July 31, 2015

ಬಾಲಸ್ಥೂಲತೆ

 ಸುಧಾ(ಆಗಸ್ಟ್ 6) ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.



                                ಆಡುವ ಮಕ್ಕಳನ್ನು ಕಾಡುವ

                      ಬಾಲಸ್ಥೂಲತೆ

    ಆರನೇ ತರಗತಿಯಲ್ಲಿ ಓದುತ್ತಿರುವ ತೇಜಸ್ಸನು ತುಂಬಾ ಚೂಟಿ ಹುಡುಗ. ಸ್ನೇಹಿತರಿಂದ ‘ಡುಮ್ಮ’ ಎನ್ನುವ ಪಟ್ಟ. ಸ್ಥೂಲದೇಹಿಯಾದರೂ ಎಲ್ಲರಂತೆ ಆಟಪಾಠಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಊಟ ಮಾತ್ರ ಅಷ್ಟಕಷ್ಟೇ. ಸಾಮಾನ್ಯ ಮಕ್ಕಳಿಗಿಂತ ಕಡಿಮೆ ಪ್ರಮಾಣದ ಆಹಾರ ಸೇವಿಸುತ್ತಾನೆ. ಆದರೂ ದೇಹದ ಗಾತ್ರ ವಿಪರೀತವಾಗಿ ಏರುತ್ತಿದೆ.
    ನಾಲ್ಕನೆ ತರಗತಿಯ ಪ್ರಮೋದಿನಿಯದು ಭಿನ್ನಕಥೆ. ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರುತ್ತಾಳೆ. ಆಟೋಟಗಳಲ್ಲಿ ಭಾಗಿಯಾಗುವುದೇ ಇಲ್ಲ. ಯಾರೊಂದಿಗೂ ಹೆಚ್ಚು ಬೆರೆಯಲಾರಳು. ಏಕೆಂದರೆ ಸ್ಥೂಲತೆಯಿಂದಾಗಿ ಚಟುವಟಿಕೆಗಳಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ. ಏದುಸಿರು ಬಿಡುವಂತಾಗುತ್ತದೆ. ಹಾಗಾಗಿ ಯಾವುದರಲ್ಲೂ ಅವಳಗೆ ಆಸಕ್ತಿ ಇಲ್ಲ.
    ಇವರಿಬ್ಬರ ಚಟುವಟಿಕೆಗಳು ಭಿನ್ನವಾಗಿದ್ದರೂ ಸಮಸ್ಯೆ ಒಂದೇ. ಬಾಲಸ್ಥೂಲತೆ. ಇತ್ತೀಚೆಗೆ ಬಾಲಸ್ಥೂಲತೆಯು ಪ್ರೀಸ್ಕೂಲ್ ಮಕ್ಕಳಿಂದ ಹಿಡಿದು ಪಿ.ಯು.ಸಿ.ವರೆಗಿನ ಮಕ್ಕಳ ಒಂದು ಗಂಭಿರ ಸಮಸ್ಯೆಯಾಗಿದೆ. ಬಾಲಸ್ಥೂಲತೆಯ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು ಪಾಲಕರು ಕಳವಳಕ್ಕೀಡಾಗುತ್ತಿದ್ದಾರೆ. ಬಾಲಸ್ಥೂಲತೆ ಮಕ್ಕಳಲ್ಲಿ ತೂಕ ಹೆಚ್ಚಳದ ಸಮಸ್ಯೆಯ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳನ್ನೂ ಸಹ ತಂದೊಡ್ಡಿದೆ.
ಏನಿದು ಬಾಲಸ್ಥೂಲತೆ? : ಮಕ್ಕಳ ವಯಸ್ಸಿಗೆ ಅನುಗುಣವಾದ ಸಾಮಾನ್ಯ ತೂಕಕ್ಕಿಂತ ಹೆಚ್ಚು ತೂಕ ಮತ್ತು ಸಾಮಾನ್ಯ ಗಾತ್ರಕ್ಕಿಂತ ಹೆಚ್ಚು ದೇಹಗಾತ್ರ ಹೊಂದಿರುವುದೇ ಬಾಲಸ್ಥೂಲತೆಯಾಗಿದೆ. ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾದಾಗ ಸ್ಥೂಲತೆ ಉಂಟಾಗುತ್ತದೆ.
    ಮಕ್ಕಳು ಸೇವಿಸುವ ಆಹಾರದ ಪ್ರಮಾಣ, ಸೇವನೆಯ ವಿಧಾನ, ಮನೆಯ ವಾತಾವರಣ, ದೈಹಿಕ ಚಟುವಟಿಕೆಗಳೆಲ್ಲವೂ ಬಾಲಸ್ಥೂಲತೆಯ ಮೇಲೆ ಪ್ರಭಾವಬೀರುವ  ಅಂಶಗಳಾಗಿವೆ.
ಕಾರಣಗಳು :
•    ದೈಹಿಕ ಚಟುವಟಿಕೆಗಳ ಕೊರತೆ
•    ಅನಾರೋಗ್ಯಕರ ಆಹಾರ ಪದ್ದತಿ
•    ವಂಶವಾಹಿಗಳು
•    ಆರೋಗ್ಯ ಸಮಸ್ಯೆಗಳು
•    ಹಾರ್ಮೋನುಗಳ ಏರುಪೇರು
•    ಔಷಧಗಳ ಸೇವನೆ
•    ದೈಹಿಕ ಚಟುವಟಿಕೆಗೆ ಪೂರಕ ವಾತಾವರಣದ ಕೊರತೆ
•    ಆಹಾರ ಮತ್ತು ಆರೋಗ್ಯ ಶಿಕ್ಷಣದ ಕೊರತೆ
•    ಆಹಾರ ಸೇವನೆಯ ವಿಧಾನಗಳÀಲ್ಲಿ ಏರುಪೇರು
ಪರಿಣಾಮಗಳು :
* ಅಧಿಕ ರಕ್ತದೊತ್ತಡ * ಅಧಿಕ ಕೊಲೆಸ್ಟ್ರಾಲ್ ಸಂಗ್ರಹ * ಟೈಪ್-2 ಡಯಾಬಿಟಿಸ್ * ನಿದ್ರಾಹೀನತೆ * ಅಸ್ತಮಾ * ಕೀಲುನೋವು * ಅಸ್ಥಿಮಜ್ಜೆ ಅಸ್ವಸ್ಥತೆ * ಹೃದಯ ಸಂಬಂಧಿ ಕಾಯಿಲೆಗಳು * ಪಿತ್ತಜನಕಾಂಗದ ಕಾಯಿಲೆ
* ಮಾನಸಿಕ ಒತ್ತಡ, ಖಿನ್ನತೆ * ಪರಾವಲಂಬಿ ಜೀವನ * ಕಡಿಮೆ ಜೀವನೋತ್ಸಾಹ * ಚಯಾಪಚಯ ಕ್ರಿಯೆಗಳ ತೊಂದರೆ * ಕಲಿಕಾ ತೊಂದರೆಗಳು * ಸಾಮಾಜಿಕ, ದೈಹಿಕ ಮತ್ತು ಭಾವನಾತ್ಮಕ ಕ್ರಿಯೆಗಳಲ್ಲಿ ಏರಿಳಿತ

