November 19, 2014

ಕ್ರಿಯೆಟಿವಿಟಿ

ದಿನಾಂಕ 19-11-2014 ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿನ ನನ್ನ ಲೇಖನ "ಕ್ರಿಯೆಟಿವಿಟಿ ಕ್ರಿಯೇಟ್ ಮಾಡ್ಕೊಳ್ಳಿ"

ಕ್ರಿಯೆಟಿವಿಟಿ ಕ್ರಿಯೇಟ್ ಮಾಡ್ಕೊಳ್ಳಿ!

ಹಳೆಯ ಆಲೋಚನೆಗಳಿಂದ ಬೇಜಾರಾಗಿದೆಯೇ? ಹೊಸ ಆಲೋಚನೆಗಳನ್ನು, ವಿಚಾರಗಳನ್ನು ಹುಡುಕುವ ಆಸೆ ಇದೆಯಾ? ಹಾಗಾದರೆ ಮೊದಲು ನಿಮ್ಮ ಕ್ರಿಯೆಟಿವಿಟಿಯನ್ನು ಕ್ರಿಯೇಟ್ ಮಾಡ್ಕೊಳ್ಳಿ. ಏನು? ಆಶ್ಚರ್ಯವಾಗುತ್ತಿದೆಯಾ? ಆಶ್ಚರ್ಯವಾದರೂ ಸತ್ಯ. ಸೃಜನಶೀಲತೆ ಜನ್ಮಧಾರಭ್ಯ ಬರುತ್ತದೆ ಎಂದು ಹೇಳುವರಾದರೂ ನಿಮ್ಮ ಸೃಜನಶೀಲತೆಯನ್ನು ನೀವೇ ಹೆಚ್ಚಿಸಿಕೊಳ್ಳಬಹುದು. ನಿಮ್ಮಲ್ಲಿನ ಜಾಣ್ಮಯನ್ನು, ಕೌಶಲ್ಯಗಳನ್ನು, ಸಾಮರ್ಥ್ಯಗಳನ್ನು ಸರಿಯಾದ ದಾರಿಯಲ್ಲಿ ಬಳಸಿದರೆ ಖಂಡಿತವಾಗಿಯೂ ನಿವೋಬ್ಬ ಉತ್ತಮ ಸೃಜನಶೀಲ ವ್ಯಕ್ತಿಯಾಗುತ್ತೀರಿ. 
ಕೆಲಸದ ಒತ್ತಡದಿಂದ ನಿಮ್ಮಲ್ಲಿನ ಸಾಮರ್ಥ್ಯಗಳನ್ನು ಅಭಿವೃದ್ದಿ ಪಡಿಸಲು, ಹೊಸ ಆಲೋಚನೆಗಳನ್ನು ಮಾಡಲು ಕನಿಷ್ಟ ಸಮಯವೂ ದೊರೆಯದಿರಬಹುದು. ಆದರೆ ಸೃಜನಶೀಲ ವ್ಯಕ್ತಿಗಳು ಮತ್ತು ಕಲಾವಿದರು ಪ್ರತೀ ಹಂತದಲ್ಲೂ ಸೃಜನಶೀಲ ಕೆಲಸಗಳಿಗೆ ಕೈಹಾಕುತ್ತಾರೆ. ಸೃಜನಶೀಲತೆ ಬೆಳೆಸಿಕೊಳ್ಳಲು ಸಹಾಯ ಮಾಡುವ ಪ್ರಮುಖ ಅಂಶವೆಂದರೆ ಕಲ್ಪನೆ(ಊಹೆ). ಕಲ್ಪನೆ ಮತ್ತು ಸೃಜನಶೀಲತೆ ನಾಣ್ಯದ ಎರಡು ಮುಖಗಳಿದ್ದಂತೆ. ಕಲ್ಪನೆಯು ಸೃಜನಶೀಲತೆಯಲ್ಲಿ ಬಿಂಬಿತವಾಗುತ್ತದೆ. ಈ ಸೃಜನಶೀಲತೆಯನ್ನು ಅನೇಕ ಚಟುವಟಿಕೆಗಳ ಮೂಲಕ ಕರಗತ ಮಾಡಿಕೊಳ್ಳಬಹುದು. ಅಂತಹ ಚಟುವಟಿಕೆಗಳ ಕುರಿತ ಕಿರು ನೋಟ ಇಲ್ಲಿದೆ.
ಓದುವುದು : ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ ಸಾಧಕರ ಜೀವನ ಚರಿತ್ರೆಯನ್ನು ಹಾಗೂ ವೈಜ್ಞಾನಿಕ ಮತ್ತು ಸಾಹಸಭರಿತ ಕಾದಂಬರಿಗಳನ್ನು ಓದುವುದರಿಂದ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬಹುದು. ಜೀವನ ಚರಿತ್ರೆ ಮತ್ತು ಕಾದಂಬರಿಗಳು ನಮ್ಮನ್ನು ಇನ್ನೊಂದು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತವೆ. ಇರುವ ಅವಕಾಶಗಳಲ್ಲಿ ವಿವಿಧ ಸಾಧ್ಯತೆಗಳನ್ನು ಸೃಷ್ಟಿಸಿಕೊಳ್ಳುವ ಮನೋಸ್ಥಿತಿ ಬೆಳೆಯಲು ಇಂತಹ ಪುಸ್ತಕಗಳು ಸಹಾಯ ಮಾಡುತ್ತವೆ. ಪುಸ್ತಕಗಳನ್ನು ಓದುವ ವೇಳೆ ಅಮೂರ್ತ ಅಂಶಗಳಿಗೆ ಪರಿಣಾಮಕಾರಿಯಾದ ದೃಶ್ಯರೂಪದ ವಿವರಣೆಗಳನ್ನು ಪಡೆಯುವದರಿಂದ ಹೊಸ ಹೊಸ ಐಡಿಯಾಗಳು ಮೂಡುತ್ತವೆ.
ಸೃಜನಶೀಲ ವ್ಯಕ್ತಿಗಳ ಸಂಪರ್ಕ : ಸೃಜನಶೀಲ ವ್ಯಕ್ತಿಗಳೊಂದಿಗಿನ ಸಂಪರ್ಕವೂ ಸಹ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಸೃಜನಶೀಲ ವ್ಯಕ್ತಿಗಳ ಸುತ್ತಲಿನ ವಾತಾವರಣವೇ ಸೃಜನಶೀಲವಾಗಿರುತ್ತದೆ. ಇದು ಅವಾಸ್ತವದಂತೆ ಕಂಡರೂ ಇನ್ನೊಂದು ಸೃಜನಶೀಲ ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಅಥವಾ ಸೃಜನಶೀಲತೆಯನ್ನು ಮೂಡಿಸುತ್ತದೆ. ಸೃಜನಶೀಲ ವಾತಾವರಣ ಹೊಸ ಹೊಸ ಆಲೋಚನೆಗಳು, ವಿಭಿನ್ನ ದೃಷ್ಟಿಕೋನಗಳು ಬೆಳೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಸೃಜನಶೀಲ ವ್ಯಕ್ತಿಗಳ ಜೊತೆಗೆ ಹೆಚ್ಚು ಸಂಪರ್ಕದಲ್ಲಿರಿ.
ಕುತೂಹಲದ ಕಲಿಕೆ : ಕಲಿಕೆಯ ವೇಳೆ ಏಕೆ? ಹೇಗೆ? ಏನು? ಇಲ್ಲದಿದ್ದರೆ? ಮುಂತಾದ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಪ್ರಶ್ನಾ ಮನೋಭಾವ ವಿವಿಧ ಸಾಧ್ಯತೆಗಳ ಚಿಂತನೆ ನಡೆಸಲು ಸಹಾಯಕವಾಗುತ್ತದೆ. ಹೊಸ ಹೊಸ ಕಲಿಕಾ ಧೋರಣೆಗಳನ್ನು ಬೆಳೆಸಿಕೊಳ್ಳುವುದರಿಂದ ಸೃಜನಶೀಲತೆ ವಿಸ್ತರಿಸುತ್ತದೆ ಮತ್ತು ಕಲ್ಪನೆಯೂ ಹೆಚ್ಚುತ್ತದೆ. ಹೊಸ ವಿಷಯಗಳನ್ನು ಅನುಭವಿಸಲು,  ಕಲಿಕಾ ಅನುಭವಗಳನ್ನು ಜೀವಂತವಾಗಿರಿಸಿಕೊಳ್ಳಲು ಮತ್ತು ಹೊಸ ಕಲ್ಪನೆಗಳನ್ನು ಅಭಿವೃದ್ದಿ ಪಡಿಸಿಕೊಳ್ಳಲು ಕಲಿಕೆಯು ಪೂರಕವಾಗಿರುತ್ತದೆ.
ಹೊಸ ಪ್ರಯತ್ನಗಳಿಗೆ ಹಿಂಜರಿಯದಿರಿ : ಪ್ರಸಿದ್ದ ವ್ಯಕ್ತಿಗಳು ಹೊಸ ಪ್ರಯತ್ನಗಳನ್ನು ಮಾಡಲು ಹಿಂಜರಿಯುವುದಿಲ್ಲ. ಅವರು ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವ ಮೂಲಕ ತಮ್ಮ ಸೌಲಭ್ಯಯುತ ವಲಯಗಳನ್ನೂ ಮೀರಿ ಬೆಳೆಯುತ್ತಾರೆ. ಹೊಸ ಸಾಹಸ ಅಥವಾ ಪ್ರಯತ್ನಗಳನ್ನು ಕೈಗೊಳ್ಳುವುದರಿಂದ ಬೆಲೆ ಕಟ್ಟಲಾಗದ ಅನುಭವ ಸಿಗುತ್ತದೆ. ಅನುಭವಗಳ ಆಗರವೇ ಸೃಜನಶೀಲತೆಯ ಮೂಲ. ಆದ್ದರಿಂದ ಹೊಸ ಪ್ರಯತ್ನಗಳನ್ನು ಕೈಗೊಳ್ಳುವ ಮೂಲಕ ಸೃಜನಶೀಲರಾಗಿ.
ವಿಭಿನ್ನ ನೋಟವಿರಲಿ : ವಸ್ತು/ಸನ್ನಿವೇಶಗಳನ್ನು ಇತರರು ನೋಡುವುದಕ್ಕಿಂತ ವಿಭಿನ್ನವಾಗಿ ನೋಡಿ. ಅದರಲ್ಲಿನ ವಿಶೇಷತೆಯನ್ನು ಪರಿಗಣಿಸಿ. ಆಗ ಮಾತ್ರ ವಿಭಿನ್ನವಾದ ಹೊಸ ಹೊಸ ಆಲೋಚನೆಗಳು, ವಿಚಾರಗಳು ಬರುತ್ತವೆ. ಇವು ಸೃಜನಶೀಲತೆಯನ್ನು ವೃದ್ದಿಸುತ್ತವೆ.
ಪ್ರತಿಭೆಯನ್ನು ಅಭಿವೃದ್ದಿಪಡಿಸಿ : ಪ್ರತಿಯೊಬ್ಬರಲ್ಲೂ ಅಗಾಧವಾದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಈ ಪ್ರತಿಭೆ/ಕೌಶಲ್ಯಗಳನ್ನು ಹೆಚ್ಚು ಹೆಚ್ಚು ಬಳಸಿದಾಗ ಮಾತ್ರ ಅದರ ಹೊಳಪು ಹೆಚ್ಚುತ್ತದೆ. ನಮ್ಮಲ್ಲಿನ ಕೌಶಲ್ಯ/ಪ್ರತಿಭೆಗೆ ಪೂರಕವಾದ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವದರಿಂದ ಸೃಜನಶೀಲತೆ ಹೆಚ್ಚುತ್ತದೆ.
ಆಸಕ್ತಿಯನ್ನು ವಿಸ್ತರಿಸಿಕೊಳ್ಳಿ : ಆಸಕ್ತಿಯ ಇನ್ನಿತರೇ ಕ್ಷೇತ್ರಗಳನ್ನು ಪರಿಶೋಧಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇದು ಹೊಸ ಆಲೋಚನೆಗಳಿಗೆ , ವಿಭಿನ್ನ ವಿಚಾರಗಳಿಗೆ ನಮ್ಮನ್ನು ತೆರೆದುಕೊಳ್ಳುತ್ತದೆ. ಕೆಲವರು ತಮಗೆ ಪರಿಚಿತ ವಿಷಯ/ವ್ಯಕ್ತಿಗಳೊಂದಿಗೆ ಮಾತ್ರ ವ್ಯವಹರಿಸುತ್ತಾರೆ. ಪರಿಚಿತವಲ್ಲದ ವಿಷಯಗಳತ್ತ ಚಿತ್ತ ಹರಿಸುವುದೇ ಇಲ್ಲ. ಇದು ಸರಿಯಲ್ಲ. ವಿವಿಧ ವಿಷಯಗಳತ್ತ ದೃಷ್ಟಿ ಹರಿಸಿದಾಗ ಮಾತ್ರ ಆ ವಿಷಯದ ಒಳನೋಟಗಳನ್ನು ಅನ್ವೇಷಿಸಬಹುದು.
ವಿಚಾರಗಳನ್ನು ಹಂಚಿಕೊಳ್ಳಿ : ನಿಮ್ಮಲ್ಲಿನ ಹೊಸ ವಿಚಾರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಿ. ಹೀಗೆ ಹಂಚಿಕೊಳ್ಳುವಾಗ ಇತರರ ವಿಚಾರಗಳನ್ನೂ ಆಲಿಸಿ. ಈ ಚಟುವಟಿಕೆಯಿಂದ ನಿಮ್ಮ ಮನಸ್ಸು ಹೊಸ ಸಾಧ್ಯತೆಗಳನ್ನು ಹುಡುಕುತ್ತದೆ. ಆಗ ಕ್ರಿಯೆಟಿವಿಟಿ ಮೂಡುತ್ತದೆ.
ಮನಸ್ಸಿಗೆ ವಿಶ್ರಾಂತಿ ನೀಡಿ : ನಿರಂತರ ಚಟುವಟಿಕೆಗಳಿಂದ ಮನಸ್ಸಿಗೆ ಒತ್ತಡ ಉಂಟಾಗುತ್ತದೆ. ಆದ್ದರಿಂದ ಮನಸ್ಸನ್ನು ಮುದಗೊಳಿಸಲು ಆಗಾಗ್ಗೆ ವಿಶ್ರಾಂತಿ ನೀಡಿ. ಇದು ಸೃಜನಶೀಲ ಯೋಚನೆಗಳು ಹೊರಹೊಮ್ಮಲು ಸಹಕಾರಿಯಾಗಿದೆ. 
ಮೇಲಿನ ಸರಳ ಸಲಹೆಗಳನ್ನು ಅನುಸರಿಸಿ ಹೊಸ ವಿಚಾರಗಳನ್ನು ತುಂಬಿಕೊಳ್ಳಿ. ಆ ಮೂಲಕ ಕಾಲ್ಪನಿಕ ಜಗತ್ತನ್ನು ವಿಸ್ತರಿಸಿಕೊಂಡು ಸೃಜನಶೀಲ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಬದ್ದರಾಗಿ.
‘ವಿಜಯವಾಣಿ’ 19-11-2014 ಆರ್.ಬಿ.ಗುರುಬಸವರಾಜ. ಶಿಕ್ಷಕರು




October 28, 2014

ಕನ್ನಡ ನುಡಿಗೆ ಬಸ್ ಸೇವೆ

ದಿನಾಂಕ 28-10-2014 ರ ಪ್ರಜಾವಾಣಿಯ "ಕರ್ನಾಟಕ ದರ್ಶನ" ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.
          ಕನ್ನಡ ನುಡಿಗೆ ಬಸ್ ಸೇವೆ
    ಬಸ್ ಪ್ರಯಾಣ ಎಂದರೆ ಬಹುತೇಕರಿಗೆ ಅಲರ್ಜಿ. ಅದರಲ್ಲೂ ರಾಜ್ಯ ರಸ್ತೆ ಸಾರಿಗೆ ಬಸ್‍ಗಳೆಂದರೆ ಇನ್ನೂ ಬೇಜಾರು. ಪ್ರಯಾಣದ ವೇಳೆ ಪತ್ರಿಕೆಯೋ, ಪುಸ್ತಕವೋ ಇದ್ದರೆ ಪ್ರಯಾಣ ಪ್ರಯಾಸವಾಗಲಾರದು ಅಲ್ಲವೇ? ಇವೆಲ್ಲವೂ ಬಸ್‍ನಲ್ಲೇ ಪುಕ್ಕಟೆ ದೊರೆಯುವಂತಾದರೆ ಹೇಗೆ? ಏನು ಕನಸು ಕಾಣುತ್ತಿದ್ದೀರಾ! ಎಂಬ ಪ್ರಶ್ನೆ ನಿಮ್ಮದಲ್ಲವೇ? ಇದು ಕನಸಲ್ಲ ನನಸು.
    ಹೊಸಪೇಟೆ ವಿಭಾಗದ ಹಗರಿಬೊಮ್ಮನಹಳ್ಳಿ ಘಟಕದ ಕೆ.ಎ35 ಎಫ್115 ಸಂಖ್ಯೆಯ ವಾಹನದಲ್ಲಿ ಇಂತದ್ದೊಂದು ಸೌಲಭ್ಯವಿದೆ. ಈ ಬಸ್ ಹೆಚ್ಚಾಗಿ ಹೊಸಪೇಟೆ ದಾವಣಗೆರೆ ಮಾರ್ಗದಲ್ಲಿ ಸಂಚರಿಸುತ್ತದೆ. ಈ ಬಸ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಿನಪತ್ರಿಕೆಗಳು, ವಾರಪತ್ರಿಕೆಗಳು, ಕೆಲವು ಸಾಹಿತ್ಯಿಕ ಪುಸ್ತಕಗಳು ಪುಕ್ಕಟೆಯಾಗಿ ಓದಲು ಸಿಗುತ್ತವೆ.
    ಅಷ್ಟೇ ಅಲ್ಲ, ವಾಹನದ ಒಳಭಾಗದಲ್ಲಿ ಕನ್ನಡ ನಾಡಿನ ಕೀರ್ತಿ ಬೆಳಗಿದ ಪ್ರಮುಖ ಸಾಹಿತಿಗಳ ಭಾವಚಿತ್ರಗಳೂ ಸಹ ಇವೆ. ಪ್ರಯಾಣದ ವೇಳೆ ಸಾಹಿತ್ಯಿಕ ವಿಚಾರಗಳನ್ನು ಮತ್ತು ನಿತ್ಯದ ಸುದ್ದಿಗಳನ್ನು ಮೆಲುಕು ಹಾಕಬಹುದು.
    ಈ ಬಗ್ಗೆ ಘಟಕದ ನಿರ್ವಾಹಕರಾದ ಎಂ.ಗೌರಿಶಂಕರ ಅವರನ್ನು ವಿಚಾರಿಸಿದಾಗ “ಇಂದಿನ ಸ್ಪರ್ದಾತ್ಮಕ ಪ್ರಪಂಚದಲ್ಲಿ ಪ್ರಯಾಣಿಕರನ್ನು ಆಕರ್ಷಿಸುವುದು ಅನಿವಾರ್ಯ. ಆಡಿಯೋ/ವೀಡಿಯೋ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಸೆಳೆಯುವ ಬದಲು ಪತ್ರಿಕೆ-ಪುಸ್ತಕಗಳನ್ನು ಇಡಲಾಗಿದೆ. ಆ ಮೂಲಕವಾದರೂ ಪ್ರಯಾಣಿಕರಲ್ಲಿ ಕನ್ನಡಾಭಿಮಾನ ಬೆಳೆಯಲಿ ಎಂಬುದು ನಮ್ಮ ಆಶಯ. ಇದರ ಉಸ್ತುವಾರಿಯನ್ನು ಶಿವಣ್ಣ(ಬಿಲ್ಲೆ ಸಂಖ್ಯೆ 2193) ಎಂಬ ನಿರ್ವಾಹಕರು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ” ಎಂದು ಖುಷಿಯಿಂದ ಹೇಳುತ್ತಾರೆ.
    ಪುಸ್ತಕ/ಪತ್ರಿಕೆ ಇಡಲು ನೇತುಹಾಕಿದ ಟ್ರೇ ಮೇಲೆ “ಪುಸ್ತಕ ಮತ್ತು ಪತ್ರಿಕೆಗಳನ್ನು ಓದಿದ ನಂತರ ಇದರಲ್ಲಿಯೇ ಇಡಿ” ಎಂಬ ವಿನಂತಿಯನ್ನು ಅಂಟಿಸಲಾಗಿದೆ. ನೀವೊಮ್ಮೆ ಈ ಬಸ್‍ನಲ್ಲಿ ಪ್ರಯಾಣಿಸಿದರೆ ನೀವು ಖರೀದಿಸಿದ ಪತ್ರಿಕೆ/ಪುಸ್ತಕಗಳನ್ನು ಇದರಲ್ಲಿ ಹಾಕಿ. ಅದು ಇತರೆ ಪ್ರಯಾಣಿಕರಿಗೆ ಓದಲು ಸಹಾಯವಾಗುತ್ತದೆ. ಆ ಮೂಲಕವಾದರೂ ನಾಡು-ನುಡಿಗೆ ಸೇವೆ ಸಲ್ಲಿಸಿದಂತಾಗುತ್ತದೆ. ಏನಂತೀರಿ?

            -ಆರ್.ಬಿ.ಗುರುಬಸವರಾಜ.   




October 22, 2014

ಸಹಿಯೊಳಗಿನ ಸವಿ

 ದಿನಾಂಕ 22-10-2014 ರ ವಿಜಯವಾಣಿಯ 'ಮಸ್ತ್' ಪುರವಣಿಯಲ್ಲಿ ಪ್ರಕಟವಾದ "ಸಹಿಯೊಳಗಿನ ಸವಿ" ಎನ್ನುವ ನನ್ನ ಲೇಖನ.
                               ಸಹಿಯೊಳಗಿನ ಸವಿ
    ನಿತ್ಯ ಜೀವನದಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ನಮ್ಮ ರುಜುವಾತನ್ನು ಸಾಬೀತುಪಡಿಸಲು ಸಹಿ ಹಾಕುತ್ತೇವೆ.  ‘ಸಹಿ’ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾದ ಸಾಕ್ಷಿ. ಸಹಿ ಎಂಬುದು ನಿರ್ದಿಷ್ಟ ಅಕ್ಷರಗಳ ಸುಸಂಘಟಿತ ಸ್ವರೂಪವಾಗಿದ್ದು, ಪ್ರತಿಯೊಬ್ಬರ ವೈಯಕ್ತಿಕ ಹೆಗ್ಗುರುತಾಗಿದೆ. ಕಾನೂನುಬದ್ದ ಮತ್ತು ಪತ್ರ ವ್ಯವಹಾರದ ಮಹತ್ವದ ದಾಖಲೆಗಾಗಿ ಹಾಗೂ ಶಿಷ್ಟಾಚಾರದ ಪ್ರದರ್ಶನಕ್ಕಾಗಿ ಸಹಿಯನ್ನು ಬಳಸುತ್ತೇವೆ. ನಮ್ಮ ಸಹಿಯು ಅನೇಕ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ?
    ಸಹಿಯು ವ್ಯಕ್ತಿಯ ಸ್ವಭಾವದ ಪ್ರತೀಕವಾಗಿದ್ದು, ವ್ಯಕ್ತಿತ್ವದ ಪ್ರಮುಖ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಅದು ವ್ಯಕ್ತಿಯ ಬ್ರಾಂಡೆಂಡ್ ಐಡೆಂಟಿಟಿ ಆಗಿದ್ದು, ಅವರವರ ವರ್ತನೆ, ಚಾರಿತ್ರ್ಯ, ಶಕ್ತಿ ಸಾಮಥ್ರ್ಯಗಳು, ಬಲಹೀನತೆಗಳು, ಪ್ರತಿಫಲ, ಅಧಿಕಾರ ಇತ್ಯಾದಿಗಳನ್ನು ಬಾಹ್ಯವಾಗಿ ಪ್ರತಿಬಿಂಬಿಸುವ ಕನ್ನಡಿ ಇದ್ದಂತೆ. ಸಹಿಯ ವಿಶ್ಲೇಷಣೆ ನಿಜಕ್ಕೂ ಅದ್ಬುತವಾದ ಅಧ್ಯಯನವಾಗಿದೆ. ಸಹಿಯು ವ್ತಕ್ತಿಯ ಕೈಬರಹದ ಸ್ವರೂಪವಾಗಿದ್ದು, ಇದನ್ನು ಓದುವ ಕಲೆಯನ್ನು ಹಸ್ತಾಕ್ಷರ ಶಾಸ್ತ್ರ(ಗ್ರಾಫೋಲಜಿ) ಎನ್ನುತ್ತಾರೆ.
ಸಹಿಯನ್ನು ಎಲ್ಲೆಲ್ಲಿ ಬಳಸುತ್ತೇವೆ?
•    ಮಾಲಿಕತ್ವ ಸಾಬೀತು ಪಡಿಸಲು
•    ಬ್ಯಾಂಕ್‍ಗಳಲ್ಲಿ ಖಾತೆಯನ್ನು ರುಜುವಾತು ಪಡಿಸಲು
•    ಸಾಕ್ಷಿ ಅಥವಾ ಪುರಾವೆಗಳಂತಹ ದಾಖಲೆಗಳಲ್ಲಿ
•    ಆಡಳಿತಾತ್ಮಕ ದಾಖಲೆಗಳಲ್ಲಿ
•    ಶೈಕ್ಷಣಿಕ ದಾಖಲೆಗಳಲ್ಲಿ
•    ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಐಡೆಂಟಿಟಿಗೆ
•    ವ್ಯಕ್ತಿಯ ವೈಯಕ್ತಿಕ ಹೆಗ್ಗುರುತು ತೋರಿಸಲು
•    ಮಹತ್ವದ ದಾಖಲೆಗಳಲ್ಲಿ
   
