April 20, 2016

ಕಾರ್ಕಳದ ಶಿಲ್ಪಗಳು SATISH ACHARYA

ದಿನಾಂಕ 19-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ

ರಾಷ್ಟ್ರಪತಿ ಭವನಕ್ಕೆ ಹೊರಟ ಕಾರ್ಕಳದ ಶಿಲ್ಪಗಳು


ಅವು ಸಾಧಾರಣ ಶಿಲ್ಪಗಳಲ್ಲ. ಎರಡು ನಿಮಿಷಕ್ಕೂ ಹೆಚ್ಚು ಹೊತ್ತು ತದೇಕ ಚಿತ್ತದಿಂದ ವೀಕ್ಷಿಸಿದಲ್ಲಿ ಜೀವ ತಳೆದು ಮಾತನಾಡುವಂತೆ ಭಾಸವಾಗುತ್ತದೆ. ಪುನೀತ ಭಾವದಿಂದ ಪುಳಕಿತರಾಗುತ್ತೇವೆ. ಸೂಕ್ಷ್ಮ ಕೆತ್ತನೆಯ ಕುಸುರಿ  ಕೈಚಳಕಕ್ಕೆ ಅಚ್ಚರಿಗೊಳ್ಳುತ್ತೇವೆ. ಅಂದಹಾಗೆ ಈ ಶಿಲ್ಪಗಳು ದೇಶದ ಪ್ರಥಮ ಪ್ರಜೆಯ ನಿವಾಸಕ್ಕೆ ಕಾಲಿಡಲು ಸಜ್ಜಾಗಿವೆ. ಅಂದರೆ ರಾಷ್ಟ್ರಪತಿ ಭವನಕ್ಕೆ ತೆರಳಲು ತಯಾರಾಗಿವೆ. ಇಂತಹ ಶಿಲ್ಪಗಳು  ನಮ್ಮ ಕರ್ನಾಟಕದಲ್ಲಿ ನಿರ್ಮಾವಾಗಿವೆ ಎಂದರೆ ಆಶ್ಚರ್ಯವಾಗುತ್ತದೆ. ಉಡುಪಿಯ ಕಾರ್ಕಳದಲ್ಲಿ ನಿರ್ಮಿತವಾದ ಈ ಶಿಲ್ಪಗಳು ಇಡೀ ವಿಶ್ವದ ಗಮನ ಸೆಳೆಯುವ ದೇಶದ ಶಕ್ತಿ ಕೇಂದ್ರದ ಆವರಣದಲ್ಲಿ ನೆಲೆ ನಿಲ್ಲುತ್ತಿವೆ.
ನಿರ್ಮಾತೃ : ಈ ಶಿಲ್ಪಗಳು ಕಾರ್ಕಳದ ಪ್ರಸಿದ್ದ ಶಿಲ್ಪಿ ಕೆ.ಶ್ಯಾಮರಾಯಾಚಾರ್ಯ ಅವರ ಪುತ್ರ ಸತೀಶ್ ಆಚಾರ್ಯ ಅವರ ಕೈಚಳಕದ ಪ್ರತೀಕಗಳಾಗಿವೆ. ಸತೀಶ್ ಆಚಾರ್ಯ ಅವರ ಕಲಾಪ್ರತಿಭೆಗೆ ತಲೆದೂಗದವರಿಲ್ಲ. ಧರ್ಮ, ಅಧರ್ಮದ ವಿಚಾರಗಳನ್ನು ತಮ್ಮ ಶಿಲ್ಪರಚನಾ ಪ್ರವೃತ್ತಿಯಲ್ಲಿ ವೇದ್ಯವಾಗುವಂತೆ ನಿರ್ಮಿಸಿ ಪ್ರೇಕ್ಷಕನಿಗೆ ಅಮಿತಾನಂದವನ್ನು ನೀಡಿದವರು ಸತೀಶ ಆಚಾರ್ಯ.
ಪ್ರಪಂಚವನ್ನೇ ಕಾಣದ ಕುರುಡನೂ ಕೂಡಾ ಶಿಲ್ಪಗಳನ್ನು ಸ್ಪರ್ಶಿಸಿ ಅದರ ರಸಾನುಭವವನ್ನು ಸವಿಯುವಂತೆ ಶಿಲ್ಪಗಳನ್ನು ನಿರ್ಮಿಸುವ ಕಲೆ ಸತೀಶ ಅವರಿಗೆ ಕರಗತವಾಗಿದೆ. ಪ್ರತೀ ಶಿಲ್ಪಗಳೂ ಕೂಡಾ ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ರಚಿತವಾಗಿರುವುದರಿಂದ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವೇ ಇಲ್ಲ. 
ಈ ಶಿಲ್ಪಗಳನ್ನು ಕಾರ್ಕಳದ ಬಳಿಯ ನೆಲ್ಲಿಕಾರು ಅರಣ್ಯಗಳಲ್ಲಿ ಮಾತ್ರ ದೊರೆಯುವ ಕೃಷ್ಣಶಿಲೆಗಳಿಂದ ನಿರ್ಮಿಸಲಾಗಿದೆ.  ಕೆತ್ತನೆಯಲ್ಲಿ  ಜಕಣಾಚಾರಿ, ಡಕ್ಕಣಾಚಾರಿಯವರ ಶೈಲಿ ಅನುಸರಿಸಿದ್ದರೂ ಸಂಪೂರ್ಣವಾಗಿ ಸತೀಶ್ ಆಚಾರ್ಯ ಅವರ ವಿನ್ಯಾಸ ಹಾಗೂ ಕುಸುರಿ ಕೆತ್ತನೆ ಎದ್ದು ಕಾಣುತ್ತದೆ. ಕೆತ್ತನೆಯಲ್ಲಿ ತಂತ್ರಸಮುಚ್ಛಯ ಅನುಸರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರವೃತ್ತಿಯೇ ವೃತ್ತಿಯಾದಾಗ,,,,,, : ಸತೀಶ್ ಆಚಾರ್ಯರಿಗೆ ಬಾಲ್ಯದಿಂದಲೂ ಶಿಲ್ಪಕಲೆಯಲ್ಲಿ ಆಸಕ್ತಿ ಇತ್ತು. ತಂದೆ ರಚಿಸುತ್ತಿದ್ದ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿ ಬಿಡುವಿನ ವೇಳೆಯಲ್ಲಿ ತಂದೆಯ ಜೊತೆ ಕೆತ್ತನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪಿ.ಯು.ಸಿ ನಂತರ ಎಲೆಕ್ಟ್ರಿಕಲ್ ಇಂಜಿಯರಿಂಗ್‍ನಲ್ಲಿ ಡಿಪ್ಲಾಮೋ ಪಡೆದರು. ‘ರೋಲ್ ಇಲೆಕ್ಟ್ರಾನಿಕ್ಸ್’ನಲ್ಲಿ ಸೇವೆಗೆ ಸೇರಿದರು. ಅದಾಗಲೇ ಅವರ ಮನಸ್ಸು ಶಿಲ್ಪಕಲೆಯ ಕಡೆಗೆ ವಾಲತೊಡಗಿತ್ತು. ತಂದೆಯವರ ಶಿಲ್ಪಕಲೆಯಿಂದ ಪ್ರೇರಿತರಾಗಿ 1986ರಲ್ಲಿ ಸಂಪೂರ್ಣವಾಗಿ ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಂಡರು.
