July 20, 2018

ತೆರೆದ ಪುಸ್ತಕ ಪರೀಕ್ಷೆ Open book Exam

ದಿನಾಂಕ 20-07-2018ರ ಕನ್ನಡಪ್ರಭದ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ನನ್ನ ಬರಹ.


ಬದಲಾಗಬೇಕಾದದು ಕೇವಲ ಪರೀಕ್ಷಾ ಪದ್ದತಿಯಲ್ಲ!
ಕಲಿಕೆ ಕೇವಲ ಅಂಕ ಗಳಿಕೆಯ ಸಾಧನವಲ್ಲ. ಕಲಿಕೆ ಬದುಕಿನ ಭಾಗ. ಕಲಿಕೆ ಇಲ್ಲದ ದಿನವಿಲ್ಲ ಎಂದೇ ಹೇಳಬಹುದು. ಪ್ರತಿಯೊಬ್ಬರೂ ಪ್ರತಿದಿನ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತಲೇ ಇರುತ್ತಾರೆ. ಆದರೆ ಶಾಲಾ ಹೊರಗಿನ ಕಲಿಕೆಗೆ ಅಂಕಗಳ ಹಣೆಪಟ್ಟಿ ಇರುವುದಿಲ್ಲ. ಅದು ಬದುಕಿನ ಭಾಗವಾಗಿರುತ್ತದೆ. ರಾಜ್ಯದ ಶಿಕ್ಷಣ ಸಚಿವರು ಇತ್ತಿÃಚಿಗೆ ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ತೆರೆದ ಪುಸ್ತಕ ಪರೀಕ್ಷೆಯ ಕಲ್ಪನೆ ಹೊಸದೇನಲ್ಲ. ರಾಜ್ಯದಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ(ಸಿ.ಸಿ.ಇ) ಜಾರಿಗೆ ಬಂದಾಗಿನಿಂದಲೂ ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಸಿ.ಸಿ.ಇ.ಯಲ್ಲ್ಲಿ ತೆರೆದ ಪುಸ್ತಕ ಪರೀಕ್ಷೆ ಇದೆ. ಆದರೆ ಕಡ್ಡಾಯವಾಗಿಲ್ಲ. ಅವರವರ ಅನುಕೂಲತೆಗಳನ್ನು ಆಧರಿಸಿ ನೆಡೆಸಬಹುದಾಗಿತ್ತು. ಈಗ ಇದನ್ನು ಬೋರ್ಡ್ ಪರೀಕ್ಷೆಗಳಿಗೆ ಅಳವಡಿಸುವ ಚಿಂತನೆಗಳು ನಡೆಯುತ್ತಿವೆ.
        ತೆರೆದ ಪುಸ್ತಕ ಪರೀಕ್ಷೆಯ ಮೊದಲ ಪ್ರಯೋಜನವೆಂದರೆ ಬೋಧನಾ ಕಾರ್ಯದ ಸ್ವರೂಪವನ್ನು ಅರ್ಥೈಸಿಕೊಳ್ಳುವುದಾಗಿದೆ. ಬೋಧನೆಯ ಪ್ರಮುಖ ಗುರಿ ಜ್ಞಾನಪ್ರಸಾರ ಮಾಡುವುದಾಗಿದೆ. ಪಠ್ಯದಲ್ಲಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುವ ಮೂಲಕ ಜ್ಞಾನಪ್ರಸಾರ ಮಾಡುವುದೇ ಬೋಧನೆಯಾಗಿದೆ. ಹೀಗೆ ಪ್ರಸಾರ ಮಾಡಿದ ಮಾಹಿತಿಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವುದು, ಉಳಿಸಿಕೊಳ್ಳುವುದು ಮತ್ತು ಅಂತಿಮವಾಗಿ ಪರೀಕ್ಷೆಯಲ್ಲಿ ಅದನ್ನು ಪ್ರಸ್ತುತಪಡಿಸುವುದೇ ಕಲಿಕೆ ಎನ್ನುವಂತಾಗಿದೆ. 
ಈಗಿನ ಪಠ್ಯಪುಸ್ತಕಗಳು ಮತ್ತು ಬೋಧನಾ ಪದ್ದತಿ ಈಗಿರುವ ಸಾಂಪ್ರಾದಾಯಿಕ ಪರೀಕ್ಷಾ ಪದ್ದತಿಗೆ ಪೂರಕವಾಗಿಯೇ ಇದೆ. ಮುಖ್ಯಾಂಶಗಳನ್ನು ಬರೆಸುವುದು, ಉಕ್ತಲೇಖನ, ನೋಟ್ಸ್ ಬರೆಹ, ಇತ್ಯಾದಿಗಳೆಲ್ಲವೂ ಅಂಕಗಳ ಆಧಾರಿತ ಸಾಂಪ್ರದಾಯಿಕ ಪರೀಕ್ಷೆಗೆ ಮಕ್ಕಳನ್ನು ಸಿದ್ದಪಡಿಸುವ ನಿಟ್ಟಿನಲ್ಲಿಯೇ ನಡೆಯುತ್ತಿವೆ.
ತೆರೆದ ಪುಸ್ತಕ ಪರೀಕ್ಷಾ ಪದ್ದತಿಯನ್ನು ಜಾರಿಗೆ ತರುವ ಮೊದಲು ಪಠ್ಯವಸ್ತು, ಪಠ್ಯಪುಸ್ತಕ ಮತ್ತು ಬೋಧನಾ ಪದ್ದತಿಗಳನ್ನು ಬದಲಾಯಿಸಲೇಬೇಕು. ತರಗತಿಯಲ್ಲಿನ ಬೋಧನಾ ಸ್ವರೂಪ ಈಗಿರುವುದಕ್ಕಿಂತ ಭಿನ್ನಾವಾಗಿರಲೇಬೇಕು. ಏಕೆಂದರೆ ವಿದ್ಯಾರ್ಥಿಗಳು ತೆರೆದ ಪುಸ್ತಕ ಪರೀಕ್ಷೆಯನ್ನು ಎದುರಿಸಬೇಕಾದರೆ ಸಂಪೂರ್ಣವಾಗಿ ಎಲ್ಲಾ ಮಕ್ಕಳಿಗೂ ಕನಿಷ್ಟ ಓದು ಮತ್ತು ಬರಹದ ಬಗ್ಗೆ ಖಾತ್ರಿಯಿರಲೇಬೇಕು. ಕನಿಷ್ಟ ಓದು ಮತ್ತು ಬರಹದ ಬಗ್ಗೆ ಖಾತ್ರಿ ಇಲ್ಲದಿದ್ದರೆ ತೆರೆದ ಪುಸ್ತಕ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುವುದೇ ಇಲ್ಲ. 
       ಇದಕ್ಕೆ ಶಿಕ್ಷಕರ ಮನೋಸ್ಥಿತಿಯೂ ಬದಲಾಗಬೇಕಿದೆ. ಯಾವುದೇ ಹೊಸ ಪದ್ದತಿ ಬಂದಾಗಲೂ ಅದನ್ನು ಜಾರಿಗೊಳಿಸುವಲ್ಲಿ ಶಿಕ್ಷಕರ ಶ್ರಮ ಹಾಗೂ ಅಭಿವೃದ್ದಿಪರ ಮನೋಸ್ಥಿತಿ ಅಗತ್ಯವಾಗಿದೆ. ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆ ತೀರಾ ಅಗತ್ಯ ಎನಿಸುತ್ತದೆ. ಮಕ್ಕಳನ್ನೆÃ ಸಂಪೂರ್ಣವಾಗಿ ಕಲಿಕೆಯಲ್ಲಿ ತೊಡಗಿಸಬೇಕಾಗುತ್ತದೆ. ಉದಾಹರಣೆಗೆ ಶೌಚಾಲಯಗಳ ಸದ್ಭಳಕೆ ಬಗ್ಗೆ ಎಷ್ಟೆÃಹೊತ್ತು ತರಗತಿಯಲ್ಲಿ ಪಾಠ ಬೋಧಿಸಿದರೂ ಅದು ವ್ಯರ್ಥ. ಅದೇ ಕಲಿಕಾಂಶವನ್ನು ಮಕ್ಕಳಿಗೆ ಹೇಳಿ ಅವರ ಗ್ರಾಮ/ವಾಸಸ್ಥಳದಲ್ಲಿನ ಶೌಚಾಲಯಗಳ ಸ್ಥಿತಿಗತಿ ಅರಿಯುವ ಹಾಗೂ ಉತ್ತಮವಾಗಿ ನಿರ್ವಹಣೆ ಮಾಡುವ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಅದನ್ನು ಮಕ್ಕಳೇ ಪ್ರಸ್ತುಪಡಿಸವಂತಾದರೆ ಆ ಕಲಿಕೆ ಯಶಸ್ವಿÃ ಮತ್ತು ಶಾಶ್ವತ ಕಲಿಕೆಯಾಗುತ್ತದೆ. ಅದೇ ರೀತಿ ನೀರಿನ ಸಂರಕ್ಷಣೆಗೆ ಬಗ್ಗೆ ತರಗತಿಯಲ್ಲಿ ಪಾಠ ಹೇಳುವ ಬದಲು ವಾಸಸ್ಥಳದಲ್ಲಿನ ನೀರಿನ ಸ್ಥಿತಿಗತಿ ಹಾಗೂ ಅದನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ಮಕ್ಕಳಲ್ಲಿಯೇ ಚರ್ಚೆ ಹಾಗೂ ಸಂವಾದ ಏರ್ಪಡಿಸಬಹುದು. ಸಾಧ್ಯವಾದರೆ ಸ್ಥಳೀಯ ಸರಕಾರದ ಪ್ರತಿನಿಧಿಗಳನ್ನೂ ಈ ಚರ್ಚೆಯಲ್ಲಿ ತೊಡಗುವಂತೆ ಮಾಡಬೇಕು. ಘನ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್‌ನ ತೊಂದರೆಗಳು, ಜನಸಂಖ್ಯಾ ಸ್ಪೊÃಟ, ಸ್ಥಳೀಯ ಸರಕಾರಗಳ ಕಾರ್ಯನಿರ್ವಹಣೆ, ಇತ್ಯಾದಿ ಕಲಿಕಾಂಶಗಳನ್ನು ಸಂಯೋಜಿತ ಕಲಿಕಾ ವಿಧಾನದ ಮೂಲಕ ಕಲಿಸುವ ವ್ಯವಸ್ಥೆಯಾದರೆ ತೆರೆದ ಪುಸ್ತಕ ಪರೀಕ್ಷೆಗೆ ಒಂದು ಗಟ್ಟಿಯಾದ ನೆಲೆಗಟ್ಟು ದೊರೆಯುತ್ತದೆ. ಇಂತಹ ಕಲಿಕೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಈ ಕಾರಣದಿಂದ ಈಗಿರುವ ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳ ಹೊರೆಯನ್ನು ಕಡಿಮೆ ಮಾಡುವ ಅಗತ್ಯವಿದೆ. 
      ಇದುವರೆಗೂ ಪಠ್ಯೆÃತರ ಎಂದು ಗುರುತಿಸಿಕೊಂಡಿದ್ದ ಚರ್ಚೆ, ಸಂವಾದ ಗೋಷ್ಟಿಗಳು ತರಗತಿ ಕಲಿಕೆಯ ಭಾಗವಾಗಬೇಕು.  ಆಗ ಮಾತ್ರ ಮಕ್ಕಳಲ್ಲಿ ವಿವರಣಾತ್ಮಕ ಮತ್ತು ವಿಮರ್ಶಾತ್ಮಕ ಸಾಮರ್ಥ್ಯ ಬೆಳೆಯುತ್ತದೆ. ತರಗತಿಯಲ್ಲಿ ಚಿಕ್ಕ ಚಿಕ್ಕ ಗುಂಪಿನಲ್ಲಿ ಚರ್ಚೆಗಳು ನಡೆಯಬೇಕೆಂಬ ಆಶಯವೇನೋ ಇದೆ. ಆದರೆ ಇದಕ್ಕೆ ಪೂರಕವಾದ ವಾತಾವರಣ ಇಲ್ಲ. ಪಠ್ಯವಸ್ತುವನ್ನು ಬೇಗನೇ ಪೂರ್ಣಗೊಳಿಸಿ, ಪುನರಾವರ್ತನೆ ಮಾಡಿ ಮಕ್ಕಳನ್ನು ಪರೀಕ್ಷೆಗೆ ಅಣಿಸುವುದೇ ಶಿಕ್ಷಕರ ಕಾರ್ಯ ಎನ್ನುವಂತಾಗಿದೆ. ಪಠ್ಯದ ಆಚೆ ಏನೇನಿದೆ ಎಂದು ಶಿಕ್ಷಕರೂ ಹಾಗೂ ಮಕ್ಕಳು ನೋಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪಾಲಕರೂ ಹೊರತಲ್ಲ. ನಮ್ಮ ಮಗುವಿಗೆ ಪಾಠ ಓದಲು ಬರುವುದಿಲ್ಲ, ಲೆಕ್ಕ ಮಾಡಲು ಬರುವುದಿಲ್ಲ ಎಂದು ದೂರುತ್ತಾರೆಯೇ ವಿನಹ, ಬೋದನಾ ಪದ್ದತಿ ಬಗ್ಗೆ, ಪಠ್ಯವಸ್ತುವಿನ ಬಗ್ಗೆ ಯಾರೂ ಮಾತನಾಡುವುದಿಲ್ಲ. ಏಕೆಂದರೆ ಅದನ್ನು ರೂಪಿಸುವ ಜವಾಬ್ದಾರಿ ನಮ್ಮದಲ್ಲ ಎಂದು ಪಾಲಕರು ಭಾವಿಸಿದ್ದಾರೆ. 
             ಚಟುವಟಿಕೆಯುಕ್ತ ಬೋಧನೆ ಅಗತ್ಯ ಎಂದು ಹೇಳುತ್ತೆÃವೆ. ಆದರೆ ತರಗತಿ ವಾತಾವರಣ ಇದಕ್ಕೆ ಪೂರಕವಾಗಿಲ್ಲ. ಕೆಲ ಶಾಲೆಗಳ ತರಗತಿಗಳಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳಿದ್ದಾಗ ಚಟುವಟಿಕೆಗೆ ಅವಕಾಶವೇ ಇಲ್ಲದಂತಾಗುತ್ತದೆ. ಇನ್ನು ಇವೆಲ್ಲವನ್ನೂ ಮೀರಿ ಚಟುವಟಿಕೆಯುಕ್ತ ಬೋಧನೆಯಲ್ಲಿ ತೊಡಗಿದ ಕೆಲ ಶಿಕ್ಷಕರನ್ನು ನೋಡುವ ದೃಷ್ಟಿಕೋನವೇ ವಿಭಿನ್ನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತೆರೆದ ಪುಸ್ತಕ ಪರೀಕ್ಷೆಯ ಸಾಧಕಗಳ ಬಗ್ಗೆ ಗಂಭೀರವಾದ ಚರ್ಚೆಗಳಾಗಬೇಕಿದೆ. ಈಗಿರುವ ಬೋಧನೆ-ಕಲಿಕೆಗಿಂತ ವಿಭಿನ್ನವಾದ ವಾತಾವರಣ ನಿರ್ಮಾಣವಾಗಬೇಕಿದೆ. ಮಕ್ಕಳಲ್ಲಿ ಚಿಂತನೆ ಮತ್ತು ಆಲೋಚನೆಗಳನ್ನು ಹುಟ್ಟು ಹಾಕುವ ಹಾಗೂ ಮತ್ತು ಅವುಗಳನ್ನು ಉತ್ತೆÃಜಿಸುವ ರೀತಿಯಲ್ಲಿ ಬೋಧನೆ-ಕಲಿಕೆಯ ವಿಧಾನಗಳು ಬದಲಾಗಬೇಕಿದೆ. ತರಗತಿಯ ಭೌತಿಕ ಸ್ಥಿತಿಗತಿ ಬದಲಾಗಬೇಕಿದೆ. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಚರ್ಚಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆಸನಗಳ ವ್ಯವಸ್ಥೆಯಾಗಬೇಕಿದೆ. ಈ ಎಲ್ಲಾ ಬದಲಾವಣೆಗಳು ಬಂದ ನಂತರ ತೆರೆದ ಪುಸ್ತಕ ಪರೀಕ್ಷೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲವೇ?
  ಆರ್.ಬಿ.ಗುರುಬಸವರಾಜ 


No comments:

Post a Comment