June 3, 2016

ಕುಗ್ರಾಮದಲ್ಲೊಬ್ಬ ಆದರ್ಶ ಶಿಕ್ಷಕ MODEL TEACHER KOTRESH

ದಿನಾಂಕ 26-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಕುಗ್ರಾಮದಲ್ಲೊಬ್ಬ ಆದರ್ಶ ಶಿಕ್ಷಕ 


ಬಿರುಬಿಸಿಲಿಗೆ ಹೆಸರುವಾಸಿಯಾದ ರಾಯಚೂರು ಜಿಲ್ಲೆಯಲ್ಲೊಂದು ಖಾಸಗೀ ಹಾಗೂ ಮಲೆನಾಡ ಶಾಲೆಗಳನ್ನು ಮೀರಿಸುವಂತಹ ಶಾಲೆಯೊಂದಿದೆ. ಅದುವೇ ಸಿಂಧನೂರು ತಾಲೂಕಿನ ಕುಗ್ರಾಮ ಗೊಣ್ಣಿಗನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.  ಈಗ ಅಲ್ಲಿ 300 ಕ್ಕೂ ಹೆಚ್ಚಿನ ಮರಗಳು ಫಲ ಮತ್ತು ನೆರಳು ನೀಡಲು ಸಜ್ಜಾಗಿವೆ. ಇದಕ್ಕಿಂತ ಮುಖ್ಯವಾಗಿ ಇಡೀ ಗ್ರಾಮವೀಗ ಬಯಲು ಶೌಚಮುಕ್ತ, ಹೊಗೆ ರಹಿತ ಗ್ರಾಮ ಹಾಗೂ ಸಂಪೂರ್ಣ ಸೋಲಾರ್ ಗ್ರಾಮವಾಗಿದೆ. ಇದೆಲ್ಲಾ ಒಬ್ಬ ಶಿಕ್ಷಕನಿಂದ ಎಂದರೆ ಆಶ್ಚರ್ಯವಾಗುತ್ತದೆ. ನಂಬಲು ಅಸಾಧ್ಯ ಎನ್ನುವಂತಾಗುತ್ತದೆ. ಶಿಕ್ಷಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲಿನ ಶಿಕ್ಷಕರಾದ ಕೊಟ್ರೇಶ್ ಹಿರೇಮಠ ಅವರೇ ಸಾಕ್ಷಿ. 
2004ಕ್ಕೂ ಮುಂಚೆ ಅದನ್ನು ಶಾಲೆ ಎನ್ನುವಂತಿರಲಿಲ್ಲ. ಕಟ್ಟಡದ ಸುತ್ತ ಬೆಳೆದ ಮುಳ್ಳು ಕಂಟೆಗಳು, ಕಳೆ ಗಿಡಗಳು, ಕಸದ ತಿಪ್ಪೆಗಳು, ಚರಂಡಿ ನೀರಿನ ಗುಂಡಿಗಳು. ಅಕ್ಷರಶಃ ಅದು ಶಾಲೆ ಎನ್ನುವ ಬದಲು ಪಾಳು ಕಟ್ಟಡ ಎನ್ನುವಂತಿತ್ತು. ಇಷ್ಟೆಲ್ಲಾ ಸಮಸ್ಯೆಗಳಿರುವ ಶಾಲೆಗೆ 2004ರಲ್ಲಿ ಹೊಸದಾಗಿ ಕೊಟ್ರೇಶ್ ಅವರು ಶಿಕ್ಷಕರಾಗಿ ನೇಮಕಗೊಳ್ಳುತ್ತಾರೆ. ಇವರನ್ನು ಸೇವೆಗೆ ಸೇರಿಕೊಳ್ಳಲು ಇನ್ನೊಬ್ಬ ಶಿಕ್ಷಕರೂ ಸಹ ಇಲ್ಲ. 
       ಇಂತಹ ಶಾಲೆಯ ವಾತಾವರಣ ನೋಡಿದ ಶಿಕ್ಷಕರಿಗೆ ಶಾಲೆಯ ಸಹವಾಸವೇ ಬೇಡ, ನೌಕರಿಯೂ ಬೇಡ ಎನ್ನಿಸಿತು. ಆದರೂ ಗಟ್ಟಿ ಮನಸ್ಸು ಮಾಡಿ ಸುಂದರ ಶಾಲೆಯನ್ನಾಗಿಸುವ ಪಣ ತೊಡುತ್ತಾರೆ. ಯೋಜನೆ ಸಿದ್ದ ಪಡಿಸುತ್ತಾರೆ. ಶ್ರಮವಹಿಸಿ ಶ್ರದ್ದೆಯಿಂದ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. 
