December 11, 2021

ಅಸಮರ್ಥನ ಜೀವನಯಾತ್ರೆ (ಕಾದಂಬರಿ) ಪುಸ್ತಕ ವಿಮರ್ಶೆ

ದಿನಾಂಕ 26-10-2019ರ ವಾರ್ತಾಭಾರತಿ ಯ  ಸುಗ್ಗಿ ಪುರವಣಿ ಯಲ್ಲಿ ಪ್ರಕಟವಾದ ಪುಸ್ತಕ ವಿಮರ್ಶೆ.


 ಅಸಮರ್ಥರನ್ನು ಸಮರ್ಥರನ್ನಾಗಿಸುವ ಮಾರ್ಗದರ್ಶಿ

ಅಸಮರ್ಥನ ಜೀವನಯಾತ್ರೆ (ಕಾದಂಬರಿ)



ಪ್ರತಿಯೊಬ್ಬ ವ್ಯಕ್ತಿಯ ಜೀವನ ವಿಭಿನ್ನ. ತಾನು ಇತರರಿಗಿಂತ ಭಿನ್ನವಾಗಿ ಬದುಕಬೇಕೆಂಬ ಆಸೆ ಸಹಜ. ಸಮಾಜದಲ್ಲಿ ಹೆಸರುವಾಸಿಯಾಗಬೇಕೆಂಬ ಹಂಬಲ ಬಹುತೇಕರಿಗೆ ಇರುತ್ತದೆ. ಆ ಕೀರ್ತಿಯ ಹಪಹಪಿಯಲ್ಲಿ ಬೆಂದವನೊಬ್ಬನ ಕಥೆಯೇ ‘ಅಸಮರ್ಥನ ಜೀವನಯಾತ್ರೆ’. ಕಾದಂಬರಿ ಎಂದರೆ ಅಲ್ಲಿ ರಮ್ಯತೆ ಇರುತ್ತದೆ, ಕೇವಲ ಭಾವನೆಗಳೇ ಮಾತಾಗುತ್ತವೆ, ಮನೋರಂಜನೆ ಅತೀರೇಕವಾಗಿರುತ್ತದೆ, ಸರಸ-ಸಲ್ಲಾಪಗಳೇ ಇಡೀ ಕಥೆಯ ಹೂರಣವಾಗಿರುತ್ತವೆ ಎಂಬುದು ಬಹುತೇಕರ ಅನಿಸಿಕೆ. ಆದರೆ ಕಾದಂಬರಿಗಳೂ ಸಹ ಜೀವನದರ್ಶನ ಮಾಡಿಸುತ್ತವೆ ಎಂಬುದಕ್ಕೆ ಅಸಮರ್ಥನ ಜೀವನಯಾತ್ರೆ ಸಾಕ್ಷಿಯಾಗುತ್ತದೆ. ಜೀವನದಲ್ಲಿ ಎಲ್ಲ ಇದ್ದರೂ ಸುಖಕ್ಕೆ ಗೆಲುವಿಗೆ ವ್ಯಕ್ತಿಯ ಮನೋಸ್ಥಿತಯೇ ಮುಖ್ಯವೆಂದು ನಿರೂಪಿಸಿದ ತೆಲುಗಿನ ಮೊದಲ ಕಾದಂಬರಿಯೇ ಅಸಮರ್ಥನ ಜೀವನಯಾತ್ರೆ.

ಸೀತಾರಾಮರಾಯ ಕಥೆಯ ದುರಂತ ನಾಯಕ. ತಂದೆಯ ಮಾತಿನಂತೆ ವಂಶದ ಹೆಸರನ್ನು ಉಳಿಸಿಕೊಳ್ಳಲು ಹೆಣಗಾಡಿ, ಬದುಕನ್ನು ದುರಂತಕ್ಕೀಡು ಮಾಡಿಕೊಂಡು ಅಸಮರ್ಥ ಎನಿಸಿಕೊಂಡವನು. ಹೆಸರಿನ ಕೀರ್ತಿಗೆ ದಾಸನಾದ ವ್ಯಕ್ತಿಯೊಬ್ಬನ ಮನೋಸ್ಥಿತಿಗಳನ್ನು ಲೇಖಕ ಗೋಪಿಚಂದ್ ವಾಸ್ತವ ನೆಲೆಗಟ್ಟಿನ ಉದಾಹರಣೆಗಳಿಂದ ಉದಾಹರಿಸುತ್ತಾ ಸಾಗುತ್ತಾರೆ. ಆದರ್ಶಕ್ಕೆ ಕಟ್ಟುಬಿದ್ದ ವ್ಯಕ್ತಿಯೊಬ್ಬ ತನ್ನ ಮನೆ, ಮಡದಿ, ಮಕ್ಕಳನ್ನು ಹೇಗೆ ನಿಕೃಷ್ಟವಾಗಿ ಕಾಣುತ್ತಾನೆ ಮತ್ತು ತನ್ನ ಕರ್ತವ್ಯವನ್ನು ಹೇಗೆ ಮರೆಯುತ್ತಾನೆ ಎಂಬುದು ಕಾದಂಬರಿಯಾದ್ಯAತ ಕಾಣಸಿಗುತ್ತದೆ. ಕಾದಂಬರಿಯನ್ನು ಓದುತ್ತಾ ಸಾಗಿದಂತೆ ಅದು ಸೀತಾರಾಮರಾಯನ ಕಥೆ ಎನಿಸುವುದಿಲ್ಲ. ಬದಲಾಗಿ ಅದು ಓದುಗನ ಕಥೆಯೇ  ಆಗಿ ಓದುಗ ಕಥೆಯೊಳಗೆ ಹುದುಗಿ ಹೋಗುತ್ತಾನೆ. 

ಕಾದಂಬರಿಕಾರ ವಿವಿಧ ಸನ್ನಿವೇಶಗಳ ಮೂಲಕ ಕೆಲವು ವಾಸ್ತವ ಸತ್ಯಗಳನ್ನು ಬಿಚ್ಚಿಡುತ್ತಾನೆ. ‘ಪ್ರಪಂಚ ಪ್ರತಿಕ್ಷಣ ಬದಲಾಗುತ್ತಲೇ ಇರುತ್ತದೆ, ಆದರೆ ಈ ಬದಲಾವಣೆ ಯಾತಕ್ಕೆಂದು ಯಾರಿಗೂ ಅರ್ಥವಾಗುವುದೇ ಇಲ್ಲ’. ‘ಒಂದು ಸಮಸ್ಯೆ ಪರಿಹರಿಸದರೆ, ಆ ಪರಿಹಾರದೊಳಗೆ ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ’. ‘ಕೆಲವರು ಪದೇ ಪದೇ ಮೋಸ ಮಾಡುತ್ತಲೇ ಇರುತ್ತಾರೆ ಮತ್ತು ಕೆಲವರು ಪದೇ ಪದೇ ಮೋಸಕ್ಕೆ ಒಳಗಾಗುತ್ತಲೇ ಇರುತ್ತಾರೆ’. ಇಂತಹ ವಾಸ್ತವಗಳು ಸೀತಾರಾಮರಾಯನ ಪಾತ್ರದ ಸುತ್ತ ಜೀವ ತಳೆಯುತ್ತಲೇ ಇರುತ್ತವೆ.

ಸುಖ ಎಂದರೇನು? ಅದು ಎಲ್ಲಿದೆ? ಪ್ರಾಣಿಗಳು ಸುಖಿಗಳಾ? ಮಾನವರು ಸುಖಿಗಳಾ? ಮಾನವ ಸುಖಿ ಎಂದಾದರೆ ಸರ್ವಸಂಗ ಪರಿತ್ಯಾಗಿ ಯೋಗಿ ಸುಖಿಯೇ? ಸಕಲ ಐಶ್ವರ್ಯ ಸಂಪತ್ತುಗಳಿAದ ಕೂಡಿದ ಧನಿಕ ಸುಖಿಯೇ? ಸಂಸಾರಿ ಸುಖಿಯೇ? ಸಂನ್ಯಾಸಿ ಸುಖಿಯೇ? ಬುದ್ದಿವಂತ ಸುಖಿಯೇ? ಮೂರ್ಖ ಸುಖಿಯೇ? ಎಂದು ವಿವಿಧ ರೀತಿಯಲ್ಲಿ ಉದಾಹರಿಸುತ್ತಾ ಯಾವುದೇ ಆದರ್ಶಗಳಿಲ್ಲದ ಮೂರ್ಖನೇ ನಿಜವಾದ ಸುಖಿ ಎಂಬ ಬದುಕಿನ ಕಟುಸತ್ಯವನ್ನು ಕಾದಂಬರಿ ತಿಳಿಸುತ್ತದೆ. ಗೊಂದಲದ ಗೂಡಾದ ಮಾನವನ ಜೀವನದಲ್ಲಿ ಸ್ವಂತಿಕೆಗೆ ಜಾಗವಿಲ್ಲ. ವಿಚಾರಗಳು ಮಂಥನವಾಗದೇ ತಲೆಯೊಳಗೆ ಗಿರಕಿಹೊಡೆಯುವುದರಿಂದ ಸತ್ಯ ಯಾವುದು? ಮಿಥ್ಯ ಯಾವುದು? ಎಂಬುದನ್ನು ನಿರ್ಧರಿಸಲು ಹೆಣಗುವ ಮನೋಸ್ಥಿತಿಯನ್ನು ವಿವಿಧ ದುಷ್ಟಾಂತಗಳೊAದಿಗೆ ಈ ಕೃತಿ ಕಟ್ಟಿಕೊಡುತ್ತದೆ. 

ಇದು ಕೇವಲ ಕಾದಂಬರಿಯಲ್ಲ. ಪ್ರತಿಯೊಬ್ಬ ಓದುಗನೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನೇಕ ಮಾರ್ಗದರ್ಶಿ ತತ್ವಗಳನ್ನು ಒಳಗೊಂಡ ಕೃತಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೋವೈಜ್ಞಾನಿಕ ಹಿನ್ನಲೆಯಲ್ಲಿ ಇಲ್ಲಿನ ಪಾತ್ರಗಳು ಪರಸ್ಪರ ಸಂಭಾಷಿಸುತ್ತಾ ಲೋಕಜ್ಞಾನವನ್ನು ನೀಡುತ್ತವೆ. “ಮಕ್ಕಳು ಅವರ ಕಾಲ ಮೇಲೆ ಅವರು ನಿಲ್ಲುವುದನ್ನು ಕಲಿತುಕೊಳ್ಳಬೇಕು. ಇಲ್ಲದೆ ಹೋದರೆ ದೊಡ್ಡವರಾದ ಮೇಲೆ ಬದುಕಿನ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುವುದಿಲ್ಲ” ಎಂಬ ಹೇಳಿಕೆ ಮಕ್ಕಳನ್ನು ಬೆಳೆಸುವ ಪಾಲಕರಿಗೆ ಮಾರ್ಗದರ್ಶಿಯಾಗಿದೆ. ಅಸಮರ್ಥ ಸೀತಾರಾಮರಾಯನ ಆಂತರ್ಯದಲ್ಲಿ ಒಬ್ಬ ಶಿಶುಮನೋವಿಜ್ಞಾನಿ ಇರುವುದನ್ನು ಕಾದಂಬರಿಕಾರ ಪ್ರಸ್ತುತಪಡಿಸುತ್ತಾನೆ. ಒಮ್ಮೆ ಯಾವುದೋ ಕ್ಷÄಲ್ಲಕ ಕಾರಣಕ್ಕೆ ಮಗಳ ಮೇಲೆ ಕೈಮಾಡಿದ ಸೀತಾರಾಮರಾಯ ನಂತರ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವ ಪರಿ ಎಂತಹವರಲ್ಲೂ ಕಣ್ಣೀರು ತರಿಸುತ್ತದೆ. ಅಂತೆಯೇ ಮಕ್ಕಳನ್ನು ಹೊಡೆಯುವುದು ಘೋರಪಾಪ, ಎಳೆಯ ಮಕ್ಕಳು ಏನೂ ಅರಿಯದ ಮುಗ್ಧರು ಎಂಬುದನ್ನು ಸೀತಾರಾಮರಾಯನ ಮೂಲಕ ಕಾದಂಬರಿಕಾರ ತಿಳಿಸುತ್ತಾನೆ.

ಕಾದಂಬರಿಯ ಅಂತ್ಯಕ್ಕೆ ಬೇಂದ್ರೆಯವರ ‘ಕುರುಡು ಕಾಂಚಾಣ’ ಕವಿತೆ ನೆನಪಾಗುತ್ತದೆ. ಎಲ್ಲವನ್ನೂ, ಎಲ್ಲರನ್ನೂ ಕಾಲಲ್ಲಿ ಹೊಸಕಿ ಹಾಕಿದ ಕಾಂಚಾಣ ಕೊನೆಗೆ ತನ್ನನ್ನು ತಾನೇ ಕೊಂದುಕೊಳ್ಳುವAತೆ ಆದರ್ಶದ ಕೀರ್ತಿಯ ಬೆನ್ನುಹತ್ತಿದ ಸೀತಾರಾಮರಾಯ ಕೊನೆಗೆ ತನ್ನನ್ನು ತಾನೇ ಕೊಂದುಕೊಳ್ಳುವ ಪರಿ ಮನಸ್ಸಿಗೆ ನೋವುಂಟು ಮಾಡುತ್ತದೆ. ಜೊತೆಗೆ ಈ ಭೂಮಿಯ ಮೇಲೆ ಯಾರೂ ಅಸಮರ್ಥರಲ್ಲ, ಪ್ರತಿಯೊಬ್ಬರೂ ನಿಶ್ಚಿತ ಕಾಯಕದ ಮೂಲಕ ಹೆಸರು ಕೀರ್ತಿ ಗಳಿಸಲು ಸಮರ್ಥರು ಎಂಬ ಸಂದೇಶದೊAದಿಗೆ ಕಾದಂಬರಿ ಅಂತ್ಯಗೊಳ್ಳುತ್ತದೆ.

ತ್ರಿಪುರನೇನಿ ಗೋಪಿಚಂದ್ ಅವರ ತೆಲುಗು ಮೂಲದ ಈ ಕಾದಂಬರಿಯನ್ನು ಬಿ.ಸುಜ್ಞಾನಮೂರ್ತಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆದರೆ ಎಲ್ಲೂ ಇದು ಕನ್ನಡ ಅನುವಾದ ಎನಿಸುವುದೇ ಇಲ್ಲ. ಅಷ್ಟೊಂದು ಭಾವಪೂರ್ಣವಾಗಿ ಮನಮುಟ್ಟುವಂತೆ ಕನ್ನಡೀಕರಿಸಿದ್ದಾರೆ. ಇದು ಕೇವಲ ಮನೋರಂಜನೆಗಾಗಿ ಓದುವ ಕಾದಂಬರಿಯಲ್ಲ. ಬದಲಾಗಿ ಜೀವನದ ರಸ ನಿಮಿಷಗಳನ್ನು ಸವಿಯುವ ಪ್ರತಿಯೊಬ್ಬ ಭಾವಜೀವಿಯೂ ಓದಿ ತಾತ್ವಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೃತಿಯಿದು. ಇಂತಹ ಮಹತ್ತರ ಕೃತಿಯನ್ನು ಲಡಾಯಿ ಪ್ರಕಾಶನ ಗದಗ ಇವರು ಹೊರತಂದಿದ್ದಾರೆ. ಪುಸ್ತಕದ ವಿವರಗಳಿಗಾಗಿ 9480286844ಗೆ ಸಂಪರ್ಕಿಸಿ.

ಪುಸ್ತಕ ಪರಿಚಯ

ಪುಸ್ತಕದ ಹೆಸರು : ಅಸಮರ್ಥನ ಜೀವನಯಾತ್ರೆ (ಕಾದಂಬರಿ)

ತೆಲಗು ಮೂಲ : ತ್ರಿಪುರನೇನಿ ಗೋಪಿಚಂದ್ 

ಕನ್ನಡಕ್ಕೆ : ಬಿ.ಸುಜ್ಞಾನಮೂರ್ತಿ

ಪ್ರಕಾಶಕರು : ಲಡಾಯಿ ಪ್ರಕಾಶನ ಗದಗ

ಪುಟಗಳು : 8+184

ಬೆಲೆ : ರೂ. 100/-

ಮುದ್ರಕರು : ಇಳಾ ಮುದ್ರಣ ಬೆಂಗಳೂರು











No comments:

Post a Comment