June 5, 2020

ಲೇಡಿ ಟಾರ್ಜನ್ ಜಮುನಾ /Lady Targen Jamuna

ದಿನಾಂಕ 07-01-2019ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ.

ಲೇಡಿ ಟಾರ್ಜನ್ ಜಮುನಾ


ಯಾರು ತಮ್ಮ ತೋಳ್ಬಲದಿಂದ ಹೋರಾಡಿ ಎದುರಾಳಿಯನ್ನು ಮಣ್ಣು ಮುಕ್ಕಿಸುತ್ತಾರೋ, ಯಾರು ಗಟ್ಟಿಯಾದ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುತ್ತಾರೋ, ಅವರೇ ನಿಜವಾದ ನಾಯಕರು. ಯಾರೂ ನಾಯಕರಾಗಿ ಹುಟ್ಟುವುದಿಲ್ಲ. ಬದಲಾಗಿ ಸಾಮಾಜಿಕ ಹೊಣೆಗಾರಿಕೆಗಳನ್ನು ನಿಭಾಯಿಸುವ ಮೂಲಕ ನಾವೇ ನಾಯಕರಾಗಬೇಕು ಎಂಬ ಮಾತನ್ನು ಜಮುನಾ ಅವರು ಸಾಧಿಸಿ ತೋರಿಸಿದ್ದಾರೆ. ಯಾರು ಈ ಜಮುನಾ ? ಅವರು ಮಾಡಿದ ಸಾಧನೆ ಏನು? ಎಂಬ ಪ್ರಶ್ನೆಗಳಿಗೆ ಉತ್ತರವೇ ಈ ಬರಹ.
ಈಕೆಯ ಪೂರ್ಣ ಹೆಸರು ಜಮುನಾ ತುಡು. ಒಡಿಸ್ಸಾದಲ್ಲಿ ಜನಿಸಿದ ಜಮುನಾ ಈಗ ಜಾರ್ಖಂಡ್ ರಾಜ್ಯದ ಪೂರ್ವ ಸಿಂಗ್ಭಾಮ್ ಜಿಲ್ಲೆಯ ಮುತುರ್ಖಮ್ ಗ್ರಾಮದ ನಿವಾಸಿ. 35ರ ಹರೆಯದ ಜಮುನಾ, ತನ್ನ ಗ್ರಾಮದ ಸುತ್ತಲೂ ಇರುವ 50 ಹೆಕ್ಟೇರ್ ಅರಣ್ಯವನ್ನು ಸಂರಕ್ಷಣೆ ಮಾಡುವ ಮೂಲಕ ‘ಲೇಡಿ ಟಾರ್ಜನ್’ ಎಂದೇ ಹೆಸರುವಾಸಿಯಾಗಿದ್ದಾಳೆ. ಕಳೆದ 18 ವರ್ಷಗಳಿಂದ ಅರಣ್ಯ ಮಾಫಿಯಾದ ಗ್ಯಾಂಗ್‌ಗೆ ಟಾರ್ಜನ್ ರೂಪದಲ್ಲಿ ಸಿಂಹಸ್ವಪ್ನವಾಗಿದ್ದಾಳೆ. 
