ಫೆಬ್ರವರಿ 2016 ರ 'ಹೊಸತು' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.
ಡಿಸೆಂಬರ್ 10 “ವಿಶ್ವ ಮಾನವ ಹಕ್ಕುಗಳ ದಿನ” ದ ನಿಮಿತ್ತ ಲೇಖನ
ಮಾನವ ಹಕ್ಕುಗಳ ಅಭಿಯಾನವಾಗಲಿ!
ಪ್ರತಿ ವರ್ಷ ಡಿಸೆಂಬರ್ 10 ನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಮಾನವ ಹಕ್ಕುಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಜನತೆಗೆ ಮಾನವ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ದಿನ ಇದಾಗಿದೆ. 1948 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 10 ನ್ನು ‘ಮಾನವ ಹಕ್ಕುಗಳ ದಿನ’ ಎಂದು ಘೋಷಣೆ ಮಾಡಲಾಯಿತು. ಅಂದಿನಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಲ್ಲವೂ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಪಣ ತೊಟ್ಟವು.
“ಎಲ್ಲಾ ಮಾನವರೂ ಹುಟ್ಟಿನಿಂದ ಸಮಾನರು. ಜಾತಿ, ವರ್ಣ, ಲಿಂಗ, ಭಾಷೆ, ಧರ್ಮ, ಆಸ್ತಿ ಅಥವಾ ಇತರ ಸ್ಥಿತಿಗಳ ಯಾವುದೇ ಪರಿಗಣನೆಗೆ ಒಳಗಾಗದೇ ಸಮಾನ ಹಕ್ಕು, ಗೌರವಗಳಿಗೆ ಎಲ್ಲರೂ ಪಾತ್ರರು” ಎಂಬುದು ಮಾನವ ಹಕ್ಕುಗಳ ಘೋಷಣೆಯಾಗಿದೆ.
ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ ರಕ್ಷಣೆಯೇ ಮಾನವ ಹಕ್ಕುಗಳ ಉದ್ದೇಶ. ಮಾನವ ಹಕ್ಕುಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಮೊದಲನೆ ವರ್ಗದಲ್ಲಿ ಬದುಕಿನ ಹಕ್ಕು, ಸ್ವಾತಂತ್ರದ ಹಕ್ಕು, ವ್ಯಕ್ತಿ ಭದ್ರತಾ ಹಕ್ಕು, ಆಲೋಚನಾ ಸ್ವಾತಂತ್ರದ ಹಕ್ಕು. ಎರಡನೇ ವರ್ಗದಲ್ಲಿ ಸಾಮಾಜಿಕ ಭದ್ರತೆಯ ಹಕ್ಕು, ದುಡಿಮೆಯ ಹಕ್ಕು, ವಿಶ್ರಾಂತಿಯ ಹಕ್ಕು, ಸಮರ್ಪಕ ಜೀವನ ನಡೆಸುವ ಹಕ್ಕು, ಹಾಗೂ ಶೈಕ್ಷಣಿಕ ಹಕ್ಕುಗಳು ಸೇರಿವೆ. ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು 14ನೇ ವಿಧಿಯಿಂದ 32ನೇ ವಿಧಿಯವರೆಗೆ ನೀಡಿರುವುದು ಗಮನಾರ್ಹ.
ಬಡತನ ನಿರ್ಮೂಲನೆ ಮತ್ತು ಮಾನವನ ಯೋಗಕ್ಷೇಮವನ್ನು ಉತ್ತಮ ಪಡಿಸುವುದು ಮಾನವ ಹಕ್ಕುಗಳ ದಿನಾಚರಣೆಯ ಪ್ರಮುಖ ಗುರಿ. ಜೊತೆಗೆ ಮಾನವ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಎಲ್ಲಾ ವರ್ಗ, ಸಮುದಾಯಗಳ ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರು, ಬಡವರು ಸೇರಿದಂತೆ ದುರ್ಬಲ ವರ್ಗಗಳ ಜನರ ಬದುಕನ್ನು ಹಸನಾಗಿಸಲು ಶ್ರಮಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ.
ಆದರೆ ಇಂದು ಮಾನವ ಹಕ್ಕುಗಳ ಕುರಿತು ಆಗಿರುವ ಮತ್ತು ಆಗುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಭವಿಷ್ಯ ಕರಾಳವೆನಿಸುತ್ತದೆ. ಏಕೆಂದರೆ ಮನುಷ್ಯನನ್ನು ಮಾನವ ಹಕ್ಕುಗಳಿಂದ ವಂಚಿಸುವುದು ಕ್ರೂರತ್ವವಾಗಿದೆ. ಇಂದು ಎಲ್ಲಾ ಮಾನವರ ಹಕ್ಕುಗಳು ಸುರಕ್ಷಿತವಾಗಿಲ್ಲ. ಅದರಲ್ಲೂ ಮಕ್ಕಳು ಮತ್ತು ಮಹಿಳೆಯರ ಜೀವನ ಅಭದ್ರವಾಗಿದೆ.
