June 3, 2016

ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ EXAM PREPARE

ಏಪ್ರಿಲ್ 2016ರ 'ಗುರುಮಾರ್ಗ'ದಲ್ಲಿ ಪ್ರಕಟವಾದ ನನ್ನ ಕಿರುಬರಹ

ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ


ವರ್ಷಾಂತ್ಯಕ್ಕೆ ನಡೆಯುವ ಪರೀಕ್ಷೆ ಕೇವಲ ಮಕ್ಕಳ ಭವಿಷ್ಯಕ್ಕೆ ಅಲ್ಲ. ಅದು ಶಿಕ್ಷಕರ ಹಾಗೂ ಶಾಲಾ ಪರಿಸರಗಳ ಗುಣಮಟ್ಟದ ಪ್ರತೀಕ ಎಂದರೆ ತಪ್ಪಲ್ಲ. ಇತ್ತೀಚೆಗೆ ವಾರ್ಷಿಕ ಫಲಿತಾಂಶವೇ ಶಾಲಾ ಮಾನಕಗಳಾಗಿರುವುದು ನಮ್ಮ ದುರ್ದೈವ. ಶಿಕ್ಷಕರಾದ ನಾವು ಈ ವ್ಯವಸ್ಥೆಗೆ ಹೊಂದಿಕೊಂಡು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು ಅನಿವಾರ್ಯ. 
ಪ್ರಸ್ತುತ ಶಿಕ್ಷಕರ ಮುಂದಿರುವ ಬಹುದೊಡ್ಡ ಸವಾಲು ಎಂದರೆ ಉತ್ತಮ ಫಲಿತಾಂಶದೊಂದಿಗೆ ಶಾಲೆಯನ್ನು ಮುನ್ನಡೆಸುವುದು. ಉತ್ತಮ ಫಲಿತಾಂಶ ಪಡೆಯಲು ಮಕ್ಕಳನ್ನು ಪರೀಕ್ಷೆಗೆ ಉತ್ತಮವಾಗಿ ಸಿದ್ದಪಡಿಸುವುದು ನಮ್ಮೆಲ್ಲರ ಮೇಲಿನ ಗುರುತರ ಹೊಣೆಗಾರಿಕೆಯಾಗಿದೆ. ವರ್ಷದುದ್ದಕ್ಕೂ ಕಲಿಕೆ-ಬೋಧನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದರೂ ಪರೀಕ್ಷೆಯ ವೇಳೆ ಯಾವ ಮಕ್ಕಳ ಫಲಿತಾಂಶ ಏನಾಗುವುದೋ ಎಂಬ ಆತಂಕ ಸಹಜ. ಈ ಆತಂಕ ನಿವಾರಣೆಗಾಗಿ ಪ್ರತಿಯೊಬ್ಬ ಶಿಕ್ಷಕರೂ ಕೆಲವು ಯೋಜಿತ ತಂತ್ರಗಳನ್ನು ಅನುಸರಿಸುವ ಮೂಲಕ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. 
ಫೆಬ್ರವರಿ ಅಂತ್ಯದ ವೇಳೆಗೆ ಪ್ರತೀ ಮಗುವಿನ ಕಲಿಕೆಯ ಅಂದಾಜು ಮಟ್ಟ ನಮಗೆ ತಿಳಿದಿರುತ್ತದೆ. ಕಲಿಕೆಯ ಪರಿಕಲ್ಪನೆಗಳನ್ನು ಆಧಾರವಾಗಿಟ್ಟುಕೊಂಡು ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಮಟ್ಟಕ್ಕನುಗುಣವಾಗಿ ಮಕ್ಕಳಿಗೆ ಸ್ವಾವಲೋಕನ ಕಾರ್ಡ್‍ಗಳನ್ನು ತಯಾರಿಸಬೇಕು. ಅವುಗಳನ್ನು ಮಕ್ಕಳಿಗೆ ನೀಡಿ ಅವರ ಕಲಿಕಾ ಮಟ್ಟವನ್ನು ಅವರೇ ಕಂಡುಕೊಳ್ಳಲು ಯೋಜನೆ ರೂಪಿಸಿಬೇಕು. ಇದು ತೀರಾ ಸಂಕೀರ್ಣ ಎನಿಸಿದರೂ ಪ್ರತೀ ಮಗುವೂ ತನ್ನ ಸಾಮಥ್ರ್ಯ ತಿಳಿದು ಪರೀಕ್ಷೆ ಎದುರಿಸಲು ಸಿದ್ದತೆ ನಡೆಸಲು ಇದು ಸಹಕಾರಿ. 
