December 11, 2021

ಮನೆಯಲ್ಲಿರಲಿ ಮಗುಸ್ನೇಹಿ ಕಲಿಕಾ ವಾತಾವರಣ

 ದಿನಾಂಕ 19-6-2019ರ ಪ್ರಜಾವಾಣಿ ಯಲ್ಲಿ ಪ್ರಕಟವಾದ ನನ್ನ ಬರಹ


ಮನೆಯಲ್ಲಿರಲಿ ಮಗುಸ್ನೇಹಿ ಕಲಿಕಾ ವಾತಾವರಣ



    ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಪ್ರಮುಖ ಭಾಗೀದಾರರು. ಮಕ್ಕಳಿಗೆ ಅರ್ಥಪೂರ್ಣ ಶಿಕ್ಷಣವನ್ನು ಕೊಡಬೇಕಾದರೆ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಚರ್ಚೆ ಸಂವಾದಗಳು ನಡೆಯುವಾಗ ಮಕ್ಕಳ ವಿಚಾರ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಮಕ್ಕಳ ಬಗೆಗಿನ ಕಲ್ಪನೆ, ಮಕ್ಕಳ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವುದು, ಮಕ್ಕಳ ಬೆಳವಣಿಗೆ ಹಾಗೂ ಕಲಿಕೆಯನ್ನು  ಪ್ರೇರೇಪಿಸುವ ಅಂಶಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. 

    ಮಗು ಕೇವಲ ಶಾಲೆಯಲ್ಲದೇ ಮನೆಯ ವಾತಾವರಣದಲ್ಲಿಯೂ ಕಲಿಯುತ್ತದೆ. ಮಗುವಿನ ಕಲಿಕಾ ವಾತಾವರಣವು ಮಗುವಿನ ತಕ್ಷಣದ ಸುತ್ತಮುತ್ತಲಿನ ವಾತಾವರಣದಲ್ಲಿ ನಡೆಯುವ ಅನೌಪಚಾರಿಕ ಕಲಿಕಾ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ಬದಲಾವಣೆಗಳು ಸಹ ಮಕ್ಕಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿವೆ. ಆದಕಾರಣ ಪಾಲಕರು ಮಗುವಿನ ಮಗುವಿನ ಕಲಿಕಾ ಪರಿಸರವನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಬಹು ಮುಖ್ಯವಾಗಿ ಮಗುವಿನ ಬಾಲ್ಯವು ಹೆಚ್ಚು ಸಂಕೀರ್ಣವಾಗಿದ್ದು ಬದಲಾವಣೆಯಾಗುತ್ತಲೇ ಇದೆ. ಸಮಾಜದ ಎಲ್ಲಾ ಸಂಕೀರ್ಣ ಬದಲಾವಣೆಗಳು ಮಗುವಿನ ಕಲಿಕಾ ಸಾಮರ್ಥ್ಯ ಹಾಗೂ ಅನಾವರಣಗೊಳ್ಳುವ ಸಾಮರ್ಥ್ಯಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆ. 

    ಮಗುವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ತ್ರಾಸದಾಯಕ ಕೆಲಸ. ಮಗುವೊಂದನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಪ್ರತೀ ಮಗುವೂ ಅನನ್ಯ. ಪ್ರತೀ ಮಗುವಿನ ಕಲಿಕಾ ವಿಧಾನ, ವೇಗ ಮತ್ತು ಗ್ರಹಿಕೆಗಳು ವಿಭಿನ್ನವಾಗಿರುತ್ತವೆ. ಇದನ್ನು ಆಧರಿಸಿ ಮನೋವಿಜ್ಞಾನಿಗಳು ಅನೇಕ ಕಲಿಕಾ ಸಿದ್ದಾಂತಗಳನ್ನು ರೂಪಿಸಿದ್ದಾರೆ. 

ಮಗುಸ್ನೇಹಿ ವಾತಾವರಣ ಏಕೆ?

