March 14, 2016

ಶ್ರೀಸಿದ್ದೇಶ್ವರನ ನೂತನ ರಥೋತ್ಸವ HOLAGUNDI SIDDESHWARA

ದಿನಾಂಕ 28-01-2016ರಂದು 'ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ಲೇಖನ.
ಜನವರಿ 29 ಕ್ಕೆ ನೂತನ ರಥೋತ್ಸವದ ನಿಮಿತ್ತ ಲೇಖನ    

ನೋಡಬನ್ನಿ ಶ್ರೀಸಿದ್ದೇಶ್ವರನ ನೂತನ ರಥೋತ್ಸವ


ಸಂಸ್ಕøತಿ ಎನ್ನುವುದು ಸಮೂಹಸಮ್ಮತ ಜೀವನಪದ್ದತಿಯಾಗಿದೆ. ಇಂತಹ ಸಂಸ್ಕøತಿಯ ಪ್ರತೀಕವೇ ಆಗಿರುವ ದೇವಾಲಯಗಳು ಉತ್ಸವಗಳ ಹೆಸರಿನಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವ ಮಹತ್ಕಾರ್ಯ ಮಾಡುತ್ತಿವೆ. ರಥಕ್ಕೂ ದೇವಾಲಯಕ್ಕೂ ತೀರಾ ಹತ್ತಿರದ ನಂಟು. ರಥವೆಂದರೆ ನಡೆದಾಡುವ ದೇಗುಲವಿದ್ದಂತೆ. ದೇವಾಲಯಗಳ ಉತ್ಸವದ ಪ್ರತೀಕವಾಗಿ ಬಳಸುವ ರಥ ದೇವರ ವಾಹನವೇ ಆಗಿರುತ್ತದೆ ಎನ್ನುವುದು ಪರಂಪರಾಗತ ನಂಬಿಕೆ. ಅದರಂತೆ ಬಳ್ಳಾರಿ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಪ್ರಸಿದ್ದ ಪ್ರವಾಸಿ ಹಾಗೂ ಪೌರಾಣಿಕ ತಾಣಗಳಲ್ಲಿ ಒಂದಾದ ಹೊಳಗುಂದಿಯ ಶ್ರೀಸಿದ್ದೇಶ್ವರ ಸ್ವಾಮಿಯ ನೂತನ ರಥೋತ್ಸವದ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ಇದೇ ಜನವರಿ 29ಕ್ಕೆ ಸಂಜೆ 5 ಗಂಟೆಗೆ ಸಕಲ ವಾದ್ಯಗಳಿಂದ ನೂತನ ರಥೋತ್ಸವ ನಡೆಯಲಿದೆ. ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ರಥವು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಈಗ ನೂತನ ರಥ ನಿರ್ಮಾಣವಾಗಿದೆ.
ನೂತನ ರಥದ ನಿರ್ಮಾತೃಗಳು: ರಥವು ಇದೇ ಗ್ರಾಮದ ಕಾಷ್ಠಶಿಲ್ಪಿಗಳಾದ ಮೌನೇಶ್‍ಆಚಾರ್, ಮಗ ವೀರೇಶ್‍ಆಚಾರ್ ಹಾಗೂ ಸಹೋದರರಿಂದ ನಿರ್ಮಾಣಗೊಂಡಿದ್ದು, ಕಲಾತ್ಮಕ ಕುಸುರಿ ಕೆತ್ತನೆಯಿಂದ ಕೂಡಿದೆ. 14 ಅಡಿ ಅಗಲ 14 ಅಡಿ ಉದ್ದ ಹಾಗೂ 15 ಅಡಿ ಎತ್ತರವುಳ್ಳ ಗಡ್ಡಿರಥವು ನವೀನ ಶೈಲಿಯಲ್ಲಿ ರೂಪುಗೊಂಡಿದೆ. 5 ಮಂಟಪ(ಅಂತಸ್ತು)ಗಳು ಹಾಗೂ ಕಳಸ ಸೇರಿ ಒಟ್ಟು 50 ಅಡಿ ಎತ್ತರದ ಸಾಲಂಕೃತ ರಥವನ್ನು ಎಳೆಯಲಾಗುತ್ತದೆ. 
