October 19, 2015

'ಕೊಸಿಮೊ' ಪುಸ್ತಕ ಪರಿಚಯ

ಅಕ್ಟೋಬರ್ 2015 ರ "ಟೀಚರ್" ಮಾಸಪತ್ರಿಕೆಯಲ್ಲಿ ಪ್ರಕಟವಾದ 'ಕೊಸಿಮೊ' ಪುಸ್ತಕ ಪರಿಚಯ

‘ಕೊಸಿಮೊ’ ಎಂಬ ಮರದ ಮೇಲಿನ ಪ್ರಪಂಚ

    ಸಮಕಾಲಿನ ತಲ್ಲಣಗಳನ್ನು ವಾಸ್ತವವಾದಿ ನೆಲೆಗಟ್ಟಿನ ಮೇಲೆ ರೂಪಿಸಿ, ಅಕ್ಷರ ರೂಪು ನೀಡುವುದು ಬಹು ಕಷ್ಟದ ಕೆಲಸ. ಆದಾಗ್ಯೂ ಕೆಲ ಲೇಖಕರು ಅಂತಹ ಸಾಹಸಕ್ಕೆ ಕೈ ಹಾಕುವುದುಂಟು. ಅಂತಹ ಸಾಹಸಿಗ ಲೇಖಕರ ಸಾಲಿನಲ್ಲಿ ನಿಲ್ಲುವ ಲೇಖಕರೆಂದರೆ ಇಟಲಿಯ ‘ಇಟಾಲೊ ಕಾಲ್ವಿನೊ’ ಅವರು.
    ಇಟಾಲೊ ಕಾಲ್ವಿನೊ ಎಂತಹ ಬರಹಗಾರರು ಎಂಬುದನ್ನು ನಿರ್ಧರಿಸಲು ಅವರ ‘ಬ್ಯಾರೆನ್ ಇನ್ ದಿ ಟ್ರೀಸ್’(ಕೊಸಿಮೊ) ಕೃತಿಯೊಂದೇ ಸಾಕು. ಅವರ ಇಡೀ ಪರಿಶ್ರಮವನ್ನು ಶಬ್ದಗಳ ಲಯಗಾರಿಕೆಯನ್ನು ಪಾತ್ರಗಳ ಮೂಲಕ ನೀಡುವ ಅವರ ತುಡಿತ-ಮಿಡಿತಗಳನ್ನು ಎಂತಹವರೂ ಅರ್ಥಮಾಡಿಕೊಳ್ಳಬಹುದು.
    ಕೊಸಿಮೊ ಅವರ ಅದ್ಬುತ ಕಾದಂಬರಿಗಳಲ್ಲಿ ಒಂದು. ಪ್ರಸ್ತುತ ಕಾದಂಬರಿಯ ಕಥಾವಸ್ತು ವಿಭಿನ್ನವೂ ವಿಶೇಷವೂ ಆಗಿದೆ. ಬಹುತೇಕ ಲೇಖಕರು ನೆಲದ ಮೇಲಿನ ಮಾನವನ ಕುರಿತು ಕಥೆ ಕಾದದಂಬರಿ ರಚಿಸಿದರೆ ಕಾಲ್ವಿನೊ ಅವರು ಮರದ ಮೇಲಿನ ಮಾನವನ ಕುರಿತು ಕಾದಂಬರಿ ರಚಿಸಿರುವುದೇ ಇದರ ವಿಶೇಷತೆ.
    ಇಲ್ಲಿ ರಮ್ಯತೆ ಇದೆ, ವಾಸ್ತವಿಕತೆ ಇದೆ, ರಂಜನೀಯತೆ ಇದೆ, ಸೃಜನಶೀಲತೆ ಇದೆ. ಜೊತೆಗೆ ಪರಿಸರ ಕಾಳಜಿಯೂ ಕೂಡಾ ಇದೆ. ಇಲ್ಲಿ ಏನಿದೆ? ಎನ್ನುವುದಕ್ಕಿಂತ ಏನಿಲ್ಲ? ಎಂದು ಓದುಗ ಹುಡುಕ ಹೊರಟರೆ ಅವನೊಬ್ಬ ಸಾಹಿತ್ಯ ಸಂಶೋಧಕನಾಗುತ್ತಾನೆ.