ಸಮುದಾಯದ ಸಹಭಾಗಿತ್ವ
              ಶಾಲೆಯ ಸುತ್ತಮುತ್ತ ಇದ್ದ ಮೇವಿನ ಬಣವೆ, ತಿಪ್ಪೆಗಳನ್ನು ತೆರವುಗೊಳಿಸುವುದು ಸವಾಲಾಗಿತ್ತು. ತೆರವುಗೊಳಿಸುವಾಗ ಕೆಲವು ವೇಳೆ ಅವುಗಳ ಮಾಲೀಕರೊಂದಿಗೆ ವಾಗ್ವಾದವೂ ನಡೆದಿತ್ತು. ಆದರೂ ದೃತಿಗೆಡದೇ ಸಮುದಾಯದ ಸಹಕಾರ ಪಡೆದು ಬಣವೆ ತಿಪ್ಪೆಗಳನ್ನು ತೆರವುಗೊಳಿಸುವಲ್ಲಿ ಸಫಲರಾದರು. ಒತ್ತುವರೆಯಾಗಿದ್ದ 240ಚ.ಮೀ ಶಾಲಾ ಜಾಗವನ್ನು ಮರುವಶಪಡಿಸಿಕೊಂಡ ನಂತರ ತಂತಿಬೇಲಿ ನಿರ್ಮಿಸಿದರು. 2006ರಲ್ಲಿ ಶಾಲಾ ಆವರಣಕ್ಕೊಂದು ನಿಶ್ಚಿತ ಎಲ್ಲೆ ಹಾಗೂ ಭದ್ರತೆ ದೊರೆತ ಮೇಲೆ ಗಿಡಗಳನ್ನು ನೆಡಲು ಪ್ರಾರಂಭಿಸಿದರು. ನೀರಿನ ಕೊರತೆಯಿಂದ ಗಿಡಗಳನ್ನು ಬೆಳೆಸುವುದು ತೊಂದರೆಯಾಗಿತ್ತು. ವಿದ್ಯಾರ್ಥಿಗಳಿಂದ ಗಿಡಗಳಿಗೆ ನೀರುಣಿಸುವುದು ಸಮಸ್ಯೆಯಾದಾಗ ಗ್ರಾಮಸ್ಥರ ಸಹಕಾರದಿಂದ 2008ರಲ್ಲಿ ಪೈಪ್‍ಲೈನ್ ವ್ಯವಸ್ಥೆ ಮಾಡಿದರು. 
       ಅಂತೆಯೇ ಮಕ್ಕಳಿಗೆ ಬಿಸಿಯೂಟಕ್ಕಾಗಿ ತಟ್ಟೆಲೋಟ ಸಂಗ್ರಹಿಸಿದರು. ಎಲ್ಲಾ ಮಕ್ಕಳಿಗೂ ಶಾಲಾ ಬ್ಯಾಗ್, ನೋಟ್ ಪುಸ್ತಕ, ಕಲರ್ ಪೆನ್ಸ್, ಟೈ-ಬೆಲ್ಟ್, ಕಂಪ್ಯೂಟರ್, ಟಿ.ವಿ, ಡೆಸ್ಕ್, ಪರೀಕ್ಷೆ ಬರೆಯಲು ಪ್ಯಾಡ್‍ಗಳನ್ನೂ ದಾನಿಗಳಿಂದ ಸಂಗ್ರಹಿಸಿದ್ದಾರೆ. ಏಕೋಪಾಧ್ಯಾಯ ಶಿಕ್ಷಕರಾದ ಕೊಟ್ರೇಶ್ ಅವರು ಬೋಧನೆಯಲ್ಲೂ ವಿಶಿಷ್ಠತೆ ಮೆರೆದಿದ್ದಾರೆ. ಪ್ರತಿವರ್ಷವೂ ಶೇಕಡಾ70 ರಷ್ಟು 5ನೇ ತರಗತಿ ಮಕ್ಕಳು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ, ನವೋದಯದಂತಹ ವಿವಿಧ  ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಾರೆ. 
ಬದಲಾಯಿತು ಇಡೀ ಹಳ್ಳಿಯ ಚಿತ್ರಣ
         ಅಂದು ಕುಗ್ರಾಮ ಎಂಬ ಕುಖ್ಯಾತಿ ಹೊಂದಿದ್ದ ಗೊಣ್ಣಿಗನೂರು ಇಂದು ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಮಾದರಿ ಗ್ರಾಮವಾಗಲು ಸಜ್ಜಾಗುತ್ತಿದೆ. ಪ್ರಸ್ತುತ ಗ್ರಾಮದಲ್ಲಿ 92 ಮನೆಗಳಿದ್ದು, ಸಿಂಧನೂರಿನ ರುದ್ರಗೌಡ ಪಾಟೀಲ್ ಪ್ರತಿಷ್ಠಾನದ ನೆರವಿನೊಂದಿಗೆ  ಬಯಲು ಶೌಚಮುಕ್ತ ಗ್ರಾಮವಾಗಿ ಘೋಷಣೆಯಾಗಿದೆ. ಈ ಘೋಷಣೆ ಕೇವಲ ದಾಖಲೆಯಲ್ಲಿ ಅಲ್ಲ. ಪ್ರತಿ ಕುಟುಂಬಗಳು ಶೌಚಾಲಯ ಬಳಸುತ್ತಿದ್ದಾರೆ. ಅಂತೆಯೇ ಸಿಂಧನೂರಿನ ಸೆಲ್ಕೋ ಸೋಲಾರ್ ನೆರವಿನೊಂದಿಗೆ ಪ್ರತೀ ಮನೆಗೂ ಸೋಲಾರ್ ವಿದ್ಯುತ್ ವ್ಯವಸ್ಥೆ ಪೂರ್ಣಗೊಂಡಿದೆ. ಅಲ್ಲದೇ ಸಿಂಧನೂರಿನ ಶ್ರೀಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸೀಸ್ ಇವರ ಸಹಕಾರದಿಂದ ಇಡೀ ಗ್ರಾಮ ಹೊಗೆ ಮುಕ್ತ ಗ್ರಾಮವಾಗಿದೆ. ಈಗಾಗಲೇ ಗ್ರಾಮದಲ್ಲಿ ಸಂಪೂರ್ಣ ಚರಂಡಿ ವ್ಯವಸ್ಥೆ ಉತ್ತಮ ಗುಣಮಟ್ಟದ ಸಿ.ಸಿ.ರಸ್ತೆಗಳು ಪ್ರಗತಿಯಲ್ಲಿವೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಶಿಕ್ಷಕರಿಂದ ಎಂಬುದು ಗ್ರಾಮಸ್ಥರ ಅಭಿಮತ. 
