December 11, 2021

ಕುತೂಹಲ ಕುಂದಿಸಬೇಡಿ,,,

  ದಿನಾಂಕ 09-05-2019ರ ಸುಧಾ ದಲ್ಲಿ ಹಾಗೂ 10-12-2019ರ ವಿಜಯವಾಣಿಯ ಲಲಿತಾ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ. 


ಕುತೂಹಲ ಕುಂದಿಸಬೇಡಿ,,,





ತಾಯಿಯ ಜೊತೆ ಮಾರ್ಕೆಟ್‌ಗೆ ಹೋದ ಮಗು ಅಮ್ಮ ಅದೇನು? ಅದೇಕೆ ಹೀಗೆ? ಅವರೇನು ಮಾಡುತ್ತಿದ್ದಾರೆ? ಅವರ ಉಡುಪು ಹೀಗೇಕೆ? ಇತ್ಯಾದಿಯಾಗಿ ಪ್ರಶ್ನಿಸುತ್ತದೆ. ಅಲ್ಲಿ ತಾನು ನೋಡಿದ ಪ್ರತಿ ವಸ್ತು ಹಾಗೂ ವಿಭಿನ್ನ ವ್ಯಕ್ತಿತ್ವಗಳನ್ನು ಪ್ರಶ್ನಿಸತೊಡಗುತ್ತದೆ. ಮನೆಯಿಂದ ಪ್ರಾರಂಭವಾದ ಪ್ರಶ್ನೆಗಳು ವಾಪಾಸ್ಸು ಮನೆಗೆ ಬಂದರೂ ನಿಲ್ಲುವುದಿಲ್ಲ. ಇದಕ್ಕೆಲ್ಲಾ ಕಾರಣ ಮಗುವಿನ ಕುತೂಹಲ. ಮಗುವಿನ ಪ್ರತೀ ಕುತೂಹಲದ ವೀಕ್ಷಣೆಯು ಪ್ರಶ್ನೆಯ ಮೂಲಕ ಸೂಕ್ತ ಉತ್ತರದಲ್ಲಿ ಅಂತ್ಯವಾಗುತ್ತದೆ. ಆಗ ಹೊಸ ಹಾಗೂ ಸಂತಸದ ಕಲಿಕೆ ಮಗುವಿನಲ್ಲಿ ಉಂಟಾಗಿರುತ್ತದೆ. 

    ಮಗು ಹೊಸತನ್ನು ನೋಡಿದಾಗ ಅದನ್ನು ಅನ್ವೇಷಿಸಲು ಬಯಸುತ್ತದೆ. ಕಿಟಕಿಯಿಂದ ಒಳ ಬರುವ ಬೆಳಕಿನ ಕಿರಣಗಳನ್ನು ಹಿಡಿಯಲು ಪ್ರತ್ನಿಸುವ ಮಗು ಅದು ಕೈಗೆ ಸಿಗದಿದ್ದಾಗ ಪ್ರಶ್ನಿಸುತ್ತದೆ. ಬೆಂಕಿಯನ್ನು ಮುಟ್ಟಿ ಕೈಸುಟ್ಟುಕೊಂಡ ನಂತರವೇ ಅದು ಉತ್ತರ ಕಂಡುಕೊಳ್ಳುತ್ತದೆ. ಬೇರೆ ಬೇರೆ ಆಕಾರದ ಪಾತ್ರೆಯೊಳಗೆ ನೀರನ್ನು ಹಾಕಿ ನೀರಿನ ದ್ರವ್ಯರಾಶಿ ಮತ್ತು ಪರಿಮಾಣದ ಬಗ್ಗೆ ತನ್ನದೇ ಆದ ವ್ಯಾಖ್ಯಾನ ನೀಡುತ್ತದೆ. ಚಾಕೋಲೇಟ್‌ನ ಮಾಧುರ್ಯ, ನಿಂಬೆಯ ಹುಳಿ, ಬೆಂಕಿಯ ಶಾಖ, ಐಸ್‌ಕ್ರೀಮ್‌ನ ಶೀತ ಎಲ್ಲವನ್ನೂ ಕುತೂಹಲ ಕಣ್ಣುಗಳಿಂದ ನೋಡಿ ಅನುಭವಿಸಿ ತಿಳಿಯುತ್ತದೆ. ಅಚ್ಚರಿಯೊಂದಿಗೆ ಖುಷಿಪಡುತ್ತದೆ. ಆ ಮೂಲಕ ಕಲಿಯುತ್ತದೆ. ಹುಟ್ಟಿನಿಂದ ಪ್ರಾರಂಭವಾಗುವ ಮಾನವನ ಕುತೂಹಲದ ಗುಣ ಅವನ ಅಭಿವೃದ್ದಿಗೆ ಪೂರಕವಾದುದು.

