ದಿನಾಂಕ 06-09-2017 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ
ಅನೊರೆಕ್ಸಿಯಾ ನರ್ವೋಸಾ
ತೆಳ್ಳಗಿರಬೇಕೆಂಬ ಸಮಸ್ಯೆ
28 ವಯಸ್ಸಿನ ನಾಗವೇಣಿಗೆ ನಾಲ್ಕಾರು ವರ್ಷಗಳಿಂದ ವರಾನ್ವೇಷಣೆ ಪ್ರಾರಂಭವಾಗಿದೆ. ತೆಳ್ಳಗೆ ಬೆಳ್ಳಗೆ ಅಂದವಾಗಿಯೂ ಇದ್ದಾಳೆ. ಆದರೆ ಬಂದ ಗಂಡುಗಳೆಲ್ಲ ನಿರಾಕರಿಸುತ್ತಿವೆ. ಹಾಗಂತ ನಡತೆಯಲ್ಲಾಗಲೀ ಗುಣದಲ್ಲಾಗಲೀ ಯಾವುದೇ ದೋಷವಿಲ್ಲ. ಅಂತ್ರ, ತಂತ್ರ, ಮಂತ್ರ ಇವೆಲ್ಲವೂ ಮುಕ್ತಾಯಗೊಂಡಿದ್ದು ತಂದೆ-ತಾಯಿಗಳಿಗೆ ಇದೊಂದು ದೊಡ್ಡ ಚಿಂತೆ ಶುರುವಾಗಿದೆ. ತೆಳ್ಳಗಿನ ದೇಹವೇ ನಿರಾಕರಣೆಗೆ ಕಾರಣ ಎಂದು ಇತ್ತೀಚೆಗೆ ತಿಳಿದಿದೆ.
32 ವಯಸ್ಸಿನ ಸುಮನ್‍ರಾಜ್‍ಗೆ ಸಿನೆಮಾದಲ್ಲಿ ನಟಿಸುವಾಸೆ. ಶಾಲೆ-ಕಾಲೇಜಿನಲ್ಲಿರುವಾಗಲೇ ನಾಟಕಗಳಲ್ಲಿ ನಟಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾನೆ. ಕಳೆದ ಏಳೆಂಟು ವರ್ಷಗಳಿಂದ ವಿವಿಧ ಭಂಗಿಗಳ ಫೋಟೋ ಆಲ್ಬಂ ಕೈಯಲ್ಲಿ ಹಿಡಿದು ನಿರ್ದೇಶಕರ ಹಿಂದೆ ಅಲೆದಾಡುತ್ತಿದ್ದಾನೆ. ಆದರೆ ಯಾವೊಬ್ಬ ನಿರ್ದೇಶಕರು ಒಂದು ಸಣ್ಣ ಪಾತ್ರವನ್ನೂ ನೀಡುತ್ತಿಲ್ಲ. ಕಾರಣ ಇವನ ಸಣಕಲ ದೇಹ. ತೀರಾ ತೆಳ್ಳಗಿನ ಸಪೂರ ದೇಹವೇ ಅವನಿಗೆ ಮುಳುವಾಗಿದೆ. ಇದರಿಂದ ಇತ್ತೀಚೆಗೆ ಮಾನಸಿಕವಾಗಿ ಜರ್ಜರಿತನಾಗಿದ್ದಾನೆ.
ಇತ್ತೀಚಿನ ಯುವಪೀಳಿಗೆಯಲ್ಲಿ ತೆಳ್ಳಗಿನ ದೇಹ ಹೊಂದಬೇಕೆಂಬ ಟ್ರೆಂಡ್ ಶುರುವಾಗಿದೆ. ಹದಿವಯಸ್ಸಿನಲ್ಲೇ ಇಂತಹ ಖಯಾಲಿ ಪ್ರಾರಂಭವಾಗುತ್ತದೆ. ಇದೊಂದು ತೀರಾ ಗಂಭೀರ ಸಮಸ್ಯೆ ಎಂಬುದು ಯುವಮನಸ್ಸುಗಳು ಮತ್ತು ಪಾಲಕರಿಗೆ ತಿಳಿದಿಲ್ಲ. ಇದು ‘ಅನೊರೆಕ್ಸಿಯಾ ನರ್ವೋಸಾ’ ಎಂಬ ಸಮಸ್ಯೆ ಎಂಬುದೂ ಕೂಡಾ ಬಹುತೇಕರಿಗೆ ತಿಳಿದಲ್ಲ.
