May 23, 2014

ಸ್ನಾನಕ್ಕೆ ಟಾ ಟಾ ಹೇಳಿದ ಭೂಪ

ವಿಚಿತ್ರ ಬದುಕು
ಸ್ನಾನಕ್ಕೆ ಟಾ ಟಾ ಹೇಳಿದ ಭೂಪ

ಪ್ರೀತೀನೇ ಹಾಗೆ. ಯಾರನ್ನೂ ಅವರಿದ್ದ ಹಾಗೆ ಇರಲು ಬಿಡುವುದಿಲ್ಲ. ಪ್ರೀತಿಸಿದವಳು ಕೈ ಹಿಡಿದರೆ ಕಾರಲ್ಲಿ ಸುತ್ತಾಡುವುದು. ಪ್ರೀತಿಸಿದವಳು ಕೈ ಕೊಟ್ಟರೆ ಬಾರಲ್ಲಿ ಸುತ್ತಾಡುವುದು ಇಂದಿನ ಜಾಯಮಾನ. ಪ್ರೀತಿಗಾಗಿ ತ್ಯಾಗಿಗಳಾದವರು ಅನೇಕರು. ಪಾರ್ವತಿಗಾಗಿ ದೇವದಾಸ್, ಲೈಲಾಗಾಗಿ ಮಜ್ನು ಪ್ರಾಣವನ್ನೇ ಬಲಿಕೊಟ್ಟರು. ಮಮ್ತಾಜ್‍ಳ ಪ್ರೀತಿಗಾಗಿ ಷಹಜಹಾನ್ ತಾಜ್‍ಮಹಲನ್ನೇ ಕಟ್ಟಿದ. ಹೀಗೆ ಪ್ರೀತಿಗಾಗಿ ಒಬ್ಬೊಬ್ಬರೂ ಒಂದೊಂದು ತ್ಯಾಗ ಮಾಡಿ ಅಮರರಾಗಿದ್ದಾರೆ. ಆದರೆ ಇಲ್ಲೊಬ್ಬ ಪ್ರೀತಿಸಿದವಳು ಕೈಕೊಟ್ಟಳು ಎಂಬ ಕಾರಣಕ್ಕೆ ಬರೋಬ್ಬರಿ 60 ವರ್ಷಗಳಿಂದ ಮೈಗೆ ನೀರನ್ನೇ ಮುಟ್ಟಿಸಿಲ್ಲ. ಅಂದರೆ ಸ್ನಾನವನ್ನೇ ಮಾಡಿಲ್ಲ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಆ ವ್ಯಕ್ತಿ ಇನ್ನೂ ಜೀವಂತವಾಗಿದ್ದಾನೆ, ಆರೋಗ್ಯವಾಗಿದ್ದಾನೆ. ಅಂತಹ ಮಹಾನ್ ತ್ಯಾಗಿಯೇ 80 ರ ಹರೆಯದ ಕುಮಾರ ಅಮು ಹಾಜಿ. 38 ವರ್ಷಗಳಿಂದ ಸ್ನಾನ ಮಾಡದೇ ವಿಶ್ವದಾಖಲೆ ಮಾಡಿದ್ದ ಭಾರತದ ‘ಕೈಲಾಸ್ ಸಿಂಗ್’ನ ದಾಖಲೆಯನ್ನು ಅಮು ಹಾಜಿ ಮುರಿದಿದ್ದಾನೆ. 

ಅಮು ಹಾಜಿ ವಾಸವಿರುವುದು ದಕ್ಷಿಣ ಇರಾನಿನ ಫಾರ್ಸ್ ಪ್ರಾಂತ್ಯದ ಬಳಿಯ ‘ದೇಜಘಢ’ ಎಂಬ ಹಳ್ಳಿಯ ಹೊರವಲಯದಲ್ಲಿ. ಈತನ ಪ್ರಕಾರ ಸ್ನಾನ ಮಾಡುವುದು ಎಂದರೆ ಅನಾರೋಗ್ಯವನ್ನು ತಂದುಕೊಳ್ಳುವುದು. ದೇಹದ ಹೊರಮೈಗೆ ನೀರಿನ ಸಂಪರ್ಕವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಈತನಿಗೆ ಯಾರಾದರೂ ಸ್ನಾನದ ಸಲಹೆಯನ್ನು ನೀಡಿದರೆ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ ಅಥವಾ ಅವರನ್ನೇ ತಿರಸ್ಕರಿಸುತ್ತಾನೆ. 