    ಸಹಿಯು ವ್ಯಕ್ತಿಯ ವೈಯಕ್ತಿಕ ಹೆಗ್ಗುರುತು ಆಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ವೈವಿಧ್ಯಮಯವಾಗಿ ಇರುತ್ತದೆ. ಜಗತ್ತಿನಾದ್ಯಂತ ವಿಭಿನ್ನ ವ್ಯಕ್ತಿಗಳಿರುವಷ್ಟು ವಿಭಿನ್ನ ಸಹಿಗಳಿರುವುದನ್ನು ಗಮನಿಸಬಹುದು. ಪ್ರತಿಯೊಬ್ಬರೂ ತಮ್ಮ ಸಹಿಯು ವಿಶಿಷ್ಟವಾಗಿ ಇರಬೇಕೆಂದು ಬಯಸುತ್ತಾರೆ. ಅಂತೆಯೇ ಇತರರಿಂದ ನಕಲು ಮಾಡದಂತೆ ಇರಬೇಕೆಂದು ಬಯಸುವುದು ತಪ್ಪಲ್ಲ.
ಹೀಗಿರಲಿ ನಿಮ್ಮ ಸಹಿ
ಸ್ಥಳ : ಪುಟದಲ್ಲಿ ಸಹಿಯ ಸ್ಥಳವು ಮಹತ್ವದ್ದು. ಜೀವನದಲ್ಲಿ ಮುಂದೆ ಬರಲು ಒಲವು ತೋರುವ ಪ್ರತಿಯೊಬ್ಬರೂ ಪುಟದ ಬಲಭಾಗದಲ್ಲಿ ಸಹಿ ಮಾಡುತ್ತಾರೆ. ಸಹಿಯು ಮಧ್ಯಭಾಗದಲ್ಲಿದ್ದರೆ ಇತರರ ಬಗೆಗಿನ ಗಮನದ ಕೊರತೆಯನ್ನು, ಒತ್ತಾಯ ಪೂರಕ ಪ್ರಭಾವ ಬೀರುವುದನ್ನು ಸೂಚಿಸುತ್ತದೆ. ಪುಟದ ಎಡ ಭಾಗದಲ್ಲಿನ ಸಹಿಯು ಒಮ್ಮುಖ ಮನೋಸ್ಥಿತಿಯನ್ನು, ಹಿನ್ನಡೆಯನ್ನು ಸೂಚಿಸುತ್ತದೆ.
ಗಾತ್ರ : ಸಹಿಯಲ್ಲಿನ ಅಕ್ಷರಗಳ ಗಾತ್ರವೂ ಸಹ ಸಾಕಷ್ಟು ಮಾಹಿತಿಗಳನ್ನು ಬಿಂಬಿಸುತ್ತದೆ. ಆದ್ದರಿಂದ ಅಕ್ಷರಗಳ ಗಾತ್ರವೂ ಸಹ ಪ್ರಸ್ತಾಪಿತ ಅಂಶವಾಗಿದೆ. ದೊಡ್ಡ ಅಕ್ಷರಗಳ ಸಹಿಯು ಅನ್ಯಾಯದ ವಿರುದ್ದದ ಪ್ರತಿಭಟನೆಯನ್ನೂ, ಸದಾ ಸುದ್ದಿಯಲ್ಲಿ ಇರಬಯಸುವುದನ್ನು ಪ್ರದರ್ಶಿಸುತ್ತದೆ. ಚಿಕ್ಕ ಗಾತ್ರದ ಸಹಿಯು ನಾಚಿಕೆ, ಹಿಂಜರಿಕೆ, ಸೂಕ್ಷ್ಮತೆಗಳ ಸಂಕೇತವಾಗಿದೆ. ಮಧ್ಯ ಗಾತ್ರದ ಸಹಿಯು ಸುಸಮನ್ವಿತ ವ್ಯಕ್ತಿತ್ವವನ್ನು, ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.
ಅಲಂಕಾರ : ಅಲಂಕಾರಿಕ ಸಹಿಯು ಎಲ್ಲರನ್ನು ಆಕರ್ಷಿಸುತ್ತದೆ. ಸಹಿಯನ್ನು ಅಡ್ಡಗೆರೆಗಳು, ಚುಕ್ಕೆಗಳು ಹಾಗೂ ಸುರುಳಿಗಳಿಂದ ಆಕರ್ಷಿಸುವುದು ವಾಡಿಕೆ. ಸಹಿಯಲ್ಲಿನ ಅಡ್ಡಗೆರೆಗಳು ಆತ್ಮವಿಮರ್ಶೆಯನ್ನು, ತಮ್ಮ ಪ್ರಾಬಲ್ಯವನ್ನು ಇತರಿಗೆ ಒತ್ತಾಯವಾಗಿ ಹೇರುವುದನ್ನು ತಿಳಿಸುತ್ತದೆ. ಚುಕ್ಕೆಗಳು ಬುದ್ದಿವಂತಿಕೆಯನ್ನು, ಆಕ್ರಮಣಕಾರಿ ಮನೋಭಾವವನ್ನು ಸೂಚಿಸುತ್ತದೆ. ಸುರುಳಿಗಳು ಸೃಜನಶೀಲತೆ ಮತ್ತು ಕಲಾತ್ಮಕತೆಯನ್ನು ವ್ಯಕ್ತಪಡಿಸುತ್ತವೆ.
ಸ್ಪಷ್ಟತೆ : ಅಸ್ಪಷ್ಟವಾದ ಸಹಿ ನೋಡಲು ಅಹಿತಕರವಾಗಿರುತ್ತದೆ. ಸ್ಪಷ್ಟತೆ ಎಂದರೆ ಎಲ್ಲರಿಗೂ ಸ್ಪಷ್ಟವಾಗಿ ಗೋಚರವಾಗುವಂತೆ ಸ್ಪುಟವಾಗಿರಬೇಕು. ಸ್ಪಷ್ಟತೆ ಮತ್ತು ಸ್ಪುಟತೆಯಿಂದ ಕೂಡಿದ ಸಹಿಯು ಅವರ ಪ್ರಾಮಾಣಿಕತೆ, ಮುಕ್ತತೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಸಂತೃಪ್ತಿ ಜೀವನವನ್ನು ಸೂಚಿಸುತ್ತದೆ.
ವಿಷಯ : ಸಹಿಯಲ್ಲೂ ವಿಷಯವಿದೆ ಎಂದರೆ ಆಶ್ಚರ್ಯವೇ?. ಇಲ್ಲಿ ವಿಷಯ ಎಂದರೆ ವ್ಯಕ್ತಿಯ ಹೆಸರು. ಸಹಿಯಲ್ಲಿ ಹೆಸರಿನ ಅರ್ದ ಅಕ್ಷರಗಳಿದ್ದರೆ ಅಂತಹವರು ತಮ್ಮ ವೈಯಕ್ತಿಕ ಅಂಶಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂಬುದು ತಿಳಿಯುತ್ತದೆ. ಸಹಿಯಲ್ಲಿ ಪೂರ್ಣ ಹೆಸರು ಗೋಚರಿಸುವಂತಿದ್ದರೆ ಅಂತಹವರು ಪ್ರಶಾಂತ ಸ್ವಭಾವದವರಾಗಿದ್ದು, ಮುಕ್ತ ಮನಸ್ಸು ಹೊಂದಿರುತ್ತಾರೆ, ಇತರರ ಹೇಳಿಕೆಗಳನ್ನು ಗೌರವಿಸುತ್ತಾರೆ.
ದಿಕ್ಕು : ಸಹಿಯಲ್ಲಿ ದಿಕ್ಕೂ ಸಹ ಮಹತ್ವದ್ದು. ಸಹಿಯು ಬಲಕ್ಕೆ ಓರೆಯಾಗಿದ್ದರೆ ಸ್ನೇಹಪರತೆಯನ್ನು, ಎಡಕ್ಕೆ ಓರೆಯಾಗಿದ್ದರೆ ಜಿಗುಪ್ಸೆಯನ್ನು, ನೇರವಾಗಿದ್ದರೆ ನೇರನುಡಿ ಹಾಗೂ ದಿಟ್ಟತೆಯನ್ನು ವ್ಯಕ್ತಪಡಿಸುತ್ತದೆ.
ಒತ್ತಡ : ಸಹಿಯಲ್ಲಿನ ಅಕ್ಷರಗಳ ಒತ್ತಡವೂ ಬಹುಮುಖ್ಯ. ಅಕ್ಷರಗಳನ್ನು ಒತ್ತಿ ಬರೆದ ಸಹಿಯು ಗಂಭೀರ ಗುಣವನ್ನು, ಕಠಿಣ ಪರಿಶ್ರಮವನ್ನು ತೋರುತ್ತದೆ. ಹಾಗೆಯೇ ತೇಲಿಸಿ ಹಗುರವಾಗಿ ಬರೆದ ಸಹಿಯು ಸೂಕ್ಷ್ಮ ಮನೋಸ್ಥಿತಿಯನ್ನು ಹಾಗೂ ನಿರಾಶವಾದವನ್ನು ಬಿಂಬಿಸುತ್ತದೆ.
ಸಹಿಯು ಏನು ಹೇಳುತ್ತದೆ?
•    ಸಹಿಯ ಮೊದಲ ಅಕ್ಷರಗಳು ದೊಡ್ಡ ಗಾತ್ರದಲ್ಲಿದ್ದು, ಕ್ಯಾಪಿಟಲ್ ಅಕ್ಷರಗಳಿಂದ ಕೂಡಿದ್ದರೆ, ಆ ವ್ಯಕ್ತಿಯು ಪ್ರಥಮ ಭೇಟಿಯಲ್ಲೇ ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಹಾಗೂ ಸ್ವಾಭಿಮಾನಿಗಳಾಗಿರುತ್ತಾರೆ. ಮೊದಲನೆ ಅಕ್ಷರ ಚಿಕ್ಕದಾಗಿದ್ದರೆ ಆ ವ್ಯಕ್ತಿ ತನ್ನ ವೈಯಕ್ತಿಕ ಅಂಶಗಳನ್ನು ಗೌಪ್ಯವಾಗಿಡಲು ಪ್ರಯತ್ನಿಸುತ್ತಾನೆ.
•    ಬಹುತೇಕ ಸಹಿಯಲ್ಲಿ ವ್ಯಕ್ತಿಯ ಹೆಸರು ಮತ್ತು ಕೌಟುಂಬಿಕ ಹೆಸರುಗಳು ಇರುತ್ತವೆ. ಕೌಟುಂಬಿಕ ಹೆಸರು ಪ್ರಧಾನವಾಗಿದ್ದರೆ ಆ ವ್ಯಕ್ತಿ ತನ್ನ ಕುಟುಂಬದ ಘನತೆ, ಗೌರವ ಕಾಪಾಡಲು ಪ್ರಯತ್ನಿಸುತ್ತಾನೆ ಮತ್ತು ಕುಟುಂಬದ ಸದಸ್ಯರಿಗೆ ಗೌರವ ಕೊಡುತ್ತಾನೆ. ವ್ಯಕ್ತಿಯ ಹೆಸರು ಪ್ರಧಾನವಾಗಿದ್ದರೆ ವೈಯಕ್ತಿಕವಾಗಿ ತನ್ನ ಮೇಲೆ ಹೆಚ್ಚು ನಂಬಿಕೆ ಇಟ್ಟಿರುತ್ತಾನೆ. ಇತರರನ್ನು ನಂಬುವುದಿಲ್ಲ. ಆಲೋಚನೆ ಮತ್ತು ನಿರ್ಧಾರಗಳಲ್ಲಿ ಸ್ವತಂತ್ರನಾಗಿರುತ್ತಾನೆ. ಇತರರ ಅನಿಸಿಕೆಗಳಿಗೆ ಬೆಲೆ ಕೊಡುವುದಿಲ್ಲ.
•    ಸ್ಪುಟವಾದ ಮತ್ತು ಸ್ಪಷ್ಟವಾದ ಸಹಿಯು ಆಕರ್ಷಕ ವ್ಯಕ್ತಿತ್ವದ ಗುಣವನ್ನು ಪ್ರತಿನಿಧಿಸುತ್ತದೆ. ಇಂತಹವರು ಸ್ಪಷ್ಟವಾದ ಗುರಿಯನ್ನು ಹೊಂದಿದ್ದು, ಭವಿಷ್ಯದಲ್ಲಿ ಉತ್ತಮ ದೃಷ್ಟಿಕೋನ ಹೊಂದಿರುತ್ತಾರೆ.
•    ವಕ್ರವಾದ ಮತ್ತು ನಯವಾದ ಸಹಿಯು ವ್ಯಕ್ತಿಯ ಶಾಂತ, ಆಕರ್ಷಕ ಹಾಗೂ ಎಲ್ಲರೊಂದಿಗೂ ಬೆರೆಯುವ ಗುಣವನ್ನು ಪ್ರದರ್ಶಿಸುತ್ತದೆ.
•    ಕೋನೀಯ ಸಂಪರ್ಕಗಳನ್ನು ಹೊಂದಿದ ಸಹಿಯು ಬಲವಂತದ ವ್ಯಕ್ತಿತ್ವವನ್ನು, ಸ್ಪರ್ಧಾತ್ಮಕ ಹಾಗೂ ಆಕ್ರಮಣಕಾರಿ ಮನೋಭಾವವನ್ನು ಸೂಚಿಸುತ್ತದೆ.
•    ಸಹಿಯ ಕೆಳಗಿನ ಅಡ್ಡಗೆರೆಯು ಆ ವ್ಯಕ್ತಿಯ ಆರೋಗ್ಯಕರ ಅಹಂನ್ನು, ವಿಶ್ವಾಸವನ್ನು ತೋರಿಸುತ್ತದೆ.
•    ಸಹಿಯ ಕೆಳಗೆ ಅನೇಕ ಅಡ್ಡಗೆರೆಗಳಿದ್ದರೆ ಅಂತಹವರು ಸಾರ್ವಜನಿಕವಾಗಿ ಸಂಶಯಪೀಡಿತರು ಆಗಿರುತ್ತಾರೆ. ಇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.
•    ಸಹಿಯಲ್ಲಿನ ಅಡ್ಡಗೆರೆಯು ಮೇಲ್ಭಾಗಕ್ಕೆ ಏರಿದ್ದರೆ ಉನ್ನತ ಭೌದ್ದಿಕ ಮಟ್ಟವನ್ನು, ನಾಯಕತ್ವÀದ ಗುಣವನ್ನು ತಿಳಿಸುತ್ತದೆ.
•    ಸಹಿಯ ಕೆಳಗೆ ಯಾವುದೇ ಅಡ್ಡಗೆರೆಗಳಿಲ್ಲದಿದ್ದರೆ ಅಂತಹವರು ನಿಗರ್ವಿಗಳಾಗಿದ್ದು, ಉನ್ನತ ಆತ್ಮಸ್ಥೈರ್ಯ ಮತ್ತು ಮೌಲ್ಯಗಳನ್ನು ಹೊಂದಿರುತ್ತಾರೆ.
•    ಆರೋಹಣದ ಸಹಿಯು ಆಶಾವಾದ ಮತ್ತು ಸಕ್ರಿಯತೆಯ ಸಂಕೇತವಾಗಿದೆ.
•    ಅವರೋಹಣದ ಸಹಿಯುಳ್ಳವರು ದಣಿವು, ಖಿನ್ನತೆ, ಹಿಂಜರಿಕೆ ಸ್ವಭಾವ, ನಿರಾಶಾವಾದ, ನಿಶ್ಚಿತವಲ್ಲದ ಗುರಿಯನ್ನು ಹೊಂದಿರುತ್ತಾರೆ.
•    ಸಹಿಯ ಕೆಳಗಿನ ಒಂದು ಚುಕ್ಕೆಯು ಜಾಗೃತ ಪ್ರವೃತ್ತಿಯನ್ನು, ಎರಡು ಚುಕ್ಕೆಗಳು ನಿರ್ದೇಶನ ಮತ್ತು ಆದೇಶದ ಪ್ರವೃತ್ತಿಯನ್ನು ತಿಳಿಸುತ್ತದೆ.
ಇರಲಿ ಎಚ್ಚರ !!!
    ಪ್ರತಿಯೊಬ್ಬರೂ ಅವರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಆ ಜವಾಬ್ದಾರಿಗಳಿಗೆ ಸಹಿಯು ಕಾನೂನುಬದ್ದ ಸಾಕ್ಷಿಯಾಗುತ್ತದೆ. ವೈಯಕ್ತಿಕ ಜೀವನದಲ್ಲಿ ನಾವು ಹಲವಾರು ಮಹತ್ವದ ದಾಖಲೆಗಳಿಗೆ ಸಹಿ ಹಾಕುತ್ತೇವೆ. ಸಹಿಯು ಇನ್ನೊಬ್ಬರಿಂದ ನಕಲು ಆಗದಂತೆ ರೂಪಿಸಿಕೊಳ್ಳುವುದು ಬಹುಮುಖ್ಯ. ನಕಲಿ ಸಹಿಯಿಂದ ವ್ಯಕ್ತಿ ಬಲಿಪಶು ಆಗಬಹುದು. ಅಜಾಗರೂಕತೆ ಅಪಾಯಕ್ಕೆ ತಳ್ಳುತ್ತದೆ. ಆದ್ದರಿಂದ ಸಹಿಯ ನಕಲು ಮತ್ತು ವಂಚನೆ ತಡೆಯಲು ಕೆಳಗಿನ ನಿಯಮಗಳನ್ನು ಅನುಸರಿಸಿ.
    ನಿಧಾನವಾದ ಸಹಿ ಬೇಡ : ಸಹಿಯನ್ನು ನಿಧಾನವಾಗಿ ಬರೆಯುವುದರಿಂದ ನಕಲು ಮಾಡಲು ಅನುಕೂಲವಾಗುತ್ತದೆ. ಅದಕ್ಕಾಗಿ ವೇಗವಾಗಿ ಸಹಿ ಮಾಡುವ ಅಬ್ಯಾಸ ಮಾಡಿಕೊಳ್ಳಿ.
    ಸಹಿಯಲ್ಲಿ ಸಂಕೀರ್ಣತೆ ಇರಲಿ : ಸರಳವಾದ ಸಹಿಯು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಸಹಿಯು ಆದಷ್ಟೂ ಸಂಕೀರ್ಣತೆಯಿಂದ ಕೂಡಿರಲಿ.
    ಕಲಾತ್ಮಕವಾಗಿರಲಿ : ನಿಮ್ಮ ಪರಿಪೂರ್ಣತೆ ನಿಮ್ಮ ಸಹಿಯ ಸುರಕ್ಷತೆಯಲ್ಲಿ ಬಿಂಬಿಸಲಿ. ಕಲಾತ್ಮವಾದ ಸಹಿಯು ನಕಲು ತಡೆಯಲು ಸಹಕಾರಿ.
    ಒಂದಕ್ಕಿಂತ ಹೆಚ್ಚು ಸಹಿ ಬಳಸಿ : ಕಾನೂನಾತ್ಮಕ ದಾಖಲೆಗಳಿಗಾಗಿ ಬಳಸುವ ಸಹಿಯನ್ನು ಎಲ್ಲೆಂದರಲ್ಲಿ ಬಳಸಬೇಡಿ. ದೈನಂದಿನ ವ್ಯವಹಾರಗಳಿಗಾಗಿ ಬೇರೊಂದು ಸಹಿಯನ್ನು ಬಳಸಿ.
    ಖಾಲಿ ಹಾಳೆಯ ಸಹಿಗೆ ಕಡಿವಾಣ ಹಾಕಿ : ಅಪೂರ್ಣವಾಗಿ ತುಂಬಿದ ಅಥವಾ ಖಾಲಿ ಕಾಗದದಲ್ಲಿ ಸಹಿ ಹಾಕುವುದನ್ನು ನಿಲ್ಲಿಸಿ. ಇದು ಸಹಿಯ ದುರ್ಬಳಕೆಯನ್ನು ತಪ್ಪಿಸುತ್ತದೆ.
    ಔಚಿತ್ಯವಿರಲಿ : ಸಾಮಾಜಿಕ ಜಾಲ ತಾಣಗಳಲ್ಲಿ ಅನಾವಶ್ಯಕವಾಗಿ ಸಹಿಯನ್ನು ಪ್ರದರ್ಶಿಸಬೇಡಿ. ಇದು ನಕಲು ಮಾಡಲು ಪ್ರೇರಣೆ ನೀಡುತ್ತದೆ.
    ದೂರು ನೀಡಿ : ನಕಲಿ ಸಹಿಯ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಸಂಬಂಧಿಸಿದ ದಾಖಲೆಗಳೊಂದಿಗೆ ಮೇಲಾಧಿಕಾರಿಗಳಿಗೆ ಅಥವಾ ಸಂಬಂಧಿಸಿದವರಿಗೆ ವಿವರಣೆ ನೀಡಿ. ಇದು ತನಿಖೆಗೆ ಸಹಕಾರಿಯಾಗುತ್ತದೆ.
                                                                                                             - ಆರ್.ಬಿ.ಗುರುಬಸವರಾಜ

September 29, 2014

ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ

ದಿನಾಂಕ 29-09-2014 ರಂದು ಪ್ರಜಾವಾಣಿಯ "ಶಿಕ್ಷಣ" ಪುರವಣಿಯಲ್ಲಿ ಪ್ರಕಟವಾದ  'ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ' ಎಂಬ ಲೇಖನ
                    ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ
    ಅಂತೂ ಇಂತು ನಿತ್ಯಾನಂದನ ಪುರುಷತ್ವ ಪರೀಕ್ಷೆ ನಡೆಯಿತು. ಇದರ ವಿಸ್ಕೃತ ವರದಿಯನ್ನು ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಈ ವರದಿಯನ್ನಾಧರಿಸಿ ನ್ಯಾಯಾಲಯ ನ್ಯಾಯ ತೀರ್ಮಾನ ಮಾಡುತ್ತದೆ. ಇಂತಹ ಹಲವು ಅಧಿಕೃತವಾದ ವೈಜ್ಞಾನಿಕ ವರದಿಯನ್ನು ನ್ಯಾಯಾಲಯಗಳಿಗೆ ಸಲ್ಲಿಸುವ ಏಕೈಕ ಸಂಸ್ಥೆ ವಿಧಿವಿಜ್ಞಾನ ಅಥವಾ ನ್ಯಾಯವಿಜ್ಞಾನ ಸಂಸ್ಥೆ. ವಿಧಿವಿಜ್ಞಾನ ಅಥವಾ  ಫೋರೆನ್ಸಿಕ್ ಸೈನ್ಸ್ ಎಂಬುದು ನ್ಯಾಯಾಂಗ ವ್ಯವಸ್ಥೆಗೆ ನಿರ್ದಿಷ್ಟವಾದ ಮತ್ತು ಪರಿಪೂರ್ಣವಾದ ಸಾಕ್ಷ್ಯಾಧಾರಗಳನ್ನು ಒದಗಿಸುವ ವೈಜ್ಞಾನಿಕ ಸಂಸ್ಥೆಯಾಗಿದೆ.
ಏನಿದು ಫೋರೆನ್ಸಿಕ್ ಸೈನ್ಸ್?
    ಸರಳವಾಗಿ ಹೇಳುವುದಾದರೆ ನ್ಯಾಯವಿಜ್ಞಾನ ಎನ್ನುವುದು ಕಾನೂನಿನ ವಿಜ್ಞಾನ. ನ್ಯಾಯಾಂಗ ವ್ಯವಸ್ಥೆಯ ನಿರ್ಣಾಯಕ ಅಂಶಗಳಿಗೆ ಅಗತ್ಯವಿರುವ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾದ ಪೂರಕ ದಾಖಲೆಗಳೊಂದಿಗೆ ಒದಗಿಸುವ ಅನ್ವಯಿಕ ವಿಜ್ಞಾನ ಕ್ಷೇತ್ರವಾಗಿದೆ. ಇದು ಅಪರಾಧದ ಸುಳಿವನ್ನು ಪತ್ತೆ ಹಚ್ಚುವ ಮತ್ತು ಪರೀಕ್ಷಿಸುವ ಕಾರ್ಯ ಮಾಡುತ್ತದೆ. ಇದೊಂದು ಪಿ.ಯು.ಸಿ. ನಂತರದ ಕೋರ್ಸ.
ಏಕೆ ಈ ಕೋರ್ಸ?
    ಉಜ್ವಲ ಭವಿಷ್ಯ ಹೊಂದಿದ್ದು, ಬೇರೆಯವರಿಗಿಂತ ಭಿನ್ನವಾಗಿರಲು ಬಯಸುವ ಅನೇಕ ವಿದ್ಯಾರ್ಥಿಗಳಿಂದು ಸಾಂಪ್ರದಾಯಿಕ ಕೋರ್ಸಗಳಾದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಹೊರತು ಪಡಿಸಿ ಕೆಲವು ಉತ್ತಮ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಏಕೆಂದರೆ ನಾಗಾಲೋಟದ ಜೀವನ ಕೆಲವರಿಗೆ ಬೇಸರ ತರುತ್ತದೆ. ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರದಲ್ಲಿ ಆಸಕ್ತಿ, ಪ್ರತಿಭೆ ಹಾಗೂ ಪ್ರಾವೀಣ್ಯತೆ ಇದ್ದವರಿಗೆ ನ್ಯಾಯವಿಜ್ಞಾನ ಕೋರ್ಸ ಹೆಚ್ಚು ಸೂಕ್ತವಾದುದು. ಈ ಕೋರ್ಸ ಪೂರೈಸಿದವರಿಗೆ ಸದ್ಯಕ್ಕೆ ಭಾರತದಲ್ಲಿ ವಿಫುಲ ಅವಕಾಶಗಳಿವೆ. 2010 ರಲ್ಲಿ 13000 ಅಭ್ಯರ್ಥಿಗಳು ಈ ಕೋರ್ಸನ ಅಡಿಯಲ್ಲಿ ಸರ್ಕಾರಿ ಹುದ್ದೆ ಗಳಿಸಿಕೊಂಡಿದ್ದು,  ಈಗ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2020ರ ವೇಳೆಗೆ ಇದರ ಬೇಡಿಕೆ ಗಣನೀಯವಾಗಿ ಹೆಚ್ಚಲಿದೆ.
ಬಳಕೆ ಎಲ್ಲೆಲ್ಲಿ? ಹೇಗೆ ?
    ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ವಿವಿಧ ವೈಜ್ಞಾನಿಕ ಮತ್ತು ಪ್ರಾಯೋಗಿಕ ವಿಧಾನಗಳು ಮತ್ತು ಅನ್ವಯಿಕ ತತ್ವಗಳ ಮೂಲಕ ಸಾಕ್ಷ್ಯ ಒದಗಿಸುವಲ್ಲಿ ಬಳಸುತ್ತಾರೆ.
    ಅಪರಾಧದ ಸ್ಥಳದಲ್ಲಿ ಸಂಗ್ರಹಿಸಿದ ಸುಳಿವುಗಳ ತೀವ್ರ ವಿಶ್ಲೇಷಣೆಯಲ್ಲಿ ಬಳಸುತ್ತಾರೆ.
    ಅಪರಾಧದ ಸ್ಥಳದಿಂದ ಶಂಕಿತ ವಸ್ತುಗಳನ್ನು ಸಂಗ್ರಹಿಸುವುದು ಹಾಗೂ ಅವುಗಳನ್ನು ಪ್ರಯೋಗಾಲಯಗಳಲ್ಲಿ ಕ್ರೂಢೀಕರಿಸಿ ಸುಳಿವುಗಳನ್ನು ವಿಶ್ಲೇಷಿಸಿ ನ್ಯಾಯ ನಿರ್ಣಯಕ್ಕೆ ಸೂಕ್ತ ಸಾಕ್ಷಿ ಒದಗಿಸುವಲ್ಲಿ ಬಳಸುತ್ತಾರೆ.
    ಅಪರಾಧ ಸ್ಥಳದಿಂದ ಸಂಗ್ರಹಿಸಿದ ರಕ್ತ, ಜೊಲ್ಲು, ಕೂದಲು, ಹೆಜ್ಜೆಗುರುತು, ಗಾಲಿ/ಚಕ್ರದ ಗುರುತು, ಬೆರಳಚ್ಚು, ಇತ್ಯಾದಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಹಾಯಕ.
    ಅಪರಾಧ ತನಿಖೆ ನಡೆಸಲು ಸಹಾಯಕ.
    ನ್ಯಾಯಾಂಗ ವೃತ್ತಿಪರರಿಗೆ(ವಕೀಲರಿಗೆ) ಬೋಧನೆ ಮಾಡಲು ಮತ್ತು ಮಾಧ್ಯಮ ವರದಿಗಾರಿಕೆಗೆ(ಅಪರಾಧ ವಿಭಾಗ) ಸಹಾಯಕ.
    ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯವಿಜ್ಞಾನ ಮತ್ತು ವಿಶ್ಲೇಷಣೆಗೆ ಸಂಬಂಧಿಸಿದ ಸಾಕ್ಷಿಗಳನ್ನು ಮತ್ತು ಮಾಹಿತಿಗಳನ್ನು ಒದಗಿಸಲು ಈ ಕೋರ್ಸ ಸಹಾಯಕ.
    ವೈದ್ಯಕೀಯದಲ್ಲಿ ವಿಶೇಷ ಪರಿಣಿತಿ ಪಡೆಯಲು ಮತ್ತು  ಮರಣೋತ್ತರ ಪರೀಕ್ಷೆ ಮಾಡುವ ಅರ್ಹತೆಗಾಗಿ ಈ ಕೋರ್ಸ ಅವಶ್ಯಕ.
ವಿದ್ಯಾರ್ಹತೆ : ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಭಾಗ ಅಪೇಕ್ಷಣೀಯ. ಅದರಲ್ಲೂ ಮುಖ್ಯವಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳ ಅಧ್ಯಯನ ಅವಶ್ಯಕ. ಬಿ.ಎಸ್ಸಿ ಮತ್ತು ಕಾನೂನು ಪದವಿ ಪಡೆದವರೂ ಈ ಕೋರ್ಸ ಸೇರಬಹುದಾಗಿದೆ.
ಕೋರ್ಸನ ವಿಧಗಳು :
•    3 ವರ್ಷದ ಪದವಿ ಕೋರ್ಸ(ಬಿ.ಎಸ್ಸಿ)
•    2 ವರ್ಷದ ಸ್ನಾತಕೋತ್ತರ ಪದವಿ ಕೋರ್ಸ(ಎಂ.ಎಸ್ಸಿ)
•    1 ಅಥವಾ 2 ವರ್ಷದ ಡಿಪ್ಲೋಮಾ ಕೋರ್ಸ
•    1 ವರ್ಷದ ಸರ್ಟಿಫಿಕೆಟ್ ಕೋರ್ಸ
ಕೋರ್ಸನಲ್ಲಿ ಏನಿರುತ್ತದೆ ?
    ನ್ಯಾಯವಿಜ್ಞಾನದ ಮೂಲಾಂಶಗಳು, ನೀತಿ ನಿಯಮಗಳು, ವಿಧಾನಗಳು, ಕಾನೂನುಗಳು, ಅಡ್ಡ ಪರೀಕ್ಷೆಗಳು,
    ಅಪರಾಧ ಸನ್ನಿವೇಶದ ಸಾಕ್ಷಿ ಸಂಗ್ರಹ ಮತ್ತು  ತನಿಖೆ
    ಭೌತಿಕ ಸಾಕ್ಷ್ಯಾಧಾರಗಳ ಸಂಸ್ಕರಣೆ ಮತ್ತು ತನಿಖೆ
    ಕೂದಲು, ಎಳೆ ಹಾಗೂ ಇತರೆ ಸೂಕ್ಷ್ಮ ವಸ್ತುಗಳ ಪರೀಕ್ಷಣೆ
    ವಿಷವಿಜ್ಞಾನ ಮತ್ತು ನ್ಯಾಯವಿಜ್ಞಾನ
    ಡಿ.ಎನ್.ಎ ಮತ್ತು ಸಿರಮ್‍ಶಾಸ್ತ್ರ
    ದಾಖಲೆಗಳ ಪ್ರಶ್ನಿಸುವಿಕೆ ಮತ್ತು ಕೈಬರಹ ಪರೀಕ್ಷಣೆ
    ಶಂಕಿತ ವಸ್ತುಗಳ ಮೇಲಿನ ಬೆರಳಚ್ಚು ಪರೀಕ್ಷೆ
    ಫಿರಂಗಿ, ಬಂದೂಕು, ಸಿಡಿಮದ್ದುಗಳಂತಹ ಸ್ಫೋಟಕಗಳ ತನಿಖೆ
    ಫೋರೆನ್ಸಿಕ್ ಸೈಕಾಲಜಿ, ಮಾನವಶಾಸ್ತ ಹಾಗೂ ವಿಧಿವಿಜ್ಞಾನ ಇಂಜಿನಿಯರಿಂಗ್
    ನ್ಯಾಯ ಕೀಟಶಾಸ್ತ್ರ
    ವನ್ಯಜೀವಿ ನ್ಯಾಯವಿಜ್ಞಾನ
    ಮಾಧ್ಯಮ ವರದಿಗಾರಿಕೆ ಹಾಗೂ ಕಾನೂನುಗಳು
    ಕೋರ್ಸನ ನಂತರ ಪ್ರಾಯೋಗಿಕ ಅನುಭವ(ಇಂಟರ್ನಶಿಪ್) ಪಡೆಯುವುದು ಮುಖ್ಯ. ಇಂಟರ್ನಶಿಪ್ ಅವಧಿಯಲ್ಲಿ ಸ್ಟೈಫಂಡರಿ ಇರುತ್ತದೆ. ಇಂಟರ್ನಶಿಪ್‍ನಿಂದ ಅನುಭವದ ಜೊತೆಗೆ ಬೇರೆ ಬೇರೆ ಕಡೆ ಉದ್ಯೋಗಾವಕಾಶಗಳು ದೊರೆಯುತ್ತವೆ.
ವೆಚ್ಚದಾಯಕವೇನಲ್ಲ !
    ವೈದ್ಯಕೀಯ ಶಿಕ್ಷಣ ಮತ್ತು ಇಂಜಿನಿಯರಿಂಗ್ ಶಿಕ್ಷಣಗಳಿಗೆ ಹೋಲಿಸಿದರೆ ಫೋರೆನ್ಸಿಕ್ ಸೈನ್ಸ್ ವೆಚ್ಚದಾಯಕವೇನಲ್ಲ. ಕಾಲೇಜುಗಳ ಗುಣಮಟ್ಟ ಹಾಗೂ ವ್ಯವಸ್ಥೆಯ ಮೇಲೆ ಶುಲ್ಕ ನಿಗದಿಯಾಗಿರುತ್ತದೆ. ಭಾರತದಲ್ಲಿ ಈ ಕೋರ್ಸನ ಒಟ್ಟಾರೆ ವೆಚ್ಚ ರೂ.2 ರಿಂದ 3 ಲಕ್ಷಗಳು ಮಾತ್ರ. ಇದರಲ್ಲಿ ಬಹುಪಾಲು ಶುಲ್ಕ ಪ್ರಯೋಗಾಲಯ ವೆಚ್ಚಕ್ಕೆ ಮೀಸಲಿರುತ್ತದೆ. ಪ.ಜಾತಿ ಮತ್ತು ಪ.ಪಂಗಡದವರು ಹಾಗೂ ಅಂಗವಿಕಲರಿಗೆ ಶುಲ್ಕ ವಿನಾಯಿತಿ ಇರುತ್ತದೆ. ಜೊತೆಗೆ ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯವೂ ಇರುತ್ತದೆ. ಹಾಗಾಗಿ ಈ ಕೋರ್ಸ ವೆಚ್ಚದಾಯಕವೇನಲ್ಲ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ
    ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಫೋರೆನ್ಸಿಕ್ ಸೈನ್ಸ್ ಪಡೆದವರಿಗೆ ತುಂಬಾ ಬೇಡಿಕೆ ಇದೆ. ಬಹುತೇಕ ವೈಟ್ ಕಾಲರ್ ಅಪರಾಧದ ಸಮಸ್ಯೆಗಳು ಫೋರೆನ್ಸಿಕ್ ಸೈನ್ಸ್‍ನಿಂದ ನ್ಯಾಯಸಮ್ಮತಗೊಂಡಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ವೃತ್ತಿಗೆ ತುಂಬಾ ಬೇಡಿಕೆ ಇದೆ. ಭಾರತದಲ್ಲೂ ಸಾಕಷ್ಟು ಅವಕಾಶಗಳಿವೆ.
ವೃತ್ತಿ ಅವಕಾಶಗಳು
ಸರ್ಕಾರಿ ವಲಯ    ಖಾಸಗೀ ವಲಯ
    ಪೋಲೀಸ್ ಇಲಾಖೆಯಲ್ಲಿ,
    ರಕ್ಷಣಾ ಇಲಾಖೆಯಲ್ಲಿ,
    ಅಗ್ನಿ ತನಿಖಾ ದಳದಲ್ಲಿ,
    ಅಪರಾಧ ತನಿಖಾ ದಳದಲ್ಲಿ,
    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನ್ಯಾಯವಿಜ್ಞಾನ ಪ್ರಯೋಗಾಲಯಗಳಲ್ಲಿ,
    ಪ್ರಾದೇಶಿಕ   ನ್ಯಾಯವಿಜ್ಞಾನ ಪ್ರಯೋಗಾಲಯಗಳಲ್ಲಿ,
    ಸಿ.ಬಿ.ಐ/ ಸಿ.ಐ.ಡಿಗಳಲ್ಲಿ
    ಗುಣಮಟ್ಟ ನಿಯಂತ್ರಣ ಸಂಸ್ಥೆಗಳಲ್ಲಿ,
    ಮಾದಕ ವಸ್ತು ತನಿಖಾ ವಿಭಾಗದಲ್ಲಿ,
    ಆಸ್ಪತ್ರೆಗಳಲ್ಲಿ,
    ಬ್ಯಾಂಕ್‍ಗಳಲ್ಲಿ,
    ವಿಶ್ವವಿದ್ಯಾಲಯಗಳಲ್ಲಿ,        ಖಾಸಗೀ ಪತ್ತೇದಾರಿ ಸಂಸ್ಥೆಗಳಲ್ಲಿ,
    ಖಾಸಗೀ ಬ್ಯಾಂಕ್‍ಗಳಲ್ಲಿ,
    ವಿಮಾ ಕಂಪನಿಗಳಲ್ಲಿ,
    ಖಾಸಗೀ ವಿಶ್ವವಿದ್ಯಾಲಯಗಳಲ್ಲಿ,
    ಖಾಸಗೀ ಬ್ಯಾಂಕ್‍ಗಳಲ್ಲಿ,
    ಭದ್ರತಾ ಸೇವಾ ಸಂಸ್ಥೆಗಳಲ್ಲಿ,
    ವಕೀಲರಿಗೆ ಸಲಹೆಗಾರರಾಗಿ,
    ಕಾನೂನು ಕಾಲೇಜುಗಳಲ್ಲಿ ಭೋಧಕರಾಗಿ,
    ಸ್ವಂತ ಪ್ರಯೋಗಾಲಯ ಸ್ಥಾಪಿಸಲು,
    ಖಾಸಗೀ ಆಸ್ಪತ್ರೆಗಳಲ್ಲಿ,