ಬಿಡುವಿಲ್ಲದ ಕಾಯಕ : ತಂದೆಯವರ ಮಾರ್ಗದರ್ಶನದ ಗರಡಿಯಲ್ಲಿ ಪಳಗಿದ ಸತೀಶ್ ಅವರ ಕೆಲಸದ ಬಗ್ಗೆ ಅವರೇ ರಚಿಸಿದ ಶಿಲ್ಪಗಳೇ ಮಾತನಾಡುತ್ತವೆ. ರಾಜ್ಯದ ನಾನಾ ಭಾಗಗಳಿಂದ ಕಲಾರಸಿಕರು, ಕಲಾರಾಧಕರು ತಂಡ ತಂಡವಾಗಿ ಆಗಮಿಸಿ ತಮಗೆ ಬೇಕಾದ ಶಿಲ್ಪಗಳ ಆರ್ಡರ್ ನೀಡತೊಡಗಿದರು. ಬೇಡಿಕೆ ಹೆಚ್ಚಿದಂತೆಲ್ಲಾ ಕೆಲಸದ ಒತ್ತಡವೂ ಅಧಿಕವಾಯಿತು. ಒಬ್ಬ ಅಸಾಮಾನ್ಯ ಶಿಲ್ಪಿಗಿರಬೇಕಾದ ಚತುರತೆ, ಸಂಯಮ, ಮಾತುಗಾರಿಕೆ, ಪರಿಶುದ್ದ ಮನಸ್ಸು, ಮತ್ತು ಆತ್ಮವಿಶ್ವಾಸಗಳು ಅವರನ್ನು ವಿಶಿಷ್ಟ ಶಿಲ್ಪಿಯನ್ನಾಗಿಸಿದವು. 
ದೇಶ ವಿದೇಶದಲ್ಲಿ ಶಿಲ್ಪಗಳ ವೈಭವ : ಸತೀಶ ಆಚಾರ್ಯ ಅವರ ಶಿಲ್ಪ ವೈಭವ ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೀಮೀತವಾಗಿಲ್ಲ. ವಿದೇಶಗಳಲ್ಲೂ ಇವರ ಶಿಲ್ಪಗಳು ಕಲಾ ರಸಿಕರ ಮನಸೆಳೆದಿವೆ. ಸತೀಶ್ ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟ ಶಿಲ್ಪಾಕೃತಿಯೆಂದರೆ ದೆಹಲಿಯ ಮೆಹರೋಲಿಯಲ್ಲಿನ ಹದಿಮೂರುವರೆ ಅಡಿ ಎತ್ತರದ ಬೃಹದಾಕಾರದ ಧ್ಯಾನಮುದ್ರೆಯ ಶ್ರೀಮಹಾವೀರನ ಶಿಲ್ಪ. 20 ಟನ್ ತೂಕದ ನಸುಗೆಂಪು ಗ್ರಾನೈಟ್ ಶಿಲೆಯಿಂದ ನಿರ್ಮಿಸಿದ ಈ ಶಿಲ್ಪವು ಸತೀಶ್ ಆಚಾರ್ಯರ ಕೀರ್ತಿಯನ್ನು ದಿಕ್ಕುದಿಕ್ಕಿಗೂ ಪಸರಿಸಿತು. ಇವರ ಶಿಲ್ಪಗಳು ಇಟಲಿ, ಕೆನಡಾ, ಲಂಡನ್, ಜಪಾನ್, ದುಬೈ ಮುಂತಾದ ವಿದೇಶಗಳಲ್ಲಿ ಕಲಾರಸಿಕರ ಮನೆಮಾತಾಗಿವೆ. 
ಶಿಲ್ಪಗ್ರಾಮ : ‘ಕಲೆಯನ್ನು ಉಳಿಸಲು ಕಲಿಸಬೇಕಾದುದು ಅನಿವಾರ್ಯ’ ಎಂಬ ತತ್ವ ಸಿದ್ದಾಂತದೊಂದಿಗೆ ಕಾರ್ಕಳದಲ್ಲಿ 2 ಎಕರೆ ಜಮೀನಿನಲ್ಲಿ ‘ವಿಜಯ ಶಿಲ್ಪಕಲಾ ಕೇಂದ್ರ’ವನ್ನು ಸ್ಥಾಪಿಸಿ ಅದರ ಮೂಲಕ ಕಲೆಯನ್ನು ಕಲಿಸುತ್ತಿದ್ದಾರೆ. ಪ್ರಸ್ತುತ 15 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಶಿಲ್ಪಕಲೆಯನ್ನು ಕಲಿತು ಸ್ವತಂತ್ರವಾಗಿ ಉದ್ಯೋಗದಲ್ಲಿದ್ದಾರೆ. ಅದರಲ್ಲಿ 25ಕ್ಕೂ ಹೆಚ್ಚು ಜನ ಇಲ್ಲಿಯೇ ವೃತ್ತಿ ನಡೆಸುತ್ತಿದ್ದರೆ. ಸಾಂಸ್ಕøತಿಕ ರಾಯಭಾರಿಗಳನ್ನು ನಿರ್ಮಿಸಿ ಕಲೆಯ ಪಾಳೆಯಗಾರರನ್ನು ಸೃಷ್ಟಿಸುವಲ್ಲಿ ಶಿಲ್ಪಗ್ರಾಮವು ತನ್ನದೇ ಆದ ಹೆಗ್ಗುರುತು ಹೊಂದಿದೆ. 
ಭವಿಷ್ಯದ ಕನಸು : ಸರ್ಕಾರದ ಯಾವುದೇ ಸಹಾಯಗಳ ಹಂಗಿಲ್ಲದೇ ಸಾಗಿದ ಅವರ ಶಿಲ್ಪಸೇವೆಯ ಭವಿಷ್ಯದಲ್ಲಿ ಅನೇಕ ಯೋಜನೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಶಿಲ್ಪಕಲಾ ಸಂಶೋಧಕರಿಗಾಗಿ ಶಿಲ್ಪಕಲಾ ಮ್ಯೂಸಿಯಂ  ಮತ್ತು ಗ್ರಂಥಾಲಯ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಅಲ್ಲದೇ ವಿಶ್ವಕರ್ಮದವರಲ್ಲಿ ಇರಬೇಕಾದ  ಪಂಚಲೋಹ, ಶಿಲೆ, ಕಾಷ್ಠ, ಚಿನ್ನ, ಕಮ್ಮಾರಿಕೆ ಈ ಐದು ಕಲೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನದಲ್ಲಿದ್ದಾರೆ.
ಸರಳ ಜೀವನ, ಸನ್ಮಾನಗಳ ಹೂರಣ : ತೀರಾ ಸರಳ ಜೀವನ ನಡೆಸುವ ಸತೀಶ್ ಆಚಾರ್ಯ ಅವರ ಕಲೆಯನ್ನು ಮೆಚ್ಚಿ ಅನೇಕ ಸಂಘ-ಸಂಸ್ಥೆಗಳು ಅಭಿನಂದಿಸಿ ಗೌರವಿಸಿವೆ. ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಆದರೆ ಅವೆಲ್ಲವುಗಳಿಗಿಂತ ಮಿಗಿಲಾದ ಮಂದಸ್ಮಿತ, ಆತ್ಮೀಯತೆಯ ಉಪಚಾರ, ಸಕಲರಿಗೂ ಶ್ರೇಷ್ಠತೆಯನ್ನು ಬಯಸುವ ಅವರ ಗುಣಗಳಿಗೆ ಯಾವುದೇ ಪ್ರಶಸ್ತಿ/ಸನ್ಮಾನಗಳು ಸಾಟಿಯಲ್ಲ. ಅವರಿಗೆ ಅವರೇ ಸಾಟಿ.
ಆರ್.ಬಿ.ಗುರುಬಸವರಾಜ 

