ಬಂದ ತಂದೆ-ತಾಯಿ ಎಡ ಕಣ್ಣಿನಿಂದ ರಕ್ತ ಸುರಿಯುವುದನ್ನು ನೋಡಿ ವೈದ್ಯರ ಬಳಿ ಕರೆದೊಯ್ದರು. ವೈದ್ಯರು ರಕ್ತ ಒರೆಸಿ ಮಲಾಮು ಹಚ್ಚಿದರು. ಅಂತಹ ಗಾಯಗಳನ್ನು ಸುಲಭವಾಗಿ ಗುಣಪಡಿಸಲು ಇಂದು ಅನೇಕ ಮಾರ್ಗಗಳಿವೆ. ಆದರೆ ಅಂದು ಸರಿಯಾದ ಔಷದೋಪಚಾರವಿಲ್ಲದೇ ಗಾಯ ಮಾಯುವ ಬದಲು ಕೆಲವೇ ದಿನಗಳಲ್ಲಿ ಕಣ್ಣಿನಲ್ಲಿ ಕೀವು ಕಟ್ಟಿ ಸೊಂಕಾಯಿತು. ಆ ಸೋಂಕು ಇನ್ನೊಂದು ಕಣ್ಣಿಗೂ ತಗುಲಿ ಆ ಕಣ್ಣೂ ಸಹ ಕುರುಡಾಯಿತು. ಒಂದು ವೇಳೆ ಅಂದು ಅವನ ಕಣ್ಣಿಗೆ ಅಫಘಾತವಾಗದಿದ್ದರೆ ಇಂದು ಅಂಧರ ಬಾಳು ನರಕವಾಗಿರುತ್ತಿತ್ತು. ಅಲ್ಲವೇ?
ಲೂಯಿ ತುಂಬಾ ತುಂಟ ಹುಡುಗನಾಗಿದ್ದು, ಕಣ್ಣಿಲ್ಲದಿರುವುದು ಅವನಿಗೆ ಕೊರತೆ ಎನಿಸಲಿಲ್ಲ. ಕೈಯಲ್ಲೊಂದು ಕೋಲು ಹಿಡಿದುಕೊಂಡು ಮನೆ, ಓಣಿ, ಊರಲೆಲ್ಲಾ ಸುತ್ತಾಡುತ್ತಿದ್ದ.  ಊರಿನ ಜನರೊಂದಿಗೆ ಮಾತಿಗಿಳಿಯುತ್ತಿದ್ದ. ಪ್ರತಿಯೊಂದು ಧ್ವನಿಯನ್ನು ಗುರುತಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಅನ್ಯರ ಅನುಕಂಪದ ಮಾತುಗಳಿಗೆ ಕಿವಿಗೊಡಲಿಲ್ಲ. ಅದರ ಬಗ್ಗೆ ಕೊರಗಲಿಲ್ಲ.
ಲೂಯಿ ಬೆಳೆದು ದೊಡ್ಡವನಾದಂತೆ ಅವನ ಭವಿಷ್ಯದ ಬಗ್ಗೆ ತಂದೆ ತಾಯಿಗಳಿಗೆ ಆತಂಕ ಪ್ರಾರಂಭವಾಯಿತು. ತಮ್ಮ ಮಗನೂ ಸ್ವತಂತ್ರವಾಗಿ ಬಾಳಬೇಕೆಂದು ಬಯಸಿದ ಅವರು ಅವನನ್ನು ಪಾದ್ರಿಯೊಬ್ಬರ ಸಹಾಯದಿಂದ ಪ್ಯಾರಿಸ್‍ಗೆ ಓದಲು ಕಳಿಸಿದರು. ಮಹಾಪುರುಷರ ಜೀವನದಲ್ಲಿ ಅಸಾಧ್ಯವಾದುದು ಸಾಧ್ಯವಾಗಿ ಅದು ಲೋಕಕಲ್ಯಾಣಕ್ಕೆ ನಾಂದಿಯಾಗುವಂತೆ ಲೂಯಿಯ ಪ್ಯಾರಿಸ್ ಪಯಣ ಹೊಸ ಮಾರ್ಗಕ್ಕೆ ನಾಂದಿಯಾಯಿತು. 
ಪ್ಯಾರಿಸ್‍ನಲ್ಲಿ ‘ದಿ ರಾಯಲ್ ಇನ್ಸಿಸ್ಟಿಟ್ಯೂಟ್ ಆಫ್ ಬ್ಲೈಂಡ್ ಯೂತ್’ ಎಂಬ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ. ಈ ಶಾಲೆಯಲ್ಲಿ ವ್ಯಾಕರಣ, ಗಣಿತ, ಭೂಗೋಳ, ಇತಿಹಾಸ, ಸಂಗೀತ ಹೀಗೆ ಅನೇಕ ವಿಷಯಗಳನ್ನು ಕಲಿಸಲಾಗುತ್ತಿತ್ತು. ಲೂಯಿ ವಯಸ್ಸಿನಲ್ಲಿ ಕಿರಿಯವನಾದರೂ ಅಧ್ಯಯನದಲ್ಲಿ ಎಲ್ಲರಿಗಿಂತ ಮುಂದೆ ಇರುತ್ತಿದ್ದ. ವ್ಯಾಲೆಂಟೆನ್ ಹೂವ್ವಿ ಎಂಬಾತ ರೂಪಿಸಿದ್ದ ‘ಏರಿಕೆ ಮುದ್ರಣ’ ಅಂಧರ ಕಲಿಕಾ ಮಾರ್ಗವಾಗಿತ್ತು. ಆದರೆ ಅದು ತುಂಬಾ ಸಂಕೀರ್ಣತೆಯಿಂದ ಕೂಡಿದ್ದು, ಕ್ಲಿಷ್ಟಕರ  ಅಬ್ಯಾಸ ಮಾರ್ಗವಾಗಿತ್ತು.  ಇದು ಲೂಯಿಗೆ ಮಾತ್ರವಲ್ಲ ಇತರರಿಗೂ ತುಂಬಾ ಕಷ್ಟಕರವಾಗಿತ್ತು. ಬಾರ್ಬಿ ಎಂಬ ಇನ್ನೊಬ್ಬ ತಜ್ಞ ರೂಪಿಸಿದ್ದ ಕಲಿಕಾ ಮಾರ್ಗವೂ ಸಹ ಸಮರ್ಪಕವಾಗಿರಲಿಲ್ಲ. ಉಬ್ಬಿದ ಚುಕ್ಕೆಗಳ ಪರಿಕಲ್ಪನೆಯೇ ಸರಿಯಿಲ್ಲವೇನೋ ಎಂಬಂತಾಗಿತ್ತು ಲೂಯಿಗೆ.
ಇದರಿಂದ ಬೇಸತ್ತ ಲೂಯಿಗೆ ಹೊಸದೊಂದು ಪದ್ದತಿಯನ್ನು ಕಂಡು ಹಿಡಿಯಬೇಕೆಂಬ ಆಸೆ ಮೊಳೆಯಿತು. ಆ ಆಸೆ ಪ್ರಯತ್ನಗಳನ್ನು ಹುಟ್ಟು ಹಾಕಿತು. ಇದಕ್ಕೆ ಸ್ನೇಹಿತರ ಸವಾಲೂ ಸಹ ಕಾರಣವಾಗಿತ್ತು. ಇನ್ನೊಬ್ಬರ ವಿಫಲವನ್ನೇ ಬಂಡವಾಳ ಮಾಡಿಕೊಂಡ ಲೂಯಿಗೆ ಉಬ್ಬಿದ ಚುಕ್ಕೆಗಳದೇ ದ್ಯಾನವಾಯಿತು. ಯಾವ ದಬ್ಬಳ ಅವನ ಅಂಧತ್ವಕ್ಕೆ ಕಾರಣವಾಗಿತ್ತೋ ಅದೇ ದಬ್ಬಳದಂತಹ ಸ್ಟೈಲಸ್ ಅವನ ಹೊಸ ಸಂಶೋದನೆಗೆ ನಾಂದಿಯಾಯಿತು. 
ಕೆಲವಾರು ವರ್ಷಗಳ ಕಠಿಣ ಪರಿಶ್ರಮ, ಸತತ ಅಭ್ಯಾಸ ಅವನ ಸಾಧನೆಯನ್ನು ಉತ್ತುಂಗಕ್ಕೆ ಏರಿಸಿದ್ದವು. ಅಂಧರು ಸುಲಭವಾಗಿ ಓದಲು ಬರೆಯಲು ಬಳಸಬಹುದಾದಂತಹ ಹೊಸ ವರ್ಣಮಾಲೆಯನ್ನು ಲೂಯಿ ಸೃಷ್ಟಿಸಿದ್ದ. ಆ ಮೂಲಕ ಜ್ಞಾನ ಭಂಡಾರವನ್ನು ಅಂಧರ ಬೆರಳ ತುದಿಗೆ ತಂದಿಟ್ಟ. ಅದೂ ಅವನ ಹದಿನೈದನೇ ವಯಸ್ಸಿನಲ್ಲಿ. ಈ ಹಿಂದೆ ಅವನ ಕಲಿಕಾ ಪದ್ದತಿಯನ್ನು ಹೀಯಾಳಿಸಿದ ಅನೇಕರು ಅವನ ಕಾಲಿಗೆ ಬೀಳುವಂತಾಗಿತ್ತು. ಅವನು ಕಂಡು ಹಿಡಿದ ಲಿಪಿ “ಬ್ರೈಲ್ ಲಿಪಿ” ಎಂದು ಖ್ಯಾತಿಯಾಯಿತು. 
ಪ್ಯಾರಿಸ್‍ನ ಶೀತ ವಾತಾವರಣದಿಂದಾಗಿ ಲೂಯಿಗೆ ಕ್ಷಯರೋಗ ತಗುಲಿತು. ಕ್ರಮೇಣ ರೋಗದ ಪ್ರಾಬಲ್ಯ ಹೆಚ್ಚಾಗಿ ಲೂಯಿ ಜನವರಿ 6 1852 ರಲ್ಲಿ ಕೊನೆಯ ಉಸಿರು ಎಳೆದನು. ಅಂಧನೊಬ್ಬ ಮಾತ್ರ ಇನ್ನೊಬ್ಬ ಅಂಧನ ಸಂಕಷ್ಟ ಅರಿಯಬಲ್ಲ ಎಂಬುದಕ್ಕೆ ಲೂಯಿ ಸಾಕ್ಷಿಯಾದ. ಅಂಧರ ಬಾಳಿಗೆ ಬೆಳಕಾದ. ಜಗತ್ತಿನ ಅಂಧರ ಕಲಿಕೆಗೆ ಕಾರಣನಾದ. ಲೂಯಿಯ ಈ ಸಾಧನೆಗಾಗಿ ಅವನ ಜನ್ಮದಿನವನ್ನು ಅಂದರೆ ಜನವರಿ 4 ನ್ನು “ವಿಶ್ವ ಅಂಧರ ದಿನಾಚರಣೆ”ಯನ್ನಾಗಿ ಆಚರಿಸಲಾಗುತ್ತದೆ.
                                                                                                                - ಆರ್.ಬಿ. ಗುರುಬಸವರಾಜ.