ಫೋರೆನ್ಸಿಕ್ ಸೈನ್ಸ್‍ನ ಕೆಲವು ಕಾಲೇಜುಗಳು :
•    ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಅಂಡ್ ಫೋರೆನ್ಸಿಕ್ ಸೈನ್ಸ್, ನ್ಯೂಡೆಲ್ಲಿ.
•    ಯೂನಿವರ್ಸಿಟಿ ಆಫ್ ಲಕ್ನೋ.
•    ಲೋಕನಾಯಕ ಜಯಪ್ರಕಾಶ ನಾರಾಯಣ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಅಂಡ್ ಫೋರೆನ್ಸಿಕ್ ಸೈನ್ಸ್, ಡೆಲ್ಲಿ.
•    ಡಾ.ಹರಿಸಿಂಗ್ ಗೌರ್ ವಿಶ್ವವಿದ್ಯಾಲಯ, ಸಾಗರ, ಮಧ್ಯಪ್ರದೇಶ.
•    ಯೂನಿವರ್ಸಿಟಿ ಆಫ್ ಡೆಲ್ಲಿ.
•    ಅಣ್ಣಾಮಲೈ ಯೂನಿವರ್ಸಿಟಿ, ಚೆನ್ನೈ.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಹೈದರಾಬಾದ.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಚಂಡೀಘಡ್.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಕಲ್ಕತ್ತಾ.
•    ಡಾ//ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜ್, ಬೆಂಗಳೂರು.
•    ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜ್, ಬೆಂಗಳೂರು.
•    ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜ್, ಬೆಳಗಾಂ.
•    ಜೈನ್ ಯೂನಿವರ್ಸಿಟಿ, ಬೆಂಗಳೂರು.
•    ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಮೈಸೂರು.

                                                                  ಆರ್.ಬಿ.ಗುರುಬಸವರಾಜ

September 24, 2014

ಧೈರ್ಯದಿಂದ ಇಂಟರ್ ವ್ಯೂವ್ ಎದುರಿಸಿ

 ಧೈರ್ಯದಿಂದ  ಇಂಟರ್ ವ್ಯೂವ್ ಎದುರಿಸಿ
       
      ಉದ್ಯೋಗಾಕಾಂಕ್ಷಿಗಳ ಜೀವನದಲ್ಲಿ ಸಂದರ್ಶನ ಬಹು ಮುಖ್ಯವಾದ ಅಂಶ. ಸಂದರ್ಶನದಲ್ಲಿ ಸಂದರ್ಶಕರ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ದೇಹಭಾಷೆ. ಇಂತಹ ವೇಳೆ ದೇಹಭಾಷೆಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಭವಿಷ್ಯ ಉಜ್ವಲವಾಗುತ್ತದೆ. ಸಂದರ್ಶನದ ವೇಳೆ ನಿಮಗೇನು ಬೇಕೆಂದು, ನಿಮ್ಮಲ್ಲಿನ ಜಾಣೆ ಎಂತಹದೆಂದು, ನೀವೆಷ್ಟು ಕ್ರಿಯಾಶೀಲರು, ಸೃಜನಶೀಲರು ಎಂಬುದನ್ನು ನಿಮ್ಮ ಮಾತುಗಳಲ್ಲಿ ತಿಳಿಸಬಹುದು. ಆದರೆ ನಿಮ್ಮ ದೇಹಭಾಷೆ ಇದಕ್ಕೆ ವಿರುದ್ದವಾಗಿದ್ದರೆ ಸಂದರ್ಶನ ವಿಫಲವಾಗುತ್ತದೆ. ದೇಹಭಾಷೆ ನಿಖರವಾಗಿಲ್ಲದಿದ್ದರೆ ನೀವೊಬ್ಬ ವಿಶ್ವಾಸಾರ್ಹತೆಯಿಲ್ಲದ, ಅಭದ್ರತೆಯುಳ್ಳ ದುರಹಂಕಾರಿ ಎಂಬುದನ್ನು ತೋರಿಸಿದಂತಾಗುತ್ತದೆ. ಯಾವ ಸಂದರ್ಶಕರ ತೀರ್ಮಾನಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದೋ ಗೊತ್ತಿಲ್ಲ. ಆದ್ದರಿಂದ ಸಂದರ್ಶನದ ದೇಹಭಾಷೆ ಹೀಗಿರಲಿ.
ಹಸ್ತಲಾಘವ : ಸಂದರ್ಶನದ ಕೊಠಡಿಯೊಳಗೆ ಪ್ರವೇಶಿಸಿದ ಕೂಡಲೇ ಅಲ್ಲಿನ ಸಂದರ್ಶಕರು ಕೈಕುಕಲು ಮುಂದಾಗುವುದಕ್ಕಿಂತ ಮೊದಲು ನೀವು ಕೈಕುಲುಕಿ. ಇದು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಮತ್ತು ಸಂದರ್ಶನಕ್ಕೆ ನೀವು ಸಿದ್ದರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ.
     ಹೀಗೆ ಕೈಕುಲುಕುವಾಗ ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ 450 ಅಂತರ ಇರಲಿ. ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ನಡುವಿನ ಚರ್ಮ ಕೈಕುಲುಕುವವರ ಕೈಗಳನ್ನು ಸ್ಪರ್ಶಿಸಲಿ. ಎಲ್ಲಾ ಬೆರಳುಗಳಿಂದ ಅವರ ಕೈಯನ್ನು ಮುಚ್ಚಿ ಗಟ್ಟಿಯಾಗಿ ಹಿಡಿಯಿರಿ.
      ಹಗುರವಾದ ಕೈಕುಲುವಿಕೆಯನ್ನು ತಪ್ಪಿಸಿ. ಹಗುರವಾದ ಕೈಕುಲುಕುವಿಕೆಯಿಂದ ನೀವು ಅಧೀರರು, ಅನಿಶ್ಚಿತತೆ ಅನುಭವಿಸುವವರು ಎಂಬುದನ್ನು ತೋರಿಸುತ್ತದೆ. ಅಂತೆಯೇ ಎರಡೂ ಕೈಗಳಿಂದ ಕೈಕುಲುಕಬೇಡಿ. ಅದು ನೀವು ತುಂಬಾ ಪ್ರಬಲರು ಅಥವಾ ಅಭದ್ರತೆ ಸರಿದೂಗಿಸಲು ಪ್ರಯತ್ನಿಸುವವರು ಎಂಬುದನ್ನು ಸಾಬೀತುಪಡಿಸಿದಂತಾಗುತ್ತದೆ.
ಬೆವರನ್ನು ತಪ್ಪಿಸಿ : ನೀವು ಹೆಚ್ಚಾಗಿ ಬೆವರುತ್ತೀರಾ? ಹಾಗಿದ್ದರೆ ಸಂದರ್ಶನ ಕೊಠಡಿ ತಲುಪುವುದಕ್ಕಿಂತ ಮೊದಲು ಮುಖ ತೊಳೆದುಕೊಂಡು ರಿಫ್ರೆಶ್ ಆಗಿ. ಕರವಸ್ತ್ರದಿಂದ ಕೈಗಳನ್ನು ಒಣಗಿಸಿಕೊಳ್ಳಿ.  ಸಂದರ್ಶನ ಕೊಠಡಿಯಲ್ಲಿ ಹಣೆ ಮತ್ತು ಕೈಗಳಲ್ಲಿನ ಬೆವರನ್ನು ಕೈಗಳಿಂದ ಒರೆಸಬೇಡಿ. ಕರವಸ್ತ್ರ ಬಳಸಿ. ಹಸ್ತಲಾಘವ ನೀಡುವಾಗ ನಿಮ್ಮ ಕೈಗಳು ಒದ್ದೆಯಾಗಿದ್ದರೆ ನೀವು ಅಧೀರರು, ಅನಿಶ್ಚಿತರು, ನರದೌರ್ಬಲ್ಯದಿಂದ ಬಳಲುವವರು ಎಂಬುದು ತಿಳಿಯುತ್ತದೆ.
ಕಣ್ಣುಗಳ ಸಂಪರ್ಕವಿರಲಿ : ಸಂದರ್ಶಕರೊಂದಿಗೆ ಸಂಭಾಷಣೆ ನಡೆಸುವಾಗ ನಿರಂತರವಾಗಿ ಕಣ್ಣುಗಳ ಸಂಪರ್ಕವಿರಲಿ. ಸಂಭಾಷಣೆ ವೇಳೆ ಅತ್ತಿತ್ತ ನೋಡುತ್ತಿದ್ದರೆ ನೀವು ಅಸುರಕ್ಷಿತರು, ಅಪ್ರಾಮಾಣಿಕರು, ಅಸಡ್ಡೆಯುಳ್ಳವರು ಎಂಬುದು ತಿಳಿಯುತ್ತದೆ. ಸಂದರ್ಶಕರು ಏಕಕಾಲದಲ್ಲಿ ನಿಮ್ಮೊಂದಿಗೆ ಸಂಭಾಷಿಸುತ್ತಾರೆ. ಅಂತಹ ವೇಳೆ ಎಲ್ಲರೊಂದಿಗೂ ನೇರ ನೋಟದೊಂದಿಗೆ ಮಾತನಾಡಿ. ಪ್ರತಿಯೊಬ್ಬ ಸಂದರ್ಶಕರನ್ನು ಸಮಭಾವದಿಂದ ಗೌರವಿಸಿ. ಪ್ರಶ್ನೆಗೆ ಉತ್ತರಿಸುವಾಗ ದೃಷ್ಟಿಯನ್ನು ದೂರ ಹಾಯಿಸಬೇಡಿ ಅಥವಾ ಕೆಳಗೆ ನೋಡಬೇಡಿ. ಪ್ರಶ್ನೆ ಕೇಳಿದವರ ಕಡೆ ನೋಟ ಹರಿಸಿ ಉತ್ತರಿಸಿ. ಕಣ್ಣುಗಳ ಸಂಪರ್ಕದೊಂದಿಗೆ ಮಾತನಾಡುವುದರಿಂದ ನೀವು ಪ್ರಾಮಾಣಿಕರು ಹಾಗೂ ವೃತ್ತಿಯನ್ನು ಹೆಚ್ಚು ಪ್ರೀತಿಸುವವರು ಎಂಬುದು ತಿಳಿಯುತ್ತದೆ.
ನೇರವಾಗಿ ಕುಳಿತುಕೊಳ್ಳಿ : ನಿಮಗೆ ಮೀಸಲಾದ ಆಸನದಲ್ಲಿನ ಬೆನ್ನಾಸರೆಗೆ ಒರಗಿ ನೇರವಾಗಿ ಸ್ಥಿರವಾಗಿ ಕುಳಿತುಕೊಳ್ಳಿ. ಹಗುರವಾಗಿ ಅಥವಾ ಒಂದುಕಡೆ ವಾಲಿದಂತೆ ಕುಳಿತರೆ ಅದು ನಿಮ್ಮ ಅಸ್ಥಿರತೆಯನ್ನು ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ. ನಿಮ್ಮ ಭುಜಗಳನ್ನು ಸಾಮಾನ್ಯ ಮಟ್ಟಕ್ಕಿಂತ ಕೆಳಗಿರಲಿ. ಅಂತೆಯೇ ಸಂದರ್ಶಕರ ಸ್ಥಳವನ್ನು ಗೌರವಿಸಿ.
ಸ್ಥಿರವಾಗಿರಿ: ಕುಳಿತುಕೊಂಡಾಗ ನಿಮ್ಮ ಕಾಲುಗಳನ್ನು ಅಲುಗಾಡಿಸದೇ ಸ್ಥಿರವಾಗಿ ಕುಳಿತುಕೊಳ್ಳಿ. ಮಾತಿನ ಚಲನೆ ಹಾಗೂ ಔಪಚಾರಿಕ ಭಂಗಿಯ ನಡುವೆ ಸಮತೋಲನ ಇರಲಿ. ಅನಾವಶ್ಯಕವಾಗಿ ಕೈಗಳನ್ನು ಚಲಿಸುವುದು ಅಥವಾ ಚಲಿಸದೇ ಇರುವುದು ಸರಿಯಲ್ಲ. ಇದು ವ್ಯಕ್ತಿ ಗೊಂದಲದಲ್ಲಿದ್ದಾನೆ ಎಂಬುದನ್ನು ಹೇಳುತ್ತದೆ. ಆದ್ದರಿಂದ ಮಾತಿನ ಲಯಕ್ಕೆ ತಕ್ಕಂತೆ ಕೈಗಳ ಚಲನೆ ಇರಲಿ.
ನಿರಾಳವಾಗಿರಿ : ನಿಮ್ಮ ಮಾತುಗಳು ಸಹಜವಾಗಿರಲಿ, ಹಿತ ಮಿತವಾಗಿರಲಿ. ಹೆಚ್ಚು ಆವೇಶಭರಿತರಾಗಬೇಡಿ. ಮಾನಸಿಕ ಒತ್ತಡವನ್ನು ಸಮ ಮಟ್ಟದಲ್ಲಿ ಕಾಯ್ದುಕೊಳ್ಳಿ. ಅತೀಯಾದ ಒತ್ತಡ ಪ್ರದರ್ಶಿಸಬೇಡಿ. ಇದರಿಂದ ನೀವು ಉದಾಸೀನರೆಂಬುದು ತಿಳಿಯುತ್ತದೆ.
ಒಪ್ಪಿಗೆಗೆ ಮಾತ್ರ ತಲೆದೂಗಿ : ಸಂದರ್ಶಕರು ಏನು ಹೇಳುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳದೇ ಅನಾವಶ್ಯಕವಾಗಿ ತಲೆದೂಗಬೇಡಿ. ಅನಾವಶ್ಯಕವಾಗಿ ತಲೆದೂಗುವುದು ಅವಿಧೇಯತೆ ಮತ್ತು ಅಪ್ರಾಮಾಣಿಕತೆಯ ಸಂಕೇತ. ಪ್ರಮುಖಾಂಶಗಳನ್ನು ಅರ್ಥಮಾಡಿಕೊಂಡಾಗ ಮತ್ತು ಅವರ ಹೇಳಿಕೆಯನ್ನು ಒಪ್ಪಿಕೊಂಡಾಗ ಮಾತ್ರ ತಲೆದೂಗಿ.
ಕೈಗಳನ್ನು ಕಟ್ಟಬೇಡಿ : ಸಂದರ್ಶಕರ ಎದುರು ಕೈಕಟ್ಟಿ ಕೂರಬೇಡಿ. ಕೈಕಟ್ಟುವುದು ನಿಮ್ಮಲ್ಲಿನ ವಿಶ್ವಾರ್ಹತೆ ಮತ್ತು ಆಸಕ್ತಿಯ ಕೊರತೆಯನ್ನು ಎತ್ತಿ ತೋರುತ್ತದೆ. ಕೈಗಳು ನಿಮ್ಮ ತೊಡೆಯ ಮೇಲಿರಲಿ ಅಥವಾ ಟೇಬಲ್ ಮೇಲಿರಲಿ. ಇದು ಸಂಭಾಷಣೆಗೆ ಮುಕ್ತವಾಗಿ ಕೈಗಳನ್ನು ಚಲಿಸಲು ಸಹಾಯಕವಾಗುತ್ತದೆ. ಹಾಗೂ ಇತರರ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತೀರಿ ಎಂಬುದನ್ನು ತಿಳಿಸುತ್ತದೆ.
ಬೆರಳುಗಳನ್ನು ಹಿಸುಕಬೇಡಿ : ಸಂದರ್ಶಕರ ಎದುರು ಪದೇ ಪದೇ ಬೆರಳುಗಳನ್ನು ಹಿಸುಕಬೇಡಿ. ಇದು ನಿಮ್ಮಲ್ಲಿನ ಅಸ್ಥಿರತೆ ಹಾಗೂ ಅಸ್ಪಷ್ಟತೆಯ ಸಂಕೇತ. ಬೆರಳುಗಳಿಂದ ಮೇಜಿನ ಮೇಲೆ ಕುಟ್ಟಬೇಡಿ, ಲಯಬದ್ದ ಚಲನೆಯನ್ನು ಮಾಡಬೇಡಿ. ಇದು ಸಂದರ್ಶಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಒಟ್ಟಾರೆ ಬೆರಳುಗಳಿಂದ ಯಾವುದೇ ರೀತಿಯ ಶಬ್ದ ಉಂಟಾಗದಂತೆ ಎಚ್ಚರವಹಿಸಿ.
ಅನಪೇಕ್ಷಿತ ಶಬ್ದ ಬೇಡ : ಕೆಲವರು ಮಾತನಾಡುವಾಗ ಗಂಟಲು, ನಾಲಿಗೆ, ತುಟಿ, ಮೂಗುಗಳಿಂದ ವಿಚಿತ್ರ ಶಬ್ದ ಹೊರಡಿಸುತ್ತಾರೆ. ಇದು ನೋಡುಗರಿಗೆ ಕೇಳುಗರಿಗೆ ಅಸಹ್ಯವನ್ನುಂಟು ಮಾಡುತ್ತದೆ. ಆದ್ದರಿಂದ ಮಾತನಾಡುವಾಗ ವಿಚಿತ್ರ ಶಬ್ದಗಳನ್ನು ಹೊರಡಿಸಬೇಡಿ. ಸ್ವಾಭಾವಿಕವಾಗಿ ಮಾತನಾಡಿ. ಪದೇ ಪದೇ ಗಲ್ಲ, ತುಟಿ, ಕೆನ್ನೆ, ಮೂಗು, ಕಿವಿಗಳನ್ನು ಕೆರೆಯುವುದು, ಕಣ್ಣೊರೆಸಿಕೊಳ್ಳುವುದು ಮಾಡಬೇಡಿ. ಇದು ನಿಮ್ಮ ಅವಿಶ್ವಾಸವನ್ನು ವೃತ್ತಿಯಲ್ಲಿನ ನಿರಾಸಕ್ತಿಯನ್ನು ಸೂಚಿಸುತ್ತದೆ.
       ಮೇಲಿನ ಅಂಶಗಳನ್ನು ಪಾಲಿಸಿ ನಿಮ್ಮದೇ ಅದ ದೇಹಭಾಷೆ ಬೆಳೆಸಿಕೊಂಡರೆ ನೀವೊಬ್ಬ ಅತ್ಯುತ್ತಮ ಅಭ್ಯರ್ಥಿ ಎಂಬುದನ್ನು ಸಾಬೀತುಪಡಿಸಬಹುದು ಜೊತೆಗೆ ವೃತ್ತಿಯಲ್ಲಿ ಯಶಸ್ಸು ಗಳಿಸಬಹುದು.

                                                                                                                        ಆರ್.ಬಿ.ಗುರುಬಸವರಾಜ.

September 17, 2014

ದೇಹಭಾಷೆ

 ಹುಷಾರು, ದೇಹಭಾಷೇನೇ ನಿಮ್ಮ ಬಗ್ಗೆ ಹೇಳುತ್ತೆ!




