March 31, 2016

ಹಚ್ಚೆ TATOO

2016ರ ಏಪ್ರಿಲ್ 7 ರ "ಸುಧಾ" ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

ಹಚ್ಚೆಯಲ್ಲಿ  ಬೆಚ್ಚನೆಯ ಭಾವ!




ಕುತ್ತಿಗೆಯ ಮೇಲೆ ಕಚಗುಳಿಯಿಡುವ ಬಣ್ಣಬಣ್ಣದ ಚಿಟ್ಟೆ, ಸೊಂಟವನ್ನು ಸುತ್ತುವರೆದು ದೇಹಕ್ಕೆ ಬಿಗಿ ಹೆಚ್ಚಿಸಿದ ಹಾವು, ಎದೆಯ ಮೇಲೆ ಪ್ರೇಯಸಿಯ ಹೆಸರು, ವಕ್ಷಸ್ಥಳವನ್ನೆಲ್ಲಾ ಆವರಿಸಿಕೊಂಡ ವಿವಿಧ ಚಿತ್ತಾರಗಳು, ರಟ್ಟೆಯಲ್ಲಿ ಘರ್ಜಿಸುವÀ ಹುಲಿ, ಚಿರತೆ, ಸಿಂಹಗಳು, ಬೆನ್ನಿನ ಮೇಲೆ ಲಾಸ್ಯವಾಡುವ ಗಿಡಮರಗಳ ಬಳ್ಳಿಗಳು, ಮುಂಗೈಯಲ್ಲಿ ಪ್ರಿಯಕರನ ಹೆಸರಿನ ಮೊದಲಕ್ಷರ, ಇತ್ಯಾದಿ ಇತ್ಯಾದಿ,,,, ಇದು ಯಾವುದೋ ಚಿತ್ರಕಲಾವಿದ ರಚಿಸಿದ ಚಿತ್ರವಲ್ಲ. ಬದಲಿಗೆ ಇಂದಿನ ಯುವ ಪೀಳಿಗೆಯ ಮೈಮೇಲೆ ನಲಿದಾಡುವ ರಂಗುರಂಗಿನ ಹಚ್ಚೆಯ ಚಿತ್ತಾರದ ಸೊಬಗು. 
ಹೌದು ಇತ್ತೀಚೆಗೆ ಹಚ್ಚೆಯೆಂಬುದು ಯುವಪೀಳಿಗೆಯನ್ನು ಆಕರ್ಷಿಸುವ ಕಲೆಯಾಗಿದೆ. ಇದು ಚರ್ಮದ ಮೇಲಿನ ಶಾಸನ ಇದ್ದಂತೆ. ಯುವಪೀಳಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಟ್ಯಾಟೂ ಜನಪ್ರಿಯ ಮಾಧ್ಯಮವಾಗಿದೆ. ಕೇವಲ ರೂಪದರ್ಶಿಗಳು, ಕಲಾವಿದರು, ಸಾಹಸಿಗರು ಅಥವಾ ಸೈನಿಕರು ಮಾತ್ರ ಹಾಕಿಸಿಕೊಳ್ಳುತ್ತಿದ್ದ ಹಚ್ಚೆ ಇಂದು ಎಲ್ಲರನ್ನು ಆಕರ್ಷಿಸತೊಡಗಿದೆ. ಆಧುನಿಕ ಯಂತ್ರಗಳ ಸಹಾಯದಿಂದ ಹಾಕುವ ವೈವಿಧ್ಯಮಯ ವಿನ್ಯಾಸಗಳು, ವಿವಿಧ ಶೈಲಿಗಳು, ವೈವಿಧ್ಯಮಯ ವರ್ಣಗಳು, ರಂಗುರಂಗಿನ ಚಿತ್ತಾರಗಳು ಇಂದಿನ ಯುವಕರ ದೇಹವನ್ನು ಹಚ್ಚೆಯ ರೂಪದಲ್ಲಿ ಅಲಂಕರಿಸಿವೆ. ಕಣ್ಣು, ತುಟಿಗಳನ್ನು ಹೊರತುಪಡಿಸಿ ದೇಹದ ಬಹುತೇಕ ಭಾಗಗಳು ಹಚ್ಚೆಯಿಂದ ಆವೃತ್ತವಾಗಿವೆ ಎಂದರೆ ಅತಿಶಯೋಕ್ತಿ ಏನಲ್ಲ. ಏಕೆಂದರೆ ಹಚ್ಚೆ ಮೊದಲಿನಂತೆ ನಿಷೇಧಿತ ಅಭಿವ್ಯಕ್ತಿಯಾಗಿ ಉಳಿದಿಲ್ಲ. ಅದೊಂದು ಕಲೆಯ ಅಭಿವ್ಯಕ್ತಿ, ಭಾವನೆಗಳನ್ನು ಬಿಂಬಿಸುವ ಮಾಧ್ಯಮ, ವ್ಯಕ್ತಿತ್ವದ ಸಂಕೇತ ಹಾಗೂ ಫ್ಯಾಷನ್ ಆಗಿದೆ.
ಹಚ್ಚೆಯ ಬಣ್ಣವೇಕೆ ಶಾಶ್ವತ?
ಹಚ್ಚೆಯ ಕುರಿತು ಮಾತನಾಡುವಾಗ ಒಂದು ಪ್ರಶ್ನೆ ಬರುವುದು ಸಹಜ. ಅದೇನೆಂದರೆ ಹಚ್ಚೆಯ ಬಣ್ಣವೇಕೆ ಶಾಶ್ವತ?. ಈ ಪ್ರಶ್ನೆಗೆ ಬಹುತೇಕರಲ್ಲಿ ಉತ್ತರವಿಲ್ಲ. ಇದ್ದರೂ ಅಸ್ಪಸ್ಟ ಉತ್ತರ. ಇದಕ್ಕೆ ಸ್ಪಷ್ಟ ಉತ್ತರ ವಿಜ್ಞಾನದಲ್ಲಿ ದೊರೆಯುತ್ತದೆ. 
ಮಾನವರ ಚರ್ಮವು ಪ್ರತಿಗಂಟೆಗೆ 40000 ಕೋಶಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ದಿನಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಕೋಶಗಳು ನಾಶವಾದರೂ ಹಚ್ಚೆ ಶಾಶ್ವತವಾಗಿ ಉಳಿಯುವುದ್ಹೇಗೆ ಎಂಬುದೇ ಸೋಜಿಗ.
ಹಚ್ಚೆ ಹಾಕುವ ಸೂಜಿಯಲ್ಲಿನ ಶಾಯಿಯು ಚರ್ಮದ ಹೊರಪದರದಲ್ಲಿ ರಂದ್ರಗಳನ್ನು ಮಾಡಿ ರಕ್ತನಾಳ ಮತ್ತು ನರಗಳ ಮೂಲಕ ಒಳಪದರದ ಆಳದೊಳಕ್ಕೆ ಜಿನುಗುತ್ತದೆ. ಪ್ರತಿಬಾರಿ ಸೂಜಿಯು ಚುಚ್ಚುವಿಕೆಯಿಂದ ಉಂಟಾದ ಗಾಯದಲ್ಲಿ ಈ ಶಾಯಿಯು ಹರಡಲ್ಪಡುತ್ತದೆ. ಗಾಯವು ಉರಿಯೂತಕ್ಕೆ ಕಾರಣವಾಗುತ್ತದೆ. ಚರ್ಮದಲ್ಲಿನ ಜೀವಕೋಶಗಳು ಪ್ರತಿರಕ್ಷಣಾ ವ್ಯವಸ್ಥೆಯಿಂದ ಗಾಯದ ಸ್ಥಳವನ್ನು ಆಕ್ರಮಿಸಿ ಬಣ್ಣವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ಗಾಯಗೊಂಡ ಸ್ಥಳದಲ್ಲಿನ ಶಾಯಿಯ ಬಣ್ಣ ಪಡೆದುಕೊಂಡ ಜೀವಕೋಶಗಳು ಅಲ್ಲಿಯೇ ಉಳಿದು ಶಾಶ್ವತ ಬಣ್ಣಕ್ಕೆ ತಿರುಗುತ್ತವೆ. ಜೀವಕೋಶದಲ್ಲಿನ ಫೈಬ್ರೋಪ್ಲಾಸ್ಟ್ ಮತ್ತು ಮಾಕ್ರೋಪೇಜ್‍ಗಳೆಂಬ ಅಂಶಗಳು ಬಣ್ಣವನ್ನು ಹೀರಿಕೊಂಡು ಚರ್ಮದ ಒಳಭಾಗವನ್ನು ಲಾಕ್ ಮಾಡುತ್ತವೆ ಮತ್ತು ಬಣ್ಣವನ್ನು ಹೊರಸೂಸುತ್ತವೆ. 
ಆರಂಭದಲ್ಲಿ ಶಾಯಿಯು ಚರ್ಮದ ಹೊರಪದರದ ಕೆಳಭಾಗದಲ್ಲಿ ಸಂಗ್ರಹವಾಗುತ್ತದೆ. ನಂತರ ಹಾನಿಗೊಳಗಾದ ಹೊರಚರ್ಮದ ಜೀವಕೊಶಗಳು ದುರಸ್ತಿಯ ನಂತರ ಬಣ್ಣವನ್ನು ಹೊರಸೂಸುತ್ತವೆ. ಬಿಸಿಲು ಗಾಳಿಗೆ ಹೊರಚರ್ಮದ ಗಾಯಗೊಂಡ ಕೋಶಗಳು ನಾಶವಾಗಿ ಸಿಪ್ಪೆಸುಲಿದು ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ ಮತ್ತು ಶಾಯಿಯ ಶಾಶ್ವತ ಬಣ್ಣ ಪಡೆದುಕೊಳ್ಳುತ್ತವೆ. 
ಪ್ರಾಚೀನತೆಯಿಂದ ಇತ್ತೀಚಿನವರೆಗೆ,,,,
ಹಚ್ಚೆಯು ಕೇವಲ ಫ್ಯಾಷನ್ನಿನ ಪ್ರತೀಕವಲ್ಲ. ಅದು ಪುರಾತನ ಕಾಲದಿಂದ ಮಾನವನ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ಜನರ ಆಚಾರ ವಿಚಾರ ಸಂಸ್ಕøತಿ ಧಾರ್ಮಿಕ ಸಂಪ್ರದಾಯಗಳ ಪ್ರತಿಬಿಂಬವಾಗಿದೆ. ಸಂಸ್ಕøತಿಯಿಂದ ಸಂಸ್ಕøತಿಗೆ, ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಹಚ್ಚೆಯ ಸ್ವರೂಪಗಳು ಬದಲಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. 
ಟ್ಯಾಟೂ ಎಂಬ ಇಂಗ್ಲೀಷ್ ಪದ ‘ಟಾಟೂ’ ಎಂಬ ಟಾಹಿಟಿ ದ್ವೀಪದ ಮೂಲದ್ದು. ಅಂದರೆ ‘ಗುರುತಿಸುವಿಕೆ’ ಎಂದರ್ಥ.
ಟ್ಯಾಟೂವಿನ ಇತಿಹಾಸ ಹುಡುಕಿ ಹೊರಟರೆ ಅದು ನಮ್ಮನ್ನು ಪೆರುವಿನ ಮಮ್ಮಿಗೆ ಕರೆದೊಯ್ಯುತ್ತದೆ. ಈಜಿಪ್ತಿನಲ್ಲಿ ಹುಟ್ಟಿಕೊಂಡ ಈ ಕಲೆಯು ಸಾಮ್ರಾಜ್ಯಗಳ ವಿಸ್ತರಣೆಯಿಂದ ವಿವಿಧ ನಾಗರೀಕತೆಗಳನ್ನು ತಲುಪಿತು. ಕ್ರೀಟ್, ಗ್ರೀಸ್, ಪರ್ಷಿಯಾ, ಅರೇಬಿಯನ್ ನಾಗರೀಕತೆಗಳಿಗೂ ವಿಸ್ತರಿಸಿತು. ಕ್ರಿ.ಪೂ.2000 ರಲ್ಲಿ ಈ ಕಲೆ ಚೀನಾ ತಲುಪಿತು. 
ಕ್ರಿ.ಪೂ.6000 ರಲ್ಲಿ ಪೆರುವಿನ ಮಮ್ಮಿಯಲ್ಲಿ ಜಗತ್ತಿನ ಮೊದಲ ದಾಖಲಿತ ಹಚ್ಚೆಯು ಪತ್ತೆಯಾಗಿದೆ.
ಹಚ್ಚೆಯ ಕಲೆಯು ಪಾಶ್ಚಿಮಾತ್ಯರ ಸಂಸ್ಕøತಿಯ ಪ್ರತೀಕವೇ ಆಗಿತ್ತು ಎಂಬುದಕ್ಕೆ ಅವರು ಆಗಿದ್ದಾಂಗ್ಗೆ ಏರ್ಪಡಿಸುತ್ತಿದ್ದ ಹಚ್ಚೆ ಉತ್ಸವಗಳೇ ಸಾಕ್ಷಿ. ಪ್ರತಿ ಉತ್ಸವದಲ್ಲಿ ಹೊಸ ಹೊಸ ಶೈಲಿಗಳು, ವಿನ್ಯಾಸಗಳು ಪ್ರದರ್ಶಿತವಾಗುತ್ತಿದ್ದವು. ಈ ಉತ್ಸವಗಳ ಕಿರಿಕಿರಿಯಿಂದ ಮನನೊಂದÀ  ಪೋಪ್ ಹೆಡ್ರಿ ಕ್ರಿ.ಶ.747 ರಲ್ಲಿ ಹಚ್ಚೆ ಹಾಕುವುದನ್ನು ನಿಷೇಧಿಸಿದರು. ಪುನಃ 12 ಶತಮಾನದಲ್ಲಿ ಪ್ರಾರಂಭವಾದರೂ 16 ನೇ ಶತಮಾನದವರೆಗೂ ಅದರ ಬಳಕೆ ಆಮೆ ವೇಗದಲ್ಲಿತ್ತು. 1691 ರಲ್ಲಿ ಪಾಶ್ಚಿಮಾತ್ಯ ನಾವಿಕ ವಿಲಿಯಂ ಡ್ಯಾಂಫರ್ ಪುನಃ ಹಚ್ಚೆಯ ಬಳಕೆಗೆ ಮುನ್ನುಡಿ ಬರೆದನು. ಅಲ್ಲಿಂದ ಹಚ್ಚೆಯು ಪಾಶ್ಚಿಮಾತ್ಯ ಸಂಸ್ಕøತಿಯ ಒಂದು ಭಾಗವೇ ಆಯಿತು. 
ಪಾಶ್ಚಿಮಾತ್ಯರಲ್ಲಿ ಹಚ್ಚೆಯ ಬಳಕೆ ಕಡಿಮೆಯಾದ ಕಾಲಕ್ಕೆ ಜಪಾನ್‍ನಲ್ಲಿ ಪ್ರಸಿದ್ದಿ ಪಡೆಯಿತು. ಪ್ರಾರಂಭದಲ್ಲಿ ಅಪರಾಧಿಗಳನ್ನು ಗುರುತಿಸಲು ಅವರ ಹಣೆಗೆ ಹಚ್ಚೆಯ ಗೆರೆ  ಹಾಕಲಾಗುತ್ತಿತ್ತು. ಕಾಲಕ್ರಮೇಣವಾಗಿ ಜಪಾನ್‍ನಲ್ಲಿ ಹಚ್ಚೆಯು ಸೌಂದರ್ಯಕಲೆಯಾಗಿ ಬೆಳೆಯಿತು. 1700 ರ ಸುತ್ತಮುತ್ತ ಜಪಾನ್‍ನಲ್ಲಿ ಹಚ್ಚೆ ಬಳಕೆಯ ಬಗ್ಗೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲಾಯಿತು. ಆಗ ಕೇವಲ ಶ್ರೀಮಂತರು ಮಾತ್ರ ಅಲಂಕಾರಿಕ ಉಡುಪುಗಳನ್ನು ಧರಿಸಲು ಅವಕಾಶವಿತ್ತು. ಇದಕ್ಕೆ ಪ್ರತಿಯಾಗಿ ಮಧ್ಯಮ ವರ್ಗದ ಜನರು ತಮ್ಮ ದೇಹವನ್ನು ಹಚ್ಚೆಯಿಂದ ಅಲಂಕರಿಸತೊಡಗಿದರು. ಇದು ಎಲ್ಲರನ್ನು ಆಕರ್ಷಿಸತೊಡಗಿತು. ಹೀಗಾಗಿ ಹಚ್ಚೆಯು ಹೆಚ್ಚು ವ್ಯಾಪಕವಾಗಿ ಜಗತ್ತಿನ ಎಲ್ಲೆಡೆ ಪಸರಿಸಿತು. ಹಚ್ಚೆಗೆ ಯಂತ್ರಗಳ ಬಳಕೆಯ ನಂತರ ಅದರ ವೇಗ ಹೆಚ್ಚಾಯಿತು.
ಇಂದು ಬಳಸುವ ಯಂತ್ರಗಳು ಪ್ರತಿನಿಮಿಷಕ್ಕೆ 50 ರಿಂದ 3000 ತರಂಗಾಂತರದಲ್ಲಿ ಚರ್ಮಕ್ಕೆ ಬಣ್ಣವನ್ನು ಸೇರಿಸುತ್ತವೆ. 