ಅನೊರೆಕ್ಸಿಯಾ ನರ್ವೋಸಾ ಎಂದರೆ ತಿನ್ನುವ ಸಮಸ್ಯೆ. ಈ ಸಮಸ್ಯೆಯಿರುವ ವ್ಯಕ್ತಿಯು ಅತೀ ಕಡಿಮೆ ದೇಹದ ತೂಕ ಹೊಂದಿದ್ದು, ತೂಕ ಹೆಚ್ಚಾಗುವ ಬಗ್ಗೆ ವಿಪರೀತ ಭಯ ಮತ್ತು ದೇಹ ಸೌಂದರ್ಯದ ಬಗ್ಗೆ ತಪ್ಪಾದ ಗ್ರಹಿಕೆಯನ್ನು ಹೊಂದಿರುತ್ತಾರೆ. ಇವರು ದೇಹದ ತೂಕವನ್ನು ಇಳಿಸಿಕೊಂಡು ತೆಳ್ಳಗೆ ಇದ್ದರೆ ಸುಂದರವಾಗಿ ಕಾಣುತ್ತೇವೆ ಎಂಬ ಅಂಧ ಆತ್ಮವಿಶ್ವಾಸ ಹೊಂದಿರುತ್ತಾರೆ. ಇದಕ್ಕಾಗಿ ತಮ್ಮ ಆಹಾರದ ಪ್ರಮಾಣವನ್ನು ಕಡಿಮೆ ಮಾಡಲು ಆರಂಭಿಸುತ್ತಾರೆ. ಇದನ್ನು ಸಾಧಿಸಲು ನಿಯಮಿತವಾಗಿ ಊಟವನ್ನು ತ್ಯಜಿಸಬಹುದು ಅಥವಾ ಕಾಲಕ್ರಮೇಣ ದಿನಗಟ್ಟಲೇ ಆಹಾರ ಸೇವಿಸುವುದನ್ನು ನಿಲ್ಲಿಸಬಹುದು. ತಿನ್ನುವಾಗಲೂ ಅತೀ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಹುದು ಮತ್ತು ಅದಕ್ಕೂ ಪಶ್ಚಾತ್ತಾಪ ಪಡಬಹುದು. ದಿನ ಕಳೆದಂತೆ ಈ ನಿಯಂತ್ರಿತ ನಡವಳಿಕೆ ಮತ್ತು ತೆಳ್ಳಗಿನ ದೇಹ ಅವರಿಗೆ ಗೀಳಾಗಿ ಪರಿಣಮಿಸುತ್ತದೆ. ಹಾಗಾಗಿ ಅವರ ದೇಹದ ತೂಕವು ಅವರ ವಯಸ್ಸು ಮತ್ತು ಎತ್ತರಕ್ಕೆ ಇರಬೇಕಾದ ಸಾಮಾನ್ಯ ತೂಕಕ್ಕಿಂತ ಕಡಿಮೆಯಾಗುತ್ತದೆ. ಇದಲ್ಲದೇ ತಮ್ಮ ದೇಹದ ಸೌಂದರ್ಯದ ಬಗ್ಗೆ ತಪ್ಪಾಗಿ ಪರಿಭಾವಿಸಿರುವುದರಿಂದ ಅತ್ಯಂತ ತೆಳ್ಳಗಿನ ದೇಹವನ್ನು ಹೊಂದಿದ್ದಾಗಲೂ ತಾವಿನ್ನೂ ದಪ್ಪಗಿದ್ದೇವೆ ಎಂದು ತಿಳಿದಿರುತ್ತಾರೆ.