December 30, 2013

ಕಾಡಿನ ರಕ್ಷಣೆ

ಕಾಡಿನ ರಕ್ಷಣೆಯತ್ತ ಎಲ್ಲರ ಚಿತ್ತ

ಬೇಸಿಗೆ ಬಂತೆಂದರೆ ಸಾಕು ಪರಿಸರದಲ್ಲಿ ಅಸಮತೋಲನ ಸ್ಥಿತಿ ಉಂಟಾಗುತ್ತದೆ. ಬಿಸಿಲ ಧಗೆ ಏರಿದಂತೆ ನೆಲದ ಕಾವು ತೀವ್ರವಾಗುತ್ತದೆ. ಬಹುತೇಕ ಗಿಡಮರಗಳ ಎಲೆಗಳು ಉದುರಿ ಒಣಗಿದಂತೆ ತೋರುತ್ತವೆ. ಕಾಡಿಗಂತೂ ಇದು ಗಂಡಾಂತರದ ಕಾಲ. ಮಾನವ ಎಸಗುವ ಕೆಲವು ತಪ್ಪುಗಳು ಕಾಡಿನ ನಾಶಕ್ಕೆ ಕಾರಣವಾಗುತ್ತವೆ. 
ಬಿಸಿಲ ಜಿಲ್ಲೆಗಳೆಂದೇ ಹೆಸರುವಾಸಿಯಾದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರುಗಳಂತಹ ಜಿಲ್ಲೆಗಳಲ್ಲಿ ಮೈದಾನ ಪ್ರದೇಶದ ಕಾಡನ್ನು ಅಭಿವೃದ್ದಿ ಮಾಡುವ ಕಾರ್ಯ ಅವ್ಯಾಹತವಾಗಿ ಸಾಗುತ್ತಾ ಬಂದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 17.64 ಚದರ ಕಿ.ಮೀ, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 7.78 ಚದರ ಕಿ.ಮೀ ಹಾಗೂ ರಾಯಚೂರು ಜಿಲ್ಲೆಯಲ್ಲಿ ಶೇಕಡಾ 10.46 ಚದರ ಕಿ.ಮೀ ಅರಣ್ಯ ಪ್ರದೇಶವಿದ್ದು ಪ್ರತಿವರ್ಷ ಬೇರೆ ಬೇರೆ ಕಾರಣಗಳಿಗಾಗಿ ನಾಶವಾಗುತ್ತಾ ಕಾಡಿನ ಶೇಕಡಾ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಇದರಲ್ಲಿ ಕಾಡ್ಗಿಚ್ಚಿನಿಂದಾಗುವ ನಾಶದ ಪ್ರಮಾಣವೇ ಹೆಚ್ಚಾಗಿದೆ. 
ಪ್ರತಿವರ್ಷ ಬೇಸಿಗೆಯಲ್ಲಿ ಕಾಡನ್ನು ರಕ್ಷಸುವುದು ಅರಣ್ಯ ಇಲಾಖೆಗೆ ಒಂದು ಸವಾಲಿನ ಕಾರ್ಯವಾಗಿದೆ. ರಕ್ಷಾಣಾ ಕಾರ್ಯ ದುಸ್ಸಾದ್ಯವಾಗುತ್ತದೆ. ಇದಕ್ಕೆಲ್ಲಾ ಮುಖ್ಯ ಕಾರಣ ಕಾಡಿನ ಬಗ್ಗೆ ನಮ್ಮಲ್ಲಿರುವ ಅಪೂರ್ಣ ತಿಳುವಳಿಕೆ. ನಮ್ಮಿಂದ(ಮಾನವರಿಂದ) ಕಾಡಿಗೆ ನಿರಂತರವಾಗಿ ಶೋಷಣೆ ನಡೆಯುತ್ತಲೇ ಇದೆ. ಕಾಡನ್ನು ಕೇವಲ ಒಂದು ಮನೋರಂಜಕ ಪ್ರವಾಸಿ ತಾಣ ಎಂಬ ದೃಷ್ಟಿಯಿಂದ ನೋಡಿತ್ತಿದ್ದೇವೆಯೇ ವಿನಃ ಅದು ನಮ್ಮ ಸಂಪನ್ಮೂಲ ಎಂದು ನಾವಿನ್ನೂ ತಿಳಿದಿಲ್ಲ. 
ಕಾಡಿನ ಪ್ರದೇಶಗಳಲ್ಲಿ ಕೆಲವೊಮ್ಮೆ ಪ್ರವಾಸಿಗರು ಅಥವಾ ಕಿಡಿಗೇಡಿಗಳು ಎಸೆಯುವ ಬೀಡಿ, ಸಿಗರೇಟಿನ ತುಂಡುಗಳೇ ಬೆಂಕಿಗೆ ಕಾರಣವಾಗುವುದುಂಟು. ಅಲ್ಲದೇ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಹಳ್ಳಿಗಳ ಜನರಿಗೆ ಕಾಡಿನ ಹುಲ್ಲು ತುಂಬಾ ಪ್ರಯೋಜನಕಾರಿ. ಹುಲ್ಲಿಗೆ ಬೆಂಕಿ ಇಟ್ಟರೆ ಹೊಸ ಹುಲ್ಲು ಬೆಳೆಯುತ್ತದೆ ಎಂಬ ಅವರ ತಪ್ಪು ಕಲ್ಪನೆಯೂ ಕೂಡಾ ಕಾಡಿನ ನಾಶಕ್ಕೆ ಕಾರಣವಾಗುತ್ತದೆ. ದಟ್ಟವಾದ ಮಳೆಕಾಡುಗಳಲ್ಲಿ ಮಿಂಚು, ಸಿಡಿಲುಗಳು, ಬಿದಿರಿನ ಮೆಳಗಳ ತಿಕ್ಕಾಟಗಳು ಬೆಂಕಿಗೆ ಕಾರಣವಾಗಬಹುದಾದರೂ ಮೈದಾನ ಪ್ರದೇಶಗಳಲ್ಲಿನ ಕಾಡಿನ ಬೆಂಕಿ ಪ್ರಕರಣಗಳಿಗೆ ಮನುಷ್ಯನೇ ಕಾರಣವೆಂಬುದು ಸತ್ಯ. 
ಕಾಡಿಗೆ ಹತ್ತಿಕೊಂಡ ಬೆಂಕಿ ತನ್ನ ಕೆನ್ನಾಲಿಗೆಯಿಂದ ಇಡೀ ಕಾಡನ್ನು ನುಂಗಲು ಯತ್ನಿಸುತ್ತದೆ. ಇದರ ಪರಿಣಾಮವಾಗಿ ಕಾಡಿನ ಅಮೂಲ್ಯ ಗಿಡಮರಗಳು, ಔಷಧಿ ಸಸ್ಯಗಳು, ಪ್ರಾಣಿ, ಪಕ್ಷಿ ಜೀವಸಂಕುಲ ಅಗ್ನಿಗೆ ಆಹುತಿಯಾಗುತ್ತವೆ. ಇದರಿಂದ ಒಂದೆಡೆ ಪರಿಸರ ನಾಶ, ಮತ್ತೊಂದೆಡೆ ದೇಶದ ಅಮೂಲ್ಯ ಸಂಪತ್ತಿನ ನಷ್ಟ. ಹೀಗಾಗಿ ಇಡೀ ಪರಿಸರದಲ್ಲಿ ಅಸಮತೋಲನ ಏರ್ಪಡುತ್ತದೆ.
ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿನ ಕಾಡುಗಳಲ್ಲಿ ನೆಲದ ಹುಲ್ಲು, ಒಣ ಎಲೆಗಳು ಹೆಚ್ಚಾಗಿದ್ದು, ಬೆಂಕಿ ಹರಡಲು ಇವು ಉತ್ತೇಜನಕಾರಿಯಾಗಿವೆ. ನೆಲದಲ್ಲಿ ಹರಡುವ ಬೆಂಕಿ ಕೋಟ್ಯಾಂತರ ವರ್ಷಗಳಿಂದ ರೂಪಗೊಂಡಿರುವ ಫಲವತ್ತಾದ ಮೇಲ್ಮಣ್ಣನ್ನು ನಾಶ ಮಾಡುತ್ತದೆ. ಇದರಿಂದ ಮಣ್ಣಿನಲ್ಲಿ ಸಾರಜನಕ ಸಂಯುಕ್ತಗಳ ಪ್ರಮಾಣ ಕಡಿಮೆಯಾಗುತ್ತದೆ. ಬೆಂಕಿ ತಗುಲಿದ ಎಳೆಯ ಗಿಡಮರಗಳು ಸುಟ್ಟು ಕರಕಲಾಗುತ್ತವೆ. ಹೀಗೆ ಗಿಡಮರಗಳ ಹಿಡಿತ ತಪ್ಪಿಸಿಕೊಂಡ ಮೇಲ್ಮಣ್ಣು ಕ್ರಮೇಣವಾಗಿ  ಮಳೆಗಾಲದಲ್ಲಿ ತಗ್ಗಾದ ಪ್ರದೇಶಗಳಿಗೆ ಹರಿದು ಕೃಷಿಭೂಮಿಯನ್ನು ನಾಶಮಾಡುತ್ತದೆ ಹಾಗೂ ಅಕ್ಕಪಕ್ಕದಲ್ಲಿನ ಕೆರೆಗಳಲ್ಲಿ ಹೂಳಿನ ರೂಪದಲ್ಲಿ ತುಂಬಿಕೊಂಡು ಕೆರೆಗಳ ಅವಸಾನಕ್ಕೂ  ಕಾರಣವಾಗುತ್ತದೆ.  
ಕಾಡ್ಗಿಚ್ಚಿನಿಂದ ಉರಗ, ಹಲ್ಲಿ, ಓತಿಕಾಟಗಳಂತಹ ಕೆಲವು ಸರೀಸೃಪಗಳು, ಚಿಟ್ಟೆಗಳು, ಕ್ರಿಮಿಕೀಟಗಳು, ನೆಲದಲ್ಲಿ ಗೂಡು ಕಟ್ಟುವ ಕೆಲವು ಪಕ್ಷಿಗಳು, ಇರುವೆಗಳು, ಗೆದ್ದಲುಗಳು, ಗಿಡಮರಗಳಲ್ಲಿ ವಾಸಿಸುವ ಅಪಾರ ಜೀವರಾಶಿಗಳು ಮೊಟ್ಟೆಗಳ ಸಮೇತ ನಾಶ ಹೊಂದುತ್ತವೆ. ಹೀಗಾಗಿ ಕೆಲವು ಜೀವಿಗಳ ಸಂತತಿ ಸಂಪೂರ್ಣವಾಗಿ ನಾಶವಾಗಿದೆ.
ಪ್ರತಿವರ್ಷ ಅರಣ್ಯ ಇಲಾಖೆ ಅರಣ್ಯ ಪ್ರದೇಶದ ಸುತ್ತಮುತ್ತ ಹಾಗೂ ಅರಣ್ಯ ರಸ್ತೆಗಳ ಅಕ್ಕಪಕ್ಕ ನಿಗದಿತ ಅಂತರದಲ್ಲಿ ಅಂದರೆ ಸುಮಾರು 20 ರಿಂದ 30 ಅಡಿ ಅಗಲದ ಬೆಂಕಿ ತಡೆರೇಖೆಗಳನ್ನು ನಿರ್ಮಿಸುವುದುಂಟು. ಬೇಸಿಗೆ ಆರಂಭಕ್ಕೂ ಮುನ್ನ ಈ ರೇಖೆಗಳ ಹಾಗೂ ನೆಡು ತೋಪಿನ ನಡುವಿನ ರಸ್ತೆಗಳ ಅಕ್ಕಪಕ್ಕದಲ್ಲಿ ಉದುರಿದ ಎಲೆ, ಕಂಟಿಗಳನ್ನೆಲ್ಲಾ ತೆಗೆದು ಮುಂಜಾಗ್ರತಾ ಕ್ರಮವಾಗಿ ಬೆಂಕಿಯಿಟ್ಟು ಸುಟ್ಟು ಹಾಕುತ್ತಾರೆ.
ಜೀವಸಂಕುಲದ ಮೂಲಾಧಾರವಾದ ಕಾಡಿನ ರಕ್ಷಣೆಯಲ್ಲಿ ಜನರ ಸಹಕಾರ ಅತ್ಯಗತ್ಯ. ಮಾನವ ಪ್ರಕೃತಿಯಿಂದ ಪಾಠ ಕಲಿಯುವ ದಿನಗಳು ದೂರವಿಲ್ಲ. ಬಹುಶಃ ಅದರ ಅರಿವಾಗುವ ವೇಳೆಗೆ ಮಾನವನ ಅಧಃಪತನ ಪ್ರಾರಂಭವಾಗಿರುತ್ತದೆ. ಆದ್ದರಿಂದ ಮಾನವ ಎಚ್ಚೆತ್ತುಕೊಳ್ಳಲು ಈಗ ಸಕಾಲವಾಗಿದೆ. ಅರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿನ ‘ಗ್ರಾಮ ಅರಣ್ಯ ಸಮಿತಿ’ಯ ಸದಸ್ಯರ ನೆರವು ಅವಶ್ಯಕ. ಬೆಂಕಿ ಬೀಳುವ ಮುನ್ನವೇ ಸಂರಕ್ಷಣೋಪಾಯ ಕ್ರಮಗಳನ್ನು ಜರುಗಿಸುವುದು ಉತ್ತಮ. ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚು ಆಸ್ಥೆಯಿಂದ ಈ ಕಾರ್ಯದಲ್ಲಿ ಮುಂದಾಗಬೇಕು. ಕೇವಲ ಸಸಿ ನೆಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಇರುವಂತಹ ಗಿಡಮರಗಳ ರಕ್ಷಣೆಯತ್ತ ಎಲ್ಲರೂ ಚಿತ್ತ ಹರಿಸಬೇಕಾಗಿದೆ.
    - ಆರ್.ಬಿ.ಗುರುಬಸವರಾಜ

