September 11, 2015

ಎಲೆಯಲ್ಲಿ ಕಲೆಯ ಬಲೆಯು

ಸೆಪ್ಟಂಬರ್ 17 ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

                  ಎಲೆಯಲ್ಲಿ ಕಲೆಯ ಬಲೆಯು

    ಪ್ರಕೃತಿಯ ರಮ್ಯತೆ ಎಂತಹವರನ್ನೂ ಮೋಹಿತರನ್ನಾಗಿಸುತ್ತದೆ. ಏಕೆಂದರೆ ಅಲ್ಲಿನ ಪ್ರತಿಯೊಂದು ವಸ್ತುವೂ ಅಮೂಲ್ಯ. ತನ್ನನ್ನು ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ಪ್ರಕೃತಿಯೇ ಆಸರೆ ನೀಡುತ್ತದೆ. ಜೊತೆಗೆ ಬದುಕಲು ದಾರಿ ತೋರಿಸುತ್ತದೆ ಎನ್ನುವುದಕ್ಕೆ 43 ವರ್ಷದ ಲೊರೆಂಜೊ ಸಿಲ್ವಾ ಅವರ ಜೀವನವೇ ಸಾಕ್ಷಿ.
    ಪ್ರಕೃತಿಯ ಮಡಿಲು ಜೀವನದ ಕಡಲು: ಸ್ಪೇನಿನವರಾದ ಲೊರೆಂಜೊ ಡ್ಯುರಾನ್ ಸಿಲ್ವಾ ತಮ್ಮ ದುಡಿಮೆಯ ಎಲ್ಲಾ ಮಾರ್ಗಗಳು ಮುಚ್ಚಿದ ನಂತರ ಪ್ರಕೃತಿಯ ಮಡಿಲು ಸೇರಿದರು. ಜೀವನ ಸಾಕಾಗಿ ಸಾವಿನ ನಿರ್ಧಾರ ಮಾಡುತ್ತಾ ಕುಳಿತವರಿಗೆ ಬದುಕಲು ಪ್ರೇರಣೆಯಾದದ್ದು ಒಂದು ಕಂಬಳಿಹುಳು ಎಂದರೆ ಆಶ್ಚರ್ಯವಾಗುತ್ತದೆ. ಅಲ್ಲವೇ? ಆದರೂ ಇದು ಸತ್ಯ.
    ನಡೆದದ್ದೇನು?:  ಅಂದು ಸಾಯುವ ಮಾರ್ಗದ ಬಗ್ಗೆ ಯೋಚನೆ ಮಾಡುತ್ತಾ ಮರದ ಕೆಳಗೆ ಕುಳಿತ ಸಿಲ್ವಾ ಅವರಿಗೆ ಗಿಡದ ಎಲೆಯಲ್ಲಿನ ಕಂಬಳಿಹುಳು ಜೀವನಕ್ಕೆ ದಾರಿ ತೋರಿಸಿತ್ತು. ಕಂಬಳಿಹುಳು ತನ್ನ ಚೂಪಾದ ಹಲ್ಲುಗಳಿಂದ ಎಲೆಗಳನ್ನು ಕತ್ತರಿಸಿ ಆಹಾರ ಸೇವಿಸುತ್ತದೆ. ಹೀಗೆ ಕತ್ತರಿಸಿ ಉಳಿದ ಎಲೆಯ ಭಾಗದಲ್ಲಿ ಚಿತ್ರವಿಚಿತ್ರ ಚಿತ್ತಾರಗಳು ಮೂಡಿರುತ್ತವೆ. ಇದೇ ಐಡಿಯಾ ಸಿಲ್ವಾ ಅವರ ಮುಂದಿನ ಬಾಳಿಗೆ ಬೆಳಕಾದುದು ರೋಚಕ. ಕಂಬಳಿಹುಳುವಿನಿಂದ ಪ್ರೇರಿತದಾದ ಸಿಲ್ವಾ ಎಲೆಗಳನ್ನು ಕತ್ತರಿಸಿ ಸಂಗ್ರಹಯೋಗ್ಯ ಆಕರ್ಷಕ ಕಲಾಕೃತಿಗಳನ್ನು ಮಾಡಲು ಉತ್ಸುಕರಾದವರು.
    ಎಲೆಗೆ ಕಲೆಯ ಮೆರಗು: ಎಲೆಗೆ ಕಲೆಯ ಮೆರಗು ನೀಡುವ ಹಾದಿ ಸುಗಮವಲ್ಲದಿದ್ದರೂ ಪ್ರಯತ್ನ ಪ್ರಮಾದ ಕಲಿಕೆಯಿಂದ ಅದನ್ನು ಸಿದ್ದಿಸಿಕೊಂಡರು. ವಿವಿಧ ಆಕಾರ, ಗಾತ್ರಗಳ ಎಲೆಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಒಣಗಿಸಿದ ನಂತರ ಅವುಗಳ ಮೇಲೆ ಪೆನ್ಸಿಲ್‍ನಿಂದ ಚಿತ್ರ ಬಿಡಿಸಿಕೊಂಡು ಸೂಜಿ, ಚಾಕು ಅಥವಾ ಕತ್ತರಿಗಳಿಂದ ಎಲೆಯನ್ನು ಸುಂದರ ಕಲಾಕೃತಿಯಾಗಿ ಮಾಡುತ್ತಾರೆ. ಹಾಗೆಯೇ ಅವುಗಳಿಗೆ ಸುಂದರ ಫ್ರೇಮ್ ಜೋಡಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
    ಪ್ರಕೃತಿಯ ಮಡಿಲು ಇವರ ಜೀವನಕ್ಕೆ ಆಧಾರವಾದ್ದರಿಂದ ಇವರ ಬಹತೇಕ ಎಲೆಯ ಕಲೆಯಲ್ಲಿ ಪರಿಸರ ಕಾಳಜಿ ಅಡಗಿದೆ. ಜೀವವೈವಿಧ್ಯತೆಯನ್ನು ಸಾರುವ ಅನೇಕ ಕಲಾಕೃತಿಗಳು ಜೀವತಳೆದಿವೆ.
