March 14, 2016

ಬದಲಾಗಲಿ ನಮ್ಮ ವರ್ತನೆಗಳು

ಜನವರಿ 2016 ರ 'ಟೀಚರ್' ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

ಬದಲಾಗಲಿ ನಮ್ಮ ವರ್ತನೆಗಳು

“ನಮ್ಮ ಮೋಹನನಿಗೆ ತುಂಬಾ ಹಠ. ಕೇಳಿದ್ದನ್ನೆಲ್ಲಾ ಕೊಡಿಸಲೇಕು. ಇಲ್ಲಾಂದ್ರೆ ಮನೆಯ ಸಾಮಾನುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬಿಡ್ತಾನೆ” ಎನ್ನುತ್ತಾರೆ ತಾಯಿ ಸುಶೀಲಮ್ಮ.
“ಅಯ್ಯೋ ನಮ್ಮ ಸೌಮ್ಯನೂ ಹಾಗೇ ಕಣ್ರೀ. ಅವಳು ಯಾವಾಗ್ಲೂ ಟಿ.ವಿ. ನೋಡ್ತಾನೆ ಇರ್ತಾಳೆ. ಈ ಬಾರಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಹೇಗೆ ಬರೀತಾಳೋ” ಎಂದು ಅಲವತ್ತುಕೊಂಡ್ರು ಸೌಮ್ಯಳ ತಾಯಿ ವಿಶಾಲಮ್ಮ.
“ಈಗಿನ ಮಕ್ಕಳಂತೂ ತಂದೆ ತಾಯಿ ಮಾತು ಕೇಳೋದೇ ಇಲ್ಲ. ಯಾವಾಗ್ಲೂ ಮೊಬೈಲ್‍ನಲ್ಲೇ ಕಳೆದು ಹೋಗ್ತಾರೆ” ಎನ್ನುತ್ತಾರೆ ಮುನಿವೆಂಕಟಪ್ಪ.
ಇಂತಹ ಅದೆಷ್ಟೋ ಮಾತುಗಳು ದಿನನಿತ್ಯವೂ ನಮ್ಮ ಕಿವಿಮೇಲೆ ಬೀಳುತ್ತಲೇ ಇರುತ್ತವೆ ಅಥವಾ ಇಂತಹ ಸಮಸ್ಯೆಯನ್ನು ಪ್ರತಿ ಪೋಷಕರೂ ಅನುಭವಿಸಿಯೇ ಇರುತ್ತಾರೆ. ಇದಕ್ಕೆಲ್ಲಾ ಕಾರಣ ಏನು ಹುಡುಕಿ ಹೊರಟರೆ ಅದು ಸುತ್ತಿ ಬಂದು ನಿಲ್ಲುವುದೇ ನಮ್ಮಲ್ಲಿ. ಆಶ್ಚರ್ಯವಾಗುತ್ತಿದೆಯೇ? ಹೌದು. ನಾವು ನಮ್ಮ ಮಕ್ಕಳನ್ನು ಬೆಳೆಸುವ ರೀತಿ ಸರಿ ಇದೆಯೇ? ಒಮ್ಮೆ ಪ್ರಶ್ನಿಸಿಕೊಳ್ಳೊಣ. ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಖಂಡಿತವಾಗಿ ನಾವು ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ. 
ಇಂದಿನ ಜಂಜಡದ ಜೀವನದಲ್ಲಿ ಮಕ್ಕಳ ಪಾಲನೆಯನ್ನು ಕಡೆಗಣಿಸಿದ್ದೇವೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಮಧ್ಯ ಅಂತರ ಹೆಚ್ಚುತ್ತಿದೆ. ಮಕ್ಕಳೊಂದಿಗೆ ಕಾಲ ಕಳೆಯಲು ಪುರುಸೊತ್ತು ಇಲ್ಲದಾಗಿದೆ. ಹಾಗಾಗಿ ನಮ್ಮ ಮಕ್ಕಳು ನಮ್ಮ ಮಾತು ಕೇಳದ ಸ್ಥಿತಿ ಬಂದೊದಗಿದೆ. 
