August 9, 2015

ಪಠ್ಯದ ಜೊತೆಗೆ ಸಹಪಠ್ಯವೂ ಇರಲಿ!

 ಜುಲೈ 2015ರ 'ಶಿಕ್ಷಣವಾರ್ತೆ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

ಪಠ್ಯದ ಜೊತೆಗೆ ಸಹಪಠ್ಯವೂ ಇರಲಿ!

    ಇಂದಿನ ಪಾಲಕರು ಅಂಕಗಳಿಸುವುದೇ ತಮ್ಮ ಮಕ್ಕಳ  ಮುಖ್ಯ ಗುರಿ ಎಂಬಂತೆ ಅವರನ್ನು ಬೆಳೆಸುತ್ತಿದ್ದಾರೆ. ಇದು ಮಕ್ಕಳಲ್ಲಿ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ. ಹೋವರ್ಕ್, ಟ್ಯೂಷನ್‍ಗಳ ಹೆಸರಿನಲ್ಲಿ ಮಕ್ಕಳ ಆಟ, ಮನೊರಂಜನೆಗೆ ಕಡಿವಾಣ ಬೀಳುತ್ತಿದೆ. ಇದರಿಂದ ಮಕ್ಕಳಲ್ಲಿ ಖಿನ್ನತೆ, ಮಾನಸಿಕ ತೊಳಲಾಟಗಳಂತಹ ಮಾನಸಿಕ ಕಾಯಿಲೆಗಳು ಅಂಟಿಕೊಳ್ಳುತ್ತಿವೆ.
    ಪಠ್ಯ ಚಟುವಟಿಕೆಗಳು ಎಷ್ಟು ಪ್ರಮುಖವೋ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯ ಎಂಬುದು ಪಾಲಕರಿಗೆ ಇನ್ನೂ ಅರ್ಥವಾದಂತಿಲ್ಲ ಅಥವಾ ಅರ್ಥವಾದರೂ ಪ್ರತಿಷ್ಠೆಗಾಗಿ ಅಥವಾ ಅನಿವಾರ್ಯತೆಯ ಸೃಷ್ಟಿಗಾಗಿ ತಮ್ಮ ಮಕ್ಕಳ ಭವಿಷ್ಯವನ್ನು ತಾವೇ ಕರಾಳಕ್ಕೆ ನೂಕುತ್ತಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗುತ್ತಿದೆ.
    ಯಾವುದೇ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಮುನ್ನುಗಲು ಶೈಕ್ಷಣಿಕ ಅರ್ಹತೆಯೊಂದಿಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯ. ವ್ಯಕ್ತಿಯ ಮನೋಸ್ಥೈರ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ಪಠ್ಯೇತರ ಚಟುವಟಿಕೆಗಳು ಪೂರಕ ಎಂಬುದನ್ನು ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ನಾವ್ಯಾರು ಈ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಲೇ ಇಲ್ಲ. ಮಕ್ಕಳ ಧನಾತ್ಮಕ ಬೆಳವಣಿಗೆಯ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬ ಪಾಲಕರೂ ಈ ಬಗ್ಗೆ ಆಲೋಚಿಸಿ ಅದರಂತೆ ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ತರಬಹುದು.
ಜೀವನ ಕೌಶಲ್ಯಗಳ ಕಲಿಕೆ : ಮಕ್ಕಳು ಹೊರಗಡೆ ಹೋಗಿ ಆಟ ಆಡುವುದರಿಂದ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಯುತ್ತಾರೆ. ಈ ಕೌಶಲ್ಯಗಳು ಮುಂದಿನ ಜೀವನಕ್ಕೆ ಅತ್ಯುಪಯುಕ್ತವಾದವುಗಳು. ಪಠ್ಯೇತರ ಚಟುವಟಕೆಗಳು ಯಾವುದೇ ಶಾಲೆ ಕಾಲೇಜುಗಳು ಕಲಿಸಲಾರದಂತಹ ಜೀವನ ಕೌಶಲ್ಯಗಳಾಗಿವೆ. ಸಾಕಷ್ಟು ಮಕ್ಕಳು ಒಂದೆಡೆ ಸೇರಿ ಆಟವಾಡುವುದರಿಂದ ಅವರಲ್ಲಿ ತಂಡಸ್ಪೂರ್ತಿ ಮತ್ತು ಕ್ರೀಡಾ ಮನೋಭಾವ ಬೆಳೆಯುತ್ತವೆ.
ಸಾಮಾಜಿಕ ಅಭಿವೃದ್ದಿ : ಸ್ನೇಹಿತರೊಂದಿಗಿನ ಪರಸ್ಪರ ಸಂವಹನ ಕೌಶಲ್ಯಗಳೇ ಸಾಮಾಜಿಕ ಕೌಶಲ್ಯಗಳಾಗಿರುತ್ತವೆ. ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಮಕ್ಕಳು ಸಾಕಷ್ಟು ಹೊರ ಸ್ನೇಹಿತರನ್ನು ಗಳಿಸುತ್ತಾರೆ ಮತ್ತು ಅವರೊಂದಿಗೆ ಬೆರೆಯುತ್ತಾರೆ. ಇದು ಮುಂದೆ ಟೀಂವರ್ಕ್ ಮಾಡಲು ಸಹಾಯ ಮಾಡುತ್ತದೆ. ಸಾರ್ವಜನಿಕವಾಗಿ ಮಾತನಾಡುವುದನ್ನು ಮತ್ತು ಭಾಗಿಯಾಗುವುದನ್ನು ಮಕ್ಕಳು ಕಲಿಯುತ್ತಾರೆ.