    ನಮ್ಮ ದೈನಂದಿನ ವ್ಯವಹಾರವು ಶಾಬ್ದಿಕ ಮತ್ತು ಅಶಾಬ್ದಿಕ ಎಂಬ ಎರಡು ಸಂವಹನಗಳಿಂದ ನಡೆಯುತ್ತದೆ. ನಾವು ಶೇಕಡಾ 93ರಷ್ಟು ಪದರಹಿತವಾಗಿಯೇ ಅಂದರೆ ಅಶಾಬ್ದಿಕವಾಗಿ ಸಂವಹನ ನಡೆಸುತ್ತೇವೆ. ಧ್ವನಿ, ಲಯ, ದೇಹಭಂಗಿ, ಹಾವಭಾವಗಳು, ಮುಖದ ಅಭಿವ್ಯಕ್ತಿ ಇವೆಲ್ಲವೂ ಅಶಾಬ್ದಿಕ ಸಂವಹನದ ಉದಾಹರಣೆಗಳಾಗಿವೆ. ಇದನ್ನೇ ದೇಹಭಾಷೆ ಎನ್ನುತ್ತೇವೆ.
    ನಾವು ಶಾಲಾ ಶಿಕ್ಷಣದಲ್ಲಿ ಮಾತನಾಡುವ ಶೈಲಿಯನ್ನು ಕಲಿಯುವುದರ ಜೊತೆಗೆ ಶಬ್ದಭಂಢಾರವನ್ನು ಹೆಚ್ಚಿಸಿಕೊಳ್ಳುತ್ತೇವೆ. ಆದರೆ ಅಲ್ಲಿ ದೇಹಭಾಷೆಯನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬ ಬಗ್ಗೆ ಯಾವುದೇ ಕಲಿಕೆ ಇರುವುದಿಲ್ಲ. ಇದು ನಮ್ಮಷ್ಟಕ್ಕೆ ನಾವೇ ಕಲಿತುಕೊಳ್ಳಬೇಕಾದ ಸ್ವಯಂ ಕಲಿಕೆಯಾಗಿದೆ. ನಿಲ್ಲುವ ಭಂಗಿ, ನಡೆಯುವ ರೀತಿ, ಇತರರಿಗೆ ಕಾಣುವ ರೀತಿ ಎಲ್ಲವನ್ನೂ ನಾವೇ ಕಲಿಯಬೇಕಾಗಿದೆ. ಆಕರ್ಷಕ ವ್ಯಕ್ತಿತ್ವ ನಮ್ಮದಾಗಲು ನಮ್ಮ ದೇಹ ಭಾಷೆಯನ್ನು ಉತ್ತಮವಾಗಿ ಬೆಳೆಸಿಕೊಳ್ಳಬೇಕು ಮತ್ತು ಬಳಸಿಕೊಳ್ಳಬೇಕು.
    ನಾವು ಭೇಟಿಯಾಗುವ ಜನರನ್ನು ಆಧರಿಸಿ ದೇಹಭಾಷೆ ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ ನಮಗೆ ವಿದ್ಯೆ ಕಲಿಸಿದ ಗುರುಗಳೊಂದಿಗೆ ಮಾತನಾಡುವಾಗ ನೇರವಾಗಿ, ವಿಧೇಯರಾಗಿ ಕೈಕಟ್ಟಿ, ಚಡಪಡಿಕೆ ಇಲ್ಲದೇ ಸಭ್ಯರಾಗಿ ನಿಲ್ಲುತ್ತೇವೆ. ಅದೇ ನಾವು ಸ್ನೇಹಿತರೊಂದಿಗೆ ಇರುವಾಗ ಸಂಪೂರ್ಣವಾಗಿ ನಮ್ಮ ಚಹರೆ ಮತ್ತು ದೇಹಭಾಷೆ ಬೇರೆಯಾಗಿರುತ್ತದೆ. ಸ್ನೇಹಿತರೊಂದಿಗೆ ಕೈಕುಲುಕುತ್ತೇವೆ ಅಥವಾ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುದ್ದಾಡುತ್ತೇವೆ. ಒಬ್ಬರನ್ನೊಬ್ಬರು ಆಕರ್ಷಿಸುತ್ತಾ ಆಹ್ಲಾದಕರವಾಗಿ ಇರುತ್ತೇವೆ.    ಕೆಲವೊಮ್ಮೆ ಪರಸ್ಪರರು ಭೇಟಿಯಾಗಿ ವಿಶ್ ಮಾಡಿದಾಗ ಅದು ಚೀರಿದಂತೆ ಅಥವಾ ಕೂಗಿದಂತೆ ಇರುತ್ತದೆ. ಇದು ನೋಡುಗರಿಗೆ ಅಸಹ್ಯವಾಗಿರುತ್ತದೆ. ಆದ್ದರಿಂದ ನಾವು ಸಮಯ ಸಂದರ್ಭಕ್ಕೆ ಅನುಗುಣವಾಗಿ ದೇಹಭಾಷೆಯನ್ನು ಬಳಸಿಕೊಳ್ಳಬೇಕು. ಇಂತಹ ಅಶಾಬ್ದಿಕ ಅಥವಾ ಪದರಹಿತ ಸಂವಹನವನ್ನು ಉತ್ತಮಪಡಿಸಿಕೊಳ್ಳಲು “ಪಂಚಕಜ್ಜಾಯ” ಇಲ್ಲಿದೆ.
ನೋಟ ನೆಟ್ಟಗಿರಲಿ : ನಮ್ಮ ಎದುರಿಗೆ ಇದ್ದವರಿಗೆ ನಾವು ಹೇಳಬೇಕಾದುದನ್ನು ನಮ್ಮ ಕಣ್ಣುಗಳು ಹೇಳುತ್ತವೆ. ಕಣ್ಣುಗಳು ನಮ್ಮ ಮನಸ್ಸಿನ ಮತ್ತು ಹೃದಯದ ರಹದಾರಿಗಳಿದ್ದಂತೆ. ಕಣ್ಣುಗಳನ್ನು ನೋಡಿದಾಕ್ಷಣ ಸಂತೋಷವಾಗಿರುವರೋ, ದುಃಖದಲ್ಲಿರುವರೋ, ಭಯ ಭೀತರಾಗಿರುವರೋ ಅಥವಾ ಯಾವುದೋ ವಿಷಯವನ್ನು ಆಂತರ್ಯದಲ್ಲಿ ಅಡಗಿಸಿ ಕೊಂಡಿರುವರೋ ಎಂದು ಹೇಳಬಹುದು. ಆದ್ದರಿಂದ ಇತರರೊಂದಿಗೆ ಸಂಭಾಷಿಸುವಾಗ ನಮ್ಮ ನೋಟ ನಿಖರವಾಗಿರಲಿ. ಆ ನೋಟದಲ್ಲಿ ಆತ್ಮೀಯತೆ ಇರಲಿ.
ಉತ್ತಮ ಮನೋಭಾವ : ನಮ್ಮ ಮನೋಭಾವ ಜನರನ್ನು  ನಮ್ಮ ಹತ್ತಿರಕ್ಕೆ ಅಥವಾ ನಮ್ಮನ್ನು ಜನರ ಹತ್ತಿರಕ್ಕೆ ಕರೆದೊಯ್ಯುತ್ತದೆ. ವ್ಯಕ್ತಿಯ ಮನೋಭಾವವನ್ನು ಅವರು ನಿಂತಭಂಗಿ, ಹಾವಭಾವ, ನೋಟಗಳಿಂದ ಗುರುತಿಸಬಹುದು. ಉತ್ತಮ ಮನೋಭಾವದಿಂದ ಎಂತಹ ವೈರಿಯನ್ನಾದರೂ ಗೆಲ್ಲಬಹುದು. ಅದಕ್ಕೆ ಗೌತಮ ಬುದ್ದ ಅಂಗುಲೀಮಾಲನನ್ನು ಬದಲಾಯಿಸಿದ ಉದಾಹರಣೆಗಿಂತ ಮತ್ತೊಂದಿರಲಾರದು.
ಅಂತರ ಕಾಯ್ದುಕೊಳ್ಳಿ : ಪ್ರತಿಯೊಬ್ಬ ವ್ಯಕ್ತಿಯು ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಂದರೆ ನಾವು ವ್ಯವಹರಿಸುವ ವ್ಯಕ್ತಿಗಳೊಂದಿಗೆ ಸೂಕ್ತ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸ್ನೇಹಿತರೊಂದಿಗೆ ಸಲುಗೆಯಿಂದ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುವಂತೆ ಗೌರವಾನ್ವಿತರೊಂದಿಗೆ ನಡೆದುಕೊಳ್ಳಬಾರದು. ಅತೀ ದೂರದಲ್ಲಿ ಅಥವಾ ಅತೀ ಸಮೀಪದಲ್ಲಿ ನಿಲ್ಲುವುದು ಸಹ ಉಚಿತವಲ್ಲ. ಏಕೆಂದರೆ ಅದು ನೀವು ಅವರನ್ನು ತಿರಸ್ಕರಿಸುತ್ತೀರಿ ಅಥವಾ ಅವರಲ್ಲಿ ಆಸಕ್ತಿ ಇಲ್ಲ ಎಂಬುದನ್ನು ತೋರಿಸುತ್ತದೆ. ಆದ್ದರಿಂದ ವ್ಯವಹರಿಸುವ ವ್ಯಕ್ತಿಗಳನ್ನು ಆಧರಿಸಿ ಸೂಕ್ತ ಅಂತರ ಕಾಯ್ದುಕೊಳ್ಳಿ.
ಮಾತು ಮುತ್ತಾಗಲಿ : ಇತರರೊಂದಿಗೆ ವ್ಯವಹರಿಸುವಾಗ ಮಾತನಾಡುವ ಶೈಲಿಯೂ ಸಹ ತುಂಬಾ ಪ್ರಾಮುಖ್ಯವಾದುದು. ಮಾತು ಹಿತ ಮಿತವಾಗಿರಲಿ. ಮಾತಿನಲ್ಲಿ ಶಿಸ್ತು, ಸಭ್ಯತೆ ಇರಲಿ. ಮಾತಿನಲ್ಲಿ ಆತ್ಮವಿಶ್ವಾಸ ಇರಲಿ. ಜೊತೆಗೆ ಮಾತಿನ ಮೇಲೆ ನಿಗಾ ಇರಲಿ. ಸಮಯ ಸಂದರ್ಭಗಳು ನೆನಪಿರಲಿ. ನಾನೆಲ್ಲಿದ್ದೇನೆ, ಯಾರೊಂದಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಪ್ರಜ್ಞೆ ಇರಲಿ. ಮಾತಿನ ಜೊತೆಗೆ ಕಣ್ಣು, ಕೈಗಳ ಚಲನೆ ಇರಲಿ. ಸೂಕ್ತ ಹಾವಭಾವ ತುಂಬಿರಲಿ.
ನಗೆ ಬಾಣ ಬೀರಿ : ಒಂದು ಸಣ್ಣ ನಗು ಸಾಕಷ್ಟು ಜನರ ಹೃದಯ ಗೆಲ್ಲುತ್ತದೆ. ಅಂತಹ ಅಮೋಘ ಶಕ್ತಿ ಇರುವುದು ನಗುವಿಗೆ ಮಾತ್ರ. ಇತರರೊಂದಿಗೆ ಮಾತನಾಡುವಾಗ ಸದಾ ನಿಮ್ಮ ಮುಖದಲ್ಲೊಂದು ಸಣ್ಣ ನಗುವಿರಲಿ. ನಗುವಿನಿಂದ ಎಂತಹ ಗಟ್ಟಿಯಾದ ಸಂಕೋಲೆಗಳನ್ನೂ ಮುರಿಯಬಹುದು. ಒಂದು ಸಣ್ಣ ನಗು ಸಿಹಿಯಾದ ವಾತಾವರಣವನ್ನು ನಿರ್ಮಿಸುತ್ತದೆ. ಆದ್ದರಿಂದ ನಿಮ್ಮ ಮುಖದಲ್ಲಿ ಯಾವಾಗಲೂ ಮಂದಹಾಸ ತುಂಬಿರಲಿ.
    ಹಿತಕರವಾದ ದೇಹಭಾಷೆ ಸಹಜವಾಗಿ ಬರುತ್ತದೆ. ಆದರೂ ಸ್ವಲ್ಪ ಪ್ರಯತ್ನದಿಂದ ಅದನ್ನು ಉತ್ತಮವಾಗಿ ಬೆಳೆಸಿಕೊಳ್ಳಬಹುದು. ದೇಹಭಾಷೆಯನ್ನು ಬೆಳೆಸಿಕೊಳ್ಳುವುದು ದೊಡ್ಡ ಕಷ್ಟವೇನಲ್ಲ. ಕೆಲವು ಪರಿಣಾಮಕಾರಿ ಅಂಶಗಳನ್ನು ದಿನನಿತ್ಯ ಅಳವಡಿಸಿಕೊಳ್ಳುವುದರಿಂದ ಶಾಶ್ವತವಾಗಿ ಅದನ್ನು ನಮ್ಮದಾಗಿಸಿಕೊಳ್ಳಬಹುದು. ಆರಂಭದಲ್ಲಿ ಇದು ನಟನೆಯಂತೆ ಕಂಡರೂ ಸತತ ಅಭ್ಯಾಸದಿಂದ ಉತ್ತಮವಾಗಿ ಬೆಳೆಸಿಕೊಳ್ಳಬಹುದು.
                                                                                                               ಆರ್.ಬಿ.ಗುರುಬಸವರಾಜ

September 1, 2014

ಪುಟ್ಟ ಹೆಜ್ಜೆಯನ್ನಿಡೋಣ

                            ಪುಟ್ಟ ಹೆಜ್ಜೆಯನ್ನಿಡೋಣ
    ಶಿಕ್ಷಕ ವೃತ್ತಿಗೆ ಸೇರಿದ ನಾವೆಲ್ಲರೂ ಒಂದಿಲ್ಲೊಂದು ತರಬೇತಿ, ಚರ್ಚೆ, ವಿಚಾರಗೋಷ್ಟಿ, ಸೆಮಿನಾರ್‍ಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಅಂತಹ ಕಾರ್ಯಕ್ರಮಗಳಿಂದ ಕಲಿತ ಕಲಿಕೆ ಬಹುಕಾಲ ಉಳಿಯುವುದಿಲ್ಲ ಎಂಬುದು ನನ್ನ ಅನುಭವಕ್ಕೆ ಬಂದ ಅಂಶ. ಸಾಮಾನ್ಯವಾಗಿ ಅಲ್ಲಿನ ಕಲಿಕೆ ಕಠಿಣವಾಗಿರುವುದಿಲ್ಲ. ಆದರೂ ಅದು ಶಾಶ್ವತವಾಗಿ ಉಳಿಯುವುದಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ‘ನಮ್ಮ ತರಗತಿ ಕೋಣೆಯನ್ನು, ಬೋಧನಾ ವಿಧಾನಗಳನ್ನು, ಒಟ್ಟಾರೆ ನಮ್ಮ ವೃತ್ತಿ ಜೀವನವನ್ನು ಬದಲಾಯಿಸಿಕೊಳ್ಳಬೇಕು’ ಎಂದು ಪಣ ತೊಡುತ್ತೇವೆ. ಈಗಿರುವುದಕ್ಕಿಂತ ಉತ್ತಮವಾಗಿ ತೊಡಗಿಸಿಕೊಳ್ಳಬೇಕು, ಉತ್ತಮ ಶಿಕ್ಷಕ/ಸುಗಮಕಾರರಾಗಬೇಕು, ಹೆಚ್ಚು ವಿವೇಕಯುತ ವ್ಯಕ್ತಿಗಳಾಗಬೇಕು ಎಂದುಕೊಳ್ಳುತ್ತೇವೆ. ಆದರೆ ಎರಡು ದಿನಗಳ ನಂತರ ಮೊದಲಿನಂತೆಯೇ ನಕಾರಾತ್ಮಕ ಭಾವನೆ ಹೊಂದುತ್ತೇವೆ. ಇಂತಹ ಕಾರ್ಯಕ್ರಮಗಳಿಂದ ಕಲಿತ ಕಲಿಕೆ ಕೆಲಸ ಮಾಡಲಿಲ್ಲ. ಏಕೆಂದರೆ ನಾವು ಬದಲಾಗಲಿಲ್ಲ.
    ಪ್ರಸಿದ್ದ ವ್ಯಕ್ತಿಗಳ ಜೀವನ ಚರಿತ್ರೆಯನ್ನು ನೋಡಿದರೆ ಅವರು ಜೀವನದಲ್ಲಿ ಯಶಸ್ವಿಯಾಗಿರುವುದನ್ನು, ಶಾಶ್ವತ ಪರಿವರ್ತನೆ ಆಗಿರುವುದನ್ನು ಗಮನಿಸುತ್ತೇವೆ. ಅವರು ಹೇಗೆ ಉನ್ನತ ಹಂತ ತಲುಪಿದರು? ನಾವೇಕೆ ಉನ್ನತ ಹಂತಕ್ಕೆ ಬೆಳೆಯಲಿಲ್ಲ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಕಾರಣಗಳನ್ನು ಹುಡುಕಿದಾಗ ನಾವು ಹಿಂದುಳಿಯಲು ನಾಲ್ಕು ಪ್ರಮುಖ ಕಾರಣಗಳು ಗೋಚರಿಸುತ್ತವೆ. ಈ ಕಾರಣಗಳನ್ನು ನಾನು ಅನಿಷ್ಟಗಳೆಂದು ಕರೆಯುತ್ತೇನೆ. ಅವುಗಳನ್ನು ದೂರವಿರಿಸಿದರೆ ಮಾತ್ರ ನಾವು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ. ನಿರ್ಧಾರಗಳು ಉತ್ತಮವಾಗಿದ್ದರೆ ಪರಿಣಾಮವೂ ಉತ್ತಮವಾಗಿರುತ್ತದೆ. ನಮ್ಮ ದೌರ್ಬಲ್ಯಗಳು ಯಾವುವೆಂದು ತಿಳಿಯದ ಹೊರತು ನಿವಾರಣೆ ಸಾಧ್ಯವಿಲ್ಲ. ಅಂದರೆ ನಮ್ಮ ತಿಳುವಳಿಕೆ ಹೆಚ್ಚಾದಷ್ಟೂ ಉತ್ತಮವಾಗಿ ಕೆಲಸ ನಿರ್ವಹಿಸಬಹುದು. ನಾವು ಬಯಸುವ ಪರಿವರ್ತನೆಯನ್ನು ತಡೆಯುವ ಆ ನಾಲ್ಕು ಅನಿಷ್ಟಗಳು ಹೀಗಿವೆ.
1)    ಭಯ: ಸಾಮಾನ್ಯವಾಗಿ ನಾವೆಲ್ಲರೂ ಅಪರಿಚಿತ ವಾತಾವರಣದಲ್ಲಿ ಜೀವಿಸಲು ಇಷ್ಟಪಡುವುದಿಲ್ಲ. ಅಜ್ಞಾತ ವಲಯಕ್ಕೆ ಲಗ್ಗೆ ಹಾಕಲು ಬಯಸುವುದಿಲ್ಲ. ಇದನ್ನೇ ತರಗತಿ ಕೋಣೆಗೆ ಹೋಲಿಸುವುದಾದರೆ ನಮಗೆ ಗೊತ್ತಿರುವ ವಿಷಯಗಳನ್ನು ಮಾತ್ರ ಬೋಧಿಸಲು ನಾವು ಬಯಸುತ್ತೇವೆ. ಗೊತ್ತಿರದ ಅಥವಾ ಕಠಿಣವೆನಿಸುವ ವಿಷಯಗಳನ್ನು ಬೋಧಿಸಲು ಭಯಪಡುತ್ತೇವೆ. ತೊಂದರೆ ತೆಗೆದುಕೊಳ್ಳಲು ನಿರಾಕರಿಸುತ್ತೇವೆ. ಇದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಅಂಟಿದ ರೋಗವಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಇರುವ ಸಾಮಾನ್ಯ ಕಾಯಿಲೆ. ನಿಶ್ಚಿತತೆ ಮನುಷ್ಯನನ್ನು ಮಿತಗೊಳಿಸುತ್ತದೆ. ಆದರೂ ನಾವದನ್ನು ಬಯಸುತ್ತೇವೆ. ಬಹುತೇಕರು ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಯಾವುದರ ಬಗ್ಗೆ ನಮಗೆ ಭಯ ಇರುತ್ತದೆಯೋ ಅದನ್ನೇ ಮಾಡುವುದು ಭಯವನ್ನು ನಿರ್ವಹಿಸುವುದರ ಕೀಲಿಕೈ. ಭಯವನ್ನು ನಾಶಮಾಡಲು ಅದೇ ಅತ್ತುತ್ತಮ ಸಾಧನ. ಪ್ರತಿಯೊಂದು ಭಯದ ಗೋಡೆಯಾಚೆ ಅಮೂಲ್ಯವಾದ ಖಜಾನೆ ಇರುತ್ತದೆ ಎಂಬುದನ್ನು ನಾವು ಮರೆಯಬಾರದು.
2)    ಸೋಲು: ಯಾರೂ ಸೋಲನ್ನು ಬಯಸುವುದಿಲ್ಲ. ಹಾಗಾಗಿ ನಮ್ಮಲ್ಲಿ ಬಹುತೇಕ ಮಂದಿ ಪ್ರಯತ್ನವನ್ನೇ ಮಾಡುವುದಿಲ್ಲ. ಇದು ವಿಷಾದಕರ. ನಮ್ಮ ಆರೋಗ್ಯ ಸುಧಾರಣೆಗಾಗಲೀ, ಕನಸುಗಳನ್ನು ನನಸಾಗಿ ಮಾಡುವುದಕ್ಕಾಗಲೀ ಮೊದಲ ಹೆಜ್ಜೆಯನ್ನು ಇಡುವುದೇ ಇಲ್ಲ. ಪ್ರಯತ್ನವನ್ನು ಮಾಡದಿರುವುದೇ ದೊಡ್ಡ ಸೋಲು. ರಿಸ್ಕ್ ತೆಗೆದುಕೊಳ್ಳದಿರುವುದೇ ದೊಡ್ಡ ರಿಸ್ಕ್. ಇದಕ್ಕೆ ಬದಲಾಗಿ ಒಂದು ಪುಟ್ಟ ಹೆಜ್ಜೆ ದೊಡ್ಡ ಸಾಧನೆಯ ಮೈಲಿಗಲ್ಲಾಗಬಹುದು. ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ “ನನ್ನ ಈ ಪುಟ್ಟ ಹೆಜ್ಜೆ ಮನುಕುಲದ ಒಂದು ದೊಡ್ಡ ನೆಗೆತ” ಎಂದು ಹೇಳಿದ ಮಾತು ತುಂಬಾ ಅರ್ಥಗರ್ಭಿತವಾದುದು. ಸೋಲು ಗೆಲುವಿನ ಅವಿಭಾಜ್ಯ ಅಂಗ. ಸೋಲಿಲ್ಲದೇ ಗೆಲುವು ಸಾಧ್ಯವಿಲ್ಲ ಅಲ್ಲವೇ?
3)    ಮರೆವು: ತರಬೇತಿ ಅಥವಾ ಇನ್ನಿತರೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಸ್ಪೂರ್ತಿ ಪಡೆದು ಇಡೀ ತರಗತಿ ಪ್ರಕ್ರಿಯೆಯನ್ನೇ ಅಥವಾ ಶಾಲಾ ವಾತಾವರಣವನ್ನೇ ಬದಲಾಯಿಸುವ ಉತ್ಸಾಹದಿಂದ ಹಿಂದಿರುಗುತ್ತೇವೆ. ಆದರೆ ಮರುದಿನ ತರಗತಿ ಕೋಣೆಗೆ ಹೋದಾಗ ವಾಸ್ತವ ಎದುರಾಗುತ್ತದೆ. ಸಹಕಾರ ನೀಡದ ಸಹುದ್ಯೋಗಿಗಳು, ಸುವ್ಯವಸ್ಥಿತವಲ್ಲದ ತರಗತಿ ಕೋಣೆ, ಬದಲಾವಣೆಗೆ ಹೊಂದಿಕೊಳ್ಳದ ಮಕ್ಕಳು, ತೃಪ್ತರಾಗದ ಪಾಲಕರು ಇತ್ಯಾದಿ ಇತ್ಯಾದಿ. ವೈಯಕ್ತಿಕ ಮತ್ತು ವೃತ್ತಿಪರ ನಾಯಕತ್ವ ಬೆಳೆಸಿಕೊಳ್ಳಲು ನಾವು ಮಾಡಿದ ಯೋಜನೆಗಳಂತೆ ಕೆಲಸ ಮಾಡಲು ಸಮಯ ದೊರೆಯದೇ ಇರುವುದು, ಈ ಎಲ್ಲಾ ಕಾರಣಗಳಿಂದ ನಾವು ತರಬೇತಿಯ ಅಂಶಗಳನ್ನು ಮರೆತುಬಿಡುತ್ತೇವೆ. ಇದಕ್ಕೆ ಒಂದು ಉಪಾಯವಿದೆ. ಅದೇನೆಂದರೆ ಮಾಡಿದ ನಿರ್ಧಾರಗಳನ್ನು ಸದಾ ಮನಸ್ಸಿನಲ್ಲಿ ಸ್ಥಿರವಾಗಿಟ್ಟುಕೊಳ್ಳುವುದು. ಸಮಯ ದೊರೆತಾಗಲೆಲ್ಲ ಯೋಜನೆಯಂತೆ ಕಾರ್ಯ ನಿರ್ವಹಿಸುವುದು. ನಮ್ಮ ಅರಿವಿನ ಆಳವನ್ನು ಹೆಚ್ಚಿಸಿಕೊಳ್ಳುವುದು. ಅರಿವು ಹೆಚ್ಚಿದಷ್ಟೂ ಆಯ್ಕೆ ಉತ್ತಮವಾಗಿರುತ್ತದೆ. ಆಗ ಪರಿಣಾಮವೂ ಉತ್ತಮವಾಗಿರುತ್ತದೆ. ನಮಗೆ ನಾವೇ ವಚನ ಕೊಟ್ಟುಕೊಳ್ಳುವುದು. ಕೊಟ್ಟ ವಚನವನ್ನು ಸಾಧ್ಯವಾದಲೆಲ್ಲ ಬರೆದಿಡುವುದು ಅಥವಾ ಒಂದು ಹಾಳೆಯಲ್ಲಿ ಬರೆದು ದಿನನಿತ್ಯ ನಮಗೆ ಕಾಣುವಂತೆ ಅಂಟಿಸುವುದು. ಇದು ತೀರಾ ‘ಸಿಲ್ಲಿ’ ಎನಿಸಿದರೂ ಪರಿಣಾಮ ಉತ್ತಮವಾಗಿರುತ್ತದೆ.
4)    ಅಶ್ರದ್ಧೆ: ನಮ್ಮಲ್ಲಿ ಬಹುತೇಕರಿಗೆ(ನನ್ನನ್ನೂ ಸೇರಿದಂತೆ) ಶ್ರದ್ಧೆ ಇಲ್ಲ. ಸಿನಿಕತೆಯೇ ಹೆಚ್ಚು. ‘ತರಬೇತಿಗಳು, ಗೋಷ್ಟಿಗಳು, ಉಪನ್ಯಾಸಗಳು ಎಲ್ಲಾ ಬೊಗಳೆ, ಇವುಗಳಿಂದ ಏನೂ ಪ್ರಯೋಜನವಿಲ್ಲ’ ಎಂಬ ನಕಾರಾತ್ಮಕ ಮನೋಭಾವನೆ ನಮ್ಮಲ್ಲಿ ಮನೆಮಾಡಿದೆ. ಇನ್ನು ಕೆಲವರು “ಈ ವಯಸ್ಸಿನಲ್ಲಿ ನಾನು ಬದಲಾಗಲು ಸಾಧ್ಯವಿಲ್ಲ” ಎನ್ನುತ್ತಾರೆ. ಈ ತರಹದ ಸಿನಿಕತೆಗೆ ನಿರಾಶೆಯೇ ಕಾರಣ. ಸಿನಿಕತೆಯನ್ನು ಬೆಳೆಸಿಕೊಳ್ಳುವುದಕ್ಕಿಂತ ಮೊದಲು ನಾವ್ಯಾರೂ ಹೀಗಿರಲಿಲ್ಲ. ಒಂದು ಕಾಲದಲ್ಲಿ ನಮ್ಮಲ್ಲಿ ಮಕ್ಕಳಲ್ಲಿರುವಂತಹ ಉತ್ಸಾಹವಿತ್ತು, ಆಶಾವಾದವಿತ್ತು, ಹೊಸದಾಗಿ ವೃತ್ತಿಗೆ ಸೇರಿದಾಗ ಇದ್ದ ತುಡಿತ, ಮಿಡಿತ ಈಗಿಲ್ಲ. ನಾವು ಮಾಡಿದ ಪ್ರಯತ್ನಗಳು ವಿಫಲವಾದವು. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯದ ನಾವು ಪ್ರಯತ್ನವನ್ನು ಮುಂದುವರೆಸದೇ ಕೈಬಿಟ್ಟೆವು. ಸೋಲಿನ ನೋವನ್ನು ತಪ್ಪಿಸಲು ನಾವೆಲ್ಲ ಸಿನಿಕರಾದೆವು.
    ಹೀಗೆ ಈ ನಾಲ್ಕೂ ಅನಿಷ್ಟಗಳು ನಮ್ಮ ಸ್ವಪರಿವರ್ತನೆಯನ್ನು, ನಾಯಕತ್ವದ ಬೆಳವಣಿಗೆಯನ್ನು ತಡೆಹಿಡಿದವು. ಅವುಗಳ ಸ್ವರೂಪ ಅರಿತುಕೊಂಡರೆ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ. ಸಾಮಾನ್ಯ ಶಿಕ್ಷಕನೂ ಸಹ ಯಶಸ್ವಿ ಶಿಕ್ಷಕರಾಗಲು ಸಾಧ್ಯ. ಯಾವುದನ್ನೇ ಆಗಲಿ ಮೊದಲು ಯೋಚಿಸಿ ಒಂದು ಪುಟ್ಟ ಹೆಜ್ಜೆಯನ್ನಿಡೋಣ. ಆ ಮೂಲಕ ನಮ್ಮ ಸಾಮಥ್ರ್ಯವೇನೆಂಬುದನ್ನು ಜಗಕ್ಕೆ ತೋರಿಸೋಣ.
                                                               ಆರ್.ಬಿ.ಗುರುಬಸವರಾಜ.

