ದಿನಾಂಕ 17-10-2018ರ ವಿಜಯವಾಣಿಯಲ್ಲಿ ನನ್ನ ಬರಹ.
ಮೊಬೈಲ್ ಗೀಳು ಜೀವನ ಹಾಳು
ಪಿ.ಯು.ಸಿ ಓದಿ ಮನೆಯಲ್ಲಿರುವ ಇಪ್ಪತ್ಮೂರು ವರ್ಷದ ರಮೇಶ ಕಳೆದ ಒಂದು ವಾರದಿಂದ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾನೆ. ಸದಾ ಮಂಪರಿನಲ್ಲಿರುವ ರಮೇಶ ಕೈಯಲ್ಲಿ ಮೊಬೈಲ್ ಹಿಡಿದ ರೀತಿಯಲ್ಲಿ ವರ್ತಿಸುತ್ತಾನೆ. ಎಚ್ಚರವಾದೊಡನೆ ಮೊಬೈಲ್ ಎಲ್ಲಿ ಎಂದು ಹುಡುಕಾಡುತ್ತಾನೆ. ಅಕ್ಕಪಕ್ಕದವರಲ್ಲಿ ಮೊಬೈಲ್ ಕೇಳುತ್ತಾನೆ. ರಮೇಶನ ಸ್ಥಿತಿಯನ್ನು ಅಧ್ಯಯನ ಮಾಡಿದ ವೈದ್ಯರು ಈ ಕಾಯಿಲೆಗೆ ನೊಮೋಫೋಬಿಯಾ ಎಂದು ಹೇಳಿದ್ದಾರೆ. ರಮೇಶನ ಈ ಸ್ಥಿತಿ ಬಡ ತಂದೆ ತಾಯಿಗೆ ಚಿಂತೆಯಾಗಿದೆ.
ಹತ್ತನೇ ತರಗತಿಯ ಜ್ಯೊತಿ ಮಾಹಿತಿ ಹುಡುಕುವ ನೆಪದಲ್ಲಿ ಸಂಜೆಯಿಂದ ರಾತ್ರಿ ಮಲಗುವವೆರಗೂ ಸ್ಮಾರ್ಟ್ಫೋನ್‌ಗೆ ಅಂಟಿಕೊಂಡಿರುತ್ತಾಳೆ. ಮಗಳ ಸ್ಮಾರ್ಟ್ಪೋನ್ ಪುರಾಣ ಕುರಿತು ತಾಯಿ ಚಿಂತಿತಳಾಗಿದ್ದಾಳೆ.
ಇದು ಕೇವಲ ಜ್ಯೊತಿ ಹಾಗೂ ರಮೇಶರ ಕಥೆಯಲ್ಲ. ಬಹುತೇಕ ಯುವಕರ ಸ್ಥಿತಿಯೂ ಇದೇ ಆಗಿದೆ. ಶಾಲೆ/ಕಾಲೇಜು ಸಮಯ ಹೊರತು ಪಡಿಸಿದರೆ ಬಹುತೇಕ ವೇಳೆ ಮೊಬೈಲ್ ಫೋನಿಗೆ ಅಂಟಿಕೊಂಡಿರುತ್ತಾರೆ. ಇತ್ತಿಚಿಗೆ ಶಾಲೆ/ಕಾಲೇಜಿನಲ್ಲೂ ಪಾಠದ ವೇಳೆಯಲ್ಲಿ ಮೊಬೈಲ್ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವ ಬಗ್ಗೆ ವರದಿಯಾಗಿವೆ. ಯುವಕರನ್ನು ಆಕರ್ಷಿಸುವ ಅಪ್ಲಿಕೇಶನ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತಮ್ಮ ವಯಸ್ಸಿನ ಫ್ರೆಂಡ್ಸ್ ಜೊತೆ ಹೊರಗಡೆ ಬಯಲಿನಲ್ಲಿ ಆಡವಾಡುವುದನ್ನು ಬಿಟ್ಟು, ಮೊಬೈಲ್ ಕೈಯಲ್ಲಿ ಹಿಡಿದು ಮೂಲೆ ಸೇರುತ್ತಿದ್ದಾರೆ. ನಾಲ್ಕಾರು ಗೆಳೆಯರು ಒಂದೆಡೆ ಸೇರಿದ್ದರೂ ಸಹ ಪರಸ್ಪರ ಮಾತನಾಡದೇ ಮೊಬೈಲ್‌ನಲ್ಲೆ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಅವರು ಸ್ಮಾರ್ಟ್ಫೋನ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಹೇಗೆ ಬಿಡಿಸಬೇಕೆಂಬುದೇ ಬಹುತೇಕ ಪಾಲಕರ ಚಿಂತೆಯಾಗಿದೆ. ಯುವಕರು ಮೊಬೈಲ್ ಫೋನಿಗೆ ಅಂಟಿಕೊಂಡರುವ ಪ್ರಕರಣಗಳನ್ನು ಮನೋವಿಜ್ಞಾನದಲ್ಲಿ ‘ನೊಮೋಫೋಬಿಯಾ’ ಎಂದು ಗುರುತಿಸಲಾಗಿದೆ. ಇದರಿಂದ ಆಗುವ ತೊಂದರೆಗಳು ಹಾಗೂ ಯುವಕರು ಇದರಿಂದ ದೂರವಿರುವ ಕ್ರಮಗಳ ಕುರಿತ ಕಿರು ಮಾಹಿತಿ ಇಲ್ಲಿದೆ.
