December 18, 2017

ಮಾನಸಿಕ ಸಶಕ್ತತೆ Mental Strength

ದಿನಾಂಕ 13-12-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ. 

ಮಾನಸಿಕ ಸಶಕ್ತತೆ ಎಂಬ ಅಭಿವೃದ್ದಿಯ ಮೂಲ


           ಸಚಿನ್ ತೆಂಡೂಲ್ಕರ್ ಒಬ್ಬ  ಉತ್ತಮ ಕ್ರಿಕೆಟ್ ಆಟಗಾರನಾಗಿ ಹೇಗೆ ರೂಪುಗೊಂಡ? ಬರಾಕ್ ಒಬಾಮಾ ಅಮೇರಿಕಾದ ಪ್ರಸಿದ್ದ ಜನನಾಯಕ ಹೇಗಾದ? ಮಲಾಲ ಹೇಗೆ ಬಾಲಕಿಯರ ಶಿಕ್ಷಣದ ಹೋರಾಟಗಾರ್ತಿ ಎನಿಸಿಕೊಂಡಳು? ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿರುತ್ತವೆ. ಎಲ್ಲರಿಗೂ ಸಾಧ್ಯ ಆಗದಿರುವುದನ್ನು ಕೆಲವರು ಮಾತ್ರ ಹೇಗೆ ಸಾಧಿಸಿದರು? ಎಂಬುದು ಯಕ್ಷಪ್ರಶ್ನೆಯಾಗಿ ಕಾಡಬಹುದು. ಸಾಧಿಸಿದವರ ಕುರಿತು ಮಾತನಾಡುವಾಗ ಅವರ ಟ್ಯಾಲೆಂಟ್ ಉನ್ನತ ಮಟ್ಟದಲ್ಲಿದೆ ಎಂದು ಮಾತನಾಡುತ್ತೇವೆ. ಆದರೆ ನಮ್ಮ ಟ್ಯಾಲೆಂಟ್‍ಏನು? ಎಂದು ಯೋಚಿಸುವುದೇ ಇಲ್ಲ. ‘ಯಾರಿಗಿಂತ ನಾವೂ ಕಡಿಮೆಯೇನಲ್ಲ, ನಮಗೂ ಬುದ್ದಿ ಇದೆ’ ಎಂದು ಮುಂದೆ ಹೊರಟಾಗ ಮಾತ್ರ ನಾವೂ ಅವರಂತೆ ಸಾಧಿಸಲು ಸಾಧ್ಯವಾಗುತ್ತದೆ. ಒಂದು ಅಂದಾಜಿನಂತೆ ಬಹುತೇಕರು ತಮ್ಮ ಬುದ್ದಿಯ ಶೇಕಡಾ 30 ರಷ್ಟನ್ನು ಮಾತ್ರ ಬಳಸುತ್ತಾರಂತೆ. ಇದನ್ನು ದಾಟಿ ಮುಂದೆ ಹೋಗಲು ಪ್ರತಿಯೊಬ್ಬರೂ ಮಾನಸಿಕ ಶಕ್ತಿ ಅಥವಾ ಮಾನಸಿಕ ಬಲ ಬೆಳೆಸಿಕೊಳ್ಳಬೇಕಾದ ಅಗತ್ಯ ಇದೆ.  
ಮಾನಸಿಕ ಶಕ್ತಿಯು ಆಸಕ್ತಿದಾಯಕ ಪರಿಕಲ್ಪನೆಯಾಗಿದ್ದು, ಇದನ್ನು ಅರ್ಥೈಸಿಕೊಳ್ಳಲು ವಿಭಿನ್ನ ದೃಷ್ಟಿಕೋನದ ಅವಶ್ಯಕತೆ ಇದೆ. ಮಾನಸಿಕ ಶಕ್ತಿ ಎಂಬುದು ವ್ಯಕ್ತಿಯ ನಿರ್ಧಾರ ಮತ್ತು ಆಯ್ಕೆ ಮಾಡುವ ಸಾಮಥ್ರ್ಯವಾಗಿದೆ. ಇದು ಗುರಿ ಮತ್ತು ಕಾರ್ಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವ ಸಾಮಥ್ರ್ಯವೂ ಆಗಿದೆ. 