ಈತ 20 ವರ್ಷದವನಿದ್ದಾಗ ಸ್ಪುರದ್ರೂಪಿಯೂ, ಸದೃಢನೂ ಆಗಿದ್ದ. ಆಗ ವಯೋಸಹಜವಾದ ಆಸೆಯಂತೆ ಒಂದು ಹುಡುಗಿಯನ್ನು ಪ್ರೀತಿಸಿದ. ಅವಳು ಇವನನ್ನು ತಿರಸ್ಕರಿಸಿದಳು. ಯುವಕನಾಗಿದ್ದಾಗಿನ ಭಾವನಾತ್ಮಕ ಹಿನ್ನಡೆಯಿಂದ ವಿರಹಿಯಾದ. ಅಂದಿನಿಂದ ಏಕಾಂಗಿಯಾಗಿರಲು  ಹಾಗೂ ಸ್ನಾನ ಮಾಡದಿರಲು ತೀರ್ಮಾನಿಸಿದ. 
ಕೇವಲ ಸ್ನಾನ ಮಾಡದಿರುವದಷ್ಟೇ ವಿಚಿತ್ರವಲ್ಲ. ಈತನ ಬದುಕು ಹಲವು ವಿಚಿತ್ರಗಳ ಸರಮಾಲೆ. ಸ್ನಾನದಂತೆ ಶುದ್ದ ಮತ್ತು ತಾಜಾ ಆಹಾರವನ್ನು ತಿರಸ್ಕರಿಸುವ ಈತನಿಗೆ ಸತ್ತ ಪ್ರಾಣಿಗಳ ಹಸಿಮಾಂಸವೇ ಆಹಾರ. ಅದರಲ್ಲೂ ಪ್ರಿಯವಾದ ಆಹಾರವೆಂದರೆ ಸತ್ತ ಮುಳ್ಳು ಹಂದಿಯ ಹಸಿಮಾಂಸ. 
ಹೊರಮೈಗೆ ನೀರನ್ನು ನಿಷೇಧಿಸಿದ ಹಾಜಿ ಕುಡಿಯಲು ನೀರನ್ನು ಬಳಸುತ್ತಾನೆ. ದಿನೊಂದಕ್ಕೆ 4-5ಲೀಟರ್ ನೀರು ಕುಡಿಯುತ್ತಾನೆ. ನೀರು ತರಲು ಹಳೆಯ ಕೊಳಕಾದ ಮತ್ತು ತುಕ್ಕು ಹಿಡಿದ ತೈಲದ ಡಬ್ಬವೊಂದನ್ನು ಇಟ್ಟುಕೊಂಡಿದ್ದಾನೆ. ಈತನಿಗೆ ಸ್ವಚ್ಚತೆ ಎಂದರೆ ಅಲರ್ಜಿ.
ಬೆಲೆ ಏರಿಕೆಯ ಬಿಸಿಯಾಗಲೀ, ವಿದ್ಯುತ್ ವೆಚ್ಚಗಳ ಚಿಂತೆಯಾಗಲೀ  ಅಮು ಹಾಜಿಗೆ ಇಲ್ಲ. ಏಕೆಂದರೆ ಈತನ ವಾಸ ಹಳ್ಳಿಯ ಹೊರವಲಯದ ಬಯಲಿನಲ್ಲಿ. ಸಮಾಧಿ ತರಹದ ಒಂದು ಬೋನು ಈತನ ಅರಮನೆ. ಸ್ವಚ್ಚಂದವಾದ ಗಾಳಿಯೇ ಏರ್‍ಕೂಲರ್. ಭೂಮಿಯ ಮೃದುವಾದ ನೆಲವೇ ಮೆತ್ತನೆಯ ಹಾಸಿಗೆ. ಕೈ ತೋಳುಗಳೇ ತಲೆದಿಂಬು. ಎರಡನೇ ಮಹಾಯುದ್ದದ ಕಾಲದ ಶಿರಸ್ತ್ರಾಣ(ಹೆಲ್ಮೆಟ್)ವೇ ಚಳಿಗಾಲದ ಆಪಧ್ಬಾಂಧವ.