    ಕಾದಂಬರಿಯು 1767 ರ ನಿರ್ದಿಷ್ಟ ದಿನಾಂಕದೊಂದಿಗೆ ಪ್ರಾರಂಭವಾಗುತ್ತದೆಯಾದರೂ ಅದು ಸಮಕಾಲಿನ ಸಮಾಜಿಕ ಪರಿಸರವನ್ನೇ ಬಿಚ್ಚಿಡುತ್ತದೆ. ಇಡೀ ಕಾದಂಬರಿ ಒಂದು ಇಟಾಲಿಯನ್ ಬ್ಯಾರನ್ ಕುಟುಂಬದ ಸುತ್ತ ಗಿರಕಿ ಹೊಡೆದರೂ, ಆ ಗಿರಕಿಯಲ್ಲೇ ಇಡೀ ಪ್ರಪಂಚದ ವಿದ್ಯಮಾನಗಳನ್ನು ಬಿಂಬಿಸುವ ಪ್ರಯತ್ನ ನಡೆದಿದೆ.
    ಕಾದಂಬರಿಯ ಪ್ರಾರಂಭದಲ್ಲೇ ಒಂದು ಊಟದ ಪ್ರಸಂಗಕ್ಕಾಗಿ ಮನೆಯವರ ವಿರುದ್ದ ಬಂಡೆದ್ದು ಮನೆಬಿಟ್ಟು ಮರವೇರಿದ 12 ವರ್ಷದ ಬಾಲಕ ಕೊಸಿಮೊ , ಉಪನಯನವನ್ನು ದಿಕ್ಕರಿಸಿ ಮನೆತೊರೆದ ಕ್ರಾಂತಿಕಾರಿ ಬಸವಣ್ಣನ ನೆನಪು ತರುತ್ತಾನೆ. ಹಾಗೆ ಮರವೇರಿದ ಕೊಸಿಮೊ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ನೆಲಕ್ಕೆ ಕಾಲಿಡದೇ ಬದುಕಿದ ಅವನ ರೀತಿ ರೋಮಾಂಚನ ಎನಿಸಿದರೂ ಹೀಗೂ ಬದುಕಬಹುದು ಎಂಬುದನ್ನು ಕಲಿಸುತ್ತದೆ.
    ಕಾದಂಬರಿಯ ಮುಖ್ಯ ಪಾತ್ರಧಾರಿ ಕೊಸಿಮೊ ಕೇವಲ ಒಬ್ಬ  ವ್ಯಕ್ತಿಯಲ್ಲ. ಅವನೇ ಒಂದು ಪ್ರಪಂಚ. ಅವನ ಈ ಪ್ರಪಂಚದಲ್ಲಿ ಪರಿಸರದೊಂದಿಗಿನ ಹೊಂದಾಣಿಕೆ, ಭವಾಭಾವದ ನಡುವೆಯೂ ಉತ್ಕøಷ್ಟತೆಯನ್ನು ಸಾಧಿಸಿ, ಶ್ರೇಷ್ಠತೆ ಪಡೆದ ಬಗೆಯನ್ನು ಕಾಲ್ವಿನೊ ಸುಂದರವಾಗಿ ರೂಪಿಸಿದ್ದಾರೆ.
    ಎಲ್ಲವನ್ನೂ ತ್ಯಜಿಸಿ ಏನೂ ಇಲ್ಲಗಳ ಮಧ್ಯೆ ಮರದ ಮೇಲೆಯೇ ಎಲ್ಲವನ್ನೂ ಸೃಷ್ಟಿಸಿಕೊಂಡು ಬದುಕುವ ಕೊಸಿಮೊ ಅಪ್ರತಿಮ ಸೃಷ್ಟಿಕರ್ತನಾಗಿ ಗೋಚರಿಸುತ್ತಾನೆ. ಪೋಲಿಯಾಗಿ ನೆಲದ ಮೇಲೆ ಓಡಾಡಬೇಕಾದ ವಯಸ್ಸಿನಲ್ಲಿ ಕೋತಿಯಂತೆ ಮರದಲ್ಲೇ ಓಡಾಡುವ, ಜೋಲಾಡುವ ಆ ಮೂಲಕ ಇಡೀ ಊರಿನ ಜನರ ಬಾಯಿಗೆ ಚರ್ಚೆಯ ವಿಷಯವಾಗುವ ಕೊಸಿಮೊನ ಪಾತ್ರ ಓದುಗರ ಅವಧಾನವನ್ನು ಹಿಡಿದಿಡುತ್ತಲೇ ರಮ್ಯತೆಯ ಲೋಕದಲ್ಲಿ ತೇಲಾಡಿಸುತ್ತದೆ.