ಪೋಷಕರಾದ ನಾವು ಮಕ್ಕಳ ವರ್ತನೆಗಳನ್ನು ಬದಲಾಯಿಸುವ ಮೊದಲು ನಮ್ಮ ವರ್ತನೆಗಳನ್ನು ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ನಮ್ಮ ವರ್ತನೆಗಳು ಮಕ್ಕಳಲ್ಲಿ ಪ್ರತಿಫಲಿಸುತ್ತವೆ ಅಲ್ಲವೇ? ನಮ್ಮ ಪ್ರತಿ ನಡವಳಿಕೆಗಳನ್ನು ಸದಾ ಅವರು ಗಮನಿಸುತ್ತಿರುತ್ತಾರೆ ಮತ್ತು ಅನುಸರಿಸುತ್ತಾರೆ. ಜ್ಞಾನದ ಕೊರತೆಯಿಂದಲೋ ಅಥವಾ ನಮ್ಮ ನಿರ್ಲಕ್ಷತನದಿಂದಲೋ ಮಕ್ಕಳು ಸ್ವೀಕಾರಾರ್ಹವಲ್ಲದ ವರ್ತನೆಗಳನ್ನು ತೋರುತ್ತೇವೆ. ಮಕ್ಕಳ ಭಾವನೆಗಳಿಗೆ ಆಧ್ಯತೆ ನೀಡಲು ವಿಫಲರಾಗುತ್ತೇವೆ. ನಮ್ಮ ಮಕ್ಕಳನ್ನು ಸುಧಾರಿಸುತ್ತೇವೆ ಎಂಬ ಅಂಧವಿಶ್ವಾಸದಿಂದ ಮಕ್ಕಳ ಪ್ರತಿಭೆಯನ್ನು ಹಾಳು ಮಾಡುತ್ತೇವೆ. 
ಕೆಲವು ವೇಳೆ ನಮ್ಮಲ್ಲಿನ ಮಾನಸಿಕ ಒತ್ತಡವನ್ನು ಅನಾವಶ್ಯಕವಾಗಿ ಮಕ್ಕಳ ಮೇಲೆ ಪ್ರದರ್ಶಿಸುತ್ತೇವೆ. ಮಕ್ಕಳೊಂದಿಗೆ ಸಂವಾದ ನಡೆಸುವ ಪರಿಪಾಠವನ್ನು ನಾವಿನ್ನೂ ಬೆಳೆಸಿಕೊಂಡಿಲ್ಲ. ಮಕ್ಕಳ ಕನಸಿಗೆ ಬಣ್ಣ ಹಚ್ಚುವ ಬದಲು ನಮ್ಮ ನಿರೀಕ್ಷೆಗಳಿಗೆ ಬೃಹದಾಕಾರ ನೀಡುತ್ತೇವೆ. ಆ ನಿರೀಕ್ಷೆಗಳನ್ನು ಒತ್ತಾಯಪೂರ್ವಕವಾಗಿ ಮಕ್ಕಳ ಮೇಲೆ ಹೇರುತ್ತೇವೆ. ಮಕ್ಕಳ ಬೇಕು ಬೇಡಗಳನ್ನು ಆಲಿಸುವ ಕನಿಷ್ಟ ಶಿಷ್ಟಾಚಾರ ನಮ್ಮಲ್ಲಿ ಬೆಳೆದಿಲ್ಲ. ಹೀಗೆ ನಮ್ಮೆಲ್ಲ ತಪ್ಪುಗಳಿಂದಾಗಿ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ನಾವೇ ಶತೃಗಳಾಗುವ ಸಾಧ್ಯತೆ ಹೆಚ್ಚು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಪಾಲಕರೂ ಪರ್ಯಾಯ ವರ್ತನಾ ತಂತ್ರಗಳನ್ನು ಅಳವಡಿಸಿಕೊಳ್ಳಲೇಬೇಕು. 
ಅನುಸರಿಸಬೇಕಾದ ವರ್ತನಾ ತಂತ್ರಗಳು
ಭಾಗೀದಾರರಾಗಿ : ಮಗುವಿನ ಪ್ರತಿದಿನದ ಕಲಿಕೆ, ಆಟ, ಪಾಠ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗೀದಾರರಾಗಿ. ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿ. ಕ್ಲಿಷ್ಟತೆ ನಿವಾರಣೆಗೆÉ ಸಹಾಯ ಮಾಡಿ. 
ಸಮಯ ಹೊಂದಿಸಿಕೊಳ್ಳಿ : ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಯ ನಿಗದಿಗೊಳಿಸುವಂತೆ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯ ಹೊಂದಿಸಿಕೊಳ್ಳಿ. ಹೊಂವರ್ಕ್ ಮಾಡಲು, ಪ್ರೋಜೆಕ್ಟ್ ತಯಾರಿಸಲು ಸಹಾಯಮಾಡಿ. ರಾತ್ರಿ ಊಟದ ವೇಳೆ ಅವರೊಂದಿಗೆ ಊಟ ಮಾಡುತ್ತಾ ಉತ್ತಮ ಆಹಾರ ಸೇವನಾ ವಿಧಾನಗಳನ್ನು ತಿಳಿಸಿಕೊಡಿ. 
