ದಿನಾಂಕ 05-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.
ಹೆಲಿಕಾಪ್ಟರ್ ನಿರ್ಮಿಸಿದ ಅನಕ್ಷರಸ್ಥ ಯುವಕ
ಏನನ್ನಾದರೂ ವಿಶೇಷವಾದುದನ್ನು ಆವಿಷ್ಕರಿಸಲು ಅಲಂಕಾರಿಕ ಪದವಿ ಅಗತ್ಯ ಎಂಬುವವರೇ ಹೆಚ್ಚು. ಪುಸ್ತಕ ಜ್ಞಾನ ಇಲ್ಲದೆ ಕೇವಲ ಬಲವಾದ ಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದಲೂ ಹೊಸದನ್ನು ಆವಿಷ್ಕರಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ 25ರ ಹರೆಯದ ಯುವಕ ಸಾಗರ್ ಪ್ರಸಾದ್ ಶರ್ಮಾ.
ಪ್ರಸ್ತುತ ಅಸ್ಸಾಂನ ಧೇಮಾಜಿ ಜಿಲ್ಲೆಯ ದೇಮೌ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಸಾಗರ್ ಓದಿದ್ದು ಕೇವಲ 3ನೇ ತರಗತಿ. ಬಡತನದಿಂದಾಗಿ ಮುಂದೆ ಓದಲು ಆಗದೇ ಶಾಲೆ ಬಿಟ್ಟು ಕೂಲಿ ಕೆಲಸ ಮಾಡುತ್ತಾ ಇದ್ದ ಬಾಲಕನಿಗೆ ಬಾನಂಗಳದ ಲೋಹದ ಬಾನಾಡಿ ಆಕರ್ಷಿಸಿತ್ತು. ಆಗ ಮೂಡಿದ ಕನಸು ಈಗ ನನಸಾಗಿದೆ. ಇದಕ್ಕೆ ಅವನಲ್ಲಿದ್ದ ಅಚಲ ಛಲ ಮತ್ತು ಪರಿಶ್ರಮಗಳು ಸಾಗರ್‍ನನ್ನು ಒಬ್ಬ ಆಟೋಮೊಬೈಲ್ ಇಂಜಿನಿಯರ್‍ನನ್ನಾಗಿಸಿದವು.
ಮೂಲತಃ ವೆಲ್ಡರ್ ಆಗಿದ್ದ ಸಾಗರ್ ಪ್ರಸಾದ್ ತನ್ನ ಕನಸಿಗೆ ಬಣ್ಣ ನೀಡಲು ನಿರ್ಧರಿಸಿದ. ಮೂರು ವರ್ಷಗಳ ಸತತ ಪರಿಶ್ರಮದ ಫಲವಾಗಿ ಹೊರಹೊಮ್ಮಿದ ಹೆಲಿಕಾಪ್ಟರ್ ಹಾರಲು ಸಿದ್ದವಾಗಿದೆ. ಸ್ಥಳೀಯ ತಂತ್ರಜ್ಞಾನ ಹಾಗೂ ಸ್ಥಳೀಯ ಎಸ್.ಯು.ವಿ. ಯಂತ್ರಗಳನ್ನು ಬಳಸಿ ಡೀಸಲ್‍ನಿಂದ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ನಿರ್ಮಿಸಿದ್ದಾನೆ. ಈ ಹೆಲಿಕಾಪ್ಟರ್‍ನ ಹೊರಮೈಗೆ ಲೋಹದ ಹೊದಿಕೆ ಮಾಡಲಾಗಿದೆ. 2 ಆಸನಗಳುಳ್ಳ ಈ ಕಾಪ್ಟರ್ ಭೂಮಿಯಿಂದ 30 ರಿಂದ 50 ಅಡಿ ಹಾರುವ ಸಾಮಥ್ರ್ಯ ಹೊಂದಿದೆ. ಈ ಕಾಪ್ಟರ್‍ಗೆ ಸೇನಾ ಕಾಪ್ಟರ್ ಅಥವಾ ಇನ್ನಿತರೇ ಖಾಸಗೀ ಬ್ರಾಂಡೆಡ್ ಕಾಪ್ಟರ್‍ಗಳಂತೆ ವೇಗವಾಗಿ ಹಾರುವ ಸಾಮಥ್ರ್ಯ ಇಲ್ಲ. ಸಾಧಾರಣವಾಗಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಮಾತ್ರ ಹಾರಾಟ ನಡೆಸಬಲ್ಲುದು. 15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ಇದಕ್ಕೆ ಆರ್ಥಿಕ ಸಹಾಯ ಒದಗಿಸಿದ ಸ್ನೇಹಿತ ತಪನ್ ಗಿಮೈರ್‍ನ ಸಹಾಯ ಮತ್ತು ಬೆಂಬಲವನ್ನು ನೆನೆಯುತ್ತಾರೆ.