ಇಂದು ಬಹುತೇಕ ಮಾನವ ಹಕ್ಕುಗಳಿಂದ ಶೋಷಿತರಾಗುತ್ತಿರುವುದು ಕೆಳಹಂತದ ಸಾಮಾನ್ಯ ಜನರು ಎನ್ನುವುದು ಶೋಚನೀಯ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿರುವವರೇ ಶೋಷಿಸುತ್ತಿರುವವರು. ಮಾನವರೇ ಮಾನವರನ್ನು ಶೋಷಿಸುತ್ತಿರುವುದು ನಾಗರೀಕ ಸಮಾಜದ ಅಧಃಪತನವಲ್ಲವೇ? ಜನಸಾಮಾನ್ಯರಿಗೆ ಮಾನವ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಅಭಿವೃದ್ದಿಯಾಗುತ್ತಿರುವ ಭಾರತದ ದುರಂತ. ಭಾರತದಲ್ಲಿ ಮಕ್ಕಳ ಅದರಲ್ಲೂ ಬಾಲಕಿಯರ ಹಾಗೂ ಮಹಿಳೆಯರ ಹಕ್ಕುಗಳಿಗೆ ಯಾವುದೇ ಕಿಮ್ಮತ್ತಿಲ್ಲ ಎನ್ನುವುದನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಅಪರಾಧಿಗಳಿಗೆ ಎಷ್ಟೇ ಶಿಕ್ಷೆ ನೀಡಿದರೂ ಸಹ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿಲ್ಲ. ಸರಕಾರಿ ಅಂಕಿ-ಅಂಶಗಳ ಪ್ರಕಾರ ಶಿಕ್ಷೆ ಜಾರಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಶೇಕಡಾ 5 ರಷ್ಟು ಮಾತ್ರ. ಇನ್ನುಳಿದ ಶೇಕಡಾ 95 ರಷ್ಟು ಪ್ರಕರಣಗಳು ರಾಜಕೀಯ ಅಥವಾ ಇನ್ನಾವುದೋ ಪ್ರಭಾವದಿಂದಾಗಿ ಮುಚ್ಚಿಹಾಕಲ್ಪಡುತ್ತವೆ ಅಥವಾ ವಜಾಗೊಳಿಸಲ್ಪಡುತ್ತವೆ.
ಮಹಿಳಾ ದೌರ್ಜನ್ಯದಲ್ಲಿ ದೇಶದ ರಾಜಧಾನಿ ದೆಹಲಿ ಒಂದನೇ ಸ್ಥಾನದಲ್ಲಿದ್ದರೆ, ರಾಜ್ಯದ ರಾಜಧಾನಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇತ್ತೀಚಿಗೆ ಇಡೀ ರಾಜ್ಯದ ಮೂಲೆ ಮೂಲೆಗಳಲ್ಲೂ ಸಹ ಅಪರಾಧ ಪ್ರಕರಣಗಳು ಹೆಚ್ಚಿವೆ. ಅಂದರೆ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಇದಕ್ಕೆಲ್ಲಾ ಕಾರಣ ಮಾನವ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ಜನಜಾಗೃತಿ ಇಲ್ಲದಿರುವುದು. ದೃಶ್ಯ ಮಾಧ್ಯಮಗಳೂ ಸಹ ಅಪರಾಧ ಹೆಚ್ಚಾಗಲು ಕಾರಣವಾಗಿವೆ ಎಂದರೆ ಅತಿಶಯೋಕ್ತಿಯೇನಲ್ಲ. ದೃಶ್ಯ ಮಾಧ್ಯಮಗಳು ಅತ್ಯಾಚಾರ ಪ್ರಕರಣಕ್ಕೆ ಪ್ರಚಾರ ಕೊಟ್ಟು ಮುನ್ನಲೆಗೆ ಬರುವಂತೆ ಮಾಡಲು ಎಷ್ಟು ಕಾರಣವಾದವೂ, ಅನ್ಯಾಯ, ಅಕ್ರಮ, ಅತ್ಯಾಚಾರಗಳಂತಹ ಹೇಯ ಕೃತ್ಯಗಳು ನಡೆಯಲು ಅಷ್ಟೇ ಕಾರಣವಾಗಿವೆ.