    ಪಕ್ಕದ ಮನೆಯ ಶ್ರೀಮಂತ ಹುಡುಗಿ ವಯೋಲಾಳೊಂದಿಗಿನ ಸ್ನೇಹ, ಮೋಹ, ಪ್ರೇಮ, ಕಾಮ, ದ್ವೇಷ, ಮತ್ಸರ, ವಿರಹಗಳೆಲ್ಲವೂ ಕೊಸಿಮೊನನ್ನು ಒಬ್ಬ ಸಮಕಾಲೀನ ಪಡ್ಡೆ ಹುಡುಗ ಎಂಬಂತೆ ಬಿಂಬಿಸಿದರೆ  ರೈತರ ಬೆಳೆಗಳ ಕೀಟ ಆರಿಸುವ, ಕಳೆಕೀಳುವ, ಪ್ರಾಣಿ ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸುವ ಮೂಲಕ ರೈತರ ಏಳಿಗೆಯನ್ನು ಬಯಸುವ ಸಮಾಜೋದ್ದಾರಕನನ್ನಾಗಿ, ಕಾಡ್ಗಿಚ್ಚನ್ನು ನಂದಿಸುವ ಅರಣ್ಯಪಾಲಕನನ್ನಾಗಿಯೂ ಬಿಂಬಿಸಿವೆ.
    ತಂದೆಯ ಮಾತಿಗೆ ಗೌರವ ಕೊಡುವ ಆಜ್ಞಾಪಾಲಕನಾಗಿ ವಿದ್ಯಾರ್ಜನೆಗೆ ಮುಂದಾದ ಕೊಸಿಮೊ ತನ್ನ ಗುರುಗಳಿಗೇ ಗುರುವಾಗಿ ಪರಿವರ್ತನೆ ಹೊಂದುವ ಪರಿ ಓದಿನ ಮಹತ್ವವನ್ನು ತಿಳಿಸುತ್ತದೆ. ‘ಪುಸ್ತಕ ಓದುವ ಹವ್ಯಾಸವುಳ್ಳವರು ಎಲ್ಲಿದ್ದರೂ ಹೇಗಿದ್ದರೂ ಸುಖವಾಗಿರಬಲ್ಲರು’ ಎಂಬುದನ್ನು ಸಾಬೀತುಪಡಿಸಲು ಇಲ್ಲಿ ಅನೇಕ ಸಾಕ್ಷ್ಯಾಧಾರಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಎಂದರೆ, ಸಣ್ಣಪುಟ್ಟ ಕಳ್ಳತನಗಳಿಂದ ಢಾಕುವಾಗಿ ಬೆಳೆದಿದ್ದ ಬ್ರೂಗಿ ಎಂಬ ಕ್ರೂರಪ್ರಾಣಿಗೆ ಓದುವ ಹುಚ್ಚನ್ನು ಹಚ್ಚುವ ಮೂಲಕ ರಾಬರಿಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು ಕೊಸಿಮೊನ ಟ್ಯಾಲೆಂಟೆಡ್ ಬ್ರೈನ್.
    ಟ್ರೀ ವಲ್ರ್ಡ್‍ನಲ್ಲಿದ್ದುಕೊಂಡು ಅಂಡರ್‍ವಲ್ರ್ಡ್ ಪಾತಕಿಗಳನ್ನು ಮಟ್ಟ ಹಾಕಲು ಪ್ರಯತ್ನಿಸುವ ಕೊಸಿಮೊ ಒಬ್ಬ ದಕ್ಷ ಪೋಲೀಸ್ ಅಧಿಕಾರಿಯಾಗಿ ಗೋಚರಿಸುತ್ತಾನೆ. ಕಾದಂಬರಿಯ ಅಂತ್ಯಕ್ಕೆ ಗೋವಿನ ಹಾಡು ಪದ್ಯದ ‘ಕೊಟ್ಟ ಮಾತಿಗೆ ತಪ್ಪಲಾರೆನು ಕೆಟ್ಟ ಯೋಚನೆ ಮಾಡಲಾರೆನು’ ಎಂಬ ಸಾಲುಗಳು ನೆನಪಾಗುತ್ತವೆ. ಕೊಸಿಮೊ ತನ್ನ ಗೆಳತಿ ವಯೋಲಾಳಿಗೆ ನೀಡಿದ ವಚನಕ್ಕೆ ಬದ್ದನಾಗಿ ನೆಲದ ಮಣ್ಣನ್ನು ಸೊಂಕಿಸಿಕೊಳ್ಳದೇ ಮರಣಹೊಂದಿ ಅಂತಧ್ರ್ಯಾನ ಹೊಂದುವ ಪರಿ ಓದಿಗನ ಕಣ್ಣಂಚಿನ ತೇವವನ್ನು ಹೆಚ್ಚಿಸುತ್ತದೆ. ಆ ಮೂಲಕ ಕೌತುಕಗಳನ್ನು, ಪ್ರಶ್ನೆಗಳನ್ನೂ ಉಳಿಸುತ್ತದೆ.
