December 11, 2021

ಪರಿಭಾವನಾತ್ಮಕ(ಲೆಟೆಂಟ್) ಕಲಿಕೆ

 

ದಿನಾಂಕ  01-05-2019ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಪರಿಭಾವನಾತ್ಮಕ(ಲೆಟೆಂಟ್) ಕಲಿಕೆ : ಕಲಿಕೆಯ ಪ್ರದರ್ಶನ ರೂಪ

ಎರಡನೇ ತರಗತಿಯಲ್ಲಿ ಓದುವ ರವಿ ಪ್ರತಿದಿನವೂ ತಂದೆಯ ಬೈಕ್‌ನಲ್ಲಿ ಶಾಲೆಗೆ ಹೋಗಿಬರುತ್ತಾನೆ. ಹೀಗಾಗಿ ಮನೆ ಹಾಗೂ ಶಾಲೆಯ ದಾರಿಯ ಕಲಿಕೆಯಾಗುತ್ತದೆ. ಒಂದು ದಿನ ಅರ್ಜಂಟಾಗಿ ಬೇರೆ ಊರಿಗೆ ಹೋಗಬೇಕಾಯಿತು. ಆಗ ರವಿ ಅನಿವಾರ್ಯವಾಗಿ ಒಬ್ಬನೇ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಬೇಕಾಯಿತು. ಬೈಕಿನಲ್ಲಿ ಹೋಗುತ್ತಿದ್ದ ದಾರಿಯಲ್ಲಿಯೇ ನಡೆಯುತ್ತಾ ಶಾಲೆ ಸೇರಿದ. ಏಳನೇ ತರಗತಿ ಓದುವ ಸವಿತ ದಿನವೂ ಟಿ.ವಿ.ಯಲ್ಲಿ ಪ್ರಸಾರವಾಗುವ ಹಾಡುಗಳನ್ನು ಕೇಳುತ್ತಾ ಕಲಿತ್ತಿದ್ದಾಳೆ. ಶಾಲೆಯಲ್ಲಿ ಶಿಕ್ಷಕರ ಒತ್ತಾಯಕ್ಕೆ ಹಾಡಿದ ಸವಿತ ಹಾಡುಗಾರಿಕೆಯಲ್ಲಿ ಪ್ರಥಮ ಶ್ರೇಣಿ ಪಡೆಯುತ್ತಾಳೆ.

ರವಿಯ ಶಾಲಾ ದಾರಿ ಮತ್ತು ಸವಿತಳ ಹಾಡಿನ ಕಲಿಕೆ ಇಲ್ಲಿ ಉದಾಹರಣೆ ಮಾತ್ರ. ಮಕ್ಕಳು ಹೀಗೆ ತಮ್ಮಷ್ಟಕ್ಕೆ ತಾವೇ ಅನೇಕ ಅಂಶಗಳನ್ನು ಕಲಿಯುತ್ತಲೇ ಇರುತ್ತಾರೆ. ಇಂತಹ ಕಲಿಕೆಯನ್ನು ಪರಿಭಾವನಾತ್ಮಕ ಕಲಿಕೆ ಎನ್ನಲಾಗುತ್ತದೆ. ಈ ಕಲಿಕೆಯ ಪ್ರದರ್ಶನಕ್ಕೆ ಬಾಹ್ಯ ಪ್ರಚೋದನೆಯ ಅಗತ್ಯವಿರುತ್ತದೆ. ಅದೆಷ್ಟೋ ಬಾರಿ ಕಲಿಕೆಯನ್ನು ಪ್ರದರ್ಶಿಸುವ ಅಥವಾ ಪ್ರಸ್ತುತಿ ಪಡಿಸುವ ಅವಕಾಶವೇ ದೊರೆಯುವುದೇ ಇಲ್ಲ. ಹಾಗಾಗಿ ಅದು ಶಾಶ್ವತ ಕಲಿಕೆಯಾಗಿ ಪರಿವರ್ತನೆಗೊಳ್ಳುವುದೇ ಇಲ್ಲ.  

