December 11, 2021

ಶಿಕ್ಷಣದಲ್ಲಿ ತಂತ್ರಜ್ಞಾನ : ಪಾಲಕರು ಮತ್ತು ಮಕ್ಕಳ ನಿರೀಕ್ಷೆಗಳು

  ಸೆಪ್ಟಂಬರ್ 2019ರ ಶಿಕ್ಷಣವಾರ್ತೆಯಲ್ಲಿ ಪ್ರಕಟವಾದ ನನ್ನ ಬರಹ. 


ಶಿಕ್ಷಣದಲ್ಲಿ ತಂತ್ರಜ್ಞಾನ : ಪಾಲಕರು ಮತ್ತು ಮಕ್ಕಳ ನಿರೀಕ್ಷೆಗಳು




ಶಿಕ್ಷಣದ ಪ್ರಕ್ರಿಯೆಯು ಅನೇಕ ಹಂತಗಳ ಬದಲಾವಣೆಗಳನ್ನು ಹೊಂದುತ್ತಲೇ ಸಾಗಿದೆ. ನಲವತ್ತು ವರ್ಷಗಳಿಂದಲೂ ಒಬ್ಬ ವಿದ್ಯಾರ್ಥಿಯಾಗಿ, ನಂತರ ಒಬ್ಬ ಶಿಕ್ಷಕನಾಗಿ ಶಿಕ್ಷಣ ಕ್ಷೇತ್ರದ ಬದಲಾವಣೆಗಳನ್ನು ಗಮನಿಸುತ್ತಾ, ಅನುಭವಿಸುತ್ತಾ ಸಾಗುತ್ತಿದ್ದೇನೆ. ನಾನು ವಿದ್ಯಾರ್ಥಿಯಾಗಿದ್ದಾಗ ನನಗೆ ಕಲಿಸುತ್ತಿದ್ದ ಗುರುಗಳಿಗೆ ಪಠ್ಯಪುಸ್ತಕ, ಬೋರ್ಡ್ ಮತ್ತು ಚಾಕ್‌ಪೀಸ್‌ಗಳೇ ಅಮೂಲ್ಯ ಸಂಪನ್ಮೂಲಗಳಾಗಿದ್ದವು. ಆದರೆ ನಾನು ಶಿಕ್ಷಕನಾಗುವ ವೇಳೆಗೆ ತಂತ್ರಜ್ಞಾನ ನಿಧಾನವಾಗಿ ತರಗತಿ ಕೊಣೆಗೆ ಆಗಮಿಸುತ್ತಿತ್ತು. ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ ಕುರಿತು ಅಲ್ಲಲ್ಲಿ ಒಂದಿಷ್ಟು ಪ್ರಯೋಗಗಳು ನಡೆಯುತ್ತಲೇ ಇದ್ದವು. ಆಗ ನಾವೆಲ್ಲಾ ಕಣ್ಣು, ಕಿವಿ ಅಗಲಿಸಿಕೊಂಡು ಆಸಕ್ತಿಯಿಂದ ಅತ್ತ ಗಮನಿಸುತ್ತಿದ್ದೆವು. ಕೇವಲ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳ ಕೆಲವು ಶಾಲೆಗಳಲ್ಲಿ ಪ್ರಾರಂಭವಾದ ತಂತ್ರಜ್ಞಾನಾಧಾರಿತ ಶಿಕ್ಷಣವು ಕಾಲಕ್ರಮೇಣ ಗ್ರಾಮೀಣ ಶಾಲೆಗಳಿಗೂ ಕಾಲಿಡತೊಡಗಿತು. 