“ಟೀಚರ್” ಸೆಪ್ಟಂಬರ್ 2014


ಮೌಲ್ಯಗಳ ಸಂವರ್ಧನೆಗಾಗಿ ಸಹವರ್ತಿ ಕಲಿಕೆ

     
            ಮೌಲ್ಯಗಳ ಸಂವರ್ಧನೆಗಾಗಿ ಸಹವರ್ತಿ ಕಲಿಕೆ
    ಪ್ರತಿಯೊಂದು ಕಲಿಕಾ ಪದ್ದತಿಯೂ ತನ್ನದೇ ಆದ ವಿಶಿಷ್ಠತೆಯನ್ನು ಹೊಂದಿರುತ್ತದೆ. ಒಂದು ಪದ್ದತಿ ಜಾರಿಗೆ ಬರುವುದರ ಹಿಂದೆ ಅವಿತರ ಪ್ರಯತ್ನ ಹಾಗೂ ಸಾಕಷ್ಟು ಪ್ರಯೋಗಗಳು ನಡೆದಿರುತ್ತವೆ ಎಂಬುದನ್ನು ನಾವು ಮರೆಯಬಾರದು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಲಿಕಾ ಪದ್ದತಿಯೆಂದರೆ “ಸಹವರ್ತಿ ಕಲಿಕೆ”. ಇಲ್ಲಿ ಕಲಿಯುವವರ ನಡುವೆ ನೇರವಾದ ಮುಖಾಮುಖಿ ಸಂದರ್ಶನ ಏರ್ಪಡುತ್ತದೆ. ಕೇವಲ ಕೆಲವೇ ಕಲಿಕಾರ್ಥಿಗಳು ಗುಂಪಿನಲ್ಲಿ ಕಲಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಕಲಿಕೆ ಹೆಚ್ಚು ಸಂತಸದಾಯಕ ಹಾಗೂ ಶಾಶ್ವತವಾಗಿರುತ್ತದೆ ಎಂಬುದು ದೃಢಪಟ್ಟಿದೆ.
    ಸಹವರ್ತಿ ಕಲಿಕೆಯು ಪ್ರತಿಯೊಬ್ಬ ಕಲಿಕಾರ್ಥಿಗೆ ಮಹತ್ವದ ಅನುಭವಗಳನ್ನು ಕಟ್ಟಿಕೊಡುತ್ತದೆ. ಕಲಿಕಾರ್ಥಿಗಳ ನಡುವಿನ ಅವಿನಾಭಾವ ಸಂಬಂಧ ಗಟ್ಟಿಗೊಳ್ಳುತ್ತದೆ. ಅದು ಎಂದಿಗೂ ಮುರಿಯಲಾಗದ ಸ್ನೇಹಸೇತುವಾಗಿ ಪರಿವರ್ತನೆಗೊಳ್ಳುತ್ತದೆ. ಕುಟುಂಬದ ಸದಸ್ಯರು ಅಥವಾ ಒಡಹುಟ್ಟಿದವರಿಗಿಂತ ಉತ್ತಮವಾದ ಆಯ್ಕೆಯ ಅವಕಾಶಗಳು ಇರುವುದು ಸಹವರ್ತಿಗಳಲ್ಲಿ ಮಾತ್ರ. ಇಲ್ಲಿನ ಕಲಿಕೆ ಮುಕ್ತವಾಗಿ ಸಾಗುವುದರಿಂದ ಕಲಿಕೆ ತುಂಬಾ ಸರಳವಾಗಿ ಸುಗಮವಾಗಿ ನಡೆಯುತ್ತದೆ. ಯಾವುದೇ ರೀತಿಯ ಮಾನಸಿಕ ಒತ್ತಡಗಳಾಗಲೀ, ನಿರ್ಭಂಧಗಳಾಗಲೀ ಇಲ್ಲದಿರುವುದರಿಂದ ಕಲಿಕೆ ಸುಮನೋಹರವಾಗಿರುತ್ತದೆ.
    ಸಹವರ್ತಿ ಸಂಬಂಧಗಳು ಗಟ್ಟಿಗೊಳ್ಳಲು ಶಾಲೆ ಒಂದು ಮಾಧ್ಯಮ ಇದ್ದಂತೆ. ಬಹುತೇಕ ಸ್ನೇಹಿತರು ತಮ್ಮ ಕಲಿಕಾ ಅನುಭವಗಳನ್ನು ಹಂಚಿಕೊಳ್ಳಲು ಶಾಲೆ ಮುಖ್ಯವಾಹಿನಿಯಾಗಿರುತ್ತದೆ. ಸಹವರ್ತಿಗಳು ನಿಗದಿತ ಪಠ್ಯಕ್ಕಿಂತ ಜೀವನಾನುಭಗಳನ್ನು ಕಲಿಸುವುದು ಹೆಚ್ಚು. ಅಂದರೆ ಪರಸ್ಪರರಲ್ಲಿ ಪ್ರೀತಿ, ಕಾಳಜಿ, ಸಹಕಾರ, ನಂಬಿಕೆ, ಕ್ಷಮೆ, ಸಹಾನುಭೂತಿ, ಬೆಂಬಲ, ಶಿಷ್ಟಾಚಾರಗಳಂತಹ ಮಾನವೀಯ ಮೌಲ್ಯಗಳನ್ನು ಸಹವರ್ತಿಗಳಿಂದ ಬೆಳೆಸಿಕೊಳ್ಳುತ್ತಾರೆ.
    ಸಹವರ್ತಿ ಕಲಿಕೆಯಿಂದ ಕಲಿಕಾರ್ಥಿಗಳು ಬೆಳೆಸಿಕೊಳ್ಳುವ ಮೌಲ್ಯಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.
ಸಹಾನುಭೂತಿ : ಮಕ್ಕಳು ಜೊತೆಗೂಡಿ ಕಲಿಯುವುದರಿಂದ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ ಸಹವರ್ತಿಗಳ ಜೀವನವನ್ನು, ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಅವರ ಸ್ನೇಹ ನಿಕಟವಾಗುತ್ತದೆ ಮತ್ತು ಬೇರ್ಪಡಿಸಲಾರದ ಬಂಧವಾಗಿ ಏರ್ಪಡುತ್ತದೆ. ಪರಸ್ಪರರ ಕಷ್ಟಗಳಿಗೆ ಪ್ರತಿಸ್ಪಂಧಿಸುವ, ಸಹಾನುಭೂತಿ ತೋರುವ ಗುಣಗಳು ಬೆಳೆಯುತ್ತವೆ.
ಸ್ವೀಕರಣ : ಸಹವರ್ತಿಗಳ ನಡುವಿನ ನ್ಯೂನತೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅವರ ಪ್ರತಿಭೆಗಳನ್ನು ಒಪ್ಪಿಕೊಳ್ಳುವುದನ್ನು ಸಹವರ್ತಿ ಕಲಿಕೆ ಮೂಡಿಸುತ್ತದೆ. ಹಾಗೆಯೇ ಸಹವರ್ತಿಗಳ ಉತ್ತಮ ಅಭಿಪ್ರಾಯಗಳನ್ನು ಸ್ವೀಕರಿಸುವ ಗುಣ ಬೆಳೆಯುತ್ತದೆ.
ತಿಳುವಳಿಕೆ ಮತ್ತು ಕಾಳಜಿ : ಸಹವರ್ತಿ ಕಲಿಕೆಯಲ್ಲಿ ಸ್ನೇಹಿತರಿಂದ ಸ್ನೇಹಿತರಿಗಾಗಿ ಕಲಿಕೆ ಮುಂದುವರೆಯುವುದರಿಂದ ಅವರ ಪರಿಸ್ಥಿತಿ ಮತ್ತು ಅವಶ್ಯಕತೆಗಳನ್ನು ತಿಳಿದುಕೊಳ್ಳಬಹುದಾಗಿದೆ. ಇಂದರಿಂದ ಪರಿಸ್ಥಿತಿಗನುಗುಣವಾಗಿ ಕಾಳಜಿ ವಹಿಸುವುದನ್ನು ಕಲಿಯುತ್ತಾರೆ. ಜೊತೆಗೆ ಎಲ್ಲಾ ಸಂಧರ್ಭಗಳಲ್ಲೂ ಇತರರನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯುತ್ತಾರೆ. ಸ್ನೇಹಿತರು ಹಾಗೂ ಅವರ ಕುಟುಂಬ ವರ್ಗದ ಜೊತೆಗೆ ಅಹಿತಕರ ವರ್ತನೆಗೆ ಅವಕಾಶ ಇರುವುದಿಲ್ಲ.
ಬೆಂಬಲ : ದುರಾಭ್ಯಾಸಗಳನ್ನು ಬಿಡಿಸುವಲ್ಲಿ ಸಹವರ್ತಿಗಳ ನೇರ ಬೆಂಬಲದ ಅಗತ್ಯವಿದೆ. ಕಠಿಣ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹವರ್ತಿಗಳು ಏನು ಮಾಡಬೇಕು? ಹೇಗೆ ವರ್ತಿಸಬೇಕು? ಎಂಬುದನ್ನು ಕಲಿಸುತ್ತದೆ. ಇದರಿಂದಾಗಿ ಸ್ನೇಹಿತರ ನಡುವೆ ಮುರಿಯಲಾರದ ಬಂಧ ಉಂಟಾಗಿ ಸ್ನೇಹಕ್ಕೆ ಮೆರಗು ಬರುತ್ತದೆ. ಸ್ನೇಹಿತರ ನಡುವೆ ಸರಿಯಾದ ವಿಧಾನಗಳನ್ನು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು ಸಹಾಯ ಮಾಡುತ್ತದೆ. ಅವರಲ್ಲಿನ ತಪ್ಪು ನಿರ್ಧಾರಗಳನ್ನು ಸರಿಯಾದ ಮಾರ್ಗದರ್ಶನದಿಂದ ತಿದ್ದಲು ಸ್ನೇಹಿತರ ಬೆಂಬಲ ಅಗತ್ಯ.
ಸಭ್ಯತೆ : ಸಹವರ್ತಿ ಕಲಿಕೆಯು ಎಲ್ಲಾ ವಿಷಯಗಳ ಸಂವಹನದಲ್ಲಿ ಅಂದರೆ ಸ್ನೇಹಿತರೊಂದಿಗೆ, ಗುರುಗಳೊಂದಿಗೆ, ಹಿರಿಯರೊಂದಿಗೆ ಶಿಷ್ಟರಾಗಿರುವುದನ್ನು ಕಲಿಸುತ್ತದೆ. ಸಹವರ್ತಿ ಕಲಿಕೆಯಲ್ಲಿ ಮುಕ್ತವಾದ ಸಂವಹನ ಇರುವುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಸಮರ್ಥನೆಯನ್ನು ಸ್ಪಷ್ಟ ಅಭಿಪ್ರಾಯದೊಂದಿಗೆ ತಿಳಿಸಲು ಸಹಕಾರಿ. ನಿರ್ಧಾರ ಅಥವಾ ವರ್ತನೆ ಏಕೆ ಸೂಕ್ತವಾಗಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲು ಹಾಗೂ ಇತರರಲ್ಲಿ ಸಭ್ಯತೆ ಬೆಳೆಸಿಕೊಳ್ಳಲು ಸಹವರ್ತಿ ಕಲಿಕೆ ಸಹಕಾರಿ.
ಹಂಚಿಕೊಳ್ಳುವಿಕೆ : ಯಶಸ್ಸಿನ ಸಂತೋಷದ ಕ್ಷಣಗಳನ್ನು, ನೋವು-ನಲಿವುಗಳನ್ನು, ದುಃಖ-ದುಮ್ಮಾನಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ಸಹವರ್ತಿಗಳಿಂದ ಕಲಿಯಬಹುದು. ಸರಳ ಪದಗಳಲ್ಲಿ ಅನುಭವಗಳನ್ನು ಹಂಚಿಕೊಳ್ಳಲು ಇದು ಸಹಾಯಕ. ಹಂಚಿಕೊಳ್ಳುವಿಕೆ ಕೇವಲ ಭಾವನೆಗಳಿಗೆ ಮಾತ್ರ ಸೀಮಿತವಾಗಿರಬೇಕು, ಹಣ ಅಥವಾ ಐಹಿಕ ವಿಷಯಗಳಲ್ಲಿ ಇನ್ನೊಬ್ಬರ ಸ್ವಾತಂತ್ರ ದುರುಪಯೋಗ ಒಳ್ಳೆಯದಲ್ಲ ಎಂಬುದನ್ನು ಕೂಡಾ ಸಹವರ್ತಿ ಕಲಿಕೆ ಕಲಿಸುತ್ತದೆ.
ವಿಶ್ವಾಸದ ಉಲ್ಲಂಘನೆ ತಡೆಯುತ್ತದೆ : ಸಹವರ್ತಿ ಕಲಿಕೆಯು ನಂಬಿಕೆಗೆ ಯೋಗ್ಯವಾದ  ಮಾಹಿತಿಯ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ. ಆ ಮೂಲಕ ಅವರ ನಡುವಿನ ವಿಶ್ವಾಸದ ಉಲ್ಲಂಘನೆಯನ್ನು ತಡೆಯುತ್ತದೆ. ಒಂದು ವೇಳೆ ಮಾಹಿತಿ ಸೋರಿಕೆಯಾದರೆ ಸ್ನೇಹಬಂಧ ಕಳಚುತ್ತದೆ ಎಂಬ ಭಯ ಇರುವುದರಿಂದ ಸ್ನೇಹಿತರು ಹೆಚ್ಚು ಆಪ್ತಮಿತ್ರರಾಗುತ್ತಾರೆ.
ಭಿನ್ನಾಭಿಪ್ರಾಯಗಳು ದೂರ : ಚಿಕ್ಕ ಚಿಕ್ಕ ವಾದಗಳು ಮತ್ತು ಘರ್ಷಣೆಗಳು ಸ್ನೇಹದ ಭಾಗಗಳಾಗಿರುತ್ತವೆ. ವಾದ ಮತ್ತು ಘರ್ಷಣೆಗಳಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಈ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಸಹವರ್ತಿ ಕಲಿಕೆ ಏಕಮಾದ್ವಿತೀಯ. ವಾದ ಮತ್ತು ಘರ್ಷಣೆಗಳು ಪ್ರತಿಯೊಬ್ಬರ ಅನುಭವ ಮತ್ತು ಅನಿಸಿಕೆಗಳಾಗಿರುತ್ತವೆ ಎಂಬುದನ್ನು ಸ್ಪಷ್ಟವಾಗುತ್ತದೆ. ಹಾಗಾಗಿ ಭಿನ್ನಾಭಿಪ್ರಾಯ ಮರೆತು ಐಕ್ಯತೆಯಿಂದ ಮನ್ನುಗ್ಗುವ ಗುಣಗಳು ಬೆಳೆಯುತ್ತವೆ.
ನಿಗದಿತ ಅಂತರ ಕಾಯ್ದುಕೊಳ್ಳುತ್ತದೆ : ಪ್ರತಿಯೊಬ್ಬರಿಗೂ ಕೆಲವು ವೇಳೆ ಏಕಾಂತತೆ ಅಗತ್ಯ. ಸ್ನೇಹಿತರ ಭಾವನೆಗಳನ್ನು ಅರ್ಥಮಾಡಿಕೊಂಡ ನಂತರ ಅವರೊಂದಿಗೆ ನಿಗದಿತ ಅಂತರ ಕಾಪಾಡಿಕೊಳ್ಳುವುದನ್ನು ಸಹವರ್ತಿ ಕಲಿಕೆ ಕಲಿಸುತ್ತದೆ. ಪದೇ ಪದೇ ತಮ್ಮ ಬೇಡಿಕೆ ಪೂರೈಕೆಗೆ ಸ್ನೇಹಿತರನ್ನು ಒತ್ತಾಯಿಸುವುದನ್ನು ತಪ್ಪಿಸಿ ಸ್ವಾವಲಂಬಿಯಾಗಿ ಬೆಳೆಯಲು ಪ್ರಚೋದಿಸುತ್ತದೆ.
ಪ್ರೀತಿ ಮತ್ತು ಗೌರವ : ಪ್ರೀತಿ ಮತ್ತು ಗೌರವಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಏಕೆಂದರೆ  ಪ್ರೀತಿ ಇರುವಲ್ಲಿ ಗೌರವವಿದೆ, ಗೌರವ ಇರುವಲ್ಲಿ ಪ್ರೀತಿ ಇದೆ. ಪರಸ್ಪರರನ್ನು ಅರ್ಥಮಾಡಿಕೊಂಡ ಮೇಲೆ ಅವರ ನೋವಿಗೆ ಚಿಕಿತ್ಸೆ ನೀಡಲು ಮುಂದಾಗುವುದನ್ನು ಕಲಿಸುತ್ತದೆ. ಇದರಿಂದ ಪರಸ್ಪರರ ಪ್ರೀತಿ ಮತ್ತು ಗೌರವಗಳು ಹೆಚ್ಚಾಗುತ್ತವೆ. ‘ಪ್ರೀತಿ ಮತ್ತು ಗೌರವ ಇಲ್ಲದೆಡೆ ಸಂಬಂಧಕ್ಕೆ ಬೆಲೆಯಿಲ್ಲ’ ಎಂಬುದನ್ನು ಕಲಿಸುತ್ತದೆ.
ಕ್ಷಮೆ : ಇಲ್ಲಿ ಯಾರೂ ಪರಿಪೂರ್ಣರಲ್ಲ ಎಂಬುದು ಸಹವರ್ತಿ ಕಲಿಕೆಯಿಂದ ಸ್ಪಷ್ಟವಾಗುತ್ತದೆ. ಸಹಚರರೊಂದಿಗೆ ಕಲಿಯುವಾಗ ಇತರರ ನ್ಯೂನತೆಗಳೂ ಸಹ ಗೋಚರವಾಗುತ್ತವೆ. ಹಾಗೇಯೇ ಪರಸ್ಪರರ ತಪ್ಪುಗಳನ್ನು ಕ್ಷಮಿಸುವ ಕ್ಷಮಾಗುಣವು ಅವರ ಅರಿವಿಗೆ ಬಾರದಂತೆ ಮೂಡುತ್ತದೆ.
    ಮೇಲಿನ ಅಂಶಗಳಲ್ಲದೇ ಹಲವಾರು ಮೌಲ್ಯಗಳು ಸಹವರ್ತಿ ಕಲಿಕೆಯಿಂದ ಅಂತರ್ಗತವಾಗಿ ಬೆಳೆಯುತ್ತವೆ. ಇಂತಹ ಮೌಲ್ಯಗಳನ್ನು ಯಾವ ಪಠ್ಯಪುಸ್ತಕವೂ, ಯಾವ ವಿಶ್ವವಿದ್ಯಾನಿಲಯವೂ ಕಲಿಸಲಾರದು. ಅವುಗಳನ್ನು ಕಲಿಯಲು ಮತ್ತು ಕಲಿಸಲು ಇರುವ ಸುಲಭ ಮಾರ್ಗವೆಂದರೆ ಸಹವರ್ತಿ ಕಲಿಕೆ ಮಾತ್ರ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇಂತಹ ಮೌಲ್ಯಗಳನ್ನು ನಮ್ಮ ಮಕ್ಕಳಲ್ಲಿ ಬೆಳೆಸಲು ಸಹವರ್ತಿ ಕಲಿಕೆಯನ್ನು ಬೆಂಬಲಿಸೋಣ ಮತ್ತು ಹೆಚ್ಚು ಹೆಚ್ಚು ಬಳಸೋಣವೇ?
                                                                        ಆರ್.ಬಿ.ಗುರುಬಸವರಾಜ
“ಗುರುಮಾರ್ಗ” ಆಗಸ್ಟ್ 2014

July 23, 2014

ನೀವೂ ಕ್ವಿಜ್ ಗೆಲ್ಲಬೇಕೇ?

ದಿನಾಂಕ 23-07-2014ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ 'ನೀವೂ ಕ್ವಿಜ್ ಗೆಲ್ಲಬೇಕೇ?' ಎಂಬ ಲೇಖನ


ನೀವೂ ಕ್ವಿಜ್ ಗೆಲ್ಲಬೇಕೇ?
2014 ರ ವಿಶ್ವಕಪ್ ಫುಟ್ಬಾಲ್‍ನಲ್ಲಿ ಟ್ರೋಫಿ ಗೆದ್ದ ದೇಶ ಯಾವುದು?
2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?
ನರೇಂದ್ರ ಮೋದಿ ಭಾರತದ ಎಷ್ಟನೇ ಪ್ರಧಾನಮಂತ್ರಿ?
ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಯಾವುದು?
ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಚಲನಚಿತ್ರ ಯಾವುದು?
ಹೀಗೆ ವಿವಿಧ ಪ್ರಶ್ನೆಗಳನ್ನು ನಿಮಗೆ ಕೇಳಿದರೆ ಉತ್ತರ ಗೊತ್ತಿದ್ದರೆ ಥಟ್ಟಂತ ಉತ್ತರಿಸುತ್ತೀರಿ. ಇಲ್ಲದಿದ್ದರೆ ಉತ್ತರಿಸಲು ತಡಬಡಾಯಿಸುತ್ತೀರಿ. ಅಲ್ಲವೇ? ಇಂತಹ ಪ್ರಶ್ನೆಗಳನ್ನು ಕೇಳಿ ನಿಮ್ಮಲ್ಲಿನ ಜ್ಞಾನವನ್ನು ಕೆದಕುವ ಅಥವಾ ಪರೀಕ್ಷಿಸುವ ಸ್ಪರ್ದೆಯೇ ರಸಪ್ರಶ್ನೆ ಅಥವಾ ಕ್ವಿಜ್. ಇದನ್ನು ಬುದ್ದಿಶಕ್ತಿಯ ಆಟವೆಂತಲೂ ಜಾಣ್ಮೆಯ ಪರೀಕ್ಷೆ ಎಂತಲೂ ಕರೆಯುತ್ತಾರೆ. ಈ ಸ್ಪರ್ಧೆಯನ್ನು ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿಯೂ ಆಡಬಹುದಾಗಿದೆ. ಇದು ಭಾಗವಹಿಸುವವರ ನಡುವಿನ ಪ್ರತಿಷ್ಠೆಯ ಪಂದ್ಯವಾಗಿದ್ದು, ಕೇಳಲಾದ ಪ್ರಶ್ನೆಗೆ ನಿಗದಿತ ಸಮಯದಲ್ಲಿ ಸರಿಯಾಗಿ ಉತ್ತರಿಸಿ ತಂಡವನ್ನು ಮುನ್ನಡೆಸುವುದು ಹಾಗೂ ಪ್ರಶಸ್ತಿ ಗಳಿಸುವುದು ಮುಖ್ಯವಾಗಿರುತ್ತದೆ.
ಕ್ವಿಜ್ ಒಂದು ವಸ್ತುನಿಷ್ಠತೆಯ ಸ್ಪರ್ಧೆಯಾಗಿದ್ದು, ಪಠ್ಯ ಹಾಗೂ ಪಠ್ಯೇತರ ಜ್ಞಾನವನ್ನು ಅಳೆಯುವುದು ಇದರ ಉದ್ದೇಶವಾಗಿರುತ್ತದೆ. ಕಲಿತ ವಿಷಯಗಳಲ್ಲಿನ ತಾತ್ವಿಕ ಅಂಶಗಳು ಹಾಗೂ ಅವುಗಳ ಅನ್ವಯಗಳ ಸಹ ಸಂಬಂಧವನ್ನು ಪರೀಕ್ಷಿಸುವುದಾಗಿದೆ. ಇದು ಮೇಲ್ನೋಟಕ್ಕೆ ಸುಲಭವೆಂದು ಗೋಚರಿಸಿದರೂ ಜ್ಞಾನದ ಆಳ ಮತ್ತು ವಿಸ್ತಾರವನ್ನು ಒರೆಗೆ ಹಚ್ಚುತ್ತದೆ.
  ಕ್ವಿಜ್ ಸ್ಪರ್ಧೆಯು ನಿರೀಕ್ಷಿತ ಘಟನೆಯಾಗಿದ್ದು, ಇಲ್ಲಿ ಸ್ಪಧಾರ್ಥಿಗಳ ವಿವಿಧ ಕ್ಷೇತ್ರಗಳಾದ ಭಾಷೆ, ಗಣಿತ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಾಮಾನ್ಯಜ್ಞಾನ, ಪ್ರಚಲಿತ ಜ್ಞಾನ, ಕಲೆ, ಸಾಹಿತ್ಯ, ಸಂಸ್ಕøತಿ, ಇತಿಹಾಸ, ಕ್ರೀಡೆ, ಮನೋರಂಜನೆ ಇತ್ಯಾದಿಗಳಲ್ಲಿನ ಜ್ಞಾನವನ್ನು ಅಳೆಯಲಾಗುತ್ತದೆ. 
ಇಂದು ಅನೇಕ ಶಾಲೆ-ಕಾಲೇಜುಗಳಲ್ಲಿ ಹಾಗೂ ಇತರ ಸಂಘ-ಸಂಸ್ಥೆಗಳಲ್ಲಿ  ಬೇರೆ ಬೇರೆ ಸಂದರ್ಭಗಳಲ್ಲಿ ಕ್ವಿಜ್ ಕಾರ್ಯಕ್ರಮ ನಡೆಸಲಾಗುತ್ತದೆ. ಅಲ್ಲದೇ ಕೆಲವು ಖಾಸಗೀ ಚಾನಲ್‍ಗಳೂ ಕೂಡಾ ರಿಯಾಲಿಟಿ ಶೋ ಮೂಲಕ ಕ್ವಿಜ್ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಸಾರ ಮಾಡುತ್ತಿವೆ. ಈ ಕ್ವಿಜ್ ಸ್ಪರ್ಧೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು.
ಪ್ರಯೋಜನಗಳು :
ಕ್ವಿಜ್ ಸಾಮಾನ್ಯ ಜ್ಞಾನ ಹಾಗೂ ನಿರ್ದಿಷ್ಟ ಕ್ಷೇತ್ರದಲ್ಲಿನ ಜ್ಞಾನವನ್ನು ವಿಸ್ತರಿಸುವ ಪ್ರಕ್ರಿಯೆಯಾಗಿದೆ.
ಸ್ಪರ್ಧಾರ್ಥಿಯನ್ನು ವಿಭಿನ್ನ ಆಯಾಮಗಳಲ್ಲಿ ಹಾಗೂ ತಮ್ಮ ಜ್ಞಾನಕೋಶದ ಆಚೆಗೂ ಯೋಚಿಸಲು ಸಶಕ್ತರನ್ನಾಗಿಸುತ್ತದೆ.
ಸ್ಪರ್ಧಾಳುಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಆರೋಗ್ಯಕರ ಚರ್ಚೆಗೆ ಮುಂದಾಗಲು ಉತ್ತೇಜಿಸುತ್ತದೆ.
ಶಾಲಾ-ಕಾಲೇಜುಗಳಲ್ಲಿನ ಕ್ವಿಜ್ ಕಾರ್ಯಕ್ರಮವು ಮಕ್ಕಳ ಕಲಿಕಾಂಶಗಳಲ್ಲಿನ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಭಾಷಾಭಿಮಾನ ಬೆಳೆಸಲು ಸಹಕಾರಿಯಾಗಿದೆ.
ಕಲಿಕಾಂಶಗಳ ಜ್ಞಾನದ ಜೊತೆಗೆ ಕೌಶಲ್ಯಗಳು, ಸಾಮಥ್ರ್ಯಗಳು, ವಿವಿಧ ವಿಶೇಷ ಕ್ಷೇತ್ರಗಳಲ್ಲಿನ ಕಲಿಕಾ ಮಟ್ಟಗಳನ್ನು ಗುರುತಿಸಲು ಮತ್ತು ವ್ಯವಸ್ಥೆಗೊಳಿಸಲು ಸಹಕಾರಿ.
ಇದು ದೈನಂದಿನ ಕೆಲಸದಲ್ಲಿನ ಒತ್ತಡವನ್ನು ನಿವಾರಿಸುತ್ತದೆ.
ಶಾಲೆ/ಸ್ನೇಹಿತರ ಸಮೂಹದಲ್ಲಿನ ಗುಂಪು ಸಾಮರಸ್ಯವನ್ನು ನಿವಾರಿಸುತ್ತದೆ.
ಹೊಸ ಹೊಸ ಸ್ನೇಹಿತರನ್ನು, ವಿವಿಧ ಸಂಸ್ಕøತಿಗಳನ್ನು ಪರಿಚಯಿಸುತ್ತದೆ. ಆ ಮೂಲಕ ಸ್ನೇಹ ಬಳಗ ಮತ್ತು ಜ್ಞಾನಭಂಢಾರ ಹೆಚ್ಚುತ್ತದೆ.
ಭಾಷೆಯಲ್ಲಿನ ಜ್ಞಾನಾಧಾರಿತ ಪ್ರಶ್ನೆಗಳು ಭಾಷಾಭಿವೃದ್ದಿಗೆ ನೆರವಾಗುತ್ತವೆ. ಅಂದರೆ ಕಾಗುಣಿತ, ಉಚ್ಚಾರ, ಶಬ್ದಭಂಢಾರ ಹೆಚ್ಚಿಸುತ್ತವೆ.
ಕ್ವಿಜ್‍ನಲ್ಲಿ ಉತ್ತಮವಾದ ಅಭಿವ್ಯಕ್ತಿ ತೋರಿಸಲು ಸುಸಜ್ಜಿತವಾದ ಸಂಗ್ರಹಿತ ಜ್ಞಾನ ಅವಶ್ಯಕ. ಸುಸಜ್ಜಿತವಾದ ಸಂಗ್ರಹಿತ ಜ್ಞಾನ ಹೊಂದಲು ವ್ಯಾಪಕವಾದ ಸಿದ್ದತೆ ಅಗತ್ಯ. ಜೊತೆಗೆ ಜ್ಞಾನ ಗಳಿಸುವ ಕಾರ್ಯವಿಧಾನ ಮತ್ತು ತಂತ್ರಗಳೂ ಕೂಡಾ ಅವಶ್ಯಕ.
ತಯಾರಿ ಹೀಗಿರಲಿ!
ಕ್ವಿಜ್‍ನಲ್ಲಿ ಗೆಲ್ಲಲು ನಿರಂತರ ಅಧ್ಯಯನ ಅಗತ್ಯ. ವಿವಿಧ ವಿಷಯಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಮಾಹಿತಿಗಳನ್ನು ಓದಿ ಮನನ ಮಾಡಿಕೊಳ್ಳಿ. ಪ್ರಮುಖಾಂಶಗಳನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ.
ವಿವಿಧ ಭಾಷೆಗಳ ಪ್ರಸಿದ್ದ ಕವಿಗಳು, ಬರಹಗಾರರು ಮತ್ತು ಅವರ ಕೃತಿಗಳ ಪರಿಚಯ ಇರಲಿ.
ಗಣಿತದಲ್ಲಿನ ತತ್ವಗಳು, ಸೂತ್ರಗಳು, ಸಮೀಕರಣಗಳು ಹಾಗೂ ವಿವಿಧ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಕೌಶಲ್ಯವನ್ನು ಸಿದ್ದಿಸಿಕೊಳ್ಳಿ. 
ವಿಜ್ಞಾನದ ವಿವಿಧ ತತ್ವಗಳು, ನಿಯಮಗಳು, ಸಿದ್ದಾಂತಗಳು, ಸೂತ್ರಗಳು, ಸಮೀಕರಣಗಳು, ಕಾರ್ಯಕಾರಣಿ ಸಂಬಂಧಗಳು ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಿ.
ಗಣಿತ ಮತ್ತು ವಿಜ್ಞಾನದಲ್ಲಿನ ಆವಿಷ್ಕಾರಗಳು ಮತ್ತು ಸಂಶೋಧಕರ ಪಟ್ಟಿ ತಯಾರಿಸಿಕೊಳ್ಳಿ.
ಸ್ವಾತಂತ್ರ ಹೋರಾಟಗಾರರು ಮತ್ತು ವಿವಿಧ ಸಮಾಜ ಸುಧಾರಕರ ಜೀವನ ಚರಿತ್ರೆ ತಿಳಿದುಕೊಳ್ಳಿ. ಇತಿಹಾಸದ ಪ್ರಮುಖ ದಿನಾಂಕ ಹಾಗೂ ಇಸ್ವಿಗಳನ್ನು ಗುರುತಿಸಿಕೊಳ್ಳಿ. 
ಪ್ರಚಲಿತ ಜ್ಞಾನ ಬೆಳೆಸಿಕೊಳ್ಳಲು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ದಿನ ಪತ್ರಿಕೆಗಳು ಅನೇಕ ಮಾಹಿತಿಗಳನ್ನು ಒದಗಿಸುತ್ತವೆ.
ಪದಬಂಧ ಹಾಗೂ ಸಂಖ್ಯಾಬಂಧ(ಸುಡೋಕು)ಗಳನ್ನು ಬಿಡಿಸಿ. ಇದು ಶಬ್ದಭಂಢಾರವನ್ನು, ಸಮಸ್ಯೆ ಬಿಡಿಸುವ ಕೌಶಲ್ಯವನ್ನು ವೃದ್ದಿಸುತ್ತದೆ ಹಾಗೂ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಓದಿದ ಹಾಗೂ ಓದಬೇಕಾದ ಅಂಶಗಳ ಪಟ್ಟಿ ತಯಾರಿಸಿಕೊಳ್ಳಿ. ಓದಿದ ಅಂಶಗಳನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಂಡು ಸಾಧ್ಯವಾದಾಗಲೆಲ್ಲ ಕಣ್ಣಾಡಿಸಿ, ಮೆಲುಕುಹಾಕಿ.
ಕಲಿಕಾಂಶದಲ್ಲಿ ನಂಬಿಕೆ ಇರಲಿ. ಅತಿಯಾದ ನಂಬಿಕೆಯು ಅಪಾಯಕಾರಿ.
ಸಾಧ್ಯವಾದಷ್ಟೂ ಹೊಸ ಹೊಸ ಕಲಿಕಾ ಪರಿಕರಗಳನ್ನು ಸಂಗ್ರಹಿಸಿಕೊಳ್ಳಿ. ಇದು ವಿಷಯದ ಆಳ ಮತ್ತು ವಿಸ್ತಾರವನ್ನು ಹೆಚ್ಚಿಸುತ್ತದೆ.
ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಿರಿ. 
ಶಾಲೆಯ ದೈನಂದಿನ ಕೆಲಸಗಳನ್ನು ಆದಷ್ಟೂ ಬೇಗನೇ ಮುಗಿಸಿಕೊಂಡು ಕ್ವಿಜ್‍ಗಾಗಿ ಓದಲು ಸಮಯ ಹೊಂದಿಸಿಕೊಳ್ಳಿ. 
ಸಮಯ ದೊರೆತಾಗಲೆಲ್ಲ ವಿಷಯದ ಕುರಿತು ಸ್ನೇಹಿತರು/ಆತ್ಮೀಯರೊಂದಿಗೆ ಚರ್ಚಿಸಿ. ಇದು ವಿಷಯದ ಪರಿಪಕ್ವತೆಗೆ ಸಹಕಾರಿಯಾಗುತ್ತದೆ ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತದೆ.
ನಿಮ್ಮ ಪ್ರತಿಸ್ಪರ್ಧಿಯನ್ನು ಎದುರಿಸಲು ಬೇಸಿಕ್ ಮಾಸ್ಟರ್‍ಗಳಾಗಿರಿ. ಬೇಸಿಕ್ ಜ್ಞಾನ ಪಡೆಯಲು ವಿವಿಧ ದೇಶ/ರಾಜ್ಯಗಳ ರಾಜಧಾನಿ, ಕರೆನ್ಸಿ(ಹಣದ ಹೆಸರು), ಪ್ರಸಿದ್ದ ಆಟಗಾರರು, ನೊಬೆಲ್ ಪುರಸ್ಕøತರು, ಜ್ಞಾನಪೀಠ ಪುರಸ್ಕøತರು, ಆಸ್ಕರ್ ಪುರಸ್ಕøತರು, ಕಲೆ, ಸಾಹಿತ್ಯ, ಕ್ರೀಡಾ ಕ್ಷೇತ್ರಗಳ ಸಾಧಕರ ವಿವರ ಸಂಗ್ರಹಿಸಿಕೊಳ್ಳಿ.