ದ್ವಂದ್ವ ಬೇಡ : ಮಗುವಿಗೆ ಹೇಳುವ ಬೋಧನೆ ನಿಖರವಾಗಿರಲಿ. ದ್ವಂದ್ವ ಅಥವಾ ಅನುಮಾನಾಸ್ಪದ ಹೇಳಿಕೆಗಳು ಬೇಡ. ನಮ್ಮ ಬೋಧನೆಗೂ ಮತ್ತು ವರ್ತನೆಗೂ ಸಾಮ್ಯತೆ ಇರಲಿ. ‘ಹೇಳುವುದು ಒಂದು ಮಾಡುವುದು ಇನ್ನೊಂದು’ ಎನ್ನುವಂತಾಗಬಾರದು. ನಮ್ಮ ವರ್ತನೆಯಲ್ಲಿ ನಿಖರತೆ ಇರಲಿ ಮತ್ತು ಅನುಸರಿಸುವ ಕ್ರಮದ ಸರಿಯಾದ ವಿವರಣೆ ಇರಲಿ.
ಸ್ನೇಹ ಬಳಗದ ಮೇಲೆ ಗಮನ ಇರಲಿ : ಬಹುತೇಕ ಪಾಲಕರು ತಮ್ಮ ಮಗುವಿನ ಸ್ನೇಹ ಬಳಗವನ್ನು ಸಂಪೂರ್ಣವಾಗಿ ಕಡೆಗಣಿಸಿರುತ್ತಾರೆ. ಇದು ತಪ್ಪು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪಾಲಕರು ಸಹಾಯ ಮಾಡಬೇಕು. ಮಕ್ಕಳು ಸ್ನೇಹಿತರನ್ನು ಎಲ್ಲಿ, ಯಾವಾಗ, ಏತಕ್ಕಾಗಿ ಭೇಟಿಯಾದರು ಎಂಬ ಬಗ್ಗೆ ಮಾಹಿತಿ ಇರಬೇಕು. ತಪ್ಪಿದಾಗ ಬುದ್ದಿ ಹೇಳಬೇಕು.
ಗೌರವಿಸುವುದನ್ನು ಕಲಿಯೋಣ : ಮಕ್ಕಳ ಭಾವನೆಗಳು ಮತ್ತು ಅನಿಸಿಕೆಗಳಿಗೆ ಗೌರವ ಕೊಡುವುದು ಮುಖ್ಯ. ಅವರಿನ್ನೂ ಚಿಕ್ಕವರು, ಕೇವಲ ಮಾರ್ಗದರ್ಶನ ಪಡೆಯುವವರು ಎಂದು ನಿರ್ಲಕ್ಷಿಸುವುದು ಬೇಡ. ನಿರ್ಧಾರ ಮತ್ತು ಆಯ್ಕೆಯ ವಿಧಾನಗಳನ್ನು ಮಾತ್ರ ಅವರಿಗೆ ತಿಳಿಸೋಣ. ನಿರ್ಧಾರ ಮತ್ತು ಆಯ್ಕೆಯನ್ನು ಅವರಿಗೇ ಬಿಡೋಣ. 
ಹೋಲಿಕೆ ಬೇಡ : ವಿನಾಕಾರಣ ಮಗುವನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಸುವುದು ಸರಿಯಲ್ಲ. ಪ್ರತೀ ಮಗುವಿನ ಆಸಕ್ತಿ, ಸಾಮಥ್ರ್ಯ ಮತ್ತು ಪ್ರತಿಭೆಗಳು ವಿಭಿನ್ನವಾಗಿರುತ್ತವೆ. ಕೌಟುಂಬಿಕ ಮತ್ತು ಸಾಮಾಜಿಕ ಪರಿಸರ, ಅನುಭವ, ಸಂಸ್ಕøತಿ, ಆಚಾರ ವಿಚಾರಗಳು ಪ್ರತೀ ಮಗುವಿನಲ್ಲೂ ವಿಭಿನ್ನವಾಗಿರುತ್ತವೆ. ಒಂದು ಮಗು ತರಗತಿ ಕಲಿಕೆಯಲ್ಲಿ ಮುಂದಿದ್ದರೆ ಇನ್ನೊಂದು ಮಗು ತರಗತಿ ಹೊರಗಿನ ಕಲಿಕೆಯಲ್ಲಿ ಮುಂದಿರುತ್ತದೆ. ಹಾಗಾಗಿ ಒಂದು ಮಗುವಿನೊಂದಿಗೆ ಇನ್ನೊಂದು ಮಗುವಿನ ಹೋಲಿಕೆ ಸರಿಯಲ್ಲ.