    ಮಗುವಿನ ಸಾಮರ್ಥ್ಯಗಳು, ಆಸಕ್ತಿಯ ಕ್ಷೇತ್ರಗಳು, ಕಲಿಕಾ ಶೈಲಿ ಮತ್ತು ಮಗುವಿನ ಅಗತ್ಯತೆಗಳು ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಪಠ್ಯಕ್ರಮ, ಕಲಿಕಾ ವಿಧಾನಗಳು, ಕಲಿಕಾ ಚಟುವಟಿಕೆಗಳು, ಮತ್ತು ಕಲಿಕೆಯ ವಾತಾವರಣಗಳು ಮಗುಸ್ನೇಹಿಯಾಗಿದ್ದಾಗ ಕಲಿಕೆಯು ಸುಗಮವಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಮತವಾಗಿದೆ. ರೂಸೋ, ಪ್ರೊಬೆಲ್, ಪೆಸ್ಟಾಲಜಿ, ಜಾನ್‌ಡ್ಯೂಯಿ, ಜಾನ್‌ಪಿಯಾಜೆ, ರವೀಂದ್ರನಾಥ ಠ್ಯಾಗೋರ್ ಮುಂತಾದ ಶಿಕ್ಷಣ ತಜ್ಞರು ಮಗುಸ್ನೇಹಿ ಕಲಿಕಾ ವಾತಾವರಣದ ಅಗತ್ಯತೆಯನ್ನು ಅರಿತು ಅದನ್ನು ತಮ್ಮ ಪ್ರಯೋಗಗಳಲ್ಲಿ ಸಾಧಿಸಿ ತೋರಿಸಿದ್ದಾರೆ. 

    ಮಗುಸ್ನೇಹಿ ವಾತಾವರಣವು ಮಗು ಸ್ವಂತAತ್ರವಾಗಿ ಕಲಿಕೆಯಲ್ಲಿ ತೊಡಗುವಂತೆ ಮಾಡುತ್ತದೆ. ಮಗುವಿನ ಭೌತಿಕ, ಬೌದ್ದಿಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಗೆ ಆಧ್ಯತೆ ನೀಡುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿ. ಎಲ್ಲಾ ಆಯಾಮಗಳಲ್ಲಿ ಮಗು ಅಭಿವೃದ್ದಿ ಹೊಂದಿದಾಗ ಸರ್ವತೋಮುಖ ಬೆಳವಣಿಗೆಯಾಗಿದೆ ಎನ್ನುತ್ತೇವೆ. ಇದು ಮುಖ್ಯವಾಗಿ ಭಯರಹಿತ ಮುಕ್ತ ವಾತಾವರಣವನ್ನು ಅವಲಂಬಿಸಿದೆ. 

    ಮಕ್ಕಳಲ್ಲಿನ ಸಾಮಾನ್ಯ ಗುಣಲಕ್ಷಣಗಳೆಂದರೆ  ಮೇರೆ ಇಲ್ಲದ ಕುತೂಹಲ, ಸ್ವಾತಂತ್ರ‍್ಯದ ಹಂಬಲ, ಅನ್ವೇಷಣೆ ಅಥವಾ ಪ್ರಯೋಗ ನಡೆಸಬೇಕೆಂಬ ಅಗತ್ಯತೆ ಹಾಗೂ ಎಲ್ಲವನ್ನೂ ತಾನೇ ಮಾಡಬೇಕೆಂಬ ತುಡಿತ. ಮಗುವಿನ ಬಗ್ಗೆ ಪಾಲಕರಿಗೆ ಸೂಕ್ತ ಕಾಳಜಿ ಇರಬೇಕು. ಮಗು ಅನ್ವೇಷಣೆ ಮಾಡಲು, ತಾನೇ ಸ್ವತಃ ಕೆಲಸ ಕಾರ್ಯಗಳನ್ನು ಮಾಡಲು ಬಿಡಬೇಕು. ಮಗುವಿನ ಸಂಕಲ್ಪ ಶಕ್ತಿ ಹಾಗೂ ನಿರ್ಧಾರಗಳಿಗೆ ಮನ್ನಣೆ ನೀಡಬೇಕು. ಹಾಗೆಯೇ ಮಗುವಿನ ಸಾಮರ್ಥ್ಯದ ಬಗ್ಗೆ ಗೌರವ ಇರಬೇಕು. ಪಾಲಕರು ಮಕ್ಕಳಿಗೆ ಮುಕ್ತ ಅವಕಾಶ ಒದಗಿಸಬೇಕು ಮತ್ತು ಮಗುವು ಅಪಾಯಕಾರಿಯಲ್ಲದ ಸವಾಲುಗಳು ಮತ್ತು ಸಾಹಸಗಳಿಗೆ ಮಾತ್ರ ಕೈ ಹಾಕುವಂತೆ ನೋಡಿಕೊಳ್ಳಬೇಕು.  