ನೊಮೋಫೋಬಿಯಾ ಎಂದರೆ,,,,,, : ಮೊಬೈಲ್ ಫೋನ್‌ನಿಂದ ದೂರ ಇರಲಾಗದ ಭಯವೇ ನೊಮೋಫೋಬಿಯಾ. ಅಂದರೆ ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸವೇ ನೊಮೋಫೋಬಿಯಾ. ಇಂತಹ ತೊಂದರೆಗೆ ಒಳಗಾದರು ಫೋನ್‌ನ್ನು ಸದಾ ಬಳಿಯೇ ಇಟ್ಟುಕೊಂಡಿರುತ್ತಾರೆ. ಆಗಾಗ್ಗೆ ಮೊಬೈಲ್ ಸ್ಕಿçನ್ ಓಪನ್ ಮಾಡುವುದು, ನೋಟಿಫಿಕೇಶನ್‌ಗಳನ್ನು ಗಮನಿಸುವತ್ತ ಚಿತ್ತ ಹರಿಸುತ್ತಾರೆ. ಪದೇ ಪದೇ ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್, ವಾಟ್ಸಪ್‌ಗಳನ್ನು ಓಪನ್ ಮಾಡುತ್ತಾ ಅದರಲ್ಲೆ ಕಾಲ ಕಳೆಯುತ್ತಾರೆ.
ಲಕ್ಷಣಗಳು :
• ಪದೇ ಪದೇ ಮೊಬೈಲ್ ನೋಡುವುದು.
• ಒಂಟಿಯಾಗಿರಲು ಬಯಸುವುದು.
• ಪ್ರತ್ಯೆಕ ಕೊಠಡಿಗಳಲ್ಲಿ ಅವಿತುಕೊಳ್ಳುವುದು.
• ಟಾಯ್ಲೆಟ್ ರೂಮಿಗೂ ಮೊಬೈಲ್ ಕೊಂಡೊಯ್ಯುವುದು.
• ಮೊಬೈಲ್ ಕಾಣಿಸದಿದ್ದರೆ ಏನನ್ನೊ ಕಳೆದುಕೊಂಡವರಂತೆ ವರ್ತಿಸುವುದು.
• ರಾತ್ರಿ ಮಲಗುವಾಗ ತಲೆದಿಂಬಿನ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವುದು.
• ಎಚ್ಚರವಾದ ಕೂಡಲೇ ಮೊಬೈಲ್ ಸ್ಕಿçನ್ ಓಪನ್ ಮಾಡಿ ನೋಟಿಫಿಕೇಶನ್ ಗಮನಿಸುವುದು.
• ನಿದ್ರಾಹೀನತೆಯಿಂದ ಬಳಲುವುದು.
• ಡ್ರಗ್ ವ್ಯಸನಿಯಂತೆ ವರ್ತಿಸುವುದು.