20 ನೇ ಶತಮಾನದ ತಿರುವಿನಲ್ಲಿ ಹಚ್ಚೆಯು ಕಾರ್ಮಿಕ ವರ್ಗದ ಆಕರ್ಷಣೆಯ ಕೇಂದ್ರವಾಯಿತು. ನಂತರ ಮನೆ ಮನೆಗಳಲ್ಲಿ ಹಚ್ಚೆ ಹಾಕುವವರ ಸಂಖ್ಯೆಯೂ ಹೆಚ್ಚಿತು. ಎರಡನೇ ಮಹಾಯುದ್ದದ ನಂತರ ಹಚ್ಚೆಯು ಜಗತ್ತಿನ ಎಲ್ಲೆಡೆ ಪಸರಿಸಿತು. 1961 ರಲ್ಲಿ ಹೆಪಟೈಟೀಸ್‍ನ ಭೀತಿಯಿಂದ ಬಳಕೆಯ ಪ್ರಮಾಣ ಕುಗ್ಗಿತಾದರೂ ಸಂಸ್ಕರಿಸಿದ ಸೂಜಿ ಬಳಕೆಯಿಂದ ಪುನಶ್ಚೇತನ ಪಡೆಯಿತು. 
ಇಂದು ಹಚ್ಚೆಯು ಎಲ್ಲಾ ವರ್ಗದ ಜನರನ್ನು ತಲುಪಿದೆ. ಅದಕ್ಕಾಗಿ ಅನೇಕ ಪಾರ್ಲರ್‍ಗಳೂ ತಲೆ ಎತ್ತಿವೆ. ಪ್ರಸಿದ್ದ ಹಚ್ಚೆ ಕಲಾವಿದರಿಗೆ ಬೇಡಿಕೆಯೂ ಹೆಚ್ಚಿದೆ. ಈ ಜನಪ್ರಿಯತೆ ಹಚ್ಚೆ ಕಲಾವಿದರನ್ನು ಫೈನ್ ಆಟ್ರ್ಸ್ ವಿಭಾಗಕ್ಕೆ ಸೇರಿಸಿದೆ. ಇಂದಿನ ಹಚ್ಚೆ ಕಲಾವಿದರು ತಮ್ಮ ಅನನ್ಯ ಮತ್ತು ಅದ್ಭುತ ಕಲಾಶಕ್ತಿಯಿಂದ ದೇಹದ ಮೇಲೆ ವೈವಿಧ್ಯ ಶೈಲಿಯ ಚಿತ್ರಗಳನ್ನು ರಚಿಸುತ್ತಾರೆ. 
ಆರೋಗ್ಯ ಸಮಸ್ಯೆಗಳು
ಇಷ್ಟೆಲ್ಲಾ ಆಡಂಬರದ ಅಲಂಕಾರಿಕ ಕಲೆಯಾದ ಹಚ್ಚೆಯು ಕೆಲವು ವೇಳೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಚ್ಚೆಗೆ ಬಳಸುವ ಶಾಯಿಯು ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿ ಇರುವುದಿಲ್ಲ. ಶಾಯಿಯಲ್ಲಿ ಕಾರ್ಬನ್, ಕ್ರೋಮಿಯಂ, ಕಬ್ಬಿಣದಂತಹ ಕೆಲವು ಅಪಾಯಕಾರಿ ಲೋಹದ ಅಂಶಗಳು ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೊಸದಾಗಿ ಹಾಕಿಸಿಕೊಂಡ ಹಚ್ಚೆಯು ಅಸುರಕ್ಷಿತ ಕ್ರಮಗಳಿಂದ ಸೊಂಕು ತಗಲಬಹುದು. ಇದರಿಂದಾಗಿ ತುರಿಕೆ, ಉರಿಯೂತ ಮುಂತಾದ ಚರ್ಮಕ್ಕೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳು ವರದಿಯಾಗಿವೆ. ಇವುಗಳ ಜೊತೆಗೆ ವಿರಳವಾಗಿ ಹೆಪಟೈಟಿಸ್, ಕ್ಷಯ, ಹೆಚ್.ಐ.ವಿ.ಯಂತಹ ಆತಂಕಕಾರಿ ಸಮಸ್ಯೆಗಳನ್ನು ತಂದೊಡ್ಡಬಹುದು. ಕೆಲವು ದೇಶದಲ್ಲಿ ಹಚ್ಚೆ ಹಾಕಿಸಿಕೊಂಡವರ ರಕ್ತವನ್ನು ದಾನವಾಗಿ ಸ್ವೀಕರಿಸುವುದಿಲ್ಲ. 
ವಯಸ್ಸು ಮೀರಿದಂತೆ ಹಚ್ಚೆಯು ಕೆಲವೊಂದು ಸಮಸ್ಯೆಗಳನ್ನು ತರಬಹುದು. ಚರ್ಮದ ಆಳದಲ್ಲಿನ ಬಣ್ಣ ಮಂದವಾಗಬಹುದು. ಇಂತಹ ಅಸ್ಪಷ್ಟತೆಯಿಂದಾಗಿ ದೇಹವು ವಿಕಾರವಾಗುತ್ತದೆ. ಅಲ್ಲದೇ ದೇಹದ ಮೇಲೆ ಹಾಕಿಸಿಕೊಂಡ ಪ್ರೀತಿ ಪಾತ್ರದವರ ಹೆಸರು ಕೆಲವೊಮ್ಮೆ ಸಮಸ್ಯೆಗಳನ್ನು ತಂದೊಡ್ಡಬಹುದು. ಬೇಕು ಅಂದಾಗ ಚುಚ್ಚಿಸಿಕೊಂಡು ಬೇಡವೆಂದಾಗ ಅಳಿಸಿ ಹಾಕಲು ಇದು ಸಾಮಾನ್ಯ ಪ್ರಕ್ರಿಯೆಯಲ್ಲ. 


ಹಚ್ಚೆಯನ್ನೂ ಅಳಿಸಬಹುದು!
ಒಮ್ಮೆ ಹಾಕಿದ ಹಚ್ಚೆಯನ್ನು ಅಳಿಸುವುದು ತುಂಬಾ ಕಷ್ಟಕರ. ಕೆಲವರು ಹಚ್ಚೆಯ ಭಾಗವನ್ನು ಕತ್ತರಿಸುವ ಅಥವಾ ಸುಟ್ಟುಕೊಳ್ಳುವಂಥಹ ಹುಚ್ಚು ಕೃತ್ಯಕ್ಕೆ ಮುಂದಾಗಿರುವುದೂ ಸತ್ಯ. ಇವುಗಳನ್ನು ಹೊರತುಪಡಿಸಿ ಹಚ್ಚೆಯನ್ನು ಅಳಿಸಿ ಹಾಕಲು ಅನೇಕ ವಿಧಾನಗಳಿವೆ. ಶಸ್ತ್ರ ಚಿಕಿತ್ಸೆ ಮಾಡಿಸುವುದು, ಡರ್ಮಬ್ರೆಷನ್, ರೇಡಿಯೋ ಫ್ರೀಕ್ವೆನ್ಸಿ ಮುಂತಾದವು ಚಾಲ್ತಿಯಲ್ಲಿವೆ. ಆದರೆ ಇವು ಸಂಪೂರ್ಣವಾಗಿ ಅಳಿಸಿ ಹಾಕುವುದಿಲ್ಲ. ಅಲ್ಪ ಪ್ರಮಾಣದ ಕಲೆ ಉಳಿಯುತ್ತದೆ. ಇವೆಲ್ಲವುಗಳಿಗಿಂತ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಕ್ಯೂ ಲೇಸರ್ ವಿಧಾನ. ಇದು ಹಚ್ಚೆಯ ಕಲೆಯನ್ನು ಪೂರ್ಣ ಪ್ರಮಾಣದಲ್ಲಿ ಅಳಿಸಿಹಾಕುವ  ಅತ್ಯಾಧುನಿಕ ಲೇಸರ್ ಚಿಕಿತ್ಸೆ. ಇದು ತುಂಬಾ ವೆಚ್ಚದಾಯಕವಾದರೂ ಅತ್ಯಂತ ಸುರಕ್ಷಿತ ವಿಧಾನವಾಗಿದೆ. 
ಕಾಳಜಿ ಮುಖ್ಯ
ಕೇವಲ ಹಚ್ಚೆ ಹೇಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿದರೆ ಸಾಲದು. ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಅದನ್ನು ಕಾಪಾಡಿಕೊಳ್ಳುವ ಸಂರಕ್ಷಣಾ ತಂತ್ರಗಳ ಬಗ್ಗೆ ತಿಳುವಳಕೆ ಮುಖ್ಯ. ಈ ತಂತ್ರಗಳನ್ನು ಅನುಸರಿಸಿದರೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಮತ್ತು ಗುಣಮಟ್ಟವನ್ನು ಉಳಿಸಿಕೊಳ್ಳಬಹುದು. ಹಚ್ಚೆ ಹಾಕಿಸಿಕೊಂಡ ನಂತರ ಅನುಸರಿಸುವ ಕೆಲವು ಸಾಮಾನ್ಯ ನಿಯಮಗಳು.
ಹಚ್ಚೆಯನ್ನು ಪರಿಣಿತ ತಜ್ಞರ ಬಳಿ ಮಾತ್ರ ಹಾಕಿಸಿಕೊಳ್ಳಬೇಕು.
ಹಚ್ಚೆ ಹಾಕಿಸಿಕೊಂಡ ನಂತರ ಕಟ್ಟಿದ ಬ್ಯಾಂಡೇಜನ್ನು 1-2 ಗಂಟೆಯ ನಂತರ ತೆಗೆಯಬೇಕು.
ನಂಜು ನಿವಾರಕ ಸೋಪಿನಿಂದ ಗಾಯವನ್ನು ತಣ್ಣೀರ ಸಹಾಯದಿಂದ ತೊಳೆಯಬೇಕು.
ಹಚ್ಚೆಯ ಭಾಗವನ್ನು ನಿಧಾನವಾಗಿ ಒತ್ತಿ ಒರೆಸಬೇಕು. ಉಜ್ಜಬಾರದು.
ಹಚ್ಚೆಯ ಭಾಗದಲ್ಲಿ ತೆಳುವಾಗಿ ನಂಜುನಿವಾರಕ ಮಲಾಮು ಹಚ್ಚಬೇಕು. ಹೆಚ್ಚಿಗೆ ಮಲಾಮು ಹಚ್ಚುವುದರಿಂದ ಬಣ್ಣ ಕದಡುವ ಸಂಭವ ಹೆಚ್ಚು.
ಗಾಯದ ಮೇಲೆ ನೇರವಾಗಿ ನೀರು ಸುರಿಯಬೇಡಿ ಅಥವಾ ನೀರಿನಲ್ಲಿ ನೆನಸಬೇಡಿ.
ಸೂರ್ಯ ಕಿರಣಗಳು ಗಾಯದ ಮೇಲೆ ನೇರವಾಗಿ ಬೀಳದಿರಲಿ. ಗಾಯದ ಮೇಲಿನ ಹಕ್ಕಳೆಗಳನ್ನು ಕೀಳಬೇಡಿ. ಸ್ವಾಭಾವಿಕವಾಗಿ ಉದುರಲು ಬಿಡಿ.
ಗಾಯ ಊದಿಕೊಂಡು ಉರಿಯೂತ ಹೆಚ್ಚಾಗಿದ್ದರೆ ಐಸ್ ಗಡ್ಡೆಯನ್ನಿಡಿ. ನೋವು ಅಧಿಕವಾಗಿದ್ದರೆ ಚರ್ಮ ತಜ್ಞರನ್ನು ಭೇಟಿಯಾಗಿ.
ಸುರಕ್ಷಿತ ಟ್ಯಾಟೂ ಪಾರ್ಲರ್
ಟ್ಯಾಟೂ ಹಾಕಿಸಿಕೊಳ್ಳುವುದು ಅನಿವಾರ್ಯ ಎಂದಾದರೆ ಸುರಕ್ಷಿತ ಟ್ಯಾಟೂ ಪಾರ್ಲರ್‍ಗಳಲ್ಲೇ ಹಾಕಿಸಿಕೊಳ್ಳಿ. ಜಾತ್ರೆ ಅಥವಾ ಸಂತೆಗಳ ರಸ್ತೆ ಬದಿಯಲ್ಲಿನ ಟ್ಯಾಟೂ ಹಾಕುವವರಿಂದ ದೂರವಿರಿ. ಟ್ಯಾಟೂ ಪಾರ್ಲರ್‍ಗಳು ಸಂಬಂಧಿತ ಇಲಾಖೆಯಿಂದ ಪರವಾನಿಗೆ ಪಡೆದಿರಬೇಕು. ಪಾರ್ಲರ್‍ಗಳಲ್ಲಿ ಸ್ವಚ್ಛತೆ ಹಾಗೂ ವೃತ್ತಿಪರ ಪ್ರಮಾಣ ಪತ್ರ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
ಕ್ರಿಮಿನಾಶಕ ಅಥವಾ ಬಳಸಿ ಬಿಸಾಡುವ ಸೂಜಿ ಬಳಸಲು ಒತ್ತಾಯಿಸಿ. ಒಮ್ಮೆ ಬಳಸಿದ ಕೈಗವಸು ಹಾಗೂ ಇತರೆ ಸಾಮಗ್ರಿಗಳನ್ನು ಪುನಃ ಬಳಸದಿರಲು ಕೇಳಿಕೊಳ್ಳಿ. ಹಚ್ಚೆ ಹಾಕುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಗ್ಗೆ ಮತ್ತು ಅವರ ಗಮನ ಹಚ್ಚೆ ಹಾಕುವತ್ತ ಕೇಂದ್ರೀಕೃತವಾಗಿರುವದನ್ನು ದೃಡಪಡಿಸಿಕೊಳ್ಳಿ. ಹಚ್ಚೆ ಕಲಾವಿದರ ಅರ್ಹತೆ ಹಾಗೂ ಸೇವಾನುಭವವನ್ನು ಕೇಳಿ ತಿಳಿಯಿರಿ. 
ಆರ್.ಬಿ.ಗುರುಬಸವರಾಜ


