January 1, 2014

ಅರಿವಿನ ಹಣತೆ

ಅರಿವಿನ ಹಣತೆ
ಆಡಿಬಾ........... ನನ ಕಂದ ಅಂಗಾಲ ತೊಳದೇನ
ಬಂಗಾರ ಗಿಂಡಿ ತಿಳಿನೀರ,/
ಬಂಗಾರ ಗಿಂಡಿ ತಿಳಿನೀರ ತಕ್ಕೊಂಡು ಬಂಗಾರದ ಮುಖವ ತೊಳದೇನ// ಎಂದು ಹಿಂದಿನ ಕಾಲದ ನಮ್ಮ ತಾಯಂದಿರು ಮಗುವನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ತೂಗುತ್ತಿದ್ದರು. ಅವಿಭಕ್ತ ಕುಟುಂಬಗಳು ಒಡೆದು ಚಿಕ್ಕ ಕುಟುಂಬಗಳು ತಲೆ ಎತ್ತಿದ ಇಂದಿನ ಕಾಲದಲ್ಲಿ ತೊಟ್ಟಿಲೂ ಇಲ್ಲ, ಜೋಗುಳವೂ ಇಲ್ಲ. ತೊಟ್ಟಿಲ ಜಾಗದಲ್ಲಿ ಸೀರೆ, ಜೋಗುಳದ ಜಾಗದಲ್ಲಿ ಮೊಬೈಲ್ ಬಂದಿದೆ. ಅಂದರೆ ನಮ್ಮ ಇಂದಿನ ತಾಯಂದಿರಿಗೆ ತೊಟ್ಟಿಲು ತೂಗಿ ಹಾಡಿ ಮಗುವನ್ನು ಮಲಗಿಸಲು ಪುರುಸೊತ್ತಿಲ್ಲ. ಒಂದೆಡೆ ಕೆಲಸದ ಒತ್ತಡ, ಇನ್ನೊಂದೆಡೆ ಮಾದ್ಯಮಗಳ ಃಆವಳಿ. ಇವೆರಡೂ ಸೇರಿ ನಲಿದಾಡಬೇಕಿದ್ದ ನಮ್ಮ ಹಸುಗೂಸುಗಳನ್ನು ಒತ್ತಡದಲ್ಲಿ ಬೆಳೆಸುತ್ತಿವೆ. ಇದರ ಪರಿಣಾಮವನ್ನು ನಾವೀಗಾಗಲೇ ಕಾಣುತ್ತಿದ್ದೇವೆ.
‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎನ್ನುವ ನಾಣ್ನುಡಿ ಇಂದು ಅರ್ಥಹೀನವಾಗಿದೆ. ಇಂದು ಬಹುತೇಕ ಮಕ್ಕಳ ಶಿಕ್ಷಣ ಪಾರಂಭವಾಗುವುದು ಬೇಬಿ ಸಿಟ್ಟಿಂಗ್‍ಗಳಲ್ಲಿ. ತಾಯಿಯ ಸ್ಥಾನದಲ್ಲಿ ಆಯಾ ಇದ್ದಾಳೆ. ತಾಯಿಯ ಪ್ರೀತಿ, ವಾತ್ಸಲ್ಯ, ಮಮಕಾರಗಳಿಂದ ವಂಚಿತವಾದ ಮಗು ಹೇಗೆ ತಾನೇ ಉತ್ತಮವಾಗಿ ಬೆಳೆದೀತು? 