ಹಳ್ಳಿ ಹೈದರ ರಜಾ-ಮಜಾ

ದಿನಾಂಕ 18-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ

ಹಳ್ಳಿ ಹೈದರ ರಜಾ-ಮಜಾ


ಬೇಸಿಗೆ ರಜೆ ಬಂತೆಂದರೆ ಸಾಕು. ಮಕ್ಕಳಲ್ಲಿ ಒಂದು ಹೊಸ ಸಂಚಲನ ಪ್ರಾರಂಭವಾಗುತ್ತದೆ. ಅದು ಶಾಲೆಗೆ ಹೋಗುವ ಕಾಟ, ಹೋಮ್‍ವರ್ಕ್‍ನ ಕಿರಿಕಿರಿ, ಟೆಸ್ಟ್ ಪರೀಕ್ಷೆಗಳ ರಗಳೆ ಹೀಗೆ ಯಾಂತ್ರಿಕೃತ ಜೀವನ ಸ್ವಲ್ಪ ದಿನಗಳವರೆಗೆ ತಪ್ಪಿತಲ್ಲ ಎಂಬುದೇ ಅವರ ಖುಷಿಗೆ ಕಾರಣವಾಗಿರಬಹುದು. 
ಬೇಸಿಗೆ ರಜೆ ಮಕ್ಕಳಿಗೆ ಖುಷಿಯ ವಿಷಯವಾದರೆ ಪಾಲಕರಿಗೆ ತಲೆನೋವಿನ ವಿಷಯ. ರಜೆಯ ಎರಡು ತಿಂಗಳಲ್ಲಿ ಈ ಮಕ್ಕಳನ್ನು ಹೇಗಪ್ಪಾ ಸಂಭಾಳಿಸೋದು ಎಂಬುದು ಅವರ ತಲೆನೋವಿಗೆ ಕಾರಣ. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅವರು ಕಂಡುಕೊಂಡ ಸುಲಭ ಮಾರ್ಗ ಎಂದರೆ ಮಕ್ಕಳನ್ನು ಶಿಬಿರಗಳಿಗೆ ಸೇರಿಸುವುದು. ಈ ಶಿಬಿರಗಳೂ ಸಹ ಶಾಲೆಯ ಮತ್ತೊಂದು ರೂಪ ಎಂಬುದನ್ನು ಬಹುತೇಕ ಪಾಲಕರು ಇನ್ನೂ ಅರ್ಥೈಸಿಕೊಂಡಿಲ್ಲ. 
ಮಕ್ಕಳನ್ನು ಶಿಬಿರಕ್ಕೆ ಸೇರಿಸುವ ಬದಲು ಹಳ್ಳಿಗಳಿಗೆ ಕರೆದೊಯ್ದರೆ ಜೀವನದ ನಿಜವಾದ ಮತ್ತು ಬೆಲೆಕಟ್ಟಲಾಗದ ಪಾಠವನ್ನು ಕಲಿಯುತ್ತಾರೆ. ಮಕ್ಕಳನ್ನು ಹಳ್ಳಿಗಳಿಗೆ ಕರೆದೊಯ್ಯುವುದರಿಂದ ಅವರು ಅಲ್ಲಿ ಗ್ರಾಮೀಣ ಆಟಗಳು, ಜನಜೀವನ, ಕಲೆ, ಸಂಸ್ಕøತಿ, ಸೊಗಡು, ವ್ಯವಸಾಯ, ಗುಡಿಕೈಗಾರಿಕೆಗಳು, ವಿವಿಧ ಕಸಬುದಾರರು ಬಗ್ಗೆ ತಿಳಿದುಕೊಳ್ಳುತ್ತಾರೆ.
ಇವೆಲ್ಲವುಗಳಿಗಿಂತ ಹೆಚ್ಚು ಖುಷಿಯನ್ನು ಆಟಗಳ ಮೂಲಕ ಪಡೆಯುತ್ತಾರೆ. ಬಹುತೇಕ ಮಕ್ಕಳ ಗ್ರಾಮೀಣ ಆಟಗಳಲ್ಲಿ ಪಾಲಕರ ಅನುಕರಣೆ ಇರುತ್ತದೆಯಾದರೂ ಅದರಲ್ಲಿ ಸೃಜನಶೀಲತೆ ಎದ್ದು ಕಾಣುತ್ತದೆ. ಹೊಸತನದ ಹುಡುಕಾಟ ಇರುತ್ತದೆ. ಕಸದಿಂದ ರಸ ಸೃಷ್ಟಿಸುವ ಅಂದರೆ ಅನಗತ್ಯ ವಸ್ತುಗಳಿಗೆ ಬಳಕೆಯ ರೂಪ ನೀಡುವ ಗುಣಗಳನ್ನು ಕಲಿಯುತ್ತಾರೆ. ಇಂತಹ ಚಟುವಟಿಕೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪೂರಕ ಸಾಮಗ್ರಿಗಳಾಗುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ. ರಜೆ ಸಜೆಯಾಗುವ ಬದಲು ಮಜವಾಗಬೇಕೆಂದು ಎಲ್ಲಾ ಮಕ್ಕಳು ಬಯಸುವುದರಲ್ಲಿ ತಪ್ಪಿಲ್ಲ ಅಲ್ಲವೇ?
ಆರ್.ಬಿ.ಗುರುಬಸವರಾಜ.

ಹಚ್ಚೆಯ ಬಣ್ಣ ಶಾಶ್ವತವೇ? WHY TATOO IS PERMANENT

ದಿನಾಂಕ 07-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ.

ಹಚ್ಚೆಯ ಬಣ್ಣ ಶಾಶ್ವತವೇ?