    ಮನೆಯಲ್ಲದೆ, ಮಗುವಿಗೆ ದೊರೆಯುವ ಇನ್ನೊಂದು ಪರಿಸರವೆಂದರೆ ಶಾಲೆ.  ಮನೆಗೂ ಶಾಲೆಗೂ ವ್ಯತ್ಯಾಸವಿದೆ. ಶಾಲೆಯಲ್ಲಿ ಶಿಕ್ಷಕರ ಬೋಧನಾ ಶೈಲಿಗೂ, ಮನೆಯಲ್ಲಿ ಪಾಲಕರು ಹೇಳುವ ಶೈಲಿಗೂ ವ್ಯತ್ಯಾಸ ಇರಬಹುದು. ಆದರೆ ಶಾಲೆಯಲ್ಲಿನ ಕಲಿಕಾ ಪರಿಸರದಂತೆ ಮನೆಯಲ್ಲಿಯೂ ಕಲಿಕಾ ಪರಿಸರ ನಿರ್ಮಿಸಿದರೆ ಖಂಡಿತವಾಗಿ ಮಗುವು ಹೆಚ್ಚು ಆಸಕ್ತಿಯಿಂದ ಕಲಿಕೆಯಲ್ಲಿ ಮುನ್ನುಗ್ಗುತ್ತದೆ.  ಶಾಲೆಯಲ್ಲಿ ಶಿಕ್ಷಕರು ಮತ್ತು ಮಗುವಿನ ಸಂಬAಧಕ್ಕೂ, ಮನೆಯಲ್ಲಿನ ಮಕ್ಕಳು ಮತ್ತು ಹಿರಿಯರ ಸಂಬAಧಕ್ಕೂ ಬಹಳ ಭಿನ್ನತೆ ಇರುತ್ತದೆ.  ಅದೇ ರೀತಿ ಮಗುವಿನ ಬಗ್ಗೆ ಅವರು ತೋರುವ ಕಾಳಜಿಯೂ ಬಹಳ ಭಿನ್ನವಾಗಿರುತ್ತದೆ.  

    ಶಾಲೆಯಲ್ಲಿ ದೊರಕುವ ಸಮಯ ಮತ್ತು ಅವಕಾಶಗಳು ಸೀಮಿತ.  ಪ್ರತಿಯೊಂದು ಮಗುವು ಏನನ್ನು  ಅನ್ವೇಷಣೆ ಮಾಡಲು ಇಚ್ಛಿಸುತ್ತದೋ ಅದನ್ನೆಲ್ಲಾ  ಅನ್ವೇಷಿಸಲು ಅಥವಾ ಏನೇನು ಕಲಿಯಲು ಇಚ್ಛಿಸುತ್ತದೆಯೋ ಅದನ್ನು ಕಲಿಯಲು ಮನೆಯಲ್ಲಿ ಅವಕಾಶ ಮಾಡಿಕೊಡುವುದು ಸಾಧ್ಯವಿಲ್ಲ. ಶಾಲೆಯ ಸಂದರ್ಭದಲ್ಲಿ ಮಕ್ಕಳ ಗುಣಲಕ್ಷಣಗಳನ್ನು ಅರ್ಥೈಸಿಕೊಳ್ಳುವ ಹಿನ್ನಲೆಯನ್ನು ಪಾಲಕರು ಅರಿಯಬೇಕಿದೆ. ಆಗ ಮಾತ್ರ ಕೌಟುಂಬಿಕ ವಾತಾವರಣದಲ್ಲಿ ಮಗುಸ್ನೇಹಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಕೆಳಗಿನ ಒಂದಿಷ್ಟು ತಂತ್ರಗಳನ್ನು ಮನೆಯಲ್ಲಿ ಅನುಸರಿಸುವ ಮೂಲಕ ಮಗುಸ್ನೇಹಿ ವಾತಾವರಣ ನಿರ್ಮಿಸಬಹುದು.