ಬಹಳ ಜನ ತಿಳಿದಿರುವಂತೆ ಅನೊರೆಕ್ಸಿಯಾ ವ್ಯಕ್ತಿಯು ಆಯ್ದುಕೊಂಡ ಜೀವನ ಶೈಲಿಯ ವಿಧಾನವಲ್ಲ. ಬದಲಿಗೆ ಇದು ವ್ಯಕ್ತಿಯು ಭಾವನಾತ್ಮಕ ಒತ್ತಡದಿಂದ ಬಳಲಿದಾಗ, ತನ್ನ ಶರೀರದ ಬಗ್ಗೆ ಋಣಾತ್ಮಕ ಮತ್ತು ತಪ್ಪಾದ ಗ್ರಹಿಕೆ ಹೊಂದಿದಾಗ ಉಂಟಾಗುತ್ತದೆ. ಅವರು ತೂಕ ಹೆಚ್ಚುವ ಬಗ್ಗೆ ವಿಪರೀತವಾಗಿ ಭಯಭೀತರಾಗಿರುತ್ತಾರೆ. ಇದು ತೀವ್ರವಾದ ದೈಹಿಕ ಗುಣಲಕ್ಷಣಗಳನ್ನು ಹೊಂದಿರುವ ಗಂಭೀರ ಖಾಯಿಲೆಯಾಗಿದ್ದು ಈ ಬಗ್ಗೆ ಗಮನಹರಿಸಬೇಕಿದೆ.
ಅನೊರೆಕ್ಸಿಯಾದ ಲಕ್ಷಣಗಳು :
ಅನೊರೆಕ್ಸಿಯಾದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಂದ ತಮ್ಮ ನಡವಳಿಕೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಆದರೂ ಕೆಲವು ದೈಹಿಕ ಮತ್ತು ನಡವಳಿಕೆಯಲ್ಲಾಗುವ ಬದಲಾವಣೆಯಿಂದ ಈ ಸಮಸ್ಯೆಯನ್ನು ಪತ್ತೆಹಚ್ಚಬಹುದು.
ದೈಹಿಕ ಲಕ್ಷಣಗಳು:
• ದೇಹದ ತೂಕ ತೀವ್ರವಾಗಿ ಕಡಿಮೆಯಾಗುವುದು ಮತ್ತು ಅತ್ಯಂತ ತೆಳ್ಳಗಾಗುವುದು.
• ತಲೆ ತಿರುಗುವಂತಹ ಅನುಭವ ಮತ್ತು ಆಯಾಸವಾಗುವುದು.
• ಅತಿಯಾಗಿ ಚಳಿಯೆನಿಸುವುದು.
• ಕೂದಲು ತೆಳ್ಳಗಾಗುವುದು ಮತ್ತು ಉದುರುವಿಕೆ, ಚರ್ಮ ಅತಿಯಾಗಿ ಒಣಗುವುದು.
• ಋತುಚಕ್ರದಲ್ಲಿ ಏರುಪೇರು, ಕೆಲವೊಮ್ಮೆ ಋತುಚಕ್ರವೇ ನಿಂತುಹೋಗುವುದು.
ನಡುವಳಿಕೆಯಲ್ಲಾಗುವ ಬದಲಾವಣೆಗಳು:
• ತೂಕ ಹೆಚ್ಚುವುದು ಮತ್ತು ಆಹಾರದಲ್ಲಿನ ಕ್ಯಾಲೋರಿ ಮಟ್ಟದ ಕುರಿತು ಚಿಂತಿತರಾಗುವುದು.
• ಮತ್ತೆ ಮತ್ತೆ ತೂಕವನ್ನು ನೋಡಿಕೊಳ್ಳುವುದು ಮತ್ತು ದೇಹದ ಆಕೃತಿಯನ್ನು ಕನ್ನಡಿಯಲ್ಲಿ ಪರೀಕ್ಷಿಸಿಕೊಳ್ಳುವುದು.
• ಮನೆಯವರು ಮತ್ತು ಸ್ನೇಹಿತರೊಂದಿಗೆ ಊಟಮಾಡುವುದನ್ನು ತಪ್ಪಿಸಿಕೊಳ್ಳುವುದು, ತಮ್ಮ ಊಟವಾಗಿದೆ ಎಂದು ಅಥವಾ ಹಸಿವಿಲ್ಲವೆಂದು ಹೇಳುವುದು.
• ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯದಿರುವುದು ಮತ್ತು ಕಿರಿಕಿರಿಗೊಳ್ಳುವುದು.
• ಅತಿಯಾಗಿ ವ್ಯಾಯಾಮ ಮಾಡುವುದು ಮತ್ತು ತೂಕ ಕಳೆದುಕೊಳ್ಳಲು ಲ್ಯಾಕ್ಸೆಟಿವ್‍ಗಳನ್ನು ಬಳಸುವುದು.
ಅನೊರೆಕ್ಸಿಯಾಕ್ಕೆ ಕಾರಣಗಳು :
ಅನೊರೆಕ್ಸಿಯಾ ಏಕೆ ಉಂಟಾಗುತ್ತದೆ ಎಂಬುದಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಇದು ಮಾನಸಿಕ, ಜೈವಿಕ ಮತ್ತು ಪರಿಸರದ ಅಂಶಗಳಿಂದ ಉಂಟಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವ ವ್ಯಕ್ತಿ ತಮ್ಮ ಸಮಸ್ಯೆಯನ್ನು ನಿಭಾಯಿಸುವ ಹಂತದಲ್ಲಿ ಈ ಖಾಯಿಲೆಗೆ ಒಳಗಾಗಬಹುದು. ಆಹಾರಕ್ಕೆ ಸಂಬಂಧಿಸಿದಂತೆ ಕಂಪಲ್ಸಿವ್ ನಡವಳಿಕೆಯನ್ನು ಹೊಂದಿರುತ್ತಾರೆ. ಅಂದರೆ ಆಹಾರವನ್ನು ಪ್ರತಿ ಬಾರಿ ಅಳೆಯುವುದು, ಅವನ್ನು ಸಣ್ಣ ಭಾಗಗಳನ್ನಾಗಿ ಮಾಡುವುದು ಮುಂತಾದ ನಡವಳಿಕೆಯನ್ನು ಬೆಳೆಸಿಕೊಂಡಿರುತ್ತಾರೆ. ಕೆಲವು ವೇಳೆ ಪರಿಪೂರ್ಣತ್ವ ಅಥವಾ ಅತಿಯಾದ ಸೂಕ್ಷ್ಮ ಮನೋಭಾವವು ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು. ಕೆಲವು ಸಂಶೋಧನೆಗಳ ಪ್ರಕಾರ ಮೆದುಳಿನಲ್ಲಿನ ಸೆರೆಟೊನಿನ್ ಅಂಶದ ಮಟ್ಟವು ಈ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿದು ಬಂದಿದೆ.
ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಯಾರಾದರೂ ಅವರ ತೂಕದ ಬಗ್ಗೆ ಹೀಯಾಳಿಸಿದ್ದರೆ ತೆಳ್ಳಗಾಗುವ ಗೀಳನ್ನು ಬೆಳೆಸಿಕೊಂಡಿರಬಹುದು. ಹರೆಯದ ಹೆಣ್ಣುಮಕ್ಕಳಲ್ಲಿ ಸಹವರ್ತಿಗಳ ಒತ್ತಡ ಕೂಡ ಈ ಸಮಸ್ಯೆ ಉಂಟಾಗಲು ಕಾರಣವಾಗಬಹುದು. ಇದರಲ್ಲಿ ಮಾಧ್ಯಮ ಮತ್ತು ಸಮಾಜದ ಪಾತ್ರವೂ ಇಲ್ಲ ಎನ್ನುವಂತಿಲ್ಲ. ಸೌಂದರ್ಯ ಮತ್ತು ತೆಳ್ಳಗಿರುವುದು ಅನುರೂಪ ಪ್ರಕ್ರಿಯೆಗಳು ಎಂಬ ತಪ್ಪು ಗ್ರಹಿಕೆಯು ಕೆಲವೊಮ್ಮೆ ಇದಕ್ಕೆ ಪ್ರಭಾವ ಬೀರುತ್ತದೆ.