ಹಚ್ಚೆಯ ಕುರಿತು ಮಾತನಾಡುವಾಗ ಒಂದು ಪ್ರಶ್ನೆ ಬರುವುದು ಸಹಜ. ಅದೇನೆಂದರೆ ಹಚ್ಚೆಯ ಬಣ್ಣವೇಕೆ ಶಾಶ್ವತ?. ಈ ಪ್ರಶ್ನೆಗೆ ಬಹುತೇಕರಲ್ಲಿ ಉತ್ತರವಿಲ್ಲ. ಇದ್ದರೂ ಅಸ್ಪಸ್ಟ ಉತ್ತರ. ಇದಕ್ಕೆ ಸ್ಪಷ್ಟ ಉತ್ತರ ವಿಜ್ಞಾನದಲ್ಲಿ ದೊರೆಯುತ್ತದೆ. 
     ಮಾನವರ ಚರ್ಮವು ಪ್ರತಿಗಂಟೆಗೆ 40000 ಕೋಶಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ದಿನಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಕೋಶಗಳು ನಾಶವಾದರೂ ಹಚ್ಚೆ ಶಾಶ್ವತವಾಗಿ ಉಳಿಯುವುದ್ಹೇಗೆ ಎಂಬುದೇ ಸೋಜಿಗ.
ಹಚ್ಚೆ ಹಾಕುವ ಸೂಜಿಯಲ್ಲಿನ ಶಾಯಿಯು ಚರ್ಮದ ಹೊರಪದರದಲ್ಲಿ ರಂದ್ರಗಳನ್ನು ಮಾಡಿ ರಕ್ತನಾಳ ಮತ್ತು ನರಗಳ ಮೂಲಕ ಒಳಪದರದ ಆಳದೊಳಕ್ಕೆ ಜಿನುಗುತ್ತದೆ. ಪ್ರತಿಬಾರಿ ಸೂಜಿಯು ಚುಚ್ಚುವಿಕೆಯಿಂದ ಉಂಟಾದ ಗಾಯದಲ್ಲಿ ಈ ಶಾಯಿಯು ಹರಡಲ್ಪಡುತ್ತದೆ. ಗಾಯವು ಉರಿಯೂತಕ್ಕೆ ಕಾರಣವಾಗುತ್ತದೆ. ಚರ್ಮದಲ್ಲಿನ ಜೀವಕೋಶಗಳು ಪ್ರತಿರಕ್ಷಣಾ ವ್ಯವಸ್ಥೆಯಿಂದ ಗಾಯದ ಸ್ಥಳವನ್ನು ಆಕ್ರಮಿಸಿ ಬಣ್ಣವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ಗಾಯಗೊಂಡ ಸ್ಥಳದಲ್ಲಿನ ಶಾಯಿಯ ಬಣ್ಣ ಪಡೆದುಕೊಂಡ ಜೀವಕೋಶಗಳು ಅಲ್ಲಿಯೇ ಉಳಿದು ಶಾಶ್ವತ ಬಣ್ಣಕ್ಕೆ ತಿರುಗುತ್ತವೆ. ಜೀವಕೋಶದಲ್ಲಿನ ಫೈಬ್ರೋಪ್ಲಾಸ್ಟ್ ಮತ್ತು ಮಾಕ್ರೋಪೇಜ್‍ಗಳೆಂಬ ಅಂಶಗಳು ಬಣ್ಣವನ್ನು ಹೀರಿಕೊಂಡು ಚರ್ಮದ ಒಳಭಾಗವನ್ನು ಲಾಕ್ ಮಾಡುತ್ತವೆ ಮತ್ತು ಬಣ್ಣವನ್ನು ಹೊರಸೂಸುತ್ತವೆ. 
ಆರಂಭದಲ್ಲಿ ಶಾಯಿಯು ಚರ್ಮದ ಹೊರಪದರದ ಕೆಳಭಾಗದಲ್ಲಿ ಸಂಗ್ರಹವಾಗುತ್ತದೆ. ನಂತರ ಹಾನಿಗೊಳಗಾದ ಹೊರಚರ್ಮದ ಜೀವಕೊಶಗಳು ದುರಸ್ತಿಯ ನಂತರ ಬಣ್ಣವನ್ನು ಹೊರಸೂಸುತ್ತವೆ. ಬಿಸಿಲು ಗಾಳಿಗೆ ಹೊರಚರ್ಮದ ಗಾಯಗೊಂಡ ಕೋಶಗಳು ನಾಶವಾಗಿ ಸಿಪ್ಪೆಸುಲಿದು ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ ಮತ್ತು ಶಾಯಿಯ ಶಾಶ್ವತ ಬಣ್ಣ ಪಡೆದುಕೊಳ್ಳುತ್ತವೆ. 
ಪ್ರಾಚೀನತೆಯಿಂದ ಇತ್ತೀಚಿನವರೆಗೆ,,,,
ಹಚ್ಚೆಯು ಕೇವಲ ಫ್ಯಾಷನ್ನಿನ ಪ್ರತೀಕವಲ್ಲ. ಅದು ಪುರಾತನ ಕಾಲದಿಂದ ಮಾನವನ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ಜನರ ಆಚಾರ ವಿಚಾರ ಸಂಸ್ಕøತಿ ಧಾರ್ಮಿಕ ಸಂಪ್ರದಾಯಗಳ ಪ್ರತಿಬಿಂಬವಾಗಿದೆ. ಸಂಸ್ಕøತಿಯಿಂದ ಸಂಸ್ಕøತಿಗೆ, ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಹಚ್ಚೆಯ ಸ್ವರೂಪಗಳು ಬದಲಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. 
ಟ್ಯಾಟೂ ಎಂಬ ಇಂಗ್ಲೀಷ್ ಪದ ‘ಟಾಟೂ’ ಎಂಬ ಟಾಹಿಟಿ ದ್ವೀಪದ ಮೂಲದ್ದು. ಅಂದರೆ ‘ಗುರುತಿಸುವಿಕೆ’ ಎಂದರ್ಥ.
ಟ್ಯಾಟೂವಿನ ಇತಿಹಾಸ ಹುಡುಕಿ ಹೊರಟರೆ ಅದು ನಮ್ಮನ್ನು ಪೆರುವಿನ ಮಮ್ಮಿಗೆ ಕರೆದೊಯ್ಯುತ್ತದೆ. ಈಜಿಪ್ತಿನಲ್ಲಿ ಹುಟ್ಟಿಕೊಂಡ ಈ ಕಲೆಯು ಸಾಮ್ರಾಜ್ಯಗಳ ವಿಸ್ತರಣೆಯಿಂದ ವಿವಿಧ ನಾಗರೀಕತೆಗಳನ್ನು ತಲುಪಿತು. ಕ್ರೀಟ್, ಗ್ರೀಸ್, ಪರ್ಷಿಯಾ, ಅರೇಬಿಯನ್ ನಾಗರೀಕತೆಗಳಿಗೂ ವಿಸ್ತರಿಸಿತು. ಕ್ರಿ.ಪೂ.2000 ರಲ್ಲಿ ಈ ಕಲೆ ಚೀನಾ ತಲುಪಿತು. 
ಕ್ರಿ.ಪೂ.6000 ರಲ್ಲಿ ಪೆರುವಿನ ಮಮ್ಮಿಯಲ್ಲಿ ಜಗತ್ತಿನ ಮೊದಲ ದಾಖಲಿತ ಹಚ್ಚೆಯು ಪತ್ತೆಯಾಗಿದೆ.
ಹಚ್ಚೆಯ ಕಲೆಯು ಪಾಶ್ಚಿಮಾತ್ಯರ ಸಂಸ್ಕøತಿಯ ಪ್ರತೀಕವೇ ಆಗಿತ್ತು ಎಂಬುದಕ್ಕೆ ಅವರು ಆಗಿದ್ದಾಂಗ್ಗೆ ಏರ್ಪಡಿಸುತ್ತಿದ್ದ ಹಚ್ಚೆ ಉತ್ಸವಗಳೇ ಸಾಕ್ಷಿ. ಪ್ರತಿ ಉತ್ಸವದಲ್ಲಿ ಹೊಸ ಹೊಸ ಶೈಲಿಗಳು, ವಿನ್ಯಾಸಗಳು ಪ್ರದರ್ಶಿತವಾಗುತ್ತಿದ್ದವು. ಈ ಉತ್ಸವಗಳ ಕಿರಿಕಿರಿಯಿಂದ ಮನನೊಂದÀ  ಪೋಪ್ ಹೆಡ್ರಿ ಕ್ರಿ.ಶ.747 ರಲ್ಲಿ ಹಚ್ಚೆ ಹಾಕುವುದನ್ನು ನಿಷೇಧಿಸಿದರು. ಪುನಃ 12 ಶತಮಾನದಲ್ಲಿ ಪ್ರಾರಂಭವಾದರೂ 16 ನೇ ಶತಮಾನದವರೆಗೂ ಅದರ ಬಳಕೆ ಆಮೆ ವೇಗದಲ್ಲಿತ್ತು. 1691 ರಲ್ಲಿ ಪಾಶ್ಚಿಮಾತ್ಯ ನಾವಿಕ ವಿಲಿಯಂ ಡ್ಯಾಂಫರ್ ಪುನಃ ಹಚ್ಚೆಯ ಬಳಕೆಗೆ ಮುನ್ನುಡಿ ಬರೆದನು. ಅಲ್ಲಿಂದ ಹಚ್ಚೆಯು ಪಾಶ್ಚಿಮಾತ್ಯ ಸಂಸ್ಕøತಿಯ ಒಂದು ಭಾಗವೇ ಆಯಿತು. 
ಪಾಶ್ಚಿಮಾತ್ಯರಲ್ಲಿ ಹಚ್ಚೆಯ ಬಳಕೆ ಕಡಿಮೆಯಾದ ಕಾಲಕ್ಕೆ ಜಪಾನ್‍ನಲ್ಲಿ ಪ್ರಸಿದ್ದಿ ಪಡೆಯಿತು. ಪ್ರಾರಂಭದಲ್ಲಿ ಅಪರಾಧಿಗಳನ್ನು ಗುರುತಿಸಲು ಅವರ ಹಣೆಗೆ ಹಚ್ಚೆಯ ಗೆರೆ  ಹಾಕಲಾಗುತ್ತಿತ್ತು. ಕಾಲಕ್ರಮೇಣವಾಗಿ ಜಪಾನ್‍ನಲ್ಲಿ ಹಚ್ಚೆಯು ಸೌಂದರ್ಯಕಲೆಯಾಗಿ ಬೆಳೆಯಿತು. 1700 ರ ಸುತ್ತಮುತ್ತ ಜಪಾನ್‍ನಲ್ಲಿ ಹಚ್ಚೆ ಬಳಕೆಯ ಬಗ್ಗೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲಾಯಿತು. ಆಗ ಕೇವಲ ಶ್ರೀಮಂತರು ಮಾತ್ರ ಅಲಂಕಾರಿಕ ಉಡುಪುಗಳನ್ನು ಧರಿಸಲು ಅವಕಾಶವಿತ್ತು. ಇದಕ್ಕೆ ಪ್ರತಿಯಾಗಿ ಮಧ್ಯಮ ವರ್ಗದ ಜನರು ತಮ್ಮ ದೇಹವನ್ನು ಹಚ್ಚೆಯಿಂದ ಅಲಂಕರಿಸತೊಡಗಿದರು. ಇದು ಎಲ್ಲರನ್ನು ಆಕರ್ಷಿಸತೊಡಗಿತು. ಹೀಗಾಗಿ ಹಚ್ಚೆಯು ಹೆಚ್ಚು ವ್ಯಾಪಕವಾಗಿ ಜಗತ್ತಿನ ಎಲ್ಲೆಡೆ ಪಸರಿಸಿತು. ಹಚ್ಚೆಗೆ ಯಂತ್ರಗಳ ಬಳಕೆಯ ನಂತರ ಅದರ ವೇಗ ಹೆಚ್ಚಾಯಿತು.
ಇಂದು ಬಳಸುವ ಯಂತ್ರಗಳು ಪ್ರತಿನಿಮಿಷಕ್ಕೆ 50 ರಿಂದ 3000 ತರಂಗಾಂತರದಲ್ಲಿ ಚರ್ಮಕ್ಕೆ ಬಣ್ಣವನ್ನು ಸೇರಿಸುತ್ತವೆ. 