    ದೇಹದ ಸ್ಥೂಲತೆ ಒಮ್ಮೆ ಹೆಚ್ಚಿದ ಮೇಲೆ ಅದರ ನಿಯಂತ್ರಣ ಕಷ್ಟ. ಏಕೆಂದರೆ ಅದನ್ನು ನಿಯಂತ್ರಿಸುವ ಚಿಕಿತ್ಸೆಗೆ ಹೆಚ್ಚು ಶ್ರಮ, ಸಮಯ ಮತ್ತು ಹಣ ವ್ಯಯವಾಗುತ್ತದೆ. ಕುಟುಂಬದ ಸಕ್ರಿಯ ಚಟುವಟಿಕೆಗಳು ಮತ್ತು ಆರೋಗ್ಯಕರ ಆಹಾರ ಪದ್ದತಿಯ ವಾತಾವರಣವು ಬಾಲಸ್ಥೂಲತೆಯನ್ನು ತಡೆಯುವ ಮಾರ್ಗದ ಮೊದಲ ಹೆಜ್ಜೆಯಾಗಿದೆ. ಆ ನಿಟ್ಟಿನಲ್ಲಿ ಪಾಲಕರು ಕೆಲವು ವರ್ತನೆ ಮತ್ತು ನಡವಳಿಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ.
ಹೀಗಿರಲಿ ನಮ್ಮ ನಡತೆ ಮತ್ತು ವರ್ತನೆಗಳು :
•    ಹೊರಗಿನಿಂದ ತರುವ ರೆಡಿಮೇಡ್ ಆಹಾರ ಪದಾರ್ಥಗಳ ಮೇಲೆ ನಿಯಂತ್ರಣ ಇರಲಿ. ಮಕ್ಕಳ ವಯಸ್ಸಿಗನುಗುಣವಾದ ಮತ್ತು ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ಮಾತ್ರ ಖರೀದಿಸಿ.
•    ಕಡಿಮೆ ಸಿಹಿಕಾರಕ ಪಾನಿಯಗಳನ್ನು ಮಾತ್ರ ಖರೀದಿಸಿ. ಸಾಧ್ಯವಾದಷ್ಟೂ ಸ್ವಾಭಾವಿಕ ಪಾನೀಯಗಳಾದ ನೀರು, ಹಾಲು, ಮೊಸರು, ಮಜ್ಜಿಗೆ, ಎಳನೀರು,  ಕಬ್ಬಿನ ಹಾಲು, ತಾಜಾ ಹಣ್ಣಿನ ರಸ ಇತ್ಯಾದಿಗಳನ್ನು ಕುಡಿಯಲು ಪ್ರೋತ್ಸಾಹಿಸಿ.
•    ಮಕ್ಕಳಿಗೆ ನೀಡುವ ಆಹಾರದಲ್ಲಿ ಹಸಿ ತರಕಾರಿಗಳು, ಮೊಳಕೆ ಬರಿಸಿದ ಧಾನ್ಯಗಳು, ನಾರಿನಂಶ ಇರುವ ಆಹಾರಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಿ.
•    ಆರೋಗ್ಯಕರ ಆಹಾರಗಳನ್ನು ಮಕ್ಕಳಿಗೆ ಕಾಣುವಂತೆ ಮತ್ತು ಸುಲಭವಾಗಿ ಸಿಗುವಂತೆ ಇಡಿ. ಅನಾರೋಗ್ಯಕರ ಆಹಾರ ಪದಾರ್ಥಗಳು ಮತ್ತು ಅಧಿಕ ಕ್ಯಾಲೋರಿ ಇರುವ ಆಹಾರಾಂಶಗಳನ್ನು ಮಕ್ಕಳಿಗೆ ಸಿಗದಂತೆ ಇಡಿ.
•    ಆಹಾರ ಸೇವನೆಯ ವಿಧಾನ ಮತ್ತು ವ್ಯಾಯಾಮಗಳ ವಿಚಾರದಲ್ಲಿ ಪಾಲಕರು ಮಕ್ಕಳಿಗೆ ಆದರ್ಶಪ್ರಾಯವಾಗಿರಲಿ.
•    ಮಕ್ಕಳ ಜೊತೆ ಸೇರಿ ಊಟ ಮಾಡುವ ಪದ್ದತಿ ಬೆಳೆಸಿಕೊಳ್ಳಿ. ಇದು ಆಹಾರ ಸೇವನೆಯ ವಿಧಾನದ ಮಾರ್ಗದರ್ಶನಕ್ಕೆ ಉತ್ತಮ ಸಮಯ.
•    ಜಡ ಮನೋರಂಜನಾ ಅವಕಾಶಗಳನ್ನು ಕಡಿಮೆ ಮಾಡಿ. ಟಿ.ವಿ, ಕಂಪ್ಯೂಟರ್, ವೀಡಿಯೋ ಗೇಮ್‍ಗಳನ್ನು ಊಟದ ಕೊಠಡಿ ಮತ್ತು ಮಲಗುವ ಕೊಠಡಿಗಳಿಂದ ದೂರವಿಡಿ. ಇವು ಊಟ ಮತ್ತು ನಿದ್ರೆಗೆ ಭಂಗ ತರುತ್ತವೆ.
•    ಮಕ್ಕಳ ಟಿ.ವಿ. ನೋಡುವ ಅವಧಿಯನ್ನು ಮಿತಿಗೊಳಿಸಿ. ರಜಾದಿನಗಳಲ್ಲಿ 2 ಗಂಟೆಗಿಂತ ಹೆಚ್ಚು ಹೊತ್ತು ಟಿ.ವಿ. ನೋಡುವುದನ್ನು ನಿಷೇಧಿಸಿ.
•    ಹೆಚ್ಚು ಹೊತ್ತು ಟಿ.ವಿ. ನೋಡುವುದು ಮತ್ತು ನೋಡುತ್ತಾ ತಿನ್ನುವುದು ಎರಡು ರೀತಿಯ ದುಷ್ಪರಿಣಾಮಗಳನ್ನು ತರುತ್ತದೆ. ದೇಹದಲ್ಲಿ ಹೆಚ್ಚು ಕೊಬ್ಬಿನಾಂಶ ಶೇಖರಣೆ ಆಗುತ್ತದೆ ಮತ್ತು ನಿಷ್ಕ್ರಿಯತೆ ಉಂಟಾಗುತ್ತದೆ.
•    ಟಿ.ವಿ. ನೋಡುವ ಸಮಯವನ್ನು ಇತರೆ ಚಟುವಟಿಕೆಗಳಿಗೆ ಬದಲಾಯಿಸಿ.
•    ಸ್ಥೂಲದೇಹಿ ಮಕ್ಕಳ ಚಟುವಟಿಕೆಗಳ ಪಟ್ಟಿ ಮತ್ತು ಆಹಾರ ಪ್ರಮಾಣವನ್ನು ದಿನಚರಿ/ಕ್ಯಾಲೆಂಡರ್‍ಗಳಲ್ಲಿ ಮಕ್ಕಳಿಗೆ ಕಾಣುವಂತೆ ನಮೂದಿಸಿ. ಅದರಂತೆ ದೈನಂದಿನ ಚಟುವಟಿಕೆ ನಡೆಸುವಂತೆ ಪ್ರೋತ್ಸಾಹಿಸಿ.
•    ಮಕ್ಕಳು ಹೆಚ್ಚುಹೊತ್ತು ಪಾಲಕರೊಂದಿಗೆ ಸಮಯ ಕಳೆಯಲು ಅಥವಾ ಪಾಲಕರ ಚಟುವಟಿಕೆಗಳಲ್ಲಿ ಭಾಗಿಯಾಗಲು ಇಷ್ಟಪಡುತ್ತಾರೆ. ನಿಮ್ಮ ಚಟುವಟಿಕೆಗಳಲ್ಲಿ ಅವರನ್ನು ಸೇರಿಸಿಕೊಳ್ಳಿ. ಇದರಿಂದ ಅವರಿಗೆ ಉತ್ತಮ ದೈಹಿಕ ಚಟುವಟಿಕೆ ದೊರೆಯುತ್ತದೆ ಹಾಗೂ ಮಕ್ಕಳು ಮತ್ತು ಪಾಲಕರ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ.
•    ಮಕ್ಕಳು ಸಾಕಷ್ಟು ನಿದ್ದೆ ಮಾಡಲು ಅವಕಾಶ ನೀಡಿ. ಮಕ್ಕಳ ವಯಸ್ಸಿಗನುಗುಣವಾಗಿ ಅಗತ್ಯ ನಿದ್ದೆ ಮಾಡಿದ ಮಕ್ಕಳಲ್ಲಿ ಸ್ಥೂಲದೇಹದ ಸಾಧ್ಯತೆ ಕಡಿಮೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.
        ಮಕ್ಕಳ ಮತ್ತು ಪಾಲಕರ ನಡವಳಿಕೆಗಳು ಬಾಲ ಸ್ಥೂಲತೆಯ ಮೇಲೆ ಪರಿಣಾಮ ಬೀರುವ ಅಂಶಗಳಾಗಿವೆ. ಆದ್ದರಿಂದ ಪಾಲಕರು ಮೊದಲು ಉತ್ತಮ ಆಹಾರ ಪದ್ದತಿಗಳನ್ನು ಪ್ರದರ್ಶಿಸಲಿ. ನಂತರ ಮಕ್ಕಳಲ್ಲಿ ಆ ಪದ್ದತಿಗಳನ್ನು ಬೆಳೆಸಲು ಪ್ರಯತ್ನಿಸಲಿ. ಮಕ್ಕಳ ಉತ್ತಮ ಪ್ರಯತ್ನಗಳನ್ನು ಪ್ರಶಂಸಿಸಿ.    
ಇವುಗಳನ್ನೂ ಗಮನಿಸಿ! :
    ನಿಮ್ಮ ಮಗು ಅಗತ್ಯಕ್ಕಿಂತ ಅಧಿಕ ತೂಕ ಹೊಂದಿದ್ದರೆ, ಆ ಮಗುವಿಗೆ ಇಡೀ ಕುಟುಂಬದ ದೈಹಿಕ, ಮಾನಸಿಕ ಬೆಂಬಲ ಅಗತ್ಯ. ಮಕ್ಕಳ ಭಾವನೆಗಳು ಹೆತ್ತವರ ಭಾವನೆಗಳನ್ನು ಆಧರಿಸಿವೆ. ಮಗು ಯಾವುದೇ ತೂಕ ಹೊಂದಿರಲಿ, ಮೊದಲು ನೀವು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಆಗ ಮಗುವಿನಲ್ಲಿ ಆತಂಕ ಮರೆಯಾಗುತ್ತದೆ.
    ತೂಕದ ಬಗ್ಗೆ ಮಗುವಿನೊಂದಿಗೆ ಮಾತನಾಡಿ ಕಾಳಜಿ ಮತ್ತು ಅವಕಾಶಗಳನ್ನು ಹಂಚಿಕೊಳ್ಳಿ. ತೂಕದ ವಿಷಯ ಗಮನದಲ್ಲಿರಿಸಿಕೊಂಡು ಮಗುವನ್ನು ಪ್ರತ್ಯೇಕಿಸುವುದು  ಸೂಕ್ತವಲ್ಲ. ಬದಲಾಗಿ ಆಹಾರ ಸೇವನಾ ಪದ್ದತಿ ಮತ್ತು ದೈಹಿಕ ಚಟುವಟಿಕೆಗಳನ್ನು ಬದಲಿಸುವತ್ತ ಗಮನ ಹರಿಸಿ.
    ಮಗುವಿನ ಅಗತ್ಯತೆ ಮತ್ತು ಕಾರ್ಯ ಸಾಧ್ಯತೆಗಳ ಬಗ್ಗೆ ಸೂಕ್ಷ್ಮದಿಂದಿರಿ. ಸ್ಥೂಲದೇಹಿ ಮಕ್ಕಳು ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸಲು ಅನಾಸಕ್ತಿ ಹೊಂದಿರುತ್ತಾರೆ. ಚಟುವಟಿಕೆಗಳು ಸ್ಥೂಲದೇಹಿ ಮಗುವಿಗೆ ಆತ್ಮವಿಶ್ವಾಸ ನೀಡುವಂತಿರಬೇಕೇ ಹೊರತು ಮಾನಸಿಕವಾಗಿ ಹಿಂಸೆ ನೀಡುವಂತರಬಾರದು.
    ಪ್ರತಿಯೊಂದು ಮಗುವೂ ಕೂಡಾ ರಾಷ್ಟ್ರದ ಆಸ್ತಿ. ಈ ಆಸ್ತಿಯನ್ನು ಉತ್ತಮವಾಗಿ ಬೆಳೆಸಿ. ದೇಶದ ಅಭಿವೃದ್ದಿಗೆ ಕೈಜೋಡಿಸೋಣವೇ?
                                                                                                               ಆರ್.ಬಿ.ಗುರುಬಸವರಾಜ.

July 15, 2015

NATA ಪರೀಕ್ಷೆ

 ದಿನಾಂಕ 15-07-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.


