December 11, 2021

ಅಮ್ಮಾ! ನಾ ಫೇಲಾದೆ.

ದಿನಾಂಕ  24-4-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

 ಅಮ್ಮಾ! ನಾ ಫೇಲಾದೆ.


1992 ರ ಮೇ ತಿಂಗಳು. ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟವಾದ ದಿನ. ಈಗಿನಂತೆ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಫಲಿತಾಂಶ ಲಭ್ಯವಿಲ್ಲದ ದಿನಗಳು. ಕಾಲೇಜಿಗೆ ಹೋಗಿ ರಿಸೆಲ್ಟ್ ನೋಡಿದೆವು. ಅಲ್ಲಿ ನನ್ನ ಹಾಗೂ ನನ್ನ ಗೆಳೆಯರ ಗ್ಯಾಂಗ್‌ನವರ ಹೆಸರು ಇಲ್ಲ. ಆದರೂ ಮತಿಗೆಡದೇ ಊರಿಗೆ ಹಿಂದಿರುಗಿದೆ. ಬಸ್ ಇಳಿಯುತ್ತಿದ್ದಂತೆ ಕಟ್ಟೆ ಮೇಲೆ ಕುಳಿತ ಕಾಕರಾಜನ ಸಂತತಿಯ ಕೆಲವರು “ಏನಪ್ಪಾ ರಿಸೆಲ್ಟ್ ಏನಾಯ್ತು?” ಎಂದರು. ‘ಫೇಲ್’ ಎಂದೆ ಅಷ್ಟೇ. ಶುರುವಾಯ್ತು ಅವರ ಸುಪ್ರಬಾತ. ಸುಪ್ರಬಾತವನ್ನು ಕೇಳುತ್ತಲೇ ಮನೆಗೆ ಬಂದೆ. 

    ಫಲಿತಾಂಶ ಕೇಳಿ ತಂದೆ ಕೆಂಡಾಮAಡಲವಾದರು. ಆದರೂ ಮರುಪ್ರವೇಶ ಕೊಡಿಸುವ ಭರವಸೆ ನೀಡಿದರು. ಕೂಲಿ ಕೆಲಸಕ್ಕೆ ಹೋದ ಅಮ್ಮ ಸಂಜೆ ಮನೆಗೆ ಬಂದಳು. “ಏನಪ್ಪಾ ಏನಾಯ್ತು ನಿನ್ನ ರಿಸೆಲ್ಟ್?” ಅವಳ ದನಿಯಲ್ಲಿ ಕಾತರ ಹಾಗೂ ದುಗುಡ ಎರಡೂ ಇದ್ದವು. ದಾರಿಯಲ್ಲಿ ಬರುವಾಗ ಇತರರು ಆಡಿದ ಕೊಂಕು ಮಾತುಗಳು ಅವಳ ಕಿವಿಗೆ ಬಿದ್ದಿದ್ದವು. ಆದರೂ ಧೈರ್ಯವಾಗಿ “ಅಮ್ಮಾ! ನಾ ಫೇಲಾದೆ” ಎಂದೆ. ಈ ಮಾತನ್ನು ಹೇಳುತ್ತಿದ್ದಂತೆ ಕಪಾಳಕ್ಕೆ ಎರಡು ಏಟು ಬೀದ್ದೇ ಬೀಳುತ್ತದೆ ಎಂದು ನಿರೀಕ್ಷಿಸಿದ್ದೆ. ಏಕೆಂದರೆ ಕಷ್ಟಪಟ್ಟು ದುಡಿಯುತ್ತಿದ್ದ ಆ ಜೀವಕ್ಕೆ ‘ಪಾಸ್’ ಎಂಬ ಶಬ್ದ ಕೇಳುವ ಆಸೆ. ನಿಧಾನವಾಗಿ ಬಳಿಬಂದಳು. ಕೈಎತ್ತಿದವಳೇ “ಮಗನೇ ಜೀವಕ್ಕೇನೂ ತೊಂದರೆ ಮಾಡಿಕೊ ಬೇಡಪ್ಪ. ಆದದ್ದು ಆಗಿ ಹೋಯ್ತು. ಇನ್ನೂ ಅವಕಾಶ ಇದೆ. ಪರೀಕ್ಷೆ ಕಟ್ಟು. ಚೆನ್ನಾಗಿ ಓದು. ಮುಂದಿನ ವರ್ಷಕ್ಕಾದರೂ ಸರಿ. ಖಂಡಿತ ಪಾಸ್ ಆಗ್ತೀಯ” ಎಂದಳು. ತಾಯಿಯ ಸಾಂತ್ವನದ ನುಡಿಗಳು ನನ್ನ ಭವಿಷ್ಯವನ್ನೇ ಬದಲಿಸಿದವು. ಅದು ನನ್ನ ಜೀವನದ ಮೊದಲ ಮತ್ತು ಕೊನೆಯ ಫೇಲ್ ಆಗಿತ್ತು.

    ಯರ‍್ಯಾರದೋ ಮಾತನ್ನು ಕೇಳಿ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಸರಿಯಾಗಿ ಅರ್ಥವಾಗದ ಕಾರಣ ಓದು ಅಷ್ಟಕಷ್ಟೆ ಆಗಿ ಫಲಿತಾಂಶ ನಪಾಸಾಗಿತ್ತು. ತಾಯಿಯ ಮಾತು, ತಂದೆಯ ಸಹಕಾರ ಹಾಗೂ ಹೊರಗಿನವರ ಸುಪ್ರಬಾತಗಳು ಓದಲೇಬೇಕಂಬ ಹಠ ಮೂಡಿಸಿದವು. ವಿಜ್ಞಾನಕ್ಕೆ ತಿಲಾಂಜಲಿ ಹೇಳಿ ಪ್ರಥಮ ವರ್ಷದ ಕಲಾ ವಿಭಾಗಕ್ಕೆ ಪ್ರವೇಶ ಪಡೆದುಕೊಂಡೆ. ಹೊಸದಾದ ಸರ್ಕಾರಿ ಕಾಲೇಜು. ರಾಜ್ಯಶಾಸ್ತç ಉಪನ್ಯಾಸಕರನ್ನು ಹೊರತುಪಡಿಸಿದರೆ ಬೇರೆ ಉಪನ್ಯಾಸಕರು ಇಲ್ಲ. ಈಗಿನಂತೆ ಅತಿಥಿ ಉಪನ್ಯಾಸಕರ ಸೇವೆಯೂ ಇರಲಿಲ್ಲ. ಗೌರವ ಉಪನ್ಯಾಸಕರೆ ವರ್ಷದ ಸಿಲೆಬಸ್ ಮುಗಿಸಿದರು. ಕಷ್ಟಪಟ್ಟು ಓದಿದೆ ಎನ್ನುವುದಕ್ಕಿಂತ ಇಷ್ಟಪಟ್ಟು ಓದಿದೆ. ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ನಿಂತುಕೊAಡೆ. ಮುಂದೆ ಟಿ.ಸಿ.ಎಚ್ ಮಾಡಿಕೊಂಡು ಪ್ರಾಥಮಿಕ ಶಾಲಾ ಶಿಕ್ಷಕನಾದೆ. ಮದುವೆಯಾಗಿ ಮಗಳು ಹುಟ್ಟಿದ ನಂತರ ಬಿ.ಎ. ಪದವಿ ಪೂರೈಸಿದೆ. ನಂತರ ಎರಡು ಸ್ನಾತಕೋತ್ತರ ಪದವಿ ಪಡೆದೆ. ಈಗ ಒಂಚೂರು ಓದು, ಬರಹ ಮತ್ತು ಶಾಲಾ ಮಕ್ಕಳ ಜೊತೆ ಒಡನಾಟ ಇವು ನನ್ನ ಹವ್ಯಾಸ. 






No comments:

Post a Comment