ಜಗತ್ತಿನ ಕಿರಿಯ ವೆಬ್ ಡಿಸೈನರ್
ವೆಬ್ಸೈಟ್ಗಳನ್ನು ಸೃಜಿಸಲು ಐ.ಟಿ.ಯಂತಹ ಔಪಚಾರಿಕ ಶಿಕ್ಷಣ ಅಗತ್ಯ. ಇಂತಹ ಔಪಚಾರಿಕ ಶಿಕ್ಷಣದ ನೆರವಿಲ್ಲದೇ ವೆಬ್ಸೈಟ್ ಸೃಜಿಸುವುದು ಅಸಾಧ್ಯವೇ ಸರಿ. ಆದರೆ ‘ಇದೂ ಸಾಧ್ಯ!’ ಎಂದು ಸಾಧಿಸಿ ತೋರಿಸಿದ್ದಾಳೆ ಶ್ರೀಲಕ್ಷ್ಮಿ ಸುರೇಶ್. ಅದೂ ಕೇವಲ ತನ್ನ ಎಂಟನೇ ವಯಸ್ಸಿನಲ್ಲಿ. ಜೊತೆಗೆ ಒಂದು ಐ.ಟಿ. ಕಂಪನಿಯ ಸಿ.ಇ.ಓ ಕೂಡಾ.
ಶ್ರೀಲಕ್ಷ್ಮಿ ಸುರೇಶ್ ನೆರೆಯ ಕೇರಳ ರಾಜ್ಯದವಳು. ಪ್ರಸ್ತುತ ಕೇರಳದ ಕಾಲಿಕಟ್ನ ಸೇಂಟ್ ಜೋಸೆಫ್ ದೇವಗಿರಿ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂ.ಬಿ.ಎ ಓದುತ್ತಿದ್ದಾಳೆ. ವಕೀಲರಾದ ತಂದೆ ಸುರೇಶ್ ಮೆನನ್ ಅವರ ಮಾತುಗಳಿಂದ ಸ್ಪೂರ್ತಿ ಪಡೆದು 8ನೇ ವಯಸ್ಸಿನಲ್ಲಿ ವೆಬ್ಸೈಟ್ ತಯಾರಿಸಿದಳು.
2007ರಲ್ಲಿ 3ನೇತರಗತಿ ಓದುತ್ತಿದ್ದಾಗ ತನ್ನ ಶಾಲೆಗೊಂದು ವೆಬ್ಸೈಟ್ ಇಲ್ಲದಿರುವುದನ್ನು ಗಮನಿಸಿದ ಶ್ರೀಲಕ್ಷ್ಮಿ ಶಾಲೆಗಾಗಿ ವೆಬ್ಸೈಟ್ ತಯಾರಿಸುವ ಹುಚ್ಚು ಸಾಹಸಕ್ಕೆ ಕೈಹಾಕಿ ಯಶಸ್ವಿಯಾದಳು. ಅವಳ ಈ ಸಾಧನೆ ಇಡೀ ವಿಶ್ವದ ಗಮನ ಸೆಳೆಯಿತು. ಅದಕ್ಕಾಗಿ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಳು.
“3ನೇ ವಯಸ್ಸಿನಲ್ಲೇ ಕಂಪ್ಯೂಟರ್ನ ಮೈಕ್ರೋಸಾಫ್ಟ್ ಪೇಂಟ್ ಮೂಲಕ ಚಿತ್ರ ರಚಿಸುವ ನಂತರ ಟೈಪಿಂಗ್ ಮಾಡುವ ಕೌಶಲ ಕಲಿತಳು. ಮುಂದೆ ನಮಗರಿವಿಲ್ಲದಂತೆ ಅವಳು ಉನ್ನತ ಹಂತಕ್ಕೆ ಬೆಳೆದಳು” ಎಂದು ತಂದೆ ಸುರೇಶ್ ಅಭಿಮಾನದಿಂದ ಹೇಳುತ್ತಾರೆ.
