June 26, 2015

ಕಲ್ಕತೆ

ದಿನಾಂಕ 24-06-2015 ರಂದು 'ಅವಧಿ' (http://avadhimag.com/2015/06/24/ಸಣ್ಣಕತೆ-’ಕಲ್ಕತೆ’) ಬ್ಲಾಗ್ ನಲ್ಲಿ ಪ್ರಕಟವಾದ ನನ್ನ ಸಣ್ಣಕಥೆ.

                                ಕಲ್ಕತೆ

ಚೆನ್ನಿ ಸಂಜಿಮುಂದ ಕೆಳಗಿನ ಓಣಿಯಿಂದ ಮ್ಯಾಲಿನ ಓಣಿಕಡೆ ಹೊಂಟಾಗ ಕಟ್ಟೆ ಪುರಾಣದ ಹರಿಕಾರರಂತಿದ್ದ ಹರ್ಯದ ಹುಡುಗ್ರ ಮನದಲ್ಲಿನ ಹರ್ಯಯ ಎದ್ದು ಕುಣಿತಿತ್ತು. ಸಂಜೆ ಸೂರ್ಯ ಚೆನ್ನಿಯ ಮುಖದಲ್ಲಿನ ತವಕ, ಗಾಬರಿಗಳನ್ನು ಮರೆಮಾಡಿ ರಂಗಿನಾಟವಾಡುತ್ತಲಿದ್ದ. ಚಾವಡಿ ಕಟ್ಟೆಮ್ಯಾಲೆ ಕುಳಿತ ಕೆಲವು ಮುದಿತಲೆಗಳಲ್ಲಿ ರೊಯ್ಯನೆ ಗಾಳಿ ಬೀಸಿದಂಗಾಗಿ ತಲೆ ಸುಳ್ ಎಂದಿತು. ಭೂಮ್ತಾಯಿ ಒಡಲಲ್ಲಿಳಿಯುತ್ತಿದ್ದ ಸೂರ್ಯ ನೆತ್ತಿ ಮ್ಯಾಲ ಬಂದ್ಹಾಂಗಾತು. ಎಪ್ಪತೈದರ ಆಸುಪಾಸಿನಲ್ಲಿದ್ದ ಸಿದ್ದಪ್ಪನ ಮುಖ ರಂಗೇರುತ್ತಿದ್ದುದನ್ನು ಸರಿಸುಮಾರು ಅದೇ ವಯಸ್ಸಿನ ಭರಮಪ್ಪ ತನ್ನ ಮುಖದಲ್ಲಿ ಅಂತಹ ಯಾವುದೇ ಬದಲಾವಣೆ ಬಂದಿರಲಾರದು ಎಂದುಕೊಂಡ.
ಮನಸ್ಸಿನ ತುಂಬಾ ತನ್ನ ಮಗುವಿನ ಕಾಯಿಲೆಯ ದಾರುಣ ಚಿತ್ರಣವನ್ನೇ ತುಂಬಿಕೊಂಡಿದ್ದ ಚೆನ್ನಿ ಚಾವಡಿ ಕಟ್ಟಿ ಮ್ಯಾಲಿನ ಕಾಗೆ, ಹದ್ದಿನ ಕಣ್ಣುಗಳನ್ನು ಗಮನಿಸದೇ ದಡಬಡನೇ ಅಂತ್ರದ ಬಸ್ಸಯ್ಯನ ಮನೆ ಕಡೆ ನಡೆದಳು.
ಬಾಗಿಲು ಮುಂದೆ ಮಾಡಿ ಯಾವುದೋ ಸೊಪ್ಪು ಅರೆಯುವುದರಲ್ಲಿ ಮಗ್ನನಾಗಿದ್ದ ಬಸ್ಸಯ್ಯ ಚೆನ್ನಿಯ ಕೂಗಿಗೆ ಹೊರಗೆ ಕಣ್ಣು ಹಾಕಿದ.
ಏನ್ ಚೆನ್ನಿ ಸಂಜಿಮುಂದ ಬಂದ್ಯಲ್ಲ, ಏನ್ಸಮಾಚಾರ ಎಂದು ಕುಳಿತಲಿಂದಲೇ ಕೇಳಿದ.
ಅಯ್ನೋರೇ, ನಮ್ಮ ಸಣ್ಣದುರ್ಗನಿಗೆ ಮೂರು ದಿನ್ದಿಂದ ವಟ್ಟೆನೋವು. ಏನುಂಡರೂ ಮೈಗೆ ದಕ್ಕಾಂಗಿಲ್ಲ. ಅದ್ರಾಗ ವಾಂತಿನೂ ಸುರುವಾಗೈತಿ, ವುಡ್ಗ ತೀರ ನಿತ್ರಣಾಗ್ಯಾನ. ಇವತ್ತು ಗುರುವಾರ ಅಂತ ನೆಪ್ಪಾದ ಕೂಡ್ಲೆ ಅಂತ್ರನಾದ್ರೂ ಬರೆಸ್ಕೋಂಡು ಹೋದ್ರಾತು ಅಂತಾ ಬಂದೀನಿ ಎಂದು ತಾನು ತಂದಿದ್ದ ಅಂತ್ರದ ತಗಡನ್ನು ಮುಂದೆ ಮಾಡಿದಳು.
ಅವಳು ಹೇಳುತ್ತಿದ್ದುದು ಯಾವುದನ್ನೂ ತನ್ನ ತಲೆಯೊಳಗ ಹಾಕಿಕೊಳ್ಳದ ಬಸ್ಸಯ್ಯ ಅವಳ ರೂಪವನ್ನು ಕಣ್ಣಿಂದಲೇ ಸವಿಯತೊಡಗಿದ್ದ. ಅವನ ಕಣ್ಣುಗಳು ಚೆನ್ನಿಯ ದೇಹದ ಒಂದೊಂದು ಅಂಗವನ್ನು ತಾಳೆ ನೋಡಿ ಗುರುತು ಹಾಕಿಕೊಳ್ಳುತ್ತಿದ್ದವು. ಅಂದು ಮನೆಯಲ್ಲಿ ಒಂಟಿಯಾಗಿದ್ದ ಬಸ್ಸಯ್ಯನ ಮನದಲ್ಲಿ ಏನೇನೋ ಆಸೆಗಳು ಗರಿಗೆದರತೊಡಗಿದವು.
ಅಯ್ನೋರೇ ಈ ತಗಡು ತಗೋರಿ ಎಂದು ಚೆನ್ನಿ ಜೋರಾಗಿ ವದರಿದಾಗ ಬಸ್ಸಯ್ಯ ವಾಸ್ತವಕ್ಕಿಳಿದ.
ಅಲ್ಲ ಚೆನ್ನಿ, ಕತ್ಲಾಗೋ ವೊತ್ನ್ಯಾಗ ಒಬ್ಳ ಬಂದೀಯಲ್ಲ, ಜತೀಗೆ ಯಾರ್ನೂ ಕರ್ಕಾಂಬಂದಿಲ್ಲೇನು? ಎಂದು ಮಾತಿನೊಂದಿಗೆ ಕಣ್ಣ ಬಾಣವನ್ನೂ ಬಿಟ್ಟ.
ಆ ಬಾಣದ ಮರ್ಮವನ್ನರಿಯದ ಚೆನ್ನಿ ನಿಮ್ಗೆ ತಿಳಿಲಾರ್ದು ಏನೈತಿ ಸ್ವಾಮ್ಯರ, ನನ್ನ ಗಂಡ ಮೊದ್ಲೆ ಕುಡ್ಕ. ನಿನೆಯಿಂದ ಅದ್ಯಾವನೋ ಇವನ ಜತೆಗಾರ ದ್ಯಾಮಪ್ಪ ಅಂತೆ, ಕಾಪಿಸೀಮಿಯಿಂದ ದುಡ್ಕೊಂಡು ರೊಕ್ಕ ತಗಂಡು ಬಂದಾನ. ಇಬ್ರೂ ಸೇರಿ ಕುಡ್ದದ್ದೇ ಕುಡ್ದದ್ದು. ಬಾಡು ತಿಂದ್ದದ್ದೇ ತಿಂದ್ದದ್ದು. ಕುಡ್ತ ಜಾಸ್ತಿ ಆದ ಕೂಡ್ಲೆ ವಾಂತಿ ಮಾಡ್ಕಾಣಾದು. ಮತ್ತ ಬಂದು ಕುಡ್ಯಾದು, ಇದೇ ಆಗಿ ಹೋತು. ಮಗಿಗೆ ಉಸಾರಿಲ್ಲ ಒಂದು ಗುಳ್ಗಿನಾದ್ರು ತಗಂಡ್ ಬಾ ಅಂದ್ರ ದುಡ್ಡಿಲ್ಲ ಅಂತಾನೆ. ಆದ್ರೆ ಸಾಲ ಸೋಲ ಮಾಡಿ ಕುಡಿತಾನ. ನನ್ಹತ್ರ ನಸ್ಯಪುಡಿಗೆಂದು ಇದ್ದ ಎಲ್ಡ್ರುಪದಾಗ ತಗಡ ತಂದೀನಿ ಎಂದು ಉಸುರುತ್ತಾ ಹೊಸ್ಲಿ ಮುಂದಿನ ನೆಲದ ಮ್ಯಾಲ ಕುಳಿತುಕೊಂಡಳು.
ಬಾಯಲ್ಲೇನೋ ಮಣಮಣ ಮಂತ್ರ ಹೇಳುತ್ತಾ ಉಗುಳು ಹಾಕುತ್ತಾ ತಾಮ್ರದ ತಗಡನ್ನು ಸುತ್ತಿ ಸಣ್ಣದೊಂದು ಸುರುಳಿ ಮಾಡಿ ಕೆಂಪು ದಾರದಿಂದ ಸುತ್ತತೊಡಗಿದ. ಕೈಗಳು ಯಾಂತ್ರಿಕವಾಗಿ ದಾರ ಸುತ್ತುತ್ತಿದ್ದರೆ ಆಸೆಗಳು ಮನಸಿನ ಸುತ್ತ ಸುತ್ತತೊಡಗಿದವು. ಆದರೆ ಅದ್ಯಾವುದನ್ನೂ ಚೆನ್ನಿಯ ಮುಂದೆ ಹೇಳಿಕೊಳ್ಳುವ ಧೈರ್ಯವಿಲ್ಲದೆ ತಾಯಿತವನ್ನು ಅವಳ ಕೈಗಿಡುತ್ತಾ ಚೆನ್ನಿ ನಿನ್ನ ಮಗ್ನಿಗೆ ಕುಜ ದೋಸ ತಗಲೈತಿ. ಅದ್ನ ನಿವಾರಿಸಬೇಕಾದ್ರ ಬರೋ ಅಮಾಸಿ ದಿನ ಗ್ರಹ ಶಾಂತಿ ಮಾಡಿಸ್ಬೇಕು, ಅಂದ್ರ ಮಾತ್ರ ನಿನ್ನ ಮಗ್ನಿಗೆ ವಾಸಿಯಾಕೈತಿ ಎಂದು ಚೆನ್ನಿ ಮನದೊಳಗ ಒಂದು ಗುಂಗಿ ಹುಳ ಬಿಟ್ಟ.
ತನ್ನ ಮಗನಿಗೆ ‘ಕುಜದೋಷ’ ಎಂಬ ಸುದ್ದಿಕೇಳಿ ಚೆನ್ನಿ ಗಾಬರಿಗೊಳಗಾದಳು. ಗ್ರಹಶಾಂತಿ ಮಾಡ್ಸಕ ಯಸ್ಟ್ ಕಚರ್ಾಕೈತಿ ಅಯ್ನೋರೆ ಎಂದು ಬಸ್ಸಯ್ಯನ್ನ ಕೇಳಿದಳು.
ಖಚರ್ೇನೂ ಬಾಳ ಇಲ್ಲ ಚೆನ್ನಿ, ಒಂದು ಪಾವು ಅಕ್ಕಿ, ಒಂದು ಕೆಂಪು ಕುಬುಸದ ಕಣ, ಐದು ನಿಂಬೆಹಣ್ಣು ತಂದ್ರ ಆತು. ಆದ್ರ ಅದ್ನ ಅಮಾಸಿ ದಿನ ರಾತ್ರಿ ಹನ್ನೆಲ್ಡು ಗಂಟ್ಯಾಕ ಸ್ಮಶಾನ್ದಾಗ ಮಾಡ್ಬೇಕು. ಅಲ್ಲಿಗೆ ನನ್ನ ಕೂಡ ಮಗೀನ ಹೆತ್ತ ತಾಯಿ ಒಬ್ಳೆ ಬರ್ಬೇಕು. ಅದಾ ಸ್ವಲ್ಪ ತೊಂದ್ರಿ ಕೆಲ್ಸ. ನೋಡು ಚೆನ್ನಿ ಅಮಾಸಿಗೆ ಇನ್ನೂ ವಂದು ವಾರೈತಿ. ಯೋಚ್ನೆ ಮಾಡು. ಶಾಂತಿ ಮಾಡ್ಸೋದಾದ್ರೆ ಅಮಾಸಿ ಮುಂಚಿನ ದಿನ ನನ್ಗೆ ತಿಳ್ಸಿದ್ರ ಸಾಕು. ಉಳಿದದೆಲ್ಲ ನಾನು ರಡಿ ಮಾಡ್ಕೋತೀನಿ ಎಂದು ಹೇಳುತ್ತಾ ತನ್ನ ಮನದ ಆಸೆಯನ್ನು ತೀರಿಸಿಕೊಳ್ಳಲು ಹುನ್ನಾರ ನಡೆಸಿದ. ಬಸ್ಸಯ್ಯನ ಕೈಯಾಗಿನ ತಾಯ್ತ ತೆಗೆದುಕೊಂಡವಳೇ ತನ್ನ ಗುಡಿಸಲ ಕಡೆ ಜೋರಾಗಿ ಹೆಜ್ಜೆ ಹಾಕತೊಡಗಿದಳು.