ಪಬ್ಲಿಕ್ ಹೀರೋ
             ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬಾವಿಹಳ್ಳಿ ಗ್ರಾಮದವರಾದ ಕೊಟ್ರೇಶ್ ಅವರು ಕೇವಲ ಸಾಮಾನ್ಯ ಶಿಕ್ಷಕರಲ್ಲ. ಅವರೊಬ್ಬ ಪಬ್ಲಿಕ್ ಹೀರೋ ಆಗಿ ರೂಪುಗೊಂಡಿದ್ದಾರೆ. ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಉದಾರ ಸಹಾಯ ಮಾಡಿದ್ದಾರೆ. ಎಂ.ಎ, ಬಿ.ಇಡಿ ಪದವಿ ಪಡೆದ ಅವರು ಈಗಲೂ ಗ್ರಾಮದ ಉನ್ನತ ವ್ಯಾಸಂಗದಲ್ಲಿ ತೊಡಗಿದ ಮಕ್ಕಳಿಗೆ ಉಚಿತ ಮನೆಪಾಠ ಮಾಡುವ ಮೂಲಕ ಅವರ ಭವಿಷ್ಯದ ಶಿಕ್ಷಣಕ್ಕೆ ಮಾರ್ಗದರ್ಶಿಯಾಗಿದ್ದಾರೆ.  ಶಿಕ್ಷಕರ ಸೇವೆಯನ್ನು ಗಮನಿಸಿದ ಶಿಕ್ಷಣ ಇಲಾಖೆ ಸದ್ರಿ ಶಿಕ್ಷಕರಿಗೆ 2015ರಲ್ಲಿ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಪಬ್ಲಿಕ್ ಚಾನಲ್‍ನವರು ದಿನಾಂಕ 17-03-2016 ರಂದು ‘ಪಬ್ಲಿಕ್ ಹೀರೋ’ ಕಾರ್ಯಕ್ರಮದಲ್ಲಿ ಇವರ ಸೇವೆಯ ಬಗ್ಗೆ ಕಾರ್ಯಕ್ರಮ ಭಿತ್ತರಿದ್ದಾರೆ. ಈ ಕಾರ್ಯಕ್ರಮದ ನಂತರ ಶಾಲೆಗೆ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ಚೆಕ್, ಡಿ.ಡಿಗಳ ಮೂಲಕ ಹಣವನ್ನು ಅಥವಾ ಅವಶ್ಯಕ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಲಿದ್ದಾರೆ. ಜೊತೆಗೆ ಗ್ರಾಮಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆಯೂ ಹೆಚ್ಚಿದೆ ಎನ್ನುತ್ತಾರೆ  ಗ್ರಾಮಸ್ಥರು. ಗುಡಿಸಲು ಮುಕ್ತ ಗ್ರಾಮವನ್ನಾಗಿಸಲುವ ಭವಿಷ್ಯದ ಯೋಜನೆ ಕೊಟ್ರೇಶ್ ಹಿರೇಮಠ ಅವರದು. ಹೀಗೆ ವಿಭಿನ್ನ ವ್ಯಕ್ತಿತ್ವದ ಮೂಲಕ ಕೊಟ್ರೇಶ್ ಇತರರಿಗೆ ಪ್ರೇರಣೆಯಾಗಿದ್ದಾರೆ. 
ಆರ್.ಬಿ.ಗುರುಬಸವರಾಜ

ಕೇಶ ರಕ್ಷಣೆಗೆ ಹಾಗಲಕಾಯಿ ಜ್ಯೂಸ್

ದಿನಾಂಕ 23-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಕೇಶ ರಕ್ಷಣೆಗೆ  ಹಾಗಲಕಾಯಿ ಜ್ಯೂಸ್


ಆಯುರ್ವೇದ ವೈದ್ಯ ಪದ್ದತಿಯಲ್ಲಿ ಹಾಗಲಕಾಯಿ ತನ್ನದೇ ಆದ ಪ್ರಮುಖ ಸ್ಥಾನ ಪಡೆದಿದೆ. ಇದು ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ಸಿಹಿಯನ್ನುಂಟು ಮಾಡುತ್ತದೆ. ಮಧುಮೇಹಿ ರೋಗಿಗಳಿಗಂತೂ ಹಾಗಲಕಾಯಿ ಅತ್ಯುತ್ತಮ ತರಕಾರಿಯಾಗಿದೆ.