ಪ್ರಕೃತಿಯೇ ದೇವರೆಂದು ಭಾವಿಸಿದ್ದ ಗೌರವಯುತ ಕುಟುಂಬದಲ್ಲಿ 1998ರಲ್ಲಿ ಜಮುನಾ ವಿವಾಹವಾದಳು. ಸಹಜವಾಗಿ ಪ್ರೀತಿ ವಿಶ್ವಾಸಗಳಿಂದ ಜೀವನ ಸಾಗಿತ್ತು. ಪ್ರಾರಂಭದಲ್ಲಿ ತನ್ನ ಕುಟುಂಬದವರೊAದಿಗೆ ಗ್ರಾಮದ ಪಕ್ಕದಲ್ಲಿನ ಅರಣ್ಯಕ್ಕೆ ತೆರಳಿ ಉರುವಲಿಗಾಗಿ ಕಟ್ಟಿಗೆ ಸಂಗ್ರಹಿಸಿಕೊAಡು ಬರುತ್ತಿದ್ದಳು. ಹೀಗೆ ಸಂಗ್ರಹಿಸಲು ಹೋದಾಗ ಪ್ರತಿದಿನ ಮರಗಳನ್ನು ಕಡಿದು ನಾಟಾಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದ ಬಗ್ಗೆ ವಿಷಯ ತಿಳಿಯಿತು. ಇದು ಅವಳಿಗೆ ಸರಿ ಎನಿಸಲಿಲ್ಲ. ಇಂತಹ ಅಗಾದ ಸಂಪತ್ತನ್ನು ಹೊಂದಿದ ಸುಂದರ ಕಾಡು ನಾಶವಾಗುತ್ತ ಹೋದರೆ ಮುಂದೊಂದು ದಿನ ಸಂಪೂರ್ಣವಾಗಿ ಇಲ್ಲದಂತಾಗುತ್ತದೆ ಎಂಬ ಕಳವಳ ಮೂಡಿತು. ಇದಕ್ಕೆ ಏನಾದರೂ ಉಪಾಯ ಹೂಡಲೇಬೇಕು ಎಂದುಕೊAಡಳು. ಆಗ ಮನಸ್ಸಿನಲ್ಲಿ ಮೂಡಿದ ಕನಸನ್ನು ಸಾಕಾರಗೊಳಿಸಲು ಸನ್ನಧಳಾದಳು.
ಹೋರಾಟದ ಮೊದಲ ಹೆಜ್ಜೆ
ಮಹಿಳೆಯರ ಸಹಕಾರದಿಂದ ಕಾಡನ್ನು ಸಂರಕ್ಷಿಸುವ ಯೋಜನೆ ರೂಪಿಸಿದಳು. ಅದಕ್ಕಾಗಿ ಗ್ರಾಮದ ಮಹಿಳೆಯರೊಂದಿಗೆ ಸಭೆ ನಡೆಸಿದಳು. ಪ್ರಾರಂಭದಲ್ಲಿ ಬಹಳ ಜನರು ಈ ಯೋಜನೆಯನ್ನು ತಿರಸ್ಕರಿಸಿದರು. ಯಾರಿಗೂ ಇಲ್ಲದ ಉಸಾಬರಿ ನಮಗ್ಯಾಕೆ ಎಂದರು. ಕುಟುಂಬದ ಸದಸ್ಯರೂ ಸಹ ಇದನ್ನು ನಿರಾಕರಿಸಿದರು. ಆದರೆ ಸಾಮಾಜಿಕ ಹೊಣೆಗಾರಿಕೆಯನ್ನು ಹೋರುವ ಬದ್ದತೆ ಜಮುನಾಳಲ್ಲಿ ಅಗಾಧವಾಗಿತ್ತು. ಮನದಲ್ಲಿ ಸಕಾರಾತ್ಮಕ ಯೋಚನೆಗಳು ತೇಲಾಡುತ್ತಿದ್ದವು. ಛಲಗಾತಿಯಾದ ಜಮುನಾ ಪುನಃ ಪುನಃ ಮಹಿಳೆಯರೊಂದಿಗೆ ಚರ್ಚೆ ಮಾಡಿ ಅವರನ್ನು ಹುರಿದುಂಬಿಸಿದಳು. ಇವಳ ಮಾತಿನ ಮೋಡಿಗೆ ಐದಾರು ಮಹಿಳೆಯರು ಕೈಜೋಡಿಸಿದರು. 
ಯೋಜನೆಯಂತೆ ಪ್ರತಿದಿನ ಕಾಡಿನ ಭಾಗವನ್ನು ಸುತ್ತಲು ನಿರ್ಧರಿಸಿದರು. ಬೀಸುಕೋಲು, ಬಿಲ್ಲು ಬಾಣ, ಹರಿತವಾದ ಆಯುಧಗಳು, ನೀರಿನ ಬಾಟಲ್ ಜೊತೆಗೆ ಕೆಲವು ನಾಯಿಗಳನ್ನು ಕರೆದುಕೊಂಡು ಕಾಡು ಸುತ್ತಲು ಹೊರಟರು. ಮರ ಕಡಿಯುವವರ ಬಳಿ ಸಾಗಿ ಮರ ಕಡಿಯುವುದು ತಪ್ಪೆಂದು ತಿಳುವಳಿಕೆ ಹೇಳುತ್ತಿದ್ದರು. ಕೇಳದಿದ್ದರೆ ಅವರೊಂದಿಗೆ ಮುಖಾಮುಖಿ ಹೋರಾಟಕ್ಕೆ ಇಳಿಯುತ್ತಿದ್ದರು. ಮಹಿಳೆಯರ ಸಂಘಟಿತ ಹೋರಾಟಕ್ಕೆ ಹೆದರಿದ ಮರಗಳ್ಳರು ಅಲ್ಲಿಂದ ಕಾಲುಕೀಳುತ್ತಿದ್ದರು. ಹೀಗೆ ಪ್ರತಿದಿನವೂ ಎರಡು ಮೂರು ಬಾರಿ ತಂಡದೊಂದಿಗೆ ಕಾಡು ಸುತ್ತುವುದು ಮುಂದುವರೆಯಿತು.
