January 1, 2014

ತಂಬಾಕು ಮುಕ್ತ ಗ್ರಾಮ

ತಂಬಾಕು ಮುಕ್ತ ಗ್ರಾಮ
                                      
ಪ್ರತಿದಿನ ಕಾಲೇಜಿನಿಂದ ಸಂಜೆ ಮನೆಗೆ ಬರುತ್ತಿದ್ದ ಅರುಣ ಇಂದು ಬೇಗನೇ ಬಂದಳು. ಬಂದವಳು ಕಟ್ಟೆಯ ಮೇಲೆಯೇ ಕುಳಿತು ಏನನ್ನೋ ಯೋಚಿಸತೊಡಗಿದಳು. ಇದನ್ನು ಗಮನಿಸಿದ ತಂದೆ ಕಾಳಪ್ಪ “ಮೈಯಲ್ಲಿ ಹುಷಾರಿಲ್ಲವೇನಮ್ಮ” ಎಂದು ಕೇಳಿದರು. ಯೋಚನಾ ಮಗ್ನಳಾಗಿದ್ದ ಅರುಣ ತಂದೆಯ ತಂದೆಯ ಪ್ರಶ್ನೆಗೆ ಯಾವುದೇ ಉತ್ತರ ಕೊಡಲಿಲ್ಲ. ತಂದೆ ಮುಟ್ಟಿ ಮಾತನಾಡಿಸಿದಾಗ ಎಚ್ಚೆತ್ತುಕೊಂಡ ಅರುಣ ಕಣ್ಣೀರು ಸುರಿಸತೊಡಗಿದಳು. ಧೀಡೀರನೇ ಮಗಳ ಕಣ್ಣಲ್ಲಿ ನೀರು ಬಂದದ್ದಕ್ಕೆ ತಂದೆಗೆ ಆಶ್ಚರ್ಯವಾಯಿತು. ಮಗಳನ್ನು ಒಳಗೆ ಕರೆದುಕೊಂಡು ಹೋಗಿ ಪರಿಪರಿಯಾಗಿ ಪ್ರಶ್ನಿಸಿದರು. ಆಗ ಅರುಣ ತನ್ನ ಸ್ನೇಹಿತ ಉಮೇಶ ಆಸ್ಪತ್ರೆ ಸೇರಿದ ಬಗ್ಗೆ ಹಾಗೂ ಅದರಿಂದ ಅವನಿಗಾದ ತೊಂದರೆ ಬಗ್ಗೆ ಹೇಳುತ್ತಾ ಕಣ್ಣೀರು ಸುರಿಸಿದಳು.
ತಕ್ಷಣ ಕಾಳಪ್ಪ ಉಮೇಶನನ್ನು ನೋಡಲು ಆಸ್ಪತ್ರೆಗೆ ಹೋದರು. ಜೊತೆಗೆ ತನ್ನ ಗೆಳೆಯರನ್ನೂ ಕರೆದುಕೊಂಡು ಹೋದರು.
ಮಂಚದ ಮೇಲೆ ನಿರ್ವಿಕಾರವಾಗಿ ಮಲಗಿದ್ದ ಉಮೇಶನನ್ನು ನೋಡಿದ ಆ ಪಾಲಕರು ದಂಗಾದರು. ಇವನು ನಮ್ಮೆಲ್ಲರನ್ನು ನಗಿಸುತ್ತಿದ್ದ ಉಮೇಶನೇ ಎಂಬ ಸಂದೇಹ ಮೂಡಿತು. ಅವನನ್ನು ಮಾತನಾಡಿಸಿದರು. ಆದರೆ ಉಮೇಶನಿಗೆ ಮಾತನಾಡಲಾಗಲಿಲ್ಲ. ಕೇವಲ ಕೈಸನ್ನೆ ಮಾಡಿದ. ಇವನಿಗಾದ ತೊಂದರೆಯೇನು ಎಂದು ಯೋಚಿಸುತ್ತಿರುವಾಗ ವೈದ್ಯರು ಕೊಠಡಿಗೆ ಬಂದರು.
“ಡಾಕ್ಟ್ರೆ ನಮ್ಮ ಉಮೇಶನಿಗೆ ಏನಾಗಿದೆ?” ಎಂದರು ಕಾಳಪ್ಪ.
“ಈ ಹುಡುಗನಿಗೆ ಬಾಯಿಯ ಕ್ಯಾನ್ಸರ್ ಆಗಿದೆ” ಎಂದರು ವೈದ್ಯರು.
“ಏನು! ಕ್ಯಾನ್ಸರೇ...? ಈ ಹುಡುಗನಿಗೆ ಏಕೆ ಬಂತು?” ಎಂದರು ಕಾಳಪ್ಪ.
“ಈ ಹುಡುಗ ಗುಟ್ಕಾ ತಿನ್ತಾ ಇದ್ದನಂತೆ. ಅದ್ಕೆ ಬಾಯಿಯ ಕ್ಯಾನ್ಸರ್ ಬಂದಿದೆ” ಎಂದರು ವೈದ್ಯರು. 
“ಇದಕ್ಕೆ ಪರಿಹಾರ ಇಲ್ಲವೇ ಡಾಕ್ಟ್ರೇ...?” ಎಂದರು ಅವರಲ್ಲೊಬ್ಬ. 
“ಕ್ಯಾನ್ಸರ್‍ಗೆ ಶಾಶ್ವತ ಪರಿಹಾರ ಇಲ್ಲ. ಈಗ ತಾತ್ಕಾಲಿಕ ಚಿಕಿತ್ಸೆ ನೀಡುತ್ತಿದ್ದೇವೆ. ಇದು ಬರಲಾರದಂತೆ ನೋಡಿಕೊಳ್ಳುವುದೇ ಶಾಶ್ವತ ಪರಿಹಾರ” ಎಂದರು ವೈದ್ಯರು.
ಉಮೇಶನಿಗೆ ಒದಗಿದ ಪರಿಸ್ತಿತಿ ಕಂಡು ಮರುಗುತ್ತಾ ಮನೆಗೆ ಹಿಂದಿರುಗಿದರು. ಅಂದು ಸಂಜೆ ಊರ ಚಾವಡಿ ಹತ್ತಿರ ‘ಬೀದಿ ನಾಟಕ’ ನಡೆಯುವುದಾಗಿ ಡಂಗುರ ಹಾಕುತ್ತಿದ್ದರು.
ಸಂಜೆಯಾಗುತ್ತಿದ್ದಂತೆ ಊರಿನ ಜನರೆಲ್ಲ ಚಾವಡಿ ಹತ್ತಿರ ಸೇರತೊಡಗಿದರು. ನಾಟಕ ತಂಡದವರು ಬಂದವರನ್ನೆಲ್ಲಾ ಸ್ವಾಗತಿಸಿ ಕೂಡಿಸುತ್ತಿದ್ದರು. ಕತ್ತಲಾಗುತ್ತಿದ್ದಂತೆ ನಾಟಕ ಪ್ರಾರಂಭವಾಯಿತು. 