ಅವಾಸ್ತವಿಕ ನಿರೀಕ್ಷೆ ಬೇಡ : ಮಗುವಿಗೆ ಸಮಯ ಮತ್ತು ಅಧ್ಯಯನ ವಾತಾವರಣ ಮಾತ್ರ ನಿರ್ಮಿಸಿಕೊಡಿ. ಅವರ ಮೇಲೆ ಅತಿಯಾದ ಅನಗತ್ಯವಾದ ನಿರೀಕ್ಷೆ ಮತ್ತು ಒತ್ತಡ ಬೇಡ. ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 
ವಿವರಿಸಿ ಸರಿಪಡಿಸಿ : ಮಕ್ಕಳಲ್ಲಿ ಅಹಿತಕರ ವರ್ತನೆ ಕಂಡು ಬಂದಲ್ಲಿ ಅದರ ಬಗ್ಗೆ ವಿವರಿಸಿ ಸರಿಪಡಿಸಿ. ಅಧಿಕಾರಯುತವಾಗಿ ಪಾಲಕರ ಶೈಲಿಯಲ್ಲಿ ಸರಿಪಡಿಸದೇ ಸ್ನೇಹಿತರ ಶೈಲಿಯಲ್ಲಿ ಸರಿಪಡಿಸಿ. ಇದು ಸ್ವಾಭಾವಿಕವಾಗಿ ಮುಂದಿನ ತಪ್ಪುಗಳನ್ನು ಕಡಿಮೆ ಮಾಡುತ್ತದೆ. 
ಶಿಕ್ಷೆ ಮತ್ತು ನಿಯಂತ್ರಣ : ಮಕ್ಕಳಿಗೆ ಕಠೋರ ಶಿಕ್ಷೆಯಾಗಲಿ ಅಥವಾ ಕಟ್ಟುನಿಟ್ಟಿನ ನಿಯಂತ್ರಣವಾಗಲೀ ಬೇಡ. ಇವು ಮಕ್ಕಳಲ್ಲಿ ಆಕ್ರಮಣಕಾರಿ  ಮತ್ತು ಕ್ರಾಂತಕಾರಕ ವರ್ತನೆಗೆ ಕಾರಣವಾಗುತ್ತವೆ. ಶಿಕ್ಷೆ ಮತ್ತು ನಿಯಂತ್ರಣ ಹಾಕುವಾಗ ಅವರೂ ಕೂಡಾ ನಮ್ಮಂತೆ ಮನುಷ್ಯರು ಎಂಬ ಭಾವನೆಯಿರಲಿ. 
ಪ್ರಜಾಸತ್ತಾತ್ಮಕ ವಾತಾವರಣ ನಿರ್ಮಿಸಿ : ಪ್ರಜಾಸತ್ತಾತ್ಮಕ ತತ್ವಗಳಾದ ಸ್ವಾತಂತ್ರ, ಸಮಾನತೆ, ಭ್ರಾತೃತ್ವ, ಇತ್ಯಾದಿಗಳನ್ನು ಕುಟುಂಬದ ಸದಸ್ಯರು ಕಡ್ಡಾಯವಾಗಿ ಅನುಸರಿಸುವ ಮೂಲಕ ಉತ್ತಮ ನಾಗರಿಕರನ್ನು ಬೆಳೆಸೋಣ. ದೇಶದ ಏಳಿಗೆ ಕುಟುಂಬದಿಂದಲೇ ಪ್ರಾರಂಭವಾಗಲು ಕೈಜೋಡಿಸೋಣ.
ಮೇಲಿನ ಅಂಶಗಳಿಂದ ನಮಗೊಂದು ಸ್ಪಷ್ಟ ಚಿತ್ರಣ ದೊರೆತಿದೆ. ನಮ್ಮಿಂದ ಆಗಬಹುದಾದ ತಪ್ಪುಗಳನ್ನು ನಿಲ್ಲಿಸಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ನಮ್ಮದೇ ಆದ ಕೊಡುಗೆ ನೀಡೋಣ. ಏಕೆಂದರೆ ನಮ್ಮ ಭವಿಷ್ಯ ನಮ್ಮ ಮಕ್ಕಳ ಕೈಯಲ್ಲಿದೆ. ಆದ್ದರಿಂದ ನಮ್ಮ ವರ್ತನೆಗಳು ಬದಲಾಗಬೇಕು. ಅವು ನಮ್ಮ ಮಕ್ಕಳ ವ್ಯಕ್ತಿತ್ವವನ್ನು ಉತ್ತಮ ಪಡಿಸುವಂತಾಗಬೇಕು.
ಆರ್.ಬಿ.ಗುರುಬಸವರಾಜ


No comments:

Post a Comment