December 11, 2021

ತ್ರಿಪದಿಕವಿ ಸರ್ವಜ್ಞನನ್ನು ಉತ್ತುಂಗಕ್ಕೇರಿಸಿದ ರೆವೆರೆಂಡ್ ಉತ್ತಂಗಿ ಚನ್ನಪ್ಪನವರು.


 ಮೇ-2019ರ ಟೀಚರ್  ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ. 

 ತ್ರಿಪದಿಕವಿ ಸರ್ವಜ್ಞನನ್ನು ಉತ್ತುಂಗಕ್ಕೇರಿಸಿದ  ರೆವೆರೆಂಡ್ ಉತ್ತಂಗಿ ಚನ್ನಪ್ಪನವರು. 

ಅವು ಬಹುಬೆಲೆಯುಳ್ಳ ಜೀವನಾನುಭವದ ಸಂಪತ್ತುಗಳು. ನಿತ್ಯ ಜೀವನದ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಮಾರ್ಗದರ್ಶಿ ಸೂತ್ರಗಳು. ಕೈಯೊಳಗಿನ ಆಪದ್ಧನ. ಸವಿಯನ್ನು ಉಣಬಡಿಸುವ ಪಕ್ವಾನ್ನ ಪರಮಾನ್ನಗಳು. ಇವು ಯಾವುವೆಂದು ಅರ್ಥವಾಗಲಲ್ಲವೇ? ಅವೇ ನಮ್ಮ ಸರ್ವಜ್ಞನ ವಚನಗಳು. ಸರ್ವಜ್ಞನ ವಚನಗಳಿಗೆ ಎಂತಹ ಮೋಹಕಶಕ್ತಿ ಇದೆ ಎಂದರೆ ಅದೊಂಥರಾ ಅಮಲು ಇದ್ದಂತೆ. ಓದುತ್ತಾ ಓದುತ್ತಾ ಅದರ ರಸಸ್ವಾದ ಗಳಿಸುತ್ತಾ ಹೋದರೆ ಇಡೀ ಜಗತ್ತನ್ನೇ ಮರೆಸುವ ಮತ್ತು ಜಗತ್ತನ್ನು ಪರಿಚಯಿಸುವ ಶಕ್ತಿ ಈ ವಚನಗಳಿಗೆ ಇದೆ ಎಂದರೆ ಅತಿಶಯೋಕ್ತಿ ಏನಲ್ಲ.

ಸರ್ವಜ್ಞನನ್ನು ಹಾಗೂ ಆತನ ವಚನಗಳನ್ನು ಕುರಿತು ಮೂಗು ಮುರಿದು ಮಾತನಾಡುವ ಕಾಲವೊಂದಿತ್ತು. ಆದರೆ ಇಂದು ಹಳ್ಳಿಯಿಂದ ಪಟ್ಟಣದ ಎಲ್ಲರ ಬಾಯಲ್ಲೂ ನಲಿದಾಡುತ್ತಿವೆ. ಎಲ್ಲರ ಮನೆಯ ಮಂತ್ರಾಕ್ಷತೆಗಳAತಾಗಿವೆ. 

ನಡೆವುದೊಂದೆ ಭೂಮಿ, ಕುಡಿವುದೊಂದೇ ನೀರು

ಸುಡುವಗ್ನಿಯೊಂದೇ ಇರುತಿರಲು, ಕುಲಗೋತ್ರ

ನಡುವೆಯೆತ್ತಣದು ಸರ್ವಜ್ಞ|| ಇಂತಹ ಮನಪರಿವರ್ತನೆಯ ವಚನಗಳ ಮೂಲಕ 

ನಮ್ಮಲ್ಲಿನ ದುಷ್ಟ ಮನೋಸ್ಥಿತಿಯನ್ನು ತಿದ್ದಲು ಸರ್ವಜ್ಞ ಪ್ರಯತ್ನಿಸಿದ. ಇಂತಹ ಅದೆಷ್ಟೋ ವಚನಗಳು ಇಂದು ನಮ್ಮ ನಾಲಿಗೆಯ ಮೇಲೆ ನಲಿದಾಡುತ್ತಿವೆ. ಸರ್ವಜ್ಞನ ವಚನಗಳನ್ನು ಕೇಳದ ಕಿವಿಗಳಿಲ್ಲ, ಮಾತುಗಳಲ್ಲಿ ಬಳಸದ ಭಾಷಣಕಾರನಿಲ್ಲ ಎಂಬAತಾಗಿದೆ. ಇಂತಹ ಮಹತ್ವವುಳ್ಳ ಸರ್ವಜ್ಞ ಮತ್ತು ಆತನ ವಚನಗಳು ಯಾರಿಗೂ ಪರಿಚಯವಿರದ ಕಾಲವೊಂದಿತ್ತು. ಅಜ್ಞಾತವಾಗಿದ್ದ ಅಂತಹ ಸರ್ವಜ್ಞನ ವಚನಗಳನ್ನು ದಶದಿಕ್ಕುಗಳಿಗೆ ಪಸರಿಸಿದ ಕೀರ್ತಿ ತಿರುಳ್‌ಗನ್ನಡ ತಿರುಕನೆಂದೇ ಖ್ಯಾತಿ ಪಡೆದ ರೆವೆರೆಂಡ್ ಉತ್ತಂಗಿ ಚೆನ್ನಪ್ಪನವರಿಗೆ ಸಲ್ಲುತ್ತದೆ.

