November 28, 2015

ಮೌಲ್ಯವಂತರಾಗಿ VALUES IN YOUTHS

ದಿನಾಂಕ 28-10-2015ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ.
 

ಮೌಲ್ಯವಂತರಾಗಿ

    “ನೋಡಪ್ಪಾ, ಆ ಕೆಲ್ಸ ಮಾಡು ಈ ಕೆಲ್ಸ ಮಾಡು ಅಂತ ನೀನು ನನ್ಗೆ ಹೇಳ್ಬೇಡ. ನಾನು ಯಾವ ಕೆಲ್ಸನೂ ಮಾಡಲ್ಲ. ಇರು ಅಂದ್ರೆ ಮನೇಲಿ ಇರ್ತೀನಿ, ಇಲ್ಲಾಂದ್ರೆ ಮನೆ ಬಿಟ್ಟು ಹೊಂಟುಹೋಗ್ತೀನಿ” ಎಂದು ಪದೇ ಪದೇ ತಂದೆಯನ್ನು ಹೆದರಿಸ್ತಾನೆ ಪ್ರವೀಣ.
    ಬಿ.ಎ ಓದುತ್ತಿರುವ ಚೇತನ ಬಡಕುಟುಂಬದ ಹುಡುಗಿ. ಕೂಲಿ ಮಾಡಿದರೂ ಮಗಳನ್ನು ಓದಿಸಬೇಕೆಂಬ ಮಹದಾಸೆ ತಂದೆ-ತಾಯಿಯರದು. ಆದರೆ ಮಗಳು ತುಂಬಾ ಹಠಮಾರಿ. ದುಬಾರಿ ಬೆಲೆಯ ಮೊಬೈಲ್ ಬೇಕೆಂದು ನಾಲ್ಕಾರು ದಿನಗಳಿಂದ ಹಠಹಿಡಿದಿದ್ದಾಳೆ. ಊಟ, ತಿಂಡಿ, ಕಾಲೇಜು ಎಲ್ಲವನ್ನೂ ತ್ಯಜಿಸಿದ್ದಾಳೆ. ಅಷ್ಟೊಂದು ಬೆಲೆಯ ಮೊಬೈಲ್ ಕೊಡಿಸಲು ಹಣವಿಲ್ಲ. ಕೊಡಿಸದಿದ್ದರೆ ಮಗಳು ಏನು ಮಾಡಿಕೊಳ್ಳುತ್ತಾಳೋ ಎಂಬ ಭಯ. ಅವರಿಗೆ ಏನು ಮಾಡಬೇಕೋ ತೋಚುತ್ತಿಲ್ಲ.
    ದ್ವಿತೀಯ ಪಿ.ಯು.ಸಿ ಓದುತ್ತಿರುವ ಮಗ ಆಕಾಶನ ಫೋನು ಬಂತೆಂದರೆ ತಂದೆ ಬೆಚ್ಚಿ ಬೀಳ್ತಾರೆ. ಎಷ್ಟು ಹಣ ಕೇಳ್ತಾನೋ, ಹೇಗೆ ಹೊಂದಿಸಬೇಕು ಎಂಬುದೇ ಅವರ ಭಯಕ್ಕೆ ಕಾರಣ. ಅವರು ಅಂದುಕೊಂಡಂತೆ ‘ಅಪ್ಪಾ ನನಗೆ ಅರ್ಜಂಟಾಗಿ ದುಡ್ಡು ಬೇಕು’ ಎಂಬ ಮಗನ ಧ್ವನಿ ಕೇಳಿ ಬೆಚ್ಚಿದರು. ಅಳುಕುತ್ತಲೇ ‘ಈಗ್ಯಾಕೋ ದುಡ್ಡು’ ಎಂದರು. ‘ಕಾಲೇಜಿನಲ್ಲಿ ಟೂರ್ ಫಿಕ್ಸ್ ಆಗಿದೆ. ಅದ್ಕೆ ದುಡ್ಡು ಬೇಕು’ ಎಂದ ಆಕಾಶ. ‘ಎಷ್ಟು ಬೇಕಿತಪ್ಪ’ ಎಂದು ನಿಧಾನವಾಗಿ ಕೇಳಿದರು. ‘ಇಪ್ಪತ್ತು ಸಾವಿರ ಬೇಕು. ಇವತ್ತೇ ನನ್ನ ಅಕೌಂಟ್‍ಗೆ ಹಾಕ್ಬಿಡಿ. ಇಲ್ಲಾಂದ್ರೆ ನಾನು ಓದೋದು ಬಿಟ್ಟು ಮನೆಗೆ ಬಂದ್ಬೀಡ್ತೀನಿ’ ಎಂಬ ಆಕಾಶನ ಮಾತಿಗೆ ಹೃದಯವೇ ಬಾಯಿಗೆ ಬಂದಂತಾಯ್ತು. ಅವರ ಎರಡು ತಿಂಗಳ ಸಂಬಳ ಸೇರಿಸಿದರೂ ಇಪ್ಪತ್ತು ಸಾವಿರ ಆಗೋಲ್ಲ. ಬೇಸತ್ತ ತಂದೆ ಕಾಲೇಜಿಗೆ ಫೋನಾಯಿಸಿದರು. ಅಲ್ಲಿಂದ ಮತ್ತೊಂದು ತಗಾದೆ. ಕಾಲೇಜಿನಲ್ಲಿ ಟೂರು ಫಿಕ್ಸ್ ಆಗೇ ಇಲ್ಲ ಎಂಬುದು. ಅಲ್ಲದೇ ಮಗ ಸರಿಯಾಗಿ ಕಾಲೇಜಿಗೆ ಹಾಜರಾಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಚುಡಾಯಿಸ್ತಾನೆ, ಕೇಳಿದರೆ ಸಿಬ್ಬಂದಿಯನ್ನೇ ಹೊಡೆಯಲು ಮುಂದಾಗುತ್ತಾನೆ, ಇತ್ತೀಚೆಗೆ ಕುಡಿಯುವುದು, ಮೋಜು ಮಸ್ತಿ ಹೆಚ್ಚಾಗಿದ್ದು, ಇತರೆ ಹುಡುಗರು ಇವನಿಂದಾಗಿ ಹಾಳಾಗುತ್ತಿದ್ದಾರೆ’ ಎಂಬ ಆರೋಪ ಪಟ್ಟಿ. ಇದು ತಂದೆಗೆ ಮತ್ತೊಂದು ಆಘಾತ. ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು.
