ದಿನಾಂಕ 02-04-2016 ರ ಸಂಯುಕ್ತ ಕರ್ನಾಟಕದ ಕಿಂದರಿ ಜೋಗಿಯಲ್ಲಿ ಪ್ರಕಟವಾದ ನನ್ನ ಕಿರುಬರಹ.
ಆಧುನಿಕ ಕಂಪ್ಯೂಟರ್‍ನ ಪೂರ್ವಜರು
ಅದೊಂದು ಅಸಾಮಾನ್ಯ ಗೊಂಬೆ. ಪಿಳಪಿಳನೇ ಕಣ್ಣ ರೆಪ್ಪೆ ಬಡಿಯುತ್ತಾ ನೀವು ಹೇಳಿದ ಶಬ್ದವನ್ನು ಆಲಿಸಿ ಕೈಯಲ್ಲಿನ ಗರಿಯನ್ನು ಮಸಿಯಲ್ಲಿ ಅದ್ದಿ, ತನ್ನ ಮುಂದಿನ ಕಾಗದದಲ್ಲಿ ಪದಗಳನ್ನು ಬರೆಯುತ್ತದೆ. ಅದರ ಪಕ್ಕದಲ್ಲಿ ಇನ್ನೊಂದು ಚಿತ್ರ ಬಿಡಿಸುವ ಗೊಂಬೆ. ಅವೆರಡರ ಮಧ್ಯೆ ಮತ್ತೊಂದು ಸಂಗೀತವಾದ್ಯ ನುಡಿಸುವ ಗೊಂಬೆ. ಈ ಸ್ವಯಂಚಾಲಿತ ಗೊಂಬೆಗಳನ್ನು ನೋಡುತ್ತಾ ನಿಂತರೆ ನಿಮ್ಮನ್ನೇ ನೀವು ಮರೆತುಬಿಡುತ್ತೀರಿ. ಆಧುನಿಕ ಕಂಪ್ಯೂಟರ್ ಯುಗದಲ್ಲಿ ಇದೆಲ್ಲವೂ ತೀರಾ ಮಾಮೂಲು ಎನಿಸುತ್ತದೆ ಅಲ್ಲವೇ? ಈ ಗೊಂಬೆಗಳು ಆಧುನಿಕ ಗೊಂಬೆಗಳಲ್ಲ. ಇವು ತಯಾರಾಗಿ ಇಂದಿಗೆ 250 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯವಾಗುತ್ತದೆ. ಆದರೆ ಇಂದಿಗೂ ಈ ಗೊಂಬೆಗಳು ಸುಸ್ಥಿತಿಯಲ್ಲಿವೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಇನ್ನೂ ಆಶ್ಚರ್ಯದ ಸಂಗತಿ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನಾ ಕ್ಷೇತ್ರಗಳಲ್ಲಿ ಈ ಯಂತ್ರಗಳನ್ನು ಆಧುನಿಕ ಕಂಪ್ಯೂಟರ್‍ನ ಪೂರ್ವಜರು ಎಂದೇ ಭಾವಿಸಲಾಗಿದೆ.
