December 11, 2021

ಕೌಶಲ್ಯವಂತರಿಗೆ ಶಿಲ್ಪಕಲಾ ಕೋರ್ಸ್ ಕೋರ್ಸ್ ಉಚಿತ, ಜಾಬ್ ಖಚಿತ

 ದಿನಾಂಕ 24-7-2019ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ.


ಕೌಶಲ್ಯವಂತರಿಗೆ ಶಿಲ್ಪಕಲಾ ಕೋರ್ಸ್

ಕೋರ್ಸ್ ಉಚಿತ, ಜಾಬ್ ಖಚಿತ



ಉತ್ತಮ ನೌಕರಿ ಗಳಿಸುವ ಹಾಗೂ ಪ್ರತಿ ತಿಂಗಳೂ ನಿಗದಿತ ವೇತನ ಪಡೆಯುವ ಆಸೆ ಪ್ರತಿಯೊಬ್ಬ ವಿದ್ಯಾವಂತರಿಗೂ ಇರುತ್ತದೆ. ಆದರೆ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಲ್ಲರೂ ನೂರಕ್ಕೆ ನೂರು ಅಂಕ ಗಳಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬರ ಕಲಿಕಾ ವಿಧಾನ ಭಿನ್ನ ಭಿನ್ನ. ಕಡಿಮೆ ಅಂಕ ಬಂದವರೆಲ್ಲ ದಡ್ಡರಲ್ಲ ಎಂಬುದಕ್ಕೆ ನಮ್ಮ ನಿತ್ಯ ಜೀವನದಲ್ಲಿ ಅನೇಕರು ಸಾಕ್ಷಿಯಾಗುತ್ತಾರೆ. ಒಬ್ಬ ಆಟೋಮೋಬೈಲ್ ಇಂಜಿನಿಯರ್ ತನ್ನ ಬೈಕನ್ನು ಅನಕ್ಷರಸ್ಥ/ಅರೆ-ಅಕ್ಷರಸ್ಥ ಮೆಕ್ಯಾನಿಕ್‌ನ ಬಳಿ ಕೊಟ್ಟು ರಿಪೇರಿ ಮಾಡಿಸಿಕೊಳ್ಳುತ್ತಾನೆ. ಇದು ತಾತ್ವಿಕ ವಿದ್ಯೆಗೂ ಮತ್ತು ಪ್ರಾಯೋಗಿಕ ವಿದ್ಯೆಗೂ ಇರುವ ವ್ಯತ್ಯಾಸ. ಭಾರತದಂತಹ ರಾಷ್ಟçದಲ್ಲಿ ಎಲ್ಲರಿಗೂ ನೌಕರಿ ಸಿಗಲು ಸಾಧ್ಯವಿಲ್ಲ. ಹಾಗಾಗಿ ಜೀವನ ನಿರ್ವಹಣೆಗೆ ಕೌಶಲ್ಯಾಧಾರಿತ ಜ್ಞಾನ ಗಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಕೌಶಲ್ಯ ಗಳಿಸಿಕೊಳ್ಳಲು ಇಂದು ಹಲವಾರು ಅವಕಾಶಗಳಿವೆ.

ನಿಗದಿತ ಶುಲ್ಕ ಸ್ವೀಕರಿಸಿ ಕೌಶಲ್ಯ ಕಲಿಸಲು ಅನೇಕ ಕಾಲೇಜು/ಶಿಕ್ಷಣ ಸಂಸ್ಥೆಗಳಿವೆ. ಆದರೆ ಇಲ್ಲೊಂದು ಕೋರ್ಸ್ ಉಚಿತ ಕೌಶಲ್ಯ ಕಲಿಸುವ ಜೊತೆಗೆ ಉದ್ಯೋಗ ಭರವಸೆಯನ್ನೂ ನೀಡುತ್ತದೆ. ಹಾಗಾದರೆ ಆ ಕೋರ್ಸ್ ಯಾವುದು? ಉದ್ಯೋಗ ಭರವಸೆ ಏನು? ಇತ್ಯಾದಿ ಕುರಿತ ಮಾಹಿತಿಗಾಗಿ ಮುಂದೆ ಓದಿ. 

ಚಿತ್ರಕಲಾ ಮತ್ತು ಶಿಲ್ಪಕಲಾ ತರಬೇತಿ : ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಎಲ್ಲರಿಗೂ ಗೊತ್ತು. ಅಲ್ಲಿನ ಶಿಲ್ಪಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತವೆ. ಸಿಮೆಂಟ್ ಶಿಲ್ಪಗಳ ರಚನೆ ಮತ್ತು ವರ್ಣಲೇಪನ ಎಲ್ಲರಿಗೂ ತುಂಬಾ ಇಷ್ಟವಾಗುತ್ತವೆ. ಅಂತಹ ಅತ್ಯಾಕರ್ಷಕ ಕಲೆಯನ್ನು ಕಲಿಸುವುದೇ ಚಿತ್ರಕಲಾ ಮತ್ತು ಶಿಲ್ಪಕಲಾ ತರಬೇತಿ. ಹಾವೇರಿ ಜಿಲ್ಲೆ ಗೊಟಗೋಡಿಯ ಶಿಲ್ಪಕಲಾ ಕುಟೀರ ಸಂಸ್ಥೆಯು ಕಳೆದ 18 ವರ್ಷಗಳಿಂದ ಇಂತದ್ದೊAದು ತರಬೇತಿ ನೀಡುತ್ತಿದೆ. ಈಗಾಗಲೇ 3000 ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆದು ದೇಶದ ವಿವಿಧ ಭಾಗಗಳಲ್ಲಿ ಉದ್ಯೋಗ ನಡೆಸುತ್ತಿದ್ದಾರೆ.  

ಇದು 5 ವರ್ಷಗಳ ಕೋರ್ಸ್ ಆಗಿದ್ದು, ಚಿತ್ರಕಲೆ ಹಾಗೂ ಶಿಲ್ಪಕಲೆಯ ಮೂಲಾಂಶಗಳು, ಚಿತ್ರ/ಶಿಲ್ಪ ರಚನೆಯ ತಂತ್ರಗಾರಿಕೆ, ಶಿಲ್ಪ ಹಾಗೂ ವರ್ಣ ಸಂಯೋಜನೆ, ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಶಿಲ್ಪ ರಚನೆಯ ವಿನ್ಯಾಸಗಾರಿಕೆ, ಚಿತ್ರ/ಶಿಲ್ಪಗಳನ್ನು ನಾಜೂಕುಗೊಳಿಸುವಿಕೆ, ಮುಂತಾದ ಕೌಶಲ್ಯಗಳನ್ನು ಪ್ರಾಯೋಗಿಕ ಅನುಭವದ ಮೂಲಕ ಕಲಿಸಲಾಗುತ್ತದೆ. 

ಅರ್ಹತೆ ಮತ್ತು ವಯೋಮಿತಿ: ಕನಿಷ್ಠ 10 ನೇ ತರಗತಿ, ಗರಿಷ್ಠ ಪಿ.ಯು.ಸಿ. ಇಲ್ಲಿ ಅನುತ್ತೀರ್ಣರಾದವರಿಗೂ ಕಲಿಯಲು ಅವಕಾಶ ಇದೆ. 16 ರಿಂದ 20 ವರ್ಷದೊಳಗಿನವರಿಗೆ ಮಾತ್ರ ಕೋರ್ಸ್ಗೆ ಸೇರಲು ಅವಕಾಶ. ನಿಗದಿತ ಸೀಟುಗಳಿಗೆ ಮಾತ್ರ ಲಭ್ಯ ಇರುವುದರಿಂದ ಮೊದಲು ಬಂದ ಆಸಕ್ತರಿಗೆ ಮಾತ್ರ ಅವಕಾಶ.

ಉದ್ದೇಶಗಳು : 

ಸ್ಕಿಲ್ ಇಂಡಿಯಾಕ್ಕೆ ಪೂರಕವಾಗಿ ಕೌಶಲ್ಯವಂತ ಯುವಕರ ನಿರ್ಮಾಣ.

ನಿರುದ್ಯೋಗ ನಿವಾರಣೆಗೆ ಸೂಕ್ತ ತಂತ್ರಗಾರಿಕೆ.

ಸ್ವಾವಲAಬಿ ಯುವಕರನ್ನು ರೂಪಿಸುವುದು.

ಕಲಿಕಾ ಆಸಕ್ತಿಗೆ ಅನುಗುಣವಾದ ತರಬೇತಿ.

ಉತ್ತಮ ಕೌಶಲ್ಯಯುಕ್ತ ತಂಡ ರಚನೆ.

ಕಲಿಯುತ್ತಾ ಗಳಿಸು : ಇಲ್ಲಿ ಕೇವಲ ಕಲಿಕೆ ಇಲ್ಲ. ಕಲಿಕೆಯ ಜೊತೆಗೆ ಪ್ರತಿ ತಿಂಗಳು ಹಣ ಗಳಿಕೆಯೂ ಇದೆ. ಅಂದರೆ ಪ್ರತಿ ತಿಂಗಳು ಸ್ಟೆöÊಫಂಡರಿ ಇದೆ. ಮೊದಲನೆ ವರ್ಷ ಪ್ರತಿ ತಿಂಗಳು 2000 ರೂ. ಇದ್ದರೆ ಐದನೆ ವರ್ಷ ಪ್ರತಿ ತಿಂಗಳು 6000 ರೂ. ಇದೆ. ಹಾಗಾಗಿ ಈ ಕೋರ್ಸ್ ಯಾರಿಗೂ ಹೊರೆ ಎನಿಸುವುದಿಲ್ಲ.

ಉಚಿತ ಕೋರ್ಸ್ : ಕೋರ್ಸ್ಗೆ ಯಾವುದೇ ಶುಲ್ಕವಿಲ್ಲ. ಸಂಪೂರ್ಣ ಉಚಿತ. ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಗಾಗಿ ಸಂಸ್ಥೆಯು ಪ್ರತಿ ತಿಂಗಳು 2500 ರೂ.ಗಳನ್ನು(ಸ್ಟೆöÊಫಂಡರಿ ಹೊರತುಪಡಿಸಿ) ಹೆಚ್ಚುವರಿಯಾಗಿ ನೀಡುತ್ತದೆ.

ಖಚಿತ ಉದ್ಯೋಗ : ಕೋರ್ಸ್ ಮುಗಿದ ನಂತರ ಅಲ್ಲಿಯೇ ಉದ್ಯೋಗಾವಕಾಶದ ಅವಕಾಶ ಇರುತ್ತದೆ. ಕೌಶಲ್ಯಕ್ಕೆ ತಕ್ಕಂತೆ ಪ್ರತಿತಿಂಗಳು 25,000 ದಿಂದ 1,00,000 ರೂ.ಗಳವರೆಗೆ ವೇತನ ಪಡೆಯಬಹುದು. ಉದ್ಯೋಗದ ವೇಳೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಸ್ವತಂತ್ರ ಉದ್ಯೋಗ ಮಾಡಲು ಬಯಸಿದಲ್ಲಿ ಸಂಸ್ಥೆಯು ಸೂಕ್ತ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತದೆ. ವಿವರಗಳಿಗೆ 9620270920 ಅಥವಾ 9739257237 ಸಂಖ್ಯೆಗಳನ್ನು ಸಂಪರ್ಕಿಸಿರಿ.

ಆರ್.ಬಿ.ಗುರುಬಸವರಾಜ

ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು

ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)

9902992905



ಜೀವವೈವಿಧ್ಯ ಉಳಿಸೋಣ - ಸ್ವಾಯತ್ತತೆ ಮೆರೆಯೋಣ

  ಮಾರ್ಚ-2019ರ ಜೀವನ ಶಿಕ್ಷಣ ಮಾಸಿಕದಲ್ಲಿ ಪ್ರಕಟವಾದ ನನ್ನ ಬರಹ. 

ಜೀವವೈವಿಧ್ಯ ಉಳಿಸೋಣ - ಸ್ವಾಯತ್ತತೆ ಮೆರೆಯೋಣ


ಭಾರತವು ಜೈವಿಕ ಮತ್ತು ಸಾಂಸ್ಕೃತಿಕ ವೈವಿಧ್ಯದ ದೇಶವಾಗಿದೆ. ವಿಶ್ವದ 10 ಮಹಾ ಜೈವಿಕ ಸಂಪತ್ತಿನ ದೇಶಗಳಲ್ಲಿ ಒಂದಾಗಿದೆ. ಕೃಷಿ, ಮೀನುಗಾರಿಕೆಯಂತಹ ಚಟುವಟಿಕೆಗಳ ಪಾರಂಪರಿಕ ಜ್ಞಾನಸಂಪತ್ತನ್ನು ಹೊಂದಿರುವ ಅತಿಹೆಚ್ಚು ಜನಸಮುದಾಯಗಳು ಮತ್ತು ಚಲನಶೀಲ ಗುಂಪುಗಳು ಭಾರತ ದೇಶದಲ್ಲಿವೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯಿಂದ ಜೈವಿಕ ವೈವಿಧ್ಯ ಮತ್ತು ಪಾರಂಪರಿಕ ಜ್ಞಾನವೂ ಸೇರಿದಂತೆ ಜೀವವೈವಿಧ್ಯಕ್ಕೆ ಸಂಬAಧಿತ ಜ್ಞಾನದ ಮೌಲ್ಯವರ್ಧನೆಯಾಗಿದೆ. ಹಿಂದಿಗಿAತಲೂ ಇಂದು ಜೈವಿಕವೈವಿಧ್ಯ, ಜೈವಿಕ ಸಂಪನ್ಮೂಲಗಳು, ಸಂಬAಧಿಸಿದ ಪಾರಂಪರಿಕ ಜ್ಞಾನದ ಬೆಳವಣಿಗೆಯ ಮಹತ್ವವು ನಿಚ್ಛಳವಾಗಿ ಮನವರಿಕೆಯಾಗಿದೆ. ಜೈವಿಕವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆಯ ದಾಖಲಾತಿಯು ಜೀವವೈವಿಧ್ಯ ದಾಖಲಾತಿಯ ಮೊದಲ ಹೆಜ್ಜೆಯಾಗಿದೆ. 

ಜನತಾ ಜೀವವೈವಿಧ್ಯ ನಿರ್ವಹಣಾ ಸಮಿತಿ : ಇದು ಸ್ಥಳೀಯ ಸಂಸ್ಥೆಗಳ ಅಂದರೆ ಗ್ರಾಮ ಪಂಚಾಯ್ತಿ/ಸ್ಥಳೀಯ ಸರಕಾರಗಳ ವ್ಯಾಪ್ತಿಯಲ್ಲಿನ ಜೀವ ಪರಂಪರೆಯನ್ನು ದಾಖಲಿಸುವ ಮತ್ತು ಅವುಗಳನ್ನು ಸಂರಕ್ಷಿಸುವ ಸಮಿತಿಯಾಗಿದೆ. ಆ ಪ್ರದೇಶದ ಗಿಡ, ಮರ, ಪ್ರಾಣಿ, ಪಕ್ಷಿ ಒಟ್ಟಾರೆ ಜೀವಸಂಕುಲದ ಮಾಹಿತಿಯನ್ನು ದಾಖಲಿಸುವ ಏಕೈಕ ಅಧಿಕೃತ ಸಮಿತಿಯಾಗಿದೆ. 

ಜನತಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಮುಖ್ಯ ಕಾರ್ಯವೆಂದರೆ, ಜನರ ಜೀವವೈವಿಧ್ಯತೆ ದಾಖಲೆಗಳನ್ನು ತಯಾರಿಸುವದು. ಜನತಾ ಜೀವವೈವಿಧ್ಯ ದಾಖಲಾತಿಯು ಜೈವಿಕ ಸಂಪನ್ಮೂಲಗಳು ಮತ್ತು ಅವುಗಳಿಗೆ ಸಂಬAಧಿಸಿದ ಸಾಂಪ್ರದಾಯಿಕ ಜ್ಞಾನಗಳನ್ನು ತಿಳಿಯುವ ವಿಸ್ತಾರವಾದ ಸರಳ ದಾಖಲಾತಿಯಾಗಿದೆ. ಈ ಜೀವವೈವಿಧ್ಯ ದಾಖಲಾತಿಗಳ ತಯಾರಿಕೆಯು ಮಹತ್ತರ ಕಾರ್ಯವಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಜ್ಞಾನ ಹೊಂದಿರುವ ವ್ಯಕ್ತಿಗಳು ಪಾಲ್ಗೊಂಡಿರುತ್ತಾರೆ.

ಯುವಕರಿಗೆ ಆಗುವ ಪ್ರಯೋಜನಗಳು:

ಜನತಾ ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುವುದಿರಿಂದ ಅನೇಕ ಪ್ರಯೋಜನಗಳಿವೆ. ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

ಸ್ಥಳೀಯ ಸಂಪನ್ಮೂಲದ ಜ್ಞಾನ ದೊರೆಯುತ್ತದೆ.

ಸ್ಥಳೀಯ ಸಸ್ಯ, ಪ್ರಾಣಿ, ಕೀಟ ಹಾಗೂ ಪಕ್ಷಿ ಪ್ರಪಂಚದ ಅರಿವು ಮೂಡುತ್ತದೆ. 

ಪ್ರತೀ ಪ್ರಾಣಿ. ಪಕ್ಷಿ, ಸಸ್ಯಗಳ ವೈಜ್ಞಾನಿಕ ಹೆಸರು ಹಾಗೂ ಅವುಗಳ ಮೂಲದ ಬಗ್ಗೆ ಜ್ಞಾನ ದೊರೆಯುತ್ತದೆ.

ಪರಿಸರ ವ್ಯವಸ್ಥೆಯ ರಚನೆ, ಕಾರ್ಯ ಮತ್ತು ಪರಸ್ಪರ ಕ್ರಿಯೆಗಳ ಕುರಿತ ಸಂಶೋಧನೆ ಕೈಗೊಳ್ಳಲು ಸಹಕಾರಿ.

ಸ್ಥಳೀಯ ಸಂರಕ್ಷಣಾ ಯೋಜನೆಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಮುಂದಿನ ಜೀವನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಸಹಕಾರಿ.

ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಹೊಸ ಆಲೋಚನೆಗಳ ಸೃಷ್ಟಿ.

ಔಪಚಾರಿಕ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣ ವ್ಯವಸ್ಥೆಯನ್ನು ತಳುಕು ಹಾಕುವುದು.

ಸ್ಥಳೀಯ ಔಷಧ ಸಸ್ಯಗಳನ್ನು ಬಳಸಿ ಔಷದೋಪಚಾರ ನೀಡುವ ನಾಟಿ ವೈದ್ಯಜ್ಞಾನ ಬೆಳೆಸಿಕೊಳ್ಳಲು ಸಹಕಾರಿ.

ಸ್ಥಳೀಯ ವಿಶೇಷ ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳ ಸಂರಕ್ಷಣೆಯ ಅರಿವು ಮೂಡುತ್ತದೆ.

ಸ್ಥಳೀಯ ಸರಕಾರಕ್ಕೆ ಪ್ರಜ್ಞಾವಂತಿಕೆಯ ಕೊಡುಗೆ ನೀಡಿದ ಧನ್ಯತೆ ದೊರೆಯುತ್ತದೆ.

ಸ್ಥಳೀಯ ಸರಕಾರದ ಆಡಳಿತದಲ್ಲಿ ಭಾಗಿಯಾದ ಸಂತಸ ದೊರೆಯುತ್ತದೆ. 

ದಾಖಲಾತಿ ಸಮಯದಲ್ಲಿ ವಿವಧ ಜ್ಞಾನಶೀಲ ವ್ಯಕ್ತಿಗಳ ಪರಿಚಯವಾಗುತ್ತದೆ. ಇದು ಮುಂದಿನ ಜೀವನಕ್ಕೆ ಸಹಕಾರಿ.

ಮಹತ್ತರ ದಾಖಲಾತಿಯಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಜನರಿಂದ ಪ್ರಶಂಶೆ ದೊರೆಯುತ್ತದೆ.

ದಾಖಲಾತಿಯ ಅವಶ್ಯಕತೆ : ಸ್ಥಳಿಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಸ್ಥಳೀಯ ಜ್ಞಾನ/ಸಂಪನ್ಮೂಲಕ್ಕೆ ಸ್ವಾನುಭೂತ(ಪೇಟೆಂಟ್) ಪಡೆಯುವುದು. ಇತ್ತೀಚಿನ ವರ್ಷಗಳಲ್ಲಿ ಅಮೇರಿಕಾ, ಜಪಾನ, ಯುರೋಪ ದೇಶಗಳು ಭಾರತೀಯ ಮೂಲದ ಬಾಸುಮತಿ, ಬೇವು, ಅರಿಷಿಣ, ನೆಲ್ಲಿ, ಮತ್ತು ಸಾಸಿವೆಗಳನ್ನು ಪೇಟೆಂಟ್ ಮಾಡಿಕೊಂಡಿವೆ. ಇಂತಹ ಸ್ಥಳೀಯ ಸಂಪನ್ಮೂಲಗಳನ್ನು ಸಂರಕ್ಷಿಸುವ, ಅದು ದೇಶಾಂತರಗೊಳ್ಳದAತೆ ಹಾಗೂ ಅದರ ಲಾಭಾಂಶ ಬೇರೆಯವರ ಪಾಲಾಗದಂತೆ ತಡೆಯುವುದು ಇಂದಿನ ಅಗತ್ಯವಾಗಿದೆ.

ಜೀವವೈವಿಧ್ಯ ದಾಖಲಾತಿಯ ಉದ್ದೇಶಗಳು :

ಜೈವಿಕ ಸಂಪನ್ಮೂಲಗಳ ಕಳ್ಳಸಾಗಣೆ ತಡೆಯುವುದು.

ಸ್ಥಳೀಯ ಜೀವವೈವಿಧ್ಯತೆಯಿಂದ ಬಂದ ಲಾಭದಲ್ಲಿ ಸಮಪಾಲು ಪಡೆಯುವ ಹಕ್ಕು ಒದಗಿಸುವುದು.

ಜನಪರ ಯೋಜನೆಗಳನ್ನು ಜೀವವೈವಿಧ್ಯ ದಾಖಲಾತಿ ಅಡಿಯಲ್ಲಿ ತರುವುದು.

ಸ್ಥಳೀಯ ಸಂಪನ್ಮೂಲಗಳ ಜ್ಞಾನ ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಯುವಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ದೊರೆಯುವಂತೆ ಮಾಡುವುದು.

ಸ್ಥಳೀಯ ಜೀವವೈವಿಧ್ಯತೆ ಆಧರಿಸಿ ಸಂಶೋಧನೆಗಳನ್ನು ಕೈಗೊಳ್ಳುವುದು.

ದಾಖಲಿಸುವ ಅಂಶಗಳು : ಆ ಪ್ರದೇಶ ವ್ಯಾಪ್ತಿಯಲ್ಲಿನ ಸಸ್ಯ, ಪ್ರಾಣಿ ಹಾಗೂ ಪಕ್ಷಿಸಂಕುಲಗಳು, ಔಷಧಿಯ ಸಸ್ಯಗಳು, ಆಹಾರ ಬೆಳೆಗಳು, ವಾಣಿಜ್ಯ ಬೆಳೆಗಳು, ತರಕಾರಿಗಳು, ಹಣ್ಣುಗಳು, ಹೂಗಳು, ಮಸಾಲೆ ಪದಾರ್ಥಗಳು, ಹುಲ್ಲು ಸಸ್ಯಗಳು, ಅಲಂಕಾರಿಕ ಸಸ್ಯಗಳು, ಬೇಲಿ ಸಸ್ಯಗಳು, ಮಣ್ಣಿನ ವಿಧಗಳು, ಸಾಕು ಪ್ರಾಣಿಗಳು, ಕಾಡು ಪ್ರಾಣಿಗಳು, ಕೀಟಗಳು, ಚಿಟ್ಟೆಗಳ ಪ್ರಾದೇಶಿಕ ಹೆಸರುಗಳು ಮತ್ತು ಅವುಗಳ ವೈಜ್ಞಾನಿಕ ಹೆಸರುಗಳು, ವಿವಿಧ ಜನ ಸಮುದಾಯಗಳು(ವೃತ್ತಿ ಪರರು), ವಿವಿಧ ಭೂದೃಶ್ಯಗಳು(ಗುಡ್ಡ, ಬೆಟ್ಟ, ಸಮತಟ್ಟು, ಅರಣ್ಯ, ಕೆರೆ, ಹಳ್ಳ, ಬಾವಿ, ಚೆಕ್ ಡ್ಯಾಂ, ನದಿ), ಅಲ್ಲಿನ ಜನಸಂಖ್ಯೆ, ಸಾಕ್ಷರತೆಯ ಮಟ್ಟ, ಮೂಲಭೂತ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ವ್ಯವಸ್ಥೆ, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, ಜನರ ವಾರ್ಷಿಕ ತಲಾ ಆದಾಯ  ಹೀಗೆ ಆ ಪ್ರದೇಶದ ಒಟ್ಟಾರೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.

ದಾಖಲಿಸುವಾಗ ಯುವಕರು ಗಮನಿಸಬೇಕಾದ ಅಂಶಗಳು :

ಜೈವಿಕವೈವಿಧ್ಯ ದಾಖಲಾತಿಗೆ ಸಮಯದಲ್ಲಿ ಯುವಕರು ಈ ಕೆಳಕಂಡ ವಿಷಯಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.

ಗ್ರಾಮದ ವಿವಿಧ ರೀತಿಯ ಜನತೆಯ ಸಹಭಾಗಿತ್ವ ಪದ್ಧತಿಯಲ್ಲಿ ದಾಖಲಾತಿಯನ್ನು ಕೈಗೊಳ್ಳಬೇಕು.

ಗಂಡಸರ/ಹೆAಗಸರ ಜ್ಞಾನ ಮತ್ತು ದೃಷ್ಠಿ ಕೋನಗಳನ್ನು ದಾಖಲಿಸಬೇಕು.

ಜನತೆಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ ದಾಖಲಾತಿಯನ್ನು ಮಾಡುವುದಕ್ಕಿಂತ ಮುಂಚೆ, ತಜ್ಞ ಸಲಹಾ ಗುಂಪಿನಿAದ ಪರಿಶೀಲನೆ, ವಿಂಗಡಣೆ ಮತ್ತು ವಿಚಾರಣೆಗೊಳಪಡಿಸಬೇಕು.

ಜನತಾ ಜೀವವೈವಿಧ್ಯದಾಖಲಾತಿಯು ಬಹು ಮುಖ್ಯ ಮೂಲವಾದ ಕಾನೂನಾತ್ಮಕ ಪ್ರಥಮ ಪ್ರಾಶಸ್ತö್ಯದ ಜ್ಞಾನವಾಗಿರುವುದರಿಂದ ಬಹಳ ಎಚ್ಚರಿಕೆಯಿಂದ ದಾಖಲಾತಿ ಮಾಡಬೇಕು.

ಯಾವುದೇ ಪ್ರಾಣಿ, ಪಕ್ಷಿ, ಸಸ್ಯ, ಕೀಟಗಳು ದಾಖಲಾತಿಯಿಮದ ಹೊರಗುಳಿಯದಂತೆ ಜಾಗ್ರತೆ ವಹಿಸುವುದು.

ಜೈವಿಕವೈವಿಧ್ಯ ದಾಖಲಾತಿಯು, ಶಾಲಾ-ಕಾಲೇಜುಗಳಲ್ಲಿ ಪರಿಸರ ಅಧ್ಯಯನ ಕುರಿತು ಬೋಧಿಸಲು ಸೂಕ್ತ ಮತ್ತು ಉಪಯುಕ್ತ ಆಧಾರವಾಗಿದೆ. ಆದ್ದರಿಂದ ಪಾರದರ್ಶಕ ದಾಖಲಾತಿ ಆಗುವಂತೆ ಎಚ್ಚರಿಕೆ ವಹಿಸುವುದು. 

ಜೈವಿಕವೈವಿಧ್ಯ ದಾಖಲಾತಿಗೆ ಪೂರಕ ಮತ್ತು ಹೊಸ ಮಾಹಿತಿಗಳು ಲಭ್ಯವಾದಾಗ ಮತ್ತು ನಿಯಮಿತ ಅವಧಿಯಲ್ಲಿ ದಾಖಲಾತಿಯನ್ನು ಖಾತರಿಗೊಳಿಸುವುದು.

ಯುವಕರ ಪಾತ್ರ :

ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಸ್ಥಳೀಯ ಸಂಪನ್ಮೂಲ ಸಂರಕ್ಷಣೆ ಯುವಕರ ಹೊಣೆಯಾಗಿದೆ. ಇಂದಿನ ಯುವಕರೇ ನಾಳಿನ ಭವ್ಯ ಭಾರತದ ಪ್ರಜೆಗಳಾಗಿರುವುದರಿಂದ ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಸ್ಥಳೀಯ ಜೀವವೈವಿಧ್ಯತೆಯ ಬಗ್ಗೆ ಮಾಹಿತಿ ತಿಳಿಯುವದರಿಂದ ಜ್ಞಾನವಲಯ ವಿಸ್ತರಿಸುತ್ತದೆ. ಸಕಾಲದಲ್ಲಿ ಆ ಜ್ಞಾವನ್ನು ವಿಸ್ತರಿಸುವ ಹಾಗೂ ಅದನ್ನು ಬಳಸುವ ಅವಕಾಶಗಳು ಹೆಚ್ಚುತ್ತವೆ. ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರು ಕೆಳಗಿನ ಜವಾಬ್ದಾರಿಗಳನ್ನು ವಹಿಸಿದರೆ ಅಮೂಲ್ಯ ಮಾಹಿತಿಯುಳ್ಳ ಒಂದು ಉತ್ತಮ ಮಾರ್ಗದರ್ಶಿ ಕೈಪಿಡಿ ಹೊರತರಬಹುದು.

ಪಂಚಾಯ್ತಿ ಮಟ್ಟದಲ್ಲಿ ನಡೆಯುವ ಜೀವವೈವಿಧ್ಯ ದಾಖಲೀಕರಣಕ್ಕೆ ಅಗತ್ಯ ಸಹಾಯ ನೀಡುವುದು.

ಸ್ವಯಂ ಸೇವಕರಾಗಿ ದಾಖಲೀಕರಣದಲ್ಲಿ ಭಾಗವಹಿಸುವುದು.

ವಸ್ತುನಿಷ್ಠ ದಾಖಲೀಕರಣಕ್ಕೆ ಒತ್ತು ನೀಡುವುದು.

ಸ್ಥಳೀಯ ವಿಶೇಷ ಸಂಪನ್ಮೂಲಗಳನ್ನು ಗುರುತಿಸುವುದು.

ಸ್ಥಳೀಯ ವಿಶೇಷ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳ ಬಗ್ಗೆ ಅಧ್ಯಯನ/ಸಂಶೋಧನೆ ಕೈಗೊಳ್ಳುವುದು.

ಸ್ಥಳೀಯ ಸಂಪನ್ಮೂಲಗಳ ಲಾಭಾಂಶದ ಸಮಾನ ಹಂಚಿಕೆಯ ಬಗ್ಗೆ ಗಮನ ಹರಿಸುವುದು.

ಸಂಪನ್ಮೂಲವು ಸ್ಥಳೀಯ ಮೂಲವಾಗಿದ್ದರೆ ಪೇಟೆಂಟ್ ಪಡೆಯುವುದು.

ಸಂಪನ್ಮೂಲದ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಲಾಭ ದೊರೆಯುವಂತೆ ಮಾಡುವುದು.

ಸಂಪನ್ಮೂಲದ ಮಾಹಿತಿಯನ್ನು ಪರಸ್ಪರ ವರ್ಗಾವಣೆ/ಪ್ರಚಾರ ಮಾಡುವುದು.






ಆನೆ ಮತ್ತು ದುಂಬಿ

 ದಿನಾಂಕ  10-03-2019ರ ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಕ. 


ಆನೆ ಮತ್ತು ದುಂಬಿ


ಒAದು ದಿನ ಒಬ್ಬ ಶಿಷ್ಯ ತನ್ನ ಗುರುಗಳ ಜೊತೆ ಕಾಡಿನ ಮಾರ್ಗದಲ್ಲಿ ಹೆಜ್ಜೆ ಹಾಕುತ್ತಿದ್ದ. ಬಹಳ ದಿನಗಳಿಂದ ಅವನ ಮನಸ್ಸಿನಲ್ಲಿ ಪ್ರಶ್ನೆಯೊಂದು ಅಶಾಂತಿಯನ್ನುAಟು ಮಾಡಿತ್ತು. ಗುರುಗಳಲ್ಲಿ ಆ ಪ್ರಶ್ನೆ ಕೇಳಲು ಸೂಕ್ತ ಸಮಯಾವಕಾಶ ದೊರೆಯದೇ ಅದರ ಬಗ್ಗೆಯೇ ಯೋಚಿಸುತ್ತಿದ್ದ. ಕಾಡಿನ ಈ ಪ್ರಶಾಂತ ವಾತಾವರಣದಲ್ಲಿ ಪ್ರಶ್ನೆ ಕೇಳಲು ಮನಸ್ಸು ಮಾಡಿದ. “ಗುರುವೇ ಬಹಳ ಜನರ ಮನಸ್ಸು ವಿಶ್ರಾಂತ ರಹಿತವಾಗಿದೆ, ಆದರೆ ಕೆಲವೇ ಜನರ ಮನಸ್ಸು ಮಾತ್ರ ಶಾಂತವಾಗಿದೆ. ಮನಸ್ಸು ಸ್ಥಿರವಾಗಿರಬೇಕಾದರೆ ವ್ಯಕ್ತಿಯು ಏನು ಮಾಡಬೇಕು? ಎಂದು ಪ್ರಶ್ನಿಸಿದ. 

ಗುರುಗಳು ಶಿಷ್ಯನೆಡೆಗೆ ನೋಡಿ ನಗುತ್ತಾ ‘ಮಗುವೇ ಈ ಬಗ್ಗೆ ಒಂದು ಕತೆ ಹೇಳುತ್ತೇನೆ ಕೇಳು. ನಿನ್ನ ಪ್ರಶ್ನೆಗೆ ಉತ್ತರ ಕತೆಯಲ್ಲಿಯೇ ಇದೆ’ ಎಂದು ಕತೆ ಹೇಳಲು ಪ್ರಾರಂಭಿಸಿದರು.

ಒAದು ದಿನ ಸುಂದರ ಹಾಗೂ ರಮ್ಯವಾದ ಪ್ರಕೃತಿಯ ಮಡಿಲಲ್ಲಿ ಆನೆಯೊಂದು ಮರದ ಟೊಂಗೆಗಳಿAದ ಎಲೆಗಳನ್ನು ತಿನ್ನುತ್ತಿತ್ತು. ಇದ್ದಕ್ಕಿಂದ್ದAತೆ ದುಂಬಿಯೊAದು ಅಲ್ಲಿಗೆ ಹಾರಿಬಂದು ಆನೆಯ ಕಿವಿಯ ಮೇಲೆ ಕುಳಿತಿತು. ದುಂಬಿಯು ಸುಮ್ಮನೆ ಕೂಡಲಿಲ್ಲ, ಬದಲಾಗಿ ಗುಂಯ್ಯ್,,,,,,,, ಎಂದು ಶಬ್ದ ಮಾಡತೊಡಗಿತು. ಆನೆ ಶಾಂತವಾಗಿಯೇ ಎಲೆಗಳನ್ನು ತಿನ್ನುವುದರಲ್ಲೇ ನಿರತವಾಯಿತು. 

ಆನೆಯು ತನ್ನ ಶಬ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ದುಂಬಿಗೆ ಅಚ್ಚರಿಯನ್ನುಂಟು ಮಾಡಿತು. ದುಂಬಿ ಇನ್ನಷ್ಟು ಜೋರಾಗಿ ಶಬ್ದ ಮಾಡುತ್ತಾ ಕಿವಿಯ ಸುತ್ತಲೂ ಹಾರಾಡತೊಡಗಿತು. ಆಗಲೂ ಆನೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 

ಆಗ ದುಂಬಿಯು ಆನೆಯ ಕಿವಿಯ ಮೇಲೆ ಕುಳಿತು ಜೋರಾಗಿ ಕೂಗಿ “ನೀನೇನು ಕಿವುಡನಾ? ಎಂದು ಕೇಳಿತು.

‘ಇಲ್ಲ’ ಎಂದು ಆನೆ ಉತ್ತರಿಸಿತು.

“ಹಾಗಾದರೆ ನನ್ನ ಶಬ್ದದಿಂದ ನಿಮಗೆ ಯಾವುದೇ ತೊಂದರೆಯಾಗಲಿಲ್ಲವೇ?” ದುಂಬಿ ಕೇಳಿತು.

‘ಹೌದು ನೀನೇಕೆ ನಿರಂತರವಾಗಿ ಶಬ್ದ ಮಾಡುತ್ತಲೇ ಇರುವೆ? ಕ್ಷಣಕಾಲ ಏಕೆ ವಿಶ್ರಾಂತಿ ಪಡೆಯುತ್ತಿಲ್ಲ?’ ಬಾಯಲ್ಲಿದ್ದ ಎಲೆಗಳನ್ನು ಜಗಿಯುತ್ತಲೇ ಕೇಳಿತು ಆನೆ.

“ನಾನು ನೋಡುವ, ಕೇಳುವ ಮತ್ತು ಅನುಭವಿಸುವ ಎಲ್ಲವೂ ನನ್ನ ಗಮನವನ್ನು ಸೆಳೆಯುತ್ತವೆ. ನನ್ನ ಸುತ್ತಲಿನ ಎಲ್ಲಾ ಶಬ್ದಗಳು ಮತ್ತು ಚಲನೆಗಳು ನನ್ನ ನಡವಳಿಕೆಗಳನ್ನು ಪ್ರಭಾವಿಸುತ್ತಿವೆ. ಹಾಗಾಗಿ ನನ್ನ ದೇಹ ವಿಶ್ರಾಂತಿ ಪಡೆಯುತ್ತಿದ್ದರೂ  ಕೂಡಾ ಮನಸ್ಸಿನಲ್ಲಿ ಏನಾದರೂ ಯೋಚನಾ ಲಹರಿ ಏಳುತ್ತಲೇ ಇರುತ್ತದೆ” ಎಂದು ತಳಮಳವನ್ನು ಹೊರಹಾಕಿತು ದುಂಬಿ. 

ಆಗಲೂ ಆನೆ ತಿನ್ನುತ್ತಲೇ ತನ್ನ ಮೊರದಗಲ ಕಿವಿಗಳನ್ನು ಅಲುಗಾಡಿಸುತ್ತಲೇ ಇತ್ತು. “ನಿನ್ನ ರಹಸ್ಯವೇನು? ಯಾವಾಗಲೂ ನೀನು ಅದೆಷ್ಟು ಶಾಂತವಾಗಿರುತ್ತಿ” ಎಂದು ಕೇಳಿತು ದುಂಬಿ.

ಆನೆ ತಿನ್ನುವುದನ್ನು ನಿಲ್ಲಿಸಿ ‘ನನ್ನ ಐದು ಇಂದ್ರಿಯಗಳು ನನ್ನ ಶಾಂತಿಗೆ ಭಂಗತರುವುದಿಲ್ಲ. ಏಕೆಂದರೆ ಆ ಎಲ್ಲಾ ಇಂದ್ರಿಯಗಳು ನನ್ನ ಹಿಡಿತದಲ್ಲಿವೆ. ಅವು ನನ್ನ ಆಜ್ಞೆಯನ್ನು ಪಾಲಿಸುತ್ತವೆ. ನನ್ನ ನಿರ್ಧಾರಗಳನ್ನು, ಆಲೋಚನೆಗಳನ್ನು ಅವು ನಿಯಂತ್ರಿಸುವುದಿಲ್ಲ ಮತ್ತು ನಾನು ಅವು ಹೇಳಿದಂತೆ ಕೇಳುವುದಿಲ್ಲ. ಅವುಗಳನ್ನು ನನ್ನ ಹಿಡಿತದಲ್ಲಿ ಇಟ್ಟುಕೊಂಡಿರುವೆ. ಅವು ನನ್ನ ನಿರ್ದೇಶನ ಕೇಳುತ್ತವೆಯೇ ಹೊರತು ನಾನು ಅವುಗಳ ನಿರ್ದೇಶನ ಕೇಳುವುದಿಲ್ಲ’ ಎಂದು ಹೇಳುತ್ತಲೇ ಇತ್ತು. ಆದರೆ ದುಂಬಿಗೆ ಅರ್ಥವಾಗಲೇ ಇಲ್ಲ. 

ಇದನ್ನು ಗಮನಿಸಿದ ಆನೆ ‘ಈಗ ನಾನು ತಿನ್ನುತ್ತಿದ್ದೇನೆ. ತಿನ್ನುವ ಕ್ರಿಯೆಯಲ್ಲಿ ನಾನು ಸಂಪೂರ್ಣ ಮುಳುಗಿದ್ದೇನೆ. ಇದರಿಂದ ನಾನು ಆಹಾರವನ್ನು ಆನಂದಿಸುತ್ತೇನೆ ಮತ್ತು ಉತ್ತಮವಾಗಿ ಜಗಿದು ತಿನ್ನುತ್ತೇನೆ. ಇದರಿಂದ ಆಹಾರವೂ ಕೂಡಾ ಸುಲಭವಾಗಿ ಜೀರ್ಣವಾಗುತ್ತದೆ. ನನ್ನ ಗಮನವನ್ನು ನಿಯಂತ್ರಿಸಿದ್ದರಿAದ ಶಾಂತವಾಗಿರಲು ಸಾಧ್ಯವಾಯಿತು’ ಎಂದಿತು. 

ಗುರುಗಳು ಕತೆ ಹೇಳುವುದನ್ನು ನಿಲ್ಲಿಸಿ ತನ್ನ ಶಿಷ್ಯನೆಡೆಗೆ ನೋಡಿದರು. ಕತೆ ಕೇಳುವುದರಲ್ಲೇ ಮುಳುಗಿದ್ದ ಶಿಷ್ಯನಿಗೆ ಕತೆ ನಿಲ್ಲಿಸಿದುದು ತಿಳಿಯಲೇ ಇಲ್ಲ. 

 “ಮಗುವೇ ನಮ್ಮ ಐದು ಇಂದ್ರಿಯಗಳ ಕೆಲಸ ಸುತ್ತಲ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ನಮಗೆ ತಿಳಿಸುವುದಷ್ಟೇ. ಅವುಗಳ ಆಧಾರದ ಮೇಲೆ ನಿರ್ಧಾರಗಳು ನಮ್ಮದಾಗಬೇಕೆ ವಿನಹ ಇಂದ್ರಿಯಗಳ ಆಸೆಗೆ ಬಲಿಯಾಗಬಾರದು. ಅವುಗಳ ಹಿಂದೆ ಹೋಗದಿದ್ದರೆ ಮನಸ್ಸು ಖಂಡಿತವಾಗಿ ಶಾಂತವಾಗುತ್ತದೆ ಮತ್ತು ಜೀವನದಲ್ಲಿ ಉತ್ಸಾಹವನ್ನು ಹೊಂದುತ್ತೇವೆ” ಎಂದು ಗುರುಗಳು ಮಾತು ಮುಗಿಸಿದರು.

‘ಹೌದು ಗುರುಗಳೆ, ನಿಮ್ಮ ಮಾತಿನಲ್ಲಿ ಅರ್ಥವಿದೆ. ಬಹುಜನರು ಕೇವಲ ಇಂದ್ರಿಯಗಳ ಮಾತುಗಳನ್ನು ಕೇಳುತ್ತಾರೆಯೇ ವಿನಹ ಮನದ ಮಾತನ್ನು ಕೇಳುವುದಿಲ್ಲ. ಹಾಗಾಗಿ ಯಾವಾಗಲೂ ಯೋಚನಾ ಮಗ್ನರಾಗಿರುತ್ತಾರೆ. ದುಂಬಿಯAತೆ ಅನಗತ್ಯ ಶಬ್ದ ಮಾಡುತ್ತಲೇ ಇರುತ್ತಾರೆ. ನಾವು ದುಂಬಿಯAತಾಗದೇ ಆನೆಯಂತಾಗಬೇಕು. ಮಾಡುವ ಯಾವುದೇ ಕೆಲಸವನ್ನು ಆಸ್ವಾದಿಸಬೇಕು. ಅದು ಓದುವುದಿರಲಿ, ಬರೆಯುವುದಿರಲಿ ಅಥವಾ ಮನೆಯವರು ಹೇಳಿದ ಚಿಕ್ಕಪುಟ್ಟ ಕೆಲಸಗಳಿರಲಿ. ನಾವು ಅದನ್ನು ಪ್ರೀತಿಯಿಂದ ಮಾಡಿದಾಗ ಕೆಲಸದ ಅನುಭವ ನಮಗಾಗುತ್ತದೆ ಮತ್ತು ಅನುಭವದ ಮೂಲಕ ಜ್ಞಾನ ದೊರೆಯುತ್ತದೆ. ಇದರಿಂದ ತುಂಬಾ ಸರಳವಾಗಿ ಮನಸ್ಸನ್ನು ಶಾಂತಗೊಳಿಸಿಕೊಳ್ಳಬಹುದು. ನನ್ನ ಮನದಲ್ಲಿ ಬಹುದಿನಗಳಿಂದ ಉತ್ತರ ಸಿಗದಿದ್ದ ಪ್ರಶ್ನೆಗೆ ಇಂದು ಉತ್ತರ ದೊರೆತು ಮನಸ್ಸು ನಿರಾಳವಾಯಿತು’ ಎಂದ ಶಿಷ್ಯ. 

ನಿಮಗೂ ಹಾಗೆ ಅನಿಸಿತೇ? ನೀವು ಆನೆಯಾಗುವಿರೋ? ದುಂಬಿಯಾಗುವಿರೋ? ನಿರ್ಧಾರ ನಿಮ್ಮದು. 




ಸಂವಹನ ಎಂಬ ಕಲಿಕಾ ಕೊಂಡಿ

 ದಿನಾಂಕ 20-04-2019ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ. 

ಸಂವಹನ ಎಂಬ ಕಲಿಕಾ ಕೊಂಡಿ

ಹರ್ಷ ಮತ್ತು ವರ್ಷ ಪ್ರತಿದಿನ ಸಂಜೆ ತಮ್ಮ ತಂದೆಯೊಡನೆ ಮಾತಿಗಿಳಿಯುತ್ತಾರೆ. ದೈನಂದಿನ ಚಟುವಟಿಕೆಯ ಒಂದಿಷ್ಟು ಅಂಶಗಳು ಅಲ್ಲಿ ಚರ್ಚಿತವಾಗುತ್ತವೆ. ಬಹುಮುಖ್ಯವಾಗಿ ಪ್ರಜಾವಾಣಿ ಹಾಗೂ ಸಹಪಾಠಿ ದಿನಪತ್ರಿಕೆಯಲ್ಲಿನ ಚಿಕ್ಕ ಚಿಕ್ಕ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಯುತ್ತದೆ. ತಂದೆ ಒಂದು ವಿಷಯವನ್ನು ಪ್ರಸ್ತಾಪಿಸುತ್ತಾರೆ. ಹರ್ಷ ಮತ್ತು ವರ್ಷ ತಮ್ಮ ಜ್ಞಾನದ ಮಿತಿಯೊಳಗೆ ಆ ವಿಷಯದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಂದಿಡುತ್ತಾರೆ. ಅಂತಿಮವಾಗಿ ತಂದೆ ಆ ವಿಷಯದ ಕುರಿತ ನಿರ್ದಿಷ್ಟವಾದ ಮಾಹಿತಿಯನ್ನು ಮಕ್ಕಳಿಗೆ ತಿಳಿಸುತ್ತಾರೆ. ಅಂದಿಗೆ ಮಾತುಕತೆ ಮುಕ್ತಾಯಗೊಳ್ಳುತ್ತದೆ. ಈ ಮಾತುಕತೆ ಅರ್ದ ಗಂಟೆಯಿAದ ಒಂದು ಗಂಟೆಯ ಮಿತಿಯೊಳಗೆ ನಡೆಯುತ್ತದೆ. ಪುನಃ ಮರುದಿನ ಅದೇ ವೇಳೆಗೆ ಮತ್ತೊಂದು ವಿಷಯದ ಕುರಿತು ಚರ್ಚೆ ಶುರುವಾಗುತ್ತದೆ. ಈ ಮಾತುಕತೆ ಮೂಲಕ ಹರ್ಷ ಮತ್ತು ವರ್ಷ ಯಾವುದೇ ವಿಷಯದ ಕುರಿತು ಮಾತನಾಡುವ, ಬರೆಯುವ ಹಾಗೂ ಇತರರೊಂದಿಗೆ ಚರ್ಚಿಸುವ ಉತ್ತಮ ಸಂವಹನ ಕೌಶಲ್ಯಗಳನ್ನು ಕಲಿತಿದ್ದಾರೆ. ಒಂದು ಸಣ್ಣ ಮಾತುಕತೆ ಸಂವಹನ ಕೌಶಲ್ಯವನ್ನು ಖಂಡಿತವಾಗಿ ಉತ್ತಮಪಡಿಸುತ್ತದೆ ಎಂಬುದಕ್ಕೆ ಹರ್ಷ ಮತ್ತು ವರ್ಷ ಸಾಕ್ಷಿಯಾಗುತ್ತಾರೆ.

ವ್ಯಕ್ತಿಯ ಬೆಳವಣಿಗಯಲ್ಲಿ ಸಂವಹನವು ಬಹಳ ಪ್ರಮುಖವಾದ ಸಾಧನ. ಹುಟ್ಟಿನಿಂದ ಬದುಕಿನ ಕೊನೆಯವರೆಗೆ ನಿತ್ಯ ಜೀವನದಲ್ಲಿ ಅನೇಕರೊಂದಿಗೆ ಸಂವಹನ ನಡೆಯುತ್ತಲೇ ಇರುತ್ತದೆ. ಆದಾಗ್ಯೂ ಯಾರು ಉತ್ತಮ ಸಂವಹನ ಕೌಶಲ್ಯಗಳನ್ನು ಗಳಿಸಿಕೊಂಡಿರುತ್ತಾರೋ ಅವರು ಮಾತ್ರ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಲ್ಲರು. ಸಂವಹನ ಕೌಶಲ್ಯ ಬೆಳೆಸುವಲ್ಲಿ ತಂದೆ-ತಾಯಿ, ಸ್ನೇಹಿತರು, ಕುಟುಂಬ, ನೆರೆಹೊರೆ, ಸಮುದಾಯ, ಶಾಲೆ ಹಾಗೂ ಸಮೂಹ ಮಾಧ್ಯಮಗಳು ಪ್ರಭಾವ ಬೀರುತ್ತವೆ. ಮಗುವಿಗೆ ಸಂವಹನ ಕೌಶಲ್ಯ ಮೂಡಿಸುವಲ್ಲಿ ಕುಟುಂಬ ಹಾಗೂ ಶಾಲೆಯ ಪಾತ್ರ ತುಂಬಾ ಮಹತ್ವದ್ದು. ಹಾಗಾಗಿ ಸಂವಹನ ಎಂದರೇನು? ಅದರ ಪ್ರಯೋಜನಗಳೇನು? ಸಂವಹನ ಕೌಶಲ್ಯ ಬೆಳೆಸುವ ಮಾರ್ಗಗಗಳಾವುವು? ಎಂಬ ಮಾಹಿತಿ ಪ್ರತಿಯೊಬ್ಬ ಶಿಕ್ಷಕರಿಗೂ ಪಾಲಕರಿಗೂ ಇರಬೇಕಾದುದು ಅಗತ್ಯ.

ಸಂವಹನ ಎಂದರೆ,,,, : ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಸ್ಥಳದಿಂದ ಸ್ಥಳಕ್ಕೆ ಮಾಹಿತಿಯನ್ನು ವರ್ಗಾಯಿಸುವ ಪ್ರಕ್ರಿಯೆಯೇ ಸಂವಹನ. ಅಂದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ವಿಚಾರಗಳು, ಅಭಿಪ್ರಾಯಗಳು, ಸಂಗತಿಗಳು, ಮೌಲ್ಯಗಳು ಭಾವನೆಗಳು, ಅನುಭವಗಳು, ಸಲಹೆಗಳು ಇತ್ಯಾದಿಗಳನ್ನು ಪರಸ್ಪರಗಳನ್ನು ಕಳಿಸುವ ಮತ್ತು ಸ್ವೀಕರಿಸುವ ಪ್ರಕ್ರಿಯೆಯಾಗಿದೆ.  ಸಂವಹನ ಏರ್ಪಡಲು ಸಂದೇಶ ಕಳಿಸುವವ ಹಾಗೂ ಸ್ವೀಕರಿಸುವವ ಇಬ್ಬರನ್ನು ಒಳಗೊಂಡಿರುತ್ತದೆ. 

ನಿಗದಿತ ಗುರಿ ಸಾಧನೆಯನ್ನು ಮಾತುಕತೆಗಳಲ್ಲಿ ಪರಿಣಾಮಕಾರಿಯಾಗಿ ಖಚಿತಪಡಿಸಿಕೊಳ್ಳಲು ಸಂವಹನ ಬಹಳ ಮುಖ್ಯವಾಗುತ್ತದೆ. ಪರಿಣಾಮಕಾರಿಯಾದ ಸಂವಹನ ಪರಸ್ಪರ ಸಂಬAಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ಜೊತೆಗೆ ಧೈರ್ಯ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ. 

ಪ್ರಯೋಜನಗಳು

ಕುಟುಂಬ ಹಾಗೂ ಶಾಲೆಯಲ್ಲಿ ನಡೆಯುವ ಸಂವಹನವು ಮಗುವಿನ ಭಾಷಾ ತೊಡಕುಗಳನ್ನು ನಿವಾರಿಸಿ ಸರಾಗವಾಗಿ ಮಾತನಾಡುವಂತೆ ಮಾಡುತ್ತದೆ. ಜೊತೆಗೆ ಭಾಷಾ ದೋಷಗಳನ್ನು ಸರಿಪಡಿಸಿಕೊಳ್ಳಲು ಮುಕ್ತ ಅವಕಾಶ ನೀಡುತ್ತದೆ. ಮುಕ್ತ ಸಂವಹನವು ಮಗುವಿನಲ್ಲಿ ಭಾಷಾಭಿವೃದ್ದಿಗೆ ಸಹಾಯ ಮಾಡುತ್ತದೆ.

ಸಂವಹನವು ಪರಸ್ಪರ ಸಂಬAಧಗಳನ್ನು ಗಟ್ಟಿಗೊಳಿಸುತ್ತದೆ. ಮುಕ್ತ ಸಂವಹನದಿAದ ಮಕ್ಕಳಲ್ಲಿ ಸುರಕ್ಷತೆಯ ಭಾವನೆ ಉಂಟಾಗುತ್ತದೆ. ಈ ಬಾಂಧವ್ಯ ಉತ್ತಮ ಕಲಿಕೆಯನ್ನು ಉಂಟುಮಾಡುತ್ತದೆ. 

ಮುಕ್ತ ಸಂವಹನವು ಮಕ್ಕಳ ಕಲಿಕಾ ದೋಷವನ್ನು ನಿವಾರಿಸುವುದರಿಂದ ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಜೊತೆಗೆ ಮಕ್ಕಳನ್ನು ಪಠ್ಯದ ಆಚೆಗಿನ ಕಲಿಕೆಗೆ ಉತ್ತೇಜಿಸುತ್ತದೆ. ಇದರಿಂದ ಮಕ್ಕಳು ಹೊಸದನ್ನು ಕಲಿಯಲು ಉತ್ಸುಕರಾಗುತ್ತಾರೆ.

ಸಂವಹನದಿAದ ಮಕ್ಕಳು ಹೆಚ್ಚು ಹೆಚ್ಚು ಸ್ನೇಹಿತರನ್ನು ಗಳಿಸುತ್ತಾರೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಅಂತೆಯೇ ಇತರೆ ಸ್ನೇಹಿತರಿಂದ ಮತ್ತಷ್ಟು ಸಂವಹನ ಕೌಶಲ್ಯಗಳನ್ನು ಪಡೆಯುತ್ತಾರೆ.

ಪರಿಣಾಮಕಾರಿ ಸಂವಹನವು ಮಕ್ಕಳಲ್ಲಿ ಸ್ವಾಭಿಮಾನವನ್ನು ಉಂಟು ಮಾಡುತ್ತದೆ. ಮುಕ್ತ ಮಾತುಕತೆಯಲ್ಲಿ ಮಕ್ಕಳು ತಮ್ಮ ಅಗತ್ಯತೆಗಳು ಮತ್ತು ಬಯಕೆಗಳನ್ನು ಚರ್ಚಿಸಲು ಅವಕಾಶ ಇರುವುದರಿಂದ ಮಗು ತನ್ನ ಆಲೋಚನೆಗಳೂ ಮುಖ್ಯವೆಂದು ಭಾವಿಸುತ್ತದೆ. ಪ್ರತಿಯಾಗಿ ಮಗುವಿನಲ್ಲಿ ಸ್ವಾಭಿಮಾನ ಮೂಡುತ್ತದೆ. 

ಉತ್ತಮ ಸಂವಹನ ಕೌಶಲ್ಯದಿಂದ ಮಕ್ಕಳು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ಸಮರ್ಥರಾಗುತ್ತಾರೆ. ವಿಷಯದ ವಿವಿಧ ಮಗ್ಗಲುಗಳನ್ನು ಅಧ್ಯಯನ ಮಾಡುವ ಪರಿಣತಿ ಪಡೆಯುವುದರಿಂದ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ಸನ್ನದ್ದರಾಗುತ್ತಾರೆ.

ಮಗುವಿನ ಮಾತಿಗೂ ಗೌರವವಿದೆ ಗೊತ್ತಾದಾಗ ಮಗು ತನ್ನ ವರ್ತನೆಗಳನ್ನು ಬದಲಿಸಿಕೊಳ್ಳುತ್ತದೆ. ಸಕಾರಾತ್ಮಕ ವರ್ತನೆಗಳ ಅಭಿವೃದ್ದಿಯತ್ತ ಚಿತ್ತ ಹರಿಸುತ್ತದೆ. 

ಉತ್ತಮ ಸಂವಹನ ಅಭ್ಯಾಸಗಳು ಕಾಲಾಂತರದಲ್ಲಿ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಮಗುವನ್ನು ಅಣಿಗೊಳಿಸುತ್ತವೆ. ಕುಟುಂಬ/ಶಾಲೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳ ಕುರಿತು ಸಂವಹನ ನಡೆಸಿ ಪರಿಣತಿ ಗಳಿಸಿದ ಮಗು ಮುಂದೆ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಸಹಜವಾಗಿ ಅಣಿಗೊಳ್ಳುತ್ತದೆ.

ಸಂವಹನ ಕೌಶಲ್ಯದಿಂದ ಮಗುವಿನಲ್ಲಿ ಉತ್ತಮ ದೇಹಭಾಷೆ ರೂಪುಗೊಳ್ಳುತ್ತದೆ. ಇತರರೊಂದಿಗೆ ಮಾತನಾಡುವ ವೇಳೆ ತನ್ನ ಆಂಗಿಕ ಅಭಿನಯ ಹೇಗಿರಬೇಕೆಂಬುದನ್ನು ಮಗು ಗಳಿಸಿಕೊಳ್ಳುತ್ತದೆ. 

ಸಂವಹನವು ಮಗುವಿನ ಓದಿನ ತೊಂದರೆಯನ್ನು ನಿವಾರಿಸುತ್ತದೆ. ನಿರಂತರ ಸಂವಹನದಿAದ ಶೇಕಡಾ 50 ರಿಂದ 90 ರಷ್ಟು ಮಕ್ಕಳು ಓದಿನಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗುತ್ತಾರೆ. 

ಉತ್ತಮ ಸಂವಹನವು ಮಗುವಿನ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಮಕ್ಕಳಲ್ಲಿ ಒತ್ತಡ, ಮಾನಸಿಕ ಹಿಂಸೆ, ಖಿನ್ನತೆ, ಸಂಕೋಚಗಳAತಹ ಮಾನಸಿಕ ಸಮಸ್ಯೆಗಳನ್ನು ದೋರ ಮಾಡಿ ಮಾನಸಿಕ ಸ್ವಾಸ್ಥವನ್ನು ಕಾಪಾಡುತ್ತದೆ.

ಮಕ್ಕಳ ಸಂವಹನದ ಅಡೆತಡೆಗಳು

ಸಂವಹನವು ವಿಫಲಗೊಳ್ಳಲು ಅನೇಕ ಕಾರಣಗಳಿರುತ್ತವೆ. ಸಂದೇಶ ಕಳಿಸುವವ ಮತ್ತು ಸ್ವೀಕರಿಸುವವರ ನಡುವೆ ಅಡೆತಡೆಗಳು ಏರ್ಪಟ್ಟಾಗ ಸಂವಹನ ವಿಫಲವಾಗುತ್ತದೆ. ಸಕ್ರೀಯ ಆಲಿಸುವಿಕೆ, ಸ್ಪಷ್ಟೀಕರಣ ಹಾಗೂ ಪ್ರತಿಬಿಂಬಾತ್ಮಕ ಕೌಶಲ್ಯಗಳ ಕೊರತೆಯು ಸಂದೇಶ ವಿರೂಪಗೊಳ್ಳಲು ಕಾರಣಗಳಾಗಬಹುದು. ಅಡೆತಡೆಗಳು ಗೊಂದಲ ಮತ್ತು ತಪ್ಪು ತಿಳುವಳಿಕೆಗೆ ಪ್ರೇರಕಗಳಾಗುತ್ತವೆ. ಬಹುಮುಖ್ಯವಾಗಿ ಕೆಳಗಿನ ಕೆಲವು ಅಡೆತಡೆಗಳು ಉತ್ತಮ ಸಂವಹನಕ್ಕೆ ಮಾರಕ ಎನ್ನಬಹುದು.

ಬಹುತೇಕ ಮಕ್ಕಳಲ್ಲಿ ಆಲೋಚನಾ ಸಾಮರ್ಥ್ಯ ಅಷ್ಟಾಗಿ ಬೆಳವಣಿಗೆಯಾಗಿರುವುದಿಲ್ಲ. ಇದು ಅವರ ಗ್ರಹಿಕೆ ಮತ್ತು ತಾರ್ಕಿಕತೆಯ ನಡುವೆ ಸಣ್ಣ ಬಿರುಕನ್ನು ಮೂಡಿಸುತ್ತದೆ. ಮಗುವಿನ ಅರಿವಿನ ಸಾಮರ್ಥ್ಯದಲ್ಲಿ ಕೊರತೆಯಾದಾಗ ಭಾಷಾ ಕೌಶಲ್ಯಗಳು ವಿಕಸನವಾಗಲು ತೊಂದರೆಯಾಗಿ ಸಂವಹನಕ್ಕೆ ತೊಂದರೆಯಾಗುತ್ತದೆ.

ಕೆಲವು ಮಕ್ಕಳಲ್ಲಿ ನಿರರ್ಗಳತೆಯ ಕೊರತೆಯು ಸಂವಹನಕ್ಕೆ ತಡೆಯೊಡ್ಡುತ್ತದೆ. ನಿರರ್ಗಳತೆಯ ಕೊರತೆಗೆ ಉಚ್ಛಾರ ದೋಷ, ಧೀರ್ಘಕಾಲಿಕ ಮರೆವು, ಸಂಕೋಚ ಸ್ವಭಾವ ಇತ್ಯಾದಿಗಳು ಕಾರಣವಾಗಿರಬಹುದು. 

ಮುಕ್ತ ಮಾತುಕತೆಗೆ ಭಾಷಾ ತೊಂದರೆಯು ಪ್ರಮುಖ ಅಡೆತಡೆಯಾಗಿದೆ. ಅಭಿವ್ಯಕ್ತಿಶೀಲತೆ ಸರಿಯಾಗಿಲ್ಲದಿರುವುದು, ಶಬ್ದಭಂಢಾರದ ಕೊರತೆ, ಭಾಷಾ ಪ್ರಯೋಗದ ಕೌಶಲ್ಯಗಳ ಕೊರತೆ, ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹೇಗೆ ವರ್ಗಾಯಿಸಬೇಕೆಂಬ ಕೊರತೆಯು ಸಂವಹನಕ್ಕೆ ಪ್ರಮುಖ ಅಡ್ಡಿಯಾಗಿದೆ. 

ಧ್ವನಿಯ ಸರಿಯಾದ ಬಳಕೆಯ ಅರಿವು ಇಲ್ಲದಿರುವುದು ಸಂವಹನ ಅಡೆತಡೆಯಾಗಿದೆ. ಕೆಲವು ಮಕ್ಕಳು ಶಬ್ದಗಳನ್ನು ಉಚ್ಛರಿಸುವಾಗ ಕೊನೆಯ ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಛರಿಸದೇ ನುಂಗಿಕೊಳ್ಳುತ್ತಾರೆ. ಶ್ವಾಸಕೋಶದಿಂದ ಬರುವ ಗಾಳಿಯನ್ನು ನಿಯಂತ್ರಿಸುವ ಕೌಶಲ್ಯ ಇಲ್ಲದಿರುವಾಗ ಹೀಗಾಗುತ್ತದೆ. ಧ್ವನಿಯ ಏರಿಳಿತದ ಸ್ಪಷ್ಟ ಚಿತ್ರಣ ಇಲ್ಲದಿರುವುದೂ ಸಹ ಉತ್ತಮ ಸಂವಹನಕ್ಕೆ ಅಡ್ಡಿಯಾಗುತ್ತದೆ. 

ಅಡೆತಡೆಗಳ ಮೀರಿ

ಮಕ್ಕಳಲ್ಲಿ ಸಂವಹನದ ಅಡೆತಡೆಗಳನ್ನು ಮೀರಿ ಕೌಶಲ್ಯಗಳನ್ನು ಮೂಡಿಸುವುದು ತ್ರಾಸದಾಯಕವಾದರೂ ಸತತ ಅಭ್ಯಾಸದಿಂದ ಇದನ್ನು ಸುಲಭವಾಗಿಸಬಹುದು. ಅದಕ್ಕಾಗಿ ಅನೇಕ ತಂತ್ರಗಳಿವೆ. ಕೆಲವು ತಂತ್ರಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ. 

ಪ್ರತೀ ಮಗುವೂ ಸಹ ಅನನ್ಯ. ಯಾವ ಮಗುವನ್ನೂ ಕಡೆಗಣಿಸದಂತೆ ಮಗುವಿನೊಂದಿಗೆ ಮುಕ್ತವಾಗಿ ಸಂಭಾಷಣೆ ನಡೆಸಿ. ಅವರ ಬೇಕು ಬೇಡಿಕೆಗಳನ್ನು ಆಲಿಸಿ. ಅವರಲ್ಲಿನ ಸಂಭಾಷಣಾ ದೋಷವನ್ನು ಪತ್ತೆ ಹಚ್ಚಿ, ಪರಿಹರಿಸುವ ಪ್ರಯತ್ನ ಮಾಡಿ. ಭಯಮುಕ್ತ ವಾತಾವರಣ ಮತ್ತು ನಿರಂತರ ಅಭ್ಯಾಸದಿಂದ ಮಾತ್ರ  ಉತ್ತಮ ಸಂವಹನ ಸಾಧ್ಯ.

ಕುಟುಂಬದಲ್ಲಾಗಲೀ ಅಥವಾ ಶಾಲೆಯಲ್ಲಾಗಲೀ ಸಂಭಾಷಣೆ/ಸAವಹನಕ್ಕೆ ನಿಗದಿತ ಸಮಯ ಮೀಸಲಿಡಿ. ಈ ಸಮಯದಲ್ಲಿ ಮಗು ಮುಕ್ತವಾಗಿ ಮಾತನಾಡಲು ಮಾನಸಿಕ ಸಿದ್ದತೆ ಮಾಡಿಕೊಳ್ಳುತ್ತದೆ. ಇದರಿಂದ ಮಗು ಸ್ವಯಂ ಪ್ರೇರಣೆಗೊಂಡು ಕಲಿಕೆಯತ್ತ ಆಸಕ್ತಿ ವಹಿಸುತ್ತದೆ.

ಪ್ರತಿದಿನದ ಶಾಲಾ ಚಟುವಟಿಕೆಗಳ ಕುರಿತು ಕುಟುಂಬದಲ್ಲಿ ವಿಷಯ ಪ್ರಸ್ತಾಪಿತವಾಗಬೇಕು. ಶಾಲೆಯಲ್ಲಿ ಏನೇನು ನಡೆಯಿತು? ಶಾಲೆಯಲ್ಲಿ ಮಗು ಯಾರ ಜೊತೆ ಹೆಚ್ಚು ಸಮಯ ಕಳೆಯಿತು? ಶಾಲೆಯಲ್ಲಿ ಇಷ್ಟವಾದ ಅಂಶ ಯಾವುದು? ಇಷ್ಟವಾಗದ ಅಂಶ ಯಾವುದು? ಯಾಕೆ? ಇತ್ಯಾದಿ ವಿಷಯಗಳ ಬಗ್ಗೆ ಮಕ್ಕಳು ಸವಿವರವಾಗಿ ವಿವರಿಸುವಂತೆ ಕೇಳಬೇಕು. ಇದು ಮಕ್ಕಳಲ್ಲಿ ಸಂವಹನ ವೃದ್ದಿಗೆ ಸಹಕಾರಿ.

ಪಠ್ಯೇತರ ಚಟುವಟಿಕೆಗಳಾದ ಭಾಷಣ, ಚರ್ಚೆ, ಸಂವಾದ, ಪ್ರಬಂಧ ಬರೆಹ, ಚಿತ್ರ ರಚನೆ, ಇತ್ಯಾದಿ ತಯಾರಿಗೆ ಮಗುವಿಗೆ ಸಹಾಯ ಮಾಡಿ. ಆ ಚಟುವಟಿಕೆಯನ್ನು ಹೇಗೆ ವಿನ್ಯಾಸಗೊಳಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿ. 

ಮಗು ಇತರರೊಂದಿಗೆ ಮಾತನಾಡುವಾಗ ದೇಹಭಾಷೆ ಹೇಗಿರಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿತೆ ನೀಡಿ ಅಭ್ಯಾಸ ಮಾಡಿಸಿ. ಇತರರ ದೇಹಭಾಷೆ ಬಗ್ಗೆ ಗಮನ ಹರಿಸಲು ಹೇಳಿ. 

ಮಗುವಿಗೆ ನೀವು ಏನನ್ನಾದರೂ ಹೇಳಿದ ನಂತರ ಮಗು ಅದನ್ನು ಪುನರಾವರ್ತಿಸಲು ಹೇಳಿ ಅಥವಾ ಅದಕ್ಕೆ ಸಂಬAಧಿಸಿದ ಪ್ರಶ್ನೆ ಕೇಳಿ. ಆಗ ಮಗು ಪ್ರತಿ ಬಾರಿ ನೀವು ಹೇಳುವುದನ್ನು ಸ್ಪಷ್ಟವಾಗಿ ಆಲಿಸುತ್ತದೆ. ಕೆಲವು ವೇಳೆ ಹಿಂದಿನ ದಿನದ ವಿಷಯವನ್ನೂ ಕೇಳಿ. ಇದರಿಂದ ಮಗು ಸ್ಪಷ್ಟವಾಗಿ ಆಲಿಸುವ ಜೊತೆಗೆ ಪುನರ್ ಮನನ ಮಾಡಿಕೊಂಡು ಹೇಳಲು ಸಿದ್ದತೆ ಮಾಡಿಕೊಳ್ಳುತ್ತದೆ.

ಪಠ್ಯಾಂಶದಲ್ಲಿನ ನಾಟಕ, ಸಂಭಾಷಣೆಗಳನ್ನು ನಾಟಕದ ಮೂಲಕವೇ ಅಭ್ಯಾಸ ಮಾಡಿಸಿ. ಇದರಿಂದ ಧ್ವನಿಯ ಏರಿಳಿತದ ಸ್ಪಷ್ಟವಾಗಿ ಉಚ್ಛರಿಸುವ ಹಾಗೂ ನಿಗದಿತ ಸಮಯದಲ್ಲಿ ತಮ್ಮ ಪಾತ್ರದ ಮಾತನ್ನು ಮುಕ್ತಾಯಗೊಳಿಸುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇತರರ ಮಾತನ್ನು ಆಲಿಸಿ ಅದಕ್ಕೆ ಪ್ರತಿಕ್ರಿಯೆ ನೀಡಬೇಂಬುದನ್ನು ಕಲಿಯುತ್ತಾರೆ. ದೈನಂದಿನ ಚಟುವಟಿಕೆಗಳನ್ನೇ ಪಾತ್ರ ರೂಪದಲ್ಲಿ ಮಾಡಲು ತಿಳಿಸಿ.

ಮಗುವಿನ ಓದಿನ ಸಮಯದಲ್ಲಿ ಜೊತೆಗಿದ್ದು, ಓದಿನ ಧಾಟಿಯನ್ನು ಪರಿಶೀಲಿಸಿ. ಪ್ರತಿದಿನ ನಿಗದಿತವಾಗಿ ಓದಿನ ಅಭ್ಯಾಸ ಮಾಡಿಸಿ. ನಂತರ ಓದಿದ ವಿಷಯದ ಕುರಿತು ಸಂಭಾಷಣೆ ನಡೆಸಿ.

ಆಗಾಗ್ಗೆ ಚಲನಚಿತ್ರ, ನಾಟಕ ಅಥವಾ ಇತ್ಯಾದಿ ಪ್ರದರ್ಶನಗಳಿಗೆ ಮಗುವನ್ನು ಕರೆದೊಯ್ಯಿರಿ. ಅಥವಾ ಶಾಲೆ/ಮನೆಯಲ್ಲಿಯೇ ಪ್ರದರ್ಶನದ ವ್ಯವಸ್ಥೆ ಮಾಡಿರಿ.  ವೀಕ್ಷಿಸಿದ ನಂತರ ಅದರ ಕುರಿತು ಮಗು ಮಾತನಾಡಲು ತಿಳಿಸಿ. ಕಥಾವಸ್ತು, ಪಾತ್ರಗಳು, ಸನ್ನಿವೇಶಗಳು, ಹಾಡುಗಳು, ಸಂಗೀತ, ಸ್ಟಂಟ್ಸ್ ಇತ್ಯಾದಿ ಕುರಿತು ಮಗು ತನ್ನದೇ ಆದ ಶೈಲಿಯಲ್ಲಿ ವಿಮರ್ಶೆ ಮಾಡಲು ಮುಕ್ತ ಅವಕಾಶ ನೀಡಿ.

ಮಕ್ಕಳಲ್ಲಿ ಪದಸಂಪತ್ತು ಬೆಳೆಯಲು ಶಬ್ದಕೋಶ ಬಳಸುವ ಅಭ್ಯಾಸ ರೂಢಿಸಿ. ಇದು ವಿವಿಧ ಸನ್ನಿವೇಶಗಳಲ್ಲಿ ನಿರ್ಧಿಷ್ಟ ಪದಗಳಿಗೆ ನಾನಾ ಪದಗಳನ್ನು ಬಳಸಲು ಅನುಕೂಲವಾಗುತ್ತದೆ.

ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕಗಳನ್ನು ಓದುವ ಹಾಗೂ ಅದರಲ್ಲಿನ ವಿಷಯದ ಕುರಿತು ಮಾತನಾಡುವ ಅಭ್ಯಾಸ ಬೆಳೆಸಿ. ಇದರಿಂದ ವಿಷಯ ಜ್ಞಾನ ಹೆಚ್ಚುವುದಲ್ಲದೇ ಒಂದು ವಿಷಯದ ವಿವಿಧ ಆಯಾಮಗಳನ್ನು ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ. 



ಮಕ್ಕಳ ವಿಸ್ತೃತ ಓದಿಗೆ ಮನೆ ಗ್ರಂಥಾಲಯ

ದಿನಾಂಕ  20-11-2019ರ ಪ್ರಜಾವಾಣಿಯ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ. 


 ಮಕ್ಕಳ ವಿಸ್ತೃತ ಓದಿಗೆ ಮನೆ ಗ್ರಂಥಾಲಯ





ಮೊದಲ ಸೆಮಿಸ್ಟರ್‌ನ ಕೊನೆದಿನ ಆರನೇ ತರಗತಿಯ ವಿದ್ಯಾರ್ಥಿಗಳು ‘ರಜೆ ಹೋಂವರ್ಕ್ ಏನ್ ಸರ್’ ಎಂದರು. ರಜೆಯಲ್ಲಿ ಆರಾಮಾಗಿದ್ದು ಪುನಃ ಶಾಲೆಗೆ ಬನ್ನಿ ಎಂದೆ. ‘ಎಲ್ಲಾ ಸಬ್ಜೆಕ್ಟ್ನಲ್ಲೂ ಕೊಟ್ಟಿದ್ದಾರೆ ನೀವೂ ಕೊಡ್ರಿ ಸರ್’ ಎಂದು ಪೀಡಿಸತೊಡಗಿದರು. ಸರಿ ಹಾಗಾದರೆ ನಿಮ್ಮ ಮನೆಯಲ್ಲಿರುವ ಪುಸ್ತಕಗಳ ಪಟ್ಟಿ ಮಾಡಿ, ಅದರಲ್ಲಿ ನಿಮಗಿಷ್ಟವಾದ ಪುಸ್ತಕ ಓದಿಕೊಂಡು ಬಂದು ತಿಳಿಸಿ ಎಂದೆ. ‘ಏನು ಮನೆಯಲ್ಲಿನ ಪುಸ್ತಕಗಳಾ?’ ಎಂದು ರಾಗ ತೆಗೆದರು. ಒಬ್ಬ ಎದ್ದು ನಿಂತು ‘ಸರ್ ನಮ್ಮ ಮನೆಯಲ್ಲಿ ನೀವು ಕೊಟ್ಟ ಈ ವರ್ಷದ ಪಠ್ಯಪುಸ್ತಕ ಬಿಟ್ಟರೆ ಬೇರೆ ಪುಸ್ತಕಗಳೇ ಇಲ್ಲ ಹೇಗೆ ಓದಲಿ ಸರ್’ ಎಂದ. ಅದಕ್ಕೆ ಇನ್ನಿತರೇ ವಿದ್ಯಾರ್ಥಿಗಳೂ ಸಹ ಧ್ವನಿಗೂಡಿಸಿದರು. ಆಗ ನನಗೆ ವಾಸ್ತವದ ಅರಿವಾಯಿತು. ಬಹುತೇಕ ಕುಟುಂಬಗಳಲ್ಲಿ ಪಿ.ಯು.ಸಿ, ಪದವಿ ಪಡೆದ ವಿದ್ಯಾವಂತರು ಇದ್ದರೂ ಅವರ ಮನೆಯಲ್ಲಿ ಓದಲು ಕನಿಷ್ಠ ಹತ್ತಾರು ಪುಸ್ತಕಗಳಿಲ್ಲದಿರುವುದು ಎಂತಹ ವಿಪರ್ಯಾಸವಲ್ಲವೇ? ನಮ್ಮ ಮಕ್ಕಳು ಚೆನ್ನಾಗಿ ಓದಲಿ, ಎಲ್ಲರಿಗಿಂತ ಮುಂದೆ ಬರಲಿ ಎಂದು ಆಶಿಸುವ ನಾವು ಮಕ್ಕಳಿಗೆ ಕಲಿಸುತ್ತಿರುವುದೇನು? ಅವರ ಓದಿಗೆ ಪೂರಕ ಸಾಮಗ್ರಿಗಳನ್ನು ಒದಗಿಸುವಲ್ಲಿ ನಾವಿನ್ನೂ ಹಿಂದೆ ಬೀಳುತ್ತಿದ್ದೇವೆ. ಪಾಲಕರಾದ ನಾವು ಮಕ್ಕಳಿಗೆ ಪುಸ್ತಕ ಕೊಡಿಸುವ ಪರಿಪಾಠ ಬೆಳೆಸಿಕೊಂಡಿಲ್ಲ. ಪ್ರತಿವರ್ಷ ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿರುವ ಪಾಲಕರೂ ಸಹ ಮಕ್ಕಳಿಗಾಗಿ ಪಠ್ಯೇತರ ಪುಸ್ತಕ ಕೊಡಿಸುವುದು ತೀರಾ ಕಡಿಮೆ ಎನ್ನಬಹುದು.

ಪುಸ್ತಕಗಳೇ ಏಕೆ ಬೇಕು?

ಮಕ್ಕಳಿಗೆ ಬೇರೆ ಬೇರೆ ಮೂಲಗಳಿಂದ ಜ್ಞಾನ ಸಿಗುತ್ತದೆ ನಿಜ. ಆದರೆ ಪುಸ್ತಕಗಳಿಂದ ದೊರೆಯುವ ಜ್ಞಾನ ಮಾತ್ರ ಶಾಶ್ವತ ಎಂಬುದು ಶಿಕ್ಷಣ ತಜ್ಞರ ಹಾಗೂ ಶೈಕ್ಷಣಿಕ ಮನೋವಿಜ್ಞಾನಿಗಳ ಅಭಿಮತ. ಎಲ್ಲಾ ವಯಸ್ಸಿನ ಮಕ್ಕಳ ಕಲಿಕೆ, ಭಾಷಾ ಬೆಳವಣಿಗೆ, ಬರವಣಿಗೆಯ ಮೂಲಭೂತ ತಿಳುವಳಿಕೆಯ ಕೀಲಿಯಾಗಿವೆ. ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಗ್ರಂಥಾಲಯಗಳಿದ್ದು, ಅಲ್ಲಿ ಮಕ್ಕಳಿಗೆ ಸಾಕಷ್ಟು ಪುಸ್ತಕಗಳು ಓದಲು ಸಿಗುತ್ತವೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗ್ರಂಥಾಲಯ ಸೌಲಭ್ಯ ತೀರಾ ಕಡಿಮೆ ಎನ್ನಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯವಿದ್ದರೂ ಕೇವಲ ದಿನಪತ್ರಿಕಗಳು ಮಾತ್ರ ಅಲ್ಲಿ ಸ್ಥಾನಪಡೆದಿರುತ್ತವೆ. ಮಕ್ಕಳು ಓದುವ ಪುಸ್ತಕಗಳು ದೊರೆಯುವುದು ವಿರಳ. ಗ್ರಂಥಾಲಯದ ಸೌಲಭ್ಯವಿದ್ದರೂ ಮಕ್ಕಳು ಅಲ್ಲಿಗೆ ಹೋಗಿ ತಮಗಿಷ್ಟವಾದ ಪುಸ್ತಕ ಆರಿಸಿಕೊಂಡು ಓದುವುದು ತೀರಾ ವಿರಳ. ಅಲ್ಲದೇ ಎಲೆಕ್ಟಾçನಿಕ್ ಸಾಧನಗಳಾದ ಮೊಬೈಲ್, ಟಿ.ವಿ, ಕಂಪ್ಯೂಟರ್‌ಗಳಿAದ ಮಕ್ಕಳನ್ನು ದೂರವಿಟ್ಟು ಓದಿನ ಓಘವನ್ನು ವಿಸ್ತರಿಸಲು ಮನೆ ಗ್ರಂಥಾಲಯ ಇಂದಿನ ಅಗತ್ಯವಾಗಿದೆ.

ಏನಿದು ಮನೆ ಗ್ರಂಥಾಲಯ?: 

ಇದೇನು ಹೊಸ ಪರಿಕಲ್ಪನೆಯಲ್ಲ. ಪ್ರತಿ ಮನೆಯಲ್ಲೂ ಓದಲು ಅಗತ್ಯವಾದ ಪುಸ್ತಕಗಳನ್ನು ಹೊಂದುವುದೇ ಮನೆ ಗ್ರಂಥಾಲಯದ ಪರಿಕಲ್ಪನೆಯಾಗಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಕಲಿಕೆಗೆ ಅಗತ್ಯವಾದ ಪುಸ್ತಕಗಳನ್ನು ವ್ಯವಸ್ಥೆಗೊಳಿಸುವುದು ಮೊದಲ ಆದ್ಯತೆಯಾಗಬೇಕಿದೆ. ಮಕ್ಕಳ ಮಾನಸಿಕ ಹಾಗೂ ಬೌದ್ದಿಕ ವಯಸ್ಸಿಗನುಗುಣವಾದ ಪುಸ್ತಕಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ. ಕಥೆ, ಕಾಮಿಕ್ಸ್, ಕವನ, ಕಾದಂಬರಿ, ನಾಟಕ, ಜೀವನಚರಿತ್ರೆಗಳಂತಹ ಒಂದಿಷ್ಟು ಪುಸ್ತಕಗಳು ಖಂಡಿತವಾಗಿಯೂ ಮಕ್ಕಳ ಮನೋವಿಕಾಸಕ್ಕೆ ಪೂರಕ ಸಾಮಗ್ರಿಗಳಾಗುತ್ತವೆ. 

ಮಕ್ಕಳ ಜ್ಞಾನಾರ್ಜನೆಯಲ್ಲಿ ಪುಸ್ತಕಗಳು ಹೆಚ್ಚು ಮಹತ್ವ ಪಡೆದಿವೆ ಎಂದು ಅಮೇರಿಕಾದ ಸರ್ಕಾರೇತರ ಸಂಸ್ಥೆಯೊAದು ನಡೆಸಿದ ಸಂಶೋಧನೆಯು ಸಾಬೀತುಪಡಿಸಿದೆ. ವರದಿಯ ಪ್ರಕಾರ ದಿನಕ್ಕೆ 20 ನಿಮಿಷ ಪಠ್ಯೇತರ ಪುಸ್ತಕ ಓದಿದ ಮಕ್ಕಳು ಓದದ ಮಕ್ಕಳಿಗಿಂತ ಶೇಕಡಾ 90 ರಷ್ಟು ಉತ್ತಮ ಕಲಿಕೆಯಲ್ಲಿರುವುದು ತಿಳಿದುಬಂದಿದೆ. ಮಕ್ಕಳು ದಿನಕ್ಕೆ 20 ನಿಮಿಷ ಪಠ್ಯೇತರ ಪುಸ್ತಕಗಳನ್ನು ಓದುವುದರಿಂದ ಒಂದು ವರ್ಷಕ್ಕೆ 1.8 ಕೋಟಿ ಪದಗಳನ್ನು, ದಿನಕ್ಕೆ 5 ನಿಮಿಷ ಓದುವ ಮಕ್ಕಳು ವರ್ಷಕ್ಕೆ 2.8 ಲಕ್ಷ ಪದಗಳನ್ನು ಮತ್ತು ದಿನಕ್ಕೆ 1 ನಿಮಿಷಕ್ಕಿಂತ ಕಡಿಮೆ ಓದುವ ಮಕ್ಕಳು 8000 ಪದಗಳನ್ನು ಗ್ರಹಿಸಬಲ್ಲರು ಎಂಬುದನ್ನು ವರದಿಯು ತಿಳಿಸಿದೆ. ಈ ವರದಿಯು ಮನೆಯಲ್ಲಿ ಮಕ್ಕಳ ಪಠ್ಯೇತರ ಓದಿನ ಮಹತ್ವವನ್ನು ತಿಳಿಸುತ್ತದೆ. 

ನಿರ್ಮಾಣ ಬಹು ಸುಲಭ : 

ಗ್ರಂಥಾಲಯ ಎಂದೊಡನೆ ಸಾವಿರಾರು ಪುಸ್ತಕಗಳು ಬೇಕು. ಪುಸ್ತಕಗಳನ್ನು ಜೋಡಿಸಲು ದೊಡ್ಡ ದೊಡ್ಡ ಅಲಮಾರುರ‍್ಯಾಕ್)ಗಳು ಬೇಕು. ಹಾಗಾಗಿ ಗ್ರಂಥಾಲಯ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಬೇಕು ಎಂದು ಹೇಳುವವರು ಹೆಚ್ಚು. ಮಕ್ಕಳಿಗೆ ಅಗತ್ಯವಾದ ಗ್ರಂಥಾಲಯ ನಿರ್ಮಾಣಕ್ಕೆ ಅಂತಹ ದೊಡ್ಡ ಮೊತ್ತವೇನೂ ಬೇಕಾಗಿಲ್ಲ. ಕೇವಲ ಮಗುವಿನ ಒಂದು ವರ್ಷದ ಟ್ಯೂಷನ್ ಮೊತ್ತದಲ್ಲಿ ಒಂದು ಸುಂದರವಾದ ಹಾಗೂ ಮೌಲಿಕವಾದ ಗ್ರಂಥಾಲಯ ನಿರ್ಮಿಸಬಹುದು. ಸಾಮಾನ್ಯವಾಗಿ ಪ್ರತಿವರ್ಷ ಅದ್ದೂರಿಯಾಗಿ ಮಕ್ಕಳ ಹುಟ್ಟುಹಬ್ಬ ಆಚರಿಸುತ್ತೇವೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತೇವೆ. ಅದ್ದೂರಿಯ ಬದಲಾಗಿ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಒಂದಿಷ್ಟು ಹಣ ಉಳಿಸಬಹುದು. ಉಳಿದ ಮೊತ್ತದಲ್ಲಿ ಮಕ್ಕಳಿಗೆ ಇಷ್ಟವಾದ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯವನ್ನು ಅಭಿವೃದ್ದಿಪಡಿಸಬಹುದು. 

ಅಂತೆಯೇ ಪ್ರತಿವರ್ಷ ಹಬ್ಬ, ಉತ್ಸವಗಳಿಗೆಂದು ಮಕ್ಕಳಿಗೆ ತರುವ ಬಟ್ಟೆ, ಸಿಹಿತಿಂಡಿಗಳಲ್ಲಿಯೂ ಒಂದಿಷ್ಟು ಹಣ ಉಳಿಸಿ, ಅದರಲ್ಲಿ ಪುಸ್ತಕ ಕೊಡಿಸಬಹುದು. ಅಲ್ಲದೇ ಬೇರೆ ಊರಿನಿಂದ ಮನೆಗೆ ಹಿಂತಿರುಗುವಾಗ ಮಕ್ಕಳಿಗೆ ಆಟದ ಸಾಮಾನು, ತಿಂಡಿ ತಿನಿಸುಗಳನ್ನು ಖರೀದಿಸಿ ತರುವುದು ಸಹಜ. ಇದರಲ್ಲಿ ಒಂದಿಷ್ಟು ಕಡಿತಗೊಳಿಸಿ ಪುಸ್ತಕಗಳನ್ನು ಖರೀದಿಸಬಹುದು. ಹೀಗೆ ವಿಭಿನ್ನ ಪ್ರಯತ್ನದಿಂದ ನಮ್ಮ ಬಜೆಟ್‌ಗೆ ಅನುಗುಣವಾದ ಪುಸ್ತಕಗಳನ್ನು ಖರೀದಿಸುತ್ತಾ ಗ್ರಂಥಾಲಯ ಅಭಿವೃದ್ದಿ ಪಡಿಸಲು ಸಾಕಷ್ಟು ಅವಕಾಶಗಳಿವೆ. ಪ್ರತಿವರ್ಷ ಕನಿಷ್ಠ 10-20 ಪುಸ್ತಕಗಳನ್ನಾದರೂ ಮಕ್ಕಳ ಗ್ರಂಥಾಲಯಕ್ಕೆ ಸೇರಿಸುತ್ತಾ ಹೋದರೆ ಹತ್ತು ವರ್ಷಗಳಲ್ಲಿ 200 ಪುಸ್ತಕಗಳಾಗುತ್ತವೆ. ಆ ಮಕ್ಕಳು ಪಿ.ಯು.ಸಿ ಅಥವಾ ಪದವಿ ಪೂರ್ಣಗೊಳಿಸುವ ವೇಳೆಗೆ ಕನಿಷ್ಠ 300-500 ಪುಸ್ತಕಗಳಾದರೂ ಗ್ರಂಥಾಲಯ ಸೇರುತ್ತವೆ. ಹೀಗೆ ನಮಗೆ ಹೊರೆಯಾಗದಂತೆ ಕ್ರಮೇಣವಾಗಿ ಮನೆಯೂ ಒಂದು ಪುಟ್ಟ ಗ್ರಂಥಾಲಯವಾಗಿ ಮಾರ್ಪಡುತ್ತದೆ. ಪ್ರಾರಂಭದಲ್ಲಿ ಪುಸ್ತಕಗಳನ್ನು ಇಡಲು ರ‍್ಯಾಕ್‌ಗಳೇ ಬೇಕಾಗಿಲ್ಲ. ರಟ್ಟಿನ ಬಾಕ್ಸ್ನ್ನು ರ‍್ಯಾಕ್‌ನಂತೆ ಬಳಸಬಹುದು. ನಂತರ ಬೇಕಾದರೆ ಕಡಿಮೆ ಬೆಲೆಯ ರ‍್ಯಾಕ್ ವ್ಯವಸ್ಥೆಗೊಳಿಸಬಹುದು.

ಯಾವ ಯಾವ ಪುಸ್ತಕಗಳಿರಬೇಕು?:

ಸಾರ್ವಜನಿಕ ಗ್ರಂಥಾಲಯಗಳAತೆ ದಪ್ಪ ದಪ್ಪನೆಯ ಪುಸ್ತಕಗಳು ತೀರಾ ಅವಶ್ಯಕವೇನಲ್ಲ. ಮಕ್ಕಳ ವಯೋಮಾನ ಹಾಗೂ ಬೌದ್ದಿಕ ಮಟ್ಟಕ್ಕೆ ಅನುಗುಣವಾದ ಸಣ್ಣ ಸಣ್ಣ ಪುಸ್ತಕಗಳಾದರೆ ಸಾಕು. ಅದರಲ್ಲಿ ಮಗು ಕಲಿಯುವ ಬೇರೆ ಬೇರೆ ಭಾಷೆಗಳ ಡಿಕ್ಷನರಿ ಪುಸ್ತಕಗಳು ಕಡ್ಡಾಯವಾಗಿ ಇರಲೇಬೇಕು. ಪುಸ್ತಕ ಖರೀದಿಸುವಾಗ ಮಗುವಿನ ಇಷ್ಟಕ್ಕೆ ಅನುಗುಣವಾದ ಪುಸ್ತಕ ಖರೀದಿಸಿದರೆ ಉತ್ತಮ. ಸಾಧ್ಯವಾದರೆ ಪುಸ್ತಕ ಮಳಿಗೆಗೆ ಮಕ್ಕಳನ್ನು ಕರೆದೊಯ್ಯಿರಿ. ಮಗು ತನಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ. ಹೀಗೆ ಮಾಡುವುದರಿಂದ ಖರೀದಿಸಿದ ಎಲ್ಲಾ ಪುಸ್ತಕಗಳನ್ನು ಮಗು ಆಸಕ್ತಿಯಿಂದ ಓದುತ್ತದೆ. ಓದಿನ ಪುಸ್ತಕಗಳ ಜೊತೆಗೆ ಚಿತ್ರ ರಚನೆಯ, ಮಗು ಸೃಜನಾತ್ಮಕ ಕ್ರಿಯೆಗಳಲ್ಲಿ ತೊಡಗುವಂತಹ ಅಭ್ಯಾಸ ಪುಸ್ತಕಗಳನ್ನೂ ಖರೀದಿಸಿ ಗ್ರಂಥಾಲಯಕ್ಕೆ ಸೇರಿಸಬಹುದು. ಮಕ್ಕಳ ಬೌದ್ದಿಕ ಬೆಳವಣಿಗೆ ಹೆಚ್ಚಿದಂತೆ ವೈಚಾರಿಕ ಕಥೆಗಳು, ವಿಮರ್ಶೆಗಳು, ಜೀವನಚರಿತ್ರೆಗಳು, ವಿವಿಧ ದೇಶಗಳ ಜನಪದ ಕಥೆಗಳು, ಪ್ರವಾಸ ಕಥನಗಳು, ಮಕ್ಕಳ ಕಾದಂಬರಿಗಳು, ಸಾಹಸ ಭರಿತ ರೋಚಕ ಕಥಾಗುಚ್ಛಗಳು, ಪರಿಸರ ಪ್ರಜ್ಞೆ ಮೂಡಿಸುವ ಪುಸ್ತಕಗಳು, ಜನಜಾಗೃತಿ ಕಥನಗಳು ಅಲ್ಲಿ ಸ್ಥಾನ ಪಡೆಯಲಿ. ಹೀಗೆ ವೈವಿಧ್ಯಮಯ ಓದಿನ ರುಚಿಯನ್ನು ನೀಡಿದರೆ ಮಗು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. 

ಪಾಲಕರ ಜವಾಬ್ದಾರಿ ಅಗತ್ಯ: 

ಮಕ್ಕಳಿಗಾಗಿ ಮನೆಯಲ್ಲಿ ಗ್ರಂಥಾಲಯ ನಿರ್ಮಿಸುವಲ್ಲಿ ಪಾಲಕರ ಜವಾಬ್ದಾರಿ ಅತೀ ಮುಖ್ಯ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಾಲಕರು ಒಂದಿಷ್ಟು ರಿಸ್ಕ್ ತೆಗೆದುಕೊಂಡರೆ ತಪ್ಪೇನಿಲ್ಲ. ಕೇವಲ ಮಗುವಿಗೆ ಪುಸ್ತಕಗಳನ್ನು ಕೊಡಿಸಿದರೆ ಸಾಲದು. ಮಗು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವುದು ತುಂಬಾ ಮುಖ್ಯ. ಅದಕ್ಕಾಗಿ ಪಾಲಕರಾದ ನಾವು ದಿನಾಲೂ ಕನಿಷ್ಠ ಅರ್ದ ಗಂಟೆ ಮಗುವಿನ ಜೊತೆ ಕೂತು ಓದುತ್ತಾ ಮಗುವನ್ನು ಓದಲು ಹಚ್ಚಬೇಕು. ನಾವು ಓದಿದ ಪುಸ್ತಕದಲ್ಲಿನ ಉತ್ತಮಾಂಶವನ್ನು ಮಗುವಿಗೆ ಹೇಳುತ್ತಾ ಓದಲು ಆಸಕ್ತಿ ಹುಟ್ಟುವಂತೆ ಮಾಡಬೇಕು. ಮಗುವಿನ ಮಾನಸಿಕ ಹಾಗೂ ಬೌದ್ದಿಕ ವಯಸ್ಸು ಬೆಳೆದಂತೆಲ್ಲಾ ಮಗು ತಾನು ಓದಿದ ಪುಸ್ತಕದ ಕುರಿತ ಅಭಿಪ್ರಾಯವನ್ನು ಬರೆಯಲು ಹೇಳಬೇಕು. ಇದರಿಂದ ಮಗುವಿನಲ್ಲಿ ಬರಹ ಕೌಶಲ್ಯ ಅಭಿವೃದ್ದಿ ಹೊಂದುವ ಜೊತೆಗೆ ವಿಮರ್ಶಾತ್ಮಕ ದೃಷ್ಟಿಕೋನ ಅಭಿವೃದ್ದಿಯಾಗುತ್ತದೆ.

ಚಿಕ್ಕ ಮಕ್ಕಳು ಪುಸ್ತಕಗಳನ್ನು ಹರಿದುಹಾಕುತ್ತಾರೆ ಎಂಬ ಒಂದೇ ಕಾರಣಕ್ಕೆ ಬಹುತೇಕ ಪಾಲಕರು ಪುಸ್ತಕಗಳು ಮಕ್ಕಳ ಕೈಗೆ ಸಿಗದಂತೆ ಇಡುವುದು ಸಾಮಾನ್ಯ. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಪುಸ್ತಕದ ಬಗ್ಗೆ ಅನಾದರ ಬೆಳೆಯಲು ಪ್ರಾರಂಭವಾಗುತ್ತದೆ. ಪುಸ್ತಕಗಳು ಮಗುವಿನ ಕೈಗೆ ಸಿಗುವಂತೆ ಇಡಬೇಕು. ದಿನಾಲೂ ನೋಡಲು ಸಿಗುವುದರಿಂದ ಕ್ರಮೇಣವಾಗಿ ಓದಲು ಆಸಕ್ತಿ ಬೆಳೆಯುತ್ತದೆ. ಡಿಜಿಟಲ್ ತಂತ್ರಜ್ಞಾನದ ಫಲವಾಗಿ ಇಂದು ಬಹುತೇಕ ಪುಸ್ತಕಗಳು ವರ್ಣಮಯವಾಗಿ ಮಕ್ಕಳಿಗೆ ಆಕರ್ಷಕವಾಗಿರುತ್ತವೆ. ಸುಲಭವಾಗಿ ಮಕ್ಕಳು ಕೈಗೆತ್ತಿಕೊಳ್ಳುವಂತೆ ಮಾಡುವ ಆಕರ್ಷಕ ಗುಣ ಇಂದಿನ ಪುಸ್ತಕಗಳಿಗೆ ಇದೆ.  

ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ನಿರ್ಮಿಸಲು ಪುಸ್ತಕಗಳು ಸಹಾಯ ಮಾಡುತ್ತವೆ ಎಂಬುದನ್ನು ಕೇವಲ ಬಾಯಿ ಮಾತಿನಿಂದ ಹೇಳದೇ, ಮಕ್ಕಳಿಗಾಗಿ ಮನೆ ಗ್ರಂಥಾಲಯ ನಿರ್ಮಿಸುವ ಮೂಲಕ ಸಾಧ್ಯ ಮಾಡಿಸಿ ತೋರೀಸೋಣ.






‘ಬಾಡ’ದ ಕನಕ ಚರಿತ್ರೆ

 ದಿನಾಂಕ  03-11-2019ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ. 


‘ಬಾಡ’ದ ಕನಕ ಚರಿತ್ರೆ



ಕನಕದಾಸರು ಎಂದೊಡನೆ ಅವರ ಕೀರ್ತನೆ, ಸುಳಾದಿಗಳು, ಉಗಾಬೋಗಗಳು ನೆನೆಪಾಗುತ್ತವೆ. ಕರ್ನಾಟಕದ ಹರಿದಾಸರಲ್ಲಿ ಕನಕದಾಸರು ಅಗ್ರಗಣ್ಯರು. ಅಂತಹ ಮಹಾನ್ ಚೇತನನ ಜೀವನ ಚರಿತ್ರೆಯನ್ನು ಕಣ್ಣಾರೆ ಕಂಡು ಅರಿಯಲು ಸಾಧ್ಯವಾಗಿದ್ದರೆ ಹೇಗೆ ಎಂಬ ಚಿಂತನೆ ಮೂಡದಿರದು. ಇಪ್ಪತ್ತೊಂದನೇ ಶತಮಾನದಲ್ಲಿ ಜೀವಿಸಿದ ನಮಗೆ ಹದಿನಾರನೇ ಶತಮಾನದ ಕನಕದಾಸರ ಜೀವನಚರಿತ್ರೆಗೆ ಸಂಬAಧಿಸಿದ ಕೆಲವು ಸಾದೃಶ್ಯಗಳನ್ನು ಕಣ್ಣಾರೆ ಕಾಣಲು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಾಡದಲ್ಲಿ ಸಕಲ ವ್ಯವಸ್ಥೆ ಲಭ್ಯವಿದೆ. ಕನಕದಾಸರ ಜನ್ಮಭೂಮಿಯಾದ ಬಾಡಾದಲ್ಲಿ ಅವರ ಜೀವಿತದ ಗತವೈಭವವನ್ನು ಮರುಸೃಷ್ಟಿಸಲಾಗಿದೆ. 

ಅರಮನೆಯಲ್ಲಿ ಚರಿತ್ರೆಯ ಅನಾವರಣ : ಅರಮನೆಯಲ್ಲಿ ಕನಕದಾಸರ ಬದುಕಿನ ಯಶೋಗಾಥೆ ತಿಳಿಸುವ ಹಲವು ಚಿತ್ರಣಗಳಿವೆ. ಅರಮನೆಯೊಳಗಿನ ತೈಲವರ್ಣಗಳು ಹಾಗೂ ಉಬ್ಬುಶಿಲ್ಪಗಳು ಕನಕದಾಸರು ಹಾಗೂ ಅವರ ಪೂರ್ವಿಕರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಇತಿಹಾಸವನ್ನು ವರ್ಗಾಯಿಸುತ್ತವೆ. ಇತಿಹಾಸ ಅರಿಯುವ ಹಂಬಲ ಇರುವ ಪ್ರತಿಯೊಬ್ಬರಿಗೂ ಇವು ಅಮೂಲ್ಯ ಆಕರಗಳಾಗಿವೆ. ಬಾಲ ತಿಮ್ಮಪ್ಪನಾಯಕ ಡಣಾಯಕನಾಗಿ ನಂತರ ಕನಕದಾಸರಾಗಿ ಪರಿವರ್ತನೆ ಹೊಂದಿದ ಸನ್ನಿವೇಶದ ಚಿತ್ರಣಗಳು ಮನಸ್ಸಿಗೆ ಮುದ ನೀಡುತ್ತವೆ. ಆರ್ಟ್ ಗ್ಯಾಲರಿ ಮಾದರಿಯಲ್ಲಿ ಗೋಡೆಗೆ ನೇತುಹಾಕಿದ ವರ್ಣಚಿತ್ರಗಳು ಕನಕದಾಸರ ಜೀವನ ಚರಿತ್ರೆಯನ್ನು ಸಾರಿ ಹೇಳುತ್ತವೆ. ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿರುವ ಕನಕದಾಸರ ಕೀರ್ತನೆಗಳನ್ನು ಅರಮನೆಯ ಒಳಾಂಗಣದ ಗೋಡೆಗೆ ಬಂಧಿಸಲಾಗಿದೆ. ಇವು ನಮ್ಮ ಅಂತರಾತ್ಮಕ್ಕೆ ಬೆಳಕನ್ನು ಹರಿಸುತ್ತವೆ. ಅರಮನೆ ಪ್ರವೇಶ ದ್ವಾರಕ್ಕೆ ಎದುರಿಗೆ ಸ್ಥಾಪಿಸಲಾದ ಕನಕದಾಸರ ಮೂರ್ತಿ ನಮ್ಮೊಳಗಿನ ಅಹಂಭಾವವನ್ನು ತಗ್ಗಿಸುತ್ತದೆ. 

ಅರಮನೆಯೊಳಗಿನ ಇನ್ನೊಂದು ವಿಶೇಷವೆಂದರೆ ದರ್ಬಾರ್ ಹಾಲ್. ಮೈಸೂರು ಅರಮನೆಯ ದರ್ಬಾರ್ ಹಾಲ್‌ನಂತೆ ಇಲ್ಲಿಯೂ ದರ್ಬಾರ್ ಹಾಲ್ ನಿರ್ಮಿಸಲಾಗಿದ್ದು, ನೋಡುಗರಿಗೆ ಅಚ್ಚರಿಯನ್ನುಂಟು ಮಾಡುತ್ತದೆ. ದರ್ಬಾರ್ ಹಾಲ್‌ನ ಲೋಹದ ಕುಸುರಿ ಕಲೆ ವೀಕ್ಷಕರಿಗೆ ಮುದ ನೀಡುತ್ತದೆ. ದರ್ಬಾರ್ ಎರಡು ಅಂತಸ್ತನ್ನು ಹೊಂದಿದ್ದು, ಹತ್ತಲು ಮೆಟ್ಟಿಲುಗಳ ವ್ಯವಸ್ಥೆ ಇದೆ. ಅರಮನೆ ಮೇಲೆ ನಿಂತು ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿ ಹಸಿರಿನಿಂದ ಕಂಗೊಳಿಸುವ ಬಾಡಾದ ಸುಂದರ ಪ್ರಕೃತಿಯನ್ನು ಸವಿಯಬಹುದು. 2010ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಇವರ ಕಲ್ಪನೆಯ ಕೂಸಾದ ಅರಮನೆಯು ಇಂದು ವೈಭವಯುತವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 20ಸಾವಿರ ಚದುರ ಅಡಿ ವಿಸ್ತೀರ್ಣದ ಈ ಅರಮನೆಯನ್ನು 2013ರಲ್ಲಿ ವಿಜಯನಗರ ಶಿಲ್ಪಕಲಾ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅರಮನೆಯ ಸುತ್ತಲೂ ಕೆಂಪುಕಲ್ಲಿನ ಕೋಟೆ ಇದೆ. ಪ್ರವಾಸಿಗರನ್ನು ಕ್ಷಣಹೊತ್ತು ಇತಿಹಾಸದ ಕಾಲಘಟ್ಟಕ್ಕೆ ಕರೆದೊಯ್ಯುವ ಈ ಮನಮೋಹಕ ಅರಮನೆ ನಿರ್ಮಿಸಿದ್ದು ಇಂದಿನ ಪೀಳಿಗೆಗೆ ಕನಕದಾಸರ ಇತಿಹಾಸವನ್ನು ಬಾಡದಂತೆ ಉಳಿಸುವ ಪ್ರಯತ್ನವಾಗಿದೆ.

ಕೋಟೆಯ ಒಳಭಾಗ ಹಾಗೂ ಹೊರಭಾಗದಲ್ಲಿನ ಉದ್ಯಾನವನ ಪ್ರಕೃತಿ ಪ್ರಿಯರಿಗೆ ರಸದೌತಣ ನೀಡುತ್ತದೆ. ಎತ್ತರವಾದ ಗುಡ್ಡದ ಮೇಲೆ ನಿರ್ಮಿತವಾದ ಈ ಕೋಟೆ ಅನತಿ ದೂರದಿಂದಲೇ ತನ್ನ ಇರುವಿಕೆಯನ್ನು ಸೂಚಿಸಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕೋಟೆ ಏರಲು ಮೆಟ್ಟಿಲುಗಳಿದ್ದು, ಅಕ್ಕಪಕ್ಕದ ಉದ್ಯಾನವನ ಮನಸ್ಸಿಗೆ ಮುದ ನೀಡುತ್ತದೆ. ಮೇಲ್ಭಾಗದಲ್ಲಿ ನಿರ್ಮಿತವಾದ ಕಾವಲುಗಾರರ ಆಕರ್ಷಕ ಶಿಲ್ಪಗಳು ಕೋಟೆಗೆ ಮೆರಗನ್ನು ನೀಡಿವೆ. ವಾಹನ ಇಳಿಯುತ್ತಿದ್ದಂತೆ ಕೋಟೆಯ ಸೌಂದರ್ಯ ಮೊಬೈಲ್‌ನಲ್ಲಿ ಸುಂದರ ಚಿತ್ರಣಗಳನ್ನು ಪಟಪಟನೆ ಕ್ಲಿಕ್ಕಿಸುವಂತೆ ಮೋಡಿಮಾಡುತ್ತವೆ. ಕರ್ನಾಟಕ ಸೇರಿದಂತೆ, ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟçಗಳಿಂದ ಪ್ರತಿವರ್ಷ ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿ ಇಲ್ಲಿನ ಸೌಂದರ್ಯನ್ನು ಕಣ್ತುಂಬಿಕೊಳ್ಳುತ್ತಾರೆ. ಕೋಟೆ ಮತ್ತು ಅರಮನೆ ಸಮುಚ್ಛಯಗಳನ್ನು ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರವು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಿದೆ.

ಹೋಲೋಗ್ರಾಮ್ ಚಿತ್ರಣ : ಬಾಡಾದ ಅರಮನೆಯ ಮತ್ತೊಂದು ವಿಶೇಷತೆ ಎಂದರೆ ‘ಹೋಲೋಗ್ರಾಮ್’ ಮೂಲಕ ‘ಕನಕ’ ಎಂಬ ಕಿರುಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಇದು 20 ನಿಮಿಷದ ಚಿತ್ರವಾಗಿದ್ದು, ಬೆಂಗಳೂರಿನ ನಿಚ್ಚೆ ನೆಟ್‌ವರ್ಕ್ ಹಾಗೂ ಸಿ.ಎಸ್. ಕ್ರಿಯೇಶನ್ ಈ ಕಿರುಚಿತ್ರ ನಿರ್ಮಾಣ ಮಾಡಿದೆ. ಹೈದ್ರಾಬಾದಿನ ಜೆನಿತೋನಿಯಾ ಮೀಡಿಯಾ ನೆಟ್‌ವರ್ಕ್ ಅತ್ಯಾಕರ್ಷಕ ಅನಿಮೇಶನ್ ಮಾಡಿದೆ. ಪ್ರದರ್ಶನಕ್ಕಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ಹೋಲೋಗ್ರಾಮ್ ಚಿತ್ರಪ್ರದರ್ಶನವು ಜರ್ಮನ್ ಮೂಲದ ತಂತ್ರಜ್ಞಾನವಾಗಿದ್ದು, ರಾಜ್ಯದಲ್ಲೇ ಪ್ರಥಮ ಹಾಗೂ ವಿನೂತನ ಪ್ರಯೋಗವಾಗಿದೆ. ಕಲಾವಿದರು ಪ್ರೇಕ್ಷಕರ ಎದುರು ನಿಂತುಕೊAಡು ಅಭಿನಯಿಸುತ್ತಿದ್ದಾರೆ ಎಂಬ ಅನುಭವ ಸಿಗುತ್ತದೆ. ಇಲ್ಲಿ ಪಾರದರ್ಶಕ ಪರದೆ ಇದ್ದು, ಪ್ರೇಕ್ಷಕ ಯಾವುದೇ ಕೋನದಿಂದ ವೀಕ್ಷಿಸಿದರೂ ಚಿತ್ರದ ನೈಜತೆ ಹಾಗೂ ಸ್ಪಷ್ಟತೆ ಈ ತಂತ್ರಜ್ಞಾನದಿAದ ಸಿಗುತ್ತದೆ. 

ಕೋಟೆಯ ಸಮೀಪದಲ್ಲಿ ಒಂದು ಸಾವಿರ ಜನರು ಕುಳಿತು ವೀಕ್ಷಿಸಬಹುದಾದ ವಿಶಾಲ ಬಯಲು ರಂಗಮAದಿರ ನಿರ್ಮಿಸಲಾಗಿದೆ. ಅಲ್ಲದೇ ಕೋಟೆಯ ಅನತಿ ದೂರದಲ್ಲೇ ಬಿಳಿ ಗ್ರಾö್ಯನೈಟ್ ಕಲ್ಲಿನಲ್ಲಿ ನಿರ್ಮಾಣವಾದ ಧ್ಯಾನಸ್ಥಿತಿಯಲ್ಲಿ ಕುಳಿತ ಕನಕರ ಮೂರ್ತಿ ಆಕರ್ಷಿಸುತ್ತದೆ. ಈ ಸ್ಥಳ ತುಂಬಾ ಪ್ರಶಾಂತವಾಗಿದ್ದು ಆಂತರ್ಯದಲ್ಲಿ ಭಕ್ತಿಯನ್ನು ಉದ್ದೀಪಿಸುತ್ತದೆ. 

ಅಕ್ಕಪಕ್ಕದ ಹಾಟ್‌ಸ್ಪಾಟ್ಸ್ : ಬಾಡಾದ ಸುತ್ತಮುತ್ತ ಸಾಕಷ್ಟು ಪ್ರವಾಸಿ ತಾಣಗಳಿವೆ. ಸಮೀಪದ ಬಂಕಾಪುರದ ನವಿಲುಧಾಮ ಹಾಗೂ ಐತಿಹಾಸಿಕ ನಗರೇಶ್ವರ ದೇವಸ್ಥಾನ. ಕಾಗಿನೆಲೆಯ ಕನಕದಾಸ ದೇವಸ್ಥಾನ, ಮುಂಡಗೋಡದ ಟಿಬೇಟಿಯನ್ ಟೆಂಪಲ್ ಹಾಗೂ ಗೋಟಗೋಡಿಯ ಉತ್ಸವ ರಾಕ್‌ಗಾರ್ಡನ್‌ಗಳಿದ್ದು ಎಲ್ಲವೂ ಆಕರ್ಷಕ ಪ್ರವಾಸಿ ತಾಣಗಳಾಗಿವೆ.

ಸುಲಭ ಮಾರ್ಗ : ಬಾಡಾಕ್ಕೆ ತಲುಪಲು ಸರ್ವಕಾಲಿಕ ಸುವ್ಯವಸ್ಥಿತ ರಸ್ತೆ ಇದೆ. ಜಿಲ್ಲಾ ಕೇಂದ್ರ ಹಾವೇರಿಯಿಂದ 25 ಕಿ.ಮೀ ಹಾಗೂ ತಾಲೂಕ ಕೇಂದ್ರ ಶಿಗ್ಗಾಂವದಿAದ 8 ಕಿ.ಮೀ ದೂರವಿದೆ. ಅಲ್ಲದೇ ಹುಬ್ಬಳ್ಳಿಯಿಂದ 53 ಕಿ.ಮೀ ಹಾಗೂ ಬೆಂಗಳೂರಿನಿAದ 361 ಕಿ.ಮೀ ದೂರವಿದೆ. ಇಲ್ಲಿಗೆ ಹಾವೇರಿವರೆಗೆ ರೈಲು ವ್ಯವಸ್ಥೆ ಇದೆ. ಹುಬ್ಬಳ್ಳಿಗೆ ವಿಮಾನ ವ್ಯವಸ್ಥೆ ಇದೆ. ಬಾಡಾದ ಅರಮನೆ ಹಾಗೂ ಇನ್ನಿತರೇ ಮಾಹಿತಿಗಾಗಿ ಕಾಗಿನೆಲೆ ಪ್ರಾಧಿಕಾರದ ಆಡಳಿತಾಧಿಕಾರಿ ಮಲ್ಲೇಶಪ್ಪ ಹೊರಪೇಟೆ 94483 38806 ಇವರನ್ನು ಸಂಪರ್ಕಿಸಿ.




ಅಸಮರ್ಥನ ಜೀವನಯಾತ್ರೆ (ಕಾದಂಬರಿ) ಪುಸ್ತಕ ವಿಮರ್ಶೆ

ದಿನಾಂಕ 26-10-2019ರ ವಾರ್ತಾಭಾರತಿ ಯ  ಸುಗ್ಗಿ ಪುರವಣಿ ಯಲ್ಲಿ ಪ್ರಕಟವಾದ ಪುಸ್ತಕ ವಿಮರ್ಶೆ.


 ಅಸಮರ್ಥರನ್ನು ಸಮರ್ಥರನ್ನಾಗಿಸುವ ಮಾರ್ಗದರ್ಶಿ

ಅಸಮರ್ಥನ ಜೀವನಯಾತ್ರೆ (ಕಾದಂಬರಿ)



ಪ್ರತಿಯೊಬ್ಬ ವ್ಯಕ್ತಿಯ ಜೀವನ ವಿಭಿನ್ನ. ತಾನು ಇತರರಿಗಿಂತ ಭಿನ್ನವಾಗಿ ಬದುಕಬೇಕೆಂಬ ಆಸೆ ಸಹಜ. ಸಮಾಜದಲ್ಲಿ ಹೆಸರುವಾಸಿಯಾಗಬೇಕೆಂಬ ಹಂಬಲ ಬಹುತೇಕರಿಗೆ ಇರುತ್ತದೆ. ಆ ಕೀರ್ತಿಯ ಹಪಹಪಿಯಲ್ಲಿ ಬೆಂದವನೊಬ್ಬನ ಕಥೆಯೇ ‘ಅಸಮರ್ಥನ ಜೀವನಯಾತ್ರೆ’. ಕಾದಂಬರಿ ಎಂದರೆ ಅಲ್ಲಿ ರಮ್ಯತೆ ಇರುತ್ತದೆ, ಕೇವಲ ಭಾವನೆಗಳೇ ಮಾತಾಗುತ್ತವೆ, ಮನೋರಂಜನೆ ಅತೀರೇಕವಾಗಿರುತ್ತದೆ, ಸರಸ-ಸಲ್ಲಾಪಗಳೇ ಇಡೀ ಕಥೆಯ ಹೂರಣವಾಗಿರುತ್ತವೆ ಎಂಬುದು ಬಹುತೇಕರ ಅನಿಸಿಕೆ. ಆದರೆ ಕಾದಂಬರಿಗಳೂ ಸಹ ಜೀವನದರ್ಶನ ಮಾಡಿಸುತ್ತವೆ ಎಂಬುದಕ್ಕೆ ಅಸಮರ್ಥನ ಜೀವನಯಾತ್ರೆ ಸಾಕ್ಷಿಯಾಗುತ್ತದೆ. ಜೀವನದಲ್ಲಿ ಎಲ್ಲ ಇದ್ದರೂ ಸುಖಕ್ಕೆ ಗೆಲುವಿಗೆ ವ್ಯಕ್ತಿಯ ಮನೋಸ್ಥಿತಯೇ ಮುಖ್ಯವೆಂದು ನಿರೂಪಿಸಿದ ತೆಲುಗಿನ ಮೊದಲ ಕಾದಂಬರಿಯೇ ಅಸಮರ್ಥನ ಜೀವನಯಾತ್ರೆ.

ಸೀತಾರಾಮರಾಯ ಕಥೆಯ ದುರಂತ ನಾಯಕ. ತಂದೆಯ ಮಾತಿನಂತೆ ವಂಶದ ಹೆಸರನ್ನು ಉಳಿಸಿಕೊಳ್ಳಲು ಹೆಣಗಾಡಿ, ಬದುಕನ್ನು ದುರಂತಕ್ಕೀಡು ಮಾಡಿಕೊಂಡು ಅಸಮರ್ಥ ಎನಿಸಿಕೊಂಡವನು. ಹೆಸರಿನ ಕೀರ್ತಿಗೆ ದಾಸನಾದ ವ್ಯಕ್ತಿಯೊಬ್ಬನ ಮನೋಸ್ಥಿತಿಗಳನ್ನು ಲೇಖಕ ಗೋಪಿಚಂದ್ ವಾಸ್ತವ ನೆಲೆಗಟ್ಟಿನ ಉದಾಹರಣೆಗಳಿಂದ ಉದಾಹರಿಸುತ್ತಾ ಸಾಗುತ್ತಾರೆ. ಆದರ್ಶಕ್ಕೆ ಕಟ್ಟುಬಿದ್ದ ವ್ಯಕ್ತಿಯೊಬ್ಬ ತನ್ನ ಮನೆ, ಮಡದಿ, ಮಕ್ಕಳನ್ನು ಹೇಗೆ ನಿಕೃಷ್ಟವಾಗಿ ಕಾಣುತ್ತಾನೆ ಮತ್ತು ತನ್ನ ಕರ್ತವ್ಯವನ್ನು ಹೇಗೆ ಮರೆಯುತ್ತಾನೆ ಎಂಬುದು ಕಾದಂಬರಿಯಾದ್ಯAತ ಕಾಣಸಿಗುತ್ತದೆ. ಕಾದಂಬರಿಯನ್ನು ಓದುತ್ತಾ ಸಾಗಿದಂತೆ ಅದು ಸೀತಾರಾಮರಾಯನ ಕಥೆ ಎನಿಸುವುದಿಲ್ಲ. ಬದಲಾಗಿ ಅದು ಓದುಗನ ಕಥೆಯೇ  ಆಗಿ ಓದುಗ ಕಥೆಯೊಳಗೆ ಹುದುಗಿ ಹೋಗುತ್ತಾನೆ. 

ಕಾದಂಬರಿಕಾರ ವಿವಿಧ ಸನ್ನಿವೇಶಗಳ ಮೂಲಕ ಕೆಲವು ವಾಸ್ತವ ಸತ್ಯಗಳನ್ನು ಬಿಚ್ಚಿಡುತ್ತಾನೆ. ‘ಪ್ರಪಂಚ ಪ್ರತಿಕ್ಷಣ ಬದಲಾಗುತ್ತಲೇ ಇರುತ್ತದೆ, ಆದರೆ ಈ ಬದಲಾವಣೆ ಯಾತಕ್ಕೆಂದು ಯಾರಿಗೂ ಅರ್ಥವಾಗುವುದೇ ಇಲ್ಲ’. ‘ಒಂದು ಸಮಸ್ಯೆ ಪರಿಹರಿಸದರೆ, ಆ ಪರಿಹಾರದೊಳಗೆ ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ’. ‘ಕೆಲವರು ಪದೇ ಪದೇ ಮೋಸ ಮಾಡುತ್ತಲೇ ಇರುತ್ತಾರೆ ಮತ್ತು ಕೆಲವರು ಪದೇ ಪದೇ ಮೋಸಕ್ಕೆ ಒಳಗಾಗುತ್ತಲೇ ಇರುತ್ತಾರೆ’. ಇಂತಹ ವಾಸ್ತವಗಳು ಸೀತಾರಾಮರಾಯನ ಪಾತ್ರದ ಸುತ್ತ ಜೀವ ತಳೆಯುತ್ತಲೇ ಇರುತ್ತವೆ.

ಸುಖ ಎಂದರೇನು? ಅದು ಎಲ್ಲಿದೆ? ಪ್ರಾಣಿಗಳು ಸುಖಿಗಳಾ? ಮಾನವರು ಸುಖಿಗಳಾ? ಮಾನವ ಸುಖಿ ಎಂದಾದರೆ ಸರ್ವಸಂಗ ಪರಿತ್ಯಾಗಿ ಯೋಗಿ ಸುಖಿಯೇ? ಸಕಲ ಐಶ್ವರ್ಯ ಸಂಪತ್ತುಗಳಿAದ ಕೂಡಿದ ಧನಿಕ ಸುಖಿಯೇ? ಸಂಸಾರಿ ಸುಖಿಯೇ? ಸಂನ್ಯಾಸಿ ಸುಖಿಯೇ? ಬುದ್ದಿವಂತ ಸುಖಿಯೇ? ಮೂರ್ಖ ಸುಖಿಯೇ? ಎಂದು ವಿವಿಧ ರೀತಿಯಲ್ಲಿ ಉದಾಹರಿಸುತ್ತಾ ಯಾವುದೇ ಆದರ್ಶಗಳಿಲ್ಲದ ಮೂರ್ಖನೇ ನಿಜವಾದ ಸುಖಿ ಎಂಬ ಬದುಕಿನ ಕಟುಸತ್ಯವನ್ನು ಕಾದಂಬರಿ ತಿಳಿಸುತ್ತದೆ. ಗೊಂದಲದ ಗೂಡಾದ ಮಾನವನ ಜೀವನದಲ್ಲಿ ಸ್ವಂತಿಕೆಗೆ ಜಾಗವಿಲ್ಲ. ವಿಚಾರಗಳು ಮಂಥನವಾಗದೇ ತಲೆಯೊಳಗೆ ಗಿರಕಿಹೊಡೆಯುವುದರಿಂದ ಸತ್ಯ ಯಾವುದು? ಮಿಥ್ಯ ಯಾವುದು? ಎಂಬುದನ್ನು ನಿರ್ಧರಿಸಲು ಹೆಣಗುವ ಮನೋಸ್ಥಿತಿಯನ್ನು ವಿವಿಧ ದುಷ್ಟಾಂತಗಳೊAದಿಗೆ ಈ ಕೃತಿ ಕಟ್ಟಿಕೊಡುತ್ತದೆ. 

ಇದು ಕೇವಲ ಕಾದಂಬರಿಯಲ್ಲ. ಪ್ರತಿಯೊಬ್ಬ ಓದುಗನೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನೇಕ ಮಾರ್ಗದರ್ಶಿ ತತ್ವಗಳನ್ನು ಒಳಗೊಂಡ ಕೃತಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೋವೈಜ್ಞಾನಿಕ ಹಿನ್ನಲೆಯಲ್ಲಿ ಇಲ್ಲಿನ ಪಾತ್ರಗಳು ಪರಸ್ಪರ ಸಂಭಾಷಿಸುತ್ತಾ ಲೋಕಜ್ಞಾನವನ್ನು ನೀಡುತ್ತವೆ. “ಮಕ್ಕಳು ಅವರ ಕಾಲ ಮೇಲೆ ಅವರು ನಿಲ್ಲುವುದನ್ನು ಕಲಿತುಕೊಳ್ಳಬೇಕು. ಇಲ್ಲದೆ ಹೋದರೆ ದೊಡ್ಡವರಾದ ಮೇಲೆ ಬದುಕಿನ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುವುದಿಲ್ಲ” ಎಂಬ ಹೇಳಿಕೆ ಮಕ್ಕಳನ್ನು ಬೆಳೆಸುವ ಪಾಲಕರಿಗೆ ಮಾರ್ಗದರ್ಶಿಯಾಗಿದೆ. ಅಸಮರ್ಥ ಸೀತಾರಾಮರಾಯನ ಆಂತರ್ಯದಲ್ಲಿ ಒಬ್ಬ ಶಿಶುಮನೋವಿಜ್ಞಾನಿ ಇರುವುದನ್ನು ಕಾದಂಬರಿಕಾರ ಪ್ರಸ್ತುತಪಡಿಸುತ್ತಾನೆ. ಒಮ್ಮೆ ಯಾವುದೋ ಕ್ಷÄಲ್ಲಕ ಕಾರಣಕ್ಕೆ ಮಗಳ ಮೇಲೆ ಕೈಮಾಡಿದ ಸೀತಾರಾಮರಾಯ ನಂತರ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವ ಪರಿ ಎಂತಹವರಲ್ಲೂ ಕಣ್ಣೀರು ತರಿಸುತ್ತದೆ. ಅಂತೆಯೇ ಮಕ್ಕಳನ್ನು ಹೊಡೆಯುವುದು ಘೋರಪಾಪ, ಎಳೆಯ ಮಕ್ಕಳು ಏನೂ ಅರಿಯದ ಮುಗ್ಧರು ಎಂಬುದನ್ನು ಸೀತಾರಾಮರಾಯನ ಮೂಲಕ ಕಾದಂಬರಿಕಾರ ತಿಳಿಸುತ್ತಾನೆ.

ಕಾದಂಬರಿಯ ಅಂತ್ಯಕ್ಕೆ ಬೇಂದ್ರೆಯವರ ‘ಕುರುಡು ಕಾಂಚಾಣ’ ಕವಿತೆ ನೆನಪಾಗುತ್ತದೆ. ಎಲ್ಲವನ್ನೂ, ಎಲ್ಲರನ್ನೂ ಕಾಲಲ್ಲಿ ಹೊಸಕಿ ಹಾಕಿದ ಕಾಂಚಾಣ ಕೊನೆಗೆ ತನ್ನನ್ನು ತಾನೇ ಕೊಂದುಕೊಳ್ಳುವAತೆ ಆದರ್ಶದ ಕೀರ್ತಿಯ ಬೆನ್ನುಹತ್ತಿದ ಸೀತಾರಾಮರಾಯ ಕೊನೆಗೆ ತನ್ನನ್ನು ತಾನೇ ಕೊಂದುಕೊಳ್ಳುವ ಪರಿ ಮನಸ್ಸಿಗೆ ನೋವುಂಟು ಮಾಡುತ್ತದೆ. ಜೊತೆಗೆ ಈ ಭೂಮಿಯ ಮೇಲೆ ಯಾರೂ ಅಸಮರ್ಥರಲ್ಲ, ಪ್ರತಿಯೊಬ್ಬರೂ ನಿಶ್ಚಿತ ಕಾಯಕದ ಮೂಲಕ ಹೆಸರು ಕೀರ್ತಿ ಗಳಿಸಲು ಸಮರ್ಥರು ಎಂಬ ಸಂದೇಶದೊAದಿಗೆ ಕಾದಂಬರಿ ಅಂತ್ಯಗೊಳ್ಳುತ್ತದೆ.

ತ್ರಿಪುರನೇನಿ ಗೋಪಿಚಂದ್ ಅವರ ತೆಲುಗು ಮೂಲದ ಈ ಕಾದಂಬರಿಯನ್ನು ಬಿ.ಸುಜ್ಞಾನಮೂರ್ತಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆದರೆ ಎಲ್ಲೂ ಇದು ಕನ್ನಡ ಅನುವಾದ ಎನಿಸುವುದೇ ಇಲ್ಲ. ಅಷ್ಟೊಂದು ಭಾವಪೂರ್ಣವಾಗಿ ಮನಮುಟ್ಟುವಂತೆ ಕನ್ನಡೀಕರಿಸಿದ್ದಾರೆ. ಇದು ಕೇವಲ ಮನೋರಂಜನೆಗಾಗಿ ಓದುವ ಕಾದಂಬರಿಯಲ್ಲ. ಬದಲಾಗಿ ಜೀವನದ ರಸ ನಿಮಿಷಗಳನ್ನು ಸವಿಯುವ ಪ್ರತಿಯೊಬ್ಬ ಭಾವಜೀವಿಯೂ ಓದಿ ತಾತ್ವಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೃತಿಯಿದು. ಇಂತಹ ಮಹತ್ತರ ಕೃತಿಯನ್ನು ಲಡಾಯಿ ಪ್ರಕಾಶನ ಗದಗ ಇವರು ಹೊರತಂದಿದ್ದಾರೆ. ಪುಸ್ತಕದ ವಿವರಗಳಿಗಾಗಿ 9480286844ಗೆ ಸಂಪರ್ಕಿಸಿ.

ಪುಸ್ತಕ ಪರಿಚಯ

ಪುಸ್ತಕದ ಹೆಸರು : ಅಸಮರ್ಥನ ಜೀವನಯಾತ್ರೆ (ಕಾದಂಬರಿ)

ತೆಲಗು ಮೂಲ : ತ್ರಿಪುರನೇನಿ ಗೋಪಿಚಂದ್ 

ಕನ್ನಡಕ್ಕೆ : ಬಿ.ಸುಜ್ಞಾನಮೂರ್ತಿ

ಪ್ರಕಾಶಕರು : ಲಡಾಯಿ ಪ್ರಕಾಶನ ಗದಗ

ಪುಟಗಳು : 8+184

ಬೆಲೆ : ರೂ. 100/-

ಮುದ್ರಕರು : ಇಳಾ ಮುದ್ರಣ ಬೆಂಗಳೂರು











ಕಲಿಕೆಗೂ ಬೇಕು ವೈಜ್ಞಾನಿಕ ಮನೋಭಾವ

ದಿನಾಂಕ  16-10-2019 ರ ಪ್ರಜಾವಾಣಿಯ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ. 


ಕಲಿಕೆಗೂ ಬೇಕು ವೈಜ್ಞಾನಿಕ ಮನೋಭಾವ



ಶಾಲಾ ಶಿಕ್ಷಣದಲ್ಲಿ ಪ್ರಶ್ನಿಸುವಿಕೆ ಮಹತ್ತರವಾದ ಕಲಿಕಾ ವಿಧಾನ. ಇದು ಮಕ್ಕಳಲ್ಲಿ ಕುತೂಹಲಕ್ಕೆ ಮೂಡಿಸಿ, ಮನದ ಮೂಲೆಯಲ್ಲಿದ್ದ ಸಂದೇಹಕ್ಕೆ ಉತ್ತರ ಕಂಡುಕೊಳ್ಳುವ ಮೂಲಕ ಹೊಸತನಕ್ಕೆ ಪ್ರೇರೇಪಿಸುತ್ತದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಮೂಲಕ ಬಾಲವಿಜ್ಞಾನಿಗಳನ್ನು ಸೃಷ್ಟಿಸುತ್ತದೆ. ಅದಕ್ಕೆ ಶಾಲಾ ಶಿಕ್ಷಣವು ಸೂಕ್ತ ವೇದಿಕೆ ನಿರ್ಮಿಸಿಕೊಡುತ್ತದೆ. ಈ ವೇದಿಕೆಯನ್ನು ಮಕ್ಕಳು ಉತ್ಕೃಷ್ಟವಾಗಿ ಬಳಸಿಕೊಳ್ಳಲು ಪಾಲಕರ ಕಾಳಜಿ ಮತ್ತು ಸಹಕಾರ ಅಗತ್ಯ. 

ಬಾಲವಿಜ್ಞಾನಿಗೆ ಭೂತಕಾಟ ಬೇಕೇ?

ವಿಜ್ಞಾನಿಗಳು ಸಾಮಾನ್ಯವಾಗಿ ಯಾವುದನ್ನೂ ಪರಿಶೀಲಿಸದೇ ನಂಬುವುದಿಲ್ಲ. ಯಾರೋ ಹೇಳಿದ ಹೇಳಿಕೆಯನ್ನಾಗಲೀ, ಬೇರೆ ಪುಸ್ತಕದ ಬದನೆಕಾಯಿಯನ್ನಾಗಲೀ, ಬೇರೆಯವರು ಕಂಡ ದೃಶ್ಯದ ಹೇಳಿಕೆಯನ್ನಾಗಲೀ ನಂಬುವುದಿಲ್ಲ. ಅಂತೆಯೇ ಮಕ್ಕಳೂ ಕೂಡಾ ಬೇರೆಯವರ ಹೇಳಿಕೆಗಳನ್ನು ನಂಬುವುದಿಲ್ಲ. ವಿಜ್ಞಾನಿಗಳು ಪ್ರತಿಯೊಂದನ್ನೂ ಪ್ರಯೋಗ ಮಾಡಿ ನಂಬುವAತೆ ಮಕ್ಕಳು ಸಹ ತಾವೇ ಸ್ವತಃ ಪ್ರಯೋಗ ಮಾಡಿ ನಂಬುಗೆಯನ್ನು ಉಳಿಸಿಕೊಳ್ಳುತ್ತಾರೆ. ಪ್ರತಿಯೊಂದು ಬದಲಾವಣೆಯನ್ನು ಪ್ರಶ್ನಿಸುವ, ಅದಕ್ಕೆ ಕಾರಣವನ್ನು ಕೇಳಿ ತಿಳಿಯುವ, ಕಣ್ಣಾರೆ ಸತ್ಯವನ್ನೂ ಸಹ ಪ್ರಯೋಗದ ಮೂಲಕ ಒರೆಗೆ ಹಚ್ಚುವ ಮೂಲಕ ಸತ್ಯವನ್ನು ಖಚಿತಪಡಿಸಿಕೊಳ್ಳುವ ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಸಹಜವಾಗಿ ಬೆಳೆದಿರುತ್ತದೆ. ಆದರೆ ಮಗುವಿನ ಈ ಸಹಜತೆಗೆ ದೊಡ್ಡವರಾದ ನಾವು ಕೃತಕತೆಯನ್ನು ಸೇರಿಸಿ ಮಗುವಿನ ವೈಜ್ಞಾನಿಕತೆಯನ್ನು ಕತ್ತರಿಸಿ ಹಾಕುತ್ತೇವೆ. 

ಮಗುವಿನ ಪ್ರಶ್ನೆಗೆ ಉತ್ತರಿಸುವ ಬದಲು ಪ್ರಶ್ನೆ ಕೇಳದಂತೆ ಬಾಯಿಗೆ ಬೀಗ ಹಾಕುತ್ತೇವೆ. ಮನೆ ಮತ್ತು ಮನಸ್ಸಿನಲ್ಲಿನ ಆಚರಣೆ, ನಂಬಿಕೆ ಇತ್ಯಾದಿಗಳನ್ನು ಮಕ್ಕಳ  ಮೇಲೆ ಬಲವಂತವಾಗಿ ಹೇರುತ್ತೇವೆ. ದೆವ್ವ, ಭೂತ, ಗೊಗ್ಗ, ಕತ್ತಲು, ಕೆಟ್ಟಕಣ್ಣು, ಗ್ರಹಣ, ಸ್ಮಶಾನ ಇತ್ಯಾದಿಗಳನ್ನು ಮಗುವಿನ ಮನಸ್ಸಿನಲ್ಲಿ ತುಂಬಿಬಿಡುತ್ತೇವೆ. ಇದರಿಂದ ಮಗುವಿನ ಮನಸ್ಸು ಗೊಂದಲಗಳ ಗೂಡಾಗುತ್ತದೆ. ಪ್ರಗತಿಪರ ಚಿಂತನೆಗಳತ್ತ ಸಾಗಬೇಕಾಗಿದ್ದ ಮಗು ನಕರಾತ್ಮಕ ಅಂಶಗಳತ್ತ ವಾಲುತ್ತದೆ. 

ಮಕ್ಕಳನ್ನು ಬಾಲವಿಜ್ಞಾನಿಗಳನ್ನಾಗಿ ಮಾಡಬೇಕಾದರೆ ಮೊದಲು ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಭಾರತದ ನಾಗರಿಕರಾದ ನಾವೆಲ್ಲಾ ವೈಜ್ಞಾನಿಕ ಮನೋಭಾವ ಹೊಂದುವ ಜೊತೆಗೆ ಮಕ್ಕಳಲ್ಲೂ ಅದನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ. ಕೇವಲ ಸಂವಿಧಾನದಲ್ಲಿ ಇದನ್ನು ಹೇಳಿದೆ ಎಂದು ಅನುಸರಿಸದೇ ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿಯಾದರೂ ಅನುಸರಿಸುವ ಮತ್ತು ಮಕ್ಕಳಲ್ಲಿ ಬೆಳೆಸುವ ಪ್ರಯತ್ನ ನಮ್ಮದಾಗಬೇಕು. ವೈಜ್ಞಾನಿಕ ಮನೋಭಾವ ಎಂದರೆ,,,, : ಸತ್ಯವನ್ನು ಕಂಡುಕೊಳ್ಳುವ ಮಾರ್ಗದ ಅನ್ವೇಷಣೆಯಲ್ಲಿನ ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ತೀರ್ಮಾನ ಕೈಗೊಳ್ಳುವುದು, ಪ್ರಯೋಗಗಳ ಮೂಲಕ ಸತ್ಯವನ್ನು ಸಾಬೀತು ಮಾಡುವುದು ಈ ಎಲ್ಲಾ ಹಂತಗಳು ವಿಜ್ಞಾನ ವಿಧಾನ ಅಥವಾ ವೈಚಾರಿಕ ವಿಧಾನದ ಹಂತಗಳಾಗಿವೆ. ಪ್ರತಿಯೊಂದು ಸಮಸ್ಯೆಯನ್ನು ಇಂತಹ ವೈಜ್ಞಾನಿಕ ವಿಧಾನದ ಮೂಲಕ ಪರಿಹರಿಸಿಕೊಳ್ಳುವುದೇ ವೈಜ್ಞಾನಿಕ ಮನೋಭಾವವಾಗಿದೆ. ಅಂದರೆ ಪ್ರತಿ ಸಮಸ್ಯೆಯನ್ನು ಅವಲೋಕನ, ಅಂದಾಜು, ಪರಿಶೀಲನೆ, ಪ್ರಯೋಗ, ಮರುಪ್ರಯೋಗ, ತೀರ್ಮಾನದ ಮೂಲಕ ಪರಿಹಾರ ಕಂಡುಕೊಳ್ಳುವ ಮನೋಭಾವವೇ ವೈಜ್ಞಾನಿಕ ಮನೋಭಾವ ಎನ್ನಬಹುದು.

ವೈಜ್ಞಾನಿಕ ಮನೋಭಾವದಿಂದ ಮಕ್ಕಳಲ್ಲಿ ಆಗುವ ಲಾಭಗಳು:

“ವೈಜ್ಞಾನಿಕ ಮನೋವೃತ್ತಿ ತೀರ್ಮಾನದ, ವಿವೇಕದ ಪರಿಪಕ್ವತೆಯನ್ನು ಪೋಷಿಸುತ್ತದೆ” ಎಂಬ ಭಾರತದ ಪ್ರಸಿದ್ಧ ವಿಜ್ಞಾನಿ, ಶಿಕ್ಷಣತಜ್ಞ ಪ್ರೋ|| ಯಶಪಾಲ್‌ರವರ ಹೇಳಿಕೆ ವೈಜ್ಞಾನಿಕ ಮನೋಭಾವದ ಪ್ರಯೋನಗಳನ್ನು ತಿಳಿಸುತ್ತದೆ. ವೈಜ್ಞಾನಿಕ ದೃಷ್ಟಿಕೋನದಿಂದ ಮಕ್ಕಳಲ್ಲಿ ‘ತೀರ್ಮಾನದ ಪರಿಪಕ್ವತೆ’ಯನ್ನು ಹೆಚ್ಚಿಸುವುದಾದರೆ ಅವರು ತಮ್ಮ ಬದುಕಿನ ಸಮಸ್ಯೆಗಳಿಗೆ ತಾವೇ ಪರಿಹಾರಗಳನ್ನು ಹುಡುಕಿಕೊಳ್ಳುತ್ತಾರೆ. ವೈಜ್ಞಾನಿಕ ಮನೋಭಾವದ ಇನ್ನಷ್ಟು ಲಾಭಗಳು ಕೆಳಗಿನಂತಿವೆ.

ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

ಪ್ರಶ್ನೆ ಕೇಳುವ ಸ್ವಭಾವ ಮತ್ತೆ ಮತ್ತೆ ಜೀವಂತವಾಗುತ್ತದೆ.

ಎಲ್ಲವನ್ನೂ ಪರೀಕ್ಷಿಸಿ, ಪರಿಶೀಲಿಸಿ, ಮಾಡಿ ನೋಡಿಯೇ ನಂಬುವುದು ಅಭ್ಯಾಸವಾಗುತ್ತದೆ.

ಕೇಳಿದ್ದನ್ನು, ನೋಡಿದ್ದನ್ನು, ಓದಿದ್ದನ್ನು ಕುರಿತು ಪ್ರಶ್ನಿಸುವ, ಪುರಾವೆ ಹುಡುಕುವ/ಕೇಳುವ ಮನೋಭಾವ ರೂಢಿಯಾಗುತ್ತದೆ. 

ರಮ್ಯತೆ, ಪುರಾಣ-ಪ್ರತೀತಿ, ಆಧ್ಯಾತ್ಮ ಇವುಗಳಿಗೂ ಹಾಗೂ ವೈಜ್ಞಾನಿಕ ಸತ್ಯಕ್ಕೂ ಇರುವ ವ್ಯತ್ಯಾಸದ ಸ್ಪಷ್ಟತೆ ಉಂಟಾಗುತ್ತದೆ. 

ಬದುಕಿನಲ್ಲಿ ಎಲ್ಲ ರೀತಿಯಲ್ಲೂ ಮುಂದುವರಿಯಲು ಇದು ಅವರಿಗೆ ಸಹಾಯಕವಾಗುತ್ತದೆ.

ಮಕ್ಕಳಲ್ಲಿ ಭಯ, ಆತಂಕ, ಕುರುಡು ನಂಬಿಕೆಗಳು ದೂರವಾಗುತ್ತವೆ.

ಬೇರೆಯವರಿಂದ ಬೇಗನೇ ವಂಚನೆಗೆ ಒಳಗಾಗುವುದಿಲ್ಲ.

ಶೈಕ್ಷಣಿಕ ಸಾಧನೆ ಉತ್ತುಂಗಕ್ಕೇರುತ್ತದೆ.

ದೈಹಿಕ, ಮಾನಸಿಕ, ಭಾವನಾತ್ಮಕ, ವೈಚಾರಿಕ ಹೀಗೆ ಪರಿಪೂರ್ಣ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ.

ಮಾನವೀಯತೆ, ಅನ್ವೇಷಣೆ ಮತ್ತು ಸುಧಾರಣಾ ಪ್ರವೃತ್ತಿ ಬೆಳೆಯಲು ಸಹಕಾರಿ. 

ಕಲಿಕೆ ಹಾಗೂ ವೈಜ್ಞಾನಿಕ ಮನೋಭಾವಕ್ಕೂ ಇರುವ ಸಂಬಂಧ

ಕಲಿಕೆ ಹಾಗೂ ವೈಜ್ಞಾನಿಕ ಮನೋಭಾವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿಯೊಂದು ಕಲಿಕೆಯೂ ವೈಜ್ಞಾನಿಕವಾಗಿ ಸಾಬೀತಾದರೆ ಮಾತ್ರ ಅದು ಶಾಶ್ವತವಾಗಲು ಸಾಧ್ಯ. ಕಲಿಕೆಯ ಪ್ರತಿಯೊಂದು ವಿಧಾನಗಳು ವೈಜ್ಞಾನಿಕ ತಂತ್ರಗಳನ್ನು ಆಧರಿಸಿ ರೂಪಗೊಂಡಿರುತ್ತವೆ. ಯಾವುದೇ ಒಂದು ವಿಧಾನ ಜಾರಿಗೆ ಬರುವ ಮೊದಲು ಅನೇಕ ಹಂತಗಳ ಪರೀಕ್ಷೆಗೊಳಗಾಗಿ ಜಾರಿಗೊಂಡಿರುವುದನ್ನು ಶಿಕ್ಷಣದ ಇತಿಹಾಸದಲ್ಲಿ ಗಮನಿಸಬಹುದು. ಇಂದಿನ ಶಿಕ್ಷಣವು ಶಿಶು ಕೇಂದ್ರಿತವಾಗಿದೆ. ಮಕ್ಕಳು ಮುಕ್ತವಾಗಿ ಭಾಗವಹಿಸುವ ಮೂಲಕ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತಮಗೆ ಅರ್ಥವಾಗದೇ ಇರುವುದನ್ನು ಮುಕ್ತವಾಗಿ ಕೇಳುವ, ಸಂವಾದ ಮಾಡುವ ಮೂಲಕ ಸ್ವತಂತ್ರವಾಗಿ ಕಲಿಯುತ್ತಾರೆ. ತಮಗೆ ಗೊತ್ತಿರುವುದನ್ನು ಯಾವುದೇ ಭಯವಿಲ್ಲದೇ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಇದಕ್ಕೆ ಮೌಲ್ಯಮಾಪನ ಪ್ರಕ್ರಿಯೆಯೂ ಪೂರಕವಾಗಿದೆ. 

ದಾಸ್ಯದ ಬದಲಿಗೆ ಜವಾಬ್ದಾರಿಯನ್ನು ಕಲಿಸುವ, ಅನುಕರಣೆಯ ಬದಲಿಗೆ ನಾಯಕತ್ವದ ಕೌಶಲ್ಯ ಬೆಳೆಸುವ, ಏಕಾಂಗಿಯಾಗುವ ಬದಲು ಸಮಾಜಮುಖಿಯನ್ನಾಗಿಸುವ ಅನೇಕ ಶಿಶುಕೇಂದ್ರಿತ ಚಟುವಟಿಕೆಗಳು ವೈಜ್ಞಾನಿಕ ಮನೋಭಾವದ ಪ್ರತೀಕಗಳಾಗಿವೆ. ಕೇವಲ ವಿಜ್ಞಾನ, ಗಣಿತಗಳಲ್ಲದೇ ಸಮಾಜವಿಜ್ಞಾನ, ಭಾಷೆಗಳು, ಕಲೆ, ಆಟೋಟಗಳಲ್ಲಿಯೂ ಸಹ ಮಕ್ಕಳಲ್ಲಿ ತರ್ಕ, ಕಾರ್ಯಕಾರಣ ಸಂಬAಧ, ವೈಚಾರಿಕತೆಗಳನ್ನು ಬೆಳೆಸಲಾಗುತ್ತದೆ. ಪಠ್ಯದಾಚೆಗಿನ ಕಲಿಕೆಯನ್ನು ಪಠ್ಯಕ್ಕೆ ಪೂರಕವಾಗಿಸುವ ಪ್ರಾಜೆಕ್ಟ್ ಆಧಾರಿತ ಕಲಿಕೆ ವೈಜ್ಞಾನಿಕ ವಿಧಾನದ ಹಾದಿಯಲ್ಲಿಯೇ ಸಾಗುತ್ತದೆ. ಇವೆಲ್ಲವೂ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಗಳಾಗಿವೆ. 

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮಾರ್ಗಗಳು

ಜ್ಞಾನದ ಆರಂಭ ‘ಏಕೆ’ ಎಂಬ ಪ್ರಶ್ನೆಯಿಂದ. ಆದ್ದರಿಂದ ಮಕ್ಕಳು ಪ್ರಶ್ನೆ ಕೇಳಲು ಅವಕಾಶ ನೀಡಿ. ಪ್ರಶ್ನೆಗೆ ಸಮಂಜಸವಾಗಿ ಉತ್ತರಿಸುವ ಪ್ರಯತ್ನ ಮಾಡಿ. ಪ್ರಶ್ನೆಗಳನ್ನು ಕೊಲ್ಲಬೇಡಿ.

ಮಕ್ಕಳ ನೈಸರ್ಗಿಕ ಹಕ್ಕನ್ನು ಕಸಿದುಕೊಳ್ಳದೇ ಮಕ್ಕಳನ್ನು ಮಕ್ಕಳ ಹಾಗೆ ಬೆಳೆಸಬೇಕು. 

ಮೂಢ ಆಚರಣೆಗಳನ್ನು ಮಕ್ಕಳ ಮೇಲೆ ಹೇರಬಾರದು.

ಜಾತಿ ಮತಗಳ ಕುರುಹುಗಳು/ಉಡುಪುಗಳನ್ನು ಒತ್ತಾಯವಾಗಿ ಹೇರುವುದು ಬೇಡ.

ಸಮಾಜದಲ್ಲಿ ಮುಕ್ತವಾಗಿ ಎಲ್ಲಾ ಮಕ್ಕಳೊಂದಿಗೆ ಮುಜುಗರವಿಲ್ಲದೆ ಬೆರೆಯುವ ಅವಕಾಶ ನೀಡಬೇಕು.

ಶಿಸ್ತಿನ ಕಠಿಣ ಅಭ್ಯಾಸ ಬೇಡ. ಇದು ಕಲಿಕಾ ಕೌಶಲ್ಯವನ್ನು ಕುಂಟಿತಗೊಳಿಸುತ್ತದೆ.

ಕAಠಪಾಟದ ಬದಲಿಗೆ ಬುದ್ಧಿಮತ್ತೆಯನ್ನು ಮತ್ತೆ ಮತ್ತೆ ಒರೆಗೆ ಹಚ್ಚುವ ಅವಕಾಶ ನೀಡುವ ಮೂಲಕ ಬಾಲವಿಜ್ಞಾನಿಗೆ ಸಹಾಯ ನೀಡಿ.

ಮಕ್ಕಳಲ್ಲಿ ತಾರ್ಕಿಕತೆಯನ್ನು ಬೆಳೆಸುವ ಸನ್ನಿವೇಶಗಳನ್ನು ಸೃಷ್ಟಿಸಿ.

ವಿಜ್ಞಾನ ಕಾರ್ಯಗಾರಗಳು, ಗೋಷ್ಠಿಗಳು, ಚರ್ಚೆ, ಸಂವಾದಗಳಲ್ಲಿ ಮಗು ಭಾಗವಹಿಸುವಂತೆ ಪ್ರೇರೇಪಿಸಿ.

ಜೀವನ ಮೌಲ್ಯಗಳಾದ ಸ್ವಾಯತ್ತತೆ, ಸಮಗ್ರತೆ, ಅನ್ವೇಷಣಾ ಮನೋಭಾವ, ವಿನೀತತೆ ಮತ್ತು ನಿರ್ಭಯಗಳ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವುದು ಶ್ರಮದಾಯಕವಾದರೂ ಒಂದು ನಿಶ್ಚಿತ ವಿಧಾನವಾಗಿದೆ.  

ನಾನು ನನಗಾಗಿ ಅಲ್ಲ, ನನ್ನ ಸಂಪತ್ತು ನನಗಾಗಿ ಅಲ್ಲ. ಅದು ಎಲ್ಲರ ಹಿತಕ್ಕಾಗಿ ಬಳಕೆಯಾಗಬೇಕು ಎನ್ನುವ ವೈಶಾಲ್ಯತೆ ಬೆಳೆಸಬೇಕು.

ಪ್ರಜಾಪ್ರಭುತ್ವ/ಸಾಂವಿಧಾನಿಕ ಮೌಲ್ಯಗಳನ್ನು ಮನೆಯಿಂದಲೇ ಕಲಿಸಬೇಕು.

ನೈಸರ್ಗಿಕ ವಿದ್ಯಮಾನಗಳಾದ ಗಾಳಿ, ಮಳೆ, ಗುಡುಗು, ಮಿಂಚು, ಗ್ರಹಣಗಳು, ಚಂಡಮಾರುತಗಳು ಇತ್ಯಾದಿಗಳ ಬಗ್ಗೆ ಭಯ ಮೂಡಿಸದೇ ಭೌತಶಾಸ್ತಿçÃಯ ಹಿನ್ನಲೆಯಲ್ಲಿ ವಿವರಿಸಿ. 

ಲಸಿಕೆ ಹಾಕಿಸೋಣ : ಭಾರತ ಸಂವಿಧಾನದ ಅನುಚ್ಛೇದ 51 ಎ (ಎಚ್) ಅನ್ವಯ, “ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ ಮತ್ತು, ಅನ್ವೇಷಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಮತ್ತು ಉತ್ತೇಜಿಸುವುದು” ನಮ್ಮ ಮೂಲಭೂತವಾದ ಮತ್ತು ನಾಗರಿಕ ಸಮ್ಮತವಾದ ಕರ್ತವ್ಯವಾಗಿದೆ.  ಮಗು ತನ್ನ ಬದುಕನ್ನೇ ಪರಿವರ್ತಿಸಿಕೊಳ್ಳುವ ಶಕ್ತಿಯನ್ನು ವೈಜ್ಞಾನಿಕ ಮನೋವೃತ್ತಿ ಕೊಡುತ್ತದೆ. ಮಾನವನಿಗೆ ಸ್ವತಂತ್ರವಾದ ಚೈತನ್ಯವನ್ನು ಶಾಶ್ವತವಾಗಿ, ತಾಜಾ ಆಗಿ, ಹುರುಪಿನ ಮತ್ತು ಪರಿಣಾಮಕಾರಿಯಾದ ಆರೋಗ್ಯದ ಸ್ಥಿತಿಯಲ್ಲಿರುವಂತೆ ಸಂರಕ್ಷಿಸಬೇಕು ಎನ್ನುವ ಬಯಕೆ ನಮ್ಮಲ್ಲಿದ್ದರೆ, ನಮ್ಮ ಮಗುವಿಗೆ ವೈಜ್ಞಾನಿಕ ಮನೋವೃತ್ತಿ ಲಸಿಕೆಯನ್ನು ಹಾಕಿಸುವುದು ಕಡ್ಡಾಯವಾಗಿದೆ. ವೈಜ್ಞಾನಿಕ ಮನೋವೃತ್ತಿ ಎನ್ನುವ ಈ ರೋಗನಿರೋಧಕ ಚುಚ್ಚುಮದ್ದನ್ನು ಒಮ್ಮೆ ನಮ್ಮ ಮಗುವಿನ ಬದುಕಿನಲ್ಲಿ ಹಾಕಿಸಿದರೆ, ಮಗು ಶಕ್ತಿಶಾಲಿಯಾದ ಚೇತನವಾಗುತ್ತದೆ. ಈ ವೈಜ್ಞಾನಿಕ ಮನೋವೃತ್ತಿಯು ನಮ್ಮ ದೇಶದ ಮಕ್ಕಳನ್ನು ಆರೋಗ್ಯಕರ, ಸಮರ್ಥ, ನಾಗರಿಕಪ್ರಭುತ್ವವನ್ನು ಕಟ್ಟುವತ್ತ ಕರೆದೊಯ್ಯುತ್ತದೆ. ಬನ್ನಿ! ಎಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸುವತ್ತ ಮತ್ತು ಬೆಳೆಸಿಕೊಳ್ಳುವತ್ತ ಹೆಜ್ಜೆಹಾಕೋಣ.  






ಸಾಹಿತ್ಯದ ರುಚಿ ಉಣಿಸುವ ನಲ್ಲಿಕಾಯಿ

 ದಿನಾಂಕ 26-09-2019ರ ಪ್ರಜಾವಾಣಿ ಯಲ್ಲಿ ಪ್ರಕಟವಾದ ನನ್ನ ಬರಹ. 


ಸಾಹಿತ್ಯದ ರುಚಿ ಉಣಿಸುವ  ನಲ್ಲಿಕಾಯಿ 



ನಲ್ಲಿಕಾಯಿ ಎಂದೊಡನೆ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಅದರ ಹುಳಿ, ವಗರು ರುಚಿ ಎಲ್ಲರಿಗೂ ಇಷ್ಟ. ಅದರ ಜೊತೆ ಒಂಚೂರು ಉಪ್ಪು, ಖಾರ, ಸಿಹಿ ಸೇರಿಸಿದರಂತೂ ಅದರ ರುಚಿಗೆ ಮರುಳಾಗದವರೇ ಇಲ್ಲ. ಈಗೇಕೆ ಈ ನಲ್ಲಿಕಾಯಿ ನೆನೆಪು ಅಂತೀರಾ. ಈಗ ನಾನಿಲ್ಲಿ ಹೇಳ ಹೊರಟಿರುವುದು ತಿನ್ನುವ ನಲ್ಲಿಕಾಯಿ ಬಗ್ಗೆ ಅಲ್ಲ. ಕೇಳುವ ನಲ್ಲಿಕಾಯಿ. ಕೇಳುವ ನಲ್ಲಿಕಾಯಿ ಎಂದ ಕೂಡಲೇ ಆಶ್ಚರ್ಯವಾಗುವುದು ಸಹಜ.  

ನಲ್ಲಿಕಾಯಿ ತಿನ್ಬೇಡಿ, ಕೇಳಿ : ‘ನಲ್ಲಿಕಾಯಿ’ ಕನ್ನಡ ಸಾಹಿತ್ಯಕ್ಕೆ ಸಂಬAಧಿಸಿದ ಪೋಡ್‌ಕಾಸ್ಟ್ಗಳನ್ನು ಒಳಗೊಂಡ ಒಂದು ವೆಬ್‌ಸೈಟ್. ಇಲ್ಲಿ ವೈವಿಧ್ಯಮಯ ವಿಚಾರಗಳು ಆಡಿಯೋ ರೂಪದಲ್ಲಿವೆ. ಇಲ್ಲಿನ ವಿಚಾರಗಳನ್ನು ಓದಿ ತಿಳಿಯುವಂತಿಲ್ಲ. ಬದಲಾಗಿ ಕೇಳಿ ತಿಳಿಯಲು ಅನುಕೂಲವಾಗುವಂತೆ ವೆಬ್‌ಸೈಟ್ ಡಿಸೈನ್ ಮಾಡಲಾಗಿದೆ. ನಲ್ಲಿಕಾಯಿ ಸಂಪೂರ್ಣವಾಗಿ ಕನ್ನಡ ಸಾಹಿತ್ಯಕ್ಕೆ ಮೀಸಲಾದ ವೆಬ್‌ಸೈಟ್ ಆಗಿದೆ. ನಲ್ಲಿಕಾಯಿಗೆ ಉಪ್ಪು, ಖಾರ, ಸಿಹಿ ಸೇರಿದರೆ ಹೇಗೆ ರುಚಿ ಬದಲಾಗುವುದೋ ಹಾಗೆ ಸಾಹಿತ್ಯಕ್ಕೆ ಕಥೆ, ಕವನ, ಕಾದಂಬರಿ, ನಾಟಕ, ವಿವಿಧ ಪ್ರಕಾರಗಳ ಓದು ಸಾಹಿತ್ಯಾಭಿಮಾನಿಗಳಿಗೆ ರುಚಿಸುತ್ತದೆ. ಇದನ್ನು ಅರಿತ ನಲ್ಲಿಕಾಯಿ ಜನಕ ಇಲ್ಲಿ ಕಥೆ, ಕವನ, ಪುಸ್ತಕ ವಿಮರ್ಶೆ, ವಿಚಾರಗಳು ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳನ್ನು ಆಡಿಯೋ ರೂಪದಲ್ಲಿ ಕೇಳಿಸುವ ಪ್ರಯತ್ನ ಮಾಡಿರುವುದು ಪ್ರಶಂಸಾರ್ಹ. 

ಜನಕನ ಮಾತು : ಈ ವೆಬ್‌ಸೈಟ್‌ನ ರೂವಾರಿ ಶರತ್. ಇಂದಿನ ಧಾವಂತ ಜೀವನದಲ್ಲಿ ಪುಸ್ತಕ, ಪತ್ರಿಕೆ ಓದಿ ವಿಚಾರಗಳನ್ನು ತಿಳಿಯಲು ಯಾರಿಗೂ ಪುರುಸೊತ್ತಿಲ್ಲ. ವಿಚಾರಗಳನ್ನು ತಿಳಿಯುವ ಹಪಹಪಿ ಇರುವ ಮನಸ್ಸುಗಳಿಗೆ ಶಬ್ದಗಳ ಮೂಲಕ ವಿಚಾರಗಳನ್ನು ರವಾನಿಸುವ ಉದ್ದೇಶದಿಂದ ಈ ಪೋಡ್‌ಕಾಸ್ಟ್ ವೆಬ್‌ಸೈಟ್ ರೂಪಿಸಲಾಗಿದೆ ಎನ್ನುತ್ತಾರೆ ಶರತ್. ಬೇರೆ ಬೇರೆ ಭಾಷೆಗಳ ಪೋಡ್‌ಕಾಸ್ಟ್ ವೆಬ್‌ಸೈಟ್‌ಗಳು ಸಾಕಷ್ಟು ಇರುವಾಗ ಕನ್ನಡದಲ್ಲಿ ಇದರ ಕೊರತೆ ಇರುವುದನ್ನು ಗಮನಿಸಿದ ಶರತ್ ಕನ್ನಡದಲ್ಲಿಯೇ ನಲ್ಲಿಕಾಯಿ ಪೋಡ್‌ಕಾಸ್ಟ್ ರೂಪಿಸಲು ಮತ್ತೊಂದು ಕಾರಣ.

“ಬಾಲ್ಯದಿಂದಲೂ ತಂದೆ ತಾಯಿಯವರಿಂದ, ಶಾಲೆಯ ಗುರುಗಳಿಂದ ಕನ್ನಡದ ಪದ್ಯ, ಕತೆ, ಕವಿತೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಇವುಗಳು ಪದೇ ಪದೇ ನೆನಪಾಗಿ ಕಿವಿಯಲ್ಲಿ ಗುಂಯ್ಯಗುಡುತ್ತಿದ್ದವು. ಆದರೆ ಈಗ ಇಂತಹ ಕತೆ. ಹಾಡು ಹೇಳುವ ತಂದೆ ತಾಯಿಗಳಿಲ್ಲ, ಪದ್ಯಗಳನ್ನು ರಾಗವಾಗಿ ಹಾಡುವ ಗುರುಗಳಿಲ್ಲ” ಎಂದು ಮನನೊಂದ ಶರತ್ ತನ್ನ ಬಾಲ್ಯದ ದಿನಗಳನ್ನು ನೆನೆಯುತ್ತಾರೆ. ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದ ರಸಾನುಭವವನ್ನು ಪೋಡ್‌ಕಾಸ್ಟ್ ಮೂಲಕ ಕೇಳಿಸುವ ಆಸೆ ಶರತ್ ಅವರದ್ದು. ಮೂಲತಃ ಕಾಫಿನಾಡು ಚಿಕ್ಕಮಗಳೂರಿನ ಕೊಪ್ಪದವರಾದ ಶರತ್ ಈಗ ಬೆಂಗಳೂರಿನ ವೆಬ್‌ಜೇಡ ಎಂಬ ಸಾಫ್ಟ್ವೇರ್ ಕಂಪನಿಯಲ್ಲಿ ಸೀನಿಯರ್ ವೆಬ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಓದಿದರೂ ಕನ್ನಡ ಉಳಿಸುವ, ಬೆಳೆಸುವ ಕಾಯಕದಲ್ಲಿ ಸ್ವಯಂ ಸೇವಕನಂತೆ ತೊಡಗಿಸಿಕೊಂಡ ಶರತ್‌ನ ಕಾರ್ಯ ಶ್ಲಾಘನೀಯ. ಕನ್ನಡದಲ್ಲಿ ಪೋಡ್‌ಕಾಸ್ಟ್ಗಳ ಸಂಖ್ಯೆ ತೀರಾ ವಿರಳ. ಅಂತಹ ವಿರಳಾತಿವಿರಳದಲ್ಲಿ ನಲ್ಲಿಕಾಯಿ ವಿಭಿನ್ನವಾದದ್ದು.

ನಿಮ್ಮ ರುಚಿಯೂ ಇರಲಿ : ಸೆಪ್ಟಂಬರ್ 2015ರಲ್ಲಿ ಪ್ರಾರಂಭವಾದ ನಲ್ಲಿಕಾಯಿಯಲ್ಲಿ ಅನೇಕ ಆಡಿಯೋ ವಿಚಾರಗಳಿವೆ. ಕೇಳುಗರ ಶ್ರವಣ ಮತ್ತು ಮೆದುಳಿಗೆ ಆಪ್ಯಾಯಮಾನ ಅನುಭವ ನೀಡುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಆಡಿಯೋ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಬೆಳೆಸುವ ಉಳಿಸುವ ಮಹತ್ಕಾರ್ಯದಲ್ಲಿ ನಿಮ್ಮ ಪಾಲೂ ಇರಲಿ. ನಿಮ್ಮದೇ ಕತೆ, ಕವನ, ನೀವು ಓದಿದ ಪುಸ್ತಕ, ವಿಚಾರಗಳು, ದಿನಾಚರಣೆಗಳ ಮಹತ್ವ, ಇತ್ಯಾದಿಗಳನ್ನು ನಿಮ್ಮ ಮೊಬೈಲ್‌ನ ರೆಕಾರ್ಡರ್ ಮೂಲಕ ಧ್ವನಿಮುದ್ರಿಸಿ ಕಳಿಸಿದರೆ ಅದನ್ನು ನಲ್ಲಿಕಾಯಿಯಲ್ಲಿ ಪ್ರಕಟಿಸುತ್ತಾರೆ. ಆ ಮೂಲಕ ನೀವು ನಲ್ಲಿಕಾಯಿಗೆ ರುಚಿ ನೀಡಬಹುದು. ವಿವರಗಳಿಗೆ 8904475972 ಸಂಪರ್ಕಿಸಿ. ನಲ್ಲಿಕಾಯಿಯ ಸಾಹಿತ್ಯ ರುಚಿ ಸವಿಯಲು hಣಣಠಿs://ಟಿಚಿಟಟiಞಚಿಥಿi.ಛಿom/ ಗೆ ಭೇಟಿಕೊಡಿ.



ಪಿಥೋರಾ ; ರಾಥ್ವಾಗಳ ವರ್ಣವೈಭವ

 ದಿನಾಂಕ 15-09-2019ರ ಪ್ರಜಾವಾಣಿಯ  ಭಾನುವಾರದ ಪುರವಣಿ ಯಲ್ಲಿ ಪ್ರಕಟವಾದ ನನ್ನ ಬರಹ.



 ಪಿಥೋರಾ ; ರಾಥ್ವಾಗಳ  ವರ್ಣವೈಭವ



ಭಾರತದ ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನಿಸದರೆ ಅಲ್ಲಿ ಬಹು ಸುಂದರವಾದ ಚಿತ್ರಣ ಕಾಣಸಿಗುತ್ತದೆ. ಬಹುತೇಕವಾಗಿ ಈ ಚಿತ್ರಣವೆಲ್ಲವೂ ಆದಿವಾಸಿ ಅಥವಾ ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಅದಕ್ಕೆ ಅಲ್ಲಲ್ಲಿ ಕಾಣಸಿಗುವ ಉದಾಹರಣೆಗಳೇ ಸಾಕ್ಷಿಯಾಗುತ್ತವೆ. ಅಂತಹ ಒಂದು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗುವ ಬುಡಕ್ಕಟ್ಟು ಎಂದರೆ ಗುಜರಾತಿನ ರಾಥ್ವಾ ಸಮುದಾಯ. ಭಿಲ್ಲಾ ಬುಟಕಟ್ಟಿನ ಉಪಪಂಗಡವಾದ ರಾಥ್ವಾ ಸಂಸ್ಕೃತಿಯು ಐತಿಹಾಸಿಕ ಮತ್ತು ಪುರಾಣ ಹಿನ್ನಲೆಯ ವರ್ಣರಂಜಿತವಾದ ಹಬ್ಬಗಳು, ಆಚರಣೆಗಳು, ಸಂಗೀತ ಕೂಟಗಳು ಮತ್ತು ಚಿತ್ರಕಲೆಗಳನ್ನು ಒಳಗೊಂಡಿದೆ. ಅದರಲ್ಲಿ ಪಿಥೋರಾ ಎಂಬ ಹೆಸರಿನ ಚಿತ್ರಕಲೆಯು ಸಾಂಪ್ರದಾಯಿಕ ಮಹತ್ವ ಹೊಂದಿದೆ.

ಪಾರಂಪರಿಕ ಆಚರಣೆ

ಪಿಥೋರಾ ಚಿತ್ರಕಲೆಯು ರಾಥ್ವಾ ಜನಾಂಗದ ಪ್ರಮುಖ ಆಚರಣೆಯಾಗಿದೆ. ಇದು ಅವರ ಮುಖ್ಯ ಆರಾಧ್ಯ ದೈವವಾದ ಬಾಬಾ ಪಿಥೋರಾನಿಂದ ವರವನ್ನು ಪಡೆಯಲು ಮತ್ತು ತಮ್ಮ ಹರಕೆಗಳನ್ನು ಪೂರೈಸಲು ಮಾಡಿದ ಆಚರಣೆಯ ಭಾಗವಾಗಿದೆ. ಇದೊಂದು ಗ್ರಾಮೀಣ ಚಿತ್ರಕಲೆಯಾಗಿದ್ದು, ಪ್ರತಿಯೊಂದು ರಾಥ್ವಾಗಳ ಮನೆ ಗೋಡೆಯ ಮೇಲೆ ಈ ಕಲೆಯನ್ನು ಕಾಣಬಹುದು. ಇದು ರಾಥ್ವಾ ಜನಾಂಗದ ನೈಜತೆಗಳ ಆಚರಣೆಯಾಗಿದೆ. ಕಷ್ಟದ ಸಮಯದಲ್ಲಿ ಮನೆಯ ಮಾಲೀಕನು ಬಾಬಾ ಪಿಥೋರಾನ ಹೆಸರಿನಲ್ಲಿ ಹರಕೆ ಹೋರುತ್ತಾರೆ. ಹರಕೆ ಹೊತ್ತ ಎರಡರಿಂದ ಮೂರುವರ್ಷದೊಳಗೆ ಅದನ್ನು ತೀರಿಸುವ ಆಚರಣೆಯೇ ಪಿಥೊರಾ ಚಿತ್ರ ರಚನೆ. ಮನೆಯ ಮಾಲೀಕನನ್ನು ‘ಘರ್ಧಾನಿ’ ಎನ್ನಲಾಗುತ್ತದೆ. ಘರ್ಧಾನಿ ಹರಕೆ ಹೋರುತ್ತಾನೆ. ಅದನ್ನು ತೀರಿಸುವ ಸಮಯ ಬಂದಾಗ ಗ್ರಾಮದ ‘ಬದ್ವಾ’ ಹೆಸರಿನ ಪ್ರಧಾನ ಅರ್ಚಕರ ಬಳಿಗೆ ತೆರಳುತ್ತಾನೆ. ಅಲ್ಲಿ ಅವರ ಮಾರ್ಗದರ್ಶನ ಮೇರೆಗೆ ಪಿಥೋರಾ ಆಚರಣೆಯ ಕಾರ್ಯಯೋಜನೆಗೆ ಚಾಲನೆ ದೊರೆಯುತ್ತದೆ. ಬದ್ವಾ ಪೂರ್ವಜರಿಂದ ಸಾಂಪ್ರದಾಯಿಕ ಕೌಶಲ್ಯಗಳನ್ನು ಪಡೆದಿರುತಾನೆ. ಅದರ ಆಧಾರದ ಮೇಲೆ ಬಾಬಾ ಪಿಥೋರಾನಿಂದ ವರವನ್ನು ಪಡೆಯುವ ಸಲುವಾಗಿ ಪಿಥೋರಾ ಚಿತ್ರಿಸಲು ಮಾರ್ಗದರ್ಶನ ಮಾಡುತ್ತಾನೆ. ಬದ್ವಾ ಮತ್ತು ಘರ್ಧಾನಿಯ ಭೇಟಿಯ ನಂತರ ‘ಲಖರಾ’ ಎಂದು ಕರೆಯುವ ಪಿಥೋರಾ ಚಿತ್ರಿಸುವ ವ್ಯಕ್ತಿಯನ್ನು ಆಹ್ವಾನಿಸಿ ಆತನೊಂದಿಗೆ ಹರಕೆಯ ವಿವರಗಳನ್ನು ಚರ್ಚಿಸಲಾಗುತ್ತದೆ. ನಂತರ ಬದ್ವಾ, ಘರ್ಧಾನಿ ಹಾಗೂ ಲಖರಾ ಮೂರು ಜನ ಒಟ್ಟಾಗಿ ಪಿಥೋರಾ ಆಚರಣೆಯ ದಿನವನ್ನು ನಿರ್ಧಸುತ್ತಾರೆ. ಪಿಥೋರಾ ಚಿತ್ರ ರಚನೆಯ ನಂತರ ಹರಕೆ ಅಂತ್ಯಕಾಣುತ್ತದೆ. ಅಂತ್ಯಕ್ಕೆ ಹಳ್ಳಿಯ ಜನರೊಂದಿಗೆ ಭೋಜನ ಕೂಟ ನೆರವೇರುತ್ತದೆ. ಪಿಥೋರಾ ಚಿತ್ರರಚನೆಯ ಸಂಪನ್ನತೆಯಿAದ ತಮ್ಮ ಕಷ್ಟಗಳು ದೂರವಾಗುತ್ತವೆ ಹಾಗೂ ದೇವರು ಸಂತೃಪ್ತಿಯಿAದ ಹರಸುತ್ತಾನೆ ಎಂಬ ನಂಬಿಕೆ ರಾಥ್ವಾಗಳಲ್ಲಿ ಇದೆ.

ಪರಿಕಲ್ಪನಾತ್ಮಕ ರಚನೆ

ಪಿಥೋರಾ ಒಂದು ಆಕರ್ಷಕ ಸಾಂಪ್ರದಾಯಿಕ ಚಿತ್ರಕಲೆಯಾಗಿದೆ. ಬಾಬಾ ಪಿಥೋರಾ ಹಾಗೂ ದೇವಿ ಪಿಥೋರಿಯರ ವಿವಾಹವೇ ಪಿಥೋರಾ ವರ್ಣಚಿತ್ರದ ಪ್ರಮುಖ ಪರಿಕಲ್ಪನೆಯಾಗಿದೆ. ಬ್ರಹ್ಮಾಂಡವನ್ನು ಪ್ರತಿನಿಧಿಸುವ ಸೂರ್ಯ, ಚಂದ್ರ, ನಕ್ಷತ್ರ, ಪ್ರಾಣಿ, ಪಕ್ಷಿ, ಗಿಡಮರಗಳು ವರ್ಣಚಿತ್ರದಲ್ಲಿ ಸ್ಥಾನ ಪಡೆದಿವೆ. ಬಾಬಾ ಪಿಥೋರಾನ ಪ್ರಮುಖ ವಾಹನ ಕುದುರೆಯು ವಿಶೇಷ ಸ್ಥಾನ ಪಡೆದಿದೆ. ಜೊತೆಗೆ ಹಸು, ಮೇಕೆಗಳೂ ಸಹ ಪ್ರಾತಿನಿಧಿಕ ಪ್ರಾಣಿಗಳಾಗಿವೆ. ಪರಿಸರ ಹಾಗೂ ಪ್ರಾಣಿ ರಕ್ಷಣೆಯ ತಾತ್ವಿಕ ಹಿನ್ನಲೆಯಲ್ಲಿ ಪಿಥೋರಾ ಚಿತ್ರವು ರೂಪುತಾಳುತ್ತದೆ. 

ಮೊದಲು ಗೋಡೆಯ ಆಯ್ಕೆ ನಡೆಯುತ್ತದೆ. ಸಾಮಾನ್ಯವಾಗಿ ಮನೆಯ ಹಜಾರದ ಮೂರು ಗೊಡೆಗಳನ್ನು(ಪ್ರವೇಶ ಬಾಗಿಲಿಗೆ ಎದುರಾದ ಗೋಡೆ ಮತ್ತು ಅದರ ಅಕ್ಕಪಕ್ಕದ ಎರಡು ಗೋಡೆಗಳು) ಚಿತ್ರ ರಚನೆಗೆ ಆಯ್ಕೆ ಮಾಡಲಾಗುತ್ತದೆ. ಗೋಡೆಯನ್ನು ಸುಣ್ಣ, ಹಸುವಿನ ಸಗಣಿ ಮತ್ತು ಗಂಜಲದಿAದ ಸಮತಟ್ಟಾಗಿ ಮಾಡಿಕೊಳ್ಳಲಾಗುತ್ತದೆ. ಈ ಕಾರ್ಯವನ್ನು ಮನೆಯ ಅವಿವಾಹಿತ ಬಾಲಕಿ/ಯುವತಿಯರು ಮಾಡುತ್ತಾರೆ. ಅವರು ಹೀಗೆ ಮಾಡುವುದರಿಂದ ಬೇಗನೇ ವಿವಾಹವಾಗುತ್ತದೆ ಎಂಬ ನಂಬಿಕೆ ಅವರದ್ದು. ಹಿನ್ನಲೆಗೆ ಬಿಳಿ ಸುಣ್ಣವನ್ನು ಬಳಿಯಲಾಗುತ್ತದೆ. ಪಿಥೋರಾ ವರ್ಣಚಿತ್ರದ ಸಾಂಪ್ರದಾಯಿಕ ಗಾತ್ರ 11 x 8 ಅಡಿಗಳು ಆಗಿದೆ. ಚಿತ್ರರಚನೆಗೆ ಸಂಪೂರ್ಣವಾಗಿ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿರುವುದು ವಿಶೇಷ. ಸಸ್ಯದ ಎಲೆಗಳು, ಕಾಯಿಗಳು, ಬೇರುಗಳು, ಹೂಗಳಿಂದ ನೈಸರ್ಗಿಕ ಬಣ್ಣಗಳ ಪುಡಿ ತಯಾರಿಸಿಕೊಂಡಿರುತ್ತಾರೆ. ಹೀಗೆ ತಯಾರಿಸಿದ ಬಣ್ಣಗಳಿಗೆ ‘ಮಹುದಾ’ ಎಂಬ ಸ್ಥಳೀಯ ಮಧ್ಯವನ್ನು ಹಾಲಿನೊಂದಿಗೆ ಬೆರೆಸಿ ಪೇಂಟ್ ತಯಾರಿಸಿ ಬಳಸುತ್ತಾರೆ. ವಿವಿಧ ಬಣ್ಣಗಳನ್ನು ಒಟ್ಟಾಗಿ ಬೆರೆಸಿ ಆಕರ್ಷಕ ಬಣ್ಣಗಳನ್ನು ಸೃಜಿಸಿಕೊಳ್ಳುತ್ತಾರೆ. ಚಿತ್ರ ರಚನೆಯಲ್ಲಿ ಹಳದಿ, ಹಸಿರು, ನೀಲಿ, ಊದಾ, ಕಿತ್ತಳೆ, ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಬಳಸಲಾಗುತ್ತದೆ.

ನಿಗದಿತ ದಿನದಂದು ಬೆಳಿಗ್ಗೆ ಘರ್ಧಾನಿಯ ಮನೆಯವರೆಲ್ಲರೂ ವಾದ್ಯಗಳೊಂದಿಗೆ ಬದ್ವಾ ಹಾಗೂ ಲಖರಾ ಅವರ ಮನೆಗೆ ತೆರಳಿ ಅವರನ್ನು ಕರೆತರುತ್ತಾರೆ. ನಂತರ ಕುಟುಂಬದವರೆಲ್ಲರೂ ಪೂಜೆ ಸಲ್ಲಿಸಿದ ನಂತರ ಬದ್ವಾ ಬಾಬಾ ಪಿಥೋರಾನ ಸಾಧನೆಗಳನ್ನು ತಿಳಿಸುವ ಹಾಡನ್ನು ಹೇಳುತ್ತಾ ಹೋಗುತ್ತಾನೆ. ಲಖರಾ ಹಾಡಿಗೆ ತಕ್ಕಂತೆ ಚಿತ್ರ ರಚಿಸುತ್ತಾ ಹೋಗುತ್ತಾನೆ. ರಾಥ್ವಾಗಳ ಸಂಪ್ರದಾಯದ ಪ್ರಕಾರ ಚಿತ್ರರಚನೆಯ ಸಮಯದಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ. ಬುಡಕಟ್ಟು ಜನಾಂಗಗಳಲ್ಲಿ ಪುರುಷ ಪ್ರಧಾನ್ಯತೆ ಎದ್ದು ಕಾಣುವುದನ್ನು ಗಮನಿಸಬಹುದು. ಚಿತ್ರ ರಚನೆಯು ಸಂಜೆಯವರೆಗೂ ನಡೆಯುತ್ತದೆ. ರಚನೆ ಪೂರ್ಣಗೊಂಡ ನಂತರ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಬಾಬಾ ಪಿಥೋರಾನನ್ನು ಆಹ್ವಾನಿಸಿ ಆತನಿಗೆ ನೈವೇದ್ಯವಾಗಿ ಮಾಂಸಹಾರವನ್ನು ಸಲ್ಲಿಸಲಾಗುತ್ತದೆ. ರಾತ್ರಿ ವೇಳೆಗೆ ಇಡೀ ಗ್ರಾಮದ ಸಮುದಾಯವರೆಲ್ಲರಿಗೂ ಬೋಜನ ವ್ಯವಸ್ಥೆ ಇರುತ್ತದೆ. ಎಲ್ಲರೂ ಮಧ್ಯದ ಸಮಾರಾಧನೆಯ ನಂತರ ಮಾಂಸಾಹಾರವನ್ನು ಸವಿಯುತ್ತಾರೆ. 

ಪಿಥೋರಾದಲ್ಲಿ ಏನಿರುತ್ತದೆ?

ಪಿಥೋರಾ ವರ್ಣಚಿತ್ರವು ಪ್ರಮುಖವಾಗಿ ಸಮುದಾಯದ ಪುರಾಣಗಳನ್ನು ಪ್ರತಿನಿಧಿಸುತ್ತದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಮುಖ್ಯ ದೇವತೆಗಳೆಂದರೆ, ಬಾಬಾ ಗನೆಹ್(ಗಣೇಶ), ಬಾಬಾ ಇಂದ್(ಇAದ್ರ), ಬಾಬಾ ಪಿಥೋರಾ, ಪಿಥೋರಿ ರಾಣಿ, ರಾಣಿ ಕಾಜಲ್, ಬಾರ್ ಮಾಥಾ ಧನಿ ರಾಜಾಭೋಜ್ ಮತ್ತು ಕುದುರೆ. ಇವುಗಳ ಜೊತೆಗೆ ಅವರ ಕುಟುಂಬದ ಪೂರ್ವಜರು ಅಲ್ಲಿರುತ್ತಾರೆ. ದೈನಂದಿನ ಮಾನವ ಚಟುವಟಿಕೆಗಳು, ಪ್ರಾಣಿ-ಪಕ್ಷಿಗಳು, ಕೃಷಿ, ವ್ಯಾಪಾರ, ಸಮುದಾಯದ ಪ್ರಮುಖ ಸದಸ್ಯರು ಹೀಗೆ ಒಟ್ಟಾರೆ ರಾಥ್ವಾ ಜನಾಂಗದ ಪ್ರಮುಖ ವ್ಯಕ್ತಿಗಳೆಲ್ಲರನ್ನು ಈ ಚಿತ್ರಗಳಲ್ಲಿ ಕಾಣಬಹುದು.

ಪಿಥೋರಾ ಚಿತ್ರಗಳಲ್ಲಿ ಪ್ರಕೃತಿಗೆ ಪ್ರಥಮ ಆಧ್ಯತೆ ನೀಡಿರುವುದು ಅವರ ಪರಿಸರ ಪ್ರಜ್ಞೆಯನ್ನು ತೋರಿಸುತ್ತದೆ. ಭೂಮಿ, ಆಕಾಶ, ಸಸ್ಯ, ಪ್ರಾಣಿ, ಪಕ್ಷಿಗಳೆಲ್ಲವನ್ನು ಸಮಗ್ರವಾಗಿ ಸಂಯೋಜಿಸಲಾಗುತ್ತದೆ. ಇಲ್ಲಿ ಚಿತ್ರಿತವಾಗುವ ಪ್ರತಿ ಪ್ರಾಣಿ, ಸಸ್ಯ ಹಾಗೂ ಪಕ್ಷಿಗಳು ಅವರ ಸಂಸ್ಕೃತಿಯ ಅಗಾಧ ನಂಬಿಕೆಯ ಪ್ರತೀಕಗಳಾಗಿವೆ. ಅವರು ವರ್ಣಚಿತ್ರದ ಮೂಲಕ ಬ್ರಹ್ಮಾಂಡದ ವಿವೇಕಯುತ ತಿಳಿವಳಿಕೆಯನ್ನು ಪ್ರದರ್ಶಿಸುತ್ತಾರೆ. ಪ್ರಕೃತಿಯ ಅಂಶಗಳಿಗೆ ಸಂಬAಧಿಸಿದ ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಆಕಾಶಕಾಯಗಳು, ಮತ್ತು ಗಿಡಮರಗಳನ್ನು ಪವಿತ್ರವೆಂದು ಪರಿಗಣಿಸಿ ಅವುಗಳನ್ನು ಚಿತ್ರದ ಮೂಲಕ ಬಿಂಬಿಸುತ್ತಾರೆ. 

ರಾಥ್ವಾ ಜನಾಂಗವು ಹಸು ಮತ್ತು ಎಮ್ಮೆಗಳನ್ನು ಪವಿತ್ರ ಪ್ರಾಣಿಗಳೆಂದು ಪರಿಗಣಿಸುತ್ತಾರೆ. ಹಾಗಾಗಿ ಇವೂ ಸಹ ಚಿತ್ರದಲ್ಲಿ ಪ್ರತಿಬಿಂಬಿತವಾಗುತ್ತವೆ. ಜೊತೆಗೆ ತಮ್ಮ ಪೂರ್ವಜರು ಸಾಕಿದ ಮೊದಲ ಪ್ರಾಣಿ ಮೇಕೆಯೂ ಸಹ ಚಿತ್ರದಲ್ಲಿ ಸ್ಥಾನ ಪಡೆದಿದೆ. ರಾಥ್ವಾ ಆದಿವಾಸಿಗಳ ಸಾಂಸ್ಕೃತಿಕ ಸಂಪ್ರದಾಯದಲ್ಲಿ ವೀರರ ಶೋಷಣೆಯ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ವೀರರು ಮತ್ತು ಅವರು ಯುದ್ದಕ್ಕೆ ಬಳಸುತ್ತಿದ್ದ ಕುದುರೆಗಳು ಚಿತ್ರದಲ್ಲಿ ಹೇರಳವಾಗಿ ದೊರೆಯುತ್ತವೆ. ಸಾಲು ಸಾಲು ಕುದುರೆಗಳ ಚಿತ್ರ ಬರೆಯುವ ಮೂಲಕ ಯುದ್ದದ ವರ್ಣನೆಯನ್ನು ತಿಳಿಸಲಾಗುತ್ತದೆ. ಶಕ್ತಿ, ಧರ್ಮ ಮತ್ತು ದೇವತೆಗಳ ವಾಹನದ ಸಂಕೇತವಾಗಿ ಸಿಂಹವು ಸ್ಥಾನ ಪಡೆದಿದೆ. ಹುಲಿಯನ್ನು ರಕ್ಷಕನಾಗಿ ಚಿತ್ರಿಸಲಾಗುತ್ತದೆ. ಸಿಂಹ ಮತ್ತು ಹುಲಿಗಳನ್ನು ಆಕಾಶ ದ್ವಾರದ ಮೇಲೆ ಚಿತ್ರಿಸಲಾಗುತ್ತದೆ. ಏಕೆಂದರೆ ಇವು ಎಲ್ಲರನ್ನೂ ರಕ್ಷಿಸುತ್ತವೆ ಎಂಬ ನಂಬಿಕೆ ರಾಥ್ವಾಗಳದ್ದು. ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂಟೆಯೂ ಮಹತ್ವದ್ದು. ಹಾಗಾಗಿ ಇದೂ ಸಹ ಪಿಥೋರಾದಲ್ಲಿ ಸ್ಥಾನಪಡೆದಿದೆ. ಜಿಂಕೆಗಳನ್ನು ಸೌಂದರ್ಯ, ಮುಗ್ಧತೆ, ಪ್ರಾಮಾಣಿಕತೆಯ ಸಂಕೇತ ಎಂದು ರಾಥ್ವಾಗಳು ನಂಬಿದ್ದಾರೆ. ಪಿಥೋರಾದಲ್ಲಿ ಕೆಲವೊಮ್ಮೆ ಎರಡು ತಲೆಯ ಜಿಂಕೆಗಳೂ ಸಹ ಚಿತ್ರಿತವಾಗುತ್ತವೆ. ಪ್ರಾಣಿಗಳ ತ್ಯಾಗ ಬಲಿದಾನಕ್ಕೆ ಕೋಳಿ ಆಯ್ಕೆಯಾಗಿದೆ. ನವಿಲು ದೇವತೆಗಳ ವಾಹನವಾಗಿ ಕಾಣಸಿಗುತ್ತದೆ. ಬಾಬಾ ಪಿಥೋರಾನಿಗೆ ಜನ್ಮನೀಡಿದ ರಾಣಿ ಕೋಯಲ್‌ಳ ನೆನಪಿನಲ್ಲಿ ಕೋಗಿಲೆ ಸಾಂಕೇತಕವಾಗಿ ನಿರೂಪಣೆಯಾಗಿದೆ. ರಾಥ್ವಾಗಳು ಪ್ರಾಣಿ ಪಕ್ಷಿ ಪ್ರಿಯರಾಗಿದ್ದು, ಅವುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು ಎಂಬುದಕ್ಕೆ ಇಲ್ಲಿ ಚಿತ್ರಿತವಾಗುವ ಪ್ರಾಣಿ ಪಕ್ಷಿಗಳೇ ಸಾಕ್ಷಿ. 

ತಾಳೆ ಜಾತಿಯ ತಾಡ್ ಮರವು ರಾಥ್ವಾಗಳಿಗೆ ಬಹಳ ಇಷ್ಟವಾದ ಮರ. ತಾಡ್ ಮರದ ತಡ್ಕಲಿ ಎಂಬ ಚಿಕ್ಕ ಹಣ್ಣುಗಳು ತಿನ್ನಲು ತುಂಬಾ ಸೊಗಸಾಗಿರುತ್ತವೆ. ರಾಥ್ವಾಗಳು ತಾಡ್ ಮರದಿಂದ ನೀರಾ ತಯಾರಿಸುತ್ತಾರೆ. ಇದು ತುಂಬಾ ಆರೋಗ್ಯಕರವಾದ ಔಷಧೀಯ ಪಾನೀಯವಾಗಿದೆ. ಜೊತೆಗೆ ತಾಡ್ ಮರದಿಂದ ಮಧ್ಯವನ್ನೂ ಸಹ ತಯಾರಿಸುತ್ತಾರೆ. ಇದರ ಎಲೆಗಳನ್ನು ಮನೆಗಳ ಛಾವಣಿಗೆ ಮತ್ತು ಗೋಡೆಗೆ ಬಳಸುತ್ತಾರೆ. ಹಾಗಾಗಿ ತಾಡ್ ಮರವು ಪಿಥೋರಾದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ಮನೆ ನಿರ್ಮಾಣದಲ್ಲಿ ಬಿದಿರನ್ನು ಹೆಚ್ಚು ಬಳಸುವುದರಿಂದ ಬಿದಿರೂ ಸಹ ಅಲ್ಲಿ ಸ್ಥಾನ ಪಡೆದಿದೆ. 

ಆಧುನಿಕ ಜಗತ್ತಿನಲ್ಲಿ ಪಿಥೋರಾ

ಭಾರತದ ಹೆಚ್ಚಿನ ಬುಡಕಟ್ಟು ಕಲೆಗಳಂತೆ ಪಿಥೋರಾ ವರ್ಣಚಿತ್ರವು ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದೆ. ಆಧುನಿಕ ಜಗತ್ತು ಈ ಕಲೆಯನ್ನು ಅಲಂಕಾರಿಕವಾಗಿ ನೋಡುತ್ತಿದೆ. ಇದು ಸಂಪೂರ್ಣವಾಗಿ ವರ್ಲಿ ಚಿತ್ರವನ್ನು ಹೋಲುವುದರಿಂದ ಗೋಡೆಗಳ ಅಲಂಕಾರಕ್ಕೆ ಸೂಕ್ತ ಚಿತ್ರಕಲಾ ಪ್ರಕಾರವಾಗಿದೆ. ಆದರೆ ಇದು ರಾಥ್ವಾಗಳ ಪಾರಂಪರಿಕ ಹಾಗೂ ಸಾಂಪ್ರದಾಯಿಕ ಕಲೆಯಾದ್ದರಿಂದ ಅದನ್ನು ವ್ಯಾಪಾರೀಕರಣಗೊಳಿಸಲು ಅವರು ಸಿದ್ದರಿಲ್ಲ. ಆದಾಗ್ಯೂ ಅವರ ಕಲೆಯು ಆಧುನಿಕತೆಯ ಸ್ಪರ್ಶ ಹೊಂದುತ್ತಿದೆ. ಹಿಂದೆ ಚಿತ್ರ ರಚನೆಗೆ ತಾವೇ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿದ್ದರು. ಬಿದಿರಿನ ಕಟ್ಟಿಗೆಯಿಂದ ತಾವೇ ಬ್ರಷ್ ತಯಾರಿಸಿಕೊಳ್ಳುತ್ತಿದ್ದರು. ಆದರೆ ಇಂದು ಬಹುತೇಕವಾಗಿ ಮಾರುಕಟ್ಟೆಯಲ್ಲಿ ದೊರೆಯುವ ರಸಾಯನಿಕ ಬಣ್ಣ ಹಾಗೂ ಬ್ರಷ್‌ಗಳನ್ನು ಬಳಸುತ್ತಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪಿಥೋರಾ ಚಿತ್ರಕಲೆ ತನ್ನದೇ ಆದ ಸಾಂಪ್ರದಾಯಿಕ ಹಿನ್ನಲೆ ಹೊಂದಿದೆ. ಪಿಥೋರಾ ಸಂಪೂರ್ಣವಾಗಿ ನಂಬಿಕಗಳ ಆಚರಣೆ ಆಗಿರುವುದರಿಂದ ಅದನ್ನು ಜಾಗತೀಕರಣದ ನೆಲೆಯಲ್ಲಿ ನೋಡುವುದು ರಾಥ್ವಾಗಳಿಗೆ ಇಷ್ಟವಿಲ್ಲ. ಅವರ ನಂಬಿಕೆಯ ನೆಲೆಯಲ್ಲಿಯೇ ನಿಂತು ಅದಕ್ಕೆ ಬೇಕಾದ ಮಾರ್ಗದರ್ಶನ ನೀಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುವ ಮತ್ತು ಬೆಳೆಸುವ ಪ್ರಯತ್ನ ಮಾಡಬೇಕಿದೆ.