    ಕೊಸಿಮೊ ಕೇವಲ ಒಂದು ಕಾದಂಬರಿ ಅಲ್ಲ. ಇದು ನಮ್ಮೊಳಗಿನ ನಮ್ಮನ್ನು ಹುಡುಕುವ ಪ್ರಯತ್ನ. ಸಾಧಿಸಲು ಅನೇಕ ಮಾರ್ಗಗಳಿವೆ ಎಂಬುದನ್ನು ಸಾಬೀತು ಪಡಿಸುವ ಪ್ರೇರೇಪಣಾ ಕೃತಿ. ಮಾನವರಾದ ನಾವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಕುರಿತು ಮಾರ್ಗದರ್ಶನ ನೀಡುವ ಮಾರ್ಗದರ್ಶಿ, ವೈಚಾರಿಕತೆಯನ್ನು ಬೆಳೆಸುವ ವಿಚಾರ ಪ್ರಚೋದಕ ನಾಗಿ, ಪರಿಸರದೊಂದಿಗಿನ ಮಾನವನ ಅವಿನಾಭಾವ  ಸಂಬಂಧಗಳನ್ನು ಗಟ್ಟಿಗೊಳಿಸುವ, ಜಾಗತೀಕರಣದ ಪ್ರಭಾವದಿಂದಾಗುವ ಅನಾಹುತಗಳ ವಿರುದ್ದ ನಮ್ಮನ್ನು ಎಚ್ಚರಿಸುವ ಆಪ್ತಸಮಾಲೋಚಕನಾಗಿ ಈ ಕೃತಿ ಪ್ರಾಮುಖ್ಯ ಎನಿಸುತ್ತದೆ.
    ಇದನ್ನು ಓದುತ್ತಾ ಹೋದಂತೆಲ್ಲಾ ಪಾತ್ರಗಳು ನಮ್ಮ ಮನಸ್ಸಿನ ಕ್ಯಾನ್ವಾಸ್ ಮೇಲೆ ರಂಗುರಂಗಿನ ಸ್ಥರ ಚಿತ್ರಗಳನ್ನಾಗಿ,  ಆ ಸ್ಥಿರ ಚಿತ್ರಗಳು ವಿಡಿಯೋ ಚಿತ್ರಣಗಳಾಗಿ ದಾರಾವಾಹಿ ಅಥವಾ ಸಿನೆಮಾ ರೂಪದಲ್ಲಿ ಕಣ್ಣಮುಂದೆ ಸಾಗಿ ಹೋಗುತ್ತವೆ.
    ಪರಿಸರ ಪ್ರಿಯರೂ, ಸಾಹಿತ್ಯ ಶೋಧಕರೂ ಆದ ಕೆ.ಪಿ.ಸುರೇಶ ಅವರ ಅನುವಾದ ಆಪ್ಯಾಯಮಾನ ಎನಿಸುತ್ತದೆ. ಇದು ಅನುವಾದಿತ ಕೃತಿ ಅಂತ ಅನಿಸುವುದೇ ಇಲ್ಲ. ಥೇಟ್ ಕನ್ನಡದ ಕೃತಿ ಎಂಬಂತೆ ಭಾಸವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಓದುಗನೂ ಓದಲೇಬೇಕಾದ ಕೃತಿ ‘ಕೊಸಿಮೊ’.
ಪುಸ್ತಕ ಪರಿಚಯ
ಕೃತಿಯ ಹೆಸರು : ಕೊಸಿಮೊ(ಕಾದಂಬರಿ)
ಮೂಲ ಲೇಖಕರು: ಇಟಾಲೊ ಕಾಲ್ವಿನೊ
ಕನ್ನಡಾನುವಾದ : ಕೆ.ಪಿ.ಸುರೇಶ
ಪ್ರಕಾಶಕರು : ಅಭಿನವ ಪ್ರಕಾಶನ. ಬೆಂಗಳೂರು
ಬೆಲೆ : 100 ರೂಪಾಯಿಗಳು

