ದಿನಾಂಕ 16-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.
ಇಟ್ಟಿಗೆ ಗೂಡಲ್ಲಿ ಗಟ್ಟಿಗೊಂಡ ಬದುಕು
ಪ್ರತಿಯೊಬ್ಬರಿಗೂ ಒಂದು ಒಳ್ಳೆ ಮನೆ ಕಟ್ಟಬೇಕು, ಅದರಲ್ಲಿ ಸುಖವಾದ ಜೀವನ ಸಾಗಿಸಬೇಕೆಂಬ ಹಂಬಲ, ಕನಸು ಇರುವುದು ಸಹಜ. ಈ ಕನಸಿನ ಮಾಯಾಲೋಕದಲ್ಲಿ ವಾಸ್ತವವಾಗಿ ಮನೆ ಕಟ್ಟಲು ಬೇಕಾಗುವ ಇಟ್ಟಿಗೆ ನಿರ್ಮಾತೃಗಳನ್ನೇ ಮರೆತುಬಿಡುತ್ತೇವೆ. ಇಟ್ಟಿಗೆ ತಯಾರಕರ ಬದುಕನ್ನು ತೀರಾ ಹತ್ತಿರದಿಂದ ಕಂಡವರು ಬಹಳ ಕಡಿಮೆ.
ಇಟ್ಟಿಗೆ ಬದುಕು ಕರ್ನಾಟಕದಲ್ಲಿ ಅತೀ ಪ್ರಮುಖ ದುಡಿಮೆ ಹಾಗೂ ವೃತ್ತಿಯಾಗಿದೆ. ಅದರಲ್ಲೂ ಮಧ್ಯ ಕರ್ನಾಟಕ ಎಂದೇ ಖ್ಯಾತಿಯಾದ ದಾವಣಗೆರೆ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಇಟ್ಟಿಗೆಯ ನಂಬಿ ಜೀವನ ಸಾಗಿಸುವವರೇ ಹೆಚ್ಚು. ಪ್ರತಿವರ್ಷ ಹರಿಹರದ ಸುತ್ತಮುತ್ತ ಸಾವಿರಾರು ಇಟ್ಟಿಗೆ ಭಟ್ಟಿಗಳು ತಲೆ ಎತ್ತುತ್ತವೆ. ಈ ಭಟ್ಟಿಗಳಲ್ಲಿ ಸಾವಿರಾರು ಕುಟುಂಬಗಳು ತಮ್ಮ ಮುಂದಿನ ಒಂದು ವರ್ಷದ ಜೀವನಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತವೆ.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಮೂರ್ನಾಲ್ಕು ತಿಂಗಳುಗಳಿಗೆ ಬೇಕಾದ ಸಕಲ ವಸತಿ ಸೌಲಭ್ಯ ಒದಗಿಸುವುದು ಹಾಗೂ ಅವರ ಜೀವನ ನಿರ್ವಹಣೆಗೆ ಬೇಕಾದ ಹಣಕಾಸಿನ ವ್ಯವಸ್ಥೆ ಮಾಡುವುದು ಇಟ್ಟಿಗೆ ಮಾಲೀಕರಿಗೆ ಸವಾಲಿನ ಕೆಲಸ. ಕೂಲಿಕಾರ್ಮಿಕರಿಗೆ ಮುಂಗಡವಾಗಿ ಹಣ ನೀಡಿ ಕೆಲಸಕ್ಕೆ ಖಾಯಂಗೊಳಿಸಿಕೊಳ್ಳುವುದು ಮೊದಲ ಆಧ್ಯತೆ. ಕೆಲವು ಭಟ್ಟಿಗಳಲ್ಲಿ ತಮಿಳುನಾಡು, ಆಂದ್ರಪ್ರದೇಶಗಳಿಂದ ಕೂಲಿ ಆಳುಗಳನ್ನು ಕರೆತರುವುದೂ ಉಂಟು.
ಇಟ್ಟಿಗೆ ತಯಾರಿಕೆಯಲ್ಲಿ ಮಾಲೀಕರು ಮತ್ತು ಕೂಲಿ ಕಾರ್ಮಿಕರರಲ್ಲಿ ಹೊಂದಾಣಿಕೆ ಮುಖ್ಯ. ಇವರಿಬ್ಬರೂ ಸೀಸನ್ ಇಲ್ಲದ ತಿಂಗಳುಗಳಲ್ಲಿ ಬೇರೆ ಬೇರೆ ವೃತ್ತಿಗಳಲ್ಲಿ ನಿರತರಾಗಿದ್ದು, ಸೀಸನ್ ಪ್ರಾರಂಭಕ್ಕೆ ಮುಂಚೆ ಪರಸ್ಪರ ಭೇಟಿ ಮತ್ತು ಮಾತುಕತೆಯೊಂದಿಗೆ ವ್ಯವಹಾರ ಮತ್ತು ವೃತ್ತಿ ಪ್ರಾರಂಭವಾಗುತ್ತದೆ.