ನಾಟಕ : ಒಂದಾಗಿ ಮುಂದಾಗಿ ತಂಬಾಕು ಬಿಟ್ಹಾಕಿ
(ಕಥಾ ನಿರೂಪಕ ಎಲ್ಲರಿಗೂ ವಂದಿಸುತ್ತಾ ರಂಗದ ಮಧ್ಯ ಬರುತ್ತಾನೆ)
ನಿರೂಪಕ; ಆತ್ಮೀಯ ಬಂಧುಗಳೇ, ಇಂದು ನಮ್ಮ ನಡುವೆ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ನಮಗೆ ಗೊತ್ತಿಲ್ಲದೇ ನಾವೇ ಸೃಷ್ಟಿಸಿಕೊಂಡ ಸಮಸ್ಯೆಯೊಳಗೆ ಒದ್ದಡುತ್ತಿದ್ದೇವೆ. ಅವುಗಳಿಂದ ಹೇಗೆ ಹೊರಬರಬೇಕೆಂಬುದು ತಿಳಿಯದೇ ತೊಳಲಾಡುತ್ತಿದ್ದೇವೆ. ಅಂತಹ ಸಮಸ್ಯೆಗಳಲ್ಲಿ ಇಂದು ಅತ್ಯಂತ ವ್ಯಾಪಕವಾಗಿ ಬೆಳೆಯುತ್ತಿರುವ ಸಮಸ್ಯೆ ಎಂದರೆ ತಂಬಾಕು ಚಟ. ಇದು ನಮಗೆ ಹೇಗೆ ಅಂಟಿಕೊಂಡಿತು? ಇದರ ಪರಿಣಾಮಗಳೇನು? ಇದರಿಂದ ಹೊರಬರುವುದು ಹೇಗೆ? ಎಂಬುದನ್ನು ‘ಒಂದಾಗಿ ಮುಂದಾಗಿ ತಂಬಾಕು ಬಿಟ್ಹಾಕಿ’ ಎಂಬ ನಾಟಕದ ಮೂಲಕ ತೋರಿಸಲು ಪ್ರಯತ್ನಿಸಿದ್ದೇವೆ. ನೋಡಿ, ನೀವೂ ಬದಲಾಗಿ, ಇತರರನ್ನು ಬದಲಾಯಿಸಿ.
ದೃಶ್ಯ – 1 (ಮನೆಯ ದೃಶ್ಯ)
[ಯಂಕಪ್ಪ (ನಡುವಸ್ಸಿನವನು) ರಂಗದ ಮಧ್ಯ ಬೀಡಿ ಸೇದುತ್ತಾ ಕುಳಿತ್ತಿದ್ದಾನೆ. ಹೆಂಡತಿ ಸಾಕಮ್ಮ ಒಂದು ಮೂಲೆಯಲ್ಲಿ ಕುಳಿತು ಒಲೆ ಊದುತ್ತಾ ಅನ್ನ ಬೇಯಿಸುತ್ತಿದ್ದಾಳೆ]
ಸಾಕಮ್ಮ: ಏಯ್ ಮಾರಾಯ! ಅದೇನು ಆಗಿಂದ ಬೀಡು ಸೇದುತ್ತಾ ಕುಂತಿದ್ದೀ, ಹೋಗಿ ಒಂದಿಷ್ಟು   ಒಣ ಕಟ್ಟಿಗೆನಾದ್ರೂ ತರಬಾರದೇ, ಬೇಗನೇ ಅಡಿಗೆ ಮಾಡಿಕೊಂಡು ಹೊಲಕ್ಕ  ಹೋಗಬೇಕು.
ಯಂಕಪ್ಪ: ನನ್ಗೆ ಬ್ಯಾರೆ ಕೆಲ್ಸ ಐತೆ. ಬೇಕಾದ್ರೆ ನೀನೇ ಹೋಗಿ ತಗಂಡು ಬಾ...
ಸಾಕಮ್ಮ: ನೀನು ಮಾಡಾದು ಅಷ್ಟ್ರಾಗ ಐತೆ. ಒಂದಿಷ್ಟು ಲಗೂನ ಹೋಗಿ ತಗಂಡು ಬಾ...
ಯಂಕಪ್ಪ: ನಿಂದೊಳ್ಳೆ ಕಾಟ ಆತಲ್ಲ, ಮಗಳು ನಿಂಗವ್ವನ ಕಳುಸು.
ಸಾಕಮ್ಮ: ಅವ್ಳು ಶಾಲಿಗೆ ಹೋಗ್ಯಾಳ.
ಯಂಕಪ್ಪ: ಶಿವು ಎಲ್ಲಗೆ ಹೋಗ್ಯಾನ?
ಸಾಕಮ್ಮ: ಎಲ್ಲೋ ಆಡಾಕ ಹೋಗಿರಬೇಕು. ಸಾಲಿಗೆ ಹೋಗು ಅಂದ್ರ ತಿರುಗಾಕ ಹೋಗ್ಯಾನ.
(ಇವರು ಮಾತನಾಡುತ್ತಿರುವಾಗ ಶಾಲೆ ಮಾಸ್ತರು ಬರುವರು)
ಮಾಸ್ತರ: ಯಂಕಪ್ಪ..... ಯಂಕಪ್ಪ.....
ಯಂಕಪ್ಪ: ಬರ್ರೀ,,,, ಮಾಸ್ತರ, ಯಾಕ ಇತ್ಲಾಗ ಬಂದ್ರಲ್ಲ.
ಮಾಸ್ತರ: ನಿಮ್ಮ ಶಿವು ಇವತ್ತು ಸಾಲಿಗೆ ಬಂದಿದಿಲ್ಲ. ಇವತ್ತು ಮಕ್ಕಳನ್ನು ನೋಡಾಕ ಡಾಕ್ಟ್ರು ಬರ್ತಾರ. ಅದಕ್ಕ ಆರಾಮ ಅದಾನೋ ಇಲ್ಲೋ ನೋಡಿ ಕರ್ಕೊಂಡು ಹೋಗೋಣಾಂತ ಬಂದೆ.
ಯಂಕಪ್ಪ: ಆರಾಮ ಅದಾನ್ರಿ. ಎಲ್ಲೋ ಆಡಾಕ ಹೋದಾನು ಮನಿಗೇ ಬಂದಿಲ್ಲ.
ಮಾಸ್ತರ: ಒಂದೀಟು ಎಲ್ಲಿ ಅದಾನ ನೋಡಿ ಕಳಿಸು ಬಾರಪ್ಪ
ಯಂಕಪ್ಪ: ನಮ್ಮ ತಮ್ಮನ ಮನಿ ಹತ್ರ ಇರಬೌದು. ನೊಡ್ಕೋಂಡು ಬರ್ತೀನಿ ತಡಿರಿ.
ಮಾಸ್ತರ: ನಾನು ಬರ್ತಿನಿ ನಡಿ ಹೋಗೋಣ.