ಹಚ್ಚೆಯನ್ನೂ ಅಳಿಸಬಹುದು!
ಒಮ್ಮೆ ಹಾಕಿದ ಹಚ್ಚೆಯನ್ನು ಅಳಿಸುವುದು ತುಂಬಾ ಕಷ್ಟಕರ. ಕೆಲವರು ಹಚ್ಚೆಯ ಭಾಗವನ್ನು ಕತ್ತರಿಸುವ ಅಥವಾ ಸುಟ್ಟುಕೊಳ್ಳುವಂಥಹ ಹುಚ್ಚು ಕೃತ್ಯಕ್ಕೆ ಮುಂದಾಗಿರುವುದೂ ಸತ್ಯ. ಇವುಗಳನ್ನು ಹೊರತುಪಡಿಸಿ ಹಚ್ಚೆಯನ್ನು ಅಳಿಸಿ ಹಾಕಲು ಅನೇಕ ವಿಧಾನಗಳಿವೆ. ಶಸ್ತ್ರ ಚಿಕಿತ್ಸೆ ಮಾಡಿಸುವುದು, ಡರ್ಮಬ್ರೆಷನ್, ರೇಡಿಯೋ ಫ್ರೀಕ್ವೆನ್ಸಿ ಮುಂತಾದವು ಚಾಲ್ತಿಯಲ್ಲಿವೆ. ಆದರೆ ಇವು ಸಂಪೂರ್ಣವಾಗಿ ಅಳಿಸಿ ಹಾಕುವುದಿಲ್ಲ. ಅಲ್ಪ ಪ್ರಮಾಣದ ಕಲೆ ಉಳಿಯುತ್ತದೆ. ಇವೆಲ್ಲವುಗಳಿಗಿಂತ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಕ್ಯೂ ಲೇಸರ್ ವಿಧಾನ. ಇದು ಹಚ್ಚೆಯ ಕಲೆಯನ್ನು ಪೂರ್ಣ ಪ್ರಮಾಣದಲ್ಲಿ ಅಳಿಸಿಹಾಕುವ  ಅತ್ಯಾಧುನಿಕ ಲೇಸರ್ ಚಿಕಿತ್ಸೆ. ಇದು ತುಂಬಾ ವೆಚ್ಚದಾಯಕವಾದರೂ ಅತ್ಯಂತ ಸುರಕ್ಷಿತ ವಿಧಾನವಾಗಿದೆ. 
ಆರ್.ಬಿ.ಗುರುಬಸವರಾಜ


April 5, 2016

ಹೆಲಿಕಾಪ್ಟರ್ ನಿರ್ಮಿಸಿದ ಅನಕ್ಷರಸ್ಥ ಯುವಕ

ದಿನಾಂಕ 05-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.
                                     

ಹೆಲಿಕಾಪ್ಟರ್ ನಿರ್ಮಿಸಿದ ಅನಕ್ಷರಸ್ಥ ಯುವಕ


ಏನನ್ನಾದರೂ ವಿಶೇಷವಾದುದನ್ನು ಆವಿಷ್ಕರಿಸಲು ಅಲಂಕಾರಿಕ ಪದವಿ ಅಗತ್ಯ ಎಂಬುವವರೇ ಹೆಚ್ಚು. ಪುಸ್ತಕ ಜ್ಞಾನ ಇಲ್ಲದೆ ಕೇವಲ ಬಲವಾದ ಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದಲೂ ಹೊಸದನ್ನು ಆವಿಷ್ಕರಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ 25ರ ಹರೆಯದ ಯುವಕ ಸಾಗರ್ ಪ್ರಸಾದ್ ಶರ್ಮಾ. 
ಪ್ರಸ್ತುತ ಅಸ್ಸಾಂನ ಧೇಮಾಜಿ ಜಿಲ್ಲೆಯ ದೇಮೌ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಸಾಗರ್ ಓದಿದ್ದು ಕೇವಲ 3ನೇ ತರಗತಿ. ಬಡತನದಿಂದಾಗಿ ಮುಂದೆ ಓದಲು ಆಗದೇ ಶಾಲೆ ಬಿಟ್ಟು ಕೂಲಿ ಕೆಲಸ ಮಾಡುತ್ತಾ ಇದ್ದ ಬಾಲಕನಿಗೆ ಬಾನಂಗಳದ ಲೋಹದ ಬಾನಾಡಿ ಆಕರ್ಷಿಸಿತ್ತು. ಆಗ ಮೂಡಿದ ಕನಸು ಈಗ ನನಸಾಗಿದೆ. ಇದಕ್ಕೆ ಅವನಲ್ಲಿದ್ದ ಅಚಲ ಛಲ ಮತ್ತು ಪರಿಶ್ರಮಗಳು ಸಾಗರ್‍ನನ್ನು ಒಬ್ಬ ಆಟೋಮೊಬೈಲ್ ಇಂಜಿನಿಯರ್‍ನನ್ನಾಗಿಸಿದವು. 
ಮೂಲತಃ ವೆಲ್ಡರ್ ಆಗಿದ್ದ ಸಾಗರ್ ಪ್ರಸಾದ್ ತನ್ನ ಕನಸಿಗೆ ಬಣ್ಣ ನೀಡಲು ನಿರ್ಧರಿಸಿದ. ಮೂರು ವರ್ಷಗಳ ಸತತ ಪರಿಶ್ರಮದ ಫಲವಾಗಿ ಹೊರಹೊಮ್ಮಿದ ಹೆಲಿಕಾಪ್ಟರ್ ಹಾರಲು ಸಿದ್ದವಾಗಿದೆ. ಸ್ಥಳೀಯ ತಂತ್ರಜ್ಞಾನ ಹಾಗೂ ಸ್ಥಳೀಯ ಎಸ್.ಯು.ವಿ. ಯಂತ್ರಗಳನ್ನು ಬಳಸಿ ಡೀಸಲ್‍ನಿಂದ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ನಿರ್ಮಿಸಿದ್ದಾನೆ. ಈ ಹೆಲಿಕಾಪ್ಟರ್‍ನ ಹೊರಮೈಗೆ ಲೋಹದ ಹೊದಿಕೆ ಮಾಡಲಾಗಿದೆ. 2 ಆಸನಗಳುಳ್ಳ ಈ ಕಾಪ್ಟರ್ ಭೂಮಿಯಿಂದ 30 ರಿಂದ 50 ಅಡಿ ಹಾರುವ ಸಾಮಥ್ರ್ಯ ಹೊಂದಿದೆ. ಈ ಕಾಪ್ಟರ್‍ಗೆ ಸೇನಾ ಕಾಪ್ಟರ್ ಅಥವಾ ಇನ್ನಿತರೇ ಖಾಸಗೀ ಬ್ರಾಂಡೆಡ್ ಕಾಪ್ಟರ್‍ಗಳಂತೆ ವೇಗವಾಗಿ ಹಾರುವ ಸಾಮಥ್ರ್ಯ ಇಲ್ಲ. ಸಾಧಾರಣವಾಗಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಮಾತ್ರ ಹಾರಾಟ ನಡೆಸಬಲ್ಲುದು.  15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ಇದಕ್ಕೆ ಆರ್ಥಿಕ ಸಹಾಯ ಒದಗಿಸಿದ ಸ್ನೇಹಿತ ತಪನ್ ಗಿಮೈರ್‍ನ ಸಹಾಯ ಮತ್ತು ಬೆಂಬಲವನ್ನು ನೆನೆಯುತ್ತಾರೆ. 
ಪ್ರಾರಂಭದಲ್ಲಿ ತಾನು ಹೆಲಿಕಾಪ್ಟರ್ ನಿರ್ಮಿಸುವ ವಿಷಯವನ್ನು ತನ್ನ ಗೆಳೆಯರಿಗೆ ತಿಳಿಸಿದಾಗ ಅವರಲ್ಲಿ ಗೇಲಿ ಮಾಡಿ ನಕ್ಕವರೇ ಹೆಚ್ಚು. ಏಕೆಂದರೆ ಸಾಗರ್ ಪ್ರಸಾದ್ ಔಪಚಾರಿಕ ಶಿಕ್ಷಣ ಪಡೆಯದೇ ಇರುವುದು ಹಾಗೂ ಹೆಲಿಕಾಪ್ಟರ್‍ನಂತಹ ವಾಹನಗಳನ್ನು ನಿರ್ಮಿಸಲು ಶಾಸ್ತ್ರೀಯ ಅಭ್ಯಾಸ ಬೇಕೆಂಬುದು ಅವರ ನಗುವಿಗೆ ಕಾರಣವಾಗಿರಬಹುದು. ಈಗ ಅದು ಸಾಧ್ಯವಾದಾಗ ಅಂದು ಗೇಲಿ ಮಾಡಿ ನಕ್ಕವರೆಲ್ಲ ಇಂದು ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ.  
ಮೂರು ವರ್ಷಗಳ ಹಿಂದೆ ಸಣ್ಣದೊಂದು ಶೆಡ್‍ನಲ್ಲಿ ಪ್ರಾರಂಭವಾದ ಕೆಲಸಕ್ಕೆ ಸ್ಪೂರ್ತಿ ತುಂಬಿ ಹೆಲಿಕಾಪ್ಟರ್ ಸಂಪೂರ್ಣ ಸಿದ್ದವಾಗುವವರೆಗೂ ಜೊತೆಗಿದ್ದು ಸಹಕರಿಸಿದವರು ಸಾಗರ್ ಪ್ರಸಾದ್‍ನ ಮಡದಿ ಜನ್ಮೋನಿ ಮಾಯಾಂಕ್. ಶೇಕಡಾ 90ರಷ್ಟು ಕೆಲಸಗಳು ಸಂಪೂರ್ಣವಾದ ಮೇಲೆಯೇ ಕಾಪ್ಟರ್‍ನ್ನು ಹೊರಗೆ ತಂದಿದ್ದಾರೆ. ಹೆಲಿಕಾಪ್ಟರ್ ನಿರ್ಮಾಣವಾದ ಸುದ್ದಿ ಹಳ್ಳಿಯಲ್ಲಿ ಹಬ್ಬುತ್ತಿದ್ದಂತೆ ಜನರು ತಂಡ ತಂಡವಾಗಿ ಇವರ ಮನೆಗೆ ನುಗ್ಗತೊಡಗಿದ್ದಾರೆ.  ಬಾನಿನಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಹಳ್ಳಿಯ ನೆಲದಲ್ಲೇ ನಿರ್ಮಾಣಗೊಂಡದ್ದು ಹಳ್ಳಿಯ ಜನರಿಗೆÉ ಖುಷಿ ತಂದಿದೆ. 
ಈಗಾಗಲೇ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಸಂಪೂರ್ಣ ಯಶಸ್ವಿಯಾದ ಈ ಕಾಪ್ಟರ್‍ಗೆ ‘ಪವನ ಶಕ್ತಿ’ ಅಥವಾ ‘ಪವನ ಪುತ್ರ’ ಎಂಬ ಹೆಸರಿಡಲು ನಿರ್ಧರಿಸಿದ್ದಾನೆ. ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ಕೊಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅನುಮೋದನೆಗೆ ಪತ್ರ ಕಳಿಸಲಾಗಿದೆ. 
‘ಇದನ್ನು ನನ್ನ ಹಳ್ಳಿ ಜನರ ಸರಕು ಸಾಮಗ್ರಿ ಸರಬರಾಜು ಮಾಡುವ ಉದ್ದೇಶದಿಂದ ತಯಾರಿಸಿದ್ದೇನೆ’ ಎನ್ನುವ ಸಾಗರ್ ಪ್ರಸಾದ್ ಅವರ ಮಾತುಗಳಲ್ಲಿ ಹಳ್ಳಿ ಜನರ ಸಂಕಷ್ಟಗಳನ್ನು ನಿವಾರಿಸುವ ಬದ್ದತೆಯಿದೆ. 
‘ಯಶಸ್ಸು ಗಳಿಸಲು ಶಿಕ್ಷಣವೊಂದೇ ಸಾಧನವಲ್ಲ. ಅಸಾಧಾರಣ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಶಿಕ್ಷಣದ ಹೊರತಾಗಿಯೂ ಯಶಸ್ಸು ಗಳಿಸಲು ಸಾಧ್ಯವಿದೆ’ ಎನ್ನುವ ಪ್ರಸಾದ್ ಅವರ ಮಾತುಗಳು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸ್ಪೂರ್ತಿಯಾಗುತ್ತವೆ. 
ಆರ್.ಬಿ.ಗುರುಬಸವರಾಜ