ಶಾಲಾ ಬಿಂಬ

ಶಾಲಾ ಬಿಂಬ

ಶಿಕ್ಷಣದ ಮೂಲೋದ್ದೇಶಗಳನ್ನು ಈಡೇರಿಸುವಲ್ಲಿ ಶಾಲೆಗಳ ಪಾತ್ರ ಅತ್ಯಂತ ಮಹತ್ವದ್ದು. ಶಿಕ್ಷಣದ ಎಲ್ಲಾ ಕನಸುಗಳನ್ನು ಈಡೇರಿಸುವ ಕೇಂದ್ರವೇ ಶಾಲೆ. ಈ ಹಿಂದೆ ಸಾಲೆಗಳು ಸೇವಾ ಕೇಂದ್ರಗಳಾಗಿದ್ದವು. ಆದರೆ ಇಂದು ಅವು ಸೇವಾ ಕೇಂದ್ರಗಳಾಗಿ ಉಳಿದಿಲ್ಲ. ಸಮುದಾಯ, ಪಂಚಾಯಿತಿ, ಪೋಷಕರು ಹೀಗೆ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಬಯಸುವ ಕೇತ್ರವಾಗಿದೆ. ಇಂದು ಶಿಕ್ಷಣದಲ್ಲಿ ಸಮುದಾಯದ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ. ಸಮುದಾಯವನ್ನು ಶಿಕ್ಷಣದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಾಗ ಮಾತ್ರ ಶಿಕ್ಷಣದ ಧ್ಯೇಯೋದ್ದೇಶಗಳು ಸುಲಭವಾಗಿ ಈಡೇರಲು ಸಾಧ್ಯ.
ಸಾರ್ವಜನಿಕರು ಶಾಲೆಯನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡುತ್ತಾರೆ. ಶಾಲೆಯನ್ನು ತಮ್ಮ ದೃಷ್ಟಕೋನದಂತೆ ಬೆಳೆಸಲು ಹಂಬಲಿಸುತ್ತಾರೆ. ಪ್ರತಿ ಶಾಲೆಯನ್ನು ಇನ್ನೊಂದು ಶಾಲೆಯೊಂದಿಗೆ ಹೋಲಿಸಿ ನೋಡುತ್ತಾರೆ. ಮೇಲ್ನೋಟಕ್ಕೆ ಎರಡು ಶಾಲೆಗಳು ಒಂದೇ ರೀತಿ ಕಂಡರೂ ಒಳಹೊಕ್ಕು ನೋಡಿದಾಗ ಅದರದ್ದೇ ಆದ ವಿಶೇಷತೆ, ವಿಭಿನ್ನತೆ ಮತ್ತು ವ್ಯತ್ಯಾಸಗಳು ಗೋಚರಿಸುತ್ತವೆ. ಇಂತಹ ಭಿನ್ನತೆಗಳನ್ನು ಸಮುದಾಯ ಗುರುತಿಸುತ್ತದೆ. ಹೀಗೆ ಶಾಲೆಯೊಂದು ಸಮುದಾಯದಿಂದ ಗುರುತಿಸಲ್ಪಡುವುದನ್ನು `ಶಾಲಾಬಿಂಬ’ ಎನ್ನಲಾಗುತ್ತದೆ. 
ಪ್ರತಿಯೊಂದು ಶಾಲೆ ತನ್ನದೇ ಆದ ಗುರಿ ಉದ್ದೇಶಗಳನ್ನು ಹೊಂದಿದ್ದು, ಅವುಗಳನ್ನು ಈಡೇರಿಸಲು ಶ್ರಮಿಸುತ್ತದೆ. ಅಗತ್ಯವಾದಾಗ ಸಮುದಾಯದ ಸಹಭಾಗಿತ್ವ ಪಡೆಯುತ್ತದೆ. ಹೀಗೆ ಸಮುದಾಯದ ಸಹಕಾರದಿಂದ ಅಭಿವೃದ್ದಿ ಹೊಂದಿದ ಶಾಲೆ ಸಮಾಜದಲ್ಲಿ, ಸಮುದಾಯದಲ್ಲಿ ತನ್ನದೇ ಆದ ಛಾವು ಮೂಡಿಸುತ್ತದೆ. ತನ್ನ ಮೂಲೋದ್ದೇಶಗಳನ್ನು ಸಮುದಾಯದ ಸದ್ವರ್ತನೆಯಲ್ಲಿ ಬಿಂಬಿಸುವಂತಾಗುವುದೇ ‘ಶಾಲಾ ಬಿಂಬ’. 
ಶಾಲಾ ಬಿಂಬದ ಅವಶ್ಯಕತೆ 
ಶಾಲಾ ಬಿಂಬದ ಅವಶ್ಯಕತೆಯನ್ನು ಕೆಳಗಿನ ಅಂಶಗಳಿಂದ ದೃಢಿಕರಿಸಬಹುದು.
ಶಾಲೆಯ ಅಸ್ತಿತ್ವಕ್ಕಾಗಿ : ಶಾಲೆ ತನ್ನ ಅಸ್ತಿತ್ವಕ್ಕಾಗಿ ಸಮುದಾಯದಿಂದ ಗುರುತಿಸಲ್ಪಡಬೇಕಾದ ಅವಶ್ಯಕತೆ ಇದೆ. ಈ ಗುರುತಿಸುವಿಕೆ ಇಲ್ಲಿದಿದ್ದರೆ ಶಾಲೆಗೆ ವಿದ್ಯಾರ್ಥಿಗಳು ಬರುವುದಿಲ್ಲ. ವಿದ್ಯಾರ್ಥಿಗಳಿಲ್ಲದ ಶಾಲೆಗೆ ಅಸ್ತಿತ್ವವಿಲ್ಲ ಅಲ್ಲವೇ ? ಶಾಲೆಯೊಂದು ತನ್ನ ಅಸ್ತಿತ್ವಕ್ಕಾಗಿ ‘ಶಾಲಾ ಬಿಂಬ’ವನ್ನು ಕಟ್ಟಿಕೊಳ್ಳಬಾಕಾಗಿದೆ.
ಶಿಕ್ಷಕರ ಶ್ರೇಷ್ಟತೆಗಾಗಿ : ಶಿಕ್ಷಕರು ಇಂದು ಬೋಧಕರಾಗಿ ಉಳಿದಿಲ್ಲ. ವಿಭಿನ್ನ ಹಾಗೂ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಬೇಕಾಗಿದೆ.  ಈ ನಿಟ್ಟಿನಲ್ಲಿ ಅವರ ಕಾರ್ಯತತ್ಪರತೆ ತುಣಬಾ ಮಹತ್ವದ್ದು. ಶಿಕ್ಷಕರು ಶ್ರೇಷ್ಟತೆಯನ್ನು ಸಾಧಿಸಬೇಕಾದರೆ ಅವಿರತ ಪರಿಶ್ರಮ ಅಗತ್ಯ. ಅದಕ್ಕಾಗಿ ಅವರು ಸಮಾಜದಲ್ಲಿ ಶ್ರೇಷ್ಟರೆಂದು ಗುರುತಿಸಲ್ಪಡುತ್ತಾರೆ. 
ಸ್ಪರ್ಧಾತ್ಮಕತೆಗಾಗಿ : ಇಂದಿನದು ಸ್ಪರ್ಧಾ ಪ್ರಪಂಚ. ಎಲ್ಲಾ ಹಂತದಲ್ಲೂ ನಮ್ಮ ಸುತ್ತಲಿನ ಸಮಾಜದಲ್ಲಿ ಸ್ಪರ್ಧೆ ಇದೆ. ಅದರಲ್ಲೂ ಖಾಸಗೀ ಮತ್ತು ಸರ್ಕಾರಿ ಶಾಲೆಗಳಲ್ಲಿನ ಸ್ಪರ್ಧೆ ಹೇಳತೀರದು. ಈ ಸ್ಪರ್ಧೆಯನ್ನೆದುರಿಸಲು ಶಾಲೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ. ಪೋಷಕರಿಗೆ ಶಾಲೆಯಲ್ಲಿ ಉತ್ತಮ  ಗುಣಮಟ್ಟದ ಶಿಕ್ಷಣ ದೊರೆಯುತ್ತದೆಯೆಂಬ ಭರವಸೆ ಮೂಡಿದಾಗ ಮಾತ್ರ  ಅಂತಹ ಶಾಲೆಯ ಕಡೆಗೆ ವಾಲುತ್ತಾರೆ. ಇಂತಹ ಸ್ಪರ್ಧೆಗಳಿಂದ ಶಾಲೆಗಳ ಗುಣಮಟ್ಟ ಹೆಚ್ಚುವುದಲ್ಲದೇ ಆಂತರಿಕ ಮತ್ತು ಬಾಹ್ಯ ಸೌಲಭ್ಯಗಳು ಹೆಚ್ಚುತ್ತವೆ. 
ಕಡೆಗಣಿಸಲ್ಪಟ್ಟ ಮಕ್ಕಳ ಹಿತದೃಷ್ಟಿಗಾಗಿ : ಇಂದು ಸರ್ಕಾರಿ ಶಾಲೆಗೆ ಬರುವಂತಹ ಬಹುಪಾಳು ಮಕ್ಕಳು ಬಡತನ ರೇಖೆಗಿಂತ ಕೆಳಗಿರುವ, ಕೊಳಚೆ ಪ್ರದೇಶದ, ಸಮುದಾಯದ ಅಂಚಿನ ವರ್ಗದ ಅಂದರೆ ಪ.ಜಾತಿ ಮತ್ತು ಪ.ವರ್ಗದ, ಹಾಗೂ ಸಮುದಾಯದಿಂದ ನಿರ್ಲಕ್ಷಿಸ್ಪಟ್ಟ ನಿರ್ಗತಿಕ ಮಕ್ಕಳಿದ್ದಾರೆ. ಈ ಎಲ್ಲಾ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಬೇಕಾದುದು ಪ್ರತಿಯೊಬ್ಬ ಸರ್ಕಾರಿ ಶಾಲಾ ಶಿಕ್ಷಕರಾದ್ಯ ಕರ್ತವ್ಯವಾಗಿದೆ. ಇಂತಹ ಮಕ್ಕಳ ಏಳಿಗೆಯಿಂದ ಸಮುದಾಯದ ಹಾಗೂ ದೇಶದ ಅಭಿವೃದ್ದಿಯಾಗುತ್ತದೆ. ಅದಕಾಗಿ ಪ್ರತಿಯೊಂದು ಸರ್ಕಾರಿ ಶಾಲೆಯೂ ‘ಶಾಲಾಬಿಂಬ’ವಾಗಬೇಕಿದೆ.
ನಿರೀಕ್ಷೆಗಳನ್ನು ಪೂರೈಸಲು : ಒಮ್ಮೆ ಶಾಲೆಗೆ ಉತ್ತಮ ಛಾಪು ಬಂದರೆ ಸಾಕು ಸಮಾಜ ಉನ್ನತ ನಿರೀಕ್ಷೆಗಳನ್ನು ಅಪೇಕ್ಷಿಸುತ್ತದೆ. ಶಿಕ್ಷಕರು ಮಕ್ಕಳಿಂದ, ಮಕ್ಕಳು ಶಿಕ್ಷಕರಿಂದ, ಶಾಲೆ ಸಮಾಜದಿಂದ, ಸಮಾಜ ಶಾಲೆಯಿಂದ ಉತ್ತಮ ನಿರೀಕ್ಷೆಗಳನ್ನು ಅಪೇಕ್ಷಿಸುತ್ತದೆ. ಈ ನಿರೀಕ್ಷೆಗಳು ಸಾಕಾರಗೊಳ್ಳಲು ಪರಸ್ಪರ ಸಹಾಯ ಸಹಕಾರ ಅಗತ್ಯ. ಅದಕ್ಕಾಗಿ ಭಾಗೀದಾರರೆಲ್ಲರೂ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಶಾಲಾಬಿಂಬದ ಆಯಾಮಗಳು

1) ಸ್ಪಷ್ಟತೆ : ಶಾಲೆ ಯಾವ ವಿಚಾರದಲ್ಲಿ ಮುಂದುವರೆಯಬೇಕೆಂಬ ಸ್ಪಷ್ಟ ನಿಲುವು, ವಿಶ್ಲೇಷಣೆ ಅಗತ್ಯ. ಸಾಧಿಸಬೇಕಾದ ಗುರಿಗಳು, ಅವುಗಳನ್ನು ಸಾಧಿಸಲು ಮಾರ್ಗಗಳು, ರೂಪಿಸಿಕೊಂಡ ಚಟುವಟಿಕೆಗಳು, ಅಳವಡಿಸಿಕೊಂಡ ಮೌಲ್ಯಗಳು ಇತ್ಯಾದಿ ವಿಚಾರಗಳ ಬಗ್ಗೆ ಸ್ಪಷ್ಟತೆ ಇರಬೇಕು ಮತ್ತು ಇವುಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಬೇಕು. ಅಂದಾಗ ಮಾತ್ರ ಶಾಲೆಯ ದೂರದೃಷ್ಟಿತ್ವ ಸಮುದಾಯದಿಂದ ಗುರುತಿಸಲ್ಪಡುತ್ತದೆ.
2) ಗುಣಮಟ್ಟ : ನಮ್ಮ ಶಾಲೆಗೆ ಮಗುವನ್ನು ಸೇರಿಸಿದರೆ ಆ ಮಗುವಿಗೆ ದೊರೆಯುವ ಗುಣಮಟ್ಟವೇನು ? ಪ್ರಯೋಜನಗಳೇನು ? ಎಂಬುದನ್ನು ಪಾಲಕರಿಗೆ ತಿಳಿಸಲು ಅಗತ್ಯ ಮಾಹಿತಿಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ತಮ್ಮ ಶಾಲಾ ಸಾಧನೆಗಳನ್ನು ಪರಿಚಯಿಸುವ ಕಿರು ಮಾಹಿತಿ ಪುಸ್ತಕ (ಠಿಡಿosಠಿeಛಿಣus) ಇದ್ದರೆ ಒಳಿತು.
3) ಪ್ರಾವೀಣ್ಯತೆ : ಎಲ್ಲಿ ಸ್ಪಷ್ಟತೆ ಮತ್ತು ಗುಣಮಟ್ಟ ಇರುತ್ತದೋ ಅಲ್ಲಿ ಪ್ರಾವೀಣ್ಯತೆ ಇರುತ್ತದೆ. ನಾವೀನ್ಯ ಬೋಧನಾ ವಿಧಾನಗಳನ್ನು , ಉತ್ತಮ ದರ್ಜೆಯ ಹೊಸ ಹೊಸ ತಂತ್ರಜ್ಞಾನ ಬಳಸಿ ಬೋಧಿಸಿದಾಗ ಮಕ್ಕಳಲ್ಲಿ ಪ್ರಾವೀಣ್ಯತೆ ತಾನೇ ತಾನಾಗಿ ಕಾಣಿಸಿಕೊಳ್ಳುತ್ತದೆ. ಇದು ಶಾಲೆಯು ಸಮುದಾಯದಿಂದ ಗುರುತಿಸುವಲ್ಲಿ ಸಹಾಯ ಮಾಡುತ್ತದೆ.
ನಿಮ್ಮ ಶಾಲೆ ಬಿಂಬಿಸಲು ಕೆಳಗಿನ ಸೂತ್ರಗಳು ಸಹಾಯವಾಗಬಹುದು.
ನಿಮ್ಮ ಶಾಲಾ ಗುರಿ ಮತ್ತು ಉದ್ದೇಶಗಳ ಬಗ್ಗೆ ಸ್ಪಷ್ಟತೆ ಇರಲಿ.
ನಿಮ್ಮ ಶಾಲೆಯ ಸರ್ವತೋಮುಖ ಬೆಳವಣಿಗೆ ಉತ್ತಮ ಗುಣಮಟ್ಟದಲ್ಲಿರಲಿ.
ನಿಮ್ಮ ಶಾಲೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾವೀಣ್ಯತೆ ಸಾಧಿಸುವ ಮಾರ್ಗೋಪಾಯಗಳಿರಲಿ.
ನಿಮ್ಮ ಶಾಲೆಗೆ ಉನ್ನತ ನಿರೀಕ್ಷೆಗಳಿರಲಿ. ಅವುಗಳನ್ನು ಸಾಕಾರಗೊಳಿಸಲು ಪರಿಶ್ರಮವಿರಲಿ.
ಆರೋಗ್ಯಕರ ಸ್ಪರ್ಧೆ ಇರಲಿ. ಅದು ಪ್ರಗತಿಗೆ ಪೂರಕವಾಗಿರಲಿ.
ಸಾಂಘಿಕ ಕಾರ್ಯ ನಿರ್ವಹಿಸುವ ಚತುರತೆ ನಿಮ್ಮಲ್ಲಿರಲಿ.
ಹೀಗೆ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಕೂಡಿದ, ಉತ್ತಮ ಗುಣಮಟ್ಟ ನೀಡುವ ಶಾಲೆ ಎಲ್ಲರನ್ನು ಆಕರ್ಷಿಸುವುದು ಸಹಜ. ಇಂತಹ ಸುಂದರ ಕನಸಿನ ಶಾಲೆ ನಿರ್ಮಿಸುವಲ್ಲಿ ಅಲ್ಲಿನ ಶಿಕ್ಷಕರ ಪರಿಶ್ರಮ ಅಡಗಿರುತ್ತದೆ. ನಾವೀನ್ಯ ತಂತ್ರಗಾರಿಕೆಯೊಂದಿಗೆ, ಹೊಸ ಹೊಸ ಚಟುವಟಿಕೆಗಳೊಂದಿಗೆ ನಿಮ್ಮ ಶಾಲೆ ಸಮುದಾಯದಿಂದ ಗುರುತಿಸಲ್ಪಡುವ ‘ಶಾಲಾಬಿಂಬ’ವಾಗಲಿ ಎಂಬುದೇ ನಮ್ಮ ಆಶಯ.
- ಆರ್.ಬಿ.ಗುರುಬಸವರಾಜ. 

