January 21, 2015

“ಗೇಟ್”

 ದಿನಾಂಕ 21-01-2015 ರ ವಿಜಯವಾಣಿಯ 'ಮಸ್ತ್' ಪುರವಣಿಯಲ್ಲಿನ ನನ್ನ ಲೇಖನ

                    “ಗೇಟ್”  ದಾಟಿದರೆ ವಿಫುಲ ಅವಕಾಶ

    ಸ್ಪಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಯ ಜೊತೆಗೆ ಕೌಶಲ್ಯಕ್ಕೂ ಬೇಡಿಕೆ ಹೆಚ್ಚುತ್ತಿದೆ. ಪ್ರತೀ ಕ್ಷೇತ್ರದಲ್ಲೂ ಕೌಶಲ್ಯಾಧಾರಿತ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿರುತ್ತದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಂತೂ ವಿದ್ಯಾರ್ಹತೆ ಜೊತೆಗೆ ಕೌಶಲ್ಯಕ್ಕೂ ಹೆಚ್ಚು ಪ್ರಾಶಸ್ತ್ಯ ಇದೆ. ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆ ಜೊತೆಗೆ ಕೌಶಲ್ಯಗಳನ್ನು ಅಳೆಯಲು ಅನೇಕ ಪರೀಕ್ಷೆಗಳಿವೆ. ಅಂತಹ ಎಲ್ಲಾ ಪರೀಕ್ಷೆಗಳಿಗಿಂತಲೂ ಅತ್ಯಂತ ವಿಶ್ವಾಸಾರ್ಹ ಹಾಗೂ ಅತ್ಯುನ್ನತ ಅವಕಾಶಗಳನ್ನು ಒಳಗೊಂಡ ಪರೀಕ್ಷೆ ಎಂದರೆ ‘ಗೇಟ್’ (ಉಡಿಚಿಜuಚಿಣe ಂಠಿಣiಣuಜe ಖಿesಣ iಟಿ ಇಟಿgiಟಿeeಡಿiಟಿg) ಪರೀಕ್ಷೆ. ಇದು ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಹಾಗೂ ವೃತ್ತಿಗೆ ವಿಫುಲ ಅವಕಾಶ ನೀಡುವ ಏಕೈಕ ಪ್ರತಿಷ್ಠಿತ ಪರೀಕ್ಷೆಯಾಗಿದೆ. ಪ್ರತಿವರ್ಷ ಮಾನವ ಸಂಪನ್ಮೂಲ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಜಂಟಿಯಾಗಿ ಈ ಪರೀಕ್ಷೆ ನಡೆಸುತ್ತವೆ. ಈಗಾಗಲೇ ‘ಗೇಟ್-2015’ ರ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಪರೀಕ್ಷೆಗಳು ಮಾತ್ರ ಬಾಕಿ ಇವೆ.
ಯಾರು ಅರ್ಹರು? : ಯಾವುದೇ ವಿಧವಾದ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದ ಎಲ್ಲಾ ಅಭ್ಯರ್ಥಿಗಳು, ಎಂ.ಎಸ್ಸಿ, ಬಿ.ಫಾರ್ಮಾ, ಬಿ.ಎಸ್ಸಿ(ರೀಸರ್ಚ) ಇಂಟಿಗ್ರೇಟೆಡ್ ಎಂ.ಎಸ್ಸಿ ಆದವರು ಈ ಪರೀಕ್ಷೆಗೆ ಅರ್ಹರು. ಇದಕ್ಕೆ ಗರಿಷ್ಟ ಅಂಕಗಳ ನಿಗದಿ ಇಲ್ಲದೇ ಇರುವುದರಿಂದ ಕನಿಷ್ಟ ಅಂಕ ಗಳಿಸಿ ಉತ್ತೀರ್ಣರಾದವರೂ ಸಹ ಈ ಪರೀಕ್ಷೆ ಬರೆಯಬಹುದು. ಒಮ್ಮೆ ‘ಗೇಟ್’ನಲ್ಲಿ ಉತ್ತೀರ್ಣರಾದರೆ ಇದರ ವ್ಯಾಲಿಡಿಟಿ 3 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಗೇಟ್‍ನ ಉದ್ದೇಶ :
•    ಅಭ್ಯರ್ಥಿಗಳ ಕಲಿಕಾ ಗುಣಮಟ್ಟ ಅಳೆಯುವುದು
•    ಭಾರತದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಮಡುವುದು.