ಮಾನಸಿಕ ಶಕ್ತಿಯು ಶಿಸ್ತು ಮತ್ತು ಆಂತರಿಕ ಶಕ್ತಿಯ ಪ್ರಕಟಣಾ ರೂಪವಾಗಿದೆ. ವ್ಯಕ್ತಿ ತನಗಿರುವ ಸೌಲಭ್ಯಗಳನ್ನು ತೊರೆದು ಕಠಿಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಮಾತ್ರ ಇದು ಸಾಧಿತವಾಗುತ್ತದೆ. ಮಾನಸಿಕ ಶಕ್ತಿ ಪಡೆದವರಲ್ಲಿ ಸೋಮಾರಿತನ ಮತ್ತು ವಿಳಂಬ ಪ್ರವೃತ್ತಿ ಇರುವುದಿಲ್ಲ. ನಮ್ಮ ಸಾಮಥ್ರ್ಯ, ದೌರ್ಬಲ್ಯಗಳು, ಕೌಶಲ್ಯಗಳು, ಕೊರತೆಗಳ ಬಗ್ಗೆ ಅರಿವನ್ನುಂಟು ಮಾಡಲು ಮಾನಸಿಕ ಶಕ್ತಿಯು ಸಹಾಯ ಮಾಡುತ್ತದೆ. ಮಾಹಿತಿ ಅಥವಾ ಜ್ಞಾನದ ಅಗತ್ಯವಿರುವಾಗ ಇತರರ ಸಹಾಯ ಪಡೆಯಲು ಹೆದರಿಕೆ ಅಥವಾ ನಾಚಿಕೆ ಸ್ವಭಾವ ಇಲ್ಲದಿರುವುದೇ ಮಾನಸಿಕ ಶಕ್ತಿ ಆಗಿದೆ. 
          ಯಾವೊಬ್ಬ ಸಾಧಕನೂ ಮಾನಸಿಕ ಸದೃಢತೆಯನ್ನು ಪಡೆದುಕೊಂಡು ಹುಟ್ಟುವುದಿಲ್ಲ. ಬದಲಾಗಿ ಅವರು ಅನುಸರಿಸುವ ಚಟುವಟಿಕೆ ಮತ್ತು ಅವರ ಕಾರ್ಯವಿಧಾನ ಅವರನ್ನು ವಿಭಿನ್ನ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಅಂತಹ ಕೆಲ ಚಟುವಟಿಕೆಗಳನ್ನು ಅನುಸರಿಸಿದರೆ ನೀವೂ ಅವರನ್ನು ಮೀರಿ ಬೆಳೆಯಲು ಸಾಧ್ಯವಿದೆ. ಅದಕ್ಕೆ ನಿಮ್ಮ ಮಾನಸಿಕ ಶಕ್ತಿಯು ಬಲವಾಗಿರಬೇಕು.
ನಿಮ್ಮನ್ನು ನಂಬಿರಿ : ನೀವು ಈ ಹಿಂದೆ ಎಷ್ಟೇ ಬಾರಿ ವಿಫಲರಾಗಿದ್ದರೂ ನಿಮ್ಮ ಮಾನಸಿಕ ಶಕ್ತಿಯ ಮೇಲೆ ನಂಬಿಕೆ ಇರಲಿ. ಅನುಮಾನಗಳು, ಅಪನಂಬಿಕೆಗಳು ಮತ್ತು ನಕಾರಾತ್ಮಕತೆಗಳು ನಿಮ್ಮ ಯಶಸ್ಸಿಗೆ ಬ್ರೇಕ್‍ಗಳಿದ್ದಂತೆ. ಧನಾತ್ಮಕ ಆಲೋಚನೆಗಳಿಂದ ಮಾತ್ರ ನಿಮ್ಮಲ್ಲಿ ನಂಬಿಕೆ ಬೆಳೆಸಿಕೊಳ್ಳಲು ಸಾಧ್ಯ. 