ತನ್ನ ಸುಂದರವಾದ ಮುಖ ನೋಡಿಕೊಳ್ಳಲು ಕಾರಿನ ಸೈಡ್ ಮಿರರ್ ಇಟ್ಟುಕೊಂಡಿದ್ದಾನೆ. ಆಗಾಗ್ಗೆ ಗಡ್ಡ ಮೀಸೆಗಳನ್ನು ಟ್ರಿಮ್ ಮಾಡಿಕೊಳ್ಳುತ್ತಾನೆ. ಇದಕ್ಕಾಗಿ ಆತ ಕಂಡುಕೊಂಡ ಸರಳ ವಿಧಾನವೆಂದರೆ ಬೆಂಕಿಯಿಂದ ಸುಟ್ಟುಕೊಳ್ಳುವುದು.
ಅಮು ಹಾಜಿ ಭಂಗಿ ಸೇದುತ್ತಾನೆ. ಸಾಮಾನ್ಯವಾಗಿ ಭಂಗಿ ಸೇದುವವರು ತಂಬಾಕು ಬಳಸುತ್ತಾರೆ. ಆದರೆ ಹಾಜಿ ತಂಬಾಕಿಗೆ ಬದಲಾಗಿ ಪ್ರಾಣಿಗಳ ಮಲದ ಒಣ ಪುಡಿಯನ್ನು ಬಳಸುತ್ತಾನೆ. ಯಾರಾದರೂ ಸಿಗರೇಟು ನೀಡಿದರೆ ಸೇದುತ್ತಾನೆ. ಅದೂ 4-5 ಸಿಗರೇಟನ್ನು ಏಕಕಾಲಕ್ಕೆ ಹಚ್ಚಿಕೊಂಡು ಸೇದುತ್ತಾನೆ.
ಒಟ್ಟಾರೆ ಮೇಲಿನ ಎಲ್ಲಾ ವಿಲಕ್ಷಣ ಚಟುವಟಿಕೆಗಳನ್ನು ಗಮನಿಸಿದರೆ ಆತನೊಬ್ಬ ಮಾನಸಿಕ ಅಸ್ವಸ್ಥ ಇರಬಹುದೆಂದು ತಕ್ಷಣವೇ ತೀರ್ಮಾನಿಸಬಹುದು. ಆದರೆ ಅಮು ಹಾಜಿ ಮಾನಸಿಕ ಅಸ್ವಸ್ಥನಲ್ಲ. ಎಂಬುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಹಾಜಿಗೆ 80 ವರ್ಷ ವಯಸ್ಸಾದರೂ ಆ ವಯಸ್ಸಿನವರಿಗಿಂತ ಹೆಚ್ಚು ಸಂತೋಷದಿಂದ ಮತ್ತು ಆರೋಗ್ಯದಿಂದ ಇದ್ದಾನೆ. ತನಗೆ ಬೇಕಾದ ಆಹಾರ ಮತ್ತು ನೀರನ್ನು ಆತನೇ ಹುಡುಕಿ ತರುತ್ತಾನೆ. 