(ಇಬ್ರೂ ಶಿವುನ್ನ ಹುಡುಕಿಕೊಂಡು ಹೋಗುವರು)
ದೃಶ್ಯ – 2 (ರಸ್ತೆ)
(ಬೀಡಿ ಅಂಗಡಿ ಪಕ್ಕದಲ್ಲಿ ಶಿವು ಗುಟ್ಕಾ ತಿನ್ನುತ್ತಾ ನಿಂತಿದ್ದಾನೆ. ತನ್ನ ತಂದೆ ಮತ್ತು ಮಾಸ್ತರರು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿದ ಶಿವು ಬಾಯಲ್ಲಿನ ಗುಟ್ಕಾವನ್ನು ಅವರಿಗೆ ಕಾಣದಂತೆ ಉಗುಳುವನು)
ಯಂಕಪ್ಪ: ಯಾಕಲೇ ಶಿವು ಸಾಲಿ ಬಿಟ್ಟು ಇಲ್ಲೇನ ಮಾಡಕತ್ತೀದಿ.
ಶಿವು: ಏನೂ ಇಲ್ಲಪ್ಪ. ಯಾಕೋ ಬೇಜಾರಾತು. ನಾಳೆ ಹೋಕಿನಿ.
ಮಾಸ್ತರ: ಶಿವು ನೀನು ಜಾಣ ಹುಡುಗ. ಆದ್ರೂ ಈ ರೀತಿ ಸುಮ್ಮಸುಮ್ನ ಸಾಲಿ ಬಿಟ್ಟು ತಿರುಗಾಡೋದು ಸರಿಯಲ್ಲ.
ಯಂಕಪ್ಪ: ಅದೇನಲೇ ಬಾಯಾಗಿರೋದು? ಏನಾ ತಿನ್ನಾಕ ಹತ್ತಿದಿ.
ಶಿವು: ಏನೂ ಇಲ್ಲ ಅಂತ ಹೇಳಿದ್ನಲ್ಲಪ್ಪ.
ಯಂಕಪ್ಪ: ಏನೋ ಉಗುಳಿದಂಗಾತು? ಬಾಯಿ ತೆಗಿ ನೋಡೋಣು.
(ಯಂಕಪ್ಪ ಶಿವುನ ಬಾಯಿ ತೆರೆಸಿ ನೋಡುತ್ತಾನೆ)
ಯಂಕಪ್ಪ: ಮೇಸ್ಟ್ರೇ ಇವ್ನು ಗುಟ್ಕಾ ತಿಂದಾನ್ರಿ,,,,,
ಮಾಸ್ತರ: ಏನಪ್ಪ ಶಿವು ನೀನೂ ಗುಟ್ಕಾ ತಿನ್ನಾಕ ಶುರು ಮಾಡಿದ್ಯಾ,,,?
ಶಿವು: ಇಲ್ರೀ,,,, ಸಾರ್, ಆ ಬೀರ ನನ್ಗೆ ಈ ಚಟ ಕಲಿಸ್ಯಾನ್ರಿ,,,,
(ಇದನ್ನು ಕೇಳಿದ ಯಂಕಪ್ಪನಿಗೆ ಸಿಟ್ಟು ಬಂದು ಶಿವುನ ಹೊಡಿಯಾಕ ಶುರು ಮಾಡಿದ. ಅಲ್ಲಿಗೆ ಇಬ್ಬರು ಪಾಲಕರು ಬರುವರು)
ಒಬ್ಬ: ಯಾಕೋ ಯಂಕಪ್ಪ, ಶಿವುನ ರಸ್ತ್ಯಾಗ ನಿಲ್ಲಿಸಿಕೊಂಡು ಹೊಡಿತೀದಿ. ಅಂತಾದು ಅವ್ನು ಏನು ಮಾಡ್ಯಾನ,,,?
ಯಂಕಪ್ಪ: ಬರೀ ಹೊಡಿಯಾದ ಅಲ್ಲ ಸಾಯ್ಸೇ ಬಿಡಬೇಕು ಇಂತಾರ್ನ. ಈ ವಯಸ್ಸಿಗೇ ಗುಟ್ಕಾ ತಿನ್ನಾದ ಕಲ್ತಾನ.
ಇನ್ನೊಬ್ಬ: ಇವ್ನೊಬ್ಬ ಅಲ್ಲಪ್ಪ. ನಮ್ಮ ಹುಡುಗನೂ ತಿನ್ತಾನ. ಅದ್ರಾಗ ಹೊಲದಾಗ ಕಣದಾಗ ಕಳವೀಲೆ ಸಿಗರೇಟು, ಬೀಡಿ ಸೇದ್ತಾನ. ಏನು ಹುಡುಗರೋ ಏನೋ ಎಲ್ಲಾ ಹಾಳಾಗಿ ಹೋಗಾಕ ಹತ್ಯಾರ.
ಮಾಸ್ತರ: ಇದಕ್ಕೆಲ್ಲ ನೀವ ಕಾರಣರಪ್ಪ. ನಿಮ್ಮ ಮಕ್ಕಳ ಮುಂದ ಕುತುಗೊಂಡು ಬೀಡಿ, ಸಿಗರೇಟು ಸೇದ್ತಿರೀ, ಗುಟ್ಕಾ ತಿಂತೀರಿ. ಅವ್ರಿಂದನ ಅಂಗಡಿಯಿಂದ ತರಿಸ್ತೀರಿ. ಹಿಂಗೆಲ್ಲ ಮಾಡೋದ್ರಿಂದ ಅವ್ರೂ ಕಲಿತಾರ. ಅದೂ ಅಲ್ಲದ ಟಿ.ವಿ, ಸಿನೆಮಾಗಳು ನಮ್ಮ ಮಕ್ಕಳು ಹಾಳಾಗಾಕ ಕಾರಣ ಆಗ್ಯಾವು. ಅದ್ರಲ್ಲಿ ಬರೋ ದೃಶ್ಯಗಳಲ್ಲಿ ಬೀಡಿ, ಸಿಗರೇಟು ಸೇದೋದು, ಗುಟ್ಕಾ ತಿನ್ನೋದು ನೋಡ್ತಾರ. ಅವ್ರೂ ಅದ್ನ ಮಾಡತಾರ. ಮತ್ತೆ ಕೆಲವರು ಸ್ನೇಹಿತರಿಂದ ಕಲಿತಾರ.
ಯಂಕಪ್ಪ: ಹೌದ್ರೀ,,, ಮಾಸ್ತರ, ನೀವು ಹೇಳೋದು ಖರೇ ಐತಿ. ನಮ್ಮ ಶಿವು ತನ್ನ ಗೆಳೆಯನಿಂದ ಕಲ್ತೀನಿ ಅಂತ ಹೇಳಿದ್ನಲ್ಲ.
ಮಾಸ್ತರ: ಸ್ನೇಹಿತರನ್ನು ಒಲಿಸಿಕೊಳ್ಳೋದಕ್ಕಾಗಿ, ಅವ್ರ ಒತ್ತಾಯಕ್ಕಾಗಿ ಅಥವಾ ಅನುಕರಣೆಯಿಂದ ಈ ಎಲ್ಲಾ ಚಟ ಕಲಿತಾರ.