ಶಿಕ್ಷಣದಲ್ಲಿ ತಂತ್ರಜ್ಞಾನ ಸಮ್ಮಿಳಿತಗೊಂಡು ಅನೇಕ ವರ್ಷಗಳೇ ಕಳೆದಿವೆ. ಆದಾಗ್ಯೂ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಬಳಸುವುದು ಒಂದು ಸವಾಲಾಗಿಯೇ ಉಳಿದಿದೆ. ಇಂದು ಅನೇಕ ಶಾಲೆಗಳು ತಂತ್ರಜ್ಞಾನ ಆಧಾರಿತ ಬೋಧನೆ-ಕಲಿಕೆಯನ್ನು ಅಳವಡಿಸಿಕೊಂಡಿವೆ. ದಿನಕಳೆದಂತೆ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಮಹತ್ವ ಹೆಚ್ಚುತ್ತಲೇ ಇದೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್‌ಗಳು ತರಗತಿ ಕೋಣೆಯಲ್ಲಿ ಸ್ಥಾನ ಪಡೆಯತೊಡಗಿದ ನಂತರ ಬೋಧನೆ-ಕಲಿಕೆಯಲ್ಲಿ ಒಂದಿಷ್ಟು ಹೊಸತನ ಪ್ರಾರಂಭವಾಗತೊಡಗಿತು. ಇವುಗಳ ನಂತರ ಮೊಬೈಲ್ ಬಂದನAತರ ಮಹತ್ತರ ಬದಲಾವಣೆಗಳ ನಿರೀಕ್ಷೆ ಇತ್ತು. ಶಿಕ್ಷಣದಲ್ಲಿ ತಂತ್ರಜ್ಞಾನದ ಫಲಾಫಲಗಳನ್ನು ಶಿಕ್ಷಕರ ನೆಲೆಯಲ್ಲಿ ಗಮನಿಸುವುದಕ್ಕಿಂತ ಮಕ್ಕಳು ಮತ್ತು ಪಾಲಕರ ಹಿನ್ನಲೆಯಲ್ಲಿ ಗಮನಿಸುವ ಅಗತ್ಯವಿದೆ. 

ಪಾಲಕರ ನಿರೀಕ್ಷೆಗಳು : ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆಯನ್ನು ಮೊದಲು ಸ್ವಾಗತಿಸಿದವರೇ ಪಾಲಕರು. ಬಹುತೇಕ ಪಾಲಕರಿಗೆ ಶಿಕ್ಷಣದಲ್ಲಿ ತಂತ್ರಜ್ಞಾನ ಎಂದಕೂಡಲೇ ನಮ್ಮ ಮಕ್ಕಳು ಕಂಪ್ಯೂಟರ್ ಬಳಸುವುದನ್ನು ಕಲಿಯುತ್ತಾರೆ, ಅವರು ಕಂಪ್ಯೂಟರ್ ಮೂಲಕ ಸಾಕಷ್ಟು ಜ್ಞಾನ ಕಟ್ಟಿಕೊಳ್ಳುತ್ತಾರೆ, ನಗರದ ಮಕ್ಕಳಂತೆ ನಮ್ಮ ಮಕ್ಕಳೂ ಸಹ ಭವಿಷ್ಯದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗುತ್ತಾರೆ, ವಿದೇಶಗಳಿಗೆ ಹೋಗುತ್ತಾರೆ, ಕೈತುಂಬಾ ಸಂಬಳ ತರುತ್ತಾರೆ ಎಂದೆಲ್ಲಾ ಕನಸು ಕಟ್ಟಿಕೊಂಡರು. 

ಇನ್ನು ಕೆಲವು ಪಾಲಕರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗೀ ಶಾಲೆಗೆ ಸೇರಿಸಿದರೆ ಕಂಪ್ಯೂಟರ್ ಜ್ಞಾನ ಪಡೆಯುತ್ತಾರೆ ಎಂಬ ಭ್ರಮೆಯೊಳಗೆ ಸಾವಿರಾರು ರೂಪಾಯಿ ಡೊನೇಷನ್ ಕೊಟ್ಟಾದರೂ ಅಂತಹ ಶಾಲೆಗೆ ಕಳಿಸಿದರು. ಕೆಲವು ಕಡೆ ಆ ಕನಸು ನನಸಾಯಿತು. ಬಹುತೇಕ ಖಾಸಗೀ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಶಿಕ್ಷಣ ಇಲ್ಲದಿರುವುದು, ಇದ್ದರೂ ಮಕ್ಕಳ ಕಲಿಕೆಗೆ ಬಳಕೆಯಾಗದೇ ಇರುವುದು ಆದರೆ ಬಹುತೇಕ ಪಾಲಕರು ಭಾವಿಸಿದಂತೆ ಮಕ್ಕಳು ಕಂಪ್ಯೂಟರ್‌ನಲ್ಲಿ ಪ್ರಾವೀಣ್ಯತೆ ಪಡೆಯಲಿಲ್ಲ. ಇನ್ನು ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಕಂಪ್ಯೂಟರ್ ಲಭ್ಯವಿಲ್ಲ. ಲಭ್ಯವಿದ್ದರೂ ಅವುಗಳನ್ನು ಬಳಸುವ ಶಿಕ್ಷಕರಿಲ್ಲ, ಶಿಕ್ಷಕರಿದ್ದರೂ ನಿರ್ವಹಣೆಗೆ ಇಲ್ಲ. ಈ ಎಲ್ಲಾ ಕಾರಣಗಳಿಗಾಗಿ ಅವು ಮಕ್ಕಳ ಕಲಿಕೆಗೆ ಸಹಾಯವಾಗಲೇ ಇಲ್ಲ. 