    ಹೀಗೆ ಇಂತಹ ಅನೇಕ ಆರೋಪಗಳು ಯುವ ಪೀಳಿಗೆಯ ಮೇಲೆ ಕೇಳಿಬರುತ್ತಲೇ ಇದೆ. ‘ಯಾರಿಗ್ಹೇಳೋಣಾ ನಮ್ಮ ಪ್ರಾಬ್ಲಮ್ಮು’ ಎಂದು ತಂದೆ ತಾಯಿ ಗೊಣಗಿದರೆ ‘ಯಾಕ್ಹಿಂಗಾಡ್ತಾರೋ’ ಎನ್ನುತ್ತಾರೆ ಯುವಕರು. ಇಂದಿನ ಯುವಕರಲ್ಲಿ ಜವಾಬ್ದಾರಿ ಹಾಗೂ ಮೌಲ್ಯಗಳ ಬಳಕೆ ತೀರಾ ಕಡಿಮೆ ಎಂಬ ಮಾತು ಕೇಳಿ ಬರುತ್ತಿರುವುದು ಸಹಜ. ಪಾಲಕರಿಗೆ ಎದುರು ಮಾತನಾಡುವುದು, ಗುರು-ಹಿರಿಯರಿಗೆ ಗೌರವ ನೀಡದಿರುವುದು, ಅಸಹಾಯಕರಿಗೆ ಸಹಾಯ ಹಸ್ತ ಚಾಚದೇ ಇರುವುದು, ಕಿರಿಯರನ್ನು ಪ್ರೀತ್ಯಾದರಗಳಿಂದ ಕಾಣದೇ ಇರುವುದು, ವಸ್ತುಗಳ ಮತ್ತು ಸಂಬಂಧಗಳ ಮೌಲ್ಯ ಅರಿಯದೇ ಇರುವುದು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ರೀತಿ ಎಲ್ಲಾ ಅಪಾದನೆಗಳು ಯುವಕರನ್ನೇ ಕೇಂದ್ರವಾಗಿಟ್ಟುಕೊಂಡಿವೆ. ಏಕೆಂದರೆ ಇಂದಿನ ಯುವಕರೇ ಭವಿಷ್ಯದ ರಾಷ್ಟ್ರ ನಿರ್ಮಾತೃಗಳು. ಹಾಗಾಗಿ ಯುವ ಪೀಳಿಗೆ ಮತ್ತು ನೈತಿಕ ಮೌಲ್ಯಗಳ ನಡುವೆ ಆಳವಾದ ಸಂಬಂಧವಿದೆ.
ನೈತಿಕ ಮೌಲ್ಯಗಳೆಂದರೇನು?
    ಸಮಾಜ ಒಪ್ಪಿತ ಮಾನವ ವರ್ತನೆಗಳೇ ನೈತಿಕ ಮೌಲ್ಯಗಳು. ಇವು ಸ್ವಯಂ ಪ್ರಜ್ಞೆ ಮತ್ತು ವ್ಯವಹಾರಿಕ ಅಲಿಖಿತ ಕಾನೂನುಗಳಿದ್ದಂತೆ. ನೈತಿಕತೆ ಎನ್ನುವುದು ಬೇರೊಬ್ಬರ ಒತ್ತಾಯ ಇಲ್ಲದೇ ಆಂತರಿಕವಾಗಿ ಬೆಳೆಯಬಲ್ಲ ವ್ಯಕ್ತಿತ್ವ ನಿರ್ಮಾಣದ ಕಾರ್ಯತಂತ್ರಗಳು. ನೈತಿಕತೆ ಅಥವಾ ‘ಒoಡಿಚಿಟiಣಥಿ’ ಎನ್ನುವ ಪದ ‘ಒoಡಿes’ ಎನ್ನುವ ಲ್ಯಾಟಿನ್ ಪದದಿಂದ ಬಂದಿದ್ದು, ‘ನೀತಿ’ ಅಥವಾ ‘ನಡವಳಿಕೆ’ ಎಂಬಂರ್ಥ ಕೊಡುತ್ತದೆ.