‘ಮೊಮೊರ್ಡಿಕಾ ಚಾರಂಟಿಯಾ’ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಹಾಗಲಕಾಯಿ ಹೆಚ್ಚಾಗಿ ಏಷಿಯಾ, ದಕ್ಷಿಣ ಅಮೇರಿಕಾ ಹಾಗೂ ಆಫ್ರಿಕಾದ ಉಷ್ಣವಲಯಗಳಲ್ಲಿ ದೊರೆಯುತ್ತದೆ. ಇದು ಭಾರತ ಮೂಲದ ತರಕಾರಿಯಾಗಿದ್ದು ಚೀನಾಕ್ಕೆ ವಲಸೆ ಹೋಯಿತು. ನಂತರ ಅಲ್ಲಿಂದ ವಿವಿಧ ರಾಷ್ಟ್ರಗಳಿಗೆ ಪ್ರಸಾರವಾಯಿತು.
ಹಾಗಲಕಾಯಿ ಕೇವಲ ಚರ್ಮ ಮತ್ತು ಉತ್ತಮ ಆರೋಗ್ಯಕ್ಕೆ ಅಲ್ಲದೇ ಕೂದಲಿನ ವಿವಿಧ ಸಮಸ್ಯೆಗಳಿಗೂ ಸೂಕ್ತ ಔಷಧವಾಗಿದೆ. ಈ ಕುರಿತ ಒಂದಷ್ಟು ಟಿಪ್ಸ್ ಇಲ್ಲಿವೆ.
ಕಪ್ಪು ಕೂದಲಿಗಾಗಿ : ಕೂದಲಿನ ಕಪ್ಪು ಬಣ್ಣವನ್ನು ಕಾಪಾಡಲು ಮತ್ತು ನಯವಾದ ಕೂದಲನ್ನು ಪಡೆಯಲು ಹಾಗಲಕಾಯಿ ರಸ ಅತ್ಯುತ್ತಮವಾದುದು. 
ಬೇಕಾಗುವ ಸಾಮಗ್ರಿಗಳು: (1)ಅಡುಗೆ ಎಣ್ಣೆ (2)ಹಾಗಲಕಾಯಿ (3) ಕೊಬ್ಬರಿ ಎಣ್ಣೆ
ವಿಧಾನ : ಒಂದು ಹಾಗಲಕಾಯಿಯನ್ನು ಚಿಕ್ಕ ಚಿಕ್ಕ ಹೋಳುಗಳಾಗಿ ಕತ್ತರಿಸಿ 4 ಚಮಚ ಅಡುಗೆ ಎಣ್ಣೆಯಲ್ಲಿ ಹಾಕಿ 4 ದಿನಗಳವರೆಗೆ ನೆನೆಯಲು ಬಿಡಿ. 4 ದಿನಗಳ ನಂತರ ಎಣ್ಣೆಯಲ್ಲಿನ ಹೋಳುಗಳನ್ನು ಬಾಣಲೆಗೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಅದು ತಣ್ಣಗಾದ ನಂತರ ಕೊಬ್ಬರಿ ಎಣ್ಣೆ ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ತಲೆಗೆ ಹಚ್ಚಿಕೊಳ್ಳಬೇಕು. 15-20 ನಿಮಿಷಗಳ ನಂತರ ಕೂದಲನ್ನು ಸ್ವಚ್ಚವಾಗಿ ತೊಳೆಯಬೇಕು. ನಿಯಮಿತವಾಗಿ ಈ ಪ್ರಕ್ರಿಯೆ ಪುನರಾವರ್ತಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ಕೂದಲು ಉದುರುವುದನ್ನು ತಡೆಯಲು :  ಸ್ವಚ್ಚವಾಗಿ ತೊಳೆದ ಹಾಗಲಕಾಯಿ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ನಂತರ ಸ್ವಲ್ಪ ನೀರನ್ನು ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ಪೇಸ್ಟನ್ನು ನೆತ್ತಿಯ ಭಾಗಕ್ಕೆ ಅಥವಾ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಬೇಕು. 15-20 ನಿಮಿಷಗಳ ನಂತರ ತಲೆಸ್ನಾನ ಮಾಡಬೇಕು. ವಾರಕ್ಕೆ 2 ಬಾರಿ ಈ ರೀತಿ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.
ತಲೆಹೊಟ್ಟು ನಿವಾರಿಸಲು : ಇಂದಿನ ಆಹಾರ ಸೇವನೆಯ ಪದ್ದತಿಗಳಿಂದ ತಲೆಹೊಟ್ಟು ಸಾಮಾನ್ಯವಾದ ಕೂದಲಿನ ಸಮಸ್ಯೆಯಾಗಿದೆ. ಅದರ ನಿವಾರಣೆಗೆ ಹಾಗಲಕಾಯಿ ಉತ್ತಮ ಪರಿಹಾರವಾಗಿದೆ.