    ಈಗಾಗಲೇ ಸಾವಿರಾರು ಎಲೆಗಳು ತಮ್ಮ ಮೇಲೆ ವಿವಿಧ ಚಿತ್ರಗಳನ್ನು ಮೂಡಿಸಿಕೊಂಡು ಅತ್ಯುತ್ತಮ ಕಲಾಕೃತಿಗಳಾಗಿ ಗೃಹಾಲಂಕಾರ ವಸ್ತುಗಳಾಗಿ ಶೋಭಿಸುತ್ತಿವೆ. ಇದನ್ನೇ ನಮ್ಮ ಪೂರ್ವಿಕರು “ಪ್ರಕೃತಿ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ” ಎಂದು ಹೇಳುತ್ತಿದ್ದ ಮಾತು ಈಗಲೂ ಸತ್ಯ ಅಲ್ಲವೇ?
                                                                                                 ಆರ್.ಬಿ.ಗುರುಬಸವರಾಜ

ಯುವ ಪಕ್ಷಿಪ್ರೇಮಿ

ಸೆಪ್ಟಂಬರ್ 2015ರ 'ಶಿಕ್ಷಣವಾರ್ತೆ'ಯಲ್ಲಿ ಪ್ರಕಟವಾದ ನನ್ನ ಲೇಖನ.

ಯುವ ಪಕ್ಷಿಪ್ರೇಮಿ ವಿಜಯ್ ಇಟ್ಟಿಗಿ


ಬಳ್ಳಾರಿ ಎಂದೊಡನೆ ನಿಮ್ಮ ಕಣ್ಮುಂದೆ ಹಾಯುವುದು ಗಣಿಯ ದೂಳು ಮಾತ್ರ. ಗಣಿ ಕುಖ್ಯಾತಿಗೆ ಹೆಸರುವಾಸಿಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲೀಗ ವಿದೇಶಿ ಹಕ್ಕಿಗಳ ಕಲರವ ಕೇಳುತ್ತಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಈಗ ಪಕ್ಷಿಧಾಮವಾಗಿ ಪರಿವರ್ತನೆಗೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣಕರ್ತರೆಂದರೆ 35 ವರ್ಷದ ಯುವಕ ವಿಜಯ್ ಇಟ್ಟಿಗಿಯವರು.
    ವಿಜಯ್ ಅವರು ಹಗರಿಬೊಮ್ಮನಹಳ್ಳಿ ತಾಲೂಕಿನ ಹಗರಿಕ್ಯಾದಿಗಿಹಳ್ಳಿಯವರು. ಓಡಾಟಕ್ಕೆ ಕಾರು, ವಾಸಕ್ಕೆ ಬಂಗಲೆ, ಮನೋರಂಜನೆಗೆ ಸ್ವಂತ ಚಿತ್ರಮಂದಿರ ಇದ್ದರೂ ಇವರ ಒಲವು ಪರಿಸರ ಸಂರಕ್ಷಣೆಯತ್ತ ತಿರುಗಿದ್ದು ಸೋಜಿಗ. ಕಾನೂನು ಪದವಿ ಪಡೆದ ವಿಜಯ್ ಅವರನ್ನು ಆಕರ್ಷಿಸಿದ್ದು ಪರಿಸರ ಮತ್ತು ಪಕ್ಷಿ ಸಂರಕ್ಷಣೆ. ಇದಕ್ಕೆ ಸ್ಪೂರ್ತಿ ನೀಡಿದ್ದು ತೇಜಸ್ವಿಯವರ ಬರಹಗಳು.
    ತುಂಗಭದ್ರಾ ಆಣೆಕಟ್ಟಿನ ಹಿನ್ನೀರ ಗ್ರಾಮಗಳಾದ ಅಂಕಸಮುದ್ರ, ಹಗರಿಕ್ಯಾದಿಗಿಹಳ್ಳಿ, ಬಾಚಿಗೊಂಡನಹಳ್ಳಿ, ತಂಬ್ರಹಳ್ಳಿ, ಶೀಗನಹಳ್ಳಿ, ಬನ್ನಿಗೋಳ, ಕೃಷ್ಣಾಪುರ, ಬಸರಕೋಡು ಮುಂತಾದ ಗ್ರಾಮಗಳಲ್ಲಿ ಅಲ್ಲೊಂದು ಇಲ್ಲೊಂದು ವಲಸೆ ಹಕ್ಕಿಗಳು ಬರುತ್ತಿದ್ದುದು ಸಾಮಾನ್ಯವಾಗಿತ್ತು. ಇದು ವಿಜಯ್ ಅವರ ಆಸಕ್ತಿಯನ್ನು ಕೆರಳಿಸಿತು. ಈ ಪ್ರದೇಶವನ್ನು ಪಕ್ಷಿಧಾಮವನ್ನಾಗಿ ನಿರ್ಮಿಸುವ ವಿಚಾರ ಮೊಳಕೆಯೊಡೆಯಿತು. ಅದಕ್ಕೆ ಅಬ್ದುಲ್ ಸಮದ್ ಕೊಟ್ಟೂರು, ಹುರಕಡ್ಲಿ ಶಿವಕುಮಾರ, ಪೊಂಪಯ್ಯ ಮುಂತಾದವರ ಮಾರ್ಗದರ್ಶನ ಮತ್ತು ಸಹಕಾರದಿಂದ ಯೋಜನೆ ರೂಪಿತವಾಯಿತು. ಪರಿಣಾಮವಾಗಿ ಅಂಕಸಮುದ್ರ ಈಗ ಪಕ್ಷಿಧಾಮವಾಗಿ ರೂಪುಗೊಳ್ಳುತ್ತಿದೆ.