ಕಲ್ಲಿನ ಗಾಲಿಗಳ ಮೇಲಿನ ಅದಿಷ್ಠಾನವು ಚೌಕಾಕಾರವಾಗಿದ್ದು, ಬಲಿಷ್ಠವಾದ, ಗಟ್ಟಿಮುಟ್ಟಾದ ಹಾಗೂ ಬೆಲೆಬಾಳುವ ಕಟ್ಟಿಗೆಯಲ್ಲಿ ನಿರ್ಮಾಣಗೊಂಡಿದೆ. ಅಧಿಷ್ಠಾನದ ತೊಲೆಗಳಲ್ಲಿ ಅತ್ಯಾಕರ್ಷಕವಾದ ಆನೆಯ ಚಿತ್ರಗಳನ್ನು ಕೆತ್ತಲಾಗಿದ್ದು, ನೋಡುಗರಿಗೆ ಆನೆಗಳು ರಥವನ್ನು ಎಳೆದೊಯ್ಯುತ್ತವೆ ಎಂಬಂತೆ ಭಾಸವಾಗುತ್ತದೆ. ಶಿಲ್ಪಿಗಳ ಹೃದಯಾಂತರಾಳದಿಂದ ನಿರ್ಮಾಣಗೊಂಡ ಈ ರಥವು ಅವರ  ಕಲ್ಪನೆ, ಪ್ರತಿಭಾಸಾಮಥ್ರ್ಯ ಹಾಗೂ ಸತತ ಪರಿಶ್ರಮಗಳ ದ್ಯೋತಕವಾಗಿದೆ.
ವೈವಿಧ್ಯಮಯ ಕೆತ್ತನೆ: ಅಧಿಷ್ಠಾನದ ಮೇಲಿನ ನಡುಪಟ್ಟಿ ಭಾಗದಲ್ಲಿ ಅನೇಕ ಚಿತ್ರಗಳನ್ನು ಕೆತ್ತಲಾಗಿದ್ದು, ಇಡೀ ರಥಕ್ಕೆ ಶೋಭೆಯನ್ನು ತಂದಿವೆ. ಇದರಲ್ಲಿ ಮೃದುವಾದ ಕಟ್ಟಿಗೆಯಿಂದ ವಿಘ್ನೇಶ್ವರ, ಆದಿಶಕ್ತಿ, ವೀರಭದ್ರ, ಬ್ರಹ್ಮ, ವಿಷ್ಣು, ಮಹೇಶ್ವರ, ಷಣ್ಮುಖ, ಶರಣಬಸವೇಶ್ವರರು, ಬಸವಣ್ಣ ಹೀಗೆ ವಿವಿಧ ದೇವತೆಗಳು, ವಚನಕಾರರು ಹಾಗೂ ಮೈಥುನಗಳ ಮೂರು ಆಯಾಮದ  ಚಿತ್ರಗಳನ್ನು ಕೆತ್ತಲಾಗಿದೆ. 9 ಇಂಚಿನಿಂದ 18 ಇಂಚಿನವರೆಗೆ ವಿವಿಧ ಗಾತ್ರಗಳ ಕೆತ್ತನೆ ಚಿತ್ರಗಳು ಕಲಾರಸಿಕರಿಗೆ ರಸದೌತಣ ನೀಡುತ್ತವೆ. ಇಲ್ಲಿ ಕಾಷ್ಠಕಲೆಯ ಪರಾಕಾಷ್ಠತೆಯನ್ನು ಕಾಣಬಹುದು. 
ಗಡ್ಡಿಯ ಮಧ್ಯಭಾಗದಲ್ಲಿ ಕಲಾತ್ಮಕ ಕಂಬಗಳನ್ನು ಹಾಗೂ ಕಮಾನುಗಳನ್ನು ಕೆತ್ತಲಾಗಿದೆ. ಅಲ್ಲಲ್ಲಿ ಹಿತ್ತಾಳೆಯ ಗಂಟೆಗಳನ್ನು ಸೌಂದರ್ಯ ಮತ್ತು ನಿನಾದಕ್ಕಾಗಿ ಬಳಸಲಾಗಿದೆ. ಗಡ್ಡಿಯು ಕೆಳಭಾಗವು ಚಿಕ್ಕದಾಗಿದ್ದು ಹಂತಹಂತವಾಗಿ ಮೇಲ್ಭಾಗಕ್ಕೆ ಹೋದಂತೆ ವಿಶಾಲವಾಗುತ್ತಾ ಹೋಗಿರುವುದು ರಥದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. 
