March 14, 2016

ಪರೀಕ್ಷೆಗೆ ಟಾನಿಕ್ ನೀಡಿದ್ದೀರಾ!

ಮಾರ್ಚ್ 2016ರ 'ಕಸ್ತೂರಿ ಕಿರಣ' ಪಾಕ್ಷಿಕದಲ್ಲಿ ಪ್ರಕಟವಾದ ನನ್ನ ಲೇಖನ.

ಪರೀಕ್ಷೆಗೆ ಟಾನಿಕ್ ನೀಡಿದ್ದೀರಾ!

ಫೆಬ್ರವರಿ ಕಳೆದು ಮಾರ್ಚ್‍ಗೆ ಕಾಲಿಡುತ್ತಿದ್ದತೆ ಒಂದೆಡೆ ಬಿಸಿಲಿನ ಬಿಸಿ ಹೆಚ್ಚುತ್ತದೆ. ಇನ್ನೊಂದೆಡೆ ಪಾಲಕರಲ್ಲಿ ತಮ್ಮ ಮಕ್ಕಳ ಪರೀಕ್ಷಾ ಬಿಸಿ ಏರುತ್ತದೆ. ಹೌದು! ಪರೀಕ್ಷೆ ಎಂಬುದು ಮಕ್ಕಳಿಗಿಂತ ಪೋಷಕರಿಗೇ ಹೆಚ್ಚು ಒತ್ತಡ ತರುತ್ತದೆ. ತಮ್ಮ ಮಕ್ಕಳು ಇತರೆ ಮಕ್ಕಳಿಗಿಂತ ಹೆಚ್ಚು ಅಂಕ ಗಳಿಸಬೇಕು, ಫಸ್ಟ್ ರ್ಯಾಂಕ್ ಬರಬೇಕು, ಅವರ ಉತ್ತಮ ಫಲಿತಾಂಶದಿಂದ ಪ್ರಸಿದ್ದ ಕಾಲೇಜಿನಲ್ಲಿ  ಉಚಿತ ಸೀಟು ದೊರೆಯಬೇಕು, ಪತ್ರಿಕೆಗಳಲ್ಲಿ ತಮ್ಮ ಮಕ್ಕಳ ಜೊತೆ ತಮ್ಮ ಫೋಟೋ ಬರಬೇಕು ಎಂದೆಲ್ಲಾ ಆಸೆ, ಒತ್ತಾಸೆ ಇರುವುದು ಸಹಜ. ಆದರೆ ಈ ಆಸೆ ಒತ್ತಾಸೆಗಳಿಗೆ ಪಾಲಕರಾದ ನಾವು ಎಷ್ಟರ ಮಟ್ಟಿಗೆ ಮಕ್ಕಳನ್ನು ತಯಾರಿಸಿದ್ದೇವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಹುತೇಕ ಶೂನ್ಯ. ಮಕ್ಕಳ ಉತ್ತಮ ಫಲಿತಾಂಶದಲ್ಲಿ ಕೇವಲ ಮಕ್ಕಳ ಶ್ರಮವಿದ್ದರೆ ಸಾಲದು. ಪಾಲಕರೂ ಮಕ್ಕಳ ಶಿಕ್ಷಣದಲ್ಲಿ ಅಂದರೆ ಕಲಿಕೆಯಲ್ಲಿ ಒಂದು ಭಾಗವಾಗಿರಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. 
ಅದಕ್ಕಾಗಿ ಪಾಲಕರು ಕೆಲವು ವರ್ತನೆಗಳನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ಪರೀಕ್ಷೆಗೂ ಮೊದಲು ಮಕ್ಕಳನ್ನು ಮಾನಸಿಕವಾಗಿ ಸಿದ್ದಗೊಳಿಸಬೇಕಿದೆ. ಅಂದರೆ ಪರೀಕ್ಷೆಯ ಬಗ್ಗೆ ಅವರಲ್ಲಿರುವ ಭಯವನ್ನು ಮೊದಲು ಹೋಗಲಾಡಿಸುವುದು ಪ್ರತಿಯೊಬ್ಬ ಪಾಲಕರ ಆದ್ಯತೆಯಾಗಬೇಕು. ಪರೀಕ್ಷೆಗಳೇ ಜೀವನದ ಕೊನೆಯ ಗುರಿಯಲ್ಲ. ಪ್ರತೀ ಪೋಷಕರಿಗೂ ತಮ್ಮ ಮಕ್ಕಳ ಸಾಮಥ್ರ್ಯಗಳ ಅರಿವು ಇರಬೇಕು. ಮಕ್ಕಳು ಕಲಿಕೆಯಲ್ಲಿ ತೊಂದರೆ ಅನುಭವಿಸುವ ವಿಷಯಗಳು ಅಥವಾ ಪರಿಕಲ್ಪನೆಗಳ ಬಗ್ಗೆ ತಿಳಿದಿರಬೇಕು. ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸುವ ಮೂಲಕ ಈ ಕೊರತೆಗಳಿಗೆ ಕಾರಣಗಳನ್ನು ಪತ್ತೆ ಹಚ್ಚಿ ನಿವಾರಿಸಲು ಪ್ರಯತ್ನಿಸಬೇಕು. 
ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳ ಚಲನ ವಲನಗಳಲ್ಲಿ ವರ್ತನೆಗಳಲ್ಲಿ ಬದಲಾವಣೆಗಳಾಗುವುದು ಸಹಜ. ಈ ಬದಲಾವಣೆಗಳನ್ನು ಪೋಷಕರಾದ ನಾವು ಗುರುತಿಸಿ ಮಕ್ಕಳಲ್ಲಿ ಒತ್ತಡವನ್ನು ತುಂಬದೇ ಸಹಜ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಬೇಕು. ಮುಖ್ಯವಾಗಿ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಸಮಯಕ್ಕೆ ಸರಿಯಾಗಿ ಊಟ ಮತ್ತು ನಿದ್ರೆಗಳನ್ನು ಪೂರೈಸಲು ಅವಕಾಶ ನೀಡಬೇಕು. ಬೇಸಿಗೆಯ ದಿನಗಳಾದ್ದರಿಂದ ಸಾಧ್ಯವಾದಷ್ಟೂ ಪೌಷ್ಟಿಕಾಂಶವಿರುವ ದ್ರವ ರೂಪದ ಆಹಾರ ನೀಡಿ. ಮಕ್ಕಳು ಓದುವ ಕೊಠಡಿಯು ಸಾಕಷ್ಟು ಗಾಳಿ ಬೆಳಕಿನಿಂದ ಕೂಡಿದ್ದು, ಪ್ರಶಾಂತವಾಗಿರಬೇಕು. ಟಿ.ವಿ, ಕಂಪ್ಯೂಟರ್, ಮೊಬೈಲ್‍ಗಳಿಂದ ಮಕ್ಕಳನ್ನು ದೂರವಿಡಬೇಕು. ಪ್ರತಿದಿನ ಕನಿಷ್ಠ 3-4 ಗಂಟೆ ಮಕ್ಕಳ ಜೊತೆಗಿದ್ದು, ವಿದ್ಯಾಭ್ಯಾಸದ ಮೇಲೆ ನಿಗಾ ವಹಿಸಬೇಕು. 
ಸಾದ್ಯವಾದರೆ ಮಕ್ಕಳಿಗೆ ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಒದಗಿಸಿ ಕೊಟ್ಟು ಅವುಗಳನ್ನು ಬಿಡಿಸಲು ಸಹಾಯ ಮಾಡಬೇಕು. ಇದರಿಂದ ಮಕ್ಕಳಿಗೆ ತಮ್ಮ ಸಾಮಥ್ರ್ಯ ತಿಳಿಯುವುದಲ್ಲದೇ ಕೊರತೆಯ ಬಗ್ಗೆ ತಿಳಿಯುತ್ತದೆ.  ಇನ್ನೂ ತಯಾರಾಗಬೇಕಾದ ಅಂಶಗಳತ್ತ ಗಮನ ಹರಿಸಲು ಇದು ಸಹಾಯಕ. 