    ಈ ಪ್ರದೇಶ ಪಕ್ಷಿಧಾಮವನ್ನಾಗಿಸಲು ವಿಜಯ್ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಅದರ ಫಲವಾಗಿ 178 ಜಾತಿಯ ಸಾವಿರಾರು ಹಕ್ಕಿಗಳು ಇಲ್ಲಿ ಬೀಡುಬಿಟ್ಟಿವೆ. ಅದರಲ್ಲಿ ಅಳಿವಿನಂಚಿಗೆ ಹತ್ತಿರವಾಗುತ್ತಿರುವ 11 ಜಾತಿಯ ಹಕ್ಕಿಗಳು ಮತ್ತು ಅಳಿವಿನಂಚಿನಲ್ಲಿರುವ ಲೆಸ್ಸರ್ ಅಡ್ಜಂಟ್ ಜಾತಿಯ ಹಕ್ಕಿಗಳು ಇಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ.
    ಸುತ್ತಲ ಹತ್ತಾರು ಹಳ್ಳಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಪ್ರಾಣಿ ಪಕ್ಷಿ ಭೇಟೆಯನ್ನು ನಿಲ್ಲಿಸಲು ವಿಜಯ್ ಶ್ರಮಿಸಿದ್ದಾರೆ. ಪ್ರತಿ ಹಳ್ಳಿಯಲ್ಲಿ ಉಪನ್ಯಾಸ, ವಿಚಾರಗೋಷ್ಠಿ, ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಭೇಟೆಯ ಅನಾಹುತಗಳನ್ನು ಮನವರಿಕೆ ಮಾಡುತ್ತಾ ಭವಿಷ್ಯದ ಯೋಜನೆಗೆ ಸಹಕಾರ ಕೋರಿದರು. ಅದಕ್ಕೆ ಗ್ರಾಮಸ್ಥರ ಸ್ಪಂದನೆಯೂ ದೊರೆಯಿತು. ಪ್ರತಿ ಹಳ್ಳಿಯಲ್ಲಿಯೂ ಒಂದೊಂದು ಯುವಕರ ಪಡೆ ಸಿದ್ದವಾಯಿತು. ಪ್ರಾರಂಭದಲ್ಲಿ ಅಂಕಸಮುದ್ರ ಕೆರೆ ಅಭಿವೃದ್ದಿ ಯೋಜನೆ ಕೈಗೆತ್ತಿಕೊಂಡರು. ಸಾವಿರಾರು ಕರಿಜಾಲಿ ಸಸಿಗಳನ್ನು ಬೆಳೆಸಿದರು. ಈಗ ಅವುಗಳೆಲ್ಲಾ ಮರಗಳಾಗಿವೆ. ಈ ಮರಗಳೇ ಪಕ್ಷಿಗಳ ಆಶ್ರಯ ತಾಣಗಳಾಗಿವೆ. ಮಾಹಿತಿ ನೀಡಲು ಇಬ್ಬರು ಸ್ವಯಂ ಸೇವಕರನ್ನು ನೇಮಿಸಿದ್ದು, ಅವರಿಗೆ ತಮ್ಮ ಜೇಬಿನಿಂದ ಕೂಲಿ ನೀಡುತ್ತಿದ್ದಾರೆ.
    ಈ ಹತ್ತಾರು ಹಳ್ಳಿಗಳ ತುಂಗಭದ್ರ ನದಿದಂಡೆಯ ಒಟ್ಟು 214 ಎಕರೆ ಪ್ರದೇಶದಲ್ಲಿ ಮರಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕಾಗಿ  ಆ ಹಳ್ಳಿಗಳ ಶಾಲಾ ಮಕ್ಕಳಿಂದ ಗಿಡನೆಡಿಸಿ ಅವುಗಳ ಸಂರಕ್ಷಣೆಯ ಹೊಣೆ ಹೊತ್ತಿದ್ದಾರೆ.
    ತಾಲೂಕಿನ ಅನೇಕ ಶಾಲೆಗಳಿಗೆ ಭೇಟಿನೀಡಿ ಮಕ್ಕಳಿಗೆ ಪಕ್ಷಿಗಳ ಬಗ್ಗೆ, ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ನೀಡುತ್ತಿದ್ದಾರೆ. ಮಧ್ಯೆ ಮಧ್ಯೆ ಮಕ್ಕಳಿಗೆ ಪಕ್ಷಿಗಳ ಬಗ್ಗೆ ಪ್ರಶ್ನಿಸುತ್ತಾ ಸರಿ ಉತ್ತರ ನೀಡಿದವರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಾ ಮಕ್ಕಳ ಪ್ರೀತಿಗಳಿಸಿದ್ದಾರೆ.
    ಇವರು ಹೊಸವರ್ಷವನ್ನು ವಿಶೇಷವಾಗಿ ಆಚರಿಸುತ್ತಾರೆ. ಅಂದು ಪಂಜರದಲ್ಲಿರುವ ಪಕ್ಷಿಯನ್ನು ಹುಡುಕಿಕೊಂಡು ಹೋಗುತ್ತಾರೆ. ಮಕ್ಕಳ ಸಮ್ಮುಖದಲ್ಲಿ ಅದನ್ನು ಬಂಧಮುಕ್ತಗೊಳಿಸಿ ಸಂಭ್ರಮಿಸುತ್ತಾರೆ. ಆ ಮೂಲಕ ಮಕ್ಕಳಲ್ಲಿ ಜಾಗೃತಿಯ ಬೀಜ ಬಿತ್ತುತ್ತಾರೆ. ಜೊತೆಗೆ ಕಾಳಸಂತೆಯಲ್ಲಿ ನಡೆಯುವ ನಕ್ಷತ್ರ ಆಮೆ, ನೀರನಾಯಿ, ಮೊಲ, ಕಾಡುಹಂದಿ, ಚಿಪ್ಪುಹಂದಿ, ಹಾವುಗಳು ಮತ್ತು  ಕೆಲವು ಜಾತಿಯ ಪಕ್ಷಿಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮಾರಾಟವನ್ನು ನಿಲ್ಲಿಸಿದ್ದಾರೆ.