ಹಣೆಪಟ್ಟಿಯಲ್ಲಿ ಅಷ್ಟದಿಕ್ಪಾಲಕರು, ವಿವಿಧ ಧರ್ಮಗಳ ಹೆಗ್ಗುರುತುಗಳುಳ್ಳ ಚಿತ್ರಗಳನ್ನು ಕೆತ್ತಲಾಗಿದ್ದು ಸಮಾನತೆಯ ಮಂತ್ರ ಜಪಿಸಲಾಗಿದೆ. ಇಲ್ಲಿ ವಿವಿಧ ಪ್ರಾಣಿ ಪಕ್ಷಿಗಳ ಚಿತ್ರ, ಕೀರ್ತಿಮುಖ, ತರು ಲತೆ ಬಳ್ಳಿಗಳ ಕೆತ್ತನೆಗಳಿವೆ. ಕೆತ್ತನೆಗೆ ಅನುರೂಪವಾದ ವರ್ಣದ ಟಚಪ್ ನೀಡಲಾಗಿದೆ. ಇಲ್ಲಿನ ಕಲೆಯನ್ನು ಗಮನಿಸಿದರೆ ಶಿಲ್ಪಿಗಳು ಅತ್ಯಪೂರ್ವ ಅಲೌಕಿಕ ಕಲೆಯನ್ನು ಸಿದ್ದಿಸಿಕೊಂಡಿರುವುದು ವೇದ್ಯವಾಗುತ್ತದೆ. ಇಲ್ಲಿನ ಕೆತ್ತನೆಗಳಲ್ಲಿ ಪ್ರಸಿದ್ದ ದೇವಾಲಯಗಳ ವಾಸ್ತುಶಿಲ್ಪದ ಪ್ರಭಾವ ಇದ್ದರೂ ಸ್ವತಂತ್ರ ಕಲಾಕೃತಿಗಳಾದ್ದರಿಂದ ಸ್ವಂತಿಕೆಯೂ ಎದ್ದು ಕಾಣುತ್ತದೆ. ಒಟ್ಟಾರೆ ರಥವು ಶೃಂಗಾರ ವೈಭವದಿಂದ ಕೂಡಿದ್ದು ಸುಂದರಕಾವ್ಯವಾಗಿ ಹೊರಹೊಮ್ಮಿದೆ. 
ಕನ್ನಡನಾಡು ಅಸಂಖ್ಯ ರಥಗಳ ನಾಡಾದಂತೆ ಹೊಸ ಹೊಸ ರಥಶಿಲ್ಪಿಗಳನ್ನು ಸೃಷ್ಟಿಸುವ ನೆಲೆಬೀಡೂ ಆಗಿರುವುದು ಸಂತೋಷದ ಸಂಗತಿ. ಇಲ್ಲಿನ ಶಿಲ್ಪಿಗಳು ಈಗಾಗಲೇ ಆರೇಳು ರಥಗಳನ್ನು ನಿರ್ಮಿಸಿದ್ದು, ಒಂದಕ್ಕಿಂತ ಇನ್ನೊಂದು ರೂಪು, ಆಕಾರ, ವೈಭವಾತ್ಮಕ ಕೆತ್ತನೆಯಲ್ಲಿ ಭಿನ್ನವಾಗಿವೆ. ಕಷ್ಟದಲ್ಲೇ ಬೆಳದ ಇವರು ಪ್ರಸಿದ್ದ ಕಾಷ್ಠಶಿಲ್ಪಿಗಳಾಗಿ ಹೊರಹೊಮ್ಮುತ್ತಿದ್ದಾರೆ. 
ವಿಶೇಷ ಕಾರ್ಯಕ್ರಮಗಳು: ನೂತನ ರಥೋತ್ಸವದ ಅಂಗವಾಗಿ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ವಿವಿಧ ಮಠಾಧಿಪತಿಗಳು ಹಾಗೂ ಖ್ಯಾತ ಉಪನ್ಯಾಸಕರಿಂದ  ಜೀವನ ದರ್ಶನ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಜೊತೆಗೆ 30ರಂದು ಬೆಳಿಗ್ಗೆ 11 ಗಂಟೆಗೆ ಶ್ರೀಸಿದ್ದೇಶ್ವರನ ಅಗ್ನಿಯು ವಿಜೃಂಭಣೆಯಿಂದ ನಡೆಯಲಿದೆ. ನಂತರ ಮೂರು ದಿನಗಳ ಕಾಲ ಅದ್ದೂರಿ ಜಾತ್ರೆ ನಡೆಯುತ್ತದೆ. ರಥೋತ್ಸವ ಮತ್ತು ಅಗ್ನಿಗೆ ಆಗಮಿಸುವ ಅಪಾರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆ ನೀಡಿದ್ದಾರೆ. 
ಎಲ್ಲಿದೆ? ಹೋಗುವುದು ಹೇಗೆ?:   ಹೊಳಗುಂದಿಯು ಹೂವಿನಹಡಗಲಿ ತಾಲೂಕಿನ ಪ್ರಮುಖ ಗ್ರಾಮವಾಗಿದ್ದು ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಹರಪನಹಳ್ಳಿಗಳಿಂದ ಸಂಚರಿಸಲು ಸೂಕ್ತ ರಸ್ತೆಗಳಿದ್ದು, ಸಾಕಷ್ಟು ಬಸ್‍ಗಳ ವ್ಯವಸ್ಥೆ ಇದೆ. 