ಶಾಲೆಗಾಗಿ ವೆಬ್ಸೈಟ್ ತಯಾರಿಸಿದ ನಂತರ ತನ್ನದೇ ಆದ ‘ಇ-ಡಿಸೈನ್ ಟೆಕ್ನಾಲಜಿಸ್’ ಎಂಬ ವೆಬ್ಡಿಸೈನ್ ಕಂಪನಿಯೊಂದನ್ನು ಸ್ಥಾಪಿಸಿ ಅದರ ಸಿ.ಇ.ಓ ಆಗಿದ್ದಾಳೆ. ಹಾಗಾಗಿ ಜಗತ್ತಿನ ಕಿರಿಯ ಸಿ.ಇ.ಓ ಎಂಬ ಕೀರ್ತಿಗೂ ಭಾಜನಳಾಗಿದ್ದಾಳೆ. ಈ ಮಹತ್ಸಾಧನೆಗಾಗಿ ‘ಅಸೋಸಿಯೇಷನ್ ಆಫ್ ಅಮೇರಿಕನ್ ವೆಬ್ಮಾಸ್ಟರ್’ ಇವಳಿಗೆ ಸದಸ್ಯತ್ವ ನೀಡಿ ಗೌರವಿಸಿದೆ.
ಕೇರಳ ಸರ್ಕಾರದ ಅಧಿಕೃತ ವೇಬ್ಸೈಟ್ ಸೇರಿದಂತೆ ಹಲವಾರು ಪ್ರಮುಖ ವೆಬ್ಸೈಟ್ಗಳನ್ನು ಸೃಜಿಸಿರುವ ಶ್ರೀಲಕ್ಷ್ಮಿ ಇಲ್ಲಿಯವರೆಗೆ ಒಟ್ಟು 150ಕ್ಕೂ ಹೆಚ್ಚು ವೆಬ್ಸೈಟ್ ರೂಪಿಸಿದ್ದಾಳೆ. ಈಗ ಓದಿನ ಕಡೆ ಹೆಚ್ಚು ಗಮನ ನೀಡಿದ್ದು ಮುಂದೆ ಇ-ಡಿಸೈನ್ ಕಂಪನಿಯನ್ನು ಜಗತ್ಪ್ರಸಿದ್ದ ಕಂಪನಿಯಾಗಿ ಬೆಳೆಸುವ ಕನಸು ಹೊಂದಿದ್ದಾಳೆ.
ಅವಳ ವೆಬ್ಡಿಸೈನ್ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ “ವೆಬ್ಸೈಟ್ ರಚಿಸುವುದು ಕಷ್ಟವೇನಲ್ಲ. ಕಂಪ್ಯೂಟರ್ ಬಗ್ಗೆ ಮೂಲಮಾಹಿತಿ ಗೊತ್ತಿರುವ ಯಾರು ಬೇಕಾದರೂ ವೆಬ್ಸೈಟ್ ರಚಿಸಬಹುದು. ಆದರೆ ಕ್ರಿಯೇಟಿವ್ ಆಗಿ ರೂಪಿಸುವುದು ಕಷ್ಟದ ಕೆಲಸ. ಇದಕ್ಕೆ ಸಹನೆ ಮತ್ತು ಸೃಜನಶೀಲತೆ ಮುಖ್ಯ” ಎನ್ನುತ್ತಾಳೆ.
ಭವಿಷ್ಯದಲ್ಲಿ ಎಲ್ಲರಿಗೂ ಅನುಕೂಲಕರವಾದ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ತಯಾರಿಸುವ ಆಸೆ ಹೊಂದಿದ್ದಾಳೆ. “ಬಡತನ ಹಾಗೂ ನಿರುದ್ಯೋಗಗಳು ನಮ್ಮ ಸಮಾಜಕ್ಕೆ ಅಂಟಿದ ಕಳಂಕಗಳು. ಬಡತನಕ್ಕೆ ನಿರುದ್ಯೋಗ ಮತ್ತು ಅನಕ್ಷರತೆಯೇ ಕಾರಣ ಹಾಗೂ ಅನಕ್ಷರತೆಯೇ ನಿರುದ್ಯೋಗದ ಮೂಲ. ಇವೆರಡನ್ನೂ ಹೊಡೆದೋಡಿಸಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು” ಎನ್ನುತ್ತಾಳೆ.