ಒಬ್ಬ: ಮೇಷ್ಟ್ರೇ ಮೊನ್ನೆ ನಾ ಬೆಂಗಳೂರಿಗೆ ಹೋದಾಗ ಅಲ್ಲಿ ರಸೆ ಪಕ್ಕದಾಗ ದೊಡ್ಡದೊಡ್ಡ ಬೋರ್ಡಿನಾಗ ಬೀಡಿ, ಸಿಗರೇಟು ಸೇದುವ, ಗುಟ್ಕಾ ತಿನ್ನುವ ಬೋರ್ಡು ಹಾಕಿದ್ದನ್ನ ನೋಡ್ದೆ. ಈ ರೀತಿ ಹಾಕೋದ್ರಿಂದನೂ ಮಕ್ಕಳು ದೊಡ್ಡವರು ತಂಬಾಕು ಚಟಕ್ಕ ಬಲಿ ಆಗ್ತಾರ.
ಮಾಸ್ತರ: ಹೌದಪ್ಪ, ಬರೀ ಬೆಂಗಳೂರಿನಾಗ ಮಾತ್ರ ಅಲ್ಲ. ದೊಡ್ಡ ದೊಡ್ಡ ಹಳ್ಯಾಗ ಅಂಗಡಿ ಮುಂದ ಅಂತಹ ಬೋರ್ಡು ಹಾಕಿರತಾರ. ಅವು ನಮ್ಮನ್ನ, ನಮ್ಮ ಮಕ್ಕಳನ್ನ ತುಂಬಾ ದಾರಿ ತಪ್ಸಾಕ ಹತ್ಯಾವು. ಇದ್ನೆಲ್ಲ ಹೆಂಗ ತಡೀಬೇಕೋ ತಿಳೀವಲ್ದು.
ಯಂಕಪ್ಪ: ತಂಬಾಕು ಸೇವಿಸೋದ್ರಿಂದ ಏನೇನು ಆಗ್ತೈತಿ ಒಂದೀಟು ಹೇಳ್ರೀ ಮಾಸ್ತರ...
ಮಾಸ್ತರ: ಅದರ ಬಗ್ಗೆ ನನ್ಗೆ ಅಷ್ಟೊಂದು ತಿಳಿದಿಲ್ಲ. ಇವತ್ತು ಸಾಲ್ಯಾಗ ಮಕ್ಕಳ ಆರೋಗ್ಯ ತಪಾಸಣೆ ಮಾಡೋಕೆ ಡಾಕ್ಟ್ರು ಬರ್ತಾರ. ನೀವು ಅಲ್ಲಿಗೆ ಬಂದ್ರ ಅವ್ರನ್ನ ಕೇಳಿ ತಿಳ್ಕೋಬಹುದು. ನಿಮ್ಮ ಜೊತೆಗೆ ಇನ್ನೂ ಒಂದಿಷ್ಟು ಜನಾನ ಕರ್ಕೋಂಡು ಬರ್ರೀ,,,,. ನಾ ಈಗ ಸಾಲ್ಯಾಕ ಹೋಕೀನಿ.
( ಎಲ್ಲರೂ ಹೊರಡುವರು)
ದೃಶ್ಯ – 3 (ಶಾಲೆಯ ದೃಶ್ಯ)
(ಪಾಲಕರು, ಯುವಕರು, ಮಹಿಳೆಯರು ಒಬ್ಬೊಬ್ಬರಾಗಿ ಶಾಲೆಯ ಆವರಣದೊಳಗೆ ಬರುತ್ತಿದ್ದಾರೆ)
ಮಾಸ್ತರ: ಬರ್ರೀ,,, ಬರ್ರೀ,,, ಕುತ್ಕೊಳ್ಳಿ, ಆಗಲೇ ಡಾಕ್ಟ್ರು ಬಂದಾರ. ನಮ್ಮ ಸಾಲಿ ಹುಡುಗರನ್ನೂ ಕರ್ಕೊಂಡು ಬರ್ತೀವಿ. ನೀವೆಲ್ಲಾ ಇಲ್ಲೇ ಕುತ್ಕೋಳ್ಳಿ. ಈಗ ಬಂದೆ. 
(ಮಾಸ್ತರರು ಹುಡುಗರನ್ನು ಸಾಲಾಗಿ ಕರೆತರುವರು. ಎಲ್ಲರನ್ನೂ ವೃತ್ತಾಕಾರವಾಗಿ ಕುಳ್ಳಿರಿಸುವರು. ವೈದ್ಯರನ್ನು ಕರೆತಂದು ವೃತ್ತದ ಮದ್ಯದಲ್ಲಿ ನಿಲ್ಲಿಸುವರು. ವೈದ್ಯರು ತಮ್ಮ ಬಾಷಣ ಪ್ರಾರಂಭಿಸುವರು)
ಡಾಕ್ಟರು: ಆತ್ಮೀಯ ಪಾಲಕ ಪೋಷಕರೇ, ನೆಚ್ಚಿನ ಯುವಕರೇ, ಶಿಕ್ಷಕರೇ, ಮತ್ತು ಮುದ್ದು ಮಕ್ಕಳೇ, ಇಂದು ದೇಶವನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿ ಪಿಡುಗುಗಳಲ್ಲಿ ಅತೀ ದೊಡ್ಡ ಪಿಡುಗು ಎಂದರೆ ತಂಬಾಕು. ಇದು ಏಡ್ಸ್, ಡ್ರಗ್ಸ್, ಕುಡಿತ, ಆತ್ಮಹತ್ಯೆ ಮತ್ತು ಕೊಲೆಗಿಂತ ಹೆಚ್ಚು ಅಪಾಯಕಾರಿ. ಭಾರತದಲ್ಲಿ ಪ್ರತಿವರ್ಷ ತಂಬಾಕು ಕ್ಯಾನ್ಸರ್‍ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ ಎಂದು `ಭಾರತೀಯ ವೈದ್ಯ ಸಂಸ್ಥೆ’(ಂIಒS)ಹೇಳಿದೆ. ಇದರಲ್ಲಿ ಪುರುಷÀರ ಸಂಖ್ಯೆ ಅಧಿಕ. ಅದರಲ್ಲೂ ಧೂಮಪಾನಿಗಳ ಸಂಖ್ಯೆ ಇನ್ನೂ ಅಧಿಕ. ಶೇ.56 ರಷ್ಟು ಪುರುಷರು ಮತ್ತು ಶೇ.44 ರಷ್ಟು ಮಹಿಳೆಯರು ತಂಬಾಕು ಕ್ಯಾನ್ಸರ್‍ಗೆ ಬಲಿಯಾಗುತ್ತಿದ್ದಾರೆ. ಶೇ.82 ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕಾಯಿಲೆ, ಪುಪ್ಪುಸದ ಕ್ಯಾನ್ಸರ್‍ಗೆ ತಂಬಾಕು ಕಾರಣ ಎಂದು ಧೃಢಪಟ್ಟಿದೆ. ಅಲ್ಲದೇ ಕಳೆದ ದಶಕಕ್ಕಿಂತ ಈ ದಶಕದಲ್ಲಿ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ.
ಒಬ್ಬ: ಡಾಕ್ಟ್ರೇ, ಇತ್ತೀಚಿಗೆ ಯುವಕರೂ ಮಹಿಳೆಯರೂ ಈ ಚಟಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.
