ದಿನಾಂಕ 20-01-2016 ರ 'ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ಲೇಖನ.
ಕಷ್ಟದಲ್ಲೇ ಕಾಷ್ಠಶಿಲ್ಪಿಯಾದ ರಥವೀರ
ಕನ್ನಡನಾಡು ಅಸಂಖ್ಯ ದೇವಾಲಯಗಳ ಬೀಡಾದಂತೆ ಅಸಂಖ್ಯ ರಥಗಳ ನಾಡೂ ಆಗಿದೆ. ಇಲ್ಲಿ ಸಾವಿರಾರು ಕಲಾತ್ಮಕ ರಥಗಳು ಕಲಾರಸಿಕರ ಕಣ್ಮನ ಸೆಳೆದಿವೆ. ಈ ಕನ್ನಡ ನೆಲದಲ್ಲಿ ಜನಿಸಿದ ಅನೇಕ ಕನ್ನಡ ಕಲಿಗಳು ರಥ ನಿರ್ಮಾಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗೆ ಛಾಪು ಮೂಡಿಸಲು ಹೊರಟ 30 ರ ಹರೆಯದ ‘ರಥವೀರ’ ಎಂದೇ ಖ್ಯಾತಿಗೊಂಡ ವೀರೇಶ್‍ಆಚಾರ್. ಬಳ್ಳಾರಿ ಜಿಲ್ಲಾ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಈ ಯುವಕನ ಕಾಷ್ಠಕಲೆಗೆ ತಲೆದೂಗದವರಿಲ್ಲ.
ಬಾಲ್ಯದಲ್ಲಿ ತಾಯಿಯ ಮಾತುಗಳಿಂದ ಪ್ರೇರಣೆಗೊಂಡು 12ನೇ ವಯಸ್ಸಿನಲ್ಲಿಯೇ ಕಟ್ಟಿಗೆಯಲ್ಲಿ ಗಣೇಶನ ವಿಗ್ರಹ ಕೆತ್ತಿದ ವೀರನೀತ. ಪರಂಪರಾಗತವಾಗಿ ಬಂದ ಮರಕೆತ್ತನೆ ಕೆಲಸದ ಕೈಚಳಕಗಳನ್ನು ಮೈಗೂಡಿಸಿಕೊಂಡ ವೀರೇಶ್‍ಆಚಾರ್ ಭವಿಷ್ಯದಲ್ಲಿ ರಥಶಿಲ್ಪಿಯಾಗುತ್ತೇನೆ ಎಂಬ ಯಾವ ಕನಸನ್ನೂ ಕಂಡಿರಲಿಲ್ಲ. ಈತನಲ್ಲಿದ್ದ ಅಗಾಧ ಆಸಕ್ತಿ ಹಾಗೂ ಪರಿಶ್ರಮಗಳು ಈತನನ್ನು ಒಬ್ಬ ರಥಶಿಲ್ಪಯನ್ನಾಗಿಸಿದವು. ಜೊತೆಗೆ ಅನಕ್ಷರಸ್ಥ ತಂದೆ ಮೌನೇಶ್‍ಆಚಾರ್ ಇವರ ಮಾರ್ಗದರ್ಶನದಲ್ಲಿ ಬೆಳೆದು ಈಗ ‘ರಥವೀರ’ನಾಗಿ ಹೊರಹೊಮ್ಮಿದ್ದಾನೆ.
ಸವಾಲಾದ ಸಂಬಂಧ : ತಮ್ಮ ಕುಲಬಾಂಧವರೆಲ್ಲ ವಿವಿಧ ಕುಲಕಸಬುಗಳಲ್ಲಿ ತೊಡಗಿಕೊಂಡು ಉತ್ತಮ ಸ್ಥಿತಿಯಲ್ಲಿದ್ದರು. ಇದನ್ನು ಕಂಡ ತಂದೆಗೂ ತಾವೂ ಸಹ ಅವರಿಗಿಂತ ವಿಶೇಷವಾದುದನ್ನು ಸಾಧಿಸಿಬೇಕೆಂದು ಪಣ ತೊಟ್ಟರು. ಅದಕ್ಕೆ ಮಗ ವೀರೇಶ್‍ಆಚಾರ್ ತಂದೆಯ ಕನಸಿಗೆ ಕೈಜೋಡಿಸಿದರು.