ಇಷ್ಟೆಲ್ಲಾ ಆದರೂ ಅವರ ನಿರೀಕ್ಷೆಗಳು ಬದಲಾಗಿಲ್ಲ. ಕಂಪ್ಯೂಟರ್ ಮೂಲಕ ಕಲಿತ ಮಕ್ಕಳು ಜಾಣರಾಗುತ್ತಾರೆ, ಹೆಚ್ಚು ಅಂಕಗಳಿಸುತ್ತಾರೆ, ಉತ್ತಮ ನೌಕರಿ ಹಿಡಿಯುತ್ತಾರೆ, ನಾವು ಕಲಿಯಲಾಗದೇ ಇರುವುದನ್ನು ನಮ್ಮ ಮಕ್ಕಳು ಕಲಿಯುತ್ತಿದ್ದಾರೆ, ನಮ್ಮ ಮಕ್ಕಳು ಫಸ್ಟ್ ರ‍್ಯಾಂಕ್ ಬರಬೇಕಾದರೆ ಕಂಪ್ಯೂಟರ್ ಜ್ಞಾನ ಬೇಕೇ ಬೇಕು, ಬಹುತೇಕ ಗ್ರಾಮೀಣ ಮಕ್ಕಳ ಪಾಲಕರು ಅರೆ ಅಕ್ಷರಸ್ಥರು/ಅನಕ್ಷರಸ್ಥರಾಗಿದ್ದು, ತಮ್ಮ ಮಕ್ಕಳಿಗೆ ಪಠ್ಯದ ವಿಷಯವನ್ನು ಹೇಳಿಕೊಡುವಷ್ಟು ಕುಶಲತೆ ಅವರಿಗೆ ಇಲ್ಲ. ಪರಿಕಲ್ಪನೆಗಳನ್ನು ತಮ್ಮ ಮಕ್ಕಳಿಗೆ ತಕ್ಷಣದಲ್ಲಿ ಸುಲಭವಾಗಿ ಅರ್ಥ ಮಾಡಿಸುವಂತಹ ತಂತ್ರಜ್ಞಾನಧಾರಿತ ಶಿಕ್ಷಣ ಬೇಕಾಗಿದೆ. ಅದು ಮೊಬೈಲ್ ಮೂಲಕ ದೊರೆಯುವಂತಿದ್ದರೆ ಇನ್ನೂ ಉತ್ತಮ ಎಂಬುದು ಬಹುತೇಕ ಪಾಲಕರ ಅನಿಸಿಕೆ. ಪ್ರಸ್ತುತ ಶೈಕ್ಷಣಿಕ ವರ್ಷದ 6 ರಿಂದ 10 ನೇ ತರಗತಿ ಗಣಿತ ಮತ್ತು ವಿಜ್ಞಾನ ಪಠ್ಯಪುಸ್ತಕಗಳು ಹಾಗೂ ಪಠ್ಯಕ್ಕೆ ಸಂಬAಧಿತ ಕಲಿಕಾ ದೃಢೀಕರಣ ಚಟುವಟಿಕೆಗಳು ದೀಕ್ಷಾ ಎಂಬ ಶೈಕ್ಷಣಿಕ ಆಪ್‌ನಲ್ಲಿ ಲಭ್ಯವಿದೆ. ಬಹುತೇಕ ಪಾಲಕರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರಿಗೆ ಮಾಹಿತಿ ನೀಡುವ ಅವಶ್ಯಕತೆ ಇದೆ.