ಮೂಲೆಗುಂಪಾಗಿದ್ದ ಸರ್ವಜ್ಞನ ವಚನಗಳನ್ನು ಹುಡುಕಿ ತಂದು ಕನ್ನಡದ ಸಿಂಹಾಸನದಲ್ಲಿ ಕುಳ್ಳಿರಿಸಿ, ಜಗತ್ತಿನಾದ್ಯಂತ ಮೆರೆಸಿದ ಉತ್ತಂಗಿಯವರ ಪ್ರಯತ್ನ ಪ್ರಶಂಸನೀಯ. ಸರಳ ಭಾಷೆ ಹಾಗೂ ವೈಚಾರಿಕ ಪ್ರಜ್ಞೆಯುಳ್ಳ ಸರ್ವಜ್ಞನ ತ್ರಿಪದಿಗಳಿಗೆ ಕ್ರೆöÊಸ್ತ ಮಿಶನರಿ ರೆವೆರೆಂಡ್ ಜೆ.ಜೆ.ರ‍್ನರ್‌ರವರು ಮನಸೋತಿದ್ದರು. ಅವರು ಉತ್ತಂಗಿ ಚೆನ್ನಪ್ಪನವರನ್ನು ಈ ಸಂಗ್ರಹ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಣೆ ಮಾಡಿದ್ದು ಒಂದು ವಿಶಿಷ್ಠ ಸಂಗತಿ. 

ಮಹಾನ್ ಕಾರ್ಯಕ್ಕೆ ಪ್ರೇರಣೆ

    


ಸರ್ವಜ್ಞನನ್ನು ಕುರಿತು ರ‍್ನರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಹೆಣಗಾಡಿದ ಸಂದರ್ಭವೇ ಉತ್ತಂಗಿಯವರು ಈ ಕೆಲಸದಲ್ಲಿ ತೊಡಗಲು ಪ್ರೇರಣೆಯಾಯಿತು. ಈ ಹಿನ್ನಲೆಯಲ್ಲಿ ಸರ್ವಜ್ಞನ ವಚನಗಳ ಅಭ್ಯಾಸಕ್ಕೆ ಉತ್ತಂಗಿಯವರು ಕೈಹಾಕಿದರು. 

ಒಮ್ಮೆ ಉತ್ತಂಗಿಯವರು ಮಹಾರಾಷ್ಟçದ ವಿಶನರಿ ನೆಲ್ಸನ್ ಫ್ರೇಜರ್ ಅವರ ಕಛೇರಿಗೆ ಹೋದರು. ಟೇಬಲ್ ಮೇಲಿದ್ದ ತುಕಾರಾಮನ ಅಭಂಗಗಳ ಎರಡು ಪುಸ್ತಕಗಳು ಇವರ ಗಮನ ಸೆಳೆದವು. ಮಹಾರಾಷ್ಟçದವರು ತುಕಾರಾಮನ ಹೆಸರನ್ನು ಜಗಜ್ಜಾಹೀರು ಮಾಡಿದಂತೆ ಕನ್ನಡಿಗರಾದ ನಾವು ಸರ್ವಜ್ಞನನ್ನು ಪ್ರಚುರ ಪಡಿಸಬೇಕೆಂಬ ಉದ್ದೇಶವೂ ಸೇರಿತು. ಅದಾಗಲೇ ನೆಲ್ಸನ್ ಫ್ರೇಜರ್ ಅವರು ಸರ್ವಜ್ಞನ ವಚನಗಳನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಅನ್ಯದೇಶಿಯರಿಂದ ಸಾಧ್ಯವಾಗುತ್ತಿರುವ ಈ ಕಾರ್ಯವನ್ನು ನಾವೇಕೆ ಮಾಡಬಾರದು ಎಂಬ ಪ್ರಶ್ನೆ ಉತ್ತಂಗಿಯವರನ್ನು ಕಾಡತೊಡಗಿತು. ಹಾಗಾಗಿ ಕೂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ, ಎಲ್ಲೆಲ್ಲೂ ಸರ್ವಜ್ಞ ಸದಾ ಕಾಡತೊಡಗಿದ.