ಸಂಕೋಚ ಕಡಿಮೆಯಾಗುತ್ತದೆ : ನಿಮ್ಮ ಮಗು ತರಗತಿಯಲ್ಲಿ ಅಥವಾ ಅತಿಥಿಗಳ ಮುಂದೆ ನಿಂತು ಹಾಡು ಹೇಳಲು ಅಥವಾ ಪದ್ಯ ಹೇಳಲು ಸಂಕೋಚಪಡುತ್ತದೆಯೇ? ಹೌದು ಎಂದಾದರೆ ನಿಮ್ಮ ಮಗುವನ್ನು  ಹಾಡು, ನೃತ್ಯ, ಚಿತ್ರಕಲೆ ಅಥವಾ ಗುಂಪು ಆಟಗಳಲ್ಲಿ ತೊಡಗಲು ಪ್ರೋತ್ಸಾಹಿಸಿ. ಇದು ಅವರ ನಾಚಿಕೆ ಸ್ವಭಾವವನ್ನು ಹೋಗಲಾಡಿಸುತ್ತದೆ.
ದೈಹಿಕ ಬೆಳವಣಿಗೆ : ದೈಹಿಕ ಆರೋಗ್ಯ ಹೆಚ್ಚಿದರೆ ಮಾನಸಿಕ ಮತ್ತು ಆರೋಗ್ಯವೂ ವೃದ್ದಿಸುತ್ತದೆ. ಪಠ್ಯೇತರ ಚಟುವಟಕೆಗಳು ಮಕ್ಕಳನ್ನು ಸಧೃಢರನ್ನಾಗಿ ಬೆಳೆಸಲು ಸಹಕಾರಿ.
ಶೈಕ್ಷಣಿಕ ಸಾಧನೆಯೂ ವೃದ್ದಿ : ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಂಡರೆ ಪಟ್ಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ ಎಂಬುದು ಪಾಲಕರ ತಪ್ಪು ಕಲ್ಪನೆಯಾಗಿದೆ. ಆದರೆ ಶಾಲಾ ವೇಳೆಯ ನಂತರ ನಿಗದಿತ ಅವಧಿಯವರೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಮಕ್ಕಳು  ಇತರ ಮಕ್ಕಳಿಗಿಂತ ಹೆಚ್ಚು ಶೈಕ್ಷಣಿಕವಾಗಿ ಮುಂದೆ ಇರುವುದು ಸಾಬೀತಾಗಿದೆ. ಪಠ್ಯೇತರ ಚಟುವಟಿಕೆಗಳು ಮಕ್ಕಳನ್ನು ಓದಿನ ಕಡೆಗೆ ಆಸಕ್ತರನ್ನಾಗಿ ಮಾಡುತ್ತದೆ.
ಸಮಯ ಪ್ರಜ್ಞೆ :  ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಗು ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತದೆ.  ಶಾಲಾ ದಿನಗಳಲ್ಲಿ ಬೆಳೆಸಿಕೊಂಡ ಈ ಸಮಯಪ್ರಜ್ಞೆ ದೊಡ್ಡವರಾದ ನಂತರವೂ ಮುಂದುವರೆಯುತ್ತದೆ.
ಒತ್ತಡ ನಿವಾರಿಸುತ್ತದೆ : ಟ್ಯೂಷನ್, ಹೋಂವರ್ಕ್, ಪರೀಕ್ಷೆಗಳು ಮಕ್ಕಳಿಗೆ ಮಾನಸಿಕ ಒತ್ತಡ ನೀಡುತ್ತಿವೆ. ಇದರಿಂದಾಗಿ ಮಕ್ಕಳು ಓದಿನ ಕಡೆಗೆ ಹೆಚ್ಚು ಗಮನ ನೀಡಲಾಗುವುದಿಲ್ಲ. ಮತ್ತು ಪರೀಕ್ಷೆಗಳಲ್ಲಿ ಮಾನಸಿಕವಾಗಿ ಒತ್ತಡ ಅನುಭವಿಸುವಂತಾಗುತ್ತದೆ. ಪಠ್ಯೇತರ ಚಟುವಟಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ನಿರಾಳವಾಗಿ ಒತ್ತಡ ಮುಕ್ತರಾಗುತ್ತಾರೆ.
    ಹಾಗಾಗಿ ಮಕ್ಕಳಿಗೆ ಇಷ್ಟವಾಗುವ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ಹಾಗೂ ಸಮಸ್ಯೆ ಎದುರಿಸುವ ಕೌಶಲ್ಯಗಳನ್ನು ಬೆಳೆಸಬಹುದಾಗಿದೆ. ಮಕ್ಕಳ ಹವ್ಯಾಸಗಳೇ ಅವರಿಗೆ ಮಾರ್ಗದರ್ಶಿಯೂ ಆಗಬಹುದು. ಆಗ ಮಾತ್ರ ನೀವೊಬ್ಬ ಮಕ್ಕಳ ಮನಸ್ಸನ್ನು ಅರಿತ ಪಾಲಕರಾಗುತ್ತೀರಿ.
                                                                                                    ಆರ್.ಬಿ.ಗುರುಬಸವರಾಜ

No comments:

Post a Comment