September 29, 2014

ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ

ದಿನಾಂಕ 29-09-2014 ರಂದು ಪ್ರಜಾವಾಣಿಯ "ಶಿಕ್ಷಣ" ಪುರವಣಿಯಲ್ಲಿ ಪ್ರಕಟವಾದ  'ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ' ಎಂಬ ಲೇಖನ
                    ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ
    ಅಂತೂ ಇಂತು ನಿತ್ಯಾನಂದನ ಪುರುಷತ್ವ ಪರೀಕ್ಷೆ ನಡೆಯಿತು. ಇದರ ವಿಸ್ಕೃತ ವರದಿಯನ್ನು ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಈ ವರದಿಯನ್ನಾಧರಿಸಿ ನ್ಯಾಯಾಲಯ ನ್ಯಾಯ ತೀರ್ಮಾನ ಮಾಡುತ್ತದೆ. ಇಂತಹ ಹಲವು ಅಧಿಕೃತವಾದ ವೈಜ್ಞಾನಿಕ ವರದಿಯನ್ನು ನ್ಯಾಯಾಲಯಗಳಿಗೆ ಸಲ್ಲಿಸುವ ಏಕೈಕ ಸಂಸ್ಥೆ ವಿಧಿವಿಜ್ಞಾನ ಅಥವಾ ನ್ಯಾಯವಿಜ್ಞಾನ ಸಂಸ್ಥೆ. ವಿಧಿವಿಜ್ಞಾನ ಅಥವಾ  ಫೋರೆನ್ಸಿಕ್ ಸೈನ್ಸ್ ಎಂಬುದು ನ್ಯಾಯಾಂಗ ವ್ಯವಸ್ಥೆಗೆ ನಿರ್ದಿಷ್ಟವಾದ ಮತ್ತು ಪರಿಪೂರ್ಣವಾದ ಸಾಕ್ಷ್ಯಾಧಾರಗಳನ್ನು ಒದಗಿಸುವ ವೈಜ್ಞಾನಿಕ ಸಂಸ್ಥೆಯಾಗಿದೆ.
ಏನಿದು ಫೋರೆನ್ಸಿಕ್ ಸೈನ್ಸ್?
    ಸರಳವಾಗಿ ಹೇಳುವುದಾದರೆ ನ್ಯಾಯವಿಜ್ಞಾನ ಎನ್ನುವುದು ಕಾನೂನಿನ ವಿಜ್ಞಾನ. ನ್ಯಾಯಾಂಗ ವ್ಯವಸ್ಥೆಯ ನಿರ್ಣಾಯಕ ಅಂಶಗಳಿಗೆ ಅಗತ್ಯವಿರುವ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾದ ಪೂರಕ ದಾಖಲೆಗಳೊಂದಿಗೆ ಒದಗಿಸುವ ಅನ್ವಯಿಕ ವಿಜ್ಞಾನ ಕ್ಷೇತ್ರವಾಗಿದೆ. ಇದು ಅಪರಾಧದ ಸುಳಿವನ್ನು ಪತ್ತೆ ಹಚ್ಚುವ ಮತ್ತು ಪರೀಕ್ಷಿಸುವ ಕಾರ್ಯ ಮಾಡುತ್ತದೆ. ಇದೊಂದು ಪಿ.ಯು.ಸಿ. ನಂತರದ ಕೋರ್ಸ.
ಏಕೆ ಈ ಕೋರ್ಸ?
    ಉಜ್ವಲ ಭವಿಷ್ಯ ಹೊಂದಿದ್ದು, ಬೇರೆಯವರಿಗಿಂತ ಭಿನ್ನವಾಗಿರಲು ಬಯಸುವ ಅನೇಕ ವಿದ್ಯಾರ್ಥಿಗಳಿಂದು ಸಾಂಪ್ರದಾಯಿಕ ಕೋರ್ಸಗಳಾದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಹೊರತು ಪಡಿಸಿ ಕೆಲವು ಉತ್ತಮ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಏಕೆಂದರೆ ನಾಗಾಲೋಟದ ಜೀವನ ಕೆಲವರಿಗೆ ಬೇಸರ ತರುತ್ತದೆ. ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರದಲ್ಲಿ ಆಸಕ್ತಿ, ಪ್ರತಿಭೆ ಹಾಗೂ ಪ್ರಾವೀಣ್ಯತೆ ಇದ್ದವರಿಗೆ ನ್ಯಾಯವಿಜ್ಞಾನ ಕೋರ್ಸ ಹೆಚ್ಚು ಸೂಕ್ತವಾದುದು. ಈ ಕೋರ್ಸ ಪೂರೈಸಿದವರಿಗೆ ಸದ್ಯಕ್ಕೆ ಭಾರತದಲ್ಲಿ ವಿಫುಲ ಅವಕಾಶಗಳಿವೆ. 2010 ರಲ್ಲಿ 13000 ಅಭ್ಯರ್ಥಿಗಳು ಈ ಕೋರ್ಸನ ಅಡಿಯಲ್ಲಿ ಸರ್ಕಾರಿ ಹುದ್ದೆ ಗಳಿಸಿಕೊಂಡಿದ್ದು,  ಈಗ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2020ರ ವೇಳೆಗೆ ಇದರ ಬೇಡಿಕೆ ಗಣನೀಯವಾಗಿ ಹೆಚ್ಚಲಿದೆ.
ಬಳಕೆ ಎಲ್ಲೆಲ್ಲಿ? ಹೇಗೆ ?
    ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ವಿವಿಧ ವೈಜ್ಞಾನಿಕ ಮತ್ತು ಪ್ರಾಯೋಗಿಕ ವಿಧಾನಗಳು ಮತ್ತು ಅನ್ವಯಿಕ ತತ್ವಗಳ ಮೂಲಕ ಸಾಕ್ಷ್ಯ ಒದಗಿಸುವಲ್ಲಿ ಬಳಸುತ್ತಾರೆ.
    ಅಪರಾಧದ ಸ್ಥಳದಲ್ಲಿ ಸಂಗ್ರಹಿಸಿದ ಸುಳಿವುಗಳ ತೀವ್ರ ವಿಶ್ಲೇಷಣೆಯಲ್ಲಿ ಬಳಸುತ್ತಾರೆ.
    ಅಪರಾಧದ ಸ್ಥಳದಿಂದ ಶಂಕಿತ ವಸ್ತುಗಳನ್ನು ಸಂಗ್ರಹಿಸುವುದು ಹಾಗೂ ಅವುಗಳನ್ನು ಪ್ರಯೋಗಾಲಯಗಳಲ್ಲಿ ಕ್ರೂಢೀಕರಿಸಿ ಸುಳಿವುಗಳನ್ನು ವಿಶ್ಲೇಷಿಸಿ ನ್ಯಾಯ ನಿರ್ಣಯಕ್ಕೆ ಸೂಕ್ತ ಸಾಕ್ಷಿ ಒದಗಿಸುವಲ್ಲಿ ಬಳಸುತ್ತಾರೆ.
    ಅಪರಾಧ ಸ್ಥಳದಿಂದ ಸಂಗ್ರಹಿಸಿದ ರಕ್ತ, ಜೊಲ್ಲು, ಕೂದಲು, ಹೆಜ್ಜೆಗುರುತು, ಗಾಲಿ/ಚಕ್ರದ ಗುರುತು, ಬೆರಳಚ್ಚು, ಇತ್ಯಾದಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಹಾಯಕ.
    ಅಪರಾಧ ತನಿಖೆ ನಡೆಸಲು ಸಹಾಯಕ.
    ನ್ಯಾಯಾಂಗ ವೃತ್ತಿಪರರಿಗೆ(ವಕೀಲರಿಗೆ) ಬೋಧನೆ ಮಾಡಲು ಮತ್ತು ಮಾಧ್ಯಮ ವರದಿಗಾರಿಕೆಗೆ(ಅಪರಾಧ ವಿಭಾಗ) ಸಹಾಯಕ.
    ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯವಿಜ್ಞಾನ ಮತ್ತು ವಿಶ್ಲೇಷಣೆಗೆ ಸಂಬಂಧಿಸಿದ ಸಾಕ್ಷಿಗಳನ್ನು ಮತ್ತು ಮಾಹಿತಿಗಳನ್ನು ಒದಗಿಸಲು ಈ ಕೋರ್ಸ ಸಹಾಯಕ.
    ವೈದ್ಯಕೀಯದಲ್ಲಿ ವಿಶೇಷ ಪರಿಣಿತಿ ಪಡೆಯಲು ಮತ್ತು  ಮರಣೋತ್ತರ ಪರೀಕ್ಷೆ ಮಾಡುವ ಅರ್ಹತೆಗಾಗಿ ಈ ಕೋರ್ಸ ಅವಶ್ಯಕ.
ವಿದ್ಯಾರ್ಹತೆ : ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಭಾಗ ಅಪೇಕ್ಷಣೀಯ. ಅದರಲ್ಲೂ ಮುಖ್ಯವಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳ ಅಧ್ಯಯನ ಅವಶ್ಯಕ. ಬಿ.ಎಸ್ಸಿ ಮತ್ತು ಕಾನೂನು ಪದವಿ ಪಡೆದವರೂ ಈ ಕೋರ್ಸ ಸೇರಬಹುದಾಗಿದೆ.
ಕೋರ್ಸನ ವಿಧಗಳು :
•    3 ವರ್ಷದ ಪದವಿ ಕೋರ್ಸ(ಬಿ.ಎಸ್ಸಿ)
•    2 ವರ್ಷದ ಸ್ನಾತಕೋತ್ತರ ಪದವಿ ಕೋರ್ಸ(ಎಂ.ಎಸ್ಸಿ)
•    1 ಅಥವಾ 2 ವರ್ಷದ ಡಿಪ್ಲೋಮಾ ಕೋರ್ಸ
•    1 ವರ್ಷದ ಸರ್ಟಿಫಿಕೆಟ್ ಕೋರ್ಸ
ಕೋರ್ಸನಲ್ಲಿ ಏನಿರುತ್ತದೆ ?
    ನ್ಯಾಯವಿಜ್ಞಾನದ ಮೂಲಾಂಶಗಳು, ನೀತಿ ನಿಯಮಗಳು, ವಿಧಾನಗಳು, ಕಾನೂನುಗಳು, ಅಡ್ಡ ಪರೀಕ್ಷೆಗಳು,
    ಅಪರಾಧ ಸನ್ನಿವೇಶದ ಸಾಕ್ಷಿ ಸಂಗ್ರಹ ಮತ್ತು  ತನಿಖೆ
    ಭೌತಿಕ ಸಾಕ್ಷ್ಯಾಧಾರಗಳ ಸಂಸ್ಕರಣೆ ಮತ್ತು ತನಿಖೆ
    ಕೂದಲು, ಎಳೆ ಹಾಗೂ ಇತರೆ ಸೂಕ್ಷ್ಮ ವಸ್ತುಗಳ ಪರೀಕ್ಷಣೆ
    ವಿಷವಿಜ್ಞಾನ ಮತ್ತು ನ್ಯಾಯವಿಜ್ಞಾನ
    ಡಿ.ಎನ್.ಎ ಮತ್ತು ಸಿರಮ್‍ಶಾಸ್ತ್ರ
    ದಾಖಲೆಗಳ ಪ್ರಶ್ನಿಸುವಿಕೆ ಮತ್ತು ಕೈಬರಹ ಪರೀಕ್ಷಣೆ
    ಶಂಕಿತ ವಸ್ತುಗಳ ಮೇಲಿನ ಬೆರಳಚ್ಚು ಪರೀಕ್ಷೆ
    ಫಿರಂಗಿ, ಬಂದೂಕು, ಸಿಡಿಮದ್ದುಗಳಂತಹ ಸ್ಫೋಟಕಗಳ ತನಿಖೆ
    ಫೋರೆನ್ಸಿಕ್ ಸೈಕಾಲಜಿ, ಮಾನವಶಾಸ್ತ ಹಾಗೂ ವಿಧಿವಿಜ್ಞಾನ ಇಂಜಿನಿಯರಿಂಗ್
    ನ್ಯಾಯ ಕೀಟಶಾಸ್ತ್ರ
    ವನ್ಯಜೀವಿ ನ್ಯಾಯವಿಜ್ಞಾನ
    ಮಾಧ್ಯಮ ವರದಿಗಾರಿಕೆ ಹಾಗೂ ಕಾನೂನುಗಳು
    ಕೋರ್ಸನ ನಂತರ ಪ್ರಾಯೋಗಿಕ ಅನುಭವ(ಇಂಟರ್ನಶಿಪ್) ಪಡೆಯುವುದು ಮುಖ್ಯ. ಇಂಟರ್ನಶಿಪ್ ಅವಧಿಯಲ್ಲಿ ಸ್ಟೈಫಂಡರಿ ಇರುತ್ತದೆ. ಇಂಟರ್ನಶಿಪ್‍ನಿಂದ ಅನುಭವದ ಜೊತೆಗೆ ಬೇರೆ ಬೇರೆ ಕಡೆ ಉದ್ಯೋಗಾವಕಾಶಗಳು ದೊರೆಯುತ್ತವೆ.
ವೆಚ್ಚದಾಯಕವೇನಲ್ಲ !
    ವೈದ್ಯಕೀಯ ಶಿಕ್ಷಣ ಮತ್ತು ಇಂಜಿನಿಯರಿಂಗ್ ಶಿಕ್ಷಣಗಳಿಗೆ ಹೋಲಿಸಿದರೆ ಫೋರೆನ್ಸಿಕ್ ಸೈನ್ಸ್ ವೆಚ್ಚದಾಯಕವೇನಲ್ಲ. ಕಾಲೇಜುಗಳ ಗುಣಮಟ್ಟ ಹಾಗೂ ವ್ಯವಸ್ಥೆಯ ಮೇಲೆ ಶುಲ್ಕ ನಿಗದಿಯಾಗಿರುತ್ತದೆ. ಭಾರತದಲ್ಲಿ ಈ ಕೋರ್ಸನ ಒಟ್ಟಾರೆ ವೆಚ್ಚ ರೂ.2 ರಿಂದ 3 ಲಕ್ಷಗಳು ಮಾತ್ರ. ಇದರಲ್ಲಿ ಬಹುಪಾಲು ಶುಲ್ಕ ಪ್ರಯೋಗಾಲಯ ವೆಚ್ಚಕ್ಕೆ ಮೀಸಲಿರುತ್ತದೆ. ಪ.ಜಾತಿ ಮತ್ತು ಪ.ಪಂಗಡದವರು ಹಾಗೂ ಅಂಗವಿಕಲರಿಗೆ ಶುಲ್ಕ ವಿನಾಯಿತಿ ಇರುತ್ತದೆ. ಜೊತೆಗೆ ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯವೂ ಇರುತ್ತದೆ. ಹಾಗಾಗಿ ಈ ಕೋರ್ಸ ವೆಚ್ಚದಾಯಕವೇನಲ್ಲ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ
    ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಫೋರೆನ್ಸಿಕ್ ಸೈನ್ಸ್ ಪಡೆದವರಿಗೆ ತುಂಬಾ ಬೇಡಿಕೆ ಇದೆ. ಬಹುತೇಕ ವೈಟ್ ಕಾಲರ್ ಅಪರಾಧದ ಸಮಸ್ಯೆಗಳು ಫೋರೆನ್ಸಿಕ್ ಸೈನ್ಸ್‍ನಿಂದ ನ್ಯಾಯಸಮ್ಮತಗೊಂಡಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ವೃತ್ತಿಗೆ ತುಂಬಾ ಬೇಡಿಕೆ ಇದೆ. ಭಾರತದಲ್ಲೂ ಸಾಕಷ್ಟು ಅವಕಾಶಗಳಿವೆ.
ವೃತ್ತಿ ಅವಕಾಶಗಳು
ಸರ್ಕಾರಿ ವಲಯ    ಖಾಸಗೀ ವಲಯ
    ಪೋಲೀಸ್ ಇಲಾಖೆಯಲ್ಲಿ,
    ರಕ್ಷಣಾ ಇಲಾಖೆಯಲ್ಲಿ,
    ಅಗ್ನಿ ತನಿಖಾ ದಳದಲ್ಲಿ,
    ಅಪರಾಧ ತನಿಖಾ ದಳದಲ್ಲಿ,
    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನ್ಯಾಯವಿಜ್ಞಾನ ಪ್ರಯೋಗಾಲಯಗಳಲ್ಲಿ,
    ಪ್ರಾದೇಶಿಕ   ನ್ಯಾಯವಿಜ್ಞಾನ ಪ್ರಯೋಗಾಲಯಗಳಲ್ಲಿ,
    ಸಿ.ಬಿ.ಐ/ ಸಿ.ಐ.ಡಿಗಳಲ್ಲಿ
    ಗುಣಮಟ್ಟ ನಿಯಂತ್ರಣ ಸಂಸ್ಥೆಗಳಲ್ಲಿ,
    ಮಾದಕ ವಸ್ತು ತನಿಖಾ ವಿಭಾಗದಲ್ಲಿ,
    ಆಸ್ಪತ್ರೆಗಳಲ್ಲಿ,
    ಬ್ಯಾಂಕ್‍ಗಳಲ್ಲಿ,
    ವಿಶ್ವವಿದ್ಯಾಲಯಗಳಲ್ಲಿ,        ಖಾಸಗೀ ಪತ್ತೇದಾರಿ ಸಂಸ್ಥೆಗಳಲ್ಲಿ,
    ಖಾಸಗೀ ಬ್ಯಾಂಕ್‍ಗಳಲ್ಲಿ,
    ವಿಮಾ ಕಂಪನಿಗಳಲ್ಲಿ,
    ಖಾಸಗೀ ವಿಶ್ವವಿದ್ಯಾಲಯಗಳಲ್ಲಿ,
    ಖಾಸಗೀ ಬ್ಯಾಂಕ್‍ಗಳಲ್ಲಿ,
    ಭದ್ರತಾ ಸೇವಾ ಸಂಸ್ಥೆಗಳಲ್ಲಿ,
    ವಕೀಲರಿಗೆ ಸಲಹೆಗಾರರಾಗಿ,
    ಕಾನೂನು ಕಾಲೇಜುಗಳಲ್ಲಿ ಭೋಧಕರಾಗಿ,
    ಸ್ವಂತ ಪ್ರಯೋಗಾಲಯ ಸ್ಥಾಪಿಸಲು,
    ಖಾಸಗೀ ಆಸ್ಪತ್ರೆಗಳಲ್ಲಿ,


ಫೋರೆನ್ಸಿಕ್ ಸೈನ್ಸ್‍ನ ಕೆಲವು ಕಾಲೇಜುಗಳು :
•    ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಅಂಡ್ ಫೋರೆನ್ಸಿಕ್ ಸೈನ್ಸ್, ನ್ಯೂಡೆಲ್ಲಿ.
•    ಯೂನಿವರ್ಸಿಟಿ ಆಫ್ ಲಕ್ನೋ.
•    ಲೋಕನಾಯಕ ಜಯಪ್ರಕಾಶ ನಾರಾಯಣ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಅಂಡ್ ಫೋರೆನ್ಸಿಕ್ ಸೈನ್ಸ್, ಡೆಲ್ಲಿ.
•    ಡಾ.ಹರಿಸಿಂಗ್ ಗೌರ್ ವಿಶ್ವವಿದ್ಯಾಲಯ, ಸಾಗರ, ಮಧ್ಯಪ್ರದೇಶ.
•    ಯೂನಿವರ್ಸಿಟಿ ಆಫ್ ಡೆಲ್ಲಿ.
•    ಅಣ್ಣಾಮಲೈ ಯೂನಿವರ್ಸಿಟಿ, ಚೆನ್ನೈ.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಹೈದರಾಬಾದ.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಚಂಡೀಘಡ್.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಕಲ್ಕತ್ತಾ.
•    ಡಾ//ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜ್, ಬೆಂಗಳೂರು.
•    ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜ್, ಬೆಂಗಳೂರು.
•    ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜ್, ಬೆಳಗಾಂ.
•    ಜೈನ್ ಯೂನಿವರ್ಸಿಟಿ, ಬೆಂಗಳೂರು.
•    ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಮೈಸೂರು.

                                                                  ಆರ್.ಬಿ.ಗುರುಬಸವರಾಜ

September 24, 2014

ಧೈರ್ಯದಿಂದ ಇಂಟರ್ ವ್ಯೂವ್ ಎದುರಿಸಿ

 ಧೈರ್ಯದಿಂದ  ಇಂಟರ್ ವ್ಯೂವ್ ಎದುರಿಸಿ
       
      ಉದ್ಯೋಗಾಕಾಂಕ್ಷಿಗಳ ಜೀವನದಲ್ಲಿ ಸಂದರ್ಶನ ಬಹು ಮುಖ್ಯವಾದ ಅಂಶ. ಸಂದರ್ಶನದಲ್ಲಿ ಸಂದರ್ಶಕರ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ದೇಹಭಾಷೆ. ಇಂತಹ ವೇಳೆ ದೇಹಭಾಷೆಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಭವಿಷ್ಯ ಉಜ್ವಲವಾಗುತ್ತದೆ. ಸಂದರ್ಶನದ ವೇಳೆ ನಿಮಗೇನು ಬೇಕೆಂದು, ನಿಮ್ಮಲ್ಲಿನ ಜಾಣೆ ಎಂತಹದೆಂದು, ನೀವೆಷ್ಟು ಕ್ರಿಯಾಶೀಲರು, ಸೃಜನಶೀಲರು ಎಂಬುದನ್ನು ನಿಮ್ಮ ಮಾತುಗಳಲ್ಲಿ ತಿಳಿಸಬಹುದು. ಆದರೆ ನಿಮ್ಮ ದೇಹಭಾಷೆ ಇದಕ್ಕೆ ವಿರುದ್ದವಾಗಿದ್ದರೆ ಸಂದರ್ಶನ ವಿಫಲವಾಗುತ್ತದೆ. ದೇಹಭಾಷೆ ನಿಖರವಾಗಿಲ್ಲದಿದ್ದರೆ ನೀವೊಬ್ಬ ವಿಶ್ವಾಸಾರ್ಹತೆಯಿಲ್ಲದ, ಅಭದ್ರತೆಯುಳ್ಳ ದುರಹಂಕಾರಿ ಎಂಬುದನ್ನು ತೋರಿಸಿದಂತಾಗುತ್ತದೆ. ಯಾವ ಸಂದರ್ಶಕರ ತೀರ್ಮಾನಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದೋ ಗೊತ್ತಿಲ್ಲ. ಆದ್ದರಿಂದ ಸಂದರ್ಶನದ ದೇಹಭಾಷೆ ಹೀಗಿರಲಿ.
ಹಸ್ತಲಾಘವ : ಸಂದರ್ಶನದ ಕೊಠಡಿಯೊಳಗೆ ಪ್ರವೇಶಿಸಿದ ಕೂಡಲೇ ಅಲ್ಲಿನ ಸಂದರ್ಶಕರು ಕೈಕುಕಲು ಮುಂದಾಗುವುದಕ್ಕಿಂತ ಮೊದಲು ನೀವು ಕೈಕುಲುಕಿ. ಇದು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಮತ್ತು ಸಂದರ್ಶನಕ್ಕೆ ನೀವು ಸಿದ್ದರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ.
     ಹೀಗೆ ಕೈಕುಲುಕುವಾಗ ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ 450 ಅಂತರ ಇರಲಿ. ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ನಡುವಿನ ಚರ್ಮ ಕೈಕುಲುಕುವವರ ಕೈಗಳನ್ನು ಸ್ಪರ್ಶಿಸಲಿ. ಎಲ್ಲಾ ಬೆರಳುಗಳಿಂದ ಅವರ ಕೈಯನ್ನು ಮುಚ್ಚಿ ಗಟ್ಟಿಯಾಗಿ ಹಿಡಿಯಿರಿ.
      ಹಗುರವಾದ ಕೈಕುಲುವಿಕೆಯನ್ನು ತಪ್ಪಿಸಿ. ಹಗುರವಾದ ಕೈಕುಲುಕುವಿಕೆಯಿಂದ ನೀವು ಅಧೀರರು, ಅನಿಶ್ಚಿತತೆ ಅನುಭವಿಸುವವರು ಎಂಬುದನ್ನು ತೋರಿಸುತ್ತದೆ. ಅಂತೆಯೇ ಎರಡೂ ಕೈಗಳಿಂದ ಕೈಕುಲುಕಬೇಡಿ. ಅದು ನೀವು ತುಂಬಾ ಪ್ರಬಲರು ಅಥವಾ ಅಭದ್ರತೆ ಸರಿದೂಗಿಸಲು ಪ್ರಯತ್ನಿಸುವವರು ಎಂಬುದನ್ನು ಸಾಬೀತುಪಡಿಸಿದಂತಾಗುತ್ತದೆ.
ಬೆವರನ್ನು ತಪ್ಪಿಸಿ : ನೀವು ಹೆಚ್ಚಾಗಿ ಬೆವರುತ್ತೀರಾ? ಹಾಗಿದ್ದರೆ ಸಂದರ್ಶನ ಕೊಠಡಿ ತಲುಪುವುದಕ್ಕಿಂತ ಮೊದಲು ಮುಖ ತೊಳೆದುಕೊಂಡು ರಿಫ್ರೆಶ್ ಆಗಿ. ಕರವಸ್ತ್ರದಿಂದ ಕೈಗಳನ್ನು ಒಣಗಿಸಿಕೊಳ್ಳಿ.  ಸಂದರ್ಶನ ಕೊಠಡಿಯಲ್ಲಿ ಹಣೆ ಮತ್ತು ಕೈಗಳಲ್ಲಿನ ಬೆವರನ್ನು ಕೈಗಳಿಂದ ಒರೆಸಬೇಡಿ. ಕರವಸ್ತ್ರ ಬಳಸಿ. ಹಸ್ತಲಾಘವ ನೀಡುವಾಗ ನಿಮ್ಮ ಕೈಗಳು ಒದ್ದೆಯಾಗಿದ್ದರೆ ನೀವು ಅಧೀರರು, ಅನಿಶ್ಚಿತರು, ನರದೌರ್ಬಲ್ಯದಿಂದ ಬಳಲುವವರು ಎಂಬುದು ತಿಳಿಯುತ್ತದೆ.
ಕಣ್ಣುಗಳ ಸಂಪರ್ಕವಿರಲಿ : ಸಂದರ್ಶಕರೊಂದಿಗೆ ಸಂಭಾಷಣೆ ನಡೆಸುವಾಗ ನಿರಂತರವಾಗಿ ಕಣ್ಣುಗಳ ಸಂಪರ್ಕವಿರಲಿ. ಸಂಭಾಷಣೆ ವೇಳೆ ಅತ್ತಿತ್ತ ನೋಡುತ್ತಿದ್ದರೆ ನೀವು ಅಸುರಕ್ಷಿತರು, ಅಪ್ರಾಮಾಣಿಕರು, ಅಸಡ್ಡೆಯುಳ್ಳವರು ಎಂಬುದು ತಿಳಿಯುತ್ತದೆ. ಸಂದರ್ಶಕರು ಏಕಕಾಲದಲ್ಲಿ ನಿಮ್ಮೊಂದಿಗೆ ಸಂಭಾಷಿಸುತ್ತಾರೆ. ಅಂತಹ ವೇಳೆ ಎಲ್ಲರೊಂದಿಗೂ ನೇರ ನೋಟದೊಂದಿಗೆ ಮಾತನಾಡಿ. ಪ್ರತಿಯೊಬ್ಬ ಸಂದರ್ಶಕರನ್ನು ಸಮಭಾವದಿಂದ ಗೌರವಿಸಿ. ಪ್ರಶ್ನೆಗೆ ಉತ್ತರಿಸುವಾಗ ದೃಷ್ಟಿಯನ್ನು ದೂರ ಹಾಯಿಸಬೇಡಿ ಅಥವಾ ಕೆಳಗೆ ನೋಡಬೇಡಿ. ಪ್ರಶ್ನೆ ಕೇಳಿದವರ ಕಡೆ ನೋಟ ಹರಿಸಿ ಉತ್ತರಿಸಿ. ಕಣ್ಣುಗಳ ಸಂಪರ್ಕದೊಂದಿಗೆ ಮಾತನಾಡುವುದರಿಂದ ನೀವು ಪ್ರಾಮಾಣಿಕರು ಹಾಗೂ ವೃತ್ತಿಯನ್ನು ಹೆಚ್ಚು ಪ್ರೀತಿಸುವವರು ಎಂಬುದು ತಿಳಿಯುತ್ತದೆ.
ನೇರವಾಗಿ ಕುಳಿತುಕೊಳ್ಳಿ : ನಿಮಗೆ ಮೀಸಲಾದ ಆಸನದಲ್ಲಿನ ಬೆನ್ನಾಸರೆಗೆ ಒರಗಿ ನೇರವಾಗಿ ಸ್ಥಿರವಾಗಿ ಕುಳಿತುಕೊಳ್ಳಿ. ಹಗುರವಾಗಿ ಅಥವಾ ಒಂದುಕಡೆ ವಾಲಿದಂತೆ ಕುಳಿತರೆ ಅದು ನಿಮ್ಮ ಅಸ್ಥಿರತೆಯನ್ನು ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ. ನಿಮ್ಮ ಭುಜಗಳನ್ನು ಸಾಮಾನ್ಯ ಮಟ್ಟಕ್ಕಿಂತ ಕೆಳಗಿರಲಿ. ಅಂತೆಯೇ ಸಂದರ್ಶಕರ ಸ್ಥಳವನ್ನು ಗೌರವಿಸಿ.
ಸ್ಥಿರವಾಗಿರಿ: ಕುಳಿತುಕೊಂಡಾಗ ನಿಮ್ಮ ಕಾಲುಗಳನ್ನು ಅಲುಗಾಡಿಸದೇ ಸ್ಥಿರವಾಗಿ ಕುಳಿತುಕೊಳ್ಳಿ. ಮಾತಿನ ಚಲನೆ ಹಾಗೂ ಔಪಚಾರಿಕ ಭಂಗಿಯ ನಡುವೆ ಸಮತೋಲನ ಇರಲಿ. ಅನಾವಶ್ಯಕವಾಗಿ ಕೈಗಳನ್ನು ಚಲಿಸುವುದು ಅಥವಾ ಚಲಿಸದೇ ಇರುವುದು ಸರಿಯಲ್ಲ. ಇದು ವ್ಯಕ್ತಿ ಗೊಂದಲದಲ್ಲಿದ್ದಾನೆ ಎಂಬುದನ್ನು ಹೇಳುತ್ತದೆ. ಆದ್ದರಿಂದ ಮಾತಿನ ಲಯಕ್ಕೆ ತಕ್ಕಂತೆ ಕೈಗಳ ಚಲನೆ ಇರಲಿ.
ನಿರಾಳವಾಗಿರಿ : ನಿಮ್ಮ ಮಾತುಗಳು ಸಹಜವಾಗಿರಲಿ, ಹಿತ ಮಿತವಾಗಿರಲಿ. ಹೆಚ್ಚು ಆವೇಶಭರಿತರಾಗಬೇಡಿ. ಮಾನಸಿಕ ಒತ್ತಡವನ್ನು ಸಮ ಮಟ್ಟದಲ್ಲಿ ಕಾಯ್ದುಕೊಳ್ಳಿ. ಅತೀಯಾದ ಒತ್ತಡ ಪ್ರದರ್ಶಿಸಬೇಡಿ. ಇದರಿಂದ ನೀವು ಉದಾಸೀನರೆಂಬುದು ತಿಳಿಯುತ್ತದೆ.
ಒಪ್ಪಿಗೆಗೆ ಮಾತ್ರ ತಲೆದೂಗಿ : ಸಂದರ್ಶಕರು ಏನು ಹೇಳುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳದೇ ಅನಾವಶ್ಯಕವಾಗಿ ತಲೆದೂಗಬೇಡಿ. ಅನಾವಶ್ಯಕವಾಗಿ ತಲೆದೂಗುವುದು ಅವಿಧೇಯತೆ ಮತ್ತು ಅಪ್ರಾಮಾಣಿಕತೆಯ ಸಂಕೇತ. ಪ್ರಮುಖಾಂಶಗಳನ್ನು ಅರ್ಥಮಾಡಿಕೊಂಡಾಗ ಮತ್ತು ಅವರ ಹೇಳಿಕೆಯನ್ನು ಒಪ್ಪಿಕೊಂಡಾಗ ಮಾತ್ರ ತಲೆದೂಗಿ.
ಕೈಗಳನ್ನು ಕಟ್ಟಬೇಡಿ : ಸಂದರ್ಶಕರ ಎದುರು ಕೈಕಟ್ಟಿ ಕೂರಬೇಡಿ. ಕೈಕಟ್ಟುವುದು ನಿಮ್ಮಲ್ಲಿನ ವಿಶ್ವಾರ್ಹತೆ ಮತ್ತು ಆಸಕ್ತಿಯ ಕೊರತೆಯನ್ನು ಎತ್ತಿ ತೋರುತ್ತದೆ. ಕೈಗಳು ನಿಮ್ಮ ತೊಡೆಯ ಮೇಲಿರಲಿ ಅಥವಾ ಟೇಬಲ್ ಮೇಲಿರಲಿ. ಇದು ಸಂಭಾಷಣೆಗೆ ಮುಕ್ತವಾಗಿ ಕೈಗಳನ್ನು ಚಲಿಸಲು ಸಹಾಯಕವಾಗುತ್ತದೆ. ಹಾಗೂ ಇತರರ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತೀರಿ ಎಂಬುದನ್ನು ತಿಳಿಸುತ್ತದೆ.
ಬೆರಳುಗಳನ್ನು ಹಿಸುಕಬೇಡಿ : ಸಂದರ್ಶಕರ ಎದುರು ಪದೇ ಪದೇ ಬೆರಳುಗಳನ್ನು ಹಿಸುಕಬೇಡಿ. ಇದು ನಿಮ್ಮಲ್ಲಿನ ಅಸ್ಥಿರತೆ ಹಾಗೂ ಅಸ್ಪಷ್ಟತೆಯ ಸಂಕೇತ. ಬೆರಳುಗಳಿಂದ ಮೇಜಿನ ಮೇಲೆ ಕುಟ್ಟಬೇಡಿ, ಲಯಬದ್ದ ಚಲನೆಯನ್ನು ಮಾಡಬೇಡಿ. ಇದು ಸಂದರ್ಶಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಒಟ್ಟಾರೆ ಬೆರಳುಗಳಿಂದ ಯಾವುದೇ ರೀತಿಯ ಶಬ್ದ ಉಂಟಾಗದಂತೆ ಎಚ್ಚರವಹಿಸಿ.
ಅನಪೇಕ್ಷಿತ ಶಬ್ದ ಬೇಡ : ಕೆಲವರು ಮಾತನಾಡುವಾಗ ಗಂಟಲು, ನಾಲಿಗೆ, ತುಟಿ, ಮೂಗುಗಳಿಂದ ವಿಚಿತ್ರ ಶಬ್ದ ಹೊರಡಿಸುತ್ತಾರೆ. ಇದು ನೋಡುಗರಿಗೆ ಕೇಳುಗರಿಗೆ ಅಸಹ್ಯವನ್ನುಂಟು ಮಾಡುತ್ತದೆ. ಆದ್ದರಿಂದ ಮಾತನಾಡುವಾಗ ವಿಚಿತ್ರ ಶಬ್ದಗಳನ್ನು ಹೊರಡಿಸಬೇಡಿ. ಸ್ವಾಭಾವಿಕವಾಗಿ ಮಾತನಾಡಿ. ಪದೇ ಪದೇ ಗಲ್ಲ, ತುಟಿ, ಕೆನ್ನೆ, ಮೂಗು, ಕಿವಿಗಳನ್ನು ಕೆರೆಯುವುದು, ಕಣ್ಣೊರೆಸಿಕೊಳ್ಳುವುದು ಮಾಡಬೇಡಿ. ಇದು ನಿಮ್ಮ ಅವಿಶ್ವಾಸವನ್ನು ವೃತ್ತಿಯಲ್ಲಿನ ನಿರಾಸಕ್ತಿಯನ್ನು ಸೂಚಿಸುತ್ತದೆ.
       ಮೇಲಿನ ಅಂಶಗಳನ್ನು ಪಾಲಿಸಿ ನಿಮ್ಮದೇ ಅದ ದೇಹಭಾಷೆ ಬೆಳೆಸಿಕೊಂಡರೆ ನೀವೊಬ್ಬ ಅತ್ಯುತ್ತಮ ಅಭ್ಯರ್ಥಿ ಎಂಬುದನ್ನು ಸಾಬೀತುಪಡಿಸಬಹುದು ಜೊತೆಗೆ ವೃತ್ತಿಯಲ್ಲಿ ಯಶಸ್ಸು ಗಳಿಸಬಹುದು.

                                                                                                                        ಆರ್.ಬಿ.ಗುರುಬಸವರಾಜ.

September 17, 2014

ದೇಹಭಾಷೆ

 ಹುಷಾರು, ದೇಹಭಾಷೇನೇ ನಿಮ್ಮ ಬಗ್ಗೆ ಹೇಳುತ್ತೆ!




    ನಮ್ಮ ದೈನಂದಿನ ವ್ಯವಹಾರವು ಶಾಬ್ದಿಕ ಮತ್ತು ಅಶಾಬ್ದಿಕ ಎಂಬ ಎರಡು ಸಂವಹನಗಳಿಂದ ನಡೆಯುತ್ತದೆ. ನಾವು ಶೇಕಡಾ 93ರಷ್ಟು ಪದರಹಿತವಾಗಿಯೇ ಅಂದರೆ ಅಶಾಬ್ದಿಕವಾಗಿ ಸಂವಹನ ನಡೆಸುತ್ತೇವೆ. ಧ್ವನಿ, ಲಯ, ದೇಹಭಂಗಿ, ಹಾವಭಾವಗಳು, ಮುಖದ ಅಭಿವ್ಯಕ್ತಿ ಇವೆಲ್ಲವೂ ಅಶಾಬ್ದಿಕ ಸಂವಹನದ ಉದಾಹರಣೆಗಳಾಗಿವೆ. ಇದನ್ನೇ ದೇಹಭಾಷೆ ಎನ್ನುತ್ತೇವೆ.
    ನಾವು ಶಾಲಾ ಶಿಕ್ಷಣದಲ್ಲಿ ಮಾತನಾಡುವ ಶೈಲಿಯನ್ನು ಕಲಿಯುವುದರ ಜೊತೆಗೆ ಶಬ್ದಭಂಢಾರವನ್ನು ಹೆಚ್ಚಿಸಿಕೊಳ್ಳುತ್ತೇವೆ. ಆದರೆ ಅಲ್ಲಿ ದೇಹಭಾಷೆಯನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬ ಬಗ್ಗೆ ಯಾವುದೇ ಕಲಿಕೆ ಇರುವುದಿಲ್ಲ. ಇದು ನಮ್ಮಷ್ಟಕ್ಕೆ ನಾವೇ ಕಲಿತುಕೊಳ್ಳಬೇಕಾದ ಸ್ವಯಂ ಕಲಿಕೆಯಾಗಿದೆ. ನಿಲ್ಲುವ ಭಂಗಿ, ನಡೆಯುವ ರೀತಿ, ಇತರರಿಗೆ ಕಾಣುವ ರೀತಿ ಎಲ್ಲವನ್ನೂ ನಾವೇ ಕಲಿಯಬೇಕಾಗಿದೆ. ಆಕರ್ಷಕ ವ್ಯಕ್ತಿತ್ವ ನಮ್ಮದಾಗಲು ನಮ್ಮ ದೇಹ ಭಾಷೆಯನ್ನು ಉತ್ತಮವಾಗಿ ಬೆಳೆಸಿಕೊಳ್ಳಬೇಕು ಮತ್ತು ಬಳಸಿಕೊಳ್ಳಬೇಕು.
    ನಾವು ಭೇಟಿಯಾಗುವ ಜನರನ್ನು ಆಧರಿಸಿ ದೇಹಭಾಷೆ ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ ನಮಗೆ ವಿದ್ಯೆ ಕಲಿಸಿದ ಗುರುಗಳೊಂದಿಗೆ ಮಾತನಾಡುವಾಗ ನೇರವಾಗಿ, ವಿಧೇಯರಾಗಿ ಕೈಕಟ್ಟಿ, ಚಡಪಡಿಕೆ ಇಲ್ಲದೇ ಸಭ್ಯರಾಗಿ ನಿಲ್ಲುತ್ತೇವೆ. ಅದೇ ನಾವು ಸ್ನೇಹಿತರೊಂದಿಗೆ ಇರುವಾಗ ಸಂಪೂರ್ಣವಾಗಿ ನಮ್ಮ ಚಹರೆ ಮತ್ತು ದೇಹಭಾಷೆ ಬೇರೆಯಾಗಿರುತ್ತದೆ. ಸ್ನೇಹಿತರೊಂದಿಗೆ ಕೈಕುಲುಕುತ್ತೇವೆ ಅಥವಾ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುದ್ದಾಡುತ್ತೇವೆ. ಒಬ್ಬರನ್ನೊಬ್ಬರು ಆಕರ್ಷಿಸುತ್ತಾ ಆಹ್ಲಾದಕರವಾಗಿ ಇರುತ್ತೇವೆ.    ಕೆಲವೊಮ್ಮೆ ಪರಸ್ಪರರು ಭೇಟಿಯಾಗಿ ವಿಶ್ ಮಾಡಿದಾಗ ಅದು ಚೀರಿದಂತೆ ಅಥವಾ ಕೂಗಿದಂತೆ ಇರುತ್ತದೆ. ಇದು ನೋಡುಗರಿಗೆ ಅಸಹ್ಯವಾಗಿರುತ್ತದೆ. ಆದ್ದರಿಂದ ನಾವು ಸಮಯ ಸಂದರ್ಭಕ್ಕೆ ಅನುಗುಣವಾಗಿ ದೇಹಭಾಷೆಯನ್ನು ಬಳಸಿಕೊಳ್ಳಬೇಕು. ಇಂತಹ ಅಶಾಬ್ದಿಕ ಅಥವಾ ಪದರಹಿತ ಸಂವಹನವನ್ನು ಉತ್ತಮಪಡಿಸಿಕೊಳ್ಳಲು “ಪಂಚಕಜ್ಜಾಯ” ಇಲ್ಲಿದೆ.
ನೋಟ ನೆಟ್ಟಗಿರಲಿ : ನಮ್ಮ ಎದುರಿಗೆ ಇದ್ದವರಿಗೆ ನಾವು ಹೇಳಬೇಕಾದುದನ್ನು ನಮ್ಮ ಕಣ್ಣುಗಳು ಹೇಳುತ್ತವೆ. ಕಣ್ಣುಗಳು ನಮ್ಮ ಮನಸ್ಸಿನ ಮತ್ತು ಹೃದಯದ ರಹದಾರಿಗಳಿದ್ದಂತೆ. ಕಣ್ಣುಗಳನ್ನು ನೋಡಿದಾಕ್ಷಣ ಸಂತೋಷವಾಗಿರುವರೋ, ದುಃಖದಲ್ಲಿರುವರೋ, ಭಯ ಭೀತರಾಗಿರುವರೋ ಅಥವಾ ಯಾವುದೋ ವಿಷಯವನ್ನು ಆಂತರ್ಯದಲ್ಲಿ ಅಡಗಿಸಿ ಕೊಂಡಿರುವರೋ ಎಂದು ಹೇಳಬಹುದು. ಆದ್ದರಿಂದ ಇತರರೊಂದಿಗೆ ಸಂಭಾಷಿಸುವಾಗ ನಮ್ಮ ನೋಟ ನಿಖರವಾಗಿರಲಿ. ಆ ನೋಟದಲ್ಲಿ ಆತ್ಮೀಯತೆ ಇರಲಿ.
ಉತ್ತಮ ಮನೋಭಾವ : ನಮ್ಮ ಮನೋಭಾವ ಜನರನ್ನು  ನಮ್ಮ ಹತ್ತಿರಕ್ಕೆ ಅಥವಾ ನಮ್ಮನ್ನು ಜನರ ಹತ್ತಿರಕ್ಕೆ ಕರೆದೊಯ್ಯುತ್ತದೆ. ವ್ಯಕ್ತಿಯ ಮನೋಭಾವವನ್ನು ಅವರು ನಿಂತಭಂಗಿ, ಹಾವಭಾವ, ನೋಟಗಳಿಂದ ಗುರುತಿಸಬಹುದು. ಉತ್ತಮ ಮನೋಭಾವದಿಂದ ಎಂತಹ ವೈರಿಯನ್ನಾದರೂ ಗೆಲ್ಲಬಹುದು. ಅದಕ್ಕೆ ಗೌತಮ ಬುದ್ದ ಅಂಗುಲೀಮಾಲನನ್ನು ಬದಲಾಯಿಸಿದ ಉದಾಹರಣೆಗಿಂತ ಮತ್ತೊಂದಿರಲಾರದು.
ಅಂತರ ಕಾಯ್ದುಕೊಳ್ಳಿ : ಪ್ರತಿಯೊಬ್ಬ ವ್ಯಕ್ತಿಯು ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಂದರೆ ನಾವು ವ್ಯವಹರಿಸುವ ವ್ಯಕ್ತಿಗಳೊಂದಿಗೆ ಸೂಕ್ತ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸ್ನೇಹಿತರೊಂದಿಗೆ ಸಲುಗೆಯಿಂದ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುವಂತೆ ಗೌರವಾನ್ವಿತರೊಂದಿಗೆ ನಡೆದುಕೊಳ್ಳಬಾರದು. ಅತೀ ದೂರದಲ್ಲಿ ಅಥವಾ ಅತೀ ಸಮೀಪದಲ್ಲಿ ನಿಲ್ಲುವುದು ಸಹ ಉಚಿತವಲ್ಲ. ಏಕೆಂದರೆ ಅದು ನೀವು ಅವರನ್ನು ತಿರಸ್ಕರಿಸುತ್ತೀರಿ ಅಥವಾ ಅವರಲ್ಲಿ ಆಸಕ್ತಿ ಇಲ್ಲ ಎಂಬುದನ್ನು ತೋರಿಸುತ್ತದೆ. ಆದ್ದರಿಂದ ವ್ಯವಹರಿಸುವ ವ್ಯಕ್ತಿಗಳನ್ನು ಆಧರಿಸಿ ಸೂಕ್ತ ಅಂತರ ಕಾಯ್ದುಕೊಳ್ಳಿ.
ಮಾತು ಮುತ್ತಾಗಲಿ : ಇತರರೊಂದಿಗೆ ವ್ಯವಹರಿಸುವಾಗ ಮಾತನಾಡುವ ಶೈಲಿಯೂ ಸಹ ತುಂಬಾ ಪ್ರಾಮುಖ್ಯವಾದುದು. ಮಾತು ಹಿತ ಮಿತವಾಗಿರಲಿ. ಮಾತಿನಲ್ಲಿ ಶಿಸ್ತು, ಸಭ್ಯತೆ ಇರಲಿ. ಮಾತಿನಲ್ಲಿ ಆತ್ಮವಿಶ್ವಾಸ ಇರಲಿ. ಜೊತೆಗೆ ಮಾತಿನ ಮೇಲೆ ನಿಗಾ ಇರಲಿ. ಸಮಯ ಸಂದರ್ಭಗಳು ನೆನಪಿರಲಿ. ನಾನೆಲ್ಲಿದ್ದೇನೆ, ಯಾರೊಂದಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಪ್ರಜ್ಞೆ ಇರಲಿ. ಮಾತಿನ ಜೊತೆಗೆ ಕಣ್ಣು, ಕೈಗಳ ಚಲನೆ ಇರಲಿ. ಸೂಕ್ತ ಹಾವಭಾವ ತುಂಬಿರಲಿ.
ನಗೆ ಬಾಣ ಬೀರಿ : ಒಂದು ಸಣ್ಣ ನಗು ಸಾಕಷ್ಟು ಜನರ ಹೃದಯ ಗೆಲ್ಲುತ್ತದೆ. ಅಂತಹ ಅಮೋಘ ಶಕ್ತಿ ಇರುವುದು ನಗುವಿಗೆ ಮಾತ್ರ. ಇತರರೊಂದಿಗೆ ಮಾತನಾಡುವಾಗ ಸದಾ ನಿಮ್ಮ ಮುಖದಲ್ಲೊಂದು ಸಣ್ಣ ನಗುವಿರಲಿ. ನಗುವಿನಿಂದ ಎಂತಹ ಗಟ್ಟಿಯಾದ ಸಂಕೋಲೆಗಳನ್ನೂ ಮುರಿಯಬಹುದು. ಒಂದು ಸಣ್ಣ ನಗು ಸಿಹಿಯಾದ ವಾತಾವರಣವನ್ನು ನಿರ್ಮಿಸುತ್ತದೆ. ಆದ್ದರಿಂದ ನಿಮ್ಮ ಮುಖದಲ್ಲಿ ಯಾವಾಗಲೂ ಮಂದಹಾಸ ತುಂಬಿರಲಿ.
    ಹಿತಕರವಾದ ದೇಹಭಾಷೆ ಸಹಜವಾಗಿ ಬರುತ್ತದೆ. ಆದರೂ ಸ್ವಲ್ಪ ಪ್ರಯತ್ನದಿಂದ ಅದನ್ನು ಉತ್ತಮವಾಗಿ ಬೆಳೆಸಿಕೊಳ್ಳಬಹುದು. ದೇಹಭಾಷೆಯನ್ನು ಬೆಳೆಸಿಕೊಳ್ಳುವುದು ದೊಡ್ಡ ಕಷ್ಟವೇನಲ್ಲ. ಕೆಲವು ಪರಿಣಾಮಕಾರಿ ಅಂಶಗಳನ್ನು ದಿನನಿತ್ಯ ಅಳವಡಿಸಿಕೊಳ್ಳುವುದರಿಂದ ಶಾಶ್ವತವಾಗಿ ಅದನ್ನು ನಮ್ಮದಾಗಿಸಿಕೊಳ್ಳಬಹುದು. ಆರಂಭದಲ್ಲಿ ಇದು ನಟನೆಯಂತೆ ಕಂಡರೂ ಸತತ ಅಭ್ಯಾಸದಿಂದ ಉತ್ತಮವಾಗಿ ಬೆಳೆಸಿಕೊಳ್ಳಬಹುದು.
                                                                                                               ಆರ್.ಬಿ.ಗುರುಬಸವರಾಜ

September 1, 2014

ಪುಟ್ಟ ಹೆಜ್ಜೆಯನ್ನಿಡೋಣ

                            ಪುಟ್ಟ ಹೆಜ್ಜೆಯನ್ನಿಡೋಣ
    ಶಿಕ್ಷಕ ವೃತ್ತಿಗೆ ಸೇರಿದ ನಾವೆಲ್ಲರೂ ಒಂದಿಲ್ಲೊಂದು ತರಬೇತಿ, ಚರ್ಚೆ, ವಿಚಾರಗೋಷ್ಟಿ, ಸೆಮಿನಾರ್‍ಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಅಂತಹ ಕಾರ್ಯಕ್ರಮಗಳಿಂದ ಕಲಿತ ಕಲಿಕೆ ಬಹುಕಾಲ ಉಳಿಯುವುದಿಲ್ಲ ಎಂಬುದು ನನ್ನ ಅನುಭವಕ್ಕೆ ಬಂದ ಅಂಶ. ಸಾಮಾನ್ಯವಾಗಿ ಅಲ್ಲಿನ ಕಲಿಕೆ ಕಠಿಣವಾಗಿರುವುದಿಲ್ಲ. ಆದರೂ ಅದು ಶಾಶ್ವತವಾಗಿ ಉಳಿಯುವುದಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ‘ನಮ್ಮ ತರಗತಿ ಕೋಣೆಯನ್ನು, ಬೋಧನಾ ವಿಧಾನಗಳನ್ನು, ಒಟ್ಟಾರೆ ನಮ್ಮ ವೃತ್ತಿ ಜೀವನವನ್ನು ಬದಲಾಯಿಸಿಕೊಳ್ಳಬೇಕು’ ಎಂದು ಪಣ ತೊಡುತ್ತೇವೆ. ಈಗಿರುವುದಕ್ಕಿಂತ ಉತ್ತಮವಾಗಿ ತೊಡಗಿಸಿಕೊಳ್ಳಬೇಕು, ಉತ್ತಮ ಶಿಕ್ಷಕ/ಸುಗಮಕಾರರಾಗಬೇಕು, ಹೆಚ್ಚು ವಿವೇಕಯುತ ವ್ಯಕ್ತಿಗಳಾಗಬೇಕು ಎಂದುಕೊಳ್ಳುತ್ತೇವೆ. ಆದರೆ ಎರಡು ದಿನಗಳ ನಂತರ ಮೊದಲಿನಂತೆಯೇ ನಕಾರಾತ್ಮಕ ಭಾವನೆ ಹೊಂದುತ್ತೇವೆ. ಇಂತಹ ಕಾರ್ಯಕ್ರಮಗಳಿಂದ ಕಲಿತ ಕಲಿಕೆ ಕೆಲಸ ಮಾಡಲಿಲ್ಲ. ಏಕೆಂದರೆ ನಾವು ಬದಲಾಗಲಿಲ್ಲ.
    ಪ್ರಸಿದ್ದ ವ್ಯಕ್ತಿಗಳ ಜೀವನ ಚರಿತ್ರೆಯನ್ನು ನೋಡಿದರೆ ಅವರು ಜೀವನದಲ್ಲಿ ಯಶಸ್ವಿಯಾಗಿರುವುದನ್ನು, ಶಾಶ್ವತ ಪರಿವರ್ತನೆ ಆಗಿರುವುದನ್ನು ಗಮನಿಸುತ್ತೇವೆ. ಅವರು ಹೇಗೆ ಉನ್ನತ ಹಂತ ತಲುಪಿದರು? ನಾವೇಕೆ ಉನ್ನತ ಹಂತಕ್ಕೆ ಬೆಳೆಯಲಿಲ್ಲ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಕಾರಣಗಳನ್ನು ಹುಡುಕಿದಾಗ ನಾವು ಹಿಂದುಳಿಯಲು ನಾಲ್ಕು ಪ್ರಮುಖ ಕಾರಣಗಳು ಗೋಚರಿಸುತ್ತವೆ. ಈ ಕಾರಣಗಳನ್ನು ನಾನು ಅನಿಷ್ಟಗಳೆಂದು ಕರೆಯುತ್ತೇನೆ. ಅವುಗಳನ್ನು ದೂರವಿರಿಸಿದರೆ ಮಾತ್ರ ನಾವು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ. ನಿರ್ಧಾರಗಳು ಉತ್ತಮವಾಗಿದ್ದರೆ ಪರಿಣಾಮವೂ ಉತ್ತಮವಾಗಿರುತ್ತದೆ. ನಮ್ಮ ದೌರ್ಬಲ್ಯಗಳು ಯಾವುವೆಂದು ತಿಳಿಯದ ಹೊರತು ನಿವಾರಣೆ ಸಾಧ್ಯವಿಲ್ಲ. ಅಂದರೆ ನಮ್ಮ ತಿಳುವಳಿಕೆ ಹೆಚ್ಚಾದಷ್ಟೂ ಉತ್ತಮವಾಗಿ ಕೆಲಸ ನಿರ್ವಹಿಸಬಹುದು. ನಾವು ಬಯಸುವ ಪರಿವರ್ತನೆಯನ್ನು ತಡೆಯುವ ಆ ನಾಲ್ಕು ಅನಿಷ್ಟಗಳು ಹೀಗಿವೆ.
1)    ಭಯ: ಸಾಮಾನ್ಯವಾಗಿ ನಾವೆಲ್ಲರೂ ಅಪರಿಚಿತ ವಾತಾವರಣದಲ್ಲಿ ಜೀವಿಸಲು ಇಷ್ಟಪಡುವುದಿಲ್ಲ. ಅಜ್ಞಾತ ವಲಯಕ್ಕೆ ಲಗ್ಗೆ ಹಾಕಲು ಬಯಸುವುದಿಲ್ಲ. ಇದನ್ನೇ ತರಗತಿ ಕೋಣೆಗೆ ಹೋಲಿಸುವುದಾದರೆ ನಮಗೆ ಗೊತ್ತಿರುವ ವಿಷಯಗಳನ್ನು ಮಾತ್ರ ಬೋಧಿಸಲು ನಾವು ಬಯಸುತ್ತೇವೆ. ಗೊತ್ತಿರದ ಅಥವಾ ಕಠಿಣವೆನಿಸುವ ವಿಷಯಗಳನ್ನು ಬೋಧಿಸಲು ಭಯಪಡುತ್ತೇವೆ. ತೊಂದರೆ ತೆಗೆದುಕೊಳ್ಳಲು ನಿರಾಕರಿಸುತ್ತೇವೆ. ಇದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಅಂಟಿದ ರೋಗವಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಇರುವ ಸಾಮಾನ್ಯ ಕಾಯಿಲೆ. ನಿಶ್ಚಿತತೆ ಮನುಷ್ಯನನ್ನು ಮಿತಗೊಳಿಸುತ್ತದೆ. ಆದರೂ ನಾವದನ್ನು ಬಯಸುತ್ತೇವೆ. ಬಹುತೇಕರು ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಯಾವುದರ ಬಗ್ಗೆ ನಮಗೆ ಭಯ ಇರುತ್ತದೆಯೋ ಅದನ್ನೇ ಮಾಡುವುದು ಭಯವನ್ನು ನಿರ್ವಹಿಸುವುದರ ಕೀಲಿಕೈ. ಭಯವನ್ನು ನಾಶಮಾಡಲು ಅದೇ ಅತ್ತುತ್ತಮ ಸಾಧನ. ಪ್ರತಿಯೊಂದು ಭಯದ ಗೋಡೆಯಾಚೆ ಅಮೂಲ್ಯವಾದ ಖಜಾನೆ ಇರುತ್ತದೆ ಎಂಬುದನ್ನು ನಾವು ಮರೆಯಬಾರದು.
2)    ಸೋಲು: ಯಾರೂ ಸೋಲನ್ನು ಬಯಸುವುದಿಲ್ಲ. ಹಾಗಾಗಿ ನಮ್ಮಲ್ಲಿ ಬಹುತೇಕ ಮಂದಿ ಪ್ರಯತ್ನವನ್ನೇ ಮಾಡುವುದಿಲ್ಲ. ಇದು ವಿಷಾದಕರ. ನಮ್ಮ ಆರೋಗ್ಯ ಸುಧಾರಣೆಗಾಗಲೀ, ಕನಸುಗಳನ್ನು ನನಸಾಗಿ ಮಾಡುವುದಕ್ಕಾಗಲೀ ಮೊದಲ ಹೆಜ್ಜೆಯನ್ನು ಇಡುವುದೇ ಇಲ್ಲ. ಪ್ರಯತ್ನವನ್ನು ಮಾಡದಿರುವುದೇ ದೊಡ್ಡ ಸೋಲು. ರಿಸ್ಕ್ ತೆಗೆದುಕೊಳ್ಳದಿರುವುದೇ ದೊಡ್ಡ ರಿಸ್ಕ್. ಇದಕ್ಕೆ ಬದಲಾಗಿ ಒಂದು ಪುಟ್ಟ ಹೆಜ್ಜೆ ದೊಡ್ಡ ಸಾಧನೆಯ ಮೈಲಿಗಲ್ಲಾಗಬಹುದು. ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ “ನನ್ನ ಈ ಪುಟ್ಟ ಹೆಜ್ಜೆ ಮನುಕುಲದ ಒಂದು ದೊಡ್ಡ ನೆಗೆತ” ಎಂದು ಹೇಳಿದ ಮಾತು ತುಂಬಾ ಅರ್ಥಗರ್ಭಿತವಾದುದು. ಸೋಲು ಗೆಲುವಿನ ಅವಿಭಾಜ್ಯ ಅಂಗ. ಸೋಲಿಲ್ಲದೇ ಗೆಲುವು ಸಾಧ್ಯವಿಲ್ಲ ಅಲ್ಲವೇ?
3)    ಮರೆವು: ತರಬೇತಿ ಅಥವಾ ಇನ್ನಿತರೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಸ್ಪೂರ್ತಿ ಪಡೆದು ಇಡೀ ತರಗತಿ ಪ್ರಕ್ರಿಯೆಯನ್ನೇ ಅಥವಾ ಶಾಲಾ ವಾತಾವರಣವನ್ನೇ ಬದಲಾಯಿಸುವ ಉತ್ಸಾಹದಿಂದ ಹಿಂದಿರುಗುತ್ತೇವೆ. ಆದರೆ ಮರುದಿನ ತರಗತಿ ಕೋಣೆಗೆ ಹೋದಾಗ ವಾಸ್ತವ ಎದುರಾಗುತ್ತದೆ. ಸಹಕಾರ ನೀಡದ ಸಹುದ್ಯೋಗಿಗಳು, ಸುವ್ಯವಸ್ಥಿತವಲ್ಲದ ತರಗತಿ ಕೋಣೆ, ಬದಲಾವಣೆಗೆ ಹೊಂದಿಕೊಳ್ಳದ ಮಕ್ಕಳು, ತೃಪ್ತರಾಗದ ಪಾಲಕರು ಇತ್ಯಾದಿ ಇತ್ಯಾದಿ. ವೈಯಕ್ತಿಕ ಮತ್ತು ವೃತ್ತಿಪರ ನಾಯಕತ್ವ ಬೆಳೆಸಿಕೊಳ್ಳಲು ನಾವು ಮಾಡಿದ ಯೋಜನೆಗಳಂತೆ ಕೆಲಸ ಮಾಡಲು ಸಮಯ ದೊರೆಯದೇ ಇರುವುದು, ಈ ಎಲ್ಲಾ ಕಾರಣಗಳಿಂದ ನಾವು ತರಬೇತಿಯ ಅಂಶಗಳನ್ನು ಮರೆತುಬಿಡುತ್ತೇವೆ. ಇದಕ್ಕೆ ಒಂದು ಉಪಾಯವಿದೆ. ಅದೇನೆಂದರೆ ಮಾಡಿದ ನಿರ್ಧಾರಗಳನ್ನು ಸದಾ ಮನಸ್ಸಿನಲ್ಲಿ ಸ್ಥಿರವಾಗಿಟ್ಟುಕೊಳ್ಳುವುದು. ಸಮಯ ದೊರೆತಾಗಲೆಲ್ಲ ಯೋಜನೆಯಂತೆ ಕಾರ್ಯ ನಿರ್ವಹಿಸುವುದು. ನಮ್ಮ ಅರಿವಿನ ಆಳವನ್ನು ಹೆಚ್ಚಿಸಿಕೊಳ್ಳುವುದು. ಅರಿವು ಹೆಚ್ಚಿದಷ್ಟೂ ಆಯ್ಕೆ ಉತ್ತಮವಾಗಿರುತ್ತದೆ. ಆಗ ಪರಿಣಾಮವೂ ಉತ್ತಮವಾಗಿರುತ್ತದೆ. ನಮಗೆ ನಾವೇ ವಚನ ಕೊಟ್ಟುಕೊಳ್ಳುವುದು. ಕೊಟ್ಟ ವಚನವನ್ನು ಸಾಧ್ಯವಾದಲೆಲ್ಲ ಬರೆದಿಡುವುದು ಅಥವಾ ಒಂದು ಹಾಳೆಯಲ್ಲಿ ಬರೆದು ದಿನನಿತ್ಯ ನಮಗೆ ಕಾಣುವಂತೆ ಅಂಟಿಸುವುದು. ಇದು ತೀರಾ ‘ಸಿಲ್ಲಿ’ ಎನಿಸಿದರೂ ಪರಿಣಾಮ ಉತ್ತಮವಾಗಿರುತ್ತದೆ.
4)    ಅಶ್ರದ್ಧೆ: ನಮ್ಮಲ್ಲಿ ಬಹುತೇಕರಿಗೆ(ನನ್ನನ್ನೂ ಸೇರಿದಂತೆ) ಶ್ರದ್ಧೆ ಇಲ್ಲ. ಸಿನಿಕತೆಯೇ ಹೆಚ್ಚು. ‘ತರಬೇತಿಗಳು, ಗೋಷ್ಟಿಗಳು, ಉಪನ್ಯಾಸಗಳು ಎಲ್ಲಾ ಬೊಗಳೆ, ಇವುಗಳಿಂದ ಏನೂ ಪ್ರಯೋಜನವಿಲ್ಲ’ ಎಂಬ ನಕಾರಾತ್ಮಕ ಮನೋಭಾವನೆ ನಮ್ಮಲ್ಲಿ ಮನೆಮಾಡಿದೆ. ಇನ್ನು ಕೆಲವರು “ಈ ವಯಸ್ಸಿನಲ್ಲಿ ನಾನು ಬದಲಾಗಲು ಸಾಧ್ಯವಿಲ್ಲ” ಎನ್ನುತ್ತಾರೆ. ಈ ತರಹದ ಸಿನಿಕತೆಗೆ ನಿರಾಶೆಯೇ ಕಾರಣ. ಸಿನಿಕತೆಯನ್ನು ಬೆಳೆಸಿಕೊಳ್ಳುವುದಕ್ಕಿಂತ ಮೊದಲು ನಾವ್ಯಾರೂ ಹೀಗಿರಲಿಲ್ಲ. ಒಂದು ಕಾಲದಲ್ಲಿ ನಮ್ಮಲ್ಲಿ ಮಕ್ಕಳಲ್ಲಿರುವಂತಹ ಉತ್ಸಾಹವಿತ್ತು, ಆಶಾವಾದವಿತ್ತು, ಹೊಸದಾಗಿ ವೃತ್ತಿಗೆ ಸೇರಿದಾಗ ಇದ್ದ ತುಡಿತ, ಮಿಡಿತ ಈಗಿಲ್ಲ. ನಾವು ಮಾಡಿದ ಪ್ರಯತ್ನಗಳು ವಿಫಲವಾದವು. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯದ ನಾವು ಪ್ರಯತ್ನವನ್ನು ಮುಂದುವರೆಸದೇ ಕೈಬಿಟ್ಟೆವು. ಸೋಲಿನ ನೋವನ್ನು ತಪ್ಪಿಸಲು ನಾವೆಲ್ಲ ಸಿನಿಕರಾದೆವು.
    ಹೀಗೆ ಈ ನಾಲ್ಕೂ ಅನಿಷ್ಟಗಳು ನಮ್ಮ ಸ್ವಪರಿವರ್ತನೆಯನ್ನು, ನಾಯಕತ್ವದ ಬೆಳವಣಿಗೆಯನ್ನು ತಡೆಹಿಡಿದವು. ಅವುಗಳ ಸ್ವರೂಪ ಅರಿತುಕೊಂಡರೆ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ. ಸಾಮಾನ್ಯ ಶಿಕ್ಷಕನೂ ಸಹ ಯಶಸ್ವಿ ಶಿಕ್ಷಕರಾಗಲು ಸಾಧ್ಯ. ಯಾವುದನ್ನೇ ಆಗಲಿ ಮೊದಲು ಯೋಚಿಸಿ ಒಂದು ಪುಟ್ಟ ಹೆಜ್ಜೆಯನ್ನಿಡೋಣ. ಆ ಮೂಲಕ ನಮ್ಮ ಸಾಮಥ್ರ್ಯವೇನೆಂಬುದನ್ನು ಜಗಕ್ಕೆ ತೋರಿಸೋಣ.
                                                               ಆರ್.ಬಿ.ಗುರುಬಸವರಾಜ.

“ಟೀಚರ್” ಸೆಪ್ಟಂಬರ್ 2014


ಮೌಲ್ಯಗಳ ಸಂವರ್ಧನೆಗಾಗಿ ಸಹವರ್ತಿ ಕಲಿಕೆ

     
            ಮೌಲ್ಯಗಳ ಸಂವರ್ಧನೆಗಾಗಿ ಸಹವರ್ತಿ ಕಲಿಕೆ
    ಪ್ರತಿಯೊಂದು ಕಲಿಕಾ ಪದ್ದತಿಯೂ ತನ್ನದೇ ಆದ ವಿಶಿಷ್ಠತೆಯನ್ನು ಹೊಂದಿರುತ್ತದೆ. ಒಂದು ಪದ್ದತಿ ಜಾರಿಗೆ ಬರುವುದರ ಹಿಂದೆ ಅವಿತರ ಪ್ರಯತ್ನ ಹಾಗೂ ಸಾಕಷ್ಟು ಪ್ರಯೋಗಗಳು ನಡೆದಿರುತ್ತವೆ ಎಂಬುದನ್ನು ನಾವು ಮರೆಯಬಾರದು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಲಿಕಾ ಪದ್ದತಿಯೆಂದರೆ “ಸಹವರ್ತಿ ಕಲಿಕೆ”. ಇಲ್ಲಿ ಕಲಿಯುವವರ ನಡುವೆ ನೇರವಾದ ಮುಖಾಮುಖಿ ಸಂದರ್ಶನ ಏರ್ಪಡುತ್ತದೆ. ಕೇವಲ ಕೆಲವೇ ಕಲಿಕಾರ್ಥಿಗಳು ಗುಂಪಿನಲ್ಲಿ ಕಲಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಕಲಿಕೆ ಹೆಚ್ಚು ಸಂತಸದಾಯಕ ಹಾಗೂ ಶಾಶ್ವತವಾಗಿರುತ್ತದೆ ಎಂಬುದು ದೃಢಪಟ್ಟಿದೆ.
    ಸಹವರ್ತಿ ಕಲಿಕೆಯು ಪ್ರತಿಯೊಬ್ಬ ಕಲಿಕಾರ್ಥಿಗೆ ಮಹತ್ವದ ಅನುಭವಗಳನ್ನು ಕಟ್ಟಿಕೊಡುತ್ತದೆ. ಕಲಿಕಾರ್ಥಿಗಳ ನಡುವಿನ ಅವಿನಾಭಾವ ಸಂಬಂಧ ಗಟ್ಟಿಗೊಳ್ಳುತ್ತದೆ. ಅದು ಎಂದಿಗೂ ಮುರಿಯಲಾಗದ ಸ್ನೇಹಸೇತುವಾಗಿ ಪರಿವರ್ತನೆಗೊಳ್ಳುತ್ತದೆ. ಕುಟುಂಬದ ಸದಸ್ಯರು ಅಥವಾ ಒಡಹುಟ್ಟಿದವರಿಗಿಂತ ಉತ್ತಮವಾದ ಆಯ್ಕೆಯ ಅವಕಾಶಗಳು ಇರುವುದು ಸಹವರ್ತಿಗಳಲ್ಲಿ ಮಾತ್ರ. ಇಲ್ಲಿನ ಕಲಿಕೆ ಮುಕ್ತವಾಗಿ ಸಾಗುವುದರಿಂದ ಕಲಿಕೆ ತುಂಬಾ ಸರಳವಾಗಿ ಸುಗಮವಾಗಿ ನಡೆಯುತ್ತದೆ. ಯಾವುದೇ ರೀತಿಯ ಮಾನಸಿಕ ಒತ್ತಡಗಳಾಗಲೀ, ನಿರ್ಭಂಧಗಳಾಗಲೀ ಇಲ್ಲದಿರುವುದರಿಂದ ಕಲಿಕೆ ಸುಮನೋಹರವಾಗಿರುತ್ತದೆ.
    ಸಹವರ್ತಿ ಸಂಬಂಧಗಳು ಗಟ್ಟಿಗೊಳ್ಳಲು ಶಾಲೆ ಒಂದು ಮಾಧ್ಯಮ ಇದ್ದಂತೆ. ಬಹುತೇಕ ಸ್ನೇಹಿತರು ತಮ್ಮ ಕಲಿಕಾ ಅನುಭವಗಳನ್ನು ಹಂಚಿಕೊಳ್ಳಲು ಶಾಲೆ ಮುಖ್ಯವಾಹಿನಿಯಾಗಿರುತ್ತದೆ. ಸಹವರ್ತಿಗಳು ನಿಗದಿತ ಪಠ್ಯಕ್ಕಿಂತ ಜೀವನಾನುಭಗಳನ್ನು ಕಲಿಸುವುದು ಹೆಚ್ಚು. ಅಂದರೆ ಪರಸ್ಪರರಲ್ಲಿ ಪ್ರೀತಿ, ಕಾಳಜಿ, ಸಹಕಾರ, ನಂಬಿಕೆ, ಕ್ಷಮೆ, ಸಹಾನುಭೂತಿ, ಬೆಂಬಲ, ಶಿಷ್ಟಾಚಾರಗಳಂತಹ ಮಾನವೀಯ ಮೌಲ್ಯಗಳನ್ನು ಸಹವರ್ತಿಗಳಿಂದ ಬೆಳೆಸಿಕೊಳ್ಳುತ್ತಾರೆ.
    ಸಹವರ್ತಿ ಕಲಿಕೆಯಿಂದ ಕಲಿಕಾರ್ಥಿಗಳು ಬೆಳೆಸಿಕೊಳ್ಳುವ ಮೌಲ್ಯಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.
ಸಹಾನುಭೂತಿ : ಮಕ್ಕಳು ಜೊತೆಗೂಡಿ ಕಲಿಯುವುದರಿಂದ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ ಸಹವರ್ತಿಗಳ ಜೀವನವನ್ನು, ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಅವರ ಸ್ನೇಹ ನಿಕಟವಾಗುತ್ತದೆ ಮತ್ತು ಬೇರ್ಪಡಿಸಲಾರದ ಬಂಧವಾಗಿ ಏರ್ಪಡುತ್ತದೆ. ಪರಸ್ಪರರ ಕಷ್ಟಗಳಿಗೆ ಪ್ರತಿಸ್ಪಂಧಿಸುವ, ಸಹಾನುಭೂತಿ ತೋರುವ ಗುಣಗಳು ಬೆಳೆಯುತ್ತವೆ.
ಸ್ವೀಕರಣ : ಸಹವರ್ತಿಗಳ ನಡುವಿನ ನ್ಯೂನತೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅವರ ಪ್ರತಿಭೆಗಳನ್ನು ಒಪ್ಪಿಕೊಳ್ಳುವುದನ್ನು ಸಹವರ್ತಿ ಕಲಿಕೆ ಮೂಡಿಸುತ್ತದೆ. ಹಾಗೆಯೇ ಸಹವರ್ತಿಗಳ ಉತ್ತಮ ಅಭಿಪ್ರಾಯಗಳನ್ನು ಸ್ವೀಕರಿಸುವ ಗುಣ ಬೆಳೆಯುತ್ತದೆ.
ತಿಳುವಳಿಕೆ ಮತ್ತು ಕಾಳಜಿ : ಸಹವರ್ತಿ ಕಲಿಕೆಯಲ್ಲಿ ಸ್ನೇಹಿತರಿಂದ ಸ್ನೇಹಿತರಿಗಾಗಿ ಕಲಿಕೆ ಮುಂದುವರೆಯುವುದರಿಂದ ಅವರ ಪರಿಸ್ಥಿತಿ ಮತ್ತು ಅವಶ್ಯಕತೆಗಳನ್ನು ತಿಳಿದುಕೊಳ್ಳಬಹುದಾಗಿದೆ. ಇಂದರಿಂದ ಪರಿಸ್ಥಿತಿಗನುಗುಣವಾಗಿ ಕಾಳಜಿ ವಹಿಸುವುದನ್ನು ಕಲಿಯುತ್ತಾರೆ. ಜೊತೆಗೆ ಎಲ್ಲಾ ಸಂಧರ್ಭಗಳಲ್ಲೂ ಇತರರನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯುತ್ತಾರೆ. ಸ್ನೇಹಿತರು ಹಾಗೂ ಅವರ ಕುಟುಂಬ ವರ್ಗದ ಜೊತೆಗೆ ಅಹಿತಕರ ವರ್ತನೆಗೆ ಅವಕಾಶ ಇರುವುದಿಲ್ಲ.
ಬೆಂಬಲ : ದುರಾಭ್ಯಾಸಗಳನ್ನು ಬಿಡಿಸುವಲ್ಲಿ ಸಹವರ್ತಿಗಳ ನೇರ ಬೆಂಬಲದ ಅಗತ್ಯವಿದೆ. ಕಠಿಣ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹವರ್ತಿಗಳು ಏನು ಮಾಡಬೇಕು? ಹೇಗೆ ವರ್ತಿಸಬೇಕು? ಎಂಬುದನ್ನು ಕಲಿಸುತ್ತದೆ. ಇದರಿಂದಾಗಿ ಸ್ನೇಹಿತರ ನಡುವೆ ಮುರಿಯಲಾರದ ಬಂಧ ಉಂಟಾಗಿ ಸ್ನೇಹಕ್ಕೆ ಮೆರಗು ಬರುತ್ತದೆ. ಸ್ನೇಹಿತರ ನಡುವೆ ಸರಿಯಾದ ವಿಧಾನಗಳನ್ನು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು ಸಹಾಯ ಮಾಡುತ್ತದೆ. ಅವರಲ್ಲಿನ ತಪ್ಪು ನಿರ್ಧಾರಗಳನ್ನು ಸರಿಯಾದ ಮಾರ್ಗದರ್ಶನದಿಂದ ತಿದ್ದಲು ಸ್ನೇಹಿತರ ಬೆಂಬಲ ಅಗತ್ಯ.
ಸಭ್ಯತೆ : ಸಹವರ್ತಿ ಕಲಿಕೆಯು ಎಲ್ಲಾ ವಿಷಯಗಳ ಸಂವಹನದಲ್ಲಿ ಅಂದರೆ ಸ್ನೇಹಿತರೊಂದಿಗೆ, ಗುರುಗಳೊಂದಿಗೆ, ಹಿರಿಯರೊಂದಿಗೆ ಶಿಷ್ಟರಾಗಿರುವುದನ್ನು ಕಲಿಸುತ್ತದೆ. ಸಹವರ್ತಿ ಕಲಿಕೆಯಲ್ಲಿ ಮುಕ್ತವಾದ ಸಂವಹನ ಇರುವುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಸಮರ್ಥನೆಯನ್ನು ಸ್ಪಷ್ಟ ಅಭಿಪ್ರಾಯದೊಂದಿಗೆ ತಿಳಿಸಲು ಸಹಕಾರಿ. ನಿರ್ಧಾರ ಅಥವಾ ವರ್ತನೆ ಏಕೆ ಸೂಕ್ತವಾಗಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲು ಹಾಗೂ ಇತರರಲ್ಲಿ ಸಭ್ಯತೆ ಬೆಳೆಸಿಕೊಳ್ಳಲು ಸಹವರ್ತಿ ಕಲಿಕೆ ಸಹಕಾರಿ.
ಹಂಚಿಕೊಳ್ಳುವಿಕೆ : ಯಶಸ್ಸಿನ ಸಂತೋಷದ ಕ್ಷಣಗಳನ್ನು, ನೋವು-ನಲಿವುಗಳನ್ನು, ದುಃಖ-ದುಮ್ಮಾನಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ಸಹವರ್ತಿಗಳಿಂದ ಕಲಿಯಬಹುದು. ಸರಳ ಪದಗಳಲ್ಲಿ ಅನುಭವಗಳನ್ನು ಹಂಚಿಕೊಳ್ಳಲು ಇದು ಸಹಾಯಕ. ಹಂಚಿಕೊಳ್ಳುವಿಕೆ ಕೇವಲ ಭಾವನೆಗಳಿಗೆ ಮಾತ್ರ ಸೀಮಿತವಾಗಿರಬೇಕು, ಹಣ ಅಥವಾ ಐಹಿಕ ವಿಷಯಗಳಲ್ಲಿ ಇನ್ನೊಬ್ಬರ ಸ್ವಾತಂತ್ರ ದುರುಪಯೋಗ ಒಳ್ಳೆಯದಲ್ಲ ಎಂಬುದನ್ನು ಕೂಡಾ ಸಹವರ್ತಿ ಕಲಿಕೆ ಕಲಿಸುತ್ತದೆ.
ವಿಶ್ವಾಸದ ಉಲ್ಲಂಘನೆ ತಡೆಯುತ್ತದೆ : ಸಹವರ್ತಿ ಕಲಿಕೆಯು ನಂಬಿಕೆಗೆ ಯೋಗ್ಯವಾದ  ಮಾಹಿತಿಯ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ. ಆ ಮೂಲಕ ಅವರ ನಡುವಿನ ವಿಶ್ವಾಸದ ಉಲ್ಲಂಘನೆಯನ್ನು ತಡೆಯುತ್ತದೆ. ಒಂದು ವೇಳೆ ಮಾಹಿತಿ ಸೋರಿಕೆಯಾದರೆ ಸ್ನೇಹಬಂಧ ಕಳಚುತ್ತದೆ ಎಂಬ ಭಯ ಇರುವುದರಿಂದ ಸ್ನೇಹಿತರು ಹೆಚ್ಚು ಆಪ್ತಮಿತ್ರರಾಗುತ್ತಾರೆ.
ಭಿನ್ನಾಭಿಪ್ರಾಯಗಳು ದೂರ : ಚಿಕ್ಕ ಚಿಕ್ಕ ವಾದಗಳು ಮತ್ತು ಘರ್ಷಣೆಗಳು ಸ್ನೇಹದ ಭಾಗಗಳಾಗಿರುತ್ತವೆ. ವಾದ ಮತ್ತು ಘರ್ಷಣೆಗಳಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಈ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಸಹವರ್ತಿ ಕಲಿಕೆ ಏಕಮಾದ್ವಿತೀಯ. ವಾದ ಮತ್ತು ಘರ್ಷಣೆಗಳು ಪ್ರತಿಯೊಬ್ಬರ ಅನುಭವ ಮತ್ತು ಅನಿಸಿಕೆಗಳಾಗಿರುತ್ತವೆ ಎಂಬುದನ್ನು ಸ್ಪಷ್ಟವಾಗುತ್ತದೆ. ಹಾಗಾಗಿ ಭಿನ್ನಾಭಿಪ್ರಾಯ ಮರೆತು ಐಕ್ಯತೆಯಿಂದ ಮನ್ನುಗ್ಗುವ ಗುಣಗಳು ಬೆಳೆಯುತ್ತವೆ.
ನಿಗದಿತ ಅಂತರ ಕಾಯ್ದುಕೊಳ್ಳುತ್ತದೆ : ಪ್ರತಿಯೊಬ್ಬರಿಗೂ ಕೆಲವು ವೇಳೆ ಏಕಾಂತತೆ ಅಗತ್ಯ. ಸ್ನೇಹಿತರ ಭಾವನೆಗಳನ್ನು ಅರ್ಥಮಾಡಿಕೊಂಡ ನಂತರ ಅವರೊಂದಿಗೆ ನಿಗದಿತ ಅಂತರ ಕಾಪಾಡಿಕೊಳ್ಳುವುದನ್ನು ಸಹವರ್ತಿ ಕಲಿಕೆ ಕಲಿಸುತ್ತದೆ. ಪದೇ ಪದೇ ತಮ್ಮ ಬೇಡಿಕೆ ಪೂರೈಕೆಗೆ ಸ್ನೇಹಿತರನ್ನು ಒತ್ತಾಯಿಸುವುದನ್ನು ತಪ್ಪಿಸಿ ಸ್ವಾವಲಂಬಿಯಾಗಿ ಬೆಳೆಯಲು ಪ್ರಚೋದಿಸುತ್ತದೆ.
ಪ್ರೀತಿ ಮತ್ತು ಗೌರವ : ಪ್ರೀತಿ ಮತ್ತು ಗೌರವಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಏಕೆಂದರೆ  ಪ್ರೀತಿ ಇರುವಲ್ಲಿ ಗೌರವವಿದೆ, ಗೌರವ ಇರುವಲ್ಲಿ ಪ್ರೀತಿ ಇದೆ. ಪರಸ್ಪರರನ್ನು ಅರ್ಥಮಾಡಿಕೊಂಡ ಮೇಲೆ ಅವರ ನೋವಿಗೆ ಚಿಕಿತ್ಸೆ ನೀಡಲು ಮುಂದಾಗುವುದನ್ನು ಕಲಿಸುತ್ತದೆ. ಇದರಿಂದ ಪರಸ್ಪರರ ಪ್ರೀತಿ ಮತ್ತು ಗೌರವಗಳು ಹೆಚ್ಚಾಗುತ್ತವೆ. ‘ಪ್ರೀತಿ ಮತ್ತು ಗೌರವ ಇಲ್ಲದೆಡೆ ಸಂಬಂಧಕ್ಕೆ ಬೆಲೆಯಿಲ್ಲ’ ಎಂಬುದನ್ನು ಕಲಿಸುತ್ತದೆ.
ಕ್ಷಮೆ : ಇಲ್ಲಿ ಯಾರೂ ಪರಿಪೂರ್ಣರಲ್ಲ ಎಂಬುದು ಸಹವರ್ತಿ ಕಲಿಕೆಯಿಂದ ಸ್ಪಷ್ಟವಾಗುತ್ತದೆ. ಸಹಚರರೊಂದಿಗೆ ಕಲಿಯುವಾಗ ಇತರರ ನ್ಯೂನತೆಗಳೂ ಸಹ ಗೋಚರವಾಗುತ್ತವೆ. ಹಾಗೇಯೇ ಪರಸ್ಪರರ ತಪ್ಪುಗಳನ್ನು ಕ್ಷಮಿಸುವ ಕ್ಷಮಾಗುಣವು ಅವರ ಅರಿವಿಗೆ ಬಾರದಂತೆ ಮೂಡುತ್ತದೆ.
    ಮೇಲಿನ ಅಂಶಗಳಲ್ಲದೇ ಹಲವಾರು ಮೌಲ್ಯಗಳು ಸಹವರ್ತಿ ಕಲಿಕೆಯಿಂದ ಅಂತರ್ಗತವಾಗಿ ಬೆಳೆಯುತ್ತವೆ. ಇಂತಹ ಮೌಲ್ಯಗಳನ್ನು ಯಾವ ಪಠ್ಯಪುಸ್ತಕವೂ, ಯಾವ ವಿಶ್ವವಿದ್ಯಾನಿಲಯವೂ ಕಲಿಸಲಾರದು. ಅವುಗಳನ್ನು ಕಲಿಯಲು ಮತ್ತು ಕಲಿಸಲು ಇರುವ ಸುಲಭ ಮಾರ್ಗವೆಂದರೆ ಸಹವರ್ತಿ ಕಲಿಕೆ ಮಾತ್ರ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇಂತಹ ಮೌಲ್ಯಗಳನ್ನು ನಮ್ಮ ಮಕ್ಕಳಲ್ಲಿ ಬೆಳೆಸಲು ಸಹವರ್ತಿ ಕಲಿಕೆಯನ್ನು ಬೆಂಬಲಿಸೋಣ ಮತ್ತು ಹೆಚ್ಚು ಹೆಚ್ಚು ಬಳಸೋಣವೇ?
                                                                        ಆರ್.ಬಿ.ಗುರುಬಸವರಾಜ
“ಗುರುಮಾರ್ಗ” ಆಗಸ್ಟ್ 2014