April 20, 2016

ಹಳ್ಳಿ ಹೈದರ ರಜಾ-ಮಜಾ

ದಿನಾಂಕ 18-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ

ಹಳ್ಳಿ ಹೈದರ ರಜಾ-ಮಜಾ


ಬೇಸಿಗೆ ರಜೆ ಬಂತೆಂದರೆ ಸಾಕು. ಮಕ್ಕಳಲ್ಲಿ ಒಂದು ಹೊಸ ಸಂಚಲನ ಪ್ರಾರಂಭವಾಗುತ್ತದೆ. ಅದು ಶಾಲೆಗೆ ಹೋಗುವ ಕಾಟ, ಹೋಮ್‍ವರ್ಕ್‍ನ ಕಿರಿಕಿರಿ, ಟೆಸ್ಟ್ ಪರೀಕ್ಷೆಗಳ ರಗಳೆ ಹೀಗೆ ಯಾಂತ್ರಿಕೃತ ಜೀವನ ಸ್ವಲ್ಪ ದಿನಗಳವರೆಗೆ ತಪ್ಪಿತಲ್ಲ ಎಂಬುದೇ ಅವರ ಖುಷಿಗೆ ಕಾರಣವಾಗಿರಬಹುದು. 
ಬೇಸಿಗೆ ರಜೆ ಮಕ್ಕಳಿಗೆ ಖುಷಿಯ ವಿಷಯವಾದರೆ ಪಾಲಕರಿಗೆ ತಲೆನೋವಿನ ವಿಷಯ. ರಜೆಯ ಎರಡು ತಿಂಗಳಲ್ಲಿ ಈ ಮಕ್ಕಳನ್ನು ಹೇಗಪ್ಪಾ ಸಂಭಾಳಿಸೋದು ಎಂಬುದು ಅವರ ತಲೆನೋವಿಗೆ ಕಾರಣ. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅವರು ಕಂಡುಕೊಂಡ ಸುಲಭ ಮಾರ್ಗ ಎಂದರೆ ಮಕ್ಕಳನ್ನು ಶಿಬಿರಗಳಿಗೆ ಸೇರಿಸುವುದು. ಈ ಶಿಬಿರಗಳೂ ಸಹ ಶಾಲೆಯ ಮತ್ತೊಂದು ರೂಪ ಎಂಬುದನ್ನು ಬಹುತೇಕ ಪಾಲಕರು ಇನ್ನೂ ಅರ್ಥೈಸಿಕೊಂಡಿಲ್ಲ. 
ಮಕ್ಕಳನ್ನು ಶಿಬಿರಕ್ಕೆ ಸೇರಿಸುವ ಬದಲು ಹಳ್ಳಿಗಳಿಗೆ ಕರೆದೊಯ್ದರೆ ಜೀವನದ ನಿಜವಾದ ಮತ್ತು ಬೆಲೆಕಟ್ಟಲಾಗದ ಪಾಠವನ್ನು ಕಲಿಯುತ್ತಾರೆ. ಮಕ್ಕಳನ್ನು ಹಳ್ಳಿಗಳಿಗೆ ಕರೆದೊಯ್ಯುವುದರಿಂದ ಅವರು ಅಲ್ಲಿ ಗ್ರಾಮೀಣ ಆಟಗಳು, ಜನಜೀವನ, ಕಲೆ, ಸಂಸ್ಕøತಿ, ಸೊಗಡು, ವ್ಯವಸಾಯ, ಗುಡಿಕೈಗಾರಿಕೆಗಳು, ವಿವಿಧ ಕಸಬುದಾರರು ಬಗ್ಗೆ ತಿಳಿದುಕೊಳ್ಳುತ್ತಾರೆ.
ಇವೆಲ್ಲವುಗಳಿಗಿಂತ ಹೆಚ್ಚು ಖುಷಿಯನ್ನು ಆಟಗಳ ಮೂಲಕ ಪಡೆಯುತ್ತಾರೆ. ಬಹುತೇಕ ಮಕ್ಕಳ ಗ್ರಾಮೀಣ ಆಟಗಳಲ್ಲಿ ಪಾಲಕರ ಅನುಕರಣೆ ಇರುತ್ತದೆಯಾದರೂ ಅದರಲ್ಲಿ ಸೃಜನಶೀಲತೆ ಎದ್ದು ಕಾಣುತ್ತದೆ. ಹೊಸತನದ ಹುಡುಕಾಟ ಇರುತ್ತದೆ. ಕಸದಿಂದ ರಸ ಸೃಷ್ಟಿಸುವ ಅಂದರೆ ಅನಗತ್ಯ ವಸ್ತುಗಳಿಗೆ ಬಳಕೆಯ ರೂಪ ನೀಡುವ ಗುಣಗಳನ್ನು ಕಲಿಯುತ್ತಾರೆ. ಇಂತಹ ಚಟುವಟಿಕೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪೂರಕ ಸಾಮಗ್ರಿಗಳಾಗುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ. ರಜೆ ಸಜೆಯಾಗುವ ಬದಲು ಮಜವಾಗಬೇಕೆಂದು ಎಲ್ಲಾ ಮಕ್ಕಳು ಬಯಸುವುದರಲ್ಲಿ ತಪ್ಪಿಲ್ಲ ಅಲ್ಲವೇ?
ಆರ್.ಬಿ.ಗುರುಬಸವರಾಜ.

No comments:

Post a Comment