ಹಾಗೆ ನಡೆದು ಹೋಗುವಾಗ ಮನೆ ಕಟ್ಟೆ ಮ್ಯಾಲ ಕುಂತಿದ್ದ ಬಸವನಗೌಡನಿಗೆ ಕತ್ಲಲ್ಲಿ ಬರ್ರನೆ ನಡೆದು ಹೋದೋರು ಯಾರು ಎಂದು ತಿಳಿಯದೇ ತನ್ನ ನೆಚ್ಚಿನ ಬಂಟ ಪೋರನನ್ನು ಕೇಳಿದ. ಹೋದೋಳು ಕೆಳಗಿನಕೇರಿ ಕರಿಯನ್ನ ಹೆಂಡ್ತಿ ಚೆನ್ನಿ ಎಂದು ತಿಳಿದೊಡನೆ ಕತ್ಲಲ್ಲಿ ತನ್ನ ಕಣ್ಣು ಕಾಣ್ಸಿಸಲಾರದ್ದಕ್ಕೆ ಹಪಹಪಿಸಿದ.
ಗಂಡನ ಕುಡಿತದ ಸ್ಥಿತಿಯನ್ನು ಹಾಗೂ ಮಗುವಿನ ಕಾಯಿಲೆಯ ಪರಿಸ್ಥಿತಿಯನ್ನೂ ಮನಸ್ಸಿಲ್ಲಿ ತುಂಬಿಕೊಂಡಿದ್ದ ಚೆನ್ನಿ ಕತ್ತಲಲ್ಲಿ ಸೆಗಣಿಯನ್ನೋ, ಚರಂಡಿ ಕೆಸರನ್ನೋ ತುಳಿಯುತ್ತಾ ಕಾಲು ಕೊಡವುತ್ತಾ ಗುಡಿಸಲು ತಲುಪಿದಳು. ಕತ್ತಲಾಗಿದ್ದ ಗುಡಿಸಲ ಮುಂದೆ ನಿಂತ ಅವಳಿಗೆ ತಾನ್ಯಾರದೋ ಗುಡಿಸಲ ಮುಂದೆ ನಿಂತಂತೆ ಅನ್ಸಿತು. ತನ್ನ ಒಡತಿ ಬಂದದ್ದನ್ನು ಗಮನಿಸಿದ ನಾಯಿ ಎದ್ದು ನಿಂತು ಬಾಲ ಅಲ್ಲಡಿಸತೊಡಗಿತು.
ತನ್ನ ಗಂಡನೆಂಬ ಗಂಡುಪ್ರಾಣಿ ಇನ್ನೂ ಸರಾಯಿ ಅಂಗಡಿಯಿಂದ ಬಂದಿಲ್ಲವೆಂದು ತಿಳಿದು ಕತ್ಲಲ್ಲಿ ಮಲಗಿದ್ದ ಮಲಗಿದ್ದ ಸಣ್ಣದುರ್ಗನನ್ನು ಕೂಗಿದಳು. ಹೊಟ್ಟೆನೋವು ತಾಳಲಾರದೇ ನಿತ್ರಾಣಗೊಂಡ ಮಗನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದನ್ನು ಕಂಡು ಕತ್ಲಲ್ಲೇ ತಡಕಾಡುತ್ತಾ ಒಳಗೆ ಹೋಗಿ ವಲಿ ಹತ್ರದಾಗಿದ್ದ ಕಡ್ಡಿ ಪಟ್ಣ ಹುಡುಕಿ ಬುಡ್ಡಿ ಹತ್ತಿಸಿ ಮಗನ ಕಡೆ ನೋಡಿದ್ಲು. ಮೂರು ದಿನದಿಂದ ಹೊಟ್ಯಾಗ ತುತ್ತು ಕೂಳಿಲ್ಲದೇ, ಹನಿ ನೀರಿಲ್ಲದೇ ನಿತ್ರಾಣಗೊಂಡು ಹೊಟ್ಟಿಯನ್ನ ನೆಲಕ್ಕಾನಿಸಿಕೊಂಡು ಬೋರಲಾಗಿ ಮಲಗಿದ್ದ ಮಗನನ್ನು ಕಂಡು ಹೆತ್ತಕಳ್ಳು ಚುರ್ಕ್ ಅಂತು. ಮೈಮುಟ್ಟಿ ನೋಡಿದಾಗ ಕೈಗೆಲ್ಲ ತಣ್ಣನೆಯ ದ್ರವ ಹತ್ತಿದಂಗಾತು. ಎದೆ ದಸ್ಸಕೆಂದಿತು. ಕಣ್ಬಿಟ್ಟು ಸರ್ಯಾಗಿ ನೋಡಿದಾಗ ಮಗನ ಮೈಯೆಲ್ಲಾ ಬೆವರಿನಿಂದ ತೊಯ್ದಿತ್ತು.
ನಿದ್ದೆಯ ಮಂಪರಿನಲ್ಲಿದ್ದ ಮಗನನ್ನು ಎಬ್ಬಿಸದೇ ಅಲ್ಲಿಯೇ ಬಿಟ್ಟು ಮಾರಿಗೊಂದಿಸ್ಟು ನೀರು ಹಾಕಲೆಂದು ಹೊರಗೆ ನಡೆದಳು. ಕಣ್ಣಿಲ್ಲದ ಹಾಗೂ ಕಣ್ಣಿಗೆ ಕಾಣದ ದೇವರಿಗೆ ಕೈಮುಗಿದು ವಲೆಯಲ್ಲಿದ್ದ ಬೂದಿಯನ್ನು ಕೈಗೆ ಹಚ್ಚಿಕೊಂಡು ಮಗನ ಹಣೆಗೆ ಬಳಿದಳು. ನಡುವಿನಲ್ಲಿ ಸಿಗ್ಸಿಕೊಂಡಿದ್ದ ತಾಯ್ತನ ಅವ್ನ ರಟ್ಟೆಗೆ ಬಿಗಿದ್ಲು.
ವಟ್ಟಿವಳಗಿದ್ದ ನಂಜೆಲ್ಲ ಹೊರಹೋಗಿದ್ದಕ್ಕೋ ಏನೋ ಅಂತೂ ವಾಂತಿ ನಿಂತು ವೊಟ್ಟೆನೋವು ಕಡಿಮೆ ಆದಂತಾಗಿ ಬೆಳಗಾದೊಡನೆ ಮಗ ಎಂದಿನಂತೆ ಚಟುವಟಿಕೆಯಿಂದ ಓಡಾಡುವುದನ್ನ ನೋಡಿದ ಚೆನ್ನಿಯ ಮುಖ ಗೆಲುವಾಗಿತ್ತು. ರಾತ್ರಿ ಅದ್ಯಾವಾಗೋ ಬಂದು ಮಲಗಿದ್ದ ಕರಿಯ ಎದ್ದಾಗ ಸೂರ್ಯ ನೆತ್ತಿಮ್ಯಾಲೆ ಏರ ತೊಡಗಿದ್ದ. ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಿದ್ದ ಮಗನ್ನ ಕಂಡು ಆಶ್ಚರ್ಯಗೊಂಡಿದ್ದ. ಚೆನ್ನಿ ತಾಯ್ತ ಕಟ್ಟಿದ ವಿಷಯ ತಿಳ್ಸಿದಾಗ ಅವ್ನ ಮುಖದಲ್ಲಿ ನಿರಾಸಕ್ತಿ ಎದ್ದು ಕಾಣ್ತಿತ್ತು.
ಒಂದು ವಾರ್ದಾಗ ಮಗ ಮೊದಲಿನಂತೆ ಮೈಕೈ ತುಂಬಿಕೊಂಡು ಓಡಾಡತೊಡಗಿದ್ದನ್ನ ನೋಡಿದ ಚೆನ್ನಿ ಗ್ರಹಶಾಂತಿ ಮಾಡಿಸೋ ವಿಚಾರ ಮರೆತ್ಲು. ಇದ್ರಿಂದ ಅಂತ್ರದ ಬಸ್ಸಯ್ಯನ ಮನದಾಳದ ಆಸೆ ಕಮರಿದಂಗಾತು!.
ಆ ವರ್ಷದ ಮುಂಗಾರು ಮಳೆ ಪ್ರಾರಂಭದಿಂದ್ಲೆ ಚೆನ್ನಾಗಿ ಆಯ್ತು. ಚೆನ್ನಿ ತನ್ನ ಗಂಡನ ಪಾಲಿಗೆ ಬಂದಿದ್ದ ಎಲ್ಡೆಕ್ರೆ ಜಮೀನನ್ನ ತಾನೇ ಮುಂದೆ ನಿಂತು ಹಸನು ಮಾಡ್ಸಿದ್ಲು. ವರ್ಸದುದ್ದಕ್ಕೂ ಅಂಬ್ಲಿ, ಮುದ್ದಿ ನುಚ್ಚಿಗಾಯ್ತದೆ ಎಂದು ಜ್ವಾಳ ಬಿತ್ಸಿದ್ಲು. ನಿತ್ಯ ಜೀವನದ ಉಪ ಖಚರ್ಿಗೆಂದು ಎಲ್ಡು ಎಮ್ಮೆ ಜ್ವಾಪಾನ ಮಾಡಿದ್ಲು. ಎಮ್ಮೆಯೊಂದಿಗೆ ಹೊಲಕ್ಕೋಗೋದು, ಎಮ್ಮೆ ಮೇಯ್ಸುತ್ತಾ ಹೊಲ ಕಾಯೋದು ಅವಳ ಕಾಯಕವಾಗಿತ್ತು.
ಅಂದು ರಾತ್ರಿ ಯಾಕೋ ಕರಿಯಪ್ಪ ಕುಡ್ದು ಬರ್ಲಿಲ್ಲ. ವೊತ್ತು ಮುಣುಗೋದ್ರೊಳಗ ಮನೆಸೇರಿ ದೀಪ ಹತ್ಸಿದ. ಮನೆಗೆ ಬಂದ ಚೆನ್ನಿಗೆ ತನ್ನ ಗಂಡನ ಈ ಸ್ಥಿತಿ ನೋಡಿ ಅವ್ನ ಮ್ಯಾಲಿದ್ದ ಕ್ವಾಪ ಎಲ್ಲಾ ಹೊಂಟೋಯ್ತು. ಬೆಳಗಿನ ಮುದ್ದಿ ನುಂಗಿ ದಿಂಬಿಗೆ ಇಂಬು ಕೊಟ್ರು. ಆದ್ರೆ ನಿಂದೆ ಎಂಬೋದು ಹತ್ರ ಸುಳಿಯಲಿಲ್ಲ. ಬಹಳ ದಿನಗಳ ನಂತ್ರ ಇಬ್ರೂ ರಾತ್ರಿಯೆಲ್ಲಾ ತಮ್ಮ ಮುಂದಿನ ಜೀವನದ ಬಗ್ಗೆ ಸುಂದರ ಕನಸುಗಳನ್ನು ಕಟ್ಟಿಕೊಳ್ಳುವ ಕುರಿತು ಮಾತಾಡಿಕೊಂಡ್ರು. ಅದ್ಯಾವಾಗೋ ನಿದ್ದೆ ಹತ್ತಿತ್ತು.
ಬೆಳಗಾದೊಡನೆ ಅಡ್ಗಿ ಕೆಲ್ಸ ಮುಗ್ಸಿ ಎಂದಿನಂತೆ ಎಮ್ಮೆಗಳನ್ನು ಹೊರಗೆ ಬಿಟ್ಟಾಗ ಕರಿಯಪ್ಪ ತಾನೇ ಮೇಯ್ಸಿಕೊಂಡು ಬರುವುದಾಗಿ ತಿಳಿಸಿ ಎಮ್ಮೆ ಹೊಡ್ಕೊಂಡು ಹೋದ. ಎಮ್ಮೆ ಹೊಡ್ಕೊಂಡು ಹೋಗೋ ತಾಪತ್ರಯ ತಪ್ಪಿದ್ದಕ್ಕಾಗಿ ಖುಷಿಗೊಂಡ ಚೆನ್ನಿ ಬುತ್ತಿ ತಗೊಂಡು ಹೊಲಕ್ಕೋದ್ಲು. ಜ್ವಾಳದ ಬೆಳೆ ಚೆನ್ನಾಗಿ ಬೆಳೆದಿತ್ತು. ಅದ್ರಲ್ಲಿದ್ದ ಕಳೆಯನ್ನ ಕಿತ್ತು ಎಮ್ಮೆಗೊಂದಿಷ್ಟು ಹುಲ್ಲಿನ ಗಂಟನ್ನು ಕಟ್ಟದ್ಲು.