                                                                                                        ಆರ್.ಬಿ.ಗುರುಬಸವರಾಜ

‘ಟೀಚರ್’ ಅಕ್ಟೋಬರ್ 2015

October 1, 2015

ಆಡಿಯೋ ಬುಕ್ಸ್ AUDIO BOOKS

 ದಿನಾಂಕ 30-09-2015ರ 'ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ಲೇಖನ.

ಯುವ ಟ್ರೆಂಡಿನ

ಆಡಿಯೋ ಬುಕ್ಸ್

    ಇತ್ತೀಚೆಗ ಕೆ.ಎ.ಎಸ್ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಿರುವ ವಿರುಪಾಕ್ಷ ನಮ್ಮ ಮನೆಗೆ ಭೇಟಿ ನೀಡಿ ಕೆಲವು ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದ. ನಿಗದಿತ ಪಠ್ಯವನ್ನು ಹೇಗೆ ಓದಬೇಕು ಎಂಬ ಬಗ್ಗೆ ಚರ್ಚೆ ಸಾಗಿತ್ತು. ಪುಸ್ತಕಗಳನ್ನು ಓದುವ ಬದಲು ಕೇಳುವಂತಿದ್ದರೆ ತುಂಬಾ ಆಸಕ್ತಿದಾಯವಾಗಿರುತ್ತಿತ್ತು ಎಂದು ತನ್ನ ಅಳಲು ತೋಡಿಕೊಂಡ. ಒಂದು ಕ್ಷಣ ಅವನ ಮಾತು ಸತ್ಯ ಎನಿಸಿತು. ಆಗ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಕಲೆಹಾಕಿದಾಗ ದೊರೆತ ಪುಸ್ತಕಗಳೇ ಆಡಿಯೋ ಪುಸ್ತಕಗಳು.
    ಏನಿದು ಆಡಿಯೋ ಪುಸ್ತಕ? : ರೆಕಾರ್ಡೆಡ್ ಸ್ವರೂಪದಲ್ಲಿನ ಕೇಳಬಹುದಾದ ಪುಸ್ತಕಗಳೇ ಆಡಿಯೋ ಪುಸ್ತಕಗಳು. ಅಂದರೆ ಮೂಲ ಮುದ್ರಿತ ಪುಸ್ತಕದ ಸಂಕ್ಷೇಪಿತವಲ್ಲದ ಧ್ವನಿಮುದ್ರಿತ ಪುಸ್ತಕಗಳು. ಈ ಪುಸ್ತಕಗಳನ್ನು ಪ್ರಯಾಣದ ವೇಳೆ ಹಾಗೂ ಇನ್ನಿತರೇ ಕೆಲಸಗಳ ಜೊತೆಜೊತೆಗೆ ಕೇಳುವ ಮೂಲಕ ಪುಸ್ತಕಗಳಲ್ಲಿನ ಮಾಹಿತಿಯನ್ನು ಆಸ್ವಾದಿಸಬಹುದು. ಹರಿಯದ ಮುರಿಯದ ಈ ಪುಸ್ತಕಗಳನ್ನು ಸುಲಭವಾಗಿ ಎಲ್ಲೆಂದರಲ್ಲಿ ಕೊಂಡೊಯ್ಯಬಹುದು.
    ಪುಸ್ತಕಗಳನ್ನು ಓದಬೇಕೆಂದರೆ ಮಳಿಗೆಗೆ ಹೋಗಿ ಖರೀದಿಸಬೇಕು ಅಥವಾ ಗ್ರಂಥಾಲಯಗಳಿಗೆ ಹೋಗಿ ಎರವಲು ಪಡೆದು ಓದಬೇಕೆಂಬ ಪ್ರಸಂಗವೇ ಈಗ ಇಲ್ಲ. ಬಿಡುಗಡೆಯಾದ ಎಲ್ಲಾ ಹೊಸ ಪುಸ್ತಕಗಳು ಆನ್‍ಲೈನ್‍ನಲ್ಲಿ ಲಭ್ಯ ಇರುತ್ತವೆ. ಸುಲಭ ವಿಧಾನಗಳಿಂದ ಡೌನ್‍ಲೋಡ್ ಮಾಡಿಕೊಂಡು ನೆಚ್ಚಿನ ಪುಸ್ತಕಗಳನ್ನು ನೀವಿದ್ದಲ್ಲಿಯೇ ಕೇಳಬಹುದು.