ಕಾಗದ ಕಲೆ

ಕಾಗದ ಕಲೆಯ ಮಾಂತ್ರಿಕ ಸಿದ್ದೇಶ್

ಆತನಿಗೆ ಕಾಲೇಜು ಸೇರಿ ಉನ್ನತ ಶಿಕ್ಷಣ ಪಡಯಬೇಕೆಂಬ ಆಸೆ. ಆದರೆ ಬಡತನದಿಂದಾಗಿ ಅವನಿಗೆ ಕಾಲೇಜು ಶಿಕ್ಷಣ ಗಗನಕುಸುಮ. ಆದರೂ ಅವನ ಕಂಗಳಲ್ಲಿನ ಹೊಳಪು, ಮುಖದಲ್ಲಿನ ಆತ್ಮವಿಶ್ವಾಸ, ಮಂದಹಾಸಗಳು ಎಂತಹವರನ್ನೂ ಚಕಿತಗೊಳಿಸಬಲ್ಲವು. ಇವನಿಗೆ ಕಲೆ ಹೇಗೆ ಸಿದ್ದಿಸಿದೆಯೋ ಬಲ್ಲವರಾರು? ಇವನ ಕೈಯಿಂದ ರೂಪಗೊಂಡ ಕಲಾಕೃತಿಗಳು ಮಾತ್ರ ಜೀವ ತಳೆದು ಬದುಕಿನ ಕತೆ ಹೇಳುತ್ತವೆ. ಅಂದಹಾಗೆ ಇವನಾರು ಎಂದು ತಿಳಿಯಬೇಕೇ? ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಪತ್ತಾರ ಸಿದ್ದೇಶ್(ಚಿರಪರಿಚಿತ ಪತ್ತಾರ ಪಾಲನೇತ್ರ ಇವರ ಕಿರಿಮಗ)ಎಂಬುವವನೇ ಆ ಕಲೆಗಾರ. ಕಾಗದ ಕತ್ತರಿಸಿ ಅದಕ್ಕೊಂದು ರೂಪ ಕೊಡುವುದೇ ಇವನ ಕಲೆ. 18 ವರ್ಷ ವಯಸ್ಸಿನ ಸಿದ್ದೇಶನ ಕೈಗೊಂದು ಬಣ್ಣದ ಕಾಗದ ಮತ್ತು ಕತ್ತರಿ ಕೊಟ್ಟರೆ ಸಾಕು, ಚಕಚಕನೇ ಕಾಗದವನ್ನು ಕತ್ತರಿಸಿ ಸುಂದರ ಕಲಾಕೃತಿಗಳನ್ನಾಗಿ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ನೋಡುಗರಿಗೆ ರಸಾನುಭವದ ಅಪೂರ್ವ ಅನುಭವ.
ಕಲೆ ಯಾರಿಗೂ ಸ್ವಂತದ್ದಲ್ಲ. ಆದರೂ ಎಲ್ಲರಿಗೂ ಸಿದ್ದಸುವುದಿಲ್ಲ. ಕಾಗದವನ್ನು ಮನಮೋಹಕ ವಿನ್ಯಾಸಗಳಲ್ಲಿ ಕತ್ತರಿಸಿ ಕಲಾಕೃತಿಗಳನ್ನು ರಚಿಸುವ ಕಲೆಯೇ “ಸಾಂಝೀ ಕಲೆ”. ತಾನು ಮಾಡುತ್ತಿರುವುದು ‘ಸಾಂಝೀ ಕಲೆ’ ಎಂಬುದನ್ನೂ ಸಹ ತಿಳಿಯದ ಸಿದ್ದೇಶ್ ಓದಿದ್ದು ಕೇವಲ 10 ನೇ ತರಗತಿ ಮಾತ್ರ. ಮುಂದೆ ಓದಲು ಬಡತನ ಅಡ್ಡಿಯಾದರೂ ಕಲೆಯ ಅಭಿವ್ಯಕ್ತಿಗೆ ಅದು ಪೂರಕವಾಯಿತು. ಆಗ ಅವನಲ್ಲಿ ಅಂತರ್ಗತವಾಗಿದ್ದ ಕಲಾಶಕ್ತಿ ಹೊಸ ರೂಪ ಪಡೆದು ಬಾಹ್ಯ ಜಗತ್ತಿಗೆ ತನ್ನನ್ನು ಅರ್ಪಿಸಿಕೊಂಡ.
ಕಲಾವಿದನೊಬ್ಬ ತನ್ನ ಅಭಿವ್ಯಕ್ತಿಗಾಗಿ ಆಯ್ದುಕೊಳ್ಳುವ ಮಾಧ್ಯಮಗಳು ಹಲವಾರು. ತನ್ನ ಆಸಕ್ತಿ ಹಾಗೂ ತನ್ನೊಳಗಿನ ಸೃಜನಶೀಲ ಮನಸ್ಸಿಗನುಗುಣವಾಗಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದಕ್ಕೆ ಸಿದ್ದೇಶನೇ ಸಾಕ್ಷಿ. ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸಲು ಕಾಗದ ಕಲೆಯನ್ನು ಆಯ್ದುಕೊಂಡ. ಪ್ರಮಾಣಬದ್ದವಾಗಿ ವಿವಿಧ ಮಡಿಕೆಗಳಲ್ಲಿ ಮಡಿಚಿ ಕತ್ತರಿಸಿ ಬಿಡಸಿದಾಗ ಅದರಲ್ಲಿ ವಿವಿಧ ವಿನ್ಯಾಸದ ಚಿತ್ರಗಳು ಮೂಡಿರುತ್ತವೆ. ಹೀಗೆ ರಚಿತವಾದ ಕಲಾಕೃತಿಗಳು ಅವನ ಆಸಕ್ತಿ, ಚಿಂತನೆ ಮತ್ತು ಕೈಚಳಕಗಳನ್ನು ಪ್ರತಿಬಿಂಬಿಸುತ್ತವೆ. ಇವನಿಂದ ರಚಿತವಾದ ಪ್ರಾಣಿ, ಪಕ್ಷಿ, ಹಣ್ಣು, ತರಕಾರಿ, ಎಲೆ, ವಾಹನಗಳ ಚಿತ್ರಗಳು ಕಲಾನೈಪುಣ್ಯತೆಯ ಪ್ರತೀಕಗಳಾಗಿವೆ. 
ಬಾಲ್ಯದಲ್ಲಿಯೇ ಅಂದರೆ 10 ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಸಿದ್ದೇಶನಿಗೆ ಸೋದರಮಾವ ಹಾಲೇಶಪ್ಪ ಬಾಳಿಗೆ ಬೆಳಕಾದರು. ಈ ಕಾಗದ ಕಲೆ ಇವರ ಕುಲಕಸಬು ಆಗಿದ್ದರೂ ‘ಸೋದರಮಾವನೇ ನನ್ನ ಗುರು’ ಎಂದು ಅವರನ್ನು ಸ್ಮರಿಸುತ್ತಾನೆ. “1ನೇ ತರಗತಿ ಸೇರುವ ವೇಳೆಗೆ ವಿವಿಧ ಆಕೃತಿಗಳನ್ನು ಕತ್ತರಿಸುವುದನ್ನು ಕಲಿತಿದ್ದೆ” ಎಂದು ಬಾಲ್ಯದ ದಿನಗಳನ್ನು ನೆನೆಯುವ ಸಿದ್ದೇಶನಿಗೆ ‘ಶಿಲ್ಪಕಲೆ’ ಕಲಿಯಬೇಕೆಂಬ ಆಸೆ. ಆದರೆ ಬಡತನ ಮತ್ತು ಮನೆಯವರ ಒತ್ತಾಸೆ ಇಲ್ಲೇ ಹಿಡಿದು ನಿಲ್ಲಿಸಿದೆ.  ಈ ಕಲೆಗೆ ಸೃಜನಶೀಲತೆ, ಚಾಣಾಕ್ಷತನ ಹಾಗೂ ಚಾಕಚಕ್ಯತೆ ಇದ್ದರೆ ಸಾಕು ಯಾವುದೇ ಕಾಲೇಜು ಶಿಕ್ಷಣದ ಅವಶ್ಯಕತೆ ಇಲ್ಲ ಎಂಬುದಕ್ಕೆ ಸಿದ್ದೇಶನೇ ಸಾಕ್ಷಿ. 
“ಗಣೇಶಚೌತಿ, ದೀಪಾವಳಿ ಹಾಗೂ ಮದುವೆ ಸೀಜನ್‍ಗಳಲ್ಲಿ ಮಾತ್ರ ಹೆಚ್ಚು ಬೇಡಿಕೆ ಇರುತ್ತದೆ. ಇದರಿಂದ ಬರುವ ಹಣ ಹೊಟ್ಟೆಬಟ್ಟೆಗೂ ಸಾಲುತ್ತಿಲ್ಲ. ಕುಲಕಸಬು ಬಿಡಬಾರದೆಂದು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ” ಎನ್ನುವ ಸಿದ್ದೇಶನ ಮಾತುಗಳಲ್ಲಿ ವಿಷಾದವಿದೆ. ಔದ್ಯೋಗೀಕರಣದ  ಭರಾಟೆಯಿಂದ ಮಾರುಕಟ್ಟೆಯಲ್ಲಿ ಆಕರ್ಷಕವಾದ ವಿವಿಧ ಬಣ್ಣಗಳ ಪ್ಲಾಸ್ಟಿಕ್ ಕಾಗದಗಳು ಕಡಿಮೆ ಬೆಲೆಗೆ ದೊರೆಯುತ್ತಿದ್ದು, ಇಂತಹ ಗ್ರಾಮೀಣ ಜನಪದ ಕಲೆಗಳು ಮೂಲೆಗುಂಪಾಗುತ್ತವೆ. ಆದರೂ ಕಲೆಯನ್ನು ಆರಾಧಿಸುವವರಿಗೆ, ಆಸ್ವಾದಿಸುವವರಿಗೆ ಹಾಗೂ ಸ್ವಾವಲಂಬಿ ಜೀವನ ನಡೆಸಲು ಬದ್ದರಾದವರಿಗೆ ಸಿದ್ದೇಶ ಮಾದರಿಯಾಗಿ ನಿಲ್ಲುತ್ತಾನೆ. ಗ್ರಾಮೀಣ ಜನಪದ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕೆಂಬ ಇವನ ಕಾಳಜಿ ಮೆಚ್ಚುವಂತದ್ದು. ಈ ಕಾರಣಕ್ಕಾಗಿ ಸಿದ್ದೇಶ ಇಂದಿನ ಯುವಕರಿಗೆ ಸ್ಪೂರ್ತಿಯಾಗಬಹುದಲ್ಲವೇ? ದೇಶದ ಸಾಂಸ್ಕøತಿಕ ಪರಂಪರೆಯ ಪ್ರತೀಕವಾದ ಈ ಕಲೆ ಆಧುನೀಕರಣದಿಂದಾಗಿ ನಶಿಸುತ್ತಿದೆ. ಇಂತಹ ಕಲೆಯನ್ನು ಗುರುತಿಸಿ ಉಳಿಸಿ ಬೆಳೆಸುವತ್ತ ಸರ್ಕಾರ ಗಮನಹರಿಸುತ್ತದೆಯಾ? ಕಾದು ನೋಡಬೇಕಾಗಿದೆ.
ಸಂಪರ್ಕಿಸಿ: ಕಾಗದಕಲೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಬೇಡಿಕೆಗಾಗಿ ಸಿದ್ದೇಶನ ಮೊಬೈಲ್ ಸಂಖ್ಯೆ 7829933701 ನ್ನು ಸಂಪರ್ಕಿಸಲು ವಿನಂತಿ.