ಪ್ರತೀ ಮಕ್ಕಳ ಕಲಿಕಾ ಮಟ್ಟ ತಿಳಿದ ನಂತರ ಅವರನ್ನು ನಿಗದಿತ ಗುಂಪುಗಳಾಗಿ ವಿಂಗಡಿಸಿ. ಗುಂಪುವಾರು ಅಧ್ಯಯನಕ್ಕೆ ಆಧ್ಯತೆ ನೀಡಿ. ಮೇಲುಸ್ತುವಾರಿ ವಹಿಸುತ್ತಾ ಮಾರ್ಗದರ್ಶನ ನೀಡಿ. ಸಮಯ ಹೊಂದಾಣಿಕೆ ಮಾಡಿಕೊಂಡು ಪೂರ್ಣಗೊಳಿಸಿದ ಘಟಕಗಳನ್ನು ಪುನರಾರ್ತನೆಗೊಳಿಸಿ. ಕೆಲವು ಮಕ್ಕಳಿಗೆ ಪುನರಾವರ್ತನೆ ಬೇಜಾರಾಗಬಹುದು. ಇದನ್ನು ನಿವಾರಿಸಲು ದೈನಂದಿನ ಸಾಮಾನ್ಯ ಬೋಧನೆಗಿಂತ ವಿಭಿನ್ನವಾದ ತಂತ್ರಗಾರಿಕೆ ಬಳಸಿ. ಕಲಿತ ಪರಿಕಲ್ಪನೆಗಳನ್ನು ಗಟ್ಟಿಗೊಳಿಸಲು ಪುನರಾವರ್ತನೆ ತುಂಬಾ ಸಹಕಾರಿ. 
ಪರೀಕ್ಷೆ ಪ್ರಾರಂಭಕ್ಕೂ ಒಂದು ತಿಂಗಳು ಮುನ್ನವೇ ಅದರ ಭಯ ನಮ್ಮಲ್ಲಿ ಆವರಿಸುವುದು ಸಹಜ. ಸಿಲಬಸ್ ಮುಗಿಸಿಲ್ಲ ಎಂಬ ಬಗ್ಗೆಯಾಗಲೀ, ಮಕ್ಕಳು ಹೇಗೆ ಉತ್ತರಿಸುತ್ತಾರೋ ಎಂಬ ಬಗ್ಗೆಯಾಗಲೀ ಭಯಭೀತರಾಗಿರುವುದು ಯಾವುದೇ ಕಾರಣಕ್ಕೂ ಮಕ್ಕಳಿಗೆ ತಿಳಿಯಬಾರದು. ಪರೀಕ್ಷೆಯ ಭಯ ನಮ್ಮನ್ನು ಆವರಿಸಿರುವುದು ಮಕ್ಕಳಿಗೆ ತಿಳಿದರೆ ಅವರು ಅಧೀರರಾಗುವ ಸಂಧರ್ಭ ಇರುತ್ತದೆ. ಮೊದಲು ನಮ್ಮಲ್ಲಿನ ಭಯ ಬಿಟ್ಹಾಕಿ ಪರೀಕ್ಷೆ ಎದುರಿಸಲು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸೋಣ. 
ನಿತ್ಯವೂ ಮಕ್ಕಳಿಗೆ ನಿಗದಿತ ಕಲಿಕಾ ಗುರಿಗಳನ್ನು ನೀಡುವುದು ಒಂದು ಉತ್ತಮ ಪ್ರಯತ್ನ. ವಾಸ್ತವಾಂಶಗಳಿಂದ ಕೂಡಿದ, ಮಕ್ಕಳು ನಿರ್ವಹಿಸಲು  ಸಾಧ್ಯವಿರುವ ಗುರಿಗಳನ್ನು ನೀಡಬೇಕು. ಗುರಿ ಸಾಧಿಸಿದಾಗ ಅವರನ್ನು ಪ್ರಶಂಸಿಸಿ ಭಾವನಾತ್ಮಕವಾಗಿ ಸದೃಢಗೊಳಿಸಿ. ಆಗ ಇತರೇ ಮಕ್ಕಳಲ್ಲಿಯೂ ಸ್ವಾಭಿಮಾನದ ಕಿಚ್ಚು ಹೆಚ್ಚುತ್ತದೆ. ತಾವೂ ಇತರರಂತೆ ಮುಂದೆ ಬರಲು ಪ್ರಯತ್ನಿಸುತ್ತಾರೆ. ಇದರಿಂದ ಅವರಲ್ಲಿ ಪರೀಕ್ಷಾ ಭಯ ಹಿಮ್ಮೆಟ್ಟುತ್ತದೆ. 