    “ಸ್ಥಳೀಯ ಜನ ಸಮುದಾಯಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದಿದ್ದಲ್ಲಿ ಸಂರಕ್ಷಣೆ ಚಟುವಟಿಕೆಗಳು ಸಾಧ್ಯವಿಲ್ಲ” ಎಂಬುದು ವಿಜಯ್ ಅವರು ಕಂಡುಕೊಂಡ ಸತ್ಯ. ಅದಕ್ಕಾಗಿ ಸರ್ಕಾರದ ಬೆಂಬಲ ಪಡೆಯುವ ಮೊದಲು ಸ್ಥಳೀಯ ಸಮುದಾಯಗಳ ಸಹಕಾರ ಪಡೆದಿದ್ದಾರೆ.
    ‘ಜೀವವೈವಿಧ್ಯ ಸಂರಕ್ಷಣೆ ಬಹುಕಾಲದವರೆಗೆ ಉಳಿಯಬೇಕಾದರೆ ಜೀವ ಪರಿಸರ ಸುರಕ್ಷತೆ ಮತ್ತು ಜೀವನೋಪಾಯ ಪರಿಗಣಿಸಬೇಕು. ಜನಸಮುದಾಯದ ಹಕ್ಕುಗಳನ್ನು ಖಾತ್ರಿಗೊಳಿಸಿದಾಗ ಮಾತ್ರ ಜೀವವೈವಿಧ್ಯ ಉಳಿಸಲು ಸಾಧ್ಯ’ ಎನ್ನುತ್ತಾರೆ ವಿಜಯ್. ಅದಕ್ಕಾಗಿ ಮಕ್ಕಳು ಮತ್ತು ಯುವಕರಿಗೆ ಶಿಕ್ಷಣ ಮತ್ತು ಜಾಗೃತಿ ಚಟುವಟಿಕೆಗಳನ್ನು ಕೇಂದ್ರೀಕರಿಸಿದ್ದಾರೆ.
    ಇವರ ಈ ಕಾರ್ಯಕ್ಕೆ  ಕುಟುಂಬ ನೀಡಿದ ಸಹಕಾರವನ್ನು ನೆನೆಯುತ್ತಾರೆ. ಈ ಪ್ರದೇಶಕ್ಕೆ ಅನೇಕ ವಿದೇಶಿ ಪಕ್ಷಿತಜ್ಞರು ಭೇಟಿ ನೀಡಿದ್ದಾರೆ. ಅವರಿಗೆಲ್ಲಾ ವಿಜಯ್ ಮಾರ್ಗದರ್ಶಕರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಪಕ್ಷಿ ಗಣತಿಯಲ್ಲಿ ತಜ್ಞರೊಂದಿಗೆ ಭಾಗವಹಿಸಿದ ಅನುಭವವಿದೆ. ಹೀಗಾಗಿ ಸಾವಿರಾರು ಪಕ್ಷಿಗಳ, ಪ್ರಾಣಿಗಳ, ಪರಿಸರದ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ. ಇಷ್ಟೆಲ್ಲಾ ಸಾಧನೆಯ ನಡುವೆಯೂ ಚಿತ್ರಮಂದಿರ ಹಾಗೂ ಜಮೀನಿನ ಹೊಣೆಗಾರಿಕೆಯನ್ನು ತಪ್ಪಿಸಿಕೊಂಡಿಲ್ಲ. ಈ ಎಲ್ಲಾ ಚಟುವಟಕೆಗಳಿಂದ ವಿಜಯ್ ಅವರು ಇಂದಿನ ಯುವಕರಿಗಿಂತ ಭಿನ್ನವಾಗಿದ್ದಾರೆ. ವಿಜಯ್ ಅವರನ್ನು ಸಂಪರ್ಕಿಸಲು 9945296077 ಕ್ಕೆ ಕರೆಮಾಡಿ.
                                                                                                 ಆರ್.ಬಿ.ಗುರುಬಸವರಾಜ.

ಜೀವನ ಪರೀಕ್ಷೆ

ಸೆಪ್ಟಂಬರ್ 2015ರ 'ಹೊಸತು' ಪತ್ರಿಕೆಯಲ್ಲಿ ಪ್ರಕಟವಾದ ಸತ್ಯಕತೆ.

                    ಜೀವನ ಪರೀಕ್ಷೆ  (ಸತ್ಯಕ್ಕೆ ಒಂಚೂರು ಬಣ್ಣ)

    ಅಂದು ಬೈಕ್‍ನಲ್ಲಿ ಶಾಲೆಗೆ ಹೊರಟ ನನಗೆ 7ನೇ ತರಗತಿ ಓದುತ್ತಿರುವ ಸುಮಿತ್ರ ಕೈಯಲ್ಲಿ ಬುತ್ತಿ ಹಿಡಿದು ಎದುರಿಗೆ ಬಂದಳು. ನನ್ನನ್ನು ನೋಡಿದ್ದೇ ತಡ ರಸ್ತೆ ಬಿಟ್ಟು ಹೊಲಗಳಲ್ಲಿ ಓಡತೊಡಗಿದಳು. ಬೈಕನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಅವಳ ಹಿಂದೆ ನಾನೂ ಓಡುವ ಪ್ರಯತ್ನ ಮಾಡಿದೆ. ಆದರೆ ಅವಳನ್ನು ಹಿಡಿಯುವುದು ಸಾಧ್ಯವಿರಲಿಲ್ಲ. ರಸ್ತೆಯಲ್ಲಿ ಸಂಚರಿಸುವವರೆಲ್ಲ ಇದನ್ನು ತಮಾಷೆಯಾಗಿ ನೋಡುತ್ತಿದ್ದರು. ಒಂದು ಕ್ಷಣ ನನಗೆ ನಾಚಿಕೆ ಎನಿಸಿತು.
    “ಯಾಕ್ರೀ ಮೇಷ್ಟ್ರೇ, ಅವಳ ಹಿಂದೆ ಓಡ್ತೀರಾ?” ಎಂದು ಯಾರೋ ಪ್ರಶ್ನಿಸಿದರು. ಏನು ಹೇಳಬೇಕೋ ತೋಚಲಿಲ್ಲ.