ಉತ್ತಂಗಿಯವರಿಗೆ ತತ್ವಶಾಸ್ತçದಲ್ಲಿ ವಿಶೇಷ ಆಸಕ್ತಿ ಇತ್ತು. ಆದರೆ ಕೆಲವಾರು ವರ್ಷಗಳ ಬಳಿಕ ತತ್ವಶಾಸ್ತçದಲ್ಲಿ ಕ್ರಮೇಣವಾಗಿ ನಿರಾಸಕ್ತಿ ಉಂಟಾಗಿ, ಕೊನೆಗೆ ತಿರಸ್ಕಾರ ಭಾವನೆ ಮೂಡಿತು. ಇದು ಜೀವನದ ಜಿಗುಪ್ಸೆಗೂ ಕಾರಣವಾಯಿತು. ಇಂತಹ ಸಮಯದಲ್ಲಿಯೇ ರ‍್ನರ್‌ರವರು ಸರ್ವಜ್ಞನ ಜೀವನ ಹಾಗೂ ಕೃತಿಗಳ ಸಂಶೋಧನೆ ಮಾಡುವಂತೆ ಪ್ರೋತ್ಸಾಹಿಸಿದರು. ಇದು ಉತ್ತಂಗಿಯವರ ಜೀವನದ ಮಹಾನ್ ತಿರುವು ಎನ್ನಬಹುದು.

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ

ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದೆ

ಕಟ್ಟಿಹುದು ಬುತ್ತಿ, ಸರ್ವಜ್ಞ || ಇಂತಹ ತರ್ಕಶಾಸ್ತç ಹಾಗೂ ತತ್ವಶಾಸ್ತç ಎರಡನ್ನೂ 

ತನ್ನ ವಚನಗಳಲ್ಲಿ ಬಳಸಿದ ಸರ್ವಜ್ಞನ ನಿಜಕ್ಕೂ ಜ್ಞಾನವನ್ನು ಮೆಚ್ಚಲೇಬೇಕು. ಇಂತಹ

ತರ್ಕವೇ ಉತ್ತಂಗಿಯವರನ್ನು ಉತ್ತುಂಗಕ್ಕೇರಿಸಿತು.

“ಭಗ್ನಾಶನಾಗಿ ಸಾಗುತ್ತಿದ್ದ ನನ್ನ ಜೀವನದ ಹಾದಿಯಲ್ಲಿ ಸರ್ವಜ್ಞನೆಂಬ ತಿರುಕನ ದರ್ಶನವಾಯಿತು. ಉಭಯತರ ಹಾಡು ಒಂದೇ ಎನಿಸಿತು. ಆಗ ನಾನು ಅವನಲ್ಲಿ ನನ್ನನ್ನು ಕಂಡೆ” ಎಂದು ಉತ್ತಂಗಿಯವರು ತಮ್ಮ ಜೀವನಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡ ಉತ್ತಂಗಿಯವರಿಗೆ ಸರ್ವಜ್ಞನ ವಚನಗಳನ್ನು ಹುಡುಕುವ ಜಾಡು ತಿಳಿಯದಿದ್ದರೆ ಇಂದು ಸರ್ವಜ್ಞನನಾಗಲೀ, ಉತ್ತಂಗಿ ಚೆನ್ನಪ್ಪನವÀರಾಗಲೀ ಮುನ್ನಲೆಗೆ ಬರುತ್ತಲೇ ಇರಲಿಲ್ಲ. ಇಬ್ಬರ ತಾತ್ವಿಕ ವಿಚಾರಗಳು, ಸ್ವಭಾವಗಳು ಪರಸ್ಪರ ಹೊಂದಾಣಿಕೆಯಾಗುತ್ತವೆ. ಇಬ್ಬರೂ ನಾಡಿನುದ್ದಕ್ಕೂ ಸಂಚರಿಸಿದವರು. 