ಮಕ್ಕಳಿಗೆ ಪರೀಕ್ಷೆಯ ವೇಳೆ ಅವರ ವಾಸ್ತವಿಕ ಕಲಿಕಾ ಮಟ್ಟವನ್ನು ತಿಳಿಸಿ. ಯಾವುದೇ ಕಾರಣಕ್ಕೂ ಅವರ ಕಲಿಕೆಯ ಮಟ್ಟವನ್ನು ಮರೆಮಾಚಬೇಡಿ. ತಮ್ಮ ನಿರೀಕ್ಷೆಗಳನ್ನು ಕಲಿಕಾ ಮಟ್ಟದೊಂದಿಗೆ ಹೋಲಿಸಿ ಪರೀಕ್ಷೆಗೆ ಸಿದ್ದತೆ ನಡೆಸಲು ಸಹಕಾರಿಯಾಗುತ್ತದೆ. ಬಾಹ್ಯ ಒತ್ತಡ ಅಥವಾ ಆಮಿಷಗಳಿಂದ ಸುಳ್ಳು ಭರವಸೆ ನೀಡುವುದನ್ನು ತಪ್ಪಿಸುತ್ತದೆ. 
ಶಾಲೆಯಲ್ಲಿನ ಪ್ರತಿ ಸಹುದ್ಯೋಗಿಯೂ ಒಂದು ಅಮೂಲ್ಯ ನಿಧಿ ಇದ್ದಂತೆ. ಸದಾ ನಮ್ಮ ಬಳಿ ಇರುವ ಈ ನಿಧಿಯ ಸದ್ಭಳಕೆ ಮಾಡಿಕೊಳ್ಳುವ ಕುಶಲತೆ ಬೆಳೆಸಿಕೊಳ್ಳಬೇಕು. ಬೋಧನಾ ವಿಧಾನ, ಮೌಲ್ಯಮಾಪನ ತಂತ್ರಗಳು, ಬಳಸಬಹುದಾದ ಆಕರಗಳು ಇತ್ಯಾದಿ ವಿಷಯಗಳನ್ನು ಸಹುದ್ಯೋಗಿಗಳೊಂದಿಗೆ ಚರ್ಚಿಸಿ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. 
ಪರೀಕ್ಷೆಗೆ ಮಕ್ಕಳನ್ನು ಸಿದ್ದ ಪಡಿಸುವುವಾಗ ಪ್ರತೀ ವಿಷಯದ ಮೂಲಾಂಶಗಳನ್ನು ಮನದಟ್ಟು ಮಾಡಿಸಬೇಕು. ಮೂಲಾಂಶಗಳ ಬಳಕೆಯಿಂದ ಅನ್ವಯಿಕ ಪ್ರಶ್ನೆಗಳಿಗೆ ತಾರ್ಕಿಕವಾಗಿ ಉತ್ತರಿಸುವ ಕಲೆಯನ್ನು ಅಭಿವೃದ್ದಿ ಪಡಿಸಬೇಕು. ಒಬ್ಬ ಮೌಲ್ಯಮಾಪಕರಾಗಿ ಮಕ್ಕಳಿಂದ ಏನನ್ನು ನಿರೀಕ್ಷಿಸುತ್ತೇವೆಯೋ ಅದನ್ನೇ ನಮ್ಮ ತರಗತಿಯ ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳ ಕೈಬರಹದ ದೋಷಗಳನ್ನು ಸರಿಪಡಿಸಿ, ಸ್ಪುಟವಾಗಿ ಸುಂದರವಾಗಿ ಬರೆಯುವ ಕಲೆಯನ್ನು ಅಭಿವೃದ್ದಿಪಡಿಸಿ. ಕಾಗುಣಿತ, ಒತ್ತಾಕ್ಷರಗಳು, ಚಿಹ್ನೆಗಳು, ವ್ಯಾಕರಣಾಂಶಗಳು, ಸೂತ್ರಗಳು, ಚಿತ್ರಗಳು ಇತ್ಯಾದಿಗಳನ್ನು ದೋಷರಹಿತವಾಗಿ ಬರೆಯುವ ಅಭ್ಯಾಸ ಮಾಡಿಸಬೇಕು.