ಭಿನ್ನವಾಗಿ ಬದುಕುತ್ತಿರುವ ಹಾಜಿ ಅನೇಕ ಅಧ್ಯಯನಗಳಿಗೆ ವಿಷಯವಾಗುತ್ತಿದ್ದಾನೆ. ಅಧ್ಯಯನಕಾರರಿಗೆ ಹೆಚ್ಚು ಹೆಚು ಆಸಕ್ತಿದಾಯಕನಾಗುತ್ತಿದ್ದಾನೆ. ಈ ರೀತಿಯ ಅಧ್ಯಯನಗಳಿಂದ ಆತನ ಮನಸ್ಸಿನ ಮೂಲೆಯಲ್ಲಿ ಅವಿತು ಕುಳಿತ ಅಮೂಲ್ಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ ಎಂದು ಇರಾನಿನ ‘ತೆಹರ್ಹಾನ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ. 
ಇದು ವ್ಯರ್ಥ ಅಧ್ಯಯನವೆಂದು ಕೆಲವರು ವ್ಯಂಗ್ಯವಾಡಿದ್ದಾರೆ. ಈ ರೀತಿಯ ಅಧ್ಯಯನಗಳಿಂದ ಆತನ ಜೀವನವನ್ನು ಲೇವಡಿ ಮಾಡುವುದಾಗಲೀ ಅಥವಾ ಜೀವನಶೈಲಿಯನ್ನು ಬದಲಿಸುವುದಾಗಲೀ ಅಲ್ಲ. ಬದಲಾಗಿ ಮಾನಸಿಕ ಸ್ವಸ್ಥರೆನಿಸಿಕೊಂಡ ನಾವು ಕಲಿಯಬೇಕಾದುದು ಬಹಳಷ್ಟಿದೆ. ಅದೇನೆಂದರೆ ಮೊದಲನೆಯದಾಗಿ ಸಂತೋಷ ಎನ್ನುವುದು ಹಣ, ಆಸ್ತಿ, ಆಡಂಬರ, ವೈಭವಗಳಿಂದ ಲಭಿಸುವುದಲ್ಲ. ಅದು ಮನಸ್ಸಿನ ಸ್ಥಿತಿ ಎಂಬುದು. ಎರಡನೆಯದಾಗಿ ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ ಎಂಬುದು. ಮೂರನೆಯದು ಯಾರಿಗೂ ತೊಂದರೆ ಕೊಡದೇ ಒಂಟಿಯಾಗಿ ಬದುಕುವದು ಹೇಗೆ ಎಂಬುದನ್ನು ಹಾಜಿಯ ಜೀವನದಿಂದ ಕಲಿಯಬಹುದು. ಕಲಿಯಲು ವ್ಯಕ್ತಿ ಮುಖ್ಯ ಅಲ್ಲ, ಘಟನೆಗಳು, ಅನುಭವಗಳು ಮುಖ್ಯ ಅಲ್ಲವೇ?

'ಟೀಚರ್' ಮೇ 2014
ಆರ್.ಬಿ.ಗುರುಬಸವರಾಜ

ನಿದ್ರಾಮಾತು

29 ಮೇ 2014 ರ 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾದ "ನಿದ್ರೆಯಲ್ಲಿ  ಮಾತಾಡ್ತೀರಾ?"  ಲೇಖನ



ನಿದ್ರೆಯಲ್ಲಿ ಮಾತಾಡ್ತೀರಾ?

ಘಟನೆ-1 : 50 ವರ್ಷ ವಯಸ್ಸಿನ ಹುಸೇನ್‍ಬಾಷಾಗೆ 4 ಜನ ಮಕ್ಕಳು. ಕಳೆದ ಎರಡು ದಿನಗಳಿಂದ ಸಣ್ಣದಾಗಿ ಕಾಣಿಸಿಕೊಂಡ ಜ್ವರ ಇಂದು ತೀವ್ರವಾಗಿದೆ. ಎಚ್ಚರವಿಲ್ಲದೇ ಮಲಗಿದ ಅವರ ಮುಂದೆ ಇಡೀ ಕುಟುಂಬದವರೆಲ್ಲ ಕುಳಿತು ರೋಧಿಸುತ್ತಿದ್ದಾರೆ. ಹುಸೇನ್‍ಬಾಷಾ ನಿದ್ರೆಯಲ್ಲಿ ಏನೇನೋ ಬಡಬಡಿಸುತ್ತಿದ್ದಾರೆ. ಅವರ ಮಾತು ಯಾರಿಗೂ ಅರ್ಥವಾಗುತ್ತಿಲ್ಲ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಹುಸೇನ್‍ಬಾಷಾಗೆ ಏನೋ ಆಗಿದೆ ಎಂಬುದೇ ಕುಟುಂಬದ ರೋಧನಕ್ಕೆ ಕಾರಣ.