    ಇಲ್ಲಿ ಕತೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ಕಲೆ, ಸಾಹಿತ್ಯ, ವಿಮರ್ಶೆ, ಆರೋಗ್ಯ, ಉಧ್ಯಮ, ವಿದೇಶಿ ಭಾಷಾ ಅಧ್ಯಯನ, ಇತಿಹಾಸ, ಮನೋರಂಜನೆ, ಹಾಸ್ಯ, ವಿಡಂಬನೆ, ಧಾರ್ಮಿಕ, ಆದ್ಯಾತ್ಮಿಕ ಹೀಗೆ ಎಲ್ಲಾ ಪ್ರಕಾರಗಳ ಸಾಹಿತ್ಯ ಪುಸ್ತಕಗಳು ಆಡಿಯೋ ರೂಪದಲ್ಲಿ ಲಭ್ಯ ಇವೆ. ಹೆಚ್ಚುತ್ತಿರುವ ನಗರೀಕರಣದ ಪ್ರಭಾವ ಮತ್ತು ಸುಧಾರಿತ ಜೀವನ ಶೈಲಿಯಿಂದಾಗಿ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಆದ್ದರಿಂದ ಇಂದಿನ ಯುವ ಪೀಳಿಗೆಗೆ ಮತ್ತು ಓದಲು ಅಸಾಧ್ಯ ಎನ್ನುವವರಿಗೆ ಆಡಿಯೋ ಪುಸ್ತಕಗಳು ಆಪ್ಯಾಯಮಾನ ಎನಿಸಿವೆ.
    ಬೆಳೆದು ಬಂದ ಹಾದಿ : ಆಡಿಯೋ ಪುಸ್ತಕಗಳ ಬೆಳವಣಿಗೆಯ ಜಾಡು ಹಿಡಿದು ಹೊರಟರೆ ನಮಗೆ ಸಿಗವ ಮೊದಲ ಹೆಜ್ಜೆ ಎಂದರೆ 1877ರಲ್ಲಿ. ಥಾಮಸ್ ಅಲ್ವಾ ಎಡಿಸನ್ ಫೋನೋಗ್ರಾಮ್ ಕಂಡುಹಿಡಿದ ನಂತರ ಸ್ಪೋಕನ್ ರೆಕಾರ್ಡಿಂಗ್ ಸಾಧ್ಯವಾಯಿತು. ಫೋನೋಗ್ರಾಮ್ ಬಳಸಿ ಮುದ್ರಿಸಿದ ಮೊದಲ ಆಡಿಯೋ ಪುಸ್ತಕ ಎಂದರೆ ಎಡಿಸನ್‍ರವರ ‘ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್’. ಇದು ಕೇವಲ ನಾಲ್ಕು ನಿಮಿಷದ ಪುಸ್ತಕ. 4 ನಿಮಿಷಗಳಿಂದ ಶುರುವಾದ ಪ್ರಯೋಗಗಳು 1930ರಲ್ಲಿ 20 ನಿಮಿಷಗಳ ಪುಸ್ತಕಗಳಾಗಿ ಮಾರ್ಪಟ್ಟಿದ್ದು ಮತ್ತೊಂದು ಮೈಲಿಗಲ್ಲು. 1930 ರಿಂದ 1950 ರವರೆಗೆ ಅನೇಕ ಪ್ರಾಯೋಗಿಕ ಆಡಿಯೋ ಪುಸ್ತಕಗಳು ಬಿಡುಗಡೆಯಾದವು. 1952ರಲ್ಲಿ ಮ್ಯಾಕ್‍ಡೋನಾಲ್ಡ್‍ರವರು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಮೊದಲ ಧ್ವನಿಮುದ್ರಣ ಸ್ಟುಡಿಯೋ ಪ್ರಾರಂಭಿಸಿದರು. ಇದು ಆಡಿಯೋ ಪುಸ್ತಕಗಳ ಬೆಳವಣಿಗೆಯ ವೇಗವನ್ನು ಹೆಚ್ಚಿಸಿತು.