    ಕುತೂಹಲ ಮಗುವಿನ ಸಹಜ ಸ್ವಾಭಾವಿಕ ಗುಣವಾಗಿದೆ. ಕುತೂಹಲದಿಂದ ಕೂಡಿದ ಮಗು ಸದಾ ಅನ್ವೇಷಿಸಲು ಮುಂದಾಗುತ್ತದೆ. ಅನ್ವೇಷಣೆಯಿಂದ ಸಂತೋಷ ಅನುಭವಿಸುತ್ತದೆ. ಸಂತಸದ ಮುಂದುವರೆದ ಭಾಗವಾಗಿ ಪರಿಶೋಧನೆಯನ್ನು ಪುನರಾವರ್ತಿಸುತ್ತದೆ. ತನ್ನ ಸಂತಸದ ಕಲಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತದೆ. ಇದು ಕಲಿಕೆಯ ಇನ್ನೊಂದು ಆಯಾಮವಾಗಿದೆ. 

    ನಾವೆಲ್ಲರೂ ಸಾಮಾಜಿಕ ಮತ್ತು ಪರಿಸರ ಜೀವಿಗಳು. ನಮ್ಮ ಸುತ್ತಲಿನ ಪರಿಸರದಿಂದ ಮತ್ತು ನಾವು ವಾಸಿಸುವ ಸಮುದಾಯದಿಂದ ಸಾಕಷ್ಟು ಕಲಿಯುತ್ತೇವೆ. ಯಾವ ಮಗುವಿನಲ್ಲಿ ಕುತೂಹಲ ಮಂಕಾಗಿರುತ್ತದೆಯೋ ಆ ಮಗುವಿನ ಕಲಿಕೆ ಮಂದವಾಗಿರುತ್ತದೆ. ಕುತೂಹಲ ಹೆಚ್ಚಿರುವ ಮಗುವಿನ ಗೆಳೆಯರ ಬಳಗ ದೊಡ್ಡದಿರುತ್ತದೆ. ಆದರೆ ಕಡಿಮೆ ಕುತೂಹಲವುಳ್ಳ ಮಗುವಿನ ಗೆಳೆಯರ ಬಳಗ ತೀರಾ ಚಿಕ್ಕದು. ಹೊಸ ಗೆಳೆಯರೊಂದಿಗೆ ಸೇರಲು ಆ ಮಗು ಹಿಂಜರಿಯುತ್ತದೆ. ಕಡಿಮೆ ಪುಸ್ತಕಗಳನ್ನು ಓದುವುದು, ಚಿಕ್ಕ ಸಾಮಾಜಿಕ ಗುಂಪು ಹೊಂದಿರುತ್ತದೆ. ಇಂತಹ ಮಗುವಿಗೆ ಕಲಿಸುವುದೂ ಕೂಡಾ ಕಠಿಣವಾಗುತ್ತದೆ. ಏಕೆಂದರೆ ಆ ಮಗುವಿಗೆ ಸ್ಪೂರ್ತಿ ಉತ್ಸಾಹ ನೀಡಿ ಪ್ರೇರೇಪಿಸುವುದು ತುಂಬಾ ಕಷ್ಟ. 