ಘಟನೆ-2 : ಮೂರನೇ ತರಗತಿಯಲ್ಲಿ ಓದುತ್ತಿರುವ ಶ್ವೇತಳದು ಇನ್ನೊಂದು ರೀತಿ. ಪ್ರತಿರಾತ್ರಿ ನಿದ್ದೆಯಲ್ಲಿ ಏನೇನೋ ಮಾತನಾಡುತ್ತಾಳೆ. ಅವಳ ಮಾತು ಯಾರಿಗೂ ತಿಳಿಯುವುದಿಲ್ಲ. ಒಮ್ಮೊಮ್ಮೆ ನಗುತ್ತಾಳೆ, ಕಿಟಾರನೇ ಕಿರಚುತ್ತಾಳೆ. ಬೆಳಿಗ್ಗೆ ಕೇಳಿದರೆ ತನಗೇನೂ ಗೊತ್ತಿಲ್ಲವೆಂದು ಹೇಳುತ್ತಾಳೆ. ಅವಳ ಈ ವರ್ತನೆ ತಂದೆ-ತಾಯಿಗಳಲ್ಲಿ ಆತಂಕ ಉಂಟು ಮಾಡಿದೆ.
ಮೇಲಿನ ಘಟನೆಗಳು ಕೇವಲ ಉದಾಹರಣೆ ಮಾತ್ರ. ಇಂತಹ ಹಲವಾರು ಘಟನೆಗಳನ್ನು ಪ್ರತಿನಿತ್ಯ ಅನೇಕರಲ್ಲಿ ಕಾಣುತ್ತೇವೆ. ನಿದ್ರಾಮಾತು “ಸೋಮ್ನಿಲೊಕ್ವೆ”  ಎಂದು ಕರೆಯುವ ಒಂದು ನಿದ್ರಾರೋಗವಾಗಿದ್ದು, ಕೆಲವೊಮ್ಮೆ ಅರ್ಥವಾಗದ ಸಂಭಾಷಣೆಗಳಿಂದ ಕೂಡಿರುತ್ತದೆ ಅಥವಾ ಗೊಣಗುಟ್ಟುವಂತಿರುತ್ತದೆ. ಇದು 69% ಮಕ್ಕಳಲ್ಲಿ ಹಾಗೂ 15% ಪುರುಷರಲ್ಲಿ ಕಂಡುಬರುವ ಸಾಮಾನ್ಯ ನಿದ್ರಾ ಕಾಯಿಲೆಯಾಗಿದೆ.
ಲಕ್ಷಣಗಳು : ಇದು ನಿದ್ದೆಯ ಪ್ರಾರಂಭಿಕ ಹಂತದಲ್ಲಿ ಗೋಚರಿಸುತ್ತದೆ. ಈ ಹಂತದಲ್ಲಿ ದೇಹ ತಾತ್ಕಾಲಿಕವಾಗಿ ಪಾಶ್ರ್ವವಾಯು ಪೀಡಿತವಾದಂತೆ ಇರುತ್ತದೆ. ದವಡೆಯು ಯಾಂತ್ರಿಕ ಮಾತಿನಲ್ಲಿ ತೊಡಗಿರುತ್ತದೆ. ಆಗ 
- ಭಾವನಾರಹಿತವಾದ ಅಸಹಜ ಧ್ವನಿ ಉಂಟಾಗುತ್ತದೆ.
