ದಿನಾಂಕ 19-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ
ರಾಷ್ಟ್ರಪತಿ ಭವನಕ್ಕೆ ಹೊರಟ ಕಾರ್ಕಳದ ಶಿಲ್ಪಗಳು
ಅವು ಸಾಧಾರಣ ಶಿಲ್ಪಗಳಲ್ಲ. ಎರಡು ನಿಮಿಷಕ್ಕೂ ಹೆಚ್ಚು ಹೊತ್ತು ತದೇಕ ಚಿತ್ತದಿಂದ ವೀಕ್ಷಿಸಿದಲ್ಲಿ ಜೀವ ತಳೆದು ಮಾತನಾಡುವಂತೆ ಭಾಸವಾಗುತ್ತದೆ. ಪುನೀತ ಭಾವದಿಂದ ಪುಳಕಿತರಾಗುತ್ತೇವೆ. ಸೂಕ್ಷ್ಮ ಕೆತ್ತನೆಯ ಕುಸುರಿ ಕೈಚಳಕಕ್ಕೆ ಅಚ್ಚರಿಗೊಳ್ಳುತ್ತೇವೆ. ಅಂದಹಾಗೆ ಈ ಶಿಲ್ಪಗಳು ದೇಶದ ಪ್ರಥಮ ಪ್ರಜೆಯ ನಿವಾಸಕ್ಕೆ ಕಾಲಿಡಲು ಸಜ್ಜಾಗಿವೆ. ಅಂದರೆ ರಾಷ್ಟ್ರಪತಿ ಭವನಕ್ಕೆ ತೆರಳಲು ತಯಾರಾಗಿವೆ. ಇಂತಹ ಶಿಲ್ಪಗಳು ನಮ್ಮ ಕರ್ನಾಟಕದಲ್ಲಿ ನಿರ್ಮಾವಾಗಿವೆ ಎಂದರೆ ಆಶ್ಚರ್ಯವಾಗುತ್ತದೆ. ಉಡುಪಿಯ ಕಾರ್ಕಳದಲ್ಲಿ ನಿರ್ಮಿತವಾದ ಈ ಶಿಲ್ಪಗಳು ಇಡೀ ವಿಶ್ವದ ಗಮನ ಸೆಳೆಯುವ ದೇಶದ ಶಕ್ತಿ ಕೇಂದ್ರದ ಆವರಣದಲ್ಲಿ ನೆಲೆ ನಿಲ್ಲುತ್ತಿವೆ.
ನಿರ್ಮಾತೃ : ಈ ಶಿಲ್ಪಗಳು ಕಾರ್ಕಳದ ಪ್ರಸಿದ್ದ ಶಿಲ್ಪಿ ಕೆ.ಶ್ಯಾಮರಾಯಾಚಾರ್ಯ ಅವರ ಪುತ್ರ ಸತೀಶ್ ಆಚಾರ್ಯ ಅವರ ಕೈಚಳಕದ ಪ್ರತೀಕಗಳಾಗಿವೆ. ಸತೀಶ್ ಆಚಾರ್ಯ ಅವರ ಕಲಾಪ್ರತಿಭೆಗೆ ತಲೆದೂಗದವರಿಲ್ಲ. ಧರ್ಮ, ಅಧರ್ಮದ ವಿಚಾರಗಳನ್ನು ತಮ್ಮ ಶಿಲ್ಪರಚನಾ ಪ್ರವೃತ್ತಿಯಲ್ಲಿ ವೇದ್ಯವಾಗುವಂತೆ ನಿರ್ಮಿಸಿ ಪ್ರೇಕ್ಷಕನಿಗೆ ಅಮಿತಾನಂದವನ್ನು ನೀಡಿದವರು ಸತೀಶ ಆಚಾರ್ಯ.
ಪ್ರಪಂಚವನ್ನೇ ಕಾಣದ ಕುರುಡನೂ ಕೂಡಾ ಶಿಲ್ಪಗಳನ್ನು ಸ್ಪರ್ಶಿಸಿ ಅದರ ರಸಾನುಭವವನ್ನು ಸವಿಯುವಂತೆ ಶಿಲ್ಪಗಳನ್ನು ನಿರ್ಮಿಸುವ ಕಲೆ ಸತೀಶ ಅವರಿಗೆ ಕರಗತವಾಗಿದೆ. ಪ್ರತೀ ಶಿಲ್ಪಗಳೂ ಕೂಡಾ ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ರಚಿತವಾಗಿರುವುದರಿಂದ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವೇ ಇಲ್ಲ.