ಕಾರಣಗಳು : ಇಂದಿನ ವಿಭಕ್ತ ಕುಟುಂಬ ಪದ್ದತಿಯು ನೊಮೋಫೋಬಿಯಾಕ್ಕೆ ಮೂಲಕಾರಣ ಎನ್ನಲಾಗುತ್ತದೆ. ತಂದೆ-ತಾಯಿ ಇಬ್ಬರೂ ದುಡಿಮೆಯ ನೆಪದಲ್ಲಿ ಮಕ್ಕಳಿಂದ ಹೆಚ್ಚು ಸಮಯ ದೂರವಿರುತ್ತಾರೆ. ಮಕ್ಕಳ ಓಲೈಕೆಗಾಗಿ ಮೊಬೈಲ್ ಫೋನ್ ಕೊಡಿಸುತ್ತಾರೆ. ಆಕರ್ಷಕ ದೃಶ್ಯಿಕೆಗಳು, ಖುಷಿ ನೀಡುವ ವೀಡಿಯೋ ಗೇಮ್‌ಗಳು, ಕಣ್ಮನ ಸೆಳೆಯುವ ನೃತ್ಯಗಳು, ನಗಿಸುವ ಹಾಸ್ಯ ತುಣುಕುಗಳು ನೊಮೋಫೋಬಿಯಾಕ್ಕೆ ಕಾರಣಗಳು. ಅಲ್ಲದೇ ಕಡಿಮೆ ಬೆಲೆಗೆ ದೊರೆಯುವ ವೇಗದ ಇಂಟರ್‌ನೆಟ್ ಸೌಲಭ್ಯವೂ ಸಹ ಈ ದುರಭ್ಯಾಸಕ್ಕೆ ಕಾರಣವೆಂದರೆ ತಪ್ಪಲ್ಲ.
ಪರಿಣಾಮಗಳು :
ಸಂಪರ್ಕ ಕ್ರಾಂತಿಯ ಭಾಗವೆಂದು ಭಾವಿಸಿದ, ಮಿನಿ ಕಂಪ್ಯೂಟರ್‌ಗಳಾದ ಮೊಬೈಲ್ ಫೋನ್‌ಗಳು ಯುಜನತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಇಂದಿನ ಮಕ್ಕಳು ಹಾಗೂ ಯುವಜನತೆ ಹೆಚ್ಚಿನ ರೇಡಿಯೋ ಫ್ರಿಕ್ವೆನ್ಸಿ ಪರಿಸರದಲ್ಲಿ ಬೆಳೆಯುತ್ತಿದ್ದಾರೆ. ಮೊಬೈಲ್‌ಗಳಿಂದ ಹೊರಸೂಸುವ ವಿಕಿರಣಗಳು ಅವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತಿವೆ.
ಇತ್ತಿಚಿನ ವರ್ಷಗಳಲ್ಲಿ ದೇಹದಲ್ಲಿ ಸೆಲ್‌ಫೋನ್ ವಿಕಿರಣ ಪರಿಣಾಮ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ‘ದಿ ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್’ ನಡೆಸಿದ ಅಧ್ಯಯನವು ಮಕ್ಕಳು/ಯುವಕರು ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
• ಮೊಬೈಲ್ ಬಳಸುತ್ತಿರುವ ಯುವಕರ ಮೆದುಳು ಮತ್ತು ಕಿವಿಯಲ್ಲಿ ಮಾರಣಾಂತಿಕ ಟ್ಯುಮರ್ ಬೆಳೆಯುವ ಸಾಧ್ಯತೆಯನ್ನು ಅಧ್ಯಯನವು ತೋರಿಸಿದೆ.
• ವಿಶ್ವ ಆರೋಗ್ಯ ಸಂಸ್ಥೆಯು ಸೆಲ್‌ಫೋನ್ ವಿಕಿರಣ ಭಾಗಶಃ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಿದೆ. ಮಕ್ಕಳು/ಯುವಕರು ಶೇಕಡಾ ೬೦ರಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ. ಅವರ ಮೆದುಳಿನ ತೆಳುವಾದ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಪಟ್ಟು ವಿಕಿರಣವನ್ನು ಹೀರಿಕೊಳ್ಳುತ್ತವೆ ಎಂದು ಅಧ್ಯಯನವು ಹೇಳುತ್ತದೆ. ಈ ವಿಕಿರಣಗಳು ನರಮಂಡಲವನ್ನು ದುರ್ಬಲಗೊಳಿಸಿ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಹೇಳಿದೆ.