ಹೆಚ್ಚಿದ ಹುಚ್ಚು

    


ಮೂಲೆಗುಂಪಾಗಿದ್ದ ಸರ್ವಜ್ಞನ ವಚನಗಳಿಗೆ ಅಂತರರಾಷ್ಟಿçÃಯ ಮನ್ನಣೆ ನೀಡುವ ಮಹದಾಸೆ ಉತ್ತಂಗಿಯವರಲ್ಲಿ ಮೂಡಿತು. ತೆಲುಗಿನಲ್ಲಿ ವೇಮನ, ತಮಿಳಿನಲ್ಲಿ ಅಮ್ಮಾಯಿ, ಮರಾಠಿಯಲ್ಲಿ ತುಕಾರಾಮನಿಗೆ ದೊರೆತ ಸ್ಥಾನಕ್ಕಿಂತಲೂ ಮಿಗಲಾದ ಸ್ಥಾನವನ್ನು ಕನ್ನಡದಲ್ಲಿ ಸರ್ವಜ್ಞನಿಗೆ ನೀಡಬೇಕೆಂದು ನಿಶ್ಚಯಿಸಿದರು. ಅದರ ಮೊದಲ ಭಾಗವಾಗಿ ವಚನಗಳನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಲು ಮುಂದಾದರು. 

ತರ್ಜುಮೆ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಉತ್ತಂಗಿಯವರಿಗೆ, ಮುದ್ರಿತ ವಚನಗಳಲ್ಲಿ ದೋಷವಿರುವುದು ದೃಷ್ಟಿಗೋಚರವಾಯಿತು. ಇಂತಹ ಅಶುದ್ದ ವಚನಗಳನ್ನು ಅನುವಾದಿಸಿದರೆ ದೋಷಗಳನ್ನು ಎತ್ತಿ ಹಿಡಿದಂತಾಗುತ್ತದೆ ಮತ್ತು ತಪ್ಪು ಸಂದೇಶ ರವಾನೆಯಾಗುತ್ತದೆ, ಅಲ್ಲದೇ ಸರ್ವಜ್ಞನಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದೆನಿಸಿ ಅನುವಾದ ಕಾರ್ಯವನ್ನು ಅಲ್ಲಿಗೆ ನಿಲ್ಲಿಸಿದರು. ಈ ಸಮಸ್ಯೆಗೆ ಪರಿಹಾರ ತಿಳಿದುಕೊಳ್ಳಲು ಕೆಲದಿನಗಳೇ ಬೇಕಾದವು. ಪರಿಹಾರಾರ್ಥವಾಗಿ ಮೂಲ ವಚನಗಳ ಸಂಶೋಧನೆ ಹಾಗೂ ಶುದ್ದೀಕರಣಕ್ಕೆ ಕೈ ಹಾಕಿದರು. ಕೆಲವು ತಿಂಗಳಲ್ಲಿ ಮುಗಿಯಬಹುದು ಎಂದುಕೊAಡಿದ್ದ ಕಾರ್ಯ ಕೆಲವು ವರ್ಷಗಳವರೆಗೂ ಸಾಗಿತು. 

ಮುದ್ರಿತ ವಚನಗಳಲ್ಲಿನ ದೋಷ ತಿದ್ದುವ ಕಾರ್ಯದ ಭಾಗವಾಗಿ ಮೂಲ ತಾಡವೋಲೆ ಪ್ರತಿಗಳನ್ನು ಹುಡುಕಿ ಹೊರಟರು. ಇದು ಸುಲಭ ಕಾರ್ಯವಾಗಿರಲಿಲ್ಲ. ಮನೆ, ಮಠ, ಊರು, ಕೇರಿ, ಪ್ರಾಂತ್ಯಗಳನ್ನು ಸುತ್ತಿದರೂ ಎಲ್ಲಿಯೂ ಮೂಲ ಪ್ರತಿಗಳು ದೊರೆಯದೇ ಹತಾಶರಾದರು. ಕನ್ನಡ ಪಸರಿಕೆಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಅನೇಕ ವ್ಯಕ್ತಿಗಳು ಮತ್ತು ಕೆಲ ಸಂಘ ಸಂಸ್ಥೆಗಳಿಗೆ ಪತ್ರ ಬರೆದರು. ಇಲ್ಲೂ ಯಾವುದೇ ಮಾಹಿತಿ ದೊರೆಯಲಿಲ್ಲ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮರಳಿ ಯತ್ನವ ಮಾಡಿದರು. ಮದ್ರಾಸ್ ಮತ್ತು ಮೈಸೂರಿನ ಪ್ರಾಚ್ಯಕೋಶಗಾರಗಳಿಗೂ ಪತ್ರ ಬರೆದರು. ಉತ್ತಂಗಿ ಚೆನ್ನಪ್ಪನವರ ಕನ್ನಡದ ಕಳಕಳಿಯನ್ನು ಗಮನಿಸಿದ ಮದ್ರಾಸ್ ಮತ್ತು ಮೈಸೂರು ಪ್ರಾಚ್ಯಕೋಶಾಧಿಕಾರಿಗಳು ಸರ್ವಜ್ಞನ ವಚನಗಳುಳ್ಳ ತಾಳೆಗರಿಗಳ ಹಸ್ತಪ್ರತಿಗಳನ್ನು ಕರಾರಿನ ಮೇಲೆ ಕಳಿಸಿಕೊಟ್ಟರು. ಆಗ ಉತ್ತಂಗಿಯವರು ಸರ್ವಜ್ಞನೇ ದೊರೆತಷ್ಟು ಸಂತಸಗೊAಡರು. 