                 NATAಗೆ ನೀಟಾಗಿ ತಯಾರಾಗಿ
    ಅತೀ ಹೆಚ್ಚು ವೃತ್ತಿ ಅವಕಾಶಗಳನ್ನು ಹೊಂದಿದ ಆರ್ಕಿಟೆಕ್ಚರ್ ಕೋರ್ಸ್ ಸೇರಲು NATA(ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಎಂಬುದು ಕಡ್ಡಾಯ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿದರೆ ಮಾತ್ರ 5 ವರ್ಷಗಳ ಆರ್ಕಿಟೆಕ್ಚರ್ ಕೋರ್ಸ್‍ಗೆ ಪ್ರವೇಶ ದೊರೆಯುತ್ತದೆ. ಆರ್ಕಿಟೆಕ್ಚರ್ ಕೌನ್ಸಿಲ್‍ನಿಂದ ಅಂಗೀಕೃತಗೊಂಡ ಯಾವುದೇ ಸರಕಾರಿ, ಅನುದಾನಿತ, ಅನುದಾನ ರಹಿತ, ಸ್ವಾಯತ್ತ ಕಾಲೇಜುಗಳು ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಕ್ಕೆ NATA ಪರೀಕ್ಷೆಯನ್ನು ಕಡ್ಡಾಯಗೊಳಿಸಿವೆ. ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಯ ಚಿತ್ರಕಲೆ, ವೀಕ್ಷಣಾ ಕೌಶಲ್ಯ, ಸೌಂದರ್ಯ ಸಂವಹನಾ ಸಾಮಥ್ರ್ಯ, ನಿರ್ಣಾಯಕ ಚಿಂತನಾ ಸಾಮಥ್ರ್ಯಗಳನ್ನು ಅಳೆಯಲಾಗುತ್ತದೆ. ಹಾಗಾಗಿ ಆರ್ಕಿಟೆಕ್ಚರ್ ಸೇರಬಯಸುವವರಿಗೆ ಇದೊಂದು ಮಹತ್ವದ ಪರೀಕ್ಷೆಯಾಗಿದೆ.
ಅರ್ಹತೆ : NATA ಪರೀಕ್ಷೆ ಬರೆಯಲು ಯಾವುದೇ ಪದವಿ ಪೂರ್ವ ಪರೀಕ್ಷಾ ಮಂಡಳಿಯ ಪಿ.ಯು.ಸಿ.ಯಲ್ಲಿ ಶೇಕಡಾ 50 ರಷ್ಟು ಅಂಕಗಳಿಸಿ ಉತ್ತೀರ್ಣತೆ ಹೊಂದಿರಬೇಕು. ಜೊತೆಗೆ ಗಣಿತವನ್ನು ಒಂದು ವಿಷಯವಾಗಿ ಅಬ್ಯಾಸ ಮಾಡಿರಬೇಕು.
ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ : NATA  ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. www.nata.in ವೆಬ್‍ತಾಣದಲ್ಲಿ ನೊಂದಣಿ ಮಾಡಿಕೊಂಡ ನಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ 1250/-ರೂ.ಗಳನ್ನು ICIC ಬ್ಯಾಂಕ್‍ನಲ್ಲಿ ಚಲನ್ ಕಟ್ಟುವ ಮೂಲಕ ಹಣ ಪಾವತಿಸಬೇಕು ಅಥವಾ ನೆಟ್ ಬ್ಯಾಂಕಿಂಗ್ ಮೂಲಕವೂ ಹಣ ಪಾವತಿ ಮಾಡಬಹುದು.
    ನೊಂದಣಿಗೆ 19-08-2015 ಕೊನೆಯ ದಿನವಾಗಿರುತ್ತದೆ. ನೊಂದಣಿಯಾದ ನಂತರ ಪರೀಕ್ಷಾ ದಿನಾಂಕ ಮತ್ತು ಸ್ಥಳದ ಮಾಹಿತಿಯು ಪ್ರವೇಶ ಪತ್ರದಲ್ಲಿ ನಮೂದಾಗುತ್ತದೆ. ಪ್ರವೇಶ ಪತ್ರವನ್ನು ಅದೇ ವೆಬ್‍ತಾಣದಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು.
ಪರೀಕ್ಷಾ ವಿಧಾನ : NATA ಪರೀಕ್ಷೆಯು ಲಿಖಿತ ಹಾಗೂ ಕಂಪ್ಯೂಟರ್ ಆಧಾರಿತ ಸ್ವರೂಪದಲ್ಲಿರುತ್ತದೆ. ಡ್ರಾಯಿಂಗ್ ಟೆಸ್ಟ್ ಲಿಖಿತ ರೂಪದಲ್ಲಿದ್ದರೆ, ಸೌಂದರ್ಯ ಸಂವೇದನಾ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಸ್ವರೂಪದಲ್ಲಿರುತ್ತದೆ. ಪ್ರತಿವಿಭಾಗಕ್ಕೂ ಎರಡು ಗಂಟೆಗಳ ಸಮುಯಾವಕಾಶ ಇರುತ್ತದೆ. ಡ್ರಾಯಿಂಗ್ ಟೆಸ್ಟ್‍ನಲ್ಲಿ ಎರಡು ಮುಖ್ಯ ಪ್ರಶ್ನೆಗಳಿದ್ದು ನಾಲ್ಕು ಉಪ ಪ್ರಶ್ನೆಗಳಿರುತ್ತವೆ. ಸೌಂದರ್ಯ ಸಂವೇದನಾ ಪರೀಕ್ಷೆಯಲ್ಲಿ 40 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಒಮ್ಮೆ ಈ ಪರೀಕ್ಷೆ ಉತ್ತೀರ್ಣರಾದರೆ ಅದು 2 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಪರೀಕ್ಷಾ ವಿಷಯಗಳು
ಡ್ರಾಯಿಂಗ್ ಟೆಸ್ಟ್    ಸೌಂದರ್ಯ ಸಂವೇದನಾ ಟೆಸ್ಟ್
* ದೃಷ್ಟಿ ಚಿತ್ರಣ ಮತ್ತು ಸ್ಥಿರ ಚಿತ್ರಣ
* ನೆರಳು ಬೆಳಕಿನ ಪರಿಣಾಮದ ಚಿತ್ರಣ
* ಡ್ರಾಯಿಂಗ್ ಬಗೆಗಿನ ದೃಷ್ಟಿಕೋನ
* ಕಟ್ಟಡ/ ರಚನಾತ್ಮಕ ರೂಪದ 3 ಆಯಾಮಗಳ ಚಿತ್ರಗಳ ಸಂಯೋಜನೆ ಮತ್ತು ಹೋಂದಾಣಿಕೆ
* ನೀಡಿದ ರೂಪ ಮತ್ತು ಆಕಾರ ಬಳಸಿಕೊಂಡು ಆಸಕ್ತಿದಾಯಕ 2 ಆಯಾಮದ ಚಿತ್ರ ರಚನೆ
* ದೃಷ್ಟಿ ಸಮರಸ್ಯದ ವರ್ಣ ಸಂಯೋಜನೆ
* ಅಳತೆಯ ಮಾನಗಳನ್ನು ಅರ್ಥೈಸಿಕೊಂಡಿರುವಿಕೆ
* ದೈನಂದಿನ ಅನುಭವಗಳನ್ನು ಪೆನ್ಸಿಲ್ ಸ್ಕೆಚ್ ಮೂಲಕ ಮೆಮೊರಿ ಚಿತ್ರಗಳನ್ನಾಗಿಸುವುದು.   
 * ಗ್ರಹಿಕೆ, ಕಲ್ಪನೆ, ವೀಕ್ಷಣೆ, ಸೃಜನಶೀಲತೆ ಮತ್ತು ಸಂವಹನಗಳ ಮೂಲಕ ಕಟ್ಟಡ ರಚನಾ ಅರಿವು ಮತ್ತು ಸೌಂದರ್ಯ ಸಂವೇದನೆ.
* 2 ಆಯಾಮದ ಚಿತ್ರಗಳಿಂದ 3 ಆಯಾಮದ ವಸ್ತುಗಳ ರಚನಾ ಕೌಶಲ್ಯ
* ವಿವಿಧ ಭಂಗಿಗಳಲ್ಲಿ 3 ಆಯಾಮದ ವಸ್ತುಗಳ ರಚನೆ
* ಕಟ್ಟಡ ರಚನೆ ಮತ್ತು ಗುಣಗಳನ್ನು ಆಧರಿಸಿ ಬಳಸಲಾದ ವಿವಿಧ ವಸ್ತುಗಳನ್ನು ಗುರುತಿಸುವುದು
* ವಿಶ್ಲೇಷಣಾತ್ಮಕ ತಾರ್ಕಿಕತೆ
* ಮಾನಸಿಕ ಸಾಮಥ್ರ್ಯ
* ಕಾಲ್ಪನಿಕ ಅಭಿವ್ಯಕ್ತಿ ಕೌಶಲ್ಯ
* ಆರ್ಕಿಟೆಕ್ಚರ್ ಜಾಗೃತಿ

ತಯಾರಿ ಮುಖ್ಯ : ಪರೀಕ್ಷೆಗೆ ನಿರ್ದಿಷ್ಟ ಪಠ್ಯವಸ್ತು ಇಲ್ಲದೇ ಇರುವುದರಿಂದ ಕಠಿಣ ಶ್ರಮ ಅಗತ್ಯ. ಆದಾಗ್ಯೂ ವಿದ್ಯಾರ್ಥಿಗಳು ಆರ್ಕಿಟೆಕ್ಚರ್‍ಗೆ ಸಂಬಂಧಿಸಿದ ಪರಾಮರ್ಶನ ಗ್ರಂಥಗಳನ್ನು ಅಭ್ಯಾಸ ಮಾಡಬೇಕು. ಐತಿಹಾಸಿಕ ವಾಸ್ತುಶಿಲ್ಪಗಳ ಕಟ್ಟಡ ರಚನಾ ಕೌಶಲ್ಯಗಳನ್ನು ಅರಿಯಬೇಕು. ಜೊತೆಗೆ ನವೀನ ಮಾದರಿಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಸಿದ್ದ ಕಟ್ಟಡಗಳ ರಚನಾ ಕ್ರಮ ಹಾಗೂ ನಕ್ಷಾ ಸ್ವರೂಪ ತಿಳಿದಿರಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ಅಭ್ಯಾಸ ಮಾಡಬೇಕು.
                                                                                                                     ಆರ್.ಬಿ.ಗುರುಬಸವರಾಜ.

July 10, 2015

ಕಥೆ ಹೇಳ್ತೀರಾ!

ಜುಲೈ16ರ  ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ

                                        ಕಥೆ ಹೇಳ್ತೀರಾ!

    ಕಥೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ವೃದ್ದರವರೆಗೆ ಎಲ್ಲರಿಗೂ ಕಥೆಗಳೆಂದರೆ ಪಂಚಪ್ರಾಣ. ಭೂಮಿಯ ಮೇಲೆ ಮಾನವ ಉಗಮದೊಂದಿಗೆ ಕಥೆಗಳು ಉಗಮವಾಗಿವೆ ಎಂದರೆ ತಪ್ಪಲ್ಲ. ಏಕೆಂದರೆ ಕಥೆಗಳಿಗೂ ಮಾನವರಿಗೂ ಅವಿನಾಭಾವ ಸಂಬಂಧವಿದೆ. ವ್ಯಕ್ತಿಗಳ ಪರಸ್ಪರ ಸಂಪರ್ಕಕ್ಕೆ ಕಥೆಗಳು ಪರಿಣಾಮಕಾರಿ ಮಾರ್ಗಗಳಾಗಿವೆ. ಅಂತೆಯೇ ಕಥೆಗಳು ನಾಗರೀಕತೆಗಳ ನಡುವಿನ ಸಂಪರ್ಕ ಸೇತುವೆ ಇದ್ದಂತೆ. ಕಥೆಗಳು ಪ್ರಾಪಂಚಿಕ ಜ್ಞಾನವನ್ನು ವಿಷಯವಸ್ತುವಿನ ಮೂಲಕ ಅರ್ಥಗರ್ಭಿತವಾಗಿ ತಿಳಿಸುವ ಮಾಧ್ಯಮವಾಗಿವೆ.
    ಈ ಕಾರಣಕ್ಕಾಗಿ ಶಿಕ್ಷಣದಲ್ಲಿ ಕಥೆಗಳು ತುಂಬಾ ಮಹತ್ವ ಪಡೆದಿವೆ. ಶಿಕ್ಷಕರು ವಿದ್ಯಾರ್ಥಿಗಳ ಮನಸನ್ನು ತಲುಪಲು ಕಥೆಗಳೇ ರಹದಾರಿಗಳು. ಕಥೆಗಳು ಸುದ್ದಿ ಸಮಾಚಾರ ಅಥವಾ ಅಂಕಿ-ಅಂಶಗಳಿಗಿಂತ ಹೆಚ್ಚು ಗಾಢವಾಗಿ ಮನಸ್ಸಿನಲ್ಲಿ ಉಳಿಯುತ್ತವೆ. ತರಗತಿ ನಿರ್ವಹಿಸುವ ಶಿಕ್ಷಕರು ಅತ್ಯುತ್ತಮ ಕಥೆಗಾರರಾಗಿದ್ದಲ್ಲಿ ಯಾವುದೇ ಕ್ಲಿಷ್ಟದ ಪರಿಕಲ್ಪನೆಗಳನ್ನೂ ಸಹ ಅನೇಕ ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವಂತೆ ಮಾಡಲು ಸಾಧ್ಯವಿದೆ.
    ಕಥೆಗಳೆಂದರೆ ಒಂದು ವಿಷಯವನ್ನು ಚೆನ್ನಾಗಿ ನಿರೂಪಿಸುವುದಲ್ಲ. ಗಣಿತ ಹಾಗೂ ವಿಜ್ಞಾನದ ಪ್ರಕ್ರಿಯೆಗಳನ್ನು, ಪ್ರಯೋಗಗಳನ್ನು ವಿವರಿಸಲು ಕಥೆಗಳನ್ನು ಬಳಸಬಹುದಾಗಿದೆ. ಗಣಿತ ಅಥವಾ ವಿಜ್ಞಾನದ ಸೂತ್ರ, ತತ್ವಗಳನ್ನು ಕೇವಲ ಬಾಯಿಪಾಠ ಮಾಡಿಸುವ ಬದಲು ನಿತ್ಯ ಜೀವನದ ದುಷ್ಟಾಂತದೊಂದಿಗೆ ಕಥನ ಶೈಲಿಯಲ್ಲಿ ಅವುಗಳ ಬಳಕೆಯ ವಿಧಾನ ತಿಳಿಸಿದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಕಥೆಗಳು ನಿತ್ಯ ಜೀವನಕ್ಕೆ ಬೇಕಾದ ಮಾಹಿತಿಗಳನ್ನು ಜ್ಞಾನವನ್ನು ಹಾಗೂ ಸತ್ಯವನ್ನು ತಿಳಿಸುತ್ತವೆ. ಆದ್ದರಿಂದ ಉತ್ತಮ ಕಥೆಗಾರರಾಗುವ ಮುನ್ನ ಕೆಳಗಿನ ಅಂಶಗಳತ್ತ ಗಮನ ಹರಿಸಿ.
•    ಕಥೆ ವೈಜ್ಞಾನಿಕವಾಗಿರಲಿ ಅಥವಾ ಕಾಲ್ಪನಿಕವಾಗಿರಲಿ ಹೇಳಬೇಕಾದ ಪ್ರತೀ ಭಾಗವೂ ಮುಖ್ಯ. ಕಥೆಯ ಮೂಲ ಆಶಯ ಹಾಗೂ ಕಲಿಕೆಯ ಮೂಲಾಂಶಗಳು ಮಾಯವಾಗದಂತೆ ಕಥೆಗಳು ಪರಿಪೂರ್ಣವಾಗಿರಬೇಕು. ಆದ್ದರಿಂದ ಕಥೆಗಳನ್ನು ಹೆಣೆಯುವಾಗ ಕಲಿಕಾಂಶದ ಪ್ರತೀ ಭಾಗವೂ ಅಗತ್ಯ ಎಂಬುದನ್ನು ನೆನಪಿಡಿ.
•    ಕಥೆ ಹೇಳುವಾಗ ಕೇಳುಗರ ಅವಧಾನ ಹಿಡಿದಿಡುವುದು ಮುಖ್ಯ. ಕಥೆಯು ಆರಂಭದಿಂದ ಅಂತ್ಯದವರೆಗೂ ಕುತೂಹಲದಿಂದ ಕೂಡಿರಬೇಕು. ಅದಕ್ಕಾಗಿ ಉತ್ತಮ ಆರಂಭ ಮುಖ್ಯ. ಆರಂಭದಲ್ಲಿ ಯಾವುದಾದರೊಂದು ಸಮಸ್ಯೆ ನೀಡಿ ಕೇಳುಗರ ಮನಸ್ಸನ್ನು ಸೆಳೆಯಬೇಕು.
•    ಕಥೆಯಲ್ಲಿ ಅರ್ಥಗರ್ಭಿತವಾದ ಮತ್ತು ಆಳವಾದ ಥೀಮ್ ಇರಲಿ. ಮನಸ್ಸಿನಲ್ಲಿನ ಥೀಮ್‍ನಂತೆ ಕಥೆಯನ್ನು ಸಂಯೋಜಿಸುವುದು ಸುಲಭದ ಕೆಲಸವಲ್ಲ. ಹೇಳಬೇಕಾದ ಎಲ್ಲಾ ಅಂಶಗಳನ್ನು ಮೊದಲು ಬರೆದಿಟ್ಟುಕೊಂಡು ನಂತರ ಥೀಮ್ ಅಳವಡಿಸಬಹುದು.
•    ಕಥೆಯು ಸರಳವಾಗಿರಲಿ, ಸ್ಪಷ್ಟವಾಗಿರಲಿ ಹಾಗೂ ಗಟ್ಟಿಯಾದ ನೆಲೆಗಟ್ಟಿನ ಮೇಲೆ ನಿರೂಪಿತವಾಗಿರಲಿ. ಸಾಧ್ಯವಾದಷ್ಟೂ ನಿತ್ಯ ಜೀವನದ ಸಾದೃಶ್ಯಗಳಿರಲಿ.
•    ಕಥೆ ಹೇಳುವಾಗ ಕೇಳುಗರೊಂದಿಗೆ ನಿರಂತರವಾಗಿ ಕಣ್ಣುಗಳ ಸಂಪರ್ಕ ಇರಲಿ. ಭಾವನೆಗಳನ್ನು ಹಂಚಿಕೊಳ್ಳಲು ಹಾಗೂ ಕೇಳುಗರ ಲವಲವಿಕೆಯ ಮಟ್ಟವನ್ನು ತಿಳಿಯಲು ಕಣ್ಣುಗಳ ಸಂಪರ್ಕ ಅಗತ್ಯ. ಇದು ಕೇಳುಗರ ಅವಧಾನವನ್ನು ಕೇಂದ್ರೀಕರಿಸುವುದಲ್ಲದೇ ವಿಶ್ವಾಸ ಮತ್ತು ಸತ್ಯಸಂಧತೆಯನ್ನು ರವಾನಿಸುವ ಅಸ್ತ್ರವಾಗಿದೆ.
•    ಕಥೆಯಲ್ಲಿ ಮಕ್ಕಳಿಗೆ ಅರ್ಥವಾಗುವ ವಿವಿಧ ಭಾಷೆಗಳನ್ನು ಬಳಸಿ. ಸಂಭಾಷಣೆಗಳಲ್ಲಿ ಸಾಧ್ಯವಾದಷ್ಟೂ ಮಕ್ಕಳನ್ನು ತೊಡಗಿಸಿಕೊಳ್ಳಿ.
•    ಕಥೆ ಹೇಳುವಾಗ ಕಥೆಯ ಭಾವನೆಗಳಿಗೆ ತಕ್ಕಂತೆ ದೇಹಭಾಷೆ(ಆಂಗಿಕ ಚಲನೆ) ಬಳಸಿ.
•    ಕಥೆಗಳಲ್ಲಿನ ಸಂಭಾಷಣೆಗಳನ್ನು ಧ್ವನಿಯ ಏರಿಳಿತದೊಂದಿಗೆ ನಾಟಕೀಯ ಶೈಲಿಯಲ್ಲಿ ಹೇಳಿ. ಇದು ಕೇಳುಗರಿಗೆ ರಂಜನಿಯ ಎನಿಸುತ್ತದೆ.
•    ಕಥೆ ಕೇವಲ ಕಿವಿಗಳಿಗೆ ಮಾತ್ರ ಎಂಬಂತಾಗಬಾರದು. ಧ್ವನಿ, ದೃಷ್ಟಿ, ಸ್ಪರ್ಶ, ರುಚಿ ಹಾಗೂ ವಾಸನೆಗಳ ಇಂದ್ರಿಯಾನುಭವ ನೀಡಿ. ಜೊತೆಗೆ ಕಥೆಗೆ ತಕ್ಕ ರಂಗ ಪರಿಕರಗಳನ್ನು ಬಳಸಿ.
•    ಕಥೆಯಲ್ಲಿ ಉತ್ತಮ ಪರಿಸರ ಸೃಷ್ಟಿಸುವ ನಿರ್ಣಾಯಕ ಅಂಶಗಳಿರಲಿ. ಅಂತೆಯೇ ಕಥೆಯಲ್ಲಿ ಹಳ್ಳಿಯ ಸೊಗಡು, ನಗರದ ಜಂಜಡ ವೈಭವ, ಸಮುದ್ರತೀರದ ಮೋಹಕತೆ, ಪ್ರಕೃತಿಯ ರಮ್ಯತೆ, ಅನ್ಯಗ್ರಹದ ರೋಚಕತೆ, ವೈವಿಧ್ಯಮಯ ಹವಾಮಾನ ವಾಯುಗುಣಗಳ ಪ್ರಾದೇಶಿಕ ಚಿತ್ರಣ ಹೀಗೆ ಸಾಮಾನ್ಯ ಕಥೆಯಲ್ಲಿ ಅಸಾಮಾನ್ಯತೆ ಇರಲಿ.
•    ಕಥೆ ಕೇವಲ ಗಂಭೀರವಾಗಿ ಸಾಗದೇ ಅಲ್ಲಲ್ಲಿ ಹಾಸ್ಯ ವಿನೋದಗಳಿರಲಿ. ಜೊತೆಗೆ ಸನನಿವೇಶಕ್ಕೆ ತಕ್ಕ ಹಾಡು ಸಂಗೀತ ಇರಲಿ.
•    ಕಥೆಗಳಲ್ಲಿ ಅನಗತ್ಯವಾದ ಪಾತ್ರ, ಘಟನೆಗಳು ಮತ್ತು ಸಂಭಾಷಣೆಗಳು ಬೇಡ. ಇದು ಕಥೆ ನೇರ ದಾರಿಯಲ್ಲಿ ಸಾಗಲು ಅನುಕೂಲ.
•    ನಿಗದಿತ ಸಮಯದಲ್ಲಿ ಕಥೆಯ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಮುಕ್ತಾಯಗೊಳಿಸಿ. ಕೇಳುಗರ ಮನಸ್ಸು ಚಂಚಲಗೊಳ್ಳುವ ಮುನ್ನ ನಿಗದಿತ ಸಂದೇಶ ತಲುಪಿಸಲು ಪ್ರಯತ್ನಿಸಿ.
•    ಕಥೆಯ ಕೊನೆಯಲ್ಲಿ ಉತ್ತಮವಾದ ತತ್ವ ಆದರ್ಶ ಸಂದೇಶಗಳಿರಲಿ. ಅವು ಕಥೆಯ ಕನಸನ್ನು ಸಾಕಾರಗೊಳಿಸುವಂತೆ ಇರಬೇಕು. ಅದಕ್ಕಾಗಿ ಪ್ರಾಸಭರಿತ ನುಡಿಗಟ್ಟು ಬಳಸಬಹುದು. ಕೊನೆಯಲ್ಲಿ ಸಮಸ್ಯೆಗೆ ಉತ್ತರ ದೊರೆಯುವಂತೆ ಇರಬೇಕೇ ವಿನಹ ಜಟಿಲತೆ ಉಳಿಯಬಾರದು.
        ಮೇಲಿನ ಅಂಶಗಳನ್ನು ಬಳಸಿ ಕಥೆಯನ್ನು ಸಂಯೋಜಿಸಿ ಬಳಸಿದ್ದೇ ಆದಲ್ಲಿ ಖಂಡಿತ ನೀವೊಬ್ಬ ಉತ್ತಮ ಕಥೆಗಾರರಾಗುತ್ತೀರಿ.
                                                                                                                         ಆರ್.ಬಿ.ಗುರುಬಸವರಾಜ ಸ.ಶಿ

July 9, 2015

ಸಿದ್ದಾಂತಗಳ ಹರಿಕಾರ ಹಾನ್ಸ್ ಬೆಥ್

        ಜುಲೈ 2015 ರ 'ಟೀಚರ್' ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.