ಕಾಡಿನಿಂದ ಕಡಿದ ಮರಗಳನ್ನು ಜಾರ್ಖಂಡ್‌ನ ರೈಲುನಿಲ್ದಾಣದ ಮೂಲಕ ರಫ್ತು ಮಾಡುತ್ತಿದ್ದರು. ಇದನ್ನು ತಡೆಯುವಂತೆ ಜಮುನಾ ರೈಲು ಅಧಿಕಾರಿಗಳಿಗೆ ಪತ್ರ ಬರೆದಳು.. ಅವರಿಂದ ಯಾವುದೇ ಸಹಾಯ ಸಿಗಲಿಲ್ಲ. ಏಕೆಂದರೆ ಅವರೂ ಅದರಲ್ಲಿ ಶಾಮೀಲಾಗಿದ್ದರು. ದಿನೇ ದಿನೇ ಹೆಚ್ಚಿದ ಜಮುನಾಳ ಕಾಟದಿಂದ ಜಂಗಲ್ ಮಾಫಿಯಾ ತಂಡ ತತ್ತರಿಸಿತು. ಕೋಪಗೊಂಡ ಮಾಫಿಯಾ ತಂಡ ಜಮುನಾ ತಂಡಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸಿತು. ಯಾವ ಬೆದರಿಕೆಗೂ ಬಗ್ಗದ ಜಮುನಾ ಮತ್ತಷ್ಟು ಉತ್ಸಾಹ ಹಾಗೂ ಕೆಚ್ಚೆದೆಯಿಂದ ಸಮಸ್ಯೆಯನ್ನು ಎದುರಿಸಲು ಸಜ್ಜಾದಳು. 
ಮತ್ತಷ್ಟು ಬೆಂಬಲ
ಇವರ ಹೋರಾಟದ ಸ್ವರೂಪ ಗಮನಿಸಿದ ಹಳ್ಳಿಯ ಇನ್ನಿತರೇ ಮಹಿಳೆಯರು ಜಮುನಾ ತಂಡವನ್ನು ಸೇರಿಕೊಂಡರು. “ವನ ಸಂರಕ್ಷಣಾ ಸಮಿತಿ” ಹೆಸರಿನ ಸಂಘವೊAದು ಅಸ್ಥಿತ್ವಕ್ಕೆ ಬಂದಿತು. ಮೂರು ತಂಡಗಳನ್ನು ರಚಿಸಿಕೊಂಡರು. ದಿನಕ್ಕೆ ಮೂರು ಪಾಳೆಯಂತೆ ಅರಣ್ಯ ಸಂರಕ್ಷಣಾ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಾಡಿನ ಭ್ರಷ್ಠಾಚಾರದ ವಿರುದ್ದ ಧ್ವನಿ ಎತ್ತಿದರು. ಜಂಗಲ್ ಮಾಫಿಯಾ ತಂಡವನ್ನು ಅಲ್ಲಿಂದ ಓಡಿಸಿದರು. ಜೊತೆಗೆ ಈ ಮಾಫಿಯಾದಲ್ಲಿ ಶಾಮೀಲಾಗಿದ್ದ ಕೆಲ ಅರಣ್ಯ ಅಧಿಕಾರಿಗಳನ್ನು ಜೈಲಿಗೆ ಕಳಿಸಿದರು. 