ದೋಷ ಹುಡುಕುವಲ್ಲಿ ಘಾಸಿಗೊಂಡ ಬದುಕು

ಸರ್ವಜ್ಞನ ಮೂಲ ವಚನಗಳನ್ನು ಪರಿಶೀಲಿಸಿದಾಗ, ಮುದ್ರಿತ ಹಾಗೂ ಮೂಲ ವಚನಗಳಲ್ಲಿ ಸಾಕಷ್ಟು ದೋಷ ಹಾಗೂ ವ್ಯತ್ಯಾಸಗಳಿರುವುದನ್ನು ಗಮನಿಸಿದರು. ಜೊತೆಗೆ ಅದುವರೆಗೂ ಅರೆಬರೆ ರೂಪದಲ್ಲಿ ದರ್ಶನವಾಗಿದ್ದ ಸರ್ವಜ್ಞ ಈಗ ಪರಿಪೂರ್ಣ ಪಂಡಿತನಾಗಿ ಗೋಚರಿಸಿದ.

ಆರು ಬೆಟ್ಟವನೊಬ್ಬ ಹಾರಬಹುದೆಂದರೆ

ಹಾರಬಹುದೆAದು ಎನಬೇಕು, ಮೂರ್ಖನೊಡ

ಹೋರಾಟ ಸಲ್ಲ ಸರ್ವಜ್ಞ|| ಇತರರ ಮಾತಿಗೆ ಬೆಲೆಕೊಡುತ್ತಾ, ವಿತಂಡವಾದಿಗಳ ವಿರುದ್ದ ಗುದ್ದಾಡಬಾರದು ಎಂಬುದನ್ನು ಮನಗಂಡಿದ್ದ ರೆವೆರೆಂಡ್ ಚೆನ್ನಪ್ಪನವರು ತಮ್ಮ ಪಾಡಿಗೆ ತಾವು ಸರ್ವಜ್ಞನ ವಚನಗಳನ್ನು ಸಂಗ್ರಹಿಸುವಲ್ಲಿ ತೊಡಗಿಕೊಂಡರು.

ಉತ್ತAಗಿಯವರು ಜೀವನವನ್ನು ಪಣಕ್ಕಿಟ್ಟು ವಚನಗಳನ್ನು ತಿದ್ದುವ ಕಾರ್ಯದಲ್ಲಿ ತೊಡಗಿಕೊಂಡರು. ಒಂದೆಡೆ ಬಡತನದ ಬದುಕು, ಇನ್ನೊಂದೆಡೆ ದೊಡ್ಡ ಕುಟುಂಬದ ಭಾರ, ಮತ್ತೊಂದೆಡೆ ಸಮಾಜದ ಕಲ್ಯಾಣ ಕಾರ್ಯಗಳು. ಇವೆಲ್ಲವುಗಳ ನಡುವೆ ಮಿಶನರಿಯ ಕರ್ತವ್ಯ. ಹಗಲಿನಲ್ಲಿ ಇವೆಲ್ಲವುಗಳನ್ನು ಸಂಭಾಳಿಸಿ, ರಾತ್ರಿ ವೇಳೆ ಮರ‍್ನಾಲ್ಕು ಗಂಟೆಗಳ ಕಾಲ ವಚನಗಳನ್ನು ತಿದ್ದುವ ಕೆಲಸದಲ್ಲಿ ನಿರತರಾದರು. ಈ ಮಧ್ಯೆ ತಂದೆಯನ್ನೂ ಕಳೆದುಕೊಂಡರು. ಓದು ಮತ್ತು ಬರಹ ದಿನೇ ದಿನಕ್ಕೂ ಅಧಿಕವಾಗತೊಡಗಿತು. ಹಗಲು ಸಂಸಾರಕ್ಕಾಗಿ ದುಡಿಮೆ. ರಾತ್ರಿ ಸರ್ವಜ್ಞನಿಗಾಗಿ ದುಡಿಮೆ. ಅವಿಶ್ರಾಂತ ದುಡಿಮೆಯಿಂದ ನಿದ್ರಾಭಂಗವಾಗಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಒದಗಿಬಂತು. ದೇಹ ಸಂಪೂರ್ಣವಾಗಿ ದುರ್ಬಗೊಂಡಿತ್ತು. ಆಸ್ಪತ್ರೆಗೆ ಸೇರಬೇಕಾದುದು ಅನಿವಾರ್ಯವಾಗಿತ್ತು.