ಇಂದಿನ ಅಸಂಖ್ಯಾತ ಚಾನಲ್ಲುಗಳ ಸೀರಿಯಲ್ಲುಗಳಲ್ಲಿ, ಜಾಹೀರಾತುಗಳಲ್ಲಿ, ಕೆಟ್ಟ ಸಿನೇಮಾಗಳಲ್ಲಿ, ರಿಯಾಲಿಟಿ ಷೋಗಳಲ್ಲಿ ಹೆಣ್ಣನ್ನು ಒಂದು ರುಚಿಯಾದ ತಿನಿಸು ಎಂಬಂತೆ ಪ್ರತಿಬಿಂಬಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ. ಕೆಟ್ಟದ್ದನ್ನು ಒಳ್ಳೆಯದನ್ನಾಗಿ, ಅನವಶ್ಯಕವಾದುದನ್ನು ಅವಶ್ಯಕವನ್ನಾಗಿ, ಅಶ್ಲೀಲವನ್ನು ಶೀಲವನ್ನಾಗಿ, ಅನರ್ಥವನ್ನು ಅರ್ಥವನ್ನಾಗಿಸಿ ಅಹಿತಕರವಾದುದನ್ನು ವೈಭವೀಕರಿಸಿ ತೋರಿಸುತ್ತಿರುವುದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಲು ಕಾರಣವಾಗಿವೆ.
ಅಪರಾಧಗಳು ಹೆಚ್ಚಲು ಅಂತರ್ಜಾಲ ತಾಣಗಳೂ ಸಹ ಕಾರಣವಾಗಿವೆ. ಅಶ್ಲೀಲ ಜಾಲತಾಣ ವೀಕ್ಷಣೆಯಲ್ಲಿ ಭಾರತೀಯರೇ ಮುಂದು ಎನ್ನುತ್ತದೆ ಒಂದು ಸರ್ವೆ. ಕಾಮಕೇಳಿಯ ಅಶ್ಲೀಲ ದೃಶ್ಯಗಳು ಇಂದಿನ ಯುವಕರ ಫೆವರಿಟ್ ಡಾಕ್ಯುಮೆಂಟ್ ಆಗಿವೆ. ಇಂತಹ ಅಶ್ಲೀಲ ದೃಶ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಅನೇಕ ಆಪ್‍ಗಳಿವೆ. ಇವೆಲ್ಲವೂ ಅಪರಾಧ ಹೆಚ್ಚಲು ಕಾರಣವಾಗಿವೆ. ಎಲ್ಲೆಲ್ಲಿ ಅಪರಾಧಗಳು ನಡೆಯುತ್ತವೆಯೋ ಅಲ್ಲೆಲ್ಲಾ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತವೆ ಎಂಬುದನ್ನು ನಾವು ಗಮನಿಸಬೇಕಿದೆ.
ಮಾನವ ಹಕ್ಕುಗಳ ಕುರಿತು ಈಗ ಆಗಿರುವ ಮತ್ತು ಆಗುತ್ತಿರುವ ಕಹಿ ಘಟನೆಗಳನ್ನು ಕುರಿತು ಚಿಂತಿಸುವ ಬದಲು ಆಗಬೇಕಾದ ಕಾರ್ಯಗಳತ್ತ ಚಿತ್ತ ಹರಿಸಬೇಕಿದೆ. ಜನಪರ ಆಡಳಿತದ ಮೂಲಕ ದುಡಿದುಣ್ಣುವ ಜನರ ಬದುಕನ್ನು ಹಸನಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಮಹಿಳೆಯರು, ಮಕ್ಕಳು ಅದರಲ್ಲೂ ಬಾಲಕಿಯರ ಕುರಿತಂತೆ ಸಮಾಜದ ರೋಗಗ್ರಸ್ಥ ಮನೋಸ್ಥಿತಿಯನ್ನು ಸರಿಪಡಿಸಬೇಕು. ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಪೌರಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತೆಯರು, ಗಾಮೆರ್ಂಂಟ್ಸ್, ಮನೆಗೆಲಸದವರು, ಬೀಡಿ ಕಟ್ಟುವವವರು, ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು.
ಪ್ರಜಾತಂತ್ರದ ಉಸಿರನ್ನೇ ಹತ್ತಿಕ್ಕಲು ಪ್ರಯತ್ನಿಸುವ ತುರ್ತು ಪರಿಸ್ಥಿತಿ, ಕೋಮುದಳ್ಳುರಿ, ನರಮೇಧ, ಭ್ರಷ್ಟಾಚಾರ, ಮೌಢ್ಯತೆಗಳನ್ನು ನಿರ್ಮೂಲನೆ ಮಾಡಬೇಕು. ಸರಕಾರಿ ವ್ಯವಸ್ಥೆಯನ್ನು ಅಲುಗಾಡಿಸುತ್ತಿರುವ ಖಾಸಗೀ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಅನ್ಯಾಯ, ಅತ್ಯಾಚಾರ, ದೌರ್ಜನ್ಯಗಳಿಂದ ನೊಂದವರಿಗೆ ಸಂವಿಧಾನ ನೀಡಿದ ಮಾನವ ಹಕ್ಕು ಕಾಯ್ದೆಯಡಿ ಪರಿಹಾರ ನೀಡಬೇಕು. ಅಶ್ಲೀಲ ಜಾಲತಾಣ ವೀಕ್ಷಣೆಗೆ ಸೂಕ್ತ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ದುರಂತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ.
ಮಾನವ ಹಕ್ಕುಗಳ ದಿನ ಕೇವಲ ಆಚರಣೆ ಮಾತ್ರ ಸೀಮಿತವಾಗಬಾರದು. ಮಾನವ ಹಕ್ಕುಗಳ ಕುರಿತ ಜಾಗೃತಿ ಅಭಿಯಾನವಾಗಬೇಕು. ಯಾರಿಗೆ ಈ ಹಕ್ಕುಗಳ ಬಗ್ಗೆ ತಿಳಿಸಿಕೊಡಬೇಕೋ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಅಂದರೆ ಶೋಷಿತರನ್ನು, ದೀನ ದಲಿತರನ್ನು, ಬಡವರನ್ನು, ನಿರ್ಗತಿಕರನ್ನು, ಅಂಗವಿಕಲರನ್ನು ಆಹ್ವಾನಿಸಿ ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬ ನಾಗರೀಕರನ್ನೂ ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ನೈತಿಕವಾಗಿ, ಸಾಂಸ್ಕøತಿಕವಾಗಿ ಸಶಕ್ತರನ್ನಾಗಿಸಲು ಪಣ ತೊಡಬೇಕು. ಅಂದಾಗ ಮಾತ್ರ ಈ ಆಚರಣೆಗೆ ಒಂದು ಗಟ್ಟಿಯಾದ ನೆಲೆ, ಬೆಲೆ ಸಿಗುತ್ತದೆ. ಪ್ರತಿಯೊಂದು ಹಳ್ಳಿ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ಎಲ್ಲಾ ಹಂತಗಳಲ್ಲೂ ಮಾನವ ಹಕ್ಕು ಚಳುವಳಿಯ ಕಾವು ಹೆಚ್ಚಬೇಕು. ಮಾನವ ಹಕ್ಕು ದಿನಾಚರಣೆಯು ಉತ್ತಮ ವಿಶ್ವ ಸೃಷ್ಟಿಸುವ ಮಾನವೀಯತೆಯ ಹೋರಾಟ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಪ್ರತಿದಿನವೂ ಎಲ್ಲಾ ಮಾನವರೂ ಮಾನವ ಹಕ್ಕುಗಳನ್ನು ಅನುಭವಿಸುವಂತಾಗಬೇಕು. ಅಂದಾಗ ಮಾತ್ರ ಸುಖೀ ರಾಜ್ಯದ ಕನಸು ನನಸಾಗುತ್ತದೆ.
ಆತ್ಮಬಲ ಹೆಚ್ಚಿಸಿಕೊಳ್ಳಲು ಇದು ಸಕಾಲವಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರೀಕರೂ ಸಜ್ಜಾಗಬೇಕು ಅಲ್ಲವೇ? ಮಹಾನ್ ಮಾನವತಾವಾದಿ, ಚಿಂತಕ ಕಾರ್ಲ್‍ಮಾಕ್ಸ್ ಹೇಳುವಂತೆ “ ಮಾನವ ಕುಲದ ಒಳಿತಿಗಾಗಿ ಎಲ್ಲದಕ್ಕಿಂತ ಹೆಚ್ಚು ದುಡಿಯುವುದಕ್ಕೆ ಅವಕಾಶವಿರುವಂಥ ಕೆಲಸವನ್ನು ಆರಿಸಿಕೊಳ್ಳಲು ನಮಗೆ ಸಾಧ್ಯವಾದರೆ, ಎಂಥ ಕಷ್ಟದ ಭಾರವೂ ನಮ್ಮನ್ನು ಬಗ್ಗಿಸಲಾರದು”. ಅಂದರೆ ಮಾನವ ಜನಾಂಗದ ಪ್ರಗತಿಗಾಗಿ ಸಮಾನತೆಯ ಹೋರಾಟದಲ್ಲಿ ಎಂತಹ ಕಷ್ಟಗಳು ಬಂದರೂ ಧೈರ್ಯದಿಂದ ಕೆಲಸಮಾಡುವುದೇ ಪರಮಸಂತೋಷ ಎಂಬ ಅವರ ಮಾತು ಮಾನವ ಹಕ್ಕುಗಳನ್ನು ಸಂರಕ್ಷಿಸಲು ಸ್ಫೂರ್ತಿಯ ಸೆಲೆ ಅಲ್ಲವೇ?
ಆರ್.ಬಿ.ಗುರುಬಸವರಾಜ
No comments:
Post a Comment