ಎಲ್ಲಿವೆ ಈ ಗೊಂಬೆಗಳು : ಪ್ರಸ್ತುತ ಸ್ವಿಟ್ಜರ್‍ಲ್ಯಾಂಡ್ ನ್ಯೂಚಾಟಲ್‍ನ ಇತಿಹಾಸ ಮತ್ತು ಪುರಾತತ್ವ ಸಂಸ್ಥೆಯ ವಸ್ತು ಸಂಗ್ರಹಾಲಯದಲ್ಲಿವೆ. ಈ ಯಂತ್ರ ಮಾನವರ ನಿರ್ಮಾತೃ ಸ್ವಿಟ್ಜರ್‍ಲ್ಯಾಂಡಿನ ಪಿಯರೆ ಜಾಕ್ವೆಟ್ ಡ್ರೋಜರ್. ವಿಶ್ವಪ್ರಸಿದ್ದ ಸ್ವಿಸ್ ಗಡಿಯಾರ ತಯಾರಕರಾದ ಡ್ರೋಜ್‍ರವರಿಗೆ ಸಮಯದ ಯಂತ್ರಗಳೊಂದಿಗೆ ಆಟವಾಡುವ ಕಲೆ ಸಿದ್ದಿಸಿತ್ತು. ಅವರ ಅಪಾರ ಅನುಭವ ಮತ್ತು ಉತ್ತಮ ಕಾರ್ಯವೈಖರಿಯ ಫಲವಾಗಿ ಈ ಮೂರು ಯಂತ್ರ ಮಾನವರನ್ನು ಸೃಷ್ಟಿ ಮಾಡಿದರು. 1906ರಲ್ಲಿ ನ್ಯೂಚಾಟಲ್‍ನ ಇತಿಹಾಸ ಮತ್ತು ಪುರಾತತ್ವ ಸಂಸ್ಥೆ 75 ಸಾವಿರ ಗೋಲ್ಡ್ ಪ್ರಾಂಕ್ಸ್‍ಗಳಿಗೆ ಈ ಯಂತ್ರಗಳನ್ನು ಖರೀದಿಸಿದ್ದಾರೆ.
1767 ರಿಂದ 1774 ರ ಅವಧಿಯಲ್ಲಿ ರಚಿತವಾದ ಈ ಸಂಕೀರ್ಣ ಗೊಂಬೆಗಳು ಇಂದಿನ ಆಂಡ್ರಾಯ್ಡ್ ಸಾಧನಗಳನ್ನು ಹೋಲುತ್ತಿವೆ. ಇಲ್ಲಿ ಮೂರು ಗೊಂಬೆಗಳಿದ್ದು, ಅವುಗಳಲ್ಲಿ ಒಂದಕ್ಕೆ ರೈಟರ್, ಇನ್ನೊಂದಕ್ಕೆ ಡ್ರಾಫ್ಟ್‍ಮ್ಯಾನ್, ಮತ್ತೊಂದಕ್ಕೆ ಲೇಡಿ ಮ್ಯೂಜಿಸಿಯನ್ ಎಂದು ಹೆಸರಿಸಲಾಗಿದೆ.
ರೈಟರ್ : ರೈಟರ್ 1772 ರಲ್ಲಿ ಪೂರ್ಣಗೊಂಡಿದ್ದು 15ನೇ ಲೂಯಿಯ ಶೈಲಿಯಲ್ಲಿದೆ. 6000 ಬಿಡಿಭಾಗಗಳಿಂದ ನಿರ್ಮಾಣವಾದ ಈ ಗೊಂಬೆಯ ಕೈಯಲ್ಲಿ ಲೇಖನಿ ಇದೆ. ನೀವು ಹೇಳಿದ ಶಬ್ದವನ್ನು ಆಲಿಸಿ ಲೇಖನಿಯ ಸಹಾಯದಿಂದ ತನ್ನ ಮುಂದಿನ ಕಾಗದದಲ್ಲಿ ಬರೆಯುತ್ತದೆ. 4 ಸಾಲುಗಳ 40 ಶಬ್ದಗಳನ್ನು ಬರೆಯುವ ಸಾಮಥ್ರ್ಯ ರೈಟರ್‍ಗೆ ಇದೆ.