ಮಂದ ಬೆಳಕಿನಲ್ಲಿನ ಸತತ ಅಭ್ಯಾಸದಿಂದಾಗಿ ದೃಷ್ಟಿಯೂ ಕಡಿಮೆಯಾಗಿತ್ತು. ಅಲ್ಲದೇ ಕಣ್ಣಿನ ನರಗಳು ದುರ್ಬಲಗೊಂಡು ನೆವೆ ಪ್ರಾರಂಭವಾಗಿ ನೋವು ಹೆಚ್ಚಾಯಿತು. ದೃಷ್ಟಿ ಮರಳಿ ಬಾರದೇನೋ ಎಂಬಷ್ಟು ನೋವು ಹೆಚ್ಚಾಯಿತು. ಎಲ್ಲರಿಗೂ ಆತಂಕ ಶುರುವಾಯಿತು. ರೋಗ ಗುಣಮುಖವಾಗಲು ಒಂದೆರಡು ತಿಂಗಳುಗಳೇ ಬೇಕಾಯಿತು. ಆಸ್ಪತ್ರೆ ಸೇರಿದ್ದರಿಂದ ವಚನಗಳ ತಿದ್ದುಪಡಿ ಕಾರ್ಯ ಮೊಟಕುಗೊಂಡಿತು. ಇದು ಉತ್ತಂಗಿಯವರನ್ನು ತೀವ್ರವಾಗಿ ಬಾಧಿಸತೊಡಗಿತು. ಕೈಗೊಂಡ ಕಾರ್ಯ ವ್ಯರ್ಥವಾಯಿತಲ್ಲ ಎಂದು ಅನೇಕ ಸಲ ಹಳಹಳಿಸಿದರು. 

ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರ ಪತ್ನಿಯ ಒತ್ತಾಸೆಯಿಂದ ರಾತ್ರಿ ನಿದ್ದೆಗೆಡುವ ಸಂಭವ ನಿಂತಿತು. ಇವರ ಈ ಮಹಾನ್ ಕಾರ್ಯದಲ್ಲಿ ಹೆಂಡತಿ, ಮಕ್ಕಳು ನೀಡಿದ ಸಹಕಾರವನ್ನು ಉತ್ತಂಗಿಯವರು ನೆನೆಯುತ್ತಲೇ ಇದ್ದರು. ಧಾರವಾಡದ ಟ್ರೆöÊನಿಂಗ್ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದ ಹೆಂಡತಿ, ಬಿಡುವಿನ ವೇಳೆಯಲ್ಲಿ ತನ್ನ ಸಹೋದ್ಯೋಗಿ ಮತ್ತು ವಿದ್ಯಾರ್ಥಿಗಳನ್ನು ಕರೆತಂದು ವಚನಗಳ ಪರಿಶೋಧನೆ ಹಾಗೂ ಆಕಾರಾದಿ ಜೋಡಣೆಗೆ ಸಹಾಯ ಮಾಡುತ್ತಿದ್ದರು. ದ.ರಾ.ಬೇಂದ್ರೆ, ಸಿದ್ದರಾಮಪ್ಪ ಪಾವಟೆ, ಮ.ಪ್ರ.ಪೂಜಾರ, ಬೆನಗಲ್ ರಾಮರಾಯರು, ಮೂರ್ತಾಚಾರ ಕಟ್ಟಿ, ಚನ್ನಬಸಪ್ಪ ಶಿರಹಟ್ಟಿ, ನಾಮದಾರ ಬೆಳವಿ ಮುಂತಾದ ಪಂಡಿತ ಪಾಮರರ ಸಲಹೆ ಸೂಚನೆ ಅವಲೋಕನಗಳಿಗೆ ಒಳಪಟ್ಟ ಸರ್ವಜ್ಞನ ಗ್ರಂಥದ ಹಸ್ತಪ್ರತಿ ಸಿದ್ದವಾಯಿತು.