ಪ್ರಾರಂಭದಲ್ಲಿ ತಾನು ಹೆಲಿಕಾಪ್ಟರ್ ನಿರ್ಮಿಸುವ ವಿಷಯವನ್ನು ತನ್ನ ಗೆಳೆಯರಿಗೆ ತಿಳಿಸಿದಾಗ ಅವರಲ್ಲಿ ಗೇಲಿ ಮಾಡಿ ನಕ್ಕವರೇ ಹೆಚ್ಚು. ಏಕೆಂದರೆ ಸಾಗರ್ ಪ್ರಸಾದ್ ಔಪಚಾರಿಕ ಶಿಕ್ಷಣ ಪಡೆಯದೇ ಇರುವುದು ಹಾಗೂ ಹೆಲಿಕಾಪ್ಟರ್‍ನಂತಹ ವಾಹನಗಳನ್ನು ನಿರ್ಮಿಸಲು ಶಾಸ್ತ್ರೀಯ ಅಭ್ಯಾಸ ಬೇಕೆಂಬುದು ಅವರ ನಗುವಿಗೆ ಕಾರಣವಾಗಿರಬಹುದು. ಈಗ ಅದು ಸಾಧ್ಯವಾದಾಗ ಅಂದು ಗೇಲಿ ಮಾಡಿ ನಕ್ಕವರೆಲ್ಲ ಇಂದು ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ.
ಮೂರು ವರ್ಷಗಳ ಹಿಂದೆ ಸಣ್ಣದೊಂದು ಶೆಡ್‍ನಲ್ಲಿ ಪ್ರಾರಂಭವಾದ ಕೆಲಸಕ್ಕೆ ಸ್ಪೂರ್ತಿ ತುಂಬಿ ಹೆಲಿಕಾಪ್ಟರ್ ಸಂಪೂರ್ಣ ಸಿದ್ದವಾಗುವವರೆಗೂ ಜೊತೆಗಿದ್ದು ಸಹಕರಿಸಿದವರು ಸಾಗರ್ ಪ್ರಸಾದ್‍ನ ಮಡದಿ ಜನ್ಮೋನಿ ಮಾಯಾಂಕ್. ಶೇಕಡಾ 90ರಷ್ಟು ಕೆಲಸಗಳು ಸಂಪೂರ್ಣವಾದ ಮೇಲೆಯೇ ಕಾಪ್ಟರ್‍ನ್ನು ಹೊರಗೆ ತಂದಿದ್ದಾರೆ. ಹೆಲಿಕಾಪ್ಟರ್ ನಿರ್ಮಾಣವಾದ ಸುದ್ದಿ ಹಳ್ಳಿಯಲ್ಲಿ ಹಬ್ಬುತ್ತಿದ್ದಂತೆ ಜನರು ತಂಡ ತಂಡವಾಗಿ ಇವರ ಮನೆಗೆ ನುಗ್ಗತೊಡಗಿದ್ದಾರೆ. ಬಾನಿನಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಹಳ್ಳಿಯ ನೆಲದಲ್ಲೇ ನಿರ್ಮಾಣಗೊಂಡದ್ದು ಹಳ್ಳಿಯ ಜನರಿಗೆÉ ಖುಷಿ ತಂದಿದೆ.
ಈಗಾಗಲೇ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಸಂಪೂರ್ಣ ಯಶಸ್ವಿಯಾದ ಈ ಕಾಪ್ಟರ್‍ಗೆ ‘ಪವನ ಶಕ್ತಿ’ ಅಥವಾ ‘ಪವನ ಪುತ್ರ’ ಎಂಬ ಹೆಸರಿಡಲು ನಿರ್ಧರಿಸಿದ್ದಾನೆ. ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ಕೊಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅನುಮೋದನೆಗೆ ಪತ್ರ ಕಳಿಸಲಾಗಿದೆ.
‘ಇದನ್ನು ನನ್ನ ಹಳ್ಳಿ ಜನರ ಸರಕು ಸಾಮಗ್ರಿ ಸರಬರಾಜು ಮಾಡುವ ಉದ್ದೇಶದಿಂದ ತಯಾರಿಸಿದ್ದೇನೆ’ ಎನ್ನುವ ಸಾಗರ್ ಪ್ರಸಾದ್ ಅವರ ಮಾತುಗಳಲ್ಲಿ ಹಳ್ಳಿ ಜನರ ಸಂಕಷ್ಟಗಳನ್ನು ನಿವಾರಿಸುವ ಬದ್ದತೆಯಿದೆ.
‘ಯಶಸ್ಸು ಗಳಿಸಲು ಶಿಕ್ಷಣವೊಂದೇ ಸಾಧನವಲ್ಲ. ಅಸಾಧಾರಣ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಶಿಕ್ಷಣದ ಹೊರತಾಗಿಯೂ ಯಶಸ್ಸು ಗಳಿಸಲು ಸಾಧ್ಯವಿದೆ’ ಎನ್ನುವ ಪ್ರಸಾದ್ ಅವರ ಮಾತುಗಳು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸ್ಪೂರ್ತಿಯಾಗುತ್ತವೆ.
ಆರ್.ಬಿ.ಗುರುಬಸವರಾಜ
No comments:
Post a Comment