ಬಡತನದಿಂದಾಗಿ 10ನೇ ತರಗತಿ ಓದಿದ ವೀರೇಶ್‍ಆಚಾರ್ ವಿದ್ಯಾಭ್ಯಾಸ ನಿಲ್ಲಿಸಿ ದುಡಿಮೆಯಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡಿದ. ಆದರೆ ತಂದೆ ತಾಯಿಯರಿಗೆ ಇದು ಇಷ್ಟವಿರಲಿಲ್ಲ. ಇನ್ನೂ ಮುಂದೆ ಓದಿಸಬೇಕೆಂಬ ಆಸೆ ಇತ್ತು. ಆಗ ಸ್ನೇಹಿತರೊಬ್ಬರು ಸೃಜನಶೀಲ ಕಲೆಯನ್ನು ಬೆಳೆಸಿಕೊಳ್ಳುವ ವಿದ್ಯಾಭ್ಯಾಸದ ಬಗ್ಗೆ ಸಲಹೆ ನೀಡಿದರು. ಇದರಿಂದ ಪ್ರೇರಿತನಾದ ವೀರೇಶ್‍ಆಚಾರ್ ಗದಗ ನಗರದ ಶ್ರೀವಿಜಯ ಕಲಾಮಂದಿರದಲ್ಲಿ 5 ವರ್ಷಗಳ ಚಿತ್ರಕಲಾ ಪದವಿ ಪಡೆದರು. ಇದು ಅವರ ಜೀವನಕ್ಕೆ ಹೊಸ ಮಾರ್ಗವೊಂದನ್ನು ಪರಿಚಯಿಸಿತು.
ಪದವಿಯ ನಂತರ ಕುಟುಂಬದಿಂದ ಹೊರ ಹೋಗಿ ದುಡಿಯುವ ಅನಿವಾರ್ಯತೆಯ ಜೊತೆಗೆ ಚಿಕ್ಕ ಸಹೋದರರಿಗೂ ಆಸರೆಯಾಗಿ ನಿಲ್ಲುವ ಮಹತ್ಕಾರ್ಯವೂ ಅನಿವಾರ್ಯವಾಗಿತ್ತು. ತಂದೆಯ ಮಾತಿನಂತೆ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಮರಕೆತ್ತನೆಯನ್ನೇ ಮುಂದುವರೆಸಿದನು.
ಹುಡುಕಿ ಬಂದ ಅವಕಾಶ : ಮರಕೆಲಸದಲ್ಲಿಯೇ ತನ್ನ ಕೌಶಲ್ಯತೆಯನ್ನು ಪ್ರದರ್ಶಿಸಿದ್ದ ವೀರೇಶ್‍ಆಚಾರ್‍ಗೆ ದೂರದೂರದಿಂದ ಕೆಲಸಗಳು ಅರಸಿ ಬಂದವು. ಸುಂದರವಾದ ಕದಗಳು. ಸೋಫಾ ಸೆಟ್‍ಗಳು, ಅಲಂಕಾರಿಕ ಡೈನಿಂಗ್ ಟೇಬಲ್ ಇತ್ಯಾದಿ ಕಾರ್ಯಗಳು ಭವಿಷ್ಯಕ್ಕೆ ಕೊಂಡಿಯಾಗಿದ್ದವು. ಕಳೆದ ಎಂಟು ವರ್ಷಗಳ ಹಿಂದೆ ಇವರ ಕೆಲಸವನ್ನು ಗಮನಿಸಿದ ಪಕ್ಕದ ಬಾವಿಹಳ್ಳಿ ಗ್ರಾಮಸ್ಥರು ರಥ ನಿರ್ಮಾಣಕ್ಕೆ ಪ್ರಸ್ಥಾವನೆ ಸಲ್ಲಿಸಿದರು. ಎಂದೂ ರಥ ನಿರ್ಮಾಣದ ಬಗ್ಗೆ ಕನಸು ಕಾಣದೇ ಇರುವಾಗ ದುತ್ತನೇ ಆಫರ್ ಕಣ್ಮುಂದೇ ಬಂದು ನಿಂತಾಗ ಇದು ಸಾಧ್ಯವೇ ಎನಿಸಿತು. ಆಗ ದೃಢಸಂಕಲ್ಪ ಮಾಡಿ ಆ ಕೆಲಸವನ್ನು ಒಪ್ಪಿಕೊಂಡರು. ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿ ಹದವರಿತು ಕಾಷ್ಠಕ್ಕೊಂದು ರೂಪು ನೀಡಿ ಸುಂದರವಾದ ರಥ ನಿರ್ಮಿಸಿಯೇ ಬಿಟ್ಟರು.