ಮಕ್ಕಳ ನಿರೀಕ್ಷೆಗಳು : ಮಕ್ಕಳು ಸದಾ ಹೊಸತನ ಬಯಸುತ್ತಾರೆ. ಪ್ರತಿ ಪರಿಕಲ್ಪನೆಯನ್ನು ವಿಶಿಷ್ಠ ರೀತಿಯಲ್ಲಿ ಕಲಿಯಲು ಬಯಸುತ್ತಾರೆ. ಸೃಜನಶೀಲತೆಗೆ ಅಂಟಿಕೊಳ್ಳುವ ಮನಸ್ಸು ಜಾಗೃತವಾಗಿರುತ್ತದೆ. ದೃಕ್ ಶ್ರವಣೋಪಕರಣಗಳ ಮೂಲಕ ಬೇಗನೇ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಬೋಧಿಸುವುದರಿಂದ ಮಕ್ಕಳಲ್ಲಿ ಶಾಶ್ವತ ಹಾಗೂ ಸಂತಸದಾಯಕ ಕಲಿಕೆಯಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಹಾಗೂ ಶೈಕ್ಷಣಿಕ ಮನೋವಿಜ್ಞಾನಿಗಳ ಅಭಿಮತ. 

ಶಾಲೆಯಲ್ಲಾಗಲೀ ಅಥವಾ ಮನೆ ವಾತಾವರಣದಲ್ಲಾಗಲಿ ಮಕ್ಕಳು ತಂತ್ರಜ್ಞಾನದೊAದಿಗೆ ಬೇಗನೇ ಹೊಂದಿಕೊಳ್ಳುತ್ತಾರೆ ಮತ್ತು ಕಲಿಯುತ್ತಾರೆ ಎಂಬುದು ಎಲ್ಲರ ಗಮನಕ್ಕೂ ಬಂದಿದೆ. ಶಿಕ್ಷಣದಲ್ಲಿ ತಂತ್ರಜ್ಞಾನ ಕುರಿತು ಮಕ್ಕಳ ನಿರೀಕ್ಷೆಗಳು ಪಾಲಕರಿಗಿಂತ ವಿಭಿನ್ನ. ಬಹುತೇಕ ಮಕ್ಕಳಿಗೆ ತಂತ್ರಜ್ಞಾನದ ಪರಿಕರಗಳನ್ನು ಬಳಸುವ ಬಗ್ಗೆ ಕಿರು ಮಾಹಿತಿ ಇದೆ. ಆದರೆ ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಹೇಗೆ ಬಳಸಿಕೊಳ್ಳಬೇಕೆಂಬ ಮಾಹಿತಿಯ ಕೊರತೆ ಇದೆ. ಬಹುತೇಕ ಮಕ್ಕಳು ಶೈಕ್ಷಣಿಕ ತಂತ್ರಜ್ಞಾನದ ಭಾಗವಾದ ಸ್ಮಾರ್ಟ್ಫೋನ್ ಬಳಸುತ್ತಾರೆ. ಪರಿಕಲ್ಪನೆ ಆಧಾರಿತ ಪಠ್ಯಕ್ಕೆ ಪೂರಕವಾದ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಹುಡುಕುತ್ತಾರೆ. ಅವರಿಗೆ ನಿರ್ದಿಷ್ಟವಾದ ಮಾಹಿತಿಯ ಕೊರತೆ ಇದೆ. ಇದನ್ನು ಶಿಕ್ಷಕರು ತಿಳಿಸಿಕೊಡಬೇಕಿದೆ. ಈ ಬಗ್ಗೆ ಶಿಕ್ಷಕರನ್ನು ಕೇಳಿದರೆ ಎಲ್ಲಿ ಅಪಾರ್ಥ ಮಾಡಿಕೊಳ್ಳುವರೋ ಎಂಬ ಭಯದಿಂದ ಶಿಕ್ಷಕರನ್ನು ಕೇಳುವ ಗೋಜಿಗೆ ಹೋಗುವುದಿಲ್ಲ. ಈಗಾಗಲೇ ದೃಶ್ಯ ಮಾಧ್ಯಮದ ಮೂಲಕ ಕೆಲ ಮಾಹಿತಿಗಳನ್ನು ಸಂಗ್ರಹಿಸಿ ಪಠ್ಯಕ್ಕೆ ಪೂರಕವಾಗಿ ಅದನ್ನು ಬಳಸಿಕೊಳ್ಳುವ ಕುಶಲತೆ ಮಕ್ಕಳಿಗೆ ಇದೆ. ಇದಕ್ಕೆ ನಿರ್ದಿಷ್ಟ ರೂಪ ನೀಡುವ ಅಗತ್ಯವಿದೆ. ಸ್ಮಾರ್ಟ್ ಕ್ಲಾಸ್ ಇರುವ ಶಾಲೆಗಳಲ್ಲಿ ವಿಷಯಗಳನ್ನು ಕೇವಲ ಪರದೆ ಮೇಲೆ ತೋರಿಸುವುದಕ್ಕಿಂತ ತಾವೇ ಸ್ವತಹ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಿ ಕಲಿಯಲು ಮಕ್ಕಳು ಆಶಿಸುತ್ತಾರೆ. ಬಹುತೇಕ ಶಾಲೆಗಳಲ್ಲಿ ಮಕ್ಕಳ ಕೈಗೆ ಕಂಪ್ಯೂಟರ್/ಲ್ಯಾಪ್‌ಟಾಪ್ ಸಿಗುತ್ತಿಲ್ಲ. ಇದರ ಪರಿಣಾಂವಾಗಿ ಮನೆಯಲ್ಲಿ ಸುಲಭವಾಗಿ ದೊರೆಯುವ ಸ್ವಾರ್ಟ್ಫೋನಿಗೆ ಅಂಟಿಕೊಳ್ಳುತ್ತಾರೆ. 