    ಉಪಯುಕ್ತವಾದ ಮತ್ತು ಅಪೇಕ್ಷಣೀಯವಾದ ಹಾಗೂ ನಿತ್ಯವೂ ಅನುಸರಿಸಬಹುದಾದ ವರ್ತನಾ ಅಂಶಗಳೇ ನೀತಿಗಳು. ಇವು ಮಾನವನ ಅಭ್ಯುದಯಕ್ಕಾಗಿ ಅವಶ್ಯಕ. ಸತ್ಯಸಂಧತೆ, ತಾಳ್ಮೆ, ವಿಧೇಯತೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಜವ್ದಾದಾರಿ ನಿರ್ವಹಣೆ, ಗೌರವ, ಸಹನೆ, ಸಹಕಾರ, ನಿಷ್ಠೆ, ಸಾರ್ವಜನಿಕ ಹಿತಾಸಕ್ತಿ, ಸ್ವಾತಂತ್ರ ರಕ್ಷಣೆ ಇವೆಲ್ಲವೂ ನೈತಿಕ ಮೌಲ್ಯಗಳಾಗಿದ್ದು ವ್ಯಕ್ತಿತ್ವದ ಘನತೆಗೆ ಪೂರಕವಾಗಿವೆ.
   
    ನೀತಿಶಿಕ್ಷಣ/ಮೌಲ್ಯಶಿಕ್ಷಣ ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಿಕ್ಷಣದವರೆಗೆ ಮಾತ್ರ ಶಿಕ್ಷಣದ ಒಂದು ಭಾಗವಾಗಿ ಮುಂದುವರೆಯುತ್ತವೆ. ಕಾಲೇಜು ಶಿಕ್ಷಣದಲ್ಲಿ ಇದನ್ನು ಪ್ರತ್ಯೇಕ ವಿಷಯವಾಗಿ ಅಳವಡಿಸದೇ ಇರುವುದು ಮೌಲ್ಯಗಳು ಅಧಃಪತನಕ್ಕೆ ಇಳಿಯಲು ಕಾರಣ ಎಂಬುದು ಅನೇಕರ ಆರೋಪ. ಆದರೆ ಕೇವಲ ಶಿಕ್ಷಣದ ಕೊರತೆಯೊಂದೇ ಮೌಲ್ಯಗಳು ಕುಸಿಯಲು ಕಾರಣವಲ್ಲ. ಇದರಲ್ಲಿ ಪಾಲಕರು, ಸಮುದಾಯ, ಒಡನಾಡಿಗಳ ಪಾತ್ರವೂ ಇದೆ.

ಮೌಲ್ಯಗಳ ಕುಸಿತಕ್ಕೆ ಕಾರಣಗಳು
    ಇಂದಿನ ಯುವಕರಲ್ಲಿ ಅನೈತಿಕತೆ ಮತ್ತು ಸಮಾಜ ವಿರೋಧಿ ನಡವಳಿಕೆಗಳು ಹೆಚ್ಚಲು ಅನೇಕ ಅಂಶಗಳು ಪ್ರಭಾವ ಬೀರುತ್ತವೆ. ಅವುಗಳೆಂದರೆ,
ಒಡನಾಡಿಗಳು/ಸಮವಯಸ್ಕರ ಒತ್ತಡ : ನೈತಿಕತೆ ಕುಸಿಯುವಲ್ಲಿ ಒಡನಾಡಿಗಳ ಪ್ರಭಾವ ಅಧಿಕವಾಗಿದೆ.  ಸಮವಯಸ್ಕರ ಮನಸ್ಸನ್ನು ಗೆಲ್ಲಲು ಅಥವಾ ಒಡನಾಡಿಗಳ ಒತ್ತಡದಿಂದ ನೈತಿಕತೆಯನ್ನು ಮುರಿದುಹಾಕಿ ಅವಿವೇಕತನದಿಂದ ವರ್ತಿಸುವುದು ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ.
ಸ್ವಯಂ ನೀತಿ ನಿರೂಪಣೆ : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ತಮಗೆ ಅನುಕೂಲವಾಗುವಂತಹ ತಮ್ಮದೇ ಆದ ನೀತಿಗಳನ್ನು ರೂಪಿಸಿಕೊಳ್ಳುವುದು ಹಾಗೂ ಅದು ಸಮಂಜಸವಲ್ಲದಿದ್ದರೂ ಅದನ್ನು ಸಮರ್ಥಿಸಿಕೊಳ್ಳುವುದು.
ವಿವೇಚನೆ ಇಲ್ಲದಿರುವುದು : ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ಕಾಲ್ಪನಿಕತೆ-ವಾಸ್ತವಿಕತೆ, ಮುಂತಾದವುಗಳಲ್ಲಿ ವಿವೇಚನೆ ಇಲ್ಲದೇ ತಮ್ಮನ್ನು ತೊಡಗಿಸಿಕೊಳ್ಳುವುದು ಕೂಡಾ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿವೆ. ಇದರಿಂದ ಅವಮಾನ ಮತ್ತು ಪಶ್ಚಾತ್ತಾಪ ಪ್ರಜ್ಞೆ ಮಾಯವಾಗಿದೆ.
