December 11, 2021

ಕಲಿಕೆಗೂ ಬೇಕು ವೈಜ್ಞಾನಿಕ ಮನೋಭಾವ

ದಿನಾಂಕ  16-10-2019 ರ ಪ್ರಜಾವಾಣಿಯ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ. 


ಕಲಿಕೆಗೂ ಬೇಕು ವೈಜ್ಞಾನಿಕ ಮನೋಭಾವ



ಶಾಲಾ ಶಿಕ್ಷಣದಲ್ಲಿ ಪ್ರಶ್ನಿಸುವಿಕೆ ಮಹತ್ತರವಾದ ಕಲಿಕಾ ವಿಧಾನ. ಇದು ಮಕ್ಕಳಲ್ಲಿ ಕುತೂಹಲಕ್ಕೆ ಮೂಡಿಸಿ, ಮನದ ಮೂಲೆಯಲ್ಲಿದ್ದ ಸಂದೇಹಕ್ಕೆ ಉತ್ತರ ಕಂಡುಕೊಳ್ಳುವ ಮೂಲಕ ಹೊಸತನಕ್ಕೆ ಪ್ರೇರೇಪಿಸುತ್ತದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಮೂಲಕ ಬಾಲವಿಜ್ಞಾನಿಗಳನ್ನು ಸೃಷ್ಟಿಸುತ್ತದೆ. ಅದಕ್ಕೆ ಶಾಲಾ ಶಿಕ್ಷಣವು ಸೂಕ್ತ ವೇದಿಕೆ ನಿರ್ಮಿಸಿಕೊಡುತ್ತದೆ. ಈ ವೇದಿಕೆಯನ್ನು ಮಕ್ಕಳು ಉತ್ಕೃಷ್ಟವಾಗಿ ಬಳಸಿಕೊಳ್ಳಲು ಪಾಲಕರ ಕಾಳಜಿ ಮತ್ತು ಸಹಕಾರ ಅಗತ್ಯ. 

ಬಾಲವಿಜ್ಞಾನಿಗೆ ಭೂತಕಾಟ ಬೇಕೇ?

ವಿಜ್ಞಾನಿಗಳು ಸಾಮಾನ್ಯವಾಗಿ ಯಾವುದನ್ನೂ ಪರಿಶೀಲಿಸದೇ ನಂಬುವುದಿಲ್ಲ. ಯಾರೋ ಹೇಳಿದ ಹೇಳಿಕೆಯನ್ನಾಗಲೀ, ಬೇರೆ ಪುಸ್ತಕದ ಬದನೆಕಾಯಿಯನ್ನಾಗಲೀ, ಬೇರೆಯವರು ಕಂಡ ದೃಶ್ಯದ ಹೇಳಿಕೆಯನ್ನಾಗಲೀ ನಂಬುವುದಿಲ್ಲ. ಅಂತೆಯೇ ಮಕ್ಕಳೂ ಕೂಡಾ ಬೇರೆಯವರ ಹೇಳಿಕೆಗಳನ್ನು ನಂಬುವುದಿಲ್ಲ. ವಿಜ್ಞಾನಿಗಳು ಪ್ರತಿಯೊಂದನ್ನೂ ಪ್ರಯೋಗ ಮಾಡಿ ನಂಬುವAತೆ ಮಕ್ಕಳು ಸಹ ತಾವೇ ಸ್ವತಃ ಪ್ರಯೋಗ ಮಾಡಿ ನಂಬುಗೆಯನ್ನು ಉಳಿಸಿಕೊಳ್ಳುತ್ತಾರೆ. ಪ್ರತಿಯೊಂದು ಬದಲಾವಣೆಯನ್ನು ಪ್ರಶ್ನಿಸುವ, ಅದಕ್ಕೆ ಕಾರಣವನ್ನು ಕೇಳಿ ತಿಳಿಯುವ, ಕಣ್ಣಾರೆ ಸತ್ಯವನ್ನೂ ಸಹ ಪ್ರಯೋಗದ ಮೂಲಕ ಒರೆಗೆ ಹಚ್ಚುವ ಮೂಲಕ ಸತ್ಯವನ್ನು ಖಚಿತಪಡಿಸಿಕೊಳ್ಳುವ ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಸಹಜವಾಗಿ ಬೆಳೆದಿರುತ್ತದೆ. ಆದರೆ ಮಗುವಿನ ಈ ಸಹಜತೆಗೆ ದೊಡ್ಡವರಾದ ನಾವು ಕೃತಕತೆಯನ್ನು ಸೇರಿಸಿ ಮಗುವಿನ ವೈಜ್ಞಾನಿಕತೆಯನ್ನು ಕತ್ತರಿಸಿ ಹಾಕುತ್ತೇವೆ. 

ಮಗುವಿನ ಪ್ರಶ್ನೆಗೆ ಉತ್ತರಿಸುವ ಬದಲು ಪ್ರಶ್ನೆ ಕೇಳದಂತೆ ಬಾಯಿಗೆ ಬೀಗ ಹಾಕುತ್ತೇವೆ. ಮನೆ ಮತ್ತು ಮನಸ್ಸಿನಲ್ಲಿನ ಆಚರಣೆ, ನಂಬಿಕೆ ಇತ್ಯಾದಿಗಳನ್ನು ಮಕ್ಕಳ  ಮೇಲೆ ಬಲವಂತವಾಗಿ ಹೇರುತ್ತೇವೆ. ದೆವ್ವ, ಭೂತ, ಗೊಗ್ಗ, ಕತ್ತಲು, ಕೆಟ್ಟಕಣ್ಣು, ಗ್ರಹಣ, ಸ್ಮಶಾನ ಇತ್ಯಾದಿಗಳನ್ನು ಮಗುವಿನ ಮನಸ್ಸಿನಲ್ಲಿ ತುಂಬಿಬಿಡುತ್ತೇವೆ. ಇದರಿಂದ ಮಗುವಿನ ಮನಸ್ಸು ಗೊಂದಲಗಳ ಗೂಡಾಗುತ್ತದೆ. ಪ್ರಗತಿಪರ ಚಿಂತನೆಗಳತ್ತ ಸಾಗಬೇಕಾಗಿದ್ದ ಮಗು ನಕರಾತ್ಮಕ ಅಂಶಗಳತ್ತ ವಾಲುತ್ತದೆ. 

ಮಕ್ಕಳನ್ನು ಬಾಲವಿಜ್ಞಾನಿಗಳನ್ನಾಗಿ ಮಾಡಬೇಕಾದರೆ ಮೊದಲು ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಭಾರತದ ನಾಗರಿಕರಾದ ನಾವೆಲ್ಲಾ ವೈಜ್ಞಾನಿಕ ಮನೋಭಾವ ಹೊಂದುವ ಜೊತೆಗೆ ಮಕ್ಕಳಲ್ಲೂ ಅದನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ. ಕೇವಲ ಸಂವಿಧಾನದಲ್ಲಿ ಇದನ್ನು ಹೇಳಿದೆ ಎಂದು ಅನುಸರಿಸದೇ ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿಯಾದರೂ ಅನುಸರಿಸುವ ಮತ್ತು ಮಕ್ಕಳಲ್ಲಿ ಬೆಳೆಸುವ ಪ್ರಯತ್ನ ನಮ್ಮದಾಗಬೇಕು. ವೈಜ್ಞಾನಿಕ ಮನೋಭಾವ ಎಂದರೆ,,,, : ಸತ್ಯವನ್ನು ಕಂಡುಕೊಳ್ಳುವ ಮಾರ್ಗದ ಅನ್ವೇಷಣೆಯಲ್ಲಿನ ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ತೀರ್ಮಾನ ಕೈಗೊಳ್ಳುವುದು, ಪ್ರಯೋಗಗಳ ಮೂಲಕ ಸತ್ಯವನ್ನು ಸಾಬೀತು ಮಾಡುವುದು ಈ ಎಲ್ಲಾ ಹಂತಗಳು ವಿಜ್ಞಾನ ವಿಧಾನ ಅಥವಾ ವೈಚಾರಿಕ ವಿಧಾನದ ಹಂತಗಳಾಗಿವೆ. ಪ್ರತಿಯೊಂದು ಸಮಸ್ಯೆಯನ್ನು ಇಂತಹ ವೈಜ್ಞಾನಿಕ ವಿಧಾನದ ಮೂಲಕ ಪರಿಹರಿಸಿಕೊಳ್ಳುವುದೇ ವೈಜ್ಞಾನಿಕ ಮನೋಭಾವವಾಗಿದೆ. ಅಂದರೆ ಪ್ರತಿ ಸಮಸ್ಯೆಯನ್ನು ಅವಲೋಕನ, ಅಂದಾಜು, ಪರಿಶೀಲನೆ, ಪ್ರಯೋಗ, ಮರುಪ್ರಯೋಗ, ತೀರ್ಮಾನದ ಮೂಲಕ ಪರಿಹಾರ ಕಂಡುಕೊಳ್ಳುವ ಮನೋಭಾವವೇ ವೈಜ್ಞಾನಿಕ ಮನೋಭಾವ ಎನ್ನಬಹುದು.

ವೈಜ್ಞಾನಿಕ ಮನೋಭಾವದಿಂದ ಮಕ್ಕಳಲ್ಲಿ ಆಗುವ ಲಾಭಗಳು:

“ವೈಜ್ಞಾನಿಕ ಮನೋವೃತ್ತಿ ತೀರ್ಮಾನದ, ವಿವೇಕದ ಪರಿಪಕ್ವತೆಯನ್ನು ಪೋಷಿಸುತ್ತದೆ” ಎಂಬ ಭಾರತದ ಪ್ರಸಿದ್ಧ ವಿಜ್ಞಾನಿ, ಶಿಕ್ಷಣತಜ್ಞ ಪ್ರೋ|| ಯಶಪಾಲ್‌ರವರ ಹೇಳಿಕೆ ವೈಜ್ಞಾನಿಕ ಮನೋಭಾವದ ಪ್ರಯೋನಗಳನ್ನು ತಿಳಿಸುತ್ತದೆ. ವೈಜ್ಞಾನಿಕ ದೃಷ್ಟಿಕೋನದಿಂದ ಮಕ್ಕಳಲ್ಲಿ ‘ತೀರ್ಮಾನದ ಪರಿಪಕ್ವತೆ’ಯನ್ನು ಹೆಚ್ಚಿಸುವುದಾದರೆ ಅವರು ತಮ್ಮ ಬದುಕಿನ ಸಮಸ್ಯೆಗಳಿಗೆ ತಾವೇ ಪರಿಹಾರಗಳನ್ನು ಹುಡುಕಿಕೊಳ್ಳುತ್ತಾರೆ. ವೈಜ್ಞಾನಿಕ ಮನೋಭಾವದ ಇನ್ನಷ್ಟು ಲಾಭಗಳು ಕೆಳಗಿನಂತಿವೆ.

ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

ಪ್ರಶ್ನೆ ಕೇಳುವ ಸ್ವಭಾವ ಮತ್ತೆ ಮತ್ತೆ ಜೀವಂತವಾಗುತ್ತದೆ.

ಎಲ್ಲವನ್ನೂ ಪರೀಕ್ಷಿಸಿ, ಪರಿಶೀಲಿಸಿ, ಮಾಡಿ ನೋಡಿಯೇ ನಂಬುವುದು ಅಭ್ಯಾಸವಾಗುತ್ತದೆ.

ಕೇಳಿದ್ದನ್ನು, ನೋಡಿದ್ದನ್ನು, ಓದಿದ್ದನ್ನು ಕುರಿತು ಪ್ರಶ್ನಿಸುವ, ಪುರಾವೆ ಹುಡುಕುವ/ಕೇಳುವ ಮನೋಭಾವ ರೂಢಿಯಾಗುತ್ತದೆ. 

ರಮ್ಯತೆ, ಪುರಾಣ-ಪ್ರತೀತಿ, ಆಧ್ಯಾತ್ಮ ಇವುಗಳಿಗೂ ಹಾಗೂ ವೈಜ್ಞಾನಿಕ ಸತ್ಯಕ್ಕೂ ಇರುವ ವ್ಯತ್ಯಾಸದ ಸ್ಪಷ್ಟತೆ ಉಂಟಾಗುತ್ತದೆ. 

ಬದುಕಿನಲ್ಲಿ ಎಲ್ಲ ರೀತಿಯಲ್ಲೂ ಮುಂದುವರಿಯಲು ಇದು ಅವರಿಗೆ ಸಹಾಯಕವಾಗುತ್ತದೆ.

ಮಕ್ಕಳಲ್ಲಿ ಭಯ, ಆತಂಕ, ಕುರುಡು ನಂಬಿಕೆಗಳು ದೂರವಾಗುತ್ತವೆ.

ಬೇರೆಯವರಿಂದ ಬೇಗನೇ ವಂಚನೆಗೆ ಒಳಗಾಗುವುದಿಲ್ಲ.

ಶೈಕ್ಷಣಿಕ ಸಾಧನೆ ಉತ್ತುಂಗಕ್ಕೇರುತ್ತದೆ.

ದೈಹಿಕ, ಮಾನಸಿಕ, ಭಾವನಾತ್ಮಕ, ವೈಚಾರಿಕ ಹೀಗೆ ಪರಿಪೂರ್ಣ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ.

ಮಾನವೀಯತೆ, ಅನ್ವೇಷಣೆ ಮತ್ತು ಸುಧಾರಣಾ ಪ್ರವೃತ್ತಿ ಬೆಳೆಯಲು ಸಹಕಾರಿ. 

ಕಲಿಕೆ ಹಾಗೂ ವೈಜ್ಞಾನಿಕ ಮನೋಭಾವಕ್ಕೂ ಇರುವ ಸಂಬಂಧ

ಕಲಿಕೆ ಹಾಗೂ ವೈಜ್ಞಾನಿಕ ಮನೋಭಾವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿಯೊಂದು ಕಲಿಕೆಯೂ ವೈಜ್ಞಾನಿಕವಾಗಿ ಸಾಬೀತಾದರೆ ಮಾತ್ರ ಅದು ಶಾಶ್ವತವಾಗಲು ಸಾಧ್ಯ. ಕಲಿಕೆಯ ಪ್ರತಿಯೊಂದು ವಿಧಾನಗಳು ವೈಜ್ಞಾನಿಕ ತಂತ್ರಗಳನ್ನು ಆಧರಿಸಿ ರೂಪಗೊಂಡಿರುತ್ತವೆ. ಯಾವುದೇ ಒಂದು ವಿಧಾನ ಜಾರಿಗೆ ಬರುವ ಮೊದಲು ಅನೇಕ ಹಂತಗಳ ಪರೀಕ್ಷೆಗೊಳಗಾಗಿ ಜಾರಿಗೊಂಡಿರುವುದನ್ನು ಶಿಕ್ಷಣದ ಇತಿಹಾಸದಲ್ಲಿ ಗಮನಿಸಬಹುದು. ಇಂದಿನ ಶಿಕ್ಷಣವು ಶಿಶು ಕೇಂದ್ರಿತವಾಗಿದೆ. ಮಕ್ಕಳು ಮುಕ್ತವಾಗಿ ಭಾಗವಹಿಸುವ ಮೂಲಕ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತಮಗೆ ಅರ್ಥವಾಗದೇ ಇರುವುದನ್ನು ಮುಕ್ತವಾಗಿ ಕೇಳುವ, ಸಂವಾದ ಮಾಡುವ ಮೂಲಕ ಸ್ವತಂತ್ರವಾಗಿ ಕಲಿಯುತ್ತಾರೆ. ತಮಗೆ ಗೊತ್ತಿರುವುದನ್ನು ಯಾವುದೇ ಭಯವಿಲ್ಲದೇ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಇದಕ್ಕೆ ಮೌಲ್ಯಮಾಪನ ಪ್ರಕ್ರಿಯೆಯೂ ಪೂರಕವಾಗಿದೆ. 

ದಾಸ್ಯದ ಬದಲಿಗೆ ಜವಾಬ್ದಾರಿಯನ್ನು ಕಲಿಸುವ, ಅನುಕರಣೆಯ ಬದಲಿಗೆ ನಾಯಕತ್ವದ ಕೌಶಲ್ಯ ಬೆಳೆಸುವ, ಏಕಾಂಗಿಯಾಗುವ ಬದಲು ಸಮಾಜಮುಖಿಯನ್ನಾಗಿಸುವ ಅನೇಕ ಶಿಶುಕೇಂದ್ರಿತ ಚಟುವಟಿಕೆಗಳು ವೈಜ್ಞಾನಿಕ ಮನೋಭಾವದ ಪ್ರತೀಕಗಳಾಗಿವೆ. ಕೇವಲ ವಿಜ್ಞಾನ, ಗಣಿತಗಳಲ್ಲದೇ ಸಮಾಜವಿಜ್ಞಾನ, ಭಾಷೆಗಳು, ಕಲೆ, ಆಟೋಟಗಳಲ್ಲಿಯೂ ಸಹ ಮಕ್ಕಳಲ್ಲಿ ತರ್ಕ, ಕಾರ್ಯಕಾರಣ ಸಂಬAಧ, ವೈಚಾರಿಕತೆಗಳನ್ನು ಬೆಳೆಸಲಾಗುತ್ತದೆ. ಪಠ್ಯದಾಚೆಗಿನ ಕಲಿಕೆಯನ್ನು ಪಠ್ಯಕ್ಕೆ ಪೂರಕವಾಗಿಸುವ ಪ್ರಾಜೆಕ್ಟ್ ಆಧಾರಿತ ಕಲಿಕೆ ವೈಜ್ಞಾನಿಕ ವಿಧಾನದ ಹಾದಿಯಲ್ಲಿಯೇ ಸಾಗುತ್ತದೆ. ಇವೆಲ್ಲವೂ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಗಳಾಗಿವೆ. 

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮಾರ್ಗಗಳು

ಜ್ಞಾನದ ಆರಂಭ ‘ಏಕೆ’ ಎಂಬ ಪ್ರಶ್ನೆಯಿಂದ. ಆದ್ದರಿಂದ ಮಕ್ಕಳು ಪ್ರಶ್ನೆ ಕೇಳಲು ಅವಕಾಶ ನೀಡಿ. ಪ್ರಶ್ನೆಗೆ ಸಮಂಜಸವಾಗಿ ಉತ್ತರಿಸುವ ಪ್ರಯತ್ನ ಮಾಡಿ. ಪ್ರಶ್ನೆಗಳನ್ನು ಕೊಲ್ಲಬೇಡಿ.

ಮಕ್ಕಳ ನೈಸರ್ಗಿಕ ಹಕ್ಕನ್ನು ಕಸಿದುಕೊಳ್ಳದೇ ಮಕ್ಕಳನ್ನು ಮಕ್ಕಳ ಹಾಗೆ ಬೆಳೆಸಬೇಕು. 

ಮೂಢ ಆಚರಣೆಗಳನ್ನು ಮಕ್ಕಳ ಮೇಲೆ ಹೇರಬಾರದು.

ಜಾತಿ ಮತಗಳ ಕುರುಹುಗಳು/ಉಡುಪುಗಳನ್ನು ಒತ್ತಾಯವಾಗಿ ಹೇರುವುದು ಬೇಡ.

ಸಮಾಜದಲ್ಲಿ ಮುಕ್ತವಾಗಿ ಎಲ್ಲಾ ಮಕ್ಕಳೊಂದಿಗೆ ಮುಜುಗರವಿಲ್ಲದೆ ಬೆರೆಯುವ ಅವಕಾಶ ನೀಡಬೇಕು.

ಶಿಸ್ತಿನ ಕಠಿಣ ಅಭ್ಯಾಸ ಬೇಡ. ಇದು ಕಲಿಕಾ ಕೌಶಲ್ಯವನ್ನು ಕುಂಟಿತಗೊಳಿಸುತ್ತದೆ.

ಕAಠಪಾಟದ ಬದಲಿಗೆ ಬುದ್ಧಿಮತ್ತೆಯನ್ನು ಮತ್ತೆ ಮತ್ತೆ ಒರೆಗೆ ಹಚ್ಚುವ ಅವಕಾಶ ನೀಡುವ ಮೂಲಕ ಬಾಲವಿಜ್ಞಾನಿಗೆ ಸಹಾಯ ನೀಡಿ.

ಮಕ್ಕಳಲ್ಲಿ ತಾರ್ಕಿಕತೆಯನ್ನು ಬೆಳೆಸುವ ಸನ್ನಿವೇಶಗಳನ್ನು ಸೃಷ್ಟಿಸಿ.

ವಿಜ್ಞಾನ ಕಾರ್ಯಗಾರಗಳು, ಗೋಷ್ಠಿಗಳು, ಚರ್ಚೆ, ಸಂವಾದಗಳಲ್ಲಿ ಮಗು ಭಾಗವಹಿಸುವಂತೆ ಪ್ರೇರೇಪಿಸಿ.

ಜೀವನ ಮೌಲ್ಯಗಳಾದ ಸ್ವಾಯತ್ತತೆ, ಸಮಗ್ರತೆ, ಅನ್ವೇಷಣಾ ಮನೋಭಾವ, ವಿನೀತತೆ ಮತ್ತು ನಿರ್ಭಯಗಳ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವುದು ಶ್ರಮದಾಯಕವಾದರೂ ಒಂದು ನಿಶ್ಚಿತ ವಿಧಾನವಾಗಿದೆ.  

ನಾನು ನನಗಾಗಿ ಅಲ್ಲ, ನನ್ನ ಸಂಪತ್ತು ನನಗಾಗಿ ಅಲ್ಲ. ಅದು ಎಲ್ಲರ ಹಿತಕ್ಕಾಗಿ ಬಳಕೆಯಾಗಬೇಕು ಎನ್ನುವ ವೈಶಾಲ್ಯತೆ ಬೆಳೆಸಬೇಕು.

ಪ್ರಜಾಪ್ರಭುತ್ವ/ಸಾಂವಿಧಾನಿಕ ಮೌಲ್ಯಗಳನ್ನು ಮನೆಯಿಂದಲೇ ಕಲಿಸಬೇಕು.

ನೈಸರ್ಗಿಕ ವಿದ್ಯಮಾನಗಳಾದ ಗಾಳಿ, ಮಳೆ, ಗುಡುಗು, ಮಿಂಚು, ಗ್ರಹಣಗಳು, ಚಂಡಮಾರುತಗಳು ಇತ್ಯಾದಿಗಳ ಬಗ್ಗೆ ಭಯ ಮೂಡಿಸದೇ ಭೌತಶಾಸ್ತಿçÃಯ ಹಿನ್ನಲೆಯಲ್ಲಿ ವಿವರಿಸಿ. 

ಲಸಿಕೆ ಹಾಕಿಸೋಣ : ಭಾರತ ಸಂವಿಧಾನದ ಅನುಚ್ಛೇದ 51 ಎ (ಎಚ್) ಅನ್ವಯ, “ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ ಮತ್ತು, ಅನ್ವೇಷಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಮತ್ತು ಉತ್ತೇಜಿಸುವುದು” ನಮ್ಮ ಮೂಲಭೂತವಾದ ಮತ್ತು ನಾಗರಿಕ ಸಮ್ಮತವಾದ ಕರ್ತವ್ಯವಾಗಿದೆ.  ಮಗು ತನ್ನ ಬದುಕನ್ನೇ ಪರಿವರ್ತಿಸಿಕೊಳ್ಳುವ ಶಕ್ತಿಯನ್ನು ವೈಜ್ಞಾನಿಕ ಮನೋವೃತ್ತಿ ಕೊಡುತ್ತದೆ. ಮಾನವನಿಗೆ ಸ್ವತಂತ್ರವಾದ ಚೈತನ್ಯವನ್ನು ಶಾಶ್ವತವಾಗಿ, ತಾಜಾ ಆಗಿ, ಹುರುಪಿನ ಮತ್ತು ಪರಿಣಾಮಕಾರಿಯಾದ ಆರೋಗ್ಯದ ಸ್ಥಿತಿಯಲ್ಲಿರುವಂತೆ ಸಂರಕ್ಷಿಸಬೇಕು ಎನ್ನುವ ಬಯಕೆ ನಮ್ಮಲ್ಲಿದ್ದರೆ, ನಮ್ಮ ಮಗುವಿಗೆ ವೈಜ್ಞಾನಿಕ ಮನೋವೃತ್ತಿ ಲಸಿಕೆಯನ್ನು ಹಾಕಿಸುವುದು ಕಡ್ಡಾಯವಾಗಿದೆ. ವೈಜ್ಞಾನಿಕ ಮನೋವೃತ್ತಿ ಎನ್ನುವ ಈ ರೋಗನಿರೋಧಕ ಚುಚ್ಚುಮದ್ದನ್ನು ಒಮ್ಮೆ ನಮ್ಮ ಮಗುವಿನ ಬದುಕಿನಲ್ಲಿ ಹಾಕಿಸಿದರೆ, ಮಗು ಶಕ್ತಿಶಾಲಿಯಾದ ಚೇತನವಾಗುತ್ತದೆ. ಈ ವೈಜ್ಞಾನಿಕ ಮನೋವೃತ್ತಿಯು ನಮ್ಮ ದೇಶದ ಮಕ್ಕಳನ್ನು ಆರೋಗ್ಯಕರ, ಸಮರ್ಥ, ನಾಗರಿಕಪ್ರಭುತ್ವವನ್ನು ಕಟ್ಟುವತ್ತ ಕರೆದೊಯ್ಯುತ್ತದೆ. ಬನ್ನಿ! ಎಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸುವತ್ತ ಮತ್ತು ಬೆಳೆಸಿಕೊಳ್ಳುವತ್ತ ಹೆಜ್ಜೆಹಾಕೋಣ.  






No comments:

Post a Comment