ಮಕ್ಕಳು ಕೇಳಿದುದನ್ನು ಕೊಡಿಸುವುದು ಪಾಲಕರ ಕರ್ತವ್ಯ. ಇದನ್ನು ತಪ್ಪಾಗಿ ತಿಳಿದ ನಾವು ಅದರಿಂದಾಗುವ ಅನಾಹುತಗಳು ಅಥವಾ ತೊಂದರೆಗಳ ಬಗ್ಗೆ ಯೋಚಿಸುವುದೇ ಇಲ್ಲ. ಮಗು ಆಟ ಆಡಲು ಪಿಸ್ತೂಲ್ ಕೇಳುತ್ತದೆ. ಮಗುವಿನ ಮೇಲಿನ ಮಮಕಾರದಿಂದ ಮಗು ಕೇಳಿದೆ ಎಂಬ ಕಾರಣದಿಂದ ಅದನ್ನು ಕೊಡಿಸುತ್ತೇವೆ. ಮಗು ಕೈಯಲ್ಲಿ ಪಿಸ್ತೂಲ್ ಹಿಡಿದು ಎಲ್ಲರ ಕಡೆಗೂ ತೋರಿಸುತ್ತಾ ಡಿಶುಂ, ಡಿಶುಂ ಎಂದು ಓಡಾಡುವಾಗ ಅದನ್ನು ನೋಡಿ ಖುಷಿ ಪಡುತ್ತೇವೆ. ಅಂದರೆ ಮುಂದೊಂದು ದಿನ ಆ ಮಗು ನಿಜವಾದ ಪಿಸ್ತೂಲನ್ನು ಜೇಬಿನಲ್ಲಿಟ್ಟುಕೊಂಡು ಓಡಾಡೋಕೆ ನಾವು ಈಗಿಂದಲೇ ಪರವಾನಿಗೆ ನೀಡಿದಂತಾಗಲಿಲ್ಲವೇ? ಇದರಿಂದ ಮುಂದೆ ಆಗುವ ಅನಾಹುತಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಇತ್ತಿಚಿಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಶಾಲಾ ಮಕ್ಕಳ ಶೂಟೌಟ್ ಪ್ರಕರಣಗಳು ನಮ್ಮ ಗಮನಕ್ಕೆ ಬರುತ್ತಲೇ ನಮ್ಮ ಗಮನಕ್ಕೆ ಬರುತ್ತಲೇ ಇವೆ. ಇಲ್ಲಿ ಪಿಸ್ತೂಲ್ ಕೇವಲ ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಅನಾಹುತಕಾರಿ ಆಟಿಕೆಗಳನ್ನು ಮಕ್ಕಳಿಗೆ ಕೊಡಿಸಿ ಅನಾಹುತಗಳ ಸರಮಾಲೆಯನ್ನೇ ತಂದುಕೊಳ್ಳುತ್ತೇವೆ. ಆದ್ದರಿಂದ ಮಕ್ಕಳಿಗೆ ಆಟಿಕೆಗಳನ್ನು ಕೊಡಿಸುವಾಗ ಜಾಗ್ರತೆ ವಹಿಸುವುದು ಅನಿವಾರ್ಯ.
ಇತ್ತಿಚಿಗೆ ಟಿ.ವಿ ಮಾದ್ಯಮ ನಮ್ಮ ಮಕ್ಕಳನ್ನು ತೀರಾ ಹದಗೆಡಿಸಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಇತ್ತೀಚೆಗೆ ಆಪ್ತರ ಮನೆಯಲ್ಲಿ ನಡೆದ ಘಟನೆ ನನ್ನಲ್ಲಿ ಗಾಬರಿಯನ್ನುಂಟು ಮಾಡಿತು. ಎರಡನೇ ತರಗತಿಯಲ್ಲಿ ಓದುತ್ತಿರುವ ಆ ಮಗು ಇತರ ಮಕ್ಕಳೊಂದಿಗೆ ಆಟವಾಡುತ್ತಿರುವಾಗ ಯಾವುದೋ ಕಾರಣಕ್ಕೆ ಜಗಳ ಪ್ರಾರಂಭವಾಗಿ, ಆ ಮಗು ‘ನಿನ್ನ ಮುಖಕ್ಕೆ ಆಸಿಡ್ ಹಾಕುತ್ತೇನೆ ನೋಡು!’ ಎಂದು ಹೇಳಿತು. ಈ ಮಾತನ್ನು ಕೇಳಿದೊಡನೆ ನನ್ನ ಮುಖಕ್ಕೇ ಆಸಿಡ್ ಎರಚಿದಂತಾಯ್ತು. ಏಕೆಂದರೆ ಆ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಇಂತಹ ಅಘಾತಕಾರಿ ಪದದ ಬಳಕೆ ಹೇಗೆ ಬಂದಿತು ಎಂದು ಆಶ್ಚರ್ಯವಾಯಿತು. ಅನಂತರ ಆ ಮಗುವನ್ನು ವಿಚಾರಿಸಿದಾಗ ಟಿ.ವಿಯಲ್ಲಿ ನೋಡಿದ ಒಂದು ಸಿನೇಮಾ ಆ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಿರುವುದು ತಿಳಿಯಿತು. ಹಾಗೆಯೇ ಇನ್ನೆಂದೂ ಅಂತಹ ಅಘಾತಕಾರಿ ಮಾತುಗಳನ್ನು ಆಡದಂತೆ ತಿಳಿಹೇಳಿದೆ.
ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಅರಿವು/ ವಿವೇಚನಾಶಕ್ತಿ ಇರುವುದಿಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಮಕ್ಕಳಿಗೆ ತಿಳಿಹೇಳಬೇಕಾದ  ಜವಾಬ್ದಾರಿ ಪೋಷಕರ ಮೇಲಿದೆ. ಹಿಂದಿನ ಕಾಲದಲ್ಲಾದರೆ ಮನೆಯಲ್ಲಿ ಹಿರಿಯರೆನಿಸಿದ ಅಜ್ಜ-ಅಜ್ಜಿಯರು ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುತ್ತಿದ್ದರು. ಆ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದ್ದರು. ಆದರೆ ಈಗ ಟಿ.ವಿ ಎಂಬ ಭೂತಕ್ಕೆ ಅಂಟಿಕೊಂಡ ಮೇಲೆ ಕತೆ, ಮೌಲ್ಯಗಳೆಲ್ಲ ಮಾಯವಾಗಿವೆ.