•    ಸಾರ್ವಜನಿಕ ವಲಯದ ಘಟಕಗಳ ಉದ್ಯೋಗಕ್ಕೆ ಯಶಸ್ವೀ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು.
•    ಸರಕಾರಿ ಹಾಗೂ ಖಾಸಗೀ ಸಂಸ್ಥೆಗಳ ಫೆಲೋಶಿಪ್‍ಗಾಗಿ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವುದು.


ಅವಕಾಶಗಳ ಆಗರ : ‘ಗೇಟ್’ನಿಂದ ಕೇವಲ ವೃತ್ತಿ ಅವಕಾಶಗಳಲ್ಲದೇ ಅನೇಕ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅವಕಾಶಗಳು ದೊರೆಯುತ್ತವೆ. ಐಐಟಿ, ಎನ್‍ಪಿಟಿ, ಐಐಎಸ್ಸಿ ಎನ್‍ಟಿಪಿಸಿ, ಇಸ್ರೋ, ಡಿಆರ್‍ಡಿಓಗಳ ಪ್ರಸಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕೆ ‘ಗೇಟ್’ ಉತ್ತಮ ಅವಕಾಶಗಳನ್ನು ನೀಡುತ್ತದೆ. ಜೊತೆಗೆ ಪಿ.ಎಚ್.ಡಿ ಪದವಿ ಕನಸನ್ನು ಸಾಕಾರಗೊಳಿಸಲು ‘ಗೇಟ್’ ಅವಶ್ಯಕ. ‘ಗೇಟ್’ ಪರೀಕ್ಷೆ ಪಾಸಾಗುವುದರಿಂದ ದೇಶೀಯ ಖಾಸಗೀ ಸಂಸ್ಥೆಗಳ ಅಥವಾ ಸರಕಾರಿ ಆಡಳಿತದ ‘ಫೆಲೋಶಿಪ್’ ಪಡೆಯಬಹುದು.

ಪರೀಕ್ಷಾ ಸ್ವರೂಪ ಹಾಗೂ ದಿನಾಂಕ : ಪರೀಕ್ಷೆಯು ಆನ್‍ಲೈನ್ ಸ್ವರೂಪದಲ್ಲಿರುತ್ತದೆ. ಇದರಲ್ಲಿ 100 ಅಂಕಗಳ ಒಂದೇ ಪತ್ರಿಕೆ ಇದ್ದು, ಮೂರು ಗಂಟೆಗಳ ಕಾಲಾವಕಾಶ ಇರುತ್ತದೆ.  ಜನವರಿಯ 31ರಂದು, ಫೆಬ್ರವರಿಯ 1,7,8,9,ಮತ್ತು14ರಂದು ಬೆಳಿಗ್ಗೆ 9ರಿಂದ 12 ರವರೆಗೆ ಹಾಗೂ ಮದ್ಯಾಹ್ನ 2ರಿಂದ 5 ರವರೆಗೆ ಇರುತ್ತದೆ.
