June 5, 2020

ಸ್ಮರಣೆ ಎಂಬ ಸಂಪನ್ಮೂಲ/Memory as resource

ದಿನಾಂಕ 13-09-2019ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಸ್ಮರಣೆ ಎಂಬ ಸಂಪನ್ಮೂಲ


ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸ್ಮರಣೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ನಾವು ಕಲಿತ ಕೌಶಲ್ಯಗಳನ್ನು ನೆನಪಿಟ್ಟುಕೊಳ್ಳಲು, ಸಂಗ್ರಹವಾದ ಮಾಹಿತಿಯನ್ನು ಅಗತ್ಯವಿದ್ದಾಗ ಹಿಂಪಡೆಯಲು ಸ್ಮರಣೆ ಅಗತ್ಯ. ಮೆದುಳಿನ ಸಂಗ್ರಹದಲ್ಲಿರುವ ಮಾಹಿತಿಯನ್ನು ಸಕಾಲದಲ್ಲಿ ಸರಿಯಾಗಿ ಬಳಸದೇ ಹೋದರೆ ಸ್ಮರಣೆ ಸರಿಯಾಗಿಲ್ಲವೆಂದು ಅರ್ಥ. 
ಫೈಲಿಂಗ್ ಸಿಸ್ಟಮ್ : ಮೆಮೊರಿ ಅಥವಾ ಸ್ಮರಣೆ ಎಂಬುದು ಮೆದುಳಿನ ಒಂದು ಫೈಲಿಂಗ್ ಸಿಸ್ಟಮ್. ನಾವು ಕಲಿತ ಎಲ್ಲವನ್ನೂ ಅದು ಒಳಗೊಂಡಿದೆ. ಅದು ನಮ್ಮ ಮಾನಸಿಕ ವ್ಯವಸ್ಥೆಯ ತಾತ್ಕಾಲಿಕ ಆಯಾಮವನ್ನು ವಿವರಿಸುವ, ಉನ್ನತವಾದ ಅರಿವಿನ ಪ್ರಕ್ರಿಯೆಯಾಗಿದೆ. ಇದು ನಾವು ಗಳಿಸಿದ ಮಾಹಿತಿಯನ್ನು ಸಂಕೇತಿಕರಿಸಿ. ಸಂಗ್ರಹಿಸುತ್ತದೆ ಮತ್ತು ಅಗತ್ಯವಾದಾಗ ಸಂಕೇತಿಕರಣವನ್ನು ಜ್ಞಾನದ ಅನುಭವವನ್ನಾಗಿ ತೋರಿಸುವ ಸಾಮರ್ಥ್ಯವಾಗಿದೆ. ಸ್ಮರಣೆಯು ಹಿಂದಿನ ಕಲಿಕೆಯನ್ನು ಪ್ರತಿಬಿಂಬಿಸುವ ಜೊತೆಗೆ ಪ್ರಸ್ತುತ ಕಲಿಕೆಯನ್ನು ಒರೆಗೆ ಹಚ್ಚುತ್ತದೆ. ಹಾಗಾಗಿ ಸ್ಮರಣೆಯು ಹಿಂದಿನ ಮತ್ತು ಪ್ರಸ್ತುತತೆಯ ನಡುವೆ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ. ಹಿಂದಿನ ಕಲಿಕಾ ಅನುಭವಗಳು ಸಕ್ರಿಯವಾಗಿದ್ದರೆ ವ್ಯಕ್ತಿ ಯಶಸ್ಸು ಗಳಿಸಲು ಸಾಧ್ಯ.
ವಯಸ್ಸಿಗೆ ಅನುಗುಣವಾಗಿ ಸ್ಮರಣಾಶಕ್ತಿ ವಿಭಿನ್ನವಾಗಿರುತ್ತದೆ. ಹಿರಿಯ ವಯಸ್ಕರಲ್ಲಿ ಸ್ಮರಣೆಯು ನಿಧಾನವಾಗಿ ಅವನತಿ ಹೊಂದುತ್ತಿರುತ್ತದೆ. ಆದರೆ ಯುವಪೀಳಿಗೆ ಮತ್ತು ವಯಸ್ಕರಲ್ಲಿ ಅದು ವ್ಯವಸ್ಥಿತವಾಗಿ ಇರಬೇಕಾದುದು ಅಪೇಕ್ಷಣೀಯ. ಮೆದುಳಿನಲ್ಲಿನ ನರಕೋಶಗಳ ಬಗೆಗಿನ ಅಧ್ಯಯನವನ್ನು ನ್ಯೂರೋಪ್ಲಾö್ಯಸ್ಟಿಸಿಟಿ ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಪ್ರತಿದಿನವೂ ಮೆದುಳಿನಲ್ಲಿರುವ ಸ್ಮರಣಾ ನರಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ಮೆಮೊರಿ ಸಾಮರ್ಥ್ಯ ಸ್ಥಿರವಾಗಿಲ್ಲವೆಂಬ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮೆಮೊರಿ ಸ್ಥಿರವಾಗಿಲ್ಲದೇ ಹೋದರೆ ಕಲಿಕೆಯು ಶಾಶ್ವತವಾಗಿ ಉಳಿಯುವುದಿಲ್ಲ. ಕಲಿಕೆ ಶಾಶ್ವತವಾಗದಿದ್ದರೆ ಅಗತ್ಯವಿದ್ದಾಗ ಅದನ್ನು ಬಳಸಲು ಆಗುವುದಿಲ್ಲ. ಹಾಗಾಗಿ ಸ್ಮರಣಾ ಸಾಮರ್ಥ್ಯ ಉತ್ತಮವಾಗಿರಬೇಕಾದುದು ಅನಿವಾರ್ಯ. ಮೆಮೊರಿ ಸಾಮರ್ಥ್ಯ ಉತ್ತಮ ಪಡಿಸಲು ಯಾವುದೇ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿಲ್ಲ. ಕೆಲವು ತಂತ್ರಗಳು ಮತ್ತು ಚಟುವಟಿಕೆಗಳನ್ನು ಅನುಸರಿಸುವ ಮೂಲಕ ಸ್ಮರಣೆಗೆ ಬಲ ತುಂಬಬಹುದು.  
ಅಂತಹ ಕೆಲವು ತಂತ್ರಗಳು ಹಾಗೂ ಚಟುವಟಿಕೆಗಳನ್ನು ಕೆಳಗೆ ನೀಡಲಾಗಿದೆ. ಇವುಗಳನ್ನು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅನುಸರಿಸಿದಾಗ ಮಾತ್ರ ಅವರ ಸ್ಮರಣೆ ಹೆಚ್ಚುತ್ತದೆ ಎಂಬುದು ಗಮನದಲ್ಲಿರಲಿ. 
ಸ್ಮರಣೆಯನ್ನು ಹೆಚ್ಚಿಸುವ ಕೆಲವು ತಂತ್ರಗಳು
ಹೊಸದನ್ನು ಕಲಿಯಿರಿ : ಮೆಮೊರಿ ಸಾಮರ್ಥ್ಯ ಕೇವಲ ಸ್ನಾಯುವಿನ ಶಕ್ತಿಯಾಗಿದೆ. ಅದನ್ನು ನೀವು ಹೆಚ್ಚು ಹೆಚ್ಚು ಬಳಸಿದಷ್ಟೂ ಅದು ಪ್ರಬಲವಾಗುತ್ತದೆ. ಮೆದುಳನ್ನು ಪ್ರಬಲವಾಗಿಸಲು ಅದಕ್ಕೆ ಸವಾಲುಗಳನ್ನು ಒಡ್ಡುವುದು ಅನಿವಾರ್ಯ. ಅದಕ್ಕಾಗಿ ಹೊಸ ಹೊಸ ಕಲಿಕೆಯನ್ನು ಮೂಡಿಸಿಕೊಳ್ಳಬೇಕು. ಹೊಸ ಕೌಶಲ್ಯವನ್ನು ಕಲಿಯುವುದರಿಂದ ಮೆಮೊರಿ ಸಾಮರ್ಥ್ಯ ಹೆಚ್ಚುತ್ತದೆ. ಅದಕ್ಕಾಗಿ ಹೊಸ ಸಂಗೀತ, ಭಾಷೆ, ಆಟ, ಕಲಿಯಿರಿ. ಚಿತ್ರಕಲೆ, ಕುಂಬಾರಿಕೆ, ಕಸೂತಿಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಸುಡೋಕು, ಚೆಸ್‌ನಂತಹ ಮಾನಸಿಕ ಆಟಗಳನ್ನು ಆಡಿ. ಹೊಸ ಶೈಲಿಯ ನೃತ್ಯ ಕಲಿಯಿರಿ. 
ಪುನರಾವರ್ತಿಸಿ ಮತ್ತು ಹಿಂಪಡೆಯಿರಿ : ನೀವು ಕಲಿತ ಹೊಸ ಮಾಹಿತಿಯ ತುಣುಕೊಂದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿರಿ. ಅಂದರೆ ಕಲಿಕೆಯನ್ನು ಪುನರಾವರ್ತಿಸಿದರೆ ಅದು ಮಾನಸಿಕವಾಗಿ ದಾಖಲಿಸಲ್ಪಡುತ್ತದೆ. ಕೇಳಿದ್ದನ್ನು ವಾಕ್ಯದ ರೂಪದಲ್ಲಿ ದಾಖಲಿಸಿ ಮತ್ತು ಅದನ್ನು ಪದೇ ಪದೇ ಗಟ್ಟಿಯಾಗಿ ಓದಿ. ನಂತರ ಪುನರಾವರ್ತನೆಯನ್ನು ಸರಳಗೊಳಿಸಿ. ಹೀಗೆ ಗಳಿಸಿಕೊಂಡ ಕಲಿಕೆಯನ್ನು ಆಗಾಗ ನೆನಪಿಸಿಕೊಂಡು ಬಳಸಿ. ಕಲಿಕೆಯನ್ನು ಒರೆಗೆ ಹಚ್ಚಿ. ಪುನರಾವರ್ತಿತ ಅಭ್ಯಾಸದಿಂದ ಅರ್ಥಪೂರ್ಣ ಕಲಿಕಾ ಅನುಭವ ಸೃಷ್ಟಿಯಾಗುತ್ತದೆ. 
ಸಂಕ್ಷೇಪಣಗಳನ್ನು ಬಳಸಿ : ಕಲಿಕೆ ಸರಳವಾಗಲು ಸಂಕೇತಿಕರಣ ಮತ್ತು ಸಂಕ್ಷೇಪಿಕರಣಗಳು ಅಗತ್ಯ. ಧೀರ್ಘವಾದ ಕಲಿಕೆಯನ್ನು ಹೀಗೆ ಸಂಕೇತಿಕರಣ/ ಸಂಕ್ಷೇಪಿಸುವುದರಿಂದ ಕಲಿಕೆ ಶಾಶ್ವತವಾಗುತ್ತದೆ. ಹಾಡುಗಳು/ಪ್ರಾಸಗಳ ರೂಪದಲ್ಲಿ ಕಲಿಕಾಂಶವನ್ನು ಸಂಕೇತಿಕರಿಸುವುದರಿಂದ ಜ್ಞಾಪಕ ಶಕ್ತಿ ವೃದ್ದಿಸುತ್ತದೆ. 
ಚಂಕ್ : ಹೊಸದಾಗಿ ಕಲಿತ ಮಾಹಿತಿಯನ್ನು ಗುಂಪುಗಳನ್ನಾಗಿ ವಿಂಗಡಿಸುವ ಪ್ರಕ್ರಿಯೆಯೇ ಚಂಕ್. ಉದಾಹರಣೆಗೆ ನಿಮ್ಮ ಆಧಾರ್ ಸಂಖ್ಯೆಯು 12 ಅಂಕಿಗಳನ್ನು ಒಳಗೊಂಡಿದೆ. ಇವುಗಳನ್ನು ಜ್ಞಾಪಕದಲ್ಲಿಡುವುದು ಕಷ್ಟ. ಆಧಾರ್‌ನ ಮುದ್ರಿತ ಪ್ರತಿಯಲ್ಲಿ ನೀಡಿದಂತೆ ನಾಲ್ಕಂಕಿಯ ಗುಂಪುಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ. ಹೀಗೆ ಪ್ರತೀ ಕಲಿಕೆಯನ್ನು ನಿರ್ದಿಷ್ಟ ಗುಂಪುಗಳನ್ನಾಗಿ ವಿಂಗಡಿಸಿದರೆ ನೆನೆಪಿಟ್ಟುಕೊಳ್ಳುವುದು ಸುಲಭವಾಗುತ್ತದೆ. 
ಇಂದ್ರಿಯಗಳನ್ನೂ ಬಳಸಿ : ಮೆಮೊರಿ ಉಳಿಸುವ ಮತ್ತೊಂದು ತಂತ್ರವೆAದರೆ ಇಂದ್ರಿಯಗಳ ಬಳಕೆ. ಮಾಹಿತಿಗಳನ್ನು ಬಣ್ಣ, ಅಭಿರುಚಿ ಮತ್ತು ವಾಸನೆಗಳ ಆಧಾರದ ಮೇಲೆ ಇಂದ್ರಿಯಗಳ ಸಹಾಯದಿಂದ ಸಂಗ್ರಹಿಸಿದರೆ ಬೇಗನೆ ಮರೆಯುವುದಿಲ್ಲ. ಆದ್ದರಿಂದ ಮಾಹಿತಿ ಸಂಗ್ರಹಣೆಗೆ ಇಂದ್ರಿಯಗಳನ್ನು ಬಳಸುವುದು ಒಂದು ತಂತ್ರಗಾರಿಕೆಯಾಗಿದೆ.
ಮಾನಸಿಕ ಸೋಮಾರಿತನ ಬೇಡ : ಇತ್ತೀಚಿನ ಆಧುನಿಕ ತಂತ್ರಜ್ಞಾನವು ನಮ್ಮನ್ನು ಮಾನಸಿಕ ಸೋಮಾರಿಗಳನ್ನಾಗಿಸುತ್ತದೆ. ಸಣ್ಣ ಸಣ್ಣ ಲೆಕ್ಕಾಚಾರಕ್ಕೂ ಕ್ಯಾಲ್ಕುಲೇಟರ್ ಮೊರೆಹೋಗುವುದು, ಚಿಕ್ಕ ಚಿಕ್ಕ ಪ್ರಶ್ನೆಗಳಿಗೆ ಉತ್ತರವನ್ನು ಗೂಗಲ್‌ನಲ್ಲಿ ಹುಡುಕುವುದು ಸಾಮಾನ್ಯವಾಗಿದೆ. ಪ್ರಶ್ನೆಗೆ ಉತ್ತರ ಅಥವಾ ಲೆಕ್ಕಾಚಾರಗಳಿಗೆ ಪರಿಹಾರವನ್ನು ಹಿಂದಿನ ಕಲಿಕೆಯ ಆಧಾರದ ಮೇಲೆ ಕಂಡುಕೊಳ್ಳಲು ಪ್ರಯತ್ನಿಸಬೇಕು. ಮೆದುಳಿನಲ್ಲಿ ಸಂಗ್ರಹವಾದ ಮಾಹಿತಿಯನ್ನು ಹಿಂಪಡೆಯಲು ಪ್ರಯತ್ನಿಸಬೇಕು. ಇದರಿಂದ ಮೆದುಳಿನ ನರವ್ಯೂಹದ ಹಾದಿಗಳನ್ನು ಬಲಪಡಿಸಲು ಸಹಾಯವಾಗುತ್ತದೆ.
ಜಿಪಿಎಸ್‌ಗೆ ಕಡಿವಾಣ ಹಾಕಿ : ಗೊತ್ತಿಲ್ಲದ ಪ್ರದೇಶದ ಹುಡುಕಾಟಕ್ಕಾಗಿ ಜಿಪಿಎಸ್ ಉತ್ತಮ ತಂತ್ರಜ್ಞಾನ. ಆದರೆ ಇದರ ಬಳಕೆಗೆ ಆದಷ್ಟೂ ಕಡಿವಾಣ ಹಾಕುವುದು ಉತ್ತಮ. ಜಿಪಿಎಸ್ ಬಳಕೆಯು ಮೆದುಳಿನ ಹಿಪ್ಪೋಕಾಂಪಸ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಹಿಪ್ಪೋಕಾಂಪಸ್ ತಾತ್ಕಾಲಿಕ ಮೆಮೊರಿ ಸಂಗ್ರಾಹಕವಾಗಿದ್ದು, ಇದು ತಾತ್ಕಾಲಿಕ ಮೆಮೊರಿಯನ್ನು ಧೀರ್ಘಕಾಲಿಕ ಮೆಮೊರಿಯನ್ನಾಗಿ ಪರಿವರ್ತಿಸುವ ಕಾರ್ಯ ಮಾಡುತ್ತದೆ. ಜಿಪಿಎಸ್‌ನಂತಹ ತಂತ್ರಜ್ಞಾನದ ಬಳಕೆಯು ತಾತ್ಕಾಲಿಕ ಮೆಮೊರಿಯನ್ನು ಹಾಳುಮಾಡುತ್ತವೆ. ಗೊತ್ತಿರದ ಪ್ರದೇಶಕ್ಕೆ ಮೊದಲ ಬಾರಿಗೆ ಹೋಗುವಾಗ ಜಿಪಿಎಸ್ ಬಳಸಿದರೆ ತಪ್ಪೇನಿಲ್ಲ. ವಾಪಾಸು ಬರುವಾಗಲೂ ಅಥವಾ ಪದೇ ಪದೇ ಅದೇ ಪ್ರದೇಶಕ್ಕೆ ಹೋದಾಗಲೂ ಅದರ ಬಳಕೆಗೆ ಕಡಿವಾಣ ಹಾಕಲೇಬೇಕು.
ಕಾರ್ಯನಿರತ ವೇಳಾಪಟ್ಟಿ ಇರಲಿ : ಸದಾ ಕಾರ್ಯನಿರತವಾಗಿರಲು ವೇಳಾಪಟ್ಟಿ ಅಗತ್ಯ. ಸಾಮಾನ್ಯವಾಗಿ ಓದಲು ಮಾತ್ರ ವೇಳಾಪಟ್ಟಿ ತಯಾರಿಸುವುದು ವಾಡಿಕೆ. ಇದರ ಬದಲಾಗಿ ಇಡೀ ದಿನದ ವೇಳಾಪಟ್ಟಿ ತಯಾರಿಸಿ ಅದರಂತೆ ಕಾರ್ಯನಿರವಾಗಿರಲು ಪ್ರಯತ್ನಿಸಿ. ಬಿಡುವಿಲ್ಲದ ವೇಳಾಪಟ್ಟಿ ಉತ್ತಮ ಜ್ಞಾನವನ್ನು ಕಾಪಾಡುತ್ತದೆ ಎಂಬ ಅಂಶ ಅಧ್ಯಯನಗಳಿಂದ ಸಾಬೀತಾಗಿದೆ. 
ವ್ಯವಸ್ಥಿತವಾಗಿರಲಿ : ಕಲಿಕೆಗೆ ಸಂಬಂಧಿಸಿದ ನಿಮ್ಮ ಮಾಹಿತಿಗಳು ವ್ಯವಸ್ಥಿತವಾಗಿರಲಿ. ವಿವಿಧ ಮೂಲಗಳ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳುವುದು ನೆನಪಿನ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಕಲಿಕೆಯ ಪರಿಶೀಲನಾ ಪಟ್ಟಿಗಳನ್ನು ತಯಾರಿಸಿಕೊಳ್ಳಿ.
ನಿಯಮಿತ ವೇಳೆಯಲ್ಲಿ ನಿದ್ದೆ ಮಾಡಿ : ಪ್ರತಿರಾತ್ರಿಯೂ ನಿಯಮಿತ ವೇಳೆಗೆ ಮಲಗಿ, ಬೆಳಿಗ್ಗೆ ನಿಯಮಿತ ವೇಳೆಗೆ ಏಳಲು ಪ್ರಯತ್ನಿಸಿ. ವಾರಾಂತ್ಯಕ್ಕೆ ಬೇಕಿದ್ದರೆ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬಹುದು. ಮಲಗುವ ಮುನ್ನ ಸೆಲ್‌ಫೋನ್, ಟಿ.ವಿ, ಕಂಪ್ಯೂಟರ್ ಅಥವಾ ಇನ್ಯಾವುದೇ ಪ್ರಕಾಶಮಾನವಾದ ಸ್ಕಿನ್ ನೋಡುವುದನ್ನು ನಿಲ್ಲಿಸಿ. ಸ್ಕಿನ್‌ನಿಂದ ಹೊರಬರುವ ನೀಲಿ ಬೆಳಕು ನಿದ್ರೆಯ ಹಾರ್ಮೊನನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸ್ಮರಣ ಶಕ್ತಿ ಹೆಚ್ಚಳಕ್ಕೆ ನಿಗದಿತ ನಿದ್ರೆ ಮತ್ತು ವಿಶ್ರಾಂತಿ ಅಗತ್ಯ. 
ಆರೋಗ್ಯ ಮತ್ತು ಆಹಾರ : ಉತ್ತಮ ಆರೋಗ್ಯಕ್ಕಾಗಿ ಸಾಧ್ಯವಾದಷ್ಟೂ ಸಸ್ಯ ಆಧಾರಿತ ಆಹಾರಗಳನ್ನು ಬಳಸಿ. ವಿಶೇಷವಾಗಿ ಸೊಪ್ಪು , ತರಕಾರಿಗಳು, ಹಣ್ಣುಗಳು, ಧಾನ್ಯಗಳು, ತೆಂಗಿನೆಣ್ಣೆ, ಮೀನಿನ ಎಣ್ಣೆ(ಓಮೇಗಾ-3) ಬಳಸಿ. ಸಕ್ಕರೆ, ಸಂಸ್ಕರಿಸಿದ ಹಾಗೂ ಪ್ಯಾಕೆಟ್ ಆಹಾರ ಪದಾರ್ಥಗಳು, ಕೆಂಪು ಮಾಂಸ, ಕರಿದ ಆಹಾರಗಳು, ಇವುಗಳನ್ನು ಆದಷ್ಟೂ ದೂರವಿಡಿ. ಕೊಬ್ಬು ಮತ್ತು ಸಕ್ಕರೆಯ ಅಂಶಗಳು ಹಿಪ್ಪೊಕಾಂಪಸ್‌ನ ಸ್ಮರಣೆಯನ್ನು ದುರ್ಬಲಗೊಳಸುತ್ತವೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ದೈಹಿಕ ವ್ಯಾಯಾಮ : ಮೆಮೊರಿ ಸಂಗ್ರಹಕ್ಕೆ ದೈಹಿಕ ವ್ಯಾಯಾಮ ಅತ್ಯಂತ ಅಗತ್ಯವಾಗಿದೆ. ವ್ಯಾಮಾವು ದೇಹಕ್ಕೆ ಅಗತ್ಯವಾದ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಪೂರೈಸುವುದಲ್ಲದೇ ಹಿಪ್ಪೊಕಾಂಪಸ್‌ನ ಜೀವಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಶ್ರಮದಾಯಕವಲ್ಲದ ಕೆಲ ಲಘು ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಮೆಮೊರಿಯನ್ನು ಹೆಚ್ಚಿಸಬಹುದು.
ಸಾಮಾಜಿಕ ಜೀವನವೂ ಇರಲಿ : ಮಾನವ ಮೂಲತಃ ಸಂಘ ಜೀವಿ. ಮೆಮೊರಿ ಸಂಗ್ರಹಕ್ಕೆ ದೈಹಿಕ ಬೆಂಬಲದ ಅಗತ್ಯವಿರುವಂತೆ ಭಾವನಾತ್ಮಕ ಬೆಂಬಲದ ಅಗತ್ಯವೂ ಇದೆ. ಅದಕ್ಕಾಗಿ ಸುತ್ತಲಿನ ಜನರೊಂದಿಗೆ ಒಂದಷ್ಟು ವೇಳೆ ಕಾಲ ಕಳೆಯುವುದರಿಂದ ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲ ದೊರೆಯುತ್ತದೆ. 
ಪ್ರಕೃತಿ ಮತ್ತು ಧ್ಯಾನ : ಪ್ರಕೃತಿಯಲ್ಲಿ ಒಂದಿಷ್ಟು ವೇಳೆ ಕಳೆಯುವುದರಿಂದ ಮನಸ್ಸು ಆಹ್ಲಾದಗೊಳ್ಳುತ್ತದೆ. ಹಾಗೆಯೇ ಪ್ರಕೃತಿಯಲ್ಲಿ ಒಂದಿಷ್ಟು ವೇಳೆ ಧ್ಯಾನವೂ ಕೂಡಾ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಇವೆರಡೂ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಸ್ಮರಣಶಕ್ತಿ ವೃದ್ದಿಗೆ ಹೆಚ್ಚು ಸಹಾಯ ಮಾಡುತ್ತವೆ.
ಕೊನೆಸಾಲು : ಸ್ಮರಣೆ ಎಂಬುದೊಂದು ಕೌಶಲ್ಯ. ಸತತ ಅಭ್ಯಾಸದಿಂದ ಮಾತ್ರ ಅದನ್ನು ಸುಧಾರಿಸಬಹುದು. ಇಂದಿನ ಚಿಕ್ಕ ಪ್ರಯತ್ನ ನಾಳಿನ ಮಹಾನ್ ಸಾಧನೆ ಆಗುತ್ತದೆ. ನಿಮ್ಮಲ್ಲಿನ ಸಾಮಾನ್ಯ ಸ್ಮರಣಾ ಶಕ್ತಿಯನ್ನು ಉತ್ತಮಪಡಿಸಿಕೊಳ್ಳಲು ನೀವೇ ಪ್ರಯತ್ನಿಸಬೇಕೆ ಹೊರತು ಇತರರು ಅಲ್ಲ.
ಆರ್.ಬಿ.ಗುರುಬಸವರಾಜ

No comments:

Post a Comment