ದಿನಾಂಕ 03-02-2018ರ ವಿಜಯವಾಣಿಯಲ್ಲಿ ಪ್ರಕಟಬಾದ ನನ್ನ ಬರಹ
ಸರ್ಕಾರಿ ಶಾಲೆಯೂ ಸ್ಮಾರ್ಟ್
ಇತ್ತೀಚೆಗೆ ಸರ್ಕಾರಿ ಶಾಲೆಗಳೆಂದರೆ ಎಲ್ಲರಲ್ಲೂ ಒಂದು ರೀತಿಯ ಅಸಡ್ಡೆ. ಅಲ್ಲಿ ಸರಿಯಾಗಿ ಕಲಿಸುವುದಿಲ್ಲ, ಕಟ್ಟಡಗಳು ಆಕರ್ಷಕವಾಗಿರುವುದಿಲ್ಲ, ಕಂಪ್ಯೂಟರ್ ಬಳಕೆ ಇಲ್ಲ, ಆಟಕ್ಕೆ ಪರಿಕರಗಳಿಲ್ಲ, ವಿಜ್ಞಾನ ಪ್ರಯೋಗಾಲಯಗಳಿಲ್ಲ ಮುಂತಾದವುಗಳ ಕುರಿತು ದೂರುವವರೇ ಹೆಚ್ಚು. ಆದರೆ ಇದೆಲ್ಲಕ್ಕೆಕ್ಕೂ ಅಪವಾದವೆಂಬಂತೆ ಕೆಲ ಸರ್ಕಾರಿ ಶಾಲೆಗಳು ಖಾಸಗೀ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು.
ಈ ಶಾಲೆ ವಿಶೇಷತೆಗಳ ಗುಚ್ಛ: ಉತ್ಸಾಹಿ ಶಿಕ್ಷಕರ ಬಳಗ ಈ ಶಾಲೆಯ ಮೊದಲ ವಿಶೇಷತೆ. ದಾನಿಗಳ ನೆರವಿನಿಂದ ಸರಕಾರಿ ಶಾಲೆಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬುದಕ್ಕೆ ಮಾಲವಿ ಶಾಲೆ ಸಾಕ್ಷಿಯಾಗಿದೆ. ಅಬ್ದುಲ್ ಕಲಾಂ ಸ್ಮಾರ್ಟ್ ಕ್ಲಾಸ್, ಯು.ಆರ್.ರಾವ್ ವಿಜ್ಞಾನ ಪ್ರಯೋಗಾಲಯ, ಚಿಗುರು ಶಾಲಾ ಮಕ್ಕಳ ಬ್ಯಾಂಕ್, ಮಕ್ಕಳಿಗೆ ಆಡಲು ಇಳಿಜಾರು, ಕಾಮನಬಿಲ್ಲು, ತೊಟ್ಟಿಲು, ಮೆಟ್ಟಿಲು ಮುಂತಾದ ವಿಶೇಷ ಉಪಕರಣಗಳು, ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ನಿರ್ಮಾಣ ಹೀಗೆ ಹತ್ತು ಹಲವು ಈ ಶಾಲೆಯ ವಿಶೇಷತೆಗಳಾಗಿದೆ.
ವಿಜ್ಞಾನ ಪ್ರಯೋಗಾಲಯ: ಸಾಮಾನ್ಯವಾಗಿ ಎಲ್ಲಾ ಪ್ರೌಢಶಾಲೆಗಳಲ್ಲೂ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಗಳಿಲ್ಲ. ಆದರೆ ಮಾಲವಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥಿತವಾಗಿ ನಾಡಿನ ಖ್ಯಾತ ವಿಜ್ಞಾನಿ ಪ್ರೋ||ಯು.ಆರ್.ರಾವ್ ಹೆಸರಿನ ಪ್ರಯೋಗಶಾಲೆ ನಿರ್ಮಿಸಲಾಗಿದೆ. ಮಕ್ಕಳು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ತಾವೇ ಸ್ವತಃ ನಡೆಸಿ ಅವುಗಳ ಸತ್ಯಾಸತ್ಯತೆಯನ್ನು ಓರೆಗೆ ಹಚ್ಚುತ್ತಾರೆ. ಚಲನೆ, ಬಲ, ಶಕ್ತಿ, ವೇಗ, ವೇಗೋತ್ಕರ್ಷ, ಮುಂತಾದ ಅಮೂರ್ತ ಪರಿಕಲ್ಪನೆಗಳನ್ನು ಓರೆಗೆ ಹಚ್ಚಿ ಕಲಿಯುತ್ತಾರೆ. ಇದು ಅವರ ಮುಂದಿನ ಕಲಿಕೆಗೆ ಪೂರಕವಾಗಲಿದೆ ಎಂಬುದು ಅಲ್ಲಿನ ವಿಜ್ಞಾನ ಶಿಕ್ಷಕ ಯು.ಮಲ್ಲೇಶ ಅವರ ಅಭಿಮತ. ಪ್ರಯೋಗಾಲಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಪೂಕರವಾದ ರಸಾಯನಿಕಗಳು, ಭೌತಶಾಸ್ತ್ರದ ಪರಿಕರಗಳು, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಸೂಕ್ಷ್ಮದರ್ಶಕ ಹಾಗೂ ಕೆಲ ಚಾರ್ಟ್‍ಗಳು ಸಹ ಕಲಿಕೆಗೆ ಪೂರಕವಾಗಿವೆ.