ಪರೀಕ್ಷಾ ವಲಯಗಳು:  1. ಐಐಎಸ್ಸಿ-ಬೆಂಗಳೂರು,  2. ಐಐಟಿ-ಮುಂಬೈ,  3. ಐಐಟಿ-ದೆಹಲಿ,
4. ಐಐಟಿ-ಗುವಾಹತಿ,  5. ಐಐಟಿ-ಖಾನ್ಪುರ್,  6. ಐಐಟಿ-ಖರಗ್‍ಪುರ್,  7. ಐಐಟಿ-ಮದ್ರಾಸ್,
8. ಐಐಟಿ-ರೂರ್ಕೀ
ಪ್ರಶ್ನೆಗಳ ಸ್ವರೂಪ: ಶೇಕಡಾ 15 ಗಣಿತ ಪ್ರಶ್ನೆಗಳು, ಶೇಕಡಾ 15 ಸಾಮಾನ್ಯ ಜ್ಞಾನದ ಪ್ರಶ್ನೆಗಳು ಹಾಗೂ ಶೇಕಡಾ70 ಐಚ್ಛಿಕ ವಿಷಯದ ಪ್ರಶ್ನೆಗಳು ಇರುತ್ತವೆ. ಅದರಲ್ಲಿ ವಿಷಯಕ್ಕೆ ಸಂಬಂಧಿಸಿದ ಘಟನೆಗಳು, ತತ್ವಗಳು, ಸೂತ್ರಗಳು, ನಿಯಮಗಳು ಇತ್ಯಾದಿಗಳನ್ನು ಅಳೆಯುವ ಜ್ಞಾಪಕ ಪ್ರಶ್ನೆಗಳು ಹಾಗೂ ಮೂಲ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುವಿಕೆ, ಮೂಲಭೂತ ವಿಚಾರಗಳ, ಸರಳ ನಿರ್ಣಯಗಳ ಇತ್ಯಾದಿಗಳ ಜ್ಞಾನವನ್ನು ಅಳೆಯುವ ಜ್ಞಾನಾಧಾರಿತ ಪ್ರಶ್ನೆಗಳು ಇರುತ್ತವೆ.
    ಪ್ರತೀ ವಿಭಾಗಕ್ಕೂ ಪ್ರತ್ಯೇಕವಾದ ಪ್ರಶ್ನೆಪತ್ರಿಕೆ ಇರುತ್ತದೆ ಹಾಗೂ ಪ್ರತೀ ಪ್ರಶ್ನೆಪತ್ರಿಕೆಯು 1 ಮತ್ತು 2 ಅಂಕದ ಬಹು ಆಯ್ಕೆಯ ಪ್ರಶ್ನೆಗಳನ್ನು ಹಾಗೂ ಸಂಖ್ಯಾತ್ಮಕ ಉತ್ತರದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಬಹು ಆಯ್ಕೆಯ ಪ್ರಶ್ನೆಗಳಲ್ಲಿ 1 ಅಂಕದ ಪ್ರಶ್ನೆಗಳಿಗೆ 1/3 ರಷ್ಟು ಹಾಗೂ 2 ಅಂಕದ ಪ್ರಶ್ನೆಗಳಿಗೆ 2/3 ರಷ್ಟು ತಪ್ಪು ಉತ್ತರಗಳಿಗೆ ಅಂಕ ಕಡಿತ ಮಾಡಲಾಗುತ್ತದೆ. ಆದರೆ ಸಂಖ್ಯಾತ್ಮಕ ಉತ್ತರದ ಪ್ರಶ್ನೆಗಳಿಗೆ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ. ಒಟ್ಟು 65 ಪ್ರಶ್ನೆಗಳಿಗೆ 100 ಅಂಕಗಳು ಮೀಸಲಿರುತ್ತವೆ.
    ಪ್ರತೀ ವರ್ಷ ‘ಗೇಟ್’ ಪಾಸಾಗಲು ಅನೇಕ ಅಭ್ಯರ್ಥಿಗಳು ಹಾತೊರೆಯುತ್ತಾರೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ‘ಗೇಟ್’ ಪರೀಕ್ಷೆ ಎದುರಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 2010ರಲ್ಲಿ 4.14ಲಕ್ಷ, 2011 ರಲ್ಲಿ 5.52 ಲಕ್ಷ, 2012 ರಲ್ಲಿ 7.71 ಲಕ್ಷ, 2013 ರಲ್ಲಿ 12 ಲಕ್ಷ ಅಭ್ಯರ್ಥಿಗಳು ಹಾಗೂ 2014 ರಲ್ಲಿ 15 ಲಕ್ಷ ಅಭ್ಯರ್ಥಿಗಳು ‘ಗೇಟ್’ ಪರೀಕ್ಷೆ ಎದುರಿಸಿದ್ದಾರೆ. ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಲಿದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ‘ಗೇಟ್’ ಮಹತ್ವದ ಪ್ರವೇಶ ದ್ವಾರವಾದ್ದರಿಂದ ಅದನ್ನು ಎದುರಿಸಲು ಸಿದ್ದತೆ ಅಗತ್ಯ.