ಕುತೂಹಲದ ಪ್ರಯೋಜನಗಳು

ಕುತೂಹಲವು ಅನೇಕ ಲಾಭಗಳನ್ನು ನೀಡುತ್ತದೆ. ಮಗುವಿನ ಕುತೂಹಲದ ಪ್ರಶ್ನೆಗಳಿಗೆ ದೊಡ್ಡವರಾದ ನಾವು ಭಯಭೀತರಾಗಿ ಪ್ರಶ್ನೆ ಕೇಳುವುದನ್ನೇ ನಿಲ್ಲಿಸುತ್ತಿದ್ದೇವೆ. ಏಕೆಂದರೆ ನಾವು ಸೋಮಾರಿಯಾಗಿದ್ದೇವೆ ಅಥವಾ ಮಗು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರ್ದಿಷ್ಟ ಉತ್ತರಗಳ ಹುಡುಕಾಟದಲ್ಲಿ ನಾವು ಸೋತಿದ್ದೇವೆ. ಆದಾಗ್ಯೂ ಕುತೂಹಲದ ಲಾಭಗಳನ್ನು ಅರಿತರೆ ಖಂಡಿತವಾಗಿಯೂ ನಮ್ಮ ಪ್ರಯತ್ನ ಉತ್ತಮವಾಗುತ್ತದೆ. ಕುತೂಹಲದ ಪ್ರಯೋಜನಗಳು ಕೇವಲ ಭೌದ್ದಿಕತೆಗೆ ಸೀಮಿತವಾಗಿಲ್ಲ. ಅದು ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.

ಬದುಕಲು ಸಹಾಯ ಮಾಡುತ್ತದೆ: ಕುತೂಹಲವು ನಿರಂತರವಾಗಿ ಬದಲಾಗುತ್ತಿರುವ ಪರಿಸರದ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಇದರಿಂದ ಹೊಸ ವಿಷಯಗಳನ್ನು ಎದರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಅದು ನವೀನ ಅನ್ವೇಷಣೆಗೆ ಪ್ರಚೋದಿಸುತ್ತದೆ. ವಿವಿಧ ಸನ್ನಿವೇಶಗಳನ್ನು ಎದುರಿಸುವ ಕೌಶಲ್ಯ ಬೆಳೆಸುತ್ತದೆ. 

ಸಂತಸ ನೀಡುತ್ತದೆ : ಕುತೂಹಲವುಳ್ಳ ಜನರು ಹೆಚ್ಚು ಸಂತೋಷವುಳ್ಳವರಾಗಿರುತ್ತಾರೆ. ಕುತೂಹಲ ಹೊಂದಿದವರು ಉನ್ನತ ಮಟ್ಟದ ಸಕಾರಾತ್ಮಕ ಭಾವನೆಗಳನ್ನು ಮತ್ತು ಕಡಿಮೆ ಮಟ್ಟದ ಆತಂಕವನ್ನು ಹೊಂದಿರುತ್ತಾರೆ. ಕುತೂಹಲವು ಯೋಗಕ್ಷೇಮಗಳನ್ನು ಅಧಿಕಗೊಳಿಸಿ ಸಂಶೋಧನೆಗಳ ಮೂಲಕ ವ್ಶೆಜ್ಞಾನಿಕ ಮನೋಭಾವ ಹೆಚ್ಚಿಸುತ್ತದೆ. 

ಸಾಧನೆ ಹೆಚ್ಚಿಸುತ್ತದೆ : ಕುತೂಹಲವು ಸಂತೋಷದ ಮೂಲಕ ಕಲಿಕೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರಿಂದ ಶೈಕ್ಷಣಿಕ ಸಾಧನೆ ಉತ್ತುಂಗಕ್ಕೇರುತ್ತದೆ. ಆ ಕಲಿಕೆಯು ನಿಶ್ಚಿತ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಕುತೂಹಲದ ಕಾರ್ಯ ಸಾಮಾನ್ಯ ಅರ್ಥದಲ್ಲಿ ಕಾಣಬಹುದು. ಆದರೆ ಹೆಚ್ಚು ಕುತೂಹಲವುಳ್ಳ ಮಗುವಿನಲ್ಲಿ ಆಸಕ್ತಿಯೂ ಹೆಚ್ಚಿರುತ್ತದೆ. ಆದ್ದರಿಂದ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಲಭಿಸುತ್ತದೆ. 