ಬೇಕಾಗುವ ಸಾಮಗ್ರಿಗಳು: (1) ಹಾಗಲಕಾಯಿ (2) ಜೀರಿಗೆ
ವಿಧಾನ : ಮೊದಲು ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ರುಬ್ಬಿ ಕಾಲು ಕಪ್ ರಸ ತಯಾರಿಸಿಕೊಳ್ಳಿ. ಅದಕ್ಕೆ 2 ಚಮಚ ಜೀರಿಗೆ ಪುಡಿಯನ್ನು ಚೆನ್ನಾಗಿ ಕಲಸಿ ಲತೆಗೆ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ಸ್ವಚ್ಚವಾದ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಪ್ರಕ್ರಿಯೆ ಮುಂದುವರೆಸಿ. ಉತ್ತಮ ಫಲಿತಾಂಶ ದೊರೆಯುತ್ತದೆ.
ಒರಟು ಕೂದಲಿನಿಂದ ಮುಕ್ತಿ ಪಡೆಯಲು : ತಾಜಾ ಹಾಗಲಕಾಯಿಯ ಪೇಸ್ಟನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ಸ್ವಚ್ಚವಾದ ನೀರಿನಿಂದ ತೊಳೆಯಬೇಕು. ತಿಂಗಳಿಗೆ 2 ಬಾರಿ ಈ ರೀತಿ ಮಾಡುವುದರಿಂದ ನಯವಾದ ಕೂದಲನ್ನು ಹೊಂದುತ್ತೀರಿ.
ಬಾಲನೆರೆ ತಡೆಯಲು : ಹಾಗಲಕಾಯಿ ರಸವನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ತಲೆಸ್ನಾನ ಮಾಡಬೇಕು. 10 ದಿನಗಳಿಗೊಮ್ಮೆ ಈ ಪ್ರಕ್ರಿಯೆ ಪುನರಾವರ್ತನೆ ಮಾಡುವುದರಿಂದ ಬಾಲನೆರೆ ತಡೆಯಬಹುದು.
ಹೊಳೆಯುವ ಕೂದಲಿಗಾಗಿ : ಒಂದು ಕಪ್ ಹಾಗಲಕಾಯಿ ರಸಕ್ಕೆ ಸ್ವಲ್ಪ ಮೊಸರು ಸೇರಿಸಿ ಕೂದಲಿಗೆ ಹಚ್ಚಿಕೊಂಡು 30 ನಿಮಿಷಗಳ ನಂತರ ಕೂದಲನ್ನು ಚೆನ್ನಾಗಿ ತೊಳೆಯಬೇಕು. ತಿಂಗಳಿಗೆ 2 ಬಾರಿ ಈ ರೀತಿ ಮಾಡುವುದರಿಂದ ಹೊಳೆಯುವ ರೇಶಿಮೆಯಂತಹ ಕೂದಲು ನಿಮ್ಮದಾಗುತ್ತದೆ.

ಆರ್.ಬಿ.ಗುರುಬಸವರಾಜ.


ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ EXAM PREPARE

ಏಪ್ರಿಲ್ 2016ರ 'ಗುರುಮಾರ್ಗ'ದಲ್ಲಿ ಪ್ರಕಟವಾದ ನನ್ನ ಕಿರುಬರಹ

ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ


ವರ್ಷಾಂತ್ಯಕ್ಕೆ ನಡೆಯುವ ಪರೀಕ್ಷೆ ಕೇವಲ ಮಕ್ಕಳ ಭವಿಷ್ಯಕ್ಕೆ ಅಲ್ಲ. ಅದು ಶಿಕ್ಷಕರ ಹಾಗೂ ಶಾಲಾ ಪರಿಸರಗಳ ಗುಣಮಟ್ಟದ ಪ್ರತೀಕ ಎಂದರೆ ತಪ್ಪಲ್ಲ. ಇತ್ತೀಚೆಗೆ ವಾರ್ಷಿಕ ಫಲಿತಾಂಶವೇ ಶಾಲಾ ಮಾನಕಗಳಾಗಿರುವುದು ನಮ್ಮ ದುರ್ದೈವ. ಶಿಕ್ಷಕರಾದ ನಾವು ಈ ವ್ಯವಸ್ಥೆಗೆ ಹೊಂದಿಕೊಂಡು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು ಅನಿವಾರ್ಯ. 
ಪ್ರಸ್ತುತ ಶಿಕ್ಷಕರ ಮುಂದಿರುವ ಬಹುದೊಡ್ಡ ಸವಾಲು ಎಂದರೆ ಉತ್ತಮ ಫಲಿತಾಂಶದೊಂದಿಗೆ ಶಾಲೆಯನ್ನು ಮುನ್ನಡೆಸುವುದು. ಉತ್ತಮ ಫಲಿತಾಂಶ ಪಡೆಯಲು ಮಕ್ಕಳನ್ನು ಪರೀಕ್ಷೆಗೆ ಉತ್ತಮವಾಗಿ ಸಿದ್ದಪಡಿಸುವುದು ನಮ್ಮೆಲ್ಲರ ಮೇಲಿನ ಗುರುತರ ಹೊಣೆಗಾರಿಕೆಯಾಗಿದೆ. ವರ್ಷದುದ್ದಕ್ಕೂ ಕಲಿಕೆ-ಬೋಧನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದರೂ ಪರೀಕ್ಷೆಯ ವೇಳೆ ಯಾವ ಮಕ್ಕಳ ಫಲಿತಾಂಶ ಏನಾಗುವುದೋ ಎಂಬ ಆತಂಕ ಸಹಜ. ಈ ಆತಂಕ ನಿವಾರಣೆಗಾಗಿ ಪ್ರತಿಯೊಬ್ಬ ಶಿಕ್ಷಕರೂ ಕೆಲವು ಯೋಜಿತ ತಂತ್ರಗಳನ್ನು ಅನುಸರಿಸುವ ಮೂಲಕ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. 