ಈ ಶಿಲ್ಪಗಳನ್ನು ಕಾರ್ಕಳದ ಬಳಿಯ ನೆಲ್ಲಿಕಾರು ಅರಣ್ಯಗಳಲ್ಲಿ ಮಾತ್ರ ದೊರೆಯುವ ಕೃಷ್ಣಶಿಲೆಗಳಿಂದ ನಿರ್ಮಿಸಲಾಗಿದೆ. ಕೆತ್ತನೆಯಲ್ಲಿ ಜಕಣಾಚಾರಿ, ಡಕ್ಕಣಾಚಾರಿಯವರ ಶೈಲಿ ಅನುಸರಿಸಿದ್ದರೂ ಸಂಪೂರ್ಣವಾಗಿ ಸತೀಶ್ ಆಚಾರ್ಯ ಅವರ ವಿನ್ಯಾಸ ಹಾಗೂ ಕುಸುರಿ ಕೆತ್ತನೆ ಎದ್ದು ಕಾಣುತ್ತದೆ. ಕೆತ್ತನೆಯಲ್ಲಿ ತಂತ್ರಸಮುಚ್ಛಯ ಅನುಸರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರವೃತ್ತಿಯೇ ವೃತ್ತಿಯಾದಾಗ,,,,,, : ಸತೀಶ್ ಆಚಾರ್ಯರಿಗೆ ಬಾಲ್ಯದಿಂದಲೂ ಶಿಲ್ಪಕಲೆಯಲ್ಲಿ ಆಸಕ್ತಿ ಇತ್ತು. ತಂದೆ ರಚಿಸುತ್ತಿದ್ದ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿ ಬಿಡುವಿನ ವೇಳೆಯಲ್ಲಿ ತಂದೆಯ ಜೊತೆ ಕೆತ್ತನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪಿ.ಯು.ಸಿ ನಂತರ ಎಲೆಕ್ಟ್ರಿಕಲ್ ಇಂಜಿಯರಿಂಗ್‍ನಲ್ಲಿ ಡಿಪ್ಲಾಮೋ ಪಡೆದರು. ‘ರೋಲ್ ಇಲೆಕ್ಟ್ರಾನಿಕ್ಸ್’ನಲ್ಲಿ ಸೇವೆಗೆ ಸೇರಿದರು. ಅದಾಗಲೇ ಅವರ ಮನಸ್ಸು ಶಿಲ್ಪಕಲೆಯ ಕಡೆಗೆ ವಾಲತೊಡಗಿತ್ತು. ತಂದೆಯವರ ಶಿಲ್ಪಕಲೆಯಿಂದ ಪ್ರೇರಿತರಾಗಿ 1986ರಲ್ಲಿ ಸಂಪೂರ್ಣವಾಗಿ ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಂಡರು.
ಬಿಡುವಿಲ್ಲದ ಕಾಯಕ : ತಂದೆಯವರ ಮಾರ್ಗದರ್ಶನದ ಗರಡಿಯಲ್ಲಿ ಪಳಗಿದ ಸತೀಶ್ ಅವರ ಕೆಲಸದ ಬಗ್ಗೆ ಅವರೇ ರಚಿಸಿದ ಶಿಲ್ಪಗಳೇ ಮಾತನಾಡುತ್ತವೆ. ರಾಜ್ಯದ ನಾನಾ ಭಾಗಗಳಿಂದ ಕಲಾರಸಿಕರು, ಕಲಾರಾಧಕರು ತಂಡ ತಂಡವಾಗಿ ಆಗಮಿಸಿ ತಮಗೆ ಬೇಕಾದ ಶಿಲ್ಪಗಳ ಆರ್ಡರ್ ನೀಡತೊಡಗಿದರು. ಬೇಡಿಕೆ ಹೆಚ್ಚಿದಂತೆಲ್ಲಾ ಕೆಲಸದ ಒತ್ತಡವೂ ಅಧಿಕವಾಯಿತು. ಒಬ್ಬ ಅಸಾಮಾನ್ಯ ಶಿಲ್ಪಿಗಿರಬೇಕಾದ ಚತುರತೆ, ಸಂಯಮ, ಮಾತುಗಾರಿಕೆ, ಪರಿಶುದ್ದ ಮನಸ್ಸು, ಮತ್ತು ಆತ್ಮವಿಶ್ವಾಸಗಳು ಅವರನ್ನು ವಿಶಿಷ್ಟ ಶಿಲ್ಪಿಯನ್ನಾಗಿಸಿದವು.
ದೇಶ ವಿದೇಶದಲ್ಲಿ ಶಿಲ್ಪಗಳ ವೈಭವ : ಸತೀಶ ಆಚಾರ್ಯ ಅವರ ಶಿಲ್ಪ ವೈಭವ ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೀಮೀತವಾಗಿಲ್ಲ. ವಿದೇಶಗಳಲ್ಲೂ ಇವರ ಶಿಲ್ಪಗಳು ಕಲಾ ರಸಿಕರ ಮನಸೆಳೆದಿವೆ. ಸತೀಶ್ ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟ ಶಿಲ್ಪಾಕೃತಿಯೆಂದರೆ ದೆಹಲಿಯ ಮೆಹರೋಲಿಯಲ್ಲಿನ ಹದಿಮೂರುವರೆ ಅಡಿ ಎತ್ತರದ ಬೃಹದಾಕಾರದ ಧ್ಯಾನಮುದ್ರೆಯ ಶ್ರೀಮಹಾವೀರನ ಶಿಲ್ಪ. 20 ಟನ್ ತೂಕದ ನಸುಗೆಂಪು ಗ್ರಾನೈಟ್ ಶಿಲೆಯಿಂದ ನಿರ್ಮಿಸಿದ ಈ ಶಿಲ್ಪವು ಸತೀಶ್ ಆಚಾರ್ಯರ ಕೀರ್ತಿಯನ್ನು ದಿಕ್ಕುದಿಕ್ಕಿಗೂ ಪಸರಿಸಿತು. ಇವರ ಶಿಲ್ಪಗಳು ಇಟಲಿ, ಕೆನಡಾ, ಲಂಡನ್, ಜಪಾನ್, ದುಬೈ ಮುಂತಾದ ವಿದೇಶಗಳಲ್ಲಿ ಕಲಾರಸಿಕರ ಮನೆಮಾತಾಗಿವೆ.