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎಂಬ ಗಾದೆ ಮಾತು ಜನಜನಿತವಾಗಿದೆ. ಮಕ್ಕಳಾಗಿದ್ದಾಗ ಮಾನವೀಯ ಮೌಲ್ಯಗಳ ಪರಿಚಯ ಇಲ್ಲದ್ದರಿಂದ ಆಗುವ ಪರಿಣಾಮಗಳನ್ನು ನಾವೀಗಾಗಲೇ ಯುವಕರಲ್ಲಿ ಕಾಣುತ್ತಿದ್ದೇವೆ. ಇಂದಿನ ಯುವಕರಲ್ಲಿ ತಾಳ್ಮೆ, ಸಹನೆ, ಸಹಕಾರ, ಮಮಕಾರ, ಸಮಯಪ್ರಜ್ಞೆ, ಕಾಯಕನಿಷ್ಟೆ, ನ್ಯಾಯನಿಷ್ಟುರತೆ, ಕಾರ್ಯತತ್ಪರತೆ, ಪ್ರಮಾಣಿಕತೆ, ಪರಿಸರ ಪ್ರಜ್ಞೆ, ಗುರುಹಿರಿಯರಿಗೆ ಗೌರವ ಮುಂತಾದ ಮೌಲ್ಯಗಳು ಇಲ್ಲದಿರುವುದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಇದಕ್ಕೆಲ್ಲ ಕಾರಣಾರು ಎಂದು ಹುಡುಕಿ ಹೊರಟರೆ, ಆ ಹುಡುಕಾಟ ಕೊನೆಗೆ ತಲುಪುವುದು ಪೋಷಕರನ್ನೇ. ಅಂದರೆ ನಮ್ಮ ಮಕ್ಕಳನ್ನು ಬೆಳೆಸಬೇಕಾದ ರೀತಿ-ನೀತಿಗಳ ಬಗ್ಗೆ ನಾವಿನ್ನೂ ತಿಳಿದಿಲ್ಲ. ಅವರ ಆಶೋತ್ತರಗಳನ್ನು ಈಡೇರಿಸುವಲ್ಲಿ ನಾವು ಎಡವಿದ್ದೇವೆ ಎಂಬುದಂತೂ ಸ್ಪಷ್ಟ. 
ಇಂದು ಮಕ್ಕಳ ಹಕ್ಕುಗಳು ಜಾರಿಯಲ್ಲಿವೆ. ಅವುಗಳನ್ನು ಅನುಭವಿಸಲು ಬೇಕಾದ ಸೂಕ್ತ ವಾತಾವರಣ ನಿರ್ಮಿಸಬೇಕಾಗಿದೆ. ಇಂದು ಇಡೀ ವಿಶ್ವವೇ ಭಾರತೀಯ ಮಕ್ಕಳ ಬಗ್ಗೆ ಭಯಬೀತವಾಗಿದೆ. ಅಂದರೆ ಭಾರತೀಯ ಮಕ್ಕಳ ಜಾಣ್ಮೆ, ಕೌಶಲ್ಯ ಅವರನ್ನು ದಂಗು ಬಡಿಸಿದೆ. ಇದು ಹೀಗೆಯೇ ಇತರರನ್ನು ಚಕಿತಗೊಳಿಸುವ ನಿಟ್ಟಿನಲ್ಲಿ ಮುಂದುವರೆಯಬೇಕಾದರೆ ನಾವು ನಮ್ಮ ಮಕ್ಕಳ ಹಕ್ಕುಗಳನ್ವಯ ಸೂಕ್ತ ಮಾರ್ಗದರ್ಶನ ನೀಡುತ್ತಾ ಉತ್ತಮರಲ್ಲಿ ಉತ್ತಮರನ್ನಾಗಿ ಬೆಳೆಸೋಣ. ‘ಅರಿವಿನ ಹಣತೆ’ಯನ್ನು ಹಚ್ಚುತ್ತಾ ‘ಇಂದಿನ ಮಕ್ಕಳೇ ಇಂದಿನ ಪ್ರಜೆಗಳು’ ಎಂಬುದನ್ನು ಖಾತ್ರಿ ಪಡಿಸೋಣ.
ಆರ್.ಬಿ.ಗುರುಬಸವರಾಜ. 

No comments:

Post a Comment