ಸ್ವ ಅಭಿವ್ಯಕ್ತಿ ಕೊರತೆ : ತಮ್ಮಲ್ಲಿನ ಅಗಾಧ ಜ್ಞಾನ ಮತ್ತು ಪ್ರತಿಭೆಯನ್ನು ಸಮಾಜೋಪಯೋಗಿ ಕಾರ್ಯಗಳಿಗೆ ಧನಾತ್ಮಕವಾಗಿ ಬಳಸದೇ ನಕಾರಾತ್ಮಕ ಕಾರ್ಯಗಳಾದ ಅಪರಾಧ, ಅನೈತಿಕ ವರ್ತನೆ, ಧೂಮಪಾನ, ಮಧ್ಯಪಾನ, ಅಶ್ಲೀಲ-ಅವ್ಯಾಚ್ಯ ಪದಗಳ ಬಳಕೆ, ಪರಸ್ಪರ ಜಗಳ, ಇತ್ಯಾದಿ ಕುಕೃತ್ಯಗಳಿಗೆ ಬಳಸುವುದುರಿಂದ ಮೌಲ್ಯಗಳು ಕುಸಿಯುತ್ತವೆ.
ಅವಿಭಕ್ತ ಮತ್ತು ಐಹಿಕ ಜೀವನ : ಇಂದಿನ ಬಹುತೇಕ ಅವಿಭಕ್ತ ಕುಟುಂಬಗಳಲ್ಲಿ ತಂದೆ-ತಾಯಿಗಳಿಬ್ಬರೂ ದುಡಿಯುವುದು ಅನಿವಾರ್ಯವಾಗಿದೆ. ಹಾಗಾಗಿ ಅವರು ತಮ್ಮ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯ ದೊರೆಯದೇ ಇರುವುದು, ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸದಿರುವುದು, ಮಕ್ಕಳ ವರ್ತನೆ ಹವ್ಯಾಸಗಳನ್ನು ಗಮನಿಸಲು ಬಿಡುವಿಲ್ಲದಿರುವುದು, ಎಲ್ಲದಕ್ಕೂ ಹಣವನ್ನೇ ಪ್ರಧಾನವಾಗಿಸುವುದು, ಐಭೋಗ ಜೀವನ ನಡೆಸಲು ಹಾತೊರೆಯುವುದು ಇವೆಲ್ಲವೂ ಮೌಲ್ಯಗಳ ಕುಸಿತಕ್ಕೆ ಕಾರಣಗಳಾಗಿವೆ.
ಕಟ್ಟುನಿಟ್ಟಿನ ನಿಯಂತ್ರ್ರಣ ಮತ್ತು ಕಠೋರ ಶಿಕ್ಷೆ : ಬಾಲ್ಯದಲ್ಲಿನ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಕಠೋರ ಶಿಕ್ಷೆಗಳು ಮಗುವಿನಲ್ಲಿ ಆಕ್ರಮಣಕಾರಿ ವರ್ತನೆ ಮತ್ತು ಕ್ರಾಂತೀಯ ಭಾವನೆ ಉಂಟಾಗಲು ಕಾರಣವಾಗುತ್ತವೆ. ಇದು ಅತ್ಯಂತ ಅಪಾಯಕಾರಿ.
ಮಾಧ್ಯಮಗಳು ಮತ್ತು ತಂತ್ರಜ್ಞಾನದ ಹಾವಳಿ : ಮೌಲ್ಯಗಳು ಕುಸಿಯಲು ಇರುವ ಎಲ್ಲಾ ಕಾರಣಗಳಿಗಿಂತಲೂ ಅತೀ ಮುಖ್ಯ ಕಾರಣವೆಂದರೆ ಮಾಧ್ಯಮಗಳು. ಯುವಕರ ಮನಸ್ಸನ್ನು ವಿಕೃತಗೊಳಿಸಿ ಸಮಾಜ ಘಾತುಕ ಕೆಲಸಗಳಲ್ಲಿ ತೊಡಗಲು ಹೆಚ್ಚು ಪ್ರೇರೇಪಣೆ ನೀಡುವಲ್ಲಿ ಮಾಧ್ಯಮಗಳೇ ಮುಂಚೂಣಿಯಲ್ಲಿವೆ ಎಂದರೆ ತಪ್ಪಲ್ಲ. ಅದರಲ್ಲೂ ಟಿ.ವಿ ಮತ್ತು ಸಿನೆಮಾಗಳು ಯುವ ಮನಸ್ಸುಗಳನ್ನು ಉದ್ರೇಕಗೊಳಿಸಿ ಅಹಿತಕರ ಘಟನೆಗಳಿಗೆ ಪ್ರಚೋದಿಸುತ್ತವೆ.
ಇತರೆ ಉತ್ತೇಜಕಗಳು : ಅತೃಪ್ತಿ ಜೀವನ, ಮನೋರಂಜನೆಯ ಪ್ರಭಾವ, ಅನಪೇಕ್ಷಿತ ಚಿತ್ರಗಳ ವೀಕ್ಷಣೆ, ಅಂತರಜಾಲದ ಅಶ್ಲೀಲ ತಾಣಗಳ ಹುಡುಕಾಟ, ಲೈಂಗಿಕ ಪ್ರಚೋದನೆಯ ಅಶ್ಲೀಲ ಕಾದಂಬರಿಗಳು, ದಿಢೀರ್ ಶ್ರೀಮಂತರಾಗುವ ಹಗಲುಗನಸು, ಮಾದಕ ವ್ಯಸನ ಮುಂತಾದವುಗಳೂ ಕೂಡಾ ನೈತಿಕ ಅವನತಿಯ ಕಾರಣಗಳಾಗಿವೆ.