    ಕೊನೆಗೂ ದೈರ್ಯ ಮಾಡಿ “ನೋಡ್ರೀ ಇವಳು ಕಳೆದ ಎರಡು ತಿಂಗಳಿಂದ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ. ಒಂದು ದಿನ ಬಂದರೆ ಒಂದು ವಾರ ಶಾಲೆಗೆ ಬರೋದಿಲ್ಲ. ಕಾರಣ ಕೇಳಿದರೆ ಏನೋ ಒಂದು ನೆಪ ಹೇಳಿ ನುಣುಚಿಕೊಳ್ತಾಳೆ” ಎಂದೆ.
    “ಅದ್ಕ್ಯಾಕೆ ಅವ್ಳ ಹಿಂದೆ ಓಡ್ಬೇಕು. ಅವ್ಳ ಅಪ್ಪನಿಗೆ ಹೇಳಿದ್ರೆ ಕಳಿಸ್ತಾನೆ. ಇಲ್ಲಾಂದ್ರೆ ನಾವೇ ಹೇಳಿ ಕಳ್ಸೋ ವ್ಯವಸ್ಥೆ ಮಾಡ್ತೀವಿ, ನೀವೀಗ ಹೊಂಡ್ರಿ” ಎಂದರು ಅಲ್ಲಿದ್ದವರಲ್ಲಿ ಒಬ್ಬರು.
    “ಅವ್ಳ ಅಪ್ಪಂಗೆ ಹೇಳಿ ಹೇಳಿ ಸಾಕಾಯ್ತು ಬಿಡ್ರಿ. ಈಗ ನೀವ ಏನಾರ ಹೇಳಿ ಕಳಿಸಬೇಕು ನೋಡ್ರೀ. ನಿಮಗೆ ಪುಣ್ಯ ಬರುತ್ತೆ. ಹೆಣ್ಣು ಮಗು. ಓದಿ ನಾಲ್ಕಕ್ಷರ ಕಲಿತರೆ ಮುಂದೆ ಒಳ್ಳೇದಾಗುತ್ತೆ” ಎಂದು ಉಪದೇಶ ನೀಡಿ ಬೈಕನ್ನೇರಿ ಶಾಲೆಗೆ ಹೊರಟೆ.
    ಅಲ್ಲಿದ್ದವರೆಲ್ಲಾ ಹೇಳಿದ್ದರಿಂದಲೋ ಏನೋ ಮರುದಿನ ಅಂಜುತ್ತಾ, ಅಳುಕುತ್ತಾ ಶಾಲೆಗೆ ಬಂದ ಸುಮಿತ್ರಳನ್ನು ಪ್ರೀತಿಯಿಂದ ಸ್ವಾಗತಿಸಿದೆ. ಆದರೂ ಅವಳ ಮನದ ಮೂಲೆಯಲ್ಲಿ ಭಯ, ಆತಂಕಗಳು ಮನೆ ಮಾಡಿದ್ದನ್ನು ಗಮನಿಸಿದೆ. ತರಗತಿಯಲ್ಲಿ ಹಾಜರಿ ಹೇಳಿದ ನಂತರ ಹಾಗೆಯೇ ನಿಂತುಕೊಂಡಳು. ಶಾಲೆ ಬಿಟ್ಟಿದ್ದಕ್ಕೆ ಕಾರಣ ಕೇಳಿ ಎಲ್ಲಾ ಮಕ್ಕಳೆದುರು ಅವಮಾನ ಮಾಡುತ್ತಾರೆ ಎಂಬ ಭಯ ಆವರಿಸಿತ್ತು. ಆ ಬಗ್ಗೆ ಏನೂ ಕೇಳದೇ ಕುಳಿತುಕೊಳ್ಳಲು ಹೇಳಿದಾಗ ಅವಳಿಗೆ ಕೊಂಚ ಧೈರ್ಯ ಬಂದಿತ್ತು. ತರಗತಿ ಮುಗಿಸಿದ ನಂತರ ಸುಮಿತ್ರಳಿಗೆ, ವಿರಾಮ ವೇಳೆಯಲ್ಲಿ ಸಿಬ್ಬಂದಿ ಕೊಠಡಿಗೆ ಬರಲು ಹೇಳಿ ವಾಪಾಸಾದೆ.
    ಅಲ್ಪವಿರಾಮದ ಘಂಟೆ ಬಾರಿಸಿತು. ಸುಮಿತ್ರಳ ಬರುವನ್ನು ನಿರೀಕ್ಷಿಸಿದ್ದೆ. ಆದರೆ ನನ್ನ ನಿರೀಕ್ಷೆ ಹುಸಿಯಾಯಿತು. ಅವಳು ಬರಲಿಲ್ಲ. ನನ್ನಲ್ಲಿ ಚಡಪಡಿಕೆ ಶುರುವಾಯಿತು. ಇದನ್ನು ಗಮನಿಸಿದ ಮುಖ್ಯಗುರುಗಳು ನನ್ನ ಚಡಪಡಿಕೆಗೆ ಕಾರಣ ಕೇಳಿದರು. ವಿಷಯವನ್ನು ವಿವರಿಸಿದೆ. ಅವರೂ ಕೂಡಾ ಅವಳನ್ನು ವಿಚಾರಿಸುವ ಬಗ್ಗೆ ಮನಸ್ಸು ಮಾಡಿದರು ಮತ್ತು ಬೇರೆ ವಿದ್ಯಾರ್ಥಿಗಳಿಂದ ಅವಳನ್ನು ಬರ ಹೇಳಿದರು.
    ಮುಖ್ಯಗುರುಗಳ ಕರೆ ಎಂದೊಡನೆ ಅಂಜುತ್ತಾ ಮೆಲ್ಲನೆ ಬಾಗಿಲ ಬಳಿ ಬಂದು ‘ಮೆ ಕಮಿನ್ ಸರ್’ ಎಂದಳು. ‘ಎಸ್’ ಎಂದೆ. ಒಳಗೆ ಬಂದಳು. ಮುಖದಲ್ಲಿ ಭಯ, ಆತಂಕ, ತಪ್ಪಿತಸ್ಥ ಭಾವನೆಗಳು ತುಂಬಿಕೊಂಡಿದ್ದವು.