ಸ್ಮಾರ್ಟ್‍ಕ್ಲಾಸ್ : ಹೆಸರೆ ಹೇಳುವಂತೆ ಇದು ಈ ಶಾಲೆಗೆ ಸ್ಮಾರ್ಟ್‍ನೆಸ್ ತಂದಿದೆ. ಅಂದಾಜು ಒಂದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಆಕರ್ಷಕವಾಗಿ ದೇಶದ ಮಾಜಿ ರಾಷ್ಟ್ರಪತಿ ಮತ್ತು ಮಕ್ಕಳ ಪ್ರೇಮಿ ಅಬ್ದುಲ್ ಕಲಾಂ ಸ್ಮಾರ್ಟ್‍ಕ್ಲಾಸ್ ಹೆಸರಿನಲ್ಲಿ ನಿರ್ಮಿಸಲಾಗಿದೆ. ವಿಜ್ಞಾನ, ಗಣಿತ ಮತ್ತು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗೆ ಸಂಬಂಧಿಸಿದ ಪಾಠಗಳ ಕೆಲ ವಿಡೀಯೋಗಳನ್ನು ವೀಕ್ಷಿಸುತ್ತಾ ಮಕ್ಕಳು ಖುಷಿಯಿಂದ ಕಲಿಯುತ್ತಾರೆ. ಇಂಗ್ಲೀಷ್ ರೈಮ್ಸ್‍ಗಳನ್ನು ಮಕ್ಕಳು ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎನ್ನವಂತೆ ಹೇಳುವುದು ಕೇಳಿದರೆ ಶಿಕ್ಷಕರ ಶ್ರಮ ತಿಳಿಯುತ್ತದೆ. ಕಂಪ್ಯೂಟರ್‍ನಲ್ಲಿ ಭಾಷಾ ಆಟಗಳ ಮೂಲಕ ಭಾಷಾ ಸಂಪತ್ತನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ ಜೊತೆಗೆ ನಮ್ಮ ಸಾಲೆ ಮಕ್ಕಳ ಕಲಿಕೆ ನೋಡಿ ಎರಡು ಶಾಲೆಯಲ್ಲಿ ಸ್ಮಾರ್ಟ್‍ಕ್ಲಾಸ್ ಪ್ರಾರಂಭವಾಗಿವೆ ಎಂದು ಹೇಳುತ್ತಾರೆ ಕಂಪ್ಯೂಟರ್ ಉಸ್ತುವಾರಿ ಶಿಕ್ಷಕರಾದ ಪರಮೇಶ್ವರಯ್ಯ ಸೊಪ್ಪಿಮಠ ಅವರು.