ನೈತಿಕ ಮೌಲ್ಯಗಳೇಕೆ ಬೇಕು?
    ಮೌಲ್ಯಗಳು ಪ್ರತಿ ನಿಮಿಷವೂ ನಿಮ್ಮ ಉದಾತ್ತ ಜೀವನದ ಗುರಿಗಳ ಮಾರ್ಗದರ್ಶನ ಮಾಡುತ್ತವೆ. ಕೇವಲ ಮಾರ್ಗದರ್ಶನ ಅಲ್ಲದೇ ನಿಮಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುತ್ತವೆ. ಜೊತೆಗೆ ಆತ್ಮಸ್ಥೈರ್ಯ ಮತ್ತು ಅಭಿಮಾನ ಬೆಳೆಸುತ್ತವೆ.  ಆಕಸ್ಮಿಕ ಘಟನೆಗಳು, ಪ್ರಚೋದಕಗಳಿಂದ, ಅಹಿತಕಾರಿ ಭಾವನೆಗಳಿಂದ ನಿಮ್ಮನ್ನು ಸ್ವಯಂ ನಿಯಂತ್ರಿಸುತ್ತವೆ. ಮೌಲ್ಯಗಳು ನಿಮ್ಮನ್ನು ಸರಿದಾರಿಯಲ್ಲಿ ನಡೆಸಿ ಜೀವನವನ್ನು ಅರ್ಥಪೂರ್ಣಗೊಳಿಸುತ್ತವೆ.
    ಮೌಲ್ಯಗಳು ವೈಫಲ್ಯಕ್ಕೆ ಸೂಕ್ಷ್ಮತೆಯ ಸ್ಪರ್ಶ ನೀಡುತ್ತವೆ ಮತ್ತು ಅನುತ್ಪಾದಕ ತಪ್ಪನ್ನು ಸರಿಪಡಿಸಿ ರಚನಾತ್ಮಕ ಕಾರ್ಯಗಳತ್ತ ನಿಮ್ಮನ್ನು ಕೊಂಡೊಯ್ಯತ್ತವೆ. ನೈತಿಕತೆ ನಿಮ್ಮಲ್ಲಿನ ನಿಷ್ಪ್ರಯೋಜಕ ಅಥವಾ ಅಹಿತಕರ ವರ್ತನೆಗಳನ್ನು ಬದಲಾಯಿಸಿ ಸುವಿಚಾರ ಮತ್ತು ವಿವೇಚನಾಯುತ ಸ್ವಭಾವ ಬೆಳೆಸುತ್ತವೆ. ನಾಟಕೀಯತೆ ಮತ್ತು ವಾಸ್ತವಿಕ ಕಾರ್ಯಾಚರಣೆಯ ನಡುವಿನ ವ್ಯತ್ಯಾಸ ಗುರುತಿಸಿ ಪ್ರಾಮಾಣಿಕತೆಯ ಮಟ್ಟವನ್ನು ಹೆಚ್ಚಿಸುತ್ತವೆ. ಆದರ್ಶ ಮತ್ತು ಮೌಲ್ಯಗಳೊಂದಿಗೆ ಜೀವಿಸುವುದರಿಂದ ನೀವು ಇನ್ನೊಬ್ಬರ ಮೇಲೆ ಪ್ರಭಾವ ಬೀರಬಹುದು ಅಥವಾ ನಿಮ್ಮ ತತ್ವಾದರ್ಶಗಳನ್ನು ಇತರರು ಅನುಸರಿಸಬಹುದು.
    ಮೂಲತಃ ಮಾನವ ಸಂಘಜೀವಿ ಹಾಗೂ ಸಮಾಜಜೀವಿ. ತಾನು ವಾಸಿಸುವ ಸಮಾಜದೊಂದಿಗೆ ಪ್ರತಿಕ್ರಿಯಿಸುವುದು ಅವಶ್ಯ. ಅದಕ್ಕಾಗಿ ವಿಭಿನ್ನವಾದ ಸಾಮಾಜಿಕ ಅಭ್ಯಾಸಗಳಿಂದ ಇತರರಿಗೆ ಸಹಾಯ ಮಾಡುವುದು, ಗುರು-ಹಿರಿಯರನ್ನು ಗೌರವಿಸುವುದು, ಸೌಜನ್ಯದೊಂದಿಗೆ ವರ್ತಿಸುವುದು, ಇತ್ಯಾದಿಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಅಭ್ಯಾಸಗಳು ಇತರರಿಗೆ ಒಳಿತನ್ನು ಮಾಡುವುದರ ಜೊತೆಗೆ ಸಮಾಜದಲ್ಲಿ ನೀವೊಬ್ಬ ಸತ್ಪ್ರಜೆಯಾಗಿ ಗುರುತಿಸಲ್ಪಡುತ್ತೀರಿ.
    ಯುವಕರು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರಿಂದ ಉತ್ಸಾಹ ಹುಮ್ಮಸ್ಸು ಹೆಚ್ಚುತ್ತದೆ. ಯುವಕರು ‘ಕತ್ತಲೆಯ ದಾರಿದೀಪ’ಗಳಾಗಿ ದೇಶದ ಭವಿಷ್ಯವನ್ನು ಉಜ್ವಲಗೊಳಸಬೇಕು.