ಕೇಂದ್ರ ಭಾಗದಲ್ಲಿ ಗೊಂಬೆಯ ಚಲನೆಗೆ ಅನುಕೂಲವಾಗುವಂತೆ 40 ಚಕ್ರಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ರೇಖೀಯ ಚಲನೆ ಅಥವಾ ಪ್ರತಿಕ್ರಮದಲ್ಲಿ ರೋಟರಿ ಚಲನೆ ಪರಿವರ್ತಿಸುವ ಯಾಂತ್ರಿಕ ರಚನೆಗಳಿಂದ ಕೂಡಿದೆ. ಎಲ್ಲಾ ಚಕ್ರಗಳು ದೊಡ್ಡ ಚಕ್ರ ಅಥವಾ ಡಿಸ್ಕ್‍ನಿಂದ ನಿಯಂತ್ರಿಸಲ್ಪಟ್ಟಿವೆ. ದೊಡ್ಡ ಚಕ್ರವು ಟೈಪ್ ರೈಟರ್ ಮಾದರಿಯ ಅಕ್ಷರಗಳನ್ನು ಹೊಂದಿದೆ. ಪೂರ್ವ ಮುದ್ರಿತ ಧ್ವನಿ ಸಂದೇಶದ ಮೂಲಕ ಆಲಿಸಿದ ಶಬ್ದಗಳಿಗೆ ಅಕ್ಷರ ರೂಪು ಕೊಡುವಂತೆ ವಿನ್ಯಾಸಗೊಳಿಸಲಾಗಿದೆ. ಬರೆಯುವಾಗ ಕಣ್ಣುಗಳ ಚಲನೆ ಬರೆಯುವ ಕಾಗದದ ಮೇಲೆ ಇರುವಂತೆ ವಿನ್ಯಾಸಗೊಳಿಸಿರುವುದು ವಿನ್ಯಾಸಕಾರರ ಕೈಚಳಕಕ್ಕೆ ಸಾಕ್ಷಿಯಾಗಿದೆ.
ಡ್ರಾಫ್ಟ್‍ಮ್ಯಾನ್ : ಡ್ರಾಫ್ಟ್‍ಮ್ಯಾನ್ ಅಥವಾ ಚಿತ್ರಗಾರ ಗೊಂಬೆಯು ರೈಟರ್‍ನ ಶೈಲಿಯನ್ನೇ ಹೋಲುತ್ತದೆ. ಇದರಲ್ಲಿ 2000 ಬಿಡಿ ಭಾಗಗಳನ್ನು ಬಳಸಲಾಗಿದೆ. ಪೆನ್ಸಿಲ್ ಬಳಸಿ 4 ಚಿತ್ರಗಳನ್ನು ರಚಿಸುವಂತೆ ಪ್ರೋಗ್ರಾಂ ಅಳವಡಿಸಲಾಗಿದೆ. ಆಗಿಂದ್ದಾಗ್ಗೆ ಚಿತ್ರಗಾರ ತನ್ನ ಕುರ್ಚಿಯಿಂದ ಚಲಿಸುವಂತೆ, ಪೆನ್ಸಿಲ್‍ನ ಧೂಳನ್ನು ಬಾಯಿಂದ ಊದಿ ತೆಗೆಯುವಂತೆ ಹಾಗೂ ಚಿತ್ರಿಸುವಾಗ ಕೈಗಳ ಚಲನೆ ಮತ್ತು ಕಣ್ಣುಗಳ ಚಲನೆಗೂ ಹೊಂದಾಣಿಕೆ ಇರುವಂತೆ ರೂಪಿಸಲಾಗಿದೆ. ನೂರು ವರ್ಷಗಳ ಹಿಂದೆ ಪೆನ್ಸಿಲ್ ಬದಲಿಗೆ ಬಾಲ್ ಪಾಯಿಂಟ್ ಪೆನ್ ಅಳವಡಿಸಲಾಗಿದೆ.