• ಕೇವಲ ೨ ನಿಮಿಷದ ಕರೆಯು ೧೬ ವರ್ಷದೊಳಗಿನ ಮಕ್ಕಳ ಮೆದುಳಿನ ಕಾರ್ಯನಿರ್ವಾಹಕ ಚಟುವಟಿಕೆಯನ್ನು ಬದಲಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಿವಿಗೆ ಹತ್ತಿರವಾಗಿ ಮೊಬೈಲ್ ಹಿಡಿದು ಮಾತನಾಡುವಾಗ ಅದರಿಂದ ಬರುವ ರೇಡಿಯೋ ತರಂಗಗಳು ಮಕ್ಕಳ ಮೆದುಳಿನಲ್ಲಿ ವ್ಯಾಪಿಸಿ ಕಲಿಕಾ ಸಾಮರ್ಥ್ಯ ಹಾಗೂ ಇನ್ನಿತರೇ ವರ್ತನೆಯ ಸಮಸ್ಯೆಗಳನ್ನು ದುರ್ಬಲಗೊಳಿಸುತ್ತದೆ. ಇದು ಕಲಿಯುವವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
• ಸದಾ ಮೊಬೈಲ್ ಬಳಸುತ್ತಿದ್ದರೆ, ಕಲಿಕಾ ಸಾಮರ್ಥ್ಯ ಕಡಿಮೆಯಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಕ್ರಮೇಣವಾಗಿ ಕಲಿಕೆಯಲ್ಲಿ ನಿರಾಸಕ್ತಿ ಉಂಟಾಗುತ್ತದೆ.
• ಸದಾ ಮೊಬೈಲ್ ಫೋನ್‌ಗೆ ಅಂಟಿಕೊಂಡಿರುವುದರಿಂದ ದೈಹಿಕ ಚಟುವಟಿಕೆಗಳು ಇಲ್ಲದೇ ದಢೂತಿದೇಹ ಉಂಟಾಗುತ್ತದೆ.
• ಸೆಲ್‌ಫೋನ್ ಮಕ್ಕಳು/ಯುವಕರಲ್ಲಿ ಅನುಚಿತ ವರ್ತನೆಗೆ ಕಾರಣವಾಗುತ್ತದೆ. ಅನಗತ್ಯ ಪಠ್ಯ ಹಾಗೂ ಚಿತ್ರ ಸಂದೇಶದ ಚಾಟಿಂಗ್‌ನಲ್ಲಿ ತೊಡಗುವ ಸಮಸ್ಯೆ ಉಂಟಾಗುತ್ತದೆ. ಕುಟುಂಬದ ವ್ಯಕ್ತಿಗಳ ಚಿತ್ರಗಳು ಕೆಲವೊಮ್ಮೆ ಕೈತಪ್ಪಿ ಅಂತರಜಾಲದಲ್ಲಿ ಸಿಲುಕಿ, ಅಶ್ಲಿಲ ಸೈಟ್‌ಗಳಿಗೆ ಪ್ರವೇಶಹೊಂದಿ ಅವಾಂತರ ತರುವ ಸಾಧ್ಯತೆಗಳಿವೆ.
• ಮೊಬೈಲ್ ಬಳಕೆಯಿಂದ ಕಲಿಕೆಯಲ್ಲಿ ಹಿಂದುಳಿದವರು ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳಲ್ಲಿ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಪರೀಕ್ಷೆಗಳಲ್ಲಿ ನಕಲು ಮಾಡುವಂತಹ ದುಷ್ಕೃತ್ಯ ಎಸಗಬಹುದು.
• ಮೊಬೈಲ್ ವ್ಯಸನಕ್ಕೆ ಒಳಗಾದವರು ಮೌಲ್ಯಯುತವಾದ ಹವ್ಯಾಸಗಳು ಮತ್ತು ಪ್ರಿತಿಪಾತ್ರರಿಂದ ದೂರವಾಗುತ್ತದೆ.