ಅಲ್ಲಿಂದ ಪ್ರಾರಂಭವಾದ ರಥ ನಿರ್ಮಾಣ ಕೆಲಸಗಳು ಒಂದರ ಮೇಲೊಂದು ಆಫರ್‍ನಂತೆ ಬರತೊಡಗಿವೆ. ಈಗಾಗಲೇ ಆರು ರಥಗಳನ್ನು ನಿರ್ಮಿಸಿದ ವೀರೇಶ್‍ಆಚಾರ್‍ಗೆ ಇನ್ನೆರಡು ರಥ ನಿರ್ಮಾಣಗಳಲ್ಲಿ ತೊಡಗಿದ್ದಾನೆ. ನಿರ್ಮಿಸಿದ ಆರು ರಥಗಳಲ್ಲಿನ ಕುಸುರಿ ಕೆಲಸ, ಸೂಕ್ಷ್ಮ ಕೆತ್ತನೆಗಳ ಕೈಚಳಕ ಅಮೋಘವಾಗಿದೆ. ಒಂದಕ್ಕಿಂತ ಇನ್ನೊಂದು ಭಿನ್ನವಾಗಿವೆ. ಪ್ರಸ್ತುತ ಇವರು ನಿರ್ಮಿಸಿದ ಸ್ವಗ್ರಾಮದ ಶ್ರೀಸಿದ್ದೇಶ್ವರ ಸ್ವಾಮಿಯ ನೂತನ ರಥೋತ್ಸವವು ಇದೇ ಜನವರಿ 29 ಕ್ಕೆ ವಿಜೃಂಭಣೆಯಿಂದ ಜರುಗಲಿದೆ. ಚಿತ್ರರಂಗದಲ್ಲಿನ ‘ರಥಾವರ’ ಚಿತ್ರವು ಶತದಿನೋತ್ಸವಗಳತ್ತ ದಾಪುಗಾಲು ಹಾಕುತ್ತಿದ್ದರೆ ವೀರೇಶ್‍ಆಚಾರ್ ಇವರ ರಥವು ಶತಮಾನಗಳವರೆಗೆ ಉರುಳಲು ಸಿದ್ದಗೊಂಡಿದೆ.
ಭವಿಷ್ಯದ ಕನಸು : ಅಂದು ರಥ ನಿರ್ಮಾಣದ ಕನಸು ಕಾಣದಿದ್ದರೂ ರಥ ನಿರ್ಮಾಣ ಕಾರ್ಯಕ್ಕೆ ಮುಂದಾದ ವೀರೇಶ್‍ಆಚಾರ್ ಭವಿಷ್ಯದಲ್ಲಿ ಉತ್ತಮ ಕಾಷ್ಠಶಿಲ್ಪಿಯಾಗುವ ಕನಸು ಹೊಂದಿದ್ದಾರೆ. ಜೊತೆಗೆ ಸಹೋದರರಿಗೂ ಉತ್ತಮ ವೃತ್ತಿ ಅವಕಾಶಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕಷ್ಟದಿಂದ ಬೆಳೆದು ಕಾಷ್ಠಶಿಲ್ಪಿಯಾಗಿದ್ದಕ್ಕೆ ತಂದೆ ಹಾಗೂ ಕುಟುಂಬದ ಸಹಕಾರವನ್ನು ನೆನೆಯುತ್ತಾರೆ. ಅಂತೆಯೇ ಗ್ರಾಮೀಣ ಪ್ರದೇಶದ ಅವಕಾಶ ವಂಚಿತ ಕ್ರಿಯಾಶೀಲ ಮನಸ್ಸುಗಳಿಗೆ ಉತ್ತಮ ದಾರಿ ತೋರುವ ಮಾರ್ಗದರ್ಶಿ ಆಗಬೇಕೆಂಬ ಮಹದಾಸೆ ಹೊಂದಿದ್ದಾರೆ. ಇವರ ಕನಸು ನನಸಾಗಲಿ, ಗ್ರಾಮೀಣ ಪ್ರತಿಭೆಗಳು ಎಲ್ಲೆಡೆ ಬೆಳಗಲಿ ಎಂದು ಆಶಿಸೋಣ.
ಆರ್.ಬಿ.ಗುರುಬಸವರಾಜ
No comments:
Post a Comment