ಫೆಬ್ರವರಿ ಅಂತ್ಯದ ವೇಳೆಗೆ ಪ್ರತೀ ಮಗುವಿನ ಕಲಿಕೆಯ ಅಂದಾಜು ಮಟ್ಟ ನಮಗೆ ತಿಳಿದಿರುತ್ತದೆ. ಕಲಿಕೆಯ ಪರಿಕಲ್ಪನೆಗಳನ್ನು ಆಧಾರವಾಗಿಟ್ಟುಕೊಂಡು ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಮಟ್ಟಕ್ಕನುಗುಣವಾಗಿ ಮಕ್ಕಳಿಗೆ ಸ್ವಾವಲೋಕನ ಕಾರ್ಡ್‍ಗಳನ್ನು ತಯಾರಿಸಬೇಕು. ಅವುಗಳನ್ನು ಮಕ್ಕಳಿಗೆ ನೀಡಿ ಅವರ ಕಲಿಕಾ ಮಟ್ಟವನ್ನು ಅವರೇ ಕಂಡುಕೊಳ್ಳಲು ಯೋಜನೆ ರೂಪಿಸಿಬೇಕು. ಇದು ತೀರಾ ಸಂಕೀರ್ಣ ಎನಿಸಿದರೂ ಪ್ರತೀ ಮಗುವೂ ತನ್ನ ಸಾಮಥ್ರ್ಯ ತಿಳಿದು ಪರೀಕ್ಷೆ ಎದುರಿಸಲು ಸಿದ್ದತೆ ನಡೆಸಲು ಇದು ಸಹಕಾರಿ. 
ಪ್ರತೀ ಮಕ್ಕಳ ಕಲಿಕಾ ಮಟ್ಟ ತಿಳಿದ ನಂತರ ಅವರನ್ನು ನಿಗದಿತ ಗುಂಪುಗಳಾಗಿ ವಿಂಗಡಿಸಿ. ಗುಂಪುವಾರು ಅಧ್ಯಯನಕ್ಕೆ ಆಧ್ಯತೆ ನೀಡಿ. ಮೇಲುಸ್ತುವಾರಿ ವಹಿಸುತ್ತಾ ಮಾರ್ಗದರ್ಶನ ನೀಡಿ. ಸಮಯ ಹೊಂದಾಣಿಕೆ ಮಾಡಿಕೊಂಡು ಪೂರ್ಣಗೊಳಿಸಿದ ಘಟಕಗಳನ್ನು ಪುನರಾರ್ತನೆಗೊಳಿಸಿ. ಕೆಲವು ಮಕ್ಕಳಿಗೆ ಪುನರಾವರ್ತನೆ ಬೇಜಾರಾಗಬಹುದು. ಇದನ್ನು ನಿವಾರಿಸಲು ದೈನಂದಿನ ಸಾಮಾನ್ಯ ಬೋಧನೆಗಿಂತ ವಿಭಿನ್ನವಾದ ತಂತ್ರಗಾರಿಕೆ ಬಳಸಿ. ಕಲಿತ ಪರಿಕಲ್ಪನೆಗಳನ್ನು ಗಟ್ಟಿಗೊಳಿಸಲು ಪುನರಾವರ್ತನೆ ತುಂಬಾ ಸಹಕಾರಿ. 
ಪರೀಕ್ಷೆ ಪ್ರಾರಂಭಕ್ಕೂ ಒಂದು ತಿಂಗಳು ಮುನ್ನವೇ ಅದರ ಭಯ ನಮ್ಮಲ್ಲಿ ಆವರಿಸುವುದು ಸಹಜ. ಸಿಲಬಸ್ ಮುಗಿಸಿಲ್ಲ ಎಂಬ ಬಗ್ಗೆಯಾಗಲೀ, ಮಕ್ಕಳು ಹೇಗೆ ಉತ್ತರಿಸುತ್ತಾರೋ ಎಂಬ ಬಗ್ಗೆಯಾಗಲೀ ಭಯಭೀತರಾಗಿರುವುದು ಯಾವುದೇ ಕಾರಣಕ್ಕೂ ಮಕ್ಕಳಿಗೆ ತಿಳಿಯಬಾರದು. ಪರೀಕ್ಷೆಯ ಭಯ ನಮ್ಮನ್ನು ಆವರಿಸಿರುವುದು ಮಕ್ಕಳಿಗೆ ತಿಳಿದರೆ ಅವರು ಅಧೀರರಾಗುವ ಸಂಧರ್ಭ ಇರುತ್ತದೆ. ಮೊದಲು ನಮ್ಮಲ್ಲಿನ ಭಯ ಬಿಟ್ಹಾಕಿ ಪರೀಕ್ಷೆ ಎದುರಿಸಲು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸೋಣ. 
