May 27, 2015

ಇಲೆಕ್ಟ್ರಾನಿಕ್ ಕೀಟಗಳು

  ದಿನಾಂಕ 27-05-2015 ರ ವಿಜಯವಾಣಿಯಲ್ಲಿ ಪ್ರಕಟವಾದ 'ಇವು ಇಲೆಕ್ಟ್ರಾನಿಕ್ ಕೀಟಗಳು' ಎಂಬ ನನ್ನ ಕಿರುಬರಹ
 

                   ಇವು ಇಲೆಕ್ಟ್ರಾನಿಕ್ ಕೀಟಗಳು!

    ಬಹುತೇಕ  ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನಂತರ ಉದ್ಯೋಗ ಹುಡುಕಿಕೊಂಡು ಹಣ ಗಳಿಸುತ್ತಾರೆ. ಆದರೆ ವಿದ್ಯಾರ್ಥಿ ದೆಸೆಯಲ್ಲೇ ಹಣ ಗಳಿಸುವಂತಾದರೆ ಹೇಗೆ? ಪಾಲಕರಿಗೂ ಕೊಂಚ ಹೊರೆ ತಪ್ಪಿಸಬಹುದಲ್ಲವೇ? ಇಂತಹ ಒಂದು ಹುಚ್ಚು ಕ್ರಿಯಾಶೀಲತೆಗೆ ಸಾಕ್ಷಿಯಾದವಳು ಇಂಗ್ಲೆಂಡಿನ 23 ವಯಸ್ಸಿನ ಜ್ಯೂಲಿ ಅಲೈಸ್ ಚಾಪೆಲ್.
    ಇಂಗ್ಲೆಂಡಿನ ಪೋಟ್ರ್ಸಮೌತ್ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂ.ಎ(ಫೈನ್ ಆಟ್ರ್ಸ)ನಲ್ಲಿ ಅಭ್ಯಾಸ ಮಾಡುತ್ತಿರುವ ಚಾಪೆಲ್ ಆಧುನಿಕ ಯುಗದ ಘನತ್ಯಾಜ್ಯವಾದ ಇ-ತ್ಯಾಜ್ಯದಿಂದ ಆಕರ್ಷಕ ಕಲಾಕೃತಿಗಳನ್ನು ತಯಾರಿಸಿ ಹಣ ಗಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ.
    ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಮ್ಮ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿದೆ. ಆರ್ಥಿಕ ದುರಾಸೆಯಿಂದ ಬಳಸಿ ಬಿಸಾಡುವ ವಸ್ತುಗಳ ಉತ್ಪಾದನಾ ಪ್ರಮಾಣ ಅಧಿಕವಾಗುತ್ತಿದೆ. ಅದರಲ್ಲೂ ಎಲೆಕ್ಟ್ರಾನಿಕ್ ವಸ್ತುಗಳಿಂದಾದ ಇ-ಕಸ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಪರಿಸರ ಹಾಳಾಗುತ್ತಿದೆ. ಈ ಇ-ಕಸದಿಂದ ಆಕರ್ಷಕ ಕಲಾಕೃತಿಗಳನ್ನು ತಯಾರಿಸುತ್ತಿದ್ದಾಳೆ. ಚಿತ್ರಕಲಾ ಪದವೀಧರೆಯಾದ ಚಾಪೆಲ್ ತನ್ನ ಸೃಜನಾತ್ಮಕ ದೃಷ್ಠಿಕೋನದಿಂದ ಕಸವನ್ನು ರಸವನ್ನಾಗಿಸುತ್ತಿದ್ದಾಳೆ.
    ಕಂಪ್ಯೂಟರ್ ಹಾಗೂ ವೀಡಿಯೋ ಗೇಮ್‍ಗಳ ಬಳಸಿ ಬಿಸಾಡಿದ ವಿದ್ಯುನ್ಮಾನ ಮಂಡಲದ ಬೋರ್ಡಗಳನ್ನು, ಸೆಮಿ ಕಂಡಕ್ಟರ್‍ಗಳನ್ನು, ತಂತಿಗಳನ್ನು ಹಾಗೂ ಎಲ್.ಇ.ಡಿ ಬಲ್ಬ್‍ಗಳನ್ನು ಸೂಕ್ತ ರೀತಿಯಲ್ಲಿ ಸಂಯೋಜಿಸಿ ಆಕರ್ಷಕವಾದ ಹಾಗೂ ವರ್ಣಮಯವಾದ ಕೀಟಗಳು, ಚಿಟ್ಟೆಗಳು, ಜೀರುಂಡೆಗಳು, ಜೇಡಗಳು ಮುಂತಾದ ಚಿಕ್ಕ ಚಿಕ್ಕ ಜೀವಿಗಳ ಮಾದರಿಗಳನ್ನು ತಯಾರಿಸುತ್ತಾಳೆ.     ಮೂಲತಃ ಚಿತ್ರಕಲಾವಿದೆಯಾದ ಇವಳು ನೈಜ ಜೀವನದಲ್ಲಿನ ಚಿಕ್ಕ ಚಿಕ್ಕ ವಸ್ತುಗಳ ಮಾದರಿಗಳನ್ನು ರಚಿಸುವುದು ಹವ್ಯಾಸವಾಗಿದೆ. ಬಳಸಿ ಬಿಸಾಡಿದ ಇ-ತ್ಯಾಜ್ಯ ವಸ್ತುಗಳನ್ನು ಬಳಸಿ ದೃಶ್ಯಕಾವ್ಯದ ಮೆರಗು ನೀಡುತ್ತಾಳೆ.