ಬೆಳೆಸಿಕೊಳ್ಳುವ ಬಗೆ
    ಸಾಮಾನ್ಯವಾಗಿ ಕಾಲೇಜು ಶಿಕ್ಷಣದಲ್ಲಿ ನೀತಿ/ಮೌಲ್ಯಶಿಕ್ಷಣವನ್ನು ಪ್ರತ್ಯೇಕವಾಗಿ ಬೋಧಿಸುವುದಿಲ್ಲ. ಬದಲಾಗಿ ಅದು ಕಲಿಯುವ ವಿಷಯಗಳಲ್ಲೇ ಆಂತರಿಕವಾಗಿ ಅಡಗಿರುತ್ತವೆ. ಪ್ರತಿಯೊಂದು ಪರಿಕಲ್ಪನೆಯ ಕಲಿಕೆಯಲ್ಲಿ ಮೌಲ್ಯ ಅಡಗಿರುತ್ತದೆ. ಉದಾತ್ತ ವ್ಯಕ್ತಿಗಳ ಜೀವನ ಚರಿತ್ರೆ, ಸಾಹಿತ್ಯ, ವಿಮರ್ಶೆ, ಕಥೆ, ಕಾದಂಬರಿ, ತತ್ವ, ಆದರ್ಶ ಮುಂತಾದ ಅಂಶಗಳ ಕಲಿಕೆಯಿಂದ ಮೌಲ್ಯಗಳನ್ನು ಆಂತರಿಕವಾಗಿ ಅಳವಡಿಸಿಕೊಳ್ಳಬೇಕು.
    ವಿವಿಧ ಸಂಸ್ಕತಿ ಮತ್ತು ವಿವಿಧ ದೇಶಗಳ ಜನಜೀವನ ಅಧ್ಯಯನ, ಸಾಂಸ್ಕøತಿಕ ಚಟುವಟಿಕೆ ಮತ್ತು ಆಟೋಟಗಳಲ್ಲಿ ಪಾಲ್ಗೊಳ್ಳುವಿಕೆ, ಚರ್ಚೆ, ವಿಚಾರ ಸಂಕಿರಣ, ಉಪನ್ಯಾಸಗಳಲ್ಲಿ ಭಾಗವಹಿಸುವಿಕೆ, ವಿವಿಧ ಸೇವಾ ಸಂಘಗಳ ಸದಸ್ಯತ್ವ ಹೊಂದುವುದರಿಂದಲೂ ಮೌಲ್ಯಗಳು ಬೆಳೆಯುತ್ತವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹಬ್ಬಗಳು, ವಿಶೇಷ ದಿನಾಚರಣೆಗಳು, ನಾಟಕ, ಗೀತಗಾಯನ, ನೃತ್ಯ, ಸಂಗೀತೋತ್ಸವ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವಿಕೆ ಮತ್ತು ಭಾಗವಹಿಸುವಿಕೆಯಿಂದಲೂ ಮೌಲ್ಯಗಳು ಬೆಳೆಯುತ್ತವೆ. ಆದಾಗ್ಯೂ ಕೆಲವು ವಿಶೇಷ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದಲೂ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು.
•    ಬೂಟಾಟಿಕೆ ಅಥವಾ ಡಾಂಭಿಕ ಮೌಲ್ಯಗಳನ್ನು ಬಿಟ್ಟು ವಾಸ್ತವಿಕ ನೆಲೆಗಟ್ಟಿನ ಆದರ್ಶಗಳನ್ನು ಬೆಳೆಸಿಕೊಳ್ಳಿ.
•    ಸ್ವಸಹಾಯ ಎಂಬುದು ಕೇವಲ ಸಮಸ್ಯೆಗಳಿಂದ ಹೊರಬರುವುದಲ್ಲ. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ  ಮಾರ್ಗದ ಪುನರ್ ವಿಮರ್ಶೆಯ ಮೌಲ್ಯ. ನಿಮ್ಮಲ್ಲಿನ ಆಂತರಿಕ ಸಾಮಥ್ರ್ಯಗಳ ವೃದ್ದಿಯ ಮೌಲ್ಯವಾಗಿ ಪರಿವರ್ತಿಸಿ.
•    ಪ್ರತಿ ತಪ್ಪು ಅಥವಾ ದೌರ್ಬಲ್ಯಗಳಿಂದ ಕೆಲವನ್ನು ಕಳೆದುಕೊಂಡರೂ ಪುನಃ ಅದಕ್ಕೂ ಹೆಚ್ಚಿನದನ್ನು ಗಳಿಸುವ ಶಕ್ತಿ ನಿಮ್ಮಲ್ಲಿದೆ ಎಂಬುದನ್ನು ಮರೆಯಬಾರದು.
•    ಪ್ರತಿ ಎಡವಟ್ಟೂ ಸಹ ಹೊಸ ಕೌಶಲ್ಯ ಪಡೆಯಲು ಸಹಾಯಕವಾಗಬೇಕು. ಅಂತಯೇ ಪ್ರತೀ ನಿರಾಕರಣೆಯೂ ಸತ್ಯ ಶೋಧಕ ಮಾರ್ಗವಾಗಬೇಕು.