ಡಾಕ್ಟರು: ಹೌದಪ್ಪ, ಇತ್ತೀಚಿನ ವರ್ಷಗಳಲ್ಲಿ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳು ಮತ್ತು ಯುವಜನತೆ ಅಧಿಕ ಪ್ರಮಾಣದಲ್ಲಿ ಈ ಪಿಡುಗಿಗೆ ತುತ್ತಾಗುತ್ತಿರುವುದು ಅಘಾತಕಾರಿಯಾಗಿದೆ. ಒಂದು ಸಮೀಕ್ಷೆ ಪ್ರಕಾರ 12-14 ವಯೋಮಾನದ ಶೇ.21 ಬಾಲಕರು ಮತ್ತು ಶೇ.2 ಬಾಲಕಿಯರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ಅದು ತುಂಬಾ ಶೋಚನೀಯ ಸಂಗತಿಯಾಗಿದೆ.
ಒಬ್ಬ ಮಹಿಳೆ: ತಂಬಾಕು ತಿನ್ನೊದ್ರಿಂದ, ಬೀಡಿ ಸಿಗರೇಟು ಸೇದೋದ್ರಿಂದ ಏನೇನಾಗ್ತೈತಿ ಹೇಳ್ರೀ ಡಾಕ್ಟ್ರೇ,,,
ಡಾಕ್ಟರು: ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ತಂಬಾಕಿನಲ್ಲಿರುವ ‘ನಿಕೋಟಿನ್’ ಅತ್ಯಂತ ವಿಷಕಾರಿ ಎಂಬುದು ಸಾಬೀತಾಗಿದೆ. ಇಂತಹ ನಿಕೋಟಿನ್ ನಮ್ಮ ಬಾಯಿಗೆ ಪ್ರವೇಶಿಸಿದ 10 ಸೆಕೆಂಡುಗಳಲ್ಲಿ ಮೆದುಳಿಗೆ ಹೋಗಿ ‘ಡೊಪಾಮಿನ್’ ಎಂಬ ವಿಷವನ್ನು ಉತ್ಪಾದಿಸಿ ಮೆದುಳಿಗೆ ಬರುವ ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ. ಕ್ರಮೇಣವಾಗಿ ಇದು ಬಾಯಿಯ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್‍ಗೆ ತುತ್ತಾಗುವರು, ಅಲ್ಲದೇ ಅನ್ನನಾಳದ, ಹೊಟ್ಟೆಯ, ಮೂತ್ರಪಿಂಡದ, ಮೂತ್ರಕೋಶದ, ಮೇದೋಜೀರಕ ಗ್ರಂಥಿಯ, ಗರ್ಭಕೋಶದ ಕ್ಯಾನ್ಸರ್‍ಗೆ ಕಾರಣವಾಗಬಹುದು.
ಇನ್ನೋಬ್ಬ: ತಂಬಾಕು ಸೇವನೆಯಿಂದ ಇನ್ನೂ ಏನೇನು ತೊಂದರೆಗಳು ಆಗ್ತಾವೆ ಡಾಕ್ಟ್ರೆ,,,
ಡಾಕ್ಟರು: ತಂಬಾಕು ತಿನ್ನೋದ್ರಿಂದ ಬಾಯಿಯಲ್ಲಿನ ಲಾಲಾರಸದ ಉತ್ಪತ್ತಿ ಕಡಿಮೆಯಾಗುತ್ತದೆ. ಬಾಯಿಯಲ್ಲಿ ಉಷ್ಣಾಂಶ ಹೆಚ್ಚಿ ಜೀವಕೋಶಗಳು ನಾಶವಾಗುತ್ತವೆ. ತಂಬಾಕು ಹೃದಯ ಮತ್ತು ರಕ್ತನಾಳಗಳ ರೋಗಕ್ಕೆ ದಾರಿಮಾಡಿಕೊಡುತ್ತದೆ. ಹೃದಯಾಘಾತ, ಎದೆನೋವು. ಲಕ್ವ, ಕಾಲಿನ ಗ್ಯಾಂಗ್ರಿನ್ ಆಗಬಹುದು. ಧೂಮಪಾನಿಗಳಲ್ಲಿ ಕ್ಷಯ ಉಂಟಾಗುತ್ತದೆ. 
ಯಂಕಪ್ಪ: ತಂಬಾಕಿನಾಗ ಇನ್ನೂ ಏನೇನು ಇರತೈತಿ ಡಾಕ್ಟ್ರೇ,,,,?
ಡಾಕ್ಟರು: ತಂಬಾಕನ್ನು ಹದಗೊಳಿಸಲು ಮತ್ತು ಸ್ವಾದಿಷ್ಟಗೊಳಿಸಲು 4 ಸಾವಿರಕ್ಕಿಂತ ಹೆಚ್ಚಿನ ವಿಷಪೂರಿತ ರಸಾಯನಿಕಗಳನ್ನು ಬೆರೆಸುತ್ತಾರೆ. ಅಲ್ಲದೇ ಅದರಲ್ಲಿ ಕೊಲಿಡೀಸ್, ಅಮೋನಿಯಾ, ಪೈಯರಡೀನ್, ಕಾರ್ಬನ್ ಮೋನಾಕ್ಸೈಡ್ ಅರ್ಸೆನಿಕ್, ಸೈನೈಡ್, ಫಾರ್ಮಾಲೈಡ್‍ಗಳೆಂಬ ಪ್ರತ್ಯೇಕ ವಿಷಕಾರಿಗÀಳಿವೆ. ತಂಬಾಕು ಸೇವನೆಯಿಂದ ಇವು ನಮ್ಮ ದೇಹವನ್ನು ಸೇರುತ್ತವೆ. ತಂಬಾಕು ಸೇವನೆ ನಮಗೆ ಎರಡು ರೀತಿಯ ನಷ್ಟವನ್ನು ತರುತ್ತದೆ. 
ಇನ್ನೊಬ್ಬ: ಅದು ಹೇಗೆ ಡಾಕ್ಟ್ರೇ,,,,?
ಡಾಕ್ಟರು: ಮೊದಲನೆಯದಾಗಿ ವ್ಯಕ್ತಿಯ ಸ್ಥಾನಮಾನ ಗೌರವ ಕಡಿಮೆಯಾಗುತ್ತದೆ. ಎರಡನೆಯದಾಗಿ ಆರ್ಥಿಕ ನಷ್ಟವಾಗುತ್ತದೆ.
ಮತ್ತೊಬ್ಬ: ಆರ್ಥಿಕ ನಷ್ಟ ಹೆಂಗಾಕೈತಿ ಡಾಕ್ಟ್ರೆ,,,,?