- ಸಂಭಾಷಣೆಗಳು ಕೆಲವೊಮ್ಮೆ ನರಳಾಟದಿಂದ ಕೂಡಿರುತ್ತವೆ.
- ಮಾತುಗಳು ಅಸ್ಪಷ್ಟವಾಗಿದ್ದು ಒಂದಕ್ಕೊಂದು ಸಂಬಂಧ ಇರುವುದಿಲ್ಲ. 
- ಕೆಲವು ವೇಳೆ ಮಾತಿಗೆ ಬದಲಾಗಿ ಒದೆಯುವ ಇಲ್ಲವೇ ಗುದ್ದುವ ಅಥವಾ ಕೈಕಾಲು ಆಡಿಸುವ ಪ್ರಕ್ರಿಯೆ ಮಂದುವರೆಯುತ್ತದೆ.
- ಎಚ್ಚರಗೊಂಡ ನಂತರ ಯಾವುದೇ ನೆನಪು ಇಲ್ಲದಿರುವುದು.
   ಇಂತಹ ಸನ್ನಿವೇಶಗಳನ್ನು ತಮಾಷೆಗಾಗಿ ಮಾಡುತ್ತಾರೆ ಎಂದುಕೊಳ್ಳಬಹುದು. ಆದರೆ ನಿಜವಾಗಿಯೂ ಅವರು ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಇದು ಒಂದು ನಿದ್ರಾ ನ್ಯೂನತೆಯಾಗಿದೆ. 
ಕಾರಣಗಳು : ಇದಕ್ಕೆ ಕಾರಣಗಳು ಹಲವಾರು. ತೀವ್ರ ನೋವು, ಹಸಿವು, ಒಳಕಿವಿ ಸಮಸ್ಯೆ, ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‍ನ ಹೆಚ್ಚಳ, ಶೂನ್ಯ ಗುರುತ್ವಾಕರ್ಷಣೆ, ಅಧಿಕ ಕೆಫಿನ್ ಸೇವನೆ, ಖಿನ್ನತೆ, ಮಾನಸಿಕ ತೊಳಲಾಟ, ಮೆದುಳಿನ ಗಾಯ, ಜ್ವರ, ನಿದ್ರಾಹೀನತೆ, ಮಾದಕ ವಸ್ತು ಸೇವನೆ ಹೀಗೆ ಅನೇಕ ಕಾರಣಗಳಿಂದ ನಿದ್ರಾಮಾತು ಸಂಭವಿಸುತ್ತದೆ.
ಇದರಿಂದ ದೈಹಿಕವಾಗಿ ಯಾವುದೇ ತೊಂದರೆ ಇರದಿದ್ದರೂ ಮಾನಸಿಕ ತೊಂದರೆ ತಪ್ಪಿದ್ದಲ್ಲ. ‘ಸೋಮ್ನಿಲೊಕ್ವೆ’ಯಿಂದ ಬಳಲುವವರಿಗೆ ಯಾವುದೇ ತೊಂದರೆ ಇರದಿದ್ದರೂ ಪಕ್ಕದಲ್ಲಿ ಮಲಗಿದವರಿಗೆ ಕಿರಿಕಿರಿ ನೀಡುತ್ತದೆ. ಇದು ತೀವ್ರವಾಗಿದ್ದರೆ ಪಕ್ಕದವರಿಗೆ ಭಯ ಅಥವಾ ಸಿಟ್ಟು ತರಿಸುತ್ತದೆ. ಒಟ್ಟಾರೆ ಪಕ್ಕದವರ ನಿದ್ರಾಭಂಗಕ್ಕೆ ಕಾರಣವಾಗುತ್ತದೆ. 
ಕಿವಿಮಾತು : ನಿದ್ರಮಾತಿನ ತೊಂದರೆ ತಪ್ಪಿಸಲು ವೈದ್ಯಕೀಯ ಪರಿಹಾರಗಳು ಇಲ್ಲದಿದ್ದರೂ ಕೆಲವು ಚಟಿವಟಿಕೆಗಳಿಂದ ಅದನ್ನು ದೂರ ಇಡಬಹುದು.