ಲೇಡಿ ಮ್ಯೂಜಿಸಿಯನ್ : 2500 ಬಿಡಿ ಭಾಗಗಳಿಂದ ನಿರ್ಮಿತವಾದ ಲೇಡಿ ಮ್ಯೂಜಿಸಿಯನ್ ಇವೆರಡಕ್ಕಿಂತ ವಿಭಿನ್ನವಾದ ರಚನೆ ಹೊಂದಿದೆ. 1.80 ಮೀಟರ್ ಎತ್ತರದ ಈ ಗೊಂಬೆ ತನ್ನ ಮುಂದಿನ ವಾದ್ಯದ ಸಹಾಯದಿಂದ ಸಂಗೀತ ಉಪಕರಣ ನಿರ್ವಹಿಸುವಂತೆ ರೂಪಿಸಲಾಗಿದೆ. ತನ್ನ 10 ಬೆರಳುಗಳ ಯಾಂತ್ರಿಕ ಕ್ರಿಯೆಯಿಂದ ಐದು ವಿವಿಧ ಸಂಗೀತ ಸ್ವರಗಳನ್ನು ಸಂಯೋಜಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸಂಗೀತ ನುಡಿಸುವಾಗ ಕೈಗಳಿಗೂ ಕಣ್ಣುಗಳಿಗೂ ನೇರ ಸಂಪರ್ಕ ಕಲ್ಪಿಸಲಾಗಿದೆ. ಜೊತೆಗೆ ವಿಶೇಷವಾಗಿ ಗೊಂಬೆಯು ಉಸಿರಾಡುವಂತೆ ವಿನ್ಯಾಸಗೊಳಿಸಲಾಗಿದೆ. ಉಸಿರಾಡುವಾಗ ಎದೆಯ ಭಾಗದಲ್ಲಿ ಏರಿಳಿತಗಳು ಉಂಟಾಗುವಂತೆ ರೂಪಿಸಿರುವುದು ನೋಡುಗರ ದೃಷ್ಟಿಯನ್ನು ಹಿಡಿದು ನಿಲ್ಲಿಸುತ್ತದೆ.
ಅಸಾಧಾರಣ ವ್ಯಕ್ತಿಯ ಗಮನಾರ್ಹ ವಿನ್ಯಾಸ : ಪಿಯರೆ ಜಾಕ್ವೆಟ್ ಡ್ರೋಜರ್ ಆ ಕಾಲದ ಅಸಾಧಾರಣ ವ್ಯಕ್ತಿಯಾಗಿದ್ದರು. ಡ್ರೋಜ್ ಕುಟುಂಬದವರು ವಿಶೇಷವಾಗಿ ಕೈಗಡಿಯಾರ ಮತ್ತು ಇತರೆ ಅದ್ಬುತ ಯಂತ್ರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಕೈಗಡಿಯಾರಗಳು, ಅನಿಮೇಟೆಡ್ ಗೊಂಬೆಗಳು, ಸ್ವಯಂಚಾಲಿತ ಮತ್ತು ಯಾಂತ್ರಿಕ ಪಕ್ಷಿಗಳ ವಿನ್ಯಾಸ ಮತ್ತು ನಿರ್ಮಾಣ ಕಾರ್ಯದಲ್ಲಿ ಪಳಗಿದ್ದರು. ಯುರೋಫ್, ಚೀನಾ, ಭಾರತ, ಜಪಾನ್‍ಗಳ ಕೆಲವು ಚಕ್ರವರ್ತಿಗಳ ಆಕರ್ಷಕ ಅನಿಮೇಟೆಡ್ ಗೊಂಬೆಗಳನ್ನು ತಯಾರಿಸಿದ್ದರು. ಇವು ಯುರೋಪಿನಾದ್ಯಂತ ಮತ್ತು ಜಗತ್ತಿನ ಇತರೆಡೆ ಪ್ರದರ್ಶಿತಗೊಂಡಿವೆ. ಅಪಾರ ಜನಮನ ಸೂರೆಗೊಂಡಿವೆ.
ಈ ಮೂರೂ ಯಂತ್ರಗಳು ಆಧುನಿಕ ಯಂತ್ರಮಾನವ ರೋಬಾಟನ್ನು ಹೋಲುತ್ತವೆ. ಆದ್ದರಿಂದ ಇವುಗಳೇ ಆಧುನಿಕ ಕಂಪ್ಯೂಟರ್‍ನ ಪೂರ್ವಜರು ಎಂದು ಭಾವಿಸಿರುವುದು ಹೆಚ್ಚು ಸೂಕ್ತ ಎನಿಸುತ್ತದೆ.
ಆರ್.ಬಿ.ಗುರುಬಸವರಾಜ
No comments:
Post a Comment