               ಸಿದ್ದಾಂತಗಳ ಹರಿಕಾರ ಹಾನ್ಸ್ ಬೆಥ್

    ವ್ಯಾಯಾಮ ಶಾಲೆಯಲ್ಲಿ ಓದುತ್ತಿದ್ದ ಆ ವಿದ್ಯಾರ್ಥಿಗೆ ತನ್ನ ಸಾಮಥ್ರ್ಯಗಳೇನು ಎಂಬುದು ತಿಳಿದಿರಲಿಲ್ಲ. ಆ ಹುಡುಗ ಗಣಿತದ ಸಮಸ್ಯೆಗಳನ್ನು ಪಟಪಟನೆ ಬಿಡಿಸುತ್ತಿದ್ದ. ಅವನಲ್ಲಿ ಗಣಿತಾತ್ಮಕ ಹಾಗೂ ಸಂಖ್ಯಾತ್ಮಕ ಸಾಮಥ್ರ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಅವನಲ್ಲಿದ್ದ ಅಸಾಧಾರಣ ಗಣಿತದ  ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರು ಅವನಿಗೆ ಗಣಿತ ಮತ್ತು ಭೌತಶಾಸ್ತ್ರ ಕಲಿಯುವಂತೆ ಮಾರ್ಗದರ್ಶನ ನೀಡಿದರು. ಅವನು ಹೈಡ್ರೋಜನ್ ಬಾಂಬ್ ತಯಾರಿಕೆಯ ವಿನ್ಯಾಸದಲ್ಲಿ ಭಾಗಿಯಾಗುತ್ತಾನೆ, 20ನೇ ಶತಮಾನದ ಶ್ರೇಷ್ಠ ವಿಜ್ಞಾನಿಯಾಗುತ್ತಾನೆ ಎಂದು ಶಿಕ್ಷಕರು ಊಹಿಸಿರಲಿಲ್ಲ. ಅಂತಹ ಜಗತ್ಪ್ರಸಿದ್ದ ಖಭೌತ ವಿಜ್ಞಾನಿಯೇ “ಹಾನ್ಸಬೆಥ್”.
    ಹಾನ್ಸ್‍ಬೆಥ್ 1906 ರ ಜುಲೈ 2 ರಂದು ಜರ್ಮನಿಯ ಸ್ಟ್ರಾಸ್‍ಬರ್ಗನಲ್ಲಿ ಜನಿಸಿದನು. 4 ನೇ ವಯಸ್ಸಿನಲ್ಲಿ ತನ್ನ ತಾಯಿಯಿಂದ ಓದುವುದು ಮತ್ತು ಬರೆಯುವುದನ್ನು ಪ್ರಾರಂಭಿಸಿದನು. ಬಾಲ್ಯದಲ್ಲಿಯೇ ಗಣಿತದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಹಾನ್ಸಬೆಥ್ ಗಣಿತದ ಯಾವುದೇ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿಯೇ ಬಿಡಿಸುತ್ತಿದ್ದ. 14ನೇ ವಯಸ್ಸಿಗೆ ಸ್ವಪ್ರಯತ್ನದಿಂದ ತನ್ನಷ್ಟಕ್ಕೆ ತಾನೇ ಕ್ಯಾಲ್ಕುಲಸ್(ಅಶ್ಮರಿ)ನ್ನು ಬೋಧಿಸಿಕೊಂಡ. 18ನೇ ವಯಸ್ಸಿನಲ್ಲಿ “ವಿಸರಣೆ ಮತ್ತು ಜೀವಿಗಳಲ್ಲಿ ದ್ರವ ಹರಿಯುವಿಕೆ” ಕುರಿತ ಸಂಶೋಧನಾ ಬರಹವನ್ನು ಪ್ರಕಟಿಸಿ ಮಂಡಿಸಿದನು. ಇದು ಇಡೀ ಸಂಶೋಧನಾ ವಲಯದಲ್ಲೇ ಅತೀ ಹೆಚ್ಚು ಸುದ್ದಿ ಮಾಡಿತು.
    1928 ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಿಂದ “ಸೈದ್ದಾಂತಿಕ ಭೌತಶಾಸ್ತ್ರ” ಎನ್ನುವ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದರು. ನಂತರ 1929-1933 ರವರೆಗೆ ಅದೇ ವಿಶ್ವ ವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
    ಸೌರಶಕ್ತಿಯ ಮೂಲ ಕುರಿತ ಸಂಶೋಧನೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದ ಹಾನ್ಸಬೆಥ್ ತಮ್ಮ ಪೀಳಿಗೆಯ ಪ್ರಮುಖ ‘ಸೈದ್ದಾಂತಿಕ ಭೌತವಿಜ್ಞಾನಿ’ ಎನಿಸಿಕೊಂಡರು. ಪರಮಾಣು ಸಮ್ಮಿಳನ ಕ್ಷೇತ್ರದ ಮೇಲೆ ಅನೇಕ ಸಂಶೋಧನೆಗಳನ್ನು ಕೈಗೊಂಡರು. ಇದು ಪರಮಾಣು ನ್ಯೂಕ್ಲಿಯಸ್ ಸಿದ್ದಾಂತವಾದ ‘ಹೊಸ ಕ್ವಾಂಟಮ್ ಸಿದ್ದಾಂತ’ವನ್ನು ಪ್ರತಿಪಾದಿಸಲು ದಾರಿ ಮಾಡಿಕೊಟ್ಟಿತು. ಕ್ವಾಂಟಮ್ ಮೆಕಾನಿಕಲ್ ಲೆಕ್ಕಾಚಾರಕ್ಕಾಗಿ ಗುಂಪು ವಿಧಾನಗಳನ್ನು ಅನ್ವಯಿಸಿದವರಲ್ಲಿ ಹಾನ್ಸಬೆಥ್ ಮೊದಲಿಗರು. ಒಟ್ಟಾರೆ ಕ್ವಾಂಟಮ್ ಭೌತಶಾಸ್ತ್ರ ಸ್ಥಾಪಕರಲ್ಲಿ ಹಾನ್ಸಬೆಥ್ ಒಬ್ಬರು.
    ಅವರ ವೈಜ್ಞಾನಿಕ ಸಂಶೋಧನೆಗಳು ಪರಮಾಣುವಿನ ನ್ಯೂಕ್ಲಿಯಸ್‍ಗಳ ರಚನೆ ಮತ್ತು ಅವುಗಳನ್ನು ನಿಯಂತ್ರಿಸುವ ಶಕ್ತಿ ಗುಣಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗಳಿಗೆ ಸಹಾಯ ಮಾಡಿದವು. ಪರಮಾಣು ಸಾಗಾಣಿಕೆಯಲ್ಲಿ ವಿದ್ಯುತ್ ಕಣಗಳ ಶಕ್ತಿನಷ್ಟ ಕುರಿತಾದ ಅವರ ಸಿದ್ದಾಂತವು ಪರಮಾಣುಗಳ ಮಿಶ್ರಣ(ಸಮ್ಮಿಳನ)ದ ಮೇಲಿನ ಸಂಶೋಧನೆಗೆ ನಾಂದಿಯಾಯಿತು. ನಂತರ ಸಮ್ಮಿಳಿತ ಬಾಂಬುಗಳನ್ನು ಉತ್ಪಾದಿಸುವ ಕಾರ್ಯ ಸಾಧ್ಯತೆಯ ಸಂಶೋಧನೆಗಳಲ್ಲಿ ತೊಡಗಿಕೊಂಡರು.
    ಪರಮಾಣು ರಚನೆ ಮತ್ತು ಅವುಗಳ ಪ್ರತಿಕ್ರಿಯೆಗಳ ಮೇಲೆ ಸಾಕಷ್ಟು ಸಿದ್ದಾಂತಗಳನ್ನು ಮಂಡಿಸಿದರು. ಹೀಗಾಗಿ ಪ್ರಪಂಚದ 2ನೇ ಮಹಾಯುದ್ದದ  ಅವಧಿಯಲ್ಲಿ ಮೊದಲ ಅಣುಬಾಂಬ್ ಅಭಿವೃದ್ದಿ ಪಡಿಸಿದವರಲ್ಲಿ ಹಾನ್ಸಬೆಥ್ ಗಣನೀಯ ಪಾತ್ರ ವಹಿಸಿದರು. ಅಣುಬಾಂಬ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದರ ಪರಿಣಾಮಗಳೇನು? ಎಂಬುದನ್ನು ಕುರಿತು ವಿವರಿಸುವುದು ಅವರ ಕಾರ್ಯವಾಗಿತ್ತು.
    ಹಾನ್ಸಬೆಥ್ ಅವರ ಕುಸುರಿ ಕೆಲಸವು ಅವರ ಅನೇಕ ಕಾರ್ಯಗಳಲ್ಲಿ ಎದ್ದು ಕಾಣುತ್ತದೆ. ಪ್ರಯೋಗಕ್ಕೊಳಪಡಿಸದೇ ಯಾವುದೇ ಸಿದ್ದಾಂತವನ್ನು ಒಪ್ಪಿದವರಲ್ಲ. ಅವರ ಪ್ರತಿಯೊಂದು ಸಿದ್ದಾಂತಗಳು ಹೊಸ ವಿದ್ಯಮಾನಗಳನ್ನು ವಿವರಿಸಲು ಗಣಿತೀಯ, ಪರಿಮಾಣಾತ್ಮಕ ತಿಳುವಳಿಕೆ ಹೊಂದಿದ್ದವು. ಊಹೆಗೆ ಅವಕಾಶ ಇರುತ್ತಿರಲಿಲ್ಲ.
    ತಮ್ಮ ವಿಫುಲವಾದ ಜ್ಞಾನದ ಹರವಿನಿಂದ ವಿದ್ಯುತ್ ಕಾಂತೀಯ ಸಿದ್ದಾಂತ, ಅಘಾತ ತರಂಗಗಳ ಸಿದ್ದಾಂತಗಳು ಜನಮನ್ನಣೆ ಗಳಿಸಿದವು. ಬೈಜಿಕ ಭೌತವಿಜ್ಞಾನದ ಬಗ್ಗೆ ಆಳವಾದ ಸಂಶೋಧನೆಗಳನ್ನು ನಡೆಸಿದರು. ಶಕ್ತಿಯ ರಚನಾತ್ಮಕ ಸಿದ್ದಾಂತಗಳ ಸೂತ್ರೀಕರಣದಲ್ಲಿ ಅವರ ಸಂಶೋಧನೆಗಳು ಕೇಂದ್ರೀಕರಣಗೊಂಡಿದ್ದವು. ನಕ್ಷಕ್ರಗಳಲ್ಲಿನ ಶಕ್ತಿಯ ಉತ್ಪಾದನೆ ಮತ್ತು ಪ್ರತಿಕ್ರಿಯೆಗಳ ಮೇಲೆ ಇವರ ಸಂಶೋಧನೆ ಮುಂದುವರೆಯಿತು. ಮುಂದೆ ಇವರು “ಖಭೌತ ವಿಜ್ಞಾನ”(ಆಸ್ಟ್ರೋ ಫಿಸಿಕ್ಸ್) ಎಂಬ ಹೊಸ ವಿಜ್ಞಾನದ ಶಾಖೆಯನ್ನು ಸೃಷ್ಟಿಸಿದರು. ‘ನಕ್ಷತ್ರಗಳಲ್ಲಿನ ಶಕ್ತಿಯ ಉತ್ಪಾದನೆ’ಯ ಮೇಲಿನ ಸಂಶೋಧನೆಗಾಗಿ 1967 ರಲ್ಲಿ ಭೌತಶಾಸ್ತ್ರದಲ್ಲಿ ‘ನೊಬೆಲ್’ ಪ್ರಶಸ್ತಿ ದೊರೆಯಿತು. ಇದು ಇವರ ಜೀವಮಾನದ ಸಂಶೋಧನೆಗಾಗಿ ಒದಗಿದ ಮೌಲ್ಯಯುತ ಗೌರವವಾಗಿತ್ತು. ನಂತರ ಅಂತರಾಷ್ಟ್ರೀಯ ರಕ್ಷಣಾತ್ಮಕ ಮತ್ತು ಪರಮಾಣುಗಳ ಸಮಿತಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
    ವಿಜ್ಞಾನದಲ್ಲಿನ ಅಂತರ್ ಶಾಸ್ತ್ರೀಯ ಕ್ಷೇತ್ರಗಳಲ್ಲಿನ ಸಂಶೋಧನೆಗಳು ಅವರಿಗೆ ಸಂಪೂರ್ಣ ತೃಪ್ತಿ ನೀಡಿವೆ. ಅನೇಕ ಮಹತ್ತರವಾದ ಸಂಶೋಧನೆಗಳು ಮತ್ತು ಸಿದ್ದಾಂತಗಳಿಗೆ ಸಾಕ್ಷಿ ಪುರಾವೆ  ಒದಗಿಸಿದ ಹಾನ್ಸ್‍ಬೆಥ್ ತಮ್ಮ 98 ನೇ ವಯಸ್ಸಿನಲ್ಲಿ ಅಂದರೆ 2005 ರ ಮಾರ್ಚ 6 ರಂದು ಹೃದಯಸ್ಥಂಬನದಿಂದ ನಿಧನರಾದರು. ಅಂದು ಇಡೀ ವಿಶ್ವವೇ ಕಂಬನಿ ಮಿಡಿಯಿತು.
                                                                                                                          ಆರ್.ಬಿ.ಗುರುಬಸವರಾಜ.
   