• ಸ್ಮಾರ್ಟ್ಫೋನ್ ಬಳಕೆಯಿಂದ ಯುವಕರಲ್ಲಿ ಆಕ್ರಮಣಕಾರಿ ವರ್ತನೆಗಳು ಪ್ರಕಟಗೊಳ್ಳುತ್ತವೆ. ಇದರಿಂದ ಅವರಲ್ಲಿ ಆತಂಕ, ಒತ್ತಡ, ಖಿನ್ನತೆ, ಚಡಪಡಿಕೆ ಉಂಟಾಗುತ್ತದೆ.
• ಮೊಬೈಲ್ ಬಳಕೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಸ್ಮರಣಶಕ್ತಿಯೂ ಕಡಿಮೆಯಾಗುತ್ತದೆ ಮತ್ತು ಆ ಕಾರಣದಿಂದ ಶೈಕ್ಷಣಿಕ ಪ್ರಗತಿ ವೇಗವಾಗಿ ಕುಂಟಿತವಾಗುತ್ತದೆ.
• ಬ್ಲೂವ್ಹೆಲ್, ಮೊಮೋನಂತಹ ಆನ್‌ಲೈನ್ ಗೇಮ್‌ಗಳು ಮಕ್ಕಳು/ಯುವಕರ ಪ್ರಾಣಕ್ಕೆ ಕಂಟಕವಾಗಬಹುದು.
• ಭವಿಷ್ಯದಲ್ಲಿ ಭಾವನೆಗಳು ನಶಿಸುವ ಸಾಧ್ಯತೆ ಇದೆ.
ಮುಕ್ತಿಮಾರ್ಗ :
ನೊಮೋಫೋಬಿಯಾದಿಂದ ಹೊರಬರುವುದು ಯುವಕರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಶಾಂತವಾಗಿ ಯೋಚಿಸಿದರೆ ಇದೇನೂ ದೊಡ್ಡ ಸಮಸ್ಯೆಯಲ್ಲ. ಆದರೆ ಗಂಭೀರ ಪರಿಣಾಮಗಳ ಬಗ್ಗೆ ಯೋಚಿಸಿದರೆ ಖಂಡಿತವಾಗಿ ಹೊರಬರಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಯುವಕರು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ.
ಆದಷ್ಟೂ ಬಯಲಿನಲ್ಲಿ ದೈಹಿಕ ಶ್ರಮದ ಆಟಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಮನಸ್ಸು ಉಲ್ಲಿಸತವಾಗುವಂತೆ ಮಾಡುತ್ತದೆ.
ಸ್ಮಾರ್ಟ್ಫೋನ್‌ಗಳು ನಮ್ಮ ಜೀವನದ ಭಾಗವೇನಲ್ಲ. ಅದನ್ನು ಬದಿಗಿಟ್ಟು ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.
ಕುಟುಂಬದ ಸದಸ್ಯರೊಡನೆ ಭೌತಿಕವಾಗಿ ಹೆಚ್ಚು ಹೆಚ್ಚು ಬರೆಯಿರಿ. ಸಣ್ಣ ಸಣ್ಣ ಮನೆಕೆಲಸಗಳಲ್ಲಿ ಪೋಷಕರಿಗೆ ನೆರವಾಗಿ.
ಒಡನಾಡಿಗಳು, ಬಂಧು-ಬಾಂಧವರ ಜೊತೆ ಹೆಚ್ಚು ಹೆಚ್ಚು ಬೆರೆಯಿರಿ.
ಹಾಡುಗಾರಿಕೆ, ನೃತ್ಯ, ಯೋಗ, ಚಿತ್ರಕಲೆ, ಕ್ಲೆಮಾಡಲಿಂಗ್‌ನಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
ಚೆಸ್, ಕೇರಂ, ಟೇಬಲ್ ಟೆನ್ನಿಸ್, ಈಜುಗಳಂತಹ ಒಳಾಂಗಣ ಕ್ರಿಡೆಗಳು ವಿರಾಮ ವೇಳೆಯ ಸದುಪಯೋಗದ ಜೊತೆಗೆ ನೀವು ಸದಾ ಆಕ್ಟಿವ್ ಆಗಿರಲು ಸಹಾಯಮಾಡುತ್ತವೆ.
ಕಥೆ, ಕವನ, ಕಾದಂಬರಿ, ಜೀವನಚರಿತ್ರೆಗಳಂತಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಓದುವ ಹವ್ಯಾಸ ಎಲ್ಲೆಡೆ ನೀವು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ.