ಸೀಸನ್ ಇಲ್ಲದ ಸಮಯದಲ್ಲಿ ಮಾಲೀಕರು ಇಟ್ಟಿಗೆ ತಯಾರಿಸಲು ಬೇಕಾದ ಮಣ್ಣು, ಮರಳು, ಹೊಟ್ಟು, ಕಲ್ಲಿದ್ದಲು ಇನ್ನಿತರೇ ಸಾಮಗ್ರಿಗಳ ಸಂಗ್ರಹಣೆಯಲ್ಲಿ ನಿರತರಾಗಿರುತ್ತಾರೆ. ಸುಟ್ಟ ಇಟ್ಟಿಗೆಗಳಿಗೆ ಹೆಚ್ಚು ಬೇಡಿಕೆ ಇದೆ. ಅದಕ್ಕನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ಕೇವಲ ಕೆಲವೇ ತಿಂಗಳುಗಳ ಉದ್ಯೋಗ ಆಗಿರುವುದರಿಂದ ಬೇಡಿಕೆಗನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ.
ಪ್ರತೀ ಮಾಲೀಕರೂ ಒಂದು ಸೀಸನ್‍ನಲ್ಲಿ ಕನಿಷ್ಟ 5-10 ಲಕ್ಷ ಇಟ್ಟಿಗೆಗಳ ಭಟ್ಟಿ ತಯಾರಿಸುತ್ತಾರೆ. ಒಟ್ಟಾರೆ ಒಂದು ಇಟ್ಟಿಗೆ ತಯಾರಾಗಲು ಕಚ್ಛಾ ಸಾಮಗ್ರಿ ಸಂಗ್ರಹಣೆ, ಕೂಲಿ ಕಾರ್ಮಿಕರ ವೇತನ, ಸುಡಲು ಬೇಕಾದ ಹೊಟ್ಟು ಮತ್ತು ಕಲ್ಲಿದ್ದಲು, ಸಾಮಗ್ರಿಗಳ ಸಾಗಾಣಿಕೆ ಎಲ್ಲಾ ನಿರ್ವಹಣಾ ವೆಚ್ಚ ಸೇರಿ 4-5ರೂ ತಗಲುತ್ತದೆ. ಬೇಡಿಕೆ ಹೆಚ್ಚಾದರೆ ಹೂಡಿದ ಬಂಡವಾಳಕ್ಕಿಂತ ಅಲ್ಪ ಆದಾಯ ದೊರೆಯುತ್ತದೆ.
ತೀರಾ ಸೀಸನಲ್ ದುಡಿಮೆಯಾದ ಇಟ್ಟಿಗೆ ಬದುಕು ಕೇವಲ ಕೆಲವೇ ತಿಂಗಳುಗಳು ಮಾತ್ರ. ದೀಪಾವಳಿಯ ಆಸುಪಾಸು ಪ್ರಾರಂಭವಾಗುವ ಈ ಬದುಕು ಹೋಳಿ ಹುಣ್ಣಿಮೆಯಲ್ಲಿ ಅಂತ್ಯಗೊಳ್ಳುತ್ತದೆ. ಕೆಲವೊಮ್ಮೆ ಪ್ರಕೃತಿಯ ವಿಕೋಪ ಅಥವಾ ಅಕಾಲಿಕ ಮಳೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಇಟ್ಟಿಗೆಯಿಂದ ಕಟ್ಟಿಕೊಂಡ ಬದುಕು ಮೂರಾಬಟ್ಟೆಯಾಗುತ್ತದೆ. ನಷ್ಟ ಅನುಭವಿಸಿದ ಕೆಲ ಮಾಲೀಕರು ಸಾವಿಗೆ ಶರಣಾಗುವುದೂ ಉಂಟು.
ಬಹುತೇಕ ಇಟ್ಟಿಗೆ ಭಟ್ಟಿಗಳು ಉಳುಮೆ ಜಮೀನಿನಲ್ಲೇ ಪ್ರಾರಂಭವಾಗಿವೆ. ಅಕ್ಕಪಕ್ಕದವರು ಭಟ್ಟಿ ಪ್ರಾರಂಭಿಸಿದ್ದು ಕಂಡು ತಾವೂ ಪ್ರಾರಂಭಿಸಬೇಕೆಂಬ ಹಠಕ್ಕೆ ಬಿದ್ದು ಪ್ರಾರಂಭಿಸಿದವರೇ ಹೆಚ್ಚು. ಕಚ್ಛಾ ಸಾಮಗ್ರಿ ಸರಬರಾಜು, ಮಾರುಕಟ್ಟೆ ವ್ಯವಸ್ಥೆಯ ನಿರ್ವಹಣಾ ಕೌಶಲ್ಯ ಇಲ್ಲದೇ ಕೆಲವು ಮಾಲೀಕರು ನಷ್ಟ ಅನುಭವಿಸುತ್ತಾರೆ. ಸೂಕ್ತ ಮುಂಜಾಗರೂಕತೆ ವಹಿಸಿ ವ್ಯವಹಾರ ಕುದುರಿಸಿ ಈ ವೃತ್ತಿಯಲ್ಲಿ ಬದುಕನ್ನು ಗಟ್ಟಿಗೊಳಿಸಿಕೊಂಡವರೇ ಹೆಚ್ಚು. ಇತ್ತೀಚೆಗೆ ನಿರುದ್ಯೋಗಿ ವಿದ್ಯಾವಂತ ಯುವಕರು ಈ ವೃತ್ತಿಯನ್ನು ನಂಬಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವುದು ಸಂತೋಷದಾಯಕವಾಗಿದೆ.
No comments:
Post a Comment