ಕ್ಷೇತ್ರದ ವಿಶೇಷತೆ: ಶ್ರೀಕ್ಷೇತ್ರವು ಐತಿಹಾಸಿಕ ಗ್ರಾಮವಾಗಿದ್ದು, ‘ಪೊಳಲಗುಂದಿ’ ಎಂಬ ಹೆಸರಿನಿಂದ ಪ್ರಖ್ಯಾತಿಯಾಗಿತ್ತು ಎಂಬುದಕ್ಕೆ ಇಲ್ಲಿನ ಸೋಮೇಶ್ವರ ಹಾಗೂ ಬಳ್ಳೇಶ್ವರ ದೇವಾಲಯಗಳ ಶಾಸನದಿಂದ ತಿಳಿದು ಬರುತ್ತದೆ. ಸದ್ರಿ ಸಿದ್ದೇಶ್ವರ ದೇವಸ್ಥಾನವು ಗ್ರಾಮದ ಬಳಿಯ ಬೆಟ್ಟದ ಮೇಲಿದ್ದು, ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಅಲ್ಲದೇ ಗ್ರಾಮದಲ್ಲಿ ಎರಡು ಕಲ್ಯಾಣಿ ಚಾಲುಕ್ಯರ ಕಾಲದ ದೇವಾಲಯಗಳಿದ್ದು ಐತಿಹಾಸಿಕತೆಯನ್ನು ಸಾರುತ್ತಿವೆ. ಜೊತೆಗೆ ತಾಲೂಕಿನ ಅತೀ ಹೆಚ್ಚು ಸರ್ಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಶಿಕ್ಷಕರು ಇರುವ ಗ್ರಾಮ ಎಂಬ ಕಿರೀಟವೂ ಇದೆ.

ಆರ್.ಬಿ.ಗುರುಬಸವರಾಜ


No comments:

Post a Comment