ಮಾಫಿಯಾ ತಂಡ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿತು. ರಾತ್ರಿ ಕಾಡಿಗೆ ಬೆಂಕಿ ಹಚ್ಚಿ, ಮರಗಳನ್ನು ಕಡಿದು ಸಾಗಿಸಲು ಪ್ರಯತ್ನಿಸಿದರು. ಇದನ್ನರಿತ ಜಮುನಾ ರಾತ್ರಿ ವೇಳೆಯೂ ತಂಡದೊಂದಿಗೆ ಕಾಡು ಕಾಯುವ ಕೆಲಸಕ್ಕೆ ಮುಂದಾದಳು. ಮರಗಳ್ಳರು ಕಾಡಿನ ಯಾವುದೇ ಭಾಗದಲ್ಲಿದ್ದರೂ, ಅವರನ್ನು ಹಿಡಿದು ಪೋಲೀಸರಿಗೆ ಒಪ್ಪಿಸುವ ಜವಾಬ್ದಾರಿಯನ್ನು ಜಮುನಾ ಹೊತ್ತಳು. ಈಗ ಅವಳ ತಂಡದಲ್ಲಿ ಸುಮಾರು 300 ಜನ ಮಹಿಳೆಯರಿದ್ದಾರೆ. 30 ಜನರ ತಂಡದಂತೆ 10 ತಂಡಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಕೇವಲ ಕಾಡಿನ ಸಂರಕ್ಷಣೆ ಅಲ್ಲದೇ ಕಾಡಿನ ಮಹತ್ವ ಮತ್ತು ರಕ್ಷಣೆಯ ಕುರಿತು ಜನಾಂದೋಲನ ಪ್ರಾರಂಭಿಸಿದ್ದಾಳೆ. ಅಲ್ಲಲ್ಲಿ ಚಿಕ್ಕ ಸಭೆ ಸಮಾರಂಭಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾಳೆ. 
ಕೊರತೆಯೇ ಸಂಪನ್ಮೂಲ
ಇಷ್ಟೆಲ್ಲಾ ಖ್ಯಾತಿ ಗಳಿಸಿದ ಜಮುನಾಳಿಗೆ ಕೊರತೆ ಇಲ್ಲವೆಂದೇನಿಲ್ಲ. ತನ್ನ ಕೊರತೆಯನ್ನೇ ಸಂಪತ್ತನ್ನಾಗಿಸಿಕೊAಡಿದ್ದಾಳೆ. ಮುದುವೆಯಾಗಿ 20ವರ್ಷವಾದರೂ ಮಕ್ಕಳಿಲ್ಲ ಎಂಬುದೇ ಅವಳ ಕೊರತೆ. ಈ ಬಗ್ಗೆ ಅವಳೆಂದೂ ಕೊರಗಿಲ್ಲ. “ಈ ವಿಷಯದಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕನೇ ನನಗೆ ಸ್ಪೂರ್ತಿ” ಎನ್ನುತ್ತಾಳೆ. ಮಕ್ಕಳಿಲ್ಲದ ತಿಮ್ಮಕ್ಕ ಮರಗಳನ್ನು ಬೆಳೆಸಿ ಸಾಕಿದರು. ಅಂತೆಯೇ ಮರಗಳೇ ತನ್ನ ಸರ್ವಸ್ವ ಎಂದು ತಿಳಿದ ಜಮುನಾ ಅವುಗಳನ್ನು ತನ್ನ ಮಕ್ಕಳಂತೆ  ರಕ್ಷಿಸುವ ಜವಾಬ್ದಾರಿ ಹೊತ್ತಿದ್ದಾರೆ. 
ಈಗ ಹಳ್ಳಿಗೆ ಅವಳೇ ನಾಯಕಿ. ಇಡೀ ಹಳ್ಳಿಯ ಮಹಿಳೆಯರು ಇವಳ ಹಿಂಬಾಲಕರಾಗಿದ್ದಾರೆ. ಮರಗಳನ್ನು ತಮ್ಮ ಸಹೋದರರಂತೆ ಪ್ರೀತಿಸುತ್ತಾರೆ. ರಕ್ಷಬಂಧನದ ದಿನ ಎಲ್ಲಾ ಮಹಿಳೆಯರೂ ಕಾಡಿಗೆ ತೆರಳಿ, ಅಲ್ಲಿನ ಎಲ್ಲಾ ಮರಗಳಿಗೂ ರಾಖಿ ಕಟ್ಟುತ್ತಾರೆ. ಆ ಮೂಲಕ ಮರಗಳಿಗೆ ರಕ್ಷಣೆಯ ಭರವಸೆ ನೀಡುತ್ತಿದ್ದಾರೆ. ಗ್ರಾಮದಲ್ಲಿ ಹೆಣ್ಣು ಮಗು ಜನಿಸಿದರೆ 18 ಸಸಿಗಳನ್ನು ನೆಟ್ಟು ಸಂಭ್ರಮಿಸುತ್ತಾರೆ. ಹೆಣ್ಣು ಮಗಳ ಮದುವೆಯಾದರೆ 10 ಸಸಿಗಳನ್ನು ನೆಟ್ಟು ಬೆಳೆಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. 