    1963 ರ ನಂತರ ಕ್ಯಾಸೆಟ್ ಟೇಪ್ ಮಾರುಕಟ್ಟೆ ಪ್ರವೇಶಿಸಿದವು. ಆಗ ವಿನೈಲ್ ಫಾಮ್ರ್ಯಾಟ್‍ನಲ್ಲಿ ಧ್ವನಿ ಮುದ್ರಿತ ಪುಸ್ತಕಗಳು ಹೆಚ್ಚು ಪ್ರಚಲಿತಗೊಂಡವು. ವಾಕ್‍ಮನ್ ಆವಿಷ್ಕಾರದ ನಂತರ ಆಡಿಯೋ ಪುಸ್ತಕಗಳ ಮುದ್ರಣ ಮತ್ತು ಮಾರಾಟ ಹೆಚ್ಚು ತೀವ್ರಗೊಂಡಿತು. ಸಿ.ಡಿ.ಗಳ ಬಳಕೆಯ ನಂತರ ಆಡಿಯೋ ಪುಸ್ತಕಗಳ ಬಳಕೆ ಮತ್ತು ಬೇಡಿಕೆ ಹೆಚ್ಚಿತು.
    1990-2000 ದ ಅವಧಿಯಲ್ಲಿ ಹಗುರ ಆಡಿಯೋ ಸಾಧನಗಳ ಜೊತೆಗೆ ಆಡಿಯೋ ಪುಸ್ತಕಗಳ ಜನಪ್ರಿಯತೆ ಹೆಚ್ಚಿತು. 1998ರಲ್ಲಿ Audible.com ಎನ್ನುವ ಆಡಿಯೋ ಪುಸ್ತಕಗಳ ಮೊದಲ ವೆಬ್‍ಸೈಟ್ ಪ್ರಾರಂಭವಾಯಿತು. ಅದು ಆನ್‍ಲೈನ್ ಲೈಬ್ರರಿಗಳ ಬೆಳವಣಿಗೆಯ ಮಹತ್ತರ ಮೈಲಿಗಲ್ಲಾಯಿತು.
    ಬಳಕೆ ಸುಲಭ : ಈಗೀಗಂತೂ ಬಹುತೇಕರ ಬಳಿ ಸ್ಮಾರ್ಟ್‍ಫೋನ್, ಐಫೋನ್, ಐಪಾಡ್, ಟ್ಯಾಬ್ಲೆಟ್, ಲ್ಯಾಪ್‍ಟಾಪ್, ಕಂಪ್ಯೂಟರ್‍ಗಳು ಸಾಮಾನ್ಯವಾಗಿವೆ. ಇವುಗಳ ಸಹಾಯದಿಂದ ಆಡಿಯೋ ಪುಸ್ತಕಗಳನ್ನು ಸುಲಭವಾಗಿ ಕೇಳಬಹುದು. ಅಲ್ಲದೇ ಇತ್ತೀಚೆಗೆ ಗೂಗಲ್ ಪ್ಲೇಸ್ಟೋರ್‍ನಲ್ಲಿ ಅಡಿಬಲ್, ಲಿಬ್ರಿವೊಕ್ಸ್, ಅಕಿಮ್ಬೋ ಮುಂತಾದ ಪ್ಲೇಯರ್ ಅಪ್ಲಿಕೇಶನ್‍ಗಳು ಲಭ್ಯವಿದ್ದು, ಆಡಿಯೋ ಪುಸ್ತಕಗಳನ್ನು ಕೇಳಲು ಉಪಯುಕ್ತವಾಗಿವೆ.
    ಪ್ರಯೋಜನಗಳು :
•    ಪರಿಚಯವಿಲ್ಲದ ಭಾಷಾ ರೂಪಗಳ ಸ್ಪಷ್ಟ ಉಚ್ಛಾರಣೆ ತಿಳಿಯುತ್ತದೆ.
•    ಹೊಸ ಪದಗಳ ಸ್ಪಷ್ಟ ಉಚ್ಛಾರದೊಂದಿಗೆ ಧ್ವನಿ ಏರಿಳಿತದ ಅನುಭವ ದೊರೆಯುತ್ತದೆ.
•    ಮುದ್ರಿತ ಪುಸ್ತಕ ಓದಿದಾಗ ದೊರೆಯುವ ಅನುಭವಕ್ಕಿಂತ ವಿಶೇಷವಾದ ಆಸಕ್ತಿ ಮತ್ತು ಕುತೂಹಲ ಮೂಡುತ್ತದೆ.
•    ಆರಾಮದಾಯಕವಾಗಿ ಹೆಚ್ಚು ಶ್ರಮ ಇಲ್ಲದೇ ಪುಸ್ತಕಗಳನ್ನು ಆಲಿಸಬಹುದು.
•    ಉತ್ತಮವಾದ ವಿವರಣಾತ್ಮಕ ಕೌಶಲ್ಯದ ಅನುಭವ ದೊರೆಯುತ್ತದೆ.
•    ರಜೆ ಹಾಗೂ ಪ್ರವಾಸದ ವೇಳೆ ಕಾಲಕಳೆಯಲು  ಉತ್ತಮ ಸಂಗಾತಿ.
•    ಪ್ರಾದೇಶಿಕ ಭಾಷಾ ಸೊಗಡಿನ ಪರಿಚಯವಾಗುತ್ತದೆ.
•    ಇತರೆ ಕೆಲಸಗಳ ಜೊತೆಜೊತೆಗೆ ಕೇಳುವ ಮೂಲಕ ಜ್ಞಾನ ಪಡೆಯಬಹುದು.
•    ಸಂಗ್ರಹಣೆ ಮತ್ತು ಸಾಗಣೆ ತುಂಬಾ ಸುಲಭ.
   