ಅನಗತ್ಯ ವಿಚಾರ ಬೇಡ : ನಿರ್ಣಯ ಕೈಗೊಳ್ಳುವ ಸಂದರ್ಭ ಅಥವಾ ಸತ್ಯದ ಹುಡುಕಾಟದ ಸಮಯದಲ್ಲಿ ನಿಮ್ಮ ಸಾಮಾನ್ಯ ಜ್ಞಾನವನ್ನು ಬಳಸಿ ಮತ್ತು ನಿಮ್ಮ ಅಂತಃಪ್ರಜ್ಞೆಯನ್ನು ಕೇಳಿಕೊಳ್ಳಿ. ನಾವು ಪ್ರತಿದಿನ ತೆಗೆದುಕೊಳ್ಳುವ ಅನೇಕ ನಿರ್ಣಯಗಳು ಪ್ರಮುಖವಾಗಿರುವುದಿಲ್ಲ. ಇಂತಹ ಅನಗತ್ಯ ವಿಷಯಗಳ ಕುರಿತು ಧೀರ್ಘವಾದ ಆಲೋಚನೆ ಮಾಡುವುದ ಬೇಡ. ಇದು ಸಮಯ ಮತ್ತು ಶ್ರಮ ಎರಡನ್ನೂ ಹಾಳು ಮಾಡುತ್ತದೆ. ನಿಮ್ಮ ಜೀವನದಲ್ಲಿ ಮಹತ್ತರವಾದ ಪರಿಣಾಮ ಬೀರುವ ವಿಷಯದ ಬಗ್ಗೆ ಆಳವಾದ ವಿಚಾರ ಕೈಗೊಳ್ಳಿ. ಅದು ಸಣ್ಣ ವಿಷಯವಾದರೂ ಸರಿ. ಅದರ ಎಲ್ಲಾ ಆಯಾಮಗಳನ್ನು ಆಲೋಚಿಸಿ ನಿರ್ಧಾರ ಕೈಗೊಳ್ಳಿ.
ಕಿರಿಕಿರಿಗೆ ಹಿಂಜರಿಯದಿರಿ: ಕೆಲವೊಮ್ಮೆ ಕಿರಿಕಿರಿಯ ಮೂಲಕ ಯಶಸ್ಸನ್ನು ಕಾಣಬೇಕಾಗುತ್ತದೆ. ಕಿರಿಕಿರಿಗೆ ಹೆದರಿ ಸಾಧನೆಯಿಂದ ಹಿಂದೆ ಸರಿದರೆ ಏನನ್ನೂ ಸಾಧಿಸಲಾಗದು. ಅಭ್ಯಾಸ ಮಾಡುವಾಗ, ದೇಹದ ತೂಕ ಇಳಿಸಿಕೊಳ್ಳುವಾಗ, ಹೊಸ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವಾಗ, ವೃತ್ತಿಯಲ್ಲಿ ಪ್ರಗತಿ ಹೊಂದುವಾಗ, ಹೆಚ್ಚು ಹಣ ಗಳಿಸುವಾಗ ಕೆಲವೊಮ್ಮೆ ಕಿರಿಕಿರಿ ಅನುಭವಿಸುತ್ತೇವೆ. ಆದರೆ ನಾವು ಇಷ್ಟಪಡುವ ಕೆಲಸವನ್ನು ಪೂರೈಸಲು ಪ್ರಯತ್ನಿಸಬೇಕು. ಒಂದು ವೇಳೆ ನಾವು ಯಶಸ್ಸು ಗಳಿಸಲು ಇಚ್ಚಿಸಿದಲ್ಲಿ ಅದಕ್ಕೆ ಸೂಕ್ತ ಮೌಲ್ಯವನ್ನು ಪಾವತಿಸಬೇಕು. ಆ ಮೌಲ್ಯ ನಮಗೆ ಶಿಸ್ತು ಸಂಯಮ ಮತ್ತು ಸಮರ್ಥನೆಯನ್ನು ನೀಡುತ್ತದೆ. ಇದರಿಂದ ನಮ್ಮ ಮಾನಸಿಕ ಶಕ್ತಿ ಬಲಗೊಳ್ಳುತ್ತದೆ. 