ಸರಿಯಾದ ಮತ್ತು ಸೂಕ್ತ ಪ್ರಮಾಣದ ನಿದ್ದೆ ಮಾಡುವುದು ಹಾಗೂ ಉತ್ತಮ ನಿದ್ರೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು.
ಒತ್ತಡರಹಿತ ಜೀವನದಿಂದ ಮನಸ್ಸನ್ನು ಹಗುರ ಮಾಡಿಕೊಳ್ಳುವುದು.
ಮನಸ್ಸಿಗೆ ಮುದ ನೀಡುವ ಪ್ರವಾಸಿ ತಾಣಗಳಿಗೆ ಭೇಟಿಕೊಟ್ಟು ಮನಸ್ಸನ್ನು ಉಲ್ಲಸಿತಗೊಳಿಸುವುದು.
ಒಂಟಿತನದಿಂದ ದೂರವಾಗಿ ಸಮಾಜಮುಖಿಯಾಗಿ ಜೀವಿಸುವುದು.
ಸುಪ್ತ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರಗೊಳಿಸಿಕೊಳ್ಳುವುದು.
ಮಾದಕ ವಸ್ತುಗಳಿಂದ ದೂರ ಇರುವುದು.
ರಾತ್ರಿ ವೇಳೆ ಭಾರೀ ಭೋಜನ ಬೇಡ.
ದೇಹಕ್ಕೆ ನಿರಂತರ ವ್ಯಾಯಾಮ ನೀಡುವುದು.
ಪಕ್ಕದಲ್ಲಿ ಮಲಗಿದವರು ಕಿವಿಗಳಿಗೆ ಇಯರ್‍ಫೋನ್ ಹಾಕಿಕೊಳ್ಳುವುದು ಅಥವಾ ಚಿಕ್ಕ ಶಬ್ದ ಉಂಟು ಮಾಡುವ ಇನ್ನಿತರೇ ಸಾಧನಗಳನ್ನು ಬಳಸುವುದು. (ಉದಾಹರಣೆಗೆ ಫ್ಯಾನ್ ಹಾಕಿಕೊಳ್ಳುವುದು)
         ಸೋಮ್ನಿಲೊಕ್ವೆ ಬಗ್ಗೆ ಹೆಚ್ಚು ಆತಂಕ ಪಡಬೇಕಾದ ಅಗತ್ಯ ಇಲ್ಲ. ಆದಗ್ಯೂ ಇದು ತೀವ್ರವಾಗಿದ್ದರೆ ಅಥವಾ ಬಹು ಸಮಯದವರೆಗೂ ಮುಂದುವರೆದರೆ ಸೂಕ್ತ ವೈದ್ಯರನ್ನು ಭೇಟಿ ಮಾಡಿದರೆ ಹೆಚ್ಚು ವೈದ್ಯಕೀಯ ವಿವರಣೆ ಸಿಗುತ್ತದೆ. 
ಕೊನೆಮಾತು : ನಿದ್ರಾಮಾತು ಜಾಗೃತ ಅಥವಾ ವಿಚಾರ ಶಕ್ತಿಯುಳ್ಳ ಮನಸ್ಸಿನಿಂದ ಉಂಟಾದುದು ಅಲ್ಲ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಈ ಕಾರಣಕ್ಕಾಗಿ ನಿದ್ರಾಮಾತು ನ್ಯಾಯಾಲಯದಲ್ಲಿ ಒಪ್ಪಿತ ಸಾಕ್ಷಿಗಳಲ್ಲ. ಆದ್ದರಿಂದ ಚಿಂತೆ ಬಿಟ್ಹಾಕಿ. ಸುಖ ನಿದ್ರೆ ನಿಮ್ಮದಾಗುತ್ತದೆ.
- ಆರ್.ಬಿ.ಗುರುಬಸವರಾಜ.