    ಇ-ತ್ಯಾಜ್ಯದಿಂದ ಪರಿಸರಕ್ಕೆ ಆಗುವ ಅಪಾಯಗಳನ್ನು ಹೈಲೈಟ್ ಮಾಡುವ ಜೊತೆಗೆ ಜಾಣ್ಮೆ ಹಾಗೂ ಜ್ಞಾನದಿಂದ ಮರುಬಳಕೆಯ ವಸ್ತುಗಳನ್ನು ಸೃಷ್ಟಿಸಬಹುದು ಎಂಬುದು ಚಾಪೆಲ್‍ಳ ವಾದ. “ನೈಸರ್ಗಿಕ ವಿಶ್ವದ ಮೇಲೆ ಮಾನವನ ಕ್ರೌರ್ಯದಿಂದಾಗುವ ಶೋಷಣೆಯನ್ನು ತಪ್ಪಿಸಿ ಸುಂದರವಾದ ಮತ್ತು ಅಮೂಲ್ಯವಾದ ವಿಶ್ವವನ್ನು ಸೃಷ್ಟಿಸಲು ಪ್ರಯತ್ನಿಸುವುದು ನನ್ನ ಗುರಿ” ಎನ್ನುವ ಚಾಪೆಲ್‍ಳ ಕನಸಿನಲ್ಲಿ ಪರಿಸರ ಪ್ರಜ್ಞೆಯ ಕಾಳಜಿ ಇದೆ.
    ಇವಳ ಎಲ್ಲಾ ಕಲಾಕೃತಿಗಳಲ್ಲಿ ಗಣಿತೀಯ ಸೂತ್ರಗಳು, ಜ್ಯಾಮಿತಿಯ ಆಕೃತಿಗಳು ಜೀವ ತಳೆದು ಅವುಗಳ ಸುಸಂಘಟಿತ ರಚನೆಯನ್ನು ಪ್ರಾತಿನಿಧಿಸುತ್ತವೆ. ಹಾಗಾಗಿ ಇವಳ ಕಲಾಕೃತಿಗಳಲ್ಲಿ ಸಂಶೋಧನೆಯ ಹೊಳಹುಗಳನ್ನು ಕಾಣಬಹುದು.
    ಪೂರ್ಣಕಾಲಿಕ ಫ್ರೀಲ್ಯಾನ್ಸ್ ಚಿತ್ರಕಲಾವಿದೆಯಾದ ಇವಳು ನಿರಂತರವಾಗಿ ಕಲಾಕೃತಿಗಳನ್ನು ರಚಿಸಿ, ಚಿಕ್ಕ ಚಿಕ್ಕ ಗುಂಪುಗಳಲ್ಲಿ ಪ್ರದರ್ಶಿಸಿ ಮಾರಾಟ ಮಾಡುತ್ತಾಳೆ. ಇವಳ ಬಹುತೇಕ ಕಲಾಕೃತಿಗಳು ಅನೇಕ ಕಲಾವಿದರ ಹಾಗೂ ಕಲಾಸಕ್ತರ ಪ್ರಶಂಸೆಗೆ ಪಾತ್ರವಾಗಿವೆ. ಮುಂದೆ ಇ-ತ್ಯಾಜ್ಯ ಮರುಬಳಕೆಯ ವಸ್ತುಗಳ ತಯಾರಿಕಾ ತರಬೇತಿ ಶಾಲೆ ಪ್ರಾರಂಭಿಸುವ ಕನಸನ್ನು ಹೊಂದಿದ್ದಾಳೆ.
    ಜ್ಯೂಲಿ ಅಲೈಸ್ ಚಾಪೆಲ್‍ಳ ಪರಿಸರ ಪ್ರಜ್ಞೆ ನಮ್ಮೆಲ್ಲರಲ್ಲೂ ಬರಲಿ. ಅವಳಂತೆ ನಾವೂ ಕೂಡಾ ನಮ್ಮ ಜ್ಞಾನಕ್ಕೆ ತಂತ್ರಗಾರಿಕೆ ಬೆರೆಸಿ ನವೀನ ಅತ್ಯಾಕರ್ಷಕ ವಸ್ತುಗಳನ್ನು ಸೃಷ್ಟಿಸುವ ಮೂಲಕ ಹಣ ಗಳಿಕೆಯ ಹಾದಿ ಹುಡುಕೋಣ. ಜೊತೆಗೆ ಇ-ತ್ಯಾಜ್ಯ ಮುಕ್ತ ಪರಿಸರ ನಿರ್ಮಿಸಲು ಪ್ರಯತ್ನಿಸೋಣವೇ?
                                                                                                              ಆರ್.ಬಿ.ಗುರುಬಸವರಾಜ.ಹೊಳಗುಂದಿ
   

No comments:

Post a Comment