    ಭಾರತದಲ್ಲಿ ಆಡಿಯೋ ಪುಸ್ತಕಗಳು : ವಿಶ್ವದ ವೇಗಕ್ಕೆ ಹೋಲಿಸಿದರೆ ಭಾರತದಲ್ಲಿ ಆಡಿಯೋ ಪುಸ್ತಗಳ ಬಳಕೆ ನಿಧಾನವಾಗಿದೆ. 2010 ರ ನಂತರ ಮಾತ್ರ ಭಾರತದಲ್ಲಿ ಇಂಗ್ಲೀಷ್ ಆಡಿಯೋ ಪುಸ್ತಕಗಳ ಬಳಕೆ ಪ್ರಾರಂಭವಾಯಿತು. ಆಡಿಯೋ ಮುದ್ರಕರು ಮತ್ತು ಪ್ರಕಾಶಕರ ಸಂಘಟಿತ ಪ್ರಯತ್ನಗಳ ಕೊರತೆಯಿಂದ  ಭಾರತದಲ್ಲಿ ಆಡಿಯೋ ಪುಸ್ತಕಗಳು ಅಷ್ಟೊಂದು ಜನಪ್ರಿಯವಾಗಿಲ್ಲ. ಭಾರತದಲ್ಲಿ ಉತ್ತಮ ಸಾಹಿತ್ಯಕ್ಕೆ ಕೊರತೆಯಿಲ್ಲ. ವೈವಿಧ್ಯಮಯವಾದ ಪ್ರಾದೇಶಿಕ ಹಿನ್ನಲೆಯ ಅನೇಕ ಪುಸ್ತಕಗಳು ಇಡೀ ವಿಶ್ವದ ಗಮನ ಸೆಳೆದಿವೆ. ಈ ಎಲ್ಲಾ ಪುಸ್ತಕಗಳು ಆಡಿಯೋ ಸ್ವರೂಪ ಪಡೆದುಕೊಂಡರೆ ಭಾರತ ಸಾಹಿತ್ಯದ ಪರಾಕಾಷ್ಟತೆಯನ್ನು ಇಡೀ ಜಗತ್ತಿಗೆ ತಿಳಿಸಬಹುದು. ಈ ಬಗ್ಗೆ ಇಂದಿನ ಯುವಕರು ಮತ್ತು ಆಡಿಯೋ ಧ್ವನಿಮುದ್ರಕರು ಮನಸ್ಸು ಮಾಡಬೇಕಷ್ಟೇ? ಅಲ್ಲವೇ?

ಆಡಿಯೋ ಪುಸ್ತಕಗಳ ಕೆಲವು ಜಾಲತಾಣಗಳು:
www.audible.com
www.audiobooks.com
www.openculture.com/freeaudiobooks
https://librivox.org
www.amazon.com/Audiobooks-Books
www.webcrawler.com
www.techsupportalert.com/free-books-audio
www.loyalbooks.com
www.digitaltrends.com
https://www.overdrive.com

                                                                                                  ಆರ್.ಬಿ.ಗುರುಬಸವರಾಜ.