ಸಾಂಝೀ ಕಲೆ: ಕಾಗದವನ್ನು ಮನಮೋಕವಾಗಿ ಮಡಿಚಿ ಕತ್ತರಿಸುವ ಕಲೆಯೇ ಸಾಂಝೀ ಕಲೆ. ಸರಳವಾಗಿ ಹೇಳುವುದಾದರೆ ಇದೊಂದು ‘ಪೇಪರ್ ಕಟ್ಟಿಂಗ್ ಆರ್ಟ’. ಈ ಕಲೆಗೆ ಬಣ್ಣ ಮತ್ತು ಕುಂಚದ ಹಂಗಿಲ್ಲ. ಕಾಗದ ಮತ್ತು ಕತ್ತರಿ ಇದ್ದರೆ ಸಾಕು. ಭಾರತ ಮೂಲದ ಈ ಕಲೆ ಇಂದು ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಪ್ರಸಿದ್ದಿ ಪಡೆದಿದೆ. ಮದುವೆ, ಮುಂಜಿಗಳಂತಹ ಶುಭ ಕಾರ್ಯಗಳಲ್ಲಿ, ಮನೆ, ಶಾಲೆ ಇತ್ಯಾದಿಗಳಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ, ದೇವಸ್ಥಾನಗಳಲ್ಲಿ ಸಿಂಗಾರ ಮಾಡಲು ಈ ಕಲೆಯನ್ನು ಬಳಸಲಾಗುತ್ತದೆ. ಇದೊಂದು ದೈಹಿಕ ಶ್ರಮವಿಲ್ಲದ ಜನಪದ ಕಲೆಯಾಗಿದ್ದು ಒಬ್ಬರಿಂದ ಇನ್ನೊಬ್ಬರಿಗೆ ಕಲಿಸಲ್ಪಟ್ಟು ಮುಂದುವರೆದುಕೊಂಡು ಬಂದಿದೆ.
                                                                                         - ಆರ್.ಬಿ.ಗುರುಬಸವರಾಜ