    “ಯಾಕೆ ನೀನು ಸರಿಯಾಗಿ ಶಾಲೆಗೆ ಬರುತ್ತಿಲ್ಲ?” ಎಂಬ ಮುಖ್ಯಗುರುಗಳ ಪ್ರಶ್ನೆಯಿಂದ ಬೆಚ್ಚಿದಳು. ಉತ್ತರಿಸಲು ತತ್ತರಿಸುತ್ತಿದ್ದಳು. ಅವಳಿಗೆ ಧೈರ್ಯ ನೀಡಲೇಬೇಕೆಂದು ನಿರ್ಧರಿಸಿ “ಅಲ್ಲಮ್ಮಾ ಕಲಿಯಲು ನಿನಗೆ ಏನಾದರೂ ತೊಂದರೆ ಇದೆಯಾ? ಅಥವಾ ಪಾಠ ಅರ್ಥವಾಗುತ್ತಿಲ್ಲವೋ? ಏನು ಸಮಾಚಾರ” ಎಂದು ಪ್ರಶ್ನಿಸಿದೆ. ಅದ್ಯಾವುದೂ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದಳು.
    “ಮನೆಯಲ್ಲಿ ಏನಾದರೂ ತೊಂದರೆ ಇದೆಯಾ?” ಎಂದು ಪ್ರಶ್ನಿಸಿದ್ದೇ ತಡ ಅವಳ ಕಣ್ಣೀರಿನ ಕಟ್ಟೆ ಒಡೆದೇ ಹೋಯಿತು. ಗೊಳೋ ಎಂದು ಅಳಲು ಶುರುಮಾಡಿದಳು.
    “ಏನಾಯ್ತು, ಯಾಕೆ ಅಳ್ತೀಯಮ್ಮಾ” ಎಂದು ಮುಖ್ಯಗುರುಗಳು ಕೇಳಿದಷ್ಟೂ ಅವಳ ಅಳು ಹೆಚ್ಚಾಯಿತೇ ಹೊರತು ಕಾರಣ ಏನೆಂದು ಹೇಳಲಿಲ್ಲ. ಅಸ್ಟೊತ್ತಿಗೆ ಮಹಿಳಾ ಶಿಕ್ಷಕಿಯರೂ  ಬಂದರು. ಅವರಿಗೂ ಏನೊಂದೂ ಅರ್ಥವಾಗದ ಆಶ್ಚರ್ಯ. ಅತ್ತೂ ಅತ್ತೂ ಮನದೊಳಗಿನ ಭಾರ ಕಡಿಮೆಯಾದಂತಾಯ್ತು. ಅಳು ನಿಧಾನವಾಗಿ ಮಾತಿನ ಸ್ವರೂಪ ಪಡೆದುಕೊಂಡಿತು. ಅವಳ ಅಂತರಂಗದ ಕಥೆ ಬಿಚ್ಚಿಕೊಂಡಿತು.
    “ಸಾರ್, ನಿಮಗೆಲ್ಲಾ ತಿಳಿದ್ಹಾಂಗೆ ನಮ್ಮಪ್ಪ ನಮ್ಮವ್ವಂಗೆ ನಾವು ನಾಲ್ಕು ಜನ ಮಕ್ಳು. ಅದ್ರಾಗ ನಾನ ದೊಡ್ಡವಳು. ನಮ್ಮಪ್ಪ ಮೂಗ. ನಮ್ಮವ್ವನೇ ನಮಗೆಲ್ಲಾ ದಿಕ್ಕು ದೆಸೆ ಆಗಿದ್ದಳು. ಆದರೆ ಕಳೆದ ಮೂರು ವರ್ಷಗಳ ಆದ ಟ್ರ್ಯಾಕ್ಟರ್ ಆಕ್ಸಿಡೆಂಟ್‍ನಲ್ಲಿ ನಮ್ಮವ್ವ ಸತ್ತುಹೋದಳು. ನಮಗೆಲ್ಲಾ ಆಸರೆಯಾಗಿದ್ದ ನಮ್ಮವ್ವ ಸತ್ತು ಹೋದಾಗಿಂದ ನಮ್ಮಪ್ಪನೂ ಸರ್ಯಾಗಿ ದುಡೀತಿಲ್ಲ. ನನ್ನ ಇಬ್ಬರು ತಂಗಿ ಒಬ್ಬ ತಮ್ಮನನ್ನು ಸಾಕೋರು ಯಾರೂ ಇಲ್ಲ ಸಾರ್. ಅದ್ಕಾಗಿ ನಾನೇ ಕೂಲಿ ಮಾಡ್ತಾ ಇದ್ದೀನಿ. ನನ್ನ ಹಣೆ ಬರಹದಲ್ಲಿ ಓದೋದು ಬರ್ದಿಲ್ಲ ಅಂತ ಕಾಣ್ತದ. ಕೊನೆಗೆ ನನ್ನ ತಮ್ಮ ತಂಗಿಯಂದಿರಾದ್ರೂ ಓದ್ಲಿ ಅಂತ ಅವ್ರನ್ನ ಸಾಲಿಗೆ ಕಳಿಸ್ತೀನಿ. ನಿನ್ನೆ ನೀವು ನನ್ನನ್ನ ಹಿಂಬಾಲ ಹತ್ತಿದ್ದ ನೋಡಿ ನನಗೂ ವಿಷಯ ತಿಳಿಸಲೇಬೇಕು ಅಂತ ಅನ್ನಿಸ್ತು. ಅದ್ಕ ಇವತ್ತು ಸಾಲಿಗೆ ಬಂದೀನಿ. ನಾಳೆ ಮತ್ತೆ ನಾನು ಕೂಲಿ ಕೆಲ್ಸಕ್ಕೆ ಹೋಗಲೇಬೇಕು. ಇಲ್ಲಾಂದ್ರ ನಮ್ಮ ಜೀವ್ನ ನಡೆಯೋದಿಲ್ಲ” ಎಂದು ತನ್ನ ಗಟ್ಟಿ ನಿರ್ಧಾರವನ್ನು ಹೇಳಿಯೇಬಿಟ್ಟಳು.