‘ಗೇಟ್’ ಪರೀಕ್ಷಾ ತಯಾರಿ ಹೀಗಿರಲಿ
ಮಾನಸಿಕ ಯಶಸ್ಸು ಗಳಿಸಿ : ‘ಗೇಟ್’ನ ಮೊದಲ ಯಶಸ್ಸು ಎಂದರೆ ಮಾನಸಿಕ ಯಶಸ್ಸು ಗಳಿಸುವುದು. ಅಂದರೆ ‘ಗೇಟ್’ನ್ನು ಪ್ರವೇಶಿಸಲು ಬೇಕಾದ ಕನಸಿನ ಬೀಜವನ್ನು ಮನಸ್ಸಿನಲ್ಲಿ ನೆಡುವುದು. ನಿಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇಟ್ಟು ಮಾನಸಿಕವಾಗಿ ಹಾಗೂ ಬೌದ್ದಿಕವಾಗಿ ಪರೀಕ್ಷೆ ಪಾಸಾಗಲು ಸಿದ್ದತೆ ನಡೆಸಿ.
ಸಂಪೂರ್ಣ ಮಾಹಿತಿ ಇರಲಿ: ‘ಗೇಟ್’ ಪರೀಕ್ಷೆಗೆ ಸಿದ್ದವಾಗುವ ಮೊದಲು ಪಠ್ಯವಸ್ತು, ಪರೀಕ್ಷಾ ವಿಧಾನ, ಅರ್ಹತಾ ವಿಧಾನ, ಉತ್ತೀರ್ಣತೆಯ ಮಾರ್ಗಗಳು ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಇರಲಿ.
ಪಠ್ಯವಸ್ತುವಿನ ಮೇಲೆ ನಿಗಾ ವಹಿಸಿ: ‘ಗೇಟ್’ ಪರೀಕ್ಷಗೆ ಪಠ್ಯವಸ್ತು ಪ್ರಮುಖವಾದದ್ದು. ವಿವಿಧ ಇಂಜಿನಿಯರಿಂಗ್ ಅಭ್ಯಾಸ ಕ್ರಮಗಳು ಇರುವುದರಿಂದ ನಿಮ್ಮ ಅಭ್ಯಾಸ ಕ್ರಮಕ್ಕೆ ಅನುಗುಣವಾದ ಪಠ್ಯವಸ್ತುವಿನ ಮೇಲೆ ಗಮನ ಕೇಂದ್ರೀಕರಿಸಿ. ಪಠ್ಯವಸ್ತುವಿನ ವ್ಯಾಪ್ತಿಯನ್ನೊಳಗೊಂಡ ಪುಸ್ತಕಗಳು ಹಾಗೂ ಇತರೆ ಓದುವ ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳಿ. ಸರಿಯಾದ ಓದುವ ಸಾಮಗ್ರಿಯನ್ನು ಹೊಂದಿಸಿಕೊಳ್ಳುವುದು ಓದುವುದರಷ್ಟೇ ಪ್ರಮುಖವಾದದ್ದು. ಆದ್ದರಿಂದ ಸರಳವಾಗಿ, ಅರ್ಥಪೂರ್ಣವಾಗಿ ನಿರೂಪಿತವಾದ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಿ. ಸ್ನೇಹಿತರು ಹಾಗೂ ಸಹವರ್ತಿಗಳೊಂದಿಗೆ ಚರ್ಚಿಸಿ ಉತ್ತಮ ಸಾಮಗ್ರಿ ಸಂಗ್ರಹಿಸಿಕೊಳ್ಳಿ. ಪಠ್ಯವಸ್ತು ಹಾಗೂ ಸಾಮಗ್ರಿಗಾಗಿ ಜಾಲತಾಣಗಳ ಸಹಾಯ ಪಡೆದುಕೊಳ್ಳಿ.