ಪರಾನುಭೂತಿಯನ್ನು ವಿಸ್ತರಿಸುತ್ತದೆ : ಕುತೂಹಲವು ಮಗುವಿನ ಸಾಮಾಜಿಕ ವೃತ್ತದ ಪರಿಧಿಯನ್ನು ವಿಸ್ತರಿಸುತ್ತದೆ. ವೃತ್ತದ ಹೊರಗಿನ ಜನರೊಂದಿಗೆ ಮಾತನಾಡುವಾಗ ಮಗು ತನ್ನ ಜೀವನಕ್ಕಿಂತ ವಿಭಿನ್ನವಾದ ಜೀವನಾನುಭವವನ್ನು ಮತ್ತು ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಅಪರಿಚಿತರೊಂದಿಗೆ ಮಾತನಾಡಲು ಅವಕಾಶ ಇರುವುದರಿಂದ ವಿಭಿನ್ನ ವ್ಯಕ್ತಿತ್ವದ ಹುಟುಕಾಟ ಪ್ರಾರಂಭವಾಗುತ್ತದೆ. ಇದು ಮಗುವಿನ ಸಾಮಾಜಿಕ ವಲಯನ್ನು ವಿಸ್ತರಿಸುವ ಮೂಲಕ ಪರಾನುಭೂತಿಯನ್ನು ಬೆಳೆಸುತ್ತದೆ. 

ಆರೋಗ್ಯವನ್ನು ಬಲಪಡಿಸುತ್ತದೆ : ವೈದ್ಯರು ತಮ್ಮ ರೋಗಿಗಳ ಮೇಲೆ ಕುತೂಹಲದ ದೃಷ್ಟಿಕೋನ ಹೊಂದಿದಾಗ ರೋಗಿಯ ರೋಗ ಬೇಗನೇ ಗುಣಮುಖವಾಗುತ್ತದೆ. ಅಂತೆಯೇ ಕುತೂಹಲದ ಮನಸ್ಸು ಆರೋಗ್ಯ ಸುಧಾರಿಸುವಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಇಲ್ಲಿ ಸಚಿತಸ ಮತ್ತು ನಿಶ್ಚಿತತೆ ಇರುವ್ಯದರಿಂದ ಮಾನಸಿಕ ತೊಳಲಾಟ ಇರುವುದರಿಲ್ಲ. ಹಾಗಾಗಿ ದೇಹ ಮತ್ತು ಮನಸ್ಸು ಎರಡೂ ಸುಸ್ಥಿತಿಯಲ್ಲಿರುತ್ತವೆ. 

ಕುತೂಹಲದ ಸ್ವರೂಪ:

ಕುತೂಹಲ ಎಲ್ಲಾ ಮಕ್ಕಳಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಕೆಲವು ಮಕ್ಕಳು ಮಾನಸಿಕ ಕುತೂಹಲ ಹೊಂದಿರುತ್ತಾರೆ. ಆದರೆ ಕೆಲವು ಮಕ್ಕಳು ದೈಹಿಕ ಕುತೂಹಲ ಹೊಂದಿರುತ್ತಾರೆ. ಸ್ಪರ್ಶಿಸುವ, ವಾಸನೆ ಗ್ರಹಿಸುವ, ರುಚಿ ಆಸ್ವಾದಿಸುವ, ಏರುವ, ಇಳಿಯುವ ಇತ್ಯಾದಿ ದೈಹಿಕ ಚಟುವಟಿಕೆಗಳ ಮೂಲಕ ಕುತೂಹಲ ವ್ಯಕ್ತ ಪಡಿಸುತ್ತಾರೆ. ಕೆಲವು ಮಕ್ಕಳು ಅಂಜುಬುರುಕರಾಗಿದ್ದರೆ ಕೆಲವು ಮಕ್ಕಳು ಸಾಹಸ ಪ್ರವೃತ್ತಿಯ ಕುತೂಹಲಿಗಳಾಗಿರುತ್ತಾರೆ. 