ಮೊಬೈಲ್ ಬೇಕೇ ಬೇಕು ಎಂದಾದರೆ ಕಡಿಮೆ ವಿಕಿರಣ ಮಟ್ಟ ಹೊಂದಿರುವ ಮೊಬೈಲ್ ಖರೀದಿಸಿ. ಇದಕ್ಕಾಗಿ ಎಸ್.ಎ.ಆರ್(ನಿರ್ದಿಷ್ಟ ಹೀರಿಕೆ ದರ) ಕಡಿಮೆ ಇರುವ ಮೊಬೈಲ್ ಖರೀದಿಸಿ. ಭಾರತದಲ್ಲಿ ಎಸ್.ಎ.ಆರ್ ಮಟ್ಟವು ೧.೬ ತಿ/ಞg ಆಗಿದೆ. ನಿಮ್ಮ ಮೊಬೈಲ್‌ನ ಎಸ್.ಎ.ಆರ್ ಮಟ್ಟ ಪರೀಕ್ಷಿಸಲು *#೦೭# ಡಯಲ್ ಮಾಡಿ.
ಪ್ರಯಾಣದ ವೇಳೆ ಮೊಬೈಲ್ ಬಳಸಬೇಡಿ. ರೈಲು, ಬಸ್ಸು, ಕಾರು ಮುಂತಾದ ವಾಹನಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಸಿಗ್ನಲ್‌ಗಳಿಗಾಗಿ ರೇಡಿಯೇಶನ್ ಸ್ಕಾö್ಯನಿಂಗ್ ಮಾಡುತ್ತಿರುತ್ತದೆ. ಈ ವೇಳೆಯಲ್ಲಿ ಹೆಚ್ಚು ವಿಕರಣಗಳು ಹೊರಸೂಸುತ್ತಿರುತ್ತವೆ.
ರಾತ್ರಿ ಮಲಗುವಾಗ ಹತ್ತಿರ ಮೊಬೈಲ್ ಇಟ್ಟುಕೊಳ್ಳಬೇಡಿ. ವಿಕಿರಣಗಳಿಂದ ನೆನಪಿನ ಶಕ್ತಿಯ ಮೇಲೆ ಪರಿಣಾಮಗಳಾಗುತ್ತವೆ.
ಎರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಬೇಕಿದ್ದರೆ ಲ್ಯಾಂಡ್‌ಲೈನ್ ಬಳಸಿ. ಇಲ್ಲವಾದರೆ ಮೊಬೈಲ್‌ನಲ್ಲಿ ಓಪನ್ ಸ್ಪಿಕರ್ ಹಾಕಿ ಮಾತನಾಡಿಸಿ. ಮಾತು ಆದಷ್ಟೂ ಹಿತಮಿತವಾಗಿರಲಿ.
ಸಾಮಾಜಿಕ ಜಾಲತಾಣ ಬಳಸುವುದು ಅನಿವಾರ್ಯವಾದರೆ ಮೊಬೈಲ್‌ನ ಬದಲು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಿ.
ನಿಮ್ಮ ಮೇಲೆ ಇಡೀ ಸಮಾಜ ಹಾಗೂ ಕುಟುಂಬ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ನಿಮ್ಮನ್ನು ನಂಬಿದವರ ನಿರೀಕ್ಷೆಗಳನ್ನು ನನಸು ಮಾಡುವುದು ನಿಮ್ಮ ಮೊದಲ ಆಧ್ಯತೆಯಾಗಲಿ. ಪುಸ್ತಕ ಹಾಗೂ ಸೃಜನಾತ್ಮಕ ಚಟುವಟಿಕೆಗಳು ನಿಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಆದರೆ ಮೊಬೈಲ್ ನಿಮ್ಮನ್ನು ತಲೆ ತಗ್ಗಿಸಿ ನಡೆಸುತ್ತದೆ. ನಿಮಗೆ ನಿಮ್ಮ ಭವಿಷ್ಯ ಮುಖ್ಯವಾಗಬೇಕೆ ಹೊರತು ಕ್ಷಣಿಕ ಸುಖದ ಮೊಬೈಲ್ ಅಲ್ಲ.
ಆರ್.ಬಿ.ಗುರುಬಸವರಾಜ
No comments:
Post a Comment