ಗುರಿ ಮತ್ತು ಉದ್ದೇಶದ ಮೇಲೆ ನಿಗಾ ವಹಿಸಿ: ನೀವು ಏನನ್ನು ಸಾಧಿಸಲು ಇಚ್ಚಿಸಿರುವಿರೋ ಅದರ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಿ. ಗುರಿ ಚಿಕ್ಕದಿರಲಿ, ದೊಡ್ಡದಿರಲಿ. ಆದರೆ ಅದರ ಪರಿಣಾಮ ಮಾತ್ರ ಅಗಾಧವಾಗಿರುತ್ತದೆ. ಆದ್ದರಿಂದ ನಿಮ್ಮ ಗುರಿಯನ್ನು ಗಮನಿಸುವ ಮಾನಸಿಕ ಶಕ್ತಿ ಬೆಳೆಸಿಕೊಳ್ಳಿ. ಗುರಿ ಮತ್ತು ಉದ್ದೇಶಗಳನ್ನು ನಿರಂತರವಾಗಿ ಬದಲಾಯಿಸುವ ವ್ಯಕ್ತಿಯು ಮಾನಸಿಕ ಸಾಮಥ್ರ್ಯ ಮತ್ತು ಸಹಿಷ್ಣುತೆ ಹೊಂದಿರುವುದಿಲ್ಲ. ಹಾಗಾಗಿ ಯಾವುದನ್ನೂ ಸಾಧಿಸಲು ಆಗುವುದಿಲ್ಲ. 
ಸರಳ ಮತ್ತು ಅಲ್ಪಾವಧಿಯ ಗುರಿಗಳನ್ನು ಆಯ್ಕೆ ಮಾಡಿಕೊಳ್ಳಿ : ಸರಳ, ನೈಜ ಹಾಗೂ ಅಲ್ಪಾವಧಿಯ ಗುರಿಗಳನ್ನು ಸಾಧಿಸುವುದು ಕಷ್ಟವಲ್ಲ. ಇಂತಹ ಸರಳ ಗುರಿಗಳನ್ನು ಸಾಧಿಸಿದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಆಗ ನಿಮ್ಮ ನಂಬಿಕೆ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ. ಸಣ್ಣ ಗುರಿಗಳನ್ನು ಸಾಧಿಸಬಹುದೆಂದು ಸಾಬೀತು ಮಾಡಿದಾಗ ದೊಡ್ಡ ಗುರಿಗಳನ್ನು ಸುಲಭವಾಗಿ ಸಾಧಿಸಬಹುದು. 
ಶಿಸ್ತು ಮತ್ತು ಸ್ವ-ಇಚ್ಛೆಗಳನ್ನು ವ್ಯಾಯಾಮ ಮಾಡಿ: ಪ್ರತಿಯೊಬ್ಬರೂ ಅಗತ್ಯ ಸಂದರ್ಭದಲ್ಲಿ ಶಿಸ್ತು ಮತ್ತು ಸ್ವ-ಇಚ್ಛೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚು ಮಾನಸಿಕ ಶಕ್ತಿಯನ್ನು ಗಳಿಸಿದಲ್ಲಿ ಉತ್ತಮ ಶಿಸ್ತು ಮತ್ತು ಸಾಮಥ್ರ್ಯಗಳನ್ನು ಪ್ರದರ್ಶಿಸಬಹುದು. ಆದಕಾರಣ ದಿನಕ್ಕೆ ಒಮ್ಮೆಯಾದರೂ ಶಿಸ್ತು ಮತ್ತು ಸ್ವ-ಇಚ್ಛೆಗಳನ್ನು ಬಳಸುವ ಸಾಮಥ್ರ್ಯ ಹೊಂದಬೇಕು. ಇದಕ್ಕಾಗಿ ಪ್ರತಿದಿನ ಅನೇಕ ಅವಕಾಶಗಳು ಒದಗಿ ಬರುತ್ತವೆ. 