ರೋಬೋ ರೀಡಿಂಗ್ ROBO READING

ಮಾರ್ಚ್2016ರ  ಕಸ್ತೂರಿ ಕಿರಣ ಪಾಕ್ಷಿಕದಲ್ಲಿ ಪ್ರಕಟಗೊಂಡ ನನ್ನ ಲೇಖನ

ಸ್ಪರ್ಧಾತ್ಮಕ ಪರೀಕ್ಷೆಗೆ ರೋಬೋ ರೀಡಿಂಗ್

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಸ್ಪರರಲ್ಲಿ ಸ್ಪರ್ದೆ ಹೆಚ್ಚುತ್ತಿದೆ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಅಭ್ಯರ್ಥಿಗಳು ಸಾಕಷ್ಟು ಅಧ್ಯಯನ ಸಾಮಗ್ರಿ ಹೊಂದಿರಬೇಕಾದುದು ಅವಶ್ಯಕ. ಕಡಿಮೆ ಅವಧಿಯಲ್ಲಿ ಹೆಚ್ಚು ಅಂಶಗಳನ್ನು ಓದಬೇಕಾಗಿದೆ. ವೇಗವಾಗಿ ಓದುವುದೊಂದೇ ಇದಕ್ಕೆ ಪರಿಹಾರ. ಕಷ್ಟಪಟ್ಟು ಓದುವ ಬದಲು ಚಾಣಾಕ್ಷತನದಿಂದ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ವೇಗವಾಗಿ ಓದುವುದನ್ನು ಅಬ್ಯಾಸ ಮಾಡಿಕೊಳ್ಳಲು ಕೆಲವು ಟಿಪ್ಸ್‍ಗಳು ಇಲ್ಲಿವೆ.
ಪ್ರತಿದಿನ ಓದಬೇಕಾದ ಅಂಶಗಳನ್ನು ದಿನಚರಿಯಲ್ಲಿ ಗುರುತಿಸಿಕೊಳ್ಳಿ. ವೇಳಾಪಟ್ಟಿಯಂತೆ ಅಧ್ಯಯನ ನಡೆಸಿ. ರಾತ್ರಿವೇಳೆ ಅಂದು ಓದಿದ ಅಂಶಗಳನ್ನು ಗುರುತಿಸಿಕೊಳ್ಳಿ. ನಿಮ್ಮ ಯೋಜನೆಯಂತೆ ಓದಿನ ವೇಗ ಸಾಗಿದೆಯೋ, ಇಲ್ಲವೋ ಗಮನಿಸಿ. ಇಲ್ಲದಿದ್ದರೆ ಓದಿನ ವೇಗ ಹೆಚ್ಚಿಸಿಕೊಳ್ಳಿ.
ಓದಿನ  ಸಾಧನೆಗಾಗಿ ನಿಮ್ಮನ್ನು ನೀವೇ ಅಭಿಪ್ರೇರೇಪಿಸಿಕೊಳ್ಳಿ. ನಿಮಗೆ ದೊರೆತ ಸಮಯವನ್ನು ಓದಿನ ಗುರಿಯನ್ನು ಕಾರ್ಯ ರೂಪಕ್ಕೆ ತರಲು ಯಶಸ್ವಿಯಾಗಿ ಬಳಸಿ.
ಪ್ರತಿ ವಿಷಯಕ್ಕೂ ಒಂದೊಂದು ನೋಟ್‍ಬುಕ್ ಇಟ್ಟುಕೊಂಡು, ಓದಿದ ಪ್ರಮುಖಾಂಶಗಳನ್ನು ಅದರಲ್ಲಿ ಬರೆದಿಟ್ಟುಕೊಳ್ಳಿ. ಸಾಧ್ಯವಾದಷ್ಟೂ 4-12ನೇ ತರಗತಿಗಳ ಆSಇಖಖಿ ಮತ್ತು ಓಅಇಖಖಿ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಿ ನೋಟ್ಸ್ ತಯಾರಿಸಿಕೊಳ್ಳಿ.
ಓದುವ ವೇಳೆ ನಿರಾಳವಾಗಿರಿ. ಯಾವುದೇ ಒತ್ತಡಗಳಿಲ್ಲದೇ ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು ಓದಲು ಪ್ರಯತ್ನಿಸಿ. ಒತ್ತಡದ ಮನಸ್ಸಿಗಿಂತ ನಿರಾಳ ಮನಸ್ಸು ಹೆಚ್ಚು ಅಂಶಗಳನ್ನು ಮನನ ಮಾಡಿಕೊಳ್ಳುತ್ತದೆ. ಅಗತ್ಯವಿದ್ದಲ್ಲಿ ಧ್ಯಾನ, ಪ್ರಾಣಾಯಾಮಗಳನ್ನು ಕೈಗೊಳ್ಳಿ. 
ಓದುವ ವೇಳೆ ಸಂಗೀತ ಆಲಿಸುತ್ತಾ ಓದುವುದು ಬೇಡ. ಇದು ಓದಿನ ಗಮನವನ್ನು ವಿಕೇಂದ್ರೀಕರಿಸುತ್ತದೆ.
ನಿಮ್ಮಷ್ಟಕ್ಕೆ ನೀವೇ ಓದಿನ ಟಾರ್ಗೆಟ್ ಹಾಕಿಕೊಳ್ಳಿ. ಅದರಂತೆ ಓದಲು ಪ್ರಯತ್ನಿಸಿ. ನಾನೇನು ಓದಿತ್ತಿದ್ದೇನೆ? ನಾನೇಕೆ ಓದುತ್ತಿದ್ದೇನೆ? ಎಂಬುದರ ಬಗ್ಗೆ ಗಮನವಿರಲಿ. 
ಶೀರ್ಷಿಕೆ ಹಾಗೂ ಉಪಶೀರ್ಷಿಕೆಗಳ ಮೇಲೆ ಹೆಚ್ಚು ನಿಗಾ ಇರಲಿ. 
ಪದಗಳ ಶಕ್ತಿಯನ್ನು ಅರ್ಥೈಸಿಕೊಳ್ಳುತ್ತಾ ಓದಿ. ಉದಾಹರಣಗೆ ‘ಪರಿಣಾಮವಾಗಿ’, ‘ಆದ್ದರಿಂದ’, ‘ಒಟ್ಟಾರೆಯಾಗಿ’, ಇತ್ಯಾದಿಯಂತಹ ಪದಗಳು ಒಂದು ಉಪಸಂಹಾರವನ್ನು ನೀಡುತ್ತಿರುತ್ತವೆ. ‘ಮೇಲಾಗಿ’, ‘ಜೊತೆಗೆ’ ಎಂಬಂತಹ ಪದಗಳು ಹೊಸ ಪರಿಕಲ್ಪನೆಗಳ ಭಾಗವನ್ನು ವಿಸ್ತರಿಸುತ್ತವೆ. ಆದ್ದರಿಂದ ಓದುವಾಗ ಇಂತಹ ಪದಗಳ ಮೇಲೆ ಗಮನವಿರಿಸಿ ಅರ್ಥೈಸಿಕೊಂಡು ಓದಿ.
ಗಟ್ಟಿಯಾಗಿ ಓದುವುದನ್ನು ತಪ್ಪಿಸಿ. ತುಟಿಗಳು ಓದಿನ ವೇಗವನ್ನು ಕಡಿಮೆಮಾಡುತ್ತವೆ.
ಓದುವ ಪಠ್ಯದ ಮೇಲೆ ಬೆರಳಿಟ್ಟು ಓದಿ. ಇದು ಓದಿನ ಗಮನವನ್ನು ಕೇಂದ್ರೀಕರಿಸಲು ಸಹಾಯಮಾಡುತ್ತದೆ. ಹೀಗೆ ಓದುವಾಗ ಪ್ರತೀ ಪದದ ಮೇಲೆ ಬೆರಳಿಟ್ಟು ಓದದೇ ಸಾಲಿನಿಂದ ಸಾಲಿಗೆ ಅಥವಾ ಪ್ಯಾರಾದಿಂದ ಪ್ಯಾರಾಕ್ಕೆ ಬೆರಳಿಟ್ಟು ಓದಿ. ಓದಿನ ವೇಗ ಮತ್ತು ಬೆರಳಿನ ವೇಗ ಪರಸ್ಪರ ಹೊಂದಾಣಿಕೆ ಇರಲಿ.
ಅಭ್ಯಾಸ! ಅಭ್ಯಾಸ! ಅಭ್ಯಾಸ! ಸತತಾಭ್ಯಾಸವು ಮಾತ್ರ ನಿಮ್ಮನ್ನು ಪರಿಪೂರ್ಣರನ್ನಾಗಿಸುತ್ತದೆ. ಏಕರೂಪತೆಯಿಂದ ಓದಿನ ವೇಗ ಹೆಚ್ಚಿಸಿಕೊಳ್ಳಿ.
ಹಳೆಯ ಅಥವಾ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಅವಧಿಯಲ್ಲಿ ಬಿಡಿಸಲು ಪ್ರಯತ್ನಿಸಿ. ಇದು ಪರೀಕ್ಷೆಯಲ್ಲಿ ಉತ್ತರಿಸುವ ವೇಗವನ್ನು ಹೆಚ್ಚಿಸುತ್ತದೆ. ಜೊತೆಗೆ ಪ್ರಶ್ನೆಪತ್ರಿಕೆಯ ಸ್ವರೂಪ ಹಾಗೂ ಅಂಕಗಳ ಹಂಚಿಕೆಯ ವಿವರಗಳನ್ನು ಕೊಡುತ್ತದೆ.
ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದ್ದೇ ಆದಲ್ಲಿ ಖಂಡಿತ ನೀವೊಬ್ಬ ರೋಬೋ ರೀಡರ್ ಆಗುತ್ತೀರಿ. ಆ ಮೂಲಕ ಯಶಸ್ಸು ನಿಮ್ಮದಾಗುತ್ತದೆ.

ಆರ್.ಬಿ.ಗುರುಬಸವರಾಜ.

March 14, 2016

ಪರೀಕ್ಷೆಗೆ ಟಾನಿಕ್ ನೀಡಿದ್ದೀರಾ!

ಮಾರ್ಚ್ 2016ರ 'ಕಸ್ತೂರಿ ಕಿರಣ' ಪಾಕ್ಷಿಕದಲ್ಲಿ ಪ್ರಕಟವಾದ ನನ್ನ ಲೇಖನ.

ಪರೀಕ್ಷೆಗೆ ಟಾನಿಕ್ ನೀಡಿದ್ದೀರಾ!

ಫೆಬ್ರವರಿ ಕಳೆದು ಮಾರ್ಚ್‍ಗೆ ಕಾಲಿಡುತ್ತಿದ್ದತೆ ಒಂದೆಡೆ ಬಿಸಿಲಿನ ಬಿಸಿ ಹೆಚ್ಚುತ್ತದೆ. ಇನ್ನೊಂದೆಡೆ ಪಾಲಕರಲ್ಲಿ ತಮ್ಮ ಮಕ್ಕಳ ಪರೀಕ್ಷಾ ಬಿಸಿ ಏರುತ್ತದೆ. ಹೌದು! ಪರೀಕ್ಷೆ ಎಂಬುದು ಮಕ್ಕಳಿಗಿಂತ ಪೋಷಕರಿಗೇ ಹೆಚ್ಚು ಒತ್ತಡ ತರುತ್ತದೆ. ತಮ್ಮ ಮಕ್ಕಳು ಇತರೆ ಮಕ್ಕಳಿಗಿಂತ ಹೆಚ್ಚು ಅಂಕ ಗಳಿಸಬೇಕು, ಫಸ್ಟ್ ರ್ಯಾಂಕ್ ಬರಬೇಕು, ಅವರ ಉತ್ತಮ ಫಲಿತಾಂಶದಿಂದ ಪ್ರಸಿದ್ದ ಕಾಲೇಜಿನಲ್ಲಿ  ಉಚಿತ ಸೀಟು ದೊರೆಯಬೇಕು, ಪತ್ರಿಕೆಗಳಲ್ಲಿ ತಮ್ಮ ಮಕ್ಕಳ ಜೊತೆ ತಮ್ಮ ಫೋಟೋ ಬರಬೇಕು ಎಂದೆಲ್ಲಾ ಆಸೆ, ಒತ್ತಾಸೆ ಇರುವುದು ಸಹಜ. ಆದರೆ ಈ ಆಸೆ ಒತ್ತಾಸೆಗಳಿಗೆ ಪಾಲಕರಾದ ನಾವು ಎಷ್ಟರ ಮಟ್ಟಿಗೆ ಮಕ್ಕಳನ್ನು ತಯಾರಿಸಿದ್ದೇವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಹುತೇಕ ಶೂನ್ಯ. ಮಕ್ಕಳ ಉತ್ತಮ ಫಲಿತಾಂಶದಲ್ಲಿ ಕೇವಲ ಮಕ್ಕಳ ಶ್ರಮವಿದ್ದರೆ ಸಾಲದು. ಪಾಲಕರೂ ಮಕ್ಕಳ ಶಿಕ್ಷಣದಲ್ಲಿ ಅಂದರೆ ಕಲಿಕೆಯಲ್ಲಿ ಒಂದು ಭಾಗವಾಗಿರಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. 
ಅದಕ್ಕಾಗಿ ಪಾಲಕರು ಕೆಲವು ವರ್ತನೆಗಳನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ಪರೀಕ್ಷೆಗೂ ಮೊದಲು ಮಕ್ಕಳನ್ನು ಮಾನಸಿಕವಾಗಿ ಸಿದ್ದಗೊಳಿಸಬೇಕಿದೆ. ಅಂದರೆ ಪರೀಕ್ಷೆಯ ಬಗ್ಗೆ ಅವರಲ್ಲಿರುವ ಭಯವನ್ನು ಮೊದಲು ಹೋಗಲಾಡಿಸುವುದು ಪ್ರತಿಯೊಬ್ಬ ಪಾಲಕರ ಆದ್ಯತೆಯಾಗಬೇಕು. ಪರೀಕ್ಷೆಗಳೇ ಜೀವನದ ಕೊನೆಯ ಗುರಿಯಲ್ಲ. ಪ್ರತೀ ಪೋಷಕರಿಗೂ ತಮ್ಮ ಮಕ್ಕಳ ಸಾಮಥ್ರ್ಯಗಳ ಅರಿವು ಇರಬೇಕು. ಮಕ್ಕಳು ಕಲಿಕೆಯಲ್ಲಿ ತೊಂದರೆ ಅನುಭವಿಸುವ ವಿಷಯಗಳು ಅಥವಾ ಪರಿಕಲ್ಪನೆಗಳ ಬಗ್ಗೆ ತಿಳಿದಿರಬೇಕು. ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸುವ ಮೂಲಕ ಈ ಕೊರತೆಗಳಿಗೆ ಕಾರಣಗಳನ್ನು ಪತ್ತೆ ಹಚ್ಚಿ ನಿವಾರಿಸಲು ಪ್ರಯತ್ನಿಸಬೇಕು. 
ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳ ಚಲನ ವಲನಗಳಲ್ಲಿ ವರ್ತನೆಗಳಲ್ಲಿ ಬದಲಾವಣೆಗಳಾಗುವುದು ಸಹಜ. ಈ ಬದಲಾವಣೆಗಳನ್ನು ಪೋಷಕರಾದ ನಾವು ಗುರುತಿಸಿ ಮಕ್ಕಳಲ್ಲಿ ಒತ್ತಡವನ್ನು ತುಂಬದೇ ಸಹಜ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಬೇಕು. ಮುಖ್ಯವಾಗಿ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಸಮಯಕ್ಕೆ ಸರಿಯಾಗಿ ಊಟ ಮತ್ತು ನಿದ್ರೆಗಳನ್ನು ಪೂರೈಸಲು ಅವಕಾಶ ನೀಡಬೇಕು. ಬೇಸಿಗೆಯ ದಿನಗಳಾದ್ದರಿಂದ ಸಾಧ್ಯವಾದಷ್ಟೂ ಪೌಷ್ಟಿಕಾಂಶವಿರುವ ದ್ರವ ರೂಪದ ಆಹಾರ ನೀಡಿ. ಮಕ್ಕಳು ಓದುವ ಕೊಠಡಿಯು ಸಾಕಷ್ಟು ಗಾಳಿ ಬೆಳಕಿನಿಂದ ಕೂಡಿದ್ದು, ಪ್ರಶಾಂತವಾಗಿರಬೇಕು. ಟಿ.ವಿ, ಕಂಪ್ಯೂಟರ್, ಮೊಬೈಲ್‍ಗಳಿಂದ ಮಕ್ಕಳನ್ನು ದೂರವಿಡಬೇಕು. ಪ್ರತಿದಿನ ಕನಿಷ್ಠ 3-4 ಗಂಟೆ ಮಕ್ಕಳ ಜೊತೆಗಿದ್ದು, ವಿದ್ಯಾಭ್ಯಾಸದ ಮೇಲೆ ನಿಗಾ ವಹಿಸಬೇಕು. 
ಸಾದ್ಯವಾದರೆ ಮಕ್ಕಳಿಗೆ ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಒದಗಿಸಿ ಕೊಟ್ಟು ಅವುಗಳನ್ನು ಬಿಡಿಸಲು ಸಹಾಯ ಮಾಡಬೇಕು. ಇದರಿಂದ ಮಕ್ಕಳಿಗೆ ತಮ್ಮ ಸಾಮಥ್ರ್ಯ ತಿಳಿಯುವುದಲ್ಲದೇ ಕೊರತೆಯ ಬಗ್ಗೆ ತಿಳಿಯುತ್ತದೆ.  ಇನ್ನೂ ತಯಾರಾಗಬೇಕಾದ ಅಂಶಗಳತ್ತ ಗಮನ ಹರಿಸಲು ಇದು ಸಹಾಯಕ. 
ಪರೀಕ್ಷಾ ಸಮಯದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳ ಮೇಲೆ ಹೇರಬೇಡಿ. ಇದು ಮಕ್ಕಳಲ್ಲಿ ನಕಾರಾತ್ಮಕ ಭಾವನೆ ಬೆಳೆದು ಪರೀಕ್ಷೆಗಳನ್ನೇ ಧಿಕ್ಕರಿಸುವ ಸಂದರ್ಭ ಬರುತ್ತವೆ. ಆದ್ದರಿಂದ ಪರೀಕ್ಷಾ ಸಮಯದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳಿಗೆ ತಿಳಿಸಬೇಡಿ. ಪ್ರತೀ ಮಗುವಿನ ಕಲಿಕಾ ಮಟ್ಟ ಬೇರೆ ಬೇರೆ ಆಗಿರುವುದರಿಂದ ನಿಮ್ಮ ಮಗುವನ್ನು ಉತ್ತಮ ಕಲಿಕೆಯಲ್ಲಿರುವ ಇನ್ನೊಂದು ಮಗುವಿನೊಂದಿಗೆ ಹೋಲಿಸಬೇಡಿ. 
ಪರೀಕ್ಷೆಯ ಸಮಯದಲ್ಲಿ ಹೆಚ್ಚು ಅಂಕಗಳಿಸುವಂತೆ ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಡ ಹೇರಬಾರದು. ಕೆಲವು ವೇಳೆ  ಒತ್ತಡವು ಮಕ್ಕಳ ಮನಸ್ಸಿನ ಮೇಲೆ ಅಹಿತಕರ ಪರಿಣಾಮ ಬೀರಿ ಮಕ್ಕಳಲ್ಲಿ ಅಘಾತಕಾರಿ ವರ್ತನೆಗಳು ಪ್ರಕಟಗೊಳ್ಳಬಹುದು. ಎಲ್ಲರೂ ಫಸ್ಟ್  ಬರಲು ಸಾಧ್ಯವಿಲ್ಲ, ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮಕ್ಕಳಿಗೆ ತಿಳಿಸಿ. ಪರೀಕ್ಷೆ ಸಮೀಪಿಸಿದಾಗ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಆ ತರಗತಿಗೆ ಮಕ್ಕಳು ಪ್ರವೇಶಿಸಿದಾಗಲೇ ಅವರ ಕಲಿಕೆಯ ಜೊತೆಗೆ ನಾವೂ ಭಾಗೀದಾರರಾಗಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಪರೀಕ್ಷಾ ಸಮಯದಲ್ಲಿ ಮಕ್ಕಳ ಮಾನಸಿಕ ಸ್ಥೈರ್ಯ ತುಂಬುವ ಪೋಷಕರಾಗೋಣ. ಪರೀಕ್ಷೆಯ ವೇಳೆ ಮಕ್ಕಳಿಗೆ ಪ್ರೀತಿ ವಿಶ್ವಾಸಗಳ ಕಾಳಜಿಯುತ ಟಾನಿಕ್ ನೀಡಬೇಕೇ ಹೊರತು ಮಕ್ಕಳ ಮನಸ್ಸನ್ನು ಮಲೀನಗೊಳಿಸುವ ಅಹಿತಕರಗೊಳಿಸವ ಅನಾರೋಗ್ಯಕರ ಔಷಧ ಅಲ್ಲ.  ಪರೀಕ್ಷಾ ಸಮಯದಲ್ಲಿ ಮಕ್ಕಳು ದ್ವೇಷಿಸುವ ಪೋಷಕರಾಗುವ ಬದಲು ಮಗುಸ್ನೇಹಿ ಪೋಷಕರಾಗೋಣ.
ಆರ್.ಬಿ.ಗುರುಬಸವರಾಜ


ಮಾನವ ಹಕ್ಕುಗಳ ಅಭಿಯಾನ HUMAN RIGHTS

ಫೆಬ್ರವರಿ 2016 ರ 'ಹೊಸತು' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.
ಡಿಸೆಂಬರ್ 10 “ವಿಶ್ವ ಮಾನವ ಹಕ್ಕುಗಳ ದಿನ” ದ ನಿಮಿತ್ತ ಲೇಖನ

ಮಾನವ ಹಕ್ಕುಗಳ ಅಭಿಯಾನವಾಗಲಿ!