ಕ್ವಿಜ್‍ನ ವೇಳೆ
ಕ್ವಿಜ್ ಮಾಸ್ಟರ್ ಹೇಳುವ ನಿರ್ದೇಶನಗಳ ಮೇಲೆ ಗಮನ ಕೇಂದ್ರೀಕರಿಸಿ.
ಯಾವುದೇ ಗಲಿಬಿಲಿ, ಖಿನ್ನತೆ, ಗೊಂದಲಗಳಿಗೆ ಒಳಗಾಗದೇ ನಿರಾಳವಾಗಿರಿ. ದೀರ್ಘವಾದ ಉಸಿರಾಟ ನಡೆಸಿ.
ಧನಾತ್ಮಕ ಮನೋಭಾವನೆ ಇರಲಿ. ಇದು ಉತ್ತರಗಳು ರಚನಾತ್ಮಕವಾಗಿರಲು ಸಹಾಯ ಮಾಡುತ್ತದೆ.
ಸಮಯದ ಕಡೆಗೆ ಹೆಚ್ಚು ನಿಗಾವಹಿಸಿ.
ಪ್ರತಿಸ್ಪರ್ದಿಯ ಅಂಕಗಳ ಕಡೆಗೆ ಗಮನ ಕೊಡದೇ ಸರಿ ಉತ್ತರದ ಕಡೆಗೆ ಗಮನ ಕೊಡಿ.
ತಂಡದ ಸದಸ್ಯರೊಂದಿಗೆ ಚರ್ಚಿಸಿ ಉತ್ತರ ನೀಡಿ. ಆತುರದ ಉತ್ತರ ಬೇಡ.
ಇತರ ತಂಡಕ್ಕೆ ಕೇಳಿದ ಪ್ರಶ್ನೆ ಪಾಸ್ ರೌಂಡ್ಸ್‍ನಲ್ಲಿ ನಿಮಗೂ ಬರಬಹುದು. ಉತ್ತರ ಸಿದ್ದಮಾಡಿಟ್ಟುಕೊಳ್ಳಿ.
ಉತ್ತರ ನಿಖರವಾಗಿರಲಿ, ಧ್ವನಿ ಸ್ಪಷ್ಟವಾಗಿರಲಿ.
ಇಂತಹ ಹತ್ತಾರು ಪ್ರಯೋಜನಗಳನ್ನು ಹೊಂದಿದ ಕ್ವಿಜ್‍ಗೆ ಸೇರಲು ಇದು ಸಕಾಲವಾಗಿದೆ. ನಿಮ್ಮ ಮಾನಸಿಕ ಹಾಗೂ ಬೌದ್ದಿಕ ಶಕ್ತಿಯನ್ನು ಚುರುಕುಗೊಳಿಸಲು ಕ್ವಿಜ್ ಒಂದು ಉತ್ತಮ ಸಾಧನ. ಇತರರ ಎದುರು ನಿಮ್ಮ ವ್ಯಕ್ತಿತ್ವವನ್ನು ಸಾಬೀತುಪಡಿಸಲು ಇದು ಅಮೂಲ್ಯವಾದ ಜ್ಞಾನದ ನಿಧಿ ಇದ್ದಂತೆ. ಇಂದೇ ಅದನ್ನು ನಿಮ್ಮ ಕೈವಶ ಮಾಡಿಕೊಳ್ಳಿ. 
ಆರ್.ಬಿ.ಗುರುಬಸವರಾಜ. ಶಿಕ್ಷಕರು
ಹೊಳಗುಂದಿ(ಪೊ)
ಹೂವಿನ ಹಡಗಲಿ(ತಾ)
ಬಳ್ಳಾರಿ(ಜಿ) 583219
9902992905

July 11, 2014

ಪರಿಣಾಮಕಾರಿ ತರಗತಿಗೆ ಪಂಚಸೂತ್ರಗಳು

ಜೂನ್ 2014 ರ 'ಶಿಕ್ಷಣವಾರ್ತೆ'ಯಲ್ಲಿ ಪ್ರಕಟವಾದ ಲೇಖನ
ಪರಿಣಾಮಕಾರಿ ತರಗತಿಗೆ ಪಂಚಸೂತ್ರಗಳು

ತರಗತಿ ಪರಿಣಾಮಕಾರಿಯಾಗಿ ಇರಬೇಕೆಂದು ಪ್ರತಿಯೊಬ್ಬ ಶಿಕ್ಷಕರು ಬಯಸುತ್ತಾರೆ. ಇದಕ್ಕೆ ಸಮಯ ಮತ್ತು ಬದ್ದತೆಯ ಯೋಜನೆ ಅಗತ್ಯ. ಆ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಉತ್ತೇಜಿಸುವ ಹಾಗೂ ಪರಸ್ಪರ ತಿಳುವಳಿಕೆಯನ್ನು ಉಂಟುಮಾಡುವ ಉದ್ದೇಶ ನಿಮ್ಮದಾಗಿರಬೇಕು. ತರಗತಿ ಪರಿಣಾಮಕಾರಿಯಾಗಿರಲು ಕೆಲವು ಪ್ರಮುಖಾಂಶಗಳು ಇಲ್ಲಿವೆ.
ವಿದ್ಯಾರ್ಥಿಗಳ ಬಗ್ಗೆ ತಿಳಿಯಿರಿ: ಪ್ರತಿ ವಿದ್ಯಾರ್ಥಿಯೂ ವಿಭಿನ್ನ. ಅವರ ಕಲಿಕೆ, ಮನೋಧೋರಣೆ, ದೃಷ್ಟಿಕೋನ. ಅಭಿರುಚಿ ಎಲ್ಲವೂ ವಿಭಿನ್ನ. ಕೆಲವು ವಿದ್ಯಾರ್ಥಿಗಳು ಕ್ಷಿಪ್ರವಾಗಿ ಕಲಿಯುತ್ತಾರೆ, ಕೆಲವರು ನಿಧಾನವಾಗಿ ಕಲಿಯುತ್ತಾರೆ. ಒಟ್ಟಾರೆಯಾಗಿ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ನೀಡುವ ಬೋಧನಾ ತಂತ್ರಗಳನ್ನು ಆಯ್ಕೆಮಾಡಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರೇರೇಪಿಸಲು, ಪ್ರೋತ್ಸಾಹಿಸಲು ಯಾವ ಯಾವ ಬದಲಾವಣೆಗಳು ಅಗತ್ಯವೋ ಅವೆಲ್ಲವನ್ನು ನಿರೀಕ್ಷಿತ ರೀತಿಯಲ್ಲಿ ಬದಲಾಯಿಸಿಕೊಳ್ಳಬೇಕಾಗುತ್ತದೆ.
ಅರ್ಥಪೂರ್ಣ ಸಂವಾದ ನಡೆಸಿ: ತರಗತಿ ಕೋಣೆಯಲ್ಲಿ ಮಕ್ಕಳೊಂದಿಗೆ ಅರ್ಥಪೂರ್ಣ ಸಂವಾದ ಅಗತ್ಯ. ಇದಕ್ಕೆ ಮಕ್ಕಳ ಹೆಸರನ್ನು ಪರಿಚಯಿಸಿಕೊಂಡಿರಬೇಕಾದುದು ತೀರಾ ಅನಿವಾರ್ಯ. ಮಕ್ಕಳನ್ನು ಅವರವರ ಹೆಸರಿನಿಂದ ಕರೆಯುವುದರಿಂದ ಅವರು ತುಂಬಾ ಜಾಗೃತರಾಗಿ ತರಗತಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಯಾವುದಾದರೂ ಒಂದು ಪರಿಕಲ್ಪನೆ ಕುರಿತು ಮಾತನಾಡಲು ಹಿಂಜರಿದಾಗ ಹೆಸರಿನಿಂದ ಅವರನ್ನು ಮಾತನಾಡಿಸಿ. ಆಗ ಧೈರ್ಯದಿಂದ ಮಾತನಾಡಲು ಪ್ರಯತ್ನಿಸುತ್ತಾರೆ. ಇದರಿಂದ ಶಿಕ್ಷಕರು ನಮ್ಮ ಸಹಾಯಕ್ಕಿದ್ದಾರೆ ಎಂಬ ಆತ್ಮವಿಶ್ವಾಸ ಅವರಿಗೆ ಬರುತ್ತದೆ.
ಗುರಿಯ ಸ್ಪಷ್ಟತೆ ಇರಲಿ: ಯಶಸ್ವಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಮಟ್ಟದ ಕಲಿಕೆ ಮೂಡಿಸಲು ಶ್ರಮಿಸುತ್ತಾರೆ. ಅವರು ನಿರ್ದಿಷ್ಟವಾದ ಮತ್ತು ಸಮಂಜಸವಾದ ಉದ್ದೇಶ ಹೊಂದಿದ್ದು ಅವರನ್ನು ಅಭಿವ್ಯಕ್ತಿಸಲು ಸಮರ್ಥರನ್ನಾಗಿಸುತ್ತದೆ. ವಿದ್ಯಾರ್ಥಿಗಳಿಗೆ ತಾವು ಕಲಿತ ಉದ್ದೇಶ ಹಾಗೂ ನಿರೀಕ್ಷೆಗಳು ಸ್ಪಷ್ಟವಾಗಿರಬೇಕು.
ಭಾಗವಹಿಸುವಿಕೆಯನ್ನು ಉತ್ತೇಜಿಸಿ: ಕೆಲವು ವಿದ್ಯಾರ್ಥಿಗಳು ಇತರರಿಗಿಂತ ಭಾಗವಹಿಸುವಿಕೆಯಲ್ಲಿ ಮುಂದೆ ಇರುತ್ತಾರೆ. ಅವರು ಮುಂದಿನ ಸಾಲಿನಲ್ಲಿಯೇ ಕುಳಿತಿರುತ್ತಾರೆ ಹಾಗೂ ಯಾವಾಗಲೂ ಪ್ರಶ್ನೆಗಳಿಗೆ ಉತ್ತರಿಸಲು ಕಾತರದಿಂದ ಇರುತ್ತಾರೆ. ಕೆಲವರು ತರಗತಿ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಹಾಗಾಗಿ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಇದರಿಂದಾಗಿ ತರಗತಿಯಲ್ಲಿ ಅಂತರ ಮೂಡುತ್ತದೆ. ಈ ಅಂತರವನ್ನು ನಿಭಾಯಿಸುವ ಏಕೈಕ ಮಾರ್ಗವೆಂದರೆ ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸುವುದು. ಪ್ರಶ್ನೆಗಳನ್ನು ಕೇಳಿದ ಕೂಡಲೇ ಕೆಲವು ವಿದ್ಯಾರ್ಥಿಗಳು ನಾಮುಂದು ತಾಮುಂದು ಎಂದು ಕೈ ಎತ್ತುತ್ತಾರೆ. ಉತ್ತರ ಪಡೆಯಲು ಯಾದೃಚ್ಛಿಕ ವಿಧಾನ ಅನುಸರಿಸುವುದು ಉತ್ತಮ. ಇದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತರ ಹೇಳುವ ಅವಕಾಶ ದೊರೆಯುತ್ತದೆ  ಹಾಗೂ ತಾವೂ ಉತ್ತರ ಹೇಳಬೇಕೆಂದು ಪ್ರಯತ್ನ ಪಡುವ ಮೂಲಕ ಅಭ್ಯಾಸದಲ್ಲಿ ತೊಡಗುತ್ತಾರೆ. ಒಬ್ಬ ವಿದ್ಯಾರ್ಥಿಗೆ ಪ್ರಶ್ನೆಕೇಳಿ ಉತ್ತರ ಪಡೆಯುವ ಬದಲು ಇಡೀ ತರಗತಿಗೆ ಪ್ರಶ್ನೆ ಕೇಳಿ ಒಬ್ಬೊಬ್ಬರಿಂದ ಉತ್ತರ ಪಡೆಯುವುದು ಒಳಿತು.
ತರಗತಿ ಚಟುವಟಿಕೆಗಳು ಆಸಕ್ತಿದಾಯಕವಾಗಿರಲಿ: ವಿದ್ಯಾರ್ಥಿಗಳ ಕಲಿಕಾಂಶದ ಧಾರಣ ಶಕ್ತಿ ಹೆಚ್ಚಿಸಲು ಚಟುವಟಿಕೆಗಳು ಸಹಕಾರಿ. ಉತ್ತಮವಾದ ಚಟುವಟಿಕೆಗಳನ್ನು ವಿನ್ಯಾಸಗೊಳಿಸುವುದು ಒಂದು ಕಲೆ. ಚಟುವಟಿಕೆಗಳು ಕಲಿಕಾಂಶ ಕುರಿತ ತಪ್ಪು ಗ್ರಹಿಕೆಗಳನ್ನು ನಿವಾರಿಸುವುದರ ಜೊತೆಗೆ ಮುಕ್ತ ಚರ್ಚೆಗೆ ಅವಕಾಶ ಕೊಡುತ್ತವೆ. ಹಾಗೂ ಭಿನ್ನ ಕಲಿಕಾಂಶಗಳಿಗೆ ಸಂಪರ್ಕ ಕೊಂಡಿಯಾಗಿರುತ್ತವೆ.
ಹೀಗೆ ಮೇಲಿನ ಅಂಶಗಳನ್ನು ಪಾಲಿಸುವುದರಿಂದ ತರಗತಿಯನ್ನು ಪರಿಣಾಮಕಾರಿಯನ್ನಾಗಿ ಮಾಡಬಹುದು. ಅಲ್ಲದೇ ಶಿಶುಕೇಂದ್ರಿತ ವ್ಯವಸ್ಥೆಗೆ ಪೂರಕವಾದ ಶಿಕ್ಷಣವನ್ನು ನೀಡಬಹುದು.
ಆರ್.ಬಿ.ಗುರುಬಸವರಾಜ. ಶಿಕ್ಷಕರು


ವೃತ್ತಿಪರ ಕೌಶಲ್ಯಗಳ ಬೆನ್ನತ್ತಿ......

ಜುಲೈ 2014ರ 'ಟೀಚರ್' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
ವೃತ್ತಿಪರ ಕೌಶಲ್ಯಗಳ ಬೆನ್ನತ್ತಿ......

ಇಂದು ಸಮೂಹ ಮಾಧ್ಯಮಗಳ ಭರಾಟೆಯಿಂದಾಗಿ ಜಗತ್ತು ಕಿರಿದಾಗಿದೆ. ಮಾಹಿತಿ ತಂತ್ರಜ್ಞಾನನವು ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದೆ. ಹೊಸ ಜ್ಞಾನ ಎಂದುಕೊಂಡದ್ದು ಕೆಲವೇ ಸಮಯದಲ್ಲಿ ಹಳೆಯದಾಗುತ್ತದೆ. ಜಾಗತಿಕ ಮಟ್ಟದಲ್ಲಿ ಊಹಿಸಲಾರದಷ್ಟು ಹೊಸ ಹೊಸ ತಂತ್ರಜ್ಞಾನ ಬೆಳೆಯುತ್ತಿದೆ. ಜೊತೆಜೊತೆಗೆ ಸವಾಲುಗಳು ಕೂಡಾ.
ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ನಮ್ಮೆಲ್ಲ ಆಶೋತ್ತರಗಳನ್ನು, ಜೀವನಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದೇವೆ. ಆದರೆ ಶಿಕ್ಷಕರಾದ ನಾವು ನಮ್ಮ ವೃತ್ತಿಪರತೆಯ ಹೊಸ ಆಲೋಚನೆಗಳನ್ನು, ಸಾಧ್ಯತೆಗಳನ್ನು ಮರೆತಿದ್ದೇವೆ. ಪರಿಣಾಮವಾಗಿ ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಹಿಂದಿನ ನಂಬಿಕೆಯ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತೇವೆ ಎಂದುಕೊಂಡರೆ ಅದು ನಮ್ಮ ಮೂರ್ಖತನದ ಪರಮಾವಧಿ ಆದೀತು. ಇಂದಿನ ಸ್ಪರ್ದಾತ್ಮಕ ಪ್ರಪಂಚದಲ್ಲಿ ನಿರ್ದಿಷ್ಟ ಗುರಿ ತಲುಪಲು ಹಳೆಯ ಕೌಶಲಗಳಷ್ಟೇ ಸಾಲವು. ಅವುಗಳ ಜೊತೆಗೆ ಹೊಸ ಹೊಸ ತಂತ್ರಗಳನ್ನು, ಕೌಶಲಗಳನ್ನು ಅಳವಡಿಸಿಕೊಳ್ಳಬೇಕಿದೆ.
ಇಂದಿನ ಮಕ್ಕಳು ಹಿಂದಿನಂತಿಲ್ಲ. ಅವರ ಬೇಕು ಬೇಡಿಕೆಗಳು, ಆಶೋತ್ತರಗಳು, ಚಟುವಟಿಕೆಗಳು, ಎಲ್ಲವೂ ಬದಲಾಗಿವೆ. ಇಂತಹ ಮಕ್ಕಳ ನಿರ್ವಹಣೆಗೆ ಅಗತ್ಯವಿರುವ ವೃತ್ತಿಪರತೆ ನಮ್ಮಲ್ಲಿದೆಯಾ? ಎಂದು ಯೋಚಿಸುವ ಅಗತ್ಯವಿದೆ. 
ಮಕ್ಕಳು ಬದಲಾದಂತೆ ಸಮುದಾಯವೂ ಬದಲಾಗಿದೆ. ಪಾಲಕರ ದೃಷ್ಟಿಕೊನಗಳು ಬದಲಾಗಿವೆ. ತಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಬೇಕು ಎಂಬ ಬಗ್ಗೆ ಅವರು ಚರ್ಚಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಅವರು ಯಾವ ತ್ಯಾಗಕ್ಕಾದರೂ ಸಿದ್ದರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಇಲಾಖೆ ನೀಡುವ ವೃತ್ತಿಪರ ತರಬೇತಿ ಸಾಕೇ? ಅಥವಾ ಅದರ ಜೊತೆಗೆ ಇತರೆ ಕೌಶಲಗಳು ಬೇಕೇ? ಹಾಗಾದರೆ ಅವನ್ನು ಪಡೆಯುವ ಮಾರ್ಗಗಳೇನು ಎಂಬುದನ್ನು ಶಿಕ್ಷಕರಾದ ನಾವು ಹುಡುಕಬೇಕಿದೆ. ಆ ಕಾರಣಕ್ಕಾಗಿಯಾದರೂ  ನಮ್ಮ ವೃತ್ತಿ ಪರತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ.
ಒಬ್ಬ ವಕೀಲನ ಮನೆಗೆ ಹೋದರೆ ಅಲ್ಲಿ ಅವನ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳು ರಾರಾಜಿಸುತ್ತವೆ. ಅಂತೆಯೇ ಒಬ್ಬ ಪೋಲೀಸ್ ಅಧಿಕಾರಿಯ ಮನೆಗೆ ಹೋದರೂ ಕೂಡಾ ಆತನ ವೃತ್ತಿಗೆ ಸಂಬಂಧಿಸಿದ ಗ್ರಂಥಗಳು ಕಪಾಟಿನಲ್ಲಿರುತ್ತವೆ. ಜೊತೆಗೆ ತಮ್ಮ ವೃತ್ತಿಯಲ್ಲಿ ಕೈಗೊಂಡ ನಾವೀನ್ಯ ರೀತಿಯ ತಂತ್ರಗಳು ಮತ್ತು ಕೌಶಲಗಳ ಬಗ್ಗೆ ದಾಖಲೆ ಇಟ್ಟಿರುತ್ತಾರೆ. ಆದರೆ ಶಿಕ್ಷಕರಾದ ನಾವ್ಯಾಕೆ ಇನ್ನೂ ಅವರಂತಾಗಿಲ್ಲ. ಎಷ್ಟು ಜನ ಶಿಕ್ಷಕರ ಮನೆಗಳಲ್ಲಿ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳಿವೆ? ನಾವ್ಯಾಕೆ ವೃತ್ತಿಯಲ್ಲಿ ಕೈಗೊಂಡ ತಂತ್ರಗಳ ಬಗ್ಗೆ, ಕೌಶಲಗಳ ಬಗ್ಗೆ ದಾಖಲೆ ಇಡುತ್ತಿಲ್ಲ? ವೃತ್ತಿಯಲ್ಲಿ ವಿಶೇಷವಾದುದನ್ನು ನಾವೇನು ಮಾಡಿದ್ದೇವೆ ಎಂದು ತೋರಿಸಲು ಕನಿಷ್ಟ ಒಂದು ದಾಖಲೆಯೂ ನಮ್ಮಲಿಲ್ಲವಾದರೆ ನಮ್ಮಲ್ಲಿರುವ ವೃತ್ತಿಪರತೆ ಎಂತಹದು! ಒಮ್ಮೆ ಯೋಚಿಸೋಣ.
ವೃತ್ತಿ ಪರತೆ ಹೆಚ್ಚಿಸಿಕೊಳ್ಳಲು ಇಂದು ಅನೇಕ ದಾರಿಗಳಿವೆ. ಜ್ಞಾನದ ಎಲ್ಲಾ ಆಯಾಮಗಳನ್ನು ತಲುಪಲು ಸಾಧ್ಯವಾಗದಿದ್ದರೂ ಕನಿಷ್ಟ ಆಯಾಮಗಳನ್ನಾದರೂ ತಲುಪಬೇಡವೇ? ನಾವು ಕೈಗೊಂಡ ಒಂದು ಚಿಕ್ಕ ಕಾರ್ಯವನ್ನು ದೊಡ್ಡದಾಗಿ ಪ್ರಚಾರ ಮಾಡಲು ಅನೇಕ ಮಾರ್ಗಗಳಿವೆ. ಮಾಹಿತಿ ತಂತ್ರಜ್ಞಾನದಲ್ಲಿ ಇದಕ್ಕೆ ವಿಫುಲ ಅವಕಾಶಗಳಿವೆ. ನಮ್ಮಲ್ಲಿನ ಮೋಬೈಲ್ ಫೋನನ್ನು ಒಂದು ಸಾಧನವಾಗಿ ಬಳಸಬಹುದು. ಫೇಸ್‍ಬುಕ್, ಟ್ವೀಟರ್, ವಾಟ್ಸಪ್‍ನಂತಹ ಸಾಮಾಜಿಕ ತಾಣಗಳ ಮೂಲಕ ನಮ್ಮ ಕೌಶಲಗಳನ್ನು ಪ್ರಚಾರಗೊಳಿಸಬಹುದಾಗಿದೆ. ಅಂತೆಯೇ ಹೊಸ ಹೊಸ ಕೌಶಲಗಳನ್ನು ಪತ್ತೆ ಹಚ್ಚಬಹುದಾಗಿದೆ. 
ನಾವು ಅಪ್‍ಡೇಟ್ ಆಗಲು ಇನ್ನೊಂದು ಮಾರ್ಗವೆಂದರೆ ಪ್ರತಿ ತಿಂಗಳು ನಮ್ಮ ವೇತನದಿಂದ ಕನಿಷ್ಟ 100 ರೂ ಬೆಲೆಯ ವೃತ್ತಿಪರ ಪುಸ್ತಕಗಳನ್ನು ಖರೀದಿಸುವುದು. ಹೀಗೆ ವರ್ಷದಲ್ಲಿ ಕನಿಷ್ಟ 1000 ರೂ ಬೆಲೆಯಂತೆ 25-30 ವರ್ಷಗಳ ಸೇವೆಯಲ್ಲಿ 25000-30000 ರೂ.ಗಳ ಪುಸ್ತಕಗಳು ಸಂಗ್ರಹವಾಗುತ್ತವೆ. ನಮಗರಿವಿಲ್ಲದಂತೆ ನಮ್ಮದೇ ಆದ ಸ್ವಂತ ಗ್ರಂಥಾಲಯವೊಂದು ನಿರ್ಮಾಣವಾಗಿರುತ್ತದೆ. ವೃತ್ತಿಪರತೆಯನ್ನು ಸಾಬೀತುಪಡಿಸಲು ಇದೊಂದು ಉತ್ತಮ ಮಾರ್ಗವಾಗಬಹುದಲ್ಲವೇ? ಒಮ್ಮೆ ಯೋಚಿಸಿ ಕಾರ್ಯತತ್ಪರರಾಗಿ.
ಆರ್.ಬಿ.ಗುರುಬಸವರಾಜ ಶಿಕ್ಷಕರು