ಪುಟಿದೆದ್ದ ಚಿನ್ನ

ಹಸ್ತಪ್ರತಿಯೇನೋ ಸಿದ್ದವಾಯಿತು. ಆದರೆ ಅದನ್ನು ಮುದ್ರಿಸುವಷ್ಟು ಹಣಕಾಸಿನ ಶಕ್ತಿ ಉತ್ತಂಗಿಯವರಿಗೆ ಇರಲಿಲ್ಲ. ಆ ಕಾಲದ ಅನೇಕ ಪ್ರಕಾಶಕರನ್ನು ಭೇಟಿಯಾಗಿ ಪ್ರಕಟಣೆಗೆ ಭಿನ್ನಹ ಮಾಡಿಕೊಂಡರು. ಆದರೆ ಯಾವೊಬ್ಬ ಪ್ರಕಾಶಕರೂ ಪ್ರಕಟಿಸಲು ಮನಸ್ಸು ಮಾಡಲಿಲ್ಲ. ಈ ಗ್ರಂಥದ ಮಹತ್ವ ಅವರಿಗೆ ಅರ್ಥವಾಗಲಿಲ್ಲವೋ ಅಥವಾ ದೊಡ್ಡ ಮೊತ್ತ ಬಂಡವಾಳ ಹೂಡಿಕೆಯ ಕೊರತೆಯೋ ತಿಳಿಯಲಿಲ್ಲ. ಹಸ್ತಪ್ರತಿ ಸಿದ್ದವಾಗಿ ಎರಡು ವರ್ಷವಾದರೂ ಪ್ರಕಟಣೆಯ ಭಾಗ್ಯ ದೊರೆಯದಿರುವುದು ಉತ್ತಂಗಿಯವರನ್ನು ಮತ್ತಷ್ಟು ಚಿಂತೆಗೀಡುಮಾಡಿತು. ಮಿತ್ರರೊಬ್ಬರು ತೋರಿದ ಕೊನೆಯ ಹಾದಿಯಲ್ಲಿ ಧಾರವಾಡದ ಕರ್ನಾಟಕ ಪ್ರಿಟಿಂಗ್ ವರ್ಕ್ಸ್ನ ಯಶವಂತರಾಯ ಜಠಾರರು ಗ್ರಂಥವನ್ನು ಮುದ್ರಿಸಲು ಒಪ್ಪಿದರು.

600 ಪುಟಗಳ ಬೃಹದಾಕಾರದ ಗ್ರಂಥಾಲಯ ಆವೃತ್ತಿಯನ್ನು ಮುದ್ರಿಸಲಾಯಿತು. ಅಂತೂ ಇಂತೂ ಗ್ರಂಥ ಮುದ್ರಣವಾಯಿತಲ್ಲ ಎಂಬ ಖುಷಿ ಬಹಳ ದಿನ ಉಳಿಯಲಿಲ್ಲ. ಮತ್ತೊಂದು ಚಿಂತೆ ಪ್ರಾರಂಭವಾಯಿತು. ಮುದ್ರಣಗೊಂಡು ಎರಡು ವರ್ಷ ಕಳೆದರೂ ಗ್ರಂಥಗಳು ಮಾರಾಟವಾಗದೇ ಮೂಲೆಗುಂಪಾದವು. ಇದು ಉತ್ತಂಗಿಯವರನ್ನು ಹಾಗೂ ಜಠಾರರನ್ನು ಕಳವಳಕ್ಕೀಡು ಮಾಡಿತು. ಆದರೂ ಎದೆಗುಂದದೆ ಮುಂದಿನ ಕಾರ್ಯಕ್ಕೆ ತೊಡಗಿದರು. 600 ಪುಟಗಳುಳ್ಳ ಗ್ರಂಥಕ್ಕೆ ಟಿಪ್ಪಣಿ ಹಾಗೂ ವಿವರಣೆಯನ್ನೊಳಗೊಂಡ 300 ಪುಟಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಯಿತು. ಆಗ ಅದೇನು ಮಾಯೆ ನಡೆಯಿತೋ ಯಾರಿಗೂ ತಿಳಿಯದು. ಒಮ್ಮೆಲೆ ಈ ಗ್ರಂಥಕ್ಕೆ ಎಲ್ಲೆಡೆಗಳಿಂದ ಬೇಡಿಕೆ ಬರತೊಡಗಿತು. ಪ್ರತಿಗಳು ಪುನಃ ಪುನಃ ಮುದ್ರಣಗೊಂಡವು. ಓದಿದ ಪ್ರತಿಯೊಬ್ಬರೂ ಉತ್ತಂಗಿ ಹಾಗೂ ಜಠಾರರನ್ನು ಮುಕ್ತ ಮನಸ್ಸಿನಿಂದ ಹೊಗಳಿದರು.