ಡಾಕ್ಟರು: ಹೇಗೆಂದರೆ, ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ(ಬೀಡಿ/ಸಿಗರೇಟು/ಗುಟ್ಕಾ/ಪಾನ್ ಮಸಾಲ ಇತ್ಯಾದಿ) ದಿನವೊಂದಕ್ಕೆ 30-50 ರೂ. ಖರ್ಚು ಮಾಡುತ್ತನೆ ಎಂದುಕೊಂಡರೆ, ಒಂದು ವರ್ಷಕ್ಕೆ 18,000 ರೂ.ಗಳನ್ನು ಹಾಗೂ 10 ವರ್ಷಕ್ಕೆ 1,80,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇಷ್ಟೊಂದು ಮೊತ್ತದ ಹಣವನ್ನು ತಂಬಾಕು ಸೇವನೆಗಾಗಿ ಖರ್ಚು ಮಾಡುವ ವೇಳೆಗೆ ಅವನ ಆರೋಗ್ಯ ಹದಗೆಟ್ಟಿರುತ್ತದೆ. ಆರೋಗ್ಯ ಸುಧಾರಣೆಗಾಗಿ ಲಕ್ಷ ಲಕ್ಷಗಳೇ ಖರ್ಚಾಗಬಹುದು. ಹೀಗೆ ತಂಬಾಕು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತದೆ. 
ಇನ್ನೊಬ್ಬ ಮಹಿಳೆ: ತಂಬಾಕು ಚಟ ಬಿಡುವುದರಿಂದ ನಮಗಾಗುವ ಲಾಭಗಳೇನು?
ಡಾಕ್ಟರು: ತಂಬಾಕು ಚಟ ಬಿಡುವುದರಿಂದ 2 ರೀತಿಯ ಲಾಭಗಳಿವೆ. ಅವುಗಳೆಂದರೆ 1. ದೈಹಿಕ ಲಾಭಗಳು. ಅಂದರೆ ಕ್ಯಾನ್ಸರ್ ಮತ್ತು ಹೃದಯ ರೋಗದಿಂದ ಮುಕ್ತಿ ಸಿಗುತ್ತದೆ. ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ನಮ್ಮ ಪ್ರೀತಿ ಪಾತ್ರರು ಧೂಮಪಾನದ ಅಪಾಯದಿಂದ ಪಾರಾಗುವರು. ಬಾಯಿ ಮತ್ತು ಹಲ್ಲುಗಳು ಸ್ವಚ್ಚವಾಗಿ ಮತ್ತು ಆರೋಗ್ಯವಾಗಿ ಇರುತ್ತವೆ. 2. ಸಾಮಾಜಿಕ ಲಾಭಗಳು. ಅಂದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಗೌರವ ಹೆಚ್ಚುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಹಣದ ಉಳಿತಾಯದ ಜೊತೆಗೆ ಆರೋಗ್ಯ ಸುಧಾರಣೆ ಆಗುತ್ತದೆ  ಮತ್ತು ಇತರರಿಗೆ ಮಾದರಿಯಾಗುತ್ತದೆ.
ಮತ್ತೊಬ್ಬ ಮಹಿಳೆ: ತಂಬಾಕು ಚಟ ಹೇಗೆ ಬಿಡಬೇಕು ಮತ್ತು ಬಿಡಿಸಬೇಕು?
ಡಾಕ್ಟರು: ಬೀಡಿ,ಸಿಗರೇಟು, ಗುಟ್ಕಾ, ಜರ್ದಾಗಳು ಸುಲಭವಾಗಿ ಕೈಗೆ ಸಿಗುವಂತೆ ಇಡಬಾರದು. ಅಂದರೆ ದಿನನಿತು ಓಡಾಡುವ ಜಾಗದಲ್ಲಿ ಕಣ್ಣಿಗೆ ಕಾಣದಂತೆ ದೂರ ಇಡಬೇಕು. 
ಯಂಕಪ್ಪ: ಬೀಡಿ, ಸಿಗರೇಟು ಸೇದಬೇಕೆನಿಸಿದಾಗ ಪೆಪ್ಪರಮೆಂಟು ತಿನ್ನಬೇಕು ಅಂತ ಯಾರೋ ಹೇಳಿದ್ದರು. ಇದು ಸರಿಯೇ ಡಾಕ್ಟ್ರೇ,,,?
ಡಾಕ್ಟರು: ಹೌದು, ತಂಬಾಕು ಸೇವಿಸಬೇಕು  ಎನಿಸಿದಾಗಲೆಲ್ಲ ಚೂಯಿಂಗ್‍ಗಮ್ ಅಥವಾ ಪೆಪ್ಪರಮೆಂಟು ತಿನ್ನಬೇಕು, ನೀರು ಕುಡಿಯಬೇಕು. ದಿನಾಲೂ ವ್ಯಾಯಾಮ ಮಾಡಿ, ಧೀರ್ಘವಾಗಿ ಉಸಿರಾಟ ಮಾಡಿ ಅಥವಾ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಮಾಡಿ. 
ಒಬ್ಬ: ಇನ್ನೂ ಏನೇನು ಮಾಡಬಹುದು ಡಾಕ್ಟ್ರೇ,,,?
ಡಾಕ್ಟರು: ತಂಬಾಕು ಬಿಡಲು ದಿನ ನಿಗದಿಪಡಿಸಿಕೊಳ್ಳಿ. ಅದಕ್ಕೆ ಮಾನಸಿಕವಾಗಿ ಸಿದ್ದರಾಗಿರಿ. ನಿಮಗೆ ನೀವೇ ಬಹುಮಾನ ನೀಡಿಕೊಳ್ಳಿ. 
ಒಬ್ಬ ಮಹಿಳೆ: ಡಾಕ್ಟ್ರೇ, ಇತ್ತೀಚಿಗೆ ನಮ್ಮ ಮಕ್ಕಳು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದನ್ನು ನಾವು ಹೇಗೆ ತಪ್ಪಿಸಬಹುದು,,,?
ಡಾಕ್ಟರು: ಮನೆಯಲ್ಲಿ ಮಕ್ಕಳ ಕೈಗೆ ಬೀಡಿ, ಸಿಗರೇಟು, ಗುಟ್ಕಾ ಸಿಗುವಂತೆ ಇಡಬಾರದು. ಮಕ್ಕಳ ಖರ್ಚಿಗೆಂದು ಹಣ ಕೊಡುವಾಗ ಅವರು ಅದನ್ನು ತಂಬಾಕಿಗಾಗಿ ಬಳಸದಂತೆ ಎಚ್ಚರಿಕೆ ವಹಿಸಬೇಕು. ತಂಬಾಕು ಸೇವನೆಯಿಂದಾಗುವ ಅನಾಹುತಗಳನ್ನು ಅವರಿಗೆ ತಿಳಿಸಬೇಕು. 
ಇನ್ನೊಬ್ಬ: ಶಾಲಾ ಶಿಕ್ಷಣದಿಂದ ತಂಬಾಕು ಸೇವನೆ ಬಿಡಿಸಲು ಸಾಧ್ಯವಿಲ್ಲವೇ ಡಾಕ್ಟ್ರೇ,,,?