April 3, 2016

ಆಧುನಿಕ ಕಂಪ್ಯೂಟರ್‍ನ ಪೂರ್ವಜರು ANCESTORS OF MODREN COMPUTER

ದಿನಾಂಕ 02-04-2016 ರ ಸಂಯುಕ್ತ ಕರ್ನಾಟಕಕಿಂದರಿ ಜೋಗಿಯಲ್ಲಿ ಪ್ರಕಟವಾದ ನನ್ನ ಕಿರುಬರಹ.

ಆಧುನಿಕ ಕಂಪ್ಯೂಟರ್‍ನ ಪೂರ್ವಜರು



ಅದೊಂದು ಅಸಾಮಾನ್ಯ ಗೊಂಬೆ. ಪಿಳಪಿಳನೇ ಕಣ್ಣ ರೆಪ್ಪೆ ಬಡಿಯುತ್ತಾ ನೀವು ಹೇಳಿದ ಶಬ್ದವನ್ನು ಆಲಿಸಿ ಕೈಯಲ್ಲಿನ ಗರಿಯನ್ನು ಮಸಿಯಲ್ಲಿ ಅದ್ದಿ, ತನ್ನ ಮುಂದಿನ ಕಾಗದದಲ್ಲಿ ಪದಗಳನ್ನು ಬರೆಯುತ್ತದೆ. ಅದರ ಪಕ್ಕದಲ್ಲಿ ಇನ್ನೊಂದು ಚಿತ್ರ ಬಿಡಿಸುವ ಗೊಂಬೆ. ಅವೆರಡರ ಮಧ್ಯೆ ಮತ್ತೊಂದು ಸಂಗೀತವಾದ್ಯ ನುಡಿಸುವ ಗೊಂಬೆ. ಈ ಸ್ವಯಂಚಾಲಿತ ಗೊಂಬೆಗಳನ್ನು ನೋಡುತ್ತಾ ನಿಂತರೆ ನಿಮ್ಮನ್ನೇ ನೀವು ಮರೆತುಬಿಡುತ್ತೀರಿ. ಆಧುನಿಕ ಕಂಪ್ಯೂಟರ್ ಯುಗದಲ್ಲಿ ಇದೆಲ್ಲವೂ ತೀರಾ ಮಾಮೂಲು ಎನಿಸುತ್ತದೆ ಅಲ್ಲವೇ?  ಈ ಗೊಂಬೆಗಳು ಆಧುನಿಕ ಗೊಂಬೆಗಳಲ್ಲ. ಇವು ತಯಾರಾಗಿ ಇಂದಿಗೆ 250 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯವಾಗುತ್ತದೆ. ಆದರೆ ಇಂದಿಗೂ ಈ ಗೊಂಬೆಗಳು ಸುಸ್ಥಿತಿಯಲ್ಲಿವೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಇನ್ನೂ ಆಶ್ಚರ್ಯದ ಸಂಗತಿ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನಾ ಕ್ಷೇತ್ರಗಳಲ್ಲಿ ಈ ಯಂತ್ರಗಳನ್ನು ಆಧುನಿಕ ಕಂಪ್ಯೂಟರ್‍ನ ಪೂರ್ವಜರು ಎಂದೇ ಭಾವಿಸಲಾಗಿದೆ. 
ಎಲ್ಲಿವೆ ಈ ಗೊಂಬೆಗಳು : ಪ್ರಸ್ತುತ ಸ್ವಿಟ್ಜರ್‍ಲ್ಯಾಂಡ್ ನ್ಯೂಚಾಟಲ್‍ನ ಇತಿಹಾಸ ಮತ್ತು ಪುರಾತತ್ವ ಸಂಸ್ಥೆಯ ವಸ್ತು ಸಂಗ್ರಹಾಲಯದಲ್ಲಿವೆ. ಈ ಯಂತ್ರ ಮಾನವರ ನಿರ್ಮಾತೃ ಸ್ವಿಟ್ಜರ್‍ಲ್ಯಾಂಡಿನ ಪಿಯರೆ ಜಾಕ್ವೆಟ್ ಡ್ರೋಜರ್. ವಿಶ್ವಪ್ರಸಿದ್ದ ಸ್ವಿಸ್ ಗಡಿಯಾರ ತಯಾರಕರಾದ ಡ್ರೋಜ್‍ರವರಿಗೆ ಸಮಯದ ಯಂತ್ರಗಳೊಂದಿಗೆ ಆಟವಾಡುವ ಕಲೆ ಸಿದ್ದಿಸಿತ್ತು. ಅವರ ಅಪಾರ ಅನುಭವ ಮತ್ತು ಉತ್ತಮ ಕಾರ್ಯವೈಖರಿಯ ಫಲವಾಗಿ ಈ ಮೂರು ಯಂತ್ರ ಮಾನವರನ್ನು ಸೃಷ್ಟಿ ಮಾಡಿದರು. 1906ರಲ್ಲಿ ನ್ಯೂಚಾಟಲ್‍ನ ಇತಿಹಾಸ ಮತ್ತು ಪುರಾತತ್ವ ಸಂಸ್ಥೆ 75 ಸಾವಿರ ಗೋಲ್ಡ್ ಪ್ರಾಂಕ್ಸ್‍ಗಳಿಗೆ ಈ ಯಂತ್ರಗಳನ್ನು ಖರೀದಿಸಿದ್ದಾರೆ. 
1767 ರಿಂದ 1774 ರ ಅವಧಿಯಲ್ಲಿ ರಚಿತವಾದ ಈ ಸಂಕೀರ್ಣ ಗೊಂಬೆಗಳು ಇಂದಿನ ಆಂಡ್ರಾಯ್ಡ್ ಸಾಧನಗಳನ್ನು ಹೋಲುತ್ತಿವೆ. ಇಲ್ಲಿ ಮೂರು ಗೊಂಬೆಗಳಿದ್ದು, ಅವುಗಳಲ್ಲಿ ಒಂದಕ್ಕೆ ರೈಟರ್, ಇನ್ನೊಂದಕ್ಕೆ ಡ್ರಾಫ್ಟ್‍ಮ್ಯಾನ್, ಮತ್ತೊಂದಕ್ಕೆ ಲೇಡಿ ಮ್ಯೂಜಿಸಿಯನ್ ಎಂದು ಹೆಸರಿಸಲಾಗಿದೆ. 
ರೈಟರ್ : ರೈಟರ್ 1772 ರಲ್ಲಿ ಪೂರ್ಣಗೊಂಡಿದ್ದು 15ನೇ ಲೂಯಿಯ ಶೈಲಿಯಲ್ಲಿದೆ. 6000 ಬಿಡಿಭಾಗಗಳಿಂದ ನಿರ್ಮಾಣವಾದ ಈ ಗೊಂಬೆಯ ಕೈಯಲ್ಲಿ ಲೇಖನಿ ಇದೆ. ನೀವು ಹೇಳಿದ ಶಬ್ದವನ್ನು ಆಲಿಸಿ ಲೇಖನಿಯ ಸಹಾಯದಿಂದ ತನ್ನ ಮುಂದಿನ ಕಾಗದದಲ್ಲಿ ಬರೆಯುತ್ತದೆ. 4 ಸಾಲುಗಳ 40 ಶಬ್ದಗಳನ್ನು ಬರೆಯುವ ಸಾಮಥ್ರ್ಯ ರೈಟರ್‍ಗೆ ಇದೆ. 