•    ಅಪವಾದ, ಹಿಂಸೆ, ಅನೈತಿಕತೆಗಳಿಂದ ದೂರವಿದ್ದು ಅವುಗಳ ವಿರುದ್ದದ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕು.
•    ಗೊಂದಲ ಮತ್ತು ಅಂಧ ನಂಬಿಕೆಗಳಿಂದ ಹೊರಬಂದು ನಂಬಿಕೆ ಮತ್ತು ಧೃಢವಿಶ್ವಾದಿಂದ ಮುನ್ನಡೆಯಿರಿ.
•    ಒಡನಾಡಿಗಳಿಂದ ಧಾರ್ಮಿಕ ಪ್ರಭಾವಕ್ಕೆ ಒಳಗಾಗುವುದಕ್ಕಿಂತ ಶಿಕ್ಷಣದಿಂದ ಸಾಮಾಜಿಕರಣ ಹೊಂದುವುದು ಅತೀಮುಖ್ಯ.
•    ತಂದೆ-ತಾಯಿ, ಬಂಧು-ಬಳಗ, ಸ್ನೇಹಿತರು, ಒಡನಾಡಿಗಳ ಸಂಬಂಧವನ್ನು ಪ್ರತೀಕಾರದಿಂದ ಹಾಳು ಮಾಡಿಕೊಳ್ಳುವ ಬದಲು ಪ್ರೀತಿ ವಿಶ್ವಾಸಗಳಿಂದ ಗಟ್ಟಿಗೊಳಿಸಿಕೊಳ್ಳಿ.
•    ಅನ್ಯಾಯ ಅಕ್ರಮಗಳ ವಿರುದ್ದ ಧ್ವನಿ ಎತ್ತಬೇಕೇ ಹೊರತು ಸೇಡು ಪ್ರತೀಕಾರಗಳಿಗಾಗಿ ಅಲ್ಲ.
•    ವಾಹನದ ವೇಗ ಹೆಚ್ಚಳ ಮತ್ತು ನಿಯಂತ್ರಣಕ್ಕೆ ಆಕ್ಸಿಲೇಟರ್ ಮತ್ತು ಬ್ರೇಕ್ ಇರುವಂತೆ ಪ್ರತಿ ವಿಷಯದ ಮೇಲೆ ಪ್ರಭುತ್ವ ಮತ್ತು ನಿಯಂತ್ರಣ ಅಗತ್ಯ. ಇದು ಮೌಲ್ಯಗಳನ್ನು ಅಳವಡಿಸಿಕೊಳ್ಳುವದರಿಂದ ಮಾತ್ರ ಸಾಧ್ಯ.
•    ನೈತಿಕ ಮೌಲ್ಯಗಳ ಜ್ಞಾನ ಅಳವಡಿಸಿಕೊಳ್ಳದ ಹೊರತು ವ್ಯಕ್ತಿಯ ವ್ಯಕ್ತಿತ್ವ ಪರಿಪೂರ್ಣವಲ್ಲ. ನೈತಿಕ ಮೌಲ್ಯಗಳು ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
•    ಸಮಾಜದ ಸಂತ್ರಸ್ತರಿಗೆ ಕಾಲೂರಿ ಮುನ್ನಡೆಯಲು ಸಹಾಯ ಹಸ್ತ ನೀಡಿ. ಆಗ ನಿಮ್ಮ ವೈಶಿಷ್ಟ್ಯತೆಯನ್ನು ಜಗಕೆ ತೋರಿಸಲು ಸಾಧ್ಯ.
ಕೊನೆ ಹನಿ
    ಸಮಾಜ ಯಾವಾಗಲೂ ಚಲನಶೀಲವಾದುದೇ ಹೊರತು ಸ್ಥಿರವಾದುದು ಅಲ್ಲ. ಜನರ ಮೌಲ್ಯಗಳು, ಪ್ರವೃತ್ತಿಗಳು, ಚಟುವಟಿಕೆಗಳು ಬದಲಾಗುವ ಮೂಲಕ ಸರಳ ಸಂಪ್ರಾದಾಯಿಕ ಸಮಾಜವು ಪರಿಪೂರ್ಣ ಸಮಾಜವಾಗಿ ಪರಿವರ್ತನೆಗೊಳ್ಳುತ್ತದೆ.
    ಯಾವುದೇ ಸಮಾಜದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಮಹತ್ವದ್ದು. ಯುವಕರ ಸಹಭಾಗಿತ್ವ ಇಲ್ಲದೇ ಸಮಾಜ ಸ್ವಾವಲಬಿಯಾಗಿ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಪ್ರತೀ ಸಮಾಜದ ಉನ್ನತಿಗೆ ಯುವಕರ ಪ್ರಾಮಾಣಿಕ ಮತ್ತು ಸನ್ನಡತೆಯ ವರ್ತನೆಗಳೇ ಮೂಲಾಂಶಗಳು. ಯುವಕರು ಇದನ್ನರಿತು ಸಮಾಜದ ಪ್ರಗತಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.
