January 1, 2014

ಸರ್ಕಾರಿ ಶಾಲೆಗಳು ಶ್ರೀಮಂತವಾಗಲಿ

ಸರ್ಕಾರಿ ಶಾಲೆಗಳು ಶ್ರೀಮಂತವಾಗಲಿ
ಮಕ್ಕಳಿಗೆ ಶಿಕ್ಷಣ ಕೊಡುವ ಮತ್ತು ಕೊಡಿಸುವ ಮಾತು ಬಂದಾಗಲೆಲ್ಲ ಎಲ್ಲರ ಚಿತ್ತ ಹೊರಳುವುದು ಖಾಸಗೀ ಶಾಲೆಗಳತ್ತ. ಅಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆಂದೇನೂ ಅಲ್ಲ. ಆದರೆ ಮಕ್ಕಳಿಗೆ ವೈಯಕ್ತಿಕ ಗಮನ ನೀಡುವಲ್ಲಿ ಸರ್ಕಾರಿ ಶಾಲೆಗಳು ಹಿಂದೆ ಬೀಳುತ್ತಿವೆ. ಕಾರಣವೇನೆಂದರೆ ಸರ್ಕಾರಿ ಶಾಲಾ ಶಿಕ್ಷಕರನ್ನು ಶಿಕ್ಷಕರನ್ನಾಗಿ ಬಿಡುತ್ತಿಲ್ಲ. ನಾನಾ ರೀತಿಯ ಜವಾಬ್ದಾರಿಗಳನ್ನು ಅವರ ಹೆಗಲಿಗೇರಿಸಿ ಅವರನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡಲಾಗುತ್ತಿದೆ. ಖಾಸಗೀ ಶಾಲಾ ಶಿಕ್ಷಕರಿಗಿಂತ ಸರ್ಕಾರಿ ಶಾಲಾ ಶಿಕ್ಷಕರು ವಿದ್ಯಾರ್ಹತೆಯಲ್ಲಿ, ಅನುಭವದಲ್ಲಿ ಉತ್ತಮವಾಗಿದ್ದರೂ ಮಾನಸಿಕವಾಗಿ ಅವರನ್ನು ಕೆಲವು ಗೊಂದಲಗಳು ಕಾಡುತ್ತಿವೆ. ಆದ್ಯತೆ ಯಾವುದಕ್ಕೆ ಕೊಡಬೇಕು ಎಂಬ ತೊಳಲಾಟದಲ್ಲಿದ್ದಾರೆ. ಬರುವ ಎಲ್ಲಾ ಯೋಜನೆಗಳೂ ಸರ್ಕಾರಿ ಶಾಲಾ ಶಿಕ್ಷಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡುತ್ತಿವೆ. ಇದರಿಂದಾಗಿ ಶಿಕ್ಷಕರಲ್ಲಿ ಆತ್ಮಸ್ಥೈರ್ಯ ಕಡಿಮೆಯಾಗುತ್ತಿದೆ. ಇತರೆ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ ದೊರೆತಲ್ಲಿ ಸರ್ಕಾರಿ ಶಾಲೆಗಳೂ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುವಂತಾಗುತ್ತದೆ. 
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಶಾಲಾ ವ್ಯಾಸಂಗ ದೃಢೀಕರಣವನ್ನೇ ಆಧಾರವಾಗಿ ಬಳಸಲಾಗುತ್ತಿದೆ. ಶಾಲೆಯಲ್ಲಿ ಓದಿದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ದೃಢೀಕರಣ ಪತ್ರಕ್ಕಾಗಿ ಶಾಲೆಗಳಿಗೆ ಬರುತ್ತಾರೆ. ಬೇಗನೇ ಸಂಬಂಧಿಸಿದ ಪ್ರಮಾಣ ಪತ್ರ ಪಡೆದುಕೊಂಡು ಹೋಗುವುದೇ ಅವರ ಆಧ್ಯತೆ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ತರಗತಿಯಲ್ಲಿದ್ದರೂ ಸಹ ದುಂಬಾಲು ಬಿದ್ದು ಅವರಿಗೆ ಬೇಕಾದ ಪ್ರಮಾಣ ಪತ್ರ ಪಡೆಯುತ್ತಾರೆ. ಅವರಿಗೆ ಪ್ರಮಾಣ ಪತ್ರ ನೀಡಿ ತರಗತಿಗೆ ಬಂದು ನಿಲ್ಲುವ ವೇಳೆಗೆ ಶಿಕ್ಷಕರಲ್ಲಿ ಮೊದಲಿನ ಉತ್ಸಾಹ ಇರುವುದಿಲ್ಲ. ಇದು ಕೇವಲ ಉದಾಹರಣೆ ಮಾತ್ರ. ಸರ್ಕಾರಿ ಶಾಲೆಗಳಲ್ಲಿ ಇಂತಹ ಅನೇಕ ಆಕಸ್ಮಿಕ ನಿಲುಗಡೆಗಳು ಶಿಕ್ಷಕರ ಚಿತ್ತ ಚಾಂಚಲ್ಯಕ್ಕೆ ಕಾರಣವಾಗುತ್ತವೆ. ಶಿಕ್ಷಕರ ಮೇಲಿನ ಇಂತಹ  ಎಲ್ಲಾ ಹೊಣೆಗಾರಿಗಳನ್ನು ಅವರ ಹೆಗಲಿನಿಂದ ಇಳಿಸಿದಾಗ ಮಾತ್ರ ಸರ್ಕಾರಿ ಶಾಲೆಗಳು ಶ್ರೀಮಂತವಾಲು ಮತ್ತು ಖಾಸಗೀ ಶಾಲೆಗಳ ವಿರುದ್ದ ಸಡ್ಡು ಹೊಡೆಯಲು ಸಾಧ್ಯ.
- ಆರ್.ಬಿ.ಗುರುಬಸವರಾಜ.


No comments:

Post a Comment