‘ಇಂದಿನ ಜಗತ್ತು ಸ್ಪರ್ಧಾತ್ಮಕವಾಗಿದ್ದು, ಸತತ ಪರಿಶ್ರದಿಂದ ಮಾತ್ರ ಸ್ಪರ್ಧೆಯಲ್ಲಿ ಗೆಲ್ಲಲು ಮತ್ತು ಗುರಿಯನ್ನು ತಲುಪಲು ಸಾಧ್ಯ’ ಎನ್ನುವ ಅವಳ ನಂಬಿಕೆ ನಮ್ಮ ಯುವಕರಿಗೆ ಸ್ಪೂರ್ತಿಯಾದೀತೇ? ಕಾದು ನೋಡೋಣ!. ಶ್ರೀಲಕ್ಷ್ಮಿಯನ್ನು ಅವರ ತಂದೆಯ ಮೊಬೈಲ್ ಸಂಖ್ಯೆ 09847070002 ಗೆ ಡಯಲ್ ಮಾಡಿ ಸಂಪರ್ಕಿಸಬಹುದು(ಸಂಜೆ 6ಗಂಟೆಯ ನಂತರ ಮಾತ್ರ).
ಶ್ರೀಲಕ್ಷ್ಮಿಯ ಮುಡಿಗೇರಿದ ಕೆಲವು ಪ್ರಶಸ್ತಿಯ ಗರಿಗಳು
* ಗ್ಲೋಬಲ್ ಇಂಟರ್ನೆಟ್ ಡೈರೆಕ್ಟರಿಸ್ ಅವಾರ್ಡ್(ಯು.ಎಸ್.ಎ)
* ವಲ್ರ್ಡ್ ವೆಬ್ ಅವಾರ್ಡ್ ಆಫ್ ಎಕ್ಸಲೆನ್ಸ್(ಯು.ಎಸ್.ಎ)
* ಸಿಕ್ಸ್ಟಿ ಪ್ಲಸ್ ಎಜುಕೇಷನ್ ಅವಾರ್ಡ್ ಆಫ್ ಎಕ್ಸಲೆನ್ಸ್(ಕೆನಡಾ)
* ಲಾ ಲುನಾ ನಿಕ್ ಬೆಸ್ಟ್ ಆಫ್ ದ ವೆಬ್ ಅವಾರ್ಡ್(ಯು.ಕೆ)
* ಪೋಯಟಿಕ್ ಸೋಲ್ ಅವಾರ್ಡ್(ಬ್ರೆಜಿಲ್)
* ಅಲೋಹ ಅವಾರ್ಡ್ ಫಾರ್ ಎಕ್ಸಲೆನ್ಸ್ ವೆಬ್ಸೈಟ್(ಹವಾಯಿ)
* ಸ್ವದೇಶಿ ಸೈನ್ಸ್ ಮೂಮೆಂಟ್ ಎಕ್ಸಲೆನ್ಸ್ ಅವಾರ್ಡ್ 2007(ಭಾರತ)
* ಲಯನ್ಸ್ ಕ್ಲಬ್ ಬಿಗ್ ಅಚೀವರ್ ಅವಾರ್ಡ್ 2007(ಭಾರತ)
* ವಿಶೇಷ ಸಾಧನೆಗಾಗಿ ನ್ಯಾಷನಲ್ ಚೈಲ್ಡ್ ಅವಾರ್ಡ್ 2008(ಭಾರತ)
ಆರ್.ಬಿ.ಗುರುಬಸವರಾಜ ಹೊಳಗುಂದಿ
No comments:
Post a Comment