July 2, 2014

ಇಂಟೀರಿಯರ್ ಡಿಸೈನ್

ದಿನಾಂಕ 02-07-2014 ರಂದು 'ವಿಜಯವಾಣಿ'ಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ 'ಇಂಟೀರಿಯರ್ ಡಿಸೈನ್' ಎಂಬ ಲೇಖನ



ಇಂಟೀರಿಯರ್ ಡಿಸೈನ್
ಕಲೆಗೆ ತಂತ್ರಜ್ಞಾನದ ಸ್ಪರ್ಶ

ಬಹುನಿರೀಕ್ಷೆಯ ಬಿಗ್‍ಬಾಸ್ ಸೀಸನ್-2 ಶುರುವಾಗಿದೆ. ಸ್ಪರ್ಧಾಳುಗಳು ಉಳಿದುಕೊಂಡಿರುವ ಮನೆಯೇ ಎಲ್ಲರ ಆಕರ್ಷಣೆಯ ವಸ್ತು. ಇಲ್ಲಿನ ಸೌಲಭ್ಯಗಳು, ಆಸನಗಳ ವ್ಯವಸ್ಥೆ, ಬಣ್ಣ ಮತ್ತು ಛಾಯೆಗಳ ಬಳಕೆ, ರಂಗು ರಂಗಿನ ವಿದ್ಯುತ್ ಬಲ್ಬ್‍ಗಳ ಚಿತ್ತಾರ ಹೀಗೆ ಪ್ರತಿಯೊಂದು ವ್ಯವಸ್ಥೆಯೂ ನೋಡುಗರಲ್ಲಿ ಬೆರಗು ಮೂಡಿಸುತ್ತದೆ. ಅದನ್ನು ನೋಡಿದ ಪ್ರತಿಯೊಬ್ಬರಲ್ಲೂ ನಮ್ಮ ಮನೆಯಲ್ಲಿಯೂ ಅಂತಹ ವ್ಯವಸ್ಥೆ ಇದ್ದರೆ ಹೇಗೆ ಎಂಬ ಕನಸು ಮೂಡಿರಲೂಬಹುದು. ಮನೆ ಎಂದರೆ ಕೇವಲ ದೇಹವನ್ನು ವಿಶ್ರಾಂತಿಗೊಳಿಸುವ ತಾಣ ಮಾತ್ರವಲ್ಲ. ಅದು ನಮಗೆ ಸುರಕ್ಷತೆ, ಶಾಂತತೆಯ ಜೊತೆಗೆ ಮನೋರಂಜನೆ ನೀಡುವ ನೆಮ್ಮದಿಯ ಸ್ಥಳವಾಗಿದೆ. ಕುಗ್ಗುತ್ತಿರುವ ವಸತಿ ಜಾಗ ಹಾಗೂ ಸುಧಾರಿತ ಜೀವನ ಶೈಲಿಯಿಂದಾಗಿ ಸುಸಜ್ಜಿತ ಮತ್ತು ಅಂದವಾದ ಮನೆ ನಿರ್ಮಾಣ ಪ್ರತಿಯೊಬ್ಬರ ಹಂಬಲವಾಗಿದೆ.
ಸಾಮಾನ್ಯವಾಗಿ ಮನೆ/ಬಂಗಲೆ/ಅಪಾರ್ಟಮೆಂಟ್/ಷಾಪಿಂಗ್ ಮಾಲ್‍ಗಳಲ್ಲಿನ ಒಳಾಂಗಣ ವಿನ್ಯಾಸ ಹಾಗೂ ಬಣ್ಣಗಳ ಆಯ್ಕೆ ನಮ್ಮ ಜೀವನ ಶೈಲಿಯನ್ನು, ವೈಯಕ್ತಿಕ ಆಸಕ್ತಿಗಳನ್ನು ಬಿಂಬಿಸುತ್ತದೆ.
ಪ್ರತಿಯೊಬ್ಬರೂ ತಮ್ಮದೇ ಆದ ಕನಸಿನ ಮನೆ ನಿರ್ಮಾಣಕ್ಕೆ ಹೆಚ್ಚು ಉತ್ಸುಕರಾಗಿರುತ್ತಾರೆ. ಹಾಗಾಗಿ ಮನೆಯನ್ನು ಅಂದಗೊಳಿಸಲು ಸೃಜನಶೀಲ ಒಳಾಂಗಣ ವಿನ್ಯಾಸಕಾರರಿಗೆ(ಇಂಟೀರಿಯರ್ ಡಿಸೈನರ್) ಹೆಚ್ಚು ಬೇಡಿಕೆ ಇದೆ. ಅದರಲ್ಲೂ ವೃತ್ತಿಪರ ತರಬೇತಿ ಪಡೆದವರಿಗಂತೂ ತುಂಬಾ ಬೇಡಿಕೆ ಇದೆ.
ಜಾಣ್ಮೆ, ಕೌಶಲ್ಯ ಮತ್ತು ಉತ್ಸಾಹ ಇರುವವರಿಗೆ ಇದು ಒಂದು ಉತ್ತಮ ಕ್ಷೇತ್ರವಾಗಿದೆ. ಅದಕ್ಕಾಗಿ ಔಪಚಾರಿಕ ಶಿಕ್ಷಣ ಅಗತ್ಯ. ಕರ್ನಾಟಕ ಸೇರಿದಂತೆ ದೇಶದ ಪ್ರತಿಷ್ಟಿತ ಸ್ಥಳಗಳಲ್ಲಿ ಇಂಟೀರಿಯರ್ ಡಿಸೈನ್ ಬಗ್ಗೆ ಶಿಕ್ಷಣ ನೀಡುವ ಅನೇಕ ಕಾಲೇಜುಗಳಿವೆ.
ವಿದ್ಯಾರ್ಹತೆ : ಇಂಟೀರಿಯರ್ ಡಿಸೈನ್ ಕ್ಷೇತ್ರಕ್ಕೆ ಸೇರಲು ಯಾವುದಾದರೂ ವಿಭಾಗದ ಪಿ.ಯು.ಸಿ.ಯಲ್ಲಿ ಶೇಕಡಾ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ವಿಜ್ಞಾನ ವಿಭಾಗದವರಿಗೆ ಪ್ರಥಮ ಆಧ್ಯತೆ. ಕೆಲವು ಕಾಲೇಜುಗಳು ಫಲಿತಾಂಶಕ್ಕಾಗಿ ಕಾಯುವವರಿಗೂ ಪ್ರವೇಶ ನೀಡುತ್ತವೆ.
ಆಯ್ಕೆಯ ವಿಧಾನ : ಆಸಕ್ತ ಅಭ್ಯರ್ಥಿಗಳು ಸೂಕ್ತ ಕಾಲೇಜನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಕೆಲವು ಕಾಲೇಜುಗಳು ಆಯ್ಕೆಗಾಗಿ ಪ್ರವೇಶ ಪರೀಕ್ಷೆ ನಡೆಸುತ್ತವೆ. ಕೆಲವು ಕಾಲೇಜುಗಳು ನೇರ ಸಂದರ್ಶನ ನಡೆಸುತ್ತವೆ.
ಕೋರ್ಸನ ವಿಧಗಳು :
3 ವರ್ಷದ ಪದವಿ ಕೋರ್ಸ(ಬಿ.ಎಸ್ಸಿ)
2 ವರ್ಷದ ಡಿಪ್ಲೋಮಾ ಕೋರ್ಸ
1 ವರ್ಷದ ಸರ್ಟಿಫಿಕೆಟ್ ಕೋರ್ಸ
ಏಕೆ ಈ ಕೋರ್ಸ? : ಮಹಾತ್ವಾಕಾಂಕ್ಷಿ ವ್ಯಕ್ತಿಗಳ ಸೃಜನಶೀಲತೆಯನ್ನು ಹೊರತರುವುದು ಇಂಟೀರಿಯರ್ ಡಿಸೈನ್ ಕೋರ್ಸನ ಉದ್ದೇಶವಾಗಿದೆ. ಈ ಕೋರ್ಸನಲ್ಲಿ ವಾಸಯೋಗ್ಯ ಅಥವಾ ವಾಣಿಜ್ಯೋಧ್ಯಮ ಸ್ಥಳವನ್ನು ಅಗಾಧ ಸುಂದರವಾಗಿ ಮಾಡುವ ಕೌಶಲ್ಯವನ್ನು ಕಲಿಸಲಾಗುತ್ತದೆ.
ಆಹ್ಲಾದಕರ ವಾತಾವರಣ ನಿರ್ಮಿಸುವ ಹಾಗೂ ಹೊಸ ಪ್ರಪಂಚವನ್ನು ಸೃಷ್ಟಿಸುವ ಆಕಾಂಕ್ಷೆ ಇರುವವರಿಗೆ ಈ ಕೋರ್ಸ ಹೆಚ್ಚಿನ ಸಾಮಥ್ರ್ಯ ನೀಡುತ್ತದೆ. ಈ ಕೋರ್ಸನಲ್ಲಿ ಅಭ್ಯರ್ಥಿಗಳು ಚಿತ್ರಕಲೆಯನ್ನು ಆಧುನಿಕ ವಿನ್ಯಾಸದ ಉಪಕರಣಗಳೊಂದಿಗೆ ತಳುಕು ಹಾಕುವ ಕಲೆಯನ್ನು ಸಿದ್ದಿಸಿಕೊಳ್ಳುವರು. ಇದೊಂದು ಕಲೆಯ ವಿಜ್ಞಾನವಾಗಿದ್ದು, ಆಧುನಿಕ ಜೀವನದ ಪರಿಣಾಮಕಾರಿ ಪ್ರದೇಶಗಳಲ್ಲಿ ವ್ಯಾಪಕ ಶ್ರೇಣಿಗಳಲ್ಲಿ ಉತ್ತಮ ಕಲಾಕೃತಿ ನಿರ್ಮಿಸಲು ಆಸಕ್ತಿ ಇರುವವರಿಗೆ ಉತ್ತಮ ಕ್ಷೇತ್ರವಾಗಿದೆ.

ಕೋರ್ಸನಲ್ಲಿ ಏನಿರುತ್ತದೆ? :
ವಿನ್ಯಾಸದ ಪರಿಕಲ್ಪನೆ ಮತ್ತು ಮೂಲತತ್ವಗಳು
ವಿನ್ಯಾಸ ಮತ್ತು ರೇಖಾಚಿತ್ರ(ಗ್ರಾಫಿಕ್ಸ್)ಗಳ ಕೌಶಲ
ಲೇಔಟ್ ಮತ್ತು ಪ್ರಸ್ತುತಿ ತಂತ್ರಗಳು
ವಿನ್ಯಾಸ ಮತ್ತು ದೃಶ್ಯಕಲೆ ಪ್ರಸ್ತುತಿ ವಿಧಾನಗಳು
ಕಟ್ಟಡ ರಚನೆಯ ಪರಿಕಲ್ಪನೆ
ಕಟ್ಟಡದ ಭದ್ರತೆ, ವಿದ್ಯುತ್ ಮತ್ತು ಅಲಂಕಾರಿಕ ವ್ಯವಸ್ಥೆಯ ಪರಿಕಲ್ಪನೆ
ವಿನ್ಯಾಸದ ಆಧುನಿಕ ಮಾಧ್ಯಮ ತಂತ್ರಗಳು
ನೀಲನಕ್ಷೆಯ ಅನ್ವಯ
ಮಾರುಕಟ್ಟೆ ಮತ್ತು ಉಧ್ಯಮ ಶೀಲತೆಯ ಕೌಶಲ
ಸಂವಹನ ಕೌಶಲ

ಕೋರ್ಸನ ನಂತರ : ಕೋರ್ಸನ ನಂತರ ಸಾಕಷ್ಟು ಪ್ರಾಯೋಗಿಕ ಮತ್ತು ತಾಂತ್ರಿಕ ಅನ್ವಯಗಳ ಅವಶ್ಯಕತೆ ಇದೆ. ಅದಕ್ಕಾಗಿ ಕ್ಷೇತ್ರಕಾರ್ಯ ಅಗತ್ಯ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆಕರಗಳೊಂದಿಗೆ ಕಲೆಯನ್ನು ಮೇಳೈಸುವುದು ಮುಖ್ಯ. ಅಂದರೆ ಕಲೆಗೆ ತಂತ್ರಜ್ಞಾನದ ಸ್ಪರ್ಶದ ಅಗತ್ಯವಿದೆ. ಅದಕ್ಕಾಗಿ ಕಟ್ಟಡ ಮಾಲೀಕರಿಗೆ ಒಪ್ಪಿತ ರೀತಿಯಲ್ಲಿ ವಿನ್ಯಾಸ ಮಾಡುವುದು ಮುಖ್ಯ. ಸ್ಥಳಾವಕಾಶದ ಪರಿಪೂರ್ಣ ಸದ್ಬಳಕೆಗಾಗಿ ಬಣ್ಣಗಳು, ಛಾಯೆಗಳು ಹಾಗೂ ಆಕಾರಗಳ ಆಯ್ಕೆ ಪ್ರಮುಖವಾಗಿರುತ್ತದೆ.
ಡಿಪ್ಲೋಮಾ ಇನ್ ಇಂಟೀರಿಯರ್ ಡಿಸೈನ್ ನಂತರ ಉನ್ನತ ಪದವಿ ಕೋರ್ಸಗಳಾದ ಬಿ.ಇ(ಆರ್ಕಿಟೆಕ್ಟ್), ಬಿ.ಎಸ್ಸಿ(ಆರ್ಕಿಟೆಕ್ಟ್) ಅಥವಾ ಎಂ.ಬಿ.ಎ(ಆರ್ಕಿಟೆಕ್ಟ್) ಮಾಡಬಹುದು.
ಈ ಕ್ಷೇತ್ರಕ್ಕೆ ಉಜ್ವಲವಾದ ಭವಿಷ್ಯವಿದೆ. ನಿರ್ಮಾಣ ಹಂತದಲ್ಲಿನ ಪ್ರತಿಯೊಂದು ಕಟ್ಟಡಗಳಲ್ಲಿ ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚು ಬೇಡಿಕೆ ಇದೆ.
ಉನ್ನತ ಪದವಿಯ ನಂತರ ದೃಶ್ಯ ಮಾರುಕಟ್ಟೆ ವಿನ್ಯಾಸಕರಾಗಿ, ಉತ್ಪಾದನಾ ವಿನ್ಯಾಸಕರಾಗಿ, ಕಾರ್ಯಕಾರಿ ವಿನ್ಯಾಸಕರಾಗಿ ಅಥವಾ ವಾಸಸ್ಥಳ ಮತ್ತು ವಾಣಿಜ್ಯೋಧ್ಯಮ ಒಳಾಂಗಣ ವಿನ್ಯಾಸಕಾರರಾಗಿ, ಸಲಹೆಗಾರರಾಗಿ ಕಾರ್ಯ ನಿರ್ವಹಿಸಬಹುದು. ಸದ್ಯದಲ್ಲಿ ವಾರ್ಷಿಕವಾಗಿ 3 ಲಕ್ಷದಿಂದ 5 ಲಕ್ಷದವರೆಗೆ ಹಣ ಗಳಿಸಬಹುದು. ಭವಿಷ್ಯದಲ್ಲಿ ಇದು ಇನ್ನೂ ಹೆಚ್ಚಲಿದೆ.

ಕರ್ನಾಟಕದ ಕೆಲವು ಇಂಟೀರಿಯರ್ ಡಿಸೈನ್ ಕಾಲೇಜುಗಳು:
ಎಕ್ಸ್‍ಟೀರಿಯರ್ ಇಂಟೀರಿಯರ್ಸ್(ಪ್ರೈ) ಲಿಮಿಟೆಡ್-ಬೆಂಗಳೂರು (080 22215451)
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ- ಕೋಲಾರ( 08153 274424), ಚಾಮರಾಜನಗರ(08226 222454), ಬೆಂಗಳೂರು(080 25287698), ಹಾಸನ(08172 256664), ಬೆಳಗಾಂ(0831 2401162)
ಇಂಟೀರಿಯರ್ ಅಂಡ್ ಫ್ಯಾಷನ್ ಡಿಸೈನ್ ಇನ್ಸ್ಟಿಟ್ಯೂಟ್- ಬೆಂಗಳೂರು (98455 45955)
ಇಂಡಿಯನ್ ಡಿಸೈನ್ ಅಕಾಡೆಮಿ-ಬೆಂಗಳೂರು(95905 95538)
ಕರಾವಳಿ ಕಾಲೇಜ್-ಮಂಗಳೂರು(0824 2455656)
ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್-ಮೈಸೂರು(0821 2561835)
ರಪ್ಫಾಲ್ಸ್ ಮಿಲೆನಿಯಮ್ ಇಂಟೀರಿಯರ್-ಕೋರಮಂಗಲ, ಬೆಂಗಳೂರು (96864 45562)
ಶ್ರೀದೇವಿ ಕಾಲೇಜ್ ಆಫ್ ಇಂಟೀರಿಯರ್ ಡೆಕೋರೇಷನ್- ಮಂಗಳೂರು
ಸೃಷ್ಠಿ ಸ್ಕೂಲ್ ಆಫ್ ಟಿಸೈನ್ ಟೆಕ್ನಾಲಜಿ-ಯಲಹಂಕ, ಬೆಂಗಳೂರು(080 40447000)

ಆರ್.ಬಿ.ಗುರುಬಸವರಾಜ. ಶಿಕ್ಷಕರು
ಹೊಳಗುಂದಿ(ಪೊ)
ಹೂವಿನ ಹಡಗಲಿ(ತಾ)
ಬಳ್ಳಾರಿ(ಜಿ) 583219
9902992905


May 23, 2014

ಸ್ನಾನಕ್ಕೆ ಟಾ ಟಾ ಹೇಳಿದ ಭೂಪ

ವಿಚಿತ್ರ ಬದುಕು
ಸ್ನಾನಕ್ಕೆ ಟಾ ಟಾ ಹೇಳಿದ ಭೂಪ

ಪ್ರೀತೀನೇ ಹಾಗೆ. ಯಾರನ್ನೂ ಅವರಿದ್ದ ಹಾಗೆ ಇರಲು ಬಿಡುವುದಿಲ್ಲ. ಪ್ರೀತಿಸಿದವಳು ಕೈ ಹಿಡಿದರೆ ಕಾರಲ್ಲಿ ಸುತ್ತಾಡುವುದು. ಪ್ರೀತಿಸಿದವಳು ಕೈ ಕೊಟ್ಟರೆ ಬಾರಲ್ಲಿ ಸುತ್ತಾಡುವುದು ಇಂದಿನ ಜಾಯಮಾನ. ಪ್ರೀತಿಗಾಗಿ ತ್ಯಾಗಿಗಳಾದವರು ಅನೇಕರು. ಪಾರ್ವತಿಗಾಗಿ ದೇವದಾಸ್, ಲೈಲಾಗಾಗಿ ಮಜ್ನು ಪ್ರಾಣವನ್ನೇ ಬಲಿಕೊಟ್ಟರು. ಮಮ್ತಾಜ್‍ಳ ಪ್ರೀತಿಗಾಗಿ ಷಹಜಹಾನ್ ತಾಜ್‍ಮಹಲನ್ನೇ ಕಟ್ಟಿದ. ಹೀಗೆ ಪ್ರೀತಿಗಾಗಿ ಒಬ್ಬೊಬ್ಬರೂ ಒಂದೊಂದು ತ್ಯಾಗ ಮಾಡಿ ಅಮರರಾಗಿದ್ದಾರೆ. ಆದರೆ ಇಲ್ಲೊಬ್ಬ ಪ್ರೀತಿಸಿದವಳು ಕೈಕೊಟ್ಟಳು ಎಂಬ ಕಾರಣಕ್ಕೆ ಬರೋಬ್ಬರಿ 60 ವರ್ಷಗಳಿಂದ ಮೈಗೆ ನೀರನ್ನೇ ಮುಟ್ಟಿಸಿಲ್ಲ. ಅಂದರೆ ಸ್ನಾನವನ್ನೇ ಮಾಡಿಲ್ಲ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಆ ವ್ಯಕ್ತಿ ಇನ್ನೂ ಜೀವಂತವಾಗಿದ್ದಾನೆ, ಆರೋಗ್ಯವಾಗಿದ್ದಾನೆ. ಅಂತಹ ಮಹಾನ್ ತ್ಯಾಗಿಯೇ 80 ರ ಹರೆಯದ ಕುಮಾರ ಅಮು ಹಾಜಿ. 38 ವರ್ಷಗಳಿಂದ ಸ್ನಾನ ಮಾಡದೇ ವಿಶ್ವದಾಖಲೆ ಮಾಡಿದ್ದ ಭಾರತದ ‘ಕೈಲಾಸ್ ಸಿಂಗ್’ನ ದಾಖಲೆಯನ್ನು ಅಮು ಹಾಜಿ ಮುರಿದಿದ್ದಾನೆ. 

ಅಮು ಹಾಜಿ ವಾಸವಿರುವುದು ದಕ್ಷಿಣ ಇರಾನಿನ ಫಾರ್ಸ್ ಪ್ರಾಂತ್ಯದ ಬಳಿಯ ‘ದೇಜಘಢ’ ಎಂಬ ಹಳ್ಳಿಯ ಹೊರವಲಯದಲ್ಲಿ. ಈತನ ಪ್ರಕಾರ ಸ್ನಾನ ಮಾಡುವುದು ಎಂದರೆ ಅನಾರೋಗ್ಯವನ್ನು ತಂದುಕೊಳ್ಳುವುದು. ದೇಹದ ಹೊರಮೈಗೆ ನೀರಿನ ಸಂಪರ್ಕವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಈತನಿಗೆ ಯಾರಾದರೂ ಸ್ನಾನದ ಸಲಹೆಯನ್ನು ನೀಡಿದರೆ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ ಅಥವಾ ಅವರನ್ನೇ ತಿರಸ್ಕರಿಸುತ್ತಾನೆ. 
ಈತ 20 ವರ್ಷದವನಿದ್ದಾಗ ಸ್ಪುರದ್ರೂಪಿಯೂ, ಸದೃಢನೂ ಆಗಿದ್ದ. ಆಗ ವಯೋಸಹಜವಾದ ಆಸೆಯಂತೆ ಒಂದು ಹುಡುಗಿಯನ್ನು ಪ್ರೀತಿಸಿದ. ಅವಳು ಇವನನ್ನು ತಿರಸ್ಕರಿಸಿದಳು. ಯುವಕನಾಗಿದ್ದಾಗಿನ ಭಾವನಾತ್ಮಕ ಹಿನ್ನಡೆಯಿಂದ ವಿರಹಿಯಾದ. ಅಂದಿನಿಂದ ಏಕಾಂಗಿಯಾಗಿರಲು  ಹಾಗೂ ಸ್ನಾನ ಮಾಡದಿರಲು ತೀರ್ಮಾನಿಸಿದ. 
ಕೇವಲ ಸ್ನಾನ ಮಾಡದಿರುವದಷ್ಟೇ ವಿಚಿತ್ರವಲ್ಲ. ಈತನ ಬದುಕು ಹಲವು ವಿಚಿತ್ರಗಳ ಸರಮಾಲೆ. ಸ್ನಾನದಂತೆ ಶುದ್ದ ಮತ್ತು ತಾಜಾ ಆಹಾರವನ್ನು ತಿರಸ್ಕರಿಸುವ ಈತನಿಗೆ ಸತ್ತ ಪ್ರಾಣಿಗಳ ಹಸಿಮಾಂಸವೇ ಆಹಾರ. ಅದರಲ್ಲೂ ಪ್ರಿಯವಾದ ಆಹಾರವೆಂದರೆ ಸತ್ತ ಮುಳ್ಳು ಹಂದಿಯ ಹಸಿಮಾಂಸ. 
ಹೊರಮೈಗೆ ನೀರನ್ನು ನಿಷೇಧಿಸಿದ ಹಾಜಿ ಕುಡಿಯಲು ನೀರನ್ನು ಬಳಸುತ್ತಾನೆ. ದಿನೊಂದಕ್ಕೆ 4-5ಲೀಟರ್ ನೀರು ಕುಡಿಯುತ್ತಾನೆ. ನೀರು ತರಲು ಹಳೆಯ ಕೊಳಕಾದ ಮತ್ತು ತುಕ್ಕು ಹಿಡಿದ ತೈಲದ ಡಬ್ಬವೊಂದನ್ನು ಇಟ್ಟುಕೊಂಡಿದ್ದಾನೆ. ಈತನಿಗೆ ಸ್ವಚ್ಚತೆ ಎಂದರೆ ಅಲರ್ಜಿ.
ಬೆಲೆ ಏರಿಕೆಯ ಬಿಸಿಯಾಗಲೀ, ವಿದ್ಯುತ್ ವೆಚ್ಚಗಳ ಚಿಂತೆಯಾಗಲೀ  ಅಮು ಹಾಜಿಗೆ ಇಲ್ಲ. ಏಕೆಂದರೆ ಈತನ ವಾಸ ಹಳ್ಳಿಯ ಹೊರವಲಯದ ಬಯಲಿನಲ್ಲಿ. ಸಮಾಧಿ ತರಹದ ಒಂದು ಬೋನು ಈತನ ಅರಮನೆ. ಸ್ವಚ್ಚಂದವಾದ ಗಾಳಿಯೇ ಏರ್‍ಕೂಲರ್. ಭೂಮಿಯ ಮೃದುವಾದ ನೆಲವೇ ಮೆತ್ತನೆಯ ಹಾಸಿಗೆ. ಕೈ ತೋಳುಗಳೇ ತಲೆದಿಂಬು. ಎರಡನೇ ಮಹಾಯುದ್ದದ ಕಾಲದ ಶಿರಸ್ತ್ರಾಣ(ಹೆಲ್ಮೆಟ್)ವೇ ಚಳಿಗಾಲದ ಆಪಧ್ಬಾಂಧವ.
ತನ್ನ ಸುಂದರವಾದ ಮುಖ ನೋಡಿಕೊಳ್ಳಲು ಕಾರಿನ ಸೈಡ್ ಮಿರರ್ ಇಟ್ಟುಕೊಂಡಿದ್ದಾನೆ. ಆಗಾಗ್ಗೆ ಗಡ್ಡ ಮೀಸೆಗಳನ್ನು ಟ್ರಿಮ್ ಮಾಡಿಕೊಳ್ಳುತ್ತಾನೆ. ಇದಕ್ಕಾಗಿ ಆತ ಕಂಡುಕೊಂಡ ಸರಳ ವಿಧಾನವೆಂದರೆ ಬೆಂಕಿಯಿಂದ ಸುಟ್ಟುಕೊಳ್ಳುವುದು.
ಅಮು ಹಾಜಿ ಭಂಗಿ ಸೇದುತ್ತಾನೆ. ಸಾಮಾನ್ಯವಾಗಿ ಭಂಗಿ ಸೇದುವವರು ತಂಬಾಕು ಬಳಸುತ್ತಾರೆ. ಆದರೆ ಹಾಜಿ ತಂಬಾಕಿಗೆ ಬದಲಾಗಿ ಪ್ರಾಣಿಗಳ ಮಲದ ಒಣ ಪುಡಿಯನ್ನು ಬಳಸುತ್ತಾನೆ. ಯಾರಾದರೂ ಸಿಗರೇಟು ನೀಡಿದರೆ ಸೇದುತ್ತಾನೆ. ಅದೂ 4-5 ಸಿಗರೇಟನ್ನು ಏಕಕಾಲಕ್ಕೆ ಹಚ್ಚಿಕೊಂಡು ಸೇದುತ್ತಾನೆ.
ಒಟ್ಟಾರೆ ಮೇಲಿನ ಎಲ್ಲಾ ವಿಲಕ್ಷಣ ಚಟುವಟಿಕೆಗಳನ್ನು ಗಮನಿಸಿದರೆ ಆತನೊಬ್ಬ ಮಾನಸಿಕ ಅಸ್ವಸ್ಥ ಇರಬಹುದೆಂದು ತಕ್ಷಣವೇ ತೀರ್ಮಾನಿಸಬಹುದು. ಆದರೆ ಅಮು ಹಾಜಿ ಮಾನಸಿಕ ಅಸ್ವಸ್ಥನಲ್ಲ. ಎಂಬುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಹಾಜಿಗೆ 80 ವರ್ಷ ವಯಸ್ಸಾದರೂ ಆ ವಯಸ್ಸಿನವರಿಗಿಂತ ಹೆಚ್ಚು ಸಂತೋಷದಿಂದ ಮತ್ತು ಆರೋಗ್ಯದಿಂದ ಇದ್ದಾನೆ. ತನಗೆ ಬೇಕಾದ ಆಹಾರ ಮತ್ತು ನೀರನ್ನು ಆತನೇ ಹುಡುಕಿ ತರುತ್ತಾನೆ. 
ಭಿನ್ನವಾಗಿ ಬದುಕುತ್ತಿರುವ ಹಾಜಿ ಅನೇಕ ಅಧ್ಯಯನಗಳಿಗೆ ವಿಷಯವಾಗುತ್ತಿದ್ದಾನೆ. ಅಧ್ಯಯನಕಾರರಿಗೆ ಹೆಚ್ಚು ಹೆಚು ಆಸಕ್ತಿದಾಯಕನಾಗುತ್ತಿದ್ದಾನೆ. ಈ ರೀತಿಯ ಅಧ್ಯಯನಗಳಿಂದ ಆತನ ಮನಸ್ಸಿನ ಮೂಲೆಯಲ್ಲಿ ಅವಿತು ಕುಳಿತ ಅಮೂಲ್ಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ ಎಂದು ಇರಾನಿನ ‘ತೆಹರ್ಹಾನ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ. 
ಇದು ವ್ಯರ್ಥ ಅಧ್ಯಯನವೆಂದು ಕೆಲವರು ವ್ಯಂಗ್ಯವಾಡಿದ್ದಾರೆ. ಈ ರೀತಿಯ ಅಧ್ಯಯನಗಳಿಂದ ಆತನ ಜೀವನವನ್ನು ಲೇವಡಿ ಮಾಡುವುದಾಗಲೀ ಅಥವಾ ಜೀವನಶೈಲಿಯನ್ನು ಬದಲಿಸುವುದಾಗಲೀ ಅಲ್ಲ. ಬದಲಾಗಿ ಮಾನಸಿಕ ಸ್ವಸ್ಥರೆನಿಸಿಕೊಂಡ ನಾವು ಕಲಿಯಬೇಕಾದುದು ಬಹಳಷ್ಟಿದೆ. ಅದೇನೆಂದರೆ ಮೊದಲನೆಯದಾಗಿ ಸಂತೋಷ ಎನ್ನುವುದು ಹಣ, ಆಸ್ತಿ, ಆಡಂಬರ, ವೈಭವಗಳಿಂದ ಲಭಿಸುವುದಲ್ಲ. ಅದು ಮನಸ್ಸಿನ ಸ್ಥಿತಿ ಎಂಬುದು. ಎರಡನೆಯದಾಗಿ ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ ಎಂಬುದು. ಮೂರನೆಯದು ಯಾರಿಗೂ ತೊಂದರೆ ಕೊಡದೇ ಒಂಟಿಯಾಗಿ ಬದುಕುವದು ಹೇಗೆ ಎಂಬುದನ್ನು ಹಾಜಿಯ ಜೀವನದಿಂದ ಕಲಿಯಬಹುದು. ಕಲಿಯಲು ವ್ಯಕ್ತಿ ಮುಖ್ಯ ಅಲ್ಲ, ಘಟನೆಗಳು, ಅನುಭವಗಳು ಮುಖ್ಯ ಅಲ್ಲವೇ?