ಶಿಲ್ಪಗ್ರಾಮ : ‘ಕಲೆಯನ್ನು ಉಳಿಸಲು ಕಲಿಸಬೇಕಾದುದು ಅನಿವಾರ್ಯ’ ಎಂಬ ತತ್ವ ಸಿದ್ದಾಂತದೊಂದಿಗೆ ಕಾರ್ಕಳದಲ್ಲಿ 2 ಎಕರೆ ಜಮೀನಿನಲ್ಲಿ ‘ವಿಜಯ ಶಿಲ್ಪಕಲಾ ಕೇಂದ್ರ’ವನ್ನು ಸ್ಥಾಪಿಸಿ ಅದರ ಮೂಲಕ ಕಲೆಯನ್ನು ಕಲಿಸುತ್ತಿದ್ದಾರೆ. ಪ್ರಸ್ತುತ 15 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಶಿಲ್ಪಕಲೆಯನ್ನು ಕಲಿತು ಸ್ವತಂತ್ರವಾಗಿ ಉದ್ಯೋಗದಲ್ಲಿದ್ದಾರೆ. ಅದರಲ್ಲಿ 25ಕ್ಕೂ ಹೆಚ್ಚು ಜನ ಇಲ್ಲಿಯೇ ವೃತ್ತಿ ನಡೆಸುತ್ತಿದ್ದರೆ. ಸಾಂಸ್ಕøತಿಕ ರಾಯಭಾರಿಗಳನ್ನು ನಿರ್ಮಿಸಿ ಕಲೆಯ ಪಾಳೆಯಗಾರರನ್ನು ಸೃಷ್ಟಿಸುವಲ್ಲಿ ಶಿಲ್ಪಗ್ರಾಮವು ತನ್ನದೇ ಆದ ಹೆಗ್ಗುರುತು ಹೊಂದಿದೆ.
ಭವಿಷ್ಯದ ಕನಸು : ಸರ್ಕಾರದ ಯಾವುದೇ ಸಹಾಯಗಳ ಹಂಗಿಲ್ಲದೇ ಸಾಗಿದ ಅವರ ಶಿಲ್ಪಸೇವೆಯ ಭವಿಷ್ಯದಲ್ಲಿ ಅನೇಕ ಯೋಜನೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಶಿಲ್ಪಕಲಾ ಸಂಶೋಧಕರಿಗಾಗಿ ಶಿಲ್ಪಕಲಾ ಮ್ಯೂಸಿಯಂ ಮತ್ತು ಗ್ರಂಥಾಲಯ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಅಲ್ಲದೇ ವಿಶ್ವಕರ್ಮದವರಲ್ಲಿ ಇರಬೇಕಾದ ಪಂಚಲೋಹ, ಶಿಲೆ, ಕಾಷ್ಠ, ಚಿನ್ನ, ಕಮ್ಮಾರಿಕೆ ಈ ಐದು ಕಲೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನದಲ್ಲಿದ್ದಾರೆ.
ಸರಳ ಜೀವನ, ಸನ್ಮಾನಗಳ ಹೂರಣ : ತೀರಾ ಸರಳ ಜೀವನ ನಡೆಸುವ ಸತೀಶ್ ಆಚಾರ್ಯ ಅವರ ಕಲೆಯನ್ನು ಮೆಚ್ಚಿ ಅನೇಕ ಸಂಘ-ಸಂಸ್ಥೆಗಳು ಅಭಿನಂದಿಸಿ ಗೌರವಿಸಿವೆ. ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಆದರೆ ಅವೆಲ್ಲವುಗಳಿಗಿಂತ ಮಿಗಿಲಾದ ಮಂದಸ್ಮಿತ, ಆತ್ಮೀಯತೆಯ ಉಪಚಾರ, ಸಕಲರಿಗೂ ಶ್ರೇಷ್ಠತೆಯನ್ನು ಬಯಸುವ ಅವರ ಗುಣಗಳಿಗೆ ಯಾವುದೇ ಪ್ರಶಸ್ತಿ/ಸನ್ಮಾನಗಳು ಸಾಟಿಯಲ್ಲ. ಅವರಿಗೆ ಅವರೇ ಸಾಟಿ.
ಆರ್.ಬಿ.ಗುರುಬಸವರಾಜ
No comments:
Post a Comment