ಉತ್ತಂಗಿಯವರ ಕೆಲಸ ಇಲ್ಲಿಗೆ ನಿಲ್ಲಲಿಲ್ಲ. ತಮ್ಮ ಜೀವನದುದ್ದಕ್ಕೂ ಸರ್ವಜ್ಞನ ವಚನಗಳನ್ನು ಪರಿಷ್ಕರಿಸುವ, ವಿವಿಧ ಆವೃತ್ತಿಗಳನ್ನು ಪ್ರಕಟಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಹಳ್ಳಿ ಪಟ್ಟಣಗಳನ್ನು ಸುತ್ತಿ ಸರ್ವಜ್ಞನ ವ್ಯಕ್ತಿತ್ವವನ್ನು ಆತನ ವಚನಗಳಿಂದಲೇ ವಿವರಿಸುತ್ತಾ ನಾಡಿನುದ್ದಕ್ಕೂ ಸಂಚರಿಸಿದರು. ಯಾವುದೇ ಸಭೆ, ಸಮಾರಂಭ, ಉತ್ಸವಗಳಲ್ಲಿ ಪಾಲ್ಗೊಂಡರೂ ಸರ್ವಜ್ಞ ಮತ್ತು ಆತನ ವಚನಗಳೇ ಅವರ ಭಾಷಣದ ವಿಷಯವಾಗಿರುತ್ತಿತ್ತು. ದಿನಗಟ್ಟಲೇ ಬೇಸರವಾಗದಂತೆ ಸರ್ವಜ್ಞನ ಬಗ್ಗೆ ಮಾತನಾಡುವಷ್ಟು ವಿಷಯ ಅವರ ಆಂತರ್ಯದಲ್ಲಿ ಅಡಗಿತ್ತು. ಸರ್ವಜ್ಞನ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಹಾಗೂ ಬರೆಯುವ ಯೋಗ್ಯತೆ ಇದ್ದದ್ದು ಒಬ್ಬರಿಗೆ ಮಾತ್ರ. ಅದು ರೆವೆರೆಂಡ್ ಉತ್ತಂಗಿ ಚೆನ್ನಪ್ಪನವರು ಎನ್ನುವುದು ಕನ್ನಡ ಸಾರಸತ್ವ ಲೋಕದ ಅಭಿಮತವಾಗಿತ್ತು.

ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ

ಏಳು ಸಾವಿರದ ಎಪ್ಪತ್ತು ವಚನಗಳ

ಹೇಳಿದನು ಕೇಳ ಸರ್ವಜ್ಞ || ಎಂಬಲ್ಲಿ ಸರ್ವಜ್ಞ ರಚಿಸಿದ ವಚನಗಳ ಸಂಖ್ಯೆ ತಿಳಿಯುತ್ತದೆ. ಚೆನ್ನಪ್ಪನವರು ಈ ಕಾರ್ಯ ಕೈಗೆತ್ತಿಕೊಳ್ಳದೇ ಹೋಗಿದ್ದರೆ ಇಷ್ಟೊಂದು ವಚನಗಳು ದರ್ಶನ ಹಾಗೂ ಶ್ರವಣ ಭಾಗ್ಯ ನಮಗೆ ದೊರೆಯುತ್ತಿರಲಿಲ್ಲ ಅಲ್ಲವೇ?


    ಶಾರೀರಿಕ ಹಾಗೂ ಮಾನಸಿಕ ಶ್ರಮವನ್ನು ಪರಿಗಣಿಸದೇ ಉತ್ತಂಗಿಯವರು ಸರ್ವಜ್ಞನ ವಚನಗಳನ್ನು ಬೆಳಕಿಗೆ ತಂದರು. ಇಂದು ಸರ್ವಜ್ಞನ ಸೊಲ್ಲು ಸರ್ವರ ನಾಲಿಗೆಯಲ್ಲಿ ನಲಿಯುವಂತೆ ಮಾಡುವಲ್ಲಿ ಉತ್ತಂಗಿಯವರ ಶ್ರಮ ಶ್ಲಾಘನೀಯ. 





No comments:

Post a Comment