ಬದಲಾವಣೆಗೆ ಹೆದರಬೇಡಿ: ಮಾನಸಿಕ ಸಾಮಥ್ರ್ಯದ ಎರಡು ಪ್ರಮುಖ ಗುಣಲಕ್ಷಣಗಳೆಂದರೆ ಆತ್ಮವಿಶ್ವಾಸ ಮತ್ತು ಬದಲಾವಣೆಗೆ ಹೆದರದಿರುವುದು. ಬಹಳಷ್ಟು ಜನರು ತಮಗೆ ತಿಳಿದ ವಿಷಯಕ್ಕೆ ಮಾತ್ರ ಅಂಟಿಕೊಳ್ಳುತ್ತಾರೆ ಮತ್ತು ಬದಲಾವಣೆಗೆ ಹೆದರುತ್ತಾರೆ.  ಜೀವನದಲ್ಲಿ ಯಾವುದೇ ಅಂಶವನ್ನು ಸುಧಾರಿಸಬೇಕಾದರೆ ಮೊದಲು ಬದಲಾವಣೆಗೆ ಹೊಂದಿಕೊಳ್ಳುವುದನ್ನು ಕಲಿಯಬೇಕು. ನೀವು ಏನನ್ನು ಬದಲಾಯಿಸಬೇಕೆಂದು ಬಯಸಿದ್ದೀರೋ ಅದರ ಪ್ರಯೋಜನಗಳ ಬಗ್ಗೆ ಯೋಚಿಸಿ ಮತ್ತು ಬದಲಾವಣೆ ಮಾಡಿದರೆ ನಿಮ್ಮ ಜೀವನ ಹೇಗೆ ಕಾಣುತ್ತದೆ ಎಂಬುದನ್ನು ಊಹಿಸಿ. ಇದು ನಿಮಗೆ ಪ್ರೇರಣೆ ಮತ್ತು ಆತ್ಮವಿಶ್ವಾಸ ನೀಡುತ್ತದೆ. ನೀವು ಮಾಡುವ ಪ್ರತಿಯೊಂದು ಧನಾತ್ಮಕ ಬದಲಾವಣೆಯು ನಿಮ್ಮ ವಿಶ್ವಾಸಾರ್ಹತೆ, ಸ್ವಾಭಿಮಾನ ಮತ್ತು ಒಳಗಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ನಿಮ್ಮ ಮಾನಸಿಕ ಶಕ್ತಿಯು ಹೆಚ್ಚುತ್ತದೆ. ಬದಲಾವಣೆಗಳನ್ನು ಸ್ವಾಗತಿಸಿದಾಗ ಮತ್ತು ಅವುಗಳನ್ನು ಹೆದರಿಕೆ ಇಲ್ಲದೇ ಎದುರಿಸಿದಾಗ ನಿಮ್ಮ ಮಾನಸಿಕ ಶಕ್ತಿ ಸುಧಾರಿಸುತ್ತದೆ. 
ಹೀಗೆ ವಿವಿಧ ಕಾರ್ಯ ಚಟುವಟಿಕೆಗಳಿಂದ ನೀವು ಬಯಸಿದಂತೆ ನಿಮ್ಮ ಮಾನಸಿಕ ಶಕ್ತಿಯನ್ನು ಬೆಳೆಸಬಹುದು ಮತ್ತು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಮಾನಸಿಕ ಶಕ್ತಿ ಹೆಚ್ಚಿದಂತೆ ನಿಮ್ಮ ಸಹಿಷ್ಟುತೆ, ಗಮನ ಮತ್ತು ಆಂತರಿಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಮಾನಸಿಕ ಶಕ್ತಿಯನ್ನು ಗಳಿಸುವುದು ತುಂಬಾ ಕಷ್ಟಕರವೇನಲ್ಲ. ಪ್ರಯತ್ನಿಸಿ ನೋಡಿ. ಆನಂದ ಹೊಂದಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ


No comments:

Post a Comment