'ಟೀಚರ್' ಮೇ 2014
ಆರ್.ಬಿ.ಗುರುಬಸವರಾಜ

ನಿದ್ರಾಮಾತು

29 ಮೇ 2014 ರ 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾದ "ನಿದ್ರೆಯಲ್ಲಿ  ಮಾತಾಡ್ತೀರಾ?"  ಲೇಖನ



ನಿದ್ರೆಯಲ್ಲಿ ಮಾತಾಡ್ತೀರಾ?

ಘಟನೆ-1 : 50 ವರ್ಷ ವಯಸ್ಸಿನ ಹುಸೇನ್‍ಬಾಷಾಗೆ 4 ಜನ ಮಕ್ಕಳು. ಕಳೆದ ಎರಡು ದಿನಗಳಿಂದ ಸಣ್ಣದಾಗಿ ಕಾಣಿಸಿಕೊಂಡ ಜ್ವರ ಇಂದು ತೀವ್ರವಾಗಿದೆ. ಎಚ್ಚರವಿಲ್ಲದೇ ಮಲಗಿದ ಅವರ ಮುಂದೆ ಇಡೀ ಕುಟುಂಬದವರೆಲ್ಲ ಕುಳಿತು ರೋಧಿಸುತ್ತಿದ್ದಾರೆ. ಹುಸೇನ್‍ಬಾಷಾ ನಿದ್ರೆಯಲ್ಲಿ ಏನೇನೋ ಬಡಬಡಿಸುತ್ತಿದ್ದಾರೆ. ಅವರ ಮಾತು ಯಾರಿಗೂ ಅರ್ಥವಾಗುತ್ತಿಲ್ಲ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಹುಸೇನ್‍ಬಾಷಾಗೆ ಏನೋ ಆಗಿದೆ ಎಂಬುದೇ ಕುಟುಂಬದ ರೋಧನಕ್ಕೆ ಕಾರಣ.
ಘಟನೆ-2 : ಮೂರನೇ ತರಗತಿಯಲ್ಲಿ ಓದುತ್ತಿರುವ ಶ್ವೇತಳದು ಇನ್ನೊಂದು ರೀತಿ. ಪ್ರತಿರಾತ್ರಿ ನಿದ್ದೆಯಲ್ಲಿ ಏನೇನೋ ಮಾತನಾಡುತ್ತಾಳೆ. ಅವಳ ಮಾತು ಯಾರಿಗೂ ತಿಳಿಯುವುದಿಲ್ಲ. ಒಮ್ಮೊಮ್ಮೆ ನಗುತ್ತಾಳೆ, ಕಿಟಾರನೇ ಕಿರಚುತ್ತಾಳೆ. ಬೆಳಿಗ್ಗೆ ಕೇಳಿದರೆ ತನಗೇನೂ ಗೊತ್ತಿಲ್ಲವೆಂದು ಹೇಳುತ್ತಾಳೆ. ಅವಳ ಈ ವರ್ತನೆ ತಂದೆ-ತಾಯಿಗಳಲ್ಲಿ ಆತಂಕ ಉಂಟು ಮಾಡಿದೆ.
ಮೇಲಿನ ಘಟನೆಗಳು ಕೇವಲ ಉದಾಹರಣೆ ಮಾತ್ರ. ಇಂತಹ ಹಲವಾರು ಘಟನೆಗಳನ್ನು ಪ್ರತಿನಿತ್ಯ ಅನೇಕರಲ್ಲಿ ಕಾಣುತ್ತೇವೆ. ನಿದ್ರಾಮಾತು “ಸೋಮ್ನಿಲೊಕ್ವೆ”  ಎಂದು ಕರೆಯುವ ಒಂದು ನಿದ್ರಾರೋಗವಾಗಿದ್ದು, ಕೆಲವೊಮ್ಮೆ ಅರ್ಥವಾಗದ ಸಂಭಾಷಣೆಗಳಿಂದ ಕೂಡಿರುತ್ತದೆ ಅಥವಾ ಗೊಣಗುಟ್ಟುವಂತಿರುತ್ತದೆ. ಇದು 69% ಮಕ್ಕಳಲ್ಲಿ ಹಾಗೂ 15% ಪುರುಷರಲ್ಲಿ ಕಂಡುಬರುವ ಸಾಮಾನ್ಯ ನಿದ್ರಾ ಕಾಯಿಲೆಯಾಗಿದೆ.
ಲಕ್ಷಣಗಳು : ಇದು ನಿದ್ದೆಯ ಪ್ರಾರಂಭಿಕ ಹಂತದಲ್ಲಿ ಗೋಚರಿಸುತ್ತದೆ. ಈ ಹಂತದಲ್ಲಿ ದೇಹ ತಾತ್ಕಾಲಿಕವಾಗಿ ಪಾಶ್ರ್ವವಾಯು ಪೀಡಿತವಾದಂತೆ ಇರುತ್ತದೆ. ದವಡೆಯು ಯಾಂತ್ರಿಕ ಮಾತಿನಲ್ಲಿ ತೊಡಗಿರುತ್ತದೆ. ಆಗ 
- ಭಾವನಾರಹಿತವಾದ ಅಸಹಜ ಧ್ವನಿ ಉಂಟಾಗುತ್ತದೆ.
- ಸಂಭಾಷಣೆಗಳು ಕೆಲವೊಮ್ಮೆ ನರಳಾಟದಿಂದ ಕೂಡಿರುತ್ತವೆ.
- ಮಾತುಗಳು ಅಸ್ಪಷ್ಟವಾಗಿದ್ದು ಒಂದಕ್ಕೊಂದು ಸಂಬಂಧ ಇರುವುದಿಲ್ಲ. 
- ಕೆಲವು ವೇಳೆ ಮಾತಿಗೆ ಬದಲಾಗಿ ಒದೆಯುವ ಇಲ್ಲವೇ ಗುದ್ದುವ ಅಥವಾ ಕೈಕಾಲು ಆಡಿಸುವ ಪ್ರಕ್ರಿಯೆ ಮಂದುವರೆಯುತ್ತದೆ.
- ಎಚ್ಚರಗೊಂಡ ನಂತರ ಯಾವುದೇ ನೆನಪು ಇಲ್ಲದಿರುವುದು.
   ಇಂತಹ ಸನ್ನಿವೇಶಗಳನ್ನು ತಮಾಷೆಗಾಗಿ ಮಾಡುತ್ತಾರೆ ಎಂದುಕೊಳ್ಳಬಹುದು. ಆದರೆ ನಿಜವಾಗಿಯೂ ಅವರು ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಇದು ಒಂದು ನಿದ್ರಾ ನ್ಯೂನತೆಯಾಗಿದೆ. 
ಕಾರಣಗಳು : ಇದಕ್ಕೆ ಕಾರಣಗಳು ಹಲವಾರು. ತೀವ್ರ ನೋವು, ಹಸಿವು, ಒಳಕಿವಿ ಸಮಸ್ಯೆ, ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‍ನ ಹೆಚ್ಚಳ, ಶೂನ್ಯ ಗುರುತ್ವಾಕರ್ಷಣೆ, ಅಧಿಕ ಕೆಫಿನ್ ಸೇವನೆ, ಖಿನ್ನತೆ, ಮಾನಸಿಕ ತೊಳಲಾಟ, ಮೆದುಳಿನ ಗಾಯ, ಜ್ವರ, ನಿದ್ರಾಹೀನತೆ, ಮಾದಕ ವಸ್ತು ಸೇವನೆ ಹೀಗೆ ಅನೇಕ ಕಾರಣಗಳಿಂದ ನಿದ್ರಾಮಾತು ಸಂಭವಿಸುತ್ತದೆ.
ಇದರಿಂದ ದೈಹಿಕವಾಗಿ ಯಾವುದೇ ತೊಂದರೆ ಇರದಿದ್ದರೂ ಮಾನಸಿಕ ತೊಂದರೆ ತಪ್ಪಿದ್ದಲ್ಲ. ‘ಸೋಮ್ನಿಲೊಕ್ವೆ’ಯಿಂದ ಬಳಲುವವರಿಗೆ ಯಾವುದೇ ತೊಂದರೆ ಇರದಿದ್ದರೂ ಪಕ್ಕದಲ್ಲಿ ಮಲಗಿದವರಿಗೆ ಕಿರಿಕಿರಿ ನೀಡುತ್ತದೆ. ಇದು ತೀವ್ರವಾಗಿದ್ದರೆ ಪಕ್ಕದವರಿಗೆ ಭಯ ಅಥವಾ ಸಿಟ್ಟು ತರಿಸುತ್ತದೆ. ಒಟ್ಟಾರೆ ಪಕ್ಕದವರ ನಿದ್ರಾಭಂಗಕ್ಕೆ ಕಾರಣವಾಗುತ್ತದೆ. 
ಕಿವಿಮಾತು : ನಿದ್ರಮಾತಿನ ತೊಂದರೆ ತಪ್ಪಿಸಲು ವೈದ್ಯಕೀಯ ಪರಿಹಾರಗಳು ಇಲ್ಲದಿದ್ದರೂ ಕೆಲವು ಚಟಿವಟಿಕೆಗಳಿಂದ ಅದನ್ನು ದೂರ ಇಡಬಹುದು.
ಸರಿಯಾದ ಮತ್ತು ಸೂಕ್ತ ಪ್ರಮಾಣದ ನಿದ್ದೆ ಮಾಡುವುದು ಹಾಗೂ ಉತ್ತಮ ನಿದ್ರೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು.
ಒತ್ತಡರಹಿತ ಜೀವನದಿಂದ ಮನಸ್ಸನ್ನು ಹಗುರ ಮಾಡಿಕೊಳ್ಳುವುದು.
ಮನಸ್ಸಿಗೆ ಮುದ ನೀಡುವ ಪ್ರವಾಸಿ ತಾಣಗಳಿಗೆ ಭೇಟಿಕೊಟ್ಟು ಮನಸ್ಸನ್ನು ಉಲ್ಲಸಿತಗೊಳಿಸುವುದು.
ಒಂಟಿತನದಿಂದ ದೂರವಾಗಿ ಸಮಾಜಮುಖಿಯಾಗಿ ಜೀವಿಸುವುದು.
ಸುಪ್ತ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರಗೊಳಿಸಿಕೊಳ್ಳುವುದು.
ಮಾದಕ ವಸ್ತುಗಳಿಂದ ದೂರ ಇರುವುದು.
ರಾತ್ರಿ ವೇಳೆ ಭಾರೀ ಭೋಜನ ಬೇಡ.
ದೇಹಕ್ಕೆ ನಿರಂತರ ವ್ಯಾಯಾಮ ನೀಡುವುದು.
ಪಕ್ಕದಲ್ಲಿ ಮಲಗಿದವರು ಕಿವಿಗಳಿಗೆ ಇಯರ್‍ಫೋನ್ ಹಾಕಿಕೊಳ್ಳುವುದು ಅಥವಾ ಚಿಕ್ಕ ಶಬ್ದ ಉಂಟು ಮಾಡುವ ಇನ್ನಿತರೇ ಸಾಧನಗಳನ್ನು ಬಳಸುವುದು. (ಉದಾಹರಣೆಗೆ ಫ್ಯಾನ್ ಹಾಕಿಕೊಳ್ಳುವುದು)
         ಸೋಮ್ನಿಲೊಕ್ವೆ ಬಗ್ಗೆ ಹೆಚ್ಚು ಆತಂಕ ಪಡಬೇಕಾದ ಅಗತ್ಯ ಇಲ್ಲ. ಆದಗ್ಯೂ ಇದು ತೀವ್ರವಾಗಿದ್ದರೆ ಅಥವಾ ಬಹು ಸಮಯದವರೆಗೂ ಮುಂದುವರೆದರೆ ಸೂಕ್ತ ವೈದ್ಯರನ್ನು ಭೇಟಿ ಮಾಡಿದರೆ ಹೆಚ್ಚು ವೈದ್ಯಕೀಯ ವಿವರಣೆ ಸಿಗುತ್ತದೆ. 
ಕೊನೆಮಾತು : ನಿದ್ರಾಮಾತು ಜಾಗೃತ ಅಥವಾ ವಿಚಾರ ಶಕ್ತಿಯುಳ್ಳ ಮನಸ್ಸಿನಿಂದ ಉಂಟಾದುದು ಅಲ್ಲ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಈ ಕಾರಣಕ್ಕಾಗಿ ನಿದ್ರಾಮಾತು ನ್ಯಾಯಾಲಯದಲ್ಲಿ ಒಪ್ಪಿತ ಸಾಕ್ಷಿಗಳಲ್ಲ. ಆದ್ದರಿಂದ ಚಿಂತೆ ಬಿಟ್ಹಾಕಿ. ಸುಖ ನಿದ್ರೆ ನಿಮ್ಮದಾಗುತ್ತದೆ.
- ಆರ್.ಬಿ.ಗುರುಬಸವರಾಜ. 

April 30, 2014

ಟಿ.ಇ.ಟಿ. ತಯಾರಿ

ದಿನಾಂಕ 30-04-2014 ರಂದು 'ವಿಜಯವಾಣಿ'"ಮಸ್ತ್" ಪುರವಣಿಯಲ್ಲಿ ಟಿ.ಇ.ಟಿ. ತಯಾರಿ ಕುರಿತು ಪ್ರಕಟವಾದ ಲೇಖನ.



April 28, 2014

ಇದ್ಹೇಗೆ ಮೇಲೇರಿತು?

ಇದ್ಹೇಗೆ ಮೇಲೇರಿತು?

ಒಮ್ಮೆ ನಮ್ಮ ಪುಟ್ಟ ಪಟ್ಟಣಕ್ಕೆ ತನ್ನ ತಂದೆ ಜೊತೆ ಬೈಕನ್ನೇರಿ ಹೋದ. ತಂದೆ ಜೊತೆ ಪಟ್ಟಣವನ್ನೆಲ್ಲ ಸುತ್ತಾಡಿ, ಬೇಕಾದ ಸಾಮಾನುಗಳನ್ನು ಖರೀದಿಸಿ, ಇಷ್ಟವಾದ ತಿಂಡಿ-ತಿನಿಸುಗಳನ್ನು ತಿಂದು ಕೊನೆಗೆ ತಂದೆ-ಮಗ ಇಬ್ಬರೂ ಬೈಕ್ ತೊಳೆಸಲೆಂದು ‘water service station’ ಗೆ ಹೋದರು ಅಲ್ಲಿ ಬೈಕ್ ತೊಳೆಯಲು ಬಿಟ್ಟು, ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತರು.

ಪುಟ್ಟ ಬಹಳ ಚುರುಕು ಬುದ್ದಿಯುಳ್ಳ ಹುಡುಗ. ಎಲ್ಲ ವಸ್ತುಗಳೂ, ದೃಶ್ಯಗಳೂ ಅವನ ಮನಸ್ಸನ್ನು ಕೆರೆಳಿಸಿ ಏಕೆ? ಏನು? ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತಿದ್ದವು. ಹೀಗೆ ‘water service station’ ನಲ್ಲೂ ಸಹ ಅವನಿಗೊಂದು ಪ್ರಶ್ನೆ ಉದ್ಭವಿಸಿತು. ಅದೇನೆಂದರೆ water service station ನಲ್ಲಿ ಇವರ ಬೈಕನ್ನು ತೊಳೆಯಲು ಬಿಟ್ಟ ಸಮಯದಲ್ಲಿ ಇನ್ನೊಂದು ಜೀಪು ಸಹ water service  ಗೆಂದು ಬಂದಿತ್ತು. ಅದನ್ನೇ ನೋಡುತ್ತಾ ಕುಳಿತ ಪುಟ್ಟನಿಗೆ ಅದು ಒಮ್ಮೇಲೇ ಕೆಳಗಿನಿಂದ ಮೇಲಕ್ಕೆ ಏರಿದ್ದು ನೋಡಿ ಆಶ್ಚರ್ಯವಾಯಿತು. “ಯಾರೂ ಎತ್ತದೇ ಇದ್ಹೇಗೆ ಮೇಲೇರಿತು” ಎಂಬ ಪ್ರಶ್ನೆ ಮೂಡಿ ತನ್ನ ತಂದೆಯನ್ನು ಕೇಳಿದ.
“ಅಪ್ಪ ಈ ಜೀಪು ಹೇಗೆ ಮೇಲೇರಿತು? ಅದನ್ನು ಹೇಗೆ ಕೆಳಗಿಳಿಸುತ್ತಾರೆ” ಎಂದು ಪ್ರಶ್ನಿಸಿದ. ತಂದೆಗೆ ಉತ್ತರ ಗೊತ್ತಿರಲಿಲ್ಲ. ‘ನಿಮ್ಮ ತರಗತಿಯಲ್ಲಿ ವಿಜ್ಞಾನ ಶಿಕ್ಷಕರನ್ನು ಕೇಳು’ ಎಂಬ ಸಲಹೆ ನೀಡಿದರು.

ಮರುದಿನ ಶಾಲೆಗೆ ಬಂದ ಪುಟ್ಟ ವಿಜ್ಞಾನ ಶಿಕ್ಷಕರು ಒಳಬಂದ ತಕ್ಷಣ ತನ್ನ ಪ್ರಶ್ನೆಯನ್ನು ಅವರ ಮುಂದಿಟ್ಟ. ವಿಜ್ಞಾನ ಶಿಕ್ಷಕರು ಅವನ ಕುತೂಹಲವನ್ನು ಬಹಳವಾಗಿ ಮೆಚ್ಚಿ ಅವನ ಪ್ರಶ್ನೆಗೆ ಉತ್ತರಿಸತೊಡಗಿದರು.

“ವಾಹನವನ್ನು ಮೇಲಿತ್ತುವ ವ್ಯವಸ್ಥೆಯು ‘ಪ್ಯಾಸ್ಕಲ್‍ನ ನಿಯಮ’ವೆಂದೇ ಹೆಸರಾದ “ಹೈಡ್ರಾಲಕ್ ಪ್ರೇಷರ್” ನ ಮೂಲ ತತ್ವವಾಗಿದೆ. ಅಂದರೆ ದ್ರವ ವಸ್ತುವು ಒತ್ತಡವನ್ನು ಎಲ್ಲಾ ಕಡೆಗೂ ಸಮನಾಗಿ ವಿತರಿಸುತ್ತದೆಂದು ಪ್ಯಾಸ್ಕಲ್ ಪ್ರತಿಪಾದಿಸಿದ. ಒತ್ತುಗದ ಸಹಾಯದಿಂದ ಕಡಿಮೆ ಬಲದಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಯಂತ್ರದ ರಚನೆ ಚಿತ್ರದಲ್ಲಿರುವಂತೆ ತೀರಾ ಸರಳವಾಗಿದ್ದು ನೀರಿನಿಂದ ತುಂಬಿದ ಒಂದು ಪಾತ್ರೆಯಿದ್ದು ಅದರಲ್ಲಿ ಚಿಕ್ಕ ಬೆಣೆಯನ್ನು ಕೆಳದೂಡಿದಾಗ ಅದು ದೊಡ್ಡ ಬೆಣೆಯ ಮುಖದ ವಿಸ್ತೀರ್ಣ ಹೆಚ್ಚಿರುವುದರಿಂದ ಮೇಲ್ಬದಿಗೆ ಆರೋಪಿಸುವ ಬಲದ ಪರಿಣಾಮ ಹೆಚ್ಚಾಗಿರುತ್ತದೆ. ಹೀಗೆ ಚಿಕ್ಕ ಬೆಣೆಯ ಮೇಲೆ ಕಡಿಮೆ ಬಲ ಉಪಯೋಗಿಸಿ ದೊಡ್ಡ ಬೆಣೆ ಮೇಲಿನ ಒಂದು ವಾಹನವನ್ನು ಮೇಲೆತ್ತಬಹುದು” ಎಂದು ವಿವರಿಸಿ ತಿಳಿಸಿದರು.

ಪ್ಯಾಸ್ಕಲ್‍ನ ತತ್ವದ ಬಗ್ಗೆ ತಿಳಿದ ಪುಟ್ಟನಿಗೆ ಪ್ಯಾಸ್ಕಲ್‍ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆನಿಸಿತು.“ಸಾರ್ ಪ್ಯಾಸ್ಕಲ್‍ನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸ್ರೀ” ಎಂದು ಕೇಳಿದ. ಶಿಕ್ಷಕರು ವಿವರಿಸುತ್ತಾ “ಪ್ಯಾಸ್ಕಲ್‍ನು 1623 ಜೂನ್ 19 ರಂದು ಪ್ರಾನ್ಸಿನಲ್ಲಿರುವ ಕ್ಲೆರ್‍ಮೆಂಟ್-ಫೆರಿಂಡ್ ಎಂಬಲ್ಲಿ ಜನಿಸಿದನು. ಅವನಿಗೆ ಚಿಕ್ಕಂದಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಎಷ್ಟಿತ್ತೆಂದರೆ ಹುಡುಗನಾಗಿದ್ದಾಗಲೇ ಯೂಕ್ಲಿಡ್‍ನ ರೇಖಾಗಣಿತದ ಪ್ರಮೇಯಗಳನ್ನು ಕಂಡುಹಿಡಿದನಂತೆ. ಹದಿನಾರನೇ ವಯಸ್ಸಿಗೆ ಶಂಕುವಿನ ಛೇದ ಮುಖಗಳಾದ ವರ್ತುಲ, ಎಲಿಪ್ಸ್, ಪ್ಯಾರಾಬೋಲ, ಹೈಪರ್ಬೋಲ ಮುಂತಾದ ಆಕೃತಿಗಳ ಜ್ಯಾಮಿತಿಯ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದನು.

ಪ್ಯಾಸ್ಕಲ್ ಕಂಡುಹಿಡಿದ ಲೆಕ್ಕಾಚಾರದ ಯಂತ್ರ ಗಣಕಯಂತ್ರಗಳ ಆವಿಷ್ಕಾರಕ್ಕೆ ಪ್ರಚೋದನೆ ನೀಡಿತು. ಪ್ಯಾಸ್ಕಲ್‍ನು “ಸಂಭವನೀಯತಾ ಸಿದ್ಧಾಂತ” ಕಂಡು ಹಿಡಿದನು. ಒಮ್ಮೆ ಪ್ಯಾಸ್ಕಲ್ ಕುದುರೆ ಸಾರೋಟಿನಲ್ಲಿ ಹೋಗುವಾಗ ಅಪಘಾತಕ್ಕಿ ಡಾಗಿ ಸಾವಿನ ದವಡೆಯಿಂದ ತಪ್ಪಿಸಿಕೊಂಡ. ಇದು ಅವನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಿತು. ದೇವರ ಅವಕೃಪೆಯೇ ಇದಕ್ಕೆ ಕಾರಣವೆಂದು ನಂಬಿದ ಪ್ಯಾಸ್ಕಲ್‍ನಿಗೆ ಅಂದಿನಿಂದ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಕಡಿಮೆಯಾಗಿ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ರಚನೆಯಲ್ಲಿ ತೊಡಗಿದ. ಪ್ಯಾಸ್ಕಲ್‍ನ ದೈವೀ ನಂಬಿಕೆಗಳೇನೇ ಇದ್ದರೂ ವಿಜ್ಞಾನ ಕ್ಷೇತ್ರದಲ್ಲಿ ಆತನ ಸಾಧನೆ ಗಮನಾರ್ಹವಾದುದು” ಎಂದು ಶಿಕ್ಷಕರು ಪ್ಯಾಸ್ಕಲ್‍ನ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಇದನ್ನು ಕೇಳಿದ ಪುಟ್ಟನಿಗೆ ಮತ್ತು ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಬಲು ಖುಷಿಯಾಯಿತು.

‘ಟೀಚರ್’ ಅಕ್ಟೋಬರ್ 2003
- ಆರ್.ಬಿ.ಗುರುಬಸವರಾಜ