    ತಾಯಿ ಸತ್ತ ಸುದ್ದಿಯನ್ನಷ್ಟೇ ತಿಳಿದಿದ್ದ ನಮಗೆ ತಂದೆ ಸರಿಯಾಗಿ ದುಡಿಯುತ್ತಿಲ್ಲ, ಮಕ್ಕಳನ್ನು ಕಾಪಾಡುತ್ತಿಲ್ಲ ಎಂಬ ವಿಷಯ ನಮ್ಮನ್ನು ವಿಚಲಿತರನ್ನಾಗಿಸಿತು.
    “ಅಲ್ಲಮ್ಮ, ನಿಮ್ಮವ್ವ ಸತ್ತು ಮೂರು ವರ್ಷಾತು. ಆಗಿನಿಂದಲೂ ಸರಿಯಾಗಿ ಶಾಲೆಗೆ ಬರುತ್ತಿದ್ದಾಕಿ ಈಗೇಕೆ ಸರಿಯಾಗಿ ಬರುತ್ತಿಲ್ಲ?” ಎಂದರು ಶಿಕ್ಷಕರೊಬ್ಬರು.
    “ಹೌದು ಸಾರ್, ಆಗ ನಾನು ಧಣ್ಯರ ಮನ್ಯಾಗ ಕೆಲಸಕ್ಕೆ ಹೋಕಿದ್ದೆ. ದಿನಾಲೂ ಬೆಳಿಗ್ಗೆ ಮತ್ತು ಸಂಜೆ ಅವರ ಮನೆ ಕೆಲಸ ಮಾಡ್ತಿದ್ದೆ. ಸಾಲಿ ಟೈಮ್ನಾಗ ಮಾತ್ರ ಸಾಲಿಗೆ ಬರ್ತಿದ್ದೆ. ಅವ್ರು ಕೊಡೋ ಕೂಲಿಯಿಂದ ಹೆಂಗೋ ಜೀವನ ನಡೀತಿತ್ತು. ಆದ್ರ,,,, ಅವತ್ತೊಂದಿನ ಧಣ್ಯರ ಮನ್ಯಾಗ ಅವ್ರ ಪರ್ಸ ಕಳುವಾತು. ಅವ್ರೆಲ್ರಿಗೂ ನನ್ನ ಮ್ಯಾಲೆ ಅನುಮಾನ ಬಂತು. ಎಲ್ರೂ ನನ್ನನ್ನ ವಿಚಾರಿದ್ರು. ನೀನೇ ಕಳ್ಳಿ ಅಂದ್ರು. ನನ್ನ ಹೊಡೆಯೋಕೂ ಪ್ರಯತ್ನ ಮಾಡಿದ್ರು. ಅಲ್ಲಿಂದ ನಾನು ತಪ್ಸಿಕೊಂಡು ಮನೆ ಸೇರಿದೆ. ಆಮ್ಯಾಲೆ ನಮ್ಮಪ್ಪನ್ನ ಕರೆಸಿ ವಿಚಾರಿದ್ರು ಅಂತ ಗೊತ್ತಾತು. ಆತ ಮೊದ್ಲೇ ಮೂಗ, ಅದೇನೋ ಹೇಳಿದ್ನೋ ಏನೋ? ನಾನು ಮತ್ತೆ  ಅವ್ರ ಮನೆ ಕಡೆ ಸುಳಿಲಿಲ್ಲ. ನನಗೆ ಹಣದ ಅವಶ್ಯಕತೆ ಇತ್ತು ನಿಜ. ಆದರೆ ಕಳ್ಳತನ ಮಾಡಿ ಹಣ ಸಂಪಾದ್ಸೋ ಕೆಟ್ಟ ಬುದ್ದ ಇರ್ಲಿಲ್ಲ. ಮತ್ತೆ ನಾನು ಕೂಲಿ ಹುಡುಕಿ ಹೊರಟೆ. ಮೊದಮೊದ್ಲು ಸಣ್ಣವಳು ಅಂತ ಯಾರೂ ನನ್ನ ಕೆಲಸಕ್ಕೆ ಸೇರಿಸ್ಕೊಳಿಲ್ಲ. ಯಾರೋ ಒಬ್ಬ ಪುಣ್ಯಾತ್ಮ ನನ್ನ ಪರಿಸ್ಥಿತಿ ತಿಳಿದು ಕೆಲಸಕ್ಕೆ ಸೇರಿಸಿಕೊಂಡ್ರು. ಈಗ ಕೂಲಿನೇ ನನ್ಗೆ ಗತಿ” ಎಂದು ತನ್ನ ಬದುಕಿನ ಹೋರಾಟವನ್ನು ನಮ್ಮ ಮುಂದೆ ಇಟ್ಟಳು.
    “ನೀನು ನಿಜವಾಗ್ಲೂ ಪರ್ಸ ಕದ್ದಿದ್ಯಾ? ಎಂದು ಶಿಕ್ಷಕಿಯೊಬ್ಬರು ಪ್ರಶ್ನಿಸಿದರು.
