July 2, 2018

ಟೀಕೆ ಬಿಡಿ, ಮಾರ್ಗದರ್ಶನ ನೀಡಿ stop Teasing Give guidence

ದಿನಾಂಕ 2-7-18ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ 

ಟೀಕೆ ಬಿಡಿ, ಮಾರ್ಗದರ್ಶನ ನೀಡಿ.


ರಜೆ ಮುಗಿಸಿಕೊಂಡು ಮರಳಿ ಶಾಲೆಗೆ ಬಂದ ಮಕ್ಕಳಿಗೆ ‘ನಿಮ್ಮ ಕುಟುಂಬದಲ್ಲಿ ನೀವು ಎದುರಿಸುವ ಸಾಮಾನ್ಯ ಸಮಸ್ಯೆ ಏನು?’ ಎಂಬ ಪ್ರಶ್ನೆಯನ್ನು ಮಕ್ಕಳಿಗೆ ಕೇಳಿದೆ. ಬಹುತೇಕ ಮಕ್ಕಳ ಉತ್ತರ ಹೀಗಿತ್ತು. “ಹೆತ್ತವರು ಪ್ರತೀ ಕೆಲಸದಲ್ಲೂ ತಪ್ಪು ಹುಡುಕುತ್ತಾರೆ. ಪದೇ ಪದೇ ಬಯ್ಯುತ್ತಾರೆ, ಹಂಗಿಸುತ್ತಾರೆ”. ಇದನ್ನು ಕೇಳಿ ಬೆಚ್ಚಿಬೀಳುವಂತಾಯ್ತು. ಈ ಬಗ್ಗೆ ಯೋಚಿಸುವಂತಾಯ್ತು. ಹಾಗಾದರೆ ನಮ್ಮ ಪಾಲಕರು ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದ್ದಾರೆಯೇ? ಅಥವಾ ಮಕ್ಕಳ ಮೇಲಿನ ಅತಿಯಾದ ನಿರೀಕ್ಷೆಗಳಿಂದ ಹೀಗೆಲ್ಲಾ ಆಗುತ್ತಿದೆಯಾ? ಎಂಬ ಅನೇಕ ಪ್ರಶ್ನೆಗಳು ಕಾಡತೊಡಗಿದವು. 
ಪ್ರತೀ ಮಗುವಿನ ಬೆಳವಣಿಗೆಯಲ್ಲಿ ಪಾಲಕರ ಕಾಳಜಿ ಬಹುಮುಖ್ಯ. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಕೆಲವು ಅತಿಯಾದ ಕಾಳಜಿಯು ಮಕ್ಕಳ ಬೆಳವಣಿಗೆಯ ದುಷ್ಪರಿಣಾಮ ಬೀರುತ್ತದೆ. ನಮ್ಮ ಮಕ್ಕಳು ಚೆನ್ನಾಗಿರಬೇಕು, ಇತರರಿಗಿಂತ ಚೆನ್ನಾಗಿ ಓದಬೇಕು, ಹೆಚ್ಚು ಬುದ್ದಿವಂತರು ಎನಿಸಿಕೊಳ್ಳಬೇಕು ಎಂಬ ಅತಿಯಾದ ನಿರೀಕ್ಷೆಗಳನ್ನು ಪಾಲಕರು ಇಟ್ಟುಕೊಳ್ಳುವುದು ಸಹಜ. ತಮ್ಮ ನಿರೀಕ್ಷೆಗಳನ್ನು ಮಗು ಹುಸಿ ಮಾಡುವ ಸಂದರ್ಭಗಳು ಎದುರಾದಾಗಲೆಲ್ಲ ಪಾಲಕರು ಮಗುವನ್ನು ಟೀಕಿಸತೊಡಗುತ್ತಾರೆ. ಟೀಕೆ ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸುವ ಏಕೈಕ ಅಸ್ತçವೆಂದು ಬಹುತೇಕ ಪಾಲಕರು ಭಾವಿಸಿದ್ದಾರೆ. ಆದರೆ ಟೀಕೆಯಿಂದ ಮಕ್ಕಳ ಮನಸ್ಸಿನ ಮೇಲಾಗುವ ಕೆಟ್ಟ ಪರಿಣಾಮಗಳನ್ನು ಪಾಲಕರು ಅರ್ಥಮಾಡಿಕೊಳ್ಳಬೇಕಿದೆ. 
ಟೀಕೆಯಿಂದ ಮಕ್ಕಳ ಮೇಲಾಗುವ ಪರಿಣಾಮಗಳು:
ಟೀಕೆಯು ಮುಖ್ಯವಾಗಿ ಬಾಂಧವ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳನ್ನು ಟೀಕಿಸಿದಾಗ ಅವರು ನಿಷ್ಪಕ್ಷಪಾತವೆಂದು ಭಾವಿಸುವ ಹೆತ್ತವರ ಪ್ರಿತಿಯನ್ನೆ ಪ್ರಶ್ನಿಸಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ಮಕ್ಕಳಾಗಿದ್ದಾಗ ಪಾಲಕರ ಪ್ರಿತಿಯನ್ನು ಕಳೆದುಕೊಂಡಿದ್ದರಿಂದ ವಯಸ್ಕರಾದಾಗ ಬೇರೆಡೆ ಪ್ರಿತಿಯನ್ನು ಹುಡುಕಬಹುದು ಅಥವಾ ಮಧ್ಯವ್ಯಸನಿ/ಲೈಂಗಿಕ ವ್ಯಸನಿಗಳಾಗಬಹುದು. 
ಟೀಕೆಯಿಂದ ಮಕ್ಕಳಲ್ಲಿ ನಾಚಿಕೆ ಸ್ವಭಾವ ಬೆಳೆಯುತ್ತದೆ. ಪದೇ ಪದೇ ಟೀಕೆಗೆ ಒಳಗಾಗುವುದರಿಂದ ತಾನು ಮಾಡುವ ಕೆಲಸದಲ್ಲಿ ಏನೋ ತೊಂದರೆಯಾಗುತ್ತದೆ ಎಂದು ನಂಬುತ್ತಾರೆ. ಅವಮಾನದ ಭೀತಿಯಿಂದ ಸಾಮಾಜಿಕವಾಗಿ ಹಿಂದುಳಿಯುತ್ತಾರೆ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹಿಂದುಳಿಯುತ್ತಾರೆ. 
ಸೋಮಾರಿ, ಮೂಕ, ಸ್ಟುಪಿಡ್, ಯೂಸ್‌ಲೆಸ್ ಇತ್ಯಾದಿ ನಕಾರಾತ್ಮಕ ಪದಗಳನ್ನು ಪಾಲಕರು ಪದೇ ಪದೇ ಬಳಸುವುದುರಿಂದ ಅದೇ ಸತ್ಯವೆಂದು ನಂಬುತ್ತಾರೆ ಮತ್ತು ಅದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ. ಭವಿಷ್ಯದಲ್ಲಿ ಹೊಸ ಮಾರ್ಗದ ಶೋಧಕ್ಕೆ ಹಿಂಜರಿಯುತ್ತಾರೆ.
ಬಹುತೇಕ ಪಾಲಕರು ಮಗುವನ್ನು ಟೀಕಿಸುವಾಗ ಅವರು ಆಡುವ ಪದದ ಬಗ್ಗೆ ಅಷ್ಟೆನೂ ಗಮನಕೊಡುವುದಿಲ್ಲ. ಆದರೆ ಮಗುವ ಪ್ರತೀ ಪದದ ಬಗ್ಗೆಯೂ ಯೋಚಿಸತೊಡಗುತ್ತದೆ. ಪಾಲಕರು ಬಳಸುವ ನಕರಾತ್ಮಕ ಪದ ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರತೊಡಗುತ್ತದೆ. ತಾನು ಇರುವುದು ಹೀಗೆಯೇ ಎಂದು ನಂಬತೊಡಗುತ್ತದೆ. ಹಾಗಾಗಿ ಮಗು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತದೆ.
ಮಗುವಿನ ಮನಸ್ಸಿನ ಮೇಲಾಗುವ ಭಾವನಾತ್ಮಕ ಗಾಯಗಳು ಮಗುವಿನ ಸಂವೇದನಾಶೀಲತೆಯನ್ನು ಹಾಳು ಮಾಡುತ್ತವೆ. ಎಲ್ಲರ ಗಮನವು ಮಗುವಿನ ತಪ್ಪುಗಳತ್ತಲೇ ಕೇಂದ್ರಿಕೃತವಾಗುತ್ತದೆ. ಆಗ ಮಗು ಮಾಡುವ ಉತ್ತಮ ಕೆಲಸಗಳು ಗಮನಕ್ಕೆ ಬಾರದೇ ಹೋಗುತ್ತವೆ. 
ಕಠಿಣವಾದ ಟೀಕೆಯು ಮಗುವಿನ ಸ್ವಾಭಿಮಾನದ ಅಡಿಪಾಯವನ್ನು ಅಲುಗಾಡಿಸುತ್ತದೆ. ಇದರಿಂದಾಗಿ ಅವರು ಕಳಪೆ ಗುಣಮಟ್ಟವನ್ನು ಪ್ರದರ್ಶಿಸುತ್ತಾರೆ. ಟೀಕೆಯು ಮಗುವನ್ನು ಒಂದು ಉತ್ಪಾದಕ ವ್ಯಕ್ತಿಯಾಗಿ ರೂಪಿಸುವುದಿಲ್ಲ. ಬದಲಿಗೆ ಅವನನ್ನು ಕೂಪ ಮಂಡೂಕನನ್ನಾಗಿಸುತ್ತದೆ ಅಥವಾ ಹೆದರುಪುಕಲನನ್ನಾಗಿಸುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

ಟೀಕೆ ಬಿಟ್ಹಾಕಿ: ಮಾರ್ಗದರ್ಶನ ನೀಡಿ

ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪೋಷಕರ ಪಾತ್ರ ನಿರ್ಣಾಯಕವಾದದ್ದು. ನಮ್ಮ ಟೀಕೆ ಅಥವಾ ನಡವಳಿಕೆಗಳು ಹೆಚ್ಚಾಗಿ ಮಕ್ಕಳ ಜೀವನವನ್ನು ಪ್ರಭಾವಿಸುತ್ತವೆ. ಹಾಗಾಗಿ ಟೀಕೆಯು ಕೇವಲ ಮಗುವಿನ ಮನ ನೋಯಿಸುವ ಸಂಗತಿಯಾಗಬಾರದು. ಬದಲಾಗಿ ಟೀಕೆಯು ರಚನಾತ್ಮಕವಾಗಬೇಕಾದುದು ಇಂದಿನ ಅಗತ್ಯವಾಗಿದೆ. ಮಕ್ಕಳು ತಪ್ಪು ಮಾಡುವುದು ಸಹಜ. ತಪ್ಪು ಮಾಡಿದಾಗ ಅಥವಾ ಅಪಾಯಕಾರಿ ಕೆಲಸಗಳನ್ನು ಮಾಡಿದಾಗ ನೇರವಾಗಿ ದೂಷಿಸುತ್ತೆವೆ, ಬೆದರಿಕೆ ಹಾಕುತ್ತೆವೆ ಅಥವಾ ಏರುಧ್ವನಿಯಲ್ಲಿ ಮಗುವಿಗೆ ಗದರಿಸುತ್ತೆವೆ. ಅದರ ಬದಲಾಗಿ ಪ್ರಿತಿಯ ಮಾತುಗಳಿಂದ ಮಗು ಮಾಡಿದ ತಪ್ಪಿನಿಂದ ಆಗುವ ತೊಂದರೆಗಳನ್ನು ಮನವರಿಕೆ ಮಾಡಿಕೊಟ್ಟು ಅದರಿಂದ ದೂರ ಇರುವಂತೆ ರಚನಾತ್ಮಕ ಮಾರ್ಗದರ್ಶನದ ಮೂಲಕ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಬೇಕಿದೆ. ಉದಾಹರಣೆಗೆ ಮಗು ಟಿ.ವಿ. ರಿಮೋಟನ್ನು ಬೀಳಿಸಿದ ಕೂಡಲೇ ಬಾಯಿಗೆ ಬಂದಂತೆ ಬಯ್ಯುತ್ತೆವೆ. ಬದಲಾಗಿ ಅದನ್ನು ಬೀಳಿಸಿದರೆ ಆಗುವ ತೊಂದರೆಗಳನ್ನು ತಿಳಿಸಿ ಇನ್ನೊಮ್ಮೆ ಬೀಳಿಸದಂತೆ ಮಾರ್ಗದರ್ಶನ ನೀಡುವುದು ಅಗತ್ಯ. ಸ್ನೆಹಭಾವದ ರೀತಿಯಲ್ಲಿ ಮಗುವಿಗೆ ಮಾರ್ಗದರ್ಶನ ನೀಡಬೇಕು. 
ಮಕ್ಕಳನ್ನು ಟೀಕಿಸುವುದು ಸುಲಭ. ಆದರೆ ಮಾರ್ಗದರ್ಶನ ಮಾಡುವುದು ತುಂಬಾ ಕಠಿಣ. ಮಾರ್ಗದರ್ಶನ ಒಂದು ರೀತಿಯ ತಪ್ಪಸ್ಸು ಇದ್ದಂತೆ. ಪಾಲಕರು ಕೆಲವು ನಡವಳಿಕೆಗಳನ್ನು ಅಥವಾ ತಮ್ಮ ಪೋಷಣಾ ಶೈಲಿಯನ್ನು ಬದಲಾವಣೆ ಮಾಡುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕೆಳಗಿನ ಕೆಲವು ಅಂಶಗಳು ಉಪಯೋಗವಾಗುತ್ತವೆ.
ಮೇಲೆ ತಿಳಿಸಿದಂತೆ ಮಕ್ಕಳು ತಪ್ಪು ಮಾಡುವುದು ಸಹಜ. ಸಹಜ ತಪ್ಪುಗಳ ಬಗ್ಗೆ ಧೀರ್ಘವಾಗಿ ಆಲೋಚಿಸುವ ಅಗತ್ಯವಿಲ್ಲ. ಆದರೆ ತಪ್ಪುಗಳ ಪುನರಾವರ್ತನೆಯಾದರೆ ಪಾಲಕರು ಅದಕ್ಕೆ ಕಾರಣಗಳನ್ನು ಹುಡುಬೇಕು. ಮಗು ಬೇಕಂತಲೇ ಆ ತಪ್ಪು ಮಾಡುತ್ತಿದೆಯೋ ಅಥವಾ ತಿಳಿಯದೇ ತಪ್ಪು ಮಾಡುತ್ತಿದೆಯೋ ಎಂಬುದನ್ನು ಕಂಡುಕೊಳ್ಳಬೇಕು. ಮಗುವಿನ ಮನಸ್ಥಿತಿ ಮತ್ತು ವಯಸ್ಸಿಗೆ ಪೂರಕವಾದ ಮಾತುಗಳಿಂದ ಮಗುವನ್ನು ತಿದ್ದುವ ಪ್ರಯತ್ನ ಮಾಡಬೇಕು. 
ಕೆಲವು ಕಲಿಕಾ ವಿಷಯಗಳಲ್ಲಿ ಮಕ್ಕಳು ಹಿಂದೆ ಬೀಳುವುದು ಸಹಜ. ಇತರ ಮಕ್ಕಳೊಡನೆ ಮಕ್ಕಳನ್ನು ಹೋಲಿಸಿ ಹೀಯಾಳಿಸದೇ, ಮಗುವಿನ ಕಲಿಕಾ ಸಾಧನೆಯ ಸಮಸ್ಯೆಗಳನ್ನು ಗುರುತಿಸಿಕೊಳ್ಳಬೇಕು. ಉದಾಹರಣೆಗೆ ಎಲ್ಲಾ ವಿಷಯಗಳಲ್ಲಿ ಮುಂದೆ ಇರುವ ಮಗು ಗಣಿತದಲ್ಲಿ ಹಿಂದೆ ಇದ್ದರೆ ಮಗುವನ್ನು ನೇರವಾಗಿ ದೂಷಿಸದೇ ಪ್ರಿತಿಯ ಮಾತುಗಳಿಂದ “ನೀನು ಎಲ್ಲಾ ವಿಷಯಗಳಲ್ಲಿ ಚೆನ್ನಾಗಿದ್ದಿಯ. ಆದರೆ ಗಣಿತದಲ್ಲಿ ಮಾತ್ರ ಒಂಚೂರು ಹಿಂದೆ ಇರುವೆ. ಪರವಾಯಿಲ್ಲ. ಚಿಂತೆ ಮಾಡ್ಬೆಡ. ಚೆನ್ನಾಗಿ ಅಭ್ಯಾಸ ಮಾಡು. ಕಠಿಣ ಸಮಸ್ಯೆಗಳನ್ನು ಗುರುಗಳ ಬಳಿ ಕೇಳಿ ತಿಳಿದುಕೋ. ಮುಂದಿನ ಪರೀಕ್ಷೆಯಲ್ಲಿ ಖಂಡಿತವಾಗಿ ಉತ್ತಮ ಫಲಿತಾಂಶ ಸಾಧಿಸುವೆ ಎಂಬ ಭರವಸೆ ನನಗಿದೆ” ಎಂದು ನಲ್ನುಡಿಯಿಂದ ಮಗುವಿನ ತಲೆ ನೇವರಿಸಿ ಹೇಳಿ ನೋಡಿ. ಖಂಡಿತವಾಗಿ ಮಗುವಿನಲ್ಲಿ ಕಲಿಕಾ ಸುಧಾರಣೆ ಕಾಣುವಿರಿ.
ಮಗುವಿನೊಂದಿಗೆ ವ್ಯವಹರಿಸುವಾಗ ನೀವು ವಯಸ್ಕರಾಗಿಲ್ಲ, ಮಗುವಾಗಿದ್ದಿÃರಿ ಎಂಬುದನ್ನು ನೆನಪಿಡಿ. ಮಕ್ಕಳೂ ಸಹ ಭಾವನೆಗಳನ್ನು ಹೊಂದಿದ್ದಾರೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹ ಟೀಕೆಗಳನ್ನು ಕೇಳಲು ಯಾರೂ ಇಷ್ಟ ಪಡುವುದಿಲ್ಲ. ಮಗು ತಪ್ಪು ಮಾಡಿದಾಗ ಕೋಪಗೊಳ್ಳುವ ಮೊದಲು ಮಗುವನ್ನು ಮಾತನಾಡಿಸಲು ಪ್ರಯತ್ನಿಸಿ. ಮಗುವಿನೊಂದಿಗೆ ಮಾತನಾಡುವಾಗ ಧ್ವನಿ ತಾರಕ್ಕೆÃರದಿರಲಿ. ಸಮಯ ತೆಗೆದುಕೊಂಡು ಶಾಂತ ಚಿತ್ತದಿಂದ ಮಗುವಿಗೆ ಬುದ್ದಿ ಹೇಳಿ.
ಮಕ್ಕಳ ಬೆಳವಣಿಗೆಯ ಪ್ರಮುಖ ಅಂಶವೆಂದರೆ ತಪ್ಪುಗಳ ಪರಿಣಾಮಗಳನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಮೊಬೈಲ್/ಟ್ಯಾಬ್ಲೆಟ್‌ಗಳನ್ನು ಬಳಸುವುದು ಸಹಜ. ಇದು ತಪ್ಪು ಎಂದು ಎಲ್ಲರಿಗೂ ಗೊತ್ತು. ಆದರೆ ಮಗುವಿಗೆ ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಇಲ್ಲ. ಹೆಚ್ಚು ಹೊತ್ತು ಬರಿಗಣ್ಣಿನಿಂದ ಮೊಬೈಲ್/ಟ್ಯಾಬ್ಲೆಟ್ ಬಳಸುವುದರಿಂದ ಕಣ್ಣಿಗೆ ಮತ್ತು ನರಗಳ ಮೇಲಾಗುವ ಹಾನಿಯನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಒಂದು ವೇಳೆ ಅವರು ಅಂತಹ ವಸ್ತುಗಳನ್ನು ಬಳಸುವುದು ಅನಿವಾರ್ಯ ಎಂದಾದರೆ ಅದಕ್ಕೆ ಸುರಕ್ಷತೆಯ ತಂತ್ರಗಳನ್ನು ಅಳವಡಿಸುವುದು ಅನಿವಾರ್ಯ.
ನಿಮ್ಮ ಮುದ್ದಿನ ಮಕ್ಕಳನ್ನು ಟೀಕಿಸುವ ಮೊದಲು ಟೀಕೆಯ ಹಿಂದಿನ ಗುರಿ ಮತ್ತು ಉದ್ದೆಶಗಳು ಸ್ಪಷ್ಟವಾಗಿರಲಿ. ಟೀಕಿಸುವ ಭರಾಟೆಯಲ್ಲಿ ಮಕ್ಕಳು ನಿಮ್ಮ ಸಂದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ನಿಮ್ಮ ಮಗುವಿಗೆ ಶಿಕ್ಷಣ ಅಥವಾ ಶಿಕ್ಷೆ ನೀಡುವ ಮೊದಲು ಯೋಚಿಸಿ.
ಮಕ್ಕಳು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿ. ಮಗು ಶಾಲೆಯಲ್ಲಾಗಲೀ ಅಥವಾ ಮನೆಯಲ್ಲಾಗಲೀ ಅಸಹಜವಾಗಿ ತಪ್ಪನ್ನು ಮಾಡುತ್ತಿದೆಯೋ ಗಮನಿಸಿ. ರಚನಾತ್ಮಕ ಮಾರ್ಗದರ್ಶನದ ಅಂತಿಮ ಗುರಿ ಮಕ್ಕಳು ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸೂಕ್ತ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಪ್ರೆÃರೇಪಿಸುವುದಾಗಿದೆ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಮಕ್ಕಳು ತಮ್ಮ ಕಾರ್ಯಗಳ ಜವಾಬ್ದಾರಿಯನ್ನು ಕಲಿಯುತ್ತಾರೆ.
ಸಾಮಾನ್ಯವಾಗಿ ಮಕ್ಕಳು ತಡವಾಗಿ ಏಳುತ್ತಾರೆ. ಎದ್ದ ನಂತರ ಹಾಸಿಗೆ ತೆಗೆದಿಡಬೇಕೆಂದು ಎಷ್ಟೆ ಬಾರಿ ಹೇಳಿದರೂ ಕೇಳುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ಟೀಕೆಯ ಬದಲಾಗಿ ಸಹಾಯ ಹಸ್ತ ಚಾಚಿ. “ಮಗು ಹಾಸಿಗೆ ತೆಗೆಯಲಿಲ್ಲವೇ? ಬಾ ನಿನಗೆ ಸಹಾಯ ಮಾಡುತ್ತೆÃನೆ” ಎಂದು ಸಹಾಯ ನೀಡಿ. ಒಂದೆರಡು ಬಾರಿ ಈ ಪ್ರಕ್ರಿಯೆ ಪುನರಾವರ್ತನೆಯಾದರೆ ಮಗು ಖಂಡಿತವಾಗಿ ತನ್ನ ಪಾಲಿನ ಜವಾಬ್ದಾರಿಯನ್ನು ಅರಿಯತೊಡಗುತ್ತದೆ. ಇದು ಕೇವಲ ಉದಾಹರಣೆ ಮಾತ್ರ. ಇಂತಹ ಅದೆಷ್ಟೊ ಕೆಲಸಗಳಲ್ಲಿ ಮಗುವಿಗೆ ಸಹಾಯ ಮಾಡುವ ಮೂಲಕ ಕೆಲಸದ ಜವಾಬ್ದಾರಿಯನ್ನು ಕಲಿಸಲು ಅವಕಾಶ ಇದೆ.
ವಿಪರ್ಯಾಸವೆಂದರೆ, ಮಗುವಿನಲ್ಲಿ ಶಿಸ್ತು ಬೆಳೆಸುವ ಭರಾಟೆಯಲ್ಲಿ ಕೇವಲ ತಪ್ಪುಗಳನ್ನು ಹುಡುತ್ತೆÃವೆಯೇ ಹೊರತು ಒಳ್ಳೆಯ ಕೆಲಸಗಳನ್ನಲ್ಲ. ಮಗು ಅನೇಕ ವೇಳೆ ಉತ್ತಮ ಕಾರ್ಯಗಳನ್ನು ಮಾಡುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ಗಮನಿಸಿದರೂ ಒಂದು ಪ್ರೆÃರಣಾತ್ಮಕ ಧನ್ಯವಾದವನ್ನು ಮಗುವಿಗೆ ಹೇಳುವುದಿಲ್ಲ. ಇದು ತಪ್ಪು. ಉತ್ತಮ ಕೆಲಸ ಮಾಡಿದಾಗ ಮಗುವನ್ನು ಪ್ರಶಂಸಿಸಬೇಕು. 

ಈ ಎಲ್ಲಾ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಪಾಲಕರಾದ ನಮಗೆ ತೊಂದರೆಯಾಗಬಹುದು. ಆದರೆ ಮಕ್ಕಳನ್ನು ಬೆಳೆಸಲು ಕೆಲ ಅಗತ್ಯ ತಂತ್ರಗಾರಿಕೆಗಳನ್ನು ಕಲಿಯುವುದು ಅನಿವಾರ್ಯ. ಸತತ ಅಭ್ಯಾಸದೊಂದಿಗೆ ಈ ತಂತ್ರಗಳನ್ನು ಪಾಲಿಸಲು ಪ್ರಯತ್ನಿಸಿದರೆ ಖಂಡಿತ ಯಶಸ್ಸು ಕಾಣಬಹುದು. ಆಗ ಕುಟುಂಬದ ಪ್ರತಿಯೊಬ್ಬರೂ ಸಂತೋಷವಾಗಿ ಇರುತ್ತಾರೆ. ಆ ಮೂಲಕ ಮಗು ದೇಶದ ನಗುವಾಗುತ್ತದೆ.

ಆರ್.ಬಿ.ಗುರುಬಸವರಾಜ



No comments:

Post a Comment