ಪರಿಸರ ಸಂರಕ್ಷಣೆ

ಪರಿಸರ ಸಂರಕ್ಷಣೆಗೆ ದಶ ಸೂತ್ರಗಳು

ಇಂದು ವಿಜ್ಞಾನ ಪ್ರಪಂಚ ವಿಸ್ತಾರವಾಗುತ್ತಿದೆ. ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. 50 ವರ್ಷಗಳ ಹಿಂದೆ ಊಹಿಸಲು ಸಾಧ್ಯವಾಗದ ಪ್ರಗತಿ ವಿಜ್ಞಾನದಲ್ಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅನೇಕ ವಸ್ತುಗಳನ್ನು ನಮಗೆ ನೀಡಿದೆ. ಇವು ನಮ್ಮ ಬದುಕಿನ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿವೆ. ಇವುಗಳಲ್ಲಿ ಕೆಲವು ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ನಾಗರೀಕ ಬದುಕಿಗೆ ಅನಿವಾರ್ಯವಾಗಿವೆ. 
                ವಿಜ್ಞಾನ ಮತ್ತು ತಂತ್ರಜ್ಞಾನ ನಮಗೆ ನೀಡಿರುವ ಅನೇಕ ವಸ್ತುಗಳು ನಮ್ಮ ಸುಖವನ್ನು ಹೆಚ್ಚಿಸಿವೆ. ಅಂತೆಯೇ ಕೆಲವು ವಸ್ತುಗಳು ಬದುಕನ್ನು ದುರ್ಬಲಗೊಳಿಸಿವೆ. ಪ್ರಗತಿ ಮತ್ತು ಆಧುನಿಕತೆಯನ್ನು ಸಾಧಿಸುವ ಭರದಲ್ಲಿ ಪರಿಸರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೇವೆ. ಇದರ ಪರಿಣಾಮವಾಗಿ ಪರಿಸರ ಸಂರಕ್ಷಣೆ ಅತ್ಯಂತ ದೊಡ್ಡ ಸಮಸ್ಯೆ ಹಾಗೂ ಸವಾಲಾಗಿದೆ. 
                    ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗಿಂತ ಮಾನವ ಅತ್ಯಂತ ಅಪಾಯಕಾರಿ ಪ್ರಾಣಿಯಾಗಿದ್ದಾನೆ. ಮಾನವನ ದುರಾಸೆ, ಅಜಾಗರೂಕತೆಯಿಂದ ಆಗುತ್ತಿರುವ ದುರಂತಗಳಿಗೆ ಕೊನೆಯಿಲ್ಲದಾಗಿದೆ. ಈ ಪರಿಣಾಮಕಾರಿ ವಿನಾಶದಿಂದ ಜೀವ ಸಂಕುಲ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದರಲ್ಲಿ  ಮಾನವನ ವಿನಾಶವೂ ಅಡಗಿದೆ. ಇದರಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ಪರಿಸರ ಸಂರಕ್ಷಣೆಗೆ ಮುಂದಾಗುವುದು. ಆದ್ದರಿಂದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ವಿವೇಚನೆಯಿಂದ ಕೆಲವು ಸೂತ್ರಗಳನ್ನು ಅನಿವಾರ್ಯವಾಗಿ ಪಾಲಿಸಲೇಬೇಕಾಗುತ್ತದೆ. ಅವು ಕೆಳಗಿನಂತಿವೆ.
1. ವಿದ್ಯುತ್ ಬಲ್ಬ್ ಬದಲಿಸೋಣ : ಇಂದು ರಾಷ್ಟ್ರವ್ಯಾಪಿ ಬಳಸುವ ವಿದ್ಯುತ್ ಬಲ್ಬ್‍ನ ಬಹುಭಾಗವನ್ನು ಸಾದಾರಣ ಇಂಡೋಸ್ಕೆಂಟ್ ಬಲ್ಬ್‍ಗಳು ಆಕ್ರಮಿಸಿಕೊಂಡಿವೆ. ಇವುಗಳಿಂದ ಹೆಚ್ಚು ವಿದ್ಯುತ್ ಶಕ್ತಿ ಬಳಕೆಯಾಗುತ್ತದೆ. ಅಲ್ಲದೇ ಕೋಣೆಯ ಉಷ್ಣತೆಯೂ ಹೆಚ್ಚುತ್ತದೆ. ಇದರಿಂದ ಪರಿಸರಕ್ಕೆ ಹೆಚ್ಚು ಹಾನಿ ಉಂಟಾಗುತ್ತದೆ. ಈ ಬಲ್ಬ್‍ಗಳಿಗೆ ಬದಲಾಗಿ ಫ್ಲೋರೋಸ್ಕೆಂಟ್ ಬಲ್ಬ್‍ಗಳನ್ನು ಬಳಸುವುದರಿಂದ ಶೇ.75 ರಷ್ಟು ವಿದ್ಯುತ್ ಹಾಗೂ ಹಣ ಉಳಿತಾಯ ಮಾಡಬಹುದು. ( 1 ಸಾದಾರಣ ಇಂಡೊಸ್ಕೆಂಟ್ ಬಲ್ಬ್ 10 ಫ್ಲೋರೋಸ್ಕೆಂಟ್ ಬಲ್ಬ್‍ಗಳಷ್ಟು ವಿದ್ಯುತ್ ಬಳಸುತ್ತದೆ). ಅಲ್ಲದೇ ಫ್ಲೋರೋಸ್ಕೆಂಟ್ ಬಲ್ಬ್ ಕೋಣೆಯನ್ನು ತಂಪಾಗಿರಿಸುತ್ತದೆ. ಒಂದು ಸಮೀಕ್ಷೆ ಪ್ರಕಾರ ಭಾರತದಲ್ಲಿ ರಾತ್ರಿವೇಳೆ ಬೆಳಕಿಗಾಗಿ ಬಳಸುವ ವಿದ್ಯುತ್ತಿನ ಪ್ರಮಾಣ ಶೇ.35-40 ರಷ್ಟು. ಅಂದರೆ ಬಹುಪಾಲು ವಿದ್ಯುತ್ತನ್ನು ನಮ್ಮ ಬಲ್ಬ್‍ಗಳು ತಿಂದು ಹಾಕುತ್ತವೆ. ಅಈಐ/ಐಇಆ ಬಲ್ಬ್‍ಗಳ ಬಳಕೆಯಿಂದ ಈ ಪ್ರಮಾಣವನ್ನು ಶೇ.5 ಕ್ಕೆ ಇಳಿಸಬಹುದಾಗಿದೆ.
2. ಕಾಗದದ ಬಳಕೆ ಕಡಿಮೆ ಮಾಡೋಣ : ಇಂದು ಮುಂದುವರೆದ ರಾಷ್ಟ್ರಗಳಲ್ಲಿ ಕಾಗದದ ತಯಾರಿಕೆಗಾಗಿ ಪ್ರತಿವರ್ಷ 10ಕೋಟಿ ಮರಗಳ ಮರಗಳ ಮಾರಣಹೋಮ ಆಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರಗಳು ಪ್ರತಿವರ್ಷ ನಾಶವಾದರೆ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಮಾಹಿತಿ ತಂತ್ರಜ್ಞಾನ ಬಳಸಿ (Iಟಿಜಿoಡಿmಚಿಣioಟಿ ಖಿeಛಿhಟಿoಟogಥಿ) ಕಾಗದ ಪತ್ರಗಳ ಬಳಕೆ ಕಡಿಮೆ ಮಾಡಬಹುದಾಗಿದೆ. ಆನ್‍ಲೈನ್ ಬಳಸಿ ಬಹುತೇಕ ಪತ್ರಿಕೆಗಳನ್ನು ಓದಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ಕಾಗದ ಪತ್ರಗಳ ಬಳಕೆ ಕಡಿಮೆ ಮಾಡಿ ಮರಗಳನ್ನು ಸಂರಕ್ಷಿಸೋಣ.
3. ಸ್ವಿಚ್ ಆಫ್ ಮಾಡೋಣ : ಎಲೆಕ್ಟ್ರಾನಿಕ್ ಉಪಕರಣಗಾದಂತಹ ಟಿ.ವಿ, ಎ.ಸಿ, ರೆಫ್ರಿಜಿರೇಟರ್, ಕಂಪ್ಯೂಟರ್, ಫ್ಯಾನ್, ವಿದ್ಯುತ್ ಲೈಟ್ಸ್ ಮುಂತಾದವು ಬಳಕೆ ಇಲ್ಲದಾಗ ಸ್ವಿಚ್ ಆಫ್ ಮಾಡೋಣ. ಹೀಗೆ ಮಾಡುವುದರಿಂದ ಶೇ.10 ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ.
4. ಪ್ಲಾಸ್ಟಿಕ್‍ಗೆ ಟಾಟಾ ಹೇಳೋಣ : ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣನಾದ ರಾಕ್ಷಸನೆಂದರೆ ಪ್ಲಾಸ್ಟಿಕ್. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಕ್ಯಾಡ್ಮಿಯಂ, ಟೈಟಾನಿಯಂ ಡೈ ಆಕ್ಸೈಡ್, ಫಾಸ್ಪೇಟ್, ಥ್ಯಾಲೈಟ್, ಪಾಲಿಕ್ಲೋನಿನೇಟೆಡ್ ಬೈಫಿನೈಲ್, ಆರ್ತೋ ಟ್ರೈ ಕ್ರಿಸಾಯಿಕ್, ಎಥಲೀನ್, ಪಾಲಿವಿನೈಲ್ ಕ್ಲೋರೈಡ್, ಡಯಾಕ್ಸಿನ್ ಮತ್ತು ಸೀಸದಂತಹ ವಿಷಕಾರಕಗಳನ್ನು ಬಳಸುತ್ತಾರೆ. ನಾವು ಪ್ಲಾಸ್ಟಿಕನ್ನು ಬಳಸಿ ವಿವೇಚನೆ ಇಲ್ಲದೇ ಬಿಸಾಡುತ್ತೇವೆ. ಪ್ಲಾಸ್ಟಿಕ್ ವಸ್ತುಗಳು ಮಣ್ಣಿನಲ್ಲಿ ಕೊಳೆಯಲು ಸಾವಿರಾರು ವರ್ಷಗಳು ಬೇಕು. ಕೊಳೆಯುವ ಪ್ರಕ್ರಿಯೆಯಿಂದ ಮಣ್ಣು ಮಾಲಿನ್ಯವಾಗುತ್ತದೆ. ಹಲವು ಹಾನಿಕಾರಕ ಅನಿಲಗಳು ಬಿಡುಗಡೆಯಾಗುತ್ತವೆ. ಹಾನಿಕಾರಕ ಅನಿಲಗಳ ಸೇವನೆಯಿಂದ ಮಕ್ಕಳ ಮೂಳೆಗಳು ವಿರೂಪಗೊಳ್ಳುತ್ತವೆ, ನರಮಂಡಲಕ್ಕೆ ಧಕ್ಕೆ ಉಂಟಾಗುತ್ತದೆ, ಕಣ್ಣು ಮತ್ತು ಮೆದುಳಿಗೆ ಹಾನಿಯಾಗುತ್ತದೆ. ಆದ್ದರಿಂದ ಇವೆಲ್ಲವುಗಳಿಂದ ದೂರ ಇರಲು ಪ್ಲಾಸ್ಟಿಕ್‍ಗೆ ಟಾಟಾ ಹೇಳೋಣ. ಮಾರುಕಟ್ಟೆ ಅಥವಾ ಇತರೆ ಸಾಮಗ್ರಿ ಖರೀದಿಗಾಗಿ ಹೋದಾಗ ನಮ್ಮದೇ ವಆದ ಒಂದು ಚೀಲ ಜೊತೆಗಿರಲಿ. ಅಲ್ಲದೇ ಕಛೇರಿ ಮತ್ತು ಮನೆಗಳಲ್ಲಿ ಬಳಸಿ ಬಿಸಾಡುವ (ಜisಠಿosಚಿbಟe) ತಟ್ಟೆ/ಲೋಟಗಳ ಬದಲಾಗಿ ಶಾಶ್ವತ ತಟ್ಟೆ ಮತ್ತು ಲೋಟಗಳನ್ನು ಬಳಸುವ ರೂಢಿ ಬೆಳೆಸಿಕೊಳ್ಳೋಣ.
5. ತಣ್ಣೀರು ಬಳಸೋಣ : ನಾವು ಮನೆಯಲ್ಲಿ ಬಳಸುವ ಇಂಧನದ ಶೇ.20 ರಷ್ಟನ್ನು ನೀರು ಕಾಯಿಸಲು ಬಳಸುತ್ತೇವೆ. ಕೇವಲ ನೀರು ಕಾಯಿಸಲು ಇಷ್ಟೊಂದು ಪ್ರಮಾಣದ ಇಂಧನ ಬಳಸಿದರೆ ಭವಿಷ್ಯದಲ್ಲಿ ಇಂಧನದ ಕೊರತೆ ಎದುರಿಸಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ತಣ್ಣೀರ ಸ್ನಾನ ಮಾಡಲು ಮನಸ್ಸು ಮಾಡೋಣ. ಇದರಿಂದ ಇಂಧನ ಉಳಿತಾಯದ ಜೊತೆಗೆ ಪರಿಸರ ಸಂರಕ್ಷಣೆ ಮಾಡಬಹುದು. 
6. ವಿಲಾಸಿ ಜೀವನಕ್ಕೆ ಕಡಿವಾಣ ಹಾಕೋಣ : ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ವಿಲಾಸಿ ಜೀವನ ಹೆಚ್ಚು. ಎ.ಸಿ ಮತ್ತು ರೆಫ್ರಜರೇಟರ್‍ಗಳಿಂದ ವಾತಾವರಣಕ್ಕೆ ಮಾರಕವಾದ ಅhಟoಡಿo ಈಟoಡಿo ಅoಡಿboಟಿ(ಅಈಅ) ಬಿಡುಗಡೆಯಾಗುತ್ತದೆ. ಅಈಅ ಓಜೋನ್ ಪದರದ ಮೇಲೆ ದುಷ್ಪರಿಣಾಮ ಬೀರಿ ನೇರಳಾತೀತ ಕಿರಣಗಳು ಭೂಮಿಗೆ ಬೀಳಲು ಅನುವುಮಾಡಿಕೊಡುತ್ತದೆ. ಇದರಿಂದ ಹಾನಿಕಾರಕ ಚರ್ಮ ರೋಗಗಳು ಬಾಧಿಸುತ್ತವೆ. ಇವೆಲ್ಲವುಗಳಿಂದ ದೂರ ಇರಲು ವಿಲಾಸಿ ಜೀವನಕ್ಕೆ ಕಡಿವಾಣ ಹಾಕಿ ನಿಸರ್ಗಕ್ಕೆ ಪೂರಕವಾಗುವಂತಹ ಜೀವನ ನಡೆಸಲು ಹೊಂದಾಣಿಕೆ ಮಾಡಿಕೊಳ್ಳೋಣ.
7. ನೀರನ್ನು ಮಿತವಾಗಿ ಬಳಸೋಣ : ನೀರು ಅತ್ಯಮೂಲ್ಯ ಹಾಗೂ ಕೊರತೆಯಲ್ಲಿರುವ ಸಂಪನ್ಮೂಲ. ಇಂದು ಪ್ರಯೊಬ್ಬರೂ ನೀರು ಸಂರಕ್ಷಣೆಯತ್ತ ಚಿತ್ತ ಹರಿಸಬೇಕಾಗಿದೆ. ನೀರಿನ ಸಂರಕ್ಷಣಾ ತತ್ವಗಳನ್ನು ಪ್ರತಿ ಮನೆಯಲ್ಲೂ ಅನುಸರಿಸಬೇಕಾಗಿದೆ. ನೀರಿನ ಅನಗತ್ಯ ಬಳಕೆಯನ್ನು ತಪ್ಪಿಸಬೇಕು. ನೀರಿನ ಪುನರ್ಬಳಕೆ ಬಗ್ಗೆ ಜಾಗ್ರತೆ ವಹಿಸಬೇಕು. ಪ್ರತಿಯೊಬ್ಬರೂ ಜಲ ಸಾಕ್ಷರರಾಗಬೇಕು.
8. ಅನಗತ್ಯ ವಸ್ತುಗಳನ್ನು ದಾನ ಮಾಡೋಣ : ನಿಮಗೆ ಅನಗತ್ಯವಾದ ಆದರೆ ಇತರರು ಉಪಯೋಗಿಸಬಹುದಾದಂತಹ ಬಟ್ಟೆ, ಪಾತ್ರೆ, ಫರ್ನೀಚರ್ ಇತ್ಯಾದಿಗಳಿದ್ದರೆ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಅವಶ್ಯಕತೆ ಇದ್ದವರಿಗೆ ದಾನ ಮಾಡೋಣ. ಬೇರೆಯವರಿಗೆ ನೀಡಲು ಹಿಂಜರಿಕೆಯಾದರೆ ಅಂತಹವುಗಳನ್ನು ಸಂಗ್ರಹಿಸಲೆಂದೇ ಇರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾಹಿತಿ ಕೊಡಿ. ಅವರು ನಿಮ್ಮ ಮನೆ ಬಾಗಿಲಿಗೇ ಬಂದು ಸಂಗ್ರಹಿಸಿ ಅವಶ್ಯಕತೆ ಇದ್ದವರಿಗೆ ನೀಡುತ್ತಾರೆ. ಇದರಿಂದ ನಿಮ್ಮಲ್ಲಿ ಹಾಳು ಮತ್ತು ಕೊಳೆ ತೊಲಗುತ್ತದೆ ಹಾಗೂ ಇತರರಿಗೆ ಉಪಯೋಗವಾಗುತ್ತದೆ.
9. ಸಾರ್ವಜನಿಕ ಸಾರಿಗೆ ಬಳಸೋಣ : ಒಂದು ಸಮೀಕ್ಷೆ ಪ್ರಕಾರ ಶೇ.30 ರಷ್ಟು ಇಂಗಾಲದ ಡೈ ಆಕ್ಸೈಡ್ ಖಾಸಗೀ ವಾಹನಗಳಿಂದ ಹೆಚ್ಚುತ್ತದೆ. ಇದನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆ ಬಳಸುವುದು ಸೂಕ್ತ. ಸಾಧ್ಯವಾದ ಕಡೆಗಳಲ್ಲಿ ಕಾಲ್ನಡಿಗೆಯಿಂದಲೇ ಓಡಾಡೋಣ ಅಥವಾ ಬೈಸಿಕಲ್ ಬಳಸೋಣ. ಇದರಿಂದ ಡೀಸಲ್ ಮತ್ತು ಪೆಟ್ರೋಲ್‍ನ ಅನಗತ್ಯ ಬಳಕೆ ತಪ್ಪುತ್ತದೆ ಮತ್ತು ಶರೀರಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಪರಿಸರಕ್ಕೆ ಆಗುವ ಹಾನಿ ಕಡಿಮೆಯಾಗುತ್ತದೆ.
10. ಮರಗಳ ಮಾರಣ ಹೋಮ ನಿಲ್ಲಲಿ : ಇಂದು ಅಭಿವೃದ್ದಿ ಹೆಸರಿನಲ್ಲಿ ಪ್ರತಿವರ್ಷ ಶೇ.10-15 ರಷ್ಟು ಮರಗಳ ಮಾರಣಹೋಮ ನಡೆಯುತ್ತದೆ. ಇದರಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‍ನ ಪ್ರಮಾಣ ಅಧಿಕವಾಗುತ್ತದೆ ಹಾಗೂ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಸಾಧ್ಯವಾದಷ್ಟೂ ಪ್ರತಿ ಮನೆಯ ಹತ್ತಿರ 2 ಗಿಡಮರಗಳಿರಲಿ. ಮನೆಯ ಮುಂದೆ ಗಿಡಮರಗಳು ಕೇವಲ ಅಂದಕ್ಕಾಗಿ ಅಲ್ಲ. ಪರಿಸರವನ್ನು ಸ್ವಚ್ಛ ಹಾಗೂ ತಂಪಾಗಿರಿಸಲು ಅವು ಅವಶ್ಯಕ. ಮನೆಯಲ್ಲಿ ಉತ್ಪನ್ನವಾಗುವ ಇಂಗಾಲದ ಡೈ ಆಕ್ಸೈಡನ್ನು ಹೊಡೆದೋಡಿಸಿ ಶುದ್ದವಾದ ಆಮ್ಲಜನಕ ಪಡೆಯಲು ಸಹಕಾರಿ ಹಾಗೂ ಶುದ್ದ ಗಾಳಿ ¸ಸಂಚಾರಕ್ಕಾಗಿ ಯಾವುದೇ ಫ್ರೆಶ್‍ನರ್‍ಗಳ ಅವಶ್ಯಕತೆ ಇರುವುದಿಲ್ಲ. 
`ಪರಿಸರ ಸಂರಕ್ಷಣೆ ಎಂಬ ಪದ ದಿನೇ ದಿನೇ ಅರ್ಥಹೀನವಾಗುತ್ತಿದೆ’ ಎಂಬ ಮಾತು ಕೇಳಿಬರುತ್ತಿವೆ. ಏಕೆಂದರೆ ಅದು ಕೇವಲ ವೇದಿಕೆ ಹಾಗೂ ಪುಸ್ತಕದ ಬದನೆಕಾಯಿ ಎನ್ನುವಂತಾಗಿದೆ. ಒಂದಂತೂ ನಿಜ, ಒಂದಲ್ಲ ಒಂದು ದಿನ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನೂ ಈ ಬಗ್ಗೆ ಎಚ್ಚೆತ್ತುಕೊಳ್ಳಬಾಕಾದ ಪರಿಸ್ಥಿತಿ ಬಂದೊದಗುತ್ತದೆ. “ಕಾಲಾಯ ತಸ್ಮೈ ನಮಃ” ಎನ್ನುವಂತೆ ಕಾಲವೇ ಎಲ್ಲಕ್ಕೂ ಉತ್ತರಿಸಲಿದೆ ಎಂಬುದನ್ನು ನಾವೀಗಾಗಲೇ ಪ್ರಕೃತಿಯಲ್ಲಿ ನಡೆಯುತ್ತಿರುವ ವೈಪರೀತ್ಯಗಳಿಂದ ತಿಳಿಯಬಹುದಾಗಿದೆ. ಭವಿಷ್ಯ ಕರಾಳವಾಗಬಾರದು ಅಲ್ಲವೇ ? ಆದ್ದರಿಂದ ಈಗಿಂದಲೇ ಪರಿಸರ ಸಂರಕ್ಷಣೆಯ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯ ಕರ್ತವ್ಯವೂ ಆಗಿದೆ. ಇದನ್ನರಿತು ನಾವೆಲ್ಲರೂ ಬಾಳಬೇಕಾಗಿದೆ.
- ಆರ್.ಬಿ.ಗುರುಬಸವರಾಜ.

