ದಿನಾಂಕ 12-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.
ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿದ
ಮಳೆಹುಚ್ಚ ಮತ್ತು ಬೆಪ್ಪ ತಕ್ಕಡಿ ಬೋಳೆ ಶಂಕರ
ಬೇಸಿಗೆ ರಜೆ ಬಂತೆಂದರೆ ಸಾಕು ಗ್ರಾಮ ಮಟ್ಟದಿಂದ ರಾಜಧಾನಿಯವರೆಗೆ ಮಕ್ಕಳ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತವೆ. ವಿಪರ್ಯಾಸವೆಂದರೆ ಬಹುತೇಕ ಶಿಬಿರಗಳು ಮತ್ತೊಂದು ರೀತಿಯ ಟ್ಯೂಷನ್ ಕ್ಲಾಸ್‍ಗಳಂತಾಗಿವೆ. ಇವೆಲ್ಲವುಗಳ ನಡುವೆ ಕೇವಲ ಬೆರಳೆಣಿಕೆಯ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ, ಅದಕ್ಕೊಂದು ಹೊಸ ಮಾರ್ಗವನ್ನು ಸೂಚಿಸುವ ಕೇಂದ್ರಗಳಾಗಿವೆ. ಅಂತಹ ವಿರಳಾತಿವಿರಳ ಶಿಬಿರಗಳಲ್ಲಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ‘ರಂಗಭಾರತಿ’ ಸಂಸ್ಥೆ ನಡೆಸಿದ “ಚಿಣ್ಣರ ಮೇಳ” ವಿಶಿಷ್ಟವೂ ವಿಭಿನ್ನವೂ ಆಗಿತ್ತು. ಏಕೆಂದರೆ ಇಲ್ಲಿನ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ರಂಗಭೂಮಿಯ ಕ್ರಿಯಾಶೀಲ ನಟರು, ನೃತ್ಯಗಾರರು, ರಂಗ ನಿರ್ದೇಶಕರು, ಸೃಜನಶೀಲ ಕಾರ್ಯಕರ್ತರು ಆಗಿದ್ದರಿಂದ ಶಿಬಿರ ವಿಶೇಷತೆಯಿಂದ ಕೂಡಿತ್ತು. ಸದಾ ಕ್ರಿಯಾಶೀಲ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡ ರಂಗಭಾರತಿ ಮಕ್ಕಳಲ್ಲಿ ಅಪೇಕ್ಷಿತ ಕ್ರಿಯೆಗಳನ್ನು ಹೊರಹೊಮ್ಮುವಂತೆ ಮಾಡಿತ್ತು.
‘ಸಂಗೀತ, ನೃತ್ಯ ಮತ್ತು ನಾಟಕೋತ್ಸವ’ ಎಂಬ ಅಡಿಬರಹದಲ್ಲಿ 20 ದಿನಗಳ ಕಾಲ ಮೂಡಿಬಂದ ಶಿಬಿರದ ಸಮಾರೋಪದಲ್ಲಿ ನಡೆದ ಮಕ್ಕಳ ನಾಟಕಗಳು ಅಪಾರ ಪ್ರೇಕ್ಷಕರನ್ನು ರಂಜಿಸಿದವು. ಎರಡು ದಿನ ನಡೆದ ಸಮಾರೋಪದಲ್ಲಿ ಪ್ರತಿದಿನ ಒಂದು ಮಕ್ಕಳ ನಾಟಕ ಮತ್ತು ಇನ್ನೊಂದು ದೊಡ್ಡವರ ನಾಟಕ ಇದ್ದವು. ಜೊತೆಗೆ ಮಕ್ಕಳ ನೃತ್ಯ ರೂಪಕಗಳು ಇದ್ದವು.
ದೊಡ್ಡವರ ನಾಟಕಗಳಿಗಿಂತ ಹೆಚ್ಚು ಖುಷಿ ನೀಡಿದ್ದು ಮಕ್ಕಳ ನಾಟಕಗಳು. ‘ಮಳೆಹುಚ್ಚ’ (ರಚನೆ: ಕೃಷ್ಣಮೂರ್ತಿ ಬಿಳಿಗೆರೆ) ಮತ್ತು ‘ಬೆಪ್ಪ ತಕ್ಕಡಿ ಬೋಳೆ ಶಂಕರ’ (ರಚನೆ: ಡಾ||ಚಂದ್ರಶೇಖರ ಕಂಬಾರ) ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿ ಬಾಯಿಯ ಮೇಲೆ ಬೆರಳಿಡುವಂತೆ ಮಾಡಿದವು. ಮಕ್ಕಳು ಹೇಗೆ ಅಭಿನಯಿಸಿದರೂ ಚೆಂದ ಸಾಮಾನ್ಯ ಭ್ರಮೆಗಿಂತ ಅವರ ವಾಸ್ತವದ ಪ್ರಯತ್ನಗಳು ಪ್ರೇಕ್ಷಕರಿಗೆ ಪ್ರಿಯವಾಗಿದ್ದವು. ಪ್ರೀತಿ, ಪ್ರೇಮ, ದುಗುಡ, ಸಿಟ್ಟು, ಆಕ್ರೋಶ, ಗಂಭೀರತೆ, ಶಾಂತತೆ, ನಿರಾಶೆ ಹೀಗೆ ಎಲ್ಲಾ ಭಾವನೆಗಳನ್ನು ಅಚ್ಚುಕಟ್ಟಾಗಿ ತಮ್ಮ ಹಾವ ಭಾವದಿಂದ ಪ್ರದರ್ಶಿಸಿದ ಪರಿ ಮನೋಜ್ಞವಾಗಿತ್ತು. ಪಾತ್ರಗಳ ವ್ಯಕ್ತಿತ್ವವನ್ನು ತಮ್ಮಲ್ಲಿ ಅವಗಾಹಿಸಿಕೊಂಡು ಪಾತ್ರವೇ ತಾನೆಂಬಂತೆ ಅಭಿನಯಿಸಿದರು. ಇಲ್ಲಿ ದೊಡ್ಡವರ ಅನುಕರಣೆ ಇದ್ದರೂ ಅದರಲ್ಲಿ ಸೃಜನಶೀಲತೆ ಮತ್ತು ಕಲೆಯನ್ನು ಗೌರವಿಸುವ ಮನೋವಿಕಾಸದ ಮಾರ್ಗಗಳಿದ್ದವು. ಪರಸ್ಪರ ಪಾತ್ರಧಾರಿಗಳ ಕೌಶಲ್ಯಗಳನ್ನು ಗೌರವಿಸುತ್ತಾ, ತಮ್ಮ ತಂಡದ ಉತ್ತಮ ಪ್ರದರ್ಶನಕ್ಕಾಗಿ ಪ್ರಯತ್ನಿಸುತ್ತಿದ್ದರು. ಸಾಧನೆಯ ಹಂಬಲ ಗೊತ್ತಿಲ್ಲದ ಮಕ್ಕಳು ಮುಕ್ತವಾಗಿ ಅಭಿನಯಿಸಿದರು.
ರಂಗಸ್ಥಳದ ಸದ್ಭಳಕೆ, ರಂಗಪರಿಕರ ಮತ್ತು ರಂಗಸಜ್ಜಿಕೆಯಲ್ಲಿ ಹಿರಿಯರನ್ನು ಮೀರಿಸಿದ ಅವರ ಜಾಣ್ಮೆ ಪ್ರೇಕ್ಷಕರಿಗೆ ಪ್ರಿಯವಾದವು. ಧ್ವನಿಯ ಏರಿಳಿತ, ಔಚಿತ್ಯಪೂರ್ಣ ಹಾವ ಭಾವಗಳು ಎಂತಹ ಪರಿಣಿತ ವೃತ್ತಿಪರ ರಂಗಕರ್ಮಿಗಳನ್ನೂ ಮೀರಿಸುವಂತಿದ್ದವು. ‘ಮಕ್ಕಳಿಗೆ ಸೂಕ್ತ ರಂಗ ತರಬೇತಿ ನೀಡಿದರೆ ಉತ್ತಮ ನಟರಾಗುತ್ತಾರೆ ಜೊತೆಗೆ ಮಾನವೀಯ ಪ್ರಜ್ಞೆ ಬೆಳೆಸಿಕೊಳ್ಳುತ್ತಾರೆ’ ಎಂದು ಜ್ಹೀ ಕನ್ನಡ ವಾಹಿನಿಯಲ್ಲಿ ಡ್ರಾಮಾ ಜೂನಿಯರ್ ಎಂಬ ರಿಯಾಲಿಟಿ ಶೋ ಪ್ರಾರಂಭದಲ್ಲಿ ಹಿರಿಯ ನಟಿ ಲಕ್ಷ್ಮಿಯವರು ಹೇಳಿದ ಮಾತು ಅಕ್ಷರಶಃ ಸತ್ಯ. 20 ದಿನಗಳ ಚಿಣ್ಣರ ಮೇಳದಲ್ಲಿ ಕೆಲವೇ ದಿನಗಳು ನಡೆದ ರಂಗತಾಲೀಮು ಮಕ್ಕಳ ಕಲೆಯನ್ನು ಒರೆಗೆ ಹಚ್ಚಿದ್ದವು.
‘ಕಲೆ ಎಂದರೆ ಕೇವಲ ಅಬ್ಬರದ ಪೋಷಾಕುಗಳ, ಧ್ವನಿವರ್ಧಕಗಳ, ದೀಪಗಳ ವ್ಯವಸ್ಥೆ ಅಲ್ಲ. ಅದೊಂದು ಕಲಿಕೆಯ ವ್ಯವಸ್ಥೆ. ಜೀವನದ ಪಾಠ. ವಿಚಾರ, ದೈಹಿಕ ಶ್ರಮ ಮತ್ತು ನೈತಿಕತೆಗಳನ್ನು ಕಲಿಸುವ ಏಕೈಕ ವೇದಿಕೆ’ ಎಂದು ಖ್ಯಾತ ರಂತಗಕರ್ಮಿ ಪ್ರಸನ್ನ ಅವರು ಸಮಾರೋಪ ನುಡಿಯಲ್ಲಿ ಮಕ್ಕಳ ನಾಟಕ ಕಲೆಯನ್ನು ಪ್ರೋತ್ಸಾಹಿಸುವ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಎಲೆಕ್ಟ್ರಾನಿಕ್ ಮಾಧ್ಯಮದ ಭರಾಟೆಯಲ್ಲೂ ಮಕ್ಕಳ ರಂಗಾಭಿನಯ ಪ್ರೇಕ್ಷಕರನ್ನು ಮೂಕವಿಸ್ಮತರನ್ನಾಗಿಸಿತು.
ಆರ್.ಬಿ.ಗುರುಬಸವರಾಜ
No comments:
Post a Comment