ಆಟದ ಪರಿಕರಗಳು: ಮಕ್ಕಳ ದೈಹಿಕ ಹಾಗೂ ಮನೋರಂಜನಾ ಆಟಕ್ಕಾಗಿ ಇಳಿಜಾರು, ಕಾಮನಬಿಲ್ಲು, ತೊಟ್ಟಿಲು, ಮೆಟ್ಟಿಲು ಮುಂತಾದ ಪರಿಕರಗಳನ್ನು ದಾನಿಗಳ ನೆರವಿನಿಂದ ಅಳವಡಿಸಲಾಗಿದೆ. ಜೊತೆಗೆ ಶಾಲೆಗೆ ನೂತನವಾಗಿ ನಿರ್ಮಿಸಿರರುವ ಆಕರ್ಷಕ ಸ್ವಾಗತ ಕಮಾನು ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಚಿಗುರು ಮಕ್ಕಳ ಬ್ಯಾಂಕ್: ಮಕ್ಕಳು ತಾವು ಪೋಷಕರಿಂದ ಖರ್ಚಿಗೆಂದು ಪಡೆದ ಹಣದಲ್ಲಿ ಸ್ವಲ್ಪ ಉಳಿಸಿ ಶಾಲಾ ಬ್ಯಾಂಕ್‍ಗೆ ಠೇವಣಿ ರೂಪದಲ್ಲಿ ಕಟ್ಟುತ್ತಾರೆ ಮತ್ತು ಅಗತ್ಯವಿದ್ದಾಗ ಹಿಂಪಡೆಯುತ್ತಾರೆ. ಈ ಎಲ್ಲಾ ಜಮಾ ಖರ್ಚಿನ ಲೆಕ್ಕಾಚಾರವನ್ನು ಮಕ್ಕಳೇ ನಿರ್ವಹಿಸುತ್ತಿರುವುದು ಈ ಶಾಲೆಯ ವಿಶೇಷತೆ. ಮುಖ್ಯಗುರುಗಳು ಹಾಗೂ ಉಸ್ತುವಾರಿ ಶಿಕ್ಷಕರ ಹೆಸರಿನಲ್ಲಿ ಜಂಟಿ ಖಾತೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತೆರೆಯಲಾಗಿದ್ದು, ಅಂದಿನ ಒಟ್ಟು ಜಮಾ ಹಣವನ್ನು ಈ ಖಾತೆಗೆ ಜಮಾ ಮಾಡಲಾಗುತ್ತದೆ. 18 ತಿಂಗಳ ಅವಧಿಯಲ್ಲಿ ಒಟ್ಟು 76 ಸಾವಿರ ರೂಪಾಯಿಗಳನ್ನು ಮಕ್ಕಳು ಉಳಿತಾಯ ಮಾಡಿದ್ದಾರೆ. ಮಕ್ಕಳಲ್ಲಿ ಈಗಿನಿಂದಲೇ ಸ್ವಾವಲಂಬನೆಯ ಕನಸನ್ನು ಈ ಶಿಕ್ಷಕರು ಬಿತ್ತಿ ಸಾಕಾರಗೊಳಿಸಿದ್ದಾರೆ.
ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಶಾಲಾ ಶಿಕ್ಷಕರೇ ಸಾಕ್ಷಿ. ಇಲ್ಲಿನ ಎಲ್ಲಾ ಶಿಕ್ಷಕರ ಕಾರ್ಯ ಬದ್ದತೆ ಹಾಗೂ ಪರಿಶ್ರಮಗಳ ಫಲವಾಗಿ ಗ್ರಾಮಸ್ಥರ ಸಹಕಾರದಿಂದ ಎರಡು ಲಕ್ಷ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ಸ್ಮಾರ್ಟ್ ಕ್ಲಾಸ್ ಮತ್ತು ವಿಜ್ಞಾನ ಪ್ರಯೋಗಾಲಯಗಳು ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುತ್ತಿವೆ. ಕಂಪ್ಯೂಟರ್ ಕೊಠಡಿಗೆ 12ಲಕ್ಷ ರೂಪಾಯಿ ಬಿಡುಗಡೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದು, ಈಗಾಗಲೇ ಟೆಂಡರ್ ಕಾರ್ಯ ಮುಗಿದಿದೆ. ಈ ಶಾಲಾ ಮಕ್ಕಳ ಪ್ರತಿಭೆ ಬೆಳಗಲು ಹೊಸಪೇಟೆ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮ ನೀಡಲಾಗಿದೆ. ಕೆಲವೇ ವರ್ಷದಲ್ಲಿ ಈ ಶಾಲೆಯಲ್ಲಿನ ಬದಲಾವಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಅದರ ಫಲವಾಗಿ ದಿನಂಪ್ರತಿ ಇತರೆ ಶಾಲೆಗಳಿಂದ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಅಂತೆಯೇ ದಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ 9341444865ಸಂಪರ್ಕಿಸಬಹುದು.
ಆರ್.ಬಿ.ಗುರುಬಸವರಾಜ ಹೊಳಗುಂದಿ
No comments:
Post a Comment