ಕೆಲವು ಮಕ್ಕಳಿಗೆ ವಿಫಲತೆಯನ್ನು ಮರು ವ್ಯಾಖ್ಯಾನಿಸಬೇಕಾಗುತ್ತದೆ. ಕುತೂಹಲವು ಸಾಮಾನ್ಯ ಪಾಂಡಿತ್ಯಕ್ಕಿAತ ಹೆಚ್ಚಿನ ಪರಿಶೋಧನೆಗೆ ಪೂರಕವಾದುದು. ವಿವಿಧ ಹಂತದ ಪ್ರಯತ್ನಗಳು ಅವ್ಯವಸ್ಥ ಕಲಿಕೆಯನ್ನು ಶುದ್ದಗೊಳಿಸುತ್ತವೆ. ಪ್ರತೀ ಮಗುವಿನಲ್ಲಿ ಅನ್ವೇಷಣಾ ಗುಣ ಇದ್ದೇ ಇರುತ್ತದೆ. ಆದರೆ ವೇಗದಲ್ಲಿ ವ್ಯತ್ಯಾಸಗಳಿರುತ್ತವೆ. ಪ್ರತೀ ಮಗುವಿಗೆ ಸೂಕ್ತ ಪರಿಸರ ಮತ್ತು ಅಗತ್ಯ ಅವಕಾಶ ದೊರೆತಾಗ ಮಗು ಪರಿಶೋಧನೆಯ ಹಾದಿಯಲ್ಲಿ ಮುನ್ನಡೆಯುತ್ತದೆ. 

ಕುತೂಹಲವನ್ನು ಉತ್ತೇಜಿಸುವ ವಿಧಾನಗಳು :

ಪ್ರಶ್ನೆಗಳಿಗೆ ಉತ್ತರಿಸಿ: ಮಕ್ಕಳ ಪ್ರಶ್ನೆಗೆ ಉತ್ತರಿಸುವುದು ನಿಜ್ಜಕ್ಕೂ ಕಷ್ಟಕರ. ಹಾಗಂತ ಉತ್ತರಿಸದೇ ಹೋದರೆ ಮಕ್ಕಳ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ ಮತ್ತು ಆ ಮಗುವಿನ ಕಲಿಕೆ ಮೊಟಕುಗೊಳ್ಳುತ್ತದೆ. ಆದ್ದರಿಂದ ಮಕ್ಕಳ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ಪ್ರಯತ್ನ ಮಾಡಿ. ಇತ್ತಿಚಿನ ದಿನಗಳಲ್ಲಿ ಮಗುವಿನೊಂದಿಗೆ ಬೆರೆಯಲು ಅಥವಾ ಪ್ರಶ್ನೆಗೆ ಉತ್ತರಿಸಲು ಪುರುಸೊತ್ತಿಲ್ಲ ಎಂಬುದೇ ಬಹುತೇಕ ಪಾಲಕರ ಹೇಳಿಕೆ. ಆದರೆ ಇದು ಶುದ್ದ ತಪ್ಪು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಿಗದಿತ ಸಮಯ ಮೀಸಲಿಡುವುದು ಅನಿವಾರ್ಯವಾಗಿದೆ. ಈ ಸಮಯದಲ್ಲಿ ಮಕ್ಕಳು ಪ್ರಶ್ನೆ ಕೇಳಲು ಅವಕಾಶ ನೀಡಿ. ಚರ್ಚೆಯ ಮೂಲಕ ವಿವರಣಾತ್ಮಕ ಉತ್ತರ ನೀಡಿ. ಇದರಿಂದ ಮಗುವಿನ ಕುತೂಹಲ ಪುರಸ್ಕರಿಸಲ್ಪಡುತ್ತದೆ.

ಆಸಕ್ತಿಗಳನ್ನು ಪ್ರೋತ್ಸಾಹಿಸಿ: ಮಗುವಿನ ಕುತೂಹಲವು ನೈಸರ್ಗಿಕವಾಗಿದ್ದು, ಆಸಕ್ತಿಗೆ ಒಳಪಡುವ ವಿಷಯ ಅಥವಾ ಚಟುವಟಿಕೆಗಳ ಕಡೆಗೆ ಗಮನ ಕೇಂದ್ರೀಕೃತವಾಗುತ್ತದೆ. ಮಗು ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿದಾಗ ಆಸಕ್ತಿಯ ಕ್ಷೇತ್ರಗಳ ಪರಿಚಯವಾಗುತ್ತದೆ. ಮಗುವಿನ ಆಸಕ್ತಿಗಳನ್ನು ಪ್ರಚೋದಿಸಿ ಮತ್ತು ಪೂರಕವಾದ ಸಾಧನ ಸಲಕರಣೆ ಒದಗಿಸಿ. ಮಗು ಇಚ್ಚಿಸುವ ಪುಸ್ತಕ ಒದಗಿಸಿ ಅಥವಾ ಹೊರಗಡೆ ಸುತ್ತಾಡಲು ಕರೆದೊಯ್ಯಿರಿ.