ಪರೀಕ್ಷಾ ಸಮಯದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳ ಮೇಲೆ ಹೇರಬೇಡಿ. ಇದು ಮಕ್ಕಳಲ್ಲಿ ನಕಾರಾತ್ಮಕ ಭಾವನೆ ಬೆಳೆದು ಪರೀಕ್ಷೆಗಳನ್ನೇ ಧಿಕ್ಕರಿಸುವ ಸಂದರ್ಭ ಬರುತ್ತವೆ. ಆದ್ದರಿಂದ ಪರೀಕ್ಷಾ ಸಮಯದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳಿಗೆ ತಿಳಿಸಬೇಡಿ. ಪ್ರತೀ ಮಗುವಿನ ಕಲಿಕಾ ಮಟ್ಟ ಬೇರೆ ಬೇರೆ ಆಗಿರುವುದರಿಂದ ನಿಮ್ಮ ಮಗುವನ್ನು ಉತ್ತಮ ಕಲಿಕೆಯಲ್ಲಿರುವ ಇನ್ನೊಂದು ಮಗುವಿನೊಂದಿಗೆ ಹೋಲಿಸಬೇಡಿ. 
ಪರೀಕ್ಷೆಯ ಸಮಯದಲ್ಲಿ ಹೆಚ್ಚು ಅಂಕಗಳಿಸುವಂತೆ ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಡ ಹೇರಬಾರದು. ಕೆಲವು ವೇಳೆ  ಒತ್ತಡವು ಮಕ್ಕಳ ಮನಸ್ಸಿನ ಮೇಲೆ ಅಹಿತಕರ ಪರಿಣಾಮ ಬೀರಿ ಮಕ್ಕಳಲ್ಲಿ ಅಘಾತಕಾರಿ ವರ್ತನೆಗಳು ಪ್ರಕಟಗೊಳ್ಳಬಹುದು. ಎಲ್ಲರೂ ಫಸ್ಟ್  ಬರಲು ಸಾಧ್ಯವಿಲ್ಲ, ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮಕ್ಕಳಿಗೆ ತಿಳಿಸಿ. ಪರೀಕ್ಷೆ ಸಮೀಪಿಸಿದಾಗ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಆ ತರಗತಿಗೆ ಮಕ್ಕಳು ಪ್ರವೇಶಿಸಿದಾಗಲೇ ಅವರ ಕಲಿಕೆಯ ಜೊತೆಗೆ ನಾವೂ ಭಾಗೀದಾರರಾಗಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಪರೀಕ್ಷಾ ಸಮಯದಲ್ಲಿ ಮಕ್ಕಳ ಮಾನಸಿಕ ಸ್ಥೈರ್ಯ ತುಂಬುವ ಪೋಷಕರಾಗೋಣ. ಪರೀಕ್ಷೆಯ ವೇಳೆ ಮಕ್ಕಳಿಗೆ ಪ್ರೀತಿ ವಿಶ್ವಾಸಗಳ ಕಾಳಜಿಯುತ ಟಾನಿಕ್ ನೀಡಬೇಕೇ ಹೊರತು ಮಕ್ಕಳ ಮನಸ್ಸನ್ನು ಮಲೀನಗೊಳಿಸುವ ಅಹಿತಕರಗೊಳಿಸವ ಅನಾರೋಗ್ಯಕರ ಔಷಧ ಅಲ್ಲ.  ಪರೀಕ್ಷಾ ಸಮಯದಲ್ಲಿ ಮಕ್ಕಳು ದ್ವೇಷಿಸುವ ಪೋಷಕರಾಗುವ ಬದಲು ಮಗುಸ್ನೇಹಿ ಪೋಷಕರಾಗೋಣ.
ಆರ್.ಬಿ.ಗುರುಬಸವರಾಜ


No comments:

Post a Comment