ಫೆಬ್ರವರಿ 2019ರ ಟೀಚರ್ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ.
ಕಲಿಕಾ ಕೊರತೆಯ ವಾಸ್ತವಾಂಶಗಳು
ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟದ ಕುರಿತು ಅನೇಕ ಸರ್ಕಾರೇತರ ಸಂಸ್ಥೆಗಳು ಪ್ರತಿವರ್ಷ ತಮ್ಮದೇ ಆದ ರೀತಿಯ ವರದಿಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಇವುಗಳನ್ನು ನೋಡಿದ ಪ್ರತಿಯೊಬ್ಬರಿಗೂ ಸರ್ಕಾರಿ ಶಾಲೆಗಳ ಗುಣಮಟ್ಟದ ಇಷ್ಟೊಂದು ಕೆಟ್ಟದಾಗಿದೆಯಾ? ಎಂಬ ಪ್ರಶ್ನೆ ಮೂಡುತ್ತದೆ. ವಿಶೇಷವಾಗಿ ಪಾಲಕರ ಮನಸ್ಸಿನ ಮೇಲೆ ಇಂತಹ ವರದಿಗಳು ಪರಿಣಾಮ ಬೀರುತ್ತವೆ. ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ.
ಇಂತಹ ವರದಿಗಳನ್ನು ನೋಡಿದಾಗಲೆಲ್ಲ ಕೆಲವೊಂದಿಷ್ಟು ಪ್ರಶ್ನೆಗಳು ಮೂಡುತ್ತದೆ. ಗುಣಮಟ್ಟವನ್ನು ಅಳೆಯುವ ಮಾನಕಗಳೇನು? ನಿಜವಾದ ಕಲಿಕಾ ಕೊರತೆಯ ಕಾರಣಗಳನ್ನು ಪತ್ತೆ ಹಚ್ಚಲು ಈ ವರದಿಗಳು ಏಕೆ ಪ್ರಯತ್ನಿಸುತ್ತಿಲ್ಲ? ಕೇವಲ ಸರ್ಕಾರಿ ಶಾಲೆಗಳ ಗುಟ್ಟಮಟ್ಟದ ಬಗ್ಗೆ ಮಾತನಾಡುವ ವರದಿಗಳು ಖಾಸಗೀ ಶಾಲೆಗಳ ಗುಣಮಟ್ಟದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂಬ ಪ್ರಶ್ನೆಗಳು ಮೂಡುತ್ತವೆ.
ಕಲಿಕಾ ಕೊರತೆಯ ವರದಿಗಳು ಇದೇ ಮೊದಲೇನಲ್ಲ. ಕಲಿಕಾ ಕೊರತೆಯ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಆದರೆ ಫಲಿತಾಂಶದಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗುತ್ತಿಲ್ಲ. ಇದಕ್ಕೆ ಮೂಲ ಕಾರಣಗಳನ್ನು ಹುಡುಕುವ ಪ್ರಯತ್ನಗಳಾಗದಿರುವುದೇ ಇದಕ್ಕೆಲ್ಲಾ ಕಾರಣ.
ಕಲಿಕಾ ಕೊರತೆಯ ಕಾರಣಗಳನ್ನು ಕಂಡುಕೊಳ್ಳುವಲ್ಲಿ ಹಾಗೂ ಅವುಗಳನ್ನು ಪರಿಹರಿಸುವಲ್ಲಿ ಇಂತಹ ವರದಿಗಳು ಹಿಂದೆ ಬಿದ್ದಿವೆ. ಮೂಲ ಕಾರಣಗಳನ್ನು ಮರೆಮಾಚಿ ಕೇವಲ ಕಲಿಕಾ ಕೊರತೆಯನ್ನೇ ಎತ್ತಿ ಹೇಳುತ್ತಿರುವುದು ದುರಂತ. ಕಲಿಕಾ ಕೊರತೆಯ ಮೂಲ ಸಮಸ್ಯೆ ಎಂದರೆ ಗ್ರಾಮೀಣ ಮಕ್ಕಳ ಅನಿಯಮಿತ ಗೈರುಹಾಜರಿ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಜೂನ್-ಜುಲೈ ತಿಂಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಿತ್ತನೆ ಕಾರ್ಯಕ್ಕೆ ಕೃಷಿ ಕೂಲಿಗಳ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆ ನಿವಾರಣೆಗೆ ಪಾಲಕರು ಬಿತ್ತನೆ ಹಾಗೂ ಇನ್ನಿತರೇ ಕೃಷಿ ಚಟುವಟಿಕೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗುತ್ತಿದೆ. ಇದರಿಂದಾಗಿ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಾಗಿದ್ದ ಆ ಮಕ್ಕಳು ಕೃಷಿ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕಲಿಕಾ ಕೊರತೆಯನ್ನು ಅನುಭವಿಸುತ್ತಾರೆ. ಈ ಪ್ರಕ್ರಿಯೆ ಕೇವಲ ಜೂನ್ ಜುಲೈ ತಿಂಗಳಿಗೆ ಮಾತ್ರ ಸೀಮಿತವಲ್ಲ. ಸುಗ್ಗಿಯವರೆಗೂ ಮುಂದುವರೆಯುತ್ತದೆ. ಅಲ್ಲದೇ ಕೆಲ ಗ್ರಾಮೀಣ ಭಾಗಗಳಲ್ಲಿ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಪಾಲಕರು ಮಕ್ಕಳೊಂದಿಗೆ ಮರ‍್ನಾಲ್ಕು ತಿಂಗಳುಗಳ ಕಾಲ ದುಡಿಮೆ ಅರಸಿ ವಲಸೆ ಹೋಗುತ್ತಾರೆ. ಕೆಲವು ವೇಳೆ ಚಿಕ್ಕ ಮಕ್ಕಳ ಪಾಲನೆ ಹಾಗೂ ಮನೆಕೆಲಸಗಳಿಗಾಗಿ ಶಾಲಾ ಮಕ್ಕಳನ್ನೇ ಬಳಸಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಕಲಿಕಾ ದಿನಗಳು ಹಾಳಾಗುತ್ತಿವೆ. ಇಂತಹ ಅನಿಯಮಿತ ಗೈರುಹಾಜರಿ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಇಂತಹ ಮಕ್ಕಳನ್ನು ಶಾಲೆಗೆ ಕರೆತರುವುದೇ ಶಿಕ್ಷಕರ ದೊಡ್ಡ ಸವಾಲಾಗುತ್ತಿದೆ. ಪಾಲಕರ ಭೇಟಿಗೆಂದು ಮನೆಗೆ ಹೋದಾಗ ಬಹುತೇಕ ಸಮಯದಲ್ಲಿ ಪಾಲಕರು ಲಭ್ಯ ಇರುವುದಿಲ್ಲ. ಇನ್ನು ಕೆಲ ಪಾಲಕರು ಸಮಯದ ಅಭಾವದಿಂದಲೋ ಅಥವಾ ಶಿಕ್ಷಣದ ಬಗೆಗಿನ ನಿರ್ಲಕ್ಷದಿಂದಲೋ ಶಾಲೆಯತ್ತ ಸುಳಿಯುವುದೇ ಇಲ್ಲ. ಇಂತಹ ಎಲ್ಲಾ ಮಕ್ಕಳ ಮನೆಗಳಿಗೆ ಭೇಟಿ ನೀಡಿ ವಾಪಾಸಾಗುವ ವೇಳೆಗೆ ಶಿಕ್ಷಕರ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಇತ್ತ ಶಾಲೆಯಲ್ಲಿದ್ದ ಮಕ್ಕಳ ಕಲಿಕೆಯೂ ಕುಂಟಿತ, ಅತ್ತ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದೂ ವಿಫಲ. ಇಂತಹ ಅನೇಕ ವಿಫಲ ಪ್ರಯತ್ನಗಳ ನಡುವೆ ಕಲಿಕೆ ಸೊರಗುವುದು ಸಹಜ. ವಿಫಲ ಪ್ರಯತ್ನಗಳ ನಡುವೆಯೂ ಅಲ್ಲಲ್ಲಿ ಕೆಲವು ಶಾಲೆ/ಶಿಕ್ಷಕರು ಉತ್ತಮ ಪ್ರಯತ್ನಗಳು ಮರುಭೂಮಿಯ ಓಯಸಿಸ್‌ನಂತೆ ದಾರಿದೀಪಗಳಾಗುತ್ತಿವೆ. ಇಂತಹ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳಾಗಬೇಕಿರುವುದು ಅನಿವಾರ್ಯ.
ಅನಿಮಿತ ಗೈರುಹಾಜರಾದ ಮಕ್ಕಳಿಗೆ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಂಡು ಕಲಿಸಲು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಇರುವ ಸಮಯಾವಕಾಶದಲ್ಲಿ ಹಲವಾರು ಕಾರ್ಯಗಳನ್ನು ನಿಭಾಯಿಸಬೇಕಾದ ಶಿಕ್ಷಕರಿಗೆ ಕೆಲಸದ ಒತ್ತಡ ಸಹಜ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಕೇವಲ ಕಾರ್ಯಕ್ರಮಗಳಾಗಿ ಜಾರಿಯಲ್ಲಿರುವ ಅನೇಕ ಯೋಜನೆಗಳು ಬೋಧನಾ ಕಲಿಕಾ ಅವಧಿಯನ್ನು ಮೊಟಕುಗೊಳಿಸಿವೆ.
ಹೆಚ್ಚಿನ ಗ್ರಾಮೀಣ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಕಲಿಕೆ ಉತ್ತಮವಾಗಲು ತರಗತಿಗೊಬ್ಬ ಶಿಕ್ಷಕ ಇರಬೇಕೆನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಆದರೆ ಇಂದು ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲೆಗೆ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಇದ್ದಾರೆ. ಎನ್.ಸಿ.ಎಫ್-2005, ಆರ್.ಟಿ.ಇ-2009 ಹಾಗೂ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ(ಸಿ.ಸಿ.ಇ) ಪ್ರಕಾರ ಶಿಕ್ಷಕ ಮತ್ತು ಮಕ್ಕಳ ಅನುಪಾತ 1:30 ಇರಬೇಕೆಂದು ಸ್ಪಷ್ಟ ನಿರ್ದೇಶನಗಳಿವೆ. ಪ್ರಸ್ತುತ ನಮ್ಮ ರಾಜ್ಯ ಮಟ್ಟದ ಅಂಕಿ-ಅAಶಗಳನ್ನು ಗಮನಿಸಿದರೆ ಇದೇ ಅನುಪಾತ ಇದೆ. ಆದರೆ ವಾಸ್ತವಾಂಶ ಇದಕ್ಕಿಂತ ಭಿನ್ನವಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದ್ದು ಶಿಕ್ಷಕರ ಕೊರತೆ ಇದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಅನುಪಾತದಂತೆ ಕಾರ್ಯ ನಿರ್ವಹಿಸಲು ಕೆಲವು ತಾಂತ್ರಿಕ ದೋಷಗಳಿವೆ. ಗ್ರಾಮೀಣ ಭಾಗಗಳಲ್ಲಿ ಈ ಅನುಪಾತದಲ್ಲಿ ತುಂಬಾ ವ್ಯತ್ಯಾಸಗಳಿವೆ.
ಇಂದು ಶಿಕ್ಷಕರ ಕಾರ್ಯಭಾರ ಹೆಚ್ಚಾಗಿದ್ದು, ಪ್ರತೀ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರು ದಾಖಲಾತಿ ನಿರ್ವಹಣೆ, ಬಿಸಿಯೂಟ/ಕ್ಷೀರಭಾಗ್ಯ, ಕಛೇರಿ ಪತ್ರಗಳ ಸರಬರಾಜು, ಪೋಷಕರು/ವಿದ್ಯಾರ್ಥಿಗಳ ದಾಖಲಾತಿ ನಿರ್ವಹಣೆ, ಇಲಾಖೆ ಹಾಗೂ ಇಲಾಖೇತರ ಸಭೆಗಳು ಇತ್ಯಾದಿ ಕಾರ್ಯಗಳಿಗೆಂದು ಅಲೆದಾಡುತ್ತಾ ಒಟ್ಟಾರೆ ಆಡಳಿತ ನಿರ್ವಹಣೆಗೆ ಮೀಸಲಾಗುತ್ತಿದ್ದಾರೆ. ಇಬ್ಬರು ಶಿಕ್ಷಕರು ಇರುವ ಶಾಲೆಗಳಲ್ಲಿ ಒಬ್ಬರು ಆಡಳಿತಕ್ಕೇ ಮೀಸಲಾದರೆ ಉಳಿದ ಒಬ್ಬರೇ ಶಿಕ್ಷಕರು, ಐದು ತರಗತಿಗಳ 21 ವಿಷಯಗಳ ಭೋದನೆ ಹಾಗೂ ಅದಕ್ಕೆ ಸಂಬAಧಿಸಿದ ದಾಖಲೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಆಗ ಶಿಕ್ಷಣದ ಗುಣಮಟ್ಟ ಎಂಬುದು ಕೇವಲ ಕಾಗದದ ಸರಕಾಗುತ್ತದೆ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಗಟ್ಟಿಗೊಳ್ಳಲು ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಿದರೆ ಮಾತ್ರ ಉತ್ತಮ ಗುಟ್ಟಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.
ಇನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿಯೂ ಇದಕ್ಕಿಂತ ಭಿನ್ನವಾದ ಸಮಸ್ಯೆಗಳಿವೆ. ಎಂಟನೇ ತರಗತಿವರೆಗಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಇಲ್ಲದಿರುವುದು ಕಲಿಕಾ ಕೊರತೆಗೆ ಮೂಲ ಕಾರಣವಾಗಿದೆ. ಅಲ್ಲದೇ ಅಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಶಿಕ್ಷಕರ ಸಂಖ್ಯೆ ಕಡಿಮೆ ಇದೆ. ಐದಾರು ಜನ ಶಿಕ್ಷಕರು ಎಂಟು ತರಗತಿಗಳ ಎಲ್ಲಾ ವಿಷಯಗಳನ್ನು ಬೋಧಿಸಿಕೊಂಡು ಇಲಾಖೆಯ ಇನ್ನಿತರೇ ಕಾರ್ಯಚಟುವಟಿಕೆಗಳನ್ನು ಪೂರೈಸುವುದು ನಿಜಕ್ಕೂ ತ್ರಾಸದಾಯಕ. ಇಂತಹ ಸಂದರ್ಭಗಳಲ್ಲಿ ಕಾರ್ಯದ ಒತ್ತಡದಿಂದ ಮಕ್ಕಳಿಗೆ ವೈಯಕ್ತಿಕ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಬಹುತೇಕ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ ವಿಜ್ಞಾನ ಪ್ರಯೋಗಾಲಯಗಳು ಇಲ್ಲವೇ ಇಲ್ಲ. ಮಕ್ಕಳ ಜ್ಞಾನವೃದ್ದಿಗೆ ಪೂರಕವಾದ ಸುಸಜ್ಜಿತವಾದ ಗ್ರಂಥಾಲಯ ಹಾಗೂ ವಾಚನಾಲಯಗಳ ಕೊರತೆ ಇದೆ. ಬಹುತೇಕ ಶಾಲೆಗಳ ಗ್ರಂಥಾಲಯಗಳಲ್ಲಿ ಪುಸ್ತಕಗಳಿವೆ. ಆದರೆ ಕಾರಣಾಂತರಗಳಿಂದ ಅವು ಮಕ್ಕಳಿಗೆ ಓದಲು ದೊರೆಯುತ್ತಿಲ್ಲ. ಹೀಗಾಗಿ ಕಲಿಕಾ ಕೊರತೆ ಉಂಟಾಗುವುದು ಸಹಜ. ಇಂತಹ ಅನೇಕ ವಿಫಲ ಪ್ರಯತ್ನಗಳು ಶಿಕ್ಷಕರ ಮನೋಸ್ಥಿತಿಯನ್ನು ಕುಗ್ಗಿಸುವ ಪ್ರೇರಕಾಂಶಗಳಾಗಿರುವುದು ಶೋಚನೀಯ.
ಕಲಿಕಾ ಕೊರತೆಗೆ ಸಂಬಂಧಿಸಿದ ನಿಜವಾದ ಕಾರಣಗಳನ್ನು ಕಾರಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪರಿಹರಿಸುವ ಪ್ರಯತ್ನಗಳಾಗಬೇಕು. ಅದರ ಜೊತೆಗೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ವಿಷಯಕ್ಕೂ ಪ್ರತ್ಯೇಕವಾದ ಪ್ರಯೋಗಾಲಯ ವ್ಯವಸ್ಥೆಯಾಗಬೇಕು. ಅಂದರೆ ಈಗಿರುವ ತರಗತಿ ಕೊಠಡಿಗಳನ್ನೇ ವಿಷಯವಾರು ಪ್ರಯೋಗಾಲಯಗಳಾಗಿ ಪರಿವರ್ತಿಸಬೇಕು. ಅಲ್ಲಿಯೇ ವೇಳಾಪಟ್ಟಿಗೆ ಅನುಗುಣವಾಗಿ ತರಗತಿ ನಡೆಯಬೇಕು. ಇದರಿಂದ ಮಕ್ಕಳಲ್ಲಿ ಕೆಲವು ಕೌಶಲ್ಯಗಳನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ “ಸ್ಕಿಲ್ ಇಂಡಿಯಾ”ಕ್ಕೆ ನಿಜವಾದ ಅರ್ಥ ಕೊಡಲು ಸಾಧ್ಯವಾದೀತು.
ಆರ್.ಬಿ.ಗುರುಬಸವರಾಜ ಹೊಳಗುಂದಿ
No comments:
Post a Comment