ಕೇರಳ ಮಾದರಿಯಲ್ಲಿ ಪ್ರತಿ ಶಾಲೆಯಲ್ಲೂ ತಂತ್ರಜ್ಞಾನಧಾರಿತ ಕಲಿಕೆ ವ್ಯವಸ್ಥೆ ಮಾಡಬೇಕಿದೆ. ಮಕ್ಕಳಿಗೆ ಶೈಕ್ಷಣಿಕ ತಂತ್ರಜ್ಞಾಧಾರಿತ ಪರಿಕರಗಳನ್ನು ತೋರಿಸಿದರೆ ಸಾಲದು, ಅವರೇ ಸ್ವತಹ ಮುಟ್ಟಿ ಕಲಿಯಲು ಅವಕಾಶ ನೀಡುವಂತಾಗಬೇಕು. ಎಲ್ಲಾ ತರಗತಿಗಳ ಎಲ್ಲಾ ವಿಷಯಗಳ ಕಲಿಕಾಂಶಗಳು ಆನ್‌ಲೈನ್‌ನಲ್ಲಿ ವಿವಿಧ ಚಟುವಟಿಕೆಗಳ ರೂಪದಲ್ಲಿ ದೊರೆಯುವಂತಾಗಬೇಕು. ಪರಿಕಲ್ಪನೆ ಆಧಾರಿತ ಕಲಿಕೆಗೆ ಮಕ್ಕಳೇ ರೂಪಿಸಿಕೊಳ್ಳಬಹುದಾದ ಚಟುವಟಿಕೆಗಳ ಭಂಢಾರ ಶೈಕ್ಷಣಿಕ ತಂತ್ರಜ್ಞಾನದ ಮೂಲಕ ದೊರೆತರೆ ಎಲ್ಲಾ ಮಕ್ಕಳು ಖಂಡಿತವಾಗಿ ಜೀನಿಯಸ್ ಆಗುತ್ತಾರೆ. 





No comments:

Post a Comment