ಅನೊರೆಕ್ಸಿಯಾಕ್ಕೆ ಚಿಕಿತ್ಸೆ
ಅನೊರೆಕ್ಸಿಯಾವು ದೇಹ ಮತ್ತು ಮನಸ್ಸು ಎರಡನ್ನೂ ಬಾಧಿಸುವುದರಿಂದ ಹಲವು ರೀತಿಯ ಚಿಕಿತ್ಸೆಗಳ ಅಗತ್ಯವಿದೆ. ಅನೊರೆಕ್ಸಿಯಾದಿಂದ ಬಳಲುವ ವ್ಯಕ್ತಿಯು ಅತಿಯಾದ ಅಪೌಷ್ಠಿಕತೆಗೆ ಗುರಿಯಾಗಿದ್ದರೆ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಅವರ ದೇಹದ ತೂಕವು ಅತಿಯಾಗಿ ಕಡಿಮೆಯಾಗಿರದೇ ಮತ್ತು ವೈದ್ಯಕೀಯವಾಗಿ ಅಪಾಯದ ಸ್ಥಿತಿಯಲ್ಲಿಲ್ಲದಿದ್ದರೆ ಹೊರರೋಗಿಯಾಗಿ ಚಿಕಿತ್ಸೆಪಡೆಯಬಹುದು.
ಅನೊರೆಕ್ಸಿಯಾದ ಚಿಕಿತ್ಸೆಯು 3 ವಿಭಾಗಗಳನ್ನು ಹೊಂದಿದೆ.
• ಮೊದಲನೆಯದಾಗಿ ತಿನ್ನುವ ಸಮಸ್ಯೆಯ ಕಾರಣದಿಂದ ವ್ಯಕ್ತಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಉಂಟಾಗಿದ್ದರೆ ಅದಕ್ಕೆ ಚಿಕಿತ್ಸೆ ನೀಡಬೇಕು.
• ಅವರಿಗೆ ಪೌಷ್ಠಿಕಾಂಶಗಳ ಚಿಕಿತ್ಸೆಯನ್ನು ನೀಡಿ ಅವರು ಆರೋಗ್ಯವಂತ ತೂಕಕ್ಕೆ ಮರಳುವಂತೆ ಮಾಡಬೇಕು. ತೂಕವನ್ನು ನಿಭಾಯಿಸಲು ಪೌಷ್ಠಿಕಾಂಶಗಳ ಕುರಿತು ಮಾಹಿತಿ ನೀಡಬೇಕು.
• ತೂಕ ಹೆಚ್ಚಿಸುವುದರ ಬಗ್ಗೆ ಮತ್ತು ಅವರು ಹೊಂದಿರುವ ಭಯವನ್ನು ಹೋಗಲಾಡಿಸಲು ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಬೇಕು.
ತಜ್ಞ ವೈದ್ಯರುಗಳ ತಂಡವು ಸಕಾಲಿಕವಾಗಿ ಚಿಕಿತ್ಸೆಯನ್ನು ನೀಡುತ್ತದೆ. ಕೆಲವು ಸಂದರ್ಭದಲ್ಲಿ ಮನೆಯವರನ್ನು ಚಿಕಿತ್ಸಾ ಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತದೆ.
ಪಾಲಕರೇನು ಮಾಡಬಹುದು?