ಪರಿಭಾವನಾತ್ಮಕ ಕಲಿಕೆ: ಲೆಟೆಂಟ್ ಲರ್ನಿಂಗ್ ಎಂದು ಕರೆಯಲ್ಪಡುವ ಇದೂ ಸಹ ಕಲಿಕೆಯ ಒಂದು ರೂಪವಾಗಿದ್ದು, ತಕ್ಷಣದ ಪ್ರತಿಕ್ರಿಯೆಯಾಗಿ ಪ್ರಕಟಗೊಳ್ಳುವುದಿಲ್ಲ. ಬಾಹ್ಯ ಪ್ರಚೋದನೆಯಿಲ್ಲದೇ ಈ ಕಲಿಕೆ ಹೊರಬೀಳುವುದೇ ಇಲ್ಲ. ಮೇಲ್ನೋಟಕ್ಕೆ ಕಲಿಕೆ ಕಾಣುವುದಿಲ್ಲ. ಮಗು ಸಾಮಾನ್ಯ ನಡವಳಿಕೆಯಲ್ಲಿ ಈ ಕಲಿಕೆಯನ್ನು ಹೊರಹಾಕುವುದಿಲ್ಲ. ಇದಕ್ಕೆ ಸಾಕಷ್ಟು ಪ್ರೇರಣೆಯ ಅಗತ್ಯವಿದೆ.

ಬಲವಾದ ಬಲವರ್ಧನೆಯನ್ನು ನೀಡಿದಾಗ ಮಾತ್ರ ತಾನೇ ತಾನಾಗಿ ಸ್ಪಷ್ಟವಾಗಿ ಕಾಣುವ ಕಲಿಕೆಯೇ ಪರಿಭಾವನಾತ್ಮಕ ಕಲಿಕೆ. ಇದು ಸಂಪೂರ್ಣವಾಗಿ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಮೂಲಕ ನಡೆಯುವ ಕಲಿಕೆಯಾಗಿದೆ. ಶೈಕ್ಷಣಿಕ ಮನೋವಿಜ್ಞಾನದ ಪ್ರಕಾರ ಇದನ್ನು ಸುಪ್ತ ಕಲಿಕೆ ಎಂದೂ ಕರೆಯಲಾಗುತ್ತದೆ. ಕಲಿಕಾರ್ಥಿಗೆ ಬಾಹ್ಯ ಪ್ರೋತ್ಸಾಹ ನೀಡಿದಾಗ ಮಾತ್ರ ತನ್ನ ಕಲಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತಾನೆ. ಇದು ಮಗುವಿನ ಆಂತರಿಕ ಜ್ಞಾನದ ಪ್ರತೀಕವಾಗಿದೆ. ಉದಾಹರಣೆಗೆ ಒಂದು ಮಗು ಗಣಿತದ ಸಮಸ್ಯೆಯನ್ನು ಹೇಗೆ ಬಿಡಿಸಬೇಕೆಂದು ಕಲಿಯುತ್ತದೆ. ಅದೇ ಸಮಸ್ಯೆಯನ್ನು ಬೋರ್ಡ್ ಮೇಲೆ ಬಿಡಿಸಲು ತಿಳಿಸದಾಗ ಬಿಡಿಸಲು ಹಿಂಜರಿಯುತ್ತದೆ. ಆದರೆ ಮಗುವಿಗೆ ವಿವಿಧ ರೀತಿಯಲ್ಲಿ ಬಲವರ್ಧನೆ ನೀಡಿದಾಗ ಮಾತ್ರ ತನ್ನ ಕಲಿಕೆಯನ್ನು ಬಹಿರಂಗಪಡಿಸುತ್ತದೆ. ಕೆಲವು ಮಕ್ಕಳು ಹೆತ್ತವರ ಕಾರ್ಯಗಳನ್ನು ಗಮನಿಸುವುದರ ಮೂಲಕ ಕಲಿಯುತ್ತಾರೆ. ಆದರೆ ಬಲವಾದ ಪ್ರೇರಣೆ ಮತ್ತು ಅಗತ್ಯತೆ ಇದ್ದಾಗ ಮಾತ್ರ ಅಂತಹ ಕಲಿಕೆಯನ್ನು ಪ್ರದರ್ಶಿಸುತ್ತಾರೆ. 