ಕೇಂದ್ರ ಭಾಗದಲ್ಲಿ ಗೊಂಬೆಯ ಚಲನೆಗೆ ಅನುಕೂಲವಾಗುವಂತೆ 40 ಚಕ್ರಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ರೇಖೀಯ ಚಲನೆ ಅಥವಾ ಪ್ರತಿಕ್ರಮದಲ್ಲಿ ರೋಟರಿ ಚಲನೆ ಪರಿವರ್ತಿಸುವ ಯಾಂತ್ರಿಕ ರಚನೆಗಳಿಂದ ಕೂಡಿದೆ. ಎಲ್ಲಾ ಚಕ್ರಗಳು ದೊಡ್ಡ ಚಕ್ರ ಅಥವಾ ಡಿಸ್ಕ್‍ನಿಂದ ನಿಯಂತ್ರಿಸಲ್ಪಟ್ಟಿವೆ. ದೊಡ್ಡ ಚಕ್ರವು ಟೈಪ್ ರೈಟರ್ ಮಾದರಿಯ ಅಕ್ಷರಗಳನ್ನು   ಹೊಂದಿದೆ. ಪೂರ್ವ ಮುದ್ರಿತ ಧ್ವನಿ ಸಂದೇಶದ ಮೂಲಕ ಆಲಿಸಿದ ಶಬ್ದಗಳಿಗೆ ಅಕ್ಷರ ರೂಪು ಕೊಡುವಂತೆ ವಿನ್ಯಾಸಗೊಳಿಸಲಾಗಿದೆ. ಬರೆಯುವಾಗ ಕಣ್ಣುಗಳ ಚಲನೆ ಬರೆಯುವ ಕಾಗದದ ಮೇಲೆ ಇರುವಂತೆ ವಿನ್ಯಾಸಗೊಳಿಸಿರುವುದು ವಿನ್ಯಾಸಕಾರರ ಕೈಚಳಕಕ್ಕೆ ಸಾಕ್ಷಿಯಾಗಿದೆ.
ಡ್ರಾಫ್ಟ್‍ಮ್ಯಾನ್ : ಡ್ರಾಫ್ಟ್‍ಮ್ಯಾನ್ ಅಥವಾ ಚಿತ್ರಗಾರ ಗೊಂಬೆಯು ರೈಟರ್‍ನ ಶೈಲಿಯನ್ನೇ ಹೋಲುತ್ತದೆ. ಇದರಲ್ಲಿ 2000 ಬಿಡಿ ಭಾಗಗಳನ್ನು ಬಳಸಲಾಗಿದೆ. ಪೆನ್ಸಿಲ್ ಬಳಸಿ 4 ಚಿತ್ರಗಳನ್ನು ರಚಿಸುವಂತೆ ಪ್ರೋಗ್ರಾಂ ಅಳವಡಿಸಲಾಗಿದೆ. ಆಗಿಂದ್ದಾಗ್ಗೆ ಚಿತ್ರಗಾರ ತನ್ನ ಕುರ್ಚಿಯಿಂದ ಚಲಿಸುವಂತೆ, ಪೆನ್ಸಿಲ್‍ನ ಧೂಳನ್ನು ಬಾಯಿಂದ ಊದಿ ತೆಗೆಯುವಂತೆ ಹಾಗೂ ಚಿತ್ರಿಸುವಾಗ ಕೈಗಳ ಚಲನೆ ಮತ್ತು ಕಣ್ಣುಗಳ ಚಲನೆಗೂ ಹೊಂದಾಣಿಕೆ ಇರುವಂತೆ ರೂಪಿಸಲಾಗಿದೆ. ನೂರು ವರ್ಷಗಳ ಹಿಂದೆ ಪೆನ್ಸಿಲ್ ಬದಲಿಗೆ ಬಾಲ್ ಪಾಯಿಂಟ್ ಪೆನ್ ಅಳವಡಿಸಲಾಗಿದೆ. 
ಲೇಡಿ ಮ್ಯೂಜಿಸಿಯನ್ : 2500 ಬಿಡಿ ಭಾಗಗಳಿಂದ ನಿರ್ಮಿತವಾದ ಲೇಡಿ ಮ್ಯೂಜಿಸಿಯನ್ ಇವೆರಡಕ್ಕಿಂತ ವಿಭಿನ್ನವಾದ ರಚನೆ ಹೊಂದಿದೆ. 1.80 ಮೀಟರ್ ಎತ್ತರದ ಈ ಗೊಂಬೆ ತನ್ನ ಮುಂದಿನ ವಾದ್ಯದ ಸಹಾಯದಿಂದ ಸಂಗೀತ ಉಪಕರಣ ನಿರ್ವಹಿಸುವಂತೆ ರೂಪಿಸಲಾಗಿದೆ. ತನ್ನ 10 ಬೆರಳುಗಳ ಯಾಂತ್ರಿಕ ಕ್ರಿಯೆಯಿಂದ  ಐದು ವಿವಿಧ ಸಂಗೀತ ಸ್ವರಗಳನ್ನು ಸಂಯೋಜಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸಂಗೀತ ನುಡಿಸುವಾಗ ಕೈಗಳಿಗೂ ಕಣ್ಣುಗಳಿಗೂ ನೇರ ಸಂಪರ್ಕ ಕಲ್ಪಿಸಲಾಗಿದೆ. ಜೊತೆಗೆ ವಿಶೇಷವಾಗಿ ಗೊಂಬೆಯು ಉಸಿರಾಡುವಂತೆ ವಿನ್ಯಾಸಗೊಳಿಸಲಾಗಿದೆ. ಉಸಿರಾಡುವಾಗ ಎದೆಯ ಭಾಗದಲ್ಲಿ ಏರಿಳಿತಗಳು ಉಂಟಾಗುವಂತೆ ರೂಪಿಸಿರುವುದು ನೋಡುಗರ ದೃಷ್ಟಿಯನ್ನು ಹಿಡಿದು ನಿಲ್ಲಿಸುತ್ತದೆ.  
ಅಸಾಧಾರಣ ವ್ಯಕ್ತಿಯ ಗಮನಾರ್ಹ ವಿನ್ಯಾಸ : ಪಿಯರೆ ಜಾಕ್ವೆಟ್ ಡ್ರೋಜರ್ ಆ ಕಾಲದ ಅಸಾಧಾರಣ ವ್ಯಕ್ತಿಯಾಗಿದ್ದರು. ಡ್ರೋಜ್ ಕುಟುಂಬದವರು ವಿಶೇಷವಾಗಿ ಕೈಗಡಿಯಾರ  ಮತ್ತು ಇತರೆ ಅದ್ಬುತ ಯಂತ್ರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಕೈಗಡಿಯಾರಗಳು, ಅನಿಮೇಟೆಡ್ ಗೊಂಬೆಗಳು, ಸ್ವಯಂಚಾಲಿತ ಮತ್ತು ಯಾಂತ್ರಿಕ ಪಕ್ಷಿಗಳ ವಿನ್ಯಾಸ ಮತ್ತು ನಿರ್ಮಾಣ ಕಾರ್ಯದಲ್ಲಿ ಪಳಗಿದ್ದರು. ಯುರೋಫ್, ಚೀನಾ, ಭಾರತ, ಜಪಾನ್‍ಗಳ ಕೆಲವು ಚಕ್ರವರ್ತಿಗಳ ಆಕರ್ಷಕ ಅನಿಮೇಟೆಡ್ ಗೊಂಬೆಗಳನ್ನು ತಯಾರಿಸಿದ್ದರು. ಇವು ಯುರೋಪಿನಾದ್ಯಂತ ಮತ್ತು ಜಗತ್ತಿನ ಇತರೆಡೆ ಪ್ರದರ್ಶಿತಗೊಂಡಿವೆ. ಅಪಾರ ಜನಮನ ಸೂರೆಗೊಂಡಿವೆ.
ಈ ಮೂರೂ ಯಂತ್ರಗಳು ಆಧುನಿಕ ಯಂತ್ರಮಾನವ ರೋಬಾಟನ್ನು ಹೋಲುತ್ತವೆ. ಆದ್ದರಿಂದ ಇವುಗಳೇ ಆಧುನಿಕ ಕಂಪ್ಯೂಟರ್‍ನ ಪೂರ್ವಜರು ಎಂದು ಭಾವಿಸಿರುವುದು ಹೆಚ್ಚು ಸೂಕ್ತ ಎನಿಸುತ್ತದೆ.
ಆರ್.ಬಿ.ಗುರುಬಸವರಾಜ