ಡಾಕ್ಟರು: ಇದೆ. ತಂಬಾಕು ಸೇವನೆ ಇಂದು ಸಮುದಾಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಬಲವಾದ ವಿರೋಧದ ಅಗತ್ಯವಿದೆ. ಅದನ್ನು ಶಿಕ್ಷಣದ ಮೂಲಕ ನೀಡಬಹುದು. ಮಕ್ಕಳು ಮತ್ತು ಯುವಜನತೆಯನ್ನು ತಂಬಾಕು ಮುಕ್ತರನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಶಾಲಾ ಶಿಕ್ಷಣದ ಮೂಲಕ ತಂಬಾಕು ಬಳಕೆಯನ್ನು ತಡೆಯಲು ಪ್ರಯತ್ನಿಸಬೇಕು. ಅಂದರೆ ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಪರಿಹಾರ ಮಾರ್ಗಗಳನ್ನು ಉನ್ನತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಪ್ರೋತ್ಸಾಹಿಸುವುದು. 
-ಶಾಲೆಗಳಲ್ಲಿ ಚರ್ಚೆ, ಸಂವಾದ, ಉಪನ್ಯಾಸ, ವಿಚಾರಗೋಷ್ಟಿ, ನಾಟಕ, ವೀಡಿಯೋ ಪ್ರದರ್ಶನಗಳಂತಹ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮಿಕೊಂಡು ಅವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ಬೆಂಬಲಿಸುವುದು. 
-ಮಕ್ಕಳು ಮತ್ತು ಯುವಜನತೆ ಸದಾಕಾಲ ಜ್ಞಾನಾಧಾರಿತ/ ಅಭಿವೃದ್ದಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು. 
-ವಿರಾಮ ವೇಳೆಯ ಸದುಪಯೋಗಕ್ಕಾಗಿ ಕ್ರೀಡೆಗಳು/ ಓದುವ ಹವ್ಯಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡುವುದು. 
-ಮಾಧ್ಯಮಗಳ ಮೂಲಕ ಅಂದರೆ ರೇಡಿಯೋ. ಟಿ.ವಿ, ಪತ್ರಿಕೆಗಳು ಮುಂತಾದವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ನೀಡುವುದು. ತಂಬಾಕನ್ನು 
-ತಿರಸ್ಕರಿಸುವ ಕೌಶಲಗಳನ್ನು ಅಭಿವೃದ್ದಿಪಡಿಸುವದು ಮತ್ತು ತರಬೇತಿ ನೀಡುವದು. 
-ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು. 
-ತಂಬಾಕು ಸೇವನೆ ಪ್ರಚೋದಿಸುವ ದೃಶ್ಯಗಳು ಮತ್ತು ಜಾಹೀರಾತುಗಳಿಗೆ ತಡೆಯೊಡ್ಡುವುದು. 
-ಕಾನೂನುಗಳಿಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ತಂಬಾಕು ಉತ್ಪನ್ನಗಳಿಗೆ ಕಡಿವಾಣ ಹಾಕುವುದು. ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ತಂಬಾಕನ್ನು ವಿರೋಧಿಸುವ ಶಿಕ್ಷಣ ನೀಡಬಹುದು.
ಇನ್ನೊಬ್ಬ ಮಹಿಳೆ : ಸಾಲಿ ಕಾಂಪೌಂಡ್ ಮೇಲೆ ಅದೇನೋ ತಂಬಾಕು ನಿಶೇಧ ಅಂತ ಬರದಾರಲ್ಲರೀ,,, ಅದ್ರಿಂದ ಏನು ಉಪಯೋಗ ?
ಡಾಕ್ಟರು: ಅಂದರೆ ಶಾಲೆಯ 100 ಮೀಟರ್ ಅಂತರದೊಳಗೆ ತಂಬಾಕು ಮಾರಾಟ ಮತ್ತು ಸೇವನೆ ನಿಷೇಧಿಸಿದೆ. ಅದನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ “ತಂಬಾಕು ನಿಷೇಧಿತ ಪ್ರದೇಶ” ಎಂದು ಬೋರ್ಡ ಹಾಕಲಾಗಿದೆ. ಒಂದು ವೇಳೇ ಹಾಗೇನಾದರೂ ಮಾರಾಟ ಅಥವಾ ಸೇವನೆ ಮಾಡಿದಲ್ಲಿ ಅಂತಹವರ ವಿರುದ್ದ ಕಾನೂನಿನ ಪ್ರಕಾರ ಶಿಕ್ಷೆ ಇದೆ. 
ಮಾಸ್ತರ: ಇದಕ್ಕೆ ಪಾಲಕರು ಏನು ಮಾಡಬಹುದು ಡಾಕ್ಟ್ರೆ ?
ಡಾಕ್ಟರು: ತಂಬಾಕು ವಿರೋಧಿ ಹೋರಾಟ ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಬೆಂಬಲ ಅಗತ್ಯ. ನೀವೆಲ್ಲ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ನಿಮ್ಮ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ. ಈಗ ನಾವೆಲ್ಲರೂ ತಂಬಾಕು ವಿರೋಧಿಸುವ ಪಣ ತೊಡೋಣ.
ಎಲ್ಲರೂ : ಆಗಲಿ ಇದಕ್ಕೆ ನಮ್ಮೆಲ್ಲರ ಬೆಂಬಲವಿದೆ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೋಣ.
ಮಾಸ್ತರ: ತಂಬಾಕು ವಿರೋಧಿ ಹೋರಾಟಕ್ಕೆ,,,,, 
ಎಲ್ಲರೂ : ಜಯವಾಗಲಿ.
ಮಾಸ್ತರ : ನಮ್ಮ ಗ್ರಾಮ,,,,
ಎಲ್ಲರೂ : ತಂಬಾಕು ಮುಕ್ತ ಗ್ರಾಮವಾಗಲಿ.
ಮಾಸ್ತರ : ನಮ್ಮನ್ನು ಯಮಲೋಕಕ್ಕೆ ಕಳಿಸುವ ತಂಬಾಕಿಗೆ,,,,,
ಎಲ್ಲರೂ : ದಿಕ್ಕಾರ ದಿಕ್ಕಾರ
(ಜೈಗೋಷ ಕೂಗುತ್ತಾ ಎಲ್ಲರೂ ತೆರಳುವರು. ಹಿನ್ನಲೆಯಲ್ಲಿ ತಂಬಾಕು ವಿರೋಧಿ ಹಾಡು ಕೇಳಿ ಬರುತ್ತದೆ. ಕಥಾ ನಿರೂಪಕ ವೇದಿಕೆಗೆ ಬರುತ್ತಾನೆ.)
ನಿರೂಪಕ : ಆತ್ಮೀಯ ಬಂಧುಗಳೇ ಇದುವರೆಗೂ ‘ಒಂದಾಗಿ ಮುಂದಾಗಿ ತಂಬಾಕು ಬಿಟ್ಹಾಕಿ’ ಎಂಬ ನಾಟಕ ನೋಡಿದಿರಿ. ತಂಬಾಕು ವಿರೋಧಿ ಹೋರಾಟ ಕೇವಲ ನಾಟಕಕ್ಕೆ ಸೀಮಿತವಾಗಬಾರದು. ಅದು ನಮ್ಮ ಬದುಕಿಗೆ ಸನಿಹವಾಗಬೇಕು. ಈ ನಾಟಕ ನೋಡಿದ ನೀವೆಲ್ಲಾ ಈ ಹೋರಾಟವನ್ನು ಬೆಂಬಲಿಸಬೇಕು. ಈ ಹೋರಾಟ ಬೆಂಬಲಿಸಲು  ನಿಮ್ಮ ಊರಿನ  ಶ್ರೀಮಠದ ಸ್ವಾಮಿಗಳು ಕಾತುರರಾಗಿದ್ದಾರೆ. ಅವರನ್ನು ಈ ವೇದಿಕೆಗೆ ಸ್ವಾಗತಿಸುತ್ತೇನೆ. 