ನಿಮ್ಮಲ್ಲಿ ಯಾರಿಗಾದರೂ ಅನೊರೆಕ್ಸಿಯಾ ಕಂಡುಬಂದರೆ ಚಿಕಿತ್ಸೆ ಪಡೆಯಲು ಅವರನ್ನು ಒಪ್ಪಿಸಿ. ಈ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಬಗ್ಗೆ ರಕ್ಷಣಾತ್ಮಕವಾಗಿ ವರ್ತಿಸಬಹುದು ಅಥವಾ ಈ ತೊಂದರೆಯಿಲ್ಲ ಎಂದು ಹೇಳಬಹುದು. ಇಂತಹ ಸನ್ನಿವೇಶಗಳಲ್ಲಿ ಸಹನೆ ಮುಖ್ಯ. ಅವರಿಗೆ ತಿನ್ನಲು ಒತ್ತಾಯಿಸಬೇಡಿ. ನಿಮ್ಮ ಕಾಳಜಿಯನ್ನು ಪ್ರೀತಿಯಿಂದ ತಿಳಿಸಿ. ನೀವು ಅವರ ಜೊತೆ ಇರುವುದಾಗಿ ಭರವಸೆ ನೀಡಿ. ನಿಮ್ಮ ಮನೆಯಲ್ಲಿ ಯಾರಾದರೂ ಅನೊರೆಕ್ಸಿಯಾದಿಂದ ಬಳಲುತ್ತಿದ್ದರೆ, ಉಳಿದ ಸದಸ್ಯರು ಉತ್ತಮ ಪೌಷ್ಠಿಕ ಆಹಾರ ಸೇವಿಸುವಂತೆ ನೋಡಿಕೊಳ್ಳಿ. ಇದರಿಂದ ಸಮಸ್ಯೆಯಿರುವವರಿಗೆ ನೈಜ ಉದಾಹರಣೆ ದೊರೆಯುತ್ತದೆ.
ಅನೊರೆಕ್ಸಿಯಾವನ್ನು ನಿಭಾಯಿಸುವುದು
ಅನೊರೆಕ್ಸಿಯಾದ ಚಿಕಿತ್ಸೆಯು ಬಹಳ ಕಾಲದವರೆಗೆ ನಡೆಯುತ್ತದೆ. ಇದನ್ನು ಹೋಗಲಾಡಿಸಲು ಸರಿಯಾದ ಡಯಟ್ ಮತ್ತು ಪೌಷ್ಠಿಕತೆಯ ಪ್ಲ್ಯಾನ್ ಅಳವಡಿಸಿಕೊಳ್ಳಬೇಕು. ಚಿಕಿತ್ಸಾ ಸಂದರ್ಭದಲ್ಲಿ ಮನೆಯವರು ಮತ್ತು ಸ್ನೇಹಿತರಿಂದ ದೂರವಿರಬೇಡಿ. ನಿಮ್ಮ ಆರೋಗ್ಯದ ಕಾಳಜಿಯನ್ನು ಮಾಡುವವರ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ನಿಮಗೆ ಸಮಾಧಾನವಾಗುತ್ತದೆ. ಅನೊರೆಕ್ಸಿಯಾದ ಬಗ್ಗೆ ಓದಿ ತಿಳಿದುಕೊಳ್ಳಿ. ಇದರಿಂದ ತೂಕ ಹೆಚ್ಚಾಗುವ ಬಗ್ಗೆ ನಿಮಗಿರುವ ಭಯವು ಕೇವಲ ಒಂದು ಸಮಸ್ಯೆಯ ಲಕ್ಷಣವೆಂದು ತಿಳಿಯುತ್ತದೆ. ಆರೋಗ್ಯ ಹೆಚ್ಚಿಸಲು ಇರುವ ಸಪೋರ್ಟ್ ಗ್ರೂಪುಗಳನ್ನು ಸೇರುವುದರಿಂದ ನಿಮ್ಮ ಭಯ ಕಡಿಮೆಯಾಗುತ್ತದೆ. ನಿಮ್ಮ ಆತ್ಮೀಯರನ್ನು ನಂಬಿ ಮತ್ತು ಅವರೊಂದಿಗೆ ನಿಮ್ಮ ತೊಂದರೆಗಳನ್ನು ಹಂಚಿಕೊಳ್ಳಿ. ಇದು ನಿಮ್ಮ ಚಿಕಿತ್ಸೆಯ ಅವಧಿಯಲ್ಲಿ ಕಡಿಮೆ ಮಾಡಿ ಬೇಗನೇ ಫಲ ನೀಡುತ್ತದೆ.
ಆರ್.ಬಿ.ಗುರುಬಸವರಾಜ ಹೊಳಗುಂದಿ
No comments:
Post a Comment