ಸಾಧನಗಳನ್ನು ನೀಡಿ: ಪ್ರತೀ ಮಗುವಿಗೆ ತನ್ನ ವಯಸ್ಸಿಗನುಗುಣವಾದ ಸಾಮರ್ಥ್ಯ ಪ್ರದರ್ಶಿಸುವ ಬಯಕೆ ಇರುತ್ತದೆ. ಅದಕ್ಕೆ ಪೂರಕವಾದ ಸಾಧನ ಸಲಕರಣೆಗಳನ್ನು ಒದಗಿಸುವ ಪ್ರಯತ್ನ ನಮ್ಮದಾಗಬೇಕು. ಆಗ ಮಗುವಿನ ಕುತೂಹಲದ ಬುಗ್ಗೆ ಚಿಮ್ಮುತ್ತದೆ. ಬಣ್ಣದ ಪೇರ‍್ಸ್, ಕ್ರೆಯಾನ್ಸ್, ಭೂತಗನ್ನಡಿ, ಪಾಕೆಟ್ ನಿಘಂಟು ಇತ್ಯಾದಿಗಳು ಮಕ್ಕಳಿಗೆ ನೀಡಬಹುದಾದ ಕೆಲವು ಸಲಕರಣೆಗಳಾಗಿವೆ. 

ಉತ್ತೇಜಕ ಪರಿಸರ ನಿರ್ಮಿಸಿ: ಇಡೀ ಮನೆಯನ್ನು ಆಟದ ಮೈದಾನವನ್ನಾಗಿ ಮಾಡಬೇಕಿಲ್ಲ. ಬದಲಿಗೆ ಮಗುವಿನ ಕುತೂಹಲ ಹೆಚ್ಚಿಸುವ ಹಾಗೂ ಅದಕ್ಕೆ ಪೂರಕ ಮಾಹಿತಿ ಒದಗುವ ರೀತಿಯ ವಾತಾವರಣ ನಿರ್ಮಾಣ ಮಾಡುವುದು ಪೋಷಕರ ಹೊಣೆಗಾರಿಕೆಯಾಗಬೇಕು. ಮಗುವಿನ ಮೆದುಳಿಗೆ ಒಂದಿಷ್ಟು ಕೆಲಸ ಹೊಸ ವಿಷಯಗಳನ್ನು ತುಂಬುವ ವಾತಾವರಣ ಕುತೂಹಲ ಹೆಚ್ಚಲು ಕಾರಣವಾಗುತ್ತದೆ. ಆಗಾಗ ಮನೆಯೊಳಗಿನ ಸಲಕರಣೆಗಳ ಸ್ಥಾನ ಮತ್ತು ಅಲಂಕಾರ ಬದಲಿಸುವುದೂ ಸಹ ಕುತೂಹಲದ ಕಲಿಕೆಗೆ ಕಾರಣವಾಗುತ್ತದೆ. 

ಮುಕ್ತ ಅವಕಾಶವಿರಲಿ: ಮಗು ಸ್ವತಂತ್ರವಾಗಿ ಆಲೋಚಿಸಲು ಮುಕ್ತತೆ ಅಗತ್ಯ. ತನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ತಾನೇ ಸ್ವತಃ ಉತ್ತರ ಕಂಡುಕೊಳ್ಳಲು ಅವಕಾಶ ನೀಡುವುದು ಹಾಗೂ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಮುಕ್ತತೆಯ ಮೆಟ್ಟಿಲಾಗಿದೆ. 

ತಪ್ಪು ಮಾಡಲು ಅನುಮತಿಸಿ: ಮಗು ಮಾಡುವ ತಪ್ಪಿಗೆ ಅನುಮತಿ ಇರಲಿ. ಇಲ್ಲದಿದ್ದರೆ ಮಗುವಿನಲ್ಲಿ ನಿರಾಶೆ ಮತ್ತು ನಿರುತ್ಸಾಹಗಳು ಇಮ್ಮಡಿಸುತ್ತವೆ. ತಪ್ಪುಗಳಾಗುವುದು ಸಹಜ ಸ್ವಭಾವ. ಆದರೆ ಒಮ್ಮೆ ಆದ ತಪ್ಪಿಗೆ ಕಾರಣ ಹಾಗೂ ಸಾಧ್ಯತೆಗಳನ್ನು ತಿಳಿಸಿ. ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ. ಆಗ ಖಂಡಿತವಾಗಿಯೂ ತಪ್ಪುಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಮತ್ತು ಕಲಿಕೆ ಹೆಚ್ಚು ಸ್ಪಷ್ಟವಾಗುತ್ತ ಹೋಗುತ್ತದೆ. 