ಮಕ್ಕಳು ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕೆಂಬ ಧಾವಂತದಲ್ಲಿ ಮಾರ್ಚ್ ತಿಂಗಳಲ್ಲಿ ದಿನವೂ ಪರೀಕ್ಷೆ ನಡೆಸುವ ಪರಿಪಾಠ ಬೆಳೆದು ಬಂದಿದೆ. ಇದು ನಿಲ್ಲಬೇಕು. ಪರೀಕ್ಷೆಗಾಗಿ ಪರೀಕ್ಷೆ ನಡೆಸದೇ ಮಕ್ಕಳನ್ನು ಮಾನಸಿಕವಾಗಿ ಮತ್ತು ಬೌದ್ದಿಕವಾಗಿ ಪರೀಕ್ಷೆಗಳಿಗೆ ಸಿದ್ದಪಡಿಸಬೇಕು. ಕ್ವಿಜ್, ಗುಂಪುಚರ್ಚೆ, ಪ್ರಶ್ನೋತ್ತರ ಮಾಲಿಕೆ ಇತ್ಯಾದಿಗಳಿಂದ ಮಕ್ಕಳ ಕಲಿಕೆಯನ್ನು ದೃಢಪಡಿಸಬೇಕು. 
ಪರೀಕ್ಷೆಯ ವೇಳೆ ಪ್ರತೀ ಮಗುವಿನ ಆರೋಗ್ಯದ ಕಡೆಗೂ ಗಮನ ನೀಡಬೇಕು. ಮುಖ್ಯವಾಗಿ ಮಾನಸಿಕ ಆರೋಗ್ಯದ ಕಡೆ ಗಮನ ನೀಡಬೇಕು. ಒತ್ತಡ  ನಿವಾರಿಸಿ ಮಾನಸಿಕ ಸ್ಥೈರ್ಯ ತುಂಬಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮತ್ತು ಅಗತ್ಯ ನಿದ್ರೆ ಮಾಡುವಂತೆ ಸಲಹೆ ನೀಡಬೇಕು. 
ಇವೆಲ್ಲಕ್ಕಿಂತ ಮುಖ್ಯವಾಗಿ ಪಾಲಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದೂ ಮುಖ್ಯ. ತರಗತಿ ಮಕ್ಕಳ ಕಲಿಕೆಯ ಬಗ್ಗೆ ನಿಮಯಮಿತವಾಗಿ ಪಾಲಕರೊಂದಿಗೆ ಚರ್ಚಿಸಬೇಕು. ಮಕ್ಕಳ ಕಲಿಕೆಯಲ್ಲಿ ಅವರೂ ಪಾಲುದಾರರು ಎಂಬ ಅಂಶವನ್ನು  ಮನವರಿಕೆ ಮಾಡಬೇಕು ಹಾಗೂ ತಮ್ಮ ಮಕ್ಕಳ ಕಲಿಕೆಯ ಮೇಲೆ ನಿಗಾವಹಿಸಲು ತಿಳಿಸಬೇಕು. ಆಧುನಿಕ ತಂತ್ರಜ್ಞಾನದ ಪರಿಕರಗಳಾದ ಟಿ.ವಿ, ಮೊಬೈಲ್, ಕಂಪ್ಯೂಟರ್, ಟ್ಯಾಬ್ ಇತ್ಯಾದಿಗಳಿಂದ ಮಕ್ಕಳನ್ನು ದೂರ ಇಡಲು ಕಿವಿಮಾತು ಹೇಳಬೇಕು.
ಮೇಲಿನ ಕೆಲವು ಅಂಶಗಳಲ್ಲದೇ ಇನ್ನಿತರೇ ಉತ್ತಮಾಂಶಗಳನ್ನು ಅಳವಡಿಸಿಕೊಂಡು ಪರೀಕ್ಷೆಗೆ ಮಕ್ಕಳನ್ನು ಸಿದ್ದಪಡಿಸಬೇಕಾದ ಅವಶ್ಯಕತೆ ಇದೆ. ಅನಾರೋಗ್ಯಕರ ಪ್ರಯತ್ನಗಳು ನಮ್ಮನ್ನು ಅದಃಪತನಕ್ಕೆ ನೂಕುತ್ತವೆ ಎಂಬ ಅರಿವು ನಮ್ಮಲ್ಲಿರಲಿ. ಆರೋಗ್ಯಕರ ಪ್ರಯತ್ನಗಳು ಮಾತ್ರ ನಮ್ಮನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಆರೋಗ್ಯಕರ ಪ್ರಯತ್ನಗಳನ್ನು ಕೈಗೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಬೆಂಬಲಿಸೋಣ. ಆ ಮೂಲಕ ಮೌಲ್ಯವರ್ಧಿತ ಸಮಾಜಕ್ಕೆ ಮುನ್ನುಡಿ ಬರೆಯೋಣ.

ಆರ್.ಬಿ.ಗುರುಬಸವರಾಜ

No comments:

Post a Comment