ವೇಳಾಪಟ್ಟಿ ತಯಾರಿಸಿಕೊಳ್ಳಿ : ಸಾಮಗ್ರಿ ಹೊಂದಾಣಿಕೆಯ ನಂತರ ಆ ಸಾಮಗ್ರಿಗಳನ್ನು ಓದಿ ಮುಗಿಸಲು ಕಾಲಾವಕಾಶವನ್ನು ನಿಗದಿ ಮಾಡಿಕೊಳ್ಳಿ. ವೇಳಾಪಟ್ಟಿಗೆ ಬದ್ದರಾಗಿ ಓದನ್ನು ಮುಂದುವರೆಸಿ. ಓದುವಾಗ ಪ್ರಮುಖಾಂಶಗಳನ್ನು ಬರೆದಿಟ್ಟುಕೊಳ್ಳಿ.
ಪರಿಕಲ್ಪನೆಗಳತ್ತ ಗಮನ ಹರಿಸಿ : ಓದುವಾಗ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ಸಂಶಯಗಳನ್ನು ನಿವಾರಿಸಿಕೊಂಡು ಓದಲು ಪ್ರಯತ್ನಿಸಿ. ಪರಿಕಲ್ಪನೆಗಳನ್ನು ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳಲು ವಿವಿಧ ಲೇಖಕರ ಪುಸ್ತಕಗಳನ್ನು ಪರಾಮರ್ಶಿಸಿ. ವಿಷಯದ ಕುರಿತು ಸ್ನೇಹಿತರು ಹಾಗೂ ಪರಿಣಿತರೊಂದಿಗೆ ಚರ್ಚಿಸಿ.
ಅಣಕು ಪರೀಕ್ಷೆ ನೆಡೆಸಿ : ಅಣಕು ಪರೀಕ್ಷೆ ಸಿದ್ದತೆಯ ಮಟ್ಟವನ್ನು ತಿಳಿಸುತ್ತದೆ. ಆದ್ದರಿಂದ ಮುಖ್ಯ ಪರೀಕ್ಷೆಗೆ ಹೊರಡುವ ಮುನ್ನ ಅಣಕು ಪರೀಕ್ಷೆ ನೆಡೆಸಿ. ಕಳೆದ ವರ್ಷದ ಅಥವಾ ಇನ್ನಿತರೇ ಪ್ರಶ್ನೆಪತ್ರಿಕೆಗಳಿಂದ ಅಣಕು ಪರೀಕ್ಷೆ ನೆಡೆಸಿ.
ಅನಪೇಕ್ಷಿತ ಕೆಲಸಗಳನ್ನು ನಿಲ್ಲಿಸಿ : ಟಿ.ವಿ ನೋಡುವ, ಸ್ನೇಹಿತರೊಂದಿಗೆ ಹರಟುವ, ಕ್ಲಬ್ ಪಾರ್ಟಿ ಇತ್ಯಾದಿಗಳಲ್ಲಿ ಕಾಲ ಕಳೆಯುವ, ಅವಶ್ಯಕತೆಗಿಂತ ಹೆಚ್ಚು ನಿದ್ರಿಸುವ, ನೆಟ್ ಜಾಲಾಡುವ, ಫೋನ್ ಚಾಟಿಂಗ್ ಮಾಡುವ ಇತ್ಯಾದಿ ಅನಪೇಕ್ಷಿತ ಕೆಲಸಗಳಿಗೆ ಕತ್ತರಿ ಹಾಕಿ. ಓದಿನ ಕಡೆ ಗಮನ ಹರಿಸಿ. ಏಕೆಂದರೆ ಈ ಪರೀಕ್ಷೆ ನಿಮ್ಮ ಜೀವನದ ದಿಕ್ಕನ್ನೇ ಬದಲಿಸುವುದು. ಬೆಸ್ಟ್ ಆಫ್ ಲಕ್.



                                                                                 ಆರ್.ಬಿ.ಗುರುಬಸವರಾಜ ಹೊಳಗುಂದಿ