ವೀಕ್ಷಣೆಗೆ ನಿರ್ದಿಷ್ಟತೆ ನೀಡಿ: ನಮ್ಮ ಸುತ್ತಲಿನ ಪರಿಸರ ನಿಗೂಢತೆಗಳ ಆಗರ. ಇದನ್ನು ಆಸ್ವಾದಿಸುವ ಮತ್ತು ಅನುಭಾವಿಸುವ ಶೈಲಿ ತಿಳಿದಿರಬೇಕಷ್ಟೇ. ಅದಕ್ಕೆ ಬೇಕಾಗಿರುವುದು ವೀಕ್ಷಿಸುವ ತಂತ್ರಗಾರಿಕೆ. ಆ ತಂತ್ರಗಾರಿಕೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಆಗ ಸಣ್ಣ ಸಣ್ಣ ಬದಲಾವಣೆಗಳನ್ನೂ ಸಹ ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಾರೆ. ಇದು ನಿರ್ದಿಷ್ಟ ಕಲಿಕೆಗೆ ಸಹಕಾರಿ. 

ಕುತೂಹಲ ಹೆಚ್ಚಲು ಇವುಗಳೂ ಮುಖ್ಯ

ಪೋಷಕರು ಕುತೂಹಲದಿಂದ ವಸ್ತು/ಘಟನೆ ವೀಕ್ಷಿಸುವ ಮತ್ತು ಅದನ್ನು ವಿವರಸಿವ ಕೌಶಲ್ಯ ಹೊಂದಿರಬೇಕು. ಪರಿಸರದಲ್ಲಿನ ಪ್ರತೀ ಸನ್ನಿವೇಶ ಅಥವಾ ವಸ್ತುವಿನಲ್ಲಿರುವ ಸೂಕ್ಷö್ಮತೆಯನ್ನು ವೀಕ್ಷಿಸಲು ತಿಳಿಸುವುದು. 

ಪ್ರಾರಂಭದಲ್ಲಿ ಮಗು ಯಾವುದಾದರೂ ಕೆಲಸ/ಚಟುವಟಿಕೆಯಲ್ಲಿ ತೊಡಗಿದಾಗ ಮಗುವಿನ ಕ್ರಿಯಾಶೀಲತೆಯನ್ನು ಪತ್ತೆ ಹಚ್ಚಿ ಅಭಿಪ್ರೇರಣೆ ನೀಡಬೇಕು. ಇದರಿಂದ ಉತ್ತೇಜಿತವಾದ ಮಗು ಕುತೂಹಲದ ಕೌಶಲ್ಯ ಬೆಳೆಸಿಕೊಳ್ಳುತ್ತದೆ. 

ಮಕ್ಕಳಿಗೆ ಗೊಂದಲಗಳು ಉಂಟಾದಾಗ ನಿಖರವಾದ ಉತ್ತರ ಹುಡುಕಲು ಪ್ರಾರಂಭಿಸುತ್ತಾರೆ. ಅಂತೆಯೇ ಕಲಿಕೆಯಲ್ಲಿ ಗೂಢತೆ ಅಡಗಿದ್ದರೆ ಅದನ್ನು ಭೇಧಿಸಲು ತವಕಿಸುತ್ತಾರೆ. ಆಗ ಹೊಸ ಹುಟುಕಾಟದ ಕಲಿಕೆ ಪ್ರಾರಂಭವಾಗುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಕ್ತ ಅವಕಾಶ ನೀಡಬೇಕು. 