ಎಡ್ವರ್ಡ್ ಟೋಲ್ಮನ್ ಎಂಬುವವರು ಮೊದಲ ಬಾರಿಗೆ ಈ ಕಲಿಕೆಯನ್ನು ಪತ್ತೆ ಹಚ್ಚುತ್ತಾರೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದ ನಂತರ ಮನುಷ್ನ ಕಲಿಕೆಯನ್ನು ಸಮೀಕರಿಸಿ ಇಂತಹ ಕಲಿಕೆಯನ್ನು ಸಾಬೀತುಪಡಿಸಿದರು.

ಲೇಟೆಂಟ್ ಲರ್ನಿಂಗ್ ಏಕೆ ಮುಖ್ಯ?: ಬಹುತೇಕ ಸಂದರ್ಭಗಳಲ್ಲಿ ಮಗುವಿಗೆ ತನ್ನ ಕಲಿಕೆಯನ್ನು ಪ್ರದರ್ಶಿಸಲು ಅವಕಾಶವೇ ಇರುವುದಿಲ್ಲ. ಅದು ಆಂತರಿಕ ರೂಪದಲ್ಲಿ ಹಾಗೇ ಹುದುಗಿರುತ್ತದೆ. ಕಲಿಕೆಯನ್ನು ಪ್ರದರ್ಶಿಸುವ ಅವಕಾಶ ದೊರೆತಾಗ ತಕ್ಷಣವೇ ಪ್ರದರ್ಶಿಸುವುದಿಲ್ಲ. ಯಾವಾಗ ಬಾಹ್ಯವಾಗಿ ಪ್ರೇರಣೆ ದೊರೆಯುತ್ತದೆಯೋ ಆಗ ಮಾತ್ರ ಮಗು ಕಲಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತದೆ. 

ಬಹುತೇಕ ವೇಳೆ ಕಲಿಕಾ ಪ್ರಕ್ರಿಯೆಯ ಬಗ್ಗೆ ನಾವು ಯೋಚಿಸುವಾಗ ತಕ್ಷಣದ ಪ್ರದರ್ಶನವನ್ನು ಬಯಸುತ್ತೇವೆ. ಇಂತಹ ವೇಳೆ ಪ್ರದರ್ಶಿತಗೊಂಡ ಕಲಿಕೆ ಬೇಗನೇ ಮರೆಯಾಗುವ ಅಥವಾ ಮರೆತುಹೋಗುವ ಸಂಭವ ಹೆಚ್ಚು. ಆದರೆ ಮಗು ವಿವಿಧ ಕಾರ್ಯತಂತ್ರಗಳ ಮೂಲಕ ಕಲಿಕೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಅಂದರೆ ಪರಿಭಾವಿಸಿಕೊಂಡು ಗಳಿಸಿಕೊಂಡರೆ ಅದು ಶಾಶ್ವತ ಕಲಿಕೆಯಾಗುತ್ತದೆ. ಆದರೆ ಈ ಕಲಿಕೆ ಬಾಹ್ಯ ಪ್ರಚೋದನೆ ಇರದ ಹೊರತು ಪ್ರದರ್ಶಿತವಾಗುವುದಿಲ್ಲ. ಇಂತಹ ಪ್ರಚೋದನೆಯನ್ನು ಮನೋವಿಜ್ಞಾನಿಗಳು ಕಲಿಕೆಯ ಉತ್ತೇಜಕಗಳು ಎಂದು ಗುರುತಿಸುತ್ತಾರೆ. 

ಕಲಿಕಾ ಹಂತಗಳು : ಈ ವಿಧದ ಕಲಿಕೆಯಲ್ಲಿ ನಾಲ್ಕು ಹಂತಗಳಿರುವುದನ್ನು ಗುರುತಿಸಲಾಗಿದೆ. ಅವುಗಳೆಂದರೆ ಗಮನ, ಧಾರಣ, ಉತ್ಪಾದಕತೆ ಮತ್ತು ಪ್ರೇರಣೆ. ಮಗುವು ತನ್ನ ಪರಿಸರದಲ್ಲಿನ ಅನೇಕ ಅಂಶಗಳನ್ನು ವೀಕ್ಷಣೆಯ ಮೂಲಕ ಗಮನಿಸುತ್ತದೆ. ಸೂಕ್ತರೀತಿಯ ಗಮನವು ಮನದಲ್ಲಿ ಧಾರಣವಾಗುತ್ತದೆ. ಧಾರಣವು ಕಲಿಕೆಯಾಗಿ ರೂಪುಗೊಳ್ಳುತ್ತದೆ. ಆದರೆ ಈ ಕಲಿಕೆಯು ಬಾಹ್ಯಪ್ರೇರಣೆಯಿಂದ ಮಾತ್ರ ಪ್ರದರ್ಶಿತಗೊಳ್ಳುತ್ತದೆ. ಆ ಮೂಲಕ ಶಾಶ್ವತ ಕಲಿಕೆಯಾಗಿ ರೂಪುಗೊಳ್ಳುತ್ತದೆ.

ಲೇಟೆಂಟ್ ಲರ್ನಿಂಗ್‌ಗೆ ಕೆಲವು ಉದಾಹರಣೆಗಳು:

ದಿನವೂ ಟಿ.ವಿ ವೀಕ್ಷಿಸುವ ಮಗುವೊಂದು ನೃತ್ಯ ಮಾಡುವುದನ್ನು ಕಲಿಯುತ್ತದೆ. ಆದರೆ ಇತರರು ಒತ್ತಾಯಪಡಿಸಿದಾಗ ಮಾತ್ರ ನೃತ್ಯ ಪ್ರದರ್ಶನ ಮಾಡುತ್ತದೆ.

ದಿನವೂ ತಾಯಿ ಅನ್ನ ಮಾಡುವುದನ್ನು ನೋಡಿದ ಮಗುವು, ತಾಯಿ ಇಲ್ಲದಿದ್ದಾಗ ಅನ್ನ ತಯಾರಿಸುವ ಅನಿವಾರ್ಯತೆ ಎದುರಾಗ ಮಾತ್ರ ತಯಾರಿಕೆಯಲ್ಲಿ ತೊಡಗುತ್ತದೆ. 

ದಿನವೂ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುವ ಮಗುವು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತದೆ. ರಿಪೇರಿಯಿಂದ ಒಂದು ರಸ್ತೆ ಮುಚ್ಚಿದಾಗ ಇನ್ನೊಂದು ದಾರಿಯಲ್ಲಿ ಸುಲಭವಾಗಿ ಶಾಲೆ ಸೇರುತ್ತದೆ. 

ಶೌಚಾಲಯ ಹೇಗೆ ಬಳಸಬೇಕೆಂದು ಕೆಲವು ಗ್ರಾಮೀಣ ಮಕ್ಕಳಿಗೆ ದಿನವೂ ಹೇಳಿದಾಗ್ಯೂ ಬಾಹ್ಯ ಉತ್ತೇಜಕ ನೀಡದ ಹೊರತು ಸರಿಯಾಗಿ ಬಳಸುವುದನ್ನು ಕಲಿಯುವುದಿಲ್ಲ. 

ತರಬೇತಿ ಕೇಂದ್ರಗಳಲ್ಲಿ ಹೇಗೆ ಪಾಠ ಬೋಧಿಸಬೇಕೆಂದು ಹೇಳಿಕೊಡಲಾಗುತ್ತದೆ. ಆದರೆ ಶಿಕ್ಷಕ ಹುದ್ದೆಗೆ ಸೇರುವವರೆಗೂ ಆ ಕಲಿಕೆಯನ್ನು ಬಳಸುವದೇ ಇಲ್ಲ.

ದಿನವೂ ತಾಯಿ ಬಟ್ಟೆ ಹೊಲಿಯುವುದನ್ನು ನೋಡಿದ ಮಗುವು ತನ್ನ ಕಿತ್ತುಹೋದ ಅಂಗಿಯ ಗುಂಡಿ ಹಚ್ಚಿಕೊಳ್ಳಲು ಒತ್ತಾಯಿಸಿದಾಗ ಮಾತ್ರ ಆ ಕಲಿಕೆಯನ್ನು ಪ್ರದರ್ಶಿಸುತ್ತದೆ. 

ಇತರರು ಚಿತ್ರಿಸುವುದನ್ನು ನೋಡಿದ ವಿದ್ಯಾರ್ಥಿ ಚಿತ್ರಿಸುವುದನ್ನು ಕಲಿಯುತ್ತಾನೆ. ಆದರೆ ತರಗತಿ ಶಿಕ್ಷಕರು ಚಿತ್ರ ಬಿಡಿಸಲು ಒತ್ತಾಯಿಸಿದಾಗ ಮಾತ್ರ ಆ ಕಲಿಕೆಯನ್ನು ಪ್ರದರ್ಶಿಸುತ್ತಾನೆ. 

ಒಬ್ಬ ಬಾಲಕ ಕಬ್ಬಡ್ಡಿ ಆಡುವುದು ಹೇಗೆ ಎಂಬುದನ್ನು ಹಿರಿಯ ವಿದ್ಯಾರ್ಥಿಗಳನ್ನು ನೋಡಿ ಕಲಿಯುತ್ತಾನೆ. ಆದರೆ ಅವನನ್ನು ತಂಡಕ್ಕೆ ಸೇರಿಸಿಕೊಂಡಾಗ ಮಾತ್ರ ಕಲಿಕೆಯನ್ನು ಪ್ರದರ್ಶಿಸುತ್ತಾನೆ. 

ಯುವಕನೊಬ್ಬ ಕಂಪ್ಯೂಟರ್ ತರಬೇತಿಗೆ ಸೇರಿಕೊಳ್ಳುತ್ತಾನೆ. ಆದರೆ ತಂದೆ ಕಂಪ್ಯೂಟರ್ ಕೊಡಿಸಿದಾಗ ಮಾತ್ರ ತನ್ನ ಕಲಿಕೆಯನ್ನು ಪ್ರದರ್ಶಿಸುತ್ತಾನೆ. 

ಪಾಲಕರು/ಶಿಕ್ಷಕರ ಪಾತ್ರ : ಇದೊಂದು ವಿಶಿಷ್ಠ ರೂಪದ ಕಲಿಕೆಯಾದ್ದರಿಂದ ಪಾಲಕರು ಮತ್ತು ಶಿಕ್ಷಕರು ಈ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಪ್ರತಿ ಮಗುವೂ ವಿಭಿನ್ನ ಎಂದು ಹೇಳುವಾಗ ಪ್ರತಿ ಮಗುವಿನ ಕಲಿಕಾ ವಿಧಾನಗಳು ವಿಭಿನ್ನವಾಗಿರುತ್ತವೆ. ಇಂತಹ ಕಲಿಕಾ ವಿಧಾನಗಳು ಪತ್ತೆಯಾದರೆ ಅವರಿಗೆ ಬಾಹ್ಯ ಪ್ರೇರಣೆ ನೀಡುವ ಉತ್ತೇಜಕಗಳನ್ನು ಬಳಸುವ ಮೂಲಕ ಕಲಿಕೆಯನ್ನು ಉತ್ತಮಪಡಿಸಬಹುದು. ಆ ಮೂಲಕ ಕಲಿಕೆಗೊಂದು ಹೊಸರೂಪ ನೀಡಬಹುದು.





No comments:

Post a Comment