ಹೀಗಿರಲಿ ಶಾಲೆಯಲ್ಲಿ ಮಗುಸ್ನೇಹಿ ವಾತಾವರಣ

ಪ್ರತೀ ಕುಟುಂಬದಲ್ಲೂ ತರಬೇತಿ ಪಡೆದ ಮಕ್ಕಳ ಆಪ್ತ ಸಲಹೆಗಾರರಿರಬೇಕು. ಇವರು ಆ ಕುಟಂಬದ ಸದಸ್ಯರು ಅಗಿದ್ದರೆ ಒಳಿತು. ಮಗುವಿನ ಸಮಸ್ಯೆಯ ಕುರಿತು ಅಗತ್ಯವಿರುವ ಆಪ್ತ ಸಲಹೆ ನೀಡುವಂತಿರಬೇಕು. 

ಪಾಲಕರು ಆಗಾಗ್ಗೆ ಶಾಲೆಗೆ ಭೇಟಿ ನೀಡಬೇಕು. ಮಗುವಿನ ತರಗತಿಯ ಪ್ರಗತಿ ಮಾತ್ರವಲ್ಲದೇ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡಬೇಕು. 

ಕುಟುಂಬದ ಅಭಿವೃದ್ದಿಗೆ ಸಂಬAಧಿಸಿದ ಕೌಟುಂಬಿಕ ಚರ್ಚೆಯಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಬೇಕು. ಇದರಿಂದ ಅವರಿಗೂ ಒಂದಿಷ್ಟು ಜವಾಬ್ದಾರಿಗಳು ಅರ್ಥವಾಗುತ್ತವೆ. ಜೊತೆಗೆ ಅವರ ಪಾತ್ರಗಳ ಸ್ಪಷ್ಟ ಅರಿವು ಉಂಟಾಗುತ್ತದೆ. 

ಕುಟುಂಬದಲ್ಲಿ ವಿಕಲ ಚೇತನ ಮಕ್ಕಳಿದ್ದರೆ ಅವರಿಗೆ ಸೂಕ್ತವಾದ ಮೂಲಸೌಕರ್ಯಗಳು ಹಾಗೂ ಅವರಿಗೆ ಅಗತ್ಯ ಪೀಠೋಪಕರಣ ಮತ್ತು ಕಲಿಕೋಪಕರಣಗಳು ಇರಬೇಕು. 

ಲಿಂಗ, ವಿಕಲತೆ, ಅಥವಾ ಕಾಯಿಲೆಗಳ(ಹೆಚ್.ಐ.ವಿ/ಏಡ್ಸ್) ಆಧಾರದ ಮೇಲೆ ಮಗುವನ್ನು ತಾರತಮ್ಯ ಮಾಡಬಾರದು. 

ಜೀವನ ಕೌಶಲ್ಯಗಳು ಶಿಕ್ಷಣದ ಮುಖ್ಯ ಭಾಗವಾಗಬೇಕು. ಅಂದರೆ ಆಗಾಗ ಮನೆಯಲ್ಲಿ ವೃತ್ತಿ ಕುಶಲತೆ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಬೇಕು. ಆಗ ಶಿಕ್ಷಣವು ಬದುಕಿನ ಭಾಗವಾಗುತ್ತದೆ. 

ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ನೀಡುವುದನ್ನು ರದ್ದುಗೊಳಿಸಬೇಕು. ಮನೆಯಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಸರಿ ತಪ್ಪುಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡುವಂತಿರಬೇಕು. 

ಮನೆಯಲ್ಲಿಯೂ ಒತ್ತಡ ರಹಿತ ವಾತಾವರಣ ನಿರ್ಮಿಸಬೇಕು. ಅಪಾಯಕಾರಿಯಲ್ಲದ ಸಂತಸದ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಅದರ ಮೂಲಕ ಕಲಿಕಾ ವಾತಾವರಣ ನಿರ್ಮಿಸಬೇಕು.

ಮಗುವಿನಲ್ಲಿ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕು. ಅದಕ್ಕಾಗಿ ಪೋಷಕರು ಪ್ರತಿದಿನ ನಿಗದಿತ ವೇಳೆಯಲ್ಲಿ ಮಗುವಿನೊಂದಿಗೆ ಬೆರೆಯುವ ಮೂಲಕ ಸಾಮರ್ಥ್ಯಗಳನ್ನು ವೃದ್ದಿಸಬೇಕು ಹಾಗೂ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು.

ನೈತಿಕತೆಯ ಪಾಠ ಮನೆಯಿಂದಲೇ ಪ್ರಾರಂಭವಾಗಬೇಕು. ಆದರೆ ಅದು ಒತ್ತಾಯಪೂರ್ವಕವಾಗಬಾರದು.

ಮಗುವಿಗೆ ಶೈಕ್ಷಣಿಕ ಹಾಗೂ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಲು ಮಕ್ಕಳ ಪುಸ್ತಕಗಳಿರಬೇಕು.

ಯಾವುದೇ ಕಾರಣಕ್ಕೂ ಯಾವ ಮಗುವೂ ತಿರಸ್ಕೃತವಾಗಬಾರದು. ಪ್ರತೀ ಮಗುವಿನ ಭಾವನಾತ್ಮಕತೆಯನ್ನು ಗಟ್ಟಿಗೊಳಿಸಬೇಕು. 

ಮನೆಯಲ್ಲಿ ಅಥವಾ ಸಮುದಾಯದಲ್ಲಿ ಮಕ್ಕಳ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ರಕ್ಷಣೆಯ ಭರವಸೆ ಇರಬೇಕು. ಹದಿಹರೆಯದ ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇರಬೇಕು.

ಏಕತಾನತೆ ಹೊಡೆದೋಡಿಸಲು ಮಕ್ಕಳಿಗೆ ವಿಭಿನ್ನ ಚಟುವಟಿಕೆಗಳಿರಬೇಕು. ಗಂಡು ಮಕ್ಕಳು ಅಡುಗೆ ಕೆಲಸ ಹಾಗೂ ಮನೆಕೆಲಸಗಳಲ್ಲಿ ಸಹಾಯ ಮಾಡುವ, ಹೆಣ್ಣು ಮಕ್ಕಳು ಹೊರಗಿನ ವ್ಯವಹಾರ ಅಥವಾ ಮಾರ್ಕೆಟ್‌ನಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ, ತಂದೆಗೆ ಸಹಾಯ ಮಾಡುವ ಅಥವಾ ಇನ್ನಿತರೇ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡಬೇಕು.

    ಒಟ್ಟಾರೆ ಹೇಳುವುದಾದರೆ ‘ಬೆತ್ತ ಬಳಸದೇ ಬಾಲ್ಯ ಉಳಿಸಿ’ ಎಂಬುದು ಕುಟುಂಬದ, ತಂದೆ ತಾಯಿಯರ ಅಥವಾ ಸಮುದಾಯದ ಘೋಷಣೆ ಮತ್ತು ಸಂದೇಶವಾಗಬೇಕು. ಆಗ ಮಾತ್ರ ಮಗುಸ್ನೇಹಿ ಸುಂದರ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಆ ಮೂಲಕ ಮಗುವಿನ ಸಾಮರ್ಥ್ಯಗಳನ್ನು ಅಭಿವೃದ್ದಿಗೊಳಿಸಿ ಸರ್ವಾಂಗೀಣ ಬೆಳೆವಣಿಗೆ ಉಂಟು ಮಾಡಲು ಸಾಧ್ಯ. 





No comments:

Post a Comment