ಮಕ್ಕಳು ಸ್ವತಂತ್ರವಾಗಿ ಯೋಚಿಸಲು ಉತ್ತೇಜಿಸಿ. ಕಲ್ಪನೆ ಮತ್ತು ಪರಿಕಲ್ಪನೆಗಳನ್ನು ನೀಡಿ ಹೊಸ ಯೋಚನೆ ಕೈಗೊಳ್ಳಲು ಅವಕಾಶ ನೀಡಿ. ಆಲೋಚನೆ ಮತ್ತು ಭಾವನೆಗಳ ಜೊತೆಗೆ ಕಲ್ಪನೆಯು ಕುತೂಹಲವನ್ನು ಉತ್ತೇಜಿಸುತ್ತದೆ ಮತ್ತು ನವೀನ ಪರಿಣಾಮಗಳಿಗೆ ಕಾರಣವಾಗುತ್ತದೆ. 

ಪ್ರಸ್ತುತತೆ ಅರಿಯಲು ಅವಕಾಶ ಒದಗಿಸಿ. ದಿನ ಪತ್ರಿಕೆ ಅಥವಾ ಮಾಧ್ಯಗಳಲ್ಲಿನ ಪ್ರಚಲಿತ ವಿಷಯ ಅಥವಾ ಘಟನೆಗಳ ಕುರಿತ ಕಿರು ಮಾಹಿತಿ ಸಂಗ್ರಹಿಸಿ ಪ್ರಸ್ತುತ ಪಡಿಸಲು ಅವಕಾಶ ನೀಡಿ. ಪ್ರಸ್ತುತ ದಿನದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿಯಲು ತಿಳಿಸಿ. ಪ್ರಾರಂಭದಲ್ಲಿ ಇದು ಕಠಿಣ ಎನಿಸಿದರೂ ನಂತರದ ದಿನಗಳಲ್ಲಿ ಮಕ್ಕಳ ಕುತೂಹಲವನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಜ್ಞಾನಾರ್ಜನೆಗೆ ಅನುವು ಮಾಡಿಕೊಡುತ್ತದೆ. 

ವಿವಿಧ ಸಂಸ್ಕೃತಿ ಮತ್ತು ಸಮಾಜಗಳನ್ನು ಪರಿಚಯಿಸಿ. ಒಂದು ಸಂಸ್ಕೃತಿ ಅಥವಾ ಸಮಾಜ ಇನ್ನೊಂದಕ್ಕಿAತ ಹೇಗೆ ಭಿನ್ನವಾಗಿದೆ? ಇತರೆ ಸಂಸ್ಕೃತಿಗಳಿಗೂ ತಮ್ಮ ಸಂಸ್ಕೃತಿಗೂ ಇರುವ ಭಾವನಾತ್ಮಕ ಸಂಬAಧಗಳನ್ನು ಲಿಂಕ್ ಮಾಡಲು ಪ್ರೋತ್ಸಾಹಿಸಿ. ಇತರೆ ಸಮಾಜದ ಮೌಲ್ಯಗಳು ಹಾಗೂ ನಂಬಿಕೆಗಳ ಬಗ್ಗೆ ತಿಳಿಯಲು ಅವಕಾಶ ನೀಡಿ.

    ಪೋಷಕರು ಮೊದಲು ಕುತೂಹಲದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ನಂತರ ಮಕ್ಕಳಲ್ಲಿ ಅದನ್ನು ಬೆಳೆಸುವ ವಿಧಾನಗಳ ಬಗ್ಗೆ ಮತ್ತು ಬೆಳೆಸುವಲ್ಲಿ ತಮ್ಮ ಪಾತ್ರದ ಅವಶ್ಯಕತೆ ಬಗ್ಗೆ ತಿಳಿಯಬೇಕು. ಮೊದಲು ತಾವು ಕುತೂಹಲ ಬೆಳೆಸಿಕೊಂಡು ಮಗುವಿನಲ್ಲಿ ಬೆಳೆಸಲು ಪ್ರಯತ್ನಿಸಬೇಕು. ಉತ್ತಮ ಹಾಗೂ ಅಭಿವೃದ್ದಿಪರ ಸಮಾಜಕ್ಕಾಗಿ ಮಕ್ಕಳ ಕುತೂಹಲ ಭದ್ರಬುನಾದಿ. ಅದನ್ನು ಬೆಳೆಸಲು ಎಲ್ಲರೂ ಶ್ರಮಿಸೋಣ.




No comments:

Post a Comment