July 4, 2015

ಹೀಗೊಂದು ಮಕ್ಕಳ ಕಥೆ

           ದಿನಾಂಕ 04-07-2015 ರಂದು ಅವಧಿ ಬ್ಲಾಗ್ (http://avadhimag.com/2015/07/04/ಹೀಗೊಂದು-ಮಕ್ಕಳ-ಕಥೆ ) ನಲ್ಲಿ ಪ್ರಕಟವಾದ ಮಕ್ಕಳ ಕಥೆ.

                17 ಹಸುಗಳು ಹಾಗೂ 3 ಜನ ಮಕ್ಕಳು

ಆಕಳವಾಡಿ ಎಂಬ ಊರಲ್ಲಿ ಭರಮಪ್ಪ ಎಂಬ ರೈತ ತನ್ನ ಹೆಂಡತಿ ಹಾಗೂ ಮೂರು ಜನ ಮಕ್ಕಳೊಂದಿಗೆ ವಾಸವಾಗಿದ್ದ. ಜೀವನೋಪಾಯಕ್ಕಾಗಿ 17 ಹಸುಗಳನ್ನು ಸಾಕಿಕೊಂಡಿದ್ದ. ಹಸುಗಳ ಆದಾಯದಿಂದ ಜೀವನ ಸಾಗಿಸುತ್ತಿದ್ದ. ಇದ್ದ ಮೂರು ಜನ ಗಂಡುಮಕ್ಕಳನ್ನು ಓದಿಸಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ವಿದ್ಯೆ ಹತ್ತಲಿಲ್ಲ. ಮೂವರೂ ಶಾಲೆಯತ್ತ ಮುಖ ಮಾಡಲೇ ಇಲ್ಲ. ಮಕ್ಕಳು ಮದುವೆ ವಯಸ್ಸಿಗೆ ಬಂದರೂ ದುಡಿಯುವ ಯೋಚನೆ ಮಾಡಲಿಲ್ಲ. ವೃಥಾ ಕಾಲಹರಣ ಮಾಡುತ್ತಲೇ ದಿನಗಳನ್ನು ತಳ್ಳತೊಡಗಿದರು.

ಹೀಗಿರಲು ಒಂದು ದಿನ ಜ್ವರ ಬಂದು ಮಲಗಿದ ಭರಮಪ್ಪ ಹಾಸಿಗೆ ಹಿಡಿದ. ಯಾವ ವೈದ್ಯರ ಬಳಿ ಹೋದರೂ ರೋಗ ವಾಸಿಯಾಗಲೇ ಇಲ್ಲ. ಅವನಿಗೆ ಹಿಡಿದುದು ಮಕ್ಕಳ ಬಗೆಗಿನ ಮಾನಸಿಕ ಕಾಯಿಲೆಯಾಗಿತ್ತು. ಹೀಗೆಯೇ ಒಂದು ದಿನ ಭರಮಪ್ಪ ಕೊನೆ ಉಸಿರೆಳೆದ. ಆದರೆ ಸಾಯುವ ಮುಂಚೆ ತನ್ನ ಮಕ್ಕಳಿಗಾಗಿ ಉಯಿಲು(ವಿಲ್) ಮಾಡಿಸಿದ್ದ. ಮರಣೋತ್ತರ ಕಾರ್ಯಗಳೆಲ್ಲಾ ಮುಗಿದ ಮೇಲೆ ಮಕ್ಕಳು ಉಯಿಲನ್ನು ಓದಿದರು. ಇದ್ದ ಅಲ್ಪ ಆಸ್ತಿಯನ್ನು ಮೂರು ಜನ ಮಕ್ಕಳಿಗೆ ಹಾಗೂ ಹೆಂಡತಿಗೂ ಸೇರಿ ನಾಲ್ಕು ಸಮಭಾಗಗಳಲ್ಲಿ ಹಂಚಲಾಗಿತ್ತು. ಆದರೆ 17 ಹಸುಗಳನ್ನು ಮಾತ್ರ ವಿಚಿತ್ರ ರೀತಿಯಲ್ಲಿ ಹಂಚಲಾಗಿತ್ತು. ಉಯಿಲಿನ ಪ್ರಕಾರ ಹಿರಿಯವನಿಗೆ ಒಂಬತ್ತನೇ ಒಂದು ಭಾಗ, ಮಧ್ಯದವನಿಗೆ ಮೂರನೇ ಒಂದು ಭಾಗ ಹಾಗೂ ಕಿರಿಯವನಿಗೆ ಎರಡನೇ ಒಂದು ಭಾಗದಷ್ಟು ಹಸುಗಳನ್ನು ಹಂಚಲಾಗಿತ್ತು. ಜೊತೆಗೆ ಒಂದು ಕರಾರು ಕೂಡಾ ಇತ್ತು. ಅದೇನೆಂದರೆ ಯಾವುದೇ ಕಾರಣಕ್ಕೂ ಹಸುಗಳನ್ನು ಕತ್ತರಿಸಿ ಭಾಗ ಮಾಡಿಕೊಳ್ಳುವಂತಿಲ್ಲ ಎಂಬುದು.
ಇದು ಮೂರೂ ಜನರಿಗೆ ಸಮಸ್ಯೆಯಾಯಿತು. ಹೇಗೇ ಲೆಕ್ಕಾಚಾರ ಮಾಡಿದರೂ 17 ಹಸುಗಳನ್ನು ಉಯಿಲಿನ ಪ್ರಕಾರ ಭಾಗಮಾಡಿಕೊಳ್ಳಲು ಆಗಲಿಲ್ಲ. ತಮ್ಮ ಸಮಸ್ಯೆಯನ್ನು ಊರ ಗೌಡನ ಬಳಿಗೆ ತೆಗೆದುಕೊಂಡು ಹೋದರು. ಗೌಡನಿಗೂ ಸಮಸ್ಯೆ ಬಗೆ ಹರಿಯಲಿಲ್ಲ. ಮರುದಿನ ಬರಲು ತಿಳಿಸಿದ. ಏನೇ ಲೆಕ್ಕಾಚಾರ ಮಾಡಿದರೂ ಉಯಿಲಿನಂತೆ ಹಸುಗಳನ್ನು ಭಾಗ ಮಾಡಲು ಸಾಧ್ಯವಾಗಲೇ ಇಲ್ಲ. ಇದನ್ನು ಗಮನಿಸಿದ ಗೌಡನ ಮಗ ಸಮಸ್ಯೆ ಏನೆಂದು ಕೇಳಿದ. ನನಗೆ ತಿಳಿಲಾರದ್ದು ನಿನಗೇನು ತಿಳಿದೀತು ಹೋಗಾಚೆ ಎಂದು ಗದರಿದ. ಆದರೂ ಸುಮ್ಮನಿರದ ಗೌಡನ ಮಗ ಸಮಸ್ಯೆ ತಂದ ಮೂರು ಜನರ ಬಳಿ ಹೋಗಿ ಸಮಸ್ಯೆ ಏನೆಂದು ಕೇಳಿದ. ಚಿಕ್ಕ ಹುಡುಗ ಇವನೇನು ಹೇಳಿಯಾನು ಎಂದು ಅನುಮಾನಿಸುತ್ತಾ, ಗೌಡನ ಮಗ ಎಂಬ ಕಾರಣಕ್ಕೆ ಸಮಸ್ಯೆಯನ್ನು ಅವನ ಮುಂದೆ ಹೇಳಿದರು. ತಕ್ಷಣವೇ ಅವನಿಗೆ ಇವರ ತಂದೆಯ ಬುದ್ದಿವಂತಿಕೆ ಅರ್ಥವಾಯ್ತು. 17 ಅವಿಭಾಜ್ಯ ಅಪವರ್ತನ ಎಂಬುದನ್ನು ಗ್ರಹಿಸಿದ ಕೂಡಲೇ ಅವನಿಗೆ ಉತ್ತರವೂ ಹೊಳೆಯಿತು. ಅವರನ್ನು ತಂದೆಯ ಬಳಿ ಕರೆದೊಯ್ದ. ಈ ಮೂವರ ಸಮಸ್ಯೆಗೆ ತಾನು ಉತ್ತರ ನೀಡುವುದಾಗಿ ತಂದೆಗೆ ತಿಳಿಸಿದ. ತಂದೆಗೆ ಆಶ್ಚರ್ಯವಾಯಿತು. ಆದರೂ ಅವಕಾಶ ಕೊಡೋಣ ಎಂದು ತೀಮರ್ಾನಿಸಿ ಒಪ್ಪಿಗೆ ಸೂಚಿಸಿದ.

ಅದಕ್ಕೆ ಆ ಹುಡುಗನು 17 ಹಸುಗಳನ್ನು ತರಲು ಹೇಳಿದ. ಅದರಂತೆ ಮೂವರೂ 17 ಹಸುಗಳನ್ನು ಅಲ್ಲಿಗೆ ತಂದರು. ತನ್ನ ತಂದೆಗೆ ಇನ್ನೊಂದು ಹಸು ತರಿಸಲು ಕೇಳಿಕೊಂಡ. 17 ಹಸುಗಳ ಜೊತೆಗೆ ಗೌಡನ ಒಂದು ಹಸು ಸೇರಿ 18 ಹಸುಗಳಾದವು. ಈಗ ಉಯಿಲನ್ನು ಓದಲು ತಿಳಿಸಿದ. ಹಿರಿಯವನಿಗೆ ಒಂಭತ್ತನೇ ಒಂದು ಭಾಗ. 18 ಹಸುಗಳನ್ನು ಒಂಭತ್ತು ಭಾಗ ಮಾಡಿದರು. ಅದರಲ್ಲಿ ಒಂದು ಭಾಗವನ್ನು ಹಿರಿಯವನಿಗೆ ಹಂಚಲಾಯಿತು. ಅಂದರೆ 2 ಹಸುಗಳು. ಮಧ್ಯದವನಿಗೆ ಮೂರನೇ ಒಂದು ಭಾಗ. 18 ಹಸುಗಳನ್ನು ಮೂರು ಭಾಗ ಮಾಡಿ ಅದರಲ್ಲಿ ಒಂದು ಭಾಗ ಅವನಿಗೆ ನೀಡಲಾಯಿತು. ಅಂದರೆ 6 ಹಸುಗಳು. ಕಿರಿಯವನಿಗೆ ಎರಡನೇ ಒಂದು ಭಾಗ. ಪುನಃ 18 ಹಸುಗಳನ್ನು ಎರಡು ಭಾಗ ಮಾಡಲಾಯಿತು. ಅದರಲ್ಲಿ ಒಂದು ಭಾಗ ಕಿರಿಯವನಿಗೆ ನೀಡಲಾಯಿತು. ಅಂದರೆ 9 ಹಸುಗಳು. ಹಿರಿಯವನಿಗೆ 2, ಮಧ್ಯದವನಿಗೆ 6 ಹಾಗೂ ಕಿರಿಯವನಿಗೆ 9 ಹಸು ಒಟ್ಟು 17 ಹಸುಗಳನ್ನು ಹಂಚಲಾಯಿತು. ಉಳಿದ ಒಂದು ಹಸುವನ್ನು ಗೌಡನಿಗೆ ಪುನಃ ಹಿಂದಿರುಗಿಸಲಾಯಿತು.