ತಂಬಾಕು ವಿರೋಧಿ ಶಿಕ್ಷಣ

ತಂಬಾಕು ವಿರೋಧಿ ಶಿಕ್ಷಣ

ಇಂದು ದೇಶವನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿ ಪಿಡುಗುಗಳಲ್ಲಿ ಅತೀ ದೊಡ್ಡ ಪಿಡುಗು ಎಂದರೆ ತಂಬಾಕು. ಇದು ಏಡ್ಸ್, ಡ್ರಗ್ಸ್, ಕುಡಿತ, ಆತ್ಮಹತ್ಯೆ ಮತ್ತು ಕೊಲೆಗಿಂತ ಹೆಚ್ಚು ಅಪಾಯಕಾರಿ. ಭಾರತದಲ್ಲಿ ಪ್ರತಿವರ್ಷ ತಂಬಾಕು ಕ್ಯಾನ್ಸರ್‍ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ ಎಂದು `ಭಾರತೀಯ ವೈದ್ಯ ಸಂಸ್ಥೆ(AIMS)ಹೇಳಿದೆ. ಇದರಲ್ಲಿ ಪುರುಷರ ಸಂಖ್ಯೆ ಅಧಿಕ. ಅದರಲ್ಲೂ ಧೂಮಪಾನಿಗಳ ಸಂಖ್ಯೆ ಇನ್ನೂ ಅಧಿಕ. ಶೇ.56 ರಷ್ಟು ಪುರುಷರು ಮತ್ತು ಶೇ.44 ರಷ್ಟು ಮಹಿಳೆಯರು ತಂಬಾಕು ಕ್ಯಾನ್ಸರ್‍ಗೆ ಬಲಿಯಾಗುತ್ತಿದ್ದಾರೆ. ಶೇ.82 ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕಾಯಿಲೆ, ಪುಪ್ಪುಸದ ಕ್ಯಾನ್ಸರ್‍ಗೆ ತಂಬಾಕು ಕಾರಣ ಎಂದು ಧೃಢಪಟ್ಟಿದೆ.
                    ಕಳೆದ ದಶಕದ ಅಂಕಿ-ಅಂಶಗಳನ್ನು ಗಮನಿಸಿದರೆ, ದಶಕದ ಪ್ರಾರಂಭಕ್ಕಿಂತ ಅಂತ್ಯದ ವೇಳೆಗೆ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬರುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ 2020 ರ ವೇಳೆಗೆ ತಂಬಾಕು ಸಂಬಂಧಿ ಕಾಯಿಲೆ ಮತ್ತು ಸಾವುಗಳ ಪ್ರಮಾಣ.8.9 ರಷ್ಟು ಹೆಚ್ಚುವ ಭೀತಿ ಇದೆ.
                   ಈ ಎಲ್ಲಾ ಅಂಕಿ-ಅಂಶಗಳನ್ನು ಗಮನಿಸಿದರೆ ತಂಬಾಕು ಸೇವನೆ ಪ್ರತಿವರ್ಷ ಅಧಿಕವಾಗುತ್ತಿರುವುದು ಶೋಚನೀಯ. ಅದರಲ್ಲೂ ಮಕ್ಕಳು ಮತ್ತು ಯುವಜನತೆ ಅಧಿಕ ಪ್ರಮಾಣದಲ್ಲಿ ಈ ಪಿಡುಗಿಗೆ ತುತ್ತಾಗುತ್ತಿರುವುದು ಅಘಾತಕಾರಿಯಾಗಿದೆ. ಒಂದು ಸಮೀಕ್ಷೆ ಪ್ರಕಾರ 12-14 ವಯೋಮಾನದ ಶೇ.21 ಬಾಲಕರು ಮತ್ತು ಶೇ.2 ಬಾಲಕಿಯರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಮತ್ತು ಯುವಕರು ತಂಬಾಕು ಉತ್ಪನ್ನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. 
ಕಾರಣಗಳು
ದೃಶ್ಯ ಮಾಧ್ಯಮ ಹಾಗೂ ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ವೈಭವೀಕರಿಸಿ ತೋರಿಸುವುದು.
ಕುಟುಂಬ ಮತ್ತು ಸುತ್ತಲಿನ ಪರಿಸರದಲ್ಲಿನ ಬಹುತೇಕ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿರುವುದು.
ಸ್ನೇಹಿತರನ್ನು ಒಲಿಸಿಕೊಳ್ಳಲು/ಒತ್ತಾಯಕ್ಕಾಗಿ ಅಥವಾ ಅನುಕರಣೆಯಿಂದಾಗಿ ತಂಬಾಕು ಉತ್ಪನ್ನಗಳಿಗೆ ಬಲಿಯಾಗುತ್ತಿರುವುದು.
ವಿರಾಮವೇಳೆ ಕಳೆಯಲು ಹಾಗೂ ಮನೋರಂಜನೆಗಾಗಿ.
ಜಾಹೀರಾತಿನ ಪ್ರಭಾವಕ್ಕೆ ಒಳಗಾಗುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳು
ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ತಂಬಾಕಿನಲ್ಲಿರುವ ‘ನಿಕೋಟಿನ್’ ಅತ್ಯಂತ ವಿಷಕಾರಿ ಎಂಬುದು ಸಾಬೀತಾಗಿದೆ. ನಿಕೋಟಿನ್ ಎಷ್ಟು ವಿಷಕಾರಿ ಎಂದರೆ, 6 ಮಿ.ಗ್ರಾಂ ನಿಕೋಟಿನ್‍ನ್ನು ನೇರವಾಗಿ ಒಂದು ನಾಯಿಗೆ ಪ್ರಯೋಗಿಸಿದರೆ ಕೆಲವೇ ಸೆಕೆಂಡುಗಳಲ್ಲಿ ನಾಯಿ ಸಾಯುತ್ತದೆ. ಇಂತಹ ನಿಕೋಟಿನ್ ನಮ್ಮ ಬಾಯಿಗೆ ಪ್ರವೇಶಿಸಿದ 10 ಸೆಕೆಂಡುಗಳಲ್ಲಿ ಮೆದುಳಿಗೆ ಹೋಗಿ ‘ಡೊಪಾಮಿನ್’ ಎಂಬ ವಿಷವನ್ನು ಉತ್ಪಾದಿಸಿ ಮೆದುಳಿಗೆ ಬರುವ ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ. ಕ್ರಮೇಣವಾಗಿ ಇದು ಬಾಯಿಯ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್‍ಗೆ ತುತ್ತಾಗುವರು, ಅಲ್ಲದೇ ಅನ್ನನಾಳದ, ಹೊಟ್ಟೆಯ, ಮೂತ್ರಪಿಂಡದ, ಮೂತ್ರಕೋಶದ, ಮೇದೋಜೀರಕ ಗ್ರಂಥಿಯ, ಗರ್ಭಕೋಶದ ಕ್ಯಾನ್ಸರ್‍ಗೆ ಕಾರಣವಾಗಬಹುದು.
ತಂಬಾಕನ್ನು ಹದಗೊಳಿಸಲು ಮತ್ತು ಸ್ವಾದಿಷ್ಟಗೊಳಿಸಲು 4 ಸಾವಿರಕ್ಕಿಂತ ಹೆಚ್ಚಿನ ವಿಷಪೂರಿತ ರಸಾಯನಿಕಗಳನ್ನು ಬೆರೆಸುತ್ತಾರೆ. ಅಲ್ಲದೇ ಚರ್ಮ ಹದಮಾಡಲು ಬಳಸುವ ಅತಿ ತೀಕ್ಷ್ಣವಾದ ರಸಾಯನಿಕಗಳನ್ನು ಕೂಡಾ ಬಳಸುವುದರಿಂದ ಬಾಯಿಯ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ರಸಾಯನಿಕ ಬೆರೆಸದಿದ್ದಾಗಲೂ ನಿಕೋಟಿನ್‍ನ ಪ್ರಮಾಣ ಪ್ರತಿಪೌಂಡಿಗೆ 22.8 ಗ್ರಾಂ ಇರುತ್ತದೆ. ಅಲ್ಲದೇ ಅದರಲ್ಲಿ ಕೊಲಿಡೀಸ್, ಅಮೋನಿಯಾ, ಪೈಯರಡೀನ್, ಕಾರ್ಬನ್ ಮೋನಾಕ್ಸೈಡ್‍ಗಳೆಂಬ ಪ್ರತ್ಯೇಕ ವಿಷಕಾರಿಗÀಳಿವೆ. ಧೂಮಪಾನದೊಂದಿಗೆ ಹೊಗೆ ಮಾತ್ರ ದೇಹ ಸೇರುವುದಿಲ್ಲ. ಅದರ ಜೊತೆಗೆ ಅರ್ಸೆನಿಕ್, ಸೈನೈಡ್, ಫಾರ್ಮಾಲೈಡ್ ಮುಂತಾದ ವಿಷಕಾರಿಗಳು ಸೇರುತ್ತವೆ.
ತಂಬಾಕು ಸೇವನೆಯಿಂದ ನಮಗೆ ಎರಡು ರೀತಿಯ ನಷ್ಟಗಳಾಗುತ್ತವೆ. ಮೊದಲನೆಯದು ಸಾಮಾಜಿಕ ಸ್ಥಾನಮಾನ, ಗೌರವಕ್ಕೆ ಕುಂದುಂಟಾಗುತ್ತದೆ. ಎರಡನೆಯದು ಆರ್ಥಿಕ ನಷ್ಟವಾಗುತ್ತದೆ. ಹೇಗೆಂದರೆ, ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ(ಬೀಡಿ/ಸಿಗರೇಟು/ಗುಟ್ಕಾ/ಪಾನ್ ಮಸಾಲ ಇತ್ಯಾದಿ) ದಿನವೊಂದಕ್ಕೆ 30-50 ರೂ. ಖರ್ಚು ಮಾಡುತ್ತನೆ ಎಂದುಕೊಂಡರೆ, ಒಂದು ವರ್ಷಕ್ಕೆ 14,600 ರೂ.ಗಳನ್ನು ಹಾಗೂ 10 ವರ್ಷಕ್ಕೆ 1,46,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇಷ್ಟೊಂದು ಮೊತ್ತದ ಹಣವನ್ನು ತಂಬಾಕು ಸೇವನೆಗಾಗಿ ಖರ್ಚು ಮಾಡುವ ವೇಳೆಗೆ ಅವನ ಆರೋಗ್ಯ ಹದಗೆಟ್ಟಿರುತ್ತದೆ. ಆರೋಗ್ಯ ಸುಧಾರಣೆಗಾಗಿ ಲಕ್ಷ ಲಕ್ಷಗಳೇ ಖರ್ಚಾಗಬಹುದು. ಹೀಗೆ ತಂಬಾಕು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತದೆ. 
ಮುಕ್ತಿಮಾರ್ಗ
ತಂಬಾಕು ಸೇವನೆ ಇಂದು ಸಮುದಾಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಬಲವಾದ ವಿರೋಧದ ಅಗತ್ಯವಿದೆ. ತಂಬಾಕು ವಿರೋಧಿಸುವ ಪ್ರತಿಯೊಬ್ಬರೂ ಕೆಳಗಿನ ಅಂಶಗಳತ್ತ ಚಿತ್ತವಹಿಸಬೇಕಾಗಿದೆ.
ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಪರಿಹಾರ ಮಾರ್ಗಗಳನ್ನು ಉನ್ನತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಪ್ರೋತ್ಸಾಹಿಸುವುದು.
ಮಕ್ಕಳು ಮತ್ತು ಯುವಜನತೆಯನ್ನು ತಂಬಾಕು ಮುಕ್ತರನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಶಾಲಾ ಶಿಕ್ಷಣದ ಮೂಲಕ ತಂಬಾಕು ಬಳಕೆಯನ್ನು ತಡೆಯಲು ಪ್ರಯತ್ನಿಸಬೇಕು.
ಶಾಲೆಗಳಲ್ಲಿ ಚರ್ಚೆ, ಸಂವಾದ, ಉಪನ್ಯಾಸ, ವಿಚಾರಗೋಷ್ಟಿ, ನಾಟಕ, ವೀಡಿಯೋ ಪ್ರದರ್ಶನಗಳಂತಹ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮಿಕೊಂಡು ಅವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ಬೆಂಬಲಿಸುವುದು.
ಮಕ್ಕಳು ಮತ್ತು ಯುವಜನತೆ ಸದಾಕಾಲ ಜ್ಞಾನಾಧಾರಿತ/ ಅಭಿವೃದ್ದಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು.
ಹತಾಶೆ ಮತ್ತು ಖಿನ್ನತೆಯಿಂದ ಮುಕ್ತರನ್ನಾಗಿಸುವುದು.
ವಿರಾಮ ವೇಳೆಯ ಸದುಪಯೋಗಕ್ಕಾಗಿ ಕ್ರೀಡೆಗಳು/ ಓದುವ ಹವ್ಯಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡುವುದು.
ಮಾಧ್ಯಮಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ನೀಡುವುದು.
ತಂಬಾಕನ್ನು ತಿರಸ್ಕರಿಸುವ ಕೌಶಲಗಳನ್ನು ಅಭಿವೃದ್ದಿಪಡಿಸುವದು ಮತ್ತು ತರಬೇತಿ ನೀಡುವದು.
ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.
ತಂಬಾಕು ಸೇವನೆ ಪ್ರಚೋದಿಸುವ ದೃಶ್ಯಗಳು ಮತ್ತು ಜಾಹೀರಾತುಗಳಿಗೆ ತಡೆಯೊಡ್ಡುವುದು.
ಕಾನೂನುಗಳಿಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ತಂಬಾಕು ಉತ್ಪನ್ನಗಳಿಗೆ ಕಡಿವಾಣ   
     ಹಾಕುವುದು.
ತಂಬಾಕು ವಿರೋಧಿ ಹೋರಾಟ ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಬೆಂಬಲ ಅಗತ್ಯ. ಇದಕ್ಕೆ ಪೂರಕವಾಗಿ ಸರ್ಕಾರದ ನೀತಿ ನಿಯಮಗಳು ಬದಲಾಗಬೇಕು. ಪ್ರತಿಯೊಬ್ಬರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಬನ್ನಿ! ಎಲ್ಲರೂ ಕೈ ಜೋಡಿಸಿ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಬಲಪಡಿಸೋಣ.
- ಆರ್.ಬಿಗುರುಬಸವರಾಜ. ಸ.ಶಿ


