December 18, 2017

ಮಾನಸಿಕ ಸಶಕ್ತತೆ Mental Strength

ದಿನಾಂಕ 13-12-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ. 

ಮಾನಸಿಕ ಸಶಕ್ತತೆ ಎಂಬ ಅಭಿವೃದ್ದಿಯ ಮೂಲ


           ಸಚಿನ್ ತೆಂಡೂಲ್ಕರ್ ಒಬ್ಬ  ಉತ್ತಮ ಕ್ರಿಕೆಟ್ ಆಟಗಾರನಾಗಿ ಹೇಗೆ ರೂಪುಗೊಂಡ? ಬರಾಕ್ ಒಬಾಮಾ ಅಮೇರಿಕಾದ ಪ್ರಸಿದ್ದ ಜನನಾಯಕ ಹೇಗಾದ? ಮಲಾಲ ಹೇಗೆ ಬಾಲಕಿಯರ ಶಿಕ್ಷಣದ ಹೋರಾಟಗಾರ್ತಿ ಎನಿಸಿಕೊಂಡಳು? ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿರುತ್ತವೆ. ಎಲ್ಲರಿಗೂ ಸಾಧ್ಯ ಆಗದಿರುವುದನ್ನು ಕೆಲವರು ಮಾತ್ರ ಹೇಗೆ ಸಾಧಿಸಿದರು? ಎಂಬುದು ಯಕ್ಷಪ್ರಶ್ನೆಯಾಗಿ ಕಾಡಬಹುದು. ಸಾಧಿಸಿದವರ ಕುರಿತು ಮಾತನಾಡುವಾಗ ಅವರ ಟ್ಯಾಲೆಂಟ್ ಉನ್ನತ ಮಟ್ಟದಲ್ಲಿದೆ ಎಂದು ಮಾತನಾಡುತ್ತೇವೆ. ಆದರೆ ನಮ್ಮ ಟ್ಯಾಲೆಂಟ್‍ಏನು? ಎಂದು ಯೋಚಿಸುವುದೇ ಇಲ್ಲ. ‘ಯಾರಿಗಿಂತ ನಾವೂ ಕಡಿಮೆಯೇನಲ್ಲ, ನಮಗೂ ಬುದ್ದಿ ಇದೆ’ ಎಂದು ಮುಂದೆ ಹೊರಟಾಗ ಮಾತ್ರ ನಾವೂ ಅವರಂತೆ ಸಾಧಿಸಲು ಸಾಧ್ಯವಾಗುತ್ತದೆ. ಒಂದು ಅಂದಾಜಿನಂತೆ ಬಹುತೇಕರು ತಮ್ಮ ಬುದ್ದಿಯ ಶೇಕಡಾ 30 ರಷ್ಟನ್ನು ಮಾತ್ರ ಬಳಸುತ್ತಾರಂತೆ. ಇದನ್ನು ದಾಟಿ ಮುಂದೆ ಹೋಗಲು ಪ್ರತಿಯೊಬ್ಬರೂ ಮಾನಸಿಕ ಶಕ್ತಿ ಅಥವಾ ಮಾನಸಿಕ ಬಲ ಬೆಳೆಸಿಕೊಳ್ಳಬೇಕಾದ ಅಗತ್ಯ ಇದೆ.  
ಮಾನಸಿಕ ಶಕ್ತಿಯು ಆಸಕ್ತಿದಾಯಕ ಪರಿಕಲ್ಪನೆಯಾಗಿದ್ದು, ಇದನ್ನು ಅರ್ಥೈಸಿಕೊಳ್ಳಲು ವಿಭಿನ್ನ ದೃಷ್ಟಿಕೋನದ ಅವಶ್ಯಕತೆ ಇದೆ. ಮಾನಸಿಕ ಶಕ್ತಿ ಎಂಬುದು ವ್ಯಕ್ತಿಯ ನಿರ್ಧಾರ ಮತ್ತು ಆಯ್ಕೆ ಮಾಡುವ ಸಾಮಥ್ರ್ಯವಾಗಿದೆ. ಇದು ಗುರಿ ಮತ್ತು ಕಾರ್ಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವ ಸಾಮಥ್ರ್ಯವೂ ಆಗಿದೆ. 
ಮಾನಸಿಕ ಶಕ್ತಿಯು ಶಿಸ್ತು ಮತ್ತು ಆಂತರಿಕ ಶಕ್ತಿಯ ಪ್ರಕಟಣಾ ರೂಪವಾಗಿದೆ. ವ್ಯಕ್ತಿ ತನಗಿರುವ ಸೌಲಭ್ಯಗಳನ್ನು ತೊರೆದು ಕಠಿಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಮಾತ್ರ ಇದು ಸಾಧಿತವಾಗುತ್ತದೆ. ಮಾನಸಿಕ ಶಕ್ತಿ ಪಡೆದವರಲ್ಲಿ ಸೋಮಾರಿತನ ಮತ್ತು ವಿಳಂಬ ಪ್ರವೃತ್ತಿ ಇರುವುದಿಲ್ಲ. ನಮ್ಮ ಸಾಮಥ್ರ್ಯ, ದೌರ್ಬಲ್ಯಗಳು, ಕೌಶಲ್ಯಗಳು, ಕೊರತೆಗಳ ಬಗ್ಗೆ ಅರಿವನ್ನುಂಟು ಮಾಡಲು ಮಾನಸಿಕ ಶಕ್ತಿಯು ಸಹಾಯ ಮಾಡುತ್ತದೆ. ಮಾಹಿತಿ ಅಥವಾ ಜ್ಞಾನದ ಅಗತ್ಯವಿರುವಾಗ ಇತರರ ಸಹಾಯ ಪಡೆಯಲು ಹೆದರಿಕೆ ಅಥವಾ ನಾಚಿಕೆ ಸ್ವಭಾವ ಇಲ್ಲದಿರುವುದೇ ಮಾನಸಿಕ ಶಕ್ತಿ ಆಗಿದೆ. 
          ಯಾವೊಬ್ಬ ಸಾಧಕನೂ ಮಾನಸಿಕ ಸದೃಢತೆಯನ್ನು ಪಡೆದುಕೊಂಡು ಹುಟ್ಟುವುದಿಲ್ಲ. ಬದಲಾಗಿ ಅವರು ಅನುಸರಿಸುವ ಚಟುವಟಿಕೆ ಮತ್ತು ಅವರ ಕಾರ್ಯವಿಧಾನ ಅವರನ್ನು ವಿಭಿನ್ನ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಅಂತಹ ಕೆಲ ಚಟುವಟಿಕೆಗಳನ್ನು ಅನುಸರಿಸಿದರೆ ನೀವೂ ಅವರನ್ನು ಮೀರಿ ಬೆಳೆಯಲು ಸಾಧ್ಯವಿದೆ. ಅದಕ್ಕೆ ನಿಮ್ಮ ಮಾನಸಿಕ ಶಕ್ತಿಯು ಬಲವಾಗಿರಬೇಕು.
ನಿಮ್ಮನ್ನು ನಂಬಿರಿ : ನೀವು ಈ ಹಿಂದೆ ಎಷ್ಟೇ ಬಾರಿ ವಿಫಲರಾಗಿದ್ದರೂ ನಿಮ್ಮ ಮಾನಸಿಕ ಶಕ್ತಿಯ ಮೇಲೆ ನಂಬಿಕೆ ಇರಲಿ. ಅನುಮಾನಗಳು, ಅಪನಂಬಿಕೆಗಳು ಮತ್ತು ನಕಾರಾತ್ಮಕತೆಗಳು ನಿಮ್ಮ ಯಶಸ್ಸಿಗೆ ಬ್ರೇಕ್‍ಗಳಿದ್ದಂತೆ. ಧನಾತ್ಮಕ ಆಲೋಚನೆಗಳಿಂದ ಮಾತ್ರ ನಿಮ್ಮಲ್ಲಿ ನಂಬಿಕೆ ಬೆಳೆಸಿಕೊಳ್ಳಲು ಸಾಧ್ಯ. 
ಅನಗತ್ಯ ವಿಚಾರ ಬೇಡ : ನಿರ್ಣಯ ಕೈಗೊಳ್ಳುವ ಸಂದರ್ಭ ಅಥವಾ ಸತ್ಯದ ಹುಡುಕಾಟದ ಸಮಯದಲ್ಲಿ ನಿಮ್ಮ ಸಾಮಾನ್ಯ ಜ್ಞಾನವನ್ನು ಬಳಸಿ ಮತ್ತು ನಿಮ್ಮ ಅಂತಃಪ್ರಜ್ಞೆಯನ್ನು ಕೇಳಿಕೊಳ್ಳಿ. ನಾವು ಪ್ರತಿದಿನ ತೆಗೆದುಕೊಳ್ಳುವ ಅನೇಕ ನಿರ್ಣಯಗಳು ಪ್ರಮುಖವಾಗಿರುವುದಿಲ್ಲ. ಇಂತಹ ಅನಗತ್ಯ ವಿಷಯಗಳ ಕುರಿತು ಧೀರ್ಘವಾದ ಆಲೋಚನೆ ಮಾಡುವುದ ಬೇಡ. ಇದು ಸಮಯ ಮತ್ತು ಶ್ರಮ ಎರಡನ್ನೂ ಹಾಳು ಮಾಡುತ್ತದೆ. ನಿಮ್ಮ ಜೀವನದಲ್ಲಿ ಮಹತ್ತರವಾದ ಪರಿಣಾಮ ಬೀರುವ ವಿಷಯದ ಬಗ್ಗೆ ಆಳವಾದ ವಿಚಾರ ಕೈಗೊಳ್ಳಿ. ಅದು ಸಣ್ಣ ವಿಷಯವಾದರೂ ಸರಿ. ಅದರ ಎಲ್ಲಾ ಆಯಾಮಗಳನ್ನು ಆಲೋಚಿಸಿ ನಿರ್ಧಾರ ಕೈಗೊಳ್ಳಿ.
ಕಿರಿಕಿರಿಗೆ ಹಿಂಜರಿಯದಿರಿ: ಕೆಲವೊಮ್ಮೆ ಕಿರಿಕಿರಿಯ ಮೂಲಕ ಯಶಸ್ಸನ್ನು ಕಾಣಬೇಕಾಗುತ್ತದೆ. ಕಿರಿಕಿರಿಗೆ ಹೆದರಿ ಸಾಧನೆಯಿಂದ ಹಿಂದೆ ಸರಿದರೆ ಏನನ್ನೂ ಸಾಧಿಸಲಾಗದು. ಅಭ್ಯಾಸ ಮಾಡುವಾಗ, ದೇಹದ ತೂಕ ಇಳಿಸಿಕೊಳ್ಳುವಾಗ, ಹೊಸ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವಾಗ, ವೃತ್ತಿಯಲ್ಲಿ ಪ್ರಗತಿ ಹೊಂದುವಾಗ, ಹೆಚ್ಚು ಹಣ ಗಳಿಸುವಾಗ ಕೆಲವೊಮ್ಮೆ ಕಿರಿಕಿರಿ ಅನುಭವಿಸುತ್ತೇವೆ. ಆದರೆ ನಾವು ಇಷ್ಟಪಡುವ ಕೆಲಸವನ್ನು ಪೂರೈಸಲು ಪ್ರಯತ್ನಿಸಬೇಕು. ಒಂದು ವೇಳೆ ನಾವು ಯಶಸ್ಸು ಗಳಿಸಲು ಇಚ್ಚಿಸಿದಲ್ಲಿ ಅದಕ್ಕೆ ಸೂಕ್ತ ಮೌಲ್ಯವನ್ನು ಪಾವತಿಸಬೇಕು. ಆ ಮೌಲ್ಯ ನಮಗೆ ಶಿಸ್ತು ಸಂಯಮ ಮತ್ತು ಸಮರ್ಥನೆಯನ್ನು ನೀಡುತ್ತದೆ. ಇದರಿಂದ ನಮ್ಮ ಮಾನಸಿಕ ಶಕ್ತಿ ಬಲಗೊಳ್ಳುತ್ತದೆ. 
ಗುರಿ ಮತ್ತು ಉದ್ದೇಶದ ಮೇಲೆ ನಿಗಾ ವಹಿಸಿ: ನೀವು ಏನನ್ನು ಸಾಧಿಸಲು ಇಚ್ಚಿಸಿರುವಿರೋ ಅದರ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಿ. ಗುರಿ ಚಿಕ್ಕದಿರಲಿ, ದೊಡ್ಡದಿರಲಿ. ಆದರೆ ಅದರ ಪರಿಣಾಮ ಮಾತ್ರ ಅಗಾಧವಾಗಿರುತ್ತದೆ. ಆದ್ದರಿಂದ ನಿಮ್ಮ ಗುರಿಯನ್ನು ಗಮನಿಸುವ ಮಾನಸಿಕ ಶಕ್ತಿ ಬೆಳೆಸಿಕೊಳ್ಳಿ. ಗುರಿ ಮತ್ತು ಉದ್ದೇಶಗಳನ್ನು ನಿರಂತರವಾಗಿ ಬದಲಾಯಿಸುವ ವ್ಯಕ್ತಿಯು ಮಾನಸಿಕ ಸಾಮಥ್ರ್ಯ ಮತ್ತು ಸಹಿಷ್ಣುತೆ ಹೊಂದಿರುವುದಿಲ್ಲ. ಹಾಗಾಗಿ ಯಾವುದನ್ನೂ ಸಾಧಿಸಲು ಆಗುವುದಿಲ್ಲ. 
ಸರಳ ಮತ್ತು ಅಲ್ಪಾವಧಿಯ ಗುರಿಗಳನ್ನು ಆಯ್ಕೆ ಮಾಡಿಕೊಳ್ಳಿ : ಸರಳ, ನೈಜ ಹಾಗೂ ಅಲ್ಪಾವಧಿಯ ಗುರಿಗಳನ್ನು ಸಾಧಿಸುವುದು ಕಷ್ಟವಲ್ಲ. ಇಂತಹ ಸರಳ ಗುರಿಗಳನ್ನು ಸಾಧಿಸಿದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಆಗ ನಿಮ್ಮ ನಂಬಿಕೆ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ. ಸಣ್ಣ ಗುರಿಗಳನ್ನು ಸಾಧಿಸಬಹುದೆಂದು ಸಾಬೀತು ಮಾಡಿದಾಗ ದೊಡ್ಡ ಗುರಿಗಳನ್ನು ಸುಲಭವಾಗಿ ಸಾಧಿಸಬಹುದು. 
ಶಿಸ್ತು ಮತ್ತು ಸ್ವ-ಇಚ್ಛೆಗಳನ್ನು ವ್ಯಾಯಾಮ ಮಾಡಿ: ಪ್ರತಿಯೊಬ್ಬರೂ ಅಗತ್ಯ ಸಂದರ್ಭದಲ್ಲಿ ಶಿಸ್ತು ಮತ್ತು ಸ್ವ-ಇಚ್ಛೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚು ಮಾನಸಿಕ ಶಕ್ತಿಯನ್ನು ಗಳಿಸಿದಲ್ಲಿ ಉತ್ತಮ ಶಿಸ್ತು ಮತ್ತು ಸಾಮಥ್ರ್ಯಗಳನ್ನು ಪ್ರದರ್ಶಿಸಬಹುದು. ಆದಕಾರಣ ದಿನಕ್ಕೆ ಒಮ್ಮೆಯಾದರೂ ಶಿಸ್ತು ಮತ್ತು ಸ್ವ-ಇಚ್ಛೆಗಳನ್ನು ಬಳಸುವ ಸಾಮಥ್ರ್ಯ ಹೊಂದಬೇಕು. ಇದಕ್ಕಾಗಿ ಪ್ರತಿದಿನ ಅನೇಕ ಅವಕಾಶಗಳು ಒದಗಿ ಬರುತ್ತವೆ. 
ಬದಲಾವಣೆಗೆ ಹೆದರಬೇಡಿ: ಮಾನಸಿಕ ಸಾಮಥ್ರ್ಯದ ಎರಡು ಪ್ರಮುಖ ಗುಣಲಕ್ಷಣಗಳೆಂದರೆ ಆತ್ಮವಿಶ್ವಾಸ ಮತ್ತು ಬದಲಾವಣೆಗೆ ಹೆದರದಿರುವುದು. ಬಹಳಷ್ಟು ಜನರು ತಮಗೆ ತಿಳಿದ ವಿಷಯಕ್ಕೆ ಮಾತ್ರ ಅಂಟಿಕೊಳ್ಳುತ್ತಾರೆ ಮತ್ತು ಬದಲಾವಣೆಗೆ ಹೆದರುತ್ತಾರೆ.  ಜೀವನದಲ್ಲಿ ಯಾವುದೇ ಅಂಶವನ್ನು ಸುಧಾರಿಸಬೇಕಾದರೆ ಮೊದಲು ಬದಲಾವಣೆಗೆ ಹೊಂದಿಕೊಳ್ಳುವುದನ್ನು ಕಲಿಯಬೇಕು. ನೀವು ಏನನ್ನು ಬದಲಾಯಿಸಬೇಕೆಂದು ಬಯಸಿದ್ದೀರೋ ಅದರ ಪ್ರಯೋಜನಗಳ ಬಗ್ಗೆ ಯೋಚಿಸಿ ಮತ್ತು ಬದಲಾವಣೆ ಮಾಡಿದರೆ ನಿಮ್ಮ ಜೀವನ ಹೇಗೆ ಕಾಣುತ್ತದೆ ಎಂಬುದನ್ನು ಊಹಿಸಿ. ಇದು ನಿಮಗೆ ಪ್ರೇರಣೆ ಮತ್ತು ಆತ್ಮವಿಶ್ವಾಸ ನೀಡುತ್ತದೆ. ನೀವು ಮಾಡುವ ಪ್ರತಿಯೊಂದು ಧನಾತ್ಮಕ ಬದಲಾವಣೆಯು ನಿಮ್ಮ ವಿಶ್ವಾಸಾರ್ಹತೆ, ಸ್ವಾಭಿಮಾನ ಮತ್ತು ಒಳಗಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ನಿಮ್ಮ ಮಾನಸಿಕ ಶಕ್ತಿಯು ಹೆಚ್ಚುತ್ತದೆ. ಬದಲಾವಣೆಗಳನ್ನು ಸ್ವಾಗತಿಸಿದಾಗ ಮತ್ತು ಅವುಗಳನ್ನು ಹೆದರಿಕೆ ಇಲ್ಲದೇ ಎದುರಿಸಿದಾಗ ನಿಮ್ಮ ಮಾನಸಿಕ ಶಕ್ತಿ ಸುಧಾರಿಸುತ್ತದೆ. 
ಹೀಗೆ ವಿವಿಧ ಕಾರ್ಯ ಚಟುವಟಿಕೆಗಳಿಂದ ನೀವು ಬಯಸಿದಂತೆ ನಿಮ್ಮ ಮಾನಸಿಕ ಶಕ್ತಿಯನ್ನು ಬೆಳೆಸಬಹುದು ಮತ್ತು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಮಾನಸಿಕ ಶಕ್ತಿ ಹೆಚ್ಚಿದಂತೆ ನಿಮ್ಮ ಸಹಿಷ್ಟುತೆ, ಗಮನ ಮತ್ತು ಆಂತರಿಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಮಾನಸಿಕ ಶಕ್ತಿಯನ್ನು ಗಳಿಸುವುದು ತುಂಬಾ ಕಷ್ಟಕರವೇನಲ್ಲ. ಪ್ರಯತ್ನಿಸಿ ನೋಡಿ. ಆನಂದ ಹೊಂದಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ


November 27, 2017

ಮಕ್ಕಳ ಬೆಳವಣಿಗೆ ಮತ್ತು ಸಾಮಾಜಿಕರಣ Children Development and Socialization

ದಿನಾಂಕ 27-11-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಮಕ್ಕಳ ಬೆಳವಣಿಗೆ ಮತ್ತು ಸಾಮಾಜಿಕರಣ


ಎಂಟನೇ ತರಗತಿಯಲ್ಲಿ ಓದುತ್ತಿರುವ ಕಾರ್ತೀಕ ಯಾವಾಗಲೂ ತಾನಾಯಿತು, ತನ್ನ ಓದುವ ಬರೆಯುವ ಕೆಲಸವಾಯಿತು ಎನ್ನುವಂತೆ ಇದ್ದಾನೆ. ರಜೆಯ ದಿನ ಅಪರೂಪಕ್ಕೆ ಎಂಬಂತೆ ವಠಾರದ ಮಕ್ಕಳೊಂದಿಗೆ ಆಟವಾಡಲು ಹೊರಗೆ ಹೋಗುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಜಗಳದೊಂದಿಗೆ ಮನೆಗೆ ಹಿಂದಿರುಗುತ್ತಾನೆ. ಇತರೆ ಮಕ್ಕಳೊಂದಿಗೆ ಹೊಂದಿಕೊಂಡು ಆಡುವ ಗುಣ ತಿಳಿದಿಲ್ಲ. ಮನೆಗೆ ಯಾರೇ ಅಥಿತಿಗಳು ಬಂದರೂ ಅವರೊಂದಿಗೆ ಮಾತನಾಡುವುದಿಲ್ಲ. ಚಿಕ್ಕ ಚಿಕ್ಕ ಸಾಮಾನುಗಳನ್ನು ತರಲು ಅಂಗಡಿಗೆ ಕಳಿಸಿದರೆ ಸರಿಯಾಗಿ ಲೆಕ್ಕಾಚಾರ ಮಾಡದೇ ಕೊಟ್ಟ ಹಣವನ್ನೆಲ್ಲಾ ಅಂಗಡಿಯವನಿಗೆ ಕೊಟ್ಟು ಬರುತ್ತಾನೆ. ಈ ಬಗ್ಗೆ ಕೇಳಿದರೆ ರೇಗುತ್ತಾನೆ. ನಾನು ಇನ್ಮುಂದೆ ಅಂಗಡಿಗೆ ಹೋಗುವುದಿಲ್ಲ ಎಂದು ಹೆದರಿಸುತ್ತಾನೆ. ಮನೆಯ ಹಿರಿಯರಿಗೆ ಗೌರವವನ್ನೇ  ಕೊಡುವುದಿಲ್ಲ. ಇವನು ಹೀಗೇಕೆ ಎಂಬುದೇ ತಾಯಿಯ ಚಿಂತೆ.
ಆರನೇ ತರಗತಿಯಲ್ಲಿ ಓದುವ ಮೊನಿಕ ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ವಠಾರದ ಮಕ್ಕಳೊಂದಿಗೆ ಆಟವಾಡುತ್ತಾಳೆ. ಮನೆಯವರು ಕರೆದ ತಕ್ಷಣ ಓಡಿಹೋಗಿ ಅವರು ಹೇಳಿದ ಕೆಲಸ ಮಾಡುತ್ತಾಳೆ. ರಜೆಯ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಗೆಳೆಯರೊಂದಿಗೆ ಆಟವಾಡುತ್ತಾಳೆ. ಅಂಗಡಿಗೆ ಹೋದರೆ ನಿಖರವಾಗಿ ಲೆಕ್ಕಾಚಾರ ಮಾಡಿ ಸರಿಯಾದ ಹಣ ನೀಡುತ್ತಾಳೆ. ಅಂಗಡಿವನಿಗೆ ಏನಾದರೂ ಒಂದು ತರಲೆ ಪ್ರಶ್ನೆ ಕೇಳಿ ಅದಕ್ಕೆ ತಾನೇ ಸೂಕ್ತ ಉತ್ತರ ನೀಡಿ ಬಹುಮಾನ ಪಡೆಯುತ್ತಾಳೆ. ಮನೆಯವರಿಗೆ ಅಷ್ಟೇ ಅಲ್ಲ ವಠಾರದ ಎಲ್ಲಾ ಹಿರಿಯರಿಗೂ ಗೌರವ ನೀಡುತ್ತಾಳೆ. ಅವರು ಹೇಳಿದ ಮಾತು ಕೇಳುತ್ತಾಳೆ. ಎಲ್ಲರಿಗೂ ಮೊನಿಕ ಎಂದರೆ ಪಂಚಪ್ರಾಣ.
ಕಾರ್ತೀಕ ಮತ್ತು ಮೊನಿಕ ಇಬ್ಬರೂ ಒಂದೇ ವಠಾರದವರಾದರೂ ಇಬ್ಬರ ಮನೆಯ ಪರಿಸರ ಬೇರೆ ಬೇರೆ. ಕಾರ್ತೀಕನನ್ನು ಅವರ ತಂದೆ ತಾಯಿ ಹೆಚ್ಚಾಗಿ ಮನೆಯಿಂದ ಹೊರಗೆ ಕಳಿಸುವುದಿಲ್ಲ. ಹಾಗಾಗಿ ಅವನಿಗೆ ಲೋಕಜ್ಞಾನ ತುಂಬಾ ಕಡಿಮೆ. ಮೊನಿಕ ದಿನದ ಹೆಚ್ಚು ಸಮಯ ಮನೆಯಿಂದ ಹೊರಗೆ ಇರುತ್ತಾಳೆ. ವಠಾರದ ಮಕ್ಕಳೊಂದಿಗೆ ಆಟವಾಡುತ್ತಾಳೆ. ಯಾರೊಂದಿಗೆ ಹೇಗಿರಬೇಕೆಂಬುದನ್ನು ಚೆನ್ನಾಗಿ ತಿಳಿದಿದ್ದಾಳೆ. ಆದ್ದರಿಂದ ಅವಳ ವ್ಯವಹಾರ ಜ್ಞಾನ ಚೆನ್ನಾಗಿದೆ. ಇದನ್ನೇ ಸಾಮಾಜಿಕರಣ ಎನ್ನುವುದು. ಸಾಮಾಜಿಕರಣಗೊಂಡ ಮಕ್ಕಳು ಎಲ್ಲರೊಂದಿಗೆ ಕೂಡಿ ಆಡುವ, ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿರುತ್ತಾರೆ.
ಸಾಮಾಜಿಕರಣ; ಹಾಗಂದರೇನು? : ಸಂಸ್ಕøತಿಯ ಭಾಗವಾಗುವುದನ್ನು ಕಲಿಯುವ ಸಾಮಾಜಿಕ ಪ್ರಕ್ರಿಯೆಯೇ ಸಾಮಾಜಿಕರಣ. ಸಾಮಾಜಿಕತೆಯ ಮೂಲಕ ತಮ್ಮ ಸಂಸ್ಕøತಿಯ ಭಾಷೆ, ದೈನಂದಿನ ಜೀವನದಲ್ಲಿ ತಮ್ಮ ಪಾತ್ರದ ಅಗತ್ಯತೆ ಮತ್ತು ಸಮಾಜದ ನಿರೀಕ್ಷೆಯ ಬಗ್ಗೆ ಕಲಿಯುವುದೇ ಸಾಮಾಜಿಕರಣ.
ಸಾಮಾಜಿಕ ಪ್ರಕ್ರಿಯೆಯು ವ್ಯಕ್ತಿಯು ತಮ್ಮ ಸಂಸ್ಕøತಿಯ ಮೂಲಕ ಸಂಪೂರ್ಣ ಮಾನವನಾಗುವ ಪ್ರಕ್ರಿಯೆಯಾಗಿದೆ. ವ್ಯಕ್ತಿಯೊಬ್ಬ ಸಾಮಾಜಿಕರಣಗೊಳ್ಳದೇ ಹೋದರೆ ಸಾಮಾಜಿಕ ಕಂಟಕನಾಗಿ ಪರಿವರ್ತಿತಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಮಕ್ಕಳಲ್ಲಿ ಸಾಮಾಜಿಕರಣದ ಅಗತ್ಯತೆ
“ಓಣಿಯ ಮಗು ಬೆಳೆಯಿತು, ಕೋಣಿಯ ಮಗು ಕೊಳೆಯಿತು” ಎಂಬ ಗಾದೆ ಮಾತು ಸಾಮಾಜಿಕರಣದ ಮಹತ್ವವನ್ನು ಒತ್ತಿ ಹೇಳುತ್ತದೆ. ಸಾಮಾಜಿಕರಣವು ಜೀವನಪರ್ಯಂತ ನಡೆಯುವ ಪ್ರಕ್ರಿಯೆಯಾದರೂ ಬಾಲ್ಯದ ಸಾಮಾಜಿಕರಣವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುತ್ತೇವೆ. ಭವಿಷ್ಯದ ಪ್ರಜೆಗಳು ಉತ್ತಮರಾಗಲು ಇಂದೇ ಸರಿಯಾದ ತರಬೇತಿ ಅಗತ್ಯ. ಈ ತರಬೇತಿಯೇ ಮಕ್ಕಳನ್ನು ಸಾಮಾಜಿಕರಣಗೊಳಿಸುವುದು. ಮಕ್ಕಳನ್ನು ಹೊರಗಿನ ಪ್ರಪಂಚಕ್ಕೆ ಬಿಡುವುದರಿಂದ ಅವರು ತಮ್ಮ ಸಮವಯಸ್ಕರೊಂದಿಗೆ ಸಂವಹನ ಮಾಡುವ ಕೌಶಲ್ಯ ಬೆಳೆಯುತ್ತದೆ ಮತ್ತು ಇತರೆ ಮಕ್ಕಳೊಂದಿಗೆ ಆಟವಾಡುವ ಮೂಲಕ ದೈಹಿಕ ಕೌಶಲ್ಯಗಳನ್ನು ಕಲಿಯುತ್ತಾರೆ. ತಮ್ಮ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ತಾವೇ ಮೈಗೂಡಿಸಿಕೊಳ್ಳುತ್ತಾರೆ.
ಗುಂಪು ಆಟಗಳಲ್ಲಿ ಭಾಗವಹಿಸುವ ಮೂಲಕ ಇತರರ ಆಲೋಚನೆಗಳನ್ನು ಗ್ರಹಿಸುವ ಹಾಗೂ ತನ್ನ ಆಲೋಚನೆಗಳನ್ನು ಇತರರಿಗೆ ತಿಳಿಸುವ ಕೌಶಲ್ಯ ಗಳಿಸುತ್ತಾರೆ. ಜೊತೆಗೆ ಉತ್ತಮ ಸಂವಹನ ಕೌಶಲ್ಯದಿಂದ ಎಲ್ಲರೊಂದಿಗೆ ಬೆರೆಯುವ ಗುಣ ಕಲಿಯುತ್ತಾರೆ. ತಾವೂ ಸಮಾಜದ ಒಂದು ಭಾಗ. ಹಾಗಾಗಿ ಸಮುದಾಯ/ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಬೇಕು ಎಂದು ಅರಿಯುತ್ತಾರೆ. ಸಾಮಾಜಿಕರಣವು ಮಕ್ಕಳಲ್ಲಿ ಭಾವನಾತ್ಮಕ, ಸಾಮಾಜಿಕ ಮತ್ತು ದೈಹಿಕ ಕೌಶಲ್ಯಗಳನ್ನು ಬೆಳೆಸುವ ಮೂಲಕ ಸರ್ವಾಂಗೀಣ ಅಭಿವೃದ್ದಿಗೆ ಸಹಾಯವಾಗುತ್ತದೆ.
ಮಕ್ಕಳು ಸಾಮಾಜಿಕರಣಕ್ಕೆ ಒಳಪಡುವುದರಿಂದ ಇತರರ ಯೋಗಕ್ಷೇಮ ವಿಚಾರಿಸುವುದನ್ನು ಕಲಿಯುತ್ತಾರೆ. ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ದಿಗೊಳಿಸಿಕೊಳ್ಳುವ ಮೂಲಕ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಾರೆ. ಆಲೋಚನಾ ಸಾಮಥ್ರ್ಯ ಹೆಚ್ಚುವುದರಿಂದ ಸಾಮಾನ್ಯ ಜ್ಞಾನವೂ ಹೆಚ್ಚುತ್ತದೆ. ಭಾಷಾ ಬಳಕೆಯಲ್ಲಿ ಚತುರತೆ ಹೆಚ್ಚುತ್ತದೆ. ಭವಿಷ್ಯದಲ್ಲಿ ಜೀವನವನ್ನು ಹೇಗೆ ಚೆಂದಗೊಳಿಸಿಕೊಳ್ಳಬೇಕೆಂಬ ನಿಖರತೆ ಬೆಳೆಯುತ್ತದೆ.
ಸಾಮಾಜಿರಣದ ಲಾಭಗಳು :
ಸಂವಹನ (ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ) ಕೌಶಲ್ಯ ಹೆಚ್ಚುತ್ತದೆ.
ವಿಶ್ಲೇಷಣಾತ್ಮಕ ಮತ್ತು ಸಂಶೋಧನಾ ಮನೋಭಾವದ ಬೆಳವಣಿಗೆ.
ಹೊಂದಾಣಿಕೆಯ ಮಹತ್ವ ಅರಿಯುತ್ತಾರೆ.
ವೈಯಕ್ತಿಕ ಸಾಮಥ್ರ್ಯ ಹೆಚ್ಚುತ್ತದೆ.
ತೀರ್ಮಾನಗಳನ್ನು ಕೈಗೊಳ್ಳುವ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಮಥ್ರ್ಯ ಬೆಳೆಯುತ್ತದೆ.
ಯೋಜನೆ, ಸಂಘಟನಾ ಚತುರತೆ ಗಳಿಸುತ್ತಾರೆ.
ನಾಯಕತ್ವ ಮತ್ತು ನಿರ್ವಹಣಾ ಕೌಶಲ್ಯ ಬೆಳೆಯುತ್ತವೆ.
ಧನಾತ್ಮಕ ಮತ್ತು ರಚನಾತ್ಮಕ ಮಾನವೀಯ ಸಂಬಂಧಗಳು ನಿರ್ಮಾಣಗೊಳ್ಳುತ್ತವೆ.
ಮನಸ್ಸು ನೈಜ ಆಲೋಚನೆಗಳನ್ನು ಆಕ್ರಮಿಸಿಕೊಳ್ಳುವುದರಿಂದ ಮಾನಸಿಕ ಕಾರ್ಯನಿರ್ವಹಣೆ ಹೆಚ್ಚುತ್ತದೆ.
ಒತ್ತಡ ಮತ್ತು ಆತಂಕಗಳು ದೂರವಾಗುತ್ತವೆ. ಖಿನ್ನತೆ ಆವರಿಸುವುದಿಲ್ಲ.
ವಿವಿಧ ರೀತಿಯ ಜನರನ್ನು ಮತ್ತು ಅವರ ಆಲೋಚನಾ ಕ್ರಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಜಗತ್ತನ್ನು ಮುಖಾಮುಖಿಯಾಗಿ ಎದುರಿಸುವುದನ್ನು ಕಲಿಸುತ್ತದೆ. ಇದರಿಂದ ಆತ್ಮವಿಶ್ವಾಸ ವೃದ್ದಿಯಾಗುತ್ತದೆ.
ಸ್ನೇಹಿತರು ಅಥವಾ ಕುಟುಂಬದವರ ಕಷ್ಟಕಾಲವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಸಹಚರರ ಪ್ರೀತಿ ವಿಶ್ವಾಸ ಮತ್ತು ಪ್ರಚೋದನೆಗಳಿಂದ ಜೀವನೋತ್ಸಾಹ ಹೆಚ್ಚುತ್ತದೆ.
ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿಡುತ್ತದೆ.
ಜೀವನವನ್ನು ಕಟ್ಟಿಕೊಳ್ಳುವ ಜೀವನಕಲೆ ತಿಳಿಯುತ್ತದೆ.
ಸಾಮಾಜಿಕಣದ ಏಜೆನ್ಸಿಗಳು:
ಕುಟುಂಬ: ಸಾಮಾನ್ಯವಾಗಿ ಕುಟುಂಬವನ್ನು ಸಮಾಜದ ಮುಖ್ಯ ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ಇಡೀ ನಮ್ಮ ಉಜ್ವಲ ಭವಿಷ್ಯಕ್ಕೆ ಕುಟುಂಬದ ಅವಲಂಬನೆ ಅನಿವಾರ್ಯವಾಗಿದೆ. ಹಾಗಾಗಿ ಸಾಮಾಜಿಕರಣ ಪ್ರಕ್ರಿಯೆಯಲ್ಲಿ ಕುಟುಂಬದ ಪಾತ್ರ ಪ್ರಧಾನವಾಗಿದೆ. ಗುಂಪಿನೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಮನೋಭಾವ ಹಾಗೂ ಸಂಬಂಧಗಳ ಪರಿಕಲ್ಪನೆಯನ್ನು ಗಟ್ಟಿಗೊಳಿಸುವಲ್ಲಿ ಕುಟುಂಬವೇ ಮುಖ್ಯ ಸಾಮಾಜಿಕರಣದ ಸೂತ್ರಧಾರವಾಗಿದೆ. ಮೌಲ್ಯಗಳು, ರೂಢಿಗಳು, ಆಚರಣೆಗಳು, ನಂಬಿಕೆಗಳ ವ್ಯವಸ್ಥೆಯನ್ನು ಒದಗಿಸುತ್ತದೆ. ಕುಟುಂಬವು ಸಾಮಾನ್ಯವಾಗಿ ಸಾಮಾಜಿಕ ಸ್ಥಾನಮಾನ, ಧರ್ಮ, ಜನಾಂಗೀಯ ಗುಂಪು ಮೊದಲಾದವುಗಳ ಪ್ರತಿಬಿಂಬವಾಗಿದೆ.
ಶಾಲೆ: ಕುಟುಂಬದ ನಂತರ ಶಾಲೆಯೂ ಕೂಡಾ ಅತ್ಯಂತ ಪ್ರಮುಖ ಸಾಮಾಜಿಕರಣದ ಅಂಗವಾಗಿದೆ. ಸಾಮಾನ್ಯವಾಗಿ ಶಾಲೆಯು ವಿಷಯ ಜ್ಞಾನವನ್ನು ವರ್ಗಾವಣೆ ಮಾಡುತ್ತದೆ. ಜೊತೆಗೆ ಕೆಲವು ಜೀವನ ಕೌಶಲ್ಯಗಳನ್ನು ಅಧಿಕೃತವಾಗಿ ಕಲಿಸುತ್ತದೆ. ಶಾಲೆಯು ಮುಖ್ಯವಾಗಿ ಸಂವಹನ ಕೌಶಲ್ಯಗಳನ್ನು ಕಲಿಸುತ್ತದೆ. ಶಿಸ್ತು ಮತ್ತು ಸಂಯಮವನ್ನು ಕಲಿಸುವ ಏಕೈಕ ಕೇಂದ್ರ ಶಾಲೆಯಾಗಿದೆ.
ಸಹವರ್ತಿಗಳು: ಮಾನವೀಯ ಮೌಲ್ಯಗಳನ್ನು ಯಾವ ಪಠ್ಯಪುಸ್ತಕವೂ, ಯಾವ ವಿಶ್ವವಿದ್ಯಾನಿಲಯವೂ ಕಲಿಸಲಾರದು. ಆದರೆ ಸಹವರ್ತಿಗಳಿಂದ ಮಾತ್ರ ಇಂತಹ ಮೌಲ್ಯಗಳ ಕಲಿಕೆ ಸಾಧ್ಯ. ಪರಸ್ಪರರಲ್ಲಿ ಪ್ರೀತಿ, ಕಾಳಜಿ, ಸಹಕಾರ, ನಂಬಿಕೆ, ಕ್ಷಮೆ, ಸಹಾನುಭೂತಿ, ಬೆಂಬಲ, ಶಿಷ್ಟಾಚಾರಗಳಂತಹ ಮಾನವೀಯ ಮೌಲ್ಯಗಳನ್ನು ಸಹವರ್ತಿಗಳಿಂದ ಬೆಳೆಸಿಕೊಳ್ಳುತ್ತಾರೆ.
ಸಾಮಾಜಿಕರಣ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ:
ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾದ ಸಾಮಾಜಿಕರಣ ಪ್ರಕ್ರಿಯೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಮಗುವನ್ನು ಸಾಮಾಜಿಕರಣಗೊಳಿಸಲು ಕೆಳಗಿನ ಅಂಶಗಳು ಸಹಕಾರಿಯಾಗುತ್ತವೆ.
ಮಗು ಅಂತರ್ಮುಖಿಯಾಗುವಂತಹ ಅಥವಾ ಅವಮಾನವಾಗುವಂತಹ ಅಂಶ ಯಾವುದೂ ಇಲ್ಲ ಎಂಬುದನ್ನು ಖಚಿತಪಡಿಸಿ.
ಮಗುವಿನ ಮನೋಧರ್ಮವನ್ನು ಅರ್ಥೈಸಿಕೊಳ್ಳಿ.
ವಿವಿಧ ಸಂದರ್ಭಗಳಲ್ಲಿ ಮಗುವಿಗೆ ಹೊಸ ಜನರನ್ನು ಪರಿಚಯಿಸಿ. ಅವರ ಸಂಬಂಧಗಳನ್ನು ತಿಳಿಸಿ.
ಕುಟುಂಬದ ಒಳಗೆ ಮತ್ತು ಹೊರಗೆ ಹಿರಿಯರಿಗೆ ಮತ್ತು ಕಿರಿಯರಿಗೆ ಗೌರವ ನೀಡುವ ಮೂಲಕ ಪ್ರತಿವ್ಯಕ್ತಿಯನ್ನು ಗೌರವಿಸಿ.
ಸಾಮಾಜಿಕ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮಗುವಿಗೆ ಅವಕಾಶ ನೀಡಿ.
ಮಗುವಿನ ಆರಂಭದ ಭಯ ಗೆಲುವಿನಲ್ಲಿ ಅಂತ್ಯ ಕಾಣುವುದನ್ನು ಖಚಿತಪಡಿಸಿ.
ಮಗುವಿನಲ್ಲಿ ಭಾವನೆಗಳು ಬೆಳೆಯಲು ಸಹಾಯ ಮಾಡಿ.
ಮಗುವಿನ ಅಂತರ್ಮುಖಿತ್ವ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ.
ಮಗುವಿನಲ್ಲಿ ಧನಾತ್ಮಕ ಸ್ವಾಭಿಮಾನ ಮೂಡಿಸಿ ಸ್ವಾವಲಂಬಿಯಾಗುವಂತೆ ಮಾಡಿ.
ಮಗುವಿನ ನಾಚಿಕೆ ಸ್ವಾಭಾವವನ್ನು ಹೊಡೆದೋಡಿಸಿ.
ಮಗುವಿನ ಸ್ನೇಹಿತರ ಮೇಲೆ ನಿಗಾ ಇರಲಿ.
ಸಮಯ ದೊರೆತಾಗಲೆಲ್ಲ ವೈಯಕ್ತಿಕ ಅಭಿವೃದ್ದಿಯ ಕುರಿತ ಘಟನಾವಳಿಗಳನ್ನು ಹೇಳಿ.
ಮಗುವಿನ ಮನೋಧರ್ಮ ಕುರಿತು ಮೆಚ್ಚುಗೆ ವ್ಯಕ್ತಿಪಡಿಸಿ.
ಸಂಭಾವ್ಯ ವಿಚಿತ್ರ ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿ.
ಮಗುವಿನಲ್ಲಿ ಹಾಸ್ಯ ಪ್ರಜ್ಞೆ ಮೂಡಿಸಿ.
ಸಾಮಾಜಿಕ ಮಾಲ್ಯಗಳ  ಕುರಿತು ಮಗುವಿನೊಂದಿಗೆ ಮಾತನಾಡಿ. ಸಾಮಾಜಿಕ ಗುರಿಯನ್ನು ಹಾಕಿಕೊಡಿ.
ಸಾಮಾಜಿಕ ಗುರಿಗಳನ್ನು ಬಲಪಡಿಸಲು ಸಹಾಯ ಮಾಡಿ. ಇದಕ್ಕೆ ಶಿಕ್ಷಕರು ಮತ್ತು ಸಲಹೆಗಾರರ ಮಾರ್ಗದರ್ಶನ ಪಡೆಯಿರಿ.
ಸಾಮಾಜಿಕ ಕೌಶಲ್ಯಗಳನ್ನು ಅಭ್ಯಾಸ ಮಾಡಿಸಿ.
ಮಗು ಇತರ ಮಕ್ಕಳೊಂದಿಗೆ ಬೆರೆಯುವಾಗ ಖರ್ಚು ವೆಚ್ಚಗಳ ಮೇಲ್ವಿಚಾರಣೆ ಇರಲಿ.
ಮಗುವಿಗೆ ಇತರರ ಭಾವನೆಗಳು ಮತ್ತು ಪ್ರತಿಕ್ರಿಯೆಗಳ ಬಗ್ಗೆ ಯೋಚಿಸಲು ಅವಕಾಶ ಮಾಡಿಕೊಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)
9902992905

ವಿಜ್ಞಾನದ ಪಾಠ ಹೇಳುವ ಹಂಪಿ Science and Technology in Hampi

ದಿನಾಂಕ 07-10-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ.

ವಿಜ್ಞಾನದ ಪಾಠ ಹೇಳುವ ಹಂಪಿ


ಚಿತ್ರ ಬರಹ - ಆರ್.ಬಿ.ಗುರುಬಸವರಾಜ ಹೊಳಗುಂದಿ
‘ಹಂಪೆ’ ಎಂದಾಕ್ಷಣ ಹಾಳಾದ ಕಲ್ಲಿನ ಕೆತ್ತನೆಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ. ಹಂಪೆ ಅದೆಷ್ಟೇ ಹಾಳಾಗಿದ್ದರೂ ಅಳಿದುಳಿದ ಶಿಲ್ಪಗಳನ್ನು ನೋಡುವುದೇ ಸೊಗಸು. ಏಕೆಂದರೆ ಹಂಪೆಯ ಶಿಲ್ಪಕಲೆಯೊಳಗೆ ಅಡಗಿದ ವಿಜ್ಞಾನ ಮತ್ತು ತಂತ್ರಜ್ಞಾನ ಎಂಥವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ.  ಆಧುನಿಕ ವಿಜ್ಞಾನವನ್ನೂ ಮೀರಿದ ತಂತ್ರಗಾರಿಕೆ ಹಂಪೆಯಲ್ಲಿ ಅಡಗಿದೆ ಎಂದರೆ ಅಚ್ಚರಿಯಾಗುತ್ತದೆ. ಈ ಕಾರಣಕ್ಕೆ ಇಂದಿಗೂ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಇತ್ತೀಚೆಗೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ. ಹಾಗಾದರೆ ಹಂಪೆಯೊಳಗಿನ ವಿಜ್ಞಾನ ಮತ್ತು ತಂತ್ರಜ್ಞಾನ ಯಾವುದು ಎಂದು ತಿಳಿಯುವ ಬನ್ನಿ.
ತಲೆ ಕೆಳಗಾದ ಗೋಪುರ
ಇದೇನಿದು? ಗೋಪುರ ಎಲ್ಲಾದರೂ ತಲೆ ಕೆಳಗಾಗಲು ಸಾಧ್ಯವೇ? ಎಂದು ಹುಬ್ಬೇರಿಸಬೇಡಿ. ಇಂತಹ ಒಂದು ವಿಜ್ಞಾನದ ಮಾದರಿ ಹಂಪೆಯಲ್ಲಿದೆ. ಹಂಪೆಯ ಪ್ರಮುಖ ಆರಾಧ್ಯ ದೈವವಾದ ವಿರುಪಾಕ್ಷ ದೇವಾಲಯದ ಆವರಣದಲ್ಲಿ ಇಂತಹ ಒಂದು ಚಮತ್ಕಾರ ಅಡಗಿದೆ. ದೇವಾಲಯದ ಹಿಂಬಾಗದಲ್ಲಿ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಹಿಂದಿನ ಬಾಗಿಲನ್ನು ತಲುಪುವ ಮೊದಲೇ ಬಲಭಾಗದಲ್ಲಿ ಕತ್ತಲೆಯ ಕಟ್ಟೆಯೊಂದು ಕಾಣುತ್ತದೆ. ಅಲ್ಲಿಗೆ ನೀವು ಹೋದರೆ ಗೋಡೆಯ ಮೇಲೆ ಗೋಪುರದ ತಲೆ ಕೆಳಗಾದ ನೆರಳನ್ನು ಕಾಣಬಹುದು. ಆ ನೆರಳಿಗೆ ಎದುರಾದ ಗೋಡೆಯ ಮೇಲೆ ಕಿಂಡಿಯೊಂದಿದೆ. ಆ ಕಿಂಡಿಯಿಂದ ಹಾಯ್ದುಬಂದ ಸೂರ್ಯನ ಕಿರಣ ದೂರದ ರಾಯಗೋಪುರದ ನೆರಳನ್ನು ತಲೆ ಕೆಳಗಾಗಿ ಬೀಳುವಂತೆ ಮಾಡುತ್ತದೆ. ಇಂದಿನ ಪಿನ್ ಹೋಲ್ ಕ್ಯಾಮೆರಾದಲ್ಲಿರುವ ತಂತ್ರಜ್ಞಾನವನ್ನು ಅಂದಿನವರು ತಿಳಿದಿದ್ದರು ಎಂಬುದಕ್ಕೆ ಸಾಕ್ಷಿ. 1685ರಲ್ಲಿ ಪಿನ್ ಹೋಲ್ ಕ್ಯಾಮೆರಾವನ್ನು ಆವಿಷ್ಕರಿಸಲಾಯಿತು. ಆದರೆ ಇದಕ್ಕೂ ಮೊದಲೇ ದೇವಸ್ಥಾನ ನಿರ್ಮಣದಲ್ಲಿ ಈ ತಂತ್ರಜ್ಞಾನ ಬಳಸಿರುವುದ ಅಚ್ಚರಿಯಲ್ಲವೇ? 165 ಅಡಿ ಎತ್ತರವಿರುವ ರಾಯ ಗೋಪುರದ ನೆರಳು 300 ಅಡಿ ದೂರದಲ್ಲಿರುವ ಸಣ್ಣ ರಂದ್ರದ ಮೂಲಕ ಹಾಯ್ದು ನೆರಳನ್ನು ಉಂಟುಮಾಡುವ ಪ್ರಕ್ರಿಯೆ ವಿಸ್ಮಯವೇ ಸರಿ. ಇದನ್ನು ಹಗಲಿನ ಎಲ್ಲಾ ಸಮಯದಲ್ಲೂ ನೋಡಬಹುದು.
ಕಲ್ಲಿನ ರಥವೂ,,,, ಶಿಲೆಗಳ ಸಂಗೀತವೂ,,,,
ಕಟ್ಟಿಗೆ ಅಥವಾ ಲೋಹದ ರಥಗಳು ನೋಡಲು ಸಾಕಷ್ಟು ದೊರೆಯುತ್ತವೆ. ಆದರೆ ಕಲ್ಲಿನ ರಥ ನೋಡಲು ನೀವು ಹಂಪೆಗೆ ಬರಬೇಕು. ಈ ಕಲ್ಲಿನ ರಥವೇ ಹಂಪೆಯ ಹೆಗ್ಗುರುತು. ಹೌದು ಹಂಪೆಯ ವಿಜಯವಿಠ್ಠಲ ದೇವಸ್ಥಾನದ ಆವರಣದಲ್ಲಿನ ಕಲ್ಲಿನ ತೇರು ಇಡೀ ಕರ್ನಾಟಕದ ಶಿಲ್ಪಕಲೆಯ ಹೆಗ್ಗುರುತು ಎಂದರೆ ತಪ್ಪಾಗಲಿಕ್ಕಿಲ್ಲ. ಕೋನಾರ್ಕದ ಸೂರ್ಯ ದೇವಾಲಯದಲ್ಲಿನ ಕಲ್ಲಿನ ರಥವನ್ನು ಹೋಲುವಂತೆ ಈ ರಥವನ್ನು ಏಕಶಿಲೆಯಿಂದ ಕೆತ್ತಿರುವುದೇ ವಿಶೇಷ. ಪ್ರಾರಂಭದಲ್ಲಿ ಇದಕ್ಕೆ ಕಲ್ಲಿನ ಗೋಪುರ ಇತ್ತೆಂದು ತಿಳಿದು ಬರುತ್ತದೆ. ಆದರೆ ವಿದೇಶಿಗರ ದಾಳಿ ಹಾಗೂ ಇನ್ನಿತರೇ ಕಾರಣಗಳಿಂದ ಅದು ಹಾಳಾಗಿದೆ. ಈ ಕಲ್ಲಿನ ರಥದಲ್ಲಿನ ವಿಜ್ಞಾನ ಎಂದರೆ ಇದಕ್ಕೆ ಬಳಸಿದ ಬಣ್ಣ. ಇದನ್ನು ಕೆತ್ತಿದಾಗ ಇದರ ಹೊರಮೈಗೆ ನೈಸರ್ಗಿಕ ಬಣ್ಣ ಬಳಿಯಲಾಗಿತ್ತು. ಅದು ಮಳೆ, ಗಾಳಿ, ಬಿಸಿಲುಗಳಿಗೆ ಮಾಸಿ ಹೋಗಿದೆ. ಆದರೆ ಬಿಸಿಲು ಮತ್ತು ಮಳೆ ನೀರು ಬೀಳದ ಸ್ಥಳಗಳಲ್ಲಿ ಈಗಲೂ ನೈಸರ್ಗಿಕ ಬಣ್ಣವನ್ನು ಕಾಣಬಹುದು. 500 ವರ್ಷಗಳ ಹಿಂದೆ ಬಳಿದ ಬಣ್ಣ ಇಂದಿಗೂ ಉಳಿದಿರುವುದು ಅಂದಿನವರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.
ಇದೇ ದೇವಾಲಯದ ಆವರಣದಲ್ಲಿನ ಕಲ್ಲಿನ ಸಂಗೀತ ಕಂಬಗಳು ವಿಶ್ವ ವಿಖ್ಯಾತಿ ಪಡೆದಿವೆ. ಇಲ್ಲಿ ಒಟ್ಟು 56 ಕಂಬಗಳಿದ್ದು ಎಲ್ಲಾ ಕಂಬಗಳು ಸಂಗೀತದ ನಾದವನ್ನು ಹೊರಡಿಸುತ್ತಿವೆ. ಈ ಕಂಬಗಳು ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಕಲ್ಲಿನಿಂದ ಬಂಧಿಸಿದ್ದು, ಮಧ್ಯಭಾಗದ  ಮೂರ್ನಾಲ್ಕು ಅಡಿ ಉದ್ದ ಮತ್ತು 8-10 ಇಂಚು ದಪ್ಪದ ಕಲ್ಲಿನ ಕಂಬದಿಂದ ಸಂಗೀತನಾದ ಹೊಮ್ಮುತ್ತದೆ. ಇವು ಗಟ್ಟಿ ಶಿಲೆಯ ಕಲ್ಲುಗಳಾಗಿದ್ದು ಮಧ್ಯಭಾಗವನ್ನು ಕೈಬೆರಳಿನಿಂದ ಬಾರಿಸಿದಾಗ ಸಂಗೀತದ ನಾದ ಹೊರಹೊಮ್ಮುತ್ತದೆ. ಅಂದರೆ ಶಿಲೆಯಲ್ಲಿ ಉಂಟಾದ ಕಂಪನವು ನಾದದ ರೀತಿಯಲ್ಲಿ ಕೇಳಿಸುತ್ತದೆ. ಬೆರಳಿನಿಂದ ಬಾರಿಸಲು ಬೆರಳು ಗಟ್ಟಿಯಾಗಿರಬೇಕು ಮತ್ತು ಬಾರಿಸುವ ಕಲೆ ತಿಳಿದಿರಬೇಕು. ಇತ್ತೀಚೆಗೆ ಪ್ರವಾಸಿಗರ ಹಾವಳಿ ಹೆಚ್ಚಾಗಿದ್ದರಿಂದ ಪ್ರವಾಸಿಗರು ಬಾರಿಸಲು ನಿರ್ಬಂದ ಹೇರಲಾಗಿದೆ.
ಹವಾಮಹಲ್
ಇಡೀ ಹಂಪೆಯ ಪ್ರದೇಶವು ವರ್ಷವಿಡೀ ಹೆಚ್ಚುಕಾಲ ಬಿಸಿಲಿನಿಂದ ಕೂಡಿರುತ್ತದೆ. ತಮ್ಮ ಕುಟುಂಬವನ್ನು ಇಂತಹ ಬಿಸಿಲ ಬೇಗೆಯಿಂದ ರಕ್ಷಿಸಲು ಅಂದಿನ ರಾಜರು ವಿಶೇಷ ಮಹಲನ್ನು ಕಟ್ಟಿಸಿದರು. ಇದೇ ಕಮಲ್‍ಮಹಲ್ ಎಂದು ಹೆಸರುವಾಸಿಯಾದ ಹವಾಮಹಲ್. ಎಲ್ಲಾ ದಿಕ್ಕಿನಿಂದಲೂ ಗಾಳಿ ಬರುವಂತೆ ಇದನ್ನು ನಿರ್ಮಿಸಲಾಗಿದೆ. ಇದರ ಮೇಲಂತಸ್ತಿನ ಕಟ್ಟಡದ ಒಳಗೋಡೆಗಳಲ್ಲಿ ಸದಾ ನೀರು ಸಂಚರಿಸಲು ನಳಿಕೆಗಳನ್ನು ಅಳವಡಿಸಲಾಗಿದೆ. ಬೇಸಿಗೆಯಲ್ಲಿ ಈ ನಳಿಕೆಗಳಿಗೆ ನೀರನ್ನು ತುಂಬಿಸಲಾಗುತ್ತದೆ. ಗಾಳಿ ಬೀಸಿದಾಗ ನೀರ ನಳಿಕೆಗಳು ತಂಪುಗೊಂಡು ಇಡೀ ಕಟ್ಟಡ ತಂಪಾಗಿರುತ್ತದೆ. ಇದು ಇಂದಿನ ಹವಾನಿಯಂತ್ರಿತ ಕೊಠಡಿ ತಂತ್ರಗಾರಿಕೆಯ ದ್ಯೋತಕವಾಗಿದೆ. ಇಡೀ ಕಟ್ಟಡವನ್ನು ಕಮಲದ ಆಕಾರದ ಕಮಾನುಗಳಿಂದ ಕಟ್ಟಲಾಗಿದೆ. ಆದ್ದರಿಂದ ಇದಕ್ಕೆ ಕಮಲಮಹಲ್ ಎಂಬ ಹೆಸರು ಬಂದಿದೆ.
ಜಲ ಸಂಗ್ರಾಹಕ ಪುಷ್ಕರಣಿ
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ನೀರನ ಸಮಸ್ಯೆ ಎಷ್ಟೇ ಎದುರಾಗಿದ್ದರೂ ನಮಗಿನ್ನೂ ಜಲ ಸಂರಕ್ಷಣೆಯ ಮಹತ್ವ ತಿಳಿದಿಲ್ಲ. ಆದರೆ ವಿಜಯನಗರ ಅರಸರು 600 ವರ್ಷಗಳ ಹಿಂದೆಯೇ ಜಲ ಸಂರಕ್ಷಣೆಯ ಬಗ್ಗೆ ತಿಳಿದಿದ್ದರು ಎಂಬುದಕ್ಕೆ ಪುಷ್ಕರಣೆಯೇ ಸಾಕ್ಷಿ. ವರ್ಷವಿಡೀ ನೀರಿನ ಕೊರತೆಯಾಗದಂತೆ ತುಂಗಭದ್ರಾ ನದಿಯಿಂದ ಕಾಲುವೆಗಳ ಮೂಲಕ ನೀರನ್ನು ತಂದು ಈ ಪುಷ್ಕರಣಿಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಗೃಹೋಪಯೋಗಿ ಹಾಗೂ ವ್ಯವಸಾಯಗಳಿಗೆ ಈ ನೀರನ್ನು ಬಳಸಲು ಅನುಕೂಲವಾಗುವಂತೆ ಕಲ್ಲಿನ ಕಾಲುವೆಗಳನ್ನು ನಿರ್ಮಿಸಿರುವುದು ಜಲ ಸಂರಕ್ಷಣೆ ಮತ್ತು ಅದರ ಸದ್ಭಳಕೆ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ಬದ್ದತೆಯನ್ನು ಎತ್ತಿ ತೋರಿಸುತ್ತದೆ.
ಸ್ವಿಮ್ಮಿಂಗ್ ಫೂಲ್ ಮಾದರಿಯ ಸ್ನಾನಗೃಹ
ಆಧುನಿಕ ತಂತ್ರಜ್ಞಾನ ಮಾದರಿಯ ಸ್ವಿಮ್ಮಿಂಗ್ ಫೂಲನ್ನು ಅಂದೇ ವ್ಯವಸ್ಥಿತವಾಗಿ ಕಟ್ಟಲಾಗಿತ್ತು. ಅದಕ್ಕೆ ರಾಣಿಯರ ಸ್ನಾನಗೃಹ ಎಂದು ನಾಮಕರಣ ಮಾಡಲಾಗಿದೆ. ಈ ಸ್ನಾನಗೃಹಕ್ಕೆ ಕಾಲುವೆಗಳ ಮೂಲಕ ನೀರನ್ನು ಸರಬರಾಜು ಮಾಡುವ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಕಲುಷಿತ ನೀರು ಹೊರಹೋಗಲು ಮತ್ತು ಶುದ್ದ ನೀರನ್ನು ಒಳಗೆ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಕಟ್ಟಡದ ಒಳಭಾಗದ ಪ್ರಾಂಗಣದಲ್ಲಿ ರಾಣಿಯರು ಬಟ್ಟೆ ಬದಲಾಯಿಸಿಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಕಮಾನು ಕಟ್ಟೆಗಳನ್ನು ಕಟ್ಟಲಾಗಿದೆ. ಇದು ಇಂದಿನ ಸ್ವಿಮ್ಮಿಂಗ್ ಫೂಲ್‍ಗಳ ತಂತ್ರಗಾರಿಕೆಯ ಕುಶಲತೆಯ ಪ್ರತೀಕವಾಗಿದೆ.
ಶೌಚಗೃಹ
ಸ್ವಚ್ಛ ಮತ್ತು ಸುರಕ್ಷಿತ ಆರೋಗ್ಯಕ್ಕಾಗಿ ಶೌಚಗೃಹಗಳು ಅಗತ್ಯ. ಪ್ರತೀ ಕುಟುಂಬವೂ ಶೌಚಗೃಹ ನಿರ್ಮಿಸಿಕೊಳ್ಳಲು ಸರ್ಕಾರಗಳು ಅನೇಕ ಸೌಲಭ್ಯಗಳನ್ನು ನೀಡುತ್ತಿವೆ. ಆದಾಗ್ಯೂ ನಮ್ಮ ಜನತೆ ಶೌಚಗೃಹ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಆದರೆ ಶೌಚಾಲಯದ ನಿರ್ಮಾಣ ಮತ್ತು ಬಳಕೆ ವಿಜಯನಗರ ಕಾಲದಲ್ಲೇ ಪ್ರಚಲಿತದಲ್ಲಿತ್ತು ಎಂಬುದಕ್ಕೆ ಮಹಾನವಮಿ ದಿಬ್ಬದ ಬಳಿಯ ಪ್ರಾಂಗಣದಲ್ಲಿ ದೊರೆತ ಶೌಚಾಲಯಗಳೇ ಸಾಕ್ಷಿ. ಅವರು  ಆರೋಗ್ಯ ಹಾಗೂ ನೈರ್ಮಲ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು ಎಂಬುದು ತಿಳಿಯುತ್ತದೆ.
ರಕ್ಷಣೆಗಾಗಿ ಕಾವಲು ಗೋಪುರಗಳು
ನಮ್ಮ ಇಂದಿನ ರಕ್ಷಣಾ ವ್ಯವಸ್ಥೆಗಿಂತ ಉತ್ತಮವಾದ ರಕ್ಷಣಾ ತಂತ್ರಗಾರಿಕೆ ವ್ಯವಸ್ಥೆಯನ್ನು  ವಿಜಯನಗರ ಅರಸರು ಅಳವಡಿಸಿಕೊಂಡಿರುವುದಕ್ಕೆ ಅನೇಕ ಸಾಕ್ಷ್ಯಗಳು ದೊರೆಯುತ್ತವೆ. ವಿದೇಶಿಗರ ದಾಳಿಯನ್ನು ತಿಳಿಯಲು ಹಾಗೂ ವಿವಿಧ ಭಾಗಗಳಿಂದ ಕೊಟೆಯೊಳಗೆ ಆಗಮಿಸುವವರ ಬಗ್ಗೆ ತಿಳಿಯಲು ಹಂಪೆಯ ಪ್ರದೇಶಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿತ್ತು. ಒಟ್ಟು 520 ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದರೆಂದು ತಿಳಿದು ಬರುತ್ತದೆ. ಈ ಗೋಪುರಗಳಲ್ಲಿ ಕಾವಲುಗಾರರು ಹಗಲು ರಾತ್ರಿ ಕಾವಲು ಕಾಯ್ದು ದೇಶವನ್ನು ರಕ್ಷಿಸುತ್ತಿದ್ದರು.
ಶಿಲೆಗಳ ಸರಬರಾಜು
ಇಡೀ ಹಂಪೆಯ ಸಮೂಹವು ಕಲ್ಲು ಬೆಟ್ಟಗಳಿಂದ ಆವೃತ್ತವಾಗಿದೆ. ಹಂಪೆಯ ಎಲ್ಲಾ ಶಿಲ್ಪಕಲೆಗೆ ಈ ಕಲ್ಲುಗಳನ್ನೇ ಬಳಸಲಾಗಿದೆ. ಇಲ್ಲಿನ ಕಲ್ಲುಗಳು ಅತ್ಯಂತ ಗಟ್ಟಿ ಶಿಲೆಗಳಾಗಿದ್ದು ಕೆತ್ತನೆಗೆ ಹೆಚ್ಚು ಸೂಕ್ತವಾಗಿದೆ.
ಕಲ್ಲು ಬಂಡೆಗಳನ್ನು ಒಡೆಯುವಲ್ಲಿಯೂ ವಿಜ್ಞಾನದ ತಂತ್ರಗಾರಿಕೆ ಅನುಸರಿಸಲಾಗಿದೆ. ಕಲ್ಲು ಬಂಡೆಗಳಲ್ಲಿ ನೇರವಾದ ಸಾಲಿನಲ್ಲಿ ಅಲ್ಲಲ್ಲಿ ರಂದ್ರಹಾಕುತ್ತಿದ್ದರು. ಅದಕ್ಕೆ ಸರಿಯಾಗುವಂತೆ ಒಣ ಕಟ್ಟಿಗೆಯ ತುಂಡನ್ನು ಕೆತ್ತಿ ರಂದ್ರ ಮುಚ್ಚುತ್ತಿದ್ದರು ಮತ್ತು  ಅದಕ್ಕೆ ಆಗಾಗ್ಗೆ ನೀರನ್ನು ತುಂಬುತ್ತಿದ್ದರು. ಕಾಲಕ್ರಮೇಣ ಕಟ್ಟಿಗೆಯ ತುಂಡು ವಿಸ್ತರಿಸಿ ಕಲ್ಲುಗಳನ್ನು ಸೀಳುವಂತೆ ಮಾಡುತ್ತಿತ್ತು. ಹೀಗೆ ಕಲ್ಲುಗಳನ್ನು ಸೀಳಿ ಆನೆಗಳ ಸಹಾಯದಿಂದ ದೇಗುಲಗಳ ಬಳಿ ಸಾಗಿಸುತ್ತಿದ್ದರು. ಹಂಪೆಯ ಹೊರಭಾಗದಲ್ಲಿನ ಪರ್ವತಗಳ ಕಲ್ಲನ್ನು ನೋಡಿದರೆ ಕಲ್ಲುಗಳನ್ನು ಹೇಗೆ ಸೀಳಿದ್ದರು ಎಂಬುದನ್ನು ಗಮನಿಸಬಹುದು.
ಗಾರೆಯ ಗಂಬಂಧ
ಹಂಪೆಯ ಬಹುತೇಕ ದೇವಾಲಯಗಳ ನಿರ್ಮಾಣದಲ್ಲಿ ಸುಟ್ಟ ಇಟ್ಟಿಗೆ ಮತ್ತು ಗಾರೆ ಬಳಸಿರುವುದು ಕಂಡು ಬರುತ್ತದೆ. ಒಂದು ಭಾಗ ಸುಣ್ಣ, ಎರಡು ಭಾಗ ಮರಳು, ಒಂದು ಭಾಗ ಬೆಲ್ಲ ಮತ್ತು ಅರ್ದಭಾಗ ಅಂಟುವಾಳಕಾಯಿ ಮಿಶ್ರಣಗಳನ್ನು ನುಣ್ಣಗೆ ಅರೆದು ಗಾರೆಯನ್ನು ತಯಾರಿಸಲಾಗುತ್ತದೆ. ಇದು ಇಂದಿನ ಸಿಮೆಂಟಿಗಿಂತಲೂ ಗಟ್ಟಿ ಹಾಗೂ ಬಹುಕಾಲ ಬಾಳಿಕೆ ಬರುತ್ತದೆ. ರಾಣಿಯರ ಸ್ನಾನಗೃಹ, ಕಮಲಮಹಲು, ಕಾವಲು ಗೋಪುರಗಳ ಗೋಡೆಗಳಿಗೆ ಹಾಗೂ ಆನೆಲಾಯ, ಮಾಲ್ಯವಂತ ರಘುನಾಥ ದೇವಾಲಯ, ವಿಠ್ಠಲ ದೇವಸ್ಥಾನ, ಅಚ್ಯುತರಾಯ ದೇವಾಲಯ, ಪಟ್ಟಾಭಿರಾಮ ದೇವಾಲಯಗಳಲ್ಲಿನ ಶಿಖರ(ಗೋಪುರ)ಗಳಲ್ಲಿ ಗಾರೆಯನ್ನು ಬಳಸಲಾಗಿದೆ.  ಹಾಗಾಗಿ ಇಡೀ ಹಂಪೆಯ ದೇವಾಲಯಗಳ ನಿರ್ಮಾಣದಲ್ಲಿ ಗಾರೆಯನ್ನು ಗಂಬಂಧ(ಅಂಟಿನ ಬಂಧ) ರೀತಿಯಲ್ಲಿ ಬಳಸಲಾಗಿದೆ.
ಭುವಿಯ ಮೇಲಿನ ಸ್ವರ್ಗ
ಒಟ್ಟಾರೆ ಹಂಪೆಯ ಪ್ರದೇಶವು 214 ಪರ್ವತಗಳನ್ನು, 1250 ಸ್ಮಾರಕಗಳನ್ನು, 8000 ಮಂಟಪಗಳನ್ನು, 520 ಗೋಪುರಗಳನ್ನು, 7 ಅಂತರರಾಷ್ಟ್ರೀಯ ಪುರಾತತ್ವ ಕೇಂದ್ರಗಳನ್ನು ಒಳಗೊಂಡಿದೆ. ಹಾಗಾಗಿ ಇದೊಂದು ಭುವಿಯ ಮೇಲಿನ ಸ್ವರ್ಗ ಎಂದರೆ ತಪ್ಪಲ್ಲ.

ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)
9902992905

ವಿಜಯವಾಣಿ 07-10-17

September 25, 2017

ಮಕ್ಕಳಿಗೆ ಒತ್ತಡ ಬೇಕೇ? Stress in children

ದಿನಾಂಕ 25-9-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ಮಕ್ಕಳಿಗೆ ಒತ್ತಡ ಬೇಕೇ?

ಇತ್ತೀಚಿಗೆ ತರಬೇತಿಗೆಂದು ಮೈಸೂರಿಗೆ ಹೋಗಿದ್ದೆ. ಮಾರ್ಕೆಟ್‍ನಲ್ಲಿ ಸುತ್ತಾಡುತ್ತಿರುವಾಗ ಬಹುತೇಕ ಮಾರಾಟಗಾರರು ಕೈಯಲ್ಲಿ ಆಟಿಕೆಯೊಂದನ್ನು ಹಿಡಿದು ‘ನೂರಕ್ಕೊಂದು ನೂರುಕ್ಕೊಂದು, ತಿರುಗಿಸಿ ನೋಡಿ, ಟೆನ್ಶನ್ ಕಡಿಮೆ ಮಾಡ್ಕೊಳ್ಳಿ’ ಎಂದು ಕೂಗುತ್ತಿದ್ದರು.  ಅಲ್ಲಿಗೆ ಬಂದ ಪ್ರೌಢಶಾಲಾ ಹುಡುಗರ ಗುಂಪೊಂದು ನನ್ನನ್ನು ಆಕರ್ಷಿಸಿತು. ಅವರನ್ನು ಹಿಂಬಾಲಿಸಿದೆ. ಒಬ್ಬ ಹುಡುಗ ಕೈಯಲ್ಲಿ ಹಿಡಿದ ಆಟಿಕೆಯನ್ನು ತೋರಿಸಿ “ಅಂಕಲ್ ಇಂತಹ ಬಣ್ಣದ್ದು ಇದ್ದರೆ ಕೊಡಿ” ಎಂದು ಕೇಳುತ್ತಾ ಅಂಗಡಿಯಿಂದ ಅಂಗಡಿಯಿಂದ ಅಲೆದಾಡುತ್ತಿದ್ದರು. ಯಾವ ಅಂಗಡಿಯಲ್ಲೂ ಅವರಿಗೆ ಬೇಕಾದ ಬಣ್ಣದ ಆಟಿಕೆ ದೊರೆಯಲಿಲ್ಲ. ನನಗೆ ಕುತೂಹಲ ಹೆಚ್ಚಿತು. ಆ ಗುಂಪಿನ ಒಬ್ಬ ವಿದ್ಯಾರ್ಥಿಯನ್ನು ಈ ಬಗ್ಗೆ ಕೇಳಿದೆ. ‘ಅಂಕಲ್ ಇದು ಫಿಜೆಟ್ ಸ್ಪಿನ್ನರ್ ಎಂಬ ಆಟಿಕೆ. ಇದನ್ನು ಬೆರಳಲ್ಲಿ ಹಿಡಿದು ತಿರುಗಿಸಿದರೆ ಒತ್ತಡ ಕಡಿಮೆಯಾಗುತ್ತದೆಯಂತೆ. ಅದರಲ್ಲೂ ಆ ಹುಡುಗನ ಕೈಯಲ್ಲಿರುವ ಬಣ್ಣದ್ದು ತುಂಬಾ ಬೇಗನೇ ಒತ್ತಡ ಕಡಿಮೆ ಮಾಡುತ್ತದೆಯಂತೆ. ಇಲ್ಲೆಲ್ಲೂ ಅಂತಹದ್ದು ದೊರೆಯುತ್ತಿಲ್ಲ’ ಎಂದು ಸಾದ್ಯಂತ ವಿವರಿಸಿದ.
ಅವನೊಂದಿಗೆ ಮಾತನಾಡಿ ಮುಂದೆ ಹೆಜ್ಜೆ ಹಾಕಿದೆ. ಅವನ ಹೇಳಿಕೆಯು ಮನದಲ್ಲಿ ಕೆಲವೊಂದು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಮಕ್ಕಳಲ್ಲಿ ಇಷ್ಟೊಂದು ಗಂಭೀರವಾದ ಒತ್ತಡ ಇದೆಯಾ? ಈ ಒತ್ತಡಕ್ಕೆ ಕಾರಣಗಳೇನು? ಒತ್ತಡ ಹೋಗಲಾಡಿಸಲು ಫಿಜೆಟ್ ಸ್ಪಿನ್ನರ್‍ನಂತಹ ಕೇವಲ ಒಂದು ಆಟಿಕೆಯಿಂದ ಸಾಧ್ಯವೇ? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿ ಬೃಹದಾಕಾರ ತಾಳತೊಡಗಿದವು. 
ಮನಸ್ಸು ಹಿಂದಕ್ಕೆ ಓಡಿತು. ಇದೇ ಜೂನ್ 22 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 214 ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣ ಸುದ್ದಿಯತ್ತ ಮನಸ್ಸು ಕೇಂದ್ರಿಕೃತಗೊಂಡಿತು. ಅಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ||ಕೆ.ಜಿ.ಜಗದೀಶ ಅವರು ಈ ಬಗ್ಗೆ ಮಾಹಿತಿ ನೀಡಿದ ವರದಿ ಪ್ರಕಟವಾಗಿತ್ತು. 2014 ರಿಂದ ಒಟ್ಟು 214 ನಾಪತ್ತೆಯಾಗಿದ್ದು, ಅವರಲ್ಲಿ 200 ಮಕ್ಕಳು ಪತ್ತೆಯಾಗಿದ್ದರು. ಅವರಲ್ಲಿ ಬಹುತೇಕ ಮಕ್ಕಳು ಶಾಲೆ ಹಾಗೂ ಪಾಲಕರ ಕಲಿಕೆಯ ಒತ್ತಡದಿಂದ ಮನೆ ಬಿಟ್ಟು ಹೋಗಿದ್ದಾಗಿ ಹೇಳಿಕೆ ಕೊಟ್ಟಿದ್ದರು. 
ಅಲ್ಲದೇ ಇದೇ ಜುಲೈ 20ಕ್ಕೆ ಮೂಡುಬಿದಿರೆಯ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾಳ ಸಾವು ಇಡೀ ದೇಶದಾದ್ಯಂತ ಪೋಷಕರಲ್ಲಿ ಒಂದು ರೀತಿಯ ನಡುಕವನ್ನುಂಟು ಮಾಡಿತ್ತು. ಇದು ಮರೆಯುವ ಮುನ್ನವೇ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ ಐದು ದಿನಗಳ ಅಂತರದಲ್ಲಿ ಎರಡು ಆತ್ಮಹತ್ಯೆಗಳು ನಡೆದಿವೆ. ಆಗಸ್ಟ್ 17 ರಂದು ನಗರದ ಪ್ರೌಢದೇವ ಎಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ 18 ವರ್ಷದ ಪವಿತ್ರಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಆಗಸ್ಟ್ 22 ರಂದು ನಗರದ ಚಪ್ಪರದಹಳ್ಳಿಯಲ್ಲಿನ ಬಿ.ಸಿ.ಎಂ ಬಾಲಕಿಯರ ಹಾಸ್ಟಲ್‍ನಲ್ಲಿ 20 ವರ್ಷದ ಕಾವ್ಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಇದರ ಜೊತೆಗೆ ಮತ್ತೊಂದು ಷಾಕಿಂಗ್ ನ್ಯೂಸ್ ಎಂದರೆ ಆಗಸ್ಟ್ 30 ಕ್ಕೆ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ 18 ವರ್ಷದ ವಿದ್ಯಾರ್ಥಿನಿ ಅನ್ನಪೂರ್ಣ ಎರಡನೇ ಅಂತಸ್ತಿನಿಂದ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತ್ತ ಚೆನ್ನೈನಲ್ಲಿ ನೀಟ್ ವಿರುದ್ದ ಕಾನೂನು ಹೋರಾಟ ನಡೆಸಿದ್ದ 18 ವರ್ಷದ ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಈ ಮೇಲಿನ ಐದು ಪ್ರಕರಣಗಳಲ್ಲಿನ ನತದೃಷ್ಟರು ವಿದ್ಯಾರ್ಥಿನಿಯರು ಎನ್ನುವುದು ವಿಶೇಷ. ಅದರಲ್ಲೂ ಎಲ್ಲರೂ 15 ರಿಂದ 20 ವರ್ಷದೊಳಗಿನವರು ಎನ್ನುವುದು ಇನ್ನೂ ಆತಂಕ.
ಈ ಎಲ್ಲಾ ಘಟನೆ ಹಾಗೂ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಕ್ಕಳು ನಿಜಕ್ಕೂ ಒತ್ತಡದಲ್ಲಿದ್ದಾರೆ ಎನ್ನಿಸಿದೇ ಇರದು. ಇಂತಹ ಒತ್ತಡಕ್ಕೆ ಕಾರಣಗಳನ್ನು ಹುಡುಕಿ ಹೊರಟಾಗ ಅವು ನೇರವಾಗಿ ಪಾಲಕರ ಸುತ್ತ ಸುತ್ತತೊಡಗುತ್ತವೆ. ಹೌದು ಪಾಲಕರಾದ ನಾವು ಇತ್ತೀಚಿಗೆ ಕಲಿಕೆಯ ಹೆಸರಿನಲ್ಲಿ ಮಕ್ಕಳಿಗೆ ಒತ್ತಡ ನೀಡುತ್ತಿದ್ದೇವೆ. ನಮ್ಮ ಮಗು ಹೆಚ್ಚು ಅಂಕ ಗಳಿಸಬೇಕು ಎಂಬ ಅತಿಯಾದ ನಿರೀಕ್ಷೆಯೇ ಮಕ್ಕಳಲ್ಲಿ ಒತ್ತಡ ಹೆಚ್ಚಲು ಮೂಲ ಕಾರಣ. ಅಲ್ಲದೇ ಮಕ್ಕಳನ್ನು ಭವಿಷ್ಯದಲ್ಲಿ ಏನಾಗಿ ರೂಪಿಸಬೇಕೆಂಬ ನಿರ್ದಿಷ್ಟತೆ ಬಹುತೇಕ ಪಾಲಕರಿಗೆ ಇಲ್ಲ. 
ಬೆಳಿಗ್ಗೆ ನಿದ್ದೆಯಿಂದ ಮಗುವನ್ನು ಬಲವಂತವಾಗಿ ಎಬ್ಬಿಸಿ, ಜಿಮ್, ಕರಾಟೆ, ಏರೋಬಿಕ್ಸ್, ಸಂಗೀತ, ಯೋಗ, ಟ್ಯೂಶನ್ ಇತ್ಯಾದಿ ಕ್ಲಾಸ್‍ಗಳಿಗೆ ಕಳಿಸುತ್ತೇವೆ. ಅಲ್ಲಿಂದ ಬಂದ ಮಗುವಿಗೆ ದಣಿವಾಗಿದೆಯೋ ಇಲ್ಲವೋ ತಿಳಿಯದೇ ಅವಸರವಾಗಿ ಸ್ನಾನ ಮಾಡಿಸಿ ಬಲವಂತವಾಗಿ ಬಾಯಿಗೆ ಒಂದಿಷ್ಟು ಉಪಹಾರ ತುರುಕಿ, ಶಾಲೆಗೆ ಕಳಿಸುತ್ತೇವೆ. ಯಾಕೆಂದರೆ ಎಲ್ಲದರಲ್ಲೂ ನಮ್ಮ ಮಗುವೇ ಫಸ್ಟ್ ಬರಬೇಕು, ಆ ಮಗುವಿನ ಫೋಟೋದ ಜೊತೆಗೆ ನಮ್ಮ ಫೋಟೋ ಕೂಡಾ ಮಾಧ್ಯಮಗಳಲ್ಲಿ ಹರಿದಾಡಬೇಕೆಂಬ ಎಂಬ ಅತಿಯಾದ ನಿರೀಕ್ಷೆ. 
ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೇಗಿದೆ? ಯಾವ ವಿಷಯದಲ್ಲಿ ಮಗುವಿಗೆ ತೊಂದರೆ ಇದೆ? ಭವಿಷ್ಯದ ಬಗ್ಗೆ ಮಗುವಿನ ಕನಸುಗಳೇನು? ಆ ಕನಸನ್ನು ಸಾಕಾರಗೊಳಿಸಲು ನಮ್ಮ ಪಾತ್ರವೇನು? ಎಂಬುದರ ಬಗ್ಗೆ ಬಹುತೇಕ ಪಾಲಕರು ಅರಿಯದಿರುವುದೇ ಮಕ್ಕಳಲ್ಲಿ ಒತ್ತಡ ಹೆಚ್ಚಲು ಕಾರಣವಾಗಿದೆ. 
ಮಗುವಿನ ಆಸಕ್ತಿಯಂತೆ ಓದಿಸಲು ಆಗುವುದಿಲ್ಲ ಎಂಬುದು ಬಹುತೇಕ ಪಾಲಕರ ಅಭಿಮತ. ಇದೇ ಪಾಲಕರು ಮಾಡುವ ಬಹು ದೊಡ್ಡ ತಪ್ಪು. ಅದೇನು ಚಿಕ್ಕ ಮಗು. ಅದಕ್ಕೇನೂ ಗೊತ್ತಾಗೋದೇ ಇಲ್ಲ. ನಾವು ಹೇಳಿದಂತೆ ಕೇಳುತ್ತದೆ ಮತ್ತು ಕೇಳಬೇಕು ಎನ್ನುವ ಮನೋಧೊರಣೆಯೇ ಮಕ್ಕಳ ಮಾನಸಿಕ ಒತ್ತಡದ ಮೂಲ. ಅಲ್ಲದೇ ತಮ್ಮ ಮಕ್ಕಳಿಗೆ ನೈತಿಕ ಸ್ಥೈರ್ಯ ಹಾಗೂ ಮಾನಸಿಕ ಧೈರ್ಯ ತುಂಬುವಷ್ಟು ತಾಳ್ಮೆ ಮತ್ತು ಸಮಯ ಬಹುತೇಕ ಪಾಲಕರು ಉಳಿಸಿಕೊಂಡಿಲ್ಲ. ಜೊತೆಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಮಾನಸಿಕ ಧೈರ್ಯ, ಆತ್ಮವಿಶ್ವಾಸ ತುಂಬುವಂತಹ ತರಗತಿಗಳು ಇಲ್ಲವಾಗಿದೆ. 
ಪೋಷಕರಿಗೆ ನಿಜವಾಗಿಯೂ ತಮ್ಮ ಮಗುವಿನ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ ಒತ್ತಡ ರಹಿತ ಕಲಿಕಾ ವಾತಾವರಣ ನಿರ್ಮಿಸಬೇಕು. ಕೇವಲ ಫಿಜೆಟ್ ಸ್ಪಿನ್ನರ್‍ನಂತಹ ಆಟದ ವಸ್ತುಗಳಿಂದ ಮಗುವಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಮಗುವಿಗೆ ಅಗತ್ಯವಿರುವ ನಿದ್ರೆ, ಪೌಷ್ಟಿಕ ಆಹಾರ ಮತ್ತು ಮಾನಸಿಕ ನೆಮ್ಮದಿ ನೀಡಬೇಕಾಗಿದೆ. ದೈಹಿಕ ಕಸರತ್ತಿನ ಆಟಗಳು, ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳು ಮಗುವನ್ನು ಒತ್ತಡದಿಂದ ಮುಕ್ತಗೊಳಿಸುವ ಸಾಧನಗಳಾಗಿವೆ. ಅದಕ್ಕಾಗಿ ಮಗುವನ್ನು ಯಾವಾಗಲೂ ಸಂತಸದಿಂದ ಇಡಬೇಕಾದುದು ಅನಿವಾರ್ಯ. ಮಗುಸ್ನೇಹಿ ವಾತಾವರಣ ನಿರ್ಮಾಣದಿಂದ ಮಾತ್ರ ಮಗುವನ್ನು ಸಂತಸದಿಂದ ಇಡಲು ಸಾಧ್ಯ. ಪ್ರತಿಯೊಬ್ಬ ಪಾಲಕರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ತಮ್ಮ ಮಗುವಿನ ಮನಸಿನಾಳದಲ್ಲಿ ನಿಂತು ಯೋಚಿಸಬೇಕಾಗಿದೆ. ಮಗುವಿನ ಬೇಕು ಬೇಡಿಕೆಗಳು, ತಲ್ಲಣಗಳು, ಗೊಂದಲಗಳನ್ನು ನಿವಾರಿಸಿಬೇಕಿದೆ.  ‘ಮಗು ದೇಶದ ನಗು’ ಎಂದು ಹೇಳುವ ನಾವು ಆ ನಗುವನ್ನು ಅಳಿಸಿಹಾಕುವುದು ಸರಿಯೇ? ಯೋಚಿಸಿ  ನೋಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ


ಪುಸ್ತಕಕ್ಕೆ ಬಾರ್ ಕೋಡ್ Barcode for Books ISBN

ದಿನಾಂಕ 13-9-2017ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ಪುಸ್ತಕಕ್ಕೆ ಬಾರ್ ಕೋಡ್ ಏಕೆ ಬೇಕು?
ನೀವು ಪುಸ್ತಕ ಮಳಿಗೆಯೊಂದಕ್ಕೆ ಹೋಗುತ್ತೀರಿ. ನಿಮಗೆ ಬೇಕಾದ ಪುಸ್ತಕ ಹುಡುಕಾಡುತ್ತೀರಿ. ಅದರ ಬೆಲೆಗಾಗಿ ಹೊಂಬದಿ ರಕ್ಷಾಪುಟ ನೋಡುತ್ತೀರಿ. ಅಲ್ಲೊಂದು ಬಾರ್‍ಕೋಡ್ ನಿಮ್ಮನ್ನು ಆಕರ್ಷಿಸುತ್ತದೆ. ಈ ಬಾರ್‍ಕೋಡ್‍ನ ಅರ್ಥವೇನು? ಇದರಿಂದ ಓದುಗನಿಗೆ ಏನಾದರೂ ಲಾಭಗಳಿವೆಯಾ? ಇತ್ಯಾದಿ ಪ್ರಶ್ನೆಗಳು ತಲೆಯೊಳಗೆ ಸುಳಿದಾಡುತ್ತವೆ. ಹಾಗಾದರೆ ಈ ಬಾರ್‍ಕೋಡ್ ಯಾವುದು? ಇದರ ಅಗತ್ಯವೇನು? ಇದು ಏನನ್ನು ತಿಳಿಸುತ್ತದೆ? ಮುಂತಾದ ಪ್ರಶ್ನೆಗಳು ಕಾಡಿವೆಯಾ? ಹಾಗಿದ್ದರೆ ಇದನ್ನು ನೀವು ಖಂಡಿತ ಓದಲೇಬೇಕು. 
ಏನಿದು ಐ.ಎಸ್.ಬಿ.ಎನ್? : ಐ.ಎಸ್.ಬಿ.ಎನ್(ಇಂಟರ್‍ನ್ಯಾಶನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್)  ಎಂಬುದು ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ. ಇದು 10 ಅಥವಾ 13 ಸಂಖ್ಯೆಗಳನ್ನು ಹೊಂದಿರುತ್ತದೆ. ಇದು ಪ್ರಕಾಶಕರು  ಲೇಖಕರು, ಪ್ರಕಟಣೆಯ ವರ್ಷ ಹಾಗೂ ಪುಸ್ತಕದ ಬೆಲೆ ಮುಂತಾದ ವಿವರಗಳನ್ನು ಒಳಗೊಂಡಿರುತ್ತದೆ. 
ಐ.ಎಸ್.ಬಿ.ಎನ್ ಇತಿಹಾಸ : ಆಯಾ ದೇಶದಲ್ಲಿ ಪ್ರಕಟವಾಗುವ ಪುಸ್ತಕಗಳ ಸಂಖ್ಯೆ ಮತ್ತು ಗುಣಮಟ್ಟ ಆಧರಿಸಿ ಈ ಸಂಖ್ಯೆಗಳನ್ನು ನೀಡಲಾಗುತ್ತದೆ. ಡಬ್ಲಿನ್‍ನ ಟ್ರಿನಿಟಿ ಕಾಲೇಜಿನ ನಿವೃತ್ತ ಸಂಖ್ಯಾಶಾಸ್ತ್ರ ಪ್ರೊಫೆಸರ್ ಆಗಿದ್ದ ‘ಗೊರ್ಡಾನ್ ಫಾಸ್ಟರ್’ ಎಂಬುವವರು 1965ರಲ್ಲಿ ವಾಣಿಜ್ಯ ಪುಸ್ತಕಗಳಿಗಾಗಿ ಸಂಖ್ಯೆ ನೀಡುವ ಪದ್ದತಿ ಜಾರಿಗೆ ತಂದರು. ಪುಸ್ತಕವನ್ನು ನೊಂದಣಿ ಮಾಡಿಸಿಕೊಂಡ ಪ್ರಕಾಶಕರಿಗೆ ಮಾತ್ರ ಆ ಪುಸ್ತಕ ಮಾರಾಟದ ಹಕ್ಕು ನೀಡಲಾಗುತ್ತಿತ್ತು. ಅಮೇರಿಕಾ ಹಾಗೂ ಯುನೈಟೆಡ್ ಕಿಂಗ್‍ಡಮ್‍ಗಳು 1966-67ರಲ್ಲಿಯೇ ಐ.ಎ.ಬಿ.ಎನ್ ಸಂಖ್ಯೆ ನೀಡುವ ಪದ್ದತಿ ರೂಢಿಸಿಕೊಂಡಿದ್ದವು. ಪ್ರಾರಂಭದಲ್ಲಿ 9 ಅಂಕೆಗಳ ಸಂಖ್ಯೆ ನೀಡಲಾಗುತ್ತಿತ್ತು. ನಂತರ 10 ಸಂಖ್ಯೆಗಳನ್ನು ನೀಡಲಾಯಿತು. 1970ರ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಏಕತೆ ಸಾಧಿಸಲು 13 ಸಂಖ್ಯೆಗಳನ್ನು ನಿಗದಿಪಡಿಸಲಾಯಿತು. 
ಉಪಯೋಗವೇನು? : ಐ.ಎಸ್.ಬಿ.ಎನ್ ಮುಖ್ಯವಾಗಿ ಆ ಪುಸ್ತಕದ ಕತೃ, ಪ್ರಕಾಶಕರು, ಮಾರಾಟಗಾರರು, ಹಕ್ಕು ಸ್ವಾಮ್ಯತೆ, ಗ್ರಂಥಾಲಯದ ಸ್ವಾಮ್ಯತೆ, ಆನ್‍ಲೈನ್ ಮಾರುಕಟ್ಟೆಯ ಲಭ್ಯತೆ, ದೇಶ, ಭಾಷೆ, ರಕ್ಷಾಪುಟ ಹಾಗೂ ಒಳಪುಟಗಳಿಗೆ ಬಳಸಿದ ಕಾಗದದ ಮಾಹಿತಿ, ಪ್ರಕಟಣಾ ವರ್ಷ, ಬೆಲೆ ಮುಂತಾದ ಪ್ರಮುಖ ಮಾಹಿತಿಗಳನ್ನು  ಒಳಗೊಂಡಿರುತ್ತದೆ. ಇದರಿಂದ ಆನ್‍ಲೈನ್ ಮೂಲಕ ಪುಸ್ತಕ ಖರೀದಿಸುವವರಿಗೂ ಹಾಗೂ ಮಾರಾಟ ಮಾಡುವವರಿಗೂ ತುಂಬಾ ಅನುಕೂಲ. ಇದರಲ್ಲಿ ಯಾವುದೇ ರೀತಿಯ ಮೋಸ ಹಾಗೂ ವಂಚನೆ ಮಾಡಲು ಅವಕಾಶ ಇರುವುದಿಲ್ಲ. 
ಯಾರು ಅರ್ಹರು? : ಪುಸ್ತಕ ಪ್ರಕಟಣೆಯಲ್ಲಿ ತೊಡಗಿಕೊಂಡ ಲೇಖಕರು, ಪ್ರಕಟಣಾ ಸಂಸ್ಥೆಗಳು, ಸಹಕಾರಿ ಸಂಘಗಳು, ಮುದ್ರಕರು, ವಿಶ್ವ ವಿದ್ಯಾನಿಲಯಗಳು, ಸರ್ಕಾರಿ ಇಲಾಖೆಗಳು ಒಟ್ಟಾರೆ ಪುಸ್ತಕ ಪ್ರಕಟಣೆಗೆ ಸಂಬಂಧಿಸಿದ ಎಲ್ಲರೂ ಈ ಸಂಖ್ಯೆ ಪಡೆಯಬಹುದಾಗಿದೆ. ಆಯಾ ದೇಶಗಳ ನಿಯಾವಳಿಗಳ ಪ್ರಕಾರ ಈ ಸಂಖ್ಯೆ ನೀಡಲಾಗುತ್ತದೆ. 
ಎಂತಹ ಪ್ರಕಟಣೆಗೆ ಲಭ್ಯವಿದೆ
ಮುದ್ರಿತ ಸಾಮಗ್ರಿಗಳು
ಸೂಕ್ಷ್ಮಯೋಜನೆಗಳು
ಶೈಕ್ಷಣಿಕ ವೀಡಿಯೋಗಳು ಮತ್ತು ಚಲನಚಿತ್ರಗಳು
ಮಿಶ್ರಮಾಧ್ಯಮ ಪ್ರಕಟಣೆಗಳು
ಮೈಕ್ರೋ ಕಂಪ್ಯೂಟರ್ ತಂತ್ರಾಂಶ(ಶೈಕ್ಷಣಿಕ)
ಭೂಪಟ, ಅಟ್ಲಾಸ್ ಹಾಗೂ ನಕ್ಷೆಗಳು
ಎಲೆಕ್ಟ್ರಾನಿಕ್ ಪ್ರಕಟಣೆಗಳು(ಶೈಕ್ಷಣಿಕ)

ಎಂತಹ ಪ್ರಕಟಣೆಗೆ ಲಭ್ಯವಿಲ್ಲ
ಜಾಹೀರಾತು ವಸ್ತುಗಳು
ಮಾರಾಟ ಪಟ್ಟಿಗಳು, ಕೈಪಿಡಿಗಳು, ದರಪಟ್ಟಿಗಳು, ಪ್ರಚಾರ ಸಾಮಗ್ರಿಗಳು.
ವಾಲ್‍ಪೋಸ್ಟರ್, ಪ್ರಚಾರ ಪತ್ರಿಕೆಗಳು, 
ಮಾಹಿತಿ ಇಲ್ಲದ ವಸ್ತುಗಳ ಮಾರಾಟ ಬ್ರೋಷರ್
ಸಂಗೀತ, ನಾಟಕ ಇತ್ಯಾದಿ ಸಾಂಸ್ಕøತಿಕ ಕಾರ್ಯಕ್ರಮ ಪಟ್ಟಿಗಳು
ಭಾಷಣಗಳು ಹಾಗೂ ಬೋಧನಾ ಸಾಮಗ್ರಿಗಳು
ದಿನಚರಿಗಳು ಹಾಗೂ ಕ್ಯಾಲೆಂಡರ್‍ಗಳು
ವಿವಿಧ ಅರ್ಜಿ ನಮೂನೆಗಳು ಹಾಗೂ ಬಣ್ಣದ ಪುಸ್ತಕಗಳು
ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು

ಐ.ಎಸ್.ಬಿ.ಎನ್ ಸಂಖ್ಯೆ ಕಡ್ಡಾಯವೇ? : ಈ ಸಂಖ್ಯೆ ಪಡೆಯುವುದು ಕಡ್ಡಾಯವೇನಲ್ಲ. ಆದರೆ ಈ ಸಂಖ್ಯೆ ಪಡೆಯುವುದರಿಂದ ಆ ಉತ್ಪನ್ನವು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಠವಾಗಿ ಗುರುತಿಸಲ್ಪಡುತ್ತದೆ. ಅಲ್ಲದೇ ಉತ್ಪನ್ನದ ಮೇಲಿನ ಬಾರ್‍ಕೋಡ್ ಬಳಸಿ ಬಿಲ್ ರಚಿಸಲು ಹಾಗೂ ಮಾರಾಟದ ವಿವರ ತಿಳಿಯಲು ಸಹಕಾರಿಯಾಗಿದೆ. 
ಪ್ರತೀ ಉತ್ಪನ್ನಕ್ಕೂ ಪ್ರತ್ಯೇಕ ಸಂಖ್ಯೆ ಪಡೆಯಬೇಕೇ?: ಹೌದು ಪ್ರತೀ ಉತ್ಪನ್ನಕ್ಕೂ ಪ್ರತ್ಯೇಕ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ. ಜೊತೆಗೆ ಪ್ರತ್ಯೇಕ ರಕ್ಷಾಪುಟ(ಪೇಪರ್ ಬ್ಯಾಕ್ ಹಾಗೂ ಬಟ್ಟೆ ಹೊದಿಕೆ)ದ ಗುಣಮಟ್ಟಕ್ಕೂ ಬೇರೆ ಬೇರೆ ಸಂಖ್ಯೆ ಪಡೆಯಬೇಕು. ಅಲ್ಲದೇ ಒಂದೇ ಉತ್ಪನ್ನದ ಬೇರೆ ಬೇರೆ ಭಾಷೆಗಳ ತರ್ಜುಮೆಗೂ ಕೂಡಾ ಪ್ರತ್ಯೇಕ ಸಂಖ್ಯೆ ಪಡೆಯಬೇಕು. 
ಉಚಿತ : ಐ.ಎಸ್.ಬಿ.ಎನ್ ಸಂಖ್ಯೆ ಪಡೆಯುವುದು ಸಂಪೂರ್ಣ ಉಚಿತ. ಆದರೆ ಅಗತ್ಯ ದಾಖಲೆಗಳನ್ನು ಪಡೆಯುವವರು ಸಲ್ಲಿಸಬೇಕಷ್ಟೇ.

ಪಡೆಯುವುದು ಹೇಗೆ? : ವಿವಿಧ ದೇಶಗಳು ಐ.ಎಸ್.ಬಿ.ಎನ್ ಸಂಖ್ಯೆ ನೀಡಲು ಬೇರೆ ಬೇರೆ ಸಂಸ್ಥೆಗಳನ್ನು ನಿಯಮಿಸಿವೆ. ಭಾರತದಲ್ಲಿ “ರಾಜಾ ರಾಮ್ ಮೋಹನ್ ರಾಯ್ ನ್ಯಾಶನಲ್ ಏಜೆನ್ಸಿ ಫಾರ್ ಐ.ಎಸ್.ಬಿ.ಎನ್ ಸಂಸ್ಥೆ” ಈ ಸಂಖ್ಯೆಯನ್ನು ನೀಡುತ್ತದೆ. ಈ ಸಂಖ್ಯೆ ಪಡೆಯಲು ಇಚ್ಚಿಸುವವರು ಪುಸ್ತಕದ ಹೆಸರು, ಲೇಖಕರ ಹೆಸರು ಮತ್ತು ವಿಳಾಸ, ಪ್ರಕಾಶಕರ ಹೆಸರು ಮತ್ತು ವಿಳಾಸ, ಹಕ್ಕುಸ್ವಾಮ್ಯ, ಮುದ್ರಣ ವರ್ಷ, ಮುದ್ರಣ ಸ್ಥಳ, ಪುಟಗಳು, ಬೆಲೆ, ವಿಷಯ, ಭಾಷೆ, ರಕ್ಷಾಪುಟದ ಗುಣಮಟ್ಟ, ಒಳಪುಟಗಳ ಗುಣಮಟ್ಟ, ಸಂಪರ್ಕ ವಿಳಾಸವುಳ್ಳ ಮಾಹಿತಿಯನ್ನು ಸ್ಪುಟವಾಗಿ ಬರೆದು  ಮುಖಪುಟ ಹಾಗೂ ಹಿಂಬದಿ ರಕ್ಷಾಪುಟದ ಚಿತ್ರ, ವಿಳಾಸದ ಪುರಾವೆಗಳು(ಗುರುತಿನ ಚೀಟಿ) ಹಾಗೂ ಸಾಕಷ್ಟು ಸ್ಟಾಂಪ್ ಲಗತ್ತಿಸಿದ ಸ್ವವಿಳಾಸದ ಅಂಚೆ ಲಕೋಟೆಗಳೊಂದಿಗೆ ಮೇಲಿನ ವಿಳಾಸಕ್ಕೆ ಕಳಿಸಬೇಕು. 
ಅರ್ಜಿ ಸಲ್ಲಿಸಬೇಕಾದ ವಿಳಾಸ : ರಾಜಾರಾಮ್ ಮೋಹನ್ ರಾಯ್ ಐ.ಎಸ್.ಬಿ.ಎನ್ ಏಜೆನ್ಸಿ, ಉನ್ನತ ಶಿಕ್ಷಣ ಇಲಾಖೆ, ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ, ರೂಂ ನಂ 13, ಜೀವನ್ ದೀಪ ಕಟ್ಟಡ, 4ನೇ ಮಹಡಿ, ಪಾರ್ಲಿಮೆಂಟ್ ಸ್ಟ್ರೀಟ್, ನವದೆಹಲಿ-110001

ಆರ್.ಬಿ.ಗುರುಬಸವರಾಜ ಹೊಳಗುಂದಿ


ತೆಳ್ಳಗಿರಬೇಕೆಂಬ ಸಮಸ್ಯೆ Anirexia narvosa

ದಿನಾಂಕ 06-09-2017 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ



ಅನೊರೆಕ್ಸಿಯಾ ನರ್ವೋಸಾ

ತೆಳ್ಳಗಿರಬೇಕೆಂಬ ಸಮಸ್ಯೆ

28 ವಯಸ್ಸಿನ ನಾಗವೇಣಿಗೆ ನಾಲ್ಕಾರು ವರ್ಷಗಳಿಂದ ವರಾನ್ವೇಷಣೆ ಪ್ರಾರಂಭವಾಗಿದೆ. ತೆಳ್ಳಗೆ ಬೆಳ್ಳಗೆ ಅಂದವಾಗಿಯೂ ಇದ್ದಾಳೆ. ಆದರೆ ಬಂದ ಗಂಡುಗಳೆಲ್ಲ ನಿರಾಕರಿಸುತ್ತಿವೆ. ಹಾಗಂತ ನಡತೆಯಲ್ಲಾಗಲೀ ಗುಣದಲ್ಲಾಗಲೀ ಯಾವುದೇ ದೋಷವಿಲ್ಲ. ಅಂತ್ರ, ತಂತ್ರ, ಮಂತ್ರ ಇವೆಲ್ಲವೂ ಮುಕ್ತಾಯಗೊಂಡಿದ್ದು ತಂದೆ-ತಾಯಿಗಳಿಗೆ ಇದೊಂದು ದೊಡ್ಡ ಚಿಂತೆ ಶುರುವಾಗಿದೆ. ತೆಳ್ಳಗಿನ ದೇಹವೇ ನಿರಾಕರಣೆಗೆ ಕಾರಣ ಎಂದು ಇತ್ತೀಚೆಗೆ ತಿಳಿದಿದೆ.
32 ವಯಸ್ಸಿನ ಸುಮನ್‍ರಾಜ್‍ಗೆ ಸಿನೆಮಾದಲ್ಲಿ ನಟಿಸುವಾಸೆ. ಶಾಲೆ-ಕಾಲೇಜಿನಲ್ಲಿರುವಾಗಲೇ ನಾಟಕಗಳಲ್ಲಿ ನಟಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾನೆ. ಕಳೆದ ಏಳೆಂಟು ವರ್ಷಗಳಿಂದ ವಿವಿಧ ಭಂಗಿಗಳ ಫೋಟೋ ಆಲ್ಬಂ ಕೈಯಲ್ಲಿ ಹಿಡಿದು ನಿರ್ದೇಶಕರ ಹಿಂದೆ ಅಲೆದಾಡುತ್ತಿದ್ದಾನೆ. ಆದರೆ ಯಾವೊಬ್ಬ ನಿರ್ದೇಶಕರು ಒಂದು ಸಣ್ಣ ಪಾತ್ರವನ್ನೂ ನೀಡುತ್ತಿಲ್ಲ. ಕಾರಣ ಇವನ ಸಣಕಲ ದೇಹ. ತೀರಾ ತೆಳ್ಳಗಿನ ಸಪೂರ ದೇಹವೇ ಅವನಿಗೆ ಮುಳುವಾಗಿದೆ. ಇದರಿಂದ ಇತ್ತೀಚೆಗೆ ಮಾನಸಿಕವಾಗಿ ಜರ್ಜರಿತನಾಗಿದ್ದಾನೆ. 
ಇತ್ತೀಚಿನ ಯುವಪೀಳಿಗೆಯಲ್ಲಿ ತೆಳ್ಳಗಿನ ದೇಹ ಹೊಂದಬೇಕೆಂಬ ಟ್ರೆಂಡ್ ಶುರುವಾಗಿದೆ. ಹದಿವಯಸ್ಸಿನಲ್ಲೇ ಇಂತಹ ಖಯಾಲಿ ಪ್ರಾರಂಭವಾಗುತ್ತದೆ. ಇದೊಂದು ತೀರಾ ಗಂಭೀರ ಸಮಸ್ಯೆ ಎಂಬುದು ಯುವಮನಸ್ಸುಗಳು ಮತ್ತು ಪಾಲಕರಿಗೆ ತಿಳಿದಿಲ್ಲ. ಇದು ‘ಅನೊರೆಕ್ಸಿಯಾ ನರ್ವೋಸಾ’ ಎಂಬ ಸಮಸ್ಯೆ ಎಂಬುದೂ ಕೂಡಾ ಬಹುತೇಕರಿಗೆ ತಿಳಿದಲ್ಲ.  
ಅನೊರೆಕ್ಸಿಯಾ ನರ್ವೋಸಾ ಎಂದರೆ ತಿನ್ನುವ ಸಮಸ್ಯೆ. ಈ ಸಮಸ್ಯೆಯಿರುವ ವ್ಯಕ್ತಿಯು ಅತೀ ಕಡಿಮೆ ದೇಹದ ತೂಕ ಹೊಂದಿದ್ದು,  ತೂಕ ಹೆಚ್ಚಾಗುವ ಬಗ್ಗೆ ವಿಪರೀತ ಭಯ ಮತ್ತು ದೇಹ ಸೌಂದರ್ಯದ ಬಗ್ಗೆ ತಪ್ಪಾದ ಗ್ರಹಿಕೆಯನ್ನು ಹೊಂದಿರುತ್ತಾರೆ. ಇವರು ದೇಹದ ತೂಕವನ್ನು ಇಳಿಸಿಕೊಂಡು ತೆಳ್ಳಗೆ ಇದ್ದರೆ ಸುಂದರವಾಗಿ ಕಾಣುತ್ತೇವೆ ಎಂಬ ಅಂಧ ಆತ್ಮವಿಶ್ವಾಸ ಹೊಂದಿರುತ್ತಾರೆ. ಇದಕ್ಕಾಗಿ ತಮ್ಮ ಆಹಾರದ ಪ್ರಮಾಣವನ್ನು ಕಡಿಮೆ ಮಾಡಲು ಆರಂಭಿಸುತ್ತಾರೆ. ಇದನ್ನು ಸಾಧಿಸಲು ನಿಯಮಿತವಾಗಿ ಊಟವನ್ನು ತ್ಯಜಿಸಬಹುದು ಅಥವಾ ಕಾಲಕ್ರಮೇಣ ದಿನಗಟ್ಟಲೇ ಆಹಾರ ಸೇವಿಸುವುದನ್ನು ನಿಲ್ಲಿಸಬಹುದು. ತಿನ್ನುವಾಗಲೂ ಅತೀ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಹುದು ಮತ್ತು ಅದಕ್ಕೂ ಪಶ್ಚಾತ್ತಾಪ ಪಡಬಹುದು. ದಿನ ಕಳೆದಂತೆ ಈ ನಿಯಂತ್ರಿತ ನಡವಳಿಕೆ ಮತ್ತು ತೆಳ್ಳಗಿನ ದೇಹ ಅವರಿಗೆ ಗೀಳಾಗಿ ಪರಿಣಮಿಸುತ್ತದೆ.  ಹಾಗಾಗಿ ಅವರ ದೇಹದ ತೂಕವು ಅವರ ವಯಸ್ಸು ಮತ್ತು ಎತ್ತರಕ್ಕೆ ಇರಬೇಕಾದ ಸಾಮಾನ್ಯ ತೂಕಕ್ಕಿಂತ ಕಡಿಮೆಯಾಗುತ್ತದೆ. ಇದಲ್ಲದೇ ತಮ್ಮ ದೇಹದ ಸೌಂದರ್ಯದ ಬಗ್ಗೆ ತಪ್ಪಾಗಿ ಪರಿಭಾವಿಸಿರುವುದರಿಂದ ಅತ್ಯಂತ ತೆಳ್ಳಗಿನ ದೇಹವನ್ನು ಹೊಂದಿದ್ದಾಗಲೂ ತಾವಿನ್ನೂ ದಪ್ಪಗಿದ್ದೇವೆ ಎಂದು ತಿಳಿದಿರುತ್ತಾರೆ.
ಬಹಳ ಜನ ತಿಳಿದಿರುವಂತೆ ಅನೊರೆಕ್ಸಿಯಾ ವ್ಯಕ್ತಿಯು ಆಯ್ದುಕೊಂಡ ಜೀವನ ಶೈಲಿಯ ವಿಧಾನವಲ್ಲ. ಬದಲಿಗೆ ಇದು ವ್ಯಕ್ತಿಯು ಭಾವನಾತ್ಮಕ ಒತ್ತಡದಿಂದ ಬಳಲಿದಾಗ, ತನ್ನ ಶರೀರದ ಬಗ್ಗೆ ಋಣಾತ್ಮಕ ಮತ್ತು ತಪ್ಪಾದ ಗ್ರಹಿಕೆ ಹೊಂದಿದಾಗ ಉಂಟಾಗುತ್ತದೆ. ಅವರು ತೂಕ ಹೆಚ್ಚುವ ಬಗ್ಗೆ ವಿಪರೀತವಾಗಿ ಭಯಭೀತರಾಗಿರುತ್ತಾರೆ. ಇದು ತೀವ್ರವಾದ ದೈಹಿಕ ಗುಣಲಕ್ಷಣಗಳನ್ನು ಹೊಂದಿರುವ ಗಂಭೀರ ಖಾಯಿಲೆಯಾಗಿದ್ದು ಈ ಬಗ್ಗೆ ಗಮನಹರಿಸಬೇಕಿದೆ. 
ಅನೊರೆಕ್ಸಿಯಾದ ಲಕ್ಷಣಗಳು :
ಅನೊರೆಕ್ಸಿಯಾದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಂದ ತಮ್ಮ ನಡವಳಿಕೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಆದರೂ ಕೆಲವು ದೈಹಿಕ ಮತ್ತು ನಡವಳಿಕೆಯಲ್ಲಾಗುವ ಬದಲಾವಣೆಯಿಂದ ಈ ಸಮಸ್ಯೆಯನ್ನು ಪತ್ತೆಹಚ್ಚಬಹುದು.
ದೈಹಿಕ ಲಕ್ಷಣಗಳು:
ದೇಹದ ತೂಕ ತೀವ್ರವಾಗಿ ಕಡಿಮೆಯಾಗುವುದು ಮತ್ತು ಅತ್ಯಂತ ತೆಳ್ಳಗಾಗುವುದು.
ತಲೆ ತಿರುಗುವಂತಹ ಅನುಭವ ಮತ್ತು ಆಯಾಸವಾಗುವುದು.
ಅತಿಯಾಗಿ ಚಳಿಯೆನಿಸುವುದು.
ಕೂದಲು ತೆಳ್ಳಗಾಗುವುದು ಮತ್ತು ಉದುರುವಿಕೆ, ಚರ್ಮ ಅತಿಯಾಗಿ ಒಣಗುವುದು.
ಋತುಚಕ್ರದಲ್ಲಿ ಏರುಪೇರು, ಕೆಲವೊಮ್ಮೆ ಋತುಚಕ್ರವೇ ನಿಂತುಹೋಗುವುದು.
ನಡುವಳಿಕೆಯಲ್ಲಾಗುವ ಬದಲಾವಣೆಗಳು:
ತೂಕ ಹೆಚ್ಚುವುದು ಮತ್ತು ಆಹಾರದಲ್ಲಿನ ಕ್ಯಾಲೋರಿ ಮಟ್ಟದ ಕುರಿತು ಚಿಂತಿತರಾಗುವುದು. 
ಮತ್ತೆ ಮತ್ತೆ ತೂಕವನ್ನು ನೋಡಿಕೊಳ್ಳುವುದು ಮತ್ತು ದೇಹದ ಆಕೃತಿಯನ್ನು ಕನ್ನಡಿಯಲ್ಲಿ ಪರೀಕ್ಷಿಸಿಕೊಳ್ಳುವುದು.
ಮನೆಯವರು ಮತ್ತು ಸ್ನೇಹಿತರೊಂದಿಗೆ ಊಟಮಾಡುವುದನ್ನು ತಪ್ಪಿಸಿಕೊಳ್ಳುವುದು, ತಮ್ಮ ಊಟವಾಗಿದೆ ಎಂದು ಅಥವಾ ಹಸಿವಿಲ್ಲವೆಂದು ಹೇಳುವುದು.
ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯದಿರುವುದು ಮತ್ತು ಕಿರಿಕಿರಿಗೊಳ್ಳುವುದು.
ಅತಿಯಾಗಿ ವ್ಯಾಯಾಮ ಮಾಡುವುದು ಮತ್ತು ತೂಕ ಕಳೆದುಕೊಳ್ಳಲು ಲ್ಯಾಕ್ಸೆಟಿವ್‍ಗಳನ್ನು ಬಳಸುವುದು.
ಅನೊರೆಕ್ಸಿಯಾಕ್ಕೆ ಕಾರಣಗಳು : 
ಅನೊರೆಕ್ಸಿಯಾ ಏಕೆ ಉಂಟಾಗುತ್ತದೆ ಎಂಬುದಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಇದು ಮಾನಸಿಕ, ಜೈವಿಕ ಮತ್ತು ಪರಿಸರದ ಅಂಶಗಳಿಂದ ಉಂಟಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವ ವ್ಯಕ್ತಿ ತಮ್ಮ ಸಮಸ್ಯೆಯನ್ನು ನಿಭಾಯಿಸುವ ಹಂತದಲ್ಲಿ ಈ ಖಾಯಿಲೆಗೆ ಒಳಗಾಗಬಹುದು. ಆಹಾರಕ್ಕೆ ಸಂಬಂಧಿಸಿದಂತೆ ಕಂಪಲ್ಸಿವ್ ನಡವಳಿಕೆಯನ್ನು ಹೊಂದಿರುತ್ತಾರೆ. ಅಂದರೆ ಆಹಾರವನ್ನು ಪ್ರತಿ ಬಾರಿ ಅಳೆಯುವುದು, ಅವನ್ನು ಸಣ್ಣ ಭಾಗಗಳನ್ನಾಗಿ ಮಾಡುವುದು ಮುಂತಾದ ನಡವಳಿಕೆಯನ್ನು ಬೆಳೆಸಿಕೊಂಡಿರುತ್ತಾರೆ. ಕೆಲವು ವೇಳೆ ಪರಿಪೂರ್ಣತ್ವ ಅಥವಾ ಅತಿಯಾದ ಸೂಕ್ಷ್ಮ ಮನೋಭಾವವು ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು. ಕೆಲವು ಸಂಶೋಧನೆಗಳ ಪ್ರಕಾರ ಮೆದುಳಿನಲ್ಲಿನ ಸೆರೆಟೊನಿನ್ ಅಂಶದ ಮಟ್ಟವು ಈ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿದು ಬಂದಿದೆ.
ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಯಾರಾದರೂ ಅವರ ತೂಕದ ಬಗ್ಗೆ ಹೀಯಾಳಿಸಿದ್ದರೆ ತೆಳ್ಳಗಾಗುವ ಗೀಳನ್ನು ಬೆಳೆಸಿಕೊಂಡಿರಬಹುದು. ಹರೆಯದ ಹೆಣ್ಣುಮಕ್ಕಳಲ್ಲಿ ಸಹವರ್ತಿಗಳ ಒತ್ತಡ ಕೂಡ ಈ ಸಮಸ್ಯೆ ಉಂಟಾಗಲು ಕಾರಣವಾಗಬಹುದು. ಇದರಲ್ಲಿ ಮಾಧ್ಯಮ ಮತ್ತು ಸಮಾಜದ ಪಾತ್ರವೂ ಇಲ್ಲ ಎನ್ನುವಂತಿಲ್ಲ. ಸೌಂದರ್ಯ ಮತ್ತು ತೆಳ್ಳಗಿರುವುದು ಅನುರೂಪ ಪ್ರಕ್ರಿಯೆಗಳು ಎಂಬ ತಪ್ಪು ಗ್ರಹಿಕೆಯು ಕೆಲವೊಮ್ಮೆ ಇದಕ್ಕೆ ಪ್ರಭಾವ ಬೀರುತ್ತದೆ.
ಅನೊರೆಕ್ಸಿಯಾಕ್ಕೆ ಚಿಕಿತ್ಸೆ
ಅನೊರೆಕ್ಸಿಯಾವು ದೇಹ ಮತ್ತು ಮನಸ್ಸು ಎರಡನ್ನೂ ಬಾಧಿಸುವುದರಿಂದ ಹಲವು ರೀತಿಯ ಚಿಕಿತ್ಸೆಗಳ ಅಗತ್ಯವಿದೆ. ಅನೊರೆಕ್ಸಿಯಾದಿಂದ ಬಳಲುವ ವ್ಯಕ್ತಿಯು ಅತಿಯಾದ ಅಪೌಷ್ಠಿಕತೆಗೆ ಗುರಿಯಾಗಿದ್ದರೆ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಅವರ ದೇಹದ ತೂಕವು ಅತಿಯಾಗಿ ಕಡಿಮೆಯಾಗಿರದೇ ಮತ್ತು ವೈದ್ಯಕೀಯವಾಗಿ ಅಪಾಯದ ಸ್ಥಿತಿಯಲ್ಲಿಲ್ಲದಿದ್ದರೆ ಹೊರರೋಗಿಯಾಗಿ ಚಿಕಿತ್ಸೆಪಡೆಯಬಹುದು.
ಅನೊರೆಕ್ಸಿಯಾದ ಚಿಕಿತ್ಸೆಯು 3 ವಿಭಾಗಗಳನ್ನು ಹೊಂದಿದೆ.
ಮೊದಲನೆಯದಾಗಿ ತಿನ್ನುವ ಸಮಸ್ಯೆಯ ಕಾರಣದಿಂದ ವ್ಯಕ್ತಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಉಂಟಾಗಿದ್ದರೆ ಅದಕ್ಕೆ ಚಿಕಿತ್ಸೆ ನೀಡಬೇಕು.
ಅವರಿಗೆ ಪೌಷ್ಠಿಕಾಂಶಗಳ ಚಿಕಿತ್ಸೆಯನ್ನು ನೀಡಿ ಅವರು ಆರೋಗ್ಯವಂತ ತೂಕಕ್ಕೆ ಮರಳುವಂತೆ ಮಾಡಬೇಕು. ತೂಕವನ್ನು ನಿಭಾಯಿಸಲು ಪೌಷ್ಠಿಕಾಂಶಗಳ ಕುರಿತು ಮಾಹಿತಿ ನೀಡಬೇಕು.
ತೂಕ ಹೆಚ್ಚಿಸುವುದರ ಬಗ್ಗೆ ಮತ್ತು ಅವರು ಹೊಂದಿರುವ ಭಯವನ್ನು ಹೋಗಲಾಡಿಸಲು ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಬೇಕು.
ತಜ್ಞ ವೈದ್ಯರುಗಳ ತಂಡವು ಸಕಾಲಿಕವಾಗಿ ಚಿಕಿತ್ಸೆಯನ್ನು ನೀಡುತ್ತದೆ. ಕೆಲವು ಸಂದರ್ಭದಲ್ಲಿ ಮನೆಯವರನ್ನು ಚಿಕಿತ್ಸಾ ಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತದೆ.
ಪಾಲಕರೇನು ಮಾಡಬಹುದು?
ನಿಮ್ಮಲ್ಲಿ ಯಾರಿಗಾದರೂ ಅನೊರೆಕ್ಸಿಯಾ ಕಂಡುಬಂದರೆ ಚಿಕಿತ್ಸೆ ಪಡೆಯಲು ಅವರನ್ನು ಒಪ್ಪಿಸಿ. ಈ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಬಗ್ಗೆ ರಕ್ಷಣಾತ್ಮಕವಾಗಿ ವರ್ತಿಸಬಹುದು ಅಥವಾ ಈ ತೊಂದರೆಯಿಲ್ಲ ಎಂದು ಹೇಳಬಹುದು. ಇಂತಹ ಸನ್ನಿವೇಶಗಳಲ್ಲಿ ಸಹನೆ ಮುಖ್ಯ. ಅವರಿಗೆ ತಿನ್ನಲು ಒತ್ತಾಯಿಸಬೇಡಿ. ನಿಮ್ಮ ಕಾಳಜಿಯನ್ನು ಪ್ರೀತಿಯಿಂದ ತಿಳಿಸಿ. ನೀವು ಅವರ ಜೊತೆ ಇರುವುದಾಗಿ ಭರವಸೆ ನೀಡಿ. ನಿಮ್ಮ ಮನೆಯಲ್ಲಿ ಯಾರಾದರೂ ಅನೊರೆಕ್ಸಿಯಾದಿಂದ ಬಳಲುತ್ತಿದ್ದರೆ, ಉಳಿದ ಸದಸ್ಯರು ಉತ್ತಮ ಪೌಷ್ಠಿಕ ಆಹಾರ ಸೇವಿಸುವಂತೆ ನೋಡಿಕೊಳ್ಳಿ. ಇದರಿಂದ ಸಮಸ್ಯೆಯಿರುವವರಿಗೆ ನೈಜ ಉದಾಹರಣೆ ದೊರೆಯುತ್ತದೆ.
ಅನೊರೆಕ್ಸಿಯಾವನ್ನು ನಿಭಾಯಿಸುವುದು
ಅನೊರೆಕ್ಸಿಯಾದ ಚಿಕಿತ್ಸೆಯು ಬಹಳ ಕಾಲದವರೆಗೆ ನಡೆಯುತ್ತದೆ.  ಇದನ್ನು ಹೋಗಲಾಡಿಸಲು ಸರಿಯಾದ ಡಯಟ್ ಮತ್ತು ಪೌಷ್ಠಿಕತೆಯ ಪ್ಲ್ಯಾನ್ ಅಳವಡಿಸಿಕೊಳ್ಳಬೇಕು. ಚಿಕಿತ್ಸಾ ಸಂದರ್ಭದಲ್ಲಿ ಮನೆಯವರು ಮತ್ತು ಸ್ನೇಹಿತರಿಂದ ದೂರವಿರಬೇಡಿ. ನಿಮ್ಮ ಆರೋಗ್ಯದ ಕಾಳಜಿಯನ್ನು ಮಾಡುವವರ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ನಿಮಗೆ ಸಮಾಧಾನವಾಗುತ್ತದೆ. ಅನೊರೆಕ್ಸಿಯಾದ ಬಗ್ಗೆ ಓದಿ ತಿಳಿದುಕೊಳ್ಳಿ. ಇದರಿಂದ ತೂಕ ಹೆಚ್ಚಾಗುವ ಬಗ್ಗೆ ನಿಮಗಿರುವ ಭಯವು ಕೇವಲ ಒಂದು ಸಮಸ್ಯೆಯ ಲಕ್ಷಣವೆಂದು ತಿಳಿಯುತ್ತದೆ. ಆರೋಗ್ಯ ಹೆಚ್ಚಿಸಲು ಇರುವ ಸಪೋರ್ಟ್ ಗ್ರೂಪುಗಳನ್ನು ಸೇರುವುದರಿಂದ ನಿಮ್ಮ ಭಯ ಕಡಿಮೆಯಾಗುತ್ತದೆ. ನಿಮ್ಮ ಆತ್ಮೀಯರನ್ನು ನಂಬಿ ಮತ್ತು ಅವರೊಂದಿಗೆ ನಿಮ್ಮ ತೊಂದರೆಗಳನ್ನು ಹಂಚಿಕೊಳ್ಳಿ. ಇದು ನಿಮ್ಮ ಚಿಕಿತ್ಸೆಯ ಅವಧಿಯಲ್ಲಿ ಕಡಿಮೆ ಮಾಡಿ ಬೇಗನೇ ಫಲ ನೀಡುತ್ತದೆ.
ಆರ್.ಬಿ.ಗುರುಬಸವರಾಜ ಹೊಳಗುಂದಿ





August 29, 2017

ರಂಗಶಿಕ್ಷಣ Theater Education

ಜೂನ್ 2017ರ ಪ್ರಜಾಜಗತ್ತು ಪಾಕ್ಷಿಕದಲ್ಲಿ ಪ್ರಕಟವಾದ ನನ್ನ ಬರಹ.
ರಂಗಶಿಕ್ಷಣ

ಹಡಗಲಿ ಬಿ.ಆರ್.ಸಿ BRC HADAGALI

ಆಗಸ್ಟ್ 2017ರ ಶಿಕ್ಷಣವಾರ್ತೆಯಲ್ಲಿ ಪ್ರಕಟವಾದ ನನ್ನ ಬರಹ.
ಮಲ್ಲಿಗೆಯ ನಾಡಲ್ಲಿ ಸಂಪದ್ಭರಿತವಾದ
ಕ್ಷೇತ್ರ ಸಂಪನ್ಮೂಲ ಕೇಂದ್ರ


ಕುಟುಂಬದ ಮುಖ್ಯಸ್ಥ ಮನಸ್ಸು ಮಾಡಿದರೆ ಇಡೀ ಕುಟುಂಬವೇ ಮಾದರಿ ಕುಟುಂಬ ಆಗುತ್ತದೆ. ಅದೇರೀತಿ ಒಂದು ಕಛೇರಿ ಮುಖ್ಯಸ್ಥ ಮನಸ್ಸು ಮಾಡಿದರೆ ಇಡೀ ಕಛೇರಿ ವಾತಾವರಣವೇ ಬದಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರಿ ಕಛೇರಿ ಎಂದಾಕ್ಷಣ ಧೂಳು ಹಿಡಿದ ಕಡತಗಳು, ಜಾಡು ಕಟ್ಟಿದ ಮೂಲೆಗಳು, ಬಣ್ಣ ಮಾಸಿದ ಗೋಡೆಗಳು, ಇತ್ಯಾದಿ ದೃಶ್ಯಗಳು ಕಣ್ಮುಂದೆ ಹಾದು ಹೋಗುತ್ತವೆ. ಇಂತಹ ಎಲ್ಲಾ ಅಪಸ್ವರಗಳಿಗೆ ತಿಲಾಂಜಲಿ ಹೇಳಿ ಆಕರ್ಷಕ ಶೈಲಿಯಲ್ಲಿ ಕಛೇರಿ ಬದಲಾದರೆ ಹೇಗೆ? ನೋಡಲು ಸುಂದರವಾಗಿರುತ್ತದೆ ಅಲ್ಲವೇ? ಇದು ಹೇಳಲೇನೋ ಸುಲಭ. ಆದರೆ ಆಕರ್ಷಕವಾಗಿ ಮಾಡುವುದಾದರೂ ಹೇಗೆ? ಅದಕ್ಕೆ ಬೇಕಾದ ಸಂಪನ್ಮೂಲ ಹೊಂದಾಣಿಕೆ ಹೇಗೆ? ಎಂಬುದೇ ಎಲ್ಲರಿಗೂ ಯಕ್ಷ ಪ್ರಶ್ನೆ. ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳಲು ಸಜ್ಜಾಗಿದೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಕ್ಷೇತ್ರ ಸಂಪನ್ಮೂಲ ಕೇಂದ್ರ.
ಕನಸಿನ ಬೆನ್ನೇರಿ : ಸಂಪನ್ಮೂಲ ಕೇಂದ್ರವು ಪಟ್ಟಣದ ಹೊರವಲಯದಲ್ಲಿದ್ದು ಪಟ್ಟಣದಿಂದ 3 ಕಿ.ಮೀ ದೂರದಲ್ಲಿದೆ. ತರಬೇತಿ ಹಾಗೂ ಇನ್ನಿತರೇ ಕಛೇರಿ ಕೆಲಸಕ್ಕೆಂದು ಬರುವ ಶಿಕ್ಷಕರು ಮತ್ತು ಪಾಲಕರಿಗೆ ಒಂದು ರೀತಿಯ ನೋವಿನ ಅನುಭವ ಕಾಡುತ್ತಿತ್ತು.   4-7-2016 ರಂದು ಹೆಚ್.ಕೆ.ಚಂದ್ರಪ್ಪ ಎಂಬುವವರು ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಇಲ್ಲಿಗೆ ಬಂದರು. ಇಲ್ಲಿನ ಭೌತಿಕ ವಾತಾವರಣ ಕಂಡು ಏನಾದರೂ ಹೊಸತನ ಮಾಡಬೇಕೆಂಬ ಕನಸು ಕಂಡರು. ಅದಕ್ಕೆ ಸಿಬ್ಬಂದಿಯ ಸಹಕಾರ ಬೇಡಿದರು. ಸಿಬ್ಬಂದಿಯೂ ಅದಕ್ಕೆ  ಸಕಾರಾತ್ಮಕವಾಗಿ ಸ್ಪಂದಿಸಿತು.  ಯೋಜನೆ ಸಿದ್ದಪಡಿಸಿದರು. ಅದರಂತೆ ಕಾರ್ಯತತ್ಪರರಾದರು.
ಬದಲಾದದ್ದಾರೂ ಏನು ? : ಒಂಭತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಇಡೀ ಕಛೇರಿಯ ವಾತಾವರಣವೇ ಬದಲಾಗಿದೆ. ಗೋಡೆಗಳು ಮಾಸಲು ಬಣ್ಣ ಕಳಚಿಕೊಂಡು ಹೊಸ ಬಣ್ಣದೊಂದಿಗೆ ಕಂಗೊಳಿಸುತ್ತವೆ. ಈ ಬಣ್ಣ  ಆಕರ್ಷಕವಾಗಿ ಕಾಣಲು ವರ್ಲಿ ಚಿತ್ರಣಗಳನ್ನು ಚಿತ್ರಿಸಲಾಗಿದೆ. ಇಡೀ ಶಿಕ್ಷಣದ ರೂಪರೇಷಗಳನ್ನು ಬಿಂಬಿಸುವ ಚಿತ್ರಗಳನ್ನು ಅಲ್ಲಲ್ಲಿ ಬಿಡಿಸಲಾಗಿದೆ. ಕೆಂಪು ಬಣ್ಣದ ಸಿಮೆಂಟ್ ನೆಲ ಈಗ ಟೈಲ್ಸ್ ಕಲ್ಲುಗಳಿಂದ ಸಪೂರವಾಗಿದೆ. ದೂಳಿನಿಂದ ತುಂಬಿದ್ದ ಕಿಟಕಿಗಳು ಅಲುಗಾಡುತ್ತಿರುವ ಸುಂದರ ಕರ್ಟನ್ ಗಳನ್ನು ಹೊಂದಿವೆ. ನೀರಿಲ್ಲದೇ ಒಣಗಿದ್ದ ಶೌಚಾಲಯಗಳು ಆಹ್ಲಾದಕರ ಪರಿಮಳದಿಂದ ಕೂಡಿವೆ. ಕುಡಿಯಲು ಶುದ್ದ ನೀರಿನ ಘಟಕ ಅಳವಡಿಸಲಾಗಿದೆ. ಒಂದು ಕೊಠಡಿಯನ್ನು ಗ್ರಂಥಾಲಯವಾಗಿ ಮಾರ್ಪಾಟು ಮಾಡಲು ಸಕಲ ಸಿದ್ದತೆ ನಡೆದಿದೆ. ಇನ್ನೊಂದು ಕೊಠಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ವಿವಿಧ ಕಲಿಕೋಪಕರಣಗಳುಳ್ಳ ಕಲಿಕಾ ಕೇಂದ್ರವನ್ನು ಪ್ರಾರಂಭಿಸಲು ಸಿದ್ದತೆ ನಡೆದಿದೆ. ತಾಲೂಕಿನಲ್ಲಿ 350 ವಿಶೇಷ ಅಗತ್ಯವುಳ್ಳ ಮಕ್ಕಳಿದ್ದು, ಅವರಿಗೆ ಶಾಶ್ವತ ಫಿಜಿಯೋ ಥೆರಪಿ ಕೇಂದ್ರ ಪ್ರಾರಂಭಿಸಲು ಅಗತ್ಯ ಸಾಧನಗಳನ್ನು ವ್ಯವಸ್ಥೆ ಮಾಡಲಾಗಿದೆ.  
ಬದಲಾದ ತರಬೇತಿ ಕೊಠಡಿ : ಇಡೀ ತರಬೇತಿ ಕೊಠಡಿಯ ಚಿತ್ರಣ  ಬದಲಾಗಿದೆ. ಸಂಪೂರ್ಣ ಕೊಠಡಿ ಡಿಜಿಟಲ್ ಮಯವಾಗಿದೆ. 55 ಇಂಚಿನ ಎಲ್.ಇ.ಡಿ  ಟಿ.ವಿ ಗೋಡೆಯನ್ನು ಅಲಂಕರಿಸಿದೆ. ಅದಕ್ಕೆ ಪೂರಕವಾಗಿ ಹೋಮ್ ಥೇಟರ್ ಸೌಂಡ್ ಎಫೆಕ್ಟ್ ಅಳವಡಿಸಲಾಗಿದೆ. ತರಬೇತಿ ಕೊಠಡಿಯಲ್ಲಿ ತಲೆ ಎತ್ತಿದರೆ ಸಾಕು ಇಡೀ ನಲಿ-ಕಲಿಯ ದಿವ್ಯ ದರ್ಶನವಾಗುತ್ತದೆ. ಅಂದರೆ ನಲಿ-ಕಲಿ ಪದ್ದತಿಗೆ ಪೂರಕವಾದ ಕ್ರಾಫ್ಟ್ ವರ್ಕ್ ಗಳನ್ನು ಚಪ್ಪರಕ್ಕೆ ನೇತುಹಾಕಲಾಗಿದೆ. ನೆಲಕ್ಕೆ ಮ್ಯಾಟ್ ಹಾಕಲಾಗಿದ್ದು, ಕುಳಿತುಕೊಳ್ಳಲು ಕಾಲಿಟ್ಟರೆ ಕೊಳಕಾಗುತ್ತದಲ್ಲ ಎಂಬ ಭಾವನೆ ಬರುತ್ತದೆ. ಜೊತೆಗೆ ಒಂದಿಷ್ಟು ಖಾಯಂ ಆಸನಗಳ ವ್ಯವಸ್ಥೆ ಮಾಡಲಾಗಿದೆ. ತರಬೇತಿ ಸಮಯದಲ್ಲಿ ವಿಡೀಯೋ/ಆಡಿಯೋ ಬಳಸುವಾಗ ವಿದ್ಯುತ್ ಸರಬರಾಜು ಕಡಿತವಾಗುವ ಭಯವಿಲ್ಲ. ಬ್ಯಾಟರಿ ಮತ್ತು ಯು.ಪಿ.ಎಸ್ ಅಳವಡಿಸಿದ್ದು ಯಾವುದೇ ತೊಂದರೆ ಇಲ್ಲದೇ ನಿರಾಯಾಸವಾಗಿ ತರಬೇತಿ ಸಾಗುತ್ತವೆ. ಮೊದಲೆಲ್ಲಾ ಇಲ್ಲಿಗೆ ತರಬೇತಿಗೆ ಬಂದವರಿಗೆ ಆದಷ್ಟೂ ಬೇಗನೇ ಇಲ್ಲಿಂದ ಹೊರಹೋದರೆ ಸಾಕು ಎನಿಸುತ್ತಿತ್ತು. ಆದರೆ ಈಗ ಇಲ್ಲಿಂದ ಹೊರಹೋಗಲು ಮನಸ್ಸೇ ಬರುತ್ತಿಲ್ಲ ಎಂಬುದು ಶಿಕ್ಷಕರ ಅಭಿಮತ.
ಬದಲಾದ ಔಟ್ ಲುಕ್ : ಕೊಠಡಿಯೊಳಗಿನ ಚಿತ್ರಣ ಬದಲಾದಂತೆ ಕಟ್ಟಡದ ಹೊರಗಿನ ಔಟ್ ಲುಕ್ ಕೂಡಾ ಬದಲಾಗಿದೆ. ಹೊರಭಾಗವೂ ಕೂಡಾ ವರ್ಲಿ ಚಿತ್ರಣಗಳೊಂದಿಗೆ ಆಕರ್ಷಕ ರೂಪು ಪಡೆದಿದೆ. ಕಟ್ಟಡದ ಸುತ್ತಲೂ ರಡಿಮೇಡ್ ಕಾಂಪೌಂಡ್ ಹಾಕಲಾಗಿದ್ದು ಅಲ್ಲಿಯೂ ಆಕರ್ಷಕ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಪ್ರವೇಶದ್ವಾರದ ಗೇಟ್ ನಲ್ಲಿ ಶಿಕ್ಷಣದ ಮಹತ್ವ ಸಾರುವ ಥೀಮ್ ಆಧಾರಿತ ಚಿತ್ರ ಎಲ್ಲರ ಕಣ್ಮನ ಸೆಳೆಯುತ್ತವೆ. ಇಲ್ಲಿನ ಎಲ್ಲಾ ಚಿತ್ರಗಳು ರಮೇಶ ಮರೋಳ್ ಅವರ ಕುಂಚದಿಂದ ಮೂಡಿಬಂದಿವೆ.
ದಾನಿಗಳಿಂದ ಸಂಪದ್ಭರಿತ : ಇಲ್ಲಿನ ಎಲ್ಲಾ ಬದಲಾವಣೆಗಳ ಪ್ರಾಯೋಜಕರು ದಾನಿಗಳು. ಬದಲಾವಣೆಗೆ ಪ್ರೇರಕ ಶಕ್ತಿ ಸಮನ್ವಯಾಧಿಕಾರಿಗಳು ಮತ್ತು  ಸಿಬ್ಬಂದಿ. ಇವರೆಲ್ಲರ ಒಮ್ಮತದ ಕಾರ್ಯದಿಂದ ಸಂಪನ್ಮೂಲ ಕೇಂದ್ರವು ಸಂಪದ್ಭರಿತವಾಗಿದೆ.  ಕಾರ್ಯನಿರತ ಶಿಕ್ಷಕರು, ನಿವೃತ್ತ ಶಿಕ್ಷಕರು, ಶಿಕ್ಷಣಾಭಿಮಾನಿಗಳು ಜನಪ್ರಿನಿಧಿಗಳು, ಪಾಲಕ-ಪೋಷಕರು ಸ್ವಪ್ರೇರಣೆಯಿಂದ ದಾನ ನೀಡಿದ್ದಾರೆ.
ದಾನಗಳ ವಿವರ : ಪೇಂಟ್, ಪೇಂಟಿಂಗ್ ಕೂಲಿ, ಫ್ಲೋರಿಂಗ್ ಟೈಲ್ಸ್, ಫ್ಲೋರಿಂಗ್ ಮ್ಯಾಟ್, ಪ್ಯಾನ್ ಮತ್ತು ಕರ್ಟನ್ಸ್, ರಾಷ್ಟ್ರ ನಾಯಕರ ಫೋಟೋ, ಟೇಬಲ್, ಸಿಂಟೆಂಕ್ಸ್, ಬೋರ್ ವೆಲ್, ಪಂಪ್ ಮತ್ತು ಪೈಪ್ಸ್, 55 ಇಂಚಿನ ಎಲ್.ಇ.ಡಿ ಟಿ.ವಿ, ಹೋಮ್ ಥೇಟರ್, ಯು.ಪಿ.ಎಸ್ ಮತ್ತು ಬ್ಯಾಟರಿ, ಡಿಶ್ ಕನೆಕ್ಷನ್, ಮಹಾದ್ವಾರ ಮತ್ತು ಗೇಟ್, ಕಾಂಪೌಂಡ್ ವಾಲ್, ಧ್ವಜಸ್ಥಂಭ, ಪಾರ್ಕಿಂಗ್ ಟೈಲ್ಸ್, ಪಾರ್ಕ್ ಸ್ವಚ್ಛತೆ ಮತ್ತು ಮಣ್ಣು ಹೇರಿದ್ದು, ಶುದ್ದ ಕುಡಿಯುವ ನೀರಿನ ಘಟಕ, ಎಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ ಹೀಗೆ ಒಟ್ಟು 8ಲಕ್ಷ 20 ಸಾವಿರ ಮೌಲ್ಯದ ದೇಣಿಗೆ ಸಂಗ್ರಹಿಸಲಾಗಿದೆ. ಸಮಗ್ರ ಬದಲಾವಣೆಯೂ ಸ್ವಯಂ ಪ್ರೇರಿತ ದಾನಿಗಳಿಂದ ಸಾಧ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಕಟ್ಟಡದ ಬಳಿಯ ಜಾಗೆಯಲ್ಲಿ ಪಾರ್ಕ್ ನಿರ್ಮಿಸುವ ಯೋಜನೆ ಇದೆ. ಅದಕ್ಕೆ  ಅಗತ್ಯವಿರುವ ಸಸಿಗಳನ್ನು ವಿತರಿಸಲು ದಾನಿಗಳು ಮುಂದೆ ಬಂದಿದ್ದಾರೆ. ಇದೆಲ್ಲಾ ಕೇವಲ ಒಂದು ವಾರ ಅಥವಾ ಒಂದು ತಿಂಗಳಲ್ಲಿ ಆದ ಕೆಲಸವಲ್ಲ. ಇಷ್ಟೆಲ್ಲಾ ಆಕರ್ಷಣೆ ಹಾಗೂ ಬದಲಾವಣೆಯ ರೂಪು ಪಡೆಯಲು ಒಂದು ವರ್ಷದ ಕಾಲಾವಧಿ ಬೇಕಾಗಿದೆ.
 ಇದೆಲ್ಲಾ ತುಂಬಾ ರಿಸ್ಕಿನ ಕೆಲಸ. ಸರ್ಕಾರಿ ಕೆಲಸ ದೇವರ ಕೆಲಸ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹೇಗೋ ಒಂದಿಷ್ಟು ಕಾಲಹರಣ ಮಾಡಿ ಮನೆಗೆ ಹೋದರೆ ಅಂದಿನ ಡ್ಯೂಟಿ ಮುಗಿಯಿತು ಎಂಬುವವರೇ ಹೆಚ್ಚು. ಆದರೆ ಇಲ್ಲಿನ ಸಿಬ್ಬಂದಿ  10 ರಿಂದ 5 ರವರೆಗೆ ಕಛೇರಿ ಕೆಲಸಗಳನ್ನು ಮುಗಿಸಿಕೊಂಡು 5 ಗಂಟೆಯ ನಂತರ ಬದಲಾವಣೆಯ ಕೆಲಸವನ್ನು ಪೂರೈಸಿದ್ದಾರೆ. ದಾನಿಗಳ ಭೇಟಿ ಹಾಗೂ  ಕೆಲಸದ ಮೇಲುಸ್ತುವಾರಿ ವಹಿಸುವುದರಲ್ಲಿ ಮಗ್ನರಾಗಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು : ಇಷ್ಟೆಲ್ಲಾ ಕಾರ್ಯಭಾರಗಳ ನಡುವೆ ಗುಣಮಟ್ಟದ ಶಿಕ್ಷಣಕ್ಕೂ ಒತ್ತು ನೀಡಿದ್ದಾರೆ. ತಾಲೂಕಿನಾದ್ಯಂತ ಬದಲಾವಣೆಯ ಗಾಳಿ ಬೀಸತೊಡಗಿದೆ. ಬದಲಾದ ಬಿ.ಆರ್.ಸಿ ಸನ್ನಿವೇಶ ಗಮನಿಸಿದ ಶಿಕ್ಷಕರು ತಮ್ಮ ಶಾಲಾ ವಾತಾವರಣವನ್ನು ಬದಲಾಯಿಸುವ ಮನಸ್ಸು ಮಾಡಿದ್ದಾರೆ. ಅನೇಕ ಶಾಲೆಗಳು ಪ್ರಗತಿಯತ್ತ ಹೆಜ್ಜೆ ಹಾಕಿವೆ. ಪ್ರಾರಂಭದಲ್ಲಿ ತಾಲೂಕಿನಾದ್ಯಂತ 20ಕ್ಕೂ ಹೆಚ್ಚು ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಪ್ರಾರಂಭವಾಗಿವೆ. ಬಿ.ಆರ್.ಸಿಯ ಸಮಗ್ರ ಚಿತ್ರಣ ಬದಲಾದ್ದರಿಂದ ಮಲ್ಲಿಗೆಯ ನಾಡಲ್ಲಿ ಶಿಕ್ಷಣದ ಪರಿಮಳ ಸೂಸುತ್ತಿದೆ.
ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಎಂತಹ ಕಾರ್ಯವನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ನಮ್ಮ ಬಿ.ಆರ್.ಸಿ ಹೊಸ ರೂಪು ಪಡೆದಿರುವುದೇ ಸಾಕ್ಷಿ. ಇಲ್ಲಿನ ಅಧಿಕಾರಿಗಳು ಆದೇಶಕ್ಕಿಂತ ಕಾರ್ಯ ಮುಖ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಿ ಪಾರದರ್ಶಕವಾಗಿ ಅಭಿವೃದ್ದಿ ಕೆಲಸ  ಮಾಡಿದ್ದಾರೆ. ಮೊದಲು ಇಲ್ಲಿಗೆ ಬರಲು ಎಲ್ಲರಿಗೂ ಒಂದು ರೀತಿಯ ಕಿರಿಕಿರಿ ಎನಿಸುತ್ತಿತ್ತು. ಆದರೆ ಈಗ ಎಲ್ಲರೂ ಖುಷಿಯಿಂದ ಬರುತ್ತಾರೆ.
        ಸುರೇಶ ಅರುಣಿ. (ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು).

ಬಿ.ಆರ್.ಸಿ.ಯ ಬದಲಾದ ಸ್ವರೂಪ ಖುಷಿ ತಂದಿದೆ. ಇಲ್ಲಿನ ಬದಲಾವಣೆಯಂತೆ ಪ್ರತಿ ಸರ್ಕಾರಿ ಶಾಲೆಯನ್ನೂ  ಬದಲಾಯಿಸಲು ಪ್ರತ್ನಿಸುತ್ತೇವೆ. ಗುಣಮಟ್ಟದ  ಶಿಕ್ಷಣಕ್ಕೆ ಅಗತ್ಯವಾದ ಸಂಪನ್ಮೂವನ್ನು ಕ್ರೂಢೀಕರಿಸಲು ಶ್ರಮಿಸುತ್ತಿದ್ದೇವೆ. ತರಬೇತಿಯಲ್ಲಿ ಕಲಿತ ವಿಷಯಗಳು ತರಗತಿ ಕೋಣೆಯಲ್ಲಿ ಬಳಕೆಯಾಗುವಂತೆ ಮೇಲುಸ್ತುವಾರಿ ವಹಿಸಲು ಆಧ್ಯತೆ ನೀಡಿದ್ದೇವೆ.
         ಜಿ.ಕೊಟ್ರೇಶ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೂವಿನಹಡಗಲಿ.

ಆರ್.ಬಿ.ಗುರುಬಸವರಾಜ ಹೊಳಗುಂದಿ
ಸಹ ಶಿಕ್ಷಕರು.
ಸ.ಹಿ.ಪ್ರಾ.ಶಾಲೆ ಬನ್ನಿಕಲ್ಲು
ಹಗರಿಬೊಮ್ಮನಹಳ್ಳಿ (ತಾ) ಬಳ್ಳಾರಿ(ಜಿ)

9902992905

ಹೋಂವರ್ಕ್ನ ಭೂತವೂ, ಮಕ್ಕಳ ಭವಿಷ್ಯವೂ! Home work and children future

ದಿನಾಂಕ 14-08-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ಹೋಂವರ್ಕ್ನ ಭೂತವೂ,  ಮಕ್ಕಳ ಭವಿಷ್ಯವೂ!

ಪಕ್ಕದ ಮನೆಯ ಮೂರು ವರ್ಷದ ಹುಡುಗ ರವಿತೇಜ ಪ್ರತಿದಿನವೂ ನಮ್ಮ ಮನೆಗೆ ಬರುತ್ತಿದ್ದ. ಇತ್ತಿÃಚೆಗೆ ಅವನು ಬರುವುದು ಅಪರೂಪವಾಯಿತು. ಬಂದರೆ ಅದೂ ಸಂಜೆ ಮಾತ್ರ ಯಾವಾಗಲೋ ಒಮ್ಮೆ ಬರುತ್ತಿದ್ದ. ಯಾಕೆ ಹೀಗೆ? ಎಂದು ವಿಚಾರಿಸಿದಾಗ ‘ಅವನು ಶಾಲೆಗೆ ಹೋಗುತ್ತಿದ್ದಾನೆ, ಸಂಜೆ ಹೋಂವರ್ಕ್ ಮಾಡುತ್ತಾನೆ’ ಎಂಬ ಉತ್ತರ ಬಂತು. ಅರೆ! ಅವನಿಗಿನ್ನೂ ಮೂರು ವರ್ಷ ತುಂಬಿಲ್ಲವಲ್ಲ. ಅದ್ಯಾಕೆ ಶಾಲೆಗೆ ಸೇರಿಸಿದಿರಿ? ಎಂದಾಗ, ‘ಇಲ್ಲ ಸರ್, ಮನೆಯಲ್ಲಿ ಅವನ ಕಾಟ ಹೆಚ್ಚಾಗಿದೆ. ಅದಕ್ಕೆ ಶಾಲೆಗೆ ಹಾಕಿದ್ದೆವೆ’ ಎಂದರು. ನನಗೆ ತುಂಬಾ ಬೇಜಾರೆನಿಸಿತು. ‘ನೀವು ಮಾಡಿದ್ದು ಸರಿಯಿಲ್ಲವೇನೋ? ಎನಿಸುತ್ತಿದೆ. ಯೋಚನೆ ಮಾಡಿ ನೋಡಿ’ ಎಂದು ಹೇಳಿ ಬಂದೆ.
ಮೊಟಕಾದ ಬಾಲ್ಯ : ಇದು ಕೇವಲ ಒಬ್ಬ ಬಾಲಕ/ಬಾಲಕಿಯ ಕಥೆಯಲ್ಲ. ವಿಶ್ವದ ಎಲ್ಲಾ ಮಕ್ಕಳ ಬಾಲ್ಯವೂ ಹೀಗೆ ಕಮರುತ್ತಿದೆ. ಆಡಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಪಂಜರದ ಪಕ್ಷಿಗಳನ್ನಾಗಿ ಮಾಡುತ್ತಿದ್ದೆÃವೆ. ಎಲ್ಲದರಲ್ಲೂ ನಮ್ಮ ಮಕ್ಕಳು ಮುಂದಿರಬೇಕೆಂಬ ಬಯಕೆಯಿಂದ ಮಕ್ಕಳನ್ನು ಪೈಪೋಟಿಗೆ ಇಳಿಸಿದ್ದೆÃವೆ. ಇದರಿಂದ ಅವರ ಬಾಲ್ಯ ಮೊಟಕಾಗುತ್ತಿದೆ. ಮಗುವಿನಲ್ಲಿ ಮಾನಸಿಕ, ಬೌದ್ದಿಕ ಹಾಗೂ ಸಾಮಾಜಿಕ ಬೆಳವಣಿಗೆಗಳು ಕುಂಟಿತವಾಗುತ್ತವೆ. ಮಗು ಸಾಮಾಜೀಕರಣಗೊಳ್ಳುವ ಬದಲು ಸಮಾಜಕ್ಕೆ ಕಂಟಕವಾಗುತ್ತದೆ.
ಒತ್ತಾಯವೇ ಒತ್ತಡ :  ‘ನಮ್ಮ ಮಗುವಿಗೆ ಸ್ವಲ್ಪ ಜಾಸ್ತಿ ಹೋಂವರ್ಕ್ ಕೊಡಿ’- ಇದು ಮಕ್ಕಳನ್ನು ಶಾಲೆಗೆ ಕಳಿಸುವ ಬಹುತೇಕ ಪಾಲಕರ ಬೇಡಿಕೆ.  ಹೆಚ್ಚು ಹೆಚ್ಚು ಹೋಂವರ್ಕ್ ಮಾಡಿದರೆ ಮಗು ಬುದ್ದಿವಂತ ಆಗುತ್ತದೆ ಎಂಬುದು ಅವರ ಅನಿಸಿಕೆಯಾಗಿದೆ. ಇನ್ನು ಕೆಲವು ಪಾಲಕರು ಸಂಜೆ ಟಿ.ವಿ. ನೋಡುವುದಕ್ಕಾಗಿ ಮಕ್ಕಳಿಗೆ ಹೆಚ್ಚು ಹೋಂವರ್ಕ್ ಕೊಡಲು ಕೇಳುತ್ತಾರೆ. ಹೋಂವರ್ಕ್ ನೆಪದಲ್ಲಿ ಮಗುವನ್ನು ಟಿ.ವಿ.ಯಿಂದ ದೂರವಿಡುವ ಹುನ್ನಾರ. ಕೆಲ ಮಕ್ಕಳು ಹೋಂವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಇಂತಹ ಸಂಧರ್ಭಗಳಲ್ಲಿ ಪಾಲಕರು ಮಕ್ಕಳ ಕೈಹಿಡಿದು ಶಾಲೆಯವರೆಗೂ ತೆರಳಿ ಶಿಕ್ಷಕರಿಗೆ ಸಮಜಾಯಷಿ ಹೇಳಿ ಬರುವುದನ್ನು ಕಾಣುತ್ತೆÃವೆ. ಈ ಎಲ್ಲಾ ತಾಪತ್ರಯಗಳನ್ನು ತಪ್ಪಿಸಲು ಬಹುತೇಕ ಸಂಧರ್ಭಗಳಲ್ಲಿ ಪಾಲಕರೇ ಮಕ್ಕಳ ಹೋಂವರ್ಕ್ ಮಾಡುವುದುಂಟು.
‘ಯಾಕೋ ಹೋಂವರ್ಕ್ ಮಾಡಿಲ್ಲ?’ ಎಂದು ಶಾಲೆಯಲ್ಲಿ, “ಹೋಂವರ್ಕ್ ಮಗಿಸುವವರೆಗೆ ಊಟವೂ ಇಲ್ಲ!, ನಿದ್ದೆಯೂ ಇಲ್ಲ!” ಎಂದು ಪಾಲಕರು ಮಗುವನ್ನು ಪೀಡಿಸುವುದು ಸಹಜವಾಗಿಬಿಟ್ಟಿದೆ. ಹೋಂವರ್ಕ್ ಕುರಿತ ಇಂತಹ ಹೇಳಿಕೆಗಳು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಪಾಲಕರಿಗೆ ತಿಳಿಯುವುದು ಇನ್ನೂ ಯಾವಾಗ? ಹೋಂವರ್ಕ್ ಕೇವಲ ಬರವಣಿಗೆಗೆ ಮಾತ್ರ ಸೀಮಿತವಾಗಿರುವುದೇ ದುರಂತ. ಕಲಿಕೆಯ ಅಭ್ಯಾಸ/ರೂಢಿಯ ಹೆಸರಿನಲ್ಲಿ ಶಾಲೆಗಳಲ್ಲಿ ಪುಟಗಟ್ಟಲೆ ನೀಡುವ ಹೋಂವರ್ಕ್ನಿಂದ ಮಕ್ಕಳ ಕಲಿಕೆಯೇನೂ ಉನ್ನತ ಮಟ್ಟಕ್ಕೆ ಏರಿಲ್ಲ.
ಹೋಂವರ್ಕ್ ಎನ್ನುವುದು ಮಕ್ಕಳಿಗೆ ಮತ್ತು ಪಾಲಕರಿಗೆ ದುಃಸ್ವಪ್ನ ಮತ್ತು ಹಿಂಸೆಯಾಗಿದೆ. ಪ್ರೌಢಶಿಕ್ಷಣ ಹಂತದಲ್ಲಾದರೆ ಮಕ್ಕಳಿಗೆ ಒಂದಿಷ್ಟು ಮಾನಸಿಕ ಸ್ಥಿಮಿತ ಇರುತ್ತದೆ. ನಾವು ಯಾಕೆ ಕಲಿಯಬೇಕು? ಶಿಕ್ಷಣದಿಂದ ನಮಗಾಗುವ ಲಾಭಗಳೇನು? ಎಂಬುದರ ಬಗ್ಗೆ ಅರಿವು ಇರುತ್ತದೆ. ಆದರೆ ಪ್ರಾಥಮಿಕ ಹಂತದ ಅದರಲ್ಲೂ ಕಿರಿಯ ಪ್ರಾಥಮಿಕ ಹಂತದ ಮಕ್ಕಳಿಗೆ ನಾವು ಯಾಕೆ ಕಲಿಯಬೇಕೆಂಬ ಬಗ್ಗೆ ಕಿಂಚಿತ್ತೂ ಅರಿವು ಇರುವುದಿಲ್ಲ. ಅಂತಹ ಮಕ್ಕಳಿಗೆ ನೀಡುವ ಹೋಂವರ್ಕ್ ಒಂದು ರೀತಿಯ ಹಿಂಸೆಯಲ್ಲವೇ? ಇನ್ನು ಶಾಲಾಪೂರ್ವ ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ಎಲ್.ಕೆ.ಜಿ, ಯು.ಕೆ.ಜಿ, ಪ್ಲೆÃಗ್ರೂಪ್, ಪ್ಲೆÃಹೋಂಗಳ ಮಕ್ಕಳ ಪಾಲಿಗಂತೂ ಹೋಂವರ್ಕ್ ಎನ್ನುವುದು ಕೊರಳ ಉರುಳು ಎನ್ನಬಹುದು.
ಹೋಂವರ್ಕ್ ಏಕೆ ಬೇಕು? : ಮಕ್ಕಳು ಶಾಲೆಯಲ್ಲಿ ಕಲಿತ ಕಲಿಕಾಂಶಗಳನ್ನು ಮನನ ಮಾಡಿಕೊಳ್ಳಲು ಹೋಂವರ್ಕ್ ಅಗತ್ಯ. ಮಕ್ಕಳು ಸ್ವತಂತ್ರವಾಗಿ ಕಲಿಯುವಂತೆ ಮಾಡುವುದು ಹೋವರ್ಕ್ನ ಉದ್ದೆÃಶ. ಹೋಂವರ್ಕ್ ಇಂದಿನ ಮತ್ತು ನಾಳಿನ ತರಗತಿಗಳ ಸ್ನೆÃಹ ಸೇತುವೆಯಾಗಬೇಕು. ಅಂದರೆ ಇಂದಿನ ತರಗತಿಗಳಲ್ಲಿ ಕಲಿತ ಕಲಿಕಾಂಶಗಳನ್ನು ಮನನ ಮಾಡಿಕೊಂಡು ನಾಳಿನ ತರಗತಿಗಳಿಗೆ ಮಗು ಪೂರ್ವ ತಯಾರಿ ನಡೆಸಬೇಕು. ನಾಳೆ ನಾನು ಏನೇನು ಕಲಿಯಬಹುದು ಎಂದು ಮಗು ಊಹಿಸುವಂತಾಗಬೇಕು. ಹೋಂವರ್ಕ್ ಎಂಬುದು ಕಲಿಕಾಂಶ/ಪರಿಕಲ್ಪನೆಯ ಮುಂದಿನ ಭಾಗಕ್ಕೆ ಮಗುವನ್ನು ಕರೆದೊಯ್ಯುವ ಮಾನಸಿಕ ಸಿದ್ದತೆ.
ಹೋಂವರ್ಕ್ನ ವ್ಯಾಪಕ ಲಾಭಗಳು ಹೀಗಿವೆ. ಮಕ್ಕಳಲ್ಲಿ ಉತ್ತಮ ಓದಿನ ಹವ್ಯಾಸ ಬೆಳೆಸುತ್ತದೆ. ಶಾಲೆ ಮತ್ತು ಶಿಕ್ಷಣದ ಬಗೆಗಿನ ಸಕಾರಾತ್ಮಕತೆಯನ್ನು ಇಮ್ಮಡಿಗೊಳಿಸುತ್ತದೆ. ಶಾಲೆ/ತರಗತಿ ಹೊರಗೂ ಸಹ ಸಂತೋಷದಿಂದ ಕಲಿಯಬಹುದು ಎಂಬುದನ್ನು ಮಕ್ಕಳಿಗೆ ತಿಳಿಸುತ್ತದೆ. ಶಾಲೆ ಮತ್ತು ಕುಟುಂಬದ ನಿತ್ಯ ಸಂವಹನದ ಸೇತುವೆ. ಮಗು ಶಾಲೆ ಮತ್ತು ಶಾಲೆಯ ಹೊರಗೆ ಹೇಗೆ ಕಲಿಯುತ್ತಿದೆ ಎಂಬುದನ್ನು ಪಾಲಕರು ತಿಳಿಯಲು ಸಹಕಾರಿ.
ಯಾವ ಹಂತಕ್ಕೆ ಎಷ್ಟು ಹೋಂವರ್ಕ್? : ಇಂದು ಮಗುವಿನ ಆಹಾರ, ಆರೋಗ್ಯ ಮತ್ತು ನಿದ್ರೆಗಳಿಗಿಂತ ಹೋಂವರ್ಕ್ಗೇ ಮೊದಲ ಆಧ್ಯತೆಯಾಗಿದೆ.  ಹೋಂವರ್ಕ್ ಕಡ್ಡಾಯವಾಗಿ ಬೇಕು ಎನ್ನುವುದಾದರೆ ಯಾವ ತರಗತಿಗೆ ಎಷ್ಟು ಹೋಂವರ್ಕ್ ಬೇಕು? ಎಂಬುದು ಚರ್ಚೆಯ ವಿಷಯವಾಗಿದೆ. ‘ಮಗು ನಿನಗೆ ಹೋಂವರ್ಕ್ ಬೇಕೆ?’ ಎಂದು ಕಿರಿಯ ಪ್ರಾಥಮಿಕ ಹಂತದ ಮಕ್ಕಳನ್ನು ಕೇಳಿದರೆ ಬೇಡ ಎನ್ನುತ್ತಾರೆ. “ಪ್ರತೀ ಮಗುವೂ ಅಂದರೆ ಉನ್ನತ ಮತ್ತು ಕಡಿಮೆ ಕಲಿಕಾ ಹಂತದಲ್ಲಿರುವ ಪ್ರತೀ ಮಗುವೂ ಹೋಂವರ್ಕ್ನ್ನು ದ್ವೆÃಷಿಸುತ್ತದೆ” ಎಂದು ಬೋಸ್ಟನ್‌ನ ಮಾನವ ಅಭಿವೃದ್ದಿ ಮತ್ತು ಮನಶಾಸ್ತçಜ್ಞರಾದ ಪ್ರೊ||ಜಾನೈನ್ ಬೆಮ್‌ಪೆಚಾಟ್ ಅಭಿಪ್ರಾಯ ಪಡುತ್ತಾರೆ. ಹೋಂವರ್ಕ್ ಮಗುವಿನ ಮಾನಸಿಕ ಸ್ಥಿಮಿತಕ್ಕೆ ಅನುಗುಣವಾಗಿ ಇರಬೇಕೆಂಬುದು ಶಿಕ್ಷಣ ತಜ್ಞರು ಮತ್ತು ಮನೋವೈದ್ಯರ ವಾದ.

ಹೋಂವರ್ಕ್ ಹೇಗಿರಬೇಕು? : ಮಕ್ಕಳ ಕಲಿಕೆಯಲ್ಲಿ ಪಾಲಕರ ಸಹಭಾಗಿತ್ವ ಅಗತ್ಯ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಾಲಕರು ಕಲಿಯಲು ಮಗುವಿನ ಮೇಲೆ ಮಾತ್ರ ಒತ್ತಡ ಹೇರುತ್ತಾರೆ. ಬದಲಾಗಿ ಮಗು ಚೆನ್ನಾಗಿ ಕಲಿಯಲು ತಾವೇನು ಮಾಡಬೇಕು? ಎಂದು ಬಹುತೇಕರು ಯೋಚಿಸುವುದೇ ಇಲ್ಲ. ಮಗುವಿನ ಸ್ಥಾನದಲ್ಲಿ ನಿಂತು ಕೊಂಚ ಯೋಚಿಸಿದರೆ ಒಂದಿಷ್ಟು ವಿಭಿನ್ನ ಆಯ್ಕೆಗಳು ದೊರೆಯುತ್ತವೆ. ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು.
ಮಗುವಿನ ದೈಹಿಕ, ಮಾನಸಿಕ ಮತ್ತು ಬೌದ್ದಿಕ ವಯಸ್ಸಿಗನುಗುಣವಾಗಿ ಹೋಂವರ್ಕ್ ನೀಡುವುದು/ನೀಡಿಸುವುದು.
ಹೋಂವರ್ಕ್ನಿಂದ ಮಗುವಿನಲ್ಲಿ ಸಂತಸದಾಯಕ ಕಲಿಕೆ ಮೂಡಬೇಕು.
ಹೋಂವರ್ಕ್ ಶಾಲಾ ಕಲಿಕೆಗಿಂತ ವಿಭಿನ್ನವಾಗಿದ್ದು, ಒತ್ತಡ ರಹಿತವಾಗಿರಬೇಕು.
ಹೋಂವರ್ಕ್ನಿಂದ ಮಗು ಹೊಸತನ ಕಲಿಯುವಂತಿರಬೇಕು.
ಹೋಂವರ್ಕ್ ಮಗುವಿನಲ್ಲಿ ಸೃಜನಶೀಲತೆಯನ್ನು ಉತ್ತೆÃಜಿಸುವಂತಿರಬೇಕು.
ಹೋಂವರ್ಕ್ ಎಂಬುದು ತರಗತಿ ಹೊರಗಿನ ಕಲಿಕೆಯನ್ನು ಶಾಲಾ ಕೊಠಡಿಗೆ ಅನ್ವಯಿಸುವಂತಿರಬೇಕು.
ಹೋಂವರ್ಕ್ನಿಂದ ಮಗು ತನಗೆ ಬೇಕಾದ ಜ್ಞಾನವನ್ನು ತಾನೇ ಕಟ್ಟಿಕೊಳ್ಳಲು ಸಶಕ್ತವಾಗಬೇಕು.
ಪಾಲಕರ ಪಾತ್ರ : ಮಗುವಿನ ಹೋಂವರ್ಕ್ ನಿರ್ವಹಣೆಯಲ್ಲಿ ಪಾಲಕರ ಪಾತ್ರ ಮಹತ್ತರವಾದುದು. ಮಗು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಪಾಲಕರು ಭಾವನಾತ್ಮಕ ಬೆಂಬಲ ನೀಡಬೇಕೇ ವಿನಹ ಸಮಸ್ಯೆಯನ್ನು ಪರಿಹರಿಸುವುದಲ್ಲ. ಪಾಲಕರ ಅಲ್ಪ ಸಹಾಯ ಪಡೆದು ಹೋಂವರ್ಕ್ ಮಾಡುವುದು ಕಲಿಕಾರ್ಥಿಯ ಜವಾಬ್ದಾರಿ. ಮಕ್ಕಳೊಂದಿಗೆ ಸಂಭಾಷಣೆ ನಡೆಸುತ್ತ ಅವರೊಂದಿಗೆ ಪ್ರಿÃತಿಯ ಮಾತುಗಳನ್ನಾಡುತ್ತ ಹೋಂವರ್ಕ್ ಮಾಡುವಂತೆ ಪ್ರೆÃರೇಪಿಸಬೇಕು. ಆದಷ್ಟೂ ಅವರ ಆವೇಶಗಳನ್ನು ತಗ್ಗಿಸಬೇಕು. ಶಾಲೆಯಲ್ಲಿ ಮಗುವಿನ ಕಲಿಕಾ ಸಾಮರ್ಥ್ಯಗಳ ಕುರಿತು ಆಗಾಗ್ಗೆ ಶಿಕ್ಷಕರೊಂದಿಗೆ ಮಾತನಾಡಬೇಕು. ಮಗು ಉತ್ತಮ ಕಲಿಕಾ ಪ್ರದರ್ಶನ ನೀಡಿದಾಗ ಶ್ಲಾಘಿಸಬೇಕು. ಮನೆಯಲ್ಲಿ ಚೆನ್ನಾಗಿ ಓದಿದ್ದರಿಂದ ಇಷ್ಟು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು ಎಂದು ಪ್ರೊÃತ್ಸಾಹಿಸಬೇಕು.
ಮಗುವಿನ ಹೋಂವರ್ಕ್ಗಾಗಿ  ನಿತ್ಯವೂ ನಿಗದಿತ ಸಮಯವನ್ನು ಮೀಸಲಿಡಬೇಕು. ಅದು ಹೋಂವರ್ಕ್ ವೇಳೆ ಎಂದು ನಿಗದಿಯಾಗಬೇಕು. ಈ ಸಮಯದಲ್ಲಿ ಒಂದೊಂದು ಹಂತ/ವಿಷಯವನ್ನು ಮಗು ಪೂರ್ಣಗೊಳಿಸಿದಾಗ ಕೊಂಚ ಬಿಡುವು ನೀಡಬೇಕು. ಇದು ಮಗುವಿನ ಅವಧಾನವನ್ನು ಹೆಚ್ಚಿಸುತ್ತದೆ. ಪಾಲಕರು ಮಗುವಿಗೆ ಮಾರ್ಗದರ್ಶಕರಾಗಬೇಕೇ ಹೊರತು ಅವರೇ ಜವಾಬ್ದಾರಿ ಹೋರಬಾರದು.
ಮಗು ಶಾಲಾ ಕೆಲಸದಲ್ಲಿ ನಿರಾಸಕ್ತಿ ತೋರುತ್ತಿದ್ದರೆ ಮತ್ತು ಇತರರಿಂದ ಪಡೆದ ನೋಟ್ಸನ್ನು ಕಾಫಿ ಮಾಡುತ್ತಿದ್ದರೆ ಆ ಮಗು ಅನಪೇಕ್ಷಿತ ಒತ್ತಡದಲ್ಲಿದೆ ಎಂದರ್ಥ. ಅಂತಹ ಸಂಧರ್ಭಗಳಲ್ಲಿ ಪಾಲಕರು ಶಿಕ್ಷಕರೊಂದಿಗೆ ಮಾತನಾಡಿ ಮಗುವಿನ ಒತ್ತಡಕ್ಕೆ ಕಾರಣ ಕಂಡುಕೊಂಡು ನಿವಾರಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಮಗುವಿನ ಭವಿಷ್ಯ ಕಗ್ಗಂಟಾಗುತ್ತದೆ. ಹೋಂವರ್ಕ್ ಮಾಡಲು ಮಗುವಿಗೆ ಸ್ಥಳಾವಕಾಶ ಮಾಡಿಕೊಡಿ. ಅದು ಮಗು ಸ್ನೆÃಹಿ ವಾತಾವರಣದಿಂದ ಕೂಡಿರಬೇಕು. ಮಗು ಅತೀ ಕಡಿಮೆ ಅವಧಾನದ ಮಟ್ಟ ಹೊಂದಿರುತ್ತದೆ. ಹೋಂವರ್ಕ್ ಮುಗಿಸಲು ಹೆಚ್ಚು ಸಮಯ ಬಳಸಿಕೊಂಡರೆ ಮಗುವಿನ ಮೆದುಳಿನಲ್ಲಿ ಒತ್ತಡ ಏರ್ಪಡುತ್ತದೆ ಎಂಬುದನ್ನು ಮನಶಾಸ್ತçಜ್ಞರು ಒತ್ತಿ ಹೇಳುತ್ತಾರೆ.
ಶಿಕ್ಷಕರ ಪಾತ್ರ : ಹೋಂವರ್ಕ್ ನೀಡುವಲ್ಲಿ ಶಿಕ್ಷಕರ ಕಾಳಜಿ ಮತ್ತು ಬದ್ದತೆ ಎದ್ದು ಕಾಣುತ್ತದೆ. ಸೃಜನಶೀಲ ಶಿಕ್ಷಕರು ನೀಡುವ ಹೋಂವರ್ಕ್ ವಿಭಿನ್ನ ಹಾಗೂ ವಿಶಿಷ್ಠತೆಯಿಂದ ಕೂಡಿರುತ್ತದೆ. ಮಗುವೂ ಕೂಡಾ ಸೃಜನಶೀಲತೆ ಬೆಳೆಸಿಕೊಳ್ಳಲು ಬೇಕಾದ ವಾತಾವರಣ ಸೃಷ್ಟಿಸುತ್ತದೆ. ಹಾಗಾಗಿ ಶಿಕ್ಷಕರು ಕೇವಲ ನೇರ ಪ್ರಶ್ನೆಗಳನ್ನು ನೀಡದೇ ಅನ್ವಯಿಕ ಪ್ರಶ್ನೆಗಳನ್ನೂ ನೀಡಬೇಕು. ಹೋಂವರ್ಕ್ ಮಗುವಿನಲ್ಲಿ ಒತ್ತಡ ಹೇರುವಂತಿರಬಾರದು. ಬದಲಾಗಿ ಮಗು ಖುಷಿಯಾಗಿ ಮಾಡಿ ಮುಗಿಸುವಂತಿರಬೇಕು. ‘ಇಷ್ಟೆÃನಾ? ಇನ್ನಷ್ಟು ಇದ್ದಿದ್ದರೆ ಚೆನ್ನಾಗಿತ್ತು’ ಎನ್ನುವಂತಿರಬೇಕು. ಅಂದರೆ ಮಗುವಿನ ಭೌತಿಕ, ಮಾನಸಿಕ, ಶೈಕ್ಷಣಿಕ ಸ್ಥಿತಿಯನ್ನು ಅರ್ಥೈಸಿಕೊಂಡು ಅದನ್ನು ಉತ್ತಮ ಪಡಿಸಲು ಪೂರಕವಾಗುವಂತೆ ಹೋಂವರ್ಕ್ ನೀಡಬೇಕು. ಕೆಲಸದ ಒತ್ತಡದ ನೆಪ ಹೇಳಿ ಕೇವಲ ರೈಟ್ ಮಾರ್ಕ್ ಹಾಕುವುದಲ್ಲ. ಕಡ್ಡಾಯವಾಗಿ ಪರಿಶೀಲಿಸಬೇಕು. ಮಕ್ಕಳು ಮಾಡಿದ ತಪ್ಪನ್ನು ಕೆಂಪು ಮಸಿಯಿಂದ ಸೊನ್ನೆ ಸುತ್ತುವ ಬದಲು ಅದನ್ನು ಸರಿಪಡಿಸಲು ಇರುವ ಮಾರ್ಗವನ್ನು ತಿಳಿಸಬೇಕು. ಹೋಂವರ್ಕ್ನಲ್ಲಿ ಬರವಣಿಗೆಗೆ ನೀಡುವಷ್ಟು ಪ್ರಾಮುಖ್ಯವನ್ನು ಓದುವ ಮತ್ತು ಮಾತನಾಡುವ ಕ್ಷೆÃತ್ರಕ್ಕೂ ನೀಡಬೇಕು. ಆಗ ಮಾತ್ರ ಅದಕ್ಕೊಂದು ನಿರ್ದಿಷ್ಟತೆ ಸಿಗುತ್ತದೆ. ಹೀಗೆ ಮಾಡುವುದರಿಂದ ಹೋಂವರ್ಕ್ ಒತ್ತಡರಹಿತವಾಗಿ ಹ್ಯಾಪಿವರ್ಕ್ ಆಗುವುದರಲ್ಲಿ ಮತ್ತು ಮಕ್ಕಳ ಭವಿಷ್ಯವೂ ಉತ್ತಮವಾಗುವುದರಲ್ಲಿ ಸಂದೇಹವೇ ಇಲ್ಲ. ಅಲ್ಲವೇ?
ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)
9902992905

ಪ್ರಜಾವಾಣಿ 14-08-2017

ಮಕ್ಕಳ ಮೆಚ್ಚಿನ ದೈಹಿಕ ಶಿಕ್ಷಕ

2017ರ ಟೀಚರ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ
ಮಕ್ಕಳ ಮೆಚ್ಚಿನ ದೈಹಿಕ ಶಿಕ್ಷಕ ಟಿ.ಎಂ.ವೀರಭದ್ರಯ್ಯ

ಸಾಮಾನ್ಯವಾಗಿ ದೈಹಿಕ ಶಿಕ್ಷಕರಿಗೆ ಶಾಲೆಯ ಶಿಸ್ತು ಹಾಗೂ ಸ್ವಚ್ಚತೆಯ ಜವಾಬ್ದಾರಿ ವರ್ಷವಿಡೀ ಇರುತ್ತದೆ. ಅದರಲ್ಲೂ ವರ್ಷದ ಮೂರು ತಿಂಗಳು ಮಾತ್ರ ಅಂದರೆ ಕ್ರಿಡಾಕೂಟಗಳು ಮುಗಿಯುವವರೆಗೆ ಮಾತ್ರ ಕಾರ್ಯದ ಒತ್ತಡ ಹೆಚ್ಚು. ಉಳಿದ ದಿನಗಳಲ್ಲಿ ದೈಹಿಕ ಶಿಕ್ಷಣ ಪಠ್ಯ ಹಾಗೂ ಪ್ರಾಯೋಗಿಕ ತರಗತಿಗಳಲ್ಲಿ ತೊಡಗಿರುತ್ತಾರೆ. ಆದರೆ ಇಲ್ಲೊಬ್ಬ ದೈಹಿಕ ಶಿಕ್ಷಕರು ವರ್ಷವಿಡೀ ಮಕ್ಕಳನ್ನು ತರಬೇತು ಮಾಡುವುದರಲ್ಲೆ ಕಾಲ ಕಳೆಯುತ್ತಾರೆ.  ಅವರೇ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಶ್ರಿ.ಗು.ಕ.ಸ.ಮಾ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಕರಾದ ಟಿ.ಎಂ.ವೀರಭದ್ರಯ್ಯ.
ಮಕ್ಕಳಿಗಾಗಿ ಮೀಸಲಾದ ಬದುಕು: ಇವರು ದಿನದ ಹೆಚ್ಚು ಹೊತ್ತು ಮಕ್ಕಳ ಜೊತೆಯಲ್ಲಿಯೇ ಕಾಲ ಕಳೆಯುತ್ತಾರೆ. ಅದರಲ್ಲೆನು ವಿಶೇಷ ಅಂತಿರಾ? ವಿಶೇಷ ಇರೊದೇ ಇವರ ವಿಶೇಷ ಚಟುವಟಿಕೆಗಳಲ್ಲಿ. ಬೆಳಿಗ್ಗೆ 6 ಗಂಟೆಗೆ ಶಾಲಾ ಆವರಣದೊಳಕ್ಕೆ ಬರುವ ಇವರು ಅಲ್ಲಿಯೇ ದೈಹಿಕ ವ್ಯಾಯಾಮದಲ್ಲಿ ತೊಡಗುತ್ತಾರೆ. 6;30ರಿಂದ 7;00 ಗಂಟೆಯೊಳಗೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಆಗಮಿಸುತ್ತಾರೆ. ಆಗಮಿಸಿದ ಎಲ್ಲಾ ಮಕ್ಕಳಿಗೂ ಯೋಗ ಮತ್ತು  ದೈಹಿಕ ಕಸರತ್ತುಗಳನ್ನು ಹೇಳಿಕೊಡುತ್ತಾರೆ. 8;30 ರವರೆಗೆ ಮಕ್ಕಳ ಜೊತೆಗಿದ್ದು ಮನೆಗೆ ತೆರಳುತ್ತಾರೆ. ಪುನಃ ಮನೆಯಿಂದ 9;00 ಗಂಟೆಗೆ ಶಾಲೆಗೆ ಆಗಮಿಸಿದರೆ ಮನೆಗೆ ತೆರಳುವುದು ಸಂಜೆ 7:00ಕ್ಕೆ. ಇದು ಕೇವಲ ಒಂದು ದಿನ ಅಥವಾ ಒಂದು ವಾರದ ಕಥೆಯಲ್ಲ. 20 ವರ್ಷಗಳ ಸೇವಾವಧಿಯುದ್ದಕ್ಕೂ ನಡೆದ ಅತ್ಯಮೂಲ್ಯ ಸೇವಾ ಬದುಕು.
ವೈವಿಧ್ಯಮಯ ಕಾರ್ಯಗಳು:  ಶಾಲಾ ಕೆಲಸದ ವೇಳೆಯಲ್ಲಿಯೂ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಸ್ವಚ್ಛತೆ, ಶಾಲಾವನದ ನಿರ್ವಹಣೆ, ಕ್ರಿಡಾಕೂಟಗಳ ಆಯೋಜನೆ, ವಿವಿಧ ಜಯಂತಿ ಹಾಗೂ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣ ಮತ್ತು ನಿರ್ವಹಣೆ ಹೀಗೆ ಇಡೀ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಇವರದ್ದೆ ಓಡಾಟ. ಜೊತೆಗೆ ತರಗತಿಗಳು ಖಾಲಿ ಇದ್ದಾಗ ಅಲ್ಲಿ ಹಾಜರಾಗಿ ಭಾಷಾ ಆಟಗಳ ಮೂಲಕ ಇಂಗ್ಲಿಷ್ ಬೋಧಿಸುತ್ತಾರೆ. ಶಾಲೆ ಬಿಟ್ಟ ಮಕ್ಕಳನ್ನು ಕರೆತರಲು ಸದಾ ಶ್ರಮಿಸುತ್ತಿರುತ್ತಾರೆ.
ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಪ್ರಭಾತ್‌ಪೇರಿ ಹೊಗಬೇಕಿದ್ದರೆ ಇವರ ಬ್ಯಾಂಡ್‌ಸೆಟ್ ಮುನ್ನಡೆಯುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಕಲಿಸಿದ ಶಿಸ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರದರ್ಶಿತವಾಗುತ್ತದೆ. ಪ್ರಮುಖ ರಾಷ್ಟಿಯ ದಿನಾಚರಣೆಗಳಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಮಕ್ಕಳಿಂದ ಆಕರ್ಷಕ ಕವಾಯತು ಮತ್ತು ಜನಜಾಗೃತಿ ಮೂಡಿಸುವ ಕಿರು ರೂಪಕಗಳ ಪ್ರದರ್ಶನ ಇರುತ್ತದೆ.
ವಿಶೇಷ ಚಟುವಟಿಕೆಗಳು: ಇವರು ಗುರುತಿಸಿಕೊಂಡಿರುವುದು ಇವರ ವಿಶೇಷ ಚಟುವಟಿಕೆಗಳಿಂದ. ಅವುಗಳೆಂದರೆ ತಬಲಾ ವಾದನ ಮತ್ತು ಚಿತ್ರಕಲೆ. ತಬಲ ವಾದನ ಮತ್ತು ಚಿತ್ರಕಲೆ ಇವರ ವಿಶೇಷ ಹವ್ಯಾಸವಾಗಿದ್ದು, ಮಕ್ಕಳಲ್ಲೂ ಅದನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಇವರು ತಬಲ ವಾದನದ ಸಾಥ್ ನೀಡುತ್ತಾರೆ. ಆಯಾ ದಿನದ ವಿಶೇಷಕ್ಕೆ ಅನುಗುಣವಾಗಿ ಸೂಚನಾಫಲಕದಲ್ಲಿ ಅಲಂಕಾರಿಕವಾಗಿ ಬರೆಯುತ್ತಾರೆ. ಜೊತೆಗೆ ಅದಕ್ಕೊಪ್ಪುವ ಮಾಹಿತಿ ನೀಡುವ ಕಿರುಚಿತ್ರವನ್ನೂ ಬರೆಯುತ್ತಾರೆ. ಇದು ನೋಡುಗರಿಗೆ ಅತ್ಯಾಕರ್ಷಕವಾಗಿ ಕಾಣುತ್ತದೆ ಮತ್ತು ದಿನದ ವಿಶೇಷತೆ ತಿಳಿಯುತ್ತದೆ. ದಿನವಿಡೀ ಮಕ್ಕಳ ಜೊತೆ ಹೆಚ್ಚುಹೊತ್ತು ಕಳೆಯುವ ಇವರು ಶಾಲಾ ಅವಧಿಯ ನಂತರ ಹೊಸ ಹೊಸ ಆಟಗಳಲ್ಲಿ ಮಕ್ಕಳನ್ನು ತೊಡಗಿಸುತ್ತಾರೆ. ಶಾಲಾ ಶಿಕ್ಷಕರ ಸಹಕಾರದಿಂದ ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಪ್ರತಿವರ್ಷ ಬೇಸಿಗೆ ಶಿಬಿರ ಆಯೋಜಿಸುತ್ತಾರೆ.
ಮುಡಿಗೇರಿದ ಪ್ರಶಸ್ತಿ ಪುರಸ್ಕಾರಗಳು: 
2004-05 ರಲ್ಲಿ ಎನ್.ಪಿ.ಇ.ಜಿ.ಇ.ಎಲ್ ವತಿಯಿಂದ “ಉತ್ತಮ ಶಿಕ್ಷಕ” ಪುರಸ್ಕಾರ.
2006-07 ರಲ್ಲಿ “ಜಿಲ್ಲಾ ಮಟ್ಟದ ಉತ್ತಮ ದೈಹಿಕ ಶಿಕ್ಷಕ” ಪ್ರಶಸ್ತಿ
2007-08 ರಲ್ಲಿ ಸಿರಗುಪ್ಪದ ಮಾಜಿ ಶಾಸಕ ಸೋಮಲಿಂಗಪ್ಪ ಇವರಿಂದ “ಮಯಾರಶ್ರಿÔ ಪುರಸ್ಕಾರ.
2016-17 ರಲ್ಲಿ “ಜಿಲ್ಲಾ ಉತ್ತಮ ಶಿಕ್ಷಕ” ಪ್ರಶಸ್ತಿ
ವಿಶೇಷ ಸಾಧನೆ : ಒಬ್ಬ ದೈಹಿಕ ಶಿಕ್ಷಕರಾಗಿ ವಿವಿಧ ಹಂತಗಳ ಕ್ರಿಡಾಕೂಟಗಳಿಗೆ ಮಕ್ಕಳನ್ನು ಸಿದ್ದಗೊಳಿಸುವ ಜೊತೆಗೆ ಪ್ರತಿಭಾ ಕಾರಂಜಿ, ಕಲಿಕೋತ್ಸವ, ಯೋಗಾಸನ, ಚಿತ್ರಕಲೆ ಮುಂತಾದ ಸ್ಪರ್ದೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುತ್ತಾರೆ. ಆಗಾಗ್ಗೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸ್ಪರ್ದೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಉತ್ತೆಜಿಸುತ್ತಾರೆ.
ವೃತ್ತಿಗೆ ಸೇರಿದಾಗ ಇದ್ದ ವೃತ್ತಿನಿಷ್ಠೆ ಮತ್ತು ಸಮಯಪ್ರಜ್ಞೆಗಳು ಇಂದಿಗೂ ಮುನ್ನಡೆದಿವೆ. ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಇತರೆ ಶಿಕ್ಷಕರಿಗೆ ಮಾದರಿ ಶಿಕ್ಷಕರಾಗಿ ಸರಳ ಜೀವನ ನಡೆಸುತ್ತಿರುವ ವೀರಭ್ರದ್ರಯ್ಯ ಇತರರಿಗಿಂತ ಭಿನ್ನವಾಗಿದಾರೆ. ಅವರ ನಡೆ ನುಡಿ ಇತರರಿಗೆ ಪ್ರೆÃರಣೆ.
ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು. ಸ.ಹಿ.ಪ್ರಾ.ಶಾಲೆ ಬನ್ನಿಕಲ್ಲು
ಹಗರಿಬೊಮ್ಮನಹಳ್ಳಿ(ತಾ) ಬಳ್ಳಾರಿ(ಜಿ) 
9902992905


ಟೀಚರ್ ಆಗಸ್ಟ್-2017

ತಿನ್ನಲಾಗದ ಚಕ್ಕುಲಿ Millipeed

ಆಗಸ್ಟ್ 2017ರ ಟೀಚರ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ.
ತಿನ್ನಲಾಗದ ಚಕ್ಕುಲಿ

 “ಪಪ್ಪಾ,,, ಬೇಗ ಬಾ ಇಲ್ಲಿ!” ಎಂದು ಮಗಳು ಶ್ವೆತಾ ಕೂಗುತ್ತಿದ್ದಂತೆ, ಪೇಪರ್ ಓದುತ್ತಿದ್ದ ತಂದೆ ಬೆಚ್ಚಿ ಬಿದ್ದರು. ಏನೋ ತೊಂದರೆಯಾಗಿದೆ ಎಂದು ಊಹಿಸಿ ಮನೆಯ ಪಕ್ಕದ ಕೈತೋಟಕ್ಕೆ ದೌಡಾಯಿಸಿದರು. ನೆಲದತ್ತ ಕೈ ತೋರಿಸುತ್ತಾ  ‘ಪಪ್ಪಾ ಇಲ್ನೊಡು! ಇವೇನು? ಎಲ್ಲಿಗೆ ಹೊರಟಿವೆ? ಯಾಕೆ ಹೀಗೆ ಗುಂಪಾಗಿ ಒಂದರ ಮೇಲೊಂದು ಹೊರಟಿವೆ? ಎಂದು ಮರ‍್ನಾಲ್ಕು ಪ್ರಶ್ನೆಗಳನ್ನು ಒಮ್ಮೆಲೇ ಹೊರ ಹಾಕಿದಳು. ‘ಪುಟ್ಟಾ ಇವು ಸಹಸ್ರಪದಿಗಳು. ಇಂಗ್ಲಿಷಿನಲ್ಲಿ ಇವುಗಳನ್ನು ಮಿಲ್ಲಿಪೀಡ್ ಎಂದೂ ಕರೆಯುತ್ತಾರೆ. ಇವು ಆಹಾರ ಹುಡುಕಿ ಹೊರಟಿವೆ. ಇವಿನ್ನೂ ಎಳೆಯ ಕೀಟಗಳು. ತಮ್ಮ ರಕ್ಷಣೆಗಾಗಿ ಹೀಗೆ ಗುಂಪಿನಲ್ಲಿ ಚಲಿಸುತ್ತವೆ. ಸ್ವಲ್ಪ ಬಲಿಷ್ಟವಾದ ನಂತರ ಒಂದೊಂದೇ ಸಂಚರಿಸುತ್ತವೆ’ ಎಂದು ಅವಳ ಪ್ರಶ್ನೆಗೆ ಉತ್ತರಿಸಿದರು.
ಅಷ್ಟು ಹೇಳಿ ಮೊಬೈಲ್‌ನಲ್ಲಿ ಅವುಗಳ ಫೋಟೋ ತೆಗೆಯಲು ಪ್ರಾರಂಭಿಸಿದರು. ಮರ‍್ನಾಲ್ಕು ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಂತೆ ಅವುಗಳೆಲ್ಲಾ ಚಕ್ಕುಲಿಯಂತೆ ಸುರುಳಿಯಾಕಾರದಲ್ಲಿ ಸುತ್ತಿಕೊಳ್ಳಲು ಆರಂಭಿಸಿದವು. ‘ಪಪ್ಪಾ ಯಾಕೆ ಹೀಗೆ ಚಕ್ಕುಲಿಯಂತೆ ಸುತ್ತಿಕೊಂಡವು?’ ಎಂಬ ಮತ್ತೊಂದು ಪ್ರಶ್ನೆ ಹಾಕಿದಳು. ಕ್ಯಾಮೆರಾ ಬೆಳಕು ಬಿದ್ದಿದ್ದರಿಂದ ಹೀಗೆ ಸುತ್ತಿಕೊಂಡಿರಬೇಕೆಂದು ಹೇಳಿದರು. ಆದರೆ ಅವುಗಳು ಸುತ್ತಿಕೊಂಡದ್ದು ಬೇರೆಯದಕ್ಕೆ ಎಂದು ನಂತರ ತಿಳಿಯಿತು. ಅವುಗಳ ಗುಂಪಿನ ಮೇಲೆ ಕಂಬಳಿಹುಳ (ಮೈತುಂಬಾ ರೋಮವಿರುವ ಕೀಟ) ಹರಿದು ಬಂದಿತ್ತು. ‘ಕಂಬಳಿ ಹುಳುವೂ ಒಂದು ಕೀಟವಲ್ಲವೇ? ಆದರೂ ಏಕೆ ಹೀಗೆ ಸುತ್ತಿಕೊಂಡವು? ಎಂದು ಮತ್ತೆ ಪ್ರಶ್ನಿಸಿದಳು.  ಅವು ಇನ್ನೊಂದು ಜೀವಿಯಿಂದ ರಕ್ಷಿಸಿಕೊಳ್ಳಲು ಹೀಗೆ ಸುರುಳಿಯಾಕಾರದಲ್ಲಿ ಸುತ್ತಿಕೊಂಡು ತಮ್ಮನ್ನು ತಾವು ರಕ್ಷಸಿಕೊಳ್ಳುತ್ತವೆ ಎಂದು ಅವಳ ತಂದೆ ಹೇಳಿದರು.  ಅವಳ ಪ್ರಶ್ನೆಗಳ ಸುರಿಮಳಗೆ ಉತ್ತರವಾಗಿ ಕೆಳಗಿನ ವಿವರಣೆ ನೀಡಿದ್ದಾರೆ. ಇದು ನಿಮಗೂ ಉಪಯೋಗವಾಗುತ್ತದೆ. ಓದಿ ತಿಳಿದುಕೊಳ್ಳಿ.
ದೇಹ ರಚನೆ :
ಆರ್ತೋಪೋಡ ಕುಟುಂಬಕ್ಕೆ ಸೇರಿದ ಇವುಗಳ ದೇಹ ಉದ್ದವಾದ ಕೊಳವೆ ಆಕಾರದಲ್ಲಿರುತ್ತದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಇವು ತಂಪಾದ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ತಲೆಯ ಭಾಗ ಹೊರತುಪಡಿಸಿ ಪ್ರತೀ ಭಾಗದಲ್ಲೂ ನಾಲ್ಕು ಕಾಲುಗಳನ್ನು ಹೊಂದಿರುತ್ತವೆ. ಕಾಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇವುಗಳಿಗೆ ಸಹಸ್ರಪದಿಗಳು ಎಂದು ಕರೆದಿರಬಹುದು. ನಿಜವಾಗಿಯೂ ಇವುಗಳಿಗೆ ಸಾವಿರ ಕಾಲುಗಳೇನೂ ಇರುವುದಿಲ್ಲ. ಇವುಗಳು ನಾಲ್ಕುನೂರರಿಂದ ಏಳುನೂರು ಕಾಲುಗಳನ್ನು ಹೊಂದಿರುತ್ತವೆ. ಕಾಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನಡಿಗೆ ತುಂಬಾ ನಿಧಾನವಾಗಿರುತ್ತದೆ.
ಆಹಾರ ಮತ್ತು ಬೆಳವಣಿಗೆ :
ಸಹಸ್ರಪದಿಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣದಲ್ಲಿರುತ್ತವೆ. ಮಳೆಗಾಲದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುವ ಇವುಗಳು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ತಂಪಾದ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಅಡಗಿರುತ್ತವೆ. ಒಣಗಿದ ಮತ್ತು ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರವಾಗಿದೆ. ಕೆಲವು ಜಾತಿಯ ಸಹಸ್ರಪದಿಗಳು ಎರೆಹುಳು ಹಾಗೂ ಕೆಲವು ಕೀಟಗಳನ್ನು ತಿನ್ನುತ್ತವೆ. ಕೆಲ ಜಾತಿಯ ಸಹಸ್ರಪದಿಗಳು ಸಸ್ಯಗಳ ಎಳೆ ಚಿಗುರನ್ನು ತಿನ್ನುತ್ತವೆ.
ಹೆಣ್ಣುಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿ ಮೊಟ್ಟೆಗಳನ್ನು ಇಡುತ್ತದೆ. ಕೆಲವು ಹುಳುಗಳು ಹತ್ತರಿಂದ ಮೂರುನೂರು ಮೊಟ್ಟೆಗಳನ್ನಿಡುತ್ತದೆ. ಪ್ರಕೃತಿಯ ಉಷ್ಣಾಂಶ ಹಾಗೂ ಇತರೆ ಕಾರಣಗಳಿಂದ ಕೆಲ ಮೊಟ್ಟೆಗಳು ನಾಶವಾಗುತ್ತವೆ. ಮರಿ ಹುಟ್ಟಿದಾಗ ದೇಹದ ಗಾತ್ರ ಚಿಕ್ಕದಾಗಿರುತ್ತದೆ ಹಾಗೂ ಕಾಲುಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ನಂತರ ಹೊರಚರ್ಮ ಎರಡು ಮೂರು ಬಾರಿ ಕಳಚಿ ದೊಡ್ಡದಾಗಿ ಬೆಳೆಯುತ್ತವೆ.
ರಕ್ಷಣಾ ತಂತ್ರ : 
ಸಹಸ್ರಪದಿಗಳ ರಕ್ಷಣಾ ತಂತ್ರ ಅತ್ಯಂತ ವಿಸ್ಮಯಕಾರಿ. ವೇಗವಾಗಿ ಓಡಲಾರದ, ಕಚ್ಚಲು ಅಥವಾ ಚುಚ್ಚಲು ಯಾವುದೇ ಅಂಗಗಳಿಲ್ಲ ಇವು ಬೇರೆ ಜೀವಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ನಿರುಪದ್ರವಿಗಳಾದ ಇವು ಇತರೆ ಜೀವಿಗಳಿಂದ ರಕ್ಷಸಿಕೊಳ್ಳಲು ದೇಹವನ್ನು ಚಕ್ಕುಲಿಯಂತೆ ಸುರುಳಿಯಾಗಿ ಸುತ್ತಿಕೊಂಡು ವೈರಿಗಳನ್ನು ಗಲಿಬಿಲಿಗೊಳಿಸುತ್ತವೆ. ದೇಹವನ್ನು ಸುತ್ತಿಕೊಳ್ಳುವಾಗ ಕಾಲುಗಳಿಗೆ ಘಾಸಿಯಾಗದಂತೆ ಹೊರಗೆ ಎಳೆದುಕೊಳ್ಳುತ್ತವೆ. ಚಿಕ್ಕವಿರುವಾಗ ಗುಂಪಾಗಿ ಚಲಿಸುವ ಇವುಗಳು ದೊಡ್ಡದಾಗಿ ಬೆಳೆದಂತೆ ಒಂಟಿಯಾಗಿ ಸಂಚರಿಸತೊಡಗುತ್ತವೆ.
ಕೆಲವು ಜಾತಿಯ ಸಹಸ್ರಪದಿಗಳು ತಮ್ಮ ರಕ್ಷಣೆಗೆ ರಸಾಯನಿಕ ಅಸ್ತç ಪ್ರಯೋಗಿಸುತ್ತವೆ. ವೈರಿಗಳನ್ನು ದೂರ ಓಡಿಸಲು ಕೆಟ್ಟ ವಾಸನೆ ಸ್ರವಿಸುತ್ತವೆ. ಕೆಲವು ವೇಳೆ ಚಿಕ್ಕ ಚಿಕ್ಕ ಕೀಟಗಳು ಸುಡುವಂತಹ ರಸಾಯನಿಕಗಳನ್ನು ಸ್ರವಿಸುತ್ತವೆ. ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟಿದರೆ ಕೆಲವು ಸೋಂಕುರೋಗಗಳಾದ ಕಜ್ಜಿ ಅಥವಾ ಮೈಕಡಿತ ಉಂಟಾಗುತ್ತದೆ. ಹೀಗಾಗಿ ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟದಂತೆ ಎಚ್ಚರ ವಹಿಸಬೇಕು.
ಅವಸಾನದ ಅಂಚಿನತ್ತ,,, :
ಮಾನವ ಈ ಭೂಮಿ ಮೇಲೆ ವಾಸಿಸುವ ಮೊದಲೇ ಅಂದರೆ ನಾಲ್ಕುನೂರು ಮಿಲಿಯನ್ ವರ್ಷಗಳಿಗಿಂತ ಹಿಂದಿನಿಂದಲೂ ಭೂಮಿಯ ಮೇಲೆ ವಾಸಿಸುತ್ತಿವೆ. ಕಾಲದಿಂದ ಕಾಲಕ್ಕೆ ಆದ ಬದಲಾವಣೆಗಳಿಗೆ ಹೊಂದಿಕೊಂಡು ಬದುಕುತ್ತಾ ಬಂದಿವೆ. ಆದರೆ ಇತ್ತಿÃಚೆಗೆ ಮಾನವನ ಅತಿಯಾದ ಉಪಟಳದಿಂದ ಇವುಗಳ ಸಂತತಿ ಕಡಿಮೆಯಾಗುತ್ತಿದೆ. ಮನೆಯಂಗಳ ಹಾಗೂ ಇನ್ನಿತರೇ ಸ್ಥಳಗಳಲ್ಲಿ ಸಿಮೆಂಟ್ ಅಥವಾ ಕಲ್ಲಿನ ನೆಲಹಾಸಿನಿಂದ ಇವುಗಳ ಓಡಾಟಕ್ಕೆ ಹಾಗೂ ಆವಾಸಕ್ಕೆ ತೊಂದರೆಯಾಗುತ್ತಿದೆ. ರಸಾಯನಿಕಗಳ ಬಳಕೆಯಿಂದ ಪರಿಸರ ಕಲಿಷಿತಗೊಂಡಿದ್ದು, ಅದರಲ್ಲಿ ಭೂಮಿಯೂ ವಿಷಮಯ ಆಗಿರುವುದರಿಂದ ಇವುಗಳ ಜೀವಕ್ಕೆ ಕುತ್ತು ಬಂದಿದೆ. ಪರಿಸರ ಮಾಲಿನ್ಯ ಹಾಗೂ ಜಾಗತಿಕ ತಾಪಮಾನಗಳ ಪರಿಣಾಮದಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದೂ ಇವುಗಳ ಸಂತತಿ ಕಡಿಮೆಯಾಗಲು ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಇವು ನಮ್ಮಿಂದ ಕಣ್ಮರೆಯಾಗುತ್ತವೆ. ಜೀವ ವೈಧ್ಯತೆಯ ಕೊಂಡಿಯೊಂದು ಕಳಚಲಿದೆ.
ಆರ್.ಬಿ.ಗುರುಬಸವರಾಜ. ಹೊಳಗುಂದಿ
ಹಡಗಲಿ(ತಾ) ಬಳ್ಳಾರಿ(ಜಿ) 583219
9902992905

ಟೀಚರ್ ಆಗಸ್ಟ್-2017




July 8, 2017

ಟಿ.ಪಿ.ಡಿ ಮಾಡ್ಯೂಲ್ಸ್ TPD MODULES

ದಿನಾಂಕ 05-07-2017ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಹೊಸ ಪರಿಕಲ್ಪನೆಯ ಶೈಕ್ಷಣಿಕ ಅಭಿವೃದ್ದಿ ಮಾದರಿಗಳು


ಸಹವರ್ತಿ ಕಲಿಕೆ PEER LEARNING

ದಿನಾಂಕ 03-07-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಸಹವರ್ತಿ ಕಲಿಕೆ ಕೂಡಿ ಕಲಿಯುವ ಸುಖ


June 28, 2017

ಪಠ್ಯೇತರ ಚಟುವಟಿಕೆ CO CURRICULAR ACTIVITIES

22 ಜೂನ್ 2017ರ ಸುಧಾದಲ್ಲಿ ಪ್ರಕಟವಾದ ಬರಹ
ಪಠ್ಯೇತರ ಚಟುವಟಿಕೆ ಮಹತ್ವ ಅರಿಯಿರಿ

ಬೀಗ ರಿಪೇರಿಯವ KEY REPEARER

ದಿನಾಂಕ 21-5-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ
ಪರೀಕ್ಷೆ ಬರೆಸಿದ ಬೀಗ ರಿಪೇರಿಯವ

ಆಟಿಕೆಗಳತ್ತ ಇರಲಿ ಚಿತ್ತ CHILDREN TOYS

25  ಮೇ 2017 ರ ಸುಧಾದಲ್ಲಿ ಪ್ರಕಟವಾದ ಬರಹ
ಆಟಿಕೆಗಳತ್ತ       ಇರಲಿ ಚಿತ್ತ


ಒಂಟಿತನ ಕಾಡದಿರಲಿ OVERCOMING LONLINESS

ದಿನಾಂಕ  3-5-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ
ಕಾಡದಿರಲಿ ಒಂಟಿತನ  ಒಂಟಿ ಒಬ್ಬಂಟಿ ನೀವಲ್ಲ

ವಿಶ್ವ ಜಲದಿನ WORLD WATER DAY

ದಿನಾಂಕ 22-03-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ
ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ

ವಿಜಯ್ ಇಟ್ಟಿಗಿ VIJAY ITTIGI BIRDS WATCHER

ದಿನಾಂಕ 15-3-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ
ಪಕ್ಷಿಪ್ರೇಮಿ ವಿಜಯ್ ಇಟ್ಟಿಗಿ

ಕೂಲಾಗಿರಲಿ ಸ್ಮಾರ್ಟ್ ಪೋನ್ COOL YOUR SMART PHONE

ದಿನಾಂಕ 07-03-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ
ಬೇಸಿಗೆಯಲ್ಲಿ ಕೂಲಾಗಿರಲಿ ಸ್ಮಾರ್ಟ್ ಫೋನ್


ಎಕ್ಸಾಂ ಟಾನಿಕ್ EXAM TONIC

ದಿನಾಂಕ 21-2-2017ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ಬರಹ
ಮಕ್ಕಳಿಗೆ ಸ್ಥೈರ್ಯ ಧೈರ್ಯ ತುಂಬಿ

ನೋ ಬ್ಯಾಗ್ ಡೇ NO BAG DAY

ದಿನಾಂಕ 21-1-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ
ಕಲಿಕೆಯ ಹೊಸ ನೋಟ ನೋ ಬ್ಯಾಗ್ ಡೇ