ತನ್ನ ಮಗ ಇಷ್ಟೊಂದು ಸುಲಭವಾಗಿ ಈ ಸಮಸ್ಯೆ ಬಗೆಹರಿಸಿದ್ದನ್ನು ನೋಡಿ ಗೌಡನಿಗೆ ಆಶ್ಚರ್ಯವಾಯಿತು. ಇದು ಹೇಗೆ ಸಾಧ್ಯವಾಯಿತೆಂದು ಮಗನನ್ನು ಕೇಳಲು ಅವನು ಇದನ್ನೆಲ್ಲಾ ನಮ್ಮ ಶಾಲೆಯಲ್ಲಿ ಕಲಿಸುತ್ತಾರೆ ಎಂದು ತಿಳಿಸಿದ. ಇದರಿಂದ ಸಂತೋಷಗೊಂಡ ಗೌಡ ಮೂವರಿಗೂ ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಬುದ್ದಿವಾದ ಹೇಳಿ ಕಳಿಸಿದ. ಮೂವರೂ ಮದುವೆ ಆಗಿ ಮಕ್ಕಳಾದ ಮೇಲೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವ ನಿಧರ್ಾರ ಮಾಡಿ ತಮ್ಮ ತಮ್ಮ ಪಾಲಿನ ಹಸುಗಳೊಂದಿಗೆ ಮನೆಗೆ ನಡೆದರು.
                                                                                                                        ಆರ್.ಬಿ.ಗುರುಬಸವರಾಜ

July 1, 2015

ಜಿಮ್ಮೊಲಜಿ

 ದಿನಾಂಕ 01-07-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.



                          ಜಿಮ್ಮೊಲಜಿ

    ಬದಲಾಗುತ್ತಿರುವ ಜೀವನಶೈಲಿ ಹಾಗೂ ಸಂಸ್ಕøತಿಯ ಫ್ಯಾಷನೀಕರಣದ ಪ್ರಭಾವದಿಂದಾಗಿ ಇಂದಿನ ಯುವಜನತೆ ಅದರಲ್ಲೂ ಯುವತಿಯರು ಅಲಂಕಾರಕ್ಕಾಗಿ ಸಾಂಪ್ರದಾಯಿಕ ಶೈಲಿಗೆ ಮರಳುತ್ತಿದ್ದಾರೆ. ಅಲಂಕಾರಕ್ಕಾಗಿ ಪಾರಂಪರಿಕ ಹಾಗೂ ಆಕರ್ಷಕ ಹರಳುಗಳ ಮೋಹ ಪಾಶದಲ್ಲಿ ಬೀಳುತ್ತಿದ್ದಾರೆ. ಉಂಗುರ, ಕಿವಿಯೋಲೆ, ನತ್ತು, ನೆಕ್ಲೆಸ್, ಸರ, ಬಳೆ, ಡಾಬು, ವಂಕಿ, ವಡ್ಯಾಣ, ಕಾಲಂದಿಗೆ ಇತ್ಯಾದಿ ಆಭರಣಗಳಲ್ಲಿ ಹರಳುಗಳೇ ತುಂಬಿರುತ್ತವೆ.
    ಅನಾದಿ ಕಾಲದಿಂದಲೂ ಹರಳುಗಳು ಭಾರತೀಯ ಸಂಸ್ಕøತಿಯ ಪ್ರತೀಕವಾಗಿವೆ. ವಜ್ರದ ಹರಳು, ನೀಲಮಣಿ, ಪಚ್ಚೆ, ಮಾಣಿಕ್ಯ ಮುಂತಾದ ಹರಳುಗಳು  ಭಾರತೀಯರ  ಜೀವನದೊಂದಿಗೆ ಸಮ್ಮಿಳಿತಗೊಂಡು, ಕಾಲದಿಂದ ಕಾಲಕ್ಕೆ ಹೊಸ ಹೊಸ ರೂಪು ಪಡೆಯುತ್ತಾ ಬಂದಿವೆ.
    ಹರಳುಗಳನ್ನು ಆಯ್ಕೆ ಮಾಡುವ, ಶ್ರೇಣಿಕರಿಸುವ, ಮೌಲ್ಯೀಕರಿಸುವ ಅಂತಿಮವಾಗಿ ಬಳಕೆದಾರರಿಗೆ ಇಚ್ಚಿತ ರೂಪದಲ್ಲಿ ಮಾರುಕಟ್ಟೆಗೆ ಒದಗಿಸುವ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಿರುವುದನ್ನು ಗಮನಿಸಬಹುದು. ನಾನಿಲ್ಲಿ ಮುಖ್ಯವಾಗಿ ಪ್ರಸ್ತಾಪಿಸಬಯಸಿರುವುದು ಹರಳುಗಳೊಂದಿಗೆ ಮಾನವ ಸಂಬಂಧವನ್ನಲ್ಲ. ಬದಲಾಗಿ ಹರಳುಗಳ ಅಧ್ಯಯನ ಕುರಿತಾದ ಜಿಮ್ಮೊಲಜಿ ಕೋರ್ಸ್‍ನ ಬಗ್ಗೆ.
    ರತ್ನಖಚಿತ ಹರಳುಗಳು ಮತ್ತು ಬೆಲೆಬಾಳುವ ಲೋಹಗಳ ಅಧ್ಯಯನದ ವಿಜ್ಞಾನವೇ ಜಿಮ್ಮೊಲಜಿ. ಅಂದರೆ ರತ್ನದ ಹರಳುಗಳನ್ನು ಗುರುತಿಸುವ, ಶ್ರೇಣೀಕರಿಸುವ, ಆಕರ್ಷಕ ರೂಪು ನೀಡಿ ಆಭರಣವಾಗಿ ಪರಿವರ್ತಿಸುವ ಹಾಗೂ ಮೌಲ್ಯಮಾಪನ ಮಾಡುವ ಕಲೆ ಮತ್ತು ವಿಜ್ಞಾನಗಳ ಸಂಗಮವೇ ಜಿಮ್ಮೊಲಜಿ. ಜಿಯೋಸೈನ್ಸ್‍ನ ಭಾಗವಾದ ಈ ಕೋರ್ಸ್ ಉದ್ಯೋಗಾಕಾಂಕ್ಷಿಗಳ ಹೊಸ ವೃತ್ತಿ ಜೀವನದ ಮಾರ್ಗವೆಂದರೆ ತಪ್ಪಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಹರಳುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಉತ್ತಮ ಭವಿಷ್ಯ : ಜ್ಯೂವೆಲ್ಲರಿ ಮಾಲಕರು ಚಿಲ್ಲರೆ ಗ್ರಾಹಕರನ್ನು ಆಕರ್ಷಿಸಲು ಅತ್ಯುತ್ತಮ ಗುಣಮಟ್ಟದ ಆಕರ್ಷಕ ರತ್ನದ ಹರಳುಗಳನ್ನು ಪ್ರದರ್ಶಿಸಲು ಕಾತುರರಾಗಿರುತ್ತಾರೆ. ಸ್ಪರ್ದಾತ್ಮಕ ವ್ಯಾಪಾರದ ಮಧ್ಯೆ ಗ್ರಾಹಕರಿಗೆ ನವೀನ ಹಾಗೂ ಆಕರ್ಷಕ ಮಾದರಿಯ ಹರಳುಗಳನ್ನು ನೀಡಲು ಹಾತೊರೆಯುತ್ತಿದ್ದಾರೆ. ಅಲ್ಲದೇ ಗ್ರಾಹಕರೂ ಸಹ ವೈಯಕ್ತಿಕ ಬಳಕೆಗಾಗಿ ಉತ್ತಮ ಗುಣಮಟ್ಟದ ಹಾಗೂ ಪ್ರಾಮಾಣೀಕೃತವಾದ ರತ್ನಾಭರಣಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಜಿಮ್ಮೊಲಾಜಿಸ್ಟ್ ಆಗುವ ಮೂಲಕ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬಹುದಾಗಿದೆ.
    ಶೇಕಡಾ 95 ರಷ್ಟು ವಜ್ರದ ಹರಳುಗಳನ್ನು ಕತ್ತರಿಸುವ ಮತ್ತು ಹೊಳಪು ನೀಡುವ ಪ್ರಕ್ರಿಯೆ ಭಾರತದಲ್ಲಿಯೇ ನಡೆಯುತ್ತಿದೆ. ಭಾರತವು ವಿಶ್ವದ ಅತೀ ಹೆಚ್ಚು ವಜ್ರ ಕತ್ತರಿಸುವ ಹಾಗೂ ಹೊಳಪು ನೀಡುವ ದೇಶ ಎಂಬುದು ವಾಸ್ತವಾಗಿ ಪರಿಗಣಿತವಾಗಿದೆ. ಹಾಗಾಗಿ ಜಿಮ್ಮೊಲಜಿ ಕೋರ್ಸ್ ಅತ್ಯಂತ ಲಾಭದಾಯಕ ಮತ್ತು ಅತೀ ಹೆಚ್ಚು ತೃಪ್ತಿ ನೀಡುವ ಕ್ಷೇತ್ರ ಎಂಬುದನ್ನು ಸಾಬೀತು ಮಾಡಲು ಸಾಕಷ್ಟು ಅವಕಾಶಗಳಿವೆ.
   
ಅರ್ಹತೆ ಮತ್ತು ಅಗತ್ಯ ಅಂಶಗಳು : ಈ ಕೋರ್ಸ್ ಸೇರಲು ಕನಿಷ್ಠ 18 ವರ್ಷಗಳ ವಯೋಮಿತಿ ಹೊಂದಿರಬೇಕು ಮತ್ತು ಯಾವುದೇ ವಿಭಾಗದ ಪಿ.ಯು.ಸಿ.ಯಲ್ಲಿ ಕನಿಷ್ಠ ಶೇಕಡಾ 50 ರಷ್ಟು ಅಂಕಗೋಂದಿಗೆ ಉತ್ತೀರ್ಣತೆ ಹೊಂದಿರಬೇಕು. ವಿಜ್ಞಾನ ವಿಭಾಗದವರಿಗೆ ಪ್ರಥಮ ಆದ್ಯತೆ. ಇಂಗ್ಲೀಷ್ ಭಾಷಾ ಪರಿಣಿತಿ ಜೊತೆಗೆ ಸಂವಹನ ಕೌಶಲ್ಯದ ಅಗತ್ಯತೆ ಇದೆ.
    ಯಶಸ್ವಿ ಜಿಮ್ಮೊಲಜಿಸ್ಟ ಆಗಲು ವಿಶ್ವಾಸಾರ್ಹ ಕೌಶಲ್ಯದ ಅರಿವು, ಉತ್ತಮವಾದ ಕಣ್ಣುಗಳ ಹೊಂದಾಣಿಕೆ, ಕಲೆಯನ್ನು ಮೆಚ್ಚುವ ಗುಣ, ಅತ್ಯುತ್ತಮವಾದ ವೀಕ್ಷಣಾ ಶಕ್ತಿ, ನಿಖರವಾದ ವಿವರ ಸಂಗ್ರಹಣಾ ಸಾಮಥ್ರ್ಯ, ವಸ್ತುನಿಷ್ಠ ಉಪಕ್ರಮ ವಿಧಾನ ಮತ್ತು ಜವಾಬ್ದಾರಿಯುತ ಅಧಿಕಾರ ಚಲಾಯಿಸುವ ಗುಣಗಳು ವೇಗವಾಗಿ ಪ್ರಗತಿಯತ್ತ ಕೊಂಡೊಯ್ಯುತ್ತವೆ.