    “ಇಲ್ಲ ಮೇಡಂ, ಅದನ್ನ ಬೇರೆ ಇನ್ನೊಬ್ರು ಕದ್ದಿದ್ರಂತೆ. ಒಂದು ವಾರದ ನಂತರ ವಿಷಯ ಗೊತ್ತಾತಂತೆ. ಆಮೇಲೆ ಅವ್ರು ನಮ್ಮನಿಗೆ ಬಂದು ‘ಪರ್ಸ ಕದ್ದಿದ್ದು ನೀನಲ್ಲ. ಬೇರೆಯವ್ರು ಅಂತ ಗೊತ್ತಾತು. ಸುಮ್ನೆ ನಿನ್ನ ಮ್ಯಾಲೆ ಅನುಮಾನ ಪಟ್ವಿ, ನಿನ್ಗೆ ತೊಂದ್ರೆ ಕೊಟ್ವಿ. ನೀನು ತುಂಬಾ ಒಳ್ಳೇ ಹುಡುಗಿ. ಪುನಃ ನಮ್ಮನಿ ಕೆಲಸಕ್ಕೆ ಬಾ’ ಅಂತ ಕರೆಯೋಕೆ ಬಂದ್ರು. ನನಗೂ ರೋಷ, ಕಿಚ್ಚು, ಸ್ವಾಭಿಮಾನ ಅನ್ನೋದು ಇತ್ತು. ಅದ್ಕಾಗಿ ನಾನು ಖಂಡಿತವಾಗಿ ಬರೋದಿಲ್ಲ ಅಂತ ಹೇಳಿ ಕಳ್ಸಿದೆ. ನಾನು ಮಾಡಿದ್ದು ತಪ್ಪಾ! ಹೇಳ್ರೀ ಮೇಡಂ? ಎಂದಳು.
    ಅವಳ ಮಾತುಗಳಲ್ಲಿ ದಿಟ್ಟತನವಿತ್ತು. ಕಂಗಳಲ್ಲಿ ಅವಮಾನದ ಪ್ರತೀಕಾರ ಇತ್ತು. ಸಾಧಿಸುವ ಛಲವಿತ್ತು. ಚಿಕ್ಕ ವಯಸ್ಸಿನಲ್ಲಿ ಅವಳು ಅನುಭವಿಸಿದ ಅವಮಾನ, ಯಾತನೆÀ, ಹೋರಾಟ, ತಮ್ಮ ತಂಗಿಯರ ಭವಿಷ್ಯದ ಕಾಳಜಿ, ಇವುಗಳ ಮುಂದೆ ನಾವು ಕುಬ್ಜರಾದೆವು. ಆದರೂ ಅವಳ ಭವಿಷ್ಯವನ್ನು ಉತ್ತಮಗೊಳಿಸುವ ಜವಾಬ್ದಾರಿ ನಮ್ಮ ಮೇಲಿತ್ತು.
    ಅದಕ್ಕಾಗಿ “ಏನಾದರೂ ಆಗಲಿ, ಈಗ ಪರೀಕ್ಷೆಗಳು ಸಮೀಪಿಸುತ್ತಿವೆ. ಕೊನೆಗೆ ಪರೀಕ್ಷೆಗಾದ್ರೂ ಹಾಜರಾಗು” ಎಂದರು ತರಗತಿ ಶಿಕ್ಷಕರು.
    “ಸಾರ್, ಪರೀಕ್ಷೆ ಬರೆಯೋಕೆ ನನ್ನ ತಲೇಲಿ ಈಗ ಏನೂ ಉಳಿದಿಲ್ಲ. ಏನಂತ ಬರೀಲಿ” ಎಂದಳು.
    “ನೀನು ಏನೂ ಬರೀದಿದ್ರೂ ಚಿಂತೆಯಿಲ್ಲ. ಪರೀಕ್ಷೆಗೆ ಹಾಜರಾದ್ರೆ ಸಾಕು. ನಿನ್ನ ಪಾಸ್ ಮಾಡೋ ಜವಾಬ್ದಾರಿ ನಮ್ದು” ಎಂದರು ಮುಖ್ಯಗುರುಗಳು. ಏಕೆಂದರೆ ಅವಳು ಹೆಣ್ಣು ಮಗುವಾಗಿದ್ದು ಶಿಕ್ಷಣದಿಂದ ವಂಚಿತಳಾಗಬಾರದು ಎಂಬುದು ಅವಳ ಕಾಳಜಿಯಾಗಿತ್ತು.
    “ಇಲ್ಲ ಸಾರ್, ನಾನು ಈ ಪರೀಕ್ಷೆ ಪಾಸು ಮಾಡಿ ಏನು ಮಾಡ್ಬೇಕು? ಸದ್ಯ ನನ್ಗೆ ಜೀವನವೇ ಒಂದು ದೊಡ್ಡ ಪರೀಕ್ಷೆ. ಅದ್ರಲ್ಲಿ ನಾನು ಪಾಸಾಗಲೇ ಬೇಕು. ನನ್ನ ತಮ್ಮ ತಂಗಿಯರ ಭವಿಷ್ಯವನ್ನು ಉತ್ತಮ ಪಡಿಸಲೇಬೇಕು. ಇದಕ್ಕೆ ನಿಮ್ಮ ಸಹಕಾರ ನನ್ಗೆ ಬೇಕು. ದಯವಿಟ್ಟು ಈಗ ನನ್ಗೆ ಹೋಗಲು ಅಪ್ಪಣೆ ಕೊಡಿ” ಎಂದು ತನ್ನ ನಿರ್ಧಾರವನ್ನು ತಿಳಿಸಿದಳು.
    ಸದ್ಯ ಅವಳಿಗೆ ಔಪಚಾರಿಕ ಶಿಕ್ಷಣ ಬೇಕಿರಲಿಲ್ಲ. ಅಗಾಧ ಬದುಕಿನ ಅನೌಪಚಾರಿಕ ಶಿಕ್ಷಣದ ಅವಶ್ಯಕತೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ತಂಗಿಯರ ಭವಿಷ್ಯದ ಕನಸನ್ನು ಸಾಕಾರಗೊಳಿಸಬೇಕಾಗಿತ್ತು. ಅವಳ ನಿರ್ಧಾರ ಬದಲಿಸಲು ಶಿಕ್ಷಕರಿಂದಾಗಲೀ ವ್ಯವಸ್ಥೆಯಿಂದಾಗಲೀ ಸಾಧ್ಯವಿರಲಿಲ್ಲ. ಏಕೆಂದರೆ ಅವಳ ನಿರ್ಧಾರ ಅಚಲವಾಗಿತ್ತು.
                                                                                               ಆರ್.ಬಿ.ಗುರುಬಸವರಾಜ