ಪ್ರತಿ ವರ್ಷ ಡಿಸೆಂಬರ್ 10 ನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಮಾನವ ಹಕ್ಕುಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಜನತೆಗೆ ಮಾನವ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ದಿನ ಇದಾಗಿದೆ. 1948 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 10 ನ್ನು ‘ಮಾನವ ಹಕ್ಕುಗಳ ದಿನ’ ಎಂದು ಘೋಷಣೆ ಮಾಡಲಾಯಿತು. ಅಂದಿನಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಲ್ಲವೂ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಪಣ ತೊಟ್ಟವು. 
“ಎಲ್ಲಾ ಮಾನವರೂ ಹುಟ್ಟಿನಿಂದ ಸಮಾನರು. ಜಾತಿ, ವರ್ಣ, ಲಿಂಗ, ಭಾಷೆ, ಧರ್ಮ, ಆಸ್ತಿ ಅಥವಾ ಇತರ ಸ್ಥಿತಿಗಳ ಯಾವುದೇ ಪರಿಗಣನೆಗೆ ಒಳಗಾಗದೇ ಸಮಾನ ಹಕ್ಕು, ಗೌರವಗಳಿಗೆ ಎಲ್ಲರೂ ಪಾತ್ರರು” ಎಂಬುದು ಮಾನವ ಹಕ್ಕುಗಳ ಘೋಷಣೆಯಾಗಿದೆ. 
ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ ರಕ್ಷಣೆಯೇ ಮಾನವ ಹಕ್ಕುಗಳ ಉದ್ದೇಶ. ಮಾನವ ಹಕ್ಕುಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಮೊದಲನೆ ವರ್ಗದಲ್ಲಿ ಬದುಕಿನ ಹಕ್ಕು, ಸ್ವಾತಂತ್ರದ ಹಕ್ಕು, ವ್ಯಕ್ತಿ ಭದ್ರತಾ ಹಕ್ಕು, ಆಲೋಚನಾ ಸ್ವಾತಂತ್ರದ ಹಕ್ಕು. ಎರಡನೇ ವರ್ಗದಲ್ಲಿ ಸಾಮಾಜಿಕ ಭದ್ರತೆಯ ಹಕ್ಕು, ದುಡಿಮೆಯ ಹಕ್ಕು, ವಿಶ್ರಾಂತಿಯ ಹಕ್ಕು, ಸಮರ್ಪಕ ಜೀವನ ನಡೆಸುವ ಹಕ್ಕು, ಹಾಗೂ ಶೈಕ್ಷಣಿಕ ಹಕ್ಕುಗಳು ಸೇರಿವೆ. ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು 14ನೇ ವಿಧಿಯಿಂದ 32ನೇ ವಿಧಿಯವರೆಗೆ ನೀಡಿರುವುದು ಗಮನಾರ್ಹ.
ಬಡತನ ನಿರ್ಮೂಲನೆ ಮತ್ತು ಮಾನವನ ಯೋಗಕ್ಷೇಮವನ್ನು ಉತ್ತಮ ಪಡಿಸುವುದು ಮಾನವ ಹಕ್ಕುಗಳ ದಿನಾಚರಣೆಯ ಪ್ರಮುಖ ಗುರಿ. ಜೊತೆಗೆ ಮಾನವ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಎಲ್ಲಾ ವರ್ಗ, ಸಮುದಾಯಗಳ ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರು, ಬಡವರು ಸೇರಿದಂತೆ ದುರ್ಬಲ ವರ್ಗಗಳ ಜನರ ಬದುಕನ್ನು ಹಸನಾಗಿಸಲು ಶ್ರಮಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ.
ಆದರೆ ಇಂದು ಮಾನವ ಹಕ್ಕುಗಳ ಕುರಿತು ಆಗಿರುವ ಮತ್ತು ಆಗುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಭವಿಷ್ಯ ಕರಾಳವೆನಿಸುತ್ತದೆ. ಏಕೆಂದರೆ ಮನುಷ್ಯನನ್ನು ಮಾನವ ಹಕ್ಕುಗಳಿಂದ ವಂಚಿಸುವುದು ಕ್ರೂರತ್ವವಾಗಿದೆ. ಇಂದು ಎಲ್ಲಾ ಮಾನವರ ಹಕ್ಕುಗಳು ಸುರಕ್ಷಿತವಾಗಿಲ್ಲ. ಅದರಲ್ಲೂ ಮಕ್ಕಳು ಮತ್ತು ಮಹಿಳೆಯರ ಜೀವನ ಅಭದ್ರವಾಗಿದೆ.
ಇಂದು ಬಹುತೇಕ ಮಾನವ ಹಕ್ಕುಗಳಿಂದ ಶೋಷಿತರಾಗುತ್ತಿರುವುದು ಕೆಳಹಂತದ ಸಾಮಾನ್ಯ ಜನರು ಎನ್ನುವುದು ಶೋಚನೀಯ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿರುವವರೇ ಶೋಷಿಸುತ್ತಿರುವವರು. ಮಾನವರೇ ಮಾನವರನ್ನು ಶೋಷಿಸುತ್ತಿರುವುದು ನಾಗರೀಕ ಸಮಾಜದ ಅಧಃಪತನವಲ್ಲವೇ? ಜನಸಾಮಾನ್ಯರಿಗೆ ಮಾನವ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಅಭಿವೃದ್ದಿಯಾಗುತ್ತಿರುವ ಭಾರತದ ದುರಂತ. ಭಾರತದಲ್ಲಿ ಮಕ್ಕಳ ಅದರಲ್ಲೂ ಬಾಲಕಿಯರ ಹಾಗೂ ಮಹಿಳೆಯರ ಹಕ್ಕುಗಳಿಗೆ ಯಾವುದೇ ಕಿಮ್ಮತ್ತಿಲ್ಲ ಎನ್ನುವುದನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಅಪರಾಧಿಗಳಿಗೆ ಎಷ್ಟೇ ಶಿಕ್ಷೆ ನೀಡಿದರೂ ಸಹ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿಲ್ಲ. ಸರಕಾರಿ ಅಂಕಿ-ಅಂಶಗಳ ಪ್ರಕಾರ ಶಿಕ್ಷೆ ಜಾರಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಶೇಕಡಾ 5 ರಷ್ಟು ಮಾತ್ರ. ಇನ್ನುಳಿದ ಶೇಕಡಾ 95 ರಷ್ಟು ಪ್ರಕರಣಗಳು ರಾಜಕೀಯ ಅಥವಾ ಇನ್ನಾವುದೋ ಪ್ರಭಾವದಿಂದಾಗಿ ಮುಚ್ಚಿಹಾಕಲ್ಪಡುತ್ತವೆ ಅಥವಾ ವಜಾಗೊಳಿಸಲ್ಪಡುತ್ತವೆ. 
ಮಹಿಳಾ ದೌರ್ಜನ್ಯದಲ್ಲಿ ದೇಶದ ರಾಜಧಾನಿ ದೆಹಲಿ ಒಂದನೇ ಸ್ಥಾನದಲ್ಲಿದ್ದರೆ, ರಾಜ್ಯದ ರಾಜಧಾನಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇತ್ತೀಚಿಗೆ ಇಡೀ ರಾಜ್ಯದ ಮೂಲೆ ಮೂಲೆಗಳಲ್ಲೂ ಸಹ ಅಪರಾಧ ಪ್ರಕರಣಗಳು ಹೆಚ್ಚಿವೆ. ಅಂದರೆ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಇದಕ್ಕೆಲ್ಲಾ ಕಾರಣ ಮಾನವ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ಜನಜಾಗೃತಿ ಇಲ್ಲದಿರುವುದು. ದೃಶ್ಯ ಮಾಧ್ಯಮಗಳೂ ಸಹ ಅಪರಾಧ ಹೆಚ್ಚಾಗಲು ಕಾರಣವಾಗಿವೆ ಎಂದರೆ ಅತಿಶಯೋಕ್ತಿಯೇನಲ್ಲ. ದೃಶ್ಯ ಮಾಧ್ಯಮಗಳು ಅತ್ಯಾಚಾರ ಪ್ರಕರಣಕ್ಕೆ ಪ್ರಚಾರ ಕೊಟ್ಟು ಮುನ್ನಲೆಗೆ ಬರುವಂತೆ ಮಾಡಲು ಎಷ್ಟು ಕಾರಣವಾದವೂ, ಅನ್ಯಾಯ, ಅಕ್ರಮ, ಅತ್ಯಾಚಾರಗಳಂತಹ ಹೇಯ ಕೃತ್ಯಗಳು ನಡೆಯಲು ಅಷ್ಟೇ ಕಾರಣವಾಗಿವೆ.
ಇಂದಿನ ಅಸಂಖ್ಯಾತ ಚಾನಲ್ಲುಗಳ ಸೀರಿಯಲ್ಲುಗಳಲ್ಲಿ, ಜಾಹೀರಾತುಗಳಲ್ಲಿ, ಕೆಟ್ಟ ಸಿನೇಮಾಗಳಲ್ಲಿ, ರಿಯಾಲಿಟಿ ಷೋಗಳಲ್ಲಿ ಹೆಣ್ಣನ್ನು ಒಂದು ರುಚಿಯಾದ ತಿನಿಸು ಎಂಬಂತೆ ಪ್ರತಿಬಿಂಬಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ. ಕೆಟ್ಟದ್ದನ್ನು ಒಳ್ಳೆಯದನ್ನಾಗಿ, ಅನವಶ್ಯಕವಾದುದನ್ನು ಅವಶ್ಯಕವನ್ನಾಗಿ, ಅಶ್ಲೀಲವನ್ನು ಶೀಲವನ್ನಾಗಿ, ಅನರ್ಥವನ್ನು ಅರ್ಥವನ್ನಾಗಿಸಿ ಅಹಿತಕರವಾದುದನ್ನು ವೈಭವೀಕರಿಸಿ ತೋರಿಸುತ್ತಿರುವುದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಲು ಕಾರಣವಾಗಿವೆ.
ಅಪರಾಧಗಳು ಹೆಚ್ಚಲು ಅಂತರ್ಜಾಲ ತಾಣಗಳೂ ಸಹ ಕಾರಣವಾಗಿವೆ. ಅಶ್ಲೀಲ ಜಾಲತಾಣ ವೀಕ್ಷಣೆಯಲ್ಲಿ ಭಾರತೀಯರೇ ಮುಂದು ಎನ್ನುತ್ತದೆ ಒಂದು ಸರ್ವೆ.  ಕಾಮಕೇಳಿಯ ಅಶ್ಲೀಲ ದೃಶ್ಯಗಳು ಇಂದಿನ ಯುವಕರ ಫೆವರಿಟ್ ಡಾಕ್ಯುಮೆಂಟ್ ಆಗಿವೆ. ಇಂತಹ ಅಶ್ಲೀಲ ದೃಶ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಅನೇಕ ಆಪ್‍ಗಳಿವೆ. ಇವೆಲ್ಲವೂ ಅಪರಾಧ ಹೆಚ್ಚಲು ಕಾರಣವಾಗಿವೆ. ಎಲ್ಲೆಲ್ಲಿ ಅಪರಾಧಗಳು ನಡೆಯುತ್ತವೆಯೋ ಅಲ್ಲೆಲ್ಲಾ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತವೆ ಎಂಬುದನ್ನು ನಾವು ಗಮನಿಸಬೇಕಿದೆ.
ಮಾನವ ಹಕ್ಕುಗಳ ಕುರಿತು ಈಗ ಆಗಿರುವ ಮತ್ತು ಆಗುತ್ತಿರುವ ಕಹಿ ಘಟನೆಗಳನ್ನು ಕುರಿತು ಚಿಂತಿಸುವ ಬದಲು ಆಗಬೇಕಾದ ಕಾರ್ಯಗಳತ್ತ ಚಿತ್ತ ಹರಿಸಬೇಕಿದೆ. ಜನಪರ ಆಡಳಿತದ ಮೂಲಕ ದುಡಿದುಣ್ಣುವ ಜನರ ಬದುಕನ್ನು ಹಸನಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಮಹಿಳೆಯರು, ಮಕ್ಕಳು ಅದರಲ್ಲೂ ಬಾಲಕಿಯರ ಕುರಿತಂತೆ ಸಮಾಜದ ರೋಗಗ್ರಸ್ಥ ಮನೋಸ್ಥಿತಿಯನ್ನು ಸರಿಪಡಿಸಬೇಕು. ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಪೌರಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತೆಯರು, ಗಾಮೆರ್ಂಂಟ್ಸ್, ಮನೆಗೆಲಸದವರು, ಬೀಡಿ ಕಟ್ಟುವವವರು, ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು. 
ಪ್ರಜಾತಂತ್ರದ ಉಸಿರನ್ನೇ ಹತ್ತಿಕ್ಕಲು ಪ್ರಯತ್ನಿಸುವ ತುರ್ತು ಪರಿಸ್ಥಿತಿ, ಕೋಮುದಳ್ಳುರಿ, ನರಮೇಧ, ಭ್ರಷ್ಟಾಚಾರ, ಮೌಢ್ಯತೆಗಳನ್ನು ನಿರ್ಮೂಲನೆ ಮಾಡಬೇಕು. ಸರಕಾರಿ ವ್ಯವಸ್ಥೆಯನ್ನು ಅಲುಗಾಡಿಸುತ್ತಿರುವ ಖಾಸಗೀ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಅನ್ಯಾಯ, ಅತ್ಯಾಚಾರ, ದೌರ್ಜನ್ಯಗಳಿಂದ ನೊಂದವರಿಗೆ ಸಂವಿಧಾನ ನೀಡಿದ ಮಾನವ ಹಕ್ಕು ಕಾಯ್ದೆಯಡಿ ಪರಿಹಾರ ನೀಡಬೇಕು. ಅಶ್ಲೀಲ ಜಾಲತಾಣ ವೀಕ್ಷಣೆಗೆ ಸೂಕ್ತ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ದುರಂತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ.
ಮಾನವ ಹಕ್ಕುಗಳ ದಿನ ಕೇವಲ ಆಚರಣೆ ಮಾತ್ರ ಸೀಮಿತವಾಗಬಾರದು. ಮಾನವ ಹಕ್ಕುಗಳ ಕುರಿತ ಜಾಗೃತಿ ಅಭಿಯಾನವಾಗಬೇಕು. ಯಾರಿಗೆ ಈ ಹಕ್ಕುಗಳ ಬಗ್ಗೆ ತಿಳಿಸಿಕೊಡಬೇಕೋ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಅಂದರೆ ಶೋಷಿತರನ್ನು, ದೀನ ದಲಿತರನ್ನು, ಬಡವರನ್ನು, ನಿರ್ಗತಿಕರನ್ನು, ಅಂಗವಿಕಲರನ್ನು ಆಹ್ವಾನಿಸಿ ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬ ನಾಗರೀಕರನ್ನೂ ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ನೈತಿಕವಾಗಿ, ಸಾಂಸ್ಕøತಿಕವಾಗಿ ಸಶಕ್ತರನ್ನಾಗಿಸಲು ಪಣ ತೊಡಬೇಕು. ಅಂದಾಗ ಮಾತ್ರ ಈ ಆಚರಣೆಗೆ ಒಂದು ಗಟ್ಟಿಯಾದ ನೆಲೆ, ಬೆಲೆ ಸಿಗುತ್ತದೆ. ಪ್ರತಿಯೊಂದು ಹಳ್ಳಿ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ಎಲ್ಲಾ ಹಂತಗಳಲ್ಲೂ ಮಾನವ ಹಕ್ಕು ಚಳುವಳಿಯ ಕಾವು ಹೆಚ್ಚಬೇಕು. ಮಾನವ ಹಕ್ಕು ದಿನಾಚರಣೆಯು ಉತ್ತಮ ವಿಶ್ವ ಸೃಷ್ಟಿಸುವ ಮಾನವೀಯತೆಯ ಹೋರಾಟ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಪ್ರತಿದಿನವೂ  ಎಲ್ಲಾ ಮಾನವರೂ ಮಾನವ ಹಕ್ಕುಗಳನ್ನು ಅನುಭವಿಸುವಂತಾಗಬೇಕು. ಅಂದಾಗ ಮಾತ್ರ ಸುಖೀ ರಾಜ್ಯದ ಕನಸು ನನಸಾಗುತ್ತದೆ. 
ಆತ್ಮಬಲ ಹೆಚ್ಚಿಸಿಕೊಳ್ಳಲು ಇದು ಸಕಾಲವಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರೀಕರೂ ಸಜ್ಜಾಗಬೇಕು ಅಲ್ಲವೇ? ಮಹಾನ್ ಮಾನವತಾವಾದಿ, ಚಿಂತಕ ಕಾರ್ಲ್‍ಮಾಕ್ಸ್ ಹೇಳುವಂತೆ “ ಮಾನವ ಕುಲದ ಒಳಿತಿಗಾಗಿ ಎಲ್ಲದಕ್ಕಿಂತ ಹೆಚ್ಚು ದುಡಿಯುವುದಕ್ಕೆ ಅವಕಾಶವಿರುವಂಥ ಕೆಲಸವನ್ನು ಆರಿಸಿಕೊಳ್ಳಲು  ನಮಗೆ ಸಾಧ್ಯವಾದರೆ, ಎಂಥ ಕಷ್ಟದ ಭಾರವೂ ನಮ್ಮನ್ನು ಬಗ್ಗಿಸಲಾರದು”. ಅಂದರೆ ಮಾನವ ಜನಾಂಗದ ಪ್ರಗತಿಗಾಗಿ ಸಮಾನತೆಯ ಹೋರಾಟದಲ್ಲಿ ಎಂತಹ ಕಷ್ಟಗಳು ಬಂದರೂ ಧೈರ್ಯದಿಂದ ಕೆಲಸಮಾಡುವುದೇ ಪರಮಸಂತೋಷ ಎಂಬ ಅವರ ಮಾತು ಮಾನವ ಹಕ್ಕುಗಳನ್ನು ಸಂರಕ್ಷಿಸಲು ಸ್ಫೂರ್ತಿಯ ಸೆಲೆ ಅಲ್ಲವೇ?
ಆರ್.ಬಿ.ಗುರುಬಸವರಾಜ 