ವಿವಿಧ ಕೋರ್ಸ್‍ಗಳು : ಜಿಮ್ಮೊಲಜಿಗೆ ಸಂಬಂಧಿಸಿದಂತೆ 3 ತಿಂಗಳಿನಿಂದ 3 ವರ್ಷಗಳವರೆಗಿನ ವಿವಿಧ ರೀತಿಯ ಸರ್ಟಿಫಿಕೆಟ್ ಮತ್ತು ಡಿಪ್ಲೊಮೊ ಕೋರ್ಸ್‍ಗಳಿವೆ. ಎಲ್ಲಾ ಕೋರ್ಸ್‍ಗಳನ್ನು ಪ್ರಾಯೋಗಿಕ ಅನುಭವದ ಮೂಲಕವೇ  ನಡೆಯುವುದರಿಂದ ಹರಳುಗಳನ್ನು ಕತ್ತರಿಸುವ, ಬಣ್ಣಲೇಪಿಸುವ ಹಾಗೂ ಇನ್ನಿತರೇ ಕಾರ್ಯಗಳಿಗೆ 25 ಸಾವಿರದಿಂದ 1.5 ಲಕ್ಷ ರೂ.ಗಳವರೆಗೆ ವೆಚ್ಚ ತಗಲಬಹುದು. ಅಂತಹ ಕೆಲವು ಕೋರ್ಸ್‍ಗಳೆಂದರೆ,
•    ಜೆಮ್ಸ್ ಐಡೆಂಟಿಫಿಕೇಷನ್ ಸರ್ಟಿಫಿಕೆಟ್ ಕೋರ್ಸ್
•    ಡೈಮಂಡ್ ಗ್ರೇಡಿಂಗ್ ಸರ್ಟಿಫಿಕೇಷನ್ ಕೋರ್ಸ್
•    ಸರ್ಟಿಫಿಕೇಷನ್ ಕೋರ್ಸ್ ಇನ್ ಕಟ್ ಅಂಡ್ ಡಿಸೈನ್ ಅನಲೈಸಿಸ್
•    ಪರ್ಲ್ ಗ್ರೇಡಿಂಗ್
•    ಪಾಲಿಷ್ಡ್ ಡೈಮಂಡ್ ಗ್ರೇಡಿಂಗ್ ಕೋರ್ಸ್
•    ಡಿಪ್ಲೊಮೊ ಕೋರ್ಸ್‍ಗಳು

ಕೋರ್ಸ್‍ನಲ್ಲಿ ಕಲಿಯುವುದೇನು?
    ಜಿಮ್ಮೊಲಜಿ ಮುಖ್ಯವಾಗಿ ನೈಸರ್ಗಿಕ ವಿಧಾನದಿಂದ ಹರಳುಗಳ ಸ್ವರೂಪ ಗುರುತಿಸುವ, ವಿಂಗಡಿಸುವ, ಶ್ರೇಣೀಕರಿಸುವ ವಿಧಾನಗಳನ್ನು ಕಲಿಸಲಾಗುತ್ತದೆ. ಅಂದರೆ ಹರಳುಗಳ ಭೌತಿಕ ಗುಣಲಕ್ಷಣಗಳು, ಆಪ್ಟಿಕಲ್ ಗುಣಗಳು, ಫ್ಯಾಷನ್ ಡಿಸೈನ್, ಕಂಪ್ಯೂಟರ್ ಆಧಾರಿತ ಆಭರಣ ವಿನ್ಯಾಸ, ಲೋಹಶಾಸ್ತ್ರೀಯ ಪರಿಕಲ್ಪನೆ, ಸಾಂಪ್ರದಾಯಿಕ ಮತ್ತು ಆಧುನಿಕ ರೇಖಾಚಿತ್ರ ಪ್ರಕ್ರಿಯೆಗಳು, ಆಭರಣ ತಯಾರಿಕಾ ತಂತ್ರಗಳನ್ನು ಕಲಿಸಲಾಗುತ್ತದೆ. ಮುಖ್ಯವಾಗಿ ಹರಳುಗಳನ್ನು ಕತ್ತರಿಸುವ, ವರ್ಣಮಯಗೊಳಿಸುವ, ಮೆರಗುಗೊಳಿಸುವ, ಹೊಳಪು ನೀಡುವ ಅಂತಿಮವಾಗಿ ಆಕರ್ಷಕ ಆಭರಣವಾಗಿ ಮಾರ್ಪಡಿಸುವ ತಾಂತ್ರಿಕ ಕೌಶಲ್ಯಗಳನ್ನು ಕಲಿಸಲಾಗುತ್ತದೆ.

ವಿವಿಧ ಹೆಸರು ಮತ್ತು ವೈವಿಧ್ಯಮಯ ಪಾತ್ರ :
    ಭಾರತದಲ್ಲಿ ಜ್ಯೂವೆಲ್ಲರಿ ಕ್ಷೇತ್ರವು ವಿದೇಶಿ ವಿನಿಮಯದ ಅತ್ಯುನ್ನತ ಲಾಭಗಳಿಕಾ ವಲಯವಾಗಿದೆ. ಸ್ವದೇಶಿ ಹಾಗೂ ವಿದೇಶಗಳಲ್ಲಿ ಸಾಕಷ್ಟು ವೃತ್ತಿ ಅವಕಾಶಗಳನ್ನು ಹೊಂದಿದೆ. ಮುಖ್ಯವಾಗಿ ಜ್ಯೂವೆಲ್ಲರಿ ಡಿಸೈನ್, ಜ್ಯೂವೆಲ್ಲರಿ ರಿಟೇಲ್ ಬ್ಯುಸಿನೆಸ್, ಹರಳುಗಳನ್ನು ಕತ್ತರಿಸುವ ಹಾಗೈ ಪಾಲಿಷ್ ಮಾಡುವ ಸಂಸ್ಥೆಗಳಲ್ಲಿ, ಪ್ರಯೋಗಶಾಲೆಗಳಲ್ಲಿ, ರತ್ನ ಹಾಗೂ ಅಮೂಲ್ಯ ಲೋಹಗಳನ್ನು ಪ್ರಾಮಾಣೀಕರಿಸುವ ಸಂಸ್ಥೆಗಳಲ್ಲಿ, ಸ್ವಂತ ಜ್ಯೂವೆಲ್ಲರಿ ಉಧ್ಯಮ ಮತ್ತು ವ್ಯವಹಾರ ಹೀಗೆ ಸಾಕಷ್ಟು ವೃತ್ತಿ ಅವಕಾಶಗಳಿವೆ. ಕೋರ್ಸ್‍ನ ನಂತರ ನಿರ್ವಹಿಸಬಹುದಾದ ವಿವಧ ಪಾತ್ರಗಳು ಇಂತಿವೆ.
•    ಜಿಮ್ಮೊಲಾಜಿಸ್ಟ್
•    ಡೈಮಂಡ್ ಗ್ರೇಡರ್
•    ಜ್ಯೂವೆಲ್ಲರಿ ಡಿಸೈನರ್
•    ಸೇಲ್ಸ್ ಪರ್ಸನ್
•    ಜ್ಯೂವೆಲ್ಲರಿ ಆಕ್ಷನ್ ಮೇನೇಜರ್

ಕೆಲಸ ಇಲ್ಲಿ ಖಾತ್ರಿ ಐತ್ರಿ
•    ಮೈನಿಂಗ್ ಇಂಡಸ್ಟ್ರಿ
•    ಜ್ಯೂವೆಲ್ಲರಿ ಮೇಕಿಂಗ್ ಅಂಡ್ ಡಿಸೈನಿಂಗ್ ಯೂನಿಟ್
•    ಜ್ಯೂವೆಲ್ಲರಿ ಅಂಗಡಿಗಳು ಮತ್ತು ಷೋರೂಮ್‍ಗಳು
•    ಜೆಮ್ ಎಕ್ಸ್‍ಪೋರ್ಟಿಂಗ್ ಆರ್ಗನೈಜೇಷನ್
•    ಜೆಮ್ ಸ್ಟೋನ್ ಕಟ್ಟಿಂಗ್ ಅಂಡ್ ಪಾಲಿಷಿಂಗ್ ಯೂನಿಟ್
•    ಜೆಮ್ ಟೆಸಿಂಗ್ ಲ್ಯಾಬ್ಸ್
•    ಜೆಮ್ ಅಂಡ್ ಮೆಟಲ್ ಗ್ರೇಡಿಂಗ್ ಅಂಡ್ ಕ್ವಾಲಿಟಿ ಸರ್ಟಿಫೈಯಿಂಗ್ ಏಜೆನ್ಸಿ
•    ಆರ್ಟಿಫಿಷಿಯಲ್ ಜೆಮ್ ಇಂಡಸ್ಟ್ರಿ
•    ಟಾಪ್ ಗ್ರೇಡ್ ಗೋಲ್ಡ್‍ಸ್ಮಿಥ್ಸ್

ಕೋರ್ಸ್ ಇಲ್ಲಿ ಲಭ್ಯ :
•    ವೋಗಾ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಬೆಂಗಳೂರು.
•    ಸಾಲಿಟೇರ್ ಡೈಮಂಡ್ ಇನ್ಸ್ಟಿಟ್ಯೂಟ್, ಬೆಂಗಳೂರು.
•    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಮ್ಮೊಲಜಿ, ದೆಹಲಿ.
•    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ ಅಂಡ್ ಜ್ಯೂವೆಲ್ಲರಿ, ಮುಂಬೈ
•    ಸಿಂಗಾಬಾದ ಸ್ಕೂಲ್ ಆಫ್ ಜಿಮ್ಮೊಲಜಿ ಅಂಡ್ ಜ್ಯೂವೆಲ್ಲರಿ ಡಿಸೈನಿಂಗ್, ಪೂನ
•    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜ್ಯೂವೆಲ್ಲರಿ, ಮುಂಬೈ.
•    ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜಿಮ್ಮೊಲಾಜಿಕಲ್ ಸೈನ್ಸ್, ದೆಹಲಿ.
•    ಆಸರ್ ಅಕಾಡೆಮಿ ಆಫ್ ಡಿಸೈನ್, ಚೆನ್ನೈ.
•    ಅರಿಹಂತ್ ಡೈಮಂಡ್ ಇನ್ಸ್ಟಿಟ್ಯೂಟ್ , ಸೂರತ್

                                                                                                                   ಆರ್.ಬಿ.ಗುರುಬಸವರಾಜ.