ಶಿಫಾರಸ್ಸುಗಳು
•    ಸಮಾಜದ ಮೂಲಘಟಕವಾದ ಕುಟುಂಬವು ತನ್ನ ತಪ್ಪುಗಳನ್ನು ಅಂದರೆ ಮೌಲ್ಯಗಳನ್ನು ಪುನರ್ ರಚಿಸಿಕೊಳ್ಳುವ ಮೂಲಕ ಸಮಾಜದ ಧನಾತ್ಮಕ ಬದಲಾವಣೆಗೆ ಮುಂದಾಗಬೇಕು. ಕುಟುಂಬ ಸಮಾಜೀಕರಣದ  ದಲ್ಲಾಲಿಯಾಗಿ ಪ್ರಮುಖ ಪಾತ್ರ ವಹಿಸಬೇಕು.
•    ವಿಶೇಷವಾಗಿ ಯುವಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಜವಾಬ್ದಾರಿ ವಹಿಸಬೇಕು. ಏಕೆಂದರೆ ನಾಳೆಯ ಭವಿಷ್ಯ ಇಂದಿನ ಅಡಿಪಾಯವನ್ನು ಅವಲಂಬಿಸಿದೆ. ಅದಕ್ಕಾಗಿ ವಿಶ್ವಾಸಾರ್ಹವಾದ ಯುವ ನಾಯಕರ ನಿರ್ಮಾಣ ಇಂದಿನ ಆಧ್ಯತೆ ಆಗಬೇಕು.
•    ಯುವಕರು ಪರಸ್ಪರ ಸಾಮಾಜಿಕ ಜಾಲಗಳನ್ನು ಸೃಷ್ಟಿಸಿಕೊಂಡು ನೈತಿಕ ವಿಷಯಗಳ ಬಗ್ಗೆ ಚರ್ಚಿಸುತ್ತಾ ತಮ್ಮನ್ನು ತಾವೇ ಪ್ರೋತ್ಸಾಹಿಸಿಕೊಳ್ಳಬೇಕು. ಆ ಮೂಲಕ ಸಾಂಸ್ಥಿಕವಾದ ಮತ್ತು ಬದುಕಲು ಅರ್ಹವಾದ ನೈತಿಕತೆಯನ್ನು ಸ್ಥಾಪಿಸಿಕೊಳ್ಳಬಹುದು.

ಉದ್ಯೋಗಕ್ಕಾಗಿ ಶಿಕ್ಷಣ ಎನ್ನುವ ವ್ಯವಸ್ಥೆಯಿಂದ ಮೌಲ್ಯಗಳು ನಾಶವಾಗುತ್ತಿವೆ. ಡಿಜಿಟಲ್ ತಂತ್ರಜ್ಞಾನದಿಂದ ಪಾರಂಪರಿಕ ಸಂಬಂಧಗಳು ಮತ್ತು ಸಂಸ್ಕøತಿ ಹದಗೆಡುತ್ತಿದೆ. ಎಲ್ಲಿಯವರೆಗೆ ಶಿಕ್ಷಣದಿಂದ ಬದುಕುವ ದಾರಿಯನ್ನು ಹೇಳಿಕೊಡಲಾಗುತ್ತಿಲ್ಲವೋ ಅಲ್ಲಿಯವರೆಗೆ ಮೌಲ್ಯಗಳು ಬೆಳೆಯಲು ಸಾಧ್ಯವಿಲ್ಲ. ಮೌಲ್ಯಗಳನ್ನು ಬೆಳೆಸಿಕೊಳ್ಳಲು ಯಾವುದೇ ಪದವಿಯ ಅಗತ್ಯವಿಲ್ಲ.  
                   ಡಾ//ಸತೀಶ್ ಪಾಟೀಲ್. ಉಪನ್ಯಾಸಕರು
                   ಸರ್ಕಾರಿ ಪ್ರಥಮ ದರ್ಜೆ ಕಾಲೇಜು                 
                   ಹಗರಿಬೊಮ್ಮನಹಳ್ಳಿ












ಸುಸ್ಥಿರ ಅಭಿವೃದ್ದಿಗಾಗಿ ನೈತಿಕ ಮೌಲ್ಯಗಳ ಜೊತೆಗೆ ಸಂವಿಧಾನಾತ್ಮಕ ಮೌಲ್ಯಗಳಾದ ಸಮಾನತೆ, ಭಾತೃತ್ವ, ಸಾರ್ವಭೌಮತೆ, ಪ್ರಜಾಸತ್ತಾತ್ಮಕತೆ ಮುಂತಾದ  ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇವು ಕೇಲವ ತಾತ್ವಿಕ ಮೌಲ್ಯಗಳಾಗದೇ ಕುಟುಂಬದಿಂದಲೇ ಪ್ರಾಯೋಗಿಕವಾಗಿ ಅಳವಡಿಕೆಯಾಗಬೇಕು.
               ಎಂ.ಲೋಕೇಶ್.ಹೊಳಗುಂದಿ.
             ಸಂಪನ್ಮೂಲ ವ್ಯಕ್ತಿ ಹಾಗೂ ಸಂವಹನಕಾರರು
         ಅಬ್ದುಲ್ ನಜೀರ್‍ಸಾಬ್ ಗ್ರಾಮೀಣಾಭಿವೃದ್ದಿ ಸಂಸ್ಥೆ ಮೈಸೂರು.

                                                                                                                         ಆರ್.ಬಿ.ಗುರುಬಸವರಾಜ

No comments:

Post a Comment