ಸೂರ್ಯ ನೆತ್ತಿಮ್ಯಾಲಿಂದ ಪಡುವಣದ ಕಡೆ ಓಡುತ್ತಲಿದ್ದ. ಆಕಾಸದಾಗ ಮೋಡಗಳು ದಟೈಸಿದ್ವು. ರಪರಪನೆ ಹನಿಗಳು ಉದರತೊಡಗಿದ್ವು. ಮಳೆ ಜೋರಾದ್ರೆ ದಾರ್ಯಾಗಿನ ಹಳ್ಳ ಕಟ್ಟಿ ಮನೆ ಸೇರೋದು ತಡ ಆದೀತೆಂದು ಹುಲ್ಲಿನ ಹೊರೆಯನ್ನ ತಲೆ ಮ್ಯಾಲಿಟ್ಕೊಂಡು ಮನೆ ಕಡೆ ಹೊಂಟ್ಲು. ಮಳೆಯ ಆರ್ಭಟ ಒಮ್ಮೆಲೇ ಜೋರಾಗಿ ದಾರಿ ಕಾಣದಂಗಾತು. ಭೂಮಿ ಆಕಾಶ ಒಂದಾಗೈತೇನೋ ಎಂಬಂತೆ ಮಳೆ ಸುರಿಯತೊಡಗಿತು. ಹೊರೆ ಮ್ಯಾಲ ಬಿದ್ದ ಮಳೆನೀರು ತಲೆಯಾಗಿಂದ ಮೈತುಂಬಾ ಹರಿಯತೊಡಗಿತು. ಬಟ್ಟೆಯೆಲ್ಲಾ ತೊಯ್ದು ಒದ್ದೆಯಾದ್ವು. ಹೊಲದಲೆಲ್ಲ ನೀರು ಹರದಾಡಿ ಕೆಸರಿನ್ಯಾಗ ಕಾಲುಕಿತ್ಕೊಂಡು ಮುಂದೆ ನಡಿಲಾರದೆ ಅಲ್ಲೇ ಇದ್ದ ಮರದ ಕೆಳಗೆ ನಿಂತುಕೊಂಡ್ಳು.
ಸುಮಾರು ಒಂದು ತಾಸು ಸುರಿದ ಮಳೆ ಕ್ರಮೇಣ ಕಡಿಮೆಯಾಗತೊಡಗಿತು. ಮರದ ಕೆಳಗೆ ನಿಂತರೂ ಮಳೆ ಹನಿಯಿಂದ ತಪ್ಪಿಸಿಕೊಳ್ಳಲಾರದೇ ಪೂರಾ ತೊಯ್ಸಿಕೊಂಡಿದ್ದಳು. ಹುಲ್ಲಿನ ಹೊರೆಯನ್ನು ತಲೆಮ್ಯಾಲಿಟ್ಟುಕೊಂಡು ಜೋರಾಗಿ ಮನೆ ಕಡೆ ಹೆಜ್ಜೆ ಹಾಕತೊಡಗಿದಳು. ಹೆಜ್ಜೆ ಭಾರವಾದಂತೆನಿಸಿತು. ಹಳ್ಳ ತುಂಬಿ ಬರೋದಕ್ಕಿಂತ ಮುಂಚೆ ದಾಟಬೇಕು ಅಂತ ಬಂದ ಚೆನ್ನಿಗೆ ಅದೃಷ್ಟ ಕೈಕೊಟ್ಟಿತು. ಆಗಲೇ ಹಳ್ಳ ಎರಡೂ ದಡ ತುಂಬಿಕೊಂಡು ಹರ್ಹೆಯ ಬಂದಂಗ ಹರಿಯತೊಡಗಿತ್ತು.
ಮಳೆ ಬರೋವಾಗ ಹಳ್ಳದ ದಂಡಿ ಮ್ಯಾಲಿನ ತೋಟದ ಕೋಣೆಯಲ್ಲಿದ್ದ ಬಸವನಗೌಡ ಹೊರಗ ಬಂದ. ಬಲಗೈ ಬಂಟ ಪೋರ ಧಣ್ಯಾರ ಬೈಕನ ಮ್ಯಾಲಿದ್ದ ನೀರನ್ನು ಒರ್ಸಾಕತ್ತಿದ್ದ. ಸುತ್ತಲ ಮಳೆಯ ಆರ್ಭಟವನ್ನು ನೋಡ್ತಾ ಇದ್ದ ಬಸವನಗೌಡನ ಕಣ್ಣು ಹಳ್ಳದ ಕಡೆ ಹರಿತು. ಹಳ್ಳ ಮೈತುಂಬಿ ಹರೀತಾ ಇತ್ತು. ಹಾಂಗ ಆಚೀಚೆ ನೋಡಿದ ಕಣ್ಣು ದಂಡಿ ಮ್ಯಾಲೆ ಹೊರೆಯೊಂದಿಗೆ ಇದ್ದ ಚೆನ್ನಿಯತ್ತ ಕೇಂದ್ರೀಕೃತವಾಯ್ತು. ಅವಳು ಚೆನ್ನಿ ಅನ್ನೋದನ್ನ ಪೋರನಿಂದ ಖಚಿತಪಡಿಸಿಕೊಂಡ ಮ್ಯಾಲೆ ಹಳ್ಳದ ದಂಡೆ ಕಡೆ ಹೆಜ್ಜೆ ಹಾಕಿದ. ಚೆನ್ನಿ ಹತ್ರ ಹೋಗಿ ಮಳೆಯ ವಿಚಾರ ಮಾತಾಡ್ತಾ ಮಾತಾಡ್ತಾ ತೊಯ್ದಿದ್ದ ಅವಳ ದೇಹದ ಸವಿಯನ್ನ ಕಣ್ಣಿಂದಲೇ ಸವಿಯತೊಡಗಿದ. ಮಳೆ ಬಂದು ಹಳ್ಳಕ್ಕೆ ಹರ್ಹೆಯ ಬಂದ್ಹಂಗ ಬಸವನಗೌಡನ ಮನಸಿನ್ಯಾಗಿನ ಆಸೆಗಳಿಗೂ ಹರ್ಹೆಯ ಬಂದು ಕುಣಿದಾಡತೊಡಗಿದವು. ಇತ್ತ ಅವನ ವಕ್ರದೃಷ್ಟಿ ತಾಳಲಾರದೇ ಅವನ ಮಾತಿನ ಮೋಡಿಯನ್ನು ಸಹಿಸಲಾರದೇ ಅತ್ತ ಹಳ್ಳ ದಾಟಲಾರದೇ ಸಂದಿಗ್ದ ಪರಿಸ್ಥಿತಿಗೆ ಸಿಕ್ಕಿಹಾಕೊಂಡ್ಳು.
ಕೊನೆಗೂ ಬಸವನಗೌಡ ತನ್ನ ಕಚ್ಚೆಹರುಕು ಬುದ್ದಿಯನ್ನು ಉಪಯೋಗಿಸಿ ಮನದ ಆಸೆಯನ್ನು ಈಡೇರಿಸುವಂತೆ ಚೆನ್ನಿಯನ್ನು ಕೇಳಿಯೇ ಬಿಟ್ಟ. ಅವ್ನ ಮಾತ್ನಿಂದ ಬೆಚ್ಚಿದ ಚೆನ್ನಿಗೆ ಮೈಯಲ್ಲಿ ನಡುಕ ಹುಟ್ಟಿದಂಗಾತು. ಆದರೂ ಸಾವರಿಸಿಕೊಂಡು ಮನದಲ್ಲಿ ದೈರ್ಯ ತದ್ಕೊಂಡು ಕಪಾಳಕ್ಕೊಂದ್ಹೇಟು ಕೊಟ್ಲು. ಇದ್ನ ನೀರೀಕ್ಷಿಸಿರದ ಬಸವನಗೌಡ ಮತ್ತೊಷ್ಟು ಉಗ್ರಗೊಂಡ. ಆಚೀಚೆ ನೋಡಿದ. ಸದ್ಯಕ್ಕೆ ಯಾರೂ ನೋಡ್ಲಿಲ್ಲವೆಂಬುದೇ ಸಮಾದಾನ. ಕೂಡ್ಲೇ ಪೋರನನ್ನು ಕೂಗಿ ಕರೆದ. ಇಬ್ರೂ ಸೇರಿ ಚೆನ್ನಿಯನ್ನು ತೋಟದ ಕೋಣೆಯೊಳಕ್ಕೆ ಹೊತ್ಕೋಂಡು ಹೊಂಟೇ ಬಿಟ್ರು.
ಚೆನ್ನಿಯನ್ನು ಕೋಣೆಯೊಳಗ ಕೂಡಿಹಾಕ್ಕೊಂಡು ತನ್ನ ಬಹುದಿನದ ಕಾಮದಾಹವನ್ನು ತೀರ್ಸಿಕೊಂಡು ವಿಜಯದ ನಗೆಯಿಂದ ಹೊರಬಂದ. ಇತ್ತ ಅವನು ಹೊರ ಬಂದೊಡನೇ ಕೋಣೆಯಲ್ಲಿದ್ದ ಚೆನ್ನಿಗೆ ಎದೆಯಲ್ಲಿ ಬೆಂಕಿ ಇಟ್ಟಂಗಾತು. ಹೊಟ್ಟೆಯೊಳಗಿನ ಕಳ್ಳು ಹೊರಬಂದ್ಹಾಂಗಾತು. ತಲೆಯಲ್ಲಾ ದಿಮ್ಮೆಂದಂಗಾಗಿ ಕಣ್ ಕತ್ಲಾಗಿ ಕೊಣೆಯೆಲ್ಲಾ ಸುತ್ತಿದಂಗಾತು. ತಲೆ ತಿರುಗಿ ರಪ್ಪನೇ ನೆಲಕ್ಕ ಬಿದ್ಲು. ಬಿದ್ದ ರಭಸಕ್ಕೆ ತಲೆಗೆ ಜೋರಾಗಿ ಏಟು ಬಿತ್ತು. ಒದ್ದಾಡ್ತ ಒದ್ದಾಡ್ತ ಇದ್ದ ದೇಹ ಒಮ್ಮೆಲೇ ಸ್ತಬ್ದವಾಯ್ತು.
ಹಳ್ಳದ ರಭಸ ಕಡಿಮೆಯಾದದ್ದನ್ನು ಗಮನಿಸಿದ ಬಸವನಗೌಡ, ಚೆನ್ನಿಗೆ ಏನಾದರೊಂದು ಸಾಂತ್ವನ ಹೇಳಿ ಒಂದಿಷ್ಟು ಹಣಕೊಟ್ಟು ಕಳ್ಸಿದ್ರಾತು ಅಂತ ಕೋಣೆಯೊಳಗ ಬಂದ. ಅರೆಬರೆ ಕಣ್ ತೆರಕೊಂಡು, ನಾಲ್ಗೆ ಕಚ್ಕೊಂಡು ಅಂಗಾಂತ ಬಿದ್ದಿದ್ದ ಚೆನ್ನಿನ ಕಂಡು ಒಂದು ಕ್ಷಣ ದಂಗಾದ. ಅವ್ಳ ದೇಹ ಮುಟ್ಟೋಕೆ ದೈರ್ಯ ಸಾಲದೇ ಪೋರನನ್ನು ಕರೆದ. ಆ ಸ್ಥಿತಿಯನ್ನು ನೋಡಿದ ಪೋರನಿಗೂ ಹೆದ್ರಿಕಿಯಾಗಿ ಸಾವರಿಸಿಕೊಂಡು ದೇಹ ಮುಟ್ಟಿ ನೋಡಿದ. ಇಡೀ ಮೈಯೆಲ್ಲಾ ತಣ್ಣಗಾಗಿತ್ತು. ಭಯದಿಂದಲೇ ಬಸವನಗೌಡನನ್ನು ನೋಡಿದ. ಆ ನೋಟವನ್ನು ಎದುರಿಸಲಾರದ ಬಸವನಗೌಡ ಚಿಂತಾಕ್ರಾಂತನಾದ. ಮುಂದೆ ಬರಬಹುದಾದ ತೊಂದರೆಗಳ ಬಗ್ಗೆ ಯೋಚಿಸತೊಡಗಿದ. ತಟ್ಟನೇ ಹೊಳೆದ ಉಪಾಯದಂತೆ ಊರಿನಲ್ಲಿ ತನ್ನ ಮೇಲೆ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಹೆಣವನ್ನು ಸಾಗಹಾಕಿದರು.