ನಿತ್ಯವೂ ಮಕ್ಕಳಿಗೆ ನಿಗದಿತ ಕಲಿಕಾ ಗುರಿಗಳನ್ನು ನೀಡುವುದು ಒಂದು ಉತ್ತಮ ಪ್ರಯತ್ನ. ವಾಸ್ತವಾಂಶಗಳಿಂದ ಕೂಡಿದ, ಮಕ್ಕಳು ನಿರ್ವಹಿಸಲು  ಸಾಧ್ಯವಿರುವ ಗುರಿಗಳನ್ನು ನೀಡಬೇಕು. ಗುರಿ ಸಾಧಿಸಿದಾಗ ಅವರನ್ನು ಪ್ರಶಂಸಿಸಿ ಭಾವನಾತ್ಮಕವಾಗಿ ಸದೃಢಗೊಳಿಸಿ. ಆಗ ಇತರೇ ಮಕ್ಕಳಲ್ಲಿಯೂ ಸ್ವಾಭಿಮಾನದ ಕಿಚ್ಚು ಹೆಚ್ಚುತ್ತದೆ. ತಾವೂ ಇತರರಂತೆ ಮುಂದೆ ಬರಲು ಪ್ರಯತ್ನಿಸುತ್ತಾರೆ. ಇದರಿಂದ ಅವರಲ್ಲಿ ಪರೀಕ್ಷಾ ಭಯ ಹಿಮ್ಮೆಟ್ಟುತ್ತದೆ. 
ಮಕ್ಕಳಿಗೆ ಪರೀಕ್ಷೆಯ ವೇಳೆ ಅವರ ವಾಸ್ತವಿಕ ಕಲಿಕಾ ಮಟ್ಟವನ್ನು ತಿಳಿಸಿ. ಯಾವುದೇ ಕಾರಣಕ್ಕೂ ಅವರ ಕಲಿಕೆಯ ಮಟ್ಟವನ್ನು ಮರೆಮಾಚಬೇಡಿ. ತಮ್ಮ ನಿರೀಕ್ಷೆಗಳನ್ನು ಕಲಿಕಾ ಮಟ್ಟದೊಂದಿಗೆ ಹೋಲಿಸಿ ಪರೀಕ್ಷೆಗೆ ಸಿದ್ದತೆ ನಡೆಸಲು ಸಹಕಾರಿಯಾಗುತ್ತದೆ. ಬಾಹ್ಯ ಒತ್ತಡ ಅಥವಾ ಆಮಿಷಗಳಿಂದ ಸುಳ್ಳು ಭರವಸೆ ನೀಡುವುದನ್ನು ತಪ್ಪಿಸುತ್ತದೆ. 
ಶಾಲೆಯಲ್ಲಿನ ಪ್ರತಿ ಸಹುದ್ಯೋಗಿಯೂ ಒಂದು ಅಮೂಲ್ಯ ನಿಧಿ ಇದ್ದಂತೆ. ಸದಾ ನಮ್ಮ ಬಳಿ ಇರುವ ಈ ನಿಧಿಯ ಸದ್ಭಳಕೆ ಮಾಡಿಕೊಳ್ಳುವ ಕುಶಲತೆ ಬೆಳೆಸಿಕೊಳ್ಳಬೇಕು. ಬೋಧನಾ ವಿಧಾನ, ಮೌಲ್ಯಮಾಪನ ತಂತ್ರಗಳು, ಬಳಸಬಹುದಾದ ಆಕರಗಳು ಇತ್ಯಾದಿ ವಿಷಯಗಳನ್ನು ಸಹುದ್ಯೋಗಿಗಳೊಂದಿಗೆ ಚರ್ಚಿಸಿ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. 
ಪರೀಕ್ಷೆಗೆ ಮಕ್ಕಳನ್ನು ಸಿದ್ದ ಪಡಿಸುವುವಾಗ ಪ್ರತೀ ವಿಷಯದ ಮೂಲಾಂಶಗಳನ್ನು ಮನದಟ್ಟು ಮಾಡಿಸಬೇಕು. ಮೂಲಾಂಶಗಳ ಬಳಕೆಯಿಂದ ಅನ್ವಯಿಕ ಪ್ರಶ್ನೆಗಳಿಗೆ ತಾರ್ಕಿಕವಾಗಿ ಉತ್ತರಿಸುವ ಕಲೆಯನ್ನು ಅಭಿವೃದ್ದಿ ಪಡಿಸಬೇಕು. ಒಬ್ಬ ಮೌಲ್ಯಮಾಪಕರಾಗಿ ಮಕ್ಕಳಿಂದ ಏನನ್ನು ನಿರೀಕ್ಷಿಸುತ್ತೇವೆಯೋ ಅದನ್ನೇ ನಮ್ಮ ತರಗತಿಯ ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳ ಕೈಬರಹದ ದೋಷಗಳನ್ನು ಸರಿಪಡಿಸಿ, ಸ್ಪುಟವಾಗಿ ಸುಂದರವಾಗಿ ಬರೆಯುವ ಕಲೆಯನ್ನು ಅಭಿವೃದ್ದಿಪಡಿಸಿ. ಕಾಗುಣಿತ, ಒತ್ತಾಕ್ಷರಗಳು, ಚಿಹ್ನೆಗಳು, ವ್ಯಾಕರಣಾಂಶಗಳು, ಸೂತ್ರಗಳು, ಚಿತ್ರಗಳು ಇತ್ಯಾದಿಗಳನ್ನು ದೋಷರಹಿತವಾಗಿ ಬರೆಯುವ ಅಭ್ಯಾಸ ಮಾಡಿಸಬೇಕು.
ಮಕ್ಕಳು ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕೆಂಬ ಧಾವಂತದಲ್ಲಿ ಮಾರ್ಚ್ ತಿಂಗಳಲ್ಲಿ ದಿನವೂ ಪರೀಕ್ಷೆ ನಡೆಸುವ ಪರಿಪಾಠ ಬೆಳೆದು ಬಂದಿದೆ. ಇದು ನಿಲ್ಲಬೇಕು. ಪರೀಕ್ಷೆಗಾಗಿ ಪರೀಕ್ಷೆ ನಡೆಸದೇ ಮಕ್ಕಳನ್ನು ಮಾನಸಿಕವಾಗಿ ಮತ್ತು ಬೌದ್ದಿಕವಾಗಿ ಪರೀಕ್ಷೆಗಳಿಗೆ ಸಿದ್ದಪಡಿಸಬೇಕು. ಕ್ವಿಜ್, ಗುಂಪುಚರ್ಚೆ, ಪ್ರಶ್ನೋತ್ತರ ಮಾಲಿಕೆ ಇತ್ಯಾದಿಗಳಿಂದ ಮಕ್ಕಳ ಕಲಿಕೆಯನ್ನು ದೃಢಪಡಿಸಬೇಕು. 
ಪರೀಕ್ಷೆಯ ವೇಳೆ ಪ್ರತೀ ಮಗುವಿನ ಆರೋಗ್ಯದ ಕಡೆಗೂ ಗಮನ ನೀಡಬೇಕು. ಮುಖ್ಯವಾಗಿ ಮಾನಸಿಕ ಆರೋಗ್ಯದ ಕಡೆ ಗಮನ ನೀಡಬೇಕು. ಒತ್ತಡ  ನಿವಾರಿಸಿ ಮಾನಸಿಕ ಸ್ಥೈರ್ಯ ತುಂಬಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮತ್ತು ಅಗತ್ಯ ನಿದ್ರೆ ಮಾಡುವಂತೆ ಸಲಹೆ ನೀಡಬೇಕು. 
ಇವೆಲ್ಲಕ್ಕಿಂತ ಮುಖ್ಯವಾಗಿ ಪಾಲಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದೂ ಮುಖ್ಯ. ತರಗತಿ ಮಕ್ಕಳ ಕಲಿಕೆಯ ಬಗ್ಗೆ ನಿಮಯಮಿತವಾಗಿ ಪಾಲಕರೊಂದಿಗೆ ಚರ್ಚಿಸಬೇಕು. ಮಕ್ಕಳ ಕಲಿಕೆಯಲ್ಲಿ ಅವರೂ ಪಾಲುದಾರರು ಎಂಬ ಅಂಶವನ್ನು  ಮನವರಿಕೆ ಮಾಡಬೇಕು ಹಾಗೂ ತಮ್ಮ ಮಕ್ಕಳ ಕಲಿಕೆಯ ಮೇಲೆ ನಿಗಾವಹಿಸಲು ತಿಳಿಸಬೇಕು. ಆಧುನಿಕ ತಂತ್ರಜ್ಞಾನದ ಪರಿಕರಗಳಾದ ಟಿ.ವಿ, ಮೊಬೈಲ್, ಕಂಪ್ಯೂಟರ್, ಟ್ಯಾಬ್ ಇತ್ಯಾದಿಗಳಿಂದ ಮಕ್ಕಳನ್ನು ದೂರ ಇಡಲು ಕಿವಿಮಾತು ಹೇಳಬೇಕು.
ಮೇಲಿನ ಕೆಲವು ಅಂಶಗಳಲ್ಲದೇ ಇನ್ನಿತರೇ ಉತ್ತಮಾಂಶಗಳನ್ನು ಅಳವಡಿಸಿಕೊಂಡು ಪರೀಕ್ಷೆಗೆ ಮಕ್ಕಳನ್ನು ಸಿದ್ದಪಡಿಸಬೇಕಾದ ಅವಶ್ಯಕತೆ ಇದೆ. ಅನಾರೋಗ್ಯಕರ ಪ್ರಯತ್ನಗಳು ನಮ್ಮನ್ನು ಅದಃಪತನಕ್ಕೆ ನೂಕುತ್ತವೆ ಎಂಬ ಅರಿವು ನಮ್ಮಲ್ಲಿರಲಿ. ಆರೋಗ್ಯಕರ ಪ್ರಯತ್ನಗಳು ಮಾತ್ರ ನಮ್ಮನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಆರೋಗ್ಯಕರ ಪ್ರಯತ್ನಗಳನ್ನು ಕೈಗೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಬೆಂಬಲಿಸೋಣ. ಆ ಮೂಲಕ ಮೌಲ್ಯವರ್ಧಿತ ಸಮಾಜಕ್ಕೆ ಮುನ್ನುಡಿ ಬರೆಯೋಣ.

ಆರ್.ಬಿ.ಗುರುಬಸವರಾಜ