 (ಇಬ್ಬರು ಸ್ವಾಮಿಗಳನ್ನು ವೇದಿಕೆಗೆ ಕರೆತರುವರು)
ಸ್ವಾಮೀಜಿ : ನನ್ನ ಪ್ರೀತಿಯ ಭಕ್ತಾದಿಗಳೇ, ಇದುವರೆಗೂ ನೀವೆಲ್ಲಾ ‘ಒಂದಾಗಿ ಮುಂದಾಗಿ ತಂಬಾಕು ಬಿಟ್ಹಾಕಿ’ ಎಂಬ ನಾಟಕದಿಂದ ತಂಬಾಕಿನಿಂದ ಆಗುವ ತೊಂದರೆಗಳ ಬಗ್ಗೆ ತಿಳಿದುಕೊಂಡಿರಿ. ಧರ್ಮಸ್ಥಳದಲ್ಲಿ ಜನರ ಸಹಕಾರದಿಂದ ತಂಬಾಕು ವಿರೋಧಿ ಹೋರಾಟ ಯಶಸ್ವಿಯಾಗಿದೆ. ಅಲ್ಲಿನ ಯಾವುದೇ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಇಲ್ಲ. ಅದರಂತೆ ಇನ್ನು ಮುಂದೆ ನಮ್ಮ ಗ್ರಾಮವನ್ನೂ ಸಹ ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ನಾವೆಲ್ಲ ಪಣ ತೊಡೋಣ.  ಅದಕ್ಕೆ ನಿಮ್ಮ ಸಹಾಯ ಸಹಕಾರದ ಅವಶ್ಯಕತೆ ಇದೆ. ನಾಳೆ ನಾವೆಲ್ಲರೂ ಸೇರಿ ಗ್ರಾಮದಲ್ಲಿ ಸಂಚರಿಸಿ, ಎಲ್ಲಾ ಅಂಗಡಿಗಳಿಗೂ ತೆರಳಿ ತಂಬಾಕು ಮಾರದಂತೆ ಅವರ ಮನವೊಲಿಸೋಣ. ಅದರಂತೆ ಮನೆಮನೆಗೆ ತೆರಳಿ ತಂಬಾಕು ಸೇವನೆ ಮಾಡದಂತೆ ವಿನಂತಿ ಮಾಡೋಣ. ಅದಕ್ಕೂ ಮೊದಲು ಇಲ್ಲಿರುವ ನೀವೆಲ್ಲಾ ನನ್ನ ಮುಂದೆ ಎದ್ದು ನಿಂತು ನಾನು ಹೇಳಿದಂತೆ ಪ್ರಮಾಣ ಮಾಡಬೇಕು. 
“ ಇನ್ನು ಮುಂದೆ ನಾವು ತಂಬಾಕು ಸೇವನೆ ಮಾಡುವುದಿಲ್ಲ. ನನ್ನ ನರೆಹೊರೆವರು, ಸ್ನೇಹಿತರು, ಬಂಧುಗಳು ಮತ್ತು ಇತರರು ತಂಬಾಕು ಸೇವನೆ ಬಿಡುವಂತೆ ಪ್ರಯತ್ನಿಸುತ್ತೇನೆ. ನಮ್ಮ ಗ್ರಾಮದ ಎಲ್ಲಾ ಅಂಗಡಿಗಳಲ್ಲೂ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಹೋರಾಟ ಮಾಡಿ ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಪ್ರಯತ್ನಿಸುತ್ತೇನೆ ಎಂದು ಇಲ್ಲಿರುವ ಗುರುಗಳು, ವೈದ್ಯರು, ಶಿಕ್ಷಕರು, ಮಕ್ಕಳು ಹಾಗೂ ಗ್ರಾಮದ ಎಲ್ಲರ ಸಮ್ಮುಖದಲ್ಲಿ ಪ್ರಮಾಣ ಮಾಡುತ್ತೇನೆ” 
ಪ್ರಮಾಣ ಮಾಡಿದ ನಿಮಗೆಲ್ಲರಿಗೂ ಶುಬಾಶೀರ್ವಾದಗಳು. ಈಗ ಪ್ರಮಾಣ ಮಾಡಿದ ನೀವೆಲ್ಲಾ ಇನ್ನೂ ಒಂದು ಕೆಲಸ ಮಾಡಬೇಕು. ಅದೇನೆಂದರೆ ಸ್ವಯಂ ಪ್ರೇರಣೆಯಿಂದ ನಿಮ್ಮಲ್ಲಿನ ಬೀಡಿ, ಸಿಗರೇಟು, ಗುಟ್ಕಾ, ಜರ್ದಾ ಇತ್ಯಾದಿಗಳನ್ನು ನನ್ನ ಜೋಳಿಗೆಗೆ ಹಾಕಿ ತಂಬಾಕು ವಿರೋಧಕ್ಕೆ ಬೆಂಬಲ ಸೂಚಿಸಿ.
ಸ್ವಾಮಿಗಳು ವಿನಂತಿ ಮಾಡಿಕೊಳ್ಳುತ್ತಿದ್ದಂತೆ ಎಲ್ಲರೂ ಸ್ವಾಮಿಗಳ ಜೋಳಿಗೆಗೆ ತಮ್ಮಲ್ಲಿನ ತಂಬಾಕು ಉತ್ಪನ್ನಗಳನ್ನು ಹಾಕಿದರು. ಮರುದಿನ ಗ್ರಾಮದ ಹಿರಿಯರೆಲ್ಲ ಸ್ವಾಮಿಗಳ ಸಮ್ಮೂಖದಲ್ಲಿ ಸೇರಿ ಎಲ್ಲಾ ಅಂಗಡಿಗಳಿಗೂ ತೆರಳಿ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಮನವಿ ಮಾಡಿಕೊಂಡರು. ಅದರಂತೆ ಮನೆಮನೆಗೆ ತೆರಳಿ ಜನರಿಗೂ ತಂಬಾಕು ಬಳಸದಂತೆ ಮನವರಿಕೆ ಮಾಡಿದರು. ಇದು ಒಂದು ರೀತಿಯ ಆಂದೋಲನದಂತೆ ಮುಂದುವರೆಯಿತು. ಆ ಗ್ರಾಮ ಸಂಪೂರ್ಣವಾಗಿ ತಂಬಾಕು ಮುಕ್ತ ಗ್ರಾಮವಾಯಿತು. ಈಗ ಗ್ರಾಮದ ಸರದಿ!
-ಆರ್.ಬಿ.ಗುರುಬಸವರಾಜ








No comments:

Post a Comment