    

  

ಗ್ರೀಟಿಂಗ್ ಕಾರ್ನರ್

ಕ್ಲಾಸ್ ರೂಂನಲ್ಲೊಂದು ಗ್ರೀಟಿಂಗ್ ಕಾರ್ನರ್

ಜನವರಿ ಬಂತೆಂದರೆ ಸಾಕು ಎಲ್ಲಾ ಅಂಗಡಿಗಳಲ್ಲೂ ಗ್ರೀಟಿಂಗ್ ಕಾರ್ಡಗಳದ್ದೇ ಕಾರುಬಾರು. ಹೊಸವರ್ಷ ಹಾಗೂ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಲು ಗ್ರೀಟಿಂಗ್ಸ್‍ಗಳಿಗೆ ಮೊರೆ ಹೋಗುವುದು ವಾಡಿಕೆ.
ಇಂತಹ ಗ್ರೀಟಿಂಗ್ ಕಾರ್ಡಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ತಾವೇ ತಯಾರಿಸುವಂತಾದರೆ ಉತ್ತಮವಲ್ಲವೇ? ಅದರಲ್ಲೂ ಶಾಲೆಯಲ್ಲಿ ಇಂತದ್ದೊಂದು ಕಲಿಕೆ ಇದ್ದರೆ ಇನ್ನೂ ಅನುಕೂಲವಲ್ಲವೇ?
ಸರ್ವೇ ಸಾಮಾನ್ಯವಾಗಿ ಮಕ್ಕಳಿಗೆ ಪಠ್ಯೇತರ ಚಟಿವಟಿಕೆಗಳಲ್ಲಿ ಆಸಕ್ತಿ ಹೆಚ್ಚು. ಇಂತಹ ಪಠ್ಯೇತರ ಕಲಿಕೆಯನ್ನು ಪಠ್ಯ ಕಲಿಕೆಗೆ ಅನ್ವಯಿಸಿಕೊಳ್ಳಬೇಕೆಂಬುದು ಎನ್.ಸಿ.ಎಫ್-2005 ರ ಆಶಯ. ಅಂದರೆ ಕಲಿಕೆಯನ್ನು ಸುಮನೋಹರಗೊಳಿಸಿ, ತಮ್ಮೊಳಗೆ ತಾವೇ ಸಂತೋಷಿಸುವ, ತೃಪ್ತಿ ಪಡುವ ಕಲೆಯನ್ನು ಮಕ್ಕಳು ಕರಗತ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಆ ಕಲಿಕೆಗೆ ಒಂದು ಗಟ್ಟಿಯಾದ ನೆಲೆಗಟ್ಟು ದೊರೆಯುತ್ತದೆ. ತರಗತಿಯಲ್ಲಿ ಗ್ರೀಟಿಂಗ್ ಕಾರ್ಡ ತಯಾರಿಕೆಯಿಂದ ಮಕ್ಕಳಲ್ಲಿ ಕಲಾಸಕ್ತಿ ಮೂಡುತ್ತದೆ. ಅಲ್ಲದೇ ಸೃಜನಾತ್ಮಕ ಕಲೆ ಸಿದ್ದಿಸುತ್ತದೆ. ಇಂತಹ ಒಂದು ಪ್ರಯತ್ನಕ್ಕೆ ಸಾಕ್ಷಿಯಾದವರು ಬಳ್ಳಾರಿ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಮಕ್ಕಳು. ಈಗ ನೀವೂ ಪ್ರಯತ್ನಿಸಿ.


ಗ್ರಿಟಿಂಗ್ಸ್ ತಯಾರಿಕೆಯಲ್ಲಿರುವ ಮಕ್ಕಳು

ತಯಾರಿ ಹೀಗಿರಲಿ : ಹಳೆಯ ಆಮಂತ್ರಣ ಪತ್ರಿಕೆಗಳಲ್ಲಿನ ಸಣ್ಣ ಸಣ್ಣ ಚಿತ್ರಗಳು, ವೃತ್ತ ಪತ್ರಿಕೆಗಳಲ್ಲಿನ ಆಕರ್ಷಕ ಚಿತ್ರಗಳು,  ಸ್ವಾತಂತ್ರ ಹೋರಾಟಗಾರರು, ಕವಿಗಳು, ಸಾಹಿತಿಗಳು, ವಿಜ್ಞಾನಿಗಳು, ಸಂತರು, ದಾಸರು, ವಚನಕಾರರು, ಕ್ರೀಡಾಪಟುಗಳು ಹೀಗೆ ವಿವಿಧ ಕ್ಷೇತ್ರಗಳ ಸಾಧಕರ ಭಾವಚಿತ್ರಗಳು ಹಾಗೂ ಅವರ ಹಿತನುಡಿಗಳನ್ನು ಮಕ್ಕಳೇ ಸಂಗ್ರಹಿಸಿ ಕತ್ತರಿಸಿ ಇಟ್ಟುಕೊಳ್ಳುವುದು. ಅಗತ್ಯವಾದಷ್ಟು ವಾಟರ್ ಕಲರ್ಸ್, ಸ್ಕೆಚ್ ಪೆನ್‍ಗಳು, ಡ್ರಾಯಿಂಗ್ ಹಾಳೆ, ಬಣ್ಣ ಬಣ್ಣದ ಕಾಗದಗಳು, ಡಿಸೈನ್ ಪೇಪರ್ಸ್, ಗ್ಲಾಸ್ ಪೇಪರ್ಸ್ ಇತ್ಯಾದಿ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ್ಳಲು ತಿಳಿಸಿ.
ಭಾವನೆಗಳಿಗೆ ಬಣ್ಣ ಹಚ್ಚಿ : ಮಕ್ಕಳು ಸಂಗ್ರಹಿಸಿದ ಸಾಮಗ್ರಿಗಳನ್ನು ಬಳಸಿಕೊಂಡು ಡ್ರಾಯಿಂಗ್ ಹಾಳೆಯಲ್ಲಿ ಗ್ರೀಟಿಂಗ್ಸ್ ತಯಾರಿಸಲು ಮಾರ್ಗದರ್ಶನ ನೀಡಿ. ಮಕ್ಕಳಿಗೆ ಬೆರಳು ತೋರಿಸಿದರೆ ಹಸ್ತವನ್ನೇ ನುಂಗುತ್ತಾರೆ. ಅಂದರೆ ಶಿಕ್ಷಕರು ನೀಡಿದ ಮಾರ್ಗದರ್ಶನದಿಂದ ಅತ್ಯಾಕರ್ಷಕವಾದ ಗ್ರೀಟಿಂಗ್ ಕಾರ್ಡಗಳನ್ನು ತಯಾರಿಸುತ್ತಾರೆ. ಅದರಲ್ಲಿ ಆಯಾ ದಿನ(ಹೊಸವರ್ಷ, ಸಂಕ್ರಾತಿ, ಯುಗಾದಿ, ಅಂತರರಾಷ್ಟ್ರೀಯ ಮಹಿಳಾ ದಿನ, ವಿಶ್ವ ಪರಿಸರ ದಿನ, ಸ್ವಾತಂತ್ರ ದಿನ , ಗಣರಾಜೋತ್ಸವ ಇತ್ಯಾದಿ)ಕ್ಕೆ ಅನುಕೂಲವಾಗುವಂತಹ ಸಂದೇಶದ ಸಾರಾಂಶಗಳನ್ನು ಮಕ್ಕಳು ತಮ್ಮ ಹಸ್ತಾಕ್ಷರಗಳಲ್ಲೇ ಬರೆಯಲಿ. ಹೀಗೆ ತಯಾರಾದ ಗ್ರೀಟಿಂಗ್ ಕಾರ್ಡಗಳನ್ನು ತರಗತಿ ಕೋಣೆಯಲ್ಲಿ ನೇತುಹಾಕಿ. ಇದರಿಂದ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮತ್ತು ಸ್ಪೂರ್ತಿ ಮೂಡುತ್ತದೆ.
ಮಕ್ಕಳು ರಚಿಸಿದ ಗ್ರೀಟಿಂಗ್ಸ್
ಮೌಲ್ಯಗಳ ಸಂವರ್ಧನೆ : ಇಂತಹ ಸೃಜನಾತ್ಮಕ ಚಟುವಟಿಕೆಗಳಿಂದ ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆಯ ಜೊತೆಜೊತೆಗೆ ಆತ್ಮಗೌರವ ಹಾಗೂ ವ್ಯಕ್ತಿಗೌರವಗಳಂತಹ ಮೌಲ್ಯಗಳು ಬೆಳೆಯುತ್ತವೆ. ಅಲ್ಲದೇ ಅವರಲ್ಲಿ ಪರಸ್ಪರ ಸಹಕಾರ, ಸೇವಾಮನೋಭಾವ, ಇತರರ ಕಾರ್ಯವನ್ನು ಮೆಚ್ಚುವ ಹಾಗೂ ವಿಭಿನ್ನತೆಗೆ ತಮ್ಮನ್ನು ಒಡ್ಡಿಕೊಳ್ಳುವ ಗುಣಗಳು ಬೆಳೆಯುತ್ತವೆ. ಮೌಲ್ಯಗಳ ಅಳವಡಿಕೆಗೆ ಸೃಜನಾತ್ಮಕ ಕಲಿಕೆ ರಹದಾರಿಯಾಗುತ್ತದೆ. ಇಂತಹ ಸೃಜನಶೀಲತೆಯನ್ನು ಪ್ರಾಥಮಿಕ ಹಂತದಿಂದಲೇ ಬೆಳೆಸಿದರೆ ಮಗುವಿನ ಸರ್ವಾಂಗೀಣ ಅಭಿವೃದ್ದಿಗೆ ಪೂರಕ ವಾತಾವರಣ ದೊರೆಯುತ್ತದೆ ಹಾಗೂ ಮಗುವನ್ನು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ( ಸಿ.ಸಿ.ಇ)ಕ್ಕೆ ಒಳಪಡಿಸಲು ಸಹಕಾರಿಯಾಗುತ್ತದೆ.

ಪತ್ರಸಂದೇಶ : ಗ್ರೀಟಿಂಗ್ ಕಾರ್ಡ ತಯಾರಿಸಲು ಡ್ರಾಯಿಂಗ್ ಹಾಳೆಯ ಬದಲು ಅಂಚೆ ಇಲಾಖೆಯ 50 ಪೈಸೆ ಮುಖಬೆಲೆಯ ಪತ್ರಗಳನ್ನು ಬಳಸಿದರೆ ಇನ್ನೂ ಉತ್ತಮ. ಇದರಲ್ಲಿಯ ಮುಖಪುಟದಲ್ಲಿ ಮಕ್ಕಳು ತಮ್ಮಿಚ್ಛೆಯ ಗ್ರೀಟಿಂಗ್ ರಚಿಸಲಿ. ಇನ್ನೊಂದು ಬದಿಯ ಪುಟದಲ್ಲಿ ತಮ್ಮ ಹೆಸರು, ತರಗತಿ, ಶಾಲಾ ವಿಳಾಸ ಬರೆಯಲಿ. ಇದನ್ನು ತಮ್ಮ ಬಂಧುಗಳಿಗೆ, ಸ್ನೇಹಿತರಿಗೆ, ಸಾಹಿತಿಗಳಿಗೆ, ಕವಿಗಳಿಗೆ, ಕಲಾಭಿಮಾನಿಗಳಿಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಥವಾ ಇಲಾಖಾ ಅಧಿಕಾರಿಗಳಿಗೆ ಕಳಿಸಲಿ. ಖಂಡಿತ ಅವರಿಂದ ಉತ್ತಮವಾದ ಪ್ರತಿಕ್ರಿಯೆ ಬಂದೇ ಬರುತ್ತದೆ. ಇದರಿಂದ ಮಕ್ಕಳಿಗೆ ವಿವಿಧ ಕ್ಷೇತ್ರಗಳ ಸಾಧಕರ ಪರಿಚಯ ಹಾಗೂ ಸಂಪರ್ಕ ದೊರೆಯುತ್ತದೆ. ಪಠ್ಯ ಕಲಿಕೆಗೆ ಉತ್ಸಾಹ ಬರುತ್ತದೆ.
ಮಕ್ಕಳ ಗ್ರೀಟಿಂಗ್ಸ್ ವೀಕ್ಷಿಸುತ್ತಿರುವ ಶಿಕ್ಷಕರು

ಶಿಕ್ಷಣವೆಂದರೆ ಕೇವಲ ಬೌದ್ದಿಕ ಬೆಳವಣಿಗೆಯ ಕಸರತ್ತು ಅಲ್ಲ. ಅದು ಬೆಳೆಯುತ್ತಿರುವ ಮಗುವಿನ ಭಾವನಾ ಸಮುಚ್ಛಯವನ್ನು ಆರೋಗ್ಯಕರವಾಗಿ ಬೆಳೆಯಲು ಮುಕ್ತ ಅವಕಾಶ ಕೊಡುವಂತಿರಬೇಕು ಅಲ್ಲವೇ?
                                                                                    - ಆರ್.ಬಿ.ಗುರುಬಸವರಾಜ.