ಶಿಲ್ಪವನದಲ್ಲಿ ಜಲಚರಗಳು AQUATICS IN SHILPAVANA HAMPI UNIVERSITY

ದಿನಾಂಕ 01-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ನನ್ನ ಲೇಖನ.

ಶಿಲ್ಪವನದಲ್ಲಿ ಜಲಚರಗಳು


ಹಂಪೆ ಎಂದೊಡನೆ ಹಾಳಾಗಿ ಅಳಿದುಳಿದ ಕಲ್ಲಿನ ಕೆತ್ತನೆಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತವೆ. ಆದರೆ ಹಂಪೆಯ ಒಂದು ಭಾಗವೇ ಆಗಿರುವ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿನ ಶಿಲ್ಪವನದ ಚಿತ್ರಣಗಳು ತಾಜಾತನದೊಂದಿಗೆ ಕಂಗೊಳಿಸುತ್ತಿವೆ. 
ಈ ಬಾರಿ ಶಿಲ್ಪವನಕ್ಕೆ ಹೊಸ ಅತಿಥಿಗಳ ಸೇರ್ಪಡೆಯಾಗಿದೆ. ಈ ಅತಿಥಿಗಳು ಜಲವಿದೆಡೆಯೂ ಜೀವಿಸಬಲ್ಲೆವು ಎಂಬುದನ್ನು ಸಾಬೀತು ಮಾಡಲಿರುವ ಜಲಚರಗಳು. ಆಶ್ಚರ್ಯವಾಗುತ್ತಿದೆಯೇ? ಹೌದು ಶಿಲ್ಪವನದಲ್ಲೀಗ ಭಾರೀ ಗಾತ್ರದ ಮೀನುಗಳು, ಮೊಸಳೆಗಳು, ಆಮೆಗಳು, ಕಪ್ಪೆಗಳು ಬೀಡುಬಿಟ್ಟಿವೆ. 
ಎಲ್ಲಿದೆ ಶಿಲ್ಪವನ? : ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಶಿಲ್ಪವನವಿದೆ. ಇಲ್ಲಿ ಪ್ರಾಕೃತಿಕವಾಗಿ ಅಲ್ಲಲ್ಲಿ ಬಿದ್ದಿರುವ ಕಲ್ಲುಗಳಿಗೆ ಅವುಗಳ ಆಕಾರಕ್ಕೆ ತಕ್ಕಂತೆ ಕೆತ್ತನೆಯ ಸ್ಪರ್ಶ ನೀಡಿ ಆಕರ್ಷಕ ಶಿಲ್ಪಗಳನ್ನಾಗಿ ಮಾಡಲಾಗಿದೆ.
ಈಗಾಗಲೇ ಇರುವ ಅನೇಕ ಕಲಾಕೃತಿಗಳ ಜೊತೆ ಜಲಚರಗಳು ಸ್ಥಾನ ಪಡೆದಿವೆ. ಪ್ರಾಕೃತಿಕವಾಗಿ ಬಿದ್ದಿರುವ ಕಲ್ಲುಗಳಿಗೆ ಜಲಚರಗಳ ರೂಪು ನೀಡಿ ಶಿಲ್ಪವನವನ್ನು ಆಕರ್ಷಕಗೊಳಿಸಲಾಗಿದೆ. ಇಲ್ಲಿನ ದೈತ್ಯ ಕಲ್ಲುಬಂಡೆಗೆ ಕಲೆಯ ಸ್ಪರ್ಶ ನೀಡಿ ಆಮೆ, ಮೊಸಳೆ, ಮೀನು, ಮತ್ಸಕನ್ಯೆ, ಕಡಲ್ಗುದುರೆ, ಕಪ್ಪೆ ಹೀಗೆ ಮುಂತಾದ ಜಲಚರಗಳ ಆಕೃತಿಗಳ ಕೆತ್ತಲಾಗಿದೆ. ಇವು ನೋಡುಗರ ಆಕರ್ಷಣೆಯ ವಸ್ತುಗಳಾಗಿವೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗಂತೂ ಆಟದ ಸಾಮಗ್ರಿಗಳಾಗಿ ಪರಿಣಮಿಸಿವೆ. ಮಕ್ಕಳು ಅವುಗಳ ಮೇಲೆ ಕುಳಿತು, ಬಾಯಲ್ಲಿ ಕೈಯಿಟ್ಟು ಮೋಜನ್ನು ಅನುಭವಿಸುತ್ತಾರೆ. ಪ್ರೇಕ್ಷಕರಂತೂ ಮೊಬೈಲ್‍ನಲ್ಲಿ ಅವುಗಳ ಚಿತ್ರ ಸೆರೆಹಿಡಿಯುವರಲ್ಲೇ ಮಗ್ನರಾಗುತ್ತಾರೆ. 
ಸಾಹಿತ್ಯದ ಲಾಲಿತ್ಯ: ಜಲಚರಗಳ ಜೊತೆಗೆ ಅನೇಕ ನವ್ಯ ಶೈಲಿಯ ಕಲಾಕೃತಿಗಳೂ ಕೂಡಾ ಶಿಲ್ಪವನವನ್ನು ಶ್ರೀಮಂತಗೊಳಿಸಿವೆ. ಶಿಲ್ಪಗಳಿಗೆ ಸಾಹಿತ್ಯದ ಮೆರಗನ್ನು ನೀಡಿರುವುದು ನೋಡುಗರಿಗೆ ಸಾಹಿತ್ಯದ ಲಾಲಿತ್ಯವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಡಾ//ಚಂದ್ರಶೇಖರ ಕಂಬಾರರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಅನೇಕ ಕಲಾಕೃತಿಗಳು ಪ್ರೇಕ್ಷಕರಿಗೆ ರಸದೌತಣ ನೀಡುತ್ತವೆ. ನೀವೇನಾದರೂ ಹಂಪೆಗೆ ಪ್ರವಾಸ ಕೈಗೊಂಡರೆ ತಪ್ಪದೇ ಕನ್ನಡ ವಿಶ್ವವಿದ್ಯಾಲಯಕ್ಕೂ ಭೇಟಿಕೊಡಿ.
                                        ಚಿತ್ರ ಬರಹ : ಆರ್.ಬಿ.ಗುರುಬಸವರಾಜ