ಶ್ರೀಸಿದ್ದೇಶ್ವರನ ನೂತನ ರಥೋತ್ಸವ HOLAGUNDI SIDDESHWARA

ದಿನಾಂಕ 28-01-2016ರಂದು 'ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ಲೇಖನ.
ಜನವರಿ 29 ಕ್ಕೆ ನೂತನ ರಥೋತ್ಸವದ ನಿಮಿತ್ತ ಲೇಖನ    

ನೋಡಬನ್ನಿ ಶ್ರೀಸಿದ್ದೇಶ್ವರನ ನೂತನ ರಥೋತ್ಸವ


ಸಂಸ್ಕøತಿ ಎನ್ನುವುದು ಸಮೂಹಸಮ್ಮತ ಜೀವನಪದ್ದತಿಯಾಗಿದೆ. ಇಂತಹ ಸಂಸ್ಕøತಿಯ ಪ್ರತೀಕವೇ ಆಗಿರುವ ದೇವಾಲಯಗಳು ಉತ್ಸವಗಳ ಹೆಸರಿನಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವ ಮಹತ್ಕಾರ್ಯ ಮಾಡುತ್ತಿವೆ. ರಥಕ್ಕೂ ದೇವಾಲಯಕ್ಕೂ ತೀರಾ ಹತ್ತಿರದ ನಂಟು. ರಥವೆಂದರೆ ನಡೆದಾಡುವ ದೇಗುಲವಿದ್ದಂತೆ. ದೇವಾಲಯಗಳ ಉತ್ಸವದ ಪ್ರತೀಕವಾಗಿ ಬಳಸುವ ರಥ ದೇವರ ವಾಹನವೇ ಆಗಿರುತ್ತದೆ ಎನ್ನುವುದು ಪರಂಪರಾಗತ ನಂಬಿಕೆ. ಅದರಂತೆ ಬಳ್ಳಾರಿ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಪ್ರಸಿದ್ದ ಪ್ರವಾಸಿ ಹಾಗೂ ಪೌರಾಣಿಕ ತಾಣಗಳಲ್ಲಿ ಒಂದಾದ ಹೊಳಗುಂದಿಯ ಶ್ರೀಸಿದ್ದೇಶ್ವರ ಸ್ವಾಮಿಯ ನೂತನ ರಥೋತ್ಸವದ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ಇದೇ ಜನವರಿ 29ಕ್ಕೆ ಸಂಜೆ 5 ಗಂಟೆಗೆ ಸಕಲ ವಾದ್ಯಗಳಿಂದ ನೂತನ ರಥೋತ್ಸವ ನಡೆಯಲಿದೆ. ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ರಥವು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಈಗ ನೂತನ ರಥ ನಿರ್ಮಾಣವಾಗಿದೆ.
ನೂತನ ರಥದ ನಿರ್ಮಾತೃಗಳು: ರಥವು ಇದೇ ಗ್ರಾಮದ ಕಾಷ್ಠಶಿಲ್ಪಿಗಳಾದ ಮೌನೇಶ್‍ಆಚಾರ್, ಮಗ ವೀರೇಶ್‍ಆಚಾರ್ ಹಾಗೂ ಸಹೋದರರಿಂದ ನಿರ್ಮಾಣಗೊಂಡಿದ್ದು, ಕಲಾತ್ಮಕ ಕುಸುರಿ ಕೆತ್ತನೆಯಿಂದ ಕೂಡಿದೆ. 14 ಅಡಿ ಅಗಲ 14 ಅಡಿ ಉದ್ದ ಹಾಗೂ 15 ಅಡಿ ಎತ್ತರವುಳ್ಳ ಗಡ್ಡಿರಥವು ನವೀನ ಶೈಲಿಯಲ್ಲಿ ರೂಪುಗೊಂಡಿದೆ. 5 ಮಂಟಪ(ಅಂತಸ್ತು)ಗಳು ಹಾಗೂ ಕಳಸ ಸೇರಿ ಒಟ್ಟು 50 ಅಡಿ ಎತ್ತರದ ಸಾಲಂಕೃತ ರಥವನ್ನು ಎಳೆಯಲಾಗುತ್ತದೆ. 
ಕಲ್ಲಿನ ಗಾಲಿಗಳ ಮೇಲಿನ ಅದಿಷ್ಠಾನವು ಚೌಕಾಕಾರವಾಗಿದ್ದು, ಬಲಿಷ್ಠವಾದ, ಗಟ್ಟಿಮುಟ್ಟಾದ ಹಾಗೂ ಬೆಲೆಬಾಳುವ ಕಟ್ಟಿಗೆಯಲ್ಲಿ ನಿರ್ಮಾಣಗೊಂಡಿದೆ. ಅಧಿಷ್ಠಾನದ ತೊಲೆಗಳಲ್ಲಿ ಅತ್ಯಾಕರ್ಷಕವಾದ ಆನೆಯ ಚಿತ್ರಗಳನ್ನು ಕೆತ್ತಲಾಗಿದ್ದು, ನೋಡುಗರಿಗೆ ಆನೆಗಳು ರಥವನ್ನು ಎಳೆದೊಯ್ಯುತ್ತವೆ ಎಂಬಂತೆ ಭಾಸವಾಗುತ್ತದೆ. ಶಿಲ್ಪಿಗಳ ಹೃದಯಾಂತರಾಳದಿಂದ ನಿರ್ಮಾಣಗೊಂಡ ಈ ರಥವು ಅವರ  ಕಲ್ಪನೆ, ಪ್ರತಿಭಾಸಾಮಥ್ರ್ಯ ಹಾಗೂ ಸತತ ಪರಿಶ್ರಮಗಳ ದ್ಯೋತಕವಾಗಿದೆ.
ವೈವಿಧ್ಯಮಯ ಕೆತ್ತನೆ: ಅಧಿಷ್ಠಾನದ ಮೇಲಿನ ನಡುಪಟ್ಟಿ ಭಾಗದಲ್ಲಿ ಅನೇಕ ಚಿತ್ರಗಳನ್ನು ಕೆತ್ತಲಾಗಿದ್ದು, ಇಡೀ ರಥಕ್ಕೆ ಶೋಭೆಯನ್ನು ತಂದಿವೆ. ಇದರಲ್ಲಿ ಮೃದುವಾದ ಕಟ್ಟಿಗೆಯಿಂದ ವಿಘ್ನೇಶ್ವರ, ಆದಿಶಕ್ತಿ, ವೀರಭದ್ರ, ಬ್ರಹ್ಮ, ವಿಷ್ಣು, ಮಹೇಶ್ವರ, ಷಣ್ಮುಖ, ಶರಣಬಸವೇಶ್ವರರು, ಬಸವಣ್ಣ ಹೀಗೆ ವಿವಿಧ ದೇವತೆಗಳು, ವಚನಕಾರರು ಹಾಗೂ ಮೈಥುನಗಳ ಮೂರು ಆಯಾಮದ  ಚಿತ್ರಗಳನ್ನು ಕೆತ್ತಲಾಗಿದೆ. 9 ಇಂಚಿನಿಂದ 18 ಇಂಚಿನವರೆಗೆ ವಿವಿಧ ಗಾತ್ರಗಳ ಕೆತ್ತನೆ ಚಿತ್ರಗಳು ಕಲಾರಸಿಕರಿಗೆ ರಸದೌತಣ ನೀಡುತ್ತವೆ. ಇಲ್ಲಿ ಕಾಷ್ಠಕಲೆಯ ಪರಾಕಾಷ್ಠತೆಯನ್ನು ಕಾಣಬಹುದು. 
ಗಡ್ಡಿಯ ಮಧ್ಯಭಾಗದಲ್ಲಿ ಕಲಾತ್ಮಕ ಕಂಬಗಳನ್ನು ಹಾಗೂ ಕಮಾನುಗಳನ್ನು ಕೆತ್ತಲಾಗಿದೆ. ಅಲ್ಲಲ್ಲಿ ಹಿತ್ತಾಳೆಯ ಗಂಟೆಗಳನ್ನು ಸೌಂದರ್ಯ ಮತ್ತು ನಿನಾದಕ್ಕಾಗಿ ಬಳಸಲಾಗಿದೆ. ಗಡ್ಡಿಯು ಕೆಳಭಾಗವು ಚಿಕ್ಕದಾಗಿದ್ದು ಹಂತಹಂತವಾಗಿ ಮೇಲ್ಭಾಗಕ್ಕೆ ಹೋದಂತೆ ವಿಶಾಲವಾಗುತ್ತಾ ಹೋಗಿರುವುದು ರಥದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. 
ಹಣೆಪಟ್ಟಿಯಲ್ಲಿ ಅಷ್ಟದಿಕ್ಪಾಲಕರು, ವಿವಿಧ ಧರ್ಮಗಳ ಹೆಗ್ಗುರುತುಗಳುಳ್ಳ ಚಿತ್ರಗಳನ್ನು ಕೆತ್ತಲಾಗಿದ್ದು ಸಮಾನತೆಯ ಮಂತ್ರ ಜಪಿಸಲಾಗಿದೆ. ಇಲ್ಲಿ ವಿವಿಧ ಪ್ರಾಣಿ ಪಕ್ಷಿಗಳ ಚಿತ್ರ, ಕೀರ್ತಿಮುಖ, ತರು ಲತೆ ಬಳ್ಳಿಗಳ ಕೆತ್ತನೆಗಳಿವೆ. ಕೆತ್ತನೆಗೆ ಅನುರೂಪವಾದ ವರ್ಣದ ಟಚಪ್ ನೀಡಲಾಗಿದೆ. ಇಲ್ಲಿನ ಕಲೆಯನ್ನು ಗಮನಿಸಿದರೆ ಶಿಲ್ಪಿಗಳು ಅತ್ಯಪೂರ್ವ ಅಲೌಕಿಕ ಕಲೆಯನ್ನು ಸಿದ್ದಿಸಿಕೊಂಡಿರುವುದು ವೇದ್ಯವಾಗುತ್ತದೆ. ಇಲ್ಲಿನ ಕೆತ್ತನೆಗಳಲ್ಲಿ ಪ್ರಸಿದ್ದ ದೇವಾಲಯಗಳ ವಾಸ್ತುಶಿಲ್ಪದ ಪ್ರಭಾವ ಇದ್ದರೂ ಸ್ವತಂತ್ರ ಕಲಾಕೃತಿಗಳಾದ್ದರಿಂದ ಸ್ವಂತಿಕೆಯೂ ಎದ್ದು ಕಾಣುತ್ತದೆ. ಒಟ್ಟಾರೆ ರಥವು ಶೃಂಗಾರ ವೈಭವದಿಂದ ಕೂಡಿದ್ದು ಸುಂದರಕಾವ್ಯವಾಗಿ ಹೊರಹೊಮ್ಮಿದೆ. 
ಕನ್ನಡನಾಡು ಅಸಂಖ್ಯ ರಥಗಳ ನಾಡಾದಂತೆ ಹೊಸ ಹೊಸ ರಥಶಿಲ್ಪಿಗಳನ್ನು ಸೃಷ್ಟಿಸುವ ನೆಲೆಬೀಡೂ ಆಗಿರುವುದು ಸಂತೋಷದ ಸಂಗತಿ. ಇಲ್ಲಿನ ಶಿಲ್ಪಿಗಳು ಈಗಾಗಲೇ ಆರೇಳು ರಥಗಳನ್ನು ನಿರ್ಮಿಸಿದ್ದು, ಒಂದಕ್ಕಿಂತ ಇನ್ನೊಂದು ರೂಪು, ಆಕಾರ, ವೈಭವಾತ್ಮಕ ಕೆತ್ತನೆಯಲ್ಲಿ ಭಿನ್ನವಾಗಿವೆ. ಕಷ್ಟದಲ್ಲೇ ಬೆಳದ ಇವರು ಪ್ರಸಿದ್ದ ಕಾಷ್ಠಶಿಲ್ಪಿಗಳಾಗಿ ಹೊರಹೊಮ್ಮುತ್ತಿದ್ದಾರೆ. 
ವಿಶೇಷ ಕಾರ್ಯಕ್ರಮಗಳು: ನೂತನ ರಥೋತ್ಸವದ ಅಂಗವಾಗಿ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ವಿವಿಧ ಮಠಾಧಿಪತಿಗಳು ಹಾಗೂ ಖ್ಯಾತ ಉಪನ್ಯಾಸಕರಿಂದ  ಜೀವನ ದರ್ಶನ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಜೊತೆಗೆ 30ರಂದು ಬೆಳಿಗ್ಗೆ 11 ಗಂಟೆಗೆ ಶ್ರೀಸಿದ್ದೇಶ್ವರನ ಅಗ್ನಿಯು ವಿಜೃಂಭಣೆಯಿಂದ ನಡೆಯಲಿದೆ. ನಂತರ ಮೂರು ದಿನಗಳ ಕಾಲ ಅದ್ದೂರಿ ಜಾತ್ರೆ ನಡೆಯುತ್ತದೆ. ರಥೋತ್ಸವ ಮತ್ತು ಅಗ್ನಿಗೆ ಆಗಮಿಸುವ ಅಪಾರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆ ನೀಡಿದ್ದಾರೆ. 
ಎಲ್ಲಿದೆ? ಹೋಗುವುದು ಹೇಗೆ?:   ಹೊಳಗುಂದಿಯು ಹೂವಿನಹಡಗಲಿ ತಾಲೂಕಿನ ಪ್ರಮುಖ ಗ್ರಾಮವಾಗಿದ್ದು ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಹರಪನಹಳ್ಳಿಗಳಿಂದ ಸಂಚರಿಸಲು ಸೂಕ್ತ ರಸ್ತೆಗಳಿದ್ದು, ಸಾಕಷ್ಟು ಬಸ್‍ಗಳ ವ್ಯವಸ್ಥೆ ಇದೆ. 

ಕ್ಷೇತ್ರದ ವಿಶೇಷತೆ: ಶ್ರೀಕ್ಷೇತ್ರವು ಐತಿಹಾಸಿಕ ಗ್ರಾಮವಾಗಿದ್ದು, ‘ಪೊಳಲಗುಂದಿ’ ಎಂಬ ಹೆಸರಿನಿಂದ ಪ್ರಖ್ಯಾತಿಯಾಗಿತ್ತು ಎಂಬುದಕ್ಕೆ ಇಲ್ಲಿನ ಸೋಮೇಶ್ವರ ಹಾಗೂ ಬಳ್ಳೇಶ್ವರ ದೇವಾಲಯಗಳ ಶಾಸನದಿಂದ ತಿಳಿದು ಬರುತ್ತದೆ. ಸದ್ರಿ ಸಿದ್ದೇಶ್ವರ ದೇವಸ್ಥಾನವು ಗ್ರಾಮದ ಬಳಿಯ ಬೆಟ್ಟದ ಮೇಲಿದ್ದು, ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಅಲ್ಲದೇ ಗ್ರಾಮದಲ್ಲಿ ಎರಡು ಕಲ್ಯಾಣಿ ಚಾಲುಕ್ಯರ ಕಾಲದ ದೇವಾಲಯಗಳಿದ್ದು ಐತಿಹಾಸಿಕತೆಯನ್ನು ಸಾರುತ್ತಿವೆ. ಜೊತೆಗೆ ತಾಲೂಕಿನ ಅತೀ ಹೆಚ್ಚು ಸರ್ಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಶಿಕ್ಷಕರು ಇರುವ ಗ್ರಾಮ ಎಂಬ ಕಿರೀಟವೂ ಇದೆ.

ಆರ್.ಬಿ.ಗುರುಬಸವರಾಜ


ಕಷ್ಟದಲ್ಲೇ ಕಾಷ್ಠಶಿಲ್ಪಿಯಾದ ರಥವೀರ RATHAVEER VEERESHACHAR

ದಿನಾಂಕ 20-01-2016 ರ 'ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ಲೇಖನ.

ಕಷ್ಟದಲ್ಲೇ ಕಾಷ್ಠಶಿಲ್ಪಿಯಾದ ರಥವೀರ



ಕನ್ನಡನಾಡು ಅಸಂಖ್ಯ ದೇವಾಲಯಗಳ ಬೀಡಾದಂತೆ ಅಸಂಖ್ಯ ರಥಗಳ ನಾಡೂ ಆಗಿದೆ. ಇಲ್ಲಿ ಸಾವಿರಾರು ಕಲಾತ್ಮಕ ರಥಗಳು ಕಲಾರಸಿಕರ ಕಣ್ಮನ ಸೆಳೆದಿವೆ. ಈ ಕನ್ನಡ ನೆಲದಲ್ಲಿ ಜನಿಸಿದ ಅನೇಕ ಕನ್ನಡ ಕಲಿಗಳು ರಥ ನಿರ್ಮಾಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗೆ ಛಾಪು ಮೂಡಿಸಲು ಹೊರಟ 30 ರ ಹರೆಯದ ‘ರಥವೀರ’ ಎಂದೇ ಖ್ಯಾತಿಗೊಂಡ ವೀರೇಶ್‍ಆಚಾರ್. ಬಳ್ಳಾರಿ ಜಿಲ್ಲಾ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಈ ಯುವಕನ ಕಾಷ್ಠಕಲೆಗೆ ತಲೆದೂಗದವರಿಲ್ಲ. 
ಬಾಲ್ಯದಲ್ಲಿ ತಾಯಿಯ ಮಾತುಗಳಿಂದ ಪ್ರೇರಣೆಗೊಂಡು 12ನೇ ವಯಸ್ಸಿನಲ್ಲಿಯೇ ಕಟ್ಟಿಗೆಯಲ್ಲಿ ಗಣೇಶನ ವಿಗ್ರಹ ಕೆತ್ತಿದ ವೀರನೀತ. ಪರಂಪರಾಗತವಾಗಿ ಬಂದ ಮರಕೆತ್ತನೆ ಕೆಲಸದ ಕೈಚಳಕಗಳನ್ನು ಮೈಗೂಡಿಸಿಕೊಂಡ ವೀರೇಶ್‍ಆಚಾರ್ ಭವಿಷ್ಯದಲ್ಲಿ ರಥಶಿಲ್ಪಿಯಾಗುತ್ತೇನೆ ಎಂಬ ಯಾವ ಕನಸನ್ನೂ ಕಂಡಿರಲಿಲ್ಲ. ಈತನಲ್ಲಿದ್ದ ಅಗಾಧ ಆಸಕ್ತಿ ಹಾಗೂ ಪರಿಶ್ರಮಗಳು ಈತನನ್ನು ಒಬ್ಬ ರಥಶಿಲ್ಪಯನ್ನಾಗಿಸಿದವು.  ಜೊತೆಗೆ ಅನಕ್ಷರಸ್ಥ ತಂದೆ ಮೌನೇಶ್‍ಆಚಾರ್ ಇವರ ಮಾರ್ಗದರ್ಶನದಲ್ಲಿ ಬೆಳೆದು ಈಗ ‘ರಥವೀರ’ನಾಗಿ ಹೊರಹೊಮ್ಮಿದ್ದಾನೆ. 
ಸವಾಲಾದ ಸಂಬಂಧ : ತಮ್ಮ ಕುಲಬಾಂಧವರೆಲ್ಲ ವಿವಿಧ ಕುಲಕಸಬುಗಳಲ್ಲಿ ತೊಡಗಿಕೊಂಡು ಉತ್ತಮ ಸ್ಥಿತಿಯಲ್ಲಿದ್ದರು. ಇದನ್ನು ಕಂಡ ತಂದೆಗೂ ತಾವೂ ಸಹ ಅವರಿಗಿಂತ ವಿಶೇಷವಾದುದನ್ನು ಸಾಧಿಸಿಬೇಕೆಂದು ಪಣ ತೊಟ್ಟರು. ಅದಕ್ಕೆ ಮಗ ವೀರೇಶ್‍ಆಚಾರ್ ತಂದೆಯ ಕನಸಿಗೆ ಕೈಜೋಡಿಸಿದರು. 
ಬಡತನದಿಂದಾಗಿ 10ನೇ ತರಗತಿ ಓದಿದ ವೀರೇಶ್‍ಆಚಾರ್ ವಿದ್ಯಾಭ್ಯಾಸ ನಿಲ್ಲಿಸಿ ದುಡಿಮೆಯಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡಿದ. ಆದರೆ ತಂದೆ ತಾಯಿಯರಿಗೆ ಇದು ಇಷ್ಟವಿರಲಿಲ್ಲ. ಇನ್ನೂ ಮುಂದೆ ಓದಿಸಬೇಕೆಂಬ ಆಸೆ ಇತ್ತು. ಆಗ ಸ್ನೇಹಿತರೊಬ್ಬರು ಸೃಜನಶೀಲ ಕಲೆಯನ್ನು ಬೆಳೆಸಿಕೊಳ್ಳುವ ವಿದ್ಯಾಭ್ಯಾಸದ ಬಗ್ಗೆ ಸಲಹೆ ನೀಡಿದರು. ಇದರಿಂದ ಪ್ರೇರಿತನಾದ ವೀರೇಶ್‍ಆಚಾರ್ ಗದಗ ನಗರದ ಶ್ರೀವಿಜಯ ಕಲಾಮಂದಿರದಲ್ಲಿ 5 ವರ್ಷಗಳ ಚಿತ್ರಕಲಾ ಪದವಿ ಪಡೆದರು. ಇದು ಅವರ ಜೀವನಕ್ಕೆ ಹೊಸ ಮಾರ್ಗವೊಂದನ್ನು ಪರಿಚಯಿಸಿತು. 
ಪದವಿಯ ನಂತರ ಕುಟುಂಬದಿಂದ ಹೊರ ಹೋಗಿ ದುಡಿಯುವ ಅನಿವಾರ್ಯತೆಯ ಜೊತೆಗೆ ಚಿಕ್ಕ ಸಹೋದರರಿಗೂ ಆಸರೆಯಾಗಿ ನಿಲ್ಲುವ ಮಹತ್ಕಾರ್ಯವೂ ಅನಿವಾರ್ಯವಾಗಿತ್ತು. ತಂದೆಯ ಮಾತಿನಂತೆ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಮರಕೆತ್ತನೆಯನ್ನೇ ಮುಂದುವರೆಸಿದನು. 
ಹುಡುಕಿ ಬಂದ ಅವಕಾಶ : ಮರಕೆಲಸದಲ್ಲಿಯೇ ತನ್ನ ಕೌಶಲ್ಯತೆಯನ್ನು ಪ್ರದರ್ಶಿಸಿದ್ದ ವೀರೇಶ್‍ಆಚಾರ್‍ಗೆ ದೂರದೂರದಿಂದ ಕೆಲಸಗಳು ಅರಸಿ ಬಂದವು. ಸುಂದರವಾದ ಕದಗಳು. ಸೋಫಾ ಸೆಟ್‍ಗಳು, ಅಲಂಕಾರಿಕ ಡೈನಿಂಗ್ ಟೇಬಲ್ ಇತ್ಯಾದಿ ಕಾರ್ಯಗಳು ಭವಿಷ್ಯಕ್ಕೆ ಕೊಂಡಿಯಾಗಿದ್ದವು. ಕಳೆದ ಎಂಟು ವರ್ಷಗಳ ಹಿಂದೆ ಇವರ ಕೆಲಸವನ್ನು ಗಮನಿಸಿದ ಪಕ್ಕದ ಬಾವಿಹಳ್ಳಿ ಗ್ರಾಮಸ್ಥರು ರಥ ನಿರ್ಮಾಣಕ್ಕೆ ಪ್ರಸ್ಥಾವನೆ ಸಲ್ಲಿಸಿದರು. ಎಂದೂ ರಥ ನಿರ್ಮಾಣದ ಬಗ್ಗೆ ಕನಸು ಕಾಣದೇ ಇರುವಾಗ ದುತ್ತನೇ ಆಫರ್ ಕಣ್ಮುಂದೇ ಬಂದು ನಿಂತಾಗ ಇದು ಸಾಧ್ಯವೇ ಎನಿಸಿತು. ಆಗ ದೃಢಸಂಕಲ್ಪ ಮಾಡಿ ಆ ಕೆಲಸವನ್ನು ಒಪ್ಪಿಕೊಂಡರು. ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿ ಹದವರಿತು ಕಾಷ್ಠಕ್ಕೊಂದು ರೂಪು ನೀಡಿ ಸುಂದರವಾದ ರಥ ನಿರ್ಮಿಸಿಯೇ ಬಿಟ್ಟರು. 
ಅಲ್ಲಿಂದ ಪ್ರಾರಂಭವಾದ ರಥ ನಿರ್ಮಾಣ ಕೆಲಸಗಳು ಒಂದರ ಮೇಲೊಂದು ಆಫರ್‍ನಂತೆ ಬರತೊಡಗಿವೆ. ಈಗಾಗಲೇ ಆರು ರಥಗಳನ್ನು ನಿರ್ಮಿಸಿದ ವೀರೇಶ್‍ಆಚಾರ್‍ಗೆ ಇನ್ನೆರಡು ರಥ ನಿರ್ಮಾಣಗಳಲ್ಲಿ ತೊಡಗಿದ್ದಾನೆ. ನಿರ್ಮಿಸಿದ ಆರು ರಥಗಳಲ್ಲಿನ ಕುಸುರಿ ಕೆಲಸ, ಸೂಕ್ಷ್ಮ ಕೆತ್ತನೆಗಳ ಕೈಚಳಕ ಅಮೋಘವಾಗಿದೆ.  ಒಂದಕ್ಕಿಂತ ಇನ್ನೊಂದು ಭಿನ್ನವಾಗಿವೆ. ಪ್ರಸ್ತುತ ಇವರು ನಿರ್ಮಿಸಿದ ಸ್ವಗ್ರಾಮದ ಶ್ರೀಸಿದ್ದೇಶ್ವರ ಸ್ವಾಮಿಯ ನೂತನ ರಥೋತ್ಸವವು ಇದೇ ಜನವರಿ 29 ಕ್ಕೆ ವಿಜೃಂಭಣೆಯಿಂದ ಜರುಗಲಿದೆ. ಚಿತ್ರರಂಗದಲ್ಲಿನ ‘ರಥಾವರ’ ಚಿತ್ರವು ಶತದಿನೋತ್ಸವಗಳತ್ತ ದಾಪುಗಾಲು ಹಾಕುತ್ತಿದ್ದರೆ ವೀರೇಶ್‍ಆಚಾರ್ ಇವರ ರಥವು ಶತಮಾನಗಳವರೆಗೆ ಉರುಳಲು ಸಿದ್ದಗೊಂಡಿದೆ.
ಭವಿಷ್ಯದ ಕನಸು : ಅಂದು ರಥ ನಿರ್ಮಾಣದ ಕನಸು ಕಾಣದಿದ್ದರೂ ರಥ ನಿರ್ಮಾಣ ಕಾರ್ಯಕ್ಕೆ ಮುಂದಾದ ವೀರೇಶ್‍ಆಚಾರ್ ಭವಿಷ್ಯದಲ್ಲಿ ಉತ್ತಮ ಕಾಷ್ಠಶಿಲ್ಪಿಯಾಗುವ ಕನಸು ಹೊಂದಿದ್ದಾರೆ. ಜೊತೆಗೆ ಸಹೋದರರಿಗೂ ಉತ್ತಮ ವೃತ್ತಿ ಅವಕಾಶಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕಷ್ಟದಿಂದ ಬೆಳೆದು ಕಾಷ್ಠಶಿಲ್ಪಿಯಾಗಿದ್ದಕ್ಕೆ ತಂದೆ ಹಾಗೂ ಕುಟುಂಬದ ಸಹಕಾರವನ್ನು ನೆನೆಯುತ್ತಾರೆ. ಅಂತೆಯೇ ಗ್ರಾಮೀಣ ಪ್ರದೇಶದ ಅವಕಾಶ ವಂಚಿತ ಕ್ರಿಯಾಶೀಲ ಮನಸ್ಸುಗಳಿಗೆ ಉತ್ತಮ ದಾರಿ ತೋರುವ ಮಾರ್ಗದರ್ಶಿ ಆಗಬೇಕೆಂಬ ಮಹದಾಸೆ ಹೊಂದಿದ್ದಾರೆ. ಇವರ ಕನಸು ನನಸಾಗಲಿ, ಗ್ರಾಮೀಣ ಪ್ರತಿಭೆಗಳು ಎಲ್ಲೆಡೆ ಬೆಳಗಲಿ ಎಂದು ಆಶಿಸೋಣ.
ಆರ್.ಬಿ.ಗುರುಬಸವರಾಜ


ಅವಧಾನದ ವಿಜ್ಞಾನ SCIENCE OF ATTENTION

ಜನವರಿ 2016ರ 'ಗುರುಮಾರ್ಗ'ದಲ್ಲಿ ಪ್ರಕಟವಾದ ನನ್ನ ಲೇಖನ.

ಅವಧಾನದ ವಿಜ್ಞಾನ

ಬೋಧನೆ ಮಾಡುವಾಗ ವಿದ್ಯಾರ್ಥಿಗಳ ಅವಧಾನ/ಗಮನವನ್ನು ಎಷ್ಟು ಹೊತ್ತು ಕೇಂದ್ರೀಕರಿಸಬಹುದು? ಹೆಚ್ಚೆಂದರೆ 10-15 ನಿಮಿಷ.  40 ನಿಮಿಷಗಳ ಅವಧಿಯಲ್ಲಿ ಹೆಚ್ಚು ಹೊತ್ತು ವಿದ್ಯಾರ್ಥಿಗಳ ಗಮನ ಕೇಂದ್ರೀಕರಿಸುವುದು ನಿಜಕ್ಕೂ ಕಷ್ಟದ ಕೆಲಸ. 
ವಿದ್ಯಾರ್ಥಿಗಳ ಅವಧಾನದ ಮಟ್ಟವು ಪ್ರೇರಣೆ, ಭಾವನೆಗಳ ಹಂಚಿಕೆ, ಸಂತೋಷ ಮತ್ತು ಆ ದಿನದ ವಿಶೇಷಗಳನ್ನು ವ್ಯಾಪಕವಾಗಿ ಅವಲಂಬಿಸಿದೆ. ಪಾಠ ಬೋಧನೆಗೆ ತಕ್ಕಂತೆ ಕೆಲವು ದೃಶ್ಯಾವಳಿಗಳು, ಚಿತ್ರ ಪ್ರದರ್ಶನಗಳಂತಹ ಕೆಲವು ತಂತ್ರಗಳ ಅಳವಡಿಕೆಯಿಂದ ವಿದ್ಯಾರ್ಥಿಗಳ ಅವಧಾನವನ್ನು ಹೆಚ್ಚು ಹೊತ್ತು ಕೇಂದ್ರೀಕರಿಸಬಹುದೆಂಬುದು ಸಾಬೀತಾಗಿದೆ.  ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಿ ಅವರು ತರಗತಿಯ ಕಲಿಕೆಯಲ್ಲಿ ಉತ್ಸುಕರಾಗಿ ಪಾಲ್ಗೊಳ್ಳುವಂತೆ ಮಾಡಬೇಕಾದುದು ಪ್ರತಿಯೊಬ್ಬ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ನಾವದನ್ನು ಮಾಡುತ್ತಿದ್ದೇವೆಯಾ? ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ ಉತ್ತರ ಕೆಳಗಿನ ಶ್ರೇಣಿಗಳಲ್ಲಿರುತ್ತದೆ. 
ವಿದ್ಯಾರ್ಥಿಗಳಲ್ಲಿ ಅವಧಾನವು ಕಡಿಮೆಯಾಗಲು ಹಲವಾರು ಕಾರಣಗಳಿವೆ. ಅವುಗಳೆಂದರೆ ಪಠ್ಯವಸ್ತು, ಹವಾಮಾನ ವೈಪರೀತ್ಯ, ಸ್ಥಳೀಯ ಹಬ್ಬಗಳು/ಆಚರಣೆಗಳು, ನೀರಸ ಬೋಧನೆ, ಕಠಿಣವಾದ ಪರಿಕಲ್ಪನೆಗಳು, ಅನಾರೋಗ್ಯ ಇತ್ಯಾದಿ ಅಂಶಗಳು ಕಾರಣವಾಗಿರಬಹುದು.
ಆದಾಗ್ಯೂ ಶಿಕ್ಷಕರಾದ ನಾವು ಬೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಪರಿಕಲ್ಪನೆಗಳನ್ನು ಸುಲಭವಾಗಿ ಮಕ್ಕಳಿಗೆ ತಲುಪಿಸುವ ಸುಗಮಕಾರರಾಗುವ ಅಗತ್ಯವಿದೆ. ಕೇವಲ ವಿಷಯದ ಆಳ ಮತ್ತು ವ್ಯಾಪ್ತಿ ತಿಳಿದಿದ್ದರೆ ಸಾಲದು. ಅದನ್ನು ಮಕ್ಕಳಿಗೆ ಸುಲಭವಾಗಿ ತಲುಪಿಸುವ ತಂತ್ರಗಾರಿಕೆ ತಿಳಿದಿರಬೇಕು. ಅದು ನಮ್ಮ ವಿದ್ಯಾರ್ಥಿಗಳ ಕಲಿಕೆಯಲ್ಲಿ ನೀರೀಕ್ಷಿತ ಪ್ರತಿಫಲ ನೀಡುವಂತಿರಬೇಕು. 
ವಿಷಯಗಳನ್ನು ಮಕ್ಕಳಿಗೆ ತಲುಪಿಸುತ್ತಿರುವಾಗ ಕೆಲವು ಸಣ್ಣ ಪುಟ್ಟ ತಪ್ಪುಗಳಾಗುವುದು ಸಹಜ. ಈ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಅದಕ್ಕೆ ಪೂರಕವಾದ ಕಲಿಕಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಪಠ್ಯಕ್ಕೆ ಪೂರಕವಾದ ಸಂಯೋಜಿತ ಕಲಿಕಾ ವಿಧಾನಗಳನ್ನು ಬಳಸಬೇಕಾಗುತ್ತದೆ. 
ಬೋಧನೆಯಲ್ಲಿ ಮಕ್ಕಳ ಗಮನವನ್ನು ಕೇಂದ್ರೀಕರಿಸಿ ಕಲಿಕಾ ಮಟ್ಟವನ್ನು ಉನ್ನತಕ್ಕೇರಿಸಲು ಕೆಲವು ತಂತ್ರಗಳು ಅಗತ್ಯ. ಕೆಳಗಿನ ಕೆಲವು ತಂತ್ರಗಳು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಸಹಾಯಕವಾಗುತ್ತವೆ.
ಧ್ವನಿಯ ಮಟ್ಟ ಬದಲಿಸಿ : ವಿದ್ಯಾರ್ಥಿಗಳ ಗಮನ ಕೇಂದ್ರೀಕರಿಸುವಲ್ಲಿ ಶಿಕ್ಷಕರ ಧ್ವನಿಯ ಮಟ್ಟವು ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕಾದುದು ಅಗತ್ಯ. ಅಂದರೆ ಕಲಿಕಾಂಶಕ್ಕೆ ಪೂರಕವಾದ ರೀತಿಯಲ್ಲಿ ಶಿಕ್ಷಕರು ಧ್ವನಿಯಲ್ಲಿ ಏರಿಳಿತ ಹಾಗೂ ಧ್ವನಿಯ ನಾದ(ತೀವ್ರತೆ)ದ ಮಟ್ಟವನ್ನು ಬದಲಾಯಿಸುತ್ತರಬೇಕು. ಇದರಿಂದ ಗಮನವನ್ನು ಪುನಃ ಕ್ರೂಡೀಕರಿಸಬಹುದು.
ಆಧಾರ ಮತ್ತು ಸಾದೃಶ್ಯಗಳನ್ನು ಬಳಸಿ : ಕಲಿಕಾಂಶಕ್ಕೆ ಪೂರಕವಾದ ಒಂದು ಚಿತ್ರ ಶಿಕ್ಷಕರ ಶ್ರಮವನ್ನು ಕಡಿಮೆ ಮಾಡುವುದಲ್ಲದೇ ವಿದ್ಯಾರ್ಥಿಗಳ ಗಮನವನ್ನು ಕಲಿಕೆಯಲ್ಲಿ ಕೇಂದ್ರೀಕರಿಸಲು ಸಹಾಯಕವಾಗುತ್ತದೆ. ಚಿತ್ರಗಳನ್ನು ಬಳಸುವಾಗ ಚಿತ್ರದ ಕುರಿತು ನಿಮ್ಮ ಅನಿಸಿಕೆ ತಿಳಿಸದೇ ವಿದ್ಯಾರ್ಥಿಗಳೇ ಮುಕ್ತವಾಗಿ ಮಾತನಾಡಲು ತಿಳಿಸಿ. ಆಗ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕೆಯಲ್ಲಿ ಭಾಗವಹಿಸುವರಲ್ಲದೇ ಅವರ ಗಮನ ಬೋಧನೆಯಲ್ಲಿ ನೆಲೆಯೂರುತ್ತದೆ.
ಚಕಿತ ವಾಕ್ಯ ಅಥವಾ ಹೇಳಿಕೆ ನೀಡಿ : ಕಲಿಕಾಂಶಕ್ಕೆ ಪೂರಕವಾದ ಒಂದು ಹೇಳಿಕೆ ಅಥವಾ ಒಂದು ವಾಕ್ಯವನ್ನು ಕಪ್ಪು ಹಲಗೆಯ ಮೇಲೆ ಬರೆಯುವುದೂ ಕೂಡಾ ಉತ್ತಮವಾದ ಪರಿಣಾಮ ಬೀರುತ್ತದೆ. ಹೀಗೆ ಬರೆಯುವಾಗ ಹೇಳಿಕೆ ಅಥವಾ ವಾಕ್ಯದ ಅರ್ದ ಭಾಗವನ್ನು ಮಾತ್ರ ಬರೆದು ಉಳಿದ ಭಾಗವನ್ನು ಪೂರ್ಣಗೊಳಿಸಲು ಮಕ್ಕಳಿಗೆ ತಿಳಿಸಿ. ಅಥವಾ ಕೆಲವು ಅಕ್ಷರಗಳನ್ನು ಬಿಟ್ಟು ಬರೆಯಿರಿ. ಅದಕ್ಕೆ ಸರಿಯಾದ ಅಕ್ಷರಗಳನ್ನು ಸೇರಿಸಿ ಅರ್ಥವತ್ತಾದ ಹೇಳಿಕೆಯನ್ನಾಗಿಸಲು ತಿಳಿಸಿ. ಉದಾ: ಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು.(ಸರಿಯಾದ ರೂಪ : ಉಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು). ಆಗ ಇಡೀ ತರಗತಿಯೇ ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತದೆ. 
ಸವಾಲಿನ ಪ್ರಶ್ನೆ ಹಾಕಿ : ವಿಷಯಕ್ಕೆ ಸಂಬಂಧಿಸಿದಂತೆ ಮೂಲಭೂತ ಗ್ರಹಿಕೆಯನ್ನು ತಿಳಿಯಲು ಒಂದು ಸವಾಲಿನ ಪ್ರಶ್ನೆಯನ್ನು ಬರೆಯಿರಿ. ವಿದ್ಯಾರ್ಥಿಗಳು ತುಂಡು ಹಾಳೆಯಲ್ಲಿ ಉತ್ತರ ಬರೆದು ಕೊಡಲು ತಿಳಿಸಿ. ಇದರಿಂದ ವಿದ್ಯಾರ್ಥಿಗಳು ಪಠ್ಯವಸ್ತುವಿನತ್ತ ಗಮನ ಹರಿಸುತ್ತಾರೆ. ಉತ್ತರ ಕ್ರೂಡೀಕರಣದ ನಂತರ ಪ್ರಶ್ನೆ ಕುರಿತು ಚರ್ಚೆ ನಡೆಸಬಹುದು.
ಸೂಕ್ತ ಉದಾಹರಣೆಗಳನ್ನು ಆಯ್ಕೆ ಮಾಡಿ : ವಿದ್ಯಾರ್ಥಿಗಳ ಮನೋಭಾವವನ್ನು ಅರಿತು ವಿಷಯವನ್ನು ಅವರಿಗೆ ತಲುಪಿಸಿ. ವೈಯಕ್ತಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಮನೋಭಾವವನ್ನು ಅರಿತು ವಿಷಯ ತಲುಪಿಸುವುದು ಅಸಾಧ್ಯವಾದರೂ ನಿಯಮಿತವಾಗಿ ಉದಾಹರಣೆ ಮತ್ತು ಸನ್ನಿವೇಶಗಳನ್ನು ಬಳಸಿಕೊಂಡು ಪ್ರಯತ್ನಿಸಬೇಕು.
ಕಾಠಿಣ್ಯತೆಯ ಮಟ್ಟದಲ್ಲಿ ಕಲಿಸಿ : ಕೆಲವು ವಿಷಯಗಳು ಮಕ್ಕಳ ಮಾನಸಿಕ ಮತ್ತು ಬೌಧ್ದಿಕ ಮಟ್ಟಕ್ಕೆ ಕಠಿಣವೆನಿಸಬಹುದು. ಹಾಗೆ ನೋಡಿದರೆ ಯಾವ ವಿಷಯವೂ ಕಠಿಣವಲ್ಲ. ಅದನ್ನು ತಲುಪಿಸುವ ಮಾರ್ಗದಲ್ಲಿ ಉಂಟಾದ ಲೋಪದಿಂದಾಗಿ ಅದು ಕಠಿಣವೆನಿಸುತ್ತದೆ. ವಿಷಯವನ್ನು ಸುಲಭವಾಗಿ ಕಲಿಸುವ  ಮಾರ್ಗಗಳನ್ನು ತಂತ್ರಗಾರಿಕೆಯನ್ನು ತಿಳಿದಿರಬೇಕು. ಇದನ್ನು ವಿಷಯ ಪರಿಣಿತರು ಅಥವಾ ಸಹುದ್ಯೋಗಿಗಳಿಂದಲೂ ಕಲಿಯಬಹುದು.
ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ : ಮಕ್ಕಳನ್ನು ಬೋಧನೆ-ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ತಂತ್ರವಾಗಿದೆ. ಕಲಿಕಾಂಶಗಳನ್ನು ಮಕ್ಕಳೇ ವಿವರಿಸಲು ತಿಳಿಸುವುದು. ಚಿತ್ರ, ನಕ್ಷೆ, ಗಣಿತದ ಕೆಲವು ಸಮಸ್ಯೆಗಳನ್ನು ಕಪ್ಪು ಹಲಗೆಯ ಮೇಲೆ ಮಕ್ಕಳಿಂದ ಬಿಡಿಸುವುದು ಮಕ್ಕಳ ಗಮನವನ್ನು ಕೇಂದ್ರೀಕರಿಸುವ ಮತ್ತೊಂದು ತಂತ್ರವಾಗಿದೆ.
ಹಾಸ್ಯ ಬಳಸಿ : ಗಮನ ಕೇಂದ್ರೀಕರಿಸಲು ನಗೆಹನಿಗಿಂತ ಮಿಗಿಲಾದ ಮತ್ತೊಂದು ತಂತ್ರ ಇರಲಾರದು. ಪಾಠ ಬೋಧನೆಯಲ್ಲಿ ಶಿಕ್ಷಕರು ಹಾಸ್ಯ ಸೇರಿಸುವುದನ್ನು ವಿದ್ಯಾರ್ಥಿಗಳು ಇಷ್ಟಪಡುತ್ತಾರೆ. ಹೀಗಾಗಿ ತರಗತಿಯಲ್ಲಿನ ವಸ್ತು, ವಿಷಯ, ವ್ಯಕ್ತಿಗಳ ಕುರಿತಾದ ಒಂದು ಲಘು ವ್ಯಂಗ್ಯ ಇಡೀ ತರಗತಿಯನ್ನು ನಗೆಗಡಲಲ್ಲಿ ತೇಲಿಸುತ್ತದೆ. ಜೊತೆಗೆ ಮಕ್ಕಳ ಗಮನವನ್ನು ನಿಸ್ಸಂದೇಹವಾಗಿ ಕೇಂದ್ರೀಕರಿಸುತ್ತದೆ.
ನಿಯಮಿತ ಕಾರ್ಯದ ಕಾಲಮಿತಿ ಸ್ಥಾಪಿಸಿ : ಗುಂಪು ಕಾರ್ಯಗಳನ್ನು ನೀಡುವ ಮೊದಲು ಕಾರ್ಯಕ್ಕೆ ತಕ್ಕಂತೆ ಕಾಲಮಿತಿ ನೀಡಿ. ಇದು ಅವರು ಗುರಿಯತ್ತ ಮನ್ನುಗಲು ಅವರನ್ನು ಸದಾ ಎಚ್ಚರಿಸುತ್ತದೆ.
ಯೋಜನೆ ಸ್ಪಷ್ಟವಾಗಿರಲಿ : ಕಲಿಕಾಂಶದ ಉದ್ದೇಶ ಮತ್ತು ಯೋಜನೆ ಮಕ್ಕಳಿಗೆ ಸ್ಪಷ್ಟವಾಗಿಲ್ಲದಿದ್ದರೆ ಅವರು ಗಮನ ಕಳೆದುಕೊಳ್ಳುತ್ತಾರೆ. ಕಾರಣ ಪಾಠದ ಉದ್ದೇಶ ಮತ್ತು ಯೋಜನೆಯನ್ನು ಮಕ್ಕಳಿಗೆ ಸ್ಪಷ್ಟಪಡಿಸಿ. ಕಲಿಕೆಯ ಪ್ರಮುಖಾಂಶಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಿರಿ. ಇದು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಸಹಕಾರಿ.
ಕೌಶಲ್ಯಗಳನ್ನು ಬಳಸಿಕೊಳ್ಳಿ : ಮಕ್ಕಳಲ್ಲಿ ಉತ್ತಮವಾದ ಕೌಶಲ್ಯಗಳಿರುತ್ತವೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಗುರುತಿಸಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ಕೆಲವು ವಿಷಯಗಳನ್ನು ಚರ್ಚೆ/ಸಂವಾದದ ಮೂಲಕ ಕಲಿಯಲು ಅವಕಾಶ ಒದಗಿಸಬೇಕು. ಆಗ ಎಲ್ಲರೂ ಅದರಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು.
ಪಾತ್ರಗಳನ್ನು ಸ್ಪಷ್ಟಪಡಿಸಿ : ಚರ್ಚೆ ಮತ್ತು ಸಂವಾದಗಳು ಯಶಸ್ವಿಯಾಗಲು ಪ್ರತಿ ಗುಂಪಿನ ಸದಸ್ಯರ ಪಾತ್ರದ ಸ್ಪಷ್ಟತೆ ಇರಬೇಕು. ಗುಂಪಿನಲ್ಲಿ ಯಾರು ಹೇಗೆ ಭಾಗವಹಿಸಬೇಕು?, ವಿಷಯವನ್ನು ಯಾರು, ಹೇಗೆ ಮಂಡಿಸಬೇಕು? ಪ್ರಶ್ನೆಗಳನ್ನು ಯಾರು ಕೇಳಬೇಕು? ಇತ್ಯಾದಿಗಳ ಬಗ್ಗೆ ಸ್ಪಷ್ಟತೆ ಇರಬೇಕು. ಹೀಗೆ ಪ್ರತಿಯೊಬ್ಬರ ಪಾತ್ರಗಳನ್ನು ಸ್ಪಷ್ಟಪಡಿಸುವುದರಿಂದ ಜವಾಬ್ದಾರಿ ಹೆಚ್ಚುತ್ತದೆ. ಕಲಿಕೆಯಲ್ಲಿ ಉತ್ಸುಕರಾಗಿ ಭಾಗವಹಿಸುತ್ತಾರೆ.
ಬದಲಾವಣೆ ಮತ್ತು ಅಚ್ಚರಿಯನ್ನು ಪರಿಚಯಿಸಿ : ‘ಬದಲಾವಣೆಯೊಂದೇ ಶಾಶ್ವತ’ ಎಂಬುದನ್ನು ಮಕ್ಕಳಿಗೆ ಪರಿಚಯಿಸಿ. ನಮ್ಮ ಪರಿಸರದಲ್ಲಿ ಏನೇನು ಬದಲಾವಣೆಗಳು ಆಗುತ್ತಿವೆ ಎಂಬುದನ್ನು ಗಮನಿಸಲು ತಿಳಿಸಿ. ಆಗ ಪರಿಸರದ ಬಗ್ಗೆ ಕಾಳಜಿ ಸಹಜವಾಗಿ ಮೂಡುತ್ತದೆ. ಪ್ರತಿ 10-15 ನಿಮಿಷಗಳಿಗೊಮ್ಮೆ ಅಚ್ಚರಿಯ ಕೆಲವು ಅಂಶಗಳನ್ನು ತಿಳಿಸಿ, ಅಥವಾ ಒಂದು ನಗೆಹನಿಯನ್ನಾದರೂ ಹೇಳಿ. ಇದು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಸಹಕಾರಿಯಾಗುತ್ತದೆ.
ಒತ್ತಡ ನಿವಾರಿಸಿ : ಅಮೂರ್ತ ಮನಸ್ಸಿನ ನಿರ್ವಹಣೆ ಅಸಾದ್ಯ. ನೋಟ, ಧ್ವನಿ, ರುಚಿ, ಅಭಿಪ್ರಾಯಗಳ ಮೂಲಕ ಸಂಪರ್ಕ ಮತ್ತು ಸಂವೇದನಾ ವಿವರಗಳನ್ನು ವಾಸ್ತವಕ್ಕೆ ತನ್ನಿ. ಮಕ್ಕಳು ಆಲೋಚಿಸಲು ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿ. ಒತ್ತಾಯ ಪೂರ್ವಕ ಕಲಿಕೆ ಬೇಡ.
ಕಥೆ ಹೇಳಿ : ಮನಸ್ಸು ಪ್ರಫುಲ್ಲವಾಗಿರಲು ಕಥೆಗಳು ಸಹಾಯಕ. ಕಥೆಗಳು ಮಕ್ಕಳ ಗಮನವನ್ನು ಕೇಂದ್ರೀಕರಿಸುವುದಲ್ಲದೇ ಕಲಿಕೆಯನ್ನು ಸುಗಮ ಹಾಗೂ ಸುಮನೋಹರಗೊಳಿಸುತ್ತವೆ. ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಯಲು ಸಹಕಾರಿಯಾಗಿವೆ.
ಈ ಮೇಲಿನ ಅಂಶಗಳಲ್ಲದೇ ನಿಮ್ಮದೇ ಆದ ತಂತ್ರಗಳನ್ನೂ ಬಳಸಿ ತರಗತಿಯಲ್ಲಿ ಮಕ್ಕಳ ಅವಧಾನವನ್ನು ಕೇಂದ್ರೀಕರಿಸಬಹುದು. ಒಟ್ಟಾರೆ ಕಲಿಕೆ ಸಂತಸವಾಗಿರಬೇಕು ಹಾಗೂ ಶಾಶ್ವತವಾಗಿರಬೇಕು.
ಆರ್.ಬಿ.ಗುರುಬಸವರಾಜ 


ಬದಲಾಗಲಿ ನಮ್ಮ ವರ್ತನೆಗಳು

ಜನವರಿ 2016 ರ 'ಟೀಚರ್' ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

ಬದಲಾಗಲಿ ನಮ್ಮ ವರ್ತನೆಗಳು

“ನಮ್ಮ ಮೋಹನನಿಗೆ ತುಂಬಾ ಹಠ. ಕೇಳಿದ್ದನ್ನೆಲ್ಲಾ ಕೊಡಿಸಲೇಕು. ಇಲ್ಲಾಂದ್ರೆ ಮನೆಯ ಸಾಮಾನುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬಿಡ್ತಾನೆ” ಎನ್ನುತ್ತಾರೆ ತಾಯಿ ಸುಶೀಲಮ್ಮ.
“ಅಯ್ಯೋ ನಮ್ಮ ಸೌಮ್ಯನೂ ಹಾಗೇ ಕಣ್ರೀ. ಅವಳು ಯಾವಾಗ್ಲೂ ಟಿ.ವಿ. ನೋಡ್ತಾನೆ ಇರ್ತಾಳೆ. ಈ ಬಾರಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಹೇಗೆ ಬರೀತಾಳೋ” ಎಂದು ಅಲವತ್ತುಕೊಂಡ್ರು ಸೌಮ್ಯಳ ತಾಯಿ ವಿಶಾಲಮ್ಮ.
“ಈಗಿನ ಮಕ್ಕಳಂತೂ ತಂದೆ ತಾಯಿ ಮಾತು ಕೇಳೋದೇ ಇಲ್ಲ. ಯಾವಾಗ್ಲೂ ಮೊಬೈಲ್‍ನಲ್ಲೇ ಕಳೆದು ಹೋಗ್ತಾರೆ” ಎನ್ನುತ್ತಾರೆ ಮುನಿವೆಂಕಟಪ್ಪ.
ಇಂತಹ ಅದೆಷ್ಟೋ ಮಾತುಗಳು ದಿನನಿತ್ಯವೂ ನಮ್ಮ ಕಿವಿಮೇಲೆ ಬೀಳುತ್ತಲೇ ಇರುತ್ತವೆ ಅಥವಾ ಇಂತಹ ಸಮಸ್ಯೆಯನ್ನು ಪ್ರತಿ ಪೋಷಕರೂ ಅನುಭವಿಸಿಯೇ ಇರುತ್ತಾರೆ. ಇದಕ್ಕೆಲ್ಲಾ ಕಾರಣ ಏನು ಹುಡುಕಿ ಹೊರಟರೆ ಅದು ಸುತ್ತಿ ಬಂದು ನಿಲ್ಲುವುದೇ ನಮ್ಮಲ್ಲಿ. ಆಶ್ಚರ್ಯವಾಗುತ್ತಿದೆಯೇ? ಹೌದು. ನಾವು ನಮ್ಮ ಮಕ್ಕಳನ್ನು ಬೆಳೆಸುವ ರೀತಿ ಸರಿ ಇದೆಯೇ? ಒಮ್ಮೆ ಪ್ರಶ್ನಿಸಿಕೊಳ್ಳೊಣ. ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಖಂಡಿತವಾಗಿ ನಾವು ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ. 
ಇಂದಿನ ಜಂಜಡದ ಜೀವನದಲ್ಲಿ ಮಕ್ಕಳ ಪಾಲನೆಯನ್ನು ಕಡೆಗಣಿಸಿದ್ದೇವೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಮಧ್ಯ ಅಂತರ ಹೆಚ್ಚುತ್ತಿದೆ. ಮಕ್ಕಳೊಂದಿಗೆ ಕಾಲ ಕಳೆಯಲು ಪುರುಸೊತ್ತು ಇಲ್ಲದಾಗಿದೆ. ಹಾಗಾಗಿ ನಮ್ಮ ಮಕ್ಕಳು ನಮ್ಮ ಮಾತು ಕೇಳದ ಸ್ಥಿತಿ ಬಂದೊದಗಿದೆ. 
ಪೋಷಕರಾದ ನಾವು ಮಕ್ಕಳ ವರ್ತನೆಗಳನ್ನು ಬದಲಾಯಿಸುವ ಮೊದಲು ನಮ್ಮ ವರ್ತನೆಗಳನ್ನು ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ನಮ್ಮ ವರ್ತನೆಗಳು ಮಕ್ಕಳಲ್ಲಿ ಪ್ರತಿಫಲಿಸುತ್ತವೆ ಅಲ್ಲವೇ? ನಮ್ಮ ಪ್ರತಿ ನಡವಳಿಕೆಗಳನ್ನು ಸದಾ ಅವರು ಗಮನಿಸುತ್ತಿರುತ್ತಾರೆ ಮತ್ತು ಅನುಸರಿಸುತ್ತಾರೆ. ಜ್ಞಾನದ ಕೊರತೆಯಿಂದಲೋ ಅಥವಾ ನಮ್ಮ ನಿರ್ಲಕ್ಷತನದಿಂದಲೋ ಮಕ್ಕಳು ಸ್ವೀಕಾರಾರ್ಹವಲ್ಲದ ವರ್ತನೆಗಳನ್ನು ತೋರುತ್ತೇವೆ. ಮಕ್ಕಳ ಭಾವನೆಗಳಿಗೆ ಆಧ್ಯತೆ ನೀಡಲು ವಿಫಲರಾಗುತ್ತೇವೆ. ನಮ್ಮ ಮಕ್ಕಳನ್ನು ಸುಧಾರಿಸುತ್ತೇವೆ ಎಂಬ ಅಂಧವಿಶ್ವಾಸದಿಂದ ಮಕ್ಕಳ ಪ್ರತಿಭೆಯನ್ನು ಹಾಳು ಮಾಡುತ್ತೇವೆ. 
ಕೆಲವು ವೇಳೆ ನಮ್ಮಲ್ಲಿನ ಮಾನಸಿಕ ಒತ್ತಡವನ್ನು ಅನಾವಶ್ಯಕವಾಗಿ ಮಕ್ಕಳ ಮೇಲೆ ಪ್ರದರ್ಶಿಸುತ್ತೇವೆ. ಮಕ್ಕಳೊಂದಿಗೆ ಸಂವಾದ ನಡೆಸುವ ಪರಿಪಾಠವನ್ನು ನಾವಿನ್ನೂ ಬೆಳೆಸಿಕೊಂಡಿಲ್ಲ. ಮಕ್ಕಳ ಕನಸಿಗೆ ಬಣ್ಣ ಹಚ್ಚುವ ಬದಲು ನಮ್ಮ ನಿರೀಕ್ಷೆಗಳಿಗೆ ಬೃಹದಾಕಾರ ನೀಡುತ್ತೇವೆ. ಆ ನಿರೀಕ್ಷೆಗಳನ್ನು ಒತ್ತಾಯಪೂರ್ವಕವಾಗಿ ಮಕ್ಕಳ ಮೇಲೆ ಹೇರುತ್ತೇವೆ. ಮಕ್ಕಳ ಬೇಕು ಬೇಡಗಳನ್ನು ಆಲಿಸುವ ಕನಿಷ್ಟ ಶಿಷ್ಟಾಚಾರ ನಮ್ಮಲ್ಲಿ ಬೆಳೆದಿಲ್ಲ. ಹೀಗೆ ನಮ್ಮೆಲ್ಲ ತಪ್ಪುಗಳಿಂದಾಗಿ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ನಾವೇ ಶತೃಗಳಾಗುವ ಸಾಧ್ಯತೆ ಹೆಚ್ಚು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಪಾಲಕರೂ ಪರ್ಯಾಯ ವರ್ತನಾ ತಂತ್ರಗಳನ್ನು ಅಳವಡಿಸಿಕೊಳ್ಳಲೇಬೇಕು. 
ಅನುಸರಿಸಬೇಕಾದ ವರ್ತನಾ ತಂತ್ರಗಳು
ಭಾಗೀದಾರರಾಗಿ : ಮಗುವಿನ ಪ್ರತಿದಿನದ ಕಲಿಕೆ, ಆಟ, ಪಾಠ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗೀದಾರರಾಗಿ. ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿ. ಕ್ಲಿಷ್ಟತೆ ನಿವಾರಣೆಗೆÉ ಸಹಾಯ ಮಾಡಿ. 
ಸಮಯ ಹೊಂದಿಸಿಕೊಳ್ಳಿ : ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಯ ನಿಗದಿಗೊಳಿಸುವಂತೆ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯ ಹೊಂದಿಸಿಕೊಳ್ಳಿ. ಹೊಂವರ್ಕ್ ಮಾಡಲು, ಪ್ರೋಜೆಕ್ಟ್ ತಯಾರಿಸಲು ಸಹಾಯಮಾಡಿ. ರಾತ್ರಿ ಊಟದ ವೇಳೆ ಅವರೊಂದಿಗೆ ಊಟ ಮಾಡುತ್ತಾ ಉತ್ತಮ ಆಹಾರ ಸೇವನಾ ವಿಧಾನಗಳನ್ನು ತಿಳಿಸಿಕೊಡಿ. 
ದ್ವಂದ್ವ ಬೇಡ : ಮಗುವಿಗೆ ಹೇಳುವ ಬೋಧನೆ ನಿಖರವಾಗಿರಲಿ. ದ್ವಂದ್ವ ಅಥವಾ ಅನುಮಾನಾಸ್ಪದ ಹೇಳಿಕೆಗಳು ಬೇಡ. ನಮ್ಮ ಬೋಧನೆಗೂ ಮತ್ತು ವರ್ತನೆಗೂ ಸಾಮ್ಯತೆ ಇರಲಿ. ‘ಹೇಳುವುದು ಒಂದು ಮಾಡುವುದು ಇನ್ನೊಂದು’ ಎನ್ನುವಂತಾಗಬಾರದು. ನಮ್ಮ ವರ್ತನೆಯಲ್ಲಿ ನಿಖರತೆ ಇರಲಿ ಮತ್ತು ಅನುಸರಿಸುವ ಕ್ರಮದ ಸರಿಯಾದ ವಿವರಣೆ ಇರಲಿ.
ಸ್ನೇಹ ಬಳಗದ ಮೇಲೆ ಗಮನ ಇರಲಿ : ಬಹುತೇಕ ಪಾಲಕರು ತಮ್ಮ ಮಗುವಿನ ಸ್ನೇಹ ಬಳಗವನ್ನು ಸಂಪೂರ್ಣವಾಗಿ ಕಡೆಗಣಿಸಿರುತ್ತಾರೆ. ಇದು ತಪ್ಪು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪಾಲಕರು ಸಹಾಯ ಮಾಡಬೇಕು. ಮಕ್ಕಳು ಸ್ನೇಹಿತರನ್ನು ಎಲ್ಲಿ, ಯಾವಾಗ, ಏತಕ್ಕಾಗಿ ಭೇಟಿಯಾದರು ಎಂಬ ಬಗ್ಗೆ ಮಾಹಿತಿ ಇರಬೇಕು. ತಪ್ಪಿದಾಗ ಬುದ್ದಿ ಹೇಳಬೇಕು.
ಗೌರವಿಸುವುದನ್ನು ಕಲಿಯೋಣ : ಮಕ್ಕಳ ಭಾವನೆಗಳು ಮತ್ತು ಅನಿಸಿಕೆಗಳಿಗೆ ಗೌರವ ಕೊಡುವುದು ಮುಖ್ಯ. ಅವರಿನ್ನೂ ಚಿಕ್ಕವರು, ಕೇವಲ ಮಾರ್ಗದರ್ಶನ ಪಡೆಯುವವರು ಎಂದು ನಿರ್ಲಕ್ಷಿಸುವುದು ಬೇಡ. ನಿರ್ಧಾರ ಮತ್ತು ಆಯ್ಕೆಯ ವಿಧಾನಗಳನ್ನು ಮಾತ್ರ ಅವರಿಗೆ ತಿಳಿಸೋಣ. ನಿರ್ಧಾರ ಮತ್ತು ಆಯ್ಕೆಯನ್ನು ಅವರಿಗೇ ಬಿಡೋಣ. 
ಹೋಲಿಕೆ ಬೇಡ : ವಿನಾಕಾರಣ ಮಗುವನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಸುವುದು ಸರಿಯಲ್ಲ. ಪ್ರತೀ ಮಗುವಿನ ಆಸಕ್ತಿ, ಸಾಮಥ್ರ್ಯ ಮತ್ತು ಪ್ರತಿಭೆಗಳು ವಿಭಿನ್ನವಾಗಿರುತ್ತವೆ. ಕೌಟುಂಬಿಕ ಮತ್ತು ಸಾಮಾಜಿಕ ಪರಿಸರ, ಅನುಭವ, ಸಂಸ್ಕøತಿ, ಆಚಾರ ವಿಚಾರಗಳು ಪ್ರತೀ ಮಗುವಿನಲ್ಲೂ ವಿಭಿನ್ನವಾಗಿರುತ್ತವೆ. ಒಂದು ಮಗು ತರಗತಿ ಕಲಿಕೆಯಲ್ಲಿ ಮುಂದಿದ್ದರೆ ಇನ್ನೊಂದು ಮಗು ತರಗತಿ ಹೊರಗಿನ ಕಲಿಕೆಯಲ್ಲಿ ಮುಂದಿರುತ್ತದೆ. ಹಾಗಾಗಿ ಒಂದು ಮಗುವಿನೊಂದಿಗೆ ಇನ್ನೊಂದು ಮಗುವಿನ ಹೋಲಿಕೆ ಸರಿಯಲ್ಲ.
ಅವಾಸ್ತವಿಕ ನಿರೀಕ್ಷೆ ಬೇಡ : ಮಗುವಿಗೆ ಸಮಯ ಮತ್ತು ಅಧ್ಯಯನ ವಾತಾವರಣ ಮಾತ್ರ ನಿರ್ಮಿಸಿಕೊಡಿ. ಅವರ ಮೇಲೆ ಅತಿಯಾದ ಅನಗತ್ಯವಾದ ನಿರೀಕ್ಷೆ ಮತ್ತು ಒತ್ತಡ ಬೇಡ. ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 
ವಿವರಿಸಿ ಸರಿಪಡಿಸಿ : ಮಕ್ಕಳಲ್ಲಿ ಅಹಿತಕರ ವರ್ತನೆ ಕಂಡು ಬಂದಲ್ಲಿ ಅದರ ಬಗ್ಗೆ ವಿವರಿಸಿ ಸರಿಪಡಿಸಿ. ಅಧಿಕಾರಯುತವಾಗಿ ಪಾಲಕರ ಶೈಲಿಯಲ್ಲಿ ಸರಿಪಡಿಸದೇ ಸ್ನೇಹಿತರ ಶೈಲಿಯಲ್ಲಿ ಸರಿಪಡಿಸಿ. ಇದು ಸ್ವಾಭಾವಿಕವಾಗಿ ಮುಂದಿನ ತಪ್ಪುಗಳನ್ನು ಕಡಿಮೆ ಮಾಡುತ್ತದೆ. 
ಶಿಕ್ಷೆ ಮತ್ತು ನಿಯಂತ್ರಣ : ಮಕ್ಕಳಿಗೆ ಕಠೋರ ಶಿಕ್ಷೆಯಾಗಲಿ ಅಥವಾ ಕಟ್ಟುನಿಟ್ಟಿನ ನಿಯಂತ್ರಣವಾಗಲೀ ಬೇಡ. ಇವು ಮಕ್ಕಳಲ್ಲಿ ಆಕ್ರಮಣಕಾರಿ  ಮತ್ತು ಕ್ರಾಂತಕಾರಕ ವರ್ತನೆಗೆ ಕಾರಣವಾಗುತ್ತವೆ. ಶಿಕ್ಷೆ ಮತ್ತು ನಿಯಂತ್ರಣ ಹಾಕುವಾಗ ಅವರೂ ಕೂಡಾ ನಮ್ಮಂತೆ ಮನುಷ್ಯರು ಎಂಬ ಭಾವನೆಯಿರಲಿ. 
ಪ್ರಜಾಸತ್ತಾತ್ಮಕ ವಾತಾವರಣ ನಿರ್ಮಿಸಿ : ಪ್ರಜಾಸತ್ತಾತ್ಮಕ ತತ್ವಗಳಾದ ಸ್ವಾತಂತ್ರ, ಸಮಾನತೆ, ಭ್ರಾತೃತ್ವ, ಇತ್ಯಾದಿಗಳನ್ನು ಕುಟುಂಬದ ಸದಸ್ಯರು ಕಡ್ಡಾಯವಾಗಿ ಅನುಸರಿಸುವ ಮೂಲಕ ಉತ್ತಮ ನಾಗರಿಕರನ್ನು ಬೆಳೆಸೋಣ. ದೇಶದ ಏಳಿಗೆ ಕುಟುಂಬದಿಂದಲೇ ಪ್ರಾರಂಭವಾಗಲು ಕೈಜೋಡಿಸೋಣ.
ಮೇಲಿನ ಅಂಶಗಳಿಂದ ನಮಗೊಂದು ಸ್ಪಷ್ಟ ಚಿತ್ರಣ ದೊರೆತಿದೆ. ನಮ್ಮಿಂದ ಆಗಬಹುದಾದ ತಪ್ಪುಗಳನ್ನು ನಿಲ್ಲಿಸಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ನಮ್ಮದೇ ಆದ ಕೊಡುಗೆ ನೀಡೋಣ. ಏಕೆಂದರೆ ನಮ್ಮ ಭವಿಷ್ಯ ನಮ್ಮ ಮಕ್ಕಳ ಕೈಯಲ್ಲಿದೆ. ಆದ್ದರಿಂದ ನಮ್ಮ ವರ್ತನೆಗಳು ಬದಲಾಗಬೇಕು. ಅವು ನಮ್ಮ ಮಕ್ಕಳ ವ್ಯಕ್ತಿತ್ವವನ್ನು ಉತ್ತಮ ಪಡಿಸುವಂತಾಗಬೇಕು.
ಆರ್.ಬಿ.ಗುರುಬಸವರಾಜ