ಅರಸಿ ಬಂದ ಪುರಸ್ಕಾರಗಳು
ಜಮುನಾಳ ಸಾಮಾಜಿಕ ಕಳಕಳಿಯ ಕಾರ್ಯ ಇಡೀ ದೇಶವೇ ಬೆರಗಾಗಿ ನೋಡುವಂತೆ ಮಾಡಿದೆ. ಅವಳ ಕಾರ್ಯವನ್ನು ಗಮನಿಸಿದ ಅನೇಕ ಸಂಘ ಸಂಸ್ಥೆಗಳು ಗೌರವ ಸನ್ಮಾನಗಳನ್ನು ನೀಡಿವೆ. ಅದರಲ್ಲಿ ಪ್ರಮುಖವಾಗಿ 2013 ರಲ್ಲಿ ಗಾಡ್‌ಫ್ರೇ ಫಿಲಿಪ್ಸ್ ಬ್ರೇವರಿ ಪುರಸ್ಕಾರ, 2014 ರಲ್ಲಿ ಸ್ತಿç ಶಕ್ತಿ ಪ್ರಶಸ್ತಿ, 2017 ರಲ್ಲಿ ನೀತಿ ಆಯೋಗದ ವುಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಪ್ರಶಸ್ತಿಗಳಿಗೆ ಭಾಜನಳಾಗಿದ್ದಾಳೆ. ಜಾರ್ಖಂಡ್‌ನ ಶಸ್ತçಸಜ್ಜಿತ ಪೋಲೀಸ್ ಇಲಾಖೆಯು ಜಮುನಾಳೊಂದಿಗೆ ಕಾಡಿನ ರಕ್ಷಣೆಯ ಕಾರ್ಯಕ್ಕೆ ಸಹಭಾಗಿತ್ವ ನೀಡಿದೆ. ಜೊತೆಗೆ ಅರಣ್ಯ ಇಲಾಖೆಯು ಅವಳ ಹಳ್ಳಿಗೆ ಶುದ್ದ ಕುಡಿಯುವ ನೀರು ಮತ್ತು ಸುಸಜ್ಜಿತ ಶಾಲಾ ಸೌಲಭ್ಯವನ್ನು ಒದಗಿಸಿದೆ. 
ಜಮುನಾಳ ಕಥೆಯು ಕೇವಲ ಮನೋರಂಜನಾತ್ಮಕ ಸಿನೆಮಾ ಅಲ್ಲ. ಅದೊಂದು ಯಶೋಗಾಥೆ. ಅಲ್ಲಿ ಸಾಕಷ್ಟು ನೋವು ಇದೆ. ಆದರೂ ಸಮುದಾಯದ ಸಹಭಾಗಿತ್ವದೊಂದಿಗೆ ಸಮಾಜ್ಜೋದ್ದಾರದ ಸಾಕಾರತೆ ಇದೆ. ಮಹಿಳಾ ಸಬಲೀಕರಣವು ಎಂತಹ ಸಾಹಸವನ್ನೂ ಕೂಡಾ ಮಾಡಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ಹೆಣ್ಣೆಂದರೆ ಮೂಗು ಮುರಿಯುವ ಇಂತಹ ಕಾಲದಲ್ಲಿ ಪ್ರತಿ ಮನೆಯ ಹೆಣ್ಣೂ ಸಹ ಜಮುನಾಳಂತೆ ಸಾಮಾಜಿಕ ಬದಲಾವಣೆಯಲ್ಲಿ ಪಾಲ್ಗೊಂಡರೆ ದೇಶದ ಅಭಿವೃದ್ದಿ ಸುಲಭವಲ್ಲವೇ?
ಆರ್.ಬಿ.ಗುರುಬಸವರಾಜ

No comments:

Post a Comment