ಕಳೆದೊಂದು ತಾಸಿನಿಂದ ಭೋರ್ಗರೆದು ಹರಿದ ಹಳ್ಳದ ರಭಸ ಕಡಿಮೆಯಾಗಿತ್ತು. ಬಸವನಗೌಡ ಮನದಲ್ಲಿನ ದುಗುಡ ದುಮ್ಮಾನಗಳನ್ನು ತೋರಿಸಿಕೊಳ್ಳದೆ ಬೈಕನ್ನೇರಿ ಊರ ಹಾದಿ ಹಿಡಿದ. ಮೋಡದ ಮರೆಯಿಂದ ಹೊರಬಂದ ಸೂರ್ಯ ಬಸವನಗೌಡನ ಮುಖದ ಮೇಲೆ ರಕ್ತದೋಕುಳಿಯಾಡಿದ.
ಸಮಯಕ್ಕೆ ಸರಿಯಾಗಿ ಸುರಿದ ಮಳೆ ಊರಿನಲ್ಲಿ ಹರ್ಷದ ಹೊನಲನ್ನು ಹರಿಸಿತ್ತು. ಇತ್ತ ಸೂರ್ಯ ಮುಳುಗಿ ಕತ್ತಲಾಗುವ ಹೊತ್ತಾದರೂ ಚೆನ್ನಿ ಮನೆಗೆ ಬಾರದಿದ್ದುದಕ್ಕೆ ಕರಿಯಪ್ಪ ದಿಗಿಲುಗೊಂಡ. ಹಳ್ಳ ತುಂಬಿ ಬಂದುದ್ದಕ್ಕೆ ತಡವಾಗಿರಬಹುದು ಎಂದುಕೊಂಡು ಹಳ್ಳದ ಕಡೆ ನಡೆದ. ಹಳ್ಳ ಹರಿಯುವುದು ನಿಂತು ಬಹಳ ಹೊತ್ತಾದದ್ದನ್ನು ಗಮನಿಸಿ ಗಲಿಬಲಿಗೊಂಡ. ಹೊಲದಲ್ಲೇನಾದರೂ ಇರಬಹುದೇನೋ ಎಂದುಕೊಂಡು ಹೊಲದ ಕಡೆ ಹೊರಟ. ಅಲ್ಲಿಯೂ ಚೆನ್ನಿ ಇಲ್ಲ. ಅಕ್ಕಪಕ್ಕದ ಎಲ್ಲಾ ಹೊಲಗಳಲ್ಲಿ ಹುಡುಕಿದ. ಕತ್ತಲಾದರೂ ಅವಳ ಸುಳಿವು ಸಿಗಲಿಲ್ಲ. ಕತ್ತಲಲ್ಲೇ ಚೆನ್ನಿಯನ್ನು ಕೂಗುತ್ತಾ ಊರ ಹಾದಿ ಹಿಡಿದ. ಊರಿನಲ್ಲಿ ತನ್ನ ಅಕ್ಕಪಕ್ಕದ ಹೊಲದವರನ್ನೆಲ್ಲ ವಿಚಾರಿಸಿದ. ಯಾವುದೇ ಸುಳಿವು ಸಿಗಲಿಲ್ಲ.
ರಾತ್ರಿ ಕಳೆದು ಬೆಳಗಾಗೋ ವೇಳೆಗೆ ಇಡೀ ಊರ ತುಂಬಾ ಹೊಲಕ್ಕೆ ಹೋದ ಚೆನ್ನಿ ಮನೆಗೆ ಬಾರದ ಸುದ್ದಿ ಹರಡಿತ್ತು. ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಗಾಬರಿ ದಿಗಿಲುಗಳಲ್ಲೇ ಒದ್ದಾಡಿ ಕೆಂಗಣ್ಣಿನಿಂದ ಎದ್ದ ಬಸವನಗೌಡನಿಗೆ ಮೈಯೆಲ್ಲಾ ಭಾರವಾದಂತಾಗಿತ್ತು. ಹೆಂಡತಿ ಚಹಾ ಲೋಟ ಕೈಗಿಡುತ್ತಾ ಹೊಲಕ್ಕೆ ಹೋದ ಚೆನ್ನಿ ಮನೆಗೆ ಬಾರದಿರುವ ಸುದ್ದಿ ಹೇಳಿದಳು. ಸುದ್ದಿ ಕೇಳಿದ ಬಸವನಗೌಡನ ಕೈಯೊಳಗಿನ ಲೋಟ ಕುಲುಕಾಡಿದುದನ್ನು ಯಾರೂ ಗಮನಿಸಲಿಲ್ಲ. ತಟ್ಟನೇ ಮನಸಿನಲ್ಲೊಂದು ಪ್ಲಾನ್ ಹೊಳೆಯಿತು. ತನ್ನ ಮೇಲಿನ ಅನುಮಾನ ನಿವಾರಿಸಿಕೊಳ್ಳೋಕೆ ಇದೇ ಒಳ್ಳೇ ಸಮಯ ಎಂದುಕೊಂಡು ತನ್ನ ಹೆಂಡತಿ ಮುಂದೆ ಸುಳ್ಳು ಕತೆ ಹೇಳಿದ. ಯಾರು! ಕರಿಯನ ಹೆಂಡ್ತಿ ಚೆನ್ನಿನಾ… ಅವ್ಳು ನಿನ್ನೆ ಮಳಿ ಬರೋ ವೊತ್ನ್ಯಾಗ ಅದ್ಯಾವನೋ ಗಂಡಸಿನ ಜೊತೆ ಪಕ್ಕದೂರಿನ ದಾರಿ ಹಿಡ್ದು ಹೋದ್ಹಾಂಗಾತು! ಎಂದ.
ಸುದ್ದಿ ಕಿವಿಯಿಂದ ಕಿವಿಗೆ, ಮನೆಯಿಂದ ಮನೆಗೆ ಹರದಾಡಿ ಇಡೀ ಊರಲೆಲ್ಲಾ ಗುಲ್ಲೆದಿತು. ಈ ಸುದ್ದಿ ಕರಿಯಪ್ಪನ ಕಿವಿಗೂ ಬೀಳದೇ ಇರಲಿಲ್ಲ. ತಾನು ಕುಡುಕನಾಗಿ ಮನೆಯ ಜವಾಬ್ದಾರಿ ಹೋರಲಾರದಕ್ಕೆ ಚೆನ್ನಿ ಬೇಸರಗೊಂಡು ಬೇರೆಯವನ ಜೊತೆ ಓಡಿ ಹೋದಳೇನೋ ಅಂದುಕೊಂಡು, ಹುಡುಕೋ ಧೈರ್ಯ, ತಾಕತ್ತು ಇಲ್ಲದೇ ತನ್ನ ಹೆಂಡ್ತಿ ವಿಚಾರನ ಮರೆಯೋಕೆ ಮನಸು ಮಾಡಿದ. ತಾನಿನ್ನು ಕುಡಿಯಬಾರದು, ಇದ್ದೊಬ್ಬ ಮಗನನ್ನು ಚೆನ್ನಾಗಿ ಜೋಪಾನ ಮಾಡಬೇಕು ಎಂದುಕೊಂಡು ಎಮ್ಮೆಗಳಿಂದ ಜೀವನ ಸಾಗಿಸೋ ನಿಧರ್ಾರ ಮಾಡಿದ.
ಹಿಂದಿನ ಸುರಿದ ಮಳೆ ಊರಿನಲ್ಲೆಲ್ಲಾ ಹಬ್ಬ ತಂದಿತ್ತು. ಎಲ್ಲರ ಮನೆಗಳಲ್ಲೂ ಸಡಗರ ಸಂಭ್ರಮ. ಭೂಮಿತಾಯಿಗೆ ಚರಗ ಚಲ್ಲುವ ಹಬ್ಬ. ಎಲ್ಲರ ಮನೆಯವರಂತೆ ಬಸವನಗೌಡನ ಮನೆಯವರೂ ಎತ್ತಿನ ಗಾಡಿ ಕಟ್ಟಿಕೊಂಡು ರೊಟ್ಟಿ ಬುತ್ತಿ ಗಂಟು ಕಟ್ಟಿಕೊಂಡು ಹಳ್ಳದ ತೋಟಕ್ಕೆ ಹೋದರು. ತೋಟದಲ್ಲಿನ ಬೆಳೆಗಳನ್ನು ನೋಡಿ ಖುಷಿಪಟ್ಟರು. ಊಟಕ್ಕೆ ಮೊದಲು ತೋಟದ ಬನ್ನಿಮಹಾಂಕಾಳಿಗೆ ಪೂಜೆ ಸಲ್ಲಿಸುವುದು ಅವರ ಸಂಪ್ರದಾಯ. ಎಲ್ಲರೂ ಬನ್ನಿಮರದತ್ತ ನಡೆದರು. ಆದರೆ ಮರದ ಬುಡದಲ್ಲಿದ್ದ ನಾಗಪ್ಪನ ಕಲ್ಲು ಮಾಯವಾಗಿತ್ತು. ಎಲ್ಲಿ ಹುಡುಕಿದರೂ ಅದರ ಸುಳಿವೇ ಸಿಗಲಿಲ್ಲ. ಕೊನೆಗೆ ಮಣ್ಣಿನಿಂದ ನಾಗಪ್ಪನನ್ನು ಮಾಡಿ ಪೂಜಿಸಿದರು. ನಾಗಪ್ಪನ ಕಲ್ಲು ಮಾಯವಾದ ಸುದ್ದಿ ಊರಿನಲ್ಲಿ ಚಚರ್ೆಗೆ ಗ್ರಾಸವಾಯಿತು.
ಇತ್ತ ಕರಿಯಪ್ಪ ಎಮ್ಮೆ ಸಾಕೋದನ್ನೇ ತನ್ನ ಕಾಯಕವನ್ನಾಗಿಸಿಕೊಂಡಿದ್ದ. ಪ್ರತಿದಿನ ಬೆಳಿಗ್ಗೆ ತನಗೆ ಹಾಗೂ ತನ್ನ ಮಗನಿಗೆ ಒಂದಿಷ್ಟು ಅಂಬಲಿಯನ್ನೋ ಮದ್ದೆಯನ್ನೋ ಮಾಡೋದು, ಇಬ್ಬರೂ ತಿನ್ನೋದು ಅದರಲ್ಲಿ ಒಂದಿಷ್ಟು ನಾಯಿಗೆ ಹಾಕೋದು. ಎಮ್ಮೆ ಹೊಡ್ಕೊಂಡು ಮೆಯಿಸೋಕೆ ಹೋಗೋದು. ಜೊತೆಗೆ ನಾಯಿಯೂ ಇರುತ್ತಿತ್ತು. ಅಂದು ತನ್ನ ಹೊಲದ ಹತ್ತಿರದ ಗೋಕಟ್ಟೆಯ ಬಳಿ ಎಮ್ಮೆ ಮೇಯಿಸುತ್ತಾ ಕುಳಿತಿದ್ದ. ಚೆನ್ನಿ ತನ್ನಿಂದ ದೂರವಾಗಿ ನಾಲ್ಕಾರು ತಿಂಗಳುಗಳು ಕಳೆದಿದ್ದವು. ಆದರೆ ಅವಳ ನೆನಪು ಸದಾ ಕಾಡುತಲಿತ್ತು.
ಎಮ್ಮೆಯೊಂದು ನೀರನ್ನರಸಿ ಜಾಲಿಗಿಡಗಳನ್ನು ದಾಟಿಕೊಂಡು ಗೋಕಟ್ಟೆಯ ಮೂಲೆಯಲ್ಲಿದ್ದ ನೀರಿನ ಕಡೆಗೆ ದೌಡಾಯಿಸಿತು. ಹಿಂದೆಯೇ ನಾಯಿಯೂ ಹೋಯಿತು. ಸ್ವಲ್ಪ ಸಮಯದ ಬಳಿಕ ತನ್ನ ನಾಯಿ ಊಳಿಡುವ ಶಬ್ದ ಕೇಳಿತು. ಏನೋ ಅನಾಹುತ ಸಂಭವಿಸಿದೆ ಎಂದು ಅತ್ತ ನಡೆದ. ಅಲ್ಲಿ ಅವನಿಗೊಂದು ಆಶ್ಚರ್ಯ ಕಾದಿತ್ತು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮಾನವ ದೇಹದ ಮೂಳೆಗಳನ್ನು ತನ್ನ ನಾಯಿ ಮೂಸಿ ನೋಡುತ್ತಿತ್ತು. ಎಮ್ಮೆಯೂ ಸಹ ಅಲ್ಲಿದ್ದ ಸೀರೆಯನ್ನು ಮೂಸುತ್ತಾ ನಿಂತಿತ್ತು. ಈ ದೃಶ್ಯ ನೋಡಿದ ಕರಿಯಪ್ಪನಿಗೆ ದಿಗ್ಬ್ರಮೆಯಾಯಿತು. ಹತ್ತಿರ ಹೋಗಿ ನೋಡಿದಾಗ ಕೆಸರಿನಲ್ಲಿ ಸಿಕ್ಕು ಭಾಗಶಃ ಕೊಳೆತ ಸೀರೆ ತನ್ನ ಚೆನ್ನಿಯದೇ ಎಂದು ಗುರುತಿಸಿದ. ಹಾಗಾದರೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೂಳೆಗಳು ತನ್ನ ಹೆಂಡತಿಯದೇ ಎಂದು ಚಕಿತನಾದ. ಅವಳ್ಯಾಕೆ ನೀರಿಗೆ ಬಿದ್ದಳು ಎಂಬುದು ಅಚ್ಚರಿಯಾಗಿತ್ತು. ಕೆಲ ಹೊತ್ತಿನ ತನಕ ಮೂಳೆಗಳನ್ನೇ ನೋಡುತ್ತಾ ನಿಂತ ಕರಿಯಪ್ಪ ಅಲ್ಲಿದ್ದ ಕಲ್ಲುಗಳನ್ನು ಗಮನಿಸಿದ. ಅಲ್ಲಿದ್ದ ಒಂದು ಕಲ್ಲಿನಲ್ಲಿ ನಾಗಪ್ಪನ ಚಿತ್ರವಿದ್ದು, ಬಸವನಗೌಡನ ತೋಟದ ಬನ್ನೀಮರದ ಬುಡದಲ್ಲಿದ್ದ ನಾಗಪ್ಪನ ಕಲ್ಲು ಮಾಯವಾದದ್ದು ನೆನಪಿಗೆ ಬಂತು. ಅವನಿಗೆ ಏನೋ ಎಡವಟ್ಟು ನೆಡೆದಿದೆ ಎಂದು ಅನಿಸಿತು.
ತಕ್ಷಣವೇ ತನ್ನ ಕೇರಿಗೆ ಬಂದು ಮುಖಂಡರಿಗೆ ವಿಷಯ ತಿಳಿಸಿದ. ಜನರೆಲ್ಲ ಅತ್ತ ನಡೆದರು. ಪೋಲಿಸಿನವರಿಗೂ ಸುದ್ದಿ ಮುಟ್ಟಿತು. ಪಂಚನಾಮೆ ಮಾಡಿದರು. ಅಲ್ಲಿದ್ದ ಬಟ್ಟೆ, ಮೂಳೆ ತುಂಡುಗಳು ಹಾಗೂ ನಾಗಪ್ಪನ ಕಲ್ಲನ್ನು ಪೋಲಿಸರು ತನಿಖೆಗೆಂದು ಒಯ್ದರು. ಮೂಳೆಗಳನ್ನು ಡಿ.ಎನ್.ಎ ಪರೀಕ್ಷೆಗೆ ಒಳಪಡಿಸಿದಾಗ ಅದು ಚೆನ್ನಿಯದೇ ಎಂದು ಖಾತರಿಯಾಯಿತು. ನಂತರ ಅಪರಾಧಿಗಳ ತನಿಖೆ ಪ್ರಾರಂಭವಾಯಿತು. ನಾಗಪ್ಪನ ಕಲ್ಲಿನ ಆಧಾರದ ಮೇಲೆ ಬಸವನಗೌಡನನ್ನು ವಿಚಾರಣೆಗೆಂದು ಕರೆದೊಯ್ಯಲಾಯಿತು. ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ವಿಚಾರಣೆಯಲ್ಲಿ ಬಸವನಗೌಡ ಸಿಕ್ಕುಹಾಕಿಕೊಂಡ. ಕೇಸು ಕೋಟರ್ಿನ ಮೆಟ್ಟಿಲೇರಿತು. ಸಾಕ್ಷಿಗಳೆಲ್ಲವೂ ಚೆನ್ನಿಯ ಪರವಾಗಿದ್ದವು. ಬಸವನಗೌಡನ ಹಣ, ಅಂತಸ್ತುಗಳು ಸಾಕ್ಷಿಗಳ ಮುಂದೆ ನಿಲ್ಲದಾದವು. ಬಸವನಗೌಡನಿಗೆ ಜೈಲು ಶಿಕ್ಷೆಯಾಯಿತು. ಚೆನ್ನಿ ಕಥೆಯಾದಳು.
ಆರ್.ಬಿ,ಗುರುಬಸವರಾಜ

June 15, 2015

ಭೀಮೇಶ್ವರ

  ಜೂನ್ 12, 2015 ರಂದು ಅವಧಿ ಬ್ಲಾಗ್ (http://avadhimag.com/2015/06/12/) ನಲ್ಲಿ ಪ್ರಕಟಗೊಂಡ ಲೇಖನ.

ವೇಸರ ಮತ್ತು ದ್ರಾವಿಡ ಶೈಲಿಗಳ ಸಮಾಗಮ ಭೀಮೇಶ್ವರ

June 12, 2015

ಸೌಂದರ್ಯ ವೈಭವದ ಭೀಮೇಶ್ವರ

ಆರ್ ಬಿ ಗುರುಬಸವರಾಜ್
ಪರ್ವತದ ತಪ್ಪಲಿನಿಂದ ಆವೃತ್ತವಾದ ವಿಶಾಲವಾದ ಕೆರೆ. ಕೆರೆಯ ಅಂಚಿನಲ್ಲಿ ವಿಶಾಲ ಪ್ರಾಂಗಣದಲ್ಲಿ ಕಣ್ಮನಗಳಿಗೆ ಹೃದ್ಯಂಗಮವಾಗಿ ಮುದ ನೀಡುವ ಶಿಲೆಯ ಬಲೆ. ಕಲಾಭಿಮಾನಿಗಳನ್ನು, ಕಲಾರಸಿಕರನ್ನು ಮೈಮರೆಸುವ ಸುಂದರ ತಾಣ. ಇದು ಯಾವುದೋ ಸಿನೆಮಾ ಚಿತ್ರೀಕರಣಕ್ಕಾಗಿ ಹಾಕಿದ ಸೆಟ್ ಅಲ್ಲ. ಈ ದೃಶ್ಯವನ್ನು ನಿಮ್ಮ ಕಣ್ಮನಗಳಿಗೆ ತುಂಬಿಕೊಳ್ಳಲು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದ ಭೀಮೇಶ್ವರ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಲೇ ಬೇಕು.
ಪ್ರಶಾಂತ ತಾಣ : ಹರಪನಹಳ್ಳಿಯ ನೈಋತ್ಯಕ್ಕೆ 12 ಕಿ.ಮೀ ದೂರದಲ್ಲಿ ನೀಲಗುಂದ ಗ್ರಾಮವಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಪರ್ವತದ ಸಾಲು ಇದೆ. ಪರ್ವತದ ಬಳಿಯೇ ವಿಶಾಲವಾದ ಕೆರೆ ಇದೆ. ಕೆರೆ ಏರಿ ಏರುತ್ತದ್ದಂತೆಯೇ ರಮಣೀಯವಾದ ಭೀಮೇಶ್ವರ ದೇವಸ್ಥಾನ ಗೋಚರಿಸುತ್ತದೆ. 11ನೇ ಶತಮಾನದ ಕೊನೆಯಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿಮರ್ಿತವಾದ ಭೀಮೇಶ್ವರ ದೇವಸ್ಥಾನವು ಪ್ರಚಾರ ಹಾಗೂ ಪ್ರವಾಸಿಗರ ಕೊರತೆಯಿಂದ ಪ್ರಶಾಂತವಾಗಿದೆ.

ಕಲೆಯ ಬಲೆ: ದೇವಸ್ಥಾನವು ತಲವಿನ್ಯಾಸದಲ್ಲಿ ಮೂರು ಗರ್ಭಗೃಹಗಳನ್ನು ಹೊಂದಿದ್ದು, ಅವು ಪಶ್ಚಿಮ, ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿವೆ. ಪ್ರತಿಯೊಂದೂ ಗರ್ಭಗೃಹವು ಮಧ್ಯದ ಸಭಾಮಂಟಪಕ್ಕೆ ತೆರೆದುಕೊಳ್ಳುತ್ತವೆ. ಸಭಾ ಮಂಟಪದ ಪೂರ್ವಕ್ಕೆ ಮುಖ ಮಂಟಪವಿದ್ದು ಎರಡೂ ಪಾಶ್ರ್ವಗಳಲ್ಲಿ ಸೋಪಾನಗಳಿವೆ. ಪೂರ್ವದ ಮುಖ ಮಂಟಪಕ್ಕೆ ಹೊಂದಿಕೊಂಡಂತೆ ಸೂರ್ಯನಿಗೆ ಪ್ರತ್ಯೇಕವಾದ ಗುಡಿಯಿದೆ.

ವೇಸರ ಮತ್ತು ದ್ರಾವಿಡ ಶೈಲಿಗಳ ಸಮಾಗಮ : ದೇವಸ್ಥಾನವು ವೇಸರ ಶೈಲಿಯಲ್ಲಿದೆ. ಪಶ್ಚಿಮದ ಗರ್ಭಗೃಹದ ಮೇಲೆ ವೇಸರ ಶೈಲಿಯ ತ್ರಿಕಳ ವಿಮಾನವಿದ್ದು, ಅದರಲ್ಲಿನ ಕಲೆಯು ವರ್ಣನಾತೀತವಾಗಿದೆ. ಗರ್ಭಗುಡಿಯ ಅಂತರಾಳ ಹಾಗೂ ಸ್ತಂಭಗಳಲ್ಲಿನ ಕೆತ್ತನೆಯು ಶಿಲ್ಪಿಯ ಕೈಚಳಕಕ್ಕೆ ಸಾಕ್ಷಿಯಾಗಿವೆ. ದೇವಸ್ಥಾನದ ಒಳಾಂಗಣದಲ್ಲಿ ಶಿವ, ನಟರಾಜ, ಗಣೇಶ, ಮಹಿಷಾಸುರ, ಯಕ್ಷ ಹಾಗೂ ಸಪ್ತಮಾತೃಕೆಯರ ಮೂತರ್ಿಗಳು ದೇವಸ್ಥಾನದ ಅಂದವನ್ನು ಹೆಚ್ಚಿಸಿವೆ.
ದೇವಸ್ಥಾನದ ಹೊರಭಿತ್ತಿಯಲ್ಲಿನ ಕೆತ್ತನೆಯಂತೂ ಬೇಲೂರು ಹಳೇಬೀಡಿನ ಶಿಲ್ಪಕಲಾ ಸೊಬಗನ್ನು ನೆನಪಿಸುತ್ತವೆ. ಹೊರಭಿತ್ತಿಯ ಅಲ್ಲಲ್ಲಿ ಅರ್ದಸ್ತಂಭಗಳ ಕಿರುಗೋಪುರಗಳು ವೇಸರ ಮತ್ತು ದ್ರಾವಿಡ ಶೈಲಿಯ ಸಮಾಗಮದ ಪ್ರತೀಕವಾಗಿವೆ. ಕಿರುಗೋಪುರಗಳಲ್ಲಿನ ಕುಸುರಿ ಕೆತ್ತನೆಯು ನಾಜೂಕಿನಿಂದ ಕೂಡಿದ್ದು, ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿ ನೀಲಗುಂದದ ಐತಿಹಾಸಿಕತೆ ಸಾರುವ ಅನೇಕ ಶಿಲಾ ಶಾಸನಗಳಿದ್ದು, ಅವುಗಳನ್ನು ಸಂರಕ್ಷಿಸಿ ಇಡಲಾಗಿದೆ.

ನಿಸರ್ಗದ ಮಡಿಲು : ಈ ದೇವಸ್ಥಾನವು ಪ್ರಾಚ್ಯವಸ್ತು ಸಂರಕ್ಷಣಾ ಮತ್ತು ಸಂಶೋಧನಾ ಇಲಾಖೆಗೆ ಸೇರಿದಾಗಿನಿಂದ ದೇವಸ್ಥಾನ ಹಾಗೂ ಶಾಸನಗಳು ಸಂರಕ್ಷಿತವಾಗಿವೆ. ದೇವಸ್ಥಾನದ ಹೊರಾಂಗಣವು ಸುಂದರವಾದ ಪ್ರಕೃತಿ ಸೌಂದರ್ಯ ಹೊಂದಿದೆ. ದೇವಸ್ಥಾನದ ಮುಂಭಾಗದಲ್ಲಿನ ವಿಶಾಲವಾದ ಕೆರೆ, ಎಡಬಲಗಳಲ್ಲಿನ ಪರ್ವತಗಳ ಸಾಲು ನೋಡುಗರ ಕಣ್ಣಿಗೆ ರಸದೌತಣ ನೀಡುತ್ತವೆ. ಪ್ರಾಂಗಣದ ನೀಲಗಿರಿ ಮರದಲ್ಲಿನ ಬಾವಲಿಗಳೂ ಸಹ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ತೋರುತ್ತವೆ. ನಿಸರ್ಗದ ಮಡಿಲಲ್ಲಿ ಹುದುಗಿದ ಈ ದೇವಸ್ಥಾನದ ಒಡಲಿನಲ್ಲಿ ಒಂದು ದಿನ ಹಾಯಾಗಿ ಮೈಮರೆಯಬಹುದು.

June 4, 2015

ಅವನು ನನ್ನ ಕಣ್ಣು, ನಾನು ಅವನ ಕೈ

ಮೇ 2015ರ 'ಟೀಚರ್' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

                           ಅವನು ನನ್ನ ಕಣ್ಣು, ನಾನು ಅವನ ಕೈ

    ಅವರಿಬ್ಬರಿಗೂ ಸರ್ಕಾರಿ ಕೆಲಸಕ್ಕೆ ಸೇರಬೇಕೆಂಬ ಬಯಕೆ ಅದಮ್ಯವಾಗಿತ್ತು. ಆದರೆ ಅಂಗವೈಕಲ್ಯ ಅಡ್ಡ ಬಂತು. ಅವರ ದೈಹಿಕ ಅಸಮರ್ಥತೆಗೆ ಉದ್ಯೋಗ ಸಿಗಲಿಲ್ಲ. ಕೊನೆಗೆ ಕೂಲಿ ಕೆಲಸವೂ ಕೂಡಾ ಸಿಗಲಿಲ್ಲ. ಏಕೆಂದರೆ ಒಬ್ಬನಿಗೆ ಎರಡೂ ಕೈಗಳಿಲ್ಲ, ಇನ್ನೊಬ್ಬನಿಗೆ ಎರಡೂ ಕಣ್ಣುಗಳಿಲ್ಲ. ಆಗ ತಮ್ಮ ಭವಿಷ್ಯ ಕರಾಳ ಎನಿಸಿತು. ಆದರೂ ಬದುಕುವ ಹಾದಿ ಕುಡುಕಬೇಕಾಗಿತ್ತು. ಇಬ್ಬರೂ ತಮ್ಮ ಕೌಶಲ್ಯಗಳನ್ನು ಒಟ್ಟುಗೂಡಿಸಿ ವಿಶೇಷವಾದುದನ್ನು ಅಂದರೆ ಭವಿಷ್ಯಕ್ಕೆ ಉತ್ತಮವಾದುದನ್ನು ಸಾಧಿಸುವ ನಿರ್ಧಾರ ಮಾಡಿದರು. ಅದಕ್ಕಾಗಿ ಪ್ರತಿದಿನವೂ ಶ್ರಮವಹಿಸಿ ದುಡಿದರು. ಇಂದು ಅವರ ಶ್ರಮಕ್ಕೆ ಪ್ರತಿಫಲ ದೊರೆತಿದೆ. ಅವರ ಸಾಧನೆ ಕೇವಲ ಅವರ ಪ್ರಾಂತಕ್ಕಷ್ಟೇ ಅಲ್ಲ, ಇಡೀ ಪ್ರಪಂಚಕ್ಕೆ ಮಾದರಿಯಾದುದು.
    ವಿಚಿತ್ರವಾದರೂ ಸತ್ಯ : ಇದು ಯಾವುದೋ ಸಿನೆಮಾ ಕಥೆ ಎಂದುಕೊಂಡಿರಾ? ಇದು ಕಟ್ಟು ಕಥೆ ಅಲ್ಲ. ಬದುಕನ್ನು ಕಟ್ಟಿಕೊಳ್ಳಲು, ಆ ಬದುಕಿಗೆ ಆದಾಯದ ಮೂಲವನ್ನು ಹುಡುಕಿ ಹೊರಟವರ ವಾಸ್ತವ ಕಥೆ. ಈ ಸಾಧನೆ ಮಾಡಿದ ಮಹಾನ್ ಸಾಧಕರೆಂದರೆ ಚೀನಾದ ಜಿಯಾ ಹೈಕ್ಸಿಯಾ ಮತ್ತು ಜಿಯಾ ವ್ಯಾನ್ಗಿ. ಹೈಕ್ಸಿಯಾಗೆ ಎರಡೂ ಕಣ್ಣುಗಳಿಲ್ಲ, ವ್ಯಾನ್ಗಿಗೆ ಎರಡೂ ಕೈಗಳಿಲ್ಲ. 53 ವರ್ಷದ ಇವರೀರ್ವರೂ ಯಾವುದೇ ಸರಕಾರ ಸಂಘ-ಸಂಸ್ಥೆ ಅಥವಾ ತಂಡಗಳು ಮಾಡಲಾಗದ ಸಾಧನೆ ಮಾಡಿದ್ದಾರೆ. ಅದೂ ಕೇವಲ 10-12ವರ್ಷಗಳಲ್ಲಿ. ಅದೇನೆಂದರೆ ಉತ್ತರ ಚೀನಾದ ‘ಹೇಬೇ’ ಪ್ರಾಂತ್ಯದ “ಯೇಲಿ” ಎಂಬ ಹಳ್ಳಿಯಲ್ಲಿ 10000 ಮರಗಳನ್ನು ಬೆಳೆಸಿ ಯಶಸ್ವಿಯಾಗಿದ್ದಾರೆ. ಈ ಅದ್ಬುತ ಪ್ರಯತ್ನಕ್ಕಾಗಿ ಅವರಿಂದು ‘ಪರಿಸರ ಯೋಧ’ರಾಗಿ ಮತ್ತು ಇಡೀ ಜಗತ್ತಿನ ‘ಹೀರೋ’ಗಳಾಗಿ ಕಂಗೊಳಿಸುತ್ತಿದ್ದಾರೆ.
    ಬತ್ತದ ಆಸೆ : ಉದ್ಯೋಗ ದೊರೆಯುವುದು ದುರ್ಲಭವಾದಾಗ ಪ್ರತಿಯೊಬ್ಬರೂ ಹತಾಶರಾಗುವುದು ಸಹಜ. ತಮ್ಮ ಭವಿಷ್ಯ ಕರಾಳವಾದಂತೆ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಬಾರದು ಎಂದು ನಿರ್ಧರಿಸಿದ ಈ ಗೆಳೆಯರು 2001 ರಲ್ಲಿ ‘ಯೇಲಿ’ ಬಳಿಯ ನದಿತೀರದ 3 ಹೆಕ್ಟೇರ್ ಬಂಜರು ಭೂಮಿಯನ್ನು ಸ್ಥಳೀಯ ಸರಕಾರದಿಂದ ಗುತ್ತಿಗೆ ಪಡೆದು ಮರಗಿಡ ಬೆಳೆಸುವ ಪರಿಸರ ಯೋಧರಾಗಲು ಸಜ್ಜಾದರು. ಆದರೆ ಅವರು ಆಯ್ಕೆ ಮಾಡಿಕೊಂಡ ಹಾದಿ ಸುಗಮವಾಗಿರಲಿಲ್ಲ. ಏಕೆಂದರೆ ಒಬ್ಬನಿಗೆ ಎರಡೂ ಕೈಗಳಿಲ್ಲ, ಇನ್ನೊಬ್ಬನಿಗೆ ಎರಡೂ ಕಣ್ಣುಗಳಲ್ಲಿ ದೃಷ್ಟಿಯೇ ಇಲ್ಲ. ಆದರೂ ತಾವು ಯೋಜಿಸಿದ ಕೆಲಸದಲ್ಲಿ ಮುಂದುವರೆಯಲು ಕಾರ್ಯತತ್ಪರರಾದರು.
    ಸಾದನೆಯ ಹಾದಿ : ಇವರ ಸಾಧನೆಯ ಹಾದಿ ಕುತೂಹಲವಾದುದು. ಪ್ರತಿದಿನ ಬೆಳಿಗ್ಗೆ 7:00 ಗಂಟೆಗೆ ಇಬ್ಬರೂ ಮನೆಯಿಂದ ತಮ್ಮ ಕಾರ್ಯಕ್ಷೇತ್ರಕ್ಕೆ ಹೊರಡುತ್ತಿದ್ದರು. ವೇಗವಾಗಿ ಹರಿಯುವ ನದಿಯ ಉದ್ದಕ್ಕೂ ವ್ಯಾನ್ಗಿ ತನ್ನ ಕುರುಡು ಒಡನಾಡಿ ಹೈಕ್ಸಿಯಾನನ್ನು ಕರೆದೊಯ್ಯುತ್ತಿದ್ದ.
    ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಸಿಗಳನ್ನು ನೆಡಲು ನಿರ್ಧರಿಸಿದ್ದೇನೋ ಸರಿ. ಸಸಿಗಳನ್ನು ಖರೀದಿಸಲು ಹಣವೂ ಇರಲಿಲ್ಲ. ಆದರೆ ಸಾಧಿಸುವ ಛಲಕ್ಕೆ ಕೊರತೆ ಇರಲಿಲ್ಲ. ಮರಗಳಿಂದ ಟೊಂಗೆಗಳನ್ನು ಕತ್ತರಿಸಿ ಅವುಗಳಿಂದ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡರು. ಇದು ಸುಲಭದ ಕೆಲಸವಾಗಿರಲಿಲ್ಲ. ಯಾಕೆಂದರೆ ಅವರಿಬ್ಬರೂ ಅಂಗವಿಕಲರಾಗಿದ್ದರು. ಆದರೂ ದೃತಿಗೆಡದೇ ತಮ್ಮ ತಮ್ಮ ಕೌಶಲ್ಯಗಳನ್ನು ಒಟ್ಟುಗೂಡಿಸಿ ಕಾರ್ಯನಿರತರಾದರು.
    ಹೈಕ್ಸಿಯಾ ತನ್ನ ಒಡನಾಡಿ ವ್ಯಾನ್ಗಿಯ ಹೆಗಲೇರಿ ಅಲ್ಲಿಂದ ನಿಧಾನವಾಗಿ ಮರಗಳನ್ನು ಏರುತ್ತಿದ್ದ. ವ್ಯಾನ್ಗಿಯ ಮಾರ್ಗದರ್ಶನದಂತೆ ಮರದ ಗೆಲ್ಲುಗಳನ್ನು ಕತ್ತರಿಸುತ್ತಿದ್ದ. ನಂತರ ವ್ಯಾನ್ಗಿಯ ಮಾರ್ಗದರ್ಶನದಂತೆ ಗುಂಡಿ ಅಗೆದು ಸಸಿಗಳನ್ನು ನೆಡುತ್ತಿದ್ದ. ಇಬ್ಬರೂ ಜೊತೆಗೂಡಿ ನದಿನೀರನ್ನು ತರುತ್ತಿದ್ದರು ಮತ್ತು ಗಿಡಗಳಿಗೆ ನೀರು ಹಾಕುತ್ತಿದ್ದರು. ಪ್ರಾರಂಭದ ವರ್ಷ ಕೇವಲ ಗಿಡನೆಡುವ ಕಾರ್ಯದಲ್ಲೇ ಕಳೆಯಿತು. ನಂತರದ ವರ್ಷಗಳಲ್ಲಿ ಅವುಗಳ ಪಾಲನೆ ಪೋಷಣೆ ಮಾಡಿದರು. ಇದು ಸಂಪೂರ್ಣವಾಗಿ ನಿಧಾನವಾಗಿ ನಡೆಯುವ ಕೆಲಸವಾಗಿತ್ತು. ಇವರಿಬ್ಬರ ಬಗ್ಗೆ ಕೇಳುವುದು, ತಿಳಿಯುವುದು, ಓದುವುದು, ಬರೆಯುವುದು ತುಂಬಾ ಸುಲಭ. ಆದರೆ ಇವರು ಮಾಡಿದ ಕಾರ್ಯ ಸುಲಭಾವಾದುದು ಆಗಿರಲಿಲ್ಲ. ಏಕೆಂದರೆ ಇವರಲ್ಲಿ ಒಬ್ಬನಿಗೆ ಎರಡೂ ಕಣ್ಣುಗಳಿಲ್ಲ, ಇನ್ನೊಬ್ಬನಿಗೆ ಎರಡೂ ಕೈಗಳಿಲ್ಲ ಎಂಬುದನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಲೇಬೇಕು. ಇದನ್ನೇ ಜಿಯಾ ಹೈಕ್ಸಿಯಾ ಹೀಗೆ ಹೇಳುತ್ತಾನೆ. “ಅವನು ನನಗೆ ಕಣ್ಣುಗಳಾದ. ನಾನು ಅವನಿಗೆ ಕೈಗಳಾದೆ” ತುಂಬಾ ಅರ್ಥಗರ್ಭಿತವಾದ ಮಾತಲ್ಲವೇ? ಸಾಮಾನ್ಯ ಜನರು ತಮ್ಮ ಇಡೀ ಜೀವಮಾನದಲ್ಲಿ ಮಾಡಲಾಗದ ಸಾಧನೆಯನ್ನು ಇವರಿಬ್ಬರೂ ಕೇವಲ 10-12 ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಅದೂ ಪ್ರಸ್ತುತ ದಿನಗಳಿಗೆ ಪೂರಕವಾದ ಗಿಡಮರ ಬೆಳೆಸುವ ಕಾರ್ಯದಲ್ಲಿ.
    ಪರಿಸರಕ್ಕೆ ಜೈ! ರಕ್ಷಣೆಗೆ ಸೈ! : ಇವರಿಬ್ಬರ 10 ವರ್ಷಗಳ ಸತತ ಪರಿಶ್ರಮ ಇಂದು ಸಾರ್ಥಕವಾಗಿದೆ. ಆ ಪ್ರದೇಶ ಕೇವಲ ಮರಗಿಡಗಳಿಂದ ಕೂಡಿಲ್ಲ. ಅದೊಂದು ವನವಾಗಿ ಮಾರ್ಪಟ್ಟಿದೆ. ಫಲಭರಿತ ಹಣ್ಣು ಹಂಪಲಗಳ ತೋಟವಾಗಿದೆ. ಸಾವಿರಾರು ಪಕ್ಷಿಗಳ ಆಶ್ರಯತಾಣವಾಗಿದೆ. ಅಷ್ಟೇ ಅಲ್ಲ, ನದಿ ಪ್ರವಾಹದಿಂದ ಹಳ್ಳಿಯನ್ನು ರಕ್ಷಿಸುವ ರಕ್ಷಣಾ ಗೋಡೆಯಾಗಿದೆ ಎನ್ನುತ್ತಾರೆ ಅಲ್ಲಿನ ಸ್ಥಳಿಯರು. ಇವರ ಪ್ರಾರಂಭಿಕ ವರ್ಷಗಳ ಕೆಲಸ ನೋಡಿದ ಸ್ಥಳೀಯ ಸರಕಾರ ಇವರಿಂದ ಭೂಮಿ ಗುತ್ತಿಗೆಯ ಹಣ ಪಡೆಯದೇ ಸಹಾಯದ ಅಭಯ ನೀಡಿ ಗೌರವಿಸಿತ್ತು.
    ಒಂದು ಸಾದಾರಣ ಆದಾಯದ ಆಶಯದೊಂದಿಗೆ ಮೀಸಲಿಟ್ಟ ಅಂದಿನ ಕೆಲಸದ ದಿನಗಳು ಇಂದು ಬಹುದೊಡ್ಡ ಆದಾಯದ ಮೂಲಗಳಾಗಿವೆ. ಅದು ಕೇಲವ ದೇಶಕ್ಕಲ್ಲ. ಇಡೀ ಪ್ರಪಂಚಕ್ಕೆ ಮಾದರಿಯಾದ ಆದಾಯದ ಮೂಲ. ಬೆಲೆಕಟ್ಟಲು ಸಾಧ್ಯವಾಗದ ಪರಿಸರ ಪ್ರಜ್ಞೆಯ ಮೌಲ್ಯ. ಪ್ರಾಣಿ ಸಂಕುಲಗಳ ಉಸಿರಾಟಕ್ಕೆ ಬೇಕಾದ ಸ್ವಚ್ಚ ಹಾಗೂ ಶುದ್ದ ಗಾಳಿಯ ಮೌಲ್ಯಗಳಾಗಿವೆ. ಕಣ್ಣು ಕೈಗಳಿದ್ದೂ ಅಂಗವಿಕಲರಂತಾದ ನಮಗೆಲ್ಲಾ ಇವರಿಬ್ಬರ ಜೀವನ ಆದರ್ಶಪ್ರಾಯವಾದುದು. ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಲು ಇವರಿಂದ ಮತ್ತೆ ನಮಗೆ ಕಣ್ಣು ಕೈಗಳು ಬರಲಿ!. ಇಬ್ಬರಿಗೂ ನಮ್ಮ ಕೋಟಿ ಕೋಟಿ ನಮನಗಳು.
ಇಬ್ಬರೂ ಅಂಗವಿಕಲರಾದದ್ದು ಸೋಜಿಗ : 53 ವರ್ಷದ ಜಿಯಾ ವ್ಯಾನ್ಗಿ ಮೂರು ವರ್ಷದ ಬಾಲಕನಿದ್ದಾಗ ಆದ ಅಫಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ.  ಅದೇ ರೀತಿ 53 ವರ್ಷದ ಜಿಯಾ ಹೈಕ್ಸಿಯಾ ಜನ್ಮಜಾತ ದೃಷ್ಟಿದೋಷ ಹೊಂದಿದ್ದ. ಎಡಗಣ್ಣು ಸಂಪೂರ್ಣವಾಗಿ ದೃಷ್ಟಿಹೀನವಾಗಿತ್ತು. ಬಲಗಣ್ಣಿನ ಮಂದ ದೃಷ್ಟಿಯಿಂದಲೇ ಜೀವನ ಸಾಗಿತ್ತು. ಆದರೆ 2000ನೇ ಇಸ್ವಿಯಲ್ಲಿ ಬಲಗಣ್ಣಿನ ದೃಷ್ಟಿಯೂ ಸಹ ನಿಂತುಹೋಯಿತು. ಸಂಪೂರ್ಣ ಅಂಧತ್ವ ಆವರಿಸಿತು. ಇಬ್ಬರೂ ವಿಕಲಾಂಗತೆಯ ದುರದೃಷ್ಟತೆಯಿಂದ ಸುರಕ್ಷಿತ ಉದ್ಯೋಗದಿಂದ ವಂಚಿತರಾದರು. ಆ ದುರದೃಷ್ಟವನ್ನೇ ಅದೃಷ್ಟವನ್ನಾಗಿಸಿಕೊಂಡರು.


                                                                                                            ಆರ್.ಬಿ.ಗುರುಬಸವರಾಜ

ಕರಿಯರ್ ನೆಟ್‍ವರ್ಕ್

ದಿನಾಂಕ 03-06-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.






                 ನೆಟ್ಟಗಿರಲಿ ಕರಿಯರ್ ನೆಟ್‍ವರ್ಕ್

    ವೃತ್ತಿಪರ ಕೋರ್ಸ ಮುಗಿಸಿಕೊಂಡು ಹೊರಬರುತ್ತಿರುವ ಶೃತಿಗೆ ದೊಡ್ಡದೊಂದು ಚಿಂತೆ ಶುರುವಾಗಿದೆ. ಅದು ರಿಸಲ್ಟ್ ಚಿಂತೆ ಅಲ್ಲ, ಲವ್ ಚಿಂತೆಯೂ ಅಲ್ಲ. ಬದಲಿಗೆ ಕರಿಯರ್ ಚಿಂತೆ. ಕೆಲಸ ಎಲ್ಲಿ ಹುಡುಕಬೇಕು? ಹೇಗೆ ಹುಡುಕಬೇಕು? ಅಲ್ಲಿನ ವಾತಾವರಣ ಹೇಗಿರುತ್ತದೆ? ಸಹುದ್ಯೋಗಿಗಳ ವರ್ತನೆ ಹೇಗಿರುತ್ತದೆ? ಎಂಬ ವೃತ್ತಿ ಚಿಂತೆ ಶುರುವಾಗಿದೆ. ಈಗ ಅವಳಿಗೆ ಮುಂದಿನ ದಾರಿ ಏನು? ಮಾರ್ಗಸೂಚಕರು ಯಾರು?
    ಆರೀಫನದು ಇದಕ್ಕೆ ಭಿನ್ನವಾದ ಚಿಂತೆ. ಆರೀಫ್ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಕಳೆದ ನಾಲ್ಕಾರು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಬಡ್ತಿ ಅಥವಾ ಉನ್ನತ ಹಂತಕ್ಕೆ ಏರಲು ನಿರೀಕ್ಷಿಸುತ್ತಿದ್ದಾನೆ. ಸದ್ಯಕ್ಕಂತೂ ಅದೇ ಕಂಪನಿಯಲ್ಲಿ ಅವನ ನಿರೀಕ್ಷೆಗೆ ಯಾವುದೇ ಭರವಸೆ ದೊರೆಯುತ್ತಿಲ್ಲ. ಅದಕ್ಕಾಗಿ ಅವನು ಬೇರೆ ಕಂಪನಿ ಸೇರಲು ನಿರ್ಧರಿಸಿದ್ದಾನೆ. ನಿಜವಾಗಿಯೂ ಈಗ ಅವನಿಗೆ ಸಲಹೆಗಾರರ ಅಥವಾ ಆಪ್ತಸಮಾಲೋಚಕರ ಅವಶ್ಯಕತೆ ಇದೆ. ಅವನು ವೃತ್ತಿಯಲ್ಲಿ ಮುಂದುವರೆಯಲು ಸಲಹೆ ನೀಡಲು ಯಾರಾದರೂ ಇರುವರೇ?
    ಇಂತಹ ಪ್ರಶ್ನೆಗಳು ಅಥವಾ ಘಟನೆಗಳು ನಿಮ್ಮ ವಲಯದಲ್ಲಿ ಕಂಡು ಬಂದಿವೆಯೇ? ಇಂತಹವರಿಗೆ ನಿಮ್ಮಲ್ಲಿ ಏನಾದರೂ ಮಾರ್ಗದರ್ಶನ ಇದೆಯೇ? ಇದ್ದರೆ ಇಂತಹವರಿಗೆ ನೀವೂ ಸಹಾಯ ಮಾಡಬಹುದು ಅಥವಾ ನಿಮ್ಮಲ್ಲಿ ಇಂತಹ ಸಂದೇಹಗಳಿದ್ದರೆ ನೀವೂ ಸಲಹೆ ಪಡೆಯಬಹುದು. ಅದು ಹೇಗೆ ಅಂತೀರಾ? ತೀರಾ ಸಿಂಪಲ್. ಕರಿಯರ್ ನೆಟ್‍ವರ್ಕ್‍ನ ಸದಸ್ಯರಾಗುವುದು.

ಏನಿದು ಕರಿಯರ್ ನೆಟ್‍ವರ್ಕ್?
    ಕರಿಯರ್ ನೆಟ್‍ವರ್ಕ್ ಎಂಬುದು ವೃತ್ತಿ ನಿರತರೊಂದಿಗೆ ಸಂಪರ್ಕ ಹೊಂದುವುದು. ಅವರು ಕ್ಲಾಸ್‍ಮೇಟ್‍ಗಳು, ಸ್ನೇಹಿತರು, ಆಪ್ತಬಂಧುಗಳು, ಸಹುದ್ಯೋಗಿಗಳು ಅಥವಾ ಇತರೇ ಉದ್ಯೋಗಿಗಳಾಗಿರಬಹುದು. ಇಂತಹವರೊಂದಿಗೆ ಸಂಪರ್ಕ ಹೊಂದುವ ಮೂಲಕ ವೃತ್ತಿಗೆ ಬೇಕಾದ ಮಾಹಿತಿ ಪಡೆಯುವುದೇ ಕರಿಯರ್ ನೆಟ್‍ವರ್ಕ್.
    ಈ ನೆಟ್‍ವರ್ಕ್ ಮುಖಾಮುಖಿ ಆಗಿರಬಹುದು ಅಥವಾ ಇತರೆ ಸಂಪರ್ಕ  ಜಾಲಗಳಾದ ಫೇಸ್‍ಬುಕ್, ವಾಟ್ಸಪ್, ಇಮೇಲ್, ಲಿಂಕ್ಡ್‍ಇನ್, ಹೈಕ್, ಇತ್ಯಾದಿಗಳ ಮೂಲಕ ಸಂಪರ್ಕ ಸಾಧಿಸಿ, ವೃತ್ತಿಗೆ ಪೂರಕವಾದ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುವುದೇ ಕರಿಯರ್ ನೆಟ್‍ವರ್ಕ್.
    ಕರಿಯರ್ ನೆಟ್‍ವರ್ಕ್ ಎಂಬುದು ಯೋಜಿತವಾಗಿ ನಡೆಯುತ್ತಿರುವ ಪ್ರಯತ್ನಗಳ ಸಮೂಹ. ನಿಮ್ಮ ವೃತ್ತಿಯ ಉದ್ದೇಶಗಳನ್ನು ಈಡೇರಿಸಲು ಬೇಕಾದ ಕಾರ್ಯನೀತಿಯನ್ನು ಅಭಿವೃದ್ದಿಪಡಿಸಲು ಹಾಗೂ ಮೌಲ್ಯಮಾಪನ ಮಾಡಿಕೊಳ್ಳಲು, ಅಗತ್ಯವಿದ್ದಲ್ಲಿ ಕಾರ್ಯನೀತಿಯಲ್ಲಿ ಬದಲಾವಣೆ ತರಲು ಈ  ನೆಟ್‍ವರ್ಕ್ ಸಹಾಯ ಮಾಡುತ್ತದೆ. ನಿಮ್ಮ ವೃತ್ತಿ ಜೀವನದುದ್ದಕ್ಕೂ ಹೊಸ ಅಂಶಗಳನ್ನು ಕಲಿಯಲು, ನಾವೀನ್ಯತೆ ಬೆಳೆಸಿಕೊಳ್ಳಲು ಒಟ್ಟಾರೆ ಉಜ್ವಲ ವೃತ್ತಿ ಜೀವನ ನಡೆಸಲು ಸಹಾಯ ಮಾಡುತ್ತದೆ.

ಯಾಕೆ ಕರಿಯರ್ ನೆಟ್‍ವರ್ಕ್?
    ನಿಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಗೆ ಅನುಗುಣವಾದ ಕನಸಿನ ಹುದ್ದೆ ಹುಡುಕಲು, ರೆಪ್ಯುಟೆಡ್ ಕಂಪನಿಗಳಲ್ಲಿ ಕೆಲಸಕ್ಕೆ ಸೇರಲು, ಇರುವ ವೃತ್ತಿಯಲ್ಲಿ ನಾವೀನ್ಯತೆ ಗಳಿಸಲು, ವೃತ್ತಿ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು, ವೃತ್ತಿ ಸೌಲಭ್ಯಗಳ ಬಗ್ಗೆ ತಿಳಿಯಲು ಕರಿಯರ್ ನೆಟ್‍ವರ್ಕ್ ಅವಶ್ಯಕ. ವೃತ್ತಿಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳಲು ಕರಿಯರ್ ನೆಟ್‍ವರ್ಕ್ ಒಂದು ಉತ್ತಮ ವೇದಿಕೆಯಾಗಿದೆ. ಶೇಕಡಾ 65-80 ರಷ್ಟು ರೆಪ್ಯುಟೆಡ್ ಕಂಪನಿಗಳ ಹುದ್ದೆಗಳು ಇಂತಹ ಕರಿಯರ್ ನೆಟ್‍ವರ್ಕ್ ಮೂಲಕವೇ ಭರ್ತಿಯಾಗುತ್ತವೆ. ಹಾಗಾಗಿ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ, ಉದ್ಯೋಗ ನಿರತರು ಕರಿಯರ್ ನೆಟ್‍ವರ್ಕ್‍ಗೆ ಸೇರುವ ಮೂಲಕ ಅವಕಾಶಗಳ ಜಾಲವನ್ನು ವಿಸ್ತರಿಸಬಹುದು.
    ಕರಿಯರ್ ನೆಟ್‍ವರ್ಕ್‍ನ ಸದಸ್ಯರಾಗುವ ಮೂಲಕ ವೃತ್ತಿಗೆ ಪೂರಕವಾದ ಮಾಹಿತಿ ಒದಗಿಸುವ ಹಾಗೂ ಭಾವನಾತ್ಮಕ ಬೆಂಬಲ ನೀಡುವ  ಜನರ ಸಮುದಾಯವನ್ನೇ ನಿರ್ಮಿಸಬಹುದು. ಜೊತೆಗೆ ಈ ನೆಟ್‍ವರ್ಕ್ ಮೂಲಕ ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ಕಂಡುಕೊಳ್ಳಬಹುದು.  ನೆಟ್‍ವರ್ಕ್‍ನ ಇತರೆ ಸದಸ್ಯರಿಗೆ ನೀವು ಮಾಹಿತಿ ನೀಡುವಂತಾದರೆ ನೀವೊಬ್ಬ ಉತ್ತಮ ಐಕಾನ್ ಆಗುವ ಮೂಲಕ ಉತ್ತಮ ನಾಯಕರಾಗಿ ಹೊರಹೊಮ್ಮಬಹುದು. ಇತರರ ಸಮಸ್ಯೆಗಳನ್ನು ಪರಿಹರಿಸಿದ ಸಂತೃಪ್ತ ಭಾವ ನಿಮ್ಮದಾಗುತ್ತದೆ.
    ಕರಿಯರ್ ನೆಟ್‍ವರ್ಕ್ ಒಂದು ಅಕಲ್ಪಿತ ಕಲ್ಪನೆ ಅಲ್ಲ. ವೃತ್ತಿ ಜೀವನ ಆರಂಭಿಸುವ  ಹಾಗೂ ವೃತ್ತಿಗೆ ಪೂರಕವಾದ ತಂತ್ರಗಾರಿಕೆ ತಿಳಿಯುವ ಸುಲಭ ಮಾರ್ಗ. ಉತ್ತಮ ವೃತ್ತಿ ಪರಿಣಿತರ ಸಂಕರ್ಪದಲ್ಲಿರಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆಟ್‍ವರ್ಕ್ ಸಹಕಾರಿ. ಕರಿಯರ್ ನೆಟ್‍ವರ್ಕ್ ವೃತ್ತಿಯ ನಿಜವಾದ ಪ್ರಾಮಾಣಿಕ ಆಪ್ತಮಿತ್ರನಿದ್ದಂತೆ.

 ನೆಟ್‍ವರ್ಕ್ ಸೇರುವ ದಾರಿ ಸಿಂಪಲ್
    ಕರಿಯರ್ ನೆಟ್‍ವರ್ಕ್‍ಗೆ ಸೇರಲು ಮುಖ್ಯವಾಗಿ ಎರಡು ಮಾರ್ಗಗಳಿವೆ. ಮೊದಲನೆಯದು ಹಾರ್ಡವೇರ್ ಮಾರ್ಗ, ಎರಡನೆಯದು ಸಾಫ್ಟ್‍ವೇರ್ ಮಾರ್ಗ. ಹಾರ್ಡ್‍ವೇರ್ ಮಾರ್ಗವೆಂದರೆ ಭೌತಿಕವಾಗಿ ವ್ಯಕ್ತಿಗಳನ್ನು ಮುಖತಃ ಭೇಟಿಯಾಗುದು. ಸಭೆ ಸಮಾರಂಭಗಳು, ಸಮಾವೇಶಗಳು, ಚರ್ಚಾಗೋಷ್ಟಿಗಳ ಮೂಲಕ ಅಥವಾ ವೈಯಕ್ತಿಕ ಭೇಟಿಯ ಮೂಲಕ ವ್ಯಕ್ತಿಗಳನ್ನು ನೇರವಾಗಿ ಭೇಟಿಯಾಗಿ ಮಾಹಿತಿ ಪಡೆಯುವುದು.
    ಸಾಫ್ಟ್‍ವೇರ್ ಮಾರ್ಗವೆಂದರೆ ಫೋನ್, ಇಮೇಲ್, ಫೇಸ್‍ಬುಕ್, ವಾಟ್ಸಪ್, ಲಿಂಕ್ಡ್‍ಇನ್‍ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು. ಇವೆರಡೂ ಮಾರ್ಗಗಳ ಮೂಲಕ ಹೊಸ ಹೊಸ ಜನರನ್ನು ಸಂಪರ್ಕಿಸಿ ವೃತ್ತಿ ಸಂವಾಧ ನಡೆಸಿ ಸಂದೇಹಗಳನ್ನು ಪರಿಹರಿಸಿಕೊಳ್ಳುವುದೇ ಕರಿಯರ್ ನೆಟ್‍ವರ್ಕ್‍ನ ಉದ್ದೇಶ.
   
ನೆಟ್‍ವರ್ಕ್ ಸೇರುವ ಮುನ್ನ,,,,
    ಗುರಿಯ ಸ್ಪಷ್ಟತೆ ಇರಲಿ: ನೀವು ಉತ್ತಮ ವೃತ್ತಿಗೆ ಸೇರಲು ಇಚ್ಚಿಸಿರುವಿರೋ? ವೃತ್ತಿ ಬದಲಾಯಿಸಲು ಬಯಸಿರುವಿರೋ? ವೃತ್ತಿ ಮಾರ್ಗದರ್ಶಕರನ್ನು ಹುಡುಕುತ್ತಿರುವಿರೋ? ಅಥವಾ ಸ್ವ-ಉದ್ಯೋಗಿಗಳನ್ನು ಭೇಟಿ ಮಾಡಲು ಬಯಸಿರುವಿರೋ? ನೀವು ಯಾರನ್ನು ಏಕೆ ಭೇಟಿಯಾಗಲು ಬಯಸಿರುವಿರಿ, ನಿಮ್ಮ ಗುರಿ ಏನು ಎಂಬ ಬಗ್ಗೆ ಸ್ಪಷ್ಟತೆ ಇರಲಿ.
    ಅಗತ್ಯತೆ ಮತ್ತು ಆಸಕ್ತಿಗಳನ್ನು ಗುರುತಿಸಿ: ವೃತ್ತಿಜಾಲ ಸೇರುವ ಮುನ್ನ ನಿಮ್ಮ ಬಗ್ಗೆ ನೀವೇ ತಿಳಿಯಿರಿ. ಅಂದರೆ ನಿಮ್ಮ ಆಸಕ್ತಿಗಳು, ವೃತ್ತಿಯ ಕನಸುಗಳು, ಇರಬಹುದಾದ ಅವಕಾಶಗಳು, ಮಿತಿಗಳು ಹಾಗೂ ನಿಮ್ಮನ್ನು ಪ್ರಭಾವಿತಗೊಳಿಸಿದ ಅಂಶಗಳು, ನಿಮ್ಮ ವ್ಯಕ್ತಿತ್ವ ಬಿಂಬಿಸುವ ಇನ್ನಿತರೇ ಅಂಶಗಳನ್ನು ಗಮನಿಸಿ ಪಟ್ಟಿ ಮಾಡಿಕೊಳ್ಳಿ.
    ನೆಟ್‍ವರ್ಕನ ಮಾಹಿತಿ ತಿಳಿಯಿರಿ: ನೀವು ಸೇರಬಯಸುವ ನೆಟ್‍ವರ್ಕ್ ಔಪಚಾರಿಕವೋ? ಅನೌಪಚಾರಿಕವೋ? ಅದರ ಗುರಿ-ಉದ್ದೇಶಗಳೇನು? ಕಾರ್ಯನೀತಿ ಏನು? ಸಂಪನ್ಮೂಲಗಳು, ಮಾರ್ಗದರ್ಶಕರು, ಆಕರ ಗ್ರಂಥಗಳು, ಸದಸ್ಯರು ಇತ್ಯಾದಿ ಮಾಹಿತಿಯನ್ನು ತಿಳಿಯಿರಿ. ನಂತರ ಈ ನೆಟ್‍ವರ್ಕ್ ನಿಮ್ಮ ವೃತ್ತಿಗೆ ಪೂರಕವಾದ ಮಾಹಿತಿ ಒದಗಿಸಬಲ್ಲದೇ, ಇಲ್ಲವೇ ಎಂಬುದನ್ನು ನಿರ್ಧರಿಸಿ.

ವೃತ್ತಿ ನೆಟ್ಟಗಿರಲು,,,,
    ವೃತ್ತಿ ಜೀವನ ಸರಿಯಾದ ದಿಕ್ಕಿನಲ್ಲಿ ಸಾಗಲು ನೆಟ್‍ವರ್ಕ್ ಸೇರುವುದೊಂದೇ ಸುಲಭ ಮಾರ್ಗ. ಈ ನೆಟ್‍ವರ್ಕ್ ಸೇರಿದ ನಂತರ ಸದಸ್ಯರೊಂದಿಗೆ ಚರ್ಚೆ, ಸಂವಾದ ನಡೆಸಿ. ಪ್ರಶ್ನಿಸುವ ಮೂಲಕ ಸಂದೇಹಗಳನ್ನು ಪರಿಹರಿಸಿಕೊಳ್ಳಿ. ಕೆಲವರು ಇತರರಿಗೆ ಸಹಾಯ/ಮಾರ್ಗದರ್ಶನ ಮಾಡಲು ಉತ್ಸುಕರಾಗಿರುತ್ತಾರೆ. ಅಂತಹವರ ಸಲಹೆ ಪಡೆಯಿರಿ. ನಿಮ್ಮಲ್ಲಿನ ಆಲೋಚನೆಗಳು, ಅನುಭವಗಳನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.
    ಕೆಲವು ವೃತ್ತಿಪರ ಜಾಲತಾಣಗಳು, ಬ್ಲಾಗ್ ಬರಹಗಳನ್ನು ಓದಿ. ನಿಮ್ಮ ಕಾಮೆಂಟ್ ತಿಳಿಸಿ. ಉತ್ತಮ ಎನಿಸಿದರೆ ಇತರರೊಂದಿಗೆ ಹಂಚಿಕೊಳ್ಳಿ. ನೆಟ್‍ವರ್ಕ್ ಸದಸ್ಯರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ. ವೃತ್ತಿಗೆ ಸಂಬಂಧಗಳು  ಬ್ರೆಡ್ಡಿನಂತೆ. ಅದರಲ್ಲಿನ ಪ್ರತಿ ಹೋಳನ್ನು ಇತರರೊಂದಿಗೆ ಹಂಚಿಕೊಂಡಾಗಲೇ ವೃತ್ತಿ ಜೀವನ ಉಜ್ವಲವಾಗಿರುತ್ತದೆ.
   
ನೆಟ್‍ವರ್ಕ್ ವಿಸ್ತರಿಸಿ:
    ನಿಮ್ಮ ಕರಿಯರ್ ನೆಟ್‍ವರ್ಕ್‍ನಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬುದು ಮುಖ್ಯವಲ್ಲ. ಎಂತಹ ಸದಸ್ಯರಿದ್ದಾರೆ ಎಂಬುದು ಮುಖ್ಯ. ಅಂದರೆ ಸಂಖ್ಯಾಬಲಕ್ಕಿಂತ ಗುಣಾತ್ಮಕ ಬಲ ಮುಖ್ಯ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನೆಟ್‍ವರ್ಕ್‍ನ್ನು ವಿಸ್ತರಿಸಿ.
1. ನಿಮ್ಮ ಆಪ್ತ ಸ್ನೇಹಿತರ/ವೃತ್ತಿ ನಿರತರ ನೆಟ್‍ವರ್ಕ್ ವಲಯದಲ್ಲಿ ಸೇರಿಕೊಳ್ಳಿ. ಫ್ರೆಂಡ್ ಆಫ್ ಫ್ರೆಂಡ್ ಆಗುವ ಮೂಲಕ ವೃತ್ತಿ ಜಾಲದ ಸದಸ್ಯರಾಗಿರಿ.
2. ವೃತ್ತಿ ಸಂಬಂಧಿತ ಸಂಘಟನೆಗಳಿಗೆ ಸೇರಿಕೊಳ್ಳಿ. ಆ ಮೂಲಕ ನಿಮ್ಮ ಆಸಕ್ತಿಗಳು, ವಿಚಾರಗಳು, ಗುರಿ ಉದ್ದೇಶಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಹಾಗೂ ಇತರರ ಸಲಹೆ ಸೂಚನೆಗಳನ್ನು ಅನುಸರಿಸಿ.
3. ವೃತ್ತಿ ಸಂಬಂಧಿತ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ. ಇದರಿಂದ ಪರಿಣಿತರ ಭೇಟಿಯ ಜೊತೆಗೆ ನಿಮ್ಮ ನೆಟ್‍ವರ್ಕ್ ವಿಸ್ತಾರವಾಗುತ್ತದೆ.
4. ಸಮಯ ದೊರೆತಾಗಲೆಲ್ಲ ನೆಟ್‍ವರ್ಕ್ ವಿಸ್ತರಿಸಲು ಇರುವ ಮಾರ್ಗಗಳ ಮೂಲಕ ಹೊಸ ಹೊಸ ಸದಸ್ಯರ ವಲಯ ಸೇರಿಕೊಳ್ಳಿ/ಸೇರಿಸಿಕೊಳ್ಳಿ. ಆ ಮೂಲಕ ನೆಟ್‍ವರ್ಕ್ ವಿಸ್ತರಿಸಲು ಸ್ವಯಂಸೇವಕರಾಗಿ ಕಾರ್ಯ ಪ್ರವೃತ್ತರಾಗಿ.
5. ಹೊಸ ಮತ್ತು ಬಲವಾದ ನೆಟ್‍ವರ್ಕ್ ಸಂಪರ್ಕಗಳನ್ನು ನಿರ್ಮಿಸಲು ಕಾಲೇಜು/ವಿಶ್ವ ವಿದ್ಯಾಲಯಗಳೊಂದಿಗೆ ಉತ್ತಮ ಭಾಂಧವ್ಯ ಬೆಳೆಸಿಕೊಳ್ಳಿ.
6. ಸೇರಿದ ನೆಟ್‍ವರ್ಕ್‍ನ ಸಕ್ರಿಯ ಕಾರ್ಯಕರ್ತರಾಗಿ. ನಿಮ್ಮ ಪ್ರಶ್ನೆಗಳನ್ನು, ಅನಿಸಿಕೆಗಳನ್ನು, ಸಲಹೆಗಳನ್ನು, ಮಾಹಿತಿಗಳನ್ನು, ಸಾಧನೆಗಳನ್ನು ನೆಟ್‍ವರ್ಕ್ ಮೂಲಕ ಇತರರೊಂದಿಗೆ ಹಂಚಿಕೊಳ್ಳಿ.
7. ನಿವೃತ್ತರು, ವೃತ್ತಿ ಪರಿಣಿತರು, ಮಾರ್ಗದರ್ಶಕರನ್ನು ಆಗಿದ್ದಾಂಗ್ಗೆ ಭೇಟಿ ಮಾಡಿ ಸಲಹೆ ಪಡೆಯಿರಿ.

ಕೊನೆಹನಿ :
    ನೆಟ್‍ವರ್ಕ್ ಎನ್ನುವುದು ಪರಸ್ಪರರ ಸಂಬಂಧವನ್ನು ಗಟ್ಟಿಗೊಳಿಸುವುದಾಗಿದೆ. ಇಂದು ನಿಮಗೆ ಸಲಹೆಯು ಅಗತ್ಯವಾಗಿರಬಹುದು, ನಾಳೆ ನೀವೇ ಸಲಹೆಗಾರರು ಆಗಬಹುದು. ಹಾಗಾಗಿ ನೆಟ್‍ವರ್ಕ್‍ನ ಸದಸ್ಯರ ಸಹಾಯ ಪಡೆಯಲು ಹಿಂಜರಿಯಬೇಡಿ. ನಿಮಗೆ ಬೇಕಾದ ವೃತ್ತಿ ಪಡೆಯಲು ಇತರರನ್ನು ಒತ್ತಾಯಿಸಬೇಡಿ. ಆದರೆ ಇರುವ ಸಾಧ್ಯತೆಗಳನ್ನು ಬಗ್ಗೆ ತಿಳಿಯಲು ಮರೆಯಬೇಡಿ.
    ಹೊಸ ಸದಸ್ಯರನ್ನು ಭೇಟಿಯಾದಾಗ ನಿಮ್ಮ ಬಗ್ಗೆ ಎಲ್ಲವನ್ನೂ ನೀವೇ ಹೇಳಬೇಡಿ. ಆ ವ್ಯಕ್ತಿಯ ವಿಚಾರಗಳು, ಅನುಭವಗಳನ್ನು ಸ್ಪಷ್ಟವಾಗಿ ಆಲಿಸಿ. ಅವರ ವ್ಯಕ್ತಿತ್ವ ತಿಳಿಯಲು ಪ್ರಯತ್ನಿಸಿ. ನಿಮ್ಮ ವೃತ್ತಿ ವಿಕಾಸದಲ್ಲಿ ಯಾರು ಪ್ರಮುಖ ಪಾತ್ರ ವಹಿಸುತ್ತಾರೆಂಬುದು ಗೊತ್ತಿಲ್ಲ. ಕರಿಯರ್ ನೆಟ್‍ವರ್ಕ್ ಸೇರುವ ಮೂಲಕ ಅವಕಾಶಗಳ ಬಾಗಿಲು ತೆರೆಯಿರಿ. ಅವಕಾಶಗಳು ಯಾರಿಂದಲಾದರೂ, ಯಾವಾಗಲಾದರೂ, ಹೇಗಾದರೂ ದೊರೆಯುಬಹುದಲ್ಲವೇ? ಅಥವಾ ಒಬ್ಬ ವ್ಯಕ್ತಿ ಇಡೀ ನಿಮ್ಮ ಜೀವನವನ್ನೇ ಬದಲಾಯಿಸಹುದು. ಆದ್ದರಿಂದ ಎಲ್ಲರೊಂದಿಗೂ ಬೆರೆತು ವೃತ್ತಿ ಜೀವನವನ್ನು ಎಂಜಾಯ್ ಮಾಡಿ